ಬರೆಯುವುದು ನನಗೆ ಹಿಂಸೆಯಲ್ಲ. ಆದರೆ ‘ನಾನು ಮತ್ತು ನನ್ನ ಬರಹ’ ಎಂದು ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ. ಎಲ್ಲಿ ನನ್ನನ್ನು ನಾನು ಮರೆತು ಬಿಡುತ್ತೇನೋ ಎನ್ನುವ ಭಯ. ಗಾಳಿ ತುಂಬಿದ ಬಲೂನಿನಂತೆ ಒಡೆಯಬಹುದೇನೋ ಎನ್ನುವ ಆತಂಕ. ಹೀಗಾಗಿ ಹಿಂಜರಿಕೆ. ಆದರೆ ಸ್ನೇಹದ ಒತ್ತಾಯ ಒಂದೆಡೆ. ಬಾಳೆಗೊನೆ ಬಿಡುವುದನ್ನು ನೋಡಿ ನೋವಿಗೆ ತಾಳೆ ಹೆದರಿದರೂ ಆ ನೋವಿನಲ್ಲೂ ಸುಖವಿದೆ ಎನ್ನುವುದು ನಿಜ. ಸುಖ ಸಂಕಟದ ನಡುವೆ ನಿಂತು ಪ್ರಜ್ಞಾಪೂರ್ವಕವಾಗಿಯೇ ಬರೆಯುತ್ತೇ ನೆಂಬ ವಿಶ್ವಾಸದೊಂದಿಗೆ ಕಾಗದ ಕಪ್ಪು ಮಾಡುತ್ತಿರುವೆ.

ಗೆಳೆಯ, ಎಲ್ಲಿಂದ ಆರಂಭಿಸಬೇಕು ತಿಳಿಯುತ್ತಿಲ್ಲ. ಪೂರ್ವಭಾವಿ ಸಿದ್ಧತೆಗಳೇನೂ ಇಲ್ಲ. ಇದಕ್ಕಾಗಿ ಸಿದ್ಧತೆ ಬೇಕು ಎನಿಸುತ್ತಿಲ್ಲ. ನನ್ನ ಮಹಾಪ್ರಬಂಧದ ಮಾರ್ಗದರ್ಶಕರು ಹೇಳಿದ ಒಂದು ಮಾತು ಈಗಲೂ ಮನಸ್ಸಿನ ಆಳದಲ್ಲಿ ಉಳಿದಿದೆ. “ಸಿದ್ಧತೆ ಇಲ್ಲದೆ ಪಾಠ ಮಾಡಲು ತರಗತಿಗೆ ಹೋಗಬೇಡ. ಸಿದ್ಧತೆ ಮಾಡಲಾಗದಿದ್ದರೆ ರಜೆ ಹಾಕಿ ಬಿಡು”. ಅವರ ವೃತ್ತಿಯ ಅನುಭವದ ಈ ಮಾತು ನನಗೆ ಭದ್ರವಾದ ಪಾಯ ಒದಗಿಸಿತು. ಹೀಗಾಗಿ ಏನೇ ಬರೆಯುವ ಅಥವಾ ಹೇಳುವ ಸಂದರ್ಭ ಬಂದಾಗ ಆ ಮಾತು ನೇರವಾಗಿ ಎದೆಗೆ ಒದೆಯುತ್ತದೆ. ಈ ಒದೆತದ ಅರಿವು ಈಗಲೂ ನನ್ನೊಂದಿಗಿದೆ.

