‘ನಾನೇಕೆ ಬರೆಯುತ್ತೇನೆ?’ ಇದೊಂದು ಪ್ರಶ್ನೆ. ಲೇಖಕ ತಾನೇ ಈ ಪ್ರಶ್ನೆಯನ್ನು ಹಾಕಿಕೊಂಡಂತೆ ಕಂಡರೂ ಬಹುಶಃ ಇದು ಲೇಖಕನೇ ಕೇಳಿಕೊಂಡ ಪ್ರಶ್ನೆಯಾಗಿರುವುದಿಲ್ಲ. ಲೇಖಕನೇ ಈ ಪ್ರಶ್ನೆಯನ್ನು ಕೇಳಿಕೊಂಡು ಉತ್ತರಿಸುವ ಕಷ್ಟಕ್ಕೆ ಹೋಗಲಾರ ಎಂದು ಕಾಣುತ್ತದೆ. ಒಮ್ಮೊಮ್ಮೆ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಸಂದರ್ಭಗಳು, ಸಾಮಾಜಿಕ ಒತ್ತಡಗಳು ಲೇಖಕನಿಗೆ ಬರಬಹುದು. ಉತ್ತರಿಸಲು ಪ್ರಯತ್ನಿಸಿದರೂ ಅದನ್ನು ಒಪ್ಪುವ, ಬಿಡುವ ಸಂದರ್ಭಗಳು ಓದುಗರಿಗೆ ಇದ್ದೇ ಇರುತ್ತವೆ. ಆದರೆ ಈ ಪ್ರಶ್ನೆಯನ್ನು ಓದುಗ – ವಿಮರ್ಶಕ – ಮಾಧ್ಯಮಗಳು ಲೇಖಕನಿಗೆ ಕೇಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಹಾಗೆ ನೋಡಿದರೆ ಈ ಪ್ರಶ್ನೆಯನ್ನು ಲೇಖಕನಿಗೆ ಕೇಳಬೇಕೆ? ಕೇಳಲಾಗಿದೆ ಎಂದು ಸೌಜನ್ಯಕ್ಕೆ ಲೇಖಕ ಉತ್ತರಿಸುವ ಕಷ್ಟಕ್ಕೆ ಸಿಲುಕಬೇಕೆ? ಈ ಪ್ರಶ್ನೆಯನ್ನು ಕೇಳಿದವರಿಗೇ ‘ನಾನೇಕೆ ಬರೆಯುತ್ತೇನೆ’ಂದು ನಿಮಗೆ ತಿಳಿದಿಲ್ಲವೇ? ಎಂದು ಲೇಖಕನೇ ತಿರುಗಿ ಪ್ರಶ್ನೆ ಕೇಳಬಹುದು. ‘ನನ್ನ ರಚನೆಗಳಿವೆ. ಅವುಗಳನ್ನು ಓದಿದರೆ ‘ನಾನೇಕೆ ಬರೆಯುತ್ತೇನೆ’ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ’ ಎಂದು ಲೇಖಕ ಹೇಳಬಯಸುತ್ತಾನೆ. ಇದು ಲೇಖಕನ ಅಭಿಪ್ರಾಯವಾಗಿ ದ್ದರೂ, ಲೇಖಕನಿಗೆ ಒಳಗೆ ಎಲ್ಲೋ ಈ ಪ್ರಶ್ನೆಗೆ ಉತ್ತರಿಸುವ ಸೌಜನ್ಯಕ್ಕೆ ಒಳಗಾಗುತ್ತಾನೆ. ಬಿಗುಮಾನದಿಂದಲೇ ಸಿದ್ಧನಾಗುತ್ತಾನೆ. ‘ಕೋಗಿಲೆಗೆ ನೀನು ಯಾಕೆ ಹಾಡುತ್ತಿ – ಎಂದು ಕೇಳಿದರೆ ಅದು ಏನು ಹೇಳೀತು’? ಎಂದು ಲೇಖಕ ಪ್ರಶ್ನೆಯನ್ನು ಮುಂದಿಡಲು ನೋಡುತ್ತಲೇ ಉತ್ತರಿಸಲು ಸಿದ್ಧನಾಗಬಹುದು.

‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಲೇಖಕನ ಉತ್ತರ ಸೈದ್ಧಾಂತಿಕವಾಗಿರಬೇಕು. ನಿಲುವು ಇಲ್ಲದೆ ಯಾವ ಲೇಖಕನೂ ಸಾಹಿತ್ಯ ರಚನೆಗೆ ತೊಡಗುವುದಿಲ್ಲ. ಅಂತಿಮವಾಗಿ ಆ ನಿಲುವು ರಾಜಕೀಯವಾಗಿರುತ್ತದೆ ಎಂಬ ಮಾತು ಬೇರೆ. ಕನ್ನಡದ ಲೇಖಕರು ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದಾಗಲೆಲ್ಲ ಸಾಮಾನ್ಯವಾಗಿ ಒಂದನ್ನು ಮರೆಯದೇ ಹೇಳಲು ಮುಂದಾಗುತ್ತಾರೆ. ಸಾಹಿತ್ಯ ಸೃಷ್ಟಿ ಒಂದು ಕಲೆ. ಇದು ವ್ಯಕ್ತಿಗೆ ಹುಟ್ಟಿನಿಂದ ಜನ್ಯವಾಗಿ ರುತ್ತದೆ. ಇದು ಎಲ್ಲ ಬಗೆಯ ಕಲೆಯ ಸೃಷ್ಟಿಸುವವರು ಹೇಳಿಕೊಳ್ಳುವ ಮಾತು. ಈ ಕಸುಬು ದೈವದತ್ತವಾದದ್ದು. ದೇವರು ಕರುಣಿಸಿದ್ದು. ಇನ್ನೂ ಮುಂದೆ ಹೋಗಿ ‘ನಾನು ನಿಮಿತ್ತ. ದೇವರೇ ಎಲ್ಲವನ್ನೂ ನನ್ನ ಮೂಲಕ ಮಾಡಿಸುತ್ತಾನೆ’ ಎಂಬ ಈ ಮಾತನ್ನು ಓದುಗ ಒಪ್ಪಿಕೊಂಡಂತೆ ಕಾಣುತ್ತದೆ ಅಥವಾ ಲೇಖಕನ ಈ ಮಾತಿನ ತಿರುಳನ್ನು ಗ್ರಹಿಸಲು ಯತ್ನಿಸಿ ಉತ್ತರ ಕಂಡುಕೊಳ್ಳುತ್ತಾನೆ. ‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಉತ್ತರಿಸಲು ತೊಡಗುವ ಲೇಖಕರು, ತಾವು ಬರವಣಿಗೆಯನ್ನು ಹೇಗೆ ಆರಂಭಿಸಿದೆವು, ಅದಕ್ಕೆ ಕಾರಣವಾದ ಸಂದರ್ಭಗಳು ಯಾವವು, ಒತ್ತಡಗಳು ಯಾವವು ಎಂದು ಹುಡುಕಲು ತೊಡಗಿ ಬಾಲ್ಯಕ್ಕೆ ಹೋಗುತ್ತಾರೆ. ಇದೊಂದು ಸಾಮಾನ್ಯ ಅಂಶವಾಗಿ ಕಾಣುತ್ತದೆ. ಬಾಲ್ಯದ ಕೆಲವು ಸಂದರ್ಭ ಗಳು ಬರವಣಿಗೆಗೆ ಕಾರಣವಾಗಿ ಲೇಖಕನನ್ನಾಗಿ ರೂಪಿಸುತ್ತವೆ. ಈ ತಿರುವಿಗೆ, ಈ ಬೆಳವಣಿಗೆ ಯನ್ನು ಕಂಡು ಲೇಖಕನೇ ಬೆರಗಿಗೆ ಒಳಗಾಗುತ್ತಾನೆ. ಆರಂಭದಲ್ಲಿ ಲೇಖಕನಿಗೆ ‘ನಾನೇಕೆ ಬರೆಯಬೇಕು? ಯಾರಿಗಾಗಿ ಬರೆಯಬೇಕು? ಏನು ಬರೆಯಬೇಕು?’ ಎಂಬ ಪ್ರಶ್ನೆಗಳಿರು ವುದಿಲ್ಲ. ಸೈದ್ಧಾಂತಿಕವಾಗಿ ಯೋಚಿಸುವುದಿಲ್ಲ ಎಂದೇ ತೋರುತ್ತದೆ. ಆದರೂ ಸಾಹಿತ್ಯ ರಚನೆಯ ಹಿಂದೆ, ಬರವಣಿಗೆಯ ಒಳಗೆ ಒಂದು ನಿಲುವು ಇದ್ದೇ ಇರುತ್ತದೆ ಅಥವಾ ಕಾಣುತ್ತದೆ. ಆದರೆ ಬಾಲ್ಯದ ಅನುಭವಗಳೇ ಅಭಿವ್ಯಕ್ತಿಗೆ ಒದಗುವುದು ಮಾತ್ರ ನಿಜ. ಸಾಹಿತ್ಯದ ಯಾವ ಪ್ರಕಾರದಲ್ಲಿ ರಚನೆಗೆ ತೊಡಗಿದರೂ ಬಾಲ್ಯದ ಪರಿಸರವಿರುತ್ತದೆ. ಅದು ಕುಟುಂಬ, ನೆರೆಹೊರೆ, ಊರುಕೇರಿ, ಹುಟ್ಟಿ ಬೆಳೆದ ಸರಹದ್ದಿನ ಪ್ರಕೃತಿ ಆಗಿರಬಹುದು ಪ್ರಭಾವಕ್ಕೆ ಒಳಗಾಗಲೇ ಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡದ ಬಹುತೇಕ ಬರಹಗಾರರನ್ನು ಗಮನಿದರೆ ಈ ಅಂಶ ಕಂಡೇ ಕಾಣುತ್ತದೆ. ಬಹು ದೊಡ್ಡ ಕಥನಕಾರರಾದ ಮಾಸ್ತಿ, ಕಾರಂತ, ಕುವೆಂಪು ಆದಿಯಾಗಿ ನೋಡಬಹುದು. ಬಾಲ್ಯದ ನೆನಪುಗಳು ಅಮೂಲ್ಯ ಖಣಜವೇ ಆಗಿವೆ. ಆರಂಭದಲ್ಲಿ ಲೇಖಕನಿಗೆ ಒಂದು ಸ್ಪಷ್ಟವಾದ ನಿಲುವು ಇರುವುದಿಲ್ಲ ಎಂದು ಹೇಳಿದನಷ್ಟೇ. ಬರೆಯುತ್ತ ಬರೆಯುತ್ತ ಹುಡುಕಾಟ ಶುರುವಾಗಿ, ಆಯ್ಕೆಗಳು ಸೇರಿಕೊಳ್ಳತ್ತವೆ. ಆರಂಭದ ಬರವಣಿಗೆಯಲ್ಲಿ ಈ ಆಯ್ಕೆಗಳು ಅಮೂರ್ತವಾಗಿದ್ದು, ಇದು ಮುಂದೆ ತಮ್ಮ ರೂಪವನ್ನು ನಿಚ್ಚಳವಾಗಿ ತೋರಿಸಿಕೊಳ್ಳ ಲಾರಂಭಿಸುತ್ತವೆ. ಇವು ಬೆಳೆಯುತ್ತವೆ. ಇಲ್ಲ ಭಿನ್ನವಾಗುವ ಸಂದರ್ಭಕ್ಕೂ ಒಳಗಾಗ ಬಹುದು. ಲೇಖಕನಿಗೆ ಬದುಕಿನಲ್ಲಿ ತಿರುವುಗಳು ಒದಗುತ್ತವೆ. ಇವು ಬಾಲ್ಯದ ನಿಲುವುಗಳನ್ನು ಬದಲಿಸುವಂತೆ ಮಾಡಬಲ್ಲವು. ಇದು ಲೇಖಕನಿಗೆ ಸೈದ್ಧಾಂತಿಕ ನೆಲೆಯ ಸುಳಿಗೆ ಸಿಲುಕಿಸಲು ಕಾರಣವಾಗಬಲ್ಲುದು. ಈ ಹುಡುಕಾಟದಲ್ಲಿ ಲೇಖಕರ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಸಾಗುತ್ತಾನೆ. ಹಿಡಿದ ಈ ದಾರಿಗೆ ನಿಲ್ಲುವ ಒಂದು ತಾಣ ಕಾಣುವುದಿಲ್ಲ. ಕಂಡರೂ ಆ ತಾಣವೇ ಅಂತಿಮ ಅನ್ನಿಸುವುದಿಲ್ಲವೆಂದು ತೋರುತ್ತದೆ. ಶ್ರೀ ದ.