ಈ ವಿಷಯವಾಗಿ ಲೇಖನ ಬರೆಯಬೇಕೆಂದು ಬಂದ ಕರೆಯನ್ನು ಒಪ್ಪಿಕೊಂಡದ್ದಾಯಿತು. ಆದರೆ ಇಂಥ ಲೇಖನವನ್ನು ಬರೆಯುವಾಗ ‘ನಾನು’ ಎಂಬ ಪದವನ್ನು ಅನೇಕ ಸಾರಿ ಉಪಯೋಗಿಸಬೇಕಾಗಿ ಬರುತ್ತದೆ. ಇದು ನನಗೂ ಹಿತವಲ್ಲ, ಓದುಗರಿಗೂ ಹಿತವಲ್ಲ, ಆದರೆ ಇಂಥ ಲೇಖನದಲ್ಲಿ ಅನಿವಾರ್ಯ. ಇದಕ್ಕಾಗಿ ಮೊದಲೇ ಕ್ಷಮೆ ಬೇಡುತ್ತೇನೆ. ಸಾಮಾನ್ಯವಾಗಿ ‘ಲೇಖಕ’ ಎಂದು ಕರೆದುಕೊಳ್ಳುವುದಕ್ಕೆ ನನಗೆ ಸ್ವಲ್ಪ ಹಿಂಜರಿಕೆ. ಇದು ನಮ್ರತೆಯ ಮಾತಲ್ಲ ದೇವರು ಜಂಭವನ್ನು ಹಂಚಿಕೊಡುತ್ತಿದ್ದಾಗ ನಾನೂ ಕೈನೀಡಿ ನನ್ನ ಪಾಲಿನ ತುತ್ತನ್ನು ಹಾಸಿಕಿಕೊಂಡಿದ್ದೇನೆ. ವಾಸ್ತವವಾಗಿಯೂ ನನಗೆ ಈ ವಿಷಯದಲ್ಲಿ ಸಂದೇಹ. ಏಕೆಂದರೆ ದಿನವೂ ಕುಳಿತು ಏನಾದರೂ ಸ್ವಲ್ಪ ಬರೆಯಬೇಕು, ಪುಸ್ತಕಗಳ್ನು ಪ್ರಕಟಿಸಬೇಕು, ಎಂಬ ಹುಮ್ಮಸ್ಸು ನನ್ನಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಯಾವುದಾದರೂ ಪತ್ರಿಕೆಗೆ ಲೇಖನ ಕೊಡಬೇಕೆಂದು ಕರೆ ಬಂದಾಗ, ವಿಶ್ವವಿದ್ಯಾನಿಲಯ ದವರೋ ಯಾರಾದರೂ ಪ್ರಕಾಶಕರೋ ಇಂಥದೊಂದು ಪುಸ್ತಕವನ್ನು ಬರಿ ಎಂದಾಗ, ಅಥವಾ ಏಕೆ ಬರೆಯಬಾರದು ಎಂದು ಸೂಚನೆ ಕೊಟ್ಟಾಗ, ಆಕಾಶವಾಣಿಗಾಗಿ ಒಂದು ಭಾಷಣವನ್ನು ತಯಾರು ಮಾಡ ಬೇಕಾಗಿ ಬಂದಾಗ ಲೇಖನಿಯನ್ನು ಹಿಡಿದು ‘ಈ ವಿಷಯದಲ್ಲಿ ಏನು ಹೇಳಬಹುದಪ್ಪ’ ಎಂದು ತಲೆ ಕರೆದುಕೊಳ್ಳುತ್ತಾ ಮೇಜಿನ ಮುಂದೆ ಕೂರುತ್ತೇನೆ. ಅಷ್ಟೇ ಹೊರತು ವಸಂತದಲ್ಲಿ ಕೋಗಿಲೆ ಹಾಡುವಂತೆ ಅಪ್ರಯತ್ನತಃ ಅದಮ್ಯವಾದ ಪ್ರೇರಣೆಯಿಂದ ಹಾಡುವುದಲ್ಲ, ನನ್ನ ಸ್ವಭಾವ. ಹಾಗಿದ್ದಿದ್ದರೆ ನಾನು ಕವಿಯಾಗುತ್ತಿದ್ದೆನೇನೋ. ಕವಿತೆಗಳನ್ನು ಬರೆಯುವ ಪ್ರಯತ್ನ ವನ್ನು ನಾನು ಮಾಡಿಯೇ ಇಲ್ಲವೆಂದಲ್ಲ, ಮಾಡಿದೆ. ಆದರೆ ಹಾಗೆ ಬರೆದ ಕವಿತೆಗಳನ್ನು ನೋಡಿ ನನ್ನೊಳಗೆ ಅವಿತಿದ್ದ ವಿಮರ್ಶಕ ತಲೆ ಅಲ್ಲಾಡಿಸಿದ. ಪದ್ಯ ಬರೆಯುವುದನ್ನು ಅಲ್ಲಿಗೇ ನಿಲ್ಲಿಸಿದೆ. ನಾನು ಬರೆದ ಕವಿತೆಗಳನ್ನು ಕಂಡಿರುವವರು ಇಬ್ಬರೇ ಇಬ್ಬರು. ನಾನೇ ಒಬ್ಬ, ಅಗ್ನಿ ಮತ್ತೊಬ್ಬ. ಇತರ ಬಗೆಯ ಲೇಖನಗಳನ್ನು ಬರೆದದ್ದಕ್ಕೆ ನನಗೆ ಮನ್ನಣೆ ಸಲ್ಲಬೇಕೋ ಇಲ್ಲವೋ ಕಾಣೆ, ಪದ್ಯ ಕವಿತೆಗಳನ್ನು ಬರೆಯದಿರುವುದಕ್ಕೂ ಮೊದಲು ಬರೆದದ್ದನ್ನು ಪ್ರಕಟಿಸದಿದ್ದಕ್ಕೂ ಮನ್ನಣೆ ಸಲ್ಲಲೇಬೇಕು.

ಅದೆಲ್ಲಾ ಸರಿ, ಪತ್ರಿಕಾ ಸಂಪಾದಕರಾಗಲಿ ಆಕಾಶವಾಣಿಯವರಾಗಲಿ ಲೇಖನ ಕೊಡಿ ಎನ್ನಬೇಕಾದರೆ ಅದಕ್ಕಿಂತ ಮುಂಚೆ ನಾನು ಏನಾದರೂ ಬರೆದಿರಬೇಕಷ್ಟೆ. ಮೊದಲನೆಯ ಬರವಣಿಗೆ ಹೇಗೆ ಹೊರಬಂತು? ಮೊದಲ ಬರಹವನ್ನು ಪ್ರಕಟಿಸಬೇಕಾದ ಒಂದು ಉಪಾಯ ವಿದೆ. ನೀವೇ ಒಂದು ಪತ್ರಿಕೆಯ ಸಂಪಾದಕರಾಗಿ ಅದರಲ್ಲಿ ನಿಮ್ಮ ಲೇಖನವನ್ನು ಪ್ರಕಟಿಸಿ ಕೊಳ್ಳಿ. ನನಗೆ ಇಂಥ ಸುಸಂಧಿ ತಾನಾಗಿಯೇ ಒದಗಿಬಂತು. ನಾನು ಮೈಸೂರು ವಿಶ್ವ ವಿದ್ಯಾಲಯ ಸಂಘದ ಅಧ್ಯಾಪಕ ಕಾರ್ಯದರ್ಶಿಯಾಗಿದ್ದಾಗ ಸಂಘದ ಪತ್ರಿಕೆಯನ್ನು ಸಂಪಾದಿಸುವ ಕೆಲಸವನ್ನು ನನ್ನ ಮೇಲೆ ಹೊರಿಸಿದ್ದರು. ಇತರರಿಂದ ಸಾಕಾದಷ್ಟು ಲೇಕನಗಳು ಬರುತ್ತವೋ ಇಲ್ಲವೋ, ಸಮಯಕ್ಕೆ ಇರಲಿ ಎಂದುಕೊಂಡು ನಾನು ಮಾರ್ಕ್‌ಟ್ಟೆಯ್ನನ ಪುಸ್ತಕವೊಂದರಿಂದ ಒಂದು ಭಾಗವನ್ನು ಆಯ್ದ ಭಾಷಾಂತರಿಸಿ ಅದಕ್ಕೆ ‘ನಮ್ಮ ಮಾರ್ಗ ದರ್ಶಿ’ ಎಂಬ ಶೀರ್ಷಿಕೆಯನ್ನು ಕೊಟ್ಟೆ. ಆದರೆ ಅದನ್ನು ನನ್ನ ಹೆಸರಿನಲ್ಲೇ ಪ್ರಕಟಿಸುವ ಧೈರ್ಯವಿರಲಿಲ್ಲ. ಏಕೆಂದರೆ ನಾನು ಕಾಲೇಜಿನಲ್ಲಿ ಕನ್ನಡ ಓದಿದವನಲ್ಲ, ಅದರಲ್ಲಿ ನಪಾಸಾದೇನೆಂಬ ಭಯದಿಂದ ಫ್ರೆಂಚ್ ತೆಗೆದುಕೊಂಡ ಹೇಡಿ. ಆದ್ದರಿಂದ ಆ ಲೇಖನಕ್ಕೆ ನನ್ನ ಹೆಸರನ್ನು ಹಾಕಲು ಹೆದರಿ, ನನ್ನ ವಿಷಯದಲ್ಲಿ ಅನ್ವರ್ಥವೆನ್ನಬಹುದಾದ ‘ವಾಮನ’ ಎಂಬ ಹೆಸರು ಹಾಕಿದೆ.

