ನಾನು ಸಾಹಿತಿ ಎಂಬುದರ ಬಗ್ಗೆ, ನಾನು ಯಾಕೆ ಬರೆಯುತ್ತಿರುವೆ ಎಂಬುದರ ಬಗ್ಗೆ ನನ್ನ ವಿಚಾರಗಳನ್ನು ಬರೆಯಲು ನನ್ನನ್ನು ಕೇಳಿಕೊಳ್ಳಲಾಗಿದೆ. ಮೊದಲನೆಯದನ್ನು ಉತ್ತರಿಸುವುದು ಸುಲಭ ಜನರು ನನ್ನನ್ನು ‘ಸಾಹಿತಿ’ ಎನ್ನುತ್ತಿರಬಹುದು, ಆದರೆ ನನ್ನನ್ನು ನಾನು ‘ಸಾಹಿತಿ’ ಎಂದು ಗುರುತಿಸಿಯೇ ಇಲ್ಲ. ನಾನು ಸಾಹಿತಿ ಎನ್ನುವುದು ಅನೇಕ ಆಕಸ್ಮಿಕ ಘಟನೆಗಳ ಪರಿಣಾಮ. ಗಣಿತದ ವಿದ್ಯಾರ್ಥಿಯಾದ ನಾನು ಎಂಜನಿಯರ್‌ನಾಗುವ ಉದ್ದೇಶ ದಿಂದ ಶಿಕ್ಷಣವನ್ನು ಪಡೆಯುತ್ತಿರುವಾಗ, ನನ್ನ ಆರೋಗ್ಯ (ನಿಜವಾಗಿ ‘ತಲೆ’, ಆದರೆ ಹಾಗೆ ಹೇಳಿದರೆ ಶ್ರೋತೃಗಳು ತಪ್ಪು ತಿಳಿಯಬಹುದೆಂದು ಸ್ಥೂಲವಾಗಿ ಹೇಳುತ್ತಿದ್ದೇನೆ) ನನ್ನ ಆರೋಗ್ಯ ಕೆಟ್ಟಿತು. ನಾನು ಶಿಕ್ಷಣವನ್ನು ಮುಂದುವರಿಸುವುದಾದರೆ ಗಣಿತವನ್ನು ಬಿಟ್ಟುಕೊಡಬೇಕು ಎಂದು ಡಾಕ್ಟರರ ಸಲಹೆ. ಬಿಟ್ಟುಕೊಟ್ಟೆ. ಚಿಕ್ಕಂದಿನಿಂದಲೂ ಪರಿಚಿತ ವಾದ ಸಂಸ್ಕೃತ ವಿಷಯವನ್ನು ಆಯ್ದುಕೊಂಡೆ. ಇಡೀ ನನ್ನ ಶಿಕ್ಷಣ ಕ್ರಮದ ಅವಧಿಯಲ್ಲಿ ಪ್ರಾಥಮಿಕ ನಾಲ್ಕು ವರ್ಷ ಕನ್ನಡ ಓದಿದ, ಮುಂದೆ ೧೩ ವರ್ಷ ಇಂಗ್ಲಿಷ್, ೧೦ ವರ್ಷ ಸಂಸ್ಕೃತ ಓದಿದ ನಾನು ಕನ್ನಡದಲ್ಲಿ ಸಾಹಿತಿಯಾಗುವ ಕನಸನ್ನೂ ಕೂಡ ಕಟ್ಟಿರಲಿಲ್ಲ.

ಹಾಗಾದರೆ ನಾನು ಕನ್ನಡದಲ್ಲಿ ಬರೆದದ್ದು, ಅದರಲ್ಲೂ ಹೆಚ್ಚಾಗಿ ನಾಟಕಗಳನ್ನು ಬರೆದದ್ದು ಹೇಗೆ? ಇದನ್ನು ನಾನು ನನ್ನದೊಂದು ಸ್ವಭಾವ ವೈಶಿಷ್ಟ್ಯದ ದೃಷ್ಟಿಯಿಂದಲೆ ವಿವರಿಸಬಲ್ಲೆ. ಬೇರೆ ಕಾರಣಗಳಿದ್ದರೆ ಒಂದು ದೇವನಿಗೆ ಇಲ್ಲವೆ ವಿಮರ್ಶಕರೆನ್ನಿಸಿ ಕೊಳ್ಳುವ ವರಿಗೇ ಗೊತ್ತು. ಹುಟ್ಟಿನಿಂದಲೂ ನನಗೆ ಆಚಾರಗಳ ಬಗ್ಗೆ, ಕುರುಡು ನಂಬುಗೆಗಳ ಬಗ್ಗೆ, ಕುಟುಂಬದಲ್ಲಿ ಸ್ತ್ರೀಯರನ್ನು ನಡೆಸಿಕೊಳ್ಳುವ ಬಗ್ಗೆ ಒಂದು ಅಸಹನೆ ಇದ್ದಿತು. ಬಾಲ್ಯದಲ್ಲಿ ‘ನೀ ಶೂದ್ರನಾಗಿ ಹುಟ್ಟಬೇಕಾಗಿತ್ತು’ ಎಂದು ಅಜ್ಜನಿಂದ ಬೈಸಿಕೊಳ್ಳುವ ಮಟ್ಟಿಗೆ ಎಲ್ಲರೊಡನೆ ಬೆರೆಯುತ್ತಿದ್ದೆ. ಉಚ್ಚ ಎನ್ನಿಸಿಕೊಳ್ಳುವ ಬ್ರಾಹ್ಮಣ ಆಚಾರ್ಯ ಕುಲದಲ್ಲಿ ಹುಟ್ಟಿದ ನಾನು ರೈತರ ಮನೆಯಲ್ಲಿ ಊಟ ಮಾಡಿದರೆ ಅಂದಿನ ಸಮಾಜದಲ್ಲಿ ‘ಮಹಾ ಅನರ್ಥ’ ಎನ್ನಿಸುತ್ತಿತ್ತು. ಆದರೆ ನಾನು ಒಬ್ಬ ಅಜ್ಜನ ಬದಲು ಇಬ್ಬರು ಅಜ್ಜಂದಿರ ಪ್ರಭಾವದಲ್ಲಿ ಬೆಳೆದೆ. ನನ್ನ ತಂದೆ ತನ್ನ ಸೋದರ ಮಾವನ ಮಗಳನ್ನೇ ಮದುವೆಯಾದು ದರಿಂದ, ಎರಡೂ ಕುಟುಂಬಗಳು ಒಂದೇ ಹಳ್ಳಿಯಲ್ಲಿ ವಾಸಿಸುತ್ತಿದ್ದುದರಿಂದ ನಾನು ತಾಯಿಯ ತಂದೆ(ಮಹಾಮಹ)ಯೊಡನೆಯೂ ಹೆಚ್ಚಾಗಿ ಕಾಲವನ್ನು ಕಳೆಯುತ್ತಿದ್ದೆ. ತಂದೆಯ ತಂದೆ(ಪಿತಾಮಹ)ದೊಡ್ಡ ಜಾಗಿರದಾರ, ಅತ್ಯಂತ ಧರ್ಮನಿಷ್ಠ, ಆಚಾರ ಶೀಲ, ಮಡಿ ಮೈಲಿಗೆ ವೀರನಾಗಿದ್ದರೆ, ನನ್ನ ಮಾತಾಮಹನು ಸಾಮಾನ್ಯ ಬ್ರಾಹ್ಮಣನಾಗಿದ್ದ. ಅವನೂ ಆಚಾರವಂತನಾಗಿದ್ದರೂ ಅದನ್ನು ಶ್ರದ್ಧೆಯಿಂದಲ್ಲ, ಪರಿಸರದಲ್ಲಿ ಅನಿವಾರ್ಯ ಎಂದು ಆಚರಿಸುತ್ತಿದ್ದ. ಇದ್ದ ಚಿಕ್ಕ ಜಮಿನಿನಲ್ಲಿ ರೈತರೊಡನೆ ತಾನೂ ದುಡಿಯುತ್ತಿದ್ದ; ಜಾತ್ರೆಗೆ ಹೋಗುತ್ತಿದ್ದ. ಬಯಲಾಟ ನೋಡಲು ಹೋಗುತ್ತಿದ್ದ. ಒಟ್ಟಾರೆ, ನನ್ನ ಪಿತಾಮಹನ ಮನೆಯಲ್ಲಿ ‘ನಿಷಿದ್ಧ’ ಎನ್ನಿಸುವ ಅನೇಕ ಸಂಗತಿಗಳು ಈ ಮಾತಾಮಹನಿಗೆ ಸ್ವಾಗತಾರ್ಹ ವಾಗಿದ್ದುವು. ಚಿಕ್ಕಂದಿನಿಂದಲೂ, ಗೆಳೆಯರ ಗುಂಪನ್ನು ಕಟ್ಟಿಕೊಂಡು ಉಡಾಳನಂತೆ ಅಲೆದಾಡುತ್ತಿದ್ದ ನನಗೆ ಇಂಥ ಮಾತಾಮಹನು ಮೆಚ್ಚಿಗೆಯವನಾದನು. ನಾನೂ ಜಾತ್ರೆಗೆ ಹೋಗತೊಡಗಿದ್ದೆ. ಮಾತಾಮಹನ ಹೆಗಲ ಮೇಲೆ ಕುಳಿತು ಬಯಲಾಟವನ್ನು ನೋಡುತ್ತಿದ್ದೆ. ವಿಲಾಸಪ್ರಿಯತೆಯ ಜೊತೆಗೆ ಈ ಮಾತಾಮಹನಲ್ಲಿ ಸಾಹಿತಿಯಲ್ಲಿರಬೇಕಾದ ಇನ್ನೊಂದು ಗುಣವಿದ್ದಿತು. ಅದೆಂದರೆ ಮಿಕ್ಕವರು ಸಹಾನುಭೂತಿಯಿಂದ ಕೇಳಿಕೊಳ್ಳುವಂತೆ, ಕೇಳಿಕೊಂಡು ನಂಬುವಂತೆ (ಕಲಾತ್ಮಕವಾಗಿ) ಸುಳ್ಳನ್ನು ಹೇಳುವುದು. ಹಾಗೆ ಹೇಳಿ ಪಿತಾಮಹನ ಸೆರೆಮನೆಯಲ್ಲಿಯ ಕಠಿಣ ಶಿಕ್ಷೆಯಿಂದ ನನ್ನನ್ನು ಬಿಡಿಸಿ ತನ್ನೊಡನೆ ಕರೆದೊಯ್ಯುವುದು, ನಾನು ಕೆಲಸಂದರ್ಭಗಳಲ್ಲಿ ಹೋಳೀ ಹುಣ್ಣಿಮೆ. ದಸರೆಗಳಲ್ಲಿಪಾತ್ರವನ್ನು ವಹಿಸಿ ಊರೊಳಗೆ ಅಡ್ಡಾಡಲೂ ಇವನ ಉತ್ತೇಜನ. ಒಮ್ಮೆ ಯಾರಾರೋ ‘ಶೂದ್ರ ಮುಂಡೇಮಕ್ಕಳ’ ಜೋಡಿ ಮೀನು ಹಿಡಿಯಲು ಹೋಗಿದ್ದೆ (ನಮ್ಮ ಹಳ್ಳಿಯಲ್ಲಿ ಭೀಮಾ ನದಿಯಿದೆ). ಅದು ಬ್ರಾಹ್ಮಣನು ಮಾಡುವ ಕೆಲಸವಲ್ಲ ಎಂದು ಪಿತಾಮಹನ ಶಾಸ್ತ್ರವಾದರೆ, ಹಿಡಿದರೆ ತಪ್ಪಲ್ಲ, ತಿನುವುದು ತಪ್ಪು ಎಂದು ಮಾತಾಮಹನ ಅನುಕೂಲ ಸಿಂಧು!

ಹೀಗೆ ಹಳ್ಳಿಯಲ್ಲಿ ಬೆಳೆದುದಕ್ಕೆ ನನ್ನಲ್ಲಿದ್ದ ಸಂಪ್ರದಾಯ ವಿರೋಧ ಬಲಿಯುತ್ತ ನಡೆಯಿತು. ಆದರೆ ತಂದೆಗೆ ಹೆದರುತ್ತಿದ್ದ ನನಗೆ ಹಳ್ಳಿಯನ್ನು ಹೈಸ್ಕೂಲು ಶಿಕ್ಷಣಕ್ಕಾಗಿ ಬಿಟ್ಟಮೇಲೆ ಸಂಪ್ರದಾಯವನ್ನು ಪ್ರತಿಭಟಿಸುವ ಧೈರ್ಯವಿದ್ದಿರಲಿಲ್ಲ. ಹೀಗಿರುವಾಗ ೧೯೨೦ರಲ್ಲಿ ಮಹಾತ್ಮಾ ಗಾಂಧಿಯವರು ತಮ್ಮ ಅಸಹಕಾರ ಚಳವಳವನ್ನು ಹೂಡಿದ ಮೇಲೆ ಆ ಮಹಾತ್ಮನಿಗಾದರೂ ನಮ್ಮ ತಂದೆ ಆದರ ತಾಳಬಹುದೆಂಬ ವಿಚಾರದಿಂದ ಶಾಲೆಗೆ ಬಹಿಷ್ಕಾರವನ್ನು ಹಾಕುವ ನಿರ್ಣಯ ಮಾಡಿದೆ. ಆದರೆ ನನ್ನ ತಂದೆ ಅತ್ಯಂತ ಕನಲಿ ನನ್ನ ನಿರ್ಣಯವನ್ನು ಕಿತ್ತೊಗೆದರು. ಈಗ ಉಳಿಯಿತು ಬರೀ ಗಾಂಧೀ ಚಳವಳಕ್ಕೆ ಉತ್ಸಾಹದ ಮಾತುಗಳನ್ನಾಡುವುದು. ಯಾರೊಡನೆ? ತಂದೆಯ ಕೂಡ ಚರ್ಚಿಸುವಂತಿಲ್ಲ. ತಾಯಿಯನ್ನು ಕಳೆದುಕೊಂಡಿದ್ದೆ, ಮಿಕ್ಕ ಗೆಳೆಯರಿಗೆ ನನ್ನಲ್ಲಿದ್ದ ಉತ್ಸಾಹವಿದ್ದಿರಲಿಲ್ಲ. (ಇಲ್ಲಿ ಒಂದು ಮಾತನ್ನು ಹೇಳಬಹುದು. ನಾನು ಅಭ್ಯಾಸ ಮಾಡದೆ ಉಡಾಳನಾಗಿ ವರ್ತಿಸುತ್ತಿದ್ದರೂ ಶಿಕ್ಷಣದಲ್ಲಿ ಕೊನೆಯವರೆಗೂ ವರ್ಗದಲ್ಲಿ ಸಾಮಾನ್ಯವಾಗಿ ಮೊದಲನೆಯ ವಿದ್ಯಾರ್ಥಿ ಯಾಗಿದ್ದೆ. ನನ್ನದು ‘ಬುದ್ದಿವಂತಿಕೆ’ ಎನ್ನಿಸಿದರೆ, ಮಿಕ್ಕವರು ತೀರಾ ದಡ್ಡರಿರಬೇಕು ಎಂದೆನ್ನಿ ಸಿತು ನನಗೆ. ಇಂದಿಗೂ ವಿಮರ್ಶಕರು ನನ್ನ ನಾಟಕಗಳು ‘ಬೌದ್ದಿಕ’ ಎಂದಾಗ, ವಿಮರ್ಶಕರಿಗೆ ಬುದ್ದಿ ಕಡಿಮೆ ಎಂದೇ ನಾನು ಅರ್ಥ ಮಾಡುತ್ತೇನೆ). ಅಂತೂ ಜೊತೆಗಾರರಿಲ್ಲದ್ದಕ್ಕೆ ನನ್ನ ವಿಚಾರಗಳ ಅಭಿವ್ಯಕ್ತಿಯನ್ನು ಹೆಚ್ಚಾಗಿ ನಾಟಕಗಳನ್ನೇ ನೋಡುತ್ತಿದ್ದ ನಾನು ನಾಟಕ ರೂಪದಲ್ಲಿ ಮಾಡಿದ. ಹೀಗೆ ಬರೆದ ಮೊದಲಿನ ಎರಡು ನಾಟಕಗಳೆಂದರೆ ‘ಸ್ವಾರ್ಥತ್ಯಾಗ’ ಮತ್ತು ‘ಧರ್ಮ ವಿಜಯ’. ನನ್ನ ಉದ್ದೇಶ ಕೇವಲ ನನ್ನ ವಿಚಾರಗಳ ಅಭಿವ್ಯಕ್ತಿಯಾಗಿತ್ತು, ನಾಟಕ ಬರೆಯುವುದಾಗಿರಲಿಲ್ಲ. ಆದುದರಿಂದ ಕೂಡಲೆ ಅವನ್ನು ಮರೆತೆ. ಆ ಹಸ್ತಪ್ರತಿಗಳು ಸ್ವಲ್ಪಾವಧಿಯಲ್ಲಿಯೇ ಕಳೆದು ಹೋದುದಕ್ಕೆ ಒಂದು ತರದ ಸಂತೋಷವೇ ಆಗಿತ್ತು. ಶಬ್ದಾಡಂಬರದ ಭಾಷಣಗಳು (ಅವು ಕೂಡ ರಾಜಕೀಯ ಮುಂದಾಳುಗಳ ಭಾಷಣ ಸಾರಾಂಶ). ಅರ್ಥವಾಗದ ಹಾಡುಗಳು (ಕನ್ನಡವನ್ನೇ ಕಲಿತಿರಲಿಲ್ಲವಲ್ಲ?), ಆದರೂ ಅಂದಿನ ಕಾಲದ ನಾಟಕಗಳ ಅನುಕರಣಗಳಾದ ಅವು ಕಳೆದು ಹೋದರೆ ಸಂತೋಷವೆ ಅಲ್ಲವೆ? ಅಲ್ಲಿಂದ ಮುಂದೆ ನನ್ನ ಉತ್ಸಾಹವು ಚಳವಳದ ರಭಸಕ್ಕೆ ಅನುಗುಣವಾಗಿ ಕುಗ್ಗುತ್ತ ಹೋದಂತೆ ಬರೆಯುವ ಸಂದರ್ಭವೆ ಬರಲಿಲ್ಲ. ಚಳವಳದ ಪ್ರಭಾವ ತಾತ್ಪೂರ್ತಿಕವಾಗಿ ತಣ್ಣಗಾಗುವ ಸಮಯಕ್ಕೆ (೧೯೨೫) ನಾನು ಇಂಗ್ಲೆಂಡಿಗೆ ಹೋದೆ.

