ತಮ್ಮ ಕಂಚಿನ ಕಂಠದಿಂದ ಕನ್ನಡನಾಡಿನ ತರುಣ ಚೇತನಗಳನ್ನು ಎಚ್ಚರಗೊಳಿಸಿ, ಬರೆಹಗಾರರ ಒಂದು ಪರಂಪರೆಯನ್ನೆ ನಿರ್ಮಿಸಿದವರು ರಾಜರತ್ನಂ.

ಹೀಗೆ ಎಚ್ಚರಗೊಳ್ಳುವ ಪುಣ್ಯಕ್ಕೆ ಪಾತ್ರರಾದ ಅಸಂಖ್ಯಾತರಲ್ಲಿ ನಾನೂ ಒಬ್ಬ.

ತಮ್ಮ ಸೃಜನಶೀಲ ವ್ಯಕ್ತಿತ್ವದ ಬಹು ಭಾಗವನ್ನು ರಾಜರತ್ನಂ ವಿನಿಯೋಗಿಸಿದ್ದು ಕನ್ನಡದ ಪರಿಚರ್ಯೆಗೆ. ಕವಿಯಾಗಿ, ವಾಗ್ಮಿಯಾಗಿ ಪುಸ್ತಕ ಪ್ರಚಾರಕರಾಗಿ, ಸ್ಫೂರ್ತಿದಾಯಕ ಅಧ್ಯಾಪಕರಾಗಿ ಅವರು ನಡೆಸಿದ ಸಾಧನೆ ಬಹುಮುಖ್ಯವಾದದ್ದು. ಈ ಸಾಧನೆಗೆ ಪ್ರತಿಯಾಗಿ ಅವರು ಏನನ್ನೂ ನಿರೀಕ್ಷಿಸಲಿಲ್ಲ. ಯಾವುದಕ್ಕೂ ಯಾರ ಮುಂದೂ ತಲೆ ಬಾಗಲಿಲ್ಲ. ತಮ್ಮ ಕಾರ್ಯದಲ್ಲಿ ತಮಗಿದ್ದ ಸಂತೃಪ್ತಿ, ಅನನ್ಯವಾದ ಆತ್ಮಪ್ರತ್ಯಯ, ನಿರಪೇಕ್ಷಕ ಮನೋಧರ್ಮ- ಇವು ರಾಜರತ್ನಂ ಅವರ ವ್ಯಕ್ತಿತ್ವದ ಮೂಲದ್ರವ್ಯಗಳು.

ರಾಜರತ್ನಂಗೆ ಮಕ್ಕಳನ್ನು ಕಂಡರೆ ತುಂಬ ಇಷ್ಟ-ಅವುಗಳಿಗಾಗಿ ಅವರು ಬರೆದ ಸಾಹಿತ್ಯ ಗಣನೀಯವಾದದ್ದು. ಒಮ್ಮೆ ಮಲ್ಲೇಶ್ವರದ ಬೀದಿಯ ತಿರುವಿನಲ್ಲಿ ರಾಜರತ್ನಂ ಹೋಗುತ್ತಿದ್ದರು. ಗೋಲಿ ಆಡುತ್ತಿತ್ತು ಒಂದು ಪುಟಾಣಿಗಳ ತಂಡ. ಅವರಲ್ಲಿ ಒಬ್ಬ ತನ್ನ ಪುಟಾಣಿ ಸ್ನೇಹಿತನಿಗೆ ಹೇಳಿದ “ಇವನೇ ಕಣೋ ರಾಜರತ್ನಂ”. ಇನ್ನೊಂದು ಪುಟಾಣಿ ಕೇಳಿತು. “ಯಾವ ರಾಜರತ್ನನೋ?” ಅದಕ್ಕೆ ಮೊದಲನೆ ಪುಟಾಣಿ ಹೇಳಿತು. “ಅಯ್ಯೋ ಗೊತ್ತಿಲ್ವೇನೋ. ನಾಯಿಮರಿ ರಾಜರತ್ನಂ”.