ಬದುಕಿನ ವಾಸ್ತವದ ಅನುಭವಗಳು ನಮಗೆ ಮಿತಿಯನ್ನು ಹೇರಿ ಬಿಡುತ್ತವೆ. ಪರಿಸರ ನಮ್ಮ ಬದುಕನ್ನು ರೂಪಿಸುತ್ತದೆ ಮತ್ತು ನಿಯಂತ್ರಿಸುತ್ತದೆ ಎನ್ನುವ ಎಚ್ಚರವಿದ್ದಾಗಲೂ ಕೆಲವೊಮ್ಮೆ ಸೀಮಾರೇಖೆ ದಾಟಲಾಗದೆ ಸೋಲುತ್ತೇನೆ ಮತ್ತೆ ಒತ್ತಾಯಪೂರ್ವಕವಾಗಿ ಎಳೆದುಕೊಂಡು ಮುಂದಕ್ಕೆ ಹೋಗುತ್ತೇನೆ. ಸಾಕಷ್ಟು ಕ್ರಮಿಸಿದ್ದೇನೆಂದು ಮರಳಿ ನೋಡಿದರೆ ಇದ್ದ ಸ್ಥಾನದಲ್ಲಿಯೇ ಇದ್ದೇನೆ ಎನಿಸಿಬಿಡುತ್ತದೆ. ನನ್ನನ್ನು ನಾನು ಮೀರಬೇಕೆಂಬ ಇಂಥ ಎಚ್ಚರಗಳು ನನ್ನೊಂದಿಗಿದ್ದು ನಾನು ನನ್ನನ್ನು ಮೀರದೆ ಹೋದುದು ಹೇಗೆ? ಕಟು ವಿಮರ್ಶೆಗೆ ನನ್ನನ್ನು ನಾನೇ ಅಪ್ಪಳಿಸಿಕೊಳ್ಳುತ್ತೇನೆ. ಅಪ್ಪಳಿಸಿದ ರಭಸಕ್ಕೆ ನೀರು ಛಿದ್ರವಾಗಿ ಹತ್ತೂ ದಿಕ್ಕಿಗೆ ಚದುರಿ ಹರಿಯದಂತೆ ಮಾಡುವವರ ಒತ್ತಾಯದ ಹಿಂದಿರುವ ಪ್ರೀತಿಯನ್ನು ಕಂಡಾಗ ಕ್ಷಣ ಸುಳಿಯ ನೀರಾಗಿ ತಿರುಗುತ್ತೇನೆ, ಮತ್ತೆ ಮುಂದೆ ಸಾಗುತ್ತೇನೆ.

ನನ್ನ ಬರಹ ನನಗೆ ಜೀವ ಚೈತನ್ಯವನ್ನು ತುಂಬಿದೆ. ನೈತಿಕತೆಯೇ ಅದರ ಬೆನ್ನೆಲುಬು ಎಂದು ಭಾವಿಸಿದ್ದೇನೆ. ವಾಸ್ತವದ ಬದುಕಿಗೂ ಸಾಹಿತ್ಯಕ್ಕೂ ಸಂಬಂಧಬೇಕು ಎನ್ನುವವ ನಾನು. ಹೀಗಾಗದಿದ್ದಲ್ಲಿ ಬರಹಕ್ಕೂ ಬದುಕಿಗೂ ಬೆಲೆ ದಕ್ಕುವುದಿಲ್ಲ. ಸಾಮಾಜಿಕ ಜವಾಬ್ದಾರಿ ಎನ್ನುವ ಪರಿಕಲ್ಪನೆಯುಳ್ಳವ ಇದರಿಂದ ಬಿಡಿಸಿಕೊಳ್ಳಲಾಗದು.

ಸೃಜನವೇ ಇರಲಿ, ಸೃಜನೇತರ ಬರಹವೇ ಇರಲಿ, ಯಾವುದಕ್ಕೂ ಧ್ಯಾನ ಬೇಕು. ಬರಹ ಎಂಬುದೇ ಬೆಳಕಿನ ಲೋಕ, ಧ್ಯಾನದ ಕಾವು ಸಿಕ್ಕಷ್ಟು ಬೆಳಕು ಶುಭ್ರತೆಯೆಡೆಗೆ ಕರೆದೊಯ್ಯುತ್ತದೆ. ಮಾನವೀಯತೆಯನ್ನರಿಯದ ಬೆಳಕು ಕತ್ತಲಿಗೆ ಸಮಾನ. ನಾವು ಜನಪರ ವಾಗುತ್ತಲೇ ಬರಹವನ್ನು ಜನಪರವಾಗಿಸಬೇಕು. ಅವಸರದಲ್ಲಿ ಹೆತ್ತ ಕೂಸು ಕುಟುಂಬಕ್ಕೂ ಸಮಾಜಕ್ಕೂ ಮಾರಕ. ಹೇಗೆ ಹೆರುವುದಕ್ಕಿಂತ ನಾನು ಬಂಜೆಯಾಗಿರಬಯಸುತ್ತೇನೆ. ಕಾವ್ಯ, ಕಥಾನಕ, ನಾಟಕ, ವಿಮರ್ಶೆ, ಸಂಶೋಧನೆ ಎಲ್ಲವೂ ವರ್ತಮಾನದ ಸಮಾಜಕ್ಕೆ ಮುಖಾ ಮುಖಿಯಾಗಬೇಕು. ಶುದ್ಧ ಸಾಹಿತ್ಯವೆಂಬುದೂ ಬೇಕು. ಆದರೆ ಸಮಾಜದ ಆರೋಗ್ಯವನ್ನು ಹದಗೆಡಿಸುವ ಸ್ವರೂಪದಲ್ಲಲ್ಲ. ಈ ಹಿನ್ನೆಲೆಯಲ್ಲಿಯೇ ಸದಾ ನನ್ನ ಲೇಖನಿ ತುಡಿಯಲು ಪ್ರತ್ನಿಸಿದೆ. ಆದರೆ ತುಡಿತದ ಒತ್ತಡದ ಸ್ವರೂಪದ ಬಗ್ಗೆ ಓದುಗರೇ ಹೇಳಬೇಕಲ್ಲವೆ?.

