ಬರಹಗಾರನಾಗಬೇಕೆಂಬ ಆಸೆ ನನ್ನಲ್ಲಿ ಹುಟ್ಟಿಕೊಂಡದ್ದು ಯಾವಾಗ ಎಂಬುದು ನನಗೆ ಗೊತ್ತಿಲ್ಲ. ನನ್ನ ಕುಟುಂಬದಲ್ಲಿ ಸಾಹಿತ್ಯದ ವಾತಾವರಣವಿರಲಿಲ್ಲ. ಬರಹಗಾರರು ಬಿಡಿ, ಸಾಹಿತ್ಯದ ಪರಿಚಯವಿದ್ದವರಾಗಲಿ, ಅಭಿರುಚಿ ಇದ್ದವರಾಗಲಿ ಯಾರೂ ಇರಲಿಲ್ಲ ವೆಂದೇ ಹೇಳಬೇಕಾಗುತ್ತದೆ. ಸಣ್ಣಕತೆಗಳ ಜೊತೆಗಿನ ನನ್ನ ಸಂಬಂಧ ಬರಿಯ ಪ್ರತಿಭೆ, ಕತೆ ಕಟ್ಟುವ ಸೃಜನಶೀಲ ಪ್ರವೃತ್ತಿಯ ಭಾಗಕ್ಕೆ ಮಾತ್ರ ಸೀಮಿತಗೊಂಡಿಲ್ಲ; ನನ್ನ ಬಾಲ್ಯದ ಪರಿಸರ, ಅನುಭವ, ಆಸಕ್ತಿ, ಬದುಕಿನಲ್ಲಿ ಎದುರಾದ ಹಲವು ಒತ್ತಡಗಳು ಅತ್ಯಂತ ಪ್ರಮುಖವಾದ ಪಾತ್ರವಹಿಸಿವೆ. ಕಥೆಗಳ ಉದ್ದೇಶ ಬರಿಯ ಮನೋರಂಜನೆ ಮಾತ್ರವಲ್ಲ ವೆಂಬ ಎಚ್ಚರಕೆ ಮೊದಲಿನಿಂದಲೇ ನನ್ನಲ್ಲಿ ಬೆಳೆದು ಬಂದಿತ್ತು. ನನ್ನ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಪುಸ್ತಕಗಳನ್ನು ಓದುತ್ತಿದ್ದೆ. ಬಿ.ಪಿ. ಕಾಳೆ, ಎನ್. ನರಸಿಂಹಯ್ಯ, ಮಾ.ಭಿ. ಶೇಷಗಿರಿರಾವ್ ಮುಂತಾದವರ ಪತ್ತೇದಾರಿ ಕಾದಂಬರಿಗಳನ್ನು ಓದುವ ಮೂಲಕ ಮೂಡಿದ ಆಸಕ್ತಿ, ಬೆಳೆದದ್ದು ತರಾಸು, ಅನಕೃ, ಕೃಷ್ಣಮೂರ್ತಿ ಪುರಾಣಿಕ, ತ್ರಿವೇಣಿ, ಚಡಗರ ಕಾದಂಬರಿ ಗಳನ್ನು ಓದುವ ಮೂಲಕ. ಕಥೆಗಾರನಾಗಿ ರೂಪುಗೊಳ್ಳಲು ಬಹುಶಃ, ಕುವೆಂಪು, ಯು.ಆರ್. ಅನಂತಮೂರ್ತಿ, ಕಾರಂತರ ಕಾದಂಬರಿಗಳು, ತೇಜಸ್ವಿ, ದೇವನೂರು, ಲಂಕೇಶ್, ಶ್ರೀಕೃಷ್ಣ ಆಲನಹಳ್ಳಿ, ವೈಕಂ ಮುಹಮ್ಮದ್ ಬಶೀರ್‌ರವರ (‘ಪಾತುಮ್ಮನ ಆಡು’, ‘ನನ್ನಜ್ಜನಿ ಗೊಂದಾನೆಯಿತ್ತು’) ಕೃತಿಗಳು, ಇಸ್ಮತ್ ಜುಗ್ತಾಯಿ, ಸಾದತ್ ಹುಸೇನ್ ಮಾಂಟೋರವರ ಕೃತಿಗಳು ಮುಖ್ಯವಾಗಿದ್ದವು.

ಬಾಲ್ಯದ ಅನುಭವಗಳು

ಸಣ್ಣಕಥೆಗಾರನಾಗಿ ನನ್ನ ಹುಟ್ಟು ಅನಿರೀಕ್ಷಿತ. ಭಾರತದ ಉದ್ದಗಲದಲ್ಲೂ ಕಂಡು ಬರುವ ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿನ ಅನುಭವಗಳೊಂದಿಗೆ ನನ್ನ ಬಾಲ್ಯವು ಕಳೆಯಿತು. ಊಟಕ್ಕೆ, ಬಟ್ಟೆಗೆ ಇದ್ದಾಗ ಉಟ್ಟು ಸಂಭ್ರಮಿಸುವುದು, ಇಲ್ಲವಾದಾಗ ಹೊರಜಗತ್ತಿಗೆ ತಿಳಿಯದಂತೆ ಎಲ್ಲವನ್ನೂ ನಗುಮೊಗದ ಹಿಂದೆ ಅಡಗಿಸಿಡುವುದು. ೧೯೬೦ – ೬೫ರ ನಡುವೆ ಉಂಟಾದ ಅವಶ್ಯಕ ವಸ್ತುಗಳ ಬೆಲೆಯೇರಿಕೆಯ ಬಿಸಿ ಎಲ್ಲ ಹಳ್ಳಿಯಲ್ಲೂ ವ್ಯಾಪಕವಾಗಿ ಆವರಿಸಿತ್ತು. ಹೆಚ್ಚುಕಮ್ಮಿ ಅದೇ ಸಮಯದಲ್ಲಿ ನಮ್ಮ ಹಳ್ಳಿಗೆ ಬಂದೆರಗಿದ ಸಿಡುಬುರೋಗ, ಹಲವಾರು ಜನರನ್ನು ಬಲಿ ತೆಗೆದುಕೊಂಡಿತ್ತು. ದೇವಿ ಹಾಕಿಸಿಕೊಳ್ಳಲು, ಚುಚ್ಚುಮದ್ದು ಹಾಕಿಸಿಕೊಳ್ಳಲು ಭಯಪಡುತ್ತಿದ್ದ ಜನ, ಈ ಕಾಯಿಲೆಯ ಬಗ್ಗೆಹಲವಾರು ಕತೆಗಳನ್ನು ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಊರ ಭತ್ತದ ಗದ್ದೆಯಲ್ಲಿ ಕೆಲಸ ಮಾಡುವ ಕೂಲಿಯಾಳುಗಳು ಯಾವುದೇ ರಾಜಕೀಯ ಪ್ರೇರಣೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ಕೂಲಿ ಹೆಚ್ಚಿಸಬೇಕೆಂದು ಭತ್ತದ ಗದ್ದೆಗಳಿಗೆ ಇಳಿಯದೆ ಪ್ರತಿಭಟಿಸಿದ್ದರು. ಒಮ್ಮೆ ನಾವು ಸಂಜೆ ಶಾಲೆ ಬಿಟ್ಟು ಬರುವಾಗ ದಾರಿಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುವ ಕೂಲಿಯಾಳು ಕಚ್ಚಾದ ಕಂಕುಳಲ್ಲಿ ಭತ್ತ ತುಂಬಿದ ಡಬ್ಬಿಯನ್ನಿಟ್ಟುಕೊಂಡು, ನಮಗೆಲ್ಲಾ ಕಾಳುಗಳನ್ನು ತೋರಿಸುತ್ತಾ ಅಳುತ್ತಾ ಅದನ್ನು ಕೂಲಿಯಾಗಿ ನೀಡಿದ ಧನಿಗಳಿಗೆ ಬಯ್ಯುತ್ತಾ ನಡೆಯುತ್ತಿ ದ್ದದ್ದು ಇನ್ನೂ ಹಸಿರಾದ ನೆನಪು.

ಬಿದಿರ ಮಳೆಯಲ್ಲಿ ಬಿದ್ದ ಕಾಳುಗಳನ್ನು ಬೇಯಿಸಿದ ಅನ್ನ, ಗೆಣಸು, ಹಲಸಿನ ಬೀಜದ, ಹುಣಸೆ ಬೀಜಗಳನ್ನು ಬೇಯಿಸಿ, ಸುಟ್ಟು ತಿಂದು ಹಸಿಯನ್ನು ತಣಿಸಿಕೊಳ್ಳುವ ಜನಗಳು, ಹಸಿವೆಂದು ಹಟಹಿಡಿದು ಕೂದಿದ ಮಕ್ಕಳ ಬೆನ್ನಿಗೆ ಹುಣಸೆ ಬರಲಿನಿಂದ ಏಟು ಬಿಗಿದು ತಾವೂ ಅಳುತ್ತಿರುವ ತಾಯಂದಿರನ್ನು ನಮ್ಮ ಸುತ್ತಲೂ ಕಂಡಿದ್ದೆ. ನಮ್ಮ ಮನೆಯ ಪರಿಸ್ಥಿತಿಯು ಉಳಿದವರಿಗಿಂತ ಭಿನ್ನವಾಗೇನೂ ಇರಲಿಲ್ಲ. ರೂ. ೧೨೦ ಸಂಬಳ ತಿಂಗಳಿಗೆ ಪಡೆಯುತ್ತಿದ್ದ ನನ್ನ ತಂದೆ ಮಸೀದಿಯಲ್ಲಿ ‘ಕಾಝಿ ಮತ್ತು ಖತೀಬ್’ ಆಗಿ ಕೆಲಸ ಮಾಡುತ್ತಿದ್ದು, ಎಂಟು ಮಕ್ಕಳ ಕುಟುಂಬವನ್ನು ಹಾಗೂ ಹೀಗೂ ಎಳೆದಾಡಿ ಬದುಕನ್ನು ನಡೆಸಿಕೊಡುವವಳು ನಮ್ಮಮ್ಮ. ಪಾರಮಾರ್ಥಿಕ ಮೌಲ್ಯಗಳ ಉದಾತ್ತತೆ, ಶ್ರೇಷ್ಠತೆಯ ಬಗ್ಗೆ ಬೋಧಿಸುತ್ತಾ, ಲೌಕಿಕ ಪ್ರಪಂಚವು ನಶ್ವರವೆಂದೂ, ಪಾರಮಾರ್ಥಿಕವೇ ಶಾಶ್ವತವೆಂದು ಉಪದೇಶ ಮಾಡುತ್ತಾ ಕಾಲ ಕಳೆಯುತ್ತಿದ್ದ ಅಪ್ಪನಿಗೆ, ಅವನ ಕುರುಆನ್, ಹದೀಸ್‌ಗಳ ಅಧ್ಯಯನಕ್ಕೆ ಕುಟುಂಬದ ರಗಳೆ ಅಡ್ಡಿಬರದಂತೆ ಹೊಂದಿಸಿಕೊಂಡು ಮನೆವಾರ್ತೆಯನ್ನು ನೋಡಿಕೊಳ್ಳುತ್ತಿದ್ದವಳು ಅಮ್ಮ. ಇಂತಹ ಪರಿಸ್ಥಿತಿಯಲ್ಲೂ ಮನೆಯಲ್ಲಿ ಇದ್ದದ್ದನ್ನು ನೆರೆಹೊರೆಯ ಹಿಂದುಗಳೊಂದಿಗೆ ಹಂಚಿ ತಿನ್ನುವ ನನ್ನ ಹೆತ್ತವರ ಗುಣ ನನ್ನನ್ನು ಪರೋಕ್ಷ ವಾಗಿ ರೂಪಿಸಲು ಸಹಾಯವಾಯಿತು ಎಂದುಕೊಂಡಿದ್ದೇನೆ. ನನ್ನ ಕತೆಗಳಲ್ಲಿ ಬಡತನವೇ ಹೆಚ್ಚು ಕಂಡುಬರುತ್ತದೆ ಎನ್ನುವ ಓದುಗರಿಗೆ ನನ್ನ ಬದುಕಿನ ಈ ಹಿನ್ನೆಲೆಯನ್ನು ತೆರೆದಿಡಲು ಬಯಸುತ್ತೇನೆ. ನನ್ನನ್ನು ಎಡಪಂಥೀಯನೆಂದೋ, ಮಾರ್ಕ್ಸಿಸ್ಟ್ ಬರಹಗಾರನೆಂದೋ ವಿಮರ್ಶಕರು ಬರೆದಿರುವುದನ್ನು ನಾನು ವಿರೋಧಿಸಿಲ್ಲ. ಆದರೂ ಮಾರ್ಕ್ಸಿಸಂ ಅನ್ನು ನಾನು ಇಂದಿಗೂ ಓದಿ ತಿಳಿದುಕೊಂಡವನಲ್ಲವೆಂದು ಹೇಳಲು ಇಷ್ಟಪಡುತ್ತೇನೆ. ಬದುಕಿನಲ್ಲಿ ಕಂಡ ಸತ್ಯವನ್ನಷ್ಟೇ ಕಥೆಗಳ ಮೂಲಕ ಹೇಳಿದ್ದೇನೆಯೇ ಹೊರತು, ಯಾವ ರಾಜಕೀಯ ತತ್ವಗಳಿಗೂ ಬದ್ಧನಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಬರೆದಿಲ್ಲ. ನಾನು ಕಂಡ, ಅನುಭವಿಸಿದ ಬದುಕು ಮತ್ತು ಮಾರ್ಕ್ಸ್‌ನ ತತ್ವಗಳು ಒಂದೇ ಎಂದಾದರೆ ಆ ತತ್ವಗಳ ಬಗ್ಗೆ ನನಗೆ ಗೌರವ ಮೂಡುತ್ತದೆ.

ಪರಿಸರ

ಮಸೀದಿಯಲ್ಲಿ ‘ಕಾಝಿ’ಯಾಗಿದ್ದ ನಮ್ಮ ಅಪ್ಪ ತನ್ನ ಮನೆಯಲ್ಲಿ ಮುಸ್ಲಿಮ್ ಕೇರಿ ಯಲ್ಲಿ ಮಾಡದೆ ಇಂದುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೋಟೆ ಗ್ರಾಮದಲ್ಲಿ ಮಾಡಿದ್ದು, ನನ್ನ ಮಟ್ಟಿಗೆ ಒಂದು ಅರ್ಥಪೂರ್ಣ ಕೊಡುಗೆಯಾಗಿತ್ತು. ನಮ್ಮ ಮನೆ ಈಗಲೂ ಇರುವುದು ಕಟ್ಟಾಡಿಯ ಕೋಟೆ ಗ್ರಾಮದಲ್ಲಿ. ಇಲ್ಲಿರುವ ನಾಲ್ಕು ನೂರಕ್ಕೂ ಹೆಚ್ಚಿನ ಮನೆಗಳ ಪೈಕಿ ನಮ್ಮದೂ ಸೇರಿದಂತೆ ಮೂರು ಮನೆಗಳು ಮಾತ್ರ ಮುಸ್ಲಿಮರಿಗೆ ಸೇರಿದ್ದು. ಹೆಚ್ಚಿನವರು ಕೆಳಜಾತಿಗಳೆಂದು ಪರಿಗಣಿಸಿಲ್ಪಟ್ಟ ಹಿಂದೂಗಳು ಇಲ್ಲಿ ವಾಸಿಸುತ್ತಾರೆ. ಒಂದಷ್ಟು ದೂರದಲ್ಲಿ ಬ್ರಾಹ್ಮಣರ ಕೇರಿ ಇದೆ. ಉಪ್ಪುನೀರು ಸದಾಕಾಲ ತುಂಬಿರುವ ಉದ್ಯವರ ಹೊಳೆಯು ನಮ್ಮ ಗ್ರಾಮವನ್ನು ಸುತ್ತಿ ಹರಿಯುವದರಿಂದ, ಹೆಚ್ಚಿನ ಶೂದ್ರರ ಮನೆಯ ಬಾವಿಯ ನೀರು ಸೆಖೆಗಾಲದಲ್ಲಿ ಒಗರಾಗಿ ಪರಿವರ್ತನೆಯಾಗುತ್ತದೆ. ಬ್ರಾಹ್ಮಣರ ಕೇರಿಯಲ್ಲಿ ರುವ ಅನೇಕರ ಬಾವಿಗಳು ಸಿಹಿನೀರಿನವುಗಳಾದರೂ ಶೂದ್ರರು ಬಾವಿಯನ್ನು ಮುಟ್ಟು ವಂತಿಲ್ಲ. ನಮ್ಮ ಮನೆಯ ಮುಂದಿನ ಬಾವಿಯು ಸಿಹಿನೀರಿನ ಬಾವಿಯಾದದ್ದರಿಂದ ನೀರಿಗಾಗಿ ದೂರದೂರದಿಂದ ಕೊಡ ಹೊತ್ತು ಹೆಂಗಸರು ನಮ್ಮಲ್ಲಿಗೆ ಬರುತ್ತಿದ್ದರು. ‘ನೀರಿಗೆಂತಾ ಜಾತಿ? ಕುಡಿಯೋ ನೀರಿಗೆ ಯಾರೂ ಅಡ್ಡಿ ಮಾಡಕೂಡದು’ ಎನ್ನುವ ಅಮ್ಮ ನನಗೆ ಬದುಕಿನ ಮೊತ್ತಮೊದಲ ಪಾಠ ಕಲಿಸಿಕೊಟ್ಟವಳು. ಕಟ್ಟಾ ಮುಸ್ಲಿಮ್ ಸಂಪ್ರದಾಯ ಗಳನ್ನು ಶ್ರದ್ಧೆಯಿಂದ ಆಚರಿಸುವ ನನ್ನ ಅಮ್ಮ, ಶೂದ್ರರ ಗರ್ಭಿಣಿ ಹೆಣ್ಣು ನೀರಿಗೆಂದು ಬಂದಾಗ ತುಳುನಾಡಿನ ಸಂಪ್ರದಾಯದಂತೆ, ತಲೆಗೆ ತೆಂಗಿನೆಣ್ಣೆ ಹಚ್ಚಿ, ‘ನಿನ್ನ ತಲೆ ತಂಪಾಗಿ ರಲಮ್ಮ’ ಎಂದು ಸುಖ ಹೆರಿಗೆಯನ್ನು ಹಾರೈಸುವಳು. ನೆರೆಹೊರೆಯ ಚಿಕ್ಕ ಮಕ್ಕಳಿಗೆ ಬರುವ ಜ್ವರ, ಕೆಮ್ಮು, ಬೇಧಿ ಮುಂತಾದ ಚಿಕ್ಕಪುಟ್ಟ ಕಾಯಿಲೆಗಳಿಗೆ ಅದ್ಯಾವದೋ ಯುನಾನಿಯೋ ಆಯುರ್ವೇದವೋ, ಅವಳಿಗಷ್ಟೇ ತಿಳಿದ ಮದ್ದಿನ ಚಿಕ್ಕಚಿಕ್ಕ ಉಂಡೆಯನ್ನು ಸಂಬಾರಬಳ್ಳಿಯ ಎಲೆಯ ರಸದಲ್ಲೋ, ಈರುಳ್ಳಿಯ ರಸದಲ್ಲೋ ಇಲ್ಲವೇ ತುಳಸೀ ದಳದ ರಸದಲ್ಲೋ ಕಾಯಿಲೆಗೆ ತಕ್ಕಂತೆ ತೇಯ್ದು ಕೊಡುವಂತೆ ಹೇಳುವಳು. ಅವರಿವರ ಸುಖಕಷ್ಟದ ಸಂಗತಿಗಳನ್ನು ಕೇಳುತ್ತಾ ಐದು ಹೊತ್ತು ತಪ್ಪದೆ ನಮಾಜು ಮಾಡುತ್ತಾ ಮನೆ ಯೊಳಗೆಯೇ ಇದ್ದರೂ, ಸಾಕಷ್ಟು ಗೆಳತಿಯರನ್ನು ಸಂಪಾದಿಸಿಕೊಂಡಿದ್ದಳು. ಊರ ಪ್ರತಿಷ್ಠಿತ ಮನೆಯ ಹೆಂಗಸರು ಬಿಡುವಾದಾಗಲೆಲ್ಲ ನಮ್ಮ ಮನೆಗೆ ಬಂದು ಅಮ್ಮನೊಂದಿಗೆ ಮಾತಾ ಡುತ್ತಾ ಕೂರುವರು. ‘ನಾವು ಕೂಡಾ ನಿಮ್ಮ ಹಾಗೆಯೇ, ಮನೆ ಬಿಟ್ಟು ಎಲ್ಲೂ ಹೋಗೋ ದಿಲ್ಲ, ನೋಡಿ….’ ಎನ್ನುತ್ತಿದ್ದರು.

ಸುತ್ತಮುತ್ತಲೆಲ್ಲಾದರೂ ಯಕ್ಷಗಾನದ ಬಯಲಾಟ, ಉತ್ಸವ, ಭೂತಕೋಲ ನಡೆಯುತ್ತಿದ್ದರೆ, ನೆರೆಹೊರೆಯ ಮಕ್ಕಳ ಜೊತೆ ನಾನೂ ಹೋಗುತ್ತೇನೆಂದು ಹಟ ಹಿಡಿಯು ತ್ತಿದ್ದೆ. ‘ಅದಕ್ಕೆಲ್ಲ ಹೋಗೂದಕ್ಕೆ ನೀನೇನೂ ಹಿಂದುವೋ?’ ಎಂದು ಹೆತ್ತವರು ಒಮ್ಮೆಲೆ ಒಪ್ಪದಿದ್ದರೂ, ಹಟಹಿಡಿದು ಒಪ್ಪಿಸುತ್ತಿದ್ದೆ. ಕುರ್‌ಆನ್ ಕಲಿಯುವ ಮದ್ರಸಾ ಮತ್ತು ಹಿಂದುಸ್ಥಾನಿ ಶಾಲೆಯ ಪಾಠಗಳಿಂದ ಬಿಡುವು ಸಿಕ್ಕಾಗಲೆಲ್ಲ ನೆರೆಮನೆಯ ದೇಜು ಮಾತರರ ಮನೆಯಲ್ಲಿ ಸಾಗುವ ಮಹಾಭಾರತ ರಾಮಾಯಣ ಗ್ರಂಥಗಳನ್ನು ಓದುತ್ತಿದ್ದೆ. ಮೊಗವೀರ ಮಕ್ಕಳ ಜೊತೆಗೆ ದೋಣಿಯಲ್ಲಿ ಹೋಗಿ ಉದ್ಯಾವರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದನ್ನು ಕಲಿತಿದ್ದೆ. ಭತ್ತದ ಗದ್ದೆಗೆ ನೀರು ಹಾಯಿಸುವ ಏತದ ಕಟ್ಟೆಯಲ್ಲಿ ನೀರು ಹಾಯಿಸುವುದನ್ನೂ ಕಲಿತೆ.

