(ಮೇಳದವರು ನರ್ತಿಸುತ್ತ ಬರುತ್ತಾರೆ.)

ಮೇಳ : ದುಡ್ಡಿದ್ದವ ದೊಡ್ಡವಲ್ಲವೆ
ಹೇಳೆನ್ನಗುರುವೆ
ದುಡ್ಡಿದ್ದವ ದೊಡ್ಡಲ್ಲವೇ ||

ಕಾಸಿದ್ದರ ಕೈಲಾಸಲ್ಲವೇ
ಹೇಳೆನ್ನ ಗುರುವೆ
ಕಾಸಿದ್ದರ ಕೈಲಾಸಲ್ಲವೇ ||

(ಮೇಳ ಕುಣಿಯುತ್ತ ಸರಿದಂತೆ ಹಿಂದಿನ ದೃಶ್ಯವೇ ಈಗಲೂ ಕಾಣಿಸುತ್ತದೆ. ನಾಯೀಮಗ ಬಾಗಿಲಲ್ಲಿ ಕೂತು ಕಾಯುತ್ತಿದ್ದಾನೆ. ಶಾರಿ ಒಳಗಡೆ ಮಲಗಿರುವುದರಿಂದ ಸಧ್ಯ ನಮಗೆ ಕಾಣಿಸುವುದಿಲ್ಲ. ದಾಸ ಮತ್ತು ಸಾವಂತ್ರಿ ಹಾಲಿನಲ್ಲಿ ಮಲಗಲು ಸಿದ್ಧರಾಗಿದ್ದಾರೆ.)

ದಾಸ : ದಾಸರ ಹೆಂಗಸರು ಗರತೀರಾದರ ಆಯ್ತು. ಗಂಡಸರೆಲ್ಲಾ ಹುಲ್ಲು ಮೇಯಬೇಕಷ್ಟ. ನೀ ಹೆಂಗ ಹೇಳಿದೆಯೋ ಏನೋ; ಅದಕ್ಕs ಆಕಿ ಮೊಂಡತನ ಮಾಡಿದಳು, ಇಂಥಾ ಸಾವ್ಕಾರು ನಮ್ಮಂಥಾ ದಾಸರಿಗಿ ಸಿಕ್ಕಾರೇನ ಹೇಳು,-

ಸಾವಂತ್ರಿ : ದಾಸ ಸುಮ್ಮನs ಬಿದ್ದಕೊಬಾರದ?

ದಾಸ : ನನಗ ಈಗೂ ಅನಸತೈತಿ, ಹೇಳೋ ನಮನಿ ಹೇಳಿದರ ಸಂಗೀತಾ ಹೂ ಅಂದಾಳು ಅಂತ.

ಸಾವಂತ್ರಿ : ಅದ್ಯಾವ ನಮೂನಿ ಹೇಳತೀಯೋ ನೀನs ಹೇಳಿಕೊ.

ದಾಸ : ಇಂಥಾ ಮಾತ ತಾಯಿ ಹೇಳಬೇಕೋ? ತಂದಿ ಹೇಳಬೇಕೊ?

ಸಾವಂತ್ರಿ : ನಾಳಿ ನೋಡೂಣಂತ ಬಿದ್ದಕೊ. ಮನಸಿಗಿ ಭಾಳ ತ್ರಾಸ ಮಾಡಿಕೊಂಡಾಳ. ಮತ್ತ ಏನೋ ಹೋಗಿ ಇನ್ನೇನೋ ಆದೀತು. ಆ ನಾಗ್ಯಾ ಹೋದಾವ ಇನ್ನs ಬರsಲಿಲ್ಲ. ಈ ಸಲ ಬರ್ತಾನೋ ಇಲ್ಲೊ!