ಇಂಗ್ಲೆಂಡಿನಲ್ಲಿ ಒಂದು ಕುಟುಂಬದಲ್ಲಿ ಇದ್ದ ನಾನು, ಅಲ್ಲಿಯ ಮಧ್ಯಮ ವರ್ಗವನ್ನು ವಿದ್ಯಾರ್ಥಿಯಾಗಿ ಅಲ್ಲಿಯ ಶಿಕ್ಷಕರನ್ನು, ಅವರ ಜೀವನದೊಡನೆ ಬೆರೆತುದಕ್ಕೆ ‘ಬಾರ್’ನಲ್ಲಿ ಸಂಕೀರ್ಣ ವ್ಯಕ್ತಿಗಳನ್ನು ನೋಡಿ ಚಿಕಿತನಾದೆ. ಭಾರತದಲ್ಲಿ ದೊರೆಯಂತೆ ವರ್ತಿಸುವ ಬ್ರಿಟಿಷನು ತನ್ನ ದೇಶದಲ್ಲಿ ಸಾಮಾನ್ಯನಂತೆ, ತಾನೂ ಎಲ್ಲರಷ್ಟೆ ಎಂದು ವರ್ತಿಸುತ್ತಿದ್ದನು, ಕುಟುಂಬದಲ್ಲಿ ಅಂಧ ಶ್ರದ್ಧೆಯಿಲ್ಲ, ವರ್ತ ನಿಯಮಗಳಿಲ್ಲ, ಮಡಿ ಮೈಲಿಗೆ ಇಲ್ಲ, ಮಸಾಜದಲ್ಲಿ ಸ್ಪೃಶ್ಯಾಸ್ಪೃಶ್ಯತೆ ಇಲ್ಲ. ನನ್ನಲ್ಲಿದ್ದ ‘ಧರ್ಮಲಂಡ’ತನಕ್ಕೆ ಪ್ರೋತ್ಸಾಹ ದೊರಕಿತು. ನನ್ನ ದೇಶದ ಜನರೂ ತಾವೆಲ್ಲರೂ ಒಂದು ಸಮಾಜ ಎಂದು ತಿಳಿಯಬೇಕು. ಹೆಂಗಸರನ್ನು ಬರೀ ಕಾಮದ ಗೊಂಬೆ ಎಂದು ನಡೆಸಿಕೊಳ್ಳಬಾರದು ಎಂದು ಮುಂತಾಗಿ ವಿಚಾರ ಮಾಡಿ ಸ್ವದೇಶಕ್ಕೆ ಮರಳಿದ ಮೇಲೆ ಇದನ್ನೆ ಮಾಡತಕ್ಕದ್ದು ಎಂದು ನಿರ್ಣಯಿಸಿದೆ. ಸ್ವದೇಶಕ್ಕೆ ಬಂದೆ. ಮೊದಲು ನೌಕರಿ ಇಲ್ಲ, ಸಮಾಜದಲ್ಲಿ (ನಮ್ಮದು ಮಾಧ್ವ ಮನೆತನ) ಸಮುದ್ರಯಾನ ಮಾಡಿದ್ದಕ್ಕೆ ಬಹಿಷ್ಕಾರ, ಸ್ವಂತದ ಕುಟುಂಬದಲ್ಲಿ ವಿವಾಹ ಬಾಹಿರ! ನಗರದ ಪರಿಚಯವಿಲ್ಲ, ಗೆಳೆಯರಿಲ್ಲ, ಒಬ್ಬೊಂಟಿಗನಾಗಿ ಮುಂಬಯಿಯಲ್ಲಿಹೆಚ್ಚಾಗಿ ಉಪವಾಸ ದಲ್ಲಿ ಕಾಲ ಕಳೆಯಬೇಕಾಯಿತು. ನನ್ನಲ್ಲಿ ಸಿಟ್ಟು ಕುದಿಯ ತೊಡಗಿತು, ಈ ಸಮಾಜವನ್ನು ಸುಧಾರಿಸಲೇಬೇಕು ಎನ್ನಿಸಿತು. ಆದರೆ ನನ್ನ ಆ ಸಂದರ್ಭದಲ್ಲಿ ನಾನು ಏನನ್ನೂ ಮಾಡದವ ನಾದೆ, ಇನ್ನೊಂದೆಡೆ, ಒಳಗಿನ ಸಿಟ್ಟು ತಣ್ಣಗಾಗದು. ಒಮ್ಮೆಲೆ ನನ್ನಲ್ಲಿಯೆ ನಾನು ಇಬ್ಬರು ಬೇರೆ ಬೇರೆ ವ್ಯಕ್ತಿಗಳನ್ನು ಕಂಡುಕೊಂಡೆ. ಒಬ್ಬ ಹತಾಶನಾಗಿ ಸಂಪ್ರದಾಯಕ್ಕೆ ಅನಿವಾರ್ಯ ವಾಗಿ ವಿಧೇಯ. ಇನ್ನೊಬ್ಬ ಆವೇಶದಿಂದ ಆದರೆ ಅದು ಶಬ್ದಗಳ ಆವೇಶವಾಗಿತ್ತು ಸಂಪ್ರದಾಯವನ್ನು ಕಿತ್ತೊಗೆಯಬೇಕೆಂಬ ತರುಣ. ಒಬ್ಬೊಂಟಿಗನಾದ ನಾನು ನನ್ನ ಹೊಟೆಲ್ ಕೋಣೆಯಲ್ಲಿ ಇವರಿಬ್ಬರ ನಡುವೆ ಮಾತಿನ ದ್ವಂದ್ವಯುದ್ಧವನ್ನು ನಡೆಸಿದೆ. (ಈ ಅಭ್ಯಾಸದಿಂದಲೆ ಮುಂದೆ ನಾನು ಯಾವ ಅನುಭವವೂ ಇಲ್ಲದೆ ನನ್ನ ನಾಟಕದಲ್ಲಿ ಪಾತ್ರವನ್ನು ವಹಿಸಿದೆ.) ಕೊನೆಗೆ ಈ ಮಾತಿನ ದ್ವಂದ್ವಯುದ್ಧವನ್ನು ದಿನಚರಿಯಂತೆ ಬರೆದಿಡಬೇಕೆಂಬ ಯತ್ನದಲ್ಲಿ ‘ಉದರ ವೈರಾಗ್ಯ’ವನ್ನು ಬರೆದೆ. ನನ್ನ ಮೇಲೆ ಬಹಿಷ್ಕಾರ ಹಾಕಿದ ಮತ್ತು ಹಾಕಿಸಿದ ಎಲ್ಲ ಬ್ರಾಹ್ಮಣರ ವ್ಯಂಗ್ಯ ಚಿತ್ರವನ್ನು ತೋರಿಸಿದೆ. ಅಂದರಂತೆಯೆ ಇವರಿಗೆ ಬಲವಾದ ಪೆಟ್ಟನ್ನು ಕೊಡಬೇಕೆಂದು ಬ್ರಾಹ್ಮಣ ಯುವಕನು ಶೂದ್ರ ಹುಡುಗಿಯನ್ನು ಮದುವೆಯಾಗುವ ‘ಮುಕ್ಕಣ್ಣ ಮೀಟುಪುರುಷ’ ಎಂಬುದನ್ನು ಬರೆದೆ. ಈ ಬ್ರಾಹ್ಮಣರಿಗೆ ಅಘಾತವಾಗಲಿ ಎಂದು (ಇಂಗ್ಲೆಂಡಿನಲ್ಲಿ ನೋಡಿದ ಕೆಲವು ದೃಷ್ಟಾಂತಗಳ ಆಧಾರದ ಮೇಲೆ). ಮದುವೆಯಾಗದೆ ಗರ್ಭಿಣಿಯಾಗುವ ಹುಡುಗಿಯನ್ನು ‘ಅಧಿಕಮಾಸ’ ಎಂಬ ನಾಟಕದಲ್ಲಿ ಬರೆದೆ. ಕ್ಷಮಿಸಿ, ‘ನಾಟಕ’ ಪದವನ್ನು ಬಳಸುತ್ತಿದ್ದೇನೆ. ನಾನು ಬರೆದದ್ದು ನನ್ನ ವಿಚಾರಗಳ ಸೋದಾಹರಣ ದಿನಚರಿ. ಈ ಮೂರನ್ನು ಬರೆದೆ; ಸಿಟ್ಟು ತಣ್ಣಗಾಯಿತು. (ಇಲ್ಲವೆ ಸಾಹಿತಿ ಯಾಗಿ ಹೇಳುವುದಾದರೆ ಸ್ಫೂರ್ತಿ ಬತ್ತಿತ್ತು), ಆ ಮೂರನ್ನೂ ಮರೆತುಬಿಟ್ಟೆ. ನಾನು ಸಾಹಿತಿ, ನಾನು ನಾಟಕಕಾರ ಎಂಬ ವಿಚಾರವೆ ನನಗಿರಲಿಲ್ಲ.