ಆದರೆ ನಾನು ಬರೆದದ್ದರ ಯೋಗ್ಯತೆಯೇನು ಎಂಬುದನ್ನು ತಿಳಿಯುವ ಕುತೂಹಲವಿತ್ತು. ಒಂದು ವೇಳೆ ನನ್ನ ಕನ್ನಡ ಚೆನ್ನಾಗಿಯೇ ಇದ್ದರೆ! ಹೊಗಳಿಕೆಯ ಮಾತನ್ನು ಕೇಳಬೇಕೆಂಬ ಹಂಬಲ ಯಾರನ್ನೂ ಬಿಟ್ಟದ್ದಲ್ಲ. ಇದಕ್ಕೋಸ್ಕರ ಒಂದು ಉಪಾಯ ಮಾಡಿದೆ. ನನ್ನ ಮಿತ್ರ ತೀ.ನಂ.ಶ್ರೀಕಂಠಯ್ಯನವರಲ್ಲಿಗೆ ಹೋಗಿ “ನೋಡಿ, ನನಗೆ ಕನ್ನಡ ಬರದು. ಯೂನಿ ಯನ್ ಪತ್ರಿಕೆಗಾಗಿ ಬಂದ ಕನ್ನಡ ಲೇಖನಗಳನ್ನೆಲ್ಲ ನೀವು ನೋಡಿ ಪ್ರಕಟನೆಗೆ ಅರ್ಹವಾದು ದನ್ನು ಆಯ್ದು ಕೊಡಿ” ಎಂದು ಬೇಡಿದೆ. ಮಾರನೆಯ ದಿನ ಕಾಮನ್ ರೂಮ್‌ನಲ್ಲಿ ಸೇರಿದಾಗ ಅವರು “ಈ ‘ನಮ್ಮ ಮಾರ್ಗದರ್ಶಿ’ ಅನ್ನೋ ಲೇಖನ ಬರೆದಿದಾನಲ್ಲ, ವಾಮನ ಅನ್ನೋ ಹುಡುಗ, ಅವನು ಯಾರು ಅಂತ ಸ್ವಲ್ಪ ಪತ್ತೆ ಮಾಡುತ್ತೀರ? ಅವನಿಗೆ ಹೇಳಿ, ನನ್ನ ಬಂದು ನೋಡಲಿ ಅಂತ” ಅಂದದ್ದಲ್ಲದೆ ಆ ಲೇಖನದ ವಿಷಯ ಒಳ್ಳೆಯ ಮಾತುಗಳನ್ನಾಡಿದರು. ನಾನು ಕೂತಿದ್ದವನು ಎದ್ದು ನಿಂತು ನಾಟಕೀಯವಾಗಿ ಬೆನ್ನು ಬಗ್ಗಿಸಿ ನಮಸ್ಕಾರ ಮಾಡಿ ಕೈಮುಗಿದು, ‘ಏನು ಸಾರ್, ಹೇಳಿ ಕಳಿಸಿದರಂತೆ? ಮೂರ್ತಿರಾಯರು ಹೇಳಿದರು, ತಮ್ಮನ್ನು ನೋಡು ಅಂತ’, ಅಂದೆ, ಅವರು ನಕ್ಕು ‘ಹೀಗೆ ಮಾಡಿದರೆ ಕಷ್ಟವಪ್ಪ. ಸ್ನೇಹಕ್ಕೆ ಭಂಗಬರ ಬಹುದು. ಬರವಣಿಗೆ ಅಸಹ್ಯವಾಗಿದೆ ಅಂತ ನಾನು ಬಯ್ದಿದ್ದರೇನು ಗತಿ! ಆಗೇನು ಮಾಡುತ್ತಿ ದ್ದಿರಿ?’ ಎಂದರು. ‘ಹೊಗಳಿಕೆಯನ್ನು ನುಂಗಿದ ಹಾಗೇ ಅದನ್ನೂ ನುಂಗುತ್ತಿದ್ದೆ. ಆದರೆ ಲೇಖನ ನಾನು ಬರೆದದ್ದು ಅಂತ ಹೇಳುತ್ತಿರಲಿಲ್ಲ’ ಎಂದು ಉತ್ತರ ಕೊಟ್ಟೆ. ಇದೇ ಲೇಖಕ ನಾಗಿ ನನ್ನ ಮೊದಲನೆಯ ಅನುಭವ ಬಹಳ ಹಿತವಾದ ಅನುಭವ. ಏಕೆಂದರೆ ಅದುವರೆಗೆ ಸಾಧಾರಣ ಸ್ನೇಹಿತರಾಗಿದ್ದ ಶ್ರೀಕಂಠಯ್ಯನವರು ಅಂದಿನಿಂದಾಚೆಗೆ ಅತ್ಯಂತ ಪ್ರಿಯರಾದ ಸ್ನೇಹಿತರಾದರು. ಆ ಸ್ನೇಹದ ನೆನಪು ಇಂದಿಗೂ ಆನಂದ ಕೊಡುತ್ತಿದೆ.

