ಮಂಡ್ಯದ ಸಮೀಪದ ಹಳ್ಳಿಯೊಂದರಿಂದ ಆ ವೃದ್ಧ ಶಿಕ್ಷಕರು ಮೊದಲ ಬಾರಿಗೆ ‘ಪ್ರಜಾವಾಣಿ’ ಕಚೇರಿಗೆ ಬಂದಿದ್ದರು. ಹೇಗೊ ಏಳು ಸುತ್ತಿನ ಕೋಟೆ ಸುತ್ತುತ್ತ, ಅವರಿವರನ್ನು ಕೇಳುತ್ತ, ನನ್ನ ಪುಟ್ಟ ಕೋಣೆಗೆ ಬಂದರು. ಬಂದವರೇ ಕೊಂಚ ಉದ್ವಿಗ್ನರಾದರು.

‘ನೀವೇನಾ ನಾಗೇಶ ಹೆಗಡೆ? ಓದಿದೇನೆ ನಿಮ್ಮದನ್ನ. ನೋಡಿ, ನಿಮ್ಮ ಈ ಪುಸ್ತಕಾನ ಸ್ವಲ್ಪ ಮುಂಚೆ ಕೊಂಡ್ ಕೊಂಡು ಬಂದೆ…. ಉಂಬಾ ಚೀಪಾಗಿ ಸಿಕ್ತು!’ ಎನ್ನುತ್ತ ತಮ್ಮ ಚೀಲದ ಅದೆಷ್ಟೊ ಕಂತೆ ಕಂತೆ ಕಾಗದಗಳ ಮಧ್ಯದಲ್ಲಿ ಕಷ್ಟಪಟ್ಟು ಆ ಪುಸ್ತಕವನ್ನು ಹೊರತೆಗೆದರು.

ನೋಡಿದೆ. ಸಾಕಷ್ಟು ಚಿಂದಿಚಿಂದಿಯಾಗಿದ್ದರೂ ತಕ್ಷಣ ಪರಿಚಯ ಸಿಕ್ತು. ಅದು ನನ್ನ ‘ಕ್ಯಾಪ್ಸೂಲಗಿತ್ತಿ’.

‘ಎಲ್ಲಿ ಸಿಕ್ತು?’ ಕೇಳಿದೆ.

‘ಇಲ್ಲೇ ಅವೆನ್ಯೂ ರೋಡ್‌ನ ಪುಟ್‌ಪಾತ್‌ನಲ್ಲಿ ಸಿಕ್ತು; ಸೆಕೆಂಡ್ ಹ್ಯಾಂಡ್ ಬುಕ್ಸ್‌ಗಳನ್ನು ಮಾರ್ತಾರಲ್ಲ? ಅಲ್ಲಿ!’ ಎಂದರು.

‘ರಪ್!’ ಎಂದು ಯಾರೊ ನನ್ನ ಮುಖಕ್ಕೆ ಐಸ್‌ಕ್ರೀಮ್ ಬಟ್ಟಲನ್ನು ರಾಚಿದಂತಾಯಿತು.

ತುಟಿ ಸವರಿಕೊಂಡರೆ ಸಿಹಿಸಿಹಿ ಕೆನೆ ಕ್ರೀಮ್. ಮೂಗಿಗೆ ವೆನಿಲಾ ಪರಿಮಳ. ಆದರೆ ಮುಖ ಎಲ್ಲಾ ರಾಡಿ. ಉಸಿರು ಕಟ್ಟಿದ ಅನುಭವ. ನಾಚಿಕೆ. ಕಿಸೆಯ ಕರವಸ್ತ್ರ (ಇದ್ದರೆ!) ಎತ್ತಿಕೊಂಡು ಮುಖ ಮುಚ್ಚಿಕೊಂಡು ಬಾತ್‌ರೂಮಿಗೆ ಓಡಬೇಕಾದಂಥ ಮುಖಭಂಗ.

‘ಪ್ರಜಾವಾಣಿ’ಯ ಮೂರನೆ ಸಂಪಾದಕೀಯ ಬರಹಗಳ ಈ ಸಂಕಲನ ನನಗೆ ಅಷ್ಟಿಷ್ಟು ಖ್ಯಾತಿ ತಂದಿತ್ತು. ಅನಂತಮೂರ್ತಿಯವರು ಅದನ್ನು ಸಾಕಷ್ಟು ಶ್ಲಾಘಿಸಿ ಮುನ್ನುಡಿ ಬರೆದಿದ್ದರು. ‘ನಮ್ಮ ನಡುವಿನ ಈಚೆಗೆ ಬರೆಯುವ ಎಷ್ಟೋ ಕವಿಗಳು ನಾಗೇಶ ಹೆಗಡೆ ಯಂತೆ ಸ್ವಾರಸ್ಯಪೂರ್ಣವಾಗಿ ಭಾಷೆಯನ್ನು ಬಳಸಲು ಕಲಿತರೂ ಸಾಕು….’ ಎಂದು ಹೇಳಿದ್ದರು.