ಆದರೆ ‘ಸಾಹಿತಿ’, ‘ನಾಟಕಕಾರ’ ಎಂದು ಕರೆಯಿಸಿಕೊಳ್ಳುವುದು ನನ್ನ ಹಣೆಯಲ್ಲಿ ಬರೆಯಲ್ಪಟ್ಟಿರಬೇಕು, ಇಲ್ಲವಾದರೆ ಮುಂದೆ ನಡೆದ ಕೆಲವು ಆಕಸ್ಮಿಕ ಘಟನೆಗಳನ್ನು ಅರಿತು ಕೊಳ್ಳಲಾಗದು. ಮೊದಲನೆಯದಾಗಿ, ಮುಂಬಯಿಯಲ್ಲಿ ಒಬ್ಬ ಗೆಳತಿ ಅಕಸ್ಮಾತ್ತಾಗಿ ನನ್ನ ‘ಮುಕ್ಕಣ್ಣ ವಿರಾಟ ಪುರುಷ’ದ ಹಸ್ತಪ್ರತಿಯನ್ನು ನೋಡಿದ. ಕುತೂಹಲದಿಂದ ಓದಿದ, ಮುಂದೆ ಪಂಡಿತ ತಾರಾನಾಥರಿಗೆ ತೋರಿಸಿದ. ಅವರೂ ಓದಿರಬೇಕು, ಯಾಕೆಂದರೆ ಪುಣೆ ಯಲ್ಲಿ ಕರ್ನಾಟಕ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಅದನ್ನು ಉಲ್ಲೇಖಿಸಿ, ‘ಕನ್ನಡದಲ್ಲಿ ಶ್ರೇಷ್ಠ ನಾಟಕಕಾರನು ಕಾಣಿಸಿಕೊಂಡಿದ್ದಾನೆ’ ಎಂದರಂತೆ. ಆದರೆ ಸಭೆಯ ನಂತರ ಸುದೈವದಿಂದ ಯಾರೂ ಆ ಮಾತನ್ನು ನೆನಪಿನಲ್ಲಿಟ್ಟಿರಲಿಲ್ಲ. ಮುಂದೆ ನಾನು ಕರ್ನಾಟಕ ಕಾಲೇಜು ಧಾರವಾಡದಲ್ಲಿ ಅಧ್ಯಾಪಕನಾಗಿ ಹೋದಾಗ ದಿ.ಅ.ತು ಸಾಸನೂರ ಮೊದಲಾದ ಕೆಲವು ತರುಣ ಕನ್ನಡ ಅಭಿಮಾನಿಗಳು, ಸ್ವತಂತ್ರ ಕನ್ನಡ ನಾಟಕದ ಶೋಧನೆ ಯಲ್ಲಿ ತೊಡಗಿದಾಗ ಹೇಗೋ ಯಾರೋ ನನ್ನ ಹೆಸರನ್ನು ಹೇಳಿದರು. ಅವರು ನನ್ನ ಕಡೆ ಬಂದು ನನ್ನ ನಾಟಕದ ಪ್ರತಿಯನ್ನು ಕೇಳಿದರು. ನಾನು ಚಿಕಿತನಾದೆ. ‘ನಾಟಕ’ ಎಂದು ನಾನು ಬರೆದಿರಲಿಲ್ಲವಾದ್ದರಿಂದ ಅವು ನಾಟಕಗಳಲ್ಲ, ನನ್ನ ಖಾಸಗೀ ದಿನಚರಿ ಎಂದೆ. ಅವರು ಹಟದಿಂದ ಒಂದನ್ನು ಹುಡುಕಿಕೊಂಡು ಒಯ್ದು ಅದು ನಾಟಕ ಎಂದೇ ನಿಶ್ಚಯಿಸಿ, ಅತ್ಯಂತ ಅಭಿಮಾನದಿಂದ ಅದನ್ನು ಮೊದಲ ಪೂರ್ತಿ ಸ್ವತಂತ್ರ ನಾಟಕ ಎಂದು ರಂಗಸ್ಥಲಕ್ಕೆ ತಂದರು (ಮೈಸೂರು ಕಡೆಯ ನಾಟಕಗಳು ಆಗ ಅವರಿಗೆ ತಮ್ಮವು ಎನ್ನಿಸುತ್ತಿರಲಿಲ್ಲ, ಹುಯಿಲಗೊಳ ಅವರ ನಾಟಕದಲ್ಲಿ ಸಂಪ್ರದಾಯ ಶರಣತೆ ಇದ್ದಿತು. ಅದಕ್ಕಾಗಿಯೆ ನನ್ನದನ್ನು ಅವರು ‘ಮೊದಲು’ ಮತ್ತು ‘ಸ್ವತಂತ್ರ’ ಎಂದುದು).