ದಾಸ : ಆಕಿ ನಾಗ್ಯಾನ ಮಾತ ಕೇಳತಾಳ ಖರೆ. ಆದರ ಆ ಸೂಳೀಮಗ ತಿರಿಗಿ ಬರ್ತಾನೋ ಇಲ್ಲೊ. ಬಂದಾ ಅಂತ ತಿಳಿ, ಹೇಳಬೇಕಲ್ಲ, ಯಾಕ ಹೇಳ್ಯಾನ ಹೇಳು; ದಿನಾ ಎರಡ ಹೊತ್ತ ಭಕ್ಕಳ ಕೂಳ ಬೀಳತೈತಿ, ರಾತ್ರಿ ಬೆಚ್ಚಗ ನೀ ಸಿಗತಿ.

ಸಾವಂತ್ರಿ : ದಾಸಾ, ಮಲಕ್ಕೊ ಅಂತ ಹೇಳಲಿಲ್ಲಾ?

ದಾಸ : ಹೌಂದಲ್ಲ, ಯಾಕ ಹಾಂಗ ಹೇಳಿದಿ?

ಸಾವಂತ್ರಿ : ಯಾಕಂದರ ನೀ ಮಲಗಬೇಕನಿಸ್ತು ಅದಕ್ಕ.

ದಾಸ : ನಾಗ್ಯಾ ಸೆಟಗೊಂಡ ಹೋಗಿದ್ದರ ಅದಕ್ಕ ನಾ ಅಲ್ಲ, ಇನ್ನ ಮಗಳು ಕಾರಣ.

ಸಾವಂತ್ರಿ : ಅವ ತಿರಿಗಿ ಬರದಿದ್ದರ ನಿನ್ನ ಮ್ಯಾಳ ಎಲ್ಲಿರತೈತಿ, ಅದನ್ನ ನೋಡಿಕೊ.

ದಾಸ : ಆ ಜವಾಬ್ದಾರೀನೂ ನಿಂದs. ದಿನಕೊಮ್ಮಿ ಓಡಿಹೋಗತಾನ. ಅವನ್ನ ಮ್ಯಾಳದಾಗ ಹಿಡಿದಿಟ್ಟಕೊಳ್ಳಲೆಂತs ಅಲ್ಲೇನು ನಿನ್ನ ಬಿಟ್ಟದ್ದು? ಈಗ ಎಲ್ಲ ನನ್ನ ತಲೀಗೆ ಕಟ್ಟಿದರ?

ಸಾವಂತ್ರಿ : ಅದಕ್ಕs ಬಡಕೊಂಡೆ; ಒಂದ ಹೊಸಾ ಸೀರೀ ತಂದಕೊಡೋ ಮುದೋಡ್ಯಾ, ನಾಗ್ಯಾ ನನ್ನ ಕಡೆ ನೋಡೋದs ಬಿಟ್ಟಾನs ಅಂತ. ಹೋಗಲಿ ಈಗಾದರೂ ಒಂದ ಸಿಗರೇಟ ಕೊಡು.
(ಸಿಗರೇಟು ಕೊಡವನು. ಏನೋ ಯೋಚಿಸುತ್ತ ಸಿಗರೇಟು ಹೊತ್ತಿಸಿ ಸೇದ ತೊಡಗುವಳು)

ಇನ್ನs ಏನೇನ ಹೊಯ್ಕಾ ನೋಡಬೇಕಾಗೇತ್ಯೋ! ಮಗಳು ದೊಡ್ಡಾಕ್ಯಾದ್ಲು. ದೊಡ್ಡ ಸಾವ್ಕಾರ್ನ ಹಿಡಿದ ನಮ್ಮನ್ನ ಸಾಕತಾಳ ಅಂದರ, ಆಕಿ ಗರತಿ ಆಗತಾಳಂತ! ಈ ನಾಗ್ಯಾ ಎಲ್ಲಿ ಹೋದ್ನೊ! ಅಲ್ಲಾ ಸಾವ್ಕಾರ್ನ ಹಿಡೀಬೇಕಾದರ ಮೊದಲು ಅವನ ನಾಯೀನ ರೂಢಿ ಮಾಡಿಕೋಬೇಕಂತ…

