ನನ್ನ ಸಾಹಿತ್ಯ ಸೇವೆಯು ನನಗೆ ಅನೇಕ ಗೆಳೆಯರನ್ನು ದೊರಕಿಸಿಕೊಟ್ಟಿದೆ. ಸಾಹಿತ್ಯ ಸಮ್ಮೇಲನದ ಅಧ್ಯಕ್ಷ ಪದವಿಯ ಬಹುಮಾನವೂ, ಅದಕ್ಕೂ ಹೆಚ್ಚಾಗಿ ನನ್ನ ೫೦ನೆಯ ಹುಟ್ಟಿದ ದಿನದ ನಿಮಿತ್ತವಾಗಿ ಸಾಹಿತ್ಯ ಸೇವೆಗೆ ಮೆಚ್ಚಿದ ಜನತೆ ನನಗೆ ಅರ್ಪಿಸಿದ ದಕ್ಷಿಣೆಯೂ, ಸಾಹಿತ್ಯದ ಹಾಗೂ ಜನರ ರಸಿಕತೆಯ ಕುರುಹಾಗಿ ನಾನು ಕಂಡಿರುವಾಗ ಇದು ನಿಷ್ಫಲ ಎಂದು ಹೇಗೆ ಹೇಳಬೇಕು?

ಸಾಹಿತ್ಯ ಪ್ರೀತಿ ನನ್ನಲ್ಲಿ ತಲೆದೋರಿದುದು ನನ್ನ ಹಾಯಸ್ಕೂಲ ಶಿಕ್ಷಣದ ಕಾಲ ದಲ್ಲಿಯೇ. ಆದರೂ ಅದು ನಿಜವಾಗಿ ಚಿಗುರಿಕೊಂಡುದು ನಾನು ಫರ್ಗ್ಯುಸನ್ ಕಾಲೇಜಿನಲ್ಲಿ ಕಲಿಯುವಾಗ. ಕನ್ನಡ ಭಾಷೆ, ಅದರ ಕಾವ್ಯ, ಸಾಹಿತ್ಯ, ಇಂಗ್ಲಿಷ್, ಸಂಸ್ಕೃತ, ಮರಾಠಿ ಕಾವ್ಯ ಸಾಹಿತ್ಯಗಳಿಗೆ ಸರಿ ಮೇಲಾಗಬೇಕೆಂಬ ಯಾವದೋ ಒಂದು ಪ್ರೇರಣೆ ನನ್ನನ್ನು ಕಾವ್ಯಕ್ಕೆ ಕೈಯಿಕ್ಕಿಸಿತು. ಲಕ್ಷ್ಮೀಶ – ಸರ್ವಜ್ಞರು ನನಗೆ ಕನ್ನಡದ ಕಾವ್ಯ ಗುರುಗಳಾದರು. ಶೆಲಿ – ಕೀಟ್ಸರ ಕಾವ್ಯಗಳು ಉದ್ದೀಪಕಗಳಾಗಿದ್ದವು. ಕಾಳಿದಾಸ, ಜನಗನ್ನಾಥ ಪಂಡಿತ, ಜಯದೇವ ಮತ್ತು ಶಂಕರಾಚಾರ್ಯರ ಭಕ್ತಿಗೀತೆಗಳು ಆ ಮೊದಲೇ ನನ್ನ ಮನದಲ್ಲಿ ನಿನದಿಸುತ್ತಿದ್ದವು. ರವೀಂದ್ರರ ಆಂಗ್ಲ ಗೀತೆಗಳು, ಶ್ರೀ ಅರವಿಂದ ಭವಿಷ್ಯತ್‌ಕಾವ್ಯ ಎಂಬ ಉಪನ್ಯಾಸಮಾಲೆ, ಇಮರ್ಸನನ್ನನ ನಿಬಂಧಾವಲಿ ಇವುಗಳೊಳಗಿನ ಕಾವ್ಯಸೂತ್ರಗಳು ನನ್ನ ಮನದ ಹೆಣಿಗೆಯನ್ನು ಹಾಕಿದುವು. ವಚನಗಳು, ಏ. ಈ. ಯ ದೃಷ್ಟಾಂತದೀಪಿಕೆ, ಮೊರಿಸ ಮೇಟರಲಿಂಕನ ಹೃದಯಂಗಮವಾದ ಯುಕ್ತಿವಾದ ನನ್ನನ್ನು ಮುಂದೆಳೆದವು.

