ಬದುಕಿನ ವಿಸ್ಮಯಗಳ ಬಗೆಗೆ ಕುತೂಹಲ ಕುದುರತೊಡಗಿದ್ದ ನನ್ನ ಬಾಲ್ಯದಲ್ಲಿ, ಪ್ರಶ್ನಿಸುವ ಅಧಿಕಾರವೇ ನನಗೆ ಇಲ್ಲವೇನೋ ಎಂದು ಭಾಸವಾಗುವಂತಹ ಮಡಿವಂತಿಕೆಯ ಶಿಸ್ತು. ಪ್ರತಿಭಟನೆ ಹೇಗೆ ಸಾಧ್ಯ ಎನ್ನುವಂತಹ ಕಠಿಣ ಸಂಪ್ರದಾಯ ಬದ್ಧ ಕೌಟುಂಬಿಕ ಪರಿಸರದಲ್ಲಿ ಎಲ್ಲ ವಿಧಿ ನಿಷೇಧಗಳೇ. ನಮ್ಮ ಎಲ್ಲ ನೀತಿ ಮೌಲ್ಯಗಳೂ ಸಾಂಪ್ರದಾಯಿ ಕತೆಯ ಮಂಡಿವಂತಿಕೆಯ ಶಿಸ್ತಿನಲ್ಲಿ ನಿರ್ಧಾರವಾಗಬೇಕು ಎಂಬ ನನ್ನ ಬಾಲ್ಯದ ಆವರಣ ದಲ್ಲಿ, ಯಾಕೆ ಎಂದು ಕೂಗಿ ಕೇಳಬೇಕು ಎಂಬ ಆಸೆಗೂ ಮಾತಿನ ರೂಪ ಕೊಡಲು ಸಾಧ್ಯ ವಾಗದಂತಹ ಪರಿಸ್ಥಿತಿಯಿತ್ತು. ಬಾಲ್ಯದಲ್ಲಿ ನಾನು ನೆಚ್ಚಿಕೊಂಡದ್ದು ಏಕಾಂತತೆಯನ್ನು; ಕಟ್ಟಿಕೊಂಡದ್ದು ನನ್ನ ಸುತ್ತಮುತ್ತ ನಡೆಯುತ್ತಿರುವುದೆಲ್ಲ ವಾಸ್ತವವೇ ಎಂಬ ಕುತೂಹಲ ವನ್ನು. ಕೆಳ ಮಧ್ಯಮ ವರ್ಗದ, ದೊಡ್ಡ ಸಂಸಾರದ ಆರ್ಥಿಕ ಬವಣೆ, ಅಸಹನೀಯವೆನಿಸುವ ಮಡಿವಂತಿಕೆ ಇವುಗಳಿಂದ ಪಾರಾಗುವುದು ಹೇಗೆ ಎಂಬ ಚಿಂತನೆಯಲ್ಲಿ ನಾನು ನನ್ನ ಬಾಲ್ಯದ ವಿದ್ಯಾಭ್ಯಾಸದ ಹಲವು ವರ್ಷಗಳನ್ನು ಕಳೆಯಬೇಕಾಗಿತ್ತು. ಅದೇ ಸಂದರ್ಭದಲ್ಲಿ ತಿಳಿವಳಿಕೆ ಬೆಳೆಯುತ್ತಿದ್ದಂತೆ ನನ್ನ ಪರಿಸರದಲ್ಲಿ ಕಾಣತೊಡಗಿದ್ದ ಸ್ತ್ರೀ ಶೋಷಣೆಯ ಹಲವು ಮುಖಗಳು, ಕ್ರೌರ್ಯ ಶೋಷಣೆಯ ನಡುವೆಯೂ ಆಕೆ ಉಳಿಸಿಕೊಳ್ಳುತ್ತಿದ್ದ ಚೆಲುವಿನ ಪ್ರಜ್ಞೆ ಇವುಗಳ ವೈರುಧ್ಯ ನನ್ನ ಸೃಜನಶೀಲತೆಗೆ ರೂಪುಗೊಟ್ಟವು.

ನಮ್ಮ ಕುಟುಂಬದ ಮಡಿವಂತಿಕೆಯ ಶಿಸ್ತಿಗೆ ತಾಯಿ ತನ್ನನ್ನು ಒಗ್ಗಿಸಿಕೊಂಡಿದ್ದರೂ ಅವರ ತಂದೆ, ನನ್ನ ಅಜ್ಜ, ದೀರ್ಘ ಕಾಲ ಕೊಡಗಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದವರು. ಆಧುನಿಕ ಶಿಕ್ಷಣದ ಸಂಸ್ಕಾರವನ್ನು ನೆಚ್ಚಿಕೊಂಡಿದ್ದವರು. ಅವರ ದೊಡ್ಡ ಮಗ, ನನ್ನ ಸೋದರ ಮಾವ, ಆಗಿನ ಮದಾರಾಸು ಪ್ರಾಂತ್ಯದಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿ ದ್ದವರು; ನಿರ್ಭೀತ, ಅತ್ಯಂತ ಪ್ರಾಮಾಣಿಕ ಅಧಿಕಾರಿಯೆಂದು ಹೆಸರು ಗಳಿಸಿದ್ದವರು; ಬ್ರಿಟಿಶ್ ಮೇಲಾಧಿಕಾರಿಗಳ ಕೈ ಕೆಳಗೆ ದುಡಿಯಬೇಕಾಗಿದ್ದರೂ ಗಾಂಧೀಜಿಯವರಿಂದ ಪ್ರಭಾವಿತರಾಗಿ ಖಾದಿಯನ್ನೇ ಧರಿಸುತ್ತ, ತಕಲಿಯಲ್ಲಿ ನೂಲುತ್ತ ಸಾಯುವ ತನಕವೂ ಗಾಂಧಿ ಭಕ್ತರಾಗಿದ್ದವರು. ನಮ್ಮ ಮನೆಯ ಮಡಿವಂತಿಕೆಯ ಕತ್ತಲಲ್ಲೂ ನಾನು ಒಂದು ರೀತಿಯ ಬೆಳಕನ್ನು ಕಾಣತೊಡಗಿದಾಗ, ನನ್ನ ಸೋದರ ಮಾವನ ಮೂಲಕ ಅವರು ಕೆಲಸದ ಪ್ರವಾಸಕ್ಕೆಂದು ಹೋಗಬೇಕಾಗಿಗ, ಓದಲೆಂದು ಬುಟ್ಟಿ ತುಂಬ ಗ್ರಂಥಗಳನ್ನು ಒಯ್ಯುತ್ತಿದ್ದುದೂ, ನಾನು ನನ್ನ ಓದಿನ ಹಸಿವನ್ನು ಹೆಚ್ಚಿಸಿಕೊಳ್ಳಲು ಕಾರಣ. ಈ ಕತ್ತಲು ಬೆಳಕಿನ ವೈರುಧ್ಯವೂ ನನಗೆ ನನ್ನ ಪರಿಸರದಿಂದ ಬಿಡುಗಡೆ ಬೇಕು ಎಂಬ ಆಸೆ ಹುಟ್ಟಿ ಕೊಳ್ಳಲೂ ಹಾಗೆಯೇ ನನ್ನ ಕಳವಳವನ್ನು ಯಾರೊಡನಾದರೂ ತೋಡಿಕೊಳ್ಳಬೇಕು ಎಂಬ ಅಭಿವ್ಯಕ್ತಿಯ ಆಸೆಯನ್ನು ಬೆಳೆಸಿಕೊಳ್ಳಲೂ ಮುಖ್ಯ ಕಾರಣ.