ಸಾಸನೂರು ಮೊದಲಾದವರು ನಾನು ನಾಟಕಕಾರ ಎಂದು ನನ್ನಲ್ಲಿಯೆ ಆತ್ಮವಿಶ್ವಾಸ ಮೂಡುವಂತೆ ಪ್ರೋತ್ಸಾಹಿಸತೊಡಗಿದರು. ಇದಲ್ಲದೆ ಕಾಲೇಜಿನಲ್ಲಿ ಸ್ವತಂತ್ರ ಕನ್ನಡ ನಾಟಕಗಳನ್ನು ಪ್ರಯೋಗಿಸಿ ಕನ್ನಡದ ಮಾನವನ್ನು ಉಳಿಸುವುದು ನನ್ನನ್ನೇ ಅವಲಂಬಿಸಿದೆ ಏನೋ ಎನ್ನುವಂತೆ ನನ್ನನ್ನು ಹುರಿದುಂಬಿಸಿದರು. ಅವರಿಗಾಗಿ ‘ವೈದ್ಯರಾಜ’, ‘ದರಿದ್ರ ನಾರಾಯಣ’ ಎಂಬ ಎರಡು ನಾಟಕಗಳನ್ನು ಬರೆದೆ. ಆದರೆ ಅವುಗಳಲ್ಲಿ ನನ್ನಲ್ಲಿ ಕುದಿಯು ತ್ತಿದ್ದ ಸಂಪ್ರದಾಯ ವಿರೋಧದ ಬಗ್ಗೆ ಹೆಚ್ಚಿನ ಕಳಕಳಿ ಇರಲಿಲ್ಲ. ಅಂಥ ಸಂದರ್ಭ ಶೀಘ್ರ ದಲ್ಲಿಯೆ ಒದಗಿತು. ೧೬ ವಯಸ್ಸಿನ ಯುವತಿಯೊಬ್ಬಳು ಮೂರನೆಯ ಮಗುವಿನ ಹೆರಿಗೆಯ ಕಾಲದಲ್ಲಿ ಸತ್ತುಹೋದಳು. ಬಾಲ ವಿವಾಹವೂ ಒಂದು ಕ್ರೂರ ಪದ್ಧತಿ ಎಂದು ಮುಂಚಿ ನಿಂದಲೆ ತಿಳಿದುಕೊಂಡ ನನಗೆ ಈ ಯುವತಿಯ ಆಹುತಿಯಿಂದ ಅತ್ಯಂತ ವ್ಯಸನವಾಯಿತು. ನನ್ನ ತಾಯಿಯೂ ಏಳು ಮಕ್ಕಳನ್ನು ಹೊತ್ತು (ಕೊನೆಗೂ ಉಳಿದವರು ಇಬ್ಬರೆ) ತನ್ನ ೩೧ನೆಯ ವಯಸ್ಸಿಗೆ ಸತ್ತುದೂ ನೆನಪಿಗೆ ಬಂದಿತು. ಅಂತೂ ಈ ವಿಚಾರಗಳ, ಸಂಘರ್ಷದ ಪರಿಣಾಮವಾಗಿ ‘ಸಂಸಾರಿಗ ಕಂಸ’ ಎಂಬ ನಾಟಕ ಸಿದ್ಧವಾಯಿತು. ಇನ್ನೂ ಮದುವೆಯಾಗದ ನಾನು, ಮಕ್ಕಳು ದೇವರ ಕೊಡುಗೆ ಎಂದು ನಂಬಿದ ಸಮಾಜದಲ್ಲಿ ಸಂತತಿ ನಿಯಂತ್ರಣದ ಬಗ್ಗೆ ಬರೆದುದಕ್ಕೆ ಕೆಲವರು ಆಶ್ಚರ್ಯ ಚಕಿತರಾದರು. ಕೆಲವರು ನನ್ನನ್ನು ಹುಚ್ಚ ಎಂದರು. ಇನ್ನು ಕೆಲವರು ಧರ್ಮಲಂಡ ಎಂದರು. ಆದರೆ ಎಲ್ಲರೂ ‘ಇದು ನಾಟಕ ಏನ್ರಿ? ಯಾಕ ಬರೆದಿರಿ? ನಮ್ಗಂತೂ ಏನೂ ತಿಳಿಯಲಿಲ್ಲ’ ಎಂದರು. ಬರೆದದ್ದು ನಿಮಗಾಗಿ ಅಲ್ಲ, ನನ್ನ ವಿಚಾರಗಳ, ನನ್ನ ಪ್ರತಿಕ್ರಿಯೆಯ ಅಭಿವ್ಯಕ್ತಿಗಾಗಿ ಎಂದು ಹೇಳಿದರೆ ನನ್ನ ಬಗ್ಗೆ ಅವರ ಅಭಿಪ್ರಾಯ ಇನ್ನಿಷ್ಟು ಕಲುಷಿತವಾಗಬಹುದೆಂದು ನಕ್ಕು ಸುಮ್ಮನಿದ್ದೆ.

ಆ ಸಮಯಕ್ಕೆ ಹರಿಜನರ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಅಮರಣಾಂತ ಉಪವಾಸವನ್ನು ಕೈಕೊಂಡಿದ್ದರು. ಅದರ ಪರಿಣಾಮವಾಗಿ ‘ಅಖಿಲ ಭಾರತ ಹರಿಜನ ಸೇವಕ ಸಂಘ’ ಸ್ಥಾಪಿತವಾಯಿತು. ನನಗೆ ಮತ್ತೊಂದು ಅವಕಾಶ ದೊರೆಯಿತು. ಧಾರವಾಡದಲ್ಲಿ ಕೆಲವು ರಾಜಕೀಯ ಮುಂದಾಳು(ಬ್ರಾಹ್ಮಣರಾಗಿದ್ದರು)ಗಳನ್ನು ಕೂಡಿಸಿಕೊಂಡು ನಾನು ಹರಿಜನ ಸೇವೆಯ ಕೆಲಸಕ್ಕೆ ತೊಡಗಿದೆ. ಆಗ ಗಾಂಧೀಜಿಯವರ ಕಟ್ಟಾ ಅನುಯಾಯಿಗಳೆನ್ನಿಸಿ ಕೊಂಡರೂ, ಬ್ರಾಹ್ಮಣರಾದುದಕ್ಕೆ ಹರಿಜನರ ಸ್ಪರ್ಶದ ನಂತರ ಸ್ನಾನದಿಂದಲೆ ಶುಚಿ ಎಂದು ಆಚರಿಸುವ ರಾಜಕೀಯ ಮುಂದಾಳುಗಳನ್ನು ನೋಡಿ ಇಂಥವರನ್ನು ಬಯಲಿಗೆಳೆಯಲು ‘ಹರಿಜನ್ವಾರ’ ಎಂಬ ನಾಟಕವನ್ನು ಬರೆದೆ. ಇಷ್ಟರಲ್ಲಿ ನನ್ನ ನಾಟಕ ಲೇಖನದಲ್ಲಿ ಒಂದು ತರದ ಕಲಾತ್ಮಕತೆ ಬಂದಿತ್ತು. ಆ ಕಾರಣಕ್ಕಾಗಿ ರಂಗಸ್ಥಲದಲ್ಲಿ ಈ ನಾಟಕ ಅತ್ಯಂತ ಪ್ರಭಾವ ಶಾಲಿಯಾಯಿತು. ನಾನು ಮಾತ್ರ ಇನ್ನೂ ಹೆಸರಾದ ನಾಟಕಕಾರ ಎನ್ನಿಸಿಕೊಂಡಿರಲಿಲ್ಲ. ಆದರೆ ಆ ನಾಟಕವನ್ನು ಬಹಿರಂಗವಾಗಿ ಖಂಡಿಸಿ, ವಿರೋಧಿ ಸಭೆಗಳನ್ನು ಸೇರಿಸಿ ‘ನಾನು ನಾಟಕಕಾರ, ಒಂದು ನಾಟಕವನ್ನು ಬರೆದಿದ್ದೇನೆ’ ಎಂಬುದನ್ನು ಜಗಜ್ಜಾಹೀರ ಮಾಡಿದನು. ಅದರಂತೆಯೆ ಅವಿಭಕ್ತ ಕುಟುಂಬದ ಕಟು – ಅನುಭವವನ್ನು ಉಂಡ ನಾನು ‘ಪ್ರಪಂಚ ಪಾಣಿಪತ್ತು’ ಎಂಬುದನ್ನು ಬರೆದಾಗ ಬ್ರಾಹ್ಮಣೇತರರು ಪ್ರತಿಭಟಿಸಿದರು. ಕೊನೆಗೊಮ್ಮೆ ಸಮಾಜದ ಸರ್ವಸಮ್ಮತ ಪ್ರತಿಭಟನೆಯಿಂದ ‘ಶ್ರೀರಂಗ’ ನಾಟಕಕಾರನಾಗಿ ಹೊರಬಿದ್ದ.

