ನಾನು ಬರೆಯುತ್ತೇನೆ
ಸುಮ್ಮನಿರಲಾರದ್ದಕ್ಕೆ ;
ನನ್ನ ವೇದನೆ ಸಂವೇದನೆಗಳನ್ನು
ಕ್ರಿಯೆ ಪ್ರತಿಕ್ರಿಯೆಗಳನ್ನು
ದಾಖಲು ಮಾಡುವುದಕ್ಕೆ ;
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ,
ಎಲ್ಲದರ ಜತೆ ಬೆರೆಯುವುದಕ್ಕೆ.

ನಾನು ಬರೆಯುತ್ತೇನೆ
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ
ಮತ್ತೆ ಕಾಣಿಸುವುದಕ್ಕೆ ;
ನಿಮ್ಮೊಂದಿಗೆ ಸಂವಾದಿಸುವುದಕ್ಕೆ.

ನಾನು ಬರೆಯುತ್ತೇನೆ
ಖುಷಿಗೆ, ನೋವಿಗೆ,
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ ನಂದಿಸಲಾರದ ಕಿಚ್ಚಿಗೆ.