ಇದು ನನ್ನ ಬರಹಗಳ ಹಣೆ ಬರಹದ ಒಂದು ಸ್ಯಾಂಪಲ್.

‘ರಪ್ ಎಂದು ಯಾರೊ ಈ ಪುಟ್ಟ ಪುಸ್ತಕವನ್ನು ಮುಖಕ್ಕೆ ಎಸೆದಂತಾಯಿತು’ ಎಂದು ನಾನು ಹೇಳಬಹುದಿತ್ತು.

ಯಾಕೆ ನಾನು ಐಸ್‌ಕ್ರೀಮ್ ಬಟ್ಟಲಿನ ಉದಾಹರಣೆ ಕೊಟ್ಟೆ ಎಂದರೆ, ಅದು ನನ್ನ ಬರಹದ ಒಂದು ಸ್ಯಾಂಪಲ್ ಕೂಡ. ನನಗಾದಂಥ ಇಂಥದೇ ಅನುಭವಗಳು ನನಗಿಂತ ಅನೇಕ ಪಟ್ಟು ಹೆಚ್ಚಿನ ಖ್ಯಾತಿಯ ಲೇಖಕರಿಗಾಗಿದೆ. ಸಾಮರ್‌ಸೆಟ್ ಮಾಮ್‌ಗಂತೂ ತಾನೇ ಹಸ್ತಾಕ್ಷರ ಹಾಕಿ ಪ್ರೀತಿಯಿಂದ ಕೊಟ್ಟ ಪುಸ್ತಕವೊಂದು, ಸೆಕೆಂಡ್ ಹ್ಯಾಂಡ್ ಬುಕ್‌ಸ್ಟಾಲ್‌ಗಳಲ್ಲೂ ಅಲ್ಲ, ರದ್ದಿ ಅಂಗಡಿಯಲ್ಲಿ ದರ್ಶನ ಮಾಡಿದೆ. ಆತ ಆ ಪುಸ್ತಕವನ್ನು ಏನು ಮಾಡಿದ ಎಂಬುದರ ಕುರಿತೂ ಐತಿಹ್ಯಗಳಿವೆ. ಅಂಥದ್ದನ್ನು ಬಿಟ್ಟು ಯಾಕೆ ನಾನು ಐಸ್‌ಕ್ರೀಮ್ ಬಟ್ಟಲಿನ ಉದಾಹರಣೆ ಕೊಟ್ಟೆ ಅನ್ನೋದಕ್ಕೆ ಕಾರಣ ಹೇಳುತ್ತೇನೆ.

ಜಗತ್ತಿನ ಅತ್ಯಂತ ಧನಿಕ ವ್ಯಕ್ತಿಯೆನಿಸಿದ ವ್ಯಕ್ತಿ ಬಿಲ್‌ಗೇಟ್ಸ್‌ನ ಮುಖಕ್ಕೆ ಈಚೆಗೆ ಯಾರೊ ಹೀಗೆ ಐಸ್‌ಕ್ರೀಮ್ ಬಟ್ಟಲನ್ನು ರಾಚಿದ್ದ ಚಿತ್ರವನ್ನು ನಾನು ನೋಡಿದ್ದೆ. ಗೊತ್ತಲ್ಲ, ‘ಮೈಕ್ರೋಸಾಫ್ಟ್’ ಹೆಸರಿನ ಕಂಪ್ಯೂಟರ್ ಕಂಪನಿಯ ಬಿಲ್‌ಗೇಟ್ಸ್? ಆತನ ಧನರಾಶಿಯ ಬಡ್ಡಿ ಹಣವೇ ಪ್ರತಿ ನಿಮಿಷಕ್ಕೆ ೧.೬೩ ಕೋಟಿಯಷ್ಟು ಹೆಚ್ಚುತ್ತಿದೆ. ಪ್ರತಿ ದಿನವೂ ಆತ ಪೂರ್ತಿ ಖರ್ಚಾಗಲು ೬೩೦ ವರ್ಷಗಳು ಬೇಕು! (ಈ ದಾಖಲೆಗಳನ್ನು ನಾನು ನನ್ನ ‘ಮುಷ್ಟಿಯಲ್ಲಿ ಮಿಲೆನಿಯಂ’ ಎಂಬ ಗ್ರಂಥದಿಂದ ಎತ್ತಿಕೊಂಡಿದ್ದೇನೆ.) ಅಂಥ ಧನಿಕನೊಬ್ಬನ ಮುಖಕ್ಕೆ ಎಲ್ಲೆರೆದುರು ರಪ್ಪೆಂದು ಐಸ್‌ಕ್ರೀಮ್ ಬಟ್ಟಲನ್ನು ಎಸೆದ ಘಟನೆಯನ್ನು ನಾನು ಇಲ್ಲಿ ಪೋಣಿಸಬಯಸುತ್ತೇನೆ.

