ನಾನು ವಾಸಿಸುವುದು ರಾಯಚೂರಿನ ಮಕ್ತಲ್‌ಪೇಟೆಯಲ್ಲಿ ‘ಮಕ್ತಲ್’ ಎಂದರೆ ಉರ್ದುವಿನಲ್ಲಿ ವಧಾಸ್ಥಳ ಎಂದು ಅರ್ಥ. ನಮ್ಮ ಕೇರಿಗೆ ಈ ಹೆಸರು ಯಾಕ ಬಂತೋ ಗೊತ್ತಿಲ್ಲ. ಆದರೆ ಅಲ್ಲಿ ವಾಸಿಸುವ ತುಳಿತಕ್ಕೊಳಗಾದ, ಅಜ್ಞಾನಕ್ಕೆ ಬಲಿಯಾದ ಅಗಸರು, ಕಬ್ಬೇರರು, ಮ್ಯಾದಾರರು, ಚಮ್ಮಾರರು, ಮಾದಿಗರು, ಹಂದಿಜೋಗಿಗಳು, ದೊಂಬಿದಾಸರು, ಹಗಲು ವೇಷಗಾರರು, ಪಿಂಜಾರರು, ಕೊರವರು ತಳದ ಈ ಜನ ನಿತ್ಯ ಸತ್ತು ಸತ್ತು ಬದುಕುತ್ತಿರುವ ಪರಿಯನ್ನು ಕಂಡಾಗ ‘ಮಕ್ತಲ್’ ಎಂಬ ಹೆಸರು ಸಾರ್ಥಕವಾಯಿತೇನೋ ಎನಿಸುತ್ತದೆ.

ಇಂಥ ಸ್ಥಳದಲ್ಲಿ ನಮ್ಮಪ್ಪ ಅಗಸರ ಲಚುಮಯ್ಯ ಒಂದು ಚಿಕ್ಕ ತಟ್ಟಿ ಹೋಟೆಲು ಇಟ್ಟಿದ್ದ. ಈ ಹೋಟೆಲ್ಲಿನ ಖಾಯಂ ಗಿರಾಕಿಗಳೆಂದರೆ ಗಂಜಿನ ಹಮಾಲರು, ಬಂಡಿ ಹೊಡೆಯುವವರು, ರೈತರು, ದಲಿತರು, ಕೊರವರು, ಹಗಲುವೇಷಗಾರರು ಮುಂತಾದವರು. ನನ್ನ ತಂದೆಗೆ ಬಯಲಾಟದ ಹುಚ್ಚು. ‘ದೇವಿಕಥೆ’, ‘ಕನಕಾಂಗಿ ಕಲ್ಯಾಣ’, ‘ಸಂಗ್ಯಾ – ಬಾಳ್ಯಾ’ ಡಪ್ಪಿನಾಟಗಳಲ್ಲಿ ಬರುವ ಹೆಣ್ಣು ಪಾತ್ರಗಳನ್ನು ಮಾಡುತ್ತಿದ್ದ. ಹೆಣ್ಣುಪಾತ್ರದ ಅಭಿನಯಕ್ಕೆ ಒಂದಿಬ್ಬರು ಹೆಂಗಸರು ಮರುಳಾಗಿ ಆತನಿಗೆ ಗಂಟು ಬಿದ್ದಿದ್ದರು. ಬಯಲಾಟದ ಕುಣಿತಕ್ಕಿಂತ ಅಡ್ಡದಾರಿಗಳಲ್ಲಿ ಕುಣಿಯುವುದೇ ಜಾಸ್ತಿಯಾಗಿತ್ತು. ಹೀಗಾಗಿ ಹೋಟಲ್ಲಿನ ಕಡೆ ಆತನ ಗಮನವೇ ಇರಲಿಲ್ಲ. ಹೋಟೆಲ್ಲನ್ನು ಸಂಭಾಳಿಸೋ ಜವಾಬ್ದಾರಿ ನನ್ನ ಮತ್ತು ನಮ್ಮ ತಾತನ ಮೇಲೆ ಬಿದ್ದಿತ್ತು. ಆಗ ನಾನು ೭ನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಾಲೆ ಬಿಟ್ಟ ಕೂಡಲೆ ಹೋಟೆಲ್ಲಿಗೆ ಬಂದು ಉದ್ರಿ ಖಾತೆ ಬರೆಯೋದು; ಗಲ್ಲೆದ ಮೇಲೆ ಕೂತು ಗಿರಾಕಿ ಗಳಿಂದ ರೊಕ್ಕ ತಗೊಳ್ಳೋದು; ಸಪ್ಲೈ ಮಾಡೋದು; ಕಪ್ಪು ಬಸಿ ತೊಳೊಯೋದು ಇವೆಲ್ಲ ನನ್ನ ನಿತ್ಯದ ಕಾರ್ಯಗಳಾಗಿದ್ದವು. ಆಗಿನಿಂದಲೇ ನಾನು ಶಾಲೆಯ ಓದಿನ ಜೊತೆ ಜೀವನ ಓದುವ ಕ್ರಮವನ್ನು ರೂಢಿಸಿಕೊಂಡೆ.