ದಾಸ : ಸಾವ್ಕಾರ್ನ ಹಿಡೀಬೇಕಾದ್ದಿಲ್ಲವೇ, ಆಗಲೆ ಸಿಕ್ಕರ; ಮಗಳ್ನ ಹಿಡಿದ ಹಾಕಬೇಕಷ್ಟs. ನಿನಗೆ ನಾಯೀಮಗನ ಮ್ಯಾಲ ಆಸೇ ಆಯ್ತೇನೋ…
(ಥಟ್ಟನೇ ಅವಳ ಮನಸ್ಸನ್ನರಿತು ತನ್ನ ಹಾಸಿಗೆ ಸಮೇತ ಇನ್ನೊಂದು ರೂಮಿಗೆ ಹೋಗುವನು. ಸಾವಂತ್ರಿ ನಾಯೀಮಗನ ಕಡೆಗೆ ನೋಡುವಳು. ಆತ ವಿಚಾರ ಮಗ್ನನಾಗಿದ್ದಾನೆ)

ಸಾವಂತ್ರಿ : ಅಲ್ಲಿ ಯಾಕ ಕುಂತಿ, ಒಳಾಕ ಬಾರೋ ಹುಡುಗಾ. ಯಾಕ? ತಪ್ಪಿಸಿಕೊಂಡ ಹೋದೇವಂತೀಯೇನು? ಬೇಡಿ ಬಂದೀವಿ, ಬಿಟ್ಟ ಯಾಕ ಹೋದೇವೋ ಮಾರಾಯಾ! ಒಳಾಕ ಬಾ.
(ನಾಯೀಮಗ ತುಸು ಒಳಬಂದು ಕೂರುವನು)

ನಂಬಿಕಿಲ್ಲದಿದ್ದರ ಬಾಗಲಿಗಿ ಕೀಲೀ ಜಡಿಯೋ ನಮ್ಮಪ್ಪ. ಹಂಗ್ಯಾಕ ಮೋತೀ ಬಿಗಿ ಹಿಡದ್ದಿ, ನನ್ನ ನೋಡಿ ಖುಶಿ ಆಗಲಿಲ್ಲೇನು?
(ಅವನ ಸಮೀಪ ಹೋಗಿ ಕೂರುವಳು. ಆತ ಮುಖ ಕಡೆ ಮಾಡುವನು)

ನಾಯೀಮಗ : ನಾಯೀಮಗ.

ಸಾವಂತ್ರಿ : (ಕುಸುಕುಸು ನಗುತ್ತ)

ಇದ್ಯಾವ ಸೀಮೀ ಹೆಸರಪ! ಖರೇನs ನಿನ್ನ ಹೆಸರ ನಾಯೀ ಮಗಾನ?

ನಾಯೀಮಗ : ಹೂ.

ಸಾವಂತ್ರಿ : ಮದಿವ್ಯಾಗೇತೇನು?

ನಾಯೀಮಗ : ಇಲ್ಲ.

ಸಾವಂತ್ರಿ : ದಿನಾ ಒಬ್ಬನs ಮಲಗತಿ, ರಾತ್ರಿ ಥಂಡಿ ಹತ್ತೂದಿಲ್ಲಾ?

ನಾಯೀಮಗ : ಇಲ್ಲ.

ಸಾವಂತ್ರಿ : ಅಯ್ ಮೂಳಾ, ನನ್ನ ಯಾಕ ಹಾಂಗ ನೋಡ್ತಿ? ನಾ ಅಷ್ಟ ಚಂದ ಕಾಣ್ತೀನೇನು?

ನಾಯೀಮಗ : ಇಲ್ಲ.

ಸಾವಂತ್ರಿ : ಕಣ್ಣಾಗ ಹೂ ಅಂತಿ, ಬಾಯಾಗ ಇಲ್ಲಂತಿ, ಹೆಂಗ ನಂಬಲೊ ಹುಡುಗಾ? ಯಾಕ ಮುದುಡ್ಯಾಗೀಯಲ್ಲ, ಥಂಡಿ ಭಾಳ ಹತ್ತೇತೇನು? ಬೇಕಂದರ ನನ್ನ ಹಂತ್ಯಾಕೊಂದ ಕೋಟ ಐತಿ. ಈ ಕೋಟಿಂದೂ ಒಂದ ಕತೀನ ಅಂತಿಟ್ಟಕ. ನನ್ನ ಹರೆದಾಗ ಒಬ್ಬ ಗೌಡನ್ನ ಕೂಡಿದೆ. ಬಾಳ ಚಂದ ಇದ್ದ. ಇವ ಯಾಕಿಷ್ಟ ಚಂದ ಅದಾನಂತ ಕಾರಣ ಹುಡಿಕೇ ಹುಡಿಕಿದೆ. ಕಡೀಕಂದರ ಗೊತ್ತಾತು; ಯಾಕಂದರ ಅವ ಕೋಟ ಹಾಕತಿದ್ದ, ಅದಕ್ಕ. ಆಯ್ತು ಭಾಳ ದಿನಾ ನಡೀಲಿಲ್ಲ. ಕೋಟ ಬಿಟ್ಟ ಸತ್ತುಹೋದ. ಅವ ಹೋದಾಗಿನಿಂದ ಈ ಕೋಟ ಎಷ್ಟ ಮಂದಿಗಿ ಹಾಕಿ ನೋಡಿದೆ. ಯಾರೂ ಅವನ್ಹಾಂಗ ಕಾಣೀಸಲೇ ಇಲ್ಲ. ಬೇಕಾದರ, ಹೆಂಗೂ ಥಂಡಿ ಐತಿ, ನೀವೊಮ್ಮಿ ಹಾಕಿ ನೋಡ್ತೀಯೇನು? ( ಮಾತು ಹೇಳಹೇಳುತ್ತ ಅವನಿಗೆ ಅಗ್ಗದೀ ಸಮೀಪ ಹೋಗಿದ್ದಾಳೆ. ನಾಯೀ ಮಗ ಅವಳ ಇಂಗಿತ ಅರಿತು ಖೆಕ್ಕರಿಸಿ ನೋಡುತ್ತ ಎದ್ದು ಮುಂಚಿನ ಸ್ಥಳಕ್ಕೆ ಹೋಗುತ್ತಾನೆ. ಸಾವಂತ್ರಿಗೆ ನಿರಾಸೆಯಾಗುತ್ತದೆ. ನನ್ನ ಹಾಟ್ಯಾ ನಾಗ್ಯಾ ಬರಲಿಲ್ಲ ಎನ್ನತ್ತ ಒರಗುವಳು. ತುಸು ಹೊತ್ತು ನೀರವ. ಆಮೇಲೆ ನಾಯೀಮಗ ಬಾಗಿಲು ಮುಂದೆ ಮಾಡಿಕೊಂಡು ತನ್ನ ಪಾಡಿಗೆ ತಾನು,)

ಯಾರೋ | ಯಾರೊ ಬಂದವರಾ
ಯಾರೋ ಬಂದಾರೊ ಗುರುತಿಲ್ಲದವರಾ ||
(ಎಂದು ಹಾಡಿಕೊಳ್ಳುತ್ತಾನೆ. ಹಾಡು ಕೇಳಿ ಶಾರಿ ಆಶ್ಚರ್ಯದಿಂದ ಹೊರಗೆ ಬರುವಳು. ತಕ್ಷಣ ನಾಯೀಮಗ ಹಾಡು ನಿಲ್ಲಿಸುವನು)

ಶಾರಿ : ಯಾಕ ನಿಲ್ಲಿಸಿದಿ? ಹಾಡಲ್ಲ.
(ಸಾವಂತ್ರಿಗಿನ್ನೂ ಎಚ್ಚರವಿದೆ. ಹಾಗೇ ಮೊಳಕೈಯೂರಿ ಒರಗಿದ್ದಾಳೆ.)

ಇನ್ನೊಮ್ಮಿ ಹಾಡಪಾ….ಕೇಳಿದೇನs ಎವ್ವಾ?

ಸಾವಂತ್ರಿ : ಕೇಳಿದೆ.

ಶಾರಿ : ಒಳಗ ಎಂಥಾ ಹಾಡ ಇಟಕೊಂಡಾನಲ್ಲಾ?