ಏಕೆಂದರೆ, ನಮ್ಮ ಸಂಸ್ಕೃತಿಯ ಹೆಚ್ಚೆಂದರೆ ಪುಸ್ತಕವನ್ನು ಲೇಖಕನ ಮುಖಕ್ಕೆ ಎಸೆಯುವ (ಕಡತವನ್ನು ಬಾಸ್ ತನ್ನ ನೌಕರನ ಮುಖಕ್ಕೆ ಎಸೆಯುವ) ಪದ್ಧತಿ ಇದೆಯೇ ವಿನಾ, ಪಾಯಸದ ಬಟ್ಟಲನ್ನು ಎಸೆದ ಉದಾಹರಣೆಗಳಿಲ್ಲ. ನಾವು ಭಾರತೀಯರು, ಯಾರನ್ನೇ ಆದರೂ ಒಂದೋ, ಚೆನ್ನಾಗಿ ಇಷ್ಟಪಡುತ್ತೇವೆ ಅಥವಾ ದ್ವೇಷಿಸುತ್ತೇವೆ. ಪ್ರೀತಿಯಿಂದ ದ್ವೇಷಿಸುವ Oxymoron ವಿಧಾನ ನಮಗೆ ಗೊತ್ತಿಲ್ಲ. ಅಥವಾ ಅಂಥ ವಿಧಾನ ಇದ್ದರೆ ನನಗೆ ಗೊತ್ತಿಲ್ಲ. ಅದಕ್ಕೇ ಅವಕಾಶ ಸಿಕ್ಕಾಗಲೆಲ್ಲ ನನ್ನ ಬರಹಗಳ ಮೂಲಕ ವಿದೇಶೀ ಸಂಸ್ಕೃತಿಯ ಅಪರಿಚಿತ ಮುಖಗಳನ್ನು ಪರಿಚಯಿಸಲು ಇಷ್ಟಪಡುತ್ತೇನೆ.

ಪಿಯುಸಿ ಓದುತ್ತಿದ್ದಾಗ ನನ್ನ ರೂಮಿನಲ್ಲಿ ಒಂದು ಚೀಟಿಯನ್ನು ಅಂಟಿಸಿಕೊಂಡಿದ್ದೆ. ‘ಭಾರತವನ್ನು ನೋಡು, ಜಗತ್ತನ್ನು ನೋಡು’ ಎಂಬರ್ಥದ ಮುದ್ರಿತ ಚೀಟಿ. ಅದೇ ನನ್ನ ದಿಶೆಯನ್ನು ಮೂವತ್ತು ವರ್ಷಗಳ ಕಾಲ ನಿರ್ದೇಶಿಸಿತ್ತು ಎಂದು ಈಗ ಅನ್ನಿಸುತ್ತಿದೆ. ಭಾರತವನ್ನು ನೋಡುವ ಅವಕಾಶ ಸಿಗುತ್ತದೆಂದೇ ನಾನು ಇತರೆಲ್ಲ ವಿಷಯಗಳನ್ನು ಬಿಟ್ಟು ಭೂವಿಜ್ಞಾನವನ್ನು ಆಯ್ದುಕೊಂಡೆ. ಧಾರವಾಡದಲ್ಲೇ ಎಮ್‌ಎಸ್‌ಸಿ ಪದವಿ ಪಡೆಯುವ ಅವಕಾಶವಿದ್ದರೂ, ಅಪ್ಪನ ಎದುರು ಅದೆಂಥದೊ ಒಂದು ದೊಡ್ಡ ಚಿತ್ರ ಬಿಚ್ಚಿಟ್ಟು, ದೂರದ ಖರಗ್‌ಪುರ ಐಐಟಿಗೆ ಅರ್ಜಿ ಹಾಕಿ ಪ್ರವೇಶ ಗಿಟ್ಟಿಸಿ ಹೊರಟು ಅಲ್ಲಿಂದ ಜೆಎನ್‌ಯು, ಅಲಇಂದ ನೈನಿತಾಲ್, ಅಲ್ಲಿಂದ ಬ್ರಿಟನ್, ಅಮೆರಿಕ ಇತ್ಯಾದಿ ಛಪ್ಪನ್ನಾರು (ಮೈನಸ್ ನಾಲ್ವತ್ತು!) ದೇಶಗಳನ್ನು ಸುತ್ತಿ ಬರೋದಕ್ಕೆ ಆ ಚೀಟಿಯೇ ಕಾರಣವಿರಬೇಕು.