ಸುಮಾರು ಅದೇ ಕಾಲದಲ್ಲಿ, ನನ್ನ ಸಹಪಾಠಿಗಳೂ ಮಿತ್ರರೂ ಆಗಿದ್ದ ಬಿ. ಚಂದ್ರಶೇಖ ರಯ್ಯನವರು (ಶ್ರೀ ಬಿ.ಸಿ. ರಾಮಚಂದ್ರಶರ್ಮರ ತಂದೆ) ‘ಪ್ರಬೋಧಕ’ ಎಂಬ ಮಾಸಪತ್ರಿಕೆ ಯನ್ನು ಹೊರಡಿಸುವ ಉದ್ಯಮವನ್ನು ಕೈಗೊಂಡರು. ಅವರು ಇದ್ದದ್ದು ಬೊಂಬಾಯಿಯಲ್ಲಿ, ಪತ್ರಿಕೆ ಅಚ್ಚಾಗಬೇಕಾಗಿದ್ದದ್ದು ಮೈಸೂರಿನಲ್ಲಿ. ಆದ್ದರಿಂದ ಅದರ ಕೆಲಸದಲ್ಲಿ ಗಣನೀಯ ವಾದ ಭಾಗ ನನ್ನ ತಲೆಯ ಮೇಲೆ ಬಿತ್ತು. ಕರಡು ಪ್ರತಿಗಳನ್ನು ತಿದ್ದುವ ಕೆಲಸ ಮಾತ್ರವಲ್ಲದೆ ಅದಕ್ಕೆ ಲೇಖನಗಳ ಕೊರತೆ ಬಂದಾಗ ಏನಾದರೂ ಬರೆದು ಹಾಕುವುದು ಹೆಚ್ಚು ಕಡಿಮೆ ನನ್ನ ಕರ್ತವ್ಯವಾಯಿತು. ‘ಹೂವುಗಳು’ ಎಂಬ ಪ್ರಬಂಧ ಅದಕ್ಕಾಗಿ ಬರೆದದ್ದು, ಮೋಲಿಯೇರ್‌ನ ‘ತಾರ್ತುಫ್’ ನಾಟಕದ ರೂಪಾಂತರವನ್ನು ಕೈಗೊಂಡದ್ದೂ ಅದಕ್ಕಾಗಿಯೇ. ಈ ರೂಪಾಂತರದ ಕೆಲಸ ನಡೆಯುತ್ತಿದ್ದಾಗ ಏನೇನೂ ಹಿತವಾಗಲಿಲ್ಲ. ಹಾಗೂ ಹೀಗೂ ಮೊದಲನೆಯ ದೃಶ್ಯವನ್ನು ಬರೆದೆ. ಒಂದು ದಿನ ಮಧ್ಯಾಹ್ನ ಯೂನಿಯನ್‌ನ ಕಾರ್ಯ ದರ್ಶಿಯ ಕೊಠಡಿಯಲ್ಲಿ ಕೂತು ಎರಡನೆಯ ದೃಶ್ಯವನ್ನು ಆರಂಭಿಸಿದೆ. ಎರಡು ಮೂರು ಪುಟ ಮುಗಿದ ನಂತರ ಬರೆದದ್ದರ ಮೇಲೆ ಒಂದು ಸಾರಿ ಕಣ್ಣು ಹಾಯಿಸಿದಾಗ ಅದೆಲ್ಲ ತೀರ ನೀರಸವಾಗಿ ಕಂಡಿತು. ‘ಇಂಥ ಕೆಲಸವನ್ನು ಏಕೆ ಮುಂದುವರಿಸಬೇಕು ! ನನಗೆ ಹೇಳಿದ್ದಲ್ಲ, ಬರವಣಿಗೆ!’ ಎಂದು ನನ್ನ ವಿಷಯದಲ್ಲೇ ಬೇಸರಗೊಂಡು ಬೈಗಳ ಮೇಲೆ ತಲೆಯನ್ನು ಹೊತ್ತು ಕುಳಿತಿದ್ದೆ. ಆಗ ಯಾವ ಕೆಲಸಕ್ಕೋ ಯೂನಿಯನ್‌ಗೆ ಬಂದಿದ್ದ ಪ್ರೊ. ವೆಂಕಣ್ಣಯ್ಯನವರು ನನ್ನನ್ನು ಕಂಡು ಒಳಗೆ ಬಂದು ‘ಏನ್ರಿ, ಪ್ರಪಂಚದ ಹೊರೇನೆಲ್ಲ ಹೊತ್ತವರ ಹಾಗೆ ಕೂತಿದೀರಿ?’ ಎಂದರು. ಆಮೇಲೆ ನನ್ನ ಮುಂದಿದ್ದ ಕಾಗದವನ್ನು ನೋಡಿ ಎಡ ಅಂಚಿನ ಬಳಿ ವಿಂಗಡವಾಗಿ ಪಾತ್ರದ ಹೆಸರು, ಅದರ ಮಗ್ಗುಲಲ್ಲಿ ಬರವಣಿಗೆ ಇದ್ದದ್ದ ರಿಂದ ಅದು ನಾಟಕವೆಂದು ಸ್ಪಷ್ಟವಾಗುತ್ತಿತ್ತು ‘ಏನು, ನಾಟಕ ಬರೀತಿರೋ ಹಾಗಿದೆ’ ಎಂದರು. ‘ಬಿಡಿ ಸಾರ್, ನಾನೇನು ಬರೆದೇನು! ಕೈಲಿ ಹರಿಯದ ಕೆಲಸ ಪ್ರಾರಂಭಿಸಿದೆ. ಈಗ ಬುದ್ದಿ ಕಲಿತುಕೊಂಡು ನಿಲ್ಲಿಸಿದ್ದೇನೆ’ ಎಂದು ನನ್ನ ಪ್ರಯತ್ನದ ವಿಷಯ ಹೇಳಿದೆ. ವೆಂಕಣ್ಣಯ್ಯನವರು ಆ ಪುಟವನ್ನು ಓದಿದರು. ಆಮೇಲೆ ಹಿಂದಿನ ನಾಲ್ಕಾರು ಪುಟಗಳನ್ನು ಓದಿದರು. ಅನಂತರ, ‘ನಿಮ್ಮ ಕೈಲಿ ಸಾಹಿತ್ಯ ಹೇಳಿಸಿಕೊಳ್ಳುವ ವಿದ್ಯಾರ್ಥಿಗಳು ಕೆಟ್ಟರು’ ಎಂದರು. ಮಾತು ಖಂಡನೆಯಂತಿದ್ದರೂ ಅವರ ಮುಖಭಾವವೂ ನಗೆಯೂ ಆದರವನ್ನು ಸೂಚಿಸುತ್ತಿದ್ದವು. ಮುಂದಿನ ಮಾತು ಅದನ್ನು ಸ್ಪಷ್ಟಪಡಿಸಿತು. ‘ಚೆನ್ನಾಗಿರೋದನ್ನ ಚೆನ್ನಾಗಿದೆ ಅಂತ ಗುರುತಿಸೋಕಾಗಿದೆ ಇದ್ದ ಮೇಲೆ ನೀವೇನು ಸಾಹಿತ್ಯ ಹೇಳಿಕೊಟ್ಟೀರಿ? ಬರವಣಿಗೆ ಲಕ್ಷಣವಾಗಿ ಬಂದಿದೆ, ಬಿಟ್ಟು ಕೂತಿದಾನೆ, ಮನುಷ್ಯ! ಬರೀರಿ, ಬರೀರಿ!’ ಅಪ್ರತಿಭನಾಗಿದ್ದ ನನಗೆ ಮತ್ತೆ ಮೈಯಲ್ಲಿ ರಕ್ತ ಪ್ರವಹಿಸಲಾರಂಭಿಸಿತು. ಆದರೂ, ಈ ವೆಂಕಣ್ಣಯ್ಯನವರು ಯಾರ ಮನಸ್ಸನ್ನೂ ನೋಯಿಸುವವರಲ್ಲ, ಇದು ಕೇವಲ ಉಪಚಾರದ ಮಾತು, ಎಂಬ ಸಂದೇಹವಿದ್ದೇ ಇತ್ತು. “ಮುಗಿದ ಮೇಲೆ ಇದನ್ನು ಪ್ರಬುದ್ಧ ಕರ್ಣಾಟಕಕ್ಕೆ ನೋಡಿ” ಎಂದ ಮೇಲೆ ಧೈರ್ಯಬಂತು. ‘ಆಷಾಢಭೂತಿ’ ಪ್ರಕಟವಾದದ್ದು ಪ್ರಬುದ್ಧ ಕರ್ಣಾಟಕ ದಲ್ಲಲ್ಲ, ಪ್ರಬೋಧಕದಲ್ಲಿ. ಆದರೆ ವೆಂಕಣ್ಣಯ್ಯನವರ ಮನೆಯಲ್ಲಿ ಕೆಲವು ಸ್ನೇಹಿತರ ಮುಂದೆ ಓದಿದ್ದೂ ಅವರ ಆದರದ ಮಾತುಗಳೂ ನೆನಪಿನಲ್ಲಿವೆ.

ವೆಂಕಣ್ಣಯ್ಯನವರ, ತೀ.ನಂ.ಶ್ರೀಯವರ ಮತ್ತು ನನ್ನ ಮಿತ್ರರೂ ಸಹೋದ್ಯೋಗಿಗಳೂ ಪ್ರಖ್ಯಾತ ನಟರೂ ಆದ ಎನ್.ಎಸ್.ನಾರಾಯಣಶಾಸ್ತ್ರಿಗಳ ಸಲಹೆಯಿಂದಾಗಿ ‘ಆಷಾಢ ಭೂತಿ’ಯನ್ನು ಕರ್ಣಾಟಕ ಸಂಘದ ವಾರ್ಷಿಕೋತ್ಸವದ ದಿನ, ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಆಡಿದರು. ನಾಟಕ ಯಶಸ್ವಿಯಾಯಿತು. ಇದು ನನ್ನನ್ನು ಹೊಗಳಿಕೊಳ್ಳುವ ಮಾತಲ್ಲ, ಪಾತ್ರ ವಹಿಸಿದ ನಟರಿಗೆ ಎನ್.ಎಸ್.ಎನ್.ಶಾಸ್ತ್ರಿ, ವಿ.ಕೆ. ಶ್ರೀನಿವಾಸನ್, ಬಿ. ಕೃಷ್ಣಮೂರ್ತಿ, ಎ.ಸಿ.ನರಸಿಂಹಮೂರ್ತಿ, ಸಿ.ಬಿ. ಜಯರಾಮ್, ಎ.ಎಮ್. ನಟೇಶ್, ಎಂ.ಆರ್. ನಾರಾಯಣಸ್ವಾಮಿ ಮೊದಲಾದ ಅಪ್ರತಿಮ ನಟರಿಗೆ ಸಲ್ಲಿಸಲೇಬೇಕಾದ ಕಾಣಿಕೆ. ಅಲ್ಲಿಂದೀಚೆಗೆ ಆ ನಾಟಕವನ್ನಾಡಿರುವ ಇತರ ನಟರು ಆ ಮಟ್ಟಕ್ಕೆ ಏರಿರಬಹುದೋ ಏನೊ ಅದನ್ನು ಮೀರಿಸಿದವರು ಇಲ್ಲವೆಂದು ಖಂಡಿತವಾಗಿ ಹೇಳಬಲ್ಲೆ. ನಾಟಕ ಯಶಸ್ವಿಯಾದದ್ದು ನನಗೆ ಆನಂದ ಕೊಟ್ಟಿತು. ಆ ಆನಂದ ನಾಲ್ಕಾರು ದಿನ ಇದ್ದು ಅನಂತರ ನೆನಪಿನ ರಾಜ್ಯಕ್ಕೆ ಹೊರಟುಹೋಯಿತು. ಆದರೆ ಅದನ್ನು ಅಭ್ಯಾಸ ಮಾಡುತ್ತಿದ್ದಾಗ ನಮ್ಮ ನಮ್ಮಲ್ಲಿ ನಡೆದ ಸರಸ ಸಲ್ಲಾಪ, ಆಗ ಮೂಡಿಬಂದ ಸೌಹಾರ್ದ, ಇವೆಲ್ಲ ನೆನಪಿನ ರಾಜ್ಯದಲ್ಲಿ ಮಾತ್ರವಲ್ಲ, ಇಂದಿನ ಬದುಕಿನಲ್ಲೂ ಜೀವಂತವಾಗಿವೆ. ಅವು ಕೊಡುವ ಆನಂದ ಮಸಕಾಗುವಂತಿಲ್ಲ.