೧೯೧೮ರಲ್ಲಿ ನಾನು ಧಾರವಾಡಕ್ಕೆ ಬಂದಾಗ “ಸದ್ಭೋಧಚಂದ್ರಿಕೆ”ಯ ಯುಗ ಮುಗಿದು “ಸಚಿತ್ರ ಭಾರತ”ದ ವೈಭವವು “ಶುಭೋದಯ”ದಲ್ಲಿ ಅಡಗುತ್ತಿತ್ತು. ಶಾಂತಕವಿಗಳು, ಕಾವ್ಯಾನಂದ ಪುಣೇಕರ ಅವರು – ಅವರ ಜಾನಪದ ಒಲವಿನ ಮೂಲಕವಾಗಿಯೂ ರಾಷ್ಟ್ರೀಯ ವೃತ್ತಿಯ ಮೂಲಕವಾಗಿಯೂ ಆತ್ಮೀಯರಾಗಿ ತೋರುತ್ತಿದ್ದರು. ಶ್ರೀ ಆಲೂರ ವೆಂಕಟ ರಾಯರ, ಶ್ರೀರಾಜಪುರೋಹಿತರ, ಶ್ರೀ ನಾರಾಯಣಶರ್ಮರ, ಶ್ರೀ ಜಠಾರ ಬಳವಂತರಾಯರ ಪ್ರೋತ್ಸಾಹನ, ವಿಮರ್ಶೆ, ಸಹೃದಯ ಮಾತುಗಳು ಈ ವೃತ್ತಿಗೆ ಪೋಷಕಗಳಾದವು. ಧಾರವಾಡದಲ್ಲಾದ ನಾಲ್ಕನೆಯ ಸಾಹಿತ್ಯ ಸಮ್ಮೇಲನದಲ್ಲಿ ನನ್ನ ಚಿಗುರುಗವಿತೆಗಳಿಗೆ ಬಂದ ಖ್ಯಾತಿ ನನ್ನನ್ನು ವಿಕ್ಟೋರಿಯಾ ಹಾಯಸ್ಕೂಲಿಗೆಳೆಯಿತು. ಆ ಸಾಲೆಯಲ್ಲಿ ನನ್ನನ್ನು ಸುತ್ತುಮುತ್ತಿದ ಚಿದಂಬರ, ಬ್ಯಾಳಿ, ಶಾಂತಗಿರಿ, ಬಾಗಲವಾಡಿ, ಕರಮರಕರ, ತಿವಾರಿ, ಅಭ್ಯಂಕರ, ನರೇಗಲ್ಲ, ಕಲ್ಲೂರ, ಚುಳುಕಿ, ಜೋಶಿ, ಶಾಸ್ತ್ರ, ಕುಲಕರಣಿ, ಮೊದಲಾದವರ ಬಾಲ್ಯ ಸ್ನೇಹವು ಕಾವ್ಯದ ಹೃದಯವನ್ನು ಗೆಳೆತನದ ಮೂರ್ತಿಯಲ್ಲಿ ಕಾಣಬೇಕು ಎಂಬ ಹಂಬಲಕ್ಕೆ ಪುಟಗೊಟ್ಟವು. ಬಾಲ್ಯದಲ್ಲಿಯ ಸ್ನೇಹಿತರಾಗಿ ಸಾಗಿ ಬಂದ ಖಾನೋಲಕರ, ಭಾತಖಂಡೇ, ಖಾಡಿಲಕರ, ಜಮಖಂಡಿ, ಅವರಂತೆಯೇ ಬುರ್ಲಿ, ಮಳಿಯೆ, ಶಂ.ಬಾ. ಜೋಶಿ, ಬೆಟಗೇರಿ, ಸಾಲಿ, ಮೊದಲಾದ ಸುಮಸುಮಾರು ಸಮವಯಸ್ಕರಾದ ನೂತನ ಮಿತ್ರರ ಆವರಣದಿಂದ ಗೆಳೆತನದ ಕ್ಷೇತ್ರವು ನಾಡಿನಾಕಾರವನ್ನು ತಾಳುವಂತೆ ತೋರಿತು. ರಾಷ್ಟ್ರೀಯ ಶಾಲೆಯ ವಾತಾವರಣದಲ್ಲಿ ನಾಡಿನ ಪ್ರತಿಮೆಗೆ ರಾಷ್ಟ್ರೀಯತೆ ಪ್ರಭಾವಳಿ ಸೇರಿತು. ಮನೆಯಲ್ಲಿ ನನಗೆ ತಾಯಿ ಹೇಳುತ್ತಿದ್ದ ಅಭಂಗ – ದಾಸರ ಪದಗಳು, ಊರಲ್ಲಿ ವರ್ಷ ತುಂಬ ಕೇಳುತ್ತಿದ್ದ ಲಾವಣಿ – ಅನುಭವ ಪದಗಳು, ಮಧ್ವಾಚಾರ್ಯ ಕಟ್ಟಿಯವರೊಡನೆ ಆಗುತ್ತಿದ್ದ ತತ್ವಚರ್ಚೆ ಮತ್ತು ಅನುಭವ ಸಲ್ಲಾಪ ಇವುಗಳ ಮುಪ್ಪುರಿ ನನ್ನ ಕಾವ್ಯದಲ್ಲಿ ಕುಸುರು ಹುಟ್ಟಿಸಿತು. ಸಿದ್ದವ್ವನಹಳ್ಳಿ ಕೃಷ್ಣಶರ್ಮ, ಬೆಳಗಾಂವಿ ರಾಮಚಂದ್ರರಾಯ, ಹಲಸಂಗಿಯ ಚೆನ್ನಮಲ್ಲಪ್ಪ, ಕೊಣ್ಣೂರ ಹಣಮಂತರಾಯರು, ಮನೋಹರರಾವ್ ದೇಶಪಾಂಡೆ ಮತ್ತು ಬೇಂದ್ರೆ ಲಕ್ಷ್ಮಣರಾಯರು ಇವರೊಡನೆ ವಿವಿಧವಾಗಿ ಕೂಡಿಕೊಂಡದ್ದ ರಿಂದ ನಮ್ಮ ನಾಡಹಬ್ಬದ ಹಂದರ ದೃಢವಾಗಿ ಕಂಗೊಳಿಸಲಾರಂಭಿಸಿತು. ವಾಗ್ಭೂಷಣ, ಜಯಕರ್ನಾಟಕ, ಸ್ವಧರ್ಮಗಳು ನಾಡಿನ ಜೀವನವನ್ನು ಹಬ್ಬವನ್ನಾಗಿ ಮಾರ್ಪಡಿಸಿಕೊಳ್ಳುವ ಯೋಗದಲ್ಲಿ ಮೆಟ್ಟುಗಳಾದವು. ಅನೇಕ ಹಿರಿಕಿರಿಯರೊಡನೆ ನನ್ನ ಜೀವ ಸೇರಿಕೊಂಡಿತು. ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪ ಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು. ಗೋಕಾಕ, ಮುಗಳಿ, ಮಕ್ತಾಲಿ, ಅಕ್ಕಿ, ಪದ್ಮರಾಜ, ಧೂಲಾ, ರೇವಪ್ಪ, ಶಾಸ್ತ್ರಿ ಸಹೋದರರು, ಲಿಂಗಣ್ಣ, ಅಡ್ಡಣಗಿ, ರುದ್ರಾಪುರದ ದೇಸಾಯಿ ಮೊದಲಾದವರ ವಿವಿಧ ಎಳೆಗಳು ಈ ನೇಯ್ಗೆಯ ಪಟದಲ್ಲಿ ಹಾಸುಹೊಕ್ಕಾಗಿ ಬೆಳೆದವು. ಗೆಳೆಯರು ನಾಡಹಬ್ಬ, ಕವಿಪುಣ್ಯತಿಥಿ ಗಳು, ರಾಷ್ಟ್ರೀಯ ಪುರುಷರ ಪುಣ್ಯದಿನ ಇವುಗಳನ್ನು ಪ್ರಾರಂಭಿಸಿದರು ಎನ್ನುವುದಕ್ಕಿಂತ ಅವುಗಳ ಪ್ರಾರಂಭಕ್ಕೆ ಕಾರಣವಾದ ಕೈಯೇ ಗೆಳೆಯರನ್ನು ನೂರು ದಿಕ್ಕಿಗೆ ದೂಡುತ್ತಿತ್ತು. ಈ ಕಾಲದಲ್ಲಿ ಎಳೆ ಗೆಳೆಯರು ಕೆಲವರು ಶಾಂತಿನಿಕೇತನದಲ್ಲಿ ವಿದ್ಯೆಗಳಿಸಿಕೊಂಡು ಬಂದರು. ಹೊಸ ಗೆಳೆಯರನ್ನೂ ತಂದರು. ‘ಸ್ಟ್ಯಾಂಡರ್ಡ ಬೆರರ’ದ ವಾಚನದಿಂದ ಮತ್ತೊಂದು ಗೆಳೆಯರ ತಂಡ ಆಧ್ಯಾತ್ಮಿಕ ಒಲವನ್ನು ಹುರಿಗೊಳಿಸುತ್ತಿತ್ತು. ರಾಷ್ಟ್ರೀಯ ಚಳವಳಿಯಿಂದಲೂ, ಗಾಂಧೀತತ್ವದಿಂದಲೂ ಹುರಿಗೊಂಡ ಇನ್ನೊಂದು ಮಿತ್ರ ಸಮೂಹ ಜೀವನ ಪ್ರಯೋಗಗಳನ್ನು ನಡೆಸಿತ್ತು. ಗೆಳೆಯರೊಡನೆ ಮಿತ್ರಭಾವದಿಂದ ನಡೆಯುವ ಮತ್ತೆ ಬೇರೆ ಗೆಳೆಯರಿದ್ದರು. ಕಾಲೇಜು – ವಿದ್ಯಾಲಯಗಳ ಸ್ವಾಭಾವಿಕವಾದ ಸಾಹಿತ್ಯ – ಸಂಸ್ಕೃತಿ ಪ್ರೇಮವು ಹೊಸ ಉತ್ಸಾಹದಲ್ಲಿ ಹೊಸ ರೂಪದಲ್ಲಿ ತೆರೆದ ದಾರವಾಡ ನಾಡಿನ ಪ್ರಕೃತಿ ಸೌಂದರ್ಯವೂ ಜನಜೀವನವೂ ಈ ಜೀವನದಲ್ಲಿ ಹೊಸ ಬಣ್ಣವನ್ನು ತಂದಿತು. ಒಂದು ಮಹಾವಸ್ತ್ರದ ಎಳೆಯನ್ನು ಎಣಿಸಿ ಹೇಳಬಹುದು. ಜೀವನದ ಎಳೆಗಳನ್ನು ಎಷ್ಟೆಂದು ಹೇಳಬೇಕು? ೧೯೨೪ರೊಳಗಾಗಿ ಮಾತೃವಿರಹ, ಭ್ರಾತೃವಿರಹ, ಪುತ್ರವಿರಹ, ದೇಶತ್ಯಾಗ, ವೃತ್ತಿಚ್ಛೇದ, ಆದರ್ಶಗಳ ಸತ್ವಪರೀಕ್ಷೆ – ತ್ಯಾಗ – ಭೋಗ – ಯೋಗ ಎಲ್ಲದರ ಕಷಾಯವನ್ನು ಕುಡಿಸಿತು. ೧೯೩೦ರವರೆಗೆ ನಾಡಿನ ನಾಡಿನಾಡಿಯನ್ನು ನಾವು ಹೊಕ್ಕೆವು. ಅದೂ ನಮ್ಮ ನಾಡಿನಾಡಿ ಯನ್ನೂ ಹೊಕ್ಕಿತು. ಜಯಕರ್ನಾಟಕದ ಮೂರುವರೆ ಗಳಿಗೆಯ ಆಟವು ದೀಪದಂತೆ ಭಗ್ಗನೆ ಹೊತ್ತಿ ಆರಿ ಬೇರೆ ಆಟಕ್ಕೆ ಬಯಲು ಮಾಡಿತು. ೧೯೪೦ರ ವರೆಗಿನ ಕಾಲ ಮನದ ಮನವಾಸದಲ್ಲಿ ನಿರ್ವಾಜ್ಯ ಪ್ರೇಮದ ಆವಿಷ್ಕಾರವನ್ನು ತೋರಿತು. ಇತ್ತೀಚಿನ ಆರು ವರ್ಷಗಳಲ್ಲಿ ಮತ್ತೆ ಸುಖ ದುಃಖ ತೆಕ್ಕೆಮುಕ್ಕಿ ಬಿದ್ದು ಬಂದಿವೆ. ೨೫ ವರ್ಷಗಳ ಚಿಂತನದ ಚಿತೆಯಲ್ಲಿ ಸತಿಯಂತೆ ಕೈಯೆತ್ತಿ ನಿಂತ ಶ್ರದ್ಧೆಯು ಶಂಕರಗೌಡರು, ಮಧುರಚೆನ್ನ, ಪಂಡಿತ, ಮೊದಲಾದವರ ಸ್ನೇಹದ ಸಹಾಯದಿಂದ ಒಂದು ನಿಷ್ಠೆಯ ಮಟ್ಟಕ್ಕೆ ಬಂದಿದೆ. ಈ ಜೀವನವು ನನ್ನ ಸಾಹಿತ್ಯ ಕಾವ್ಯಗಳಿಗೆ ಹಿನ್ನೆಲೆಯಾಗಿ ಇದೆ ಎಂದು ಹೇಳಿದರೆ ಅದರ ಅಗಮ್ಯತೆಗೆ ಅರ್ಧ ಅರ್ಥವಾದೀತು.

ನಾನು ಎಂದರೆ ಏನು ಎಂಬುದಕ್ಕೆ ಯಾವಾಗಲೂ ಅರ್ಥಮಾಡಿಕೊಳ್ಳುತ್ತೇನೆ. ಬೇಂದ್ರೆ ಎಂಬ ನಾನು ಎಲ್ಲ ವ್ಯವಹಾರಕ್ಕೂ ನಿಶ್ಚಯವಾದ ನಾನು. ಆದರೆ ಒಂದು ತಾಯಿ ಜೀವದಿಂದ ವರ್ಧಿತವಾದ, ಉದ್ದೀಪಿತವಾದ ಸ್ವಭಾವವು, ಕನ್ನಡ ಮಾತಿನ ಮೂಲಕ ಆ ನಾಡಿನ, ನುಡಿಯ, ಜನದ ಅರ್ಥವನ್ನು ಮಾಡಿಕೊಂಡು ಇನ್ನೊಂದು ವ್ಯಾಪಕ ಭಾವವನ್ನು ಪಡೆದು, ಕನ್ನಡನಾಡು ಭರತಭೂಮಿಯ ಒಂದು ಜೀವಂತವಾದ ಅಂಗ ಎಂದು ಅನುಭವವಾದಾಗ ಮಹಾಭಾರತದಂತೆ ಒಂದು ವೈಶಾಲ್ಯವನ್ನು ಪಡೆದು ಸಂಸ್ಕೃತಿಗಳ ಸಂಗಮದಿಂದ ಅವುಗಳ ಉಗಮದತ್ತ ಹೊರಟಾಗ ಭಾರತ ಭಾವವು ‘ವಸುಧೈವ ಕುಟುಂಬಿಕ’ ಭಾವದಲ್ಲಿ ಪರಿಣತ ವಾಗದಿದ್ದರೆ ತಾನು ತಾನಲ್ಲ, ಎಂಬ ಅರಿವು ಮೂಡಿ ಇಂಥ ಈ ವೈಶಾಲ್ಯವು ಅಗಣಿತ ಸೂರ್ಯದಿಂದ ತುಂಬಿದ ಈ ವಿಶ್ವಸಂಸ್ಥೆಯಲ್ಲಿ ಯಾವ ಗಿಡದ ತೊಪ್ಪಲು? ಎಂಬ ಅನುಭಾವವೂ ಅಂತೆಯೇ ಒಂದು ಮಹತ್ವದ ಭಾವವೂ ಸ್ಪಂದಿಸಿದಾಗ ನಾನೆಂದರೆ ವಿರಾಟ್ ಪುರುಷನ ಒಂದು ನರ – ನಾಡಿ ಎಂಬ ಭಾವ ಸಹಜವಾಗುವುದು. ಈ ಸಹಜಭಾವವು ಬೇಂದ್ರೆಯ ಸ್ವಾಭಾವಿಕಭಾವಗಳಲ್ಲಿ ಕೂಡಿ ಹರ್ಷ – ಖೇದಗಳ ಅಲ್ಲೋಲ – ಕಲ್ಲೋಲಗಳನ್ನೆಬ್ಬಿ ಸುವುದು. ನಾನು ಚಿಕ್ಕ ನಾಟಕಗಳನ್ನೂ, ಸಣ್ಣಕತೆಗಳನ್ನೂ ಪ್ರಕಟಿಸಿದ್ದರೂ ನನ್ನ ವೈಚಾರಿಕ ನಿಬಂಧ, ವಿಮರ್ಶಕ ಪ್ರಬಂಧ ಮತ್ತು ಕವನಗಳ ಸ್ವಚ್ಛಂದ ಇವುಗಳಲ್ಲಿ ಹೆಚ್ಚು ಬೆಳಕು ಕಂಡಿದ್ದೇನೆ. ನನ್ನ ಪ್ರಬಂಧ – ನಿಬಂಧಗಳಿಗಿಂತ ನನ್ನ ಮಾತು – ಉಪನ್ಯಾಸಗಳು, ನನ್ನ ಬರೆದ ಕಾವ್ಯಕ್ಕಿಂತ ನಾನು ಹೇಳಿದ ಹಾಡುಗಳು ಹೃದಯಂಗಮವಾಗುವವೆಂದು ಅನೇಕ ಗೆಳೆಯರೂ ಇತರರೂ ತಿಳಿಸಿದ್ದಾರೆ. ಶ್ರವಣಕ್ಕಿಂತ ವಾಚನದಿಂದ ಅರ್ಥಮಾಡಿಕೊಳ್ಳುವುದಕ್ಕೆ ಜನರಲ್ಲಿ ವಿದ್ಯಾಸಂಸ್ಕಾರವು ಹೆಚ್ಚು ಇರಬೇಕಾಗುವುದೆಂಬುದು ಸುಳ್ಳಲ್ಲ. ನನ್ನಂತೆಯೇ ವಿಶಾಲ ಜೀವದೊಡನೆ ತನ್ಮಯರಾಗುವ ಪ್ರಕೃತಿಯುಳ್ಳವರಿಗೆ ನನ್ನ ಕಾವ್ಯ ಸಾಹಿತ್ಯವು ಇನ್ನು ಕೆಲವು ವರ್ಷಗಳಲ್ಲಿ ಮನೆಮಾತಿನಂತೆ ಸ್ವಾಭಾವಿಕವೆನಿಸೀತು ಎಂದು ತೋರುತ್ತದೆ.

ಪಾಡು, ಸಖೀಗೀತ, ಕರುಳಿನ ವಚನ, – ಗೆ, ಮೊದಲಾದ ಕವನಗಳ ವ್ಯಕ್ತಿಯಿಂದ ಸಮಸ್ತದಲ್ಲಿ ಲೀನವಾಗಲು ಹವಣಿಸಿದರೆ ಲೋಕಸಾಮಾನ್ಯವಾದ ಜೀವನವು ಸಹಾನು ಭೂತಿಯ ದ್ವಾರದಿಂದ ಸ್ವಾನುಭೂತಿಯನ್ನೇ ಹಿಗ್ಗಿಸುವುದು. ಸ್ವಾನುಭೂತಿ – ಸಹಾನುಭೂತಿ ಗಳು ಕಾವ್ಯ – ಜೀವನದ ಶ್ವಾಸೋಚ್ಛ್ವಾಸಗಳು. ಮಹಾಪ್ರಾಣದ ಛಂದ ಅದರಲ್ಲಿದೆ. ಅವು ಪರಸ್ಪರರ ಸ್ಥಾಯೀ, ಸಂಚಾರಿಗಳು. ನನ್ನ ಜಾನಪದ ಗೀತಗಳಲ್ಲಿ ನೆಲದೆರೆಯ ತಾಯಿಬೇರಿನ ಒಂದು ಸಂಚಲನವನ್ನು ಅನುಭವಿಸಿದರೆ ನನ್ನ ಅಷ್ಟಷಟ್ಪದಿ, ಸೀಸಪದ್ಯಗಳಲ್ಲಿಯೂ, ತಜ್ಜಾತಿಯ ಇತರ ಪದ್ಯಗಳಲ್ಲಿಯೂ ಊರ್ಧ್ವಮೂಲವಾದ ಅಧಃಶಾಖೆಯುಳ್ಳ ಯಾವುದೋ ಪ್ರಕೃತಿ ನನ್ನ ಸೂತ್ರದಿಂದ ನನ್ನ ಎದೆಯನ್ನು ಅಲ್ಲಾಡಿಸುವುದು ಎಂಬಂತೆ ತೋರುತ್ತದೆ. ಮೂರ್ತಿ – ಕಾಮ ಕಸ್ತೂರಿಗಳು ಎರಡು ಪರಸ್ಪರ ವಿರುದ್ಧ ಜಾತಿಗೆ ಸೇರಿದ್ದರೂ ತಮ್ಮ ಸಂಕೇತ ಸಾಧಾರಣತೆಯಿಂದ ವಿಶ್ವಕವನಗಳಾಗುತ್ತವೆ. ನನ್ನ ಹೃದಯದಲ್ಲಿ. ಕುಣಿಯೋಣು ಬಾರ, ಹಕ್ಕಿ ಹಾರುತಿದೆ, ಗಂಗಾವತರಣ, ಭಾವಗೀತ, ಪಾತರಗಿತ್ತಿ ಪಕ್ಕ, ಬೆಳಗು, ಮೊದಲಾದವುಗಳು ಹೇಳಿದ ಸಲಕ್ಕೊಮ್ಮೆ, ಜನರಿಗೆ ಕೊಡುವ ಆನಂದವನ್ನೇ ನನಗೂ ಕೊಡುತ್ತವೆ.