‘ಆತ್ಮಕಥೆ ಬೇಡ, ಬರವಣಿಗೆ ವಿಷಯ ಹೇಳ್ರೀ’ ಎಂದು ನೀವು ಸಿಡುಕುತ್ತಿರುವುದು ನನಗೆ ಗೊತ್ತಾಗುತ್ತಿದೆ. ಅಲ್ಲಿಗೇ ಬರ್ತೇನೆ ತಾಳಿ. ಪ್ರಪಂಚ ಸುತ್ತೋದಕ್ಕೂ ಬರವಣಿಗೆಗೂ ಯಾವ ಸಂಬಂಧವೂ ಇಲ್ಲ. ದಿನಾ ಬೆಂಗಳೂರಿನ ಏರ್‌ಪೋರ್ಟ್‌ನಿಂದ ನೂರೈವತ್ತು ಜನ ಕನ್ನಡಿಗರು ವಿದೇಶಕ್ಕೆ ಹೋಗುತ್ತಾರೆ. ಒಂದೇ ವರ್ಷದಲ್ಲಿ ನೂರೈವತ್ತು ದೇಶಗಳನ್ನು ಸುತ್ತಿ ಬರುವ ಕನ್ನಡಿಗನನ್ನೂ ಹುಡುಕಬಹುದು. ಆದರೆ ಅಂಥ ಎಲ್ಲರೂ ಬರೆಯುವುದಿಲ್ಲ. ಮೋಹಕ ಭಾಷೆಯಲ್ಲಿ ಬರೆಯಬಲ್ಲ ಅದೆಷ್ಟೂ ಮಂದಿಗೆ ಪ್ರಪಂಚದ ಅನುಭವ ಇರುವು ದಿಲ್ಲ. ಪ್ರಪಂಚದ ನಿಯಮವೇ ಹಾಗಿರಬೇಕು. ಎಲ್ಲ ದೇಶಗಳಲ್ಲೂ, ಎಲ್ಲ ಕಾಲದಲ್ಲೂ ಹೀಗೇ!

ನನ್ನ ಅದೃಷ್ಟಕ್ಕೆ ನಾನು ಬರವಣಿಗೆ ಆರಂಭಿಸುವ ವೇಳೆಗೆ ಸರಿಯಾಗಿ ತಂತ್ರಜ್ಞಾನದ ನಾಗಾಲೋಟ ಒಮ್ಮೆಗೇ ಆರಂಭವಾಗಿತ್ತು. ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಾಗಿತ್ತು. ‘ಪರಿಸರ ಪ್ರಜ್ಞೆ’ ಎಂಬ ಹೊಸ ವಿಷಯಕ್ಕೆ ಎಲ್ಲೆಡೆ ಆದ್ಯತೆ ಸಿಗತೊಡಗಿತ್ತು. ನಾನು ತಂತ್ರ ಜ್ಞಾನದಲ್ಲಿ ಮುಂಚೂಣಿಯಲ್ಲಿದ್ದ ಐಐಟಿಯಿಂದ ಪದವಿ ಪಡೆದು, ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೆಮ್ಮೆಯ ಆ ಎರಡು ಕೋಡುಗಳ ಮೇಲೆ ಕನ್ನಡದ ಬಾಸಿಂಗವನ್ನು ಏರಿಸಿಕೊಂಡು ಬರವಣಿಗೆಗೆ ಇಳಿದೆ.

ನಾನು ಸರಳವಾಗಿ ಬರೆಯುತ್ತೇನೆಂದು ಅನೇಕರು ಹೇಳಿದ್ದುಂಟು. ಅದು ಹೊಗಳಿಕೆಯ ಮಾತಾದರೆ ಅದರ ಶ್ರೇಯ ನನಗೆ ಸೇರಬೇಕಾಗಿಲ್ಲ. ಕನ್ನಡದ ಜಾಯಮಾನದಲ್ಲೇ ಆ ಸರಳತೆ ಇದೆ. ನಾನು ಹೊಸ ಭಾಷೆಯನ್ನೇನೂ ಸೃಷ್ಟಿ ಮಾಡಿಲ್ಲ. ಕನ್ನಡವೆಂದರೆ ಚಿನ್ನವಿದ್ದಂತೆ. ಚಿನ್ನದ ಗುಣವೇನೆಂದರೆ ಅದನ್ನು ನೀವು ಕುಟ್ಟಿದಷ್ಟೂ ಹಿಗ್ಗುತ್ತ ಹೋಗುತ್ತದೆ ವಿನಾ ಭಗ್ನವಾಗುವುದಿಲ್ಲ. ಎಳೆದಷ್ಟೂ ತಂತಿಯಾಗುತ್ತ ಹೋಗುತ್ತದೆ. ವಿನಾ ತುಂಡಾಗುವುದಿಲ್ಲ ಅಕ್ಕಸಾಲಿಗನ ತನ್ಮಯತೆ ಹಾಗೂ ಕಲಾತ್ಮಕತೆ ಇದ್ದರೆ ಕನ್ನಡ ಹೇಗೆ ಬೇಕಾದರೂ ಬಾಗುತ್ತದೆ, ಬಳುಕುತ್ತದೆ. ಎಷ್ಟುದ್ದ ಬೇಕಾದರೂ ಹಿಗ್ಗುತ್ತದೆ. ಭಾಷೆಗಾಗಿ ಶ್ರಮಿಸಿದವನನ್ನು ಹಿಗ್ಗಿಸುತ್ತದೆ. ಈ ಕನ್ನಡ ಚಿನ್ನವನ್ನು ಸುಂದರ ಆಭರಣವಾಗಿ ಮಾಡುವುದು ಹೇಗೆಂಬುದನ್ನು ನನ್ನ ಹೈಸ್ಕೂಲ್ ಗುರುಗಳು, ನಮ್ಮ ಕಾಲದಲ್ಲಿ ಹೈಸ್ಕೂಲ್ ಶಿಕ್ಷಕರು ಮಕ್ಕಳಿಂದ ನಿಬಂಧ ಬರೆಯಿಸಿ, ಅತ್ಯುತ್ತಮವಾದುದನ್ನು ಇಡೀ ಕ್ಲಾಸಿಗೆ ಓದಿ ಹೇಳುತ್ತಿದ್ದರು. ಅದು ಹೆಚ್ಚಿನ ಬಾರಿ ನನ್ನ ನಿಬಂಧವೇ ಆಗಿರುತ್ತಿತ್ತು. ಏಕೆಂದರೆ, ಆಗ ನಾನು ಕದ್ದು ಮುಚ್ಚಿ, ಎನ್. ನರಸಿಂಹಯ್ಯ, ಅನಕೃ, ತರಾಸು, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳನ್ನೂ ಬೇಂದ್ರೆಯವರ ಕವನಗಳನ್ನೂ ಕೆಮಿಸ್ಟ್ರಿ ಕ್ಲಾಸಿನಲ್ಲೇ ಓದುತ್ತಿದ್ದೆ. ಸಿಕ್ಕಿಬಿದ್ದಾಗ ಗಣಿತ ಶಿಕ್ಷಕರಿಂದ ಬೈಸಿಕೊಳ್ಳುತ್ತಲೇ ಕನ್ನಡ ಶಿಕ್ಷಕರಿಂದ ಹೊಗಳಿಸಿಕೊಳ್ಳುತ್ತಿದ್ದೆ.

ಈಚೀಚೆಗೆ ಹೈಸ್ಕೂಲುಗಳಲ್ಲಿ ನಿಬಂಧ ಬರೆಸುವ ಪ್ರವೃತ್ತಿಯೇ ಹೋಗಿಬಿಟ್ಟಿದೆ. ನನ್ನ ಮಗನ ಮೂರು ವರ್ಷಗಳ ಹೈಸ್ಕೂಲ್ ಶಿಕ್ಷಣದಲ್ಲಿ ಒಂದು ಬಾರಿಯೂ ಉಪಾಧ್ಯಾಯರು ಅವನಿಂದ ನಿಬಂಧವನ್ನು ಬರೆಸಲಿಲ್ಲ. ನಾನು ಈ ಕುರಿತು ಬೆಂಗಳೂರಿನ ನ್ಯಾಶನಲಂ ಹೈಸ್ಕೂಲ್‌ನ ಉಪಾಧ್ಯಾಯರಿಗೆ ದೂರನ್ನು ಕೂಡ ಕೊಟ್ಟಿದ್ದೆ. ನನ್ನ ಅನುಭವದ ಪ್ರಕಾರ, ಬರವಣಿಗೆಯ ಆಸಕ್ತಿಯನ್ನು ರೂಪಿಸುವುದೇ ಹೈಸ್ಕೂಲ್ ನಿಬಂಧಗಳು. ಈಗಿನ ಅನೇಕ ಗದ್ಯ ಬರಹಗಾರರು ಸರಳವಾಗಿ ಹೇಳಬಹುದಾದ್ದನ್ನೂ ತೀರಾ ಕ್ಲಿಷ್ಟವಾಗಿ ಬರವಣಿಗೆಯಲ್ಲಿ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಕನ್ನಡ ಓದುವವರು ಕಮ್ಮಿಯಾಗಿದ್ದರೊ ಅಂತೂ ಕನ್ನಡ ಬರವಣಿಗೆಯಲ್ಲಿ ಲಾಲಿತ್ಯ, ಸ್ವಾರಸ್ಯ, ಕಮ್ಮಿಯಾಗುತ್ತಿದೆ. ವಾರಕ್ಕೆ ಕನಿಷ್ಟ ಐವತ್ತು ಲೇಖನಗಳ ಹಸ್ತಪ್ರತಿಗಳ ಮೇಲೆ ಕಣ್ಣಾಡಿಸಬೇಕಾದ ದೌಭಾರ್ಗ್ಯವಂತ ನಾನು. ಅನುಭವದಿಂದ ಈ ಮಾತನ್ನು ಬರೆಯುತ್ತಿದ್ದೇನೆ.