ಮನೆಯ ಸಮೀಪದಲ್ಲಿರುವ ದೊಡ್ಡ ಹುಣಸೇಮರ. ಅದರಲ್ಲಿ ವಾಸವಾಗಿವೆ ಎನ್ನಲಾದ ನೂರಾರು ಹೆಸರಿನ ಭೂತಪ್ರೇತಗಳು. ನಮ್ಮ ಪುಟ್ಟ ತೆಂಗಿನ ತೋಟಕ್ಕೆ ತಾಗಿರುವ ನಾಗ ಬನ. ನಾಗರ ಪಂಚಮಿಯ ದಿನ ಬ್ರಾಹ್ಮಣ ಪುರೋಹಿತರನ್ನು ಕರೆಸಿ ಅದಕ್ಕೆ ಕೆಳಜಾತಿಯ ಹೆಂಗಸರು ಪೂಜೆ ಮಾಡಿಸುತ್ತಿದ್ದರು. ಬನದ ತುಸುದೂರದಲ್ಲಿ ನಿಂತು ಈ ಹೆಂಗಸರು, ಮಕ್ಕಳು ಕೈಮುಗಿದು ನಿಂತಿರುತ್ತಿದ್ದರು. ನಾವು ತೋಟದಲ್ಲಿ ಚೆಂಡಾಟ ಆಡುತ್ತಿರುವಾಗ ಅಕಸ್ಮಾತ್ತಾಗಿ ಚೆಂಡು ಬನದೊಳಗೆ ಹೋದರೆ ಗೆಳೆಯರು ನನ್ನನ್ನು ಬನದೊಳಗೆ ಹೋಗು ವಂತೆ ಹುರಿದುಂಬಿಸುತ್ತಿದ್ದರು. “ನಾವು ಹೋದ್ರೆ ನಾಗನಿಗೆ ಅಪವಿತ್ರವಾಗಿ ಸಿಟ್ಟು ಬರುತ್ತದೆ, ನಮ್ಮನ್ನು ಕೊಲ್ಲುತ್ತದೆ. ನೀನು ಹೋದರೆ ಏನೂ ಆಗುವುದಿಲ್ಲ”ವೆಂದು ಅವರು ಹೇಳುತ್ತಿ ದ್ದರು. ಭಯವಾದರೂ ಚೆಂಡಾಟದ ಆಸೆಯಿಂದ ಬನಹೊಕ್ಕು ಚೆಂಡನ್ನು ಹೆಕ್ಕಿ ತರುತ್ತಿದ್ದೆ. ವಿಷಸರ್ಪಗಳ ವಾಸಸ್ಥಾನವೆನಿಸಿದ ನಾಗಬನದೊಳಗೆ ಅವರು ಹೋದರೆ ಅಪವಿತ್ರವಾಗು ವುದು. ನಾನು ಹೋದರೆ ಅಪವಿತ್ರವಾಗದೆ ಇರುವುದು ಯಾಕೆಂದು ತಿಳಿಯದ ಕಗ್ಗಂಟಾಗಿತ್ತು.

ಮನೆಯ ಪರಿಸರದಿಂದಾಗಿ ಮುಸ್ಲಿಮ್ ಬದುಕನ್ನು ಇಡಿಯಾಗಿ ಅನುಭವಿಸುತ್ತಾ ಹಿಂದೂ, ಕ್ರೈಸ್ತ ಧರ್ಮೀಯರ ಬದುಕನ್ನು ತಿಳಿದುಕೊಳ್ಳುವ ಅವಕಾಶ ದೊರೆತಿತ್ತು. ಜೊತೆಗೆ ಧರ್ಮವನ್ನು ಮೀರಿದ ವಾಸ್ತವತೆಯ ದರ್ಶನವೂ ನನಗಾಗಿತ್ತು. ನಾವು ನಂಬದ ಭೂತ ಬೊಬ್ಬರ್ಯ ನಮ್ಮನ್ನೂ ಸೇರಿದಂತೆ ಇಡೀ ಗ್ರಾಮವನ್ನು ಮಾರಿ ಪ್ರವೇಶಿಸದಂತೆ ಕಾವಲು ಕಾಯುತ್ತದೆ ಎಂದು ಓರಗೆಯ ಹಿಂದೂ ಗೆಳೆಯರು ಹೇಳಿದಾಗ ಆಶ್ಚರ್ಯಪಟ್ಟಿದ್ದೆ. ಈ ಬೊಬ್ಬರ್ಯ ಭೂತವು ಕೋಲದ ಸಂದರ್ಭದಲ್ಲಿ ತನ್ನ ಹೆತ್ತವರು ಮುಸ್ಲಿಮ್ ಭಾರತೀಯ ಸಂಸ್ಕೃತಿಯ ಮೂಲರೂಪ ಪರಿಚಯವಾದದ್ದು ನನಗೆ ಇಲ್ಲಿಯೆ. ಬಹುಸಂಖ್ಯಾತರಾದ ಹಿಂದೂಗಳ ಪ್ರೀತಿ ವಿಶ್ವಾಸವನ್ನು ನಾವು ಇಡಿಯಾಗಿ ಸವಿಯುತ್ತಿದ್ದ ಹಳ್ಳಿಯ ವಾತಾವರಣಕ್ಕೆ ಈ ಹಿನ್ನೆಲೆಯೇ ಕಾರಣವಾಗಿದ್ದರೂ, ಇತ್ತೀಚೆಗಷ್ಟೇ ಬೊಬ್ಬರ್ಯನ ಭೂತಕೋಲದ ಚಪ್ಪದ ಮೇಲೆ ಹಾರಾಡುವ ಭಗವಾಧ್ವಜದೊಂದಿಗೆ ಪರಸ್ಪರ ಅವಿಶ್ವಾಸದ ಹೊಗೆ ಆವರಿಸಿ ಕೊಂಡಿರುವುದು ಕಂಡು ಆತಂಕಗೊಂಡಿದ್ದೇನೆ.

ಧರ್ಮನಿಷ್ಠಳಾದ ನನ್ನ ಅಮ್ಮನಿಗೆ ಬಕ್ರೀದ್, ರಮ್ಜಾನ್ ಹಬ್ಬಗಳಲ್ಲಿ ನೆರೆಹೊರೆಯ ಹಿಂದೂಗಳಿಗೆ ಸಿಹಿತಿಂಡಿ, ತುಪ್ಪದನ್ನ, ಮಾಂಸದ ಅಡುಗೆಯನ್ನು ಹಂಚುವುದು ಕೂಡಾ ಹಬ್ಬದ ಆಚರಣೆಯ ಭಾಗವೆಂಬಂತೆ ಆಗಿತ್ತು. ಜೊತೆಗೆ ದೀಪಾವಳಿ, ಚೌತಿ ಅಷ್ಟಮಿಯ ಹಬ್ಬಗಳಲ್ಲಿ ನೆರೆಹೊರೆಯವರು ಕೊಡುವ ತಿಂಡಿಗಳನ್ನು ನಮಗೆಲ್ಲರಿಗೂ ಹಂಚಿ ಸಂಭ್ರಮ ಪಡುತ್ತಿದ್ದಳು. ‘ಕಡಲ ತೀರದಲ್ಲಿ ಬೆಂಕಿ ಬಿದ್ದದ್ದು’ ಕತೆಯಲ್ಲಿ ಬಿದ್ದ ಬಡತನದ ಬೆಂಕಿ ಯೂಸುಫನ ಕುಟುಂಬವನ್ನೂ ಅಣ್ಣಯ್ಯನ ಕುಟುಂಬಗಳನ್ನು ಏಕಕಾಲಕ್ಕೆ ಮುತ್ತಿಕೊಳ್ಳುತ್ತದೆ. ‘ಹತ್ಯೆ’ ಕತೆಯಲ್ಲಿ ಬರುವ ಮುಸ್ಲಿಮ್ ಮಕ್ಕಳಂತೆಯೇ ನಮ್ಮನ್ನು ಸಾಕಿದ ಪ್ರೀತಿಯ ದನವನ್ನು ದೀಪಾವಳಿಯ ಗೋಪೂಜೆಯ ದಿನ ಮೀಯಿಸಿ, ಸಿಂಗರಿಸಿ, ಅದಕ್ಕೆ ಅಮ್ಮ ಮಾಡುವ ಅರಸಿನದೆಲೆಯ ಕಡುಬನ್ನು ತಿನ್ನಿಸಿ, ಸಂಭ್ರಮ ಪಡುತ್ತಿದ್ದೆವು.