ಅಂದು ನಾಟಕ ಮುಗಿದಮೇಲೆ ನಾನು ರಂಗಸ್ಥಳದ ಮೇಲೆ ಬಂದು ನಿಲ್ಲಬೇಕಾಯಿತು. ನುರಿತವರಿಗೆ ಅದು ಸಾಮಾನ್ಯ ವಿಷಯ. ಆದರೆ ಸಭಾಕಂಪ ನನ್ನ ಜನ್ಮಕ್ಕೆ ಹತ್ತಿ ಬಂದದ್ದು. ಮನೆಗೆ ಬಂದ ಮೇಲೆ, ‘ಅಲ್ಲ, ಬರಬೇಕು ಅಂತ ಕರೆದರೆ ಧೈರ್ಯವಾಗಿ ಬರಬಾರದೆ! ಅದೇಕೆ ಬಲಿ ಕೊಡೋಕೆ ತಂದ ಕುರಿಯ ಹಾಗೆ ನಿಂತುಕೊಂಡಿರಿ?’ ಎಂಬ ನಗುಮುಖದ ವ್ಯಾಖ್ಯಾನವನ್ನು ಕೇಳಬೇಕಾಗಿ ಬಂತು, ಹಾಗೆ ವ್ಯಾಖ್ಯಾನ ಮಾಡುವ ಹಕ್ಕುಳ್ಳವರಿಂದ.

‘ಆಷಾಢಭೂತಿ’ಯನ್ನು ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘವೇ ಪ್ರಕಟಿಸಿತು. ಅದರ ಮುಖಪ್ರತಿ ಅಚ್ಚಾಗುತ್ತಿದ್ದಾಗ ಅಚ್ಚು ಜೋಡಿಸುವವನು ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿದನೋ ಅಥವಾ ಯಾರಾದರೂ ಕುಚೇಷ್ಟೆ ಮಾಡಿದರೋ ಕಾಣೆ ‘ಸಚಿತ್ರ’ (ಪುಸ್ತಕದಲ್ಲಿ ಕೆಲವು ದೃಶ್ಯಗಳ ಚಿತ್ರಗಳಿದ್ದವು) ಎಂಬ ಪದ್ಯ ‘ಸ್ವಚಿತ್ರ’ ಎಂಬ ಮಾರ್ಪಾಟನ್ನು ಪಡೆದಿತ್ತು. ಇದು ನನ್ನ ಕಣ್ಣಿಗೆ ಬೀಳದೆ ಕರಡುಪ್ರತಿ ತಿದ್ದುವುದರಲ್ಲಿ ನನಗೆ ನೆರವು ಕೊಡುತ್ತಿದ್ದ ತೀ.ನಂ.ಶ್ರೀಯವರ ಕಣ್ಣಿಗೇ ಬೀಳಬೇಕೆ! ಹಾಸ್ಯಕ್ಕೆ ಇಂಥ ಸೊಗಸಾದ ಸಾಮಗ್ರಿ ಸಿಕ್ಕಿದರೆ ಸುಮ್ಮನೆ ಬಿಡುವ ಮನುಷ್ಯರಲ್ಲ ಅವರು. ಅವರಿಗೆ ನೆರವು ಕೊಡುವುದಕ್ಕೆ ನಾರಾಯಣಶಾಸ್ತ್ರಿಗಳು ಬೇರೆ ಇದ್ದರು. ಆ ಮುಖಪತ್ರ ಕೆಳಗೆ ಕಾಣಿಸಿರುವಂತೆ ಅಚ್ಚಾಗಿತ್ತು.

ಮಾರನೆಯ ದಿನ ಕಾಮನ್ ರೂಮಿನಲ್ಲಿ ಇನ್ನೂ ತಿದ್ದದೆ ಇದ್ದ ಆ ಮುಖಪತ್ರದ ಪ್ರದರ್ಶನ, ಎಲ್ಲರಿಗೂ ಉಚಿತ ಪ್ರವೇಶ! ಎಲ್ಲರೂ ನನ್ನ ಮೇಲೆ ಹಾಸ್ಯದ ಬಾಣ ಬಿಡುವವರೇ.

‘ಏನೋ ಅಂತಿದ್ದೆ. ನೋಡೋಕೆ ಮರಳಿಯ ಹಾಗಿದಾನೆ. ಹುಷಾರಾಗಿರಬೇಕಪ್ಪ ಇವನ ವಿಷಯದಲ್ಲಿ’ ಅಂತ ಒಬ್ಬ.

‘ಈ ಮೂರ್ತಿರಾಯ ಪ್ರಾಮಾಣಿಕ ಅಂತ ಒಪ್ಪಬೇಕು, ಕಣೊ. ತನ್ನ ಕಲ್ಯಾಣ ಗುಣಾನ ಮುಚ್ಚು ಮರೆಯಿಲ್ಲದೆ ಹೇಳಿಕೊಂಡಿದಾನೆ’ ಎಂತ ಮತ್ತೊಬ್ಬ.

‘ಸತ್ಯಂ ವದ, ಧರ್ಮಂ ಚರ, ಅಂತ ಅವನಿಗೂ ಹೇಳಿಕೊಟ್ಟಿಲ್ಲವೇನೊ? ಈಗ ಮೊದಲ ಭಾಗ ಮಾಡಿದಾನೆ, ಸತ್ಯ ಹೇಳಿದಾನೆ. ಧರ್ಮಂ ಚರ…. ನೋಡಿಕೊಳ್ಳೋಣ. ಅಧರ್ಮ ಮುಗಿಸಿ ಆಮೇಲೆ ಧರ್ಮಕ್ಕೆ ಬರ್ತಾನೆ’ ಅಂತ ಮಗುದೊಬ್ಬ. ಈ ಪ್ರಸಂಗದ ನೆನಪು ಕೊಡಬಲ್ಲ ಕೆಲವರಾದರೂ ಈಗಲೂ ಇದ್ದಾರೆಂಬುದು ಬಹು ಆನಂದದ ವಿಷಯ.