ರಾ. ಬೇಂದ್ರೆ ಅವರು ‘ಕಾಶೀಯಾತ್ರೆಯತ್ತ ಹೊರಟ ಒಂದೊಂದು ಹೆಜ್ಜೆಯೂ ಅದೇ ಹಾದಿಯಲ್ಲಿದ್ದರೂ ಹೆಜ್ಜೆಗೊಂದು ಕಾಶಿಯಿಲ್ಲ. ಆದರೂ ಹೆಜ್ಜೆಗೊಂದು ಕಾಶಿಯಿದ್ದಂತೆ. ನಮ್ಮ ಜೀವನ – ನೃತ್ಯ ಸಾಗದಿದ್ದರೆ ಯಾವ ಕಾಶಿಯೂ ನಮಗೆ ಭವ – ನಾಶಿಯಾಗಲಾರದು’ ಎಂದು ಹೇಳು ತ್ತಾರೆ. ಈ ಮಾತು ಮನುಷ್ಯನ ಜೀವನದ ಬದುಕಿಗೂ, ಬರವಣಿಗೆಯ ಬದುಕಿಗೂ ಹೊಂದಿಕೆ ಯಾಗುತ್ತದೆ. ಕಲ್ಯಾಣ ತಲುಪಿ ತಂಗಲು ಬಯಸಿದಾತನಿಗೆ, ಕಲ್ಯಾಣವೇ ಅಂತಿಮ ಅಲ್ಲ ಅನ್ನಿಸಲೇಬೇಕು. ಅಲ್ಲಿಂದ ಕದಳಿಗೆ ದಾರಿ ತುಳಿಯಲೇಬೇಕು. ಕಲ್ಯಾಣವು ಸಾಮಾಜಿಕ ಸಾಧನೆಗೆ, ಕದಳಿ ಆಧ್ಯಾತ್ಮದ ಸಾಧನೆಗೆ. ಲೇಖಕನಾದವನು ಈ ಎರಡು ತಂಗುದಾಣಗಳಲ್ಲಿ ಆಶ್ರಯ ಪಡೆಯುವ ಹಂಬಲ ಹೊಂದಿರುತ್ತಾನೆಂದು ಕಾಣುತ್ತದೆ. ಇವು ಒಂದರೊಳಗೊಂದು ಕಲೆತಿರಬಹುದು. ತೆಳುವಾದ ಗೆರೆಯ ಆಚೆ – ಈಚೆ ಇರಬಹುದು. ಕಾಲಾಂತರದಲ್ಲಿ ಈ ಗೆರೆ ಮಾಯವಾಗಿ ಹೋಗಬಹುದು.

‘ನಾನೇಕೆ ಬರೆಯುತ್ತೇನೆ?’ ಈ ರಚನೆಗಳನ್ನು ಓದುಗರು ಓದಿ, ಅವುಗಳ ತಿರುಳನ್ನು ಗ್ರಹಿಸಲಿ ಎಂದು ಆಶಿಸುತ್ತೇನೆ. ಈ ರಚನೆಗಳನ್ನು ಬಿಡಿಬಿಡಿಯಾಗಿ ಚರ್ಚಿಸಲು ಬಯಸು ವುದಿಲ್ಲ. ನೇರವಾಗಿ ಓದುಗರಿಗೆ ಓದಲು ಬಿಡುತ್ತೇನೆ.

* * *

‘ನಾನೇಕೆ ಬರೆಯುತ್ತೇನೆ?’ ಈ ರಚನೆಗಳ ಸಂಪಾದನೆಗೆ ಅನುವು ಮಾಡಿಕೊಟ್ಟ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಅಧ್ಯಯನಾಂಗದ ನಿರ್ದೇಶಕರಾದ ಪ್ರೊ. ವೀರೇಶ ಬಡಿಗೇರ ಅವರಿಗೆ, ಪ್ರಕಟಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ. ಮೋಹನ ಕುಂಟಾರ್ ಅವರಿಗೆ ಕೃತಜ್ಞತೆಗಳು. ಈ ಸಂಪಾದನೆಗೆ ನೆರವಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಕೆ.ಕೆ. ಮಕಾಳಿ, ಶ್ರೀ ಜೆ. ಶಿವಕುಮಾರ ಮತ್ತು ತಾಂತ್ರಿಕ ನೆರವು ಒದಗಿಸಿದ ಶ್ರೀ ತುಕಾರಾಮ್, ಶ್ರೀ ಕೆ.ಎಚ್. ಧರ್ಮವೀರ ಅವರನ್ನು ನೆನೆಯುತ್ತೇನೆ.