ಪೇಟೆಯ ಪ್ರಭಾವ

ಹಳ್ಳಿಯ ವಾತಾವರಣದಲ್ಲಿ ಜನರ ಮಧ್ಯೆ ಇರುವ ಸ್ನೇಹ ವಿಶ್ವಾಸವನ್ನು ಕಂಡ ನನಗೆ ಪೇಟೆಯಲ್ಲಾದ ಅನುಭವವೇ ಬೇರೆ. ಪೇಟೆಯ ಶಾಲೆಯ ಏಳನೆಯ ತರಗತಿಯಲ್ಲಿ ಓದುವಾಗ ನನ್ನ ಸಹಪಾಠಿಗಳು ನಮ್ಮ ಜಾತಿ ಫಸ್ಟ್. ನಿಮ್ಮ ಜಾತಿ ಸೆಕೆಂಡ್, ಅವರದ್ದು ಥರ್ಡ್, ಬ್ಯಾರಿಗಳದ್ದು ಲಾಸ್ಟ್‌ಜಾತಿ ಎನ್ನುವಾಗ ನಾನು ಬೆಪ್ಪನಂತೆ ಅವರ ಮಾತುಗಳನ್ನು ಕೇಳಿಕೊಳ್ಳುತ್ತಿದ್ದೆ. ಜೊತೆಗೆ ಅದೇ ಕ್ಲಾಸ್‌ನಲ್ಲಿ ರಜೆಯ ಅನುಭವವನ್ನು ಬರೆದು ತರಲು ಹೇಳಿದಾಗ, ಪ್ರಬಂಧ ರೂಪದಲ್ಲಿ ನಾನೊಬ್ಬನೇ ಬರೆದು ತಂದದ್ದನ್ನು ಅಧ್ಯಾಪಕರು ಓದಿ, “ಬ್ಯಾರಿ… ನೀನಾ ಬರ್ದದ್ದು?” ಎಂದು ಉದ್ಗಾರವೆತ್ತಿದ್ದರು. ಬೇರಿನ್ನೇನೂ ಹೇಳದ ಅವರ ಮಾತನ್ನು ಕೇಳಿ ಬ್ಯಾರಿ ಕನ್ನಡದಲ್ಲಿ ಬರೆಯುವುದು ತಪ್ಪೇನೋ ಅಂತ ನನಗನ್ನಿಸಿತ್ತು. ಇದರಿಂದಾಗಿ ಕಾಲೇಜಿನಿಂದ ಹೊರಬರುವ ತನಕವೂ ಬರವಣಿಗೆ ಎಂದರೆ ಒಂದು ತರದ ಅವ್ಯಕ್ತ ಭಯ ಆವರಿಸಿತ್ತು. ಕಾಲೇಜಿನಲ್ಲಿ ಕೈಬರಹದ ಪತ್ರಿಕೆಗೆ ಕೂಡಾ ಬರೆಯುವ ಧೈರ್ಯ ಮೂಡಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಅಧ್ಯಾಪಕರಲ್ಲಿ ಕಂಡು ಬಂದ ಕೋಮುವಾದದ ಮೂಲರೂಪ ಎಷ್ಟು ಅಪಾಯಕಾರಿಯಾದದ್ದೆಂದು ನನಗೆ ತಿಳಿದದ್ದು ತೀರಾ ಇತ್ತೀಚೆಗೆ.

ಕಾಲೇಜಿನಿಂದ ಹೊರಬಂದ ನಂತರ ಬರೆದ ನನ್ನ ಪ್ರಥಮ ಕತೆ ‘ನಿಕಾಹ್’ ಸುಧಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಕನ್ನಡದಲ್ಲಿ ಪೂರ್ಣ ಪ್ರಮಾಣದ ಮುಸ್ಲಿಮ್ ವಸ್ತುವಿನ ಕತೆ ಇದೇ ಪ್ರಥಮದ್ದು ಅಂತ ನನ್ನ ಅಭಿಪ್ರಾಯ. ನನಗಿಂತ ಹಿಂದೆಯೇ ಮಮ್ತಾಜ್, ಬೊಳುವಾರು, ಅಬ್ದುಲ್ ಮಜೀದಖಾನ್, ರಮಜಾನ ದರ್ಗಾ, ಕೆ.ಎಸ್. ನಿಸಾರ್ ಅಹ್ಮದ್, ಅಕ್ಬರಲಿ ಮುಂತಾದವರು ಬರೆಯುತ್ತಿದ್ದರೂ ಮುಸ್ಲಿಮ್ ಪಾತ್ರಗಳೂ ಬರುತ್ತಿದ್ದವಾದರೂ, ಪೂರ್ಣಪ್ರಮಾಣದ ಮುಸ್ಲಿಮ್ ಬದುಕಿನ ಪರಿಚಯ ಕನ್ನಡ ಸಾಹಿತ್ಯಕ್ಕೆ ಉಂಟಾದದ್ದು ಈ ನಂತರದಲ್ಲಿ.