ರಾಜರತ್ನಂ ಬರೆದ “ನಾಯಿಮರಿ ನಾಯಿಮರಿ ತಿಂಡಿಬೇಕೆ” ಎಂಬ ಪದ್ಯ ಆ ವೇಳೆಗೆ ಪೆಮರಿ ಪುಸ್ತಕದಲ್ಲಿತ್ತು.  ಅದನ್ನು ಈ ಪುಟಾಣಿಗಳು ಓದಿದ್ದುವು. ಹೀಗಾಗಿ, ರಾಜರತ್ನಂ ಅವರಿಗೆ ಬಂದ ಬಿರುದು, ಮಕ್ಕಳಿಂದ – “ನಾಯಿಮರಿ ರಾಜರತ್ನಂ.” ೧೯೪೨-೧೯೪೩ರ ಕಾಲವೆಂದು ನನ್ನ ನೆನಪು. ನಾನು ಅದೇ ತಾನೇ ತುಮಕೂರಿನ ಇಂಟರ್ ಮೀಡಿಯಟ್ ತರಗತಿಗೆ ಸೇರಿದ್ದೆ. ಆಗ ರಾಜರತ್ನಂ ಕನ್ನಡ ಅಧ್ಯಾಪಕರು. ನಾನು ಮೊದಲ ದಿನ ತರಗತಿಯಲ್ಲಿ ಕಂಡೆ, ನನ್ನ ಕನಸಿನ ರಾಜರತ್ನಂ ಅವರನ್ನು, ಹಗಲ ನನಸಿನಲ್ಲಿ. ಒಳ್ಳೆಯ ಕಟ್ಟುಮಸ್ತಾದ ಜಟ್ಟಿಯ ಮೈಕಟ್ಟು, ದುಂಡು ಮುಖ ಅಗಲವಾದ ಕಣ್ಣುಗಳು, ಕಂಚಿನ ಕಂಠ, ನಿರರ್ಗಳ ವಾಗ್ ಝರಿ. ಜೋಗದ ಜಲಪಾತದ ಎದುರು ನಿಂತ ಅನುಭವ; ಮನಸ್ಸಿನ ಮೂಲೆ ಮೂಲೆಗಳಲ್ಲಿ ವಿದ್ಯುತ್ತು; ಬೆಳಕು.

ಅವರ ವೇಷ ಎಂಥದು: ಒಂದು ಖಾದಿ ಬನಿಯನ್; ಒಂದು ಲುಂಗಿ ಪಂಚೆ; ಬನಿಯನ್ ಮೇಲೆ ಒಂದು ಛದ್ದರ್-ಎಂಥ ಬಿರು ಬಸಿಲಲ್ಲೂ ಉಲ್ಲನ್ ಸೂಟುಹಾಕಿ, ಕೊರಳಿಗೆ ಟೈ ಬಿಗಿದುಕೊಂಡು ಬೆವರುತ್ತಾ, ಇಂಗ್ಲೀಷ್‌ನಲ್ಲೇ ವ್ಯವಹರಿಸುವ ಬಹುತೇಕ ಕಾಲೇಜ್ ಅಧ್ಯಾಪಕರ ನಡುವೆ ರಾಜರತ್ನಂ ಒಂದು ಸರಳತೆಯ ಓಯಸಿಸ್!