ಸಾವಂತ್ರಿ : ಹೌಂದ ಖರೆ, ನಾಯೀ ಹಾಲ ಕುಡ್ಯಾಕಾದೀತ?

ಶಾರಿ : ಇನ್ನಷ್ಟ ಹಾಡಪಾ…
(ನಾಯೀಮಗ ಹೊರಗೆ ಹೋಗಿ ಬಾಗಿಲಿಕ್ಕಿಕೊಳ್ಳುವನು.)

ಸಾವಂತ್ರಿ : ನೋಡಿದಿಲ್ಲೊ ಹೆಂಗ ಬಾಗಲಾ ಹಾಕ್ಕೊಂಡ?

ಶಾರಿ : ಓಡಿಹೋಗತೀವಂದಕೊಂಡನೋ ಎನೋ! ಅವನ ಹಾಡ ಕೇಳತಿದ್ದರ ಯಾರೋ ಶಾಪದಾಗಿರೋ ದೇವರು ನನ್ನ ಶಾಪಾ ಹರೀರ್ಯೋ ಅಂತ ಅತ್ಹಾಂಗಿತ್ತು.

ಸಾವಂತ್ರಿ : ನಿನಗ ಅಷ್ಟೆಲ್ಲಾ ಕೇಳಿಸ್ತ? ನನಗೇನೋ ನಾಯಿ ಅತ್ಹಾಂಗ ಕೇಳಿಸ್ತವಾ. ನಾಳಿ ಬೆಳಗಾಗಲಿ, ಹಾಡಿಸೀಯಂತ.

ಶಾರಿ : ನಾ ಕೇಳಿದರ ಹಾಡೂದs ಇಲ್ಲ ಅವ.

ಸಾವಂತ್ರಿ : ಸಾವ್ಕಾರಿಗಿ ಹೇಳು, ಅವರು ಹುಬ್ಬ ಹಾರಿಸಿದರ ಸಾಕು, ತಲ್ಯಾಗಿನ ಎಲ್ಲಾ ಹಾಡ ಉದರಸ್ತಾನ.

ಶಾರಿ : (ಅರಿವಿಗೆ ಬಂದು)

ನಾಳೆ ಇಲ್ಲಿಂದ ಹೊಂಡಾಕs ಬೇಕು. ನೀವು ಬರ್ರಿ, ಬ್ಯಾಡಾದ್ರ ಇಲ್ಲೇ ಇರ್ರಿ, ನಾ ಅಂತೂ ಹೋಗವಾಕಿ.
(ಒಳಗ ಹೋಗುವಳು, ಮೇಳ ಹಾಡುತ್ತ ಬರುವುದು.)

ಮೇಳ : ಯಾರೋ | ಬಂದವರಾ |
ಯಾರೋ ಬಂದಾರೋ ಗುರುತಿಲ್ಲದವರಾ ||

ನಗಿಯೊಳಗ ತುಳುಕ್ಯಾರೊ
ಬೆಳಕಿನ ದಿಗರಾ |
ದೊಡ್ಡ ಬಂಡಿಯ ಎದಿಯ
ಗುಟ್ಟ ಬಲ್ಲವರಾ ||

ಸಿಡಿಲು ಗುಡುಗಿನ ಜೋಡಿ
ಮಾತಾಡಿದವರಾ |
ನಾ ನೀ ದೇವರನೆಲ್ಲಾ
ಪಳಗಿಸಿದವರಾ ||

(ಹಾಡುತ್ತಿರುವಾಗಲೇ ಬಾಗಿಲು ಬಡಿದ ಸಪ್ಪಳವಾಗುತ್ತದೆ. ಅದನ್ನು ಕೇಳಿ ಮೇಳದವರು ಚದುರುತ್ತಾರೆ. ಸಪ್ಪಳ ಕೇಳಿ ದಾಸ, ಸಾವಂತ್ರಿ ಹಾಗೂ ಶಾರಿ ಬಂದು ಬಾಗಿಲು ತೆರೆಯುವರು. ಹಿಂಗಟ್ಟು ನಾಯೀಮಗನನ್ನು ನಾಗ್ಯಾ ಒಳಕ್ಕೆ ದೂಡಿಕೊಂಡು ಬರುತ್ತಾನೆ. ನಾಯೀಮಗ ಬೀಳುತ್ತಾನೆ.)