ನಮ್ಮ ಕುಟುಂಬದ ೧೩ ಮಕ್ಕಳಲ್ಲೆ ನಾನು ಹಿರಿಯನಾಗಿದ್ದವನು. ನನಗೆ ಉಚ್ಚ ಶಿಕ್ಷಣ ಸಂಸ್ಕಾರವನ್ನು ಕೊಡಿಸಲೇಬೇಕು ಎಂಬ ಆಸೆಯಿರಿಸಿಕೊಂಡಿದ್ದ ನನ್ನ ಅಜ್ಜ, ನನ್ನ ಹದಿಮೂರನೆಯ ವಯಸ್ಸಿನಲ್ಲೆ ತೀರಿಕೊಂಡಾಗ, ಈ ಆಸೆ ನಿಜವಾಗುವ ಸಾಧ್ಯತೆ ಕಡಿಮೆ ಎನಿಸಿತು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ, ನನ್ನ ಮೆಟ್ರಿಕ್ ಮುಗಿದಾಗಲೇ ಉದ್ಯೋಗ ಬೇಟೆ ಆರಂಭಿಸಬೇಕಾಗಿ ಬಂದಿತು. ಎರಡನೆಯ ಮಹಾಯುದ್ಧ ಆರಂಭವಾದ ವರ್ಷ. ನಿರುದ್ಯೋಗದ ಸಮಸ್ಯೆ ಅತ್ಯಂತ ತೀಕ್ಷ್ಣವಾಗಿ ಕಾಡುತ್ತಿದ್ದ ಕಾಲ. ಒಂದು ಸಾಮಾನ್ಯ ಕಾರಕೂನಿಕೆಯ ಕೆಲಸ ಸಿಗಬಹುದು ಎಂಬ ಆಸೆಯಿಂದ ಅದನ್ನು ದೊರಕಿಸಿಕೊಡಬಹುದಾದ ಸಾಧನವೆಂದು, ಉಡುಪಿಯ ಜಿಲ್ಲಾ ಬೋರ್ಡು ಕಚೇರಿಯಲ್ಲಿ ನಾನು ಪಗಾರವಿರದೆಯೇ ದುಡಿಯಲಾರಂಭಿಸಿದೆ. ಎರಡು ವರ್ಷ ಕಾಲದ ಈ ರೀತಿಯ ದುಡಿಮೆ ನನ್ನ ಸಾಹಿತ್ಯಕ ಜೀವನಕ್ಕೆ ಅತ್ಯಂತ ಉಪಯುಕ್ತ ವರ್ಷಗಳಾಗಿ ಪರಿಣಿಮಿಸಿತು. ಇದಲ್ಲದ ಕಾರಣ ಈ ಅವಧಿಯಲ್ಲಿ ನಾನು ನನಗೆ ಅಂಟಿಸಿಕೊಂಡ ಓದಿನ ಆಸಕ್ತಿ. ನನ್ನ ಹುಟ್ಟೂರಾದ ಉಡುಪಿ ಯಂತಹ ಸಣ್ಣ ಪಟ್ಟಣದಲ್ಲೂ ಆಗ ಇದ್ದ ಮ್ಯುನಿಸಿಪಲ್ ಗ್ರಂಥಾಲಯ, ಒಂದು ಸಮೃದ್ಧ ಗ್ರಂಥ ಭಂಡಾರವಾಗಿತ್ತು. ಅಪಾರವೆನಿಸುವ ವೈವಿಧ್ಯಪೂರ್ಣ ಗ್ರಂಥಗಳನ್ನೆಲ್ಲ ಓದುವ ಅವಕಾಶವನ್ನು ನನಗೆ ಒದಗಿಸಿಕೊಟ್ಟದ್ದು ಈ ಗ್ರಂಥಾಲಯ. ಆಂಗ್ಲ ಸಾಹಿತ್ಯದ ಮಹಾನ್ ಲೇಖಕರ ಮಹತ್ವದ ಗ್ರಂಥಗಳನ್ನೆಲ್ಲ ಓದಲು ಸಾಧ್ಯವಾದದ್ದು ಈ ಗ್ರಂಥಾಲಯದಲ್ಲೇ. ಗಾಂಧೀಜಿ ಹಾಗೂ ನೆಹರೂರವರ ಆತ್ಮಕಥೆಗಳನ್ನೂ ಮುಂದೆ ಬಹಿಷ್ಕರಿಸಲ್ಪಟ್ಟ ಹಿಟ್ಲರನ ‘ಮೈನ್‌ಕ್ಯಾಂಪ್’ ಗ್ರಂಥವನ್ನೂ ನಾನು ಓದಿದ್ದು, ಈ ಗ್ರಂಥಾಲಯದ ಮೂಲಕ. ನಾಡಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ವಿಚಾರ ತುಸು ಭಾವನಾತ್ಮಕವೆನಿಸುವ ಸಂಬಂಧ ವನ್ನು ಕಟ್ಟಿಕೊಂಡ ನನಗೆ, ಪತ್ರಿಕೋದ್ಯಮದ ಕುರಿತ ಆಸಕ್ತಿ ಅಲ್ಲಿ ಉಂಟಾಯಿತು. ಇದರಿಂದಾಗಿ ನನ್ನ ಪರಿಸರದಿಂದ ಬಿಡುಗಡೆಯೂ ಅಭಿವ್ಯಕ್ತಿ ಸ್ವಾತಂತ್ರಯಕ್ಕೆ ಅಸ್ಪದವೂ ದೊರಕಿದಂತಾಗುವುದಿಲ್ಲವೇ ಎಂಬ ಆಸೆ ಮೂಡಿತು.

ಸಂಸ್ಕೃತದ ಶಿಕ್ಷಣ ಪಡೆದು ಮುಂದೆ ಕನ್ನಡದ ವಿದ್ವಾನ್ ಪರೀಕ್ಷೆಯನ್ನೂ ಮುಗಿಸಿದ್ದ ನನ್ನ ತಂದೆಯವರು, ಕನ್ನಡ ಅಧ್ಯಾಪಕರಾಗಿ ಉಡುಪಿಯ ಕಾನ್ವೆಂಟ್ ಶಾಲೆಯಲ್ಲಿ ಕೆಲಕಾಲ ದುಡಿದಿದ್ದರೂ, ಇಂಗ್ಲಿಷಿಗೆ ಅನುವಾದಿಸಬೇಕಾದ ತರಗತಿಗಳನ್ನು ಅವರಿಗೆ ನಿರ್ವಹಿಸಲು ಸಾಧ್ಯವಾಗುವುದಿಲ್ಲವೆಂದು ಕೆಲಸ ಕಳೆದುಕೊಂಡರು. ಅದು ನಾನು ಮೆಟ್ರಿಕ್ ಪರೀಕ್ಷೆ ಮುಗಿಸಿದ ಸಂದರ್ಭ. ಹೀಗಾಗಿ ದೊಡ್ಡ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾದ ಅಗತ್ಯ ಉಂಟಾದಾಗ, ನಾನು ಏನಾದರೂ ಕೆಲಸ ಹಿಡಿದು ಸಂಸಾರಕ್ಕೆ ಸಹಾಯ ಮಾಡಬೇಕಾ ಯಿತು. ಎರಡು ವರ್ಷ ಕಾಲ ನಿರುದ್ಯೋಗಿಯಾಗಿದ್ದು ಜಿಲ್ಲಾ ಬೋರ್ಡು ಕಚೇರಿಯಲ್ಲಿ ಅಧಿಕೃತವಾಗಿ ಒಂದು ಕಾರಕೂನಿಕೆಯ ಕೆಲಸ ದೊರಕಿಸಿಕೊಳ್ಳಲು ನನಗೆ ಸಾಧ್ಯವಾದದ್ದು ೧೯೪೧ರಲ್ಲಿ. ಆಮೇಲೆ ಮೂರು ವರ್ಷ ಕಾಲ ದಕ್ಷಿಣ ಕನ್ನಡದಲ್ಲೆ ದುಡಿಯುತ್ತಿದ್ದಾಗಲೂ ನಾನು ನನ್ನ ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರದ ಕುರಿತ ಅತೃಪ್ತಿಯನ್ನಾಗಲೀ ಸ್ವತಂತ್ರ ಅಭಿವ್ಯಕ್ತಿಯ ಸಾಧ್ಯತೆಗಳ ಕುರಿತ ಚಿಂತನೆಯನ್ನಾಗಲೀ, ದೂರವಿರಿಸಲು ಸಾಧ್ಯವಾಗಿರಲಿಲ್ಲ. ನನ್ನ ಆರಂಭದ ಕೆಲವು ಸಣ್ಣಕತೆಗಳು ಹೆಚ್ಚಿನವು ಹದಿಹರೆಯದ ಆದರ್ಶದ ಕನಸುಗಳಲ್ಲಿ ಮೂಡಿದಂಥವು. ಬೆಂಗಳೂರಿನ ‘ಪ್ರಜಾಮತ’ ಪತ್ರಿಕೆಯಲ್ಲಿ ಪ್ರಕಟವಾದವು. ನಿರುದ್ಯೋಗ ಕುರಿತ ನನ್ನ ಮೊದಲನೆಯ ಸಣ್ಣಕತೆ ಪ್ರಕಟವಾದುದು ನನ್ನ ಹದಿನೈದನೆಯ ವಯಸ್ಸಿನಲ್ಲಿ ಬೆಂಗಳೂರಿನ ‘ವಿಕಟ ವಿನೋದಿನಿ’ ಪತ್ರಿಕೆಯಲ್ಲಿ.

ಉಡುಪಿಯಲ್ಲಿ ಆಗ ಇದ್ದ ಶಿಕ್ಷಣದ ಸಾಧ್ಯತೆ ಮೆಟ್ರಿಕ್‌ವರೆಗೆ ಮಾತ್ರ; (ಮಣಿಪಾಲ ಪ್ರಮುಖ ಶಿಕ್ಷಣ ಕೇಂದ್ರವಾಗಿ ಬೆಳೆದುದು ಹಲವು ವರ್ಷಗಳಾದ ಮೇಲೆ.) ದಕ್ಷಿಣ ಕನ್ನಡದ, ಹೆಚ್ಚಿನ ವಿದ್ಯಾವಂತ ಯುವಕರ ಆಕರ್ಷಣೆಯ ಕೇಂದ್ರ ಆಗ ಮುಂಬಯಿ. ಹೆಚ್ಚಿನ ಆರ್ಥಿಕಾನುಕೂಲತೆಯ ಸಾಧ್ಯತೆ, ಪತ್ರಿಕೋದ್ಯಮದ ಕನಸು ಇವನ್ನೆಲ್ಲ ಹೊತ್ತು ಕೊಂಡು ನಾನು ೧೯೪೪ರಲ್ಲಿ ಮುಂಬಯಿ ಸೇರಿದೆ. ನಲವತ್ತರ ದಶಕ ಅವಿಭಜಿತ ಭಾರತದಲ್ಲಿ ಅತ್ಯಂತ ಮಹತ್ವದ ದಶಕ. ಎರಡನೆಯ ಮಹಾಯುದ್ಧ ಕೊನೆಗೊಳ್ಳುತ್ತಿದ್ದ ದಶಕ. ಸ್ವಾತಂತ್ರ್ಯ ಹೋರಾಟದ ‘ಕ್ವಿಟ್ ಇಂಡಿಯಾ’ ಚಳವಳದ ದಶಕ. ಬ್ರಿಟಿಶ್ ಸಾಮ್ರಾಜ್ಯಕ್ಕೆ ಕೊನೆಯ ಏಟೆಂದು ನಡೆದ ನಾವಿಕರ ದಂಗೆಯ ದಶಕ. ಭಾರತ ಸ್ವತಂತ್ರವಾದ ದಶಕ. ಗಾಂಧೀಜಿಯ ಹತ್ಯೆಯಾದ ದಶಕ. ದೇಶದ ಸ್ವಾತಂತ್ರ್ಯದ ಹೋರಾಟದ ಮುಂಚೂಣಿಯಲ್ಲಿದ್ದುದು ಮುಂಬಯಿ ಮಹಾನಗರ. ಎಳೆಯ ವಯಸ್ಸಿನಿಂದಲೂ ಗಾಂಧೀಜಿಯನ್ನು ಕಾಣಬೇಕೆಂಬ ಆಸೆಯಿರಿಸಿಕೊಂಡಿದ್ದ ನನಗೆ ಅವರನ್ನು ಮೊದಲು ಕಾಣಲು ಸಾಧ್ಯವಾದದ್ದು ಮುಂಬಯಿಯಲ್ಲಿ. ಕ್ಲಿಟ್ ಇಂಡಿಯಾ ಚಳವಳದ ಕಾಲ ಸೆರೆಯಲ್ಲಿದ್ದು ಬಿಡುಗಡೆಯಾಗಿ ಬಂದ ನೆಹರೂರವರು ಮೊದಲು ಮುಂಬಯಿಗೆ ಬಂದು ಪತ್ರಿಕಾ ಪ್ರತಿನಿಧಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಾನು ಅವರನ್ನು ಕಾಣುವಂತಾದುದು.

ಪತ್ರಿಕೋದ್ಯಮದ ಕನಸನ್ನು ಕಟ್ಟಿಕೊಂಡಿದ್ದರೂ ಮುಂಬಯಿಗೆ ಬಂದಾಗ ವರದಿಗಾರ ನಾಗಿ ಆಂಗ್ಲ ಪತ್ರಿಕೆಯಲ್ಲಿ ಸೇರಿಕೊಳ್ಳಲು ಸಹಾಯ ಮಾಡುವೆನೆಂದು ಹಿರಿಯ ಪತ್ರಕರ್ತ ರೊಬ್ಬರು ಮುಂದೆ ಬಂದಿದ್ದರು. ಆರ್ಥಿಕ ಕಾರಣಗಳಿಗಾಗಿ ನಾನು ಹಿಂಜರಿದು ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಶೀಘ್ರಶಿಲಿಕಾರನಾಗಿ ಸಣ್ಣ ಉದ್ಯೋಗವನ್ನು ಆಯ್ದು ಕೊಂಡೆ. ಕನ್ನಡದ ನೆಲವಲ್ಲದ ಮುಂಬಯಿಯಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡಲು ಸಾಧ್ಯವಾಗಬಹುದೆಂದು ಆಗ ಊಹಿಸಲೂ ಸಾಧ್ಯವಿರಲಿಲ್ಲ.

ನನ್ನ ಹದಿಹರೆಯದ ದಿನಗಳಿಂದಲೂ ನನ್ನ ವೈಚಾರಿಕ ಕುತೂಹಲವನ್ನು ಯಾರೊಡ ನಾದರೂ ಹಂಚಿಕೊಳ್ಳಬೇಕೆಂದು ನಾನು ಮೊರೆ ಹೋದ ಒಂದು ವಿಶಿಷ್ಟವೆನಿಸಬಹುದಾದ ಪ್ರಯೋಗ ನನ್ನ ದಿನಚರಿಯೊಡನೆ ಮಾತುಕತೆ. ನನ್ನ ದಿನಚರಿಯಲ್ಲಿ ನಾನು ಬರೆಯುತ್ತಿ ದ್ದುದು ದಿನದ ಚಟುವಟಿಕೆಗಳ ವರದಿಯಲ್ಲ. ಒಬ್ಬ ಆತ್ಮೀಯ ಸಂಗಾತಿಯೊಡನೆ ಸಂಭಾಷಣಾ ರೂಪದ ಚರ್ಚೆ. ಚರ್ಚೆ ಕೂಡ ನನಗಷ್ಟೆ ಸಂಬಂಧಿಸಿದ ವಿಚಾರಗಳ ಕುರಿತು ಮಾತ್ರವಲ್ಲ, ಸತ್ಯ ಸೌಂದರ್ಯಗಳ ಕುರಿತ ಪರಿಕಲ್ಪನೆಗಳ ಹರವಿನಲ್ಲಿ ಬರುವ ಹಲವಾರು ವಿಚಾರಗಳು, ಸಾಮಾಜಿಕ ವಾಸ್ತವವೆನಿಸುವ ಸಂಗತಿಗಳ ಕುರಿತ ಜಿಜ್ಞಾಸೆ, ಬದುಕಿನ ಗತಿಗೆ ಹೊಂದಿಕೊಳ್ಳುವ ಆದರ್ಶದ ಪರಿಕಲ್ಪನೆಗಳು, ಸೌಂದರ್ಯ ಪ್ರಜ್ಞೆ. ಹೀಗೆ ಸಂಭಾಷಣಾ ರೂಪದಲ್ಲಿ ಪ್ರಶ್ನೆಗಳನ್ನು ಕಲ್ಪಿಸಿಕೊಂಡು, ಉತ್ತರಗಳನ್ನು ಪ್ರಯೋಗಕ್ಕೊಳಪಡಿಸಿದ್ದೆ. ಈ ರೀತಿಯ ದಿನಚರಿಯ ಸಖ್ಯ ಒಂದೆರಡು ವರ್ಷಗಳದ್ದಲ್ಲ. ನನ್ನ ತಿಳಿವಳಿಕೆ, ಅನುಭವ ಪ್ರಪಂಚ ವಿಸ್ತಾರಗೊಳ್ಳುತ್ತ ಬಂದ ಹಾಗೆ ಈ ಹವ್ಯಾಸವನ್ನು ಕೆಲವು ದಶಕಗಳ ಕಾಲ ಮುಂದುವರಿಸಿದೆ. ಮುಂದೆ ಒಮ್ಮೆ ಅವಸರದಲ್ಲಿ ಒಂದು ಸಣ್ಣ ಕತೆಗಾಗಿ ಬೇಡಿಕೆ ಬಂದಾಗ ನನ್ನ ದಿನಚರಿಯ ಒಂದು ಭಾಗವನ್ನು ಎತ್ತಿಕೊಂಡು ಕೊನೆಗೆ ಒಂದು ಪ್ಯಾರ ಸೇರಿಸಿ ಕತೆಯಾಗಿ ಮಾರ್ಪಡಿಸಿ ಕಳಿಸಿದ್ದೂ ಇದೆ.

ಮುಂಬಯಿಗೆ ಬಂದ ಆರಂಭದ ವರ್ಷಗಳಲ್ಲಿ ನಾನು ಇರಬೇಕಾಗಿ ಬಂದ ಹೋಟೆಲಿನಲ್ಲಿ ಪತ್ರಿಕೋದ್ಯಮಕ್ಕೆ ಸೇರಿಕೊಳ್ಳಬೇಕು ಎಂಬ ನನ್ನ ಆಸೆಗೆ ಪುಷ್ಟಿಕೊಡಲು ಹಲವಾರು ಪತ್ರಕರ್ತರ ಸಖ್ಯ ದೊರಕಿತು. ಒಬ್ಬರಂತೂ ನನ್ನ ಹುಟ್ಟೂರಿನವರೇ, ನನ್ನ ಶಾಲೆಯಲ್ಲಿ ಕಲಿತವರು. ಮೊದಲು ಒಂದು ಸಣ್ಣ ಪತ್ರಿಕೆಯಲ್ಲಿದ್ದು ಮುಂದೆ ಪಿಟಿಐ ಸುದ್ದಿ ಸಂಸ್ಥೆಗೆ ಸೇರಿಕೊಂಡು ಕರಾಚಿಯಲ್ಲೂ ಇದ್ದು, ಕೆಲವು ವರ್ಷಗಳಾದ ಮೇಲೆ ಚೀನಾ ಯುದ್ಧದ ಸಂದರ್ಭದಲ್ಲಿ ನಿಘಾ ಗಡಿಯಲ್ಲಿ ಒಂದು ಬಸ್ ಅಪಘಾತದಲ್ಲಿ ಮಡಿದವರು. ಶಿವರಾಮ ಕಾರಂತರು ಮುಂಬಯಿಗೆ ಬರುತ್ತಿದ್ದಾಗಲೆಲ್ಲ ನಾವಿರುತ್ತಿದ್ದ ಹೋಟೆಲಿನಲ್ಲಿ ಇವರೇ ಅತಿಥೇಯರಾಗಿರುತ್ತಿದುದರಿಂದ, ಅಂಥ ಅವಕಾಶಗಳಲ್ಲಿ ಮುಂಬಯಿಯ ಕನ್ನಡ ಸಾಹಿತ್ಯಾ ಸಕ್ತರೂ ಸೇರುತ್ತಿದ್ದುದರಿಂದ, ನನ್ನ ಸೃಜನಶೀಲ ಪ್ರಜ್ಞೆಯನ್ನು ಪೋಷಿಸಲು ಈ ಸಂಭವಗಳೂ ಸಹಕರಿಸುತ್ತಿದ್ದವು. ಮುಂಬಯಿಯ ಕನ್ನಡೇತರ ಪರಿಸರದಲ್ಲಿ ಕನ್ನಡದ ನಂಟನ್ನು ಉಳಿಸಿ ಕೊಳ್ಳಲು ಇಂಥ ಸಂದರ್ಭಗಳೂ ಕಾರಣವೆಂದು ಹೇಳಲಷ್ಟೆ ಈ ಉದಾಹರಣೆ.