ಸಾಹಿತ್ಯದ ಸಂಗಡ ಬದುಕುವುದೆಂದರೆ ಸಮಾಜದೊಂದಿಗೆ ಬದುಕುವುದೆಂದರ್ಥವಲ್ಲವೆ? ಬರಹ ಬಗೆಯುವುದಕ್ಕೆ ವಿನಾ ಭಾಗಿಸುವುದಕ್ಕಲ್ಲ. ಕೇವಲ ಮನೋಲ್ಲಾಸಕ್ಕಲ್ಲ ಅಥವಾ ಯಾಂತ್ರಿಕ ಕ್ರಿಯೆಯೂ ಅಲ್ಲ. ಸಮಾಜದ ಅರಿವುಳ್ಳ ವ್ಯಕ್ತಿಗೆ ಬರಹ ಸಮಾಜಿಕ ಜವಾಬ್ದಾರಿ. ಬರಹದ ಬೇರು ಸಮಾಜದಾಳಕ್ಕೆ ಇಳಿದಾಗಲೇ ಅದಕ್ಕ ಜೀವಂತಿಕೆ. ಮನೋಲ್ಲಾಸದ ಸ್ಪರ್ಶದ ಹೊಳಪು ದಕ್ಕದಂತೆ, ಕಲೆಗೆ ತಿರುಗಿದಂತೆ. ಸಾಹಿತ್ಯದ ಮುಖ ಕಲೆಯೆಡೆಗೆ ತಿರುಗಬೇಕೇ ವಿನಾ ಕಲೆಯಾಗಿ ನಿಲ್ಲಬಾರದು ಎನಿಸುತ್ತದೆ. ಸಾಹಿತ್ಯ ಕಲೆಯಾಗುವುದೆಂದರೆ ಶಿಲೆಯಾಗುವುದೆಂದೇ ಅರ್ಥ. ಸಾಹಿತ್ಯ ಸಮಾಜಕ್ಕಾಗಿಯೇ ಹುಟ್ಟುವುದಿಲ್ಲ. ಏಕೆಂದರೆ ಯಾರೂ ಸಮಾಜಕ್ಕಾಗಿಯೇ ಬದುಕುವುದಿಲ್ಲ. ಹಾಗೇನಾದರೂ ವಾದಿಸಿದರೆ ಆತ ತನ್ನ ಒಂದು ಮುಖವನ್ನು ಮಾತ್ರ ತೋರಿಸುತ್ತಿದ್ದಾನೆಂದೇ ಅರ್ಥವಲ್ಲವೇ?