ಗದ್ಯ ಬರವಣಿಗೆಗೆ ಭಾಷೆಯೊಂದೇ ಸಾಲದು. ಬರೆಯಲು ಹೊಸ ಹೊಸ ವಿಷಯಗಳು ಬೇಕು. ಅದಕ್ಕೆ ಲೋಕಜ್ಞಾನ ಬೇಕು. ಮಾಧ್ಯಮಗಳಲ್ಲಿ ಅಷ್ಟಾಗಿ ಪ್ರಚಾರ ಸಿಕ್ಕಿರದ, ಆದರೆ ನಮ್ಮನ್ನು ನೇರವಾಗಿ ತಟ್ಟುವ ವಿದ್ಯಮಾನಗಳ ಅರಿವಿರಬೇಕು. ವಿಜ್ಞಾನ ತಂತ್ರಜ್ಞಾನ ಗಳ ಲೋಕದಲ್ಲಿ ಅಂಥ ಬೇಕಷ್ಟು ವಿಷಯಗಳು ಸಿಗುತ್ತಿವೆ. ಪತ್ರಕರ್ತನಾಗಿರುವುದರಿಂದ ಅನೇಕ ವಿದ್ಯಮಾನಗಳನ್ನು ಅವುಗಳ ಕಚ್ಚಾರೂಪದಲೇ (ಅಂದರೆ ಅವುಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಆಗುವ ಮೊದಲೇ) ಕಣ್ಣರೆ ನೋಡುವ ‘ಸೌಭಾಗ್ಯ’ ನನ್ನದಾಗಿದೆ.

ಈ ಬಗ್ಗೆ ಎರಡು ಉದಾಹರಣೆ ಕೊಟ್ಟರೆ ಬೇಸರವಿಲ್ಲ ತಾನೆ? ಭಾರತದ ಹೆಮ್ಮೆಯ ರಾಕೆಟ್ ಒಂದು ಬಾಹ್ಯಾಕಾಶಕ್ಕೆ ಹಾರಲಿದೆ. ಒಂದು ದಿನ ಮುಂಚೆಯೇ ಶ್ರೀಹರಿಕೋಟಾಕ್ಕೆ ಪ್ರೆಸ್ ಪಾರ್ಟಿ ಹೋಗುತ್ತದೆ. ವೈಭವೋಪೇತ ಗೆಸ್ಟ್ ಹೌಸ್, ಭರ್ಜರಿ ಪಾರ್ಟಿ. ಮರುದಿನ ಬೆಳಿಗ್ಗೆ ಉಡ್ಡಾಣ ತಾಣದ ದರ್ಶನ. ಪೂರ್ಣರೂಪದಲ್ಲಿರುವ ಒಂದೆರಡು ರಾಕೆಟ್‌ಗಳು, ಅರೆಬರೆ ಸಿದ್ಧತೆಯಲ್ಲಿರುವ ಅಲ್ಲಲ್ಲಿ ಜೋಡಿಸಿಟ್ಟ ಅನೇಕ ರಾಕೆಟ್‌ಗಳು, ಹೊರಗೆ ಎಂತೆಂಥದೋ ಹೊಸ ಯೋಜನೆಗಳ, ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ. ಅಲ್ಲಿ, ಬಯಲಿನಲ್ಲಿ ಅನಾಥವೆಂಬಂತೆ ಬಿದ್ದಿರುವ ದೂರಭವಿಷ್ಯದ ರಾಕೆಟ್‌ಗಳ ಹೊರಗವಚಗಳು. ಕುಡಿಯುವ ನೀರನ ಹೇಮಾವತಿ ಯೋಜನೆಗಾಗಿ ಎಂಟು ವರ್ಷಗಳಿಂದ ರಸ್ತೆ ಪಕ್ಕದಲ್ಲಿ ಬಿದ್ದ ಖಾಲಿ ಪೈಪುಗಳಂತೆ ಮಲಗಿರುವ ಆ ಫೈಬರ್ ಗ್ಲಾಸ್ ಕವಚಗಳಲ್ಲಿ ಬಡ ಕೂಲಿಕಾರ ಸಂಸಾರ ಇರುವುದನ್ನು ನೀವು ನೋಡಿದ್ದೀರಾ? ನಾನು ನೋಡಿದ್ದೇನೆ. ಭವ್ಯ ಭಾರತದ ಬಾಹ್ಯಾಕಾಶ ಯೋಜನೆಗೆಂದು ತರಿಸಿದ ರಾಕೆಟ್ ಕೊಳವೆಯ ಒಳಗೆ ತಂಪು ನೆರಳಲ್ಲಿ ಬಡ ಕೂಲಿ ಕಾರ್ಮಿಕರ ಮಗು.