ಕಥೆಗಳ ಹಿನ್ನೆಲೆ

ನನ್ನ ಕಥೆ, ಕಾದಂಬರಿಗಳು ಹುಟ್ಟಿಕೊಂಡದ್ದು, ನಾನು ಕಂಡು ಅನುಭವಿಸಿದ ಬದುಕಿನ ಘಟನೆಗಳ ಹಿನ್ನೆಲೆಯಲ್ಲಿ ನನ್ನ ಸಹೋದರಿಯರ ಮದುವೆಯ ಸಂದರ್ಭದಲ್ಲಿ ಮತ್ತು ಸಂಬಂಧಿಕರ ಮನೆಯ ಹೆಮ್ಮಕ್ಕಳ ಮದುವೆಯ ಸಂದರ್ಭದಲ್ಲಿ. ವಧುಗಳು ಒಂದೇ ಸಮನೆ ಅಳುವುದು, ಉಳಿದವರಿಗೆಲ್ಲಾ ಸಂತೋಷ, ಸಂಭ್ರಮ ಪಡುವುದು ಕಂಡು ನಾನು ಬಾಲ್ಯದಲ್ಲಿ ನೊಂದಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಯಾಕೆಂದು ತಿಳಿಯದೆ ಅವರೊಂದಿಗೆ ನಾನೂ ಅಳುತ್ತಿದ್ದೆ. ಕೆಲವು ಸಂದರ್ಭದಲ್ಲಂತೂ ಈ ಮದುವೆ ಸಮಾರಂಭಗಳಿಗೆ ಹೋಗುವುದೇ ಬೇಡ ಎನ್ನುವಷ್ಟು ಜಿಗುಪ್ಸೆಯೂ ಉಂಟಾಗಿತ್ತು. ಇವೆಲ್ಲದರ ಬಗ್ಗೆ ಯೋಚಿಸುತ್ತಾ ಹೋದಂತೆ ನಿಗೂಢವೆನಿಸುತ್ತಿತ್ತು. ‘ನಿಕಾಹ್’ ‘ಅಕ್ಕನ ಮದುವೆ ಮತ್ತು ಆಡು’ ‘ಒಂದು ಹಗಲು ಒಂದು ರಾತ್ರಿ’ ಮುಂತಾದ ನನ್ನ ಕತೆಗಳು ಹುಟ್ಟಿಕೊಂಡದ್ದು ಈ ಅನುಭವಗಳ ಹಿನ್ನೆಲೆಯಲ್ಲಿ. ‘ನಿಹಾಕ್’ನಲ್ಲಿ ಖೈರುನ್ನಿಸಾಳಿಗೆ ಸಂಪ್ರದಾಯದ ನೇಣಿಗೆ ಬದುಕನ್ನು ಬಲಿಕೊಡುವಂತಹ ಸನ್ನಿವೇಶ ಎದುರಾಗುತ್ತದೆ. ‘ಅಕ್ಕನ ಮದುವೆ ಮತ್ತು ಆಡು’ ಕಥೆಯಲ್ಲಿ ಕಟ್ಟುಪಾಡಿಗೆ ಬಂದಿಯಾದ ಅಕ್ಕ, ತಪ್ಪಿಸಿಕೊಂಡರೂ ಮತ್ತೆ ಸಿಕ್ಕಿಬಿದ್ದು ಬಲಿಯಾಗುವ ಆಡು ಇಬ್ಬರ ಪರಿಸ್ಥಿತಿಯೂ ಒಂದೇ ಆಗಿದೆ. ಈ ಎರಡು ಕಥೆಗಳ ಮಧ್ಯೆ, ಇವನ್ನು ಧಿಕ್ಕರಿಸುವ ವ್ಯಕ್ತಿತ್ವವೊಂದು ಹುಟ್ಟಿ ಬರುವ ಕನಸನ್ನು ಕಾಣುತ್ತಿದ್ದೆ. ಈ ಕನಸಿನ ಪ್ರತೀಕವಾಗಿ ಹುಟ್ಟಿದ ಕಥೆ ‘ಒಂದು ಹಗಲು ಒಂದು ರಾತ್ರಿ’ ಈ ಕಥೆಯ ನಾಯಕಿ ಸಂಪ್ರದಾಯದ ಕೋಟೆಯನ್ನು ಧರ್ಮದ ಚೌಕಟ್ಟಿನೊಳಗೆ ನಿಂತು ಧಿಕ್ಕರಿಸುತ್ತಾಳೆ, ಮಾತ್ರ ವಲ್ಲ, ಜಯವನ್ನೂ ಗಳಿಸುತ್ತಾಳೆ. ಈ ಕಥೆಯನ್ನೋದಿದ ಪ್ರಭಾವದಿಂದ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯನ್ನು ಬರೆದೆನೆಂದು ಖಾಸಗಿಯಾಗಿ ಸಹೋದರಿ ಸಾರಾ ಅಬೂಬಕ್ಕರ್‌ರವರು ಹೇಳಿದಾಗ ನನಗೆ ಅತೀವ ಸಂತೋಷವಾಗಿತ್ತು. ಹಿಂದಿ, ಗುಜರಾತಿ ಭಾಷೆಗಳಿಗೆ ಅನುವಾದಗೊಂಡ ‘ಜುಲೇಖ’ ಕತೆಯ ನಾಯಕಿ ನಮ್ಮ ನಡುವೆ ಇಂದೂ ಬದುಕಿರುವವಳು. ಬಾಲ್ಯದ ನೆನಪುಗಳು ಇಡಿಯಾಗಿ ‘ನೋಂಬು’, ‘ಅಪ್ಪ’, ‘ತೀರ್ಮಾನ’, ‘ವಂತಿಗೆ’, ‘ಕ್ರೌರ್ಯ’, ‘ಹತ್ಯೆ’, ‘ನೆರೆ’ ಕತೆಗಳಲ್ಲಿ ಮೂಡಿಸಿದ್ದೇನೆ.