ಪದ್ಯ ಹೇಳಲಾಗದ ಸತ್ಯಗಳನ್ನು ಹೇಳುತ್ತದೆ. ಗದ್ಯ ಹೇಳಬಹುದಾದ ಸತ್ಯಗಳನ್ನು ಹೇಳುತ್ತದೆ. ಬರಹಗಾರ ಅಭಿವ್ಯಕ್ತಿಯ ಮಾರ್ಗಗಳನ್ನು ಆಯ್ದುಕೊಳ್ಳುವಾಗ ವಿಷಯ ಪ್ರಧಾನವಾಗುತ್ತದೆ. ಕಾವ್ಯಕ್ಕಿರುವ ಮುಚ್ಚುವ ಪ್ರಕ್ರಿಯೆ ಗದ್ಯಕ್ಕಿರುವ ಬಿಚ್ಚುವ ಪ್ರಕ್ರಿಯೆಗಳ ಇತಿಮಿತಿಗಳನ್ನು ಅರಿತ ಪ್ರಜ್ಞಾವಂತ ಬರಹಗಾರ ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳು ತ್ತಾನೆಂದು ನಂಬಿದ್ದೇನೆ. ಪದ್ಯಕ್ಕೂ ಗದ್ಯಕ್ಕೂ ರಾತ್ರಿ ಹಗಲುಗಳಷ್ಟೇ ಅಂತರ. ಮುಸ್ಸಂಜೆ ಹಾಗೂ ಚೆಂಬೆಳಕಿನ ಪರಿಸರದ ಬರಹವೇ ಉತ್ಕೃಷ್ಟ ಮಾರ್ಗವೆಂದು ನಾನಂದು ಕೊಂಡಿದ್ದೇನೆ. ನಿನಗೂ ಹಾಗನಿಸಿದ್ದರೆ ನಾವು ಒಂದೇ ದೋಣಿಯಲ್ಲಿ ಚಲಿಸಿದಂತಲ್ಲವೆ?

ಬರಹ ಮತ್ತು ಬದುಕಿನ ಪ್ರಶ್ನೆ ಬಂದಾಗ, ಬದ್ಧತೆಯ ತುಳಿದರೆ ಬದುಕು ಬಂಧನವಾಗುವುದೇ ಹೆಚ್ಚು. ಸಾಮಾಜಿಕ ಜವಾಬ್ದಾರಿ ಎಂಬ ‘ಟಾರ್ಚ್’ ಹಿಡಿದು ಹೊರಟಾಗ ಇದು ಅನಿವಾರ್ಯ. ಎಷ್ಟೋ ಬಾರಿ ತಲೆ ಭೂಮಿಗಿಂತ ಭಾರವೆನಿಸಿಬಿಡುತ್ತದೆ. ಬಹುಶಃ ಬರಹವನ್ನು ಬಂಡವಾಳವಾಗಿ ಪರಿವರ್ತಿಸಲಾಗದ ನನ್ನಂಥವರ ಬಗೆ ಇದಾಗಿರುತ್ತದೆ ಎನಿಸುತ್ತದೆ. ನನ್ನ ‘ಗೌರ್ಮೆಂಟ್ ಬ್ರಾಹ್ಮಣ’ ಕೃತಿ ಪ್ರಕಟವಾದಾಗ ಕೆಲ ಸ್ನೇಹಿತರು ‘ಅಯ್ಯೋ ಮಾಲಗತ್ತಿ ಬದುಕನ್ನು ಬರೆದು ಮಾರಿಕೊಂಡು ತಿನ್ನುವುದಕ್ಕೆ ಪ್ರಾರಂಭಿಸಿದನೆ?’ ಎಂದರಂತೆ! ಯಾವುದು ಖಾಸಗಿ, ಯಾವುದು ಸಾರ್ವಜನಿಕ ಎನ್ನುವುದೇ ಅರ್ಥವಾಗುತ್ತಿಲ್ಲ. ಅಸ್ಪೃಶ್ಯವಾಗಿ ಹುಟ್ಟಿದ ತಪ್ಪಿಗೆ ಸಮಾಜವನ್ನು ಪ್ರಶ್ನಿಸಿದ ತಪ್ಪಿಗೇನೋ ಎನ್ನುವಂತೆ ನಾನು ಕೇಳಿದ ಪ್ರಶ್ನೆಗಳು ಇಂದು ನನಗೇ ಎದುರು ನಿಲ್ಲುತ್ತಿರುವುದನ್ನು ನೋಡಿದಾಗ, ನಿಷ್ಕರುಣಿ ಕಾಲದ ಬಗ್ಗೆ ಕನಿಕರವೆನಿಸುತ್ತದೆ. ಓದಿನಾಳಕ್ಕಿಳಿಯದೆ ಮಾತನಾಡುವವರನ್ನು ಕಂಡಾಗ ಮರುಕವೆನಿಸುತ್ತದೆ. ನಾನು ಸಾಚಾ, ನನ್ನ ಬರವಣಿಗೆ ಸಾಚಾತನದಿಂದ ಕೂಡಿದ್ದು ಎಂದು ಹನುಮಂತನ ಹಾಗೆ ಎದೆ ಹರಿದು ತೋರಿಸಿ ನಾನು ಯಾರನ್ನೂ ಮೆಚ್ಚಿಸಬೇಕಾಗಿಲ್ಲ. ಅದು ನನ್ನ ಬರಹದ ಉದ್ದೇಶವೂ ಅಲ್ಲ. ಸ್ವಾರಸ್ಯವೆಂದರೆ ಓದುಗರು ಬರಹದ ಹೊರತಾದ ಉದ್ದೇಶಗಳನ್ನು ಬರಹದಲ್ಲಿ ಹುಡುಕುವುದನ್ನು ಕಂಡಿದ್ದೇನೆ. ಇಂಥ ಸಂದರ್ಭದಲ್ಲಿ ದಿವ್ಯ ನಿರ್ಲಕ್ಷ್ಯವಹಿಸಿ ಬಿಡುತ್ತೇನೆ.