ಕವನ ಬರೆಯಲು ಬೇಕಾಗ ಸಾಮಗ್ರಿ ಇದು. ಯಾವ ವರದಿಗಾರನೂ ಇದನ್ನು ನಿಮ್ಮ ಮುಂದೆ ಇಡಲಾರ. ‘ಅಯ್ಯೊ ಬಿಡಿ ಸಾ! ನೂರು ಕೋಟಿ ಜನರ ‘ಭಾರ’ತ ಇದು. ಪಾಪುಲೇಶನ್ ನಿಯಂತ್ರಣ ಮಾಡದೇ ಇದ್ರೆ ಇವೆಲ್ಲ ಮಾಮೂಲು’ ಎಂದು ನೀವು ಹೊರಡಬಹುದು. ಆದರೆ ಹೊರಡಬೇಡಿ ನಿಲ್ಲಿ. ಜನಸಂಖ್ಯಾ ನಿಯಂತ್ರಣದ ವೈಜ್ಞಾನಿಕ ವೈಖರಿಯನ್ನೂ ಇದೇ ಉಸಿರಲ್ಲಿ ಹೇಳಿ ಮುಗಿಸುತ್ತೇನೆ. ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ಸಂಶೋಧನೆ ಮಾಡುತ್ತೇನೆಂದು ಏಳೆಂಟು ಕೋತಿಗಳ ಶಿಶ್ನಗಳು ಕೊಯ್ದು ಅರೆಬರೆ ಬ್ಯಾಂಡೇಜ್ ಸುತ್ತಿ ಎಲ್ಲವನ್ನೂ ಒಂದು ಸಾಮಾನ್ಯ ಟೇಬಲ್ ಗಾತ್ರದ ಪಂಜರದೊಳಕ್ಕೆ ತುರುಕಿ ಇಟ್ಟ ಹಿರಿಯ ವಿಜ್ಞಾನಿಯ ಕೃತ್ಯವನ್ನು ನೀವು ನೋಡಿದ್ದೀರಾ? ನಾನು ನೋಡಿದ್ದೇನೆ. ಮಾನವನ ಮೇಲಷ್ಟೇ ಅಲ್ಲ, ಇಡೀ ಜೀವಲೋಕದ ಮೇಲಣ ದೌರ್ಜನ್ಯದ ಕತೆ ಇದು. ಕತೆ ಉದ್ದ ಇಲ್ಲ. ಆ ವಿಜ್ಞಾನಿಗೆ ನಿವೃತ್ತಿಯಾಯಿತು. ಯೋಜನೆ ಅಷ್ಟಕ್ಕೇ ನಿಂತಿತು. ನರಳಿ ಸತ್ತ ಕೋತಿಗಳು ಮಣ್ಣಾದವು. ಜನಸಂಖ್ಯಾ ನಿಯಂತ್ರಣದ ಒಂದು ಹೊಸ ಉಪಾಯ ಬಂದಿಲ್ಲ, ಹಳೆಯ ಯೋಜನೆಗಳು ಪ್ರಜೆಗಳ ವೋಟಿನ ಬಲ ದಿಂದಾಗಿ ಕಾರ್ಯಗತವಾಗಿಲ್ಲ.

ಇಂಥ ಮೆಲೊಡ್ರಾಮಾಗಳನ್ನು ಬಿಚ್ಚಿಟ್ಟು, ಅವುಗಳ ನಡುವಣ ಸತ್ಯವನ್ನು ಕೆದಕುವಂಥ ಗದ್ಯದ ಬರವಣಿಗೆ ನನಗೆ ಇಷ್ಟ. ರಾಕೆಟ್ ಮತ್ತು ಅದರ ನೆರಳಿನ ನಡುವಣ ಅಂತರ, ಸಂಶೋಧನೆ ಮತ್ತು ವಾಸ್ತವದ ನಡುವಣ ಅಂತರ, ತಂತ್ರಜ್ಞಾನದ ದಾಪುಗಾಲು ಮತ್ತು ದುರ್ಬಲರ ಅಂಬೆಗಾಲುಗಳ ನಡುವಣ ಅಂತರವನ್ನು ವಿಶ್ಲೇಷಿಸುವ ಗದ್ಯ ನನಗೆ ಇಷ್ಟ.