ಮುಂಬಯಿ ಪರಿಸರದಲ್ಲಿ ನನ್ನ ದೀರ್ಘಕಾಲದ ಪತ್ರಿಕೋದ್ಯಮದ ಕನಸನ್ನು ನನಸಾಗಿಸಿದ ಅದೂ ಕನ್ನಡ ಪತ್ರಿಕೋದ್ಯಮ ಆಶ್ಚರ್ಯಕರ ಸನ್ನಿವೇಶ ಒದಗಿ ಬಂದದ್ದು ೧೯೪೭ರಲ್ಲಿ. ಸ್ವಾತಂತ್ರ್ಯ ಹೋರಾಟಕ್ಕೆ ಕಾವು ಏರಿದ ಕಾಲವದು. ೧೯೪೭ ಮೇ ತಿಂಗಳಲ್ಲಿ ಮುಂಬಯಿಯಿಂದ ‘ನುಡಿ’ ಎಂಬ ಕನ್ನಡ ರಾಜಕೀಯ ಸಾಪ್ತಾಹಿಕ ಪ್ರಕಟವಾಗುವುದೆಂಬ ಸುದ್ದಿ ತಿಳಿದಾಗ ನನಗೆ ತುಂಬ ಆಶ್ಚರ್ಯವಾಯಿತು. ಈ ಪತ್ರಿಕೆ ಕೆಲವು ಉತ್ಸಾಹೀ ತರುಣರ ಸಾಹಸವೆಂದು ನನಗೆ ತಿಳಿದದ್ದು ಪತ್ರಿಕೆ ಪ್ರಕಟವಾದ ಮೇಲೆ. ಈ ಪತ್ರಿಕೆಯ ಗುಂಪಿನಲ್ಲಿದ್ದವರು ರಾತ್ರಿ ಶಾಲೆಗಳಲ್ಲಿ ಕಲಿತ ಕೆಲವು ವಿದ್ಯಾರ್ಥಿಗಳು, ಅಧ್ಯಾಪಕರು, ಒಬ್ಬಿಬ್ಬರು ವೃತ್ತಿನಿರತರು, ಒಬ್ಬರು ಮಾತ್ರ ಇಂದಿನ ಸುಪ್ರಸಿದ್ಧ ಪತ್ರಕರ್ತ ಎಂ.ವಿ. ಕಾಮತ್ ಅವರು. ನನಗೆ ಪತ್ರಿಕೆಯ ಸಂಪರ್ಕವಿರಲಿಲ್ಲ. ಕಾಮತ್ ನನ್ನ ಹುಟ್ಟೂರಿನವರೇ ಆಗಿದ್ದರೂ ಮುಂಬಯಿಗೆ ಬಂದ ಮೇಲೆ ಅವರ ಸಂಪರ್ಕವಿರಲಿಲ್ಲ. ಅದೇ ವರ್ಷದ ಜೂನ್ ತಿಂಗಳಲ್ಲಿ ನಾಡನ್ನು ವಿಭಜಿಸುವ ಮೌಂಟ್ ಬ್ಯಾಟನ್ ಯೋಜನೆ ಪ್ರಕಟವಾದಾಗ, ಅದನ್ನು ವಿರೋಧಿಸಿ ನನ್ನ ಮೊದಲ ರಾಜಕೀಯ ಲೇಖನವನ್ನು ಬರೆದೆ. ಅದನ್ನು ಈ ಹೊಸ ಪತ್ರಿಕೆಗೆ ಪ್ರಕಟಣೆಗೆಂದು ಕಳುಹಿಸಿಕೊಟ್ಟೆ. ಅದೇ ತಿಂಗಳಲ್ಲಿ ಈ ಲೇಖನ ‘ನುಡಿ’ ಯಲ್ಲಿ ಪ್ರಕಟವಾದಾಗ ಆಗ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರಕಾರ, ಈ ಲೇಖನವನ್ನು ಗಮನಿಸಿ ಒಬ್ಬ ಪೊಲೀಸು ಅಧಿಕಾರಿಯನ್ನು ಪತ್ರಿಕೆಯ ಕಚೇರಿಗೆ ಕಳುಹಿಸಿ, ಹೀಗೆಲ್ಲ ಬರೆಯತೊಡಗಿದರೆ ಪತ್ರಿಕೆ ತೊಂದರೆಯನ್ನು ಅನುಭವಿಸಬೇಕಾಗಬಹುದು ಎಂಬ ಎಚ್ಚರಿಕೆ ಯನ್ನು ಕೊಟ್ಟಿತು. ಹೊಸ ಪತ್ರಿಕೆಯವರು ತಮ್ಮ ಲೇಖನಗಳು ಸರಕಾರದ ಗಮನಕ್ಕೆ ಬರುತ್ತಿವೆ ಎಂಬ ಸಂತೋಷದಿಂದ ನನ್ನನ್ನು ಸಂಪರ್ಕಿಸಿ ಹೆಚ್ಚು ಹೆಚ್ಚು ರಾಜಕೀಯ ಟೀಕೆ ಟಿಪ್ಪಣಿಗಳನ್ನು ಬರೆಯಲು ಕೇಳಿಕೊಂಡರು. ಎಂ.ವಿ. ಕಾಮತ್ ಅವರು ಮುಂದೆ ಬರೆದ ತಮ್ಮ ಗ್ರಂಥದಲ್ಲಿ (Behind the b – line) ಈ ವಿಚಾರ ಬರೆದಿದ್ದಾರೆ. ಕೆಲವು ತಿಂಗಳ ಕಾಲ ನಾನು ಸಂತೋಷದಿಂದಲೇ ನನ್ನ ರಾಜಕೀಯ ಚಿಂತನೆಗೆ ಆಕಾರ ಕೊಡಲಾರಂಭಿಸಿದ್ದೆ. ಪತ್ರಿಕೆಯ ಸಂಪರ್ಕ ಹೆಚ್ಚು ಬೆಳೆದಂತೆ ಅದರ ಸಂಪಾದಕರಾಗಿದ್ದವರು ಏನೋ ಕಾರಣದಿಂದ ಹೊಣೆಗಾರಿಕೆಯನ್ನು ಬಿಟ್ಟು ಮೇಲೆ, ನಾನು ಪತ್ರಿಕೆಯ ಸಂಪಾದಕನಾದೆ. ಇದು ಹೆಚ್ಚಿನ ಜವಾಬ್ದಾರಿಯನ್ನು ವಹಿಸುವಂತಾಗಲು, ನನ್ನ ವೈಚಾರಿಕ ಚಿಂತನೆ ಹದಗೊಳ್ಳಲು, ಸೃಜನಶೀಲ ಪ್ರವೃತ್ತಿ ಕಸುವು ಪಡೆಯಲು ತುಂಬ ಸಹಕರಿಸಿದೆಯೆಂದು ಯಾವ ಸಂಕೋಚವನ್ನು ಇರಿಸಿ ಕೊಳ್ಳದೆ ಹೇಳುತ್ತೇನೆ. ಪ್ರತಿವಾರ ತಪ್ಪದೆ ಪ್ರಕಟವಾಗುತ್ತಿದ್ದ ಸಮಾಜವಾದದ ಆದರ್ಶವಿದ್ದ ಈ ರಾಜಕೀಯ ಸಾಪ್ತಾಹಿಕ, ಮುಂಬಯಿಯಲ್ಲೂ ಕನಾಟಕದಲ್ಲೂ ಮೂರು ವರ್ಷ ಕಾಲ ಜನಪ್ರಿಯ ಸಾಪ್ತಾಹಿಕವಾಗಿತ್ತು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಪತ್ರಿಕೆ ಇದಾಗಿತ್ತು. ಶಂಬಾ ಜೋಶಿಯಂಥ ಧೀಮಂತ ಹಿರಿಯರು ತುಂಬ ಮೆಚ್ಚಿಕೊಂಡಿದ್ದ ಪತ್ರಿಕೆ. ಕರ್ನಾಟಕ ದಲ್ಲೂ ವಿಚಾರವಂತರ ಗಮನ ಸೆಳೆದಿತ್ತು. ನಾನು ಹೊಟ್ಟೆಯ ಪಾಡಿಗಾಗಿ ಮಾಡುತ್ತಿದ್ದ ಕೆಲಸದ ಜತೆಗೆ, ಈ ಪತ್ರಿಕೆಗಾಗಿಯೂ ದುಡಿಯುತ್ತಿದ್ದ ಕಾಲದಲ್ಲಿ ಅಧ್ಯಯನ, ಚಿಂತನೆ, ಬರೆವಣಿಗೆ ಜತೆ ಜತೆಗೇ ಸಾಗಬೇಕಾಗಿದ್ದ ಸನ್ನಿವೇಶದಲ್ಲಿ, ಸಂದರ್ಭ ಪ್ರಜ್ಞೆ, ಹದವರಿತ ಸಮಯ ಮಿತಿಯ ಬರೆವಣಿಗೆ, ಇವನ್ನೆಲ್ಲ ಸಾಧಿಸಬೇಕಾದ ತರಬೇತಿ ನನಗೆ ದೊರಕಿದ್ದು ಈ ಪತ್ರಿಕೆಯ ಮೂಲಕ. ಈ ಸಂದರ್ಭದಲ್ಲಿ ದೇಶ ವಿದೇಶಗಳ ಹಲವಾರು ಅಂಕಣಗಳನ್ನು ಆರಂಭಿಸಿ ಮುಂದುವರಿಸಿಕೊಂಡು ಬರಬೇಕಾದ ಸಂದರ್ಭವೂ ಸೃಜನಶೀಲ ಚಿಂತನೆಗೂ ಅವಕಾಶ ಮಾಡಿಕೊಟ್ಟಿತು. ಈ ರೀತಿಯ ಬಿಡುವೇ ದೊರಕದ ಸಂದರ್ಭದಲ್ಲೂ ಕತೆಗಳನ್ನು ಬರೆಯುವ ಹವ್ಯಾಸವನ್ನು ನಾನು ಪೂರ್ತಿ ಬಿಟ್ಟಿರಲಿಲ್ಲ. ಒಮ್ಮೆ ಮುಂಬಯಿಯ ಕೋಮು ವಾರು ಗಲಭೆಯಲ್ಲಿ ತಿವಿತದಿಂದ ಗಾಯಗೊಂಡ ವ್ಯಕ್ತಿಯ ತೋಳಿನಿಂದ ಇಳಿಯುತ್ತಿದ್ದ ರಕ್ತವನ್ನು ಕಂಡ ನೋವಿನಿಂದ ಬರೆದ ಒಂದು ಸಣ್ಣ ಕತೆ, ಬೆಂಗಳೂರಿನ ಛಾಯ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ತಿಂಗಳ ಕತೆಗಳನ್ನು ವಿಮರ್ಶಿಸುವ ಸಂಪ್ರದಾಯವಿದ್ದುದರಿಂದ ಈ ಕತೆ ವಿಶೇಷ ಪ್ರಶಂಸೆಗೂ ಒಳಗಾಗಿತ್ತು. ಈ ಅವಧಿಯಲ್ಲಿ ನನಗೆ ಹೆಚ್ಚು ಬರೆಯಲಾಗದಿದ್ದರೂ ನಾನು ಬರೆದ ಕೆಲವು ಕನ್ನಡದ ಸೃಜನಶೀಲ ಪ್ರವೃತ್ತಿ ಯನ್ನು ಪೋಷಿಸಿಕೊಂಡು ಬರಲು ಕೊಟ್ಟ ಪ್ರೋತ್ಸಾಹವೆಂದೆ ತಿಳಿದಿದ್ದೇನೆ.