ಪ್ರತಿಯೊಬ್ಬ ಲೇಖಕನನ್ನು ಬಾಲ್ಯದ ನೆನಪುಗಳು ಕಾಡುತ್ತಿರುತ್ತವೆ. ನನಗಿನ್ನೂ ನೆನಪಿಗೆ ಬರುವುದು ಬಾಲ್ಯದಲ್ಲಿ ಜರುಗಿದ ಒಂದು ಘಟನೆ. ಸ್ವಂತ ಅಂಗಿ, ಸ್ವಂತ ಅಸ್ತಿತ್ವಕ್ಕೆ ಹುಟುಕಾಟ ಮಾಡಲು ಪ್ರೇರೇಪಿಸುವ ಘಟನೆ. ನಮ್ಮ ಮನೆಯ ಕಸುಬು ಮಡಿವಾಳಿಕೆ. ನನ್ನ ತಂದೆ ಹೋಟೆಲ್ಲಿನ ವ್ಯವಹಾರ ನಡೆಸುತ್ತಿದ್ದರೂ ಮನೆಯ ಇತರ ಸದಸ್ಯರು ಅಂದರೆ ಚಿಕ್ಕಪ್ಪ; ಚಿಕ್ಕಮ್ಮ ಇಸ್ತ್ರಿ ಬಟ್ಟೆ ಮಾಡುತ್ತಿದ್ದರು. ನಮ್ಮ ಕಡೆಯ ಅಗಸರು ಎಂದೂ ಸ್ವಂತ ಬಟ್ಟೆ ಧರಿಸಿದವರಲ್ಲ. ಎಲ್ಲರೂ ಧರಿಸುವುದು ಮಂದಿಯ ಬಟ್ಟೆ. ನಾನು ಕೂಡ ಇಸ್ತ್ರೀಗೆ ಬಂದ ಮಂದಿಯ ಹಟ್ಟೆ ಧರಿಸುತ್ತಿದ್ದೆ. ‘ಪಟ್ನೇ ವಾಲೋಂಕೆ ಪಟೇ; ದೋಭಿ ಬೇಟಾ ಚಾಂದ್’ – ಯಾರ ಬಟ್ಟೆ ಹರಿದರೇನು – ಬಿಟ್ಟರೇನು ಉದ್ರಿ ಬಟ್ಟೆ ತೊಟ್ಟ ಅಗ್ಸರ ನನ್ಮಗ ಚಂದ್ರಾಮನಂತೆ ಮರೆಯುತ್ತಾನೆ ಎಂದು ಎಲ್ಲರೂ ಗೇಲಿ ಮಾಡುತ್ತಿದ್ದರು. ಹೀಗೆ ನಾನೊಮ್ಮೆ ಉದ್ರಿ ಬಟ್ಟೆ ಹಾಕಿಕೊಂಡು ಶಾಲೆಯಲ್ಲಿ ಜರುಗಿದ ೧೫ ಆಗಸ್ಟ್ ಧ್ವಜ ಆರೋಹಣ ಕಾರ್ಯಕ್ರಮಕ್ಕೆ ಹೋಗಿದ್ದೆ. ಕಾರ್ಯಕ್ರಮ ಮುಗಿದನಂತರ ವಿದ್ಯಾರ್ಥಿ ಮಿತ್ರರೊಂದಿಗೆ ಆಟದ ಮೈದಾನಕ್ಕೆ ಬಂದೆ. ಒಬ್ಬ ರೆರ್ಡೇರು ಹುಡುಗ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ. ತನ್ನ ಗೆಳೆಯರ ಜೊತೆ ಗುಸುಗುಸು ಮಾತಾಡಿಕೊಂಡು ನನ್ನ ಹತ್ತಿರ ಬಂದ. ಬಂದವನೆ ನನ್ನ ಅಂಗಿ ಹಿಡಿದು ಕಪಾಳಕ್ಕೆ ಬಾರಿಸಿದ. ‘ನನ್ನ ಬಟ್ಟೆ ಹಾಕ್ಕೊಂಡು, ಮೆರಿತಿದ್ಯಾ; ಬಿಚ್ಚಲೆ ನನ್ನ ಬಟ್ಟೆ ಅಗ್ಸರ ಲೋಡಿಮಗನೇ’ ಎಂದು ನಾನು ಹಾಕಿಕೊಂಡ ಅಂಗಿ; ಚೊಣ್ಣ ಬಿಚ್ಚಿದ. ಒಳಗೆ ಹಾಕಿಕೊಂಡ ಬನೀನು, ಚಡ್ಡಿ ಅವನದಾಗಿರಲಿಲ್ಲ ಪುಣ್ಯಕ್ಕೆ; ಆಗಿದ್ದರೆ ಅವುಗಳನ್ನು ಬಿಚ್ಚಿ ನನ್ನನ್ನು ದಿಗಂಬರಗೊಳಿಸುತ್ತಿದ್ದನೇನೋ ಪುಣ್ಯಾತ್ಮ. ಅವನು ಕೊಟ್ಟ ಏಟಿಗಿಂತ ಬಟ್ಟೆಬಿಚ್ಚಿ ಅರೆ ನಗ್ನ ಮಾಡಿದ ಅವಮಾನ ನನಗೆ ದೊಡ್ಡ ಪೆಟ್ಟಾಗಿತ್ತು. ಹುಡುಗರೆಲ್ಲಾ ಗುಂಪು ಗೂಡಿ ಚಪ್ಪಾಳೆ ಹೊಡೆದು ನಗುತ್ತಿದ್ದರು. ನಾನು ತೀರ ಅವಮಾನಗೊಂಡು ಅಳುತ್ತಾ ಹೋಗಿ ನವರಂಗ ದರವಾಜ ಕೋಟೆಯೊಳಗೆ ಅಡಗಿಕೊಂಡೆ. ಈ ವಿಷಯ ನನ್ನ ಗೆಳೆಯರು ಮನೆಯವರಿಗೆ ಮುಟ್ಟಿಸಿದಾಗ ನನ್ನ ತಾತ, ಚಿಕ್ಕಪ್ಪ ಬಂದು ನನ್ನ ಅರೆನಗ್ನ ಅವಸ್ಥೆ ನೋಡಿ ಸಿಟ್ಟಿನಿಂದ ರಂಗುರಂಗಾದರು. ‘ಯಾರು ಅವ್ನತೋರ್ಸು ಒಂದು ಕೈ ನೋಡಿ ಬುಡ್ತೀನಿ; ಏನು ತಪ್ಪು ಮಾಡ್ಯನ ನಮ್ ಹುಡುಗ, ಈ ರೀತಿ ಮಾಡಾಕ. ನಾನು ಹೇಳಿ ಕೇಳಿ ಅಗ್ಸರ ರಾಜರ ತಲೆಯ ಮೇಲಿನ ಮುಂಡಾಸನ್ನು ಸೈತೆ ಕುಂಡಿಗೆ ಸುತ್ತಿಕೊಂಡು ಹಳ್ಳದಾಗ ಬಟ್ಟೆ ಹೊತಿಗೀವಿ. ಅದು ನಮ್ಮ ರಿವಾಜು’ ಎಂದು ರೇಗಾಡಿ ನಮ್ಮ ಚಿಕ್ಕಪ್ಪ ತೋಳೇರಿಸಿದ. ಅವನ ರುದ್ರಾವತಾರ ಕಂಡು ಹುಡುಗರೆಲ್ಲಾ ಓಡಿ ಹೋದರು. ನಮ್ಮ ತಾತ, ಚಿಕ್ಕಪ್ಪ ನನ್ನ ಸಮಾಧಾನ ಪಡಿಸಿ, ಶಲ್ಯೆಯಿಂದ ಮೈಮುಚ್ಚಿ, ಮನೆಗೆ ಕರೆದು ತಂದರು. ಏಳೆಂಟು ದಿನ ನಾನು ಮನೆಬಿಟ್ಟು ಕದಲಲಿಲ್ಲ. ‘ಹೊಸ ಬಟ್ಟೆ ತರೋ ತನಕ ಶಾಲೆಗೆ ಹೋಗುವುದಿಲ್ಲ’ವೆಂದು ಪಟ್ಟು ಹಿಡಿದು ಕುಳಿತೆ. ನನ್ನ ಹಠಕ್ಕೆ ಮನಸೋತು, ತಾತ ಬಜಾರಿನಿಂದ ಎರಡು ಜೋಡಿ ಹೊಸ ಬಟ್ಟೆಕೊಂಡು ತಂದು ಉಡಿಸಿದ್ದ. ಮೊದಲ ಬಾರಿಗೆ ನನ್ನವೇ ಆದ ಹೊಸ ಬಟ್ಟೆ ಉಟ್ಟ ಸಂಭ್ರಮದಿಂದ ಮೆರೆದಾಡಿದೆ. ಆ ರೆಡ್ಡಿ ಹುಡುಗನ ಮೇಲೆ ಇಂದಿಗೂ ನನಗೆ ಮುನಿಸಿಲ್ಲ. ಯಾಕೆಂದರೆ ಉದ್ರಿ ಬಟ್ಟೆ ತೊಟ್ಟು ನನ್ನದಲ್ಲದ ಮುಖವಾಡ ಧರಿಸಿ ಪೋಜು ಕೊಡುತ್ತಿದ್ದ ನನಗೆ ನನ್ನ ಅಸಲಿರೂಪ ತೋರಿಸಿದ್ದ. ನನ್ನ ಸ್ವಂತ ಅಂಗಿ, ಸ್ವಂತ ಅಸ್ತಿತ್ವದ ಹುಡುಕಾಟಕ್ಕೆ ಪ್ರೇರೇಪಿಸಿದ್ದ. ಮುಖವಾಡಗಳನ್ನು ಕಿತ್ತೆಸೆಯಲು ಕಲಿಸಿದ್ದ.

ವ್ಯಾಕುಲಗೊಂಡ ನನ್ನ ಎಳೆಮನಸ್ಸು ಅಸ್ತವ್ಯಸ್ತಗೊಂಡ ಈ ವ್ಯವಸ್ಥೆಯ ಪ್ರವಾಹದಲ್ಲಿ ಮುಳುಗಿ ತೇಲುತ್ತಿರುವಾಗ ಈಜುವ ಆಧಾರ ಹಿಡಿದು ಹೊಸ ಶಬ್ದಗಳು ನನ್ನ ಬಳಿ ಬರುವುದು. ಆಗ ಮೌನಕ್ಕೆ ಮತು ಮೂಡುವವು. ಆ ಕಾತರ, ಆ ಹಂಬಲ ಹೆಚ್ಚಾದಂತೆ ನನ್ನ ಅಂತರಂಗದೊಳಗೆ ಕವಿತೆಗಳು ಟಿಸಿಲೊಡೆಯುವವು. ಬಾಲ್ಯದ ಅನುಭವಗಳ ಹಿನ್ನೆಲೆ ಯಲ್ಲಿ ಬಹಳಷ್ಟು ಕವನಗಳನ್ನು ಬರೆದಿರುವೆ. ‘ಪೆಟ್ರೋಮ್ಯಾಕ್ಸ್ ಹೊತ್ತ ಕೊರವರು’, ‘ಬದುಕಪ್ಪ’, ‘ಶ್ರೀ ಸಾಮಾನ್ಯರು’, ‘ಹಗಲುವೇಷಗಾರರು’, ‘ಕೆಲವು ಸವಾಲು’, ‘ಕೋಟೆ’ ಮುಂತಾದ ಕವನಗಳು ನನ್ನ ಬಾಲ್ಯದ ನೆನಪಿನಲ್ಲಿ ಅರಳಿದ ಕವನ ಕುಸುಮಗಳು, ವಿಶ್ವ ಹೃದಯದ ಗಾಯಗಳನ್ನು ದಕ್ಷಿಣ ಆಫ್ರಿಕಾ, ನಾಗಸಾಕಿ, ಹಿರೋಸಿಮಾಗಳಲ್ಲಿ ಒಂದೇ ಅಲ್ಲ, ರಾಯಚೂರಿನ ಲಡಕಾಸಿ ಗಲ್ಲಿಗಳಲ್ಲಿನ ಗಟಾರಗಳಲ್ಲಿ ಬದುಕನ್ನು ಸೋಸುತ್ತಿರುವ ಬದುಕಪ್ಪನಲ್ಲಿ, ಬಿಜಲಿ ಹೊತ್ತು ನಡೆದಾಡುತ್ತಿರುವ ಕೊರವರಲ್ಲಿ, ಜಕಳಾಂಗ ಸಭೆಗಳಲ್ಲಿ ಅಮಾಯಕ ಕೊರವ ಹೆಂಗಸರನ್ನು ವಸ್ತುವಿನಂತೆ ಮಾರಾಟ ಮಾಡುವ, ಒತ್ತೆಯಿಡುವ ಅನಿಷ್ಟ ಪದ್ಧತಿಗಳಲ್ಲಿ, ಇವುಗಳಿಂದ ಘಾಸಿಗಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊರವರ ಹೆಂಗಸಿನ ಶವದಲ್ಲಿ, ತಮ್ಮ ಭವಿಷ್ಯವೇನೆಂಬುದನ್ನು ಅರಿಯದೆ ಬೇರೆಯವರ ಭವಿಷ್ಯ ನುಡಿಯುವ ಕೊರವಂಜಿ ಗಿಳಪಂಚಾಂಗದ ಹುಡುಗರ ಮುಖಗಳಲ್ಲಿ, ಧಣಿಗಳ ಮನವೊಲಿಸಲು ವೇಷಧರಸಿ ಕುಣಿದಾಡುವ ಹಗಲುವೇಷಗಾರರಲ್ಲಿ ಈ ಗಾಯಗಳನ್ನು ಕಂಡಿವೆ. ನನ್ನ ಬೆನ್ನ ಹಿಂದಿನ ಇತಿಹಾಸ ಪರಂಪರೆಯನ್ನು ಗಮನಿಸಿರುವೆ. ವರ್ತಮಾನವನ್ನು ಗ್ರಹಿಸಿರುವೆ.

ನಾನು ಕಂಡ ಜನ ಅಕ್ಷರ ಪರಿಚಯವಿರುವ ಅಧೋಜಗತ್ತಿನ ಜನ, ಪ್ರಪಂಚವೇ ಅವರ ಪಾಠಶಾಲೆ. ಅನುಭವವೇ ಅವರು ಕಲಿತ ಪಾಠ. ಅವರ ಮುಖ ಕೆರೆದ ಪುಸ್ತಕ. ಅದನ್ನು ಓದುವುದೆಂದರೆ ಪ್ರಪಂಚವನ್ನು ಓದಿದಂತೆ ಸರಿ. ಅವರು ಮೂಲದಲ್ಲಿ ಬಾಳನ್ನು ಬಾಳುತ್ತಾರೆ. ಅದನ್ನು ಅಕ್ಷರಗಳಿಂದ ಅನುವಾದಿಸಲು ನಾವು ಹೆಣಗಾಡುತ್ತೇವೆ.

