‘ನಾಯಿಗಳಿವೆ ಎಚ್ಚರಿಕೆ’
ಯಾರ ಎಚ್ಚರಕೆ ಈ ಹಲಗೆ !
ಸುಂದರವಾಗಿದೆ ನಡುವೆ ನಿಂತ ಮನೆ
ಸೊಗಸಾಗಿದೆ ಈ ಹೂದೋಟ.
ಸುಣ್ಣ ಬಣ್ಣದಲಿ ಕಣ್ಣ ಸೆಳೆಯುತಿದೆ
ಸುತ್ತುವರಿದ ಈ ಪ್ರಾಕಾರ.
ಆದರೆ ಥಟ್ಟನೆ ಕಣ್ಣ ಕುಕ್ಕುತಿದೆ
ಬಾಗಿಲ ಬಳಿಯೇ ಈ ಹಲಗೆ :
‘ನಾಯಿಗಳಿವೆ ಎಚ್ಚರಿಕೆ’
ಯಾರ ಎಚ್ಚರಕೆ ಈ ಹಲಗೆ ?
ಕಳ್ಳರಿಗೋ ಇದು ಸುಳ್ಳರಿಗೋ
ಬಂದು ಪೀಡಿಸುವ ಜನಗಳಿಗೋ,
ಲೋಕದ ಗಮನವೆ ಈ ಮನೆಕಡೆಗಿದೆ
ಎಂಬ ಪ್ರಚಾರದ ತಂತ್ರಕ್ಕೋ !
ಭಿಕ್ಷೆಗೆಂದು ಬಂದರಚುವ ಮಂದಿಗೆ
ಇರುವುದೆ ಅಕ್ಷರಜ್ಞಾನ ?
ಓದಿಕೊಂಡು ಅದನರಿತು ನಡೆವಷ್ಟು
ಮುಂದುವರಿದಿಲ್ಲ ನಮ್ಮ ಜನ.
ದಿಟಕೂ ನಾಯಿಗಳಿರಬಹುದೊಳಗಡೆ,
ಹೇಳಿಕೊಳ್ಳುವರೆ ಇಂಥ ವಿಚಾರ !
ಬರುವರ ಬಗೆಗನುಕಂಪವೊ, ಬೆದರೊ,
ಯಾವುದಿರಬಹುದು ಇದರರ್ಥ ?
ಎರಡೂ ಇರಬಹುದೀ ಹಲಗೆಯ ಮತ ;
ನಿಜಕೂ ದೊಡ್ಡವರಿಂಥ ಜನ.
ನಾಯಿಗಳಿರಬಹುದೆಲ್ಲರ ಮನೆಯೊಳು,
ಹೇಳಿಕೊಳ್ಳುವರು ಎಷ್ಟು ಜನ !
Leave A Comment