ಮುಂಬಯಿ ಮಹಾನಗರದ ಜನಜೀವನ ಒಬ್ಬೊಬ್ಬ ಸೃಜನಶೀಲ ಲೇಖಕನಿಗಾಗಲೀ, ಕಲಾವಿದನಿಗಾಗಲೀ ಸೃಜನಶೀಲತೆಗೆ ಪ್ರೇರಕಶಕ್ತಿಯಷ್ಟೇ ಅಲ್ಲ, ಅದರ ಜೀವಂತಿಕೆಯನ್ನು ಕಾಪಾಡಿಕೊಂಡು ಬರುವ ಜೀವಧಾತುವೆಂದೇ ನಾನು ತಿಳಿದಿದ್ದೇನೆ. ಇದಕ್ಕೆ ಮುಖ್ಯ ಕಾರಣ ಮುಂಬಯಿಯದೇ ಎನಿಸುವ ಅನುಭವ ಪ್ರಪಂಚ. ಇಲ್ಲಿ ಯಾಂತ್ರಿಕತೆ ರೂಢಿ. ಆದರೆ ಮುಂಬಯಿಯ ಬದುಕಿಗೆ ಸ್ಪಂದಿಸುವ ಜೀವನ ಕ್ರಮದಲ್ಲಿ ಅತ್ಯಂತ ಕುತೂಹಲಕರ ವಿಸ್ಮಯ ಗಳನ್ನು ಗುರಿತಿಸಲು ಸಾಧ್ಯ. ಗ್ರಾಮೀಣ ಸಂಸ್ಕಾರಗಳು ಇಲ್ಲಿ ಪರಿವರ್ತನೆಗೊಳ್ಳುತ್ತ ಸಾಂಪ್ರದಾಯಿಕವೆನಿಸುವ ವಿಷಮತೆಗಳು ಅಳೆಯುತ್ತ, ಇಲ್ಲವೆ ಕಾವು ಕಳೆದುಕೊಳ್ಳುತ್ತ, ವರ್ಗ ವೈಷಮ್ಯ ಅಧ್ಯಯನ ಯೋಗ್ಯ ಹೊಸ ತಿರುವುಗಳನ್ನು ಪಡೆಯುತ್ತ ಎಲ್ಲ ಸಂಬಂಧಗಳು ಬದಲಾಗುತ್ತಿರುವ ರೀತಿ ಜೀವನದಲ್ಲಿ ಮಾನವೀಯವೆನಿಸುವ ನೆಲೆಗಳನ್ನೂ ಜೀವನ ಪ್ರೀತಿಯನ್ನೂ ಅರಸುವ ಲೇಖಕನಿಗೆ ತುಂಬ ಖುಷಿ ಕೊಡುವಂಥದು. ಯಂತ್ರವತ್ತಾದ ರೂಢಿಯಲ್ಲೂ ವ್ಯಕ್ತಿ, ಕುಟುಂಬ ಹಾಗೂ ಸಮಾಜ ವಿವಿಧ ಪಾತಳಿಗಳಲ್ಲಿ ತಮ್ಮ ಸಂಬಂಧ ಗಳನ್ನು ರೂಪಿಸಿಕೊಳ್ಳುವ ಬಗೆ, ಹೊಸ ಹೊಸ ಸಂಸ್ಕಾರಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಪ್ರಕಟವಾಗುವ ಮಾನವೀಯ ದೌರ್ಬಲ್ಯಗಳು, ಸಂಸ್ಕಾರಗಳು ಇವೆಲ್ಲ ನಿತ್ಯ ಚಿಂತನೆಗೆ ಗ್ರಾಸ ಒದಗಿಸುವಂಥವು. ಸತ್ಯ ಹಾಗೂ ಸೌಂದರ್ಯಗಳನ್ನು ಅರಸುತ್ತಲೇ ಇರಬೇಕಾದ ಒಬ್ಬ ಸೃಜನಶೀಲ ಲೇಖಕನಿಗೆ ಇನ್ನೇನು ಬೇಕು?

ಅನುಭವ ಪ್ರತ್ಯಕ್ಷದ್ದಾಗಲಿ, ಕೇಳಿ ತಿಳಿದುದಾಗಿರಲಿ, ಹೇಗೆ ಸೃಜನಶೀಲ ಚಿಂತನೆಯನ್ನು ಪ್ರಚೋದಿಸುತ್ತದೆ ಎನ್ನುವುದಕ್ಕೆ ನಾನು ಮೇಲೆ ಸೂಚಿಸಿದ ಕತೆಯ ಜೊತೆಗೆ ಇನ್ನೊಂದು ಉದಾಹರಣೆಯನ್ನು ತಿಳಿಯಬಯಸುತ್ತೇನೆ. ನನ್ನ ಹತ್ತಿರದ ಬಂಧುವೊಬ್ಬರನ್ನು ನಾನು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದು, ಕೆಲವು ದಿನ ಅವರನ್ನು ನೋಡಿಕೊಂಡು ಇರಬೇಕಾದಾಗ, ಆ ಪರಿಸರದಲ್ಲಿ ನಾನು ನೋಡುತ್ತಿದ್ದ ಡಾಕ್ಟರ್, ನರ್ಸುಗಳು ಇತರ ರೋಗಿಗಳು ಇವರೆಲ್ಲರ ವರ್ತನೆಯನ್ನು ಗಮನಿಸುತ್ತ ಬರೆದ ಕತೆ ‘ಸಂಪಿಗೆಯ ಹೂ’. ಇಲ್ಲಿ ನನ್ನ ಪ್ರತ್ಯಕ್ಷ ಅನುಭವ ಮುಖ್ಯವಾಗಿರಲಿಲ್ಲ. ದುಡಿಯುತ್ತಿದ್ದಾಕೆ ಒಬ್ಬ ವಿಧವೆ ಯುವತಿ, ತಾನು ಪೋಷಿಸಿ ಕೊಂಡು ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದ ಗಂಡನ ತಮ್ಮ ಆತ ವಿದ್ಯಾಭ್ಯಾಸವನ್ನು ಮೇಲ್ಮಟ್ಟ ದಲ್ಲಿ ಮುಗಿಸಿರುವ ಸಂತೋಷದಲ್ಲಿ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಬೆಳೆಸುತ್ತೇನೆ ಎಂದುದು ಆಕೆ ಆಸ್ಪತ್ರೆಯಲ್ಲಿ ಮಲಗಿದ್ದಾಗ, ಆಗಲೇ ಆಕೆ ಕಂಡುಕೊಂಡ ತನ್ನ ಸುಪ್ತ ಚೇತನದಲ್ಲಿ ಅಡಗಿದ್ದ ಸತ್ಯ, ತಾನು ತನ್ನ ಮೈದುನನಲ್ಲಿ ಅನುರಕ್ತಳಾಗಿದ್ದೇನೆ ಎಂದು. ಈ ಕತೆ ೧೯೫೨ರಲ್ಲಿ ಬೆಂಗಳೂರಿನಲ್ಲಿ ನಡೆದ ಕತೆಗಾರ ಕಾದಂಬರಿಕಾರರ ಸಮ್ಮೇಳನದ ಅಂಗವಾಗಿ ಜರುಗಿದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ಒಂದು ಸೃಜನಶೀಲ ಮನಸ್ಸಿನಲ್ಲಿ ಅನುಭವವು ಪ್ರತ್ಯಕ್ಷದ್ದಾಗಿರಲಿ, ಪರೋಕ್ಷವಾಗಿ ಬಂದಿರಲಿ, ವಿಚಾರದ ಹುಟ್ಟಿಗೆ ಕಾರಣವಾಗುತ್ತದೆ. ವಿವಿಧ ರೀತಿಯ ಭಾವನೆಗಳ ಉದ್ದೀ ಪನಕ್ಕೆ ಕಾರಣವಾಗುತ್ತದೆ. ಬುದ್ದಿ ಇಂಥ ಅನುಭವವನ್ನು ವಿಶ್ಲೇಷಿಸುತ್ತ ಅನುಭವದ ವೈಯಕ್ತಿಕ ಹಾಗೂ ಸಾಮಾಜಿಕ ಆಯಾಮಗಳ ಚಿಂತನೆ ನಡೆಸುತ್ತದೆ. ಮುಂದೆ ಸೃಜನಶೀಲ ಪ್ರತಿಭೆ ಈ ಅನುಭವಗಳನ್ನು ಸಾಹಿತ್ಯಕವೆನಿಸುವ ಪ್ರತಿಮೆಗಳ ಸೃಷ್ಟಿಗೆ, ಸೌಂದರ್ಯದ ಪರಿಕಲ್ಪನೆಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ನಿರೂಪಿಸಲು ಸಹಕರಿಸುತ್ತದೆ.