ನಾನು ಕವಿತೆ ಬರೆಯಲು ಪ್ರಾರಂಭಿಸಿದ್ದು ೭೦ರ ದಶಕದಲ್ಲಿ. ಆಗ ನವ್ಯರ ಭರ ಭರಾಟೆಯ ಕಾಲ. ವ್ಯಕ್ತಿಯ ಹತಾಶೆ ಅಸಹಾಯಕತೆ ಸಿನಿಕತನ ದ್ವಂದ್ವ ವಿಕ್ಷಿಪ್ತತೆ ಪಲಾಯನ ವಾದಿ ವಿಚಾರ ನನ್ನಲ್ಲಿ ಮನೆಮಾಡಿಕೊಂಡಿದ್ದವು. ನನ್ನ ಬರಹ ನನಗೆ ತೃಪ್ತಿತರಲಿಲ್ಲ. ಎಲ್ಲರಂತೆ ನಾನು ಓದುಗರಿಗೆ ಪೋಸುಕೊಟ್ಟು ಹುಸಿ ಆದರ್ಶವಾದಿಯಾಗುತ್ತಿದ್ದೇನೆ ಎನಿಸತೊಡಗಿತು. ೧೦ – ೧೫ ವರ್ಷಗಳವರೆಗೆ ಏನನ್ನು ಬರೆಯದೆ ಮೌನವಹಿಸಿದೆ. ಅಧ್ಯಯನಕ್ಕೆ ತೊಡಗಿಕೊಂಡೆ. ಇದೇ ಸಮಯದಲ್ಲಿ ಡಿಎಸ್‌ಎಸ್ ಸಂಘಟನೆ ಜೊತೆ ನನ್ನ ಸಂಬಂಧ ಬೆಳೆಯಿತು. ನನ್ನ ವಿಚಾರಗಳು ಬದಲಾಗತೊಡಗಿದವು. ರಾಯಚೂರಿನ ಸಮುದಾಯದವರು ಪ್ರಯೋಗಿಸಿದ ಹೊಸ ಅಲೆಯ ನಾಟಕಗಳು; ಆಂಧ್ರದ ದಿಗಂಬರ ವಿಪ್ಲವ ಸಾಹಿತ್ಯ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಹಿಂದಿಯ ಮುಕ್ತಭೋದ, ತೆಲುಗಿನ ಶ್ರೀ ಶ್ರೀ ಚೆರಬಂಡರಾಜು, ಗದ್ದರ್, ಚಿಲಿದೇಶದ ಪಾಬ್ಲೋ ನೆರೂಡ ನನ್ನ ನೆಚ್ಚಿನ ಕವಿಗಳಾದರು. ಮಾರ್ಕ್ಸ್ ಅಂಬೇಡ್ಕರರ ಕೃತಿಗಳನ್ನು ಅಭ್ಯಸಿಸಿದೆ. ಕನ್ನಡದ ಹೊಸ ತಲಮಾರಿನ ಲೇಖಕರಾದ ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಚಂಪಾ, ಬರಗೂರು ರಾಮಚಂದ್ರಪ್ಪ. ಚೆನ್ನಣ್ಣ ವಾಲೀಕಾರ, ಕಾಳೇಗೌಡ ನಾಗವಾರ, ಅಲ್ಲಮಪ್ರಭು ಮುಂತಾದ ವರ ನಿಕಟ ಪರಿಚಯದಿಂದ ಹೊಸ ವಿಚಾರಗಳು ಮೂಡಿದವು. ದಲಿತ ನಾಯಕರಾದ ಬಿ. ಕೃಷ್ಣಪ್ಪ, ಬೋಳಬಂಡೆಪ್ಪ, ವಾಲೀಕಾರ ಇವರ ಜೊತೆಯಲ್ಲಿ ಕೂಡಿ ಕೊಂಡು ಡಿಎಸ್‌ಎಸ್ ಸಂಘಟನೆಯನ್ನು ಹುಟ್ಟುಹಾಕುವ ಹಿನ್ನೆಲೆಯಲ್ಲಿ ಊರು ಕೇರಿ, ಹಳ್ಳಿಗಳನ್ನು ಸುತ್ತಾಡಿದೆ. ಅರೋಲಿ ಹುಲಿಗೆಮ್ಮನ ಜಾತ್ರೆಯಲ್ಲಿ ಜರುಗುವ ಬೆತ್ತಲೆ ಸೇವೆ, ಜಾಲಿಬೆಂಚಿಯ ದಲಿತರಿಗೆ ನಿವೇಶನ ಹಂಚಿಕೆ ಪ್ರಕರಣ. ಮೆದಿಕನಾಳ ಭೂ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ, ದಲಿತರ ಕುಂದು ಕೊರತೆಗಳನ್ನು ಅರಿಯಲು, ಅವರಲ್ಲಿ ಹೋರಾಟದ ಮನೋಭಾವ ಬೆಳೆಸಲು ಗೆಳೆಯ ದಿ. ಬೋಳಬಂಡೆಪ್ಪ, ಬಾಬು, ಕರಿಯಪ್ಪ ಮಾಸ್ತರ ಇನ್ನಿತರ ಗೆಳೆಯರ ಜೊತೆ ಕೂಡಿಕೊಂಡು ಹಳ್ಳಿಗಳನ್ನು ಸುತ್ತಿದೆವು. ಹೋರಾಟದ ಗೀತೆಗಳನ್ನು ರಚಿಸಿ, ಜಾನಪದ ಬಾಣಗಳಲ್ಲಿ ರಾಗ ಸಂಯೋಜನೆ ಮಾಡಿ ದಲಿತರ ವೇದನೆಗಳನ್ನು ಅವರ ಭಾಷೆಯಲ್ಲಿ ಪ್ರಸ್ತುತಪಡಿಸುವ ಹಿನ್ನೆಲೆಯಲ್ಲಿ ದಲಿತ ಕಲಾಮಂಡಳಿಯನ್ನು ಹುಟ್ಟು ಹಾಕಲಾಯಿತು. ದಲಿತ ಕಲಾಮಂಡಳಿ ಮೂಲಕ ದಲಿತ ಜಗತ್ತಿನ ಹೊಸ ಯುವ ಗಾಯಕರನ್ನು, ಕವಿಗಳನ್ನು ಪರಿಚಯಿಸಲಾಯಿತು. ೮೦ರ ದಶಕದಲ್ಲಿ ರಾಯಚೂರಿನಲ್ಲಿ ಬಂಡಾಯ ದಲಿತ ಚಳುವಳಿಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಆಂದೋಲನ ಪ್ರಾರಂಭವಾಯಿತು. ಇದೇ ಸಮಯದಲ್ಲಿ ನಾನು ನವ್ಯದ ತಾತ್ವಿಕತೆಯಿಂದ ಬಿಡಿಸಿಕೊಂಡು ಪ್ರಗತಿಪರ ವಿಚಾರಗಳ ಕಡೆಗೆ ವಾಲಿದೆ. ಮನಸ್ಸಿಗೆ ಮಂಕು ಕವಿಸುವ, ಜೀವನಾಸಕ್ತಿಯಿಲ್ಲದ ಬರಹಗಳು ನಿಂತು ಹೋದವು. ನನ್ನ ಸುತ್ತ ಸುತ್ತಿಕೊಂಡ ಬದುಕಿನಲ್ಲಿ ಇತರರ ನೋವು ನಲಿವುಗಳು ಮುಖ್ಯ ಸಂಗತಿ ಎಂಬ ವಿಶಾಲತೆಗೆ ಬೆಳೆದಂತೆ ನನ್ನ ರಚನೆಗಳ ಸ್ವರೂಪವೇ ಬೇರೆಯಾಯಿತು. ೮೦ರ ದಶಕದಲ್ಲಿ ಮೊದಲ ಬಾರಿಗೆ ಉಪಸಂಸ್ಕೃತಿಗಳ ನೆಲೆಯಿಂದ ಬುಡಕಟ್ಟು ಜನಾಂಗದ ಬದುಕನ್ನು ಸಮಗ್ರವಾಗಿ ಗ್ರಹಿಸುವ, ಎಳೆಎಳೆಯಾಗಿ ಬಿಡಿಸುವ ಒಂದು ಪ್ರಯತ್ನ ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಕಾದಂಬರಿಯಲ್ಲಿ ಮೂಡಿಬಂದಿದೆ. ಜಾತಿ, ವರ್ಗ, ಲಿಂಗ ಭೇದಗಳ ಆಧಾರದ ಮೇಲೆ ಸಹಸ್ರಾರು ವರ್ಷಗಳಿಂದ ಶೋಷಣೆ ಸಹಿಸುತ್ತಾ ಬಂದ ದಲಿತ ಜಗತ್ತಿನ ಚಿತ್ರಣ ಈ ಕಾದಂಬರಿ ಒಳಗೊಂಡಿದೆ.