ವಾಸ್ತವವಾಗಿ ನಾನು ಬೆಳಕನ್ನು ಪ್ರೀತಿಸಿದಷ್ಟೇ ಕತ್ತಲನ್ನೂ ಪ್ರೀತಿಸುತ್ತೇನೆ. ಕತ್ತಲು ಇಲ್ಲದಿದ್ದರೆ ಬೆಳಕಿಗೆ ಅರ್ಥವೇ ಇರುತ್ತಿರಲಿಲ್ಲ. ಈ ಕತ್ತಲ ಪ್ರೀತಿ ನನ್ನನ್ನು ಹೆಚ್ಚು ಏಕಾಂಗಿಯಾಸಿಗಿದೆ. ಪ್ರಜ್ಞಾವಂತನನ್ನಾಗಿಸಿದೆ. ನನ್ನ ಬರಹದ ಬಹುಪಾಲು ಕತ್ತಲಲ್ಲಿಯೇ ದೀಪದೆದುರು ಕುಳಿತು ಬರೆದಿದ್ದು. ದೀಪ ನನ್ನನ್ನು ಮಲಗಿಸದೆ ಬರೆಯಿಸಿದೆ. ಹೀಗಾಗಿ ನನಗೂ ಕತ್ತಲಿಗೂ ಎಲ್ಲಿಲ್ಲದ ನಂಟು. ಕತ್ತಲು ಪರಿಸರವನ್ನು ನಿರ್ಮಿಸಿಕೊಟ್ಟಿದೆ. ರಾತ್ರಿ ಎರಡು ಗಂಟೆಗಿಂತ ಮೊದಲೇ ಮಲಗಿದ ದಿನಗಳು ನನ್ನ ವಯದಲ್ಲಿ ತುಂಬ ಕಡಿಮೆ. ಹೀಗಾಗಿಯೇ ನಿಶಾಚರನೆಂದು ನನ್ನಂತಹ ಗೆಳೆಯರಿಂದ ಕರೆಸಿಕೊಂಡಿದ್ದೇನೆ.

ಪಂಚತಂತ್ರದಲ್ಲಿ ಬರುವ ಕಟುಕನ ಹಾಗೂ ಮಠದ ಗಿಳಿಗಳ ಕಥೆ ನನಗೆ ಹೆಚ್ಚು ಪ್ರಿಯವಾದುದು. ಅದಕ್ಕೆ ಕಾರಣ ಈ ಕಥೆ ಹುಟ್ಟನ್ನು ಕುರಿತಾದ ಮೂಲಭೂತ ಸಿದ್ಧಾಂತ ವನ್ನೇ ಹೊಡೆದು ಹಾಕುತ್ತದೆ. ಹುಟ್ಟಿನ ಮೂಲದ ಕುರಿತು ಸಿದ್ಧಾಂತಗಳು ದಲಿತರನ್ನು ಮಹಿಳೆಯರನ್ನು ಅಧಿಕೃತವಾಗಿ ಕಾಡುತ್ತವೆ. ಹುಟ್ಟಿನ ಮೂಲದ ಕುರಿತು ಸಿದ್ಧಾಂತಗಳು ದಲಿತರನ್ನು ಮಹಿಳೆಯರನ್ನು ಅಧಿಕೃತವಾಗಿ ಕಾಡುತ್ತದೆ. ಅವರಿಂದ ಬರೆಸುತ್ತವೆ.ಆದರೆ ಸಿದ್ಧಾಂತಗಳನ್ನು ಕಟ್ಟಿದವರನ್ನು ಈ ಸಿದ್ಧಾಂತಗಳು ಕಾಡದಿರುವುದು ಈ ನೆಲದ ವಿಶೇಷ ಅಲ್ವಾ?