ಪತ್ರಿಕೋದ್ಯಮ ನಡುವೆ ಹಾಗೂ ಮುಂದೆ ನಾನು ಸುಮಾರು ನೂರು ಕತೆಗಳನ್ನು ಬರೆದಿರಬಹುದು. ಅವುಗಳಲ್ಲಿ ಕೆಲವು ಮುಂಬಯಿ ಆಕಾಶವಾಣಿಯವರು ತಮ್ಮ ಗ್ರಾಮೀಣ ಕಾರ್ಯಕ್ರಮಗಳಿಗಾಗಿ ಕೇಳಿ ಬರೆಸಿದಂಥವು. ನನ್ನ ಪತ್ರಿಕೋದ್ಯಮ ಕಾಲದಲ್ಲಿ ರಾಜಕೀಯ ಚಿಂತನೆಯ ಫಲವಾಗಿ ಬರೆದ, ಆರಂಭದ ರಾಷ್ಟ್ರ ವಿಭಜನೆಯನ್ನು ವಿರೋಧಿಸಿ ಬರೆದ ಲೇಖನ ಹಾಗೂ ಅಲ್ಪಸಂಖ್ಯಾತರ ಭವಿಷ್ಯದ ಕರಿತು ಇನ್ನೊಂದು ಲೇಖನ ಮುಂದೆ ಕಾಲ ಕಾಲಕ್ಕೆ ನನ್ನ ರಾಜಕೀಯ ಚಿಂತನೆಯ ಫಲಸ್ವರೂಪ ಹಲವಾರು ಲೇಖನಗಳು, ಎರಡು ಸಂಗ್ರಹಗಳಲ್ಲಿ ಪ್ರಕಟವಾಗಿವೆ.

‘ನುಡಿ’ ಪತ್ರಿಕೆಯ ಹೊಣೆಗಾರಿಕೆಯ ಕಾಲದಲ್ಲಿ ನಾನು ಕಾದಂಬರಿ ಲೇಖಕನಾಗಿ ಕಾಣಿಸಿಕೊಂಡದ್ದು ನನ್ನ ಪತ್ರಿಕೋದ್ಯಮದಂತೆಯೇ ಒಂದು ಆಕಸ್ಮಿಕ. ಪತ್ರಿಕೆ ನಡೆಯುತ್ತಿದ್ದ ಮೂರನೆಯ ವರ್ಷದಲ್ಲಿ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒಂದು ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸುವ ನಿರ್ಧಾರ ಮಾಡಲಾಯಿತು. ಉತ್ಸಾಹವೇ ಹೆಚ್ಚಿನ ಬಂಡವಾಳ ವಾಗಿದ್ದ ಪತ್ರಿಕೆ, ಸಂಭಾವನೆ ಕೊಟ್ಟು ಕಾದಂಬರಿ ಬರೆಸುವಂತಿರಲಿಲ್ಲ. ಹೀಗಾಗಿ ಈ ಹೊಣೇಗಾರಿಕೆಯೂ ನನಗೇ ಬಂದಾಗ ನಾನು ಬರೆದ ಮೊದಲನೆಯ ಕಾದಂಬರಿ ‘ಅನುರಕ್ತೆ’ ಪತ್ರಿಕೆಯಲ್ಲಿ ‘ಕನವರಿಸದ ಕುಂಕುಮ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು. ಧಾರಾವಾಹಿ ಪ್ರಕಟವಾಗುತ್ತಿದ್ದಂತೆ ತುಂಬ ಜನಪ್ರಿಯವಾಯಿತು. ಪತ್ರಿಕೆ ಬೇರೆ ಕಾರಣಗಳಿಂದಾಗಿ ನಿಂತಿತು. ಅದರಿಂದ ಕಾದಂಬರಿ ನಿಲ್ಲುವಂತಾಯಿತಲ್ಲಾ ಎಂದು ನೊಂದವರು ಹಲವಾರು ಓದುಗರು. ನಾನು ಕಾದಂಬರಿಯನ್ನು ಮುಂದುವರಿಸಿ ಮುಗಿಸಿದ್ದು ಪತ್ರಿಕೆ ನಿಂತು ಒಂದು ವರ್ಷವಾದ ಮೇಲೆ ಮುಂದೆ ಕಾದಂಬರಿ ಪ್ರಕಟವಾದಾಗ ಓದುಗರಿಂದಲೂ, ವಿಮರ್ಶಕರಿಂದಲೂ ತುಂಬ ಉತ್ಸಾಹದ ಪ್ರತಿಕ್ರಿಯೆ ದೊರಕಿದ ಕಾರಣ, ನಾನು ಕಾದಂಬರಿಯ ಮಾಧ್ಯಮವನ್ನು ನನ್ನ ಸಾಹಿತ್ಯಕ ಅಭಿವ್ಯಕ್ತಿಗೆ ಹೆಚ್ಚು ಹೆಚ್ಚು ನೆಚ್ಚಿಕೊಳ್ಳಲು ಸಾಧ್ಯವಾಯಿತು. ಇದೇ ಕಾದಂಬರಿ ೧೯೫೩ರ ಮುಂಬಯಿ ಸರಕಾರದ ಒಂದು ಬಹುಮಾನ ಯೋಜನೆಯಂತೆ ಮೊದಲ ಬಹುಮಾನಕ್ಕೆ ಆಯ್ಕೆಯಾದುದೂ ನಾನು ಕಾದಂಬರಿ ಮಾಧ್ಯಮಕ್ಕೆ ಹೆಚ್ಚು ಅಂಟಿಕೊಳ್ಳಲು ಕಾರಣ. ‘ಅನುರಕ್ತೆ’ ಕಾದಂಬರಿಯನ್ನು ಮುಗಿಸಿದ ಬೆನ್ನಲ್ಲೆ ನಾನು ಬರೆದ ಎರಡನೆಯ ಕಾದಂಬರಿ ‘ಹೇಮಂತಗಾನ’ ಇದನ್ನು ನಾನು ಬರೆದದ್ದು ‘ನುಡಿ’ ಪತ್ರಿಕೆಯನ್ನು ನಡೆಸುತ್ತಿದ್ದಾಗ ದೊರಕಿದ ಅನುಭವದಿಂದ.

ನಗರ ಕೇಂದ್ರಿತ ಮಧ್ಯಮ ವರ್ಗದ ಬದುಕೇ ನನ್ನ ಹೆಚ್ಚಿನ ಸಣ್ಣ ಕತೆಗಳಿಗೂ ಕಾದಂಬರಿಗಳಿಗೂ ವಸ್ತುವನ್ನು ದೊರಕಿಸಿಕೊಟ್ಟಿದೆ. ಏಕಾಂತ ಪ್ರವೃತ್ತಿಯನ್ನು ಬೆಳೆಸಿಕೊಂಡು, ತೀರ ಸಂಕೋಚ ಸ್ವಭಾವದಿಂದ ಎಳೆಯ ವಯಸ್ಸಿನಲ್ಲಿ ಮುಂಬಯಿ ಸೇರಿದ ನನಗೆ ಮೊದಲು ಮುಂಬಯಿಯಲ್ಲಿ ದೊರಕಿದ ಒಂದು ರೀತಿಯ ಬಿಡುಗಡೆಯ ಸುಖ, ಮುಂದೆ ಈ ಮಹಾನಗರದಲ್ಲಿ ಸಮ್ಮಿಶ್ರ ಜನ ಜೀವನದ ಸಂಸ್ಕಾರಗಳ ಹೊಸತನವನ್ನು ಗುರುತಿಸುತ್ತ ವಿಸ್ತರಿಸಿಕೊಂಡ ಅನುಭವ ಪ್ರಪಂಚ, ಬಾಲ್ಯದಲ್ಲಿ ಕನವರಿಸುತ್ತಿದ್ದರೂ ಇದು ದೂರದ ನಕ್ಷತ್ರವೇನೋ ಎಂದು ಊಹಿಸಿದ್ದ ಪತ್ರಿಕೋದ್ಯಮದ ನಂಟು ಆಕಸ್ಮಿಕವಾಗಿ ದೊರಕಿದ ಬಗೆ, ಇವೆಲ್ಲ ನನ್ನ ಸಾಹಿತ್ಯಕ ಸೃಜನಶೀಲತೆಗೆ ನೀರೆರದಂಥವು. ನನ್ನ ಬರವಣಿಗೆ ಬೆಳೆದು ಬಂದ ರೀತಿಗೆ ಮುಂಬಯಿ ಮಹಾನಗರವನ್ನು ನಾನು ಕಾಣುತ್ತ ಬಂದ ಬಗೆ, ಹಾಗೂ ಇಲ್ಲಿ ದೊರಕಿಸಿಕೊಂಡ ಅನುಭವಗಳೇ ಮುಖ್ಯ ಕಾರಣ. ಮುಂಬಯಿಗೆ ಬಂದ ಹೊಸತಿನಲ್ಲಿ ಈ ಮಹಾನಗರದಲ್ಲಿ ನಾನು ಕಂಡ ಬದುಕಿನ ಹಲವು ಮಗ್ಗಲುಗಳು, ಮೊದಮೊದಲು ಸರಿಯಾಗಿ ಅರ್ಥವಾಗದಿದ್ದರೂ ಸೆಳೆಯುತ್ತಿದ್ದ ಜೀವಂತಿಕೆ, ಬೇರೆ ಬೇರೆ ರೀತಿಯ ಜೀವನ ಶೈಲಿಗಳು ಹೊಂದಿಕೊಳ್ಳುತ್ತಿದ್ದ, ಹೊಂದಿಕೊಳ್ಳಲು ಚಡಪಡಿಸುತ್ತಿದ್ದ, ಹೊಸ ಹೊಸ ಆವಿಷ್ಕಾರಗಳನ್ನು ತಳೆಯುತ್ತಿದ್ದ ರೀತಿ, ಸಮ್ಮಿಶ್ರ ಜನ ಜೀವನದಲ್ಲಿ ಸಂಬಂಧಗಳು ಬೆಸೆಯುವ, ಬಿರುಕೊಡೆಯುವ ರೀತಿ, ಗ್ರಾಮೀಣ ಪರಿಸರದ ಕಟ್ಟುಪಾಡುಗಳು ಒಡೆಯುವ, ಬದಲಾಗುವ ಕ್ರಮ, ಜಾತೀಯತೆಯ ನಿರ್ಬಂಧಗಳು ಸಡಿಲವಾಗುವ ರೀತಿ, ಇವೆಲ್ಲ ನನ್ನ ಸಾಹಿತ್ಯ ಕೃಷಿಗೆ ಪ್ರಚೋದನೆ ಕೊಟ್ಟಂಥವು.