ಕವಿಯ ಮುಖ್ಯಕರ್ತವ್ಯವೆಂದರೆ, ಸತ್ಯವನ್ನು ಜಗತ್ತಿಗೆ ಸಾರುವುದು. ದಂತಕತೆಯಲ್ಲಿ ಬರುವ ಮಗುವಿನಂತೆ ‘ರಾಜ ಬೆತ್ತಲೆ ಇದ್ದಾನೆ’ ಎಂಬ ನಗ್ನಸತ್ಯವನ್ನು ಜಗತ್ತಿಗೆ ಮತ್ತೆ ಮತ್ತೆ ಕೂಗಿ ಹೇಳುವುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಲೇಖಕ ಸದಾಕಾಲ ಬೇಟೆಯ ಜೊತೆಗಿರುತ್ತಾನೆ, ಬೇಟೆಗಾರನ ಜೊತೆಯಲ್ಲ, ವರ್ಗ, ವರ್ಣ, ಜಾತಿ, ಧರ್ಮ, ರಾಷ್ಟ್ರೀಯತೆ, ಲಿಂಗಭೇದಗಳಿಂದಾಗಿ ವೃದ್ದಿಸುತ್ತಿರುವ ಶೋಷಣೆ ಮತ್ತು ಮಾನವ ಜಾತಿಯನ್ನು ವಿನಾಶದತ್ತ ನೂಕುತ್ತಿರುವ ಯುದ್ಧದ ಕರಾಳ ಛಾಯೆಗಳು ಆವರಿಸಿದಂತೆ ಮನಗಳಲ್ಲಿ ಪಾಪ, ವಿಚಾರಧಾರೆಯಲ್ಲಿ ಅಂಧಕಾರ, ರಸ್ತೆಯ ಮೇಲೆ ನೆತ್ತರು, ನನ್ನ ನಾಡಿನಲ್ಲಿ ನಾನು ನೋಡುತ್ತಿ ರುವೆ. ನೇತೃತ್ವದ ಧೋರಣೆ ಇವೆಲ್ಲವುಗಳನ್ನೊಳಗೊಂಡು ಸೃಷ್ಟಿಗೊಂಡ ಅತ್ಯಾಚಾರದ ವಿಶಾಲ ಮೂರ್ತಿಯ ಎದುರು ನಮ್ಮ ಕ್ರೋಧ ನತಮಸ್ತಕವಾಗಿ ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಿರುವಾಗ ನನ್ನೆದುರುನಿಂತ ಬೃಹದಾಕಾರದ ಪ್ರಶ್ನೆಗಳಿಗೆ ಸಿದ್ಧಪಡಿಸಿದ ಉತ್ತರಗಳು ಸಿಗದೆ, ಡೈಲಾಗ್ ಮರೆತ ನಟನಂತೆ ನಾನು ಪೇಚಿಗೆ ಸಿಕ್ಕಿಹಾಕಿಕೊಳ್ಳುತ್ತೇನೆ. ಆದರೂ ಇವೆಲ್ಲವುಗಳ ಬಗ್ಗೆ ಎಚ್ಚರ ವಹಿಸುವ ವೈಚಾರಿಕ ಪ್ರಜ್ಞೆ ನನ್ನಲ್ಲಿ ಮನೆಮಾಡಿಕೊಂಡ ಪ್ರಯುಕ್ತ, ನಾನು ಪ್ರಶ್ನೆಯ ಪ್ರಶ್ನೆಯಾಗಿ ಉಳಿಯದೆ ಉತ್ತರದ ಅಂಶವಾಗಿ ಕಾಣಿಸಿಕೊಳ್ಳು ತ್ತೇನೆ. ನಾನು ಪೀಡೆಯನ್ನು ಅನುಭವಿಸಿದರೂ ಭವಿಷ್ಯದ ಮೇಲೆ ಆಶೆಯಿಟ್ಟುಕೊಂಡಿರು ವವನು. ಅನ್ಯಾಯ ನೋಡುತ್ತೇನೆ, ಮತ್ತೆ ಉತ್ತಮ ಮಾನವೀಯ ವ್ಯವಸ್ಥೆಗಾಗಿ ಕೂಗಿ ಕೊಳ್ಳುತ್ತೇನೆ.