ಅದು ರಾಷ್ಟ್ರೀಯ ಚಳುವಳಿಯ ಕಾಲ, ದಿನ ಬೆಳಗಾದರೆ ತರಗತಿಗಳಿಗೆ ಬಹಿಷ್ಕಾರ, ಬ್ರಿಟಿಷರಿಗೆ ಧಿಕ್ಕಾರ, ಸತ್ಯಾಗ್ರಹ, ಲಾಠೀಛಾರ್ಜು ಇತ್ಯಾದಿ. ಈ ಪರಿಸರದಲ್ಲಿ ರಾಜರತ್ನಂ ಅವರ ಈ ‘ಗಾಂಧೀಡ್ರೆಸ್ಸು’ ಆಳುವವರ ಪಾಲಿಗೆ ಕಸಿವಿಸಿಯನ್ನು ತಂದಿತು. ಸರಿ; ಸರ್ಕಾರದಿಂದ ಹುಕುಂ ಬಂತು: ‘ರಾಜರತ್ನಂ ಅವರು ಘನತೆಗೆ ತಕ್ಕುದಲ್ಲದೆ ಈ ವೇಷದಲ್ಲಿ ಸರ್ಕಾರೀ ಕೆಲಸಕ್ಕೆ ಹಾಜರಾಗತಕ್ಕದ್ದಲ್ಲ; ಅವರು ಮೈ ತುಂಬ, ಸರಿಯಾಗಿ ಉಡುಪು ತೊಡಬೇಕು.’ ರಾಜರತ್ನಂ ಅವರಿಗೆ ಕೋಪ ಬಂತು. ‘ಮೈತುಂಬ ಉಡುಪು ತೊಡಬೇಕು-ತಾನೆ? ಆಗಲಿ’ ಎಂದರು. ಒಂದು ವಾರದ ನಂತರ ನೋಡುತ್ತೇನೆ. ರಾಜರತ್ನಂ ತರಗತಿಯೊಳಗೆ ದಯಮಾಡಿಸಿದರು, ಮೈ ತುಂಬ ಉಡುಪು ಧರಿಸಿ; ಅದೂ ಏನಂತೀರಿ? ಅದೊಂದು ಡ್ರಮ್ಮಿನಾಕಾರದ ಸುದೀರ್ಘವಾದ ಮುಚ್ಚುಕೋಟು! ಕೆಳಗೆರಡು ಪಾದ; ಮೇಲೊಂದು ತಲೆ ಮಾತ್ರ ಕಾಣಿಸುವಂಥದು! ಈ ಕೋಟನ್ನು ಕಾಲೇಜಿನ ತಮ್ಮ ಕೊಠಡಿಯಲ್ಲೇ ನೇತು ಹಾಕಿರುವುದು. ಮನೆಯಿಂದ ಕಾಲೇಜಿಗೆ ಬರುವಾಗ ಮತ್ತೆ ಹೋಗುವಾಗ- ಅದೇ ‘ಗಾಂಧಿ ಡ್ರೆಸ್ಸು.’ ತರಗತಿಗೆ ಬರುವಾಗ ಮಾತ್ರ ವೇಷಾಂತರ! ಇದೇನು ಸಾರ್ ಹೀಗೆ ಹೊಲಿಸಿದ್ದೀರಿ ಕೋಟನ್ನ’ ಅಂದವರಿಗೆ ಕಾದಿತ್ತು ಉತ್ತರ- ‘ಇದೇ, ಇದು ನಮ್ಮ ಗುಲಾಮಗಿರಿಯ ಸಂಕೇತ! ಅದಕ್ಕೆ ಇದನ್ನ, ಈ ಸ್ಟಾ ಫ್‌ರೂಮಿನಲ್ಲೇ ನೇತು ಹಾಕುತ್ತೇನೆ.’

ಇದು ರಾಜರತ್ನಂ ಅವರ ಪ್ರತಿಭಟನೆಯ ಒಂದು ರೂಪ.