ನನ್ನ ಸೌಂದರ್ಯ ಪ್ರಜ್ಞೆಯನ್ನು ಪೋಷಿಸುತ್ತಲೇ ಬಂದ ಮುಂಬಯಿ ನನ್ನ ಬದುಕಿಗೂ ಅರ್ಥ ಕೊಟ್ಟ ಮಹಾನಗರ. ಮುಂಬಯಿಗೆ ಬಂದ ಹೊಸತಿನಲ್ಲಿ ಅಲ್ಲಿನ ಮಲಬಾರ್ ಬೆಟ್ಟದಲ್ಲಿ ನಿಂತು ಬಳಿಯೇ ಮಲಗಿದ್ದ ಅರಬೀ ಸಮುದ್ರವನ್ನು ಕೆಳಗೆ ಚೌಪಾಟಿಯಿಂದ ಮುಂದೆ ಚಾಚಿದ ಮೇರಿನ್ ಡ್ರಾವ್‌ದ ‘ರಾಣಿಯ ಕಂಠಾಭರಣ’ವೆಂದು ಎಲ್ಲ ಕಲೆಯುತ್ತಿರುವ ದೀಪಮಾಲೆಯನ್ನು ನೋಡುತ್ತ ನಿಸರ್ಗ ಆಧುನಿಕ ಜೀವನಕ್ರಮ ಬೆರೆಯುವ ವಿಸ್ಮಯ ಕೊಡುವ ಸಂತೋಷ ಇದು ಎಂದುಕೊಂಡಿದ್ದೆ. ನಾನು ಬರೆಹಗಾರನಾಗಿ ಮುಂದೆ ಬೆಳೆಸಿ ಕೊಳ್ಳುತ್ತಲೇ, ಇದ್ದ ಸೌಂದರ್ಯ ಪ್ರಜ್ಞೆಯಿಂದ ಎಷ್ಟೆಲ್ಲ ಸಂತೋಷವನ್ನು ಅನುಭವಿಸಿದ್ದೇನೆ. ಶಾಲೆಗೆಂದು ತಾಯಿಯ ಕೈ ಹಿಡಿದು ನಡೆಯುವ ಎಳೆಯ ಮಗುವಿನ ಮುಖದಲ್ಲಿ ಮಿಂಚುವ ಆತ್ಮವಿಶ್ವಾಸದ ನಗು, ದುಡಿಯುವ ದಂಪತಿಗಳು ಸುತ್ತಲಿನ ನೂಕು ನುಗ್ಗಲನ್ನೂ ಮರೆತು ಮಾತು ನಗುಗಳಲ್ಲಿ ತನ್ಮಯರಾಗಿ ಸಾಗುತ್ತಿರುವ ದೃಶ್ಯ, ಮಹಾನಗರದ ಜನ ಸಾಂದ್ರತೆ ಯಲ್ಲೂ ಏಕಾಂತತೆಯನ್ನರಸಿ ಮೇರೀನ್ ಡ್ರಾವ್‌ದಲ್ಲೊ, ಜುಹೂ ತೀರದಲ್ಲೋ, ಮಲಬಾರ್ ಬೆಟ್ಟದಲ್ಲೊ, ಕುರುಚಲು ಗಿಡಗಳ ಸಮೂಹವೆಂಬಂತೆ ಮುಂಬಯಿಯಲ್ಲಿ ಅಲ್ಲಲ್ಲಿ ಕಾಣುವ ಪಾರ್ಕುಗಳಲ್ಲೋ, ಎಲ್ಲೆಲ್ಲೂ ತಮಗೆ ಪರಸ್ಪರ ಸಾನ್ನಿಧ್ಯದಲ್ಲಿ ಮಾತು ಮೌನ ಎರಡೂ ಒಂದೇ ಎನ್ನುವಂತಿರುವ ಪ್ರಣಯಿಗಳು, ಮುಂಬಯಿಯ ಅವಸರದ ಜೀವನಕ್ಕೆ ಏನು ಅರ್ಥ ಎಂದು ಹುಡುಕುತ್ತಲೇ ಸುತ್ತಾಡುತ್ತಿರುವ ವೃದ್ಧರು, ಗಿರಿಣಿ ಕಾರ್ಖಾನೆಗಳ ಸೈರನ್ ಸದ್ದೇ ತಮ್ಮ ಬದುಕಿಗೆ ಅರ್ಥ ಕೊಡುವ ಗಂಟೆಗಳೆಂದು ಭಾವಿಸುತ್ತ ಇರಬೇಕಾದ ಕಾರ್ಮಿಕ ವರ್ಗ, ನಿತ್ಯ ಬಾಳೆಯ ಹಣ್ಣು ಮಾರುವ ಕಾಗೈಡಿಯೇ ತನ್ನ ಆಪ್ತಸುಖ ಎಂದು ಅದರಲ್ಲೇ ನಿದ್ದೆ ಹೋಗುವ ಹಣ್ಣು ಮಾರುವಾತ, ಕೈಗಾಡಿಯ ಬಿಡಿಗಾಸಿನ ಸಂಪಾದನೆ ಮುಗಿಸಿ ಅದರಲ್ಲೆ ಬಟ್ಟೆ ಹಾಸಿ ಮಲಗುವ ಬಡಪಾಯಿ, ಅರ್ಧ ಬಿಂದಿಗೆಯ ನೀರಲ್ಲೆ ತನ್ನ ಜೋಪಡಿಯ ಇದಿರ ರಸ್ತೆಯ ಬದಿಯಲ್ಲಿ ಯಾರಿಗೂ ಸಂಕೋಚವಾಗದಂತೆ ಸ್ನಾನ ತೀರಿಸುವ ಮಹಿಳೆ, ಆರ್ಥಿಕ ಮಹತ್ವಾಕಾಂಕ್ಷೆಯ ಮೆಟ್ಟಲುಗಳನ್ನು ಏರಲು ತಾವು ಬಳಸುವ ವಾಹನಗಳೇ ಟಾರ್ಪಲಿನ್, ರಟ್ಟು, ದಪ್ಪ ಕಾಗದಗಳಲ್ಲಿ ಮನೆ ಕಟ್ಟಿಕೊಂಡು ಮುಂದೆ ಅಂತಹ ಮನೆಗಳಿಗೂ ಇದಿರು ರಂಗವಲ್ಲಿ, ಮೇಲೆ ಟೀವಿ ಅಂಟೆನಾ ತಗಲಿಸುವ ಕೊಳೆಗೇರಿ ಜನ, ದಾರಿ ದೀಪಗಳ ಬೆಳಕಿನಲ್ಲಿ ವಿದ್ಯೆ ಕಲಿಯುವ ರಾತ್ರಿ ಶಾಲೆಗಳ ವಿದ್ಯಾರ್ಥಿ ಗಳು, ಕಾಲದ ಅವಸರದೊಂದಿಗೆ ಸ್ಪರ್ಧಿಸಬೇಕಾದ ಎಚ್ಚರದಿಂದ ಬೆಳಗಿನ ಜಾವದ ನಿದ್ದೆಗಣ್ಣಿನಲ್ಲೂ ಹೊಸ ದಿನದ ಪ್ರಜ್ಞೆ ತಂದುಕೊಂಡು ಅವಸರದ ದೈನಂದಿನ ರೂಢಿ ಹೊಂದಿಕೊಳ್ಳುವ ಮಹಿಳೆಯರು, ಜೋಪಡಿಗಳಲ್ಲಿ ಅಸಹ್ಯವೆನಿಸಬಹುದಾದ ಬೈಗಳನ್ನು ಒದರುವಾಗಲೂ ನಗುವ ಜೋಪಡಿ ನಿವಾಸಿಗಳು, ಪ್ರಾಯಶಃ ಭಾರತದ ಬೇರೆ ಯಾವ ನಗರದಲ್ಲೂ ಕಾಣಸಿಗದಂತಹ ದುಡಿಮೆಯ ಕುರಿತ ಆಸಕ್ತಿಯಿಂದ, ಹಗಲು ರಾತ್ರಿಗಳ ಭೇದವೇ ಇಲ್ಲವೆಂಬಂತೆ ಓಡಾಡುತ್ತಿರುವ ಸರ್ಬನ್ ಗಾಡಿಗಳಲ್ಲಿ, ಬೆಸ್ಟ್ ಬಸ್ಸುಗಳಲ್ಲಿ ದಿನ ರಾತ್ರಿ ಪ್ರಯಾಣಿಸುತ್ತಲೇ ಇರುವ ಲಕ್ಷಗಟ್ಟಲೆ ಜನ, ದಿನದ ದುಡಿಮೆ ಮುಗಿಸಿ ತಾವು ಕಟ್ಟಿಕೊಂಡ ಗೂಡು ಮನೆಗಳಿಗೆಂದು ಚರ್ಚ್‌ಗೇಟ್ ವಿಟಿ ನಿಲ್ಮನೆಗಳಲ್ಲಿ ಸಂಜೆ ಸೇರುವ ಜನಸಾಗರ. ಈ ಸನ್ನಿವೇಶಗಳೆಲ್ಲ ನನ್ನ ಸೌಂದರ್ಯ ಪ್ರಜ್ಞೆಯನ್ನು ಕೆಣಕಿದಂಥವು, ಪ್ರಚೋ ದಿಸಿದಂಥವು, ಪೋಷಿಸಿದಂಥವು.