ಈ ದೇಶದ ಪ್ರಚಲಿತ ಸಮಸ್ಯೆಗಳು, ಘಟನೆಗಳು, ಕಥೆಗಾರನಾದ ನನ್ನನ್ನು ಗಾಢವಾಗಿ ಕಾಡುತ್ತವೆ. ಬರಹಗಾರ ಇವಕ್ಕೆ ಪ್ರತಿಕ್ರಿಯಿಸದಿದ್ದರೆ, ನನ್ನ ಮಟ್ಟಿಗೆ ಸರ್ವಪರಿತ್ಯಾಗ ಮಾಡಿ ಜೀವಂತ ಶವವಾಗಿರುವುದೇ ಆಗಿದೆ. ಒಬ್ಬ ಬರಹಗಾರನಾದವನಿಗೆ ಸಾಹಿತ್ಯ ಸೃಷ್ಟಿಯೇ ಜೀವನದ ಪ್ರಧಾನ ಉದ್ದೇಶವೇನೂ ಆಗಿರುವುದಿಲ್ಲ. ಎಲ್ಲ ಸಾಮಾನ್ಯ ಮನುಷ್ಯನಂತೆಯೇ ಬರಹಗಾರ ಕೂಡಾ ಸಮಾಜಜೀವಿಯಾಗಿರುತ್ತಾನೆ. ಸಾಹಿತ್ಯವನ್ನು ಸಮಾಜದ, ಸಂಸ್ಕೃತಿಯ ಉತ್ತಮ ಫಲವೆಂದು ನಾವು ಗುರುತಿಸುತ್ತೇವೆ. ಸಮಾಜವು ಧರ್ಮದ ಆಧಾರದ ಮೇಲೆ ಮುಖ್ಯವಾಗಿ ಗುರುತಿಸಲ್ಪಡುತ್ತದೆ. ಧರ್ಮಾಧಾರಿತ ಸಮಾಜವು ತಾನು ಪ್ರತಿನಿಧಿಸುವ ನಂಬಿಕೆಗಳು, ಹಳೆಯ ಪರಂಪರೆಗಳು, ಸಂಪ್ರದಾಯಗಳು, ಮೌಲ್ಯಗಳು ಶ್ರೇಷ್ಠ ಮತ್ತು ಪ್ರಶ್ನಾತೀತವೆಂಬ ಹಮ್ಮು ಬೆಳೆಸಿಕೊಂಡಿರುತ್ತದೆ. ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಯ ಆಯ್ಕೆಯ ಬಗ್ಗೆ ಪ್ರಶ್ನಿಸುವುದು ಹೇಗೆ ತಪ್ಪಾಗುತ್ತದೋ ಹಾಗೆಯೇ ಒಬ್ಬ ಸೃಜನಶೀಲ ಲೇಖಕನು ಆಯ್ದುಕೊಳ್ಳುವ ವಸ್ತುವಿನ ಬಗ್ಗೆ ತಕರಾರೆತ್ತುವುದರ ಮೂಲಕ ಒತ್ತಡವನ್ನು ಹೇರುವುದು ಕೂಡಾ ತಪ್ಪಾಗುತ್ತದೆ. ಧರ್ಮ, ಸಮಾಜ ತನ್ನ ಒಡಲೊಳಗಿನ ಶ್ರೇಷ್ಠತೆಯ ಅಹಂಕಾರವನ್ನು ಯಾರೂ ಪ್ರಶ್ನಿಸದೆ ಸುಮ್ಮನಿದ್ದರೆ ಅಥವಾ ಹೊಗಳಿ ವೈಭವೀಕರಿಸಿದರೆ ಜನ ಪ್ರಸನ್ನರಾಗುತ್ತಾರೆ. ಬಹುಮಾನವನ್ನಿತ್ತು ಸನ್ಮಾನಿಸುತ್ತಾರೆ. ಸಮಾಜ ಒಪ್ಪಿ ಬಾಳುವ ಮೌಲ್ಯಗಳ ಚೌಕಟ್ಟನ್ನು ಮೀರಿದ ಜೀವನ ಸತ್ಯವನ್ನು ಕಾಣಿಸುವ ಪ್ರಯತ್ನವನ್ನು ಮಾಡುವ ಬರಹಗಾರರನ್ನು, ಸಮಾಜ ಸಂಶಯದ ದೃಷ್ಟಿಯಿಂದಲೇ ನೋಡುತ್ತದೆ. ಮನುಷ್ಯನ ಆತ್ಮವನ್ನು ತಟ್ಟಿ ಎಚ್ಚರಿಸಿ ತನ್ಮಯಗೊಳಿಸುವ ಮೋಡಿಗೊಳಿಸುವಂತಹ ಶಕ್ತಿಯು ಸಾಹಿತ್ಯ ಮತ್ತು ಧರ್ಣ ಎರಡಕ್ಕೂ ಇದೆ. ಇವೆರಡಕ್ಕೂ ಮನುಷ್ಯನ ಆತ್ಮಬಲವನ್ನು ಹೆಚ್ಚಿಸುವ ಶಕ್ತಿಗುಣವನ್ನು ಹೊಂದಿದ್ದರೂ ಕೂಡ ಪರಸ್ಪರ ಮುಖಾಮುಖಿಯಾಗಿ ಸಂಘರ್ಷಕ್ಕಿಳಿ ಯುವುದು ಕಂಡುಬರುತ್ತದೆ. ಈ ಸಂಘರ್ಷದಲ್ಲಿ ಸಾಹಿತ್ಯಕ್ಕೇನೂ ಅಂತಹ ಲಾಭವಾಗಿಲ್ಲ ವೆನಿಸುತ್ತದೆ. ಧರ್ಮವೂ ತನ್ನ ಜನಾಕರ್ಷಣೆಯನ್ನು ಕಳಕೊಂಡಿಲ್ಲ. ಧರ್ಮದ ಅನುಯಾಯಿ ಗಳ ಬಗ್ಗೆಯೋ ಅಥವಾ ಕುರುಡು ಸಂಪ್ರದಾಯಗಳ ಬಗ್ಗೆಯೋ ಸಾಹಿತ್ಯವು ವಿಮರ್ಶೆಗೆ ಇಳಿದಾಗ, ತಮ್ಮ ಧರ್ಮಕ್ಕೆ ಅಪಾಯವಿದೆ ಎಂದು ಅನುಯಾಯಿಗಳು ಹೋರಾಟಕ್ಕೆ ಇಳಿದುಬಿಡುತ್ತಾರೆ. ಸಾಹಿತಿ ಕೂಡಾ ಧರ್ಮದ ಪಥವನ್ನು ಅಲುಗಾಡಿಸಿಬಿಡುತ್ತೇನೆಂದೋ, ಜನರನ್ನು ಧರ್ಮದ ಹಿಡಿತದಿಂದ ಮುಕ್ತಗೊಳಿಸಿಬಿಡುತ್ತೇನೆಂದೋ ಹೊರಟರೆ ತೀರಾ ಹುಂಬತನವಾಗುತ್ತದೆ. ಈ ಎರಡು ಬಣಗಳೂ ಹೀಗೆ ಘರ್ಷಣೆಗೆ ಇಳಿದಾಗ ತಮ್ಮ ಮೂಲದಲ್ಲಿರುವ ಮಾನವೀಯತೆಯನ್ನು ಮರೆತು ಬಿಡುತ್ತಾರೆ. ಈ ಅಂಶವನ್ನು ಗಮನದಲ್ಲಿ ಟ್ಟುಕೊಂಡು ನನ್ನ ಕಥೆಗಳ ಬಗ್ಗೆ ಧಾರ್ಮಿಕ ಪ್ರತಿಭಟನೆ ಬಂದಾಗ ಪ್ರತಿಕ್ರಿಯಿಸಿದ್ದೇನೆ. ಶಾ ಬಾನು ಪ್ರಕರಣವು ಇಡೀ ದೇಶದಲ್ಲಿ ಚರ್ಚೆಗೆ ಬಂದಾಗ ಕನ್ನಡದ ಮುಸ್ಲಿಮ್ ಸಮಾಜದಿಂದ ಬಂದ ಬರಹಗಾರರು ತಳೆದ ನಿಲುವು ಪ್ರಗತಿಪರವಾದದ್ದು. ಧಾರ್ಮಿಕ ತತ್ವದ ಸೌಮ್ಯ ಮುಖವನ್ನು ಮುಂದಿಟ್ಟುಕೊಂಡು ಮಾಡಿದ ಚರ್ಚೆಗಳು ಆಳವಾಗಿ ಚಿಂತನೆಗಳಗಾದದ್ದು ಕಂಡು ಬಂತು. ಬಾನು ಮುಷ್ತಾಕ್‌ರವರ ನೇತೃತ್ವದಲ್ಲಿ ಹಾಸನದಲ್ಲಿ ಲೇಖಕರು ಒಂದಾಗಿ ಮಾಡಿದ ಚರ್ಚೆಯು ಬಹಳ ಸಮಯೋಚಿತವಾಗಿತ್ತು. ಜೊತೆಗೆ ಕುರ್‌ಆನ್‌ನ ಕನ್ನಡ ಅನುವಾದವು ಪ್ರಕಟಗೊಂಡದ್ದರಿಂದ ಕೆಲವೇ ಕೆಲವರ ಸೊತ್ತಾಗಿದ್ದ ಇಸ್ಲಾಮ್ ಸಂದೇಶಗಳ ನಿಕಟ ಪರಿಚಯವಾದದ್ದು ಬರಹಗಾರರಿಗೆ ವಿಶೇಷ ಅನುಕೂಲವಾಯಿತು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕೋಮುವಾದದ ಅಪಾಯಕಾರಿ ಬೆಳವಣಿಗೆಯೂ ಕಂಡುಬಂತು.

ಈ ಹಿನ್ನೆಲೆಯಲ್ಲಿ ‘ವೈಯಕ್ತಿಕ’, ‘ಕ್ರೌರ್ಯ’, ‘ಮುಸುಕು’ ಮುಂತಾದ ಕಥೆಗಳು ಹುಟ್ಟಿಕೊಂಡವು. ವಿವಾದಕ್ಕಾಗಿ ಅಥವಾ ವಿವಾದವನ್ನು ಸೃಷ್ಟಿಸುವ ಸಲುವಾಗಿ ಬರೆಯದಿರುವ ಬಗ್ಗೆ ಪ್ರಜ್ಞಾಪೂರ್ವಕವಾಗಿ ಎಚ್ಚರವಹಿಸಿಕೊಳ್ಳುತ್ತೇವೆ. ಹೇಳಬೇಕಾದದ್ದನ್ನು ಯಾವ ಮುಲಾಜಿಲ್ಲದೆ ವ್ಯಕ್ತಪಡಿಸುವ ಉದ್ದೇಶ ನನ್ನದು. ಇದರಿಂದಾಗಿ ಧರ್ಮ ದ್ವೇಷವನ್ನು ಸಾಧಿಸದೆ ನನ್ನ ಕಥೆಗಳು ಬದುಕಿನ ಸತ್ಯಾನ್ವೇಷಣೆಯ ಭಾಗವಾಗಿ ಓದುಗರಿಗೆ ನೀಡುವ ನಮ್ರ ಪ್ರಯತ್ನಗಳಾಗಿವೆ.