ಇನ್ನೊಂದು ಸಲ ಬೆಂಗಳೂರಿನಲ್ಲಿ ರಾಜರತ್ನಂ ಇದ್ದಾಗ. ತುಮಕೂರಿನ ವಿದ್ಯಾರ್ಥಿ ನಿಲಯದವರು, ಉಪನ್ಯಾಸಕ್ಕೆ ಆಹ್ವಾನಿಸಿದರು. ರಾಜರತ್ನಂ ಒಪ್ಪಿಕೊಂಡರು ಅಂದರೆ ಗೊತ್ತಲ್ಲ? ತಾವು ಪ್ರಕಟ ಮಾಡಿದ ಪುಸ್ತಕಗಳ ಐವತ್ತು ಪ್ರತಿಗಳನ್ನು, ಆ ವಿದ್ಯಾರ್ಥಿ ನಿಲಯದ ಗ್ರಂಥಾಲಯಕ್ಕೆ ತೆಗೆದುಕೊಳ್ಳಬೇಕೆಂಬುದು, ಅವರು ಒಪ್ಪಿಕೊಂಡದ್ದರ ಹಿಂದಿನ ಕರಾರು. ಈ ಕರಾರನ್ನು ಹಾಕಿಯೆ ರಾಜರತ್ನಂ ಊರೂರಲ್ಲಿ ಪುಸ್ತಕ ಮಾರಿದ್ದಾರೆ. ಇದೂ ಅಂಥದೊಂದು ಸಂದರ್ಭ. ಅಂದಿನ ಸಭೆಗೆ, ಅಲ್ಲಿನ ಡೆಪ್ಯೂಟಿ ಕಮೀಷನರ್ ಅಧ್ಯಕ್ಷರು. ಕಾರ್ಯಕ್ರಮ, ಡೆಪ್ಯೂಟಿ ಕಮೀಷನರ್ ಅವರ ಘನ ಅಧ್ಯಕ್ಷತೆಯಲ್ಲಿ, ಮೂರು ಗಂಟೆಗೆ ಸರಿಯಾಗಿ-ಎಂದು ಆಹ್ವಾನ ಪತ್ರಿಕೆ ಹೇಳುತ್ತಿತ್ತು. ರಾಜರತ್ನಂ, ಸರಿಯಾಗಿ ಎರಡೂವರೆಗೆ ತುಮಕೂರಿನ ವಿದ್ಯಾರ್ಥಿ ಮಂದಿರಕ್ಕೆ ಹೋದರು. ಸರಿ, ಉಪನ್ಯಾಸಕ್ಕೆ ಕಾದರು. ಎರಡೂ ಮುಕ್ಕಾಲಾಯಿತು; ಮೂರಾಯಿತು. ಅಧ್ಯಕ್ಷತೆಗೆ ಬರಬೇಕಾದ ಸಾಹೇಬರು ಬರಲಿಲ್ಲ. ಮೂರುಕಾಲನ್ನು ದಾಟಿತು ಗಡಿಯಾರದ ಮುಳ್ಳು. ರಾಜರತ್ನಂ ಕೇಳಿದರು; ‘ಭಾಷಣ ಪ್ರಾರಂಭಿಸೋಣವೆ?’ ಆದರೆ ಕಾರ್ಯಕರ್ತರು ‘ಡೆಪ್ಯೂಟಿ ಕಮೀಷನರ್ ಬರಲಿ’ ಅಂದರು. ರಾಜರತ್ನಂ ಹೇಳಿದರು, ‘ನೋಡಿ ನನ್ನ ಉಪನ್ಯಾಸ ಮೂರರಿಂದ, ಮೂರುವರೆಯ ತನಕ; ಈಗ ಆ ಅವಧಿ ಮುಗಿಯಿತು. ಇಗೋ ನಾನು ಹೊರಟೆ. ನೀವು ನಿಮ್ಮ ಡೆಪ್ಯೂಟಿ ಕಮೀಷನರ್‌ಗಾಗಿ ಕಾಯಿರಿ’- ಎಂದವರೆ ಮುಖ್ಯರಸ್ತೆಗೆ ಬಂದು, ಬಸ್ಸನ್ನು ಕೈ ನೀಡಿ ನಿಲ್ಲಿಸಿ ಹತ್ತಿಕೊಂಡು, ಬೆಂಗಳೂರಿಗೆ ಹಿಂತಿರುಗಿಯೇ ಬಿಟ್ಟರು.