ವಿಮರ್ಶಕರೆಂಬವರ ಟೀಕೆಗಿಂತ ರಸಿಕರ ವಿಮರ್ಶೆ ಯಾವ ಕವಿಯಂತೆಯೂ ನನಗೂ ಪ್ರೇರಣೆ – ಉದ್ದೀಪನಗಳನ್ನು ಕೊಟ್ಟಿವೆ. ಮಾಸ್ತಿ, ವೀ.ಸೀ., ತೀ.ನಂ.ಶ್ರೀ., ಗೋಕಾಕರಂತೆಯೇ ಪಾಟೀಲ ಪುಟ್ಟಪ್ಪ, ಈಶ್ವರನ್, ಮಿರ್ಜಿ ಅಣ್ಣಾರಾವ, ಲಿಂಗಣ್ಣ, ಜೋಶಿ – ಗಲಗಲಿ, ಶ್ರೀಧರ, ಇವರ ಲೇಖನಗಳೂ ಒಂದು ಧೈರ್ಯವನ್ನು ಕೊಟ್ಟಿವೆ. ವಿಮರ್ಶೆಯಲ್ಲಿ ನನಗೂ ಒಂದು ಸ್ವಾಭಾವಿಕ ಪ್ರೀತಿಯಿರುವುದರಿಂದ ಕೆಲವರ ಟೀಕೆ – ಪ್ರತಿಟೀಕೆಯೂ ನನಗೆ ಎಚ್ಚರಕೊಟ್ಟಿದೆ. ಪದಾರ್ಥಕ್ಕೆ ಉಚಿತವಾದ ಹೆಸರಿಡುವುದರಲ್ಲಿಯೇ ಕಾವ್ಯದ ಜನ್ಮವಿದೆ. ಆಗ ವಿಷಯವು ಬಹಿರ್ಗತವಾಗಿದ್ದರೂ ಸರಿಯೇ. ಪುಷ್ಪ – ಫ್ಲೋವರ – ಫೂಲ – ಅರಳು ಇವುಗಳಿಗಿಂತ “ಹೂ” ಎಂಬ ನಾಮದ ನಯ – ನಾಜೂಕು ಪದಾರ್ಥಕ್ಕೆ ಸರಿತೂಕ ಹೆಚ್ಚುತ್ತದೆ. ವಸ್ತುವನ್ನು ಕಂಡ ಕಣ್ಣು ಹೃದಯದಲ್ಲಿ ಪಡೆದ ಆನಂದವನ್ನು ನಾಲಿಗೆಯಿಂದ ಈ ನುಡಿಯನ್ನು ನುಡಿಸಿ ಹಿಗ್ಗನ್ನು ಪಡೆಯುವುದರಲ್ಲಿಯೇ ಅದನ್ನು ಪಡೆಯುತ್ತದೆ. ಸತ್ವಾಧಿಷ್ಠಿತ ವಿಲ್ಲದ ಕ್ರಿಯೆಯಿಲ್ಲ; ಭಾವಪರಿಣತಿ ಹೊಂದದ ಸತ್ವವಿಲ್ಲ. ಸೃಷ್ಟಿಯಲ್ಲಿ ಈ ಸತ್ವಭಾವ, ಕ್ರಿಯೆಗಳ ಆಟವು ವಾಚ್ಯದಲ್ಲಿ ವಾಕ್ಯವಾದರೆ ಧ್ವನಿಯಲ್ಲಿ ಕಾವ್ಯವಾಗುತ್ತದೆ. ಅಕ್ಕನಿಗೆ ಅಕ್ಕರತೆಯೆಂದರೆ, ತಂಗಿಗೆ ಬಂಗಾರ ಎಂದು ಕರೆದರೆ, ಮಗಳಿಗೆ ಎದೆಮುಗುಳೆ ಎಂದು ಭಾವಿಸಿದರೆ ಆ ಕ್ರಿಯೆಯಲ್ಲಿ, ಆ ಭಾವದಲ್ಲಿ ಒಂದು ಕಾವ್ಯದ ಪಾಕ ನಡೆದದ್ದು ಅನುಭವಕ್ಕೆ ಬರುವುದು. ಹೀಗೆ ಎಲ್ಲರ ಸತ್ವವು ಸಕಲ ಸತ್ವಗಳೊಡನೆ ಒಂದು ಕ್ರಿಯಾ ಪರಂಪರೆಯಿಂದ ಭಾವಪರಿಣತಿಯನ್ನೂ, ಪರಿಪುಷ್ಟಿಯನ್ನೂ ಪಡೆಯುತ್ತದೆ. ಈ ಭಾವ ಪರಿಪುಷ್ಟಿಯು ನಮ್ಮ ದೈಹಿಕ, ಪ್ರಾಣಿಕ, ಮಾನಸಿಕ ವ್ಯಾಪಾರಗಳನ್ನೆಲ್ಲ ಹೀಗೆ ದಿವ್ಯಭಾವಗಳಲ್ಲಿ ಪರಿಣತಿಗೊಳಿಸ ಬಹುದಾದರೆ ಈ ಭಾವದ ಭಾಷೆಯು ಕಾವ್ಯದ ಭಾಷೆಯಾಗಿ ಮಾತ್ರ ರೂಪವಾಗುವುದು. ಇಂಥ ಪರಿಣತಿ ತನ್ನ ಭಾವಕ್ಕೆ ಬರಬೇಕು, ಎಂಬ ಯಾವುದೋ ಉತ್ಸಾಹವು ನನ್ನ ಕವನಗಳಿಗೆ ಪ್ರೇರಕವಾಗಿದೆ. ಈ ಅರ್ಥದಲ್ಲಿ ನೋಡಿದಾಗ ನನ್ನ ಸಾಹಿತ್ಯದಲ್ಲಿ ಇನ್ನೂ ನಾನು ಮೌಲಿಕವಾದ ಸಾರ್ಥಕತೆಯನ್ನು ಕಂಡಿಲ್ಲ ಎಂಬ ಭಾವ ನನ್ನನ್ನು ಪ್ರಚೋದಿಸುತ್ತಲಿದೆ. ಕಾಶೀಯಾತ್ರೆಯತ್ತ ಹೊರಟ ಒಂದೊಂದು ಹೆಜ್ಜೆಯೂ ಅದೇ ಹಾದಿಯಲ್ಲಿದ್ದರೂ ಹೆಜ್ಜೆ ಗೊಂದು ಕಾಶಿಯಿಲ್ಲ. ಆದರೂ ಹೆಜ್ಜೆಗೊಂದು ಕಾಶಿಯಿದ್ದಂತೆ ನಮ್ಮ ಜೀವನ – ನೃತ್ಯ ಸಾಗದಿದ್ದರೆ ಯಾವ ಕಾಶಿಯೂ ನಮಗೆ ಭವ – ನಾಶಿಯಾಗಲಾರದು. ಈ ಆತ್ಮಶೋಧನೆ ಯನ್ನು ನಾನು ಮಾಡಿಕೊಳ್ಳುತ್ತಿದ್ದೇನೆ. ಅದರಲ್ಲಿ ಕಂಡುದನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ; ಹಾಡಲು ಪ್ರವರ್ತಿಸುತ್ತಿದ್ದೇನೆ. ಅದರ ಕಥೆ ನಾಟಕವನ್ನೂ ಹೇಳುವ ಆಶೆಯಿದೆ. ಅದು ಹೇಗೆ ಫಲಿಸುವುದೋ ನೋಡಬೇಕು.

ನಾನು ಕವನ ಪ್ರಾರಂಭಿಸಿದಾಗ ಹೊಸಕನ್ನಡ ಭಾಷೆಯ ಕಾವ್ಯ ರೂಪುಗೊಂಡಿರಲಿಲ್ಲ. ಅದರ ಧಾಟಿ ತಡವರಿಸುತ್ತಿತ್ತು. ಇಂದು ಶ್ರೀಧರ, ಅಡಗಿ, ದೀಕ್ಷಿತ, ಈಶ್ವರನ್, ಪುಟ್ಟಪ್ಪ, ಕರ್ಕಿ, ಅರ್ಚಕ, ಭಟ್ಟ, ಎಚ್.ಬಿ. ಕುಲಕರ್ಣಿ, ನರಸಿಂಹಮೂರ್ತಿ – ಇವರೇ ಮೊದಲಾದರ ಕವನದ ಧಾಟಿ ಹುಟ್ಟುತ್ತಲೇ ಪ್ರಾಯದ ಲಕ್ಷಣವನ್ನು ತೋರಿಸುತ್ತದೆ. ರಸಿಕತೆಯ ಪ್ರಾಚುರ್ಯದಿಂದ ನವಕಾವ್ಯಶೈಲಿಯ ಪರಿಪಾಕದಿಂದ ಸಾರ್ಥಕತೆಯನ್ನು ಅಳೆಯಬಹು ದಾದರೆ ನನ್ನ ಕಾಲ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ನಾನು ನಿಜವಾಗಿ ನಂಬಿದ್ದೇನೆ.