‘ಸಾಕ್ರೆಟೀಸನ ಕೊನೆಯ ದಿನಗಳು’ ಎಂಬ ಪುಸ್ತಕದಲ್ಲಿರುವ ನಾಲ್ಕು ಪ್ಲೇಟೋವಿನ ಸಂವಾದಗಳನ್ನು ಅನುವಾದ ಮಾಡುವ ಉದ್ದೇಶವೇ ನನಗಿರಲಿಲ್ಲ. ನನಗೆ ಬಹಳ ಆನಂದ ಕೊಟ್ಟಿದ್ದ ‘ಅಪಾಲಜಿ’ಯನ್ನು ಕನ್ನಡಕ್ಕೆ ತರಲಾದೀತೆ? ನೋಡೋಣ ಎಂದುಕೊಂಡು ಸುಮಾರು ೧೦ ಪುಟಗಳನ್ನು ಅನುವಾದ ಮಾಡಿದ್ದೆ. ಇದು ತೀ.ನಂ.ಶ್ರೀಯವರಿಂದ ವೆಂಕಣ್ಣಯ್ಯನವರಿಗೂ ಅವರಿಂದ ನನ್ನ ಗುರುಗಳಾದ ಬಿ.ಎಂ.ಶ್ರೀಯವರಿಗೂ ತಿಳಿಯಿತು. ಅವರು ಒಂದು ದಿನ ‘Now that you begun it, do all the four dialogues dealling with the trial and death’ ಎಂದದ್ದಲ್ಲದೆ ‘We shall publish it in the University Series’ ಎಂಬ ಮಾತನ್ನು ಸೇರಿಸಿದರು. ಅದು ನನ್ನಿಂದ ಸಾಧ್ಯವಾಗದ ಕೆಲಸ ಎಂದು ನನಗೆ ಹೆದರಿಕೆ. ‘I am not good at Kannada. I am just experimenting’ ಹಿಂಜರಿಯುತ್ತ ಹೇಳಿದ್ದಕ್ಕೆ ಅವರು ‘We are all experimenting, Join us’ ಎಂದು ಉತ್ತೇಜನ ಕೊಟ್ಟರು. ಮೂಲದಲ್ಲಿದ್ದ (ನನಗೆ ಗ್ರೀಕ್ ಭಾಷೆ ತಿಳಿಯದಾದ್ದರಿಂದ ನನ್ನ ಭಾಗಕ್ಕೆ ಇಂಗ್ಲಿಷ್ ಅನುವಾದಗಳೇ ಮೂಲ) piety, concept, idea ಮುಂತಾದ ಅನೇಕ ಪದಗಳಿಗೆ ಕನ್ನಡ ಪದಗಳನ್ನು ಹೊಂದಿಸುವುದು ಕಷ್ಟವಾಯಿತು. ಸಾಕ್ರೆಟೀಸನ ತರ್ಕ ಸುಲಭ ಗ್ರಾಹ್ಯವಾಗುವಂತೆ ಬರೆಯುವುದು ಮತ್ತೂ ಕಷ್ಟವಾಯಿತು. ಕೆಲವು ವಾಕ್ಯಗಳನ್ನು ನಾಲ್ಕಾರು ಸಾರಿ ತಿದ್ದಿದರೂ ಸ್ಪಷ್ಟತೆ ಸಾಲದೆಂದೇ ತೋರುತ್ತಿತ್ತು. ಆ ಪುಸ್ತಕವನ್ನು ಪಠ್ಯಪುಸ್ತಕವಾಗಿ ಓದುವ ಸಂಕಟಕ್ಕೆ ಗುರಿಯಾದ ಹುಡುಗನೊಬ್ಬನಿಗೆ ಇದೇ ಅನುಭವವಾಗಿದ್ದಿರಬೇಕು. ಅವನಿಗೆ ನನ್ನ ಗುರುತಿರಲಿಲ್ಲ. ವರ್ಷದ ಮೊದಲು, ಅವನು ಬಹುಶಃ ಬೆಂಗಳೂರಿನಿಂದ ಬಂದವನು, ಅಲ್ಲದೆ ನಾನು ಅವರ ಕ್ಲಾಸಿಗೆ ಅದುವರೆಗೆ ಹೋಗಿರಲಿಲ್ಲ. ನಾನು ಕಾರಿಡಾರ್ ನಲ್ಲಿ ಹೋಗುತ್ತಿದ್ದಾಗ ‘ಸಾಕ್ರೆಟೀಸನ್ನ ವಿಷಹಾಕಿ ಕೊಂದರಂತೆ, ಅದನ್ನು ಬರೆದು ಇವನು ನಮ್ಮನ್ನ ಕೊಲ್ಲುತಾ ಇದಾನೆ’ ಎಂದು ಅವನು ತನ್ನ ಸ್ನೇಹಿತನಿಗೆ ಹೇಳುತ್ತಿದ್ದದ್ದು ಕಿವಿಗೆ ಬಿತ್ತು. ಆ ವಿದ್ಯಾರ್ಥಿಯದು ಗಟ್ಟಿ ಜೀವ. ನನ್ನ ಪುಸ್ತಕ ಅವನನ್ನು ಕೊಲ್ಲಲಿಲ್ಲ. ಆದರೆ ಕೊಲ್ಲ ಹೊರಟ (!) ಲೇಖಕನೇ ಆ ಮಾತಿನಿಂತ ಸಾಯುವಂತಾದ. ‘The dog it was that died’ ಎನ್ನುವ ಸ್ಥಿತಿಗೆ ಬಂದಿತ್ತು. ಮೊದಲೇ ಆತ್ಮವಿಶ್ವಾಸವಿಲ್ಲದವನ ಮೇಲೆ ಇಂಥ ಟೀಕೆ ಎರಗಿ ಬಂದರೆ ಅವನ ಗತಿಯೇನು! ದೇವರ ದಯದಿಂದ ನನಗೆ ಸ್ವಲ್ಪ ಹಾಸ್ಯದ ಪ್ರವೃತ್ತಿ ಇರುವುದರಿಂದ ಚೇತರಿಸಿಕೊಂಡೆ. ಆ ಪ್ರಸಂಗವನ್ನು ಕಾಮನ್ ರೂಮಿನ ಮಿತ್ರರಿಗೆ ಹೇಳಿದೆ. ಅಲ್ಲಿಯ ನಗೆಯಲ್ಲಿ ನನಗೆ ಅಧೈರ್ಯ ತೇಲಿಹೋಯಿತು.

ವಿಮರ್ಶೆಗೆ ಕೈಹಾಕಿದಾಗಿನ ಅನುಭವಗಳೂ ಕೆಲವು ನೆನಪಿಗೆ ಬರುತ್ತಿವೆ. ಸಮಕಾಲೀನ ಸಾಹಿತ್ಯವನ್ನು ವಿಮರ್ಶಿಸಿ ಹೊರಡುವವನಿಗೆ ಕೆಲವು ಆಡಚರಣೆಗಳಿರುವುದು ಸ್ವಾಭಾವಿಕ. ವಿಮರ್ಶಕನಲ್ಲೇ ವೈಯಕ್ತಿಕ ಪೂರ್ವಾಗ್ರಹಗಳಿರಬಹುದು. ಅವು ಇಲ್ಲದಿದ್ದರೂ ವಿಮರ್ಶೆಗೆ ಒಳಗಾದ ಲೇಖಕರು ಅಸಮಾಧಾನಗೊಳ್ಳುವ ಸಂsವವುಂಟು. ‘ವಿಮರ್ಶಕ ನಿರ್ಭಯನಾಗಿ ತನ್ನ ಅಭಿಪ್ರಾಯವನ್ನು ತಿಳಿಸಬೇಕು’ ಎಂದು ಪ್ರತಿಯೊಬ್ಬ ಸಾಹಿತಿಯೂ ಒಪ್ಪುತ್ತಾನೆ. ಆದರೆ ಅವನ ಒಪ್ಪಿಗೆ ಅನ್ವಿಯಿಸುವುದು ಥಿಯರಿಗೆ ಮಾತ್ರ. ಅದು ತನ್ನ ಕೃತಿಯ ವಿಷಯದಲ್ಲಿ ಅನುಸರಣೆಗೆ ಬಂದರೆ ಆಗಿನ ಮಾತು ಬೇರೆ. ಆಗ ‘ವಿಮರ್ಶೆ’ ಎಂಬ ಪದಕ್ಕೆ ಹೊಗಳಿಕೆ ಎಂದೇ ಅರ್ಥ ಮಾಡಬೇಕಾಗುತ್ತದೆ. ಈ ಕಷ್ಟಗಳ ಜೊತೆ ಕನ್ನಡದ ನವೋದಯ ಕಾಲಕ್ಕೆ ಸಂಬಂಧಪಟ್ಟಂತೆ ಕೆಲವು ವಿಶೇಷ ಕಷ್ಟಗಳೂ ಇದ್ದವು. ಕನ್ನಡ ಸಾಹಿತ್ಯ ಆಗ ತಾನೆ ಹೊಸ ದಾರಿಯನ್ನು ಹಿಡಿದು ಹೊರಟಿತ್ತು. ಹಿಂದಿನ ಸಾಹಿತ್ಯದ ಅನುಕರಣೆಯ ದಾರಿಯನ್ನು ಬಿಟ್ಟು ಸ್ವಾನುಭವ ನಿರೂಪಣೆಯ ಮತ್ತು ಸ್ವಾತಂತ್ರ್ಯದ ದಾರಿಯನ್ನು ಹಿಡಿದಿತ್ತು. ಇಂಥ ಸಂದರ್ಭ ದಲ್ಲಿ ಎಡವಿದವನಿಗೆ ಕ್ಷಮೆಯಿರಬೇಕಾದದ್ದು, ಅಥವಾ ಸಹಾನುಭೂತಿಯಾದರೂ ಇರಬೇಕಾದ್ದು ಸಹಜ. ಆ ಕಾಲದ ಪಂಡಿತವರ್ಗದವರು ಹಳೆಯ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಸಹಾನುಭೂತಿಯನ್ನು ಕೊಡಲು ಅಷ್ಟೇನೂ ಆತುರ ತೋರಿಸಲಿಲ್ಲ. ಆಧುನಿಕರಲ್ಲಿ ಕೆಲವರು ಕನ್ನಡ ಕೃತಿಯನ್ನು ಯಾವುದೋ ಅದೇ ತರದ ಇಂಗ್ಲಿಷ್ ಕೃತಿಗೆ ಹೋಲಿಸಿಕೊಂಡು ‘ಇದು ಆ ಮಟ್ಟಕ್ಕೆ ಬರಲಿಲ್ಲ’ ಎಂದುಕೊಂಡದ್ದೂ ಉಂಟು.