ಸೃಜನ ಭಾವಕೇಂದ್ರಿತ, ವಿಮರ್ಶೆ ಬುದ್ದಿಕೇಂದ್ರಿತ. ಸೃಜನ ಸರಮಾಡುತ್ತ ಮೊಟ್ಟೆಯ ರೂಪ ಕೊಟ್ಟರೆ, ವಿಮರ್ಶೆ ಮರಿಗೆ ಬದುಕಿನ ಮಾರ್ಗವನ್ನು ತೋರಿಸುತ್ತದೆಂದೇ ನಾನು ತಿಳಿದಿದ್ದೇನೆ. ವಿಮರ್ಶೆಯ ಗ್ರಹಿಕೆ ಬೆಳೆದಂತೆ ನನ್ನ ಸೃಜನ ಬರಹದ ಸಂಬಂಧ ಕ್ಷೀಣಿಸಿದೆ. ಭಾವ ಬುದ್ದಿಗಳ ಮೇಳದಲ್ಲಿ ಗೆಲ್ಲುವುದು ಅನುಭವವೇ ಆಗಿದೆ. ಹೀಗಾಗಿ ಅದು ಸಂಕೀರ್ಣತೆಗೆ ಪ್ರತೀಕವಾಗಿದೆ.

ಅನುಭವ ಮತ್ತು ಶಬ್ದ ಸಂಪತ್ತು ಬರಹಕ್ಕೆ ದೊಡ್ಡ ಶಕ್ತಿ. ಬರಿ ಅನುಭವವಿದ್ದರೆ ಸಾಲದು. ಶಬ್ದ ಸಂಪತ್ತು ಬೇಕು ಎನಿಸುತ್ತದಲ್ಲವೆ? ಅಕ್ಷರಗಳ ಸಾಮರ್ಥ್ಯಕ್ಕೆ ನಾನು ಸಂಪೂರ್ಣ ಸೋತು ಪರವಶನಾಗಿದ್ದೇನೆ. ತರಗತಿಯಲ್ಲಿ ಬಳಪ ಹಿಡಿದು ಪಾಠ ಮಾಡುತ್ತ ಕರಿಹಲಗೆಯ ಮೇಲೆ ಶಬ್ದದ ಒಂದಕ್ಷರ ಬರೆಯುವ ನನ್ನ ಹವ್ಯಾಸದಲ್ಲಿ ಉದ್ಭವವಾದ ಶಬ್ದಗಳನ್ನು ಕಂಡು ಬೆರಗಾಗಿ ಅವಾಕ್ಕಾಗಿ ನನ್ನಷ್ಟಕ್ಕೆ ನಾನೇ ಹಿಮಗಿರಿಯನ್ನೇರಿದ್ದೇನೆ. ಕೆಲಬಾರಿ ಜಾರಿ ಬಿದ್ದಿದ್ದೇನೆ.

ಅನುಭವವನ್ನು ವ್ಯಕ್ತಿನಿಷ್ಠ, ಸಮೂಹನಿಷ್ಠವೆಂದು ವರ್ಗೀಕರಿಸುವುದು ತುಂಬ ಸರಳವಾದುದಲ್ಲವೆ? ಸಮಷ್ಟಿಯ ಅನುಭವ ಕೆಲವೊಮ್ಮೆ ಭಯಾನಕವೆನ್ನಿಸಿ ವೃಷ್ಟಿತನಕ್ಕೆ ಬೆಂಕಿ ಹಚ್ಚಿವೆ. ಕೆಲವು ಸಲ ಬೆಚ್ಚಗೆ ಕಾವು ಕೊಟ್ಟಿವೆ. ವ್ಯಷ್ಟಿಯ ಅನುಭವಗಳೇ ಸಮಷ್ಟಿ ಯತೆಗೆ ದಾರಿ ತೋರಿವೆ. ಕೆಲ ಬಾರಿ ದಾರಿ ತಪ್ಪಿಸಿದ್ದೂ ಇದೆ. ಹೀಗಾಗಿ ಯಾವ ಅನುಭವವೂ ಸ್ವತಂತ್ರವೆನಿಸುವುದಿಲ್ಲ. ಯಾವುದಕ್ಕೂ ಪ್ರತ್ಯೇಕ ಅಸ್ತಿತ್ವವಿದೆ ಎನಿಸುವುದಿಲ್ಲ.