ನಾಗ : ಹೂ. ಲಗು ಎಳ್ರಿನ್ನ. ಗದ್ದಲಾ ಮಾಡಿದರ ಮತ್ತಿನ್ನೇನಾರ ಆದೀತು.

ದಾಸ : ಹೆಂಗ ಹಿಡದಿ ಇವನ್ನ?

ನಾಗ : ಹಾಡತಾ ಹಾಡತಾ ಹಾಂಗs ಮಲಗಿದ್ದ. ಹೋಗಿ ಕೈ ಕಟ್ಟಿದೆ. ಲಗು ಏಳಂದರ ಇದೇನ ಕೇಳತಾ ಕೂತನೋ ಇವ!
(ಎಂದು ಹೇಳಿ ತನ್ನ ಸಾಮಾನು ತರಹೋಗುವನು ಶಾರಿ ಆಗಲೇ ಒಳಗೆ ಹೋಗಿದ್ದಾಳೆ. ಆದರೆ ದಾಸ ಮತ್ತು ಸಾವಂತ್ರಿಗೆ ಉತ್ಸಾಹವಿಲ್ಲ.)

ನಾಯೀಮಗ : ಹೊರಗ ಕಾಲಿಟ್ಟರ ನೆಟ್ಟಗಾಗಾಣಿಲ್ಲ, ಹೇಳಿರತೀನಿ.

ನಾಗ : (ಹೊರಬಂದು)

ಕೈಕಾಲ ಕಟ್ಟಿದರೂ ಇಷ್ಟ ಒದರ್ತೀಯೇನೊ? ಏ ಸಾವಂತ್ರೀ, ಏನಾಗೇತಿ ನಿನಗ? ಲಗೂನs ಬರಬಾರದ?

ನಾಯೀಮಗ : ಮಲಗಿದಾಗ ಕಟ್ಟಿಹಾಕಿ ಗಂಡಸ್ತನ ಮಾತಾಡ್ತೀಯೇನೊ?

ನಾಗ : ಹುಚ್ಚನಾಯೀನ್ನ ಹಿಡೀಬೇಕಾದರ ಹಿಂಗs ಮಾಡಬೇಕು. ಲೆಕ್ಕಲೆ ನೋಡಿದರ ನಿನ್ನನ್ನ ಗೋಣೀ ಚೀಲದಾಗ ಹಾಕಿ ಕಟ್ಟಬೇಕಾಗಿತ್ತು. ಮಾತಾಡ್ತೀಯಲ್ಲ. ಮನಶೇರ್ಹಾಂಗಿದ್ದೀ ಅಂತ ಸುಮ್‌ಕಿದೀನಿ.
(ದಾಸನಿಗೆ)

ಯಾಕೊ? ನೀ ಬರಾಣಿಲ್ಲೇನು? ಇಲ್ಲೇ ಬಿದ್ದಕೋ ಹಂಗಾದರ. ನಾನೂ ಶಾರಿ ಹೋಗತೀವಿ. ಯಾಕ ಸಾವಂತ್ರೀ ನೀ ಬರಾಣಿಲ್ಲಾ?

ಸಾವಂತ್ರಿ : ಹಂಗಲ್ಲ ನಾಗೂ, ನೀನs ವಿಚಾರ ಮಾಡು….

ನಾಯೀಮಗ : ಹೊರಗ ಕಾಲಿಟ್ಟರ ಒದರತೀನಿ. ಆಮ್ಯಾಲ ಸಾವ್ಕಾರ ಬಂದ ನಿಮ್ಮ ಕಾಲ ಮುರದ ಕೈಯಾಗ ಕೊಡತಾರ, ಹುಶಾರ್!