ಮೊದಲ ಒಂದೆರಡು ಪುಸ್ತಕಗಳನ್ನೂ ವಿಮರ್ಶೆ ಮಾಡಿದಾಗ ನನಗೆ ಈ ಕಷ್ಟಗಳ ಅರಿವಾಗಲಿಲ್ಲ. ಪುಸ್ತಕಗಳು ಚೆನ್ನಾಗಿಯೇ ಇದ್ದವು, ನನಗೆ ಆನಂದವನ್ನು ಕೊಟ್ಟಿದ್ದವು. ಆ ಆನಂದವನ್ನು ಒಂದೆರಡು ಪುಟಗಳಲ್ಲಿ ಕಾಣಿಸುವುದು ಹಿತಕರವಾಗಿಯೇ ಇತ್ತು. ಆಮೇಲೆ ವಿಮರ್ಶೆಗೆ ಬಂದ ಒಂದು ಪುಸ್ತಕ ಉತ್ತರ ಕರ್ಣಾಟಕದ ಲೇಖಕರೊಬ್ಬರು ಬರೆದದ್ದು. ಅದರ ವಿಷಯವಾಗಿ ನಾನು ಬರೆದ ವಿಮರ್ಶೆಯನ್ನು ನೆನೆದರೆ ನಾಚಿಕೆಯಿಂದ ತಲೆ ತಗ್ಗಿಸು ವಂತಾಗುತ್ತದೆ. ಉತ್ತರ ಕರ್ಣಾಟಕದ ಉಚ್ಚಾರಣೆಯ, ದೇಶೀಯ, ವೈಶಿಷ್ಟ್ಯಗಳು ಆಗ ನನಗೆ ಹೆಚ್ಚು ತಿಳಿದಿರಲಿಲ್ಲ, ತಿಳಿದಷ್ಟರ ವಿಷಯದಲ್ಲೂ ಮನಸ್ಸು ಒಗ್ಗಿರಲಿಲ್ಲ. ಕೆಲವು ಪದಗಳು ಅಲ್ಲಿ ಸ್ವಲ್ಪ ಬೇರೆ ರೂಪ ತಾಳಿ ಚಾಲತಿಯಲ್ಲಿವೆಯೆಂದಾಗಲಿ, ಕೆಲವು ರೂಪಗಳು ನಮ್ಮ ಆಡುಮಾತಿನಲ್ಲಿ ಕಾಣದಿದ್ದರೂ ಹಿಂದಿನ ಸಾಹಿತ್ಯದಲ್ಲಿ ಬಳಕೆಗೆ ಬಂದಿತ್ತೆಂದಾಗಲಿ ನನಗೆ ತಿಳಿಯದು, ಆ ಪುಸ್ತಕ ಅಷ್ಟೇನು ಮೇಲುಮಟ್ಟದ್ದಲ್ಲವೆಂದೇ ತೋರುತ್ತದೆ. ಆದರೆ ಮೇಲೆ ಹೇಳಿದ ಕೊರತೆಗಳಿಂದಾಗಿ ನನ್ನ ವಿಮರ್ಶೆಯೂ ಮೇಲು ಮಟ್ಟದ್ದಾಗಿರಲಿಲ್ಲ. ಅದು ಯಾರ ಕಣ್ಣಿಗೂ ಬೀಳದಿರಲಿ ಎಂದು ದೇವರನ್ನು ಪ್ರಾರ್ಥಿಸಿದ್ದೇನೆ. ಅದರ ಪರವಾಗಿ ನಾನು ಹೇಳಬಹುದಾದದ್ದು ಒಂದೇ ನನ್ನಲ್ಲಿ ದುರುದ್ದೇಶವಾಗಲಿ ವೈಯಕ್ತಿಕ ಅಸಮಾಧಾನ ವಾಗಲಿ ಇರಲಿಲ್ಲ. ‘ಏಕೆ ಹಾಗೆ ಬರೆದೆ?’ ಎಂದು ಯಾರಾದರೂ ಕೇಳಿದರೆ, ಡಾಕ್ಟರ್ ಜಾನ್ಸನ್ ಒಂದು ಸಂದರ್ಭದಲ್ಲಿ ಕೊಟ್ಟ ಉತ್ತರವನ್ನು ಕೊಟ್ಟೇನು : ‘Ignorance, madem, ignorance!’

ನಾನು ವಿಮರ್ಶೆ ಮಾಡಿದ ಬೇರೊಂದು ಪುಸ್ತಕದ ಲೇಖಕರು ನನಗೆ ಪರಿಚಿತರು, ಹಿರಿಯರು, ಗೌರವಾರ್ಹರು. ಅವರಿಗೆ ಅಸಮಾಧಾನವುಂಟುಮಾಡಬೇಕೆಂಬ ಉದ್ದೇಶ ನನ್ನಲ್ಲಿ ಲೇಶವೂ ಇರಲಿಲ್ಲ. ‘ನನಗೆ ತೋರಿದ್ದನ್ನು ನಾನು ಪ್ರಾಮಾಣಿಕನಾಗಿ ಬರೆಯಬೇಕು. ಇದರಿಂದ ಲೇಖಕರಿಗೆ ಅಸಮಾಧಾನವಾದರೆ ಅದು ನನ್ನ ತಪ್ಪಲ್ಲ’ – ಇದು ನನ್ನ ಭಾವನೆ. ಮೊದಲೇ ಹೇಳಿದಂತೆ ಇದು ಥಿಯರಿ. ವಾಸ್ತವವಾಗಿ ತಮ್ಮ ಪುಸ್ತಕದ ಮೇಲೆ ತೆಗಳಿಕೆ ಬಂದರೆ ಅಸಮಾಧಾನಗೊಳ್ಳದಿರುವವರು ವಿರಳ. ಇದನ್ನು ನಾನು ಮರೆತೆ. ನನ್ನ ಗಮನದಲ್ಲಿ ದ್ದದ್ದು ವಿಮರ್ಶಕನ ಮುಂದಿರಬೇಕಾದ ಆದರ್ಶ, ಮಾನವ ಸ್ವಭಾವದ ಇತಿಮಿತಿಯಲ್ಲ. ಆ ಪುಸ್ತಕದ ಮೇಲೆ ನಾನು ಬರೆದ ವಿಮರ್ಶೆಯಲ್ಲಿ ಕಟುವಾದ ಮಾತುಗಳೇನೂ ಇದ್ದ ಹಾಗೆ ನೆನಪಿಲ್ಲ. ಆದರೆ ಸಹಾನುಭೂತಿಯೂ ಇದ್ದಿರಲಾರದು. ನನ್ನ ವಾಕ್ಯಗಳ ಧ್ವನಿ ಮೃದುವಾಗಿರುವುದಕ್ಕೆ ಬದಲು ಗರಿಗರಿಯಾಗಿತ್ತೋ ಏನೊ. ಸರಿಯಾಗಿ ನೆನಪಿಲ್ಲ.

ಅಂತೂ ವಿಮರ್ಶೆಯಿಂದ ಅವರಿಗೆ ಅಸಮಾಧಾನವಾಯಿತೆಂದು ತೋರುತ್ತದೆ. ಅವರು ದೊಡ್ಡವರು, ನಾನು ಅವರೆದುರಿಗೆ ಕೇವಲ ಬಚ್ಚ. ಇದರಿಂದ ಅವರ ಅಸಮಾಧಾನ ಹೆಚ್ಚಾಗಿರಬಹುದು. ಆ ವಿಮರ್ಶೆ ಪ್ರಕಟವಾಗಿ ಒಂದೆರಡು ತಿಂಗಳು ಕಳೆದ ಮೇಲೆ ಅವರು ನನಗೆ ಬೇರೊಂದು ಊರಿನಲ್ಲಿ ಸಿಕ್ಕಿದರು. ನಾನು ಮಾಡಿದ ನಮಸ್ಕಾರವನ್ನು ಸ್ವಲ್ಪ ಬಿಗುಮಾನದಿಂದಲೇ ಸ್ವೀಕರಿಸಿ, ನನ್ನ ದೇಹ ಪಾರದರ್ಶಕವಾಗಿದ್ದರೆ ಹೇಗೋ ಹಾಗೆ ಅದರಿಂದಾಚೆಗೆ ಏನೇನೋ ನೋಡುತ್ತಿರುವವರಂತೆ, ಒಂದೂ ಮಾತು ಆಡದೆ ಮುಂದು ವರಿದರು. ಆದರೆ ನಾಲ್ಕು ಹೆಜ್ಜೆ, ನಾಲ್ಕೆಂದರೆ ನಾಲ್ಕೇ ಹೆಜ್ಜೆ, ಹೋದ ಮೇಲೆ ಹಿಂದಿರುಗಿ, ಮರ್ಯಾದೆಯಿಂದ ಸ್ವಲ್ಪ ಅಸಹಜವಾದ ಮರ್ಯಾದೆಯಿಂದ ಎಂದರೂ ತಡೆಯುತ್ತದೆ ‘Where is the post office please?’ ಎಂದು ಕೇಳಿದರು. ನಾನು ಅಲ್ಲಿಗೆ ಕಾಣುತ್ತಲೇ ಇದ್ದ ಪೋಸ್ಟಾಫಿಸಿನ ಕಡೆಗೆ ಕೈತೋರಿಸಿ ಮಾತಾಡದೆ ಹೊರಟುಹೋದೆ. ಅವರಿಗೆ ಪೋಸ್ಟಾಫಿಸು ಎಲ್ಲಿತ್ತೆಂಬುದು ಗೊತ್ತಿತ್ತು ಎಂದೇ ನನ್ನ ನಂಬಿಕೆ. ಅವರು ಹಿಂದಿರುಗಿದ್ದು ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವುದಕ್ಕೆ. ಅವರ ಪ್ರಶ್ನೆ ನಿಜವಾಗಿ ನನಗೆ ನೀಡಿದ ಸ್ನೇಹಹಸ್ತ. ಹಾಗೆ ಕೊಡಬಂದ ಸ್ನೇಹವನ್ನು ನಾನು ತೆಗೆದುಕೊಳ್ಳಲಿಲ್ಲ. ಅವರು ತಮ್ಮ ತಪ್ಪನ್ನು ಒಂದೆರಡು ಕ್ಷಣಗಳೊಳಗಾಗಿ ತಿಳಿದು ಅದನ್ನು ತಿದ್ದಿಕೊಂಡರು. ನಾನು ಹೊಸದಾಗಿ, ಬುದ್ದಿಪೂರ್ವಕವಾಗಿ ತಪ್ಪು ಮಾಡಿದೆ. ನನಗೆ ಈ ತಿಳಿವಳಿಕೆ ಬರಲು ಸ್ವಲ್ಪ ಕಾಲ ಹಿಡಿಯಿತು. ಕೆಲವು ವರ್ಷ ಕಳೆದ ಮೇಲೆ ನಾನು ಬರೆದ ಯಾವುದೋ ಲೇಖನ ವನ್ನು ಮೆಚ್ಚಿ ಅವರು ತಮ್ಮ ಮೆಚ್ಚಿಕೆಯನ್ನು ತಿಳಿಸುವುದಕ್ಕಾಗಿಯೇ ಬಂದರು. ಅವರ ಔದಾರ್ಯ ನನ್ನನ್ನು ನಾಚಿಸಿತು.