ನಾನು ಈಗಾಗಲೆ ಹೇಳಿದಂತೆ ನಾಟಕಗಳನ್ನು ಬರೆಯುವುದಕ್ಕಿಂತ ಸಮಾಜದ ಬಗ್ಗೆ ನನ್ನ ವಿಚಾರಗಳನ್ನು ಹೊರಗೆಡುವುದು ನನ್ನ ದೃಷ್ಟಿಯಾಗಿದ್ದಿತು. ‘ಹರಿಜನ್ವಾರ’ ಬರೆಯುವು ದರಲ್ಲಿ ಕಲೆಯನ್ನೇನೊ ಸಾಧಿಸಿಕೊಂಡೆ. ವಿಚಾರಗಳಿಗೆ ದೃಷ್ಟಾಂತವಾಗಿ, ಆಧಾರಭೂತವಾಗಿ ಒಂದು ಸನ್ನಿವೇಶವನ್ನು ಕಲ್ಪಿಸಿಕೊಂಡು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನಿರ್ಮಿಸಿ ಕತೆಯನ್ನು ಕಟ್ಟಲು ಸಮರ್ಥನಾದೆ. ಆದರೆ ನನ್ನ ಸಾರ್ವಜನಿಕ ಚಟುವಟಿಕೆಗಳಲ್ಲಿ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ನೋಡಿದಾಗ ನನಗೆ ನನ್ನ ಮುಂಚಿನ ಅನುಭವ ನೆನಪಾಗುತ್ತಿತ್ತು. ಅದೆಂದರೆ, ಒಂದೆಡೆ ಸಂಪ್ರದಾಯಕ್ಕಾಗಿ ಜನಾಭಿಪ್ರಾಯಕ್ಕಾಗಿ ಹೆದರಿಕೆ, ಇನ್ನೊಂದೆಡೆ ಸಂಪ್ರದಾಯವನ್ನು ಎದುರಿಸಬೇಕೆಂಬ ಅನಿವಾರ್ಯ ಒಪ್ಪಿಗೆ ಈ ಸ್ವಭಾವನೆ ಎಲ್ಲರಲ್ಲಿದ್ದಿತು. ಹೋಟೆಲ್‌ನಲ್ಲಿದ್ದಾಗ ನಾನು ನನ್ನ ಈ ಸ್ವಭಾವವನ್ನು ಅರಿತು ನನ್ನಲ್ಲಿಯ ಎರಡು ವ್ಯಕ್ತಿಗಳ ಸಂಭಾಷಣವನ್ನು ನಡೆಸುತ್ತಿದ್ದೆನಲ್ಲವೆ? ಅಂದಿನ ಕಾಲದ ತರುಣರೆಲ್ಲರೂ ಇಂತಹ ದ್ವಿಧಾವ್ಯಕ್ತಿಯವರು ಎಂಬುದಕ್ಕೆ (ಇಂದಿನ ತರುಣರೂ ಹಾಗೇ ಎಂದು ಈಗ ತಿಳಿದಿದೆ) ಮೊದಲಿನ ಕೆಲವು ನಾಟಕಗಳಲ್ಲಿ ಆ ದ್ವಿಧಾವ್ಯಕ್ತಿತ್ವವನ್ನು ಎರಡು ತರುಣ ಪಾತ್ರಗಳಿಂದ ತೋರಿಸುತ್ತಿದ್ದೆ (ಉದಾ. ಶಾಮ – ವಸಂತ ‘ಹರಿಜನ್ವಾರ’ದಲ್ಲಿ, ಪುಟ್ಟು – ವೆಂಕಪ್ಪ ‘ಸಂಧ್ಯಾ ಕಾಲ’ದಲ್ಲಿ, ಶ್ರೀಪತಿ – ವಾಮನ ‘ನರಕದಲ್ಲಿ ನರಸಿಂಹ’ ನಾಟಕದಲ್ಲಿ). ಒಂದು ಪಾಠವನ್ನು ಮಾತ್ರ ನಿರ್ಧಾರವಾಗಿ ಕಲಿತುಕೊಂಡೆ. ನನ್ನಂಥವನ ಮಾತನ್ನು ಯಾರು ಕೇಳುವರು ಎಂದು ಮುಂಬಯಿಯಲ್ಲಿ ನಿರಾಶಿತನಾಗಿದ್ದೆನಲ್ಲವೆ? ಆದರೆ ನಗಿಸಿ ಹೇಳಿದರೆ ಪೂರ್ತಿ ಸಮಯ ಕುಳಿತು ಕೇಳುವವರು ಎಂಬ ಭರವಸೆ ‘ಹರಿಜನ್ವಾರ’ ಮತ್ತು ಅದರ ತರುವಾಯದ ನಾಟಕ ಗಳಿಂದ ಕಲಿತುಕೊಂಡೆ. ಬಹುಶಃ ಇದಕ್ಕಾಗಿಯೆ ಹೆಚ್ಚಾಗಿ ನಾನು ನಾಟಕಗಳನ್ನು ಬರೆದಿರಬೇಕು.