\ದೋಷಗಳ ವೈಷಮ್ಯದಿಂದ ಆರೋಗ್ಯ ಕೆಡುವಂತೆ, ತ್ರಿಗುಣಗಳ ವೈಷಮ್ಯದಿಂದ ಶಾಂತಿಗೆ ನೆಲೆಯಿಲ್ಲದಾಗುತ್ತದೆ. ಹಾಗೆಯೇ ಶಕ್ತಿಗಳ ವೈಷಮ್ಯದಿಂದ ಕರ್ತೃತ್ವವು ನಷ್ಟವಾಗಿ ವಿಶ್ವಜೀವನದಂತೆ ವ್ಯಕ್ತಿ ಜೀವನದಲ್ಲಿ ಕಾರ್ಯ – ಕಾರಣಭಾವವು ತಿಳಿಯದಾಗುತ್ತದೆ. ಹೊಸ ಸೃಷ್ಟಿಗೆ ಹೊಸ ಕ್ರಿಯೆಬೇಕು. ಹೊಸ ಕ್ರಿಯೆಯ ಬೆಂಬಲಕ್ಕೆ ಶುದ್ದಿ ಸಿದ್ಧವಾದ ಪರಿಣತ ಭಾವವೂ ಸಾರ್ವಭೂಮಿಕ ಪ್ರಜ್ಞೆಯುಳ್ಳ ಜ್ಞಾನವೂ ಬೇಕು. ಕರ್ನಾಟಕವು ಹೊಸ ಹೆಜ್ಜೆಯನ್ನಿ ಡುವಾಗ ತನ್ನ ರಾಜಕೀಯ ಮತ್ತು ಕೌಟುಂಬಿಕ ಅನುಭೂತಿಯೊಡನೆ ತನ್ನ ಪಂಚ ಮತಾಚಾರ್ಯರು ಉಸುರಿದ ಅನುಭವವನ್ನೂ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವಾಗ ಸಂಚಾರಿ ಭಾವದಂತೆ ಅದರಲ್ಲಿ ಸೇರಿ ನೆಲೆಯಾಗಿರುವ ಕ್ರೈಸ್ತ, ಮಹಮ್ಮದೀಯರಂತೆಯೇ ಅಭಿನವ ಲೋಕಾಯತಿಕ ದೃಷ್ಟಿಯನ್ನೂ ಅವಿರೋಧವಾಗದಂತೆ ಒಳಗೊಳ್ಳಬೇಕು. ಈ ಜ್ಞಾನವು ನಮ್ಮ ಮನವನ್ನು ಹೊಸಯಿಸಿದ್ದಾದರೆ ಅದಕ್ಕೆ ಸರಿಯಾದ ಪರಿಪಾಕವು ನಮ್ಮ ಭಾವದಲ್ಲಿಯೂ ಬೇಕು. ಸಮರ್ಥವಾದ ಸಜ್ಜನಿಕೆಯು ಸೌಂದರ್ಯವನ್ನು ಕಾಣುವ ಆನಂದವು ಸತ್ಯವನ್ನೇ ಎತ್ತಿ ಹಿಡಿಯುವ ಪ್ರೀತಿಯು ನಮ್ಮ ಪ್ರಾಣದಲ್ಲಿ ಹೊಸ ಚೈತನ್ಯವನ್ನು ತುಂಬಬೇಕು. ಆಗ ನಮ್ಮ ಸಾಮಾಜಿಕ ಕ್ರಿಯೆಯ ರೂಪವೇ ಬದಲಾಗಿ ಜೀವನದಲ್ಲಿ ಒಂದು ನವಜನ್ಮದ ಆನಂದವು ಸುಳಿಯುವುದು. ಇಂಥ ಶಕ್ತಿಸಾಮರಸ್ಯದ ಯೋಗವನ್ನು ಮೈಗೊಂಡ ಮೂರ್ತಿಯು ಗುರುಸ್ಥಾನದಲ್ಲಿ ನಿಂತು ಮುಂದಿನ ಜೀವನವನ್ನೂ ಜೀವಿಗಳನ್ನೂ ದಿಗ್ದರ್ಶಿಸದಿದ್ದರೆ ನಮ್ಮ ಜ್ಞಾನದ ವಿವೇಕವೆಲ್ಲ ವಿವಾದವಾಗಿ ಪರಿಣಮಿಸಿತು. ಭಾವದ ಆವೇಶ ದೈವಕ್ಕೆಳಸೀತು. ಕ್ರಿಯೆ ನಿಷ್ಕ್ರಿಯತೆಗಿಂತ ಭಯಂಕರವಾದೀತು. ಆದರೆ ಈ ಸಂಶಯದ ಸಂಭವ ಕಡಿಮೆಯಿದೆ. ಶ್ರೀ ಅರವಿಂದರ ಯೋಗಸಿದ್ದಿಯಲ್ಲಿಯೂ, ಶ್ರೀ ಮಹಾತಾಯಿ ಯವರ ಪ್ರವರ್ತನೆಯಲ್ಲಿಯೂ ಜೀವನವೆಲ್ಲ ಯೋಗಶಾಲೆಯಾಗಲಿದೆ. ಮರಣ ಒಂದು ಶುದ್ದಿಯಾಗಿ ಜೀವನ ಒಂದು ಸಿದ್ದಿಯಾಗಲಿದೆ. ಈ ಹಾದಿಯಲ್ಲಿ ಹೆಜ್ಜೆಯಿಡಬೇಕಾಗಿದೆ. ಸಾಹಿತ್ಯ ತನ್ನ ಸಾರ್ಥಕತೆಗೆ. ಯಾವಾಗಲೂ ಸಾಹಿತ್ಯವು ಜೀವನದ ಪದಾರ್ಥ.