ರಾಜರತ್ನಂಗೆ, ಸಮಯನಿಷ್ಠೆಯ ಬಗ್ಗೆ ಮುತುವರ್ಜಿ; ಅಧಿಕಾರದಲ್ಲಿರುವ, ಮತ್ತು ಸಮಯಪ್ರಜ್ಞೆಯಿಲ್ಲದವರ ಬಗ್ಗೆ ಕೋಪ. ಇನ್ನೊಂದು ದಿನ ಹೀಗೇ ಒಂದು ಉಪನ್ಯಾಸಕ್ಕೆ ಹೊರಟಿದ್ದರು-ಬಸ್ಸಿನಲ್ಲಿ. ಪಕ್ಕದಲ್ಲಿ ಒಬ್ಬ ‘ಜಂಟಲ್‌ಮ್ಯಾನ್-ತರುಣ ಜೇಬಿನಿಂದ ಸಿಗರೇಟು ತೆಗೆದು, ಕಡ್ಡಿಗೀರಿ ಹತ್ತಿಸಿ, ರೈಲಿನ ಹಾಗೆ ಹೊಗೆ ಬಿಡತೊಡಗಿದ. ರಾಜರತ್ನಂ ತಾವು ಹೊದ್ದ ವಸ್ತ್ರದಿಂದ ಮೂಗು ಮುಚ್ಚಿಕೊಂಡರು. ಆ ಯುವಕ ಇನ್ನೂ ಒಂದು ಸಿಗರೇಟು ಹಚ್ಚಿ ಹೊಗೆ ಬಿಡತೊಡಗಿದ. ರಾಜರತ್ನಂ ಅವನಿಗೆ ಬಸ್ಸಿನಲ್ಲಿದ್ದ  ‘No Smoking’ ಬೋರ್ಡು ತೋರಿಸಿದರು. ಆತ ತಿರಸ್ಕಾರದ ನಗೆ ನಕ್ಕು ವ್ಯಂಗ್ಯವಾಗಿ ಕೈ ಅಲ್ಲಾಡಿಸಿದ. ಸರಿ, ತಕ್ಷಣ ರಾಜರತ್ನಂ ಅವರ ಕೈ ಆ ಯುವಕನ ತುಟಿಯ ಬಳಿ, ಹೋಯಿತು; ಆ ಯುವಕ ಸೇದುತ್ತಿದ್ದ ಸಿಗರೇಟು ಸಮೂಲವಾಗಿ ಬಸ್ಸಿಂದಾಚೆ ಬಿತ್ತು.

ಯಾರು ಯಾರಿಗೆ ಹೇಗೆ ಪಾಠ ಕಲಿಸಬೇಕೆಂಬುದು ಮೇಷ್ಟ್ರಾದ, ರಾಜರತ್ನಂ ಅವರಿಗೆ ಚೆನ್ನಾಗಿ ಗೊತ್ತಿತ್ತು.

ನಾನು ಕಲಿತದ್ದು ಇಂಥ ಮೇಷ್ಟ್ರು ಬಳಿ. ಅವರು ಓದುವುದು ಹೇಗೆಂದು ಕಲಿಸಿದರು, ಬರೆಯುವುದು ಹೇಗೆಂದು ಕಲಿಸಿದರು; ಬದುಕುವುದು ಹೇಗೆಂದು ಕಲಿಸಿದರು.

ನಾನು ತಕ್ಕಮಟ್ಟಿಗೆ ಓದುವುದು ಹೇಗೆಂದು ಕಲಿತಿದ್ದೇನೆ: ಬರೆಯುವುದು ಹೇಗೆಂದು ಕಲಿತಿದ್ದೇನೆ. ಆದರೆ ಬದುಕುವುದು ಹೇಗೆ ಎಂಬುದನ್ನೂ ಇನ್ನೂ ಕಲಿಯಬೇಕಾಗಿದೆ.

ಚದುರಿದ ಚಿಂತನೆಗಳು : ೨೦೦೦