ಅಕ್ಷರಗಳು ಮರಳಿನ ಹಾಗೆ. ಮರಳು ಮರಳಿಗೆ ಸೇರಿ ಹುಟ್ಟುವ ಆಕಾರ ಜೀವ ಪಡೆಯುತ್ತದೆ. ಅಕ್ಷರಗಳಿಗೆ ಜೀವಂತಿಕೆ ಬರುವುದೆಂದರೆ ಮರುಭೂಮಿಯಲ್ಲಿ ಒಯಸಿಸ್ ಕಂಡಂತೆ. ಈ ಅಕ್ಷರ ಶಬ್ದಗಳ ರುಚಿ ಕಂಡವ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅದೇ ಲೋಕದಲ್ಲಿ ಜೂಜಿಗಿಳಿಯುವ ಸಾಧ್ಯತೆಗಳೇ ಹೆಚ್ಚು. ಇದರಿಂದ ತಪ್ಪಿಸಿಕೊಂಡವ ಕಡಲ ನೀರಾಗದೆ ಕುಡಿವ ನೀರಾಗುತ್ತಾನೆ. ಜ್ಞಾನದ ಕಾಡಲ್ಲಿ ಭಿಕಾರಿಯಾಗುತ್ತಾನೆ. ಹಾಗೆ ಭಿಕಾರಿಯಾವುಗು ನನಗೆ ಬಹಳ ಪ್ರಿಯವಾದುದು.

ನನ್ನೊಳಗೇ ಒಬ್ಬ ಅರವಿಂದನಿದ್ದಾನೆ. ಅವನು ನನಗಿಂತಲೂ ಸೂಕ್ಷ್ಮ, ಸ್ಥಿತ ಪ್ರಜ್ಞೆ ಯುಳ್ಳವ. ಆತ ನನ್ನನ್ನು ಅಕ್ಷರಕ್ಷರಕ್ಕೂ ವಿಮರ್ಶಿಸುತ್ತಾನೆ. ನನ್ನ ಒತ್ತು ನಿನಗಿಂತಲೂ ಹೆಚ್ಚು ಆತನಿಗೆ. ಆತನಿಗೆ ವಿರುದ್ಧವಾಗಿ ನಾನಿರಲು ಬಯಸುವುದಿಲ್ಲ. ಆತ ನನ್ನ ಕೆನ್ನೆಗೆ ಹಲವಾರು ಬಾರಿ ಹೊಡೆದಿದ್ದಾನೆ. ಮೂಡಿದ ಬರೆಗಳು ಮಾಸದೆ ಉಳಿದಿವೆ. ಕೆಲವರ ವಿಚಾರಗಳಿಗೆ ಹಲವಾರು ಬಾರಿ ಖಾರವಾಗಿ ಪ್ರತಿಕ್ರಿಯಿಸಿದ್ದರೆ ಅದು ಆತನ ಪ್ರೇರಣೆ ಯಿಂದಲೇ. ಆದರೆ ನನ್ನೊಳಗಿನ ಅರವಿಂದನನ್ನು ಮೀರಲಾಗಲಿಲ್ಲವಲ್ಲ ಎಂದು ನೀನೆಣಿಸ ಲಾರೆ ಎಂದು ನನಗೆ ಗೊತ್ತು. ಏಕೆಂದರೆ ನಿನ್ನೊಳಗಿನ ನಿನ್ನನ್ನು ಮೀರಿಸಲು ನಿನ್ನಿಂದಾಗದು ಎಂದು ನೀನರಿತಿರುವೆ ಎಂದು ನಾನು ತಿರುದಿರುವೆ.