ಆದರೂ ನನಗೆ ನಾಟಕಗಳನ್ನು ಬರೆಯುವುದರಿಂದ ತೃಪ್ತಿಯಾಗಲಿಲ್ಲ. ಸಮಯ, ರಂಗ ತಂತ್ರ, ಘಟನೆಗಳ ಆಯ್ಕೆ ಮುಂತಾದವು ನಿರ್ಬಂಧ ಎನ್ನಿಸಿ ಹೇಳಬೇಕಾದ್ದನ್ನು ಪೂರ್ತಿಯಾಗಿ ಹೇಳಲು ಶಕ್ಯವಿಲ್ಲ, ಸೂಚ್ಯವಾಗಿ ಹೇಳಿದರೆ ತಿಳಿದುಕೊಳ್ಳುವ ಪ್ರೇಕ್ಷಕ ವರ್ಗವಿಲ್ಲ ಎಂದೆನ್ನಿಸಿ ಸ್ವಚ್ಛಂದವಾಗಿ ವಿಚಾರ ಪ್ರವಾಹಕ್ಕೆ ಅವಕಾಶವನ್ನು ಕೊಡುವುದೆಂದು ಆಗಾಗ ಕಾದಂಬರಿ ಗಳನ್ನು ಬರೆಯತೊಡಗಿದೆ. ಅಂತವುಗಳಲ್ಲಿ ‘ವಿಶ್ವಾಮಿತ್ರನ ಸೃಷ್ಟಿ’ ಮೊದಲನೆಯದು. ನಾಟಕವನ್ನು ನೋಡುವವರು, ಅದರಲ್ಲೂ ೫೦ ವರ್ಷಗಳ ಮುಂಚಿನ ನಾನು ಬರೆದಂಥ ನಾಟಕಗಳನ್ನು ನೋಡುವವರು ಅಂದಿನ ಕಾಲದಲ್ಲಿ ಕಡಮೆ ಎಂದರೆ, ‘ವಿಶ್ವಾಮಿತ್ರನ ಸೃಷ್ಟಿ’ಯಂತಹ ಕಾದಂಬರಿಯನ್ನು ಓದುವವರೂ ಅದಕ್ಕಿಂತಲೂ ಕಡಮೆಯಾಗಿದ್ದರೂ. ಯಾರೂ ಆ ಕಡೆ ಲಕ್ಷ್ಯ ಪೂರೈಸುವುದಿಲ್ಲವಾದ್ದರಿಂದ ನಾಟಕವನ್ನೇ ಇಲ್ಲವೆ ಕಾದಂಬರಿ ಯನ್ನೇ ಬರೆಯುವ ಹಟ ಯಾಕೆ, ಸತ್ತಮೇಲೂ ಅನೇಕ ವರ್ಷಗಳವರೆಗೆ ಮಹತ್ವದ್ದೆನ್ನಿ ಸುವಂತೆ ಪ್ರಾಮಾಣಿಕವಾಗಿ ವೈಚಾರಿಕ ಗ್ರಂಥವನ್ನೆ ಯಾಕೆ ಬರೆಯಬಾರದು ಎಂದು ‘ಗೀತಾಗಾಂಭೀರ್ಯ’ವನ್ನು ಬರೆದೆ. (ಮೇಲಿನ ಕಾದಂಬರಿ ಮತ್ತು ಈ ಗಾಂಭೀರ್ಯ ೪೦ ವರ್ಷಗಳ ನಂತರ ಎರಡನೆಯ ಮುದ್ರಣವನ್ನು ಕಂಡವು!) ತರುವಾಯ ‘ಗೀತಾದರ್ಪಣ’ ಎಂಬುದನ್ನು ಬರೆದೆ. ನಾನು ಯಾವಾಗಲೂ ಮೆಚ್ಚುವ ಎರಡು ಗ್ರಂಥಗಳು ಇವು. ನನ್ನ ಪರಿಪಕ್ವವಾದ ವಿಚಾರಗಳ ಪ್ರಾಮಾಣಿಕ ಅಭಿವ್ಯಕ್ತಿ ಇಲ್ಲಿದೆ. ಸಮಾಜವನ್ನು ನಿಂದಿಸಿ ಪ್ರಯೋಜನವೇನು? ದೌರ್ಬಲ್ಯವು ಸಮೂಹದಲ್ಲಿಲ್ಲ ಎಂಬುದನ್ನರಿತು ಮೂಲದ ಆ ಸ್ವಭಾವವನ್ನು ಅರಿತುಕೊಳ್ಳಲು ತೊಡಗಿದೆ. ಇತ್ತೀಚಿನ ಕೆಲ ನಾಟಕಗಳು ಆ ಪ್ರಯತ್ನಕ್ಕೆ ದೃಷ್ಟಾಂತ.

ಒಂದಾನೊಂದು ಕಾಲದಲ್ಲಿ ಧರ್ಮ, ಜಾತಿ ಇವು ಒಂದೆಡೆ ಸಮಾಜಕ್ಕೆ ಸ್ವಾಸ್ಥ್ಯವನ್ನು ಇನ್ನೊಂದೆಡೆ ವ್ಯಕ್ತಿಗೆ ಆರ್ಥಿಕ ಬಲವನ್ನು ಕೊಡುತ್ತಿದ್ದುವು. ಸ್ವಭಾವದಿಂದ ಸ್ವಾರ್ಥನಿಷ್ಠನಾದ ಮನುಷ್ಯನು ಅದಕ್ಕಾಗಿಯೆ ಅವುಗಳನ್ನು ನಂಬಿದ್ದಾನೆ. ನನ್ನ ಜೀವಮಾನದಲ್ಲಿ ಒಂದೇ ಒಂದು ಸಲ ಮಹಾತ್ಮರನ್ನು ಸಂದರ್ಶಿಸಿದ್ದೆ. ‘ರಾಜಕೀಯ ಸ್ವಾತಂತ್ರ್ಯ ಗೌಣ, ಸಮಾಜಕ್ರಾಂತಿ ಮುಖ್ಯ. ಮೊದಲು ಭಾರತೀಯರು ತಾವೆಲ್ಲರೂ ಒಂದೇ ಸಮಾಜದವರು ಎಂದು ತಿಳಿಯಲಿ, ಆ ಮೇಲೆ ಅವರು ಒಂದೇ ರಾಷ್ಟ್ರವಾಗುವರು. ನೀವು ರಾಜಕೀಯ ಸ್ವಾತಂತ್ರ್ಯಕ್ಕೆ ಪ್ರಾಶಸ್ತ್ಯ ಕೊಡುವುದು ತಪ್ಪು’ ಎಂದು ಧೈರ್ಯವಾಗಿ ಹೇಳಿದ್ದೆ. ಸ್ವಾತಂತ್ರ್ಯೋತ್ತರದ ಘಟನೆಗಳು ದುರ್ದೈವದಿಂದ ನನ್ನ ವಿಚಾರವನ್ನು ಸಮರ್ಥಿಸುತ್ತಿವೆ. ‘ಸಮಾಜವೆ ಜಾತಿ, ದುಡಿಯುವುದೆ ನೀತಿ’ ಎಂದು ನಾನು ೫೫ ವರ್ಷಗಳ ಮುಂಚಿತ ‘ಪ್ರಪಂಚ ಪಾಣಿಪತ್ತು’ ಎಂಬ ನಾಟಕದಲ್ಲಿ ಹೇಳಿದ್ದೇನೆ. ಹಾಗಾಗ ಬೇಕೆಂಬುದಕ್ಕಾಗಿಯೆ ನಾನು ಬರೆಯುತ್ತಿದ್ದೇನೆ; ನೀವು ನನ್ನನ್ನು ನಾಟಕಕಾರ ಎನ್ನಬಹುದು, ಸಾಹಿತಿ ಎನ್ನಬಹುದು. ಇತ್ತೀಚೆಗೆ ನಾನು ಬರೆದ ‘ಕೂಟ ದಾರಿಯಲ್ಲಿ’ ಎಂಬ ಏಕಾಂಕ ನಾನು ಹೇಗೆ, ಯಾಕೆ, ಯಾರಿಗಾಗಿ ಬರೆಯುತ್ತಿದ್ದೇನೆ ಎಂಬುದಕ್ಕೆ ಸಮರ್ಪಕ ದೃಷ್ಟಾಂತವಾಗಿದೆ.