ನಾನು ಮುಂದೆ ಬರೆದ ಕಾದಂಬರಿಗಳಲ್ಲಿ ‘ಬಂಡಾಯ’ ಹಾಗೂ ಇತ್ತೀಚೆಗೆ ಪ್ರಕಟ ವಾಗಿರುವ ‘ಹೆಜ್ಜೆ’ ಹಿಂದೆ ಬರೆದ ‘ಹೇಮಂತಗಾನ’ ಎಲ್ಲವೂ ರಾಜಕೀಯ ವಸ್ತುವನ್ನು ಆರಿಸಿಕೊಂಡು ಕಾದಂಬರಿಗಳು. ನನ್ನ ಬಾಲ್ಯದ ಪರಿಸರ ಮುಂದೆ ಓದಿನಿಂದ, ಇವು ಸಂಸ್ಕಾರ, ಬಾಲ್ಯದಿಂದಲೂ ತುಸು ಭಾವನಾತ್ಮಕವಾಗಿ ನಾನು ನನಗೆ ಅಂಟಿಸಿಕೊಂಡಿದ್ದ ರಾಜಕೀಯ ಪ್ರಜ್ಞೆ, ಇವು ನನ್ನ ತುಸು ಎಡ ಪಂಧೀಯವೆನಿಸಬಹುದಾದ ಪ್ರಜ್ಞೆಗೂ ಕಾರಣವಾಗಿರಬಹುದು. ನಾನು ಮುಂಬಯಿಯಲ್ಲಿ ಕಂಡುಂಡ ಕಾರ್ಮಿಕ ಸಂಘರ್ಷದ ಅನುಭವ, ದೇಶದಲ್ಲಿ ಹರಡಿದ ನಕ್ಸಲೀಯ ಚಟುವಟಿಕೆಗಳು, ‘ಬಂಡಾಯ’ ಕಾದಂಬರಿಗೆ ಪ್ರೇರಣೆ ಕೊಟ್ಟವು. ‘ಹೆಜ್ಜೆ….’ಯಲ್ಲಿ ನನ್ನಬಾಲ್ಯದ ನೆನಪುಗಳೂ ನಾನು ಗಾಂಧೀ ಯುಗದ ಇತಿಹಾಸವನ್ನು ಗಮನಿಸುತ್ತ ಬಂದಾಗ ದೊರಕಿದ ಅನುಭವಗಳೂ ಸೇರಿಕೊಂಡು ಸಮಾಜ ಮತ್ತು ಇತಿಹಾಸ ಸ್ಪಂದಿಸುವಾಗ ಆಗುವ ವಿನ್ಯಾಸಗಳನ್ನು ಗುರುತಿಸುವ ಕುತೂಹಲದಿಂದ, ಗಾಂಧೀ ಯುಗದ ಇತಿಹಾಸದ ಮರುಸೃಷ್ಟಿಯ ಉದ್ದೇಶಕ್ಕೆ ಸ್ಫೂರ್ತಿ ಕೊಟ್ಟಂಥವು.

ನಾನು ಬರೆಹಗಾರನಾಗಿ ಬೆಳೆದು ಬಂದ ದಾರಿಯಲ್ಲಿ ಬದುಕನ್ನು ಅದರ ಸಮಗ್ರತೆಯಲ್ಲಿ ಗುರುತಿಸುವ ಕುತೂಹಲವನ್ನು ಇರಿಸಿಕೊಂಡೇ ಬಂದಿದ್ದೇನೆ. ಕೌಟುಂಬಿಕವೆನಿಸುವ ವಸ್ತು ಗಳನ್ನು ಆಯ್ದುಕೊಂಡಾಗಲೂ ನಾನು ಅವುಗಳ ಸಾಮಾಜಿಕ ಮುಖವನ್ನು ಗಮನಿಸಿಯೇ ಬರೆಯುತ್ತ ಬಂದಿದ್ದೇನೆ. ಬದುಕಿನಲ್ಲಿ ಅಸ್ಮಿತೆ ಅನನ್ಯತೆಗಳ ಅರ್ಥ ತಿಳಿಯುವ ಕುತೂಹಲ ದಿಂದ ಬರೆದ ನನ್ನ ಪ್ರಯೋಗಾತ್ಮಕ ಕಾದಂಬರಿ ‘ಆಕಾಶಕ್ಕೊಂದು ಕಂದೀಲು’. ನಾನು ಉಳಿಸಿಕೊಂಡೇ ಬಂದಿರುವ ನನ್ನ ರಾಜಕೀಯ ಪ್ರಜ್ಞೆಯಿಂದಾಗಿ ನಾವು ಹಿಡಿದಿರುವ ದಾರಿಯ ಕುರಿತು ನನ್ನ ವಿಚಾರಗಳನ್ನು ವ್ಯಕ್ತಪಡಿಸುವ ಉದ್ದೇಶದ ಎರಡು ರಾಜಕೀಯ ಲೇಖನಗಳ ಸಂಗ್ರಹಗಳು ಪ್ರಕಟವಾಗಿವೆ. ನನ್ನ ಯುರೋಪು ಅಮೆರಿಕಗಳ ಪ್ರವಾಸ ಕಥನ ಪೂರ್ವ ಪಶ್ಚಿಮಗಳ ಸಾಂಸ್ಕೃತಿಕ ಸಂಘರ್ಷವನ್ನು ಪರಿಶೀಲಿಸುವ ಉದ್ದೇಶದಿಂದ ಕೂಡಿದೆ. ವಿಶಿಷ್ಟವೆನಿಸುವ ಸ್ತ್ರೀ ಪಾತ್ರಗಳನ್ನು ಚಿತ್ರಿಸಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಓದುಗರು ಹಾಗೂ ಸಾಹಿತ್ಯ ಮಿತ್ರರು ಕೇಳಿದಾಗ, ಇವರಿಗೆಲ್ಲ ನಾನು ಉತ್ತರ ಹೇಳಬಹು ದಾದುದು. ನನ್ನ ಬಾಲ್ಯದ ಸ್ತ್ರೀ ಶೋಷಣೆಯ ನೆನಪುಗಳಲ್ಲಿ, ನನ್ನ ಬದುಕಿನಲ್ಲಿ ನಾನು ತಂದುಕೊಂಡ ಸೌಂದರ್ಯ ಪ್ರಜ್ಞೆಯಲ್ಲಿ.

ಮುಂಬಯಿಯ ಅನುಭವ ಪ್ರಪಂಚ ನನ್ನನ್ನು ಒಬ್ಬ ಲೇಖನನ್ನಾಗಿ ರೂಪಿಸಲು ಮಹತ್ವದ ಪಾತ್ರ ವಹಿಸಿತು. ಈ ಅನುಭವದ ಕ್ಷೇತ್ರದಲ್ಲಿ ಪಕ್ವವಾದ ನನ್ನ ಸೃಜನಶೀಲತೆಯಿಂದ ರೂಪುಗೊಂಡ ನನ್ನ ಕತೆ ಕಾದಂಬರಿಗಳನ್ನು ಮೆಚ್ಚಿಕೊಂಡ ಸಾವಿರಾರು ಕನ್ನಡಿಗರನ್ನು ನನಗೆ ಮರೆಯಲಾಗುವುದಿಲ್ಲ. ನನ್ನ ‘ಅನುರಕ್ತೆ’ ಕಾದಂಬರಿಯ ಸುಮಿತ್ರೆ, ‘ಹೇಮಂತಗಾನ’ ದ ಭಾರತಿ, ‘ವಾತ್ಸಲ್ಯ ಪಥ’ದ ಮಾಲತಿ ‘ಉತ್ತರಾಯಣ’ದ ಹೇಮಾ, ಜೋತ್ಸ್ನೆಯರು ‘ಬಂಡಾಯ’ದ ಯಾಮಿನಿ ಎಲ್ಲಿ ಸಿಗುತ್ತಾರೆ ಎಂದು ಕೇಳಿದ ನೂರಾರು ಓದುಗರ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇದೆ; ಇಲ್ಲ ಎನ್ನುವುದು ಜಾಣತನದ ಮಾತೆನಿಸಬಹುದು. ಉತ್ತರಕ್ಕೆ ಕಾರಣವಾಗಿರುವುದು ನನಗೆ ಬದುಕಿನ ಅರ್ಥ ತಿಳಿಯುವ ಕುತೂಹಲವನ್ನು ಮೂಡಿಸಿ ಅವಕಾಶಗಳನ್ನು ಒದಗಿಸಿದ ಮಹಾನಗರ ಮುಂಬಯಿ.