ಕೆಲವು ವರ್ಷಗಳ ಕೆಳಗೆ ‘ಕೈಲಾಸಂ ದಿನ’ದ ಸಂದರ್ಭದಲ್ಲಿ ಮಾತಾಡಲು ಸಂಘವೊಂದ ರಿಂದ ಆಹ್ವಾನ ಬಂದಿತ್ತು. ಆ ದಿನ ಕೈಲಾಸಂ ಅವರ ಕೃತಿಗಳನ್ನು ಹೊಗಳುವುದರ ಜೊತೆಗೆ ಅವುಗಳಲ್ಲಿ ನನಗೆ ದೋಷವೆಂದು ತೋರಿದ ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ. ಇದು ಸಂಘದ ವ್ಯವಸ್ಥಾಪಕರಿಗೆ ಒಪ್ಪಿಗೆಯಾಗಲಿಲ್ಲವೆಂದು ಆಮೇಲೆ ನನಗೆ ತಿಳಿಯಿತು. ನನ್ನ ದೃಷ್ಟಿಯಲ್ಲಿ, ಕೈಲಾಸಂ ಅವರನ್ನು ನೆನೆಯುವಾಗ ಅವರ ಕೃತಿಗಳ ವಿಷಯದಲ್ಲಿ ಸತ್ಯವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ಸಂಘದ ವ್ಯವಸ್ಥಾಪಕರ ದೃಷ್ಟಿಯಲ್ಲಿ, ಅಂಥ ಮಾತು ‘ಕೈಲಾಸಂ ದಿನ’ವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಉಚಿತವಲ್ಲ. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯ. ಲೇಖಕನೊಬ್ಬ ಬದುಕಿರುವಾಗ ಆತನ ಭಾವಚಿತ್ರದ ಅನಾವರಣ ಮಾಡುವಾಗಲೋ ಬೇರೆ ಯಾವುದಾದರೂ ಕಾರಣಕ್ಕಾಗಿ ಆತನನ್ನು ಗೌರವಿಸುವ ಸಭೆಯಲ್ಲೋ ಆತನ ದೋಷಗಳನ್ನು ಎತ್ತಿ ಆಡುವುದು ಉಚಿತವಲ್ಲ. ಇದು ಒಪ್ಪತಕ್ಕ ಮಾತೇ. ಆದರೆ ಲೇಖಕನೊಬ್ಬ ಸತ್ತು ಎಷ್ಟೋ ವರ್ಷಗಳು ಕಳೆದ ಮೇಲೆ ನಾವು ಆತನ ನೆನಪು ತಂದು ಕೊಳ್ಳುವುದಕ್ಕಾಗಿ ಉತ್ಸವ ಆಚರಿಸುವಾಗ, ಆ ಉತ್ಸವ ಕೇವಲ ಹೊಗಳಿಕೆಗೆ ಮೀಸಲಾಗಬೇಕೆ? ನಾವು ಇಂಥ ಜಯಂತಿಗಳನ್ನು ಆಚರಿಸುವುದೇತಕ್ಕೆ? ಈ ಲೇಖಕರಲ್ಲಿ ಏನೋ ಒಂದು ಹಿರಿಮೆಯಿರುವುದರಿಂದ. ಆ ಹಿರಿಮೆಯನ್ನ ತಿಳಿಯಬೇಕಾದರೆ ಅವರ ಪ್ರತಿಭೆಯ ಸ್ವರೂಪವನ್ನು ನಿರ್ದೇಶಿಸಬೇಕು. ಅಂದರೆ ಅದರ ವ್ಯಾಪ್ತಿ, ಮಿತಿ, ಇತ್ಯಾದಿಗಳೆಲ್ಲ ವನ್ನೂ ಗಮನಿಸಬೇಕು. ಇದು ಈಗಲೂ ನನ್ನ ದೃಷ್ಟಿ.

ಮೇಲೆ ಕಾಣಿಸಿರುವಂಥ ಪ್ರಸಂಗಗಳು ಎರಡು ಮೂರಾದ ಮೇಲೆ ನಾನು ಸಮಕಾಲೀನ ಸಾಹಿತ್ಯದ ವಿಷಯ ಮಾತಾಡಬಾರದು, ಬರೆಯಬಾರದು ಎಂದುಕೊಂಡೆ. ನನಗೆ ಸಾಹಿತ್ಯ ಬೇಕು, ಅದರ ವಿಷಯದಲ್ಲಿ ಸತ್ಯವೇನು ಎಂಬ ಚರ್ಚೆಯೂ ಬೇಕು. ಆದರೆ ವಯಸ್ಸಾಗುತ್ತ ಬಂದಂತೆ ‘ಇದಕ್ಕಿಂತ ಹೆಚ್ಚಾಗಿ ಜನರ ಸೌಹಾರ್ದಬೇಕು. ಸಾಹಿತ್ಯ ವಿಮರ್ಶೆ ಇಂದಲ್ಲ ನಾಳೆ ಬರುತ್ತದೆ. ನಾಳೆಯೇ ಬರಲಿ, ಇವತ್ತಿನ ಕೋಪತಾಪಗಳು ಆಗ ಇರುವುದಿಲ್ಲ’ ಎನ್ನಿಸಿತು. ಆದ್ದರಿಂದ ಕೆಲಕಾಲ ಆ ಗೊಡವೆಗೇ ಹೋಗಲಿಲ್ಲ. ನಾನು ಪತ್ರಿಕೆಗಾಗಿ ಬರೆದಿರುವ ವಿಮರ್ಶೆಗಳನ್ನು ಕೈಬೆರಳುಗಳ ಮೇಲೆ ಎಣಿಸಬಹುದು.

ಮೇಲೆ ಹೇಳುವ ಕಾರಣಕ್ಕಾಗಿ ವಿಮರ್ಶೆ ಮಾಡದಿರುವುದು ಸರಿಯಲ್ಲ ಎಂದೂ ಈಚೆಗೆ ಕೆಲವು ವೇಳೆ ತೋರಿದೆ. ವಿಮರ್ಶಕನ ಮನಸ್ಸಿನಲ್ಲಿ ಕಹಿಕಲ್ಮಷಗಳಿರಬಾರದು, ಜಾತಿಮತಗಳ ದೃಷ್ಟಿ ಇರಬಾರದು, ಇತರ ಪೂರ್ವಾಗ್ರಹಗಳೂ ಇರಬಾರದು. ವಿಮರ್ಶೆಯನ್ನು ಓದುವ ವರಲ್ಲೂ ಇವೆಲ್ಲ ಇರಬಾರದು. ಲೇಖಕರಲ್ಲಿ ವಿಮರ್ಶೆಯನ್ನು ಸಹಿಸುವಷ್ಟು, ನಿಷ್ಪಕ್ಷಪಾತ ವಾಗಿ ವಿವೇಚಿಸುವಷ್ಟು ನಿರ್ಮಲತೆಯಿರಬೇಕು. ವಿಮರ್ಶೆ ನಡೆಯುತ್ತಿದ್ದರೆ ತಾನೆ ಈ ಗುಣಗಳು ಬೆಳೆದಾವು.