ಗಾಢವಾಗಿ ಕಲಕಿದ ಸಂಗತಿಗಳು

ದೇಶದ ಎಲ್ಲೆಡೆಗಳಲ್ಲಿ ವ್ಯಾಪಿಸಿದ ಕೋಮುದ್ವೇಷ, ಕೋಮುಗಲಭೆಗಳು ಬರಹಗಾರ ನಾದ ನನ್ನನ್ನು ಬಹಳವಾಗಿ ಕಾಡಿವೆ. ಈ ದ್ವೇಷದ ಕಿಚ್ಚಿಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ದೇಶದ ಪ್ರಮುಖ ಅಲ್ಪಸಂಖ್ಯಾತರಾದ ಮುಸ್ಲಿಮರು ಸೊತ್ತುಗಳು, ಪ್ರಾಣಿಗಳನ್ನು ಕಳೆದು ಕೊಂಡಿರುವುದು, ವೈಯಕ್ತಿಕವಾಗಿ ಅನೇಕ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಾನು ದೇಶಕ್ಕೆ ನಿಷ್ಠನಾಗಿದ್ದೇನೆಂದು ಪ್ರಮಾಣ ಮಾಡಬೇಕಾಗಿ ಬರುವ ಒತ್ತಡ, ಯಾರೋ ಎಲ್ಲಿಯೋ ಮುಸ್ಲಿಮ್ ಹೆಸರಿನ ಅಪರಾಧಿಯೊಬ್ಬ ಮಾಡಿದ ತಪ್ಪಿಗೆ, ಅಪರಾಧಕ್ಕೆ ಇಡೀ ಮುಸ್ಲಿಮ್ ಸಮುದಾಯವನ್ನು ಜವಾಬ್ದಾರರನ್ನಾಗಿ ಮಾಡುವ ಸನ್ನಿವೇಶ ಎದುರಾಗುತ್ತಿ ರುವುದು, ನಮ್ಮಿಂದ ಉತ್ತರವನ್ನು ನಿರೀಕ್ಷಿಸುವುದು ಮುಂತಾದ ಎದುರಾಗುವ ಸಂದರ್ಭಗಳು ಅತ್ಯಂತ ನೋವಿನದ್ದು. ಆದರೂ ಈ ದೇಶದ ಬಹುಸಂಖ್ಯಾತ ಹಿಂದುಗಳು ಸ್ನೇಹಪರರು ಮತ್ತು ಸಹಿಷ್ಣುತೆಯ ಪ್ರತಿಪಾದಕರು ಎಂಬುದು ಸಾಂತ್ವನ ನೀಡುವ ಅಂಶ. ಎಲ್ಲ ರೀತಿಯ ಕೋಮುವಾದವನ್ನು ವಿರೋಧಿಸುತ್ತಲೇ ಮನುಷ್ಯನ ಒಳಗಿರುವ ಒಳ್ಳೆತನಕ್ಕೆ, ಮಾನವೀಯ ಮುಖವನ್ನು ತೋರಿಸಿಕೊಡುವುದಕ್ಕೆ ಒತ್ತುಕೊಟ್ಟ ಕಥೆಗಳನ್ನು ‘ದಜ್ಜಾಲ’ ಕಥಾ ಸಂಕಲನದಲ್ಲಿ ತಂದಿದ್ದೇನೆ. ಕೋಮುಗಲಭೆಗಳ ಹಿನ್ನೆಲೆಯನ್ನೊಳಗೊಂಡ ನನ್ನ ಕಥೆಗಳಲ್ಲಿ ಹಿಂದೂಗಳ ಹೃದಯದ ಒಂದಲ್ಲ ಒಂದು ಮೂಲೆಯಲ್ಲಿ ಮುಸ್ಲಿಮ್ ವಿರೋಧವಿದೆ ಎನ್ನುವುದನ್ನು ಪದಗಳ ಸರ್ಕಸ್ಸಿನ ಮೂಲಕ ಹೇಳುವುದನ್ನು ನಾನು ಇಷ್ಟಪಡುವುದಿಲ್ಲ. ಹಾಗೆಯೇ ಮುಸ್ಲಿಮರ ಬಗ್ಗೆ ಕೂಡಾ. ಎಲ್ಲರ ಬದುಕು ಕೂಡಾ ಒಳಿತು ಕೆಡಕುಗಳ ಮಿಶ್ರಣವೆಂಬುದನ್ನು ವ್ಯಕ್ತಪಡಿಸಲು ಇಷ್ಟಪಡುತ್ತೇನೆ. ‘ಒಸರು’, ‘ವ್ಯಾಜ್ಯ’, ‘ಹೃದಯ ಗಳು’, ‘ಬುರ್ಖಾ’, ‘ಕೋಮು’, ‘ಪಂಜರ’ ಮುಂತಾದ ಕಥೆಗಳನ್ನು ಮುಸ್ಲಿಮ್ ಬದುಕು, ಮನಸ್ಸುಗಳನ್ನು ಮನುಷ್ಯತ್ವದ ಅನ್ವೇಷಣೆಗಳಿಗಾಗಿ ಬಳಸಿಕೊಂಡಿದ್ದೇನೆ. ಇಂತಹ ವಸ್ತುವಿನ ಬಗ್ಗೆ ಬರೆಯುವಾಗ ನನ್ನ ಹಳ್ಳಿಯ ಸೌಹಾರ್ದ ವಾತಾವರಣವನ್ನು ಮತ್ತೆ ಮತ್ತೆ ಮೂಡಿಸು ವುದು ನನಗೆ ಅನಿವಾರ್ಯ.

ಇಲ್ಲಿ ನನಗೆ ಉರ್ದು ಕವಿ ಫೈಜ್ ಅಹ್ಮದ್ ಅವರ ಕವನ ‘ದುವಾ’ ಅಥವಾ ‘ಪ್ರಾರ್ಥನೆ’ ಪ್ರಸ್ತುತವೆನಿಸುತ್ತದೆ. ಈ ಕವನದೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿ ಸುತ್ತೇನೆ.

ಬನ್ನಿ ನಾವು ಪ್ರಾರ್ಥಿಸೋಣ, ಕೈಯೆತ್ತಿ :

ಪ್ರಾರ್ಥನೆಯ ಸಂಪ್ರದಾಯ ಮರೆತ ನಾವು
ಬೆಚ್ಚನೆಯ ಪ್ರೀತಿಯೊಂದನುಟ್ಟು
ಬೇರೇನನ್ನೂ ಅನುಭವಿಸಲಾರದವರು.
ಮೂರ್ತಿಯನ್ನಾಗಲೀ, ದೇವರನ್ನಾಗಲೀ
ಪೂಜಿಸಲರಿಯದವರು
ಬನ್ನಿ ನಾವೂ ಪ್ರಾರ್ಥಿಸೋಣ ಕೈಯೆತ್ತಿ
ಮೋಸ ವಂಚನೆಗಳೆಲ್ಲವೂ
ಪಾಪವೆನ್ನುವ ಧರ್ಮನಿಷ್ಠರಲ್ಲಿ ತುಂಬಲಿ,
ಧರ್ಮವ ಪ್ರಶ್ನಿಸುವ ಧೈರ್ಯ ನೆತ್ತಿಯ ಮೇಲೆ ತೂಗುವ ಕತ್ತಿಯ
ಕ್ರೌರ್ಯದಡಿಯಲ್ಲಿ ಬದುಕುವ ದುರ್ಬಲರಲ್ಲಿ
ದಂಡಿಸುವ ಕೈಗಳ ಕತ್ತಿಯ
ಕಿತ್ತೆಸೆವ ಶಕ್ತಿ ತುಂಬಿ ಬರಲಿ
ಬನ್ನಿ ನಾವೂ ಪ್ರಾರ್ಥಿಸೋಣ, ಕೈಯೆತ್ತಿ.