‘ನೀವು ಹೆಚ್ಚು ಹೆಚ್ಚು ಪುಸ್ತಕಗಳನ್ನೇ ಬರೆಯಬೇಕು’ ಎಂದು ಕೆಲವರು ಸಲಹೆ ಮಾಡುತ್ತಾರೆ. ಸಾಕಷ್ಟು ಪ್ರಕಾಶಕರೂ ‘ಬರ್ಕೊಡಿ ಬರ್ಕೊಡಿ’ ಎಂದು ಕೇಳಲು ಬರುತ್ತಿದ್ದಾರೆ. ಆದರೆ ನನಗೆ ಜಗತ್ತು ತೋರಿಸಿದ ಪತ್ರಿಕೋದ್ಯಮವೇ ನನ್ನ ಬರವಣಿಗೆ ಮಿತಿ ಹಾಕುತ್ತಿದೆ. ಪತ್ರಿಕೆಗೆಂದೇ ಬರೆಯುತ್ತಿರುವ ನಮ್ಮಂಥವರಿಗೆ ಏನಾಗುತ್ತದೆಂದರೆ, ಇಂದು ಸಂಜೆ ಬರೆದದ್ದು ನಾಳೆ ಬೆಳಿಗ್ಗೆ ಮುದ್ರಿತ ಅಕ್ಷರಗಳ ರೂಪದಲ್ಲಿ ಮೂರು ಲಕ್ಷ ಜನರನ್ನು ತಲುಪಿರುತ್ತದೆ. ಬಿಸಿಲೇರುವ ಮೊದಲೇ ಕೆಲವರಾದರೂ ಪ್ರತಿಕ್ರಿಯೆ ಸೂಚಿಸಿರುತ್ತಾರೆ. ಬರವಣಿಗೆಗೂ ಪ್ರಕಟನೆಗೂ ಪ್ರತಿಕ್ರಿಯೆಗೂ ಹೆಚ್ಚೆಂದರೆ ಹತ್ತೇ ದಿನಗಳ ಅಂತರವಿರುತ್ತದೆ. ಅಂಥ Instant gratificationನ ಸುಳಿಯಲ್ಲಿ ಸಿಕ್ಕಿಬಿದ್ದವರು ನಾವು. ಪುಸ್ತಕ ಪ್ರಕಾಶನದ ವಿಷಯ ಹಾಗಲ್ಲ. ಪ್ರಕಾಶಕರು ಇಂದು ಹಸ್ತಪ್ರತಿಯನ್ನು ಒಯ್ದು, ಆರು ತಿಂಗಳ ಮೇಲೆ ಪ್ರೂಫ್ ಕೊಟ್ಟು ಆರು ತಿಂಗಳ ಮೇಲೆ ಚಿತ್ರ ಬರೆಸಿ, ಒಂದೂವರೆ ವರ್ಷಗಳ ನಂತರ ಬರೀ ಒಂದು ಸಾವಿರ ಪ್ರತಿಗಳ್ನು ಹಾಕಿ, ಅದರ ಇನ್ನೂರೈವತ್ತು ಪ್ರತಿಗಳನ್ನು ನಾನೇ ಖರೀದಿಸಿ, ಅದು ಪ್ರಕಟವಾದ ಒಂದೂವರೆ ತಿಂಗಳಲ್ಲಿ…..

‘ಸೆಕೆಂಡ್ ಹ್ಯಾಂಡ್ ಬುಕ್ ಸ್ಟಾಲ್‌ನಲ್ಲಿ ಚೀಪಾಗಿ ಸಿಗ್ತು, ಕೊಂಡ್ಕೊಂಡೆ ಸಾರ್!’ ಎನ್ನುತ್ತ ಮುಗ್ಧ ನಗೆಯೊಂದಿಗೆ ಹಿರಿಯರು ನನ್ನನ್ನು ಮೆಚ್ಚಿಸಲೆಂದು ಬಂದಾಗ ರಪ್ ಎಂದು ಐಸ್‌ಕ್ರೀಮ್ ಬಟ್ಟಲನ್ನು ಮುಖಕ್ಕೆ ಯಾರೊ ರಾಚಿದಂತಾಗುತ್ತದೆ.

ಸಿಹಿಗನ್ನಡಂ ಗೆಲ್ಗೆ!