ಪ್ರತಿಯೊಬ್ಬನಲ್ಲೂ ಕೊನೆಯಪಕ್ಷ ಒಂದು ಕಾದಂಬರಿಗಾದರೂ ಸಾಕಾಗುವಷ್ಟು ಸಾಮಗ್ರಿ ಇದೆಯೆಂದು ಯಾರೋ ಒಬ್ಬಾತ ಹೇಳಿದ್ದಾನೆ. ನನ್ನಲ್ಲೂ ಅಷ್ಟು ಇರಬೇಕು. ಅಂದಮೇಲೆ ಸಣ್ಣ ಕಥೆಗೆ ಸಾಲುವಷ್ಟಾದರೂ ಇದ್ದೇ ಇರಬೇಕು. ನಾನು ಒಂದೆರಡು ಸಾರಿ ಸಣ್ಣಕಥೆಯನ್ನು ಬರೆಯ ಹೊರಟೆ. ಬರೆದದ್ದು ನನಗೇ ಹಿತವಾಗಲಿಲ್ಲ. ಮತ್ತೆ ನನ್ನ ಗಮನ ಆ ಕಡೆಗೆ ಹೋಗಲೇ ಇಲ್ಲ. ಬರೆಯಬೇಕೆಂಬ ಹುಮ್ಮಸ್ಸು ನನ್ನಲ್ಲಿ ಹೆಚ್ಚು ಇಲ್ಲವೆಂದು ಮೊದಲೇ ಹೇಳಿದ್ದೇನಷ್ಟೆ. ಇದ್ದಿದ್ದರೆ ಮತ್ತೆ ಪ್ರಯತ್ನ ಮಾಡುತ್ತಿದ್ದೆನೇನೋ, ಪ್ರಯತ್ನ ಕೈಗೂಡು ತ್ತಿತ್ತೋ ಏನೋ. ಅದೆಲ್ಲ ‘ರೆ’ ರಾಜ್ಯದ ಮಾತು. ನನಗೆ ಅನೇಕ ವೇಳೆ ಹೀಗೆ ತೋರಿದೆ. ವಿಮರ್ಶಕ ದೆವ್ವವೊಂದು ನನ್ನ ಮೆಟ್ಟಿಕೂತಿದೆ. ಇತರರ ಕೃತಿಗಳನ್ನು ವಿಮರ್ಶೆ ಮಾಡುತ್ತಿದ್ದರೆ ಆ ದೆವ್ವಕ್ಕೆ ಕೆಲಸವನ್ನು ಒದಗಿಸಿದಂತಾಗುತ್ತಿತ್ತು. ಹಾಗೆ ಮಾಡಲಿಲ್ಲವಾದ್ದರಿಂದ ಅದಕ್ಕೆ ಗ್ರಾಸವಿಲ್ಲದೆ ಹೋಯಿತು. ಅದು ನನ್ನಲ್ಲಿದ್ದಿರಬಹುದಾದ ಕಥೆಗಾರನನ್ನೂ ಕಾದಂಬರಿಕಾರ ನನ್ನೂ ನುಂಗಿತು. ಒಂದು ಸಣ್ಣ ಕಥೆಯೇನೋ ಆ ದೆವ್ವದ ಕಣ್ಣು ತಪ್ಪಿಸಿಕೊಂಡು ಹೊರ ಬಿದ್ದಿದೆ. ‘ವ್ಯಾಘ್ರಗೀತೆ’ ಎಂಬುದು ಪ್ರಬಂಧವಾಗಬೇಕೆಂದು ಹೊರಟು ಸಣ್ಣ ಕಥೆಯಾಗಿ ಪರಿಣಮಿಸಿತು. ಸಾಮಾನ್ಯವಾಗಿ ಸಣ್ಣ ಕಥೆಯ ವಸ್ತು ನನ್ನ ಕೈಗೆ ಬಂದರೆ ಪ್ರಬಂಧವಾಗಿ ಬಿಡುತ್ತದೆ.

ಈ ವಿಮರ್ಶಕ ದೆವ್ವ ನನ್ನ ಪ್ರಬಂಧಗಳನ್ನೂ ಕೊಲ್ಲಲು ಸರ್ವಪ್ರಯತ್ನ ಮಾಡಿದೆ. ಕೆಲವನ್ನು ಕೊಂದೂ ಇದೆ. ಕೆಲವು ಪ್ರಬಂಧಗಳನ್ನು ಹರಿದು ಎಸೆದಿದ್ದೇನೆ. ಮಿತ್ರರ ಆಜ್ಞೆಯಂತೆ ಬರೆದ ಕೆಲವು ಅವರಿಂದಾಗಿ ಉಳಿದುಕೊಂಡವು. ‘ಹೋಟಲುಗಳು’ ಎಂಬುದು ಶ್ರೀ ರಂ.ಶ್ರೀ ಮುಗಳಿಯವರು ಸಂಪಾದಿಸಿದ ಸಂಕಲನಕ್ಕಾಗಿ ಬರೆದದ್ದು. ಮುಗಿಸಿದ ಮೇಲೆ ‘ಇದು ಚೆನ್ನಾಗಿಲ್ಲ, ಇದನ್ನು ಕಳಿಸಬಾರದು’ ಎನ್ನಿಸಿತು. ಆ ದಿನ ನನ್ನ ಜೊತೆಯಲ್ಲಿದ್ದ ಶ್ರೀ ದೊಡ್ಡಬೆಲೆ ನರಸಿಂಹಾಚಾರ್ಯರು ‘ಕಳಿಸೋ. ಬರೆದದ್ದೆಲ್ಲ ಚೆನ್ನಾಗಬೇಕು ಅನ್ನೋದಕ್ಕೆ ನೀನು ಯಾವ ಮಹಾ ದೊಡ್ಡ ಮನುಷ್ಯ!’ ಎಂದು ಗರ್ಜಿಸಿದರು. ನನ್ನ ದೆವ್ವ ಬಾಯಿಮುಚ್ಚಿ ಕೊಂಡಿತು. ಇನ್ನು ಕೆಲವು ವೇಳೆ ಅರ್ಧ ಬರೆದ ಪ್ರಬಂಧವನ್ನು ಆರು ತಿಂಗಳೋ ವರ್ಷವೋ ಆದ ಮೇಲೆ ಮುಗಿಸಿದ್ದೇನೆ. ನಾನು ಆಕಾಶವಾಣಿಯಲ್ಲಿದ್ದಾಗ ಒಂದು ದಿನ ಭಾಷಣಕಾರ ರೊಬ್ಬರು ಬರಲಾಗುವುದಿಲ್ಲವೆಂದು ಒಂದೆರಡು ಘಂಟೆ ಮುಂಚೆ ವರ್ತಮಾನ ಕಳಿಸಿದರು. ಸಹೋದ್ಯೋಗಿಗಳೊಬ್ಬರು ‘ನೀವೇ ಏನಾದರೂ ಬರೆದು ಪ್ರಸಾರ ಮಾಡಿಬಿಡಿ’ ಎಂದು ಸೂಚಿಸಿದರು. ಅಂದಿನ ಭಾಷಣ ಅರ್ಧ ಬರೆದದ್ದಾಯಿತು, ಉಳಿದ ಅರ್ಧ ಅಶುಭಾಷಣ ವಾಯಿತು. ಅದನ್ನು (ನನ್ನ ನೆನಪಿರುವ ಮಟ್ಟಿಗೆ ‘ಹೆಂಡತಿಯ ಹೆಸರು’ ಎಂಬ ಪ್ರಬಂಧ) ಬರೆದು ಮುಗಿಸಿದ್ದು ಎಷ್ಟೋ ತಿಂಗಳು ಕಳೆದ ಮೇಲೆ. ಇತ್ತೀಚೆಗೆ ಬರೆದ ಏಳೆಂಟು ಪ್ರಬಂಧ ಗಳು ಆಕಾಶವಾಣಿಗಾಗಿಯೇ ಬರೆದವು. ಅದಕ್ಕೆ ವಿಷಯ ಸೂಚಿಸಿದವರು ಕೂಡ ಆಕಾಶವಾಣಿ ಯವರೇ. ನನ್ನ ವಿಷಯವಾಗಿ ಒಂದು ಅಂಶವನ್ನು ಇಳಿದುಕೊಂಡಿದ್ದೇನೆ. ನಾನಾಗಿ ಕೂತು ಬರೆಯುವ ಸಂಭವ ಕಡಿಮೆ. ಆದ್ದರಿಂದ ಯಾರಿಂದಲಾದರೂ ಲೇಖನಕ್ಕಾಗಿ ಕರೆ ಬಂದರೆ ಆಗುವುದಿಲ್ಲ ಎನ್ನಬಾರದು. ಈಗ ನಾನು ಕೂತು ಬರೆಯುತ್ತಿರುವುದಕ್ಕೂ ಅದೇ ಕಾರಣ ವಷ್ಟೆ!