ನಾಗ : ಬಾಯಿಗಿ ಅರಿವೀ ಹಾಕಿ ಕಟ್ಟಲಿಲ್ಲ. ಅದಕ್ಕs ಇಷ್ಟ ಜೋರ ಮಾಡ್ತಿಯೇನೊ? ಸಾವಂತ್ರೀ, ಒಂದ ಅರಿವೀ ಕೊಡು. ಈ ನಾಯೀಮಗನ ಬಾಯಿ ಬಂದ ಮಾಡ್ತೀನಿ

ದಾಸ : ಹಿಂಗ ಮಾಡಿದರ ಹೆಂಗೋ ನಾಗಣ್ಣಾ?

ನಾಗ : ನೀ ಬರಾವೋ, ಇಲ್ಲೇ ಸಾಯಾವೊ?

ಶಾರಿ : (ಸಿದ್ಧಳಾಗಿ ಬಂದು)

ಯಾಕ, ನೀವು ಬರಾಣಿಲ್ಲಾ? ಸಾವ್ಕಾರಗ ಅಲ್ಲಾಬೆಲ್ಲಾ ಕೊಟ್ಟ ಬರತೀರೇನೊ! ನಡಿ ನಾಗಣ್ಣಾ.

ನಾಯೀಮಗ : ಸಂಗೀತಾ ಹೋಗಬ್ಯಾಡ.

ಶಾರಿ : ಹೋದರ?

ನಾಯೀಮಗ : ಬ್ಯಾಡವಾ.

ಶಾರಿ : ಒಪ್ಪಿದೆ. ನೀ ಭಾಳಂದರ ಭಾಳ ಖರೇತನದ ನಾಯಿ. ಮುಂದ ಯಾವಾಗಾದರೂ ನಿನ್ನ ಸಾವ್ಕಾರ ಭೇಟಿ ಆದಂದರ ನಿನ್ನ ಬಗ್ಗೆ ಶಿಫಾರಸ ಮಾಡ್ತೀನಾಯ್ತ? ನನ್ನ ಶಿಫಾರಸ ಕೇಳಿ, ಸಾವ್ಕಾರ ನಿನಗೊಂದ ಚರ್ಮದ ಪಟ್ಟಿ ಬಹುಮಾನ ಕೊಡತಾನ!

ನಾಗ : ಹೆಂಗ ಬಿದ್ದಾನ್ನೋಡು, ಇವನವ್ವನ!…
(ಹೋಗಿ ಒದೆಯುವನು.)

ಶಾರೀ, ನಡೀ ಹೋಗೋಣು.

ದಾಸ : ನನ್ನ ಮಾತ ಕೇಳು ಸಂಗೀತಾ…

ಶಾರಿ : ನನ್ನ ಮಾರಾಕ ಬಂದಿದ್ದಿರಿ,ಸಂಚಕಾರ ತಗೊಂಡೀರೇನೋ! ಬೇಕಾದರ ನೀವ ತೀರಿಸಿ ಬರ್ರಿ, ನಾ ಹೋಗತೀನಿ.

ನಾಗ : ನಿನ್ನ ಹೊಟ್ಟ್ಯಾಗ ಕರುಳಿಲ್ಲೋ ದಾಸ, ಸಿಂದೀ ನುಲಿ ತುಂಬ್ಯಾವ. ಸಾವಂತ್ರೀ ಇಂದ ನಿನ್ನ ಖರೇ ಬಣ್ಣ ತೋರಿಸಿದಿ. ನಡಿ ಶಾರಿ.

ಶಾರಿ : ಇಲ್ಲೇ ಸಾಯಿರಿಬ್ಬರೂ.
(ಹೊರಡುವರು. ನಾಯೀಮಗ ಆರ್ತನಾಗಿ ಕೂಗುವನು.)

ನಾಯೀಮಗ : ಹೋಗಬ್ಯಾಡ ಸಂಗೀತಾ, ನೀ ತಪ್ಪಸಿಕೊಂಡ ಹೋದರ ನಾಳಿ ಸಾವ್ಕಾರ ನನ್ನ ಕೊಲ್ಲತಾರ! ಬಂದೂಕಲೆ  ಸುಡತಾರ.

ನಾಗ : ಚೆಲೋ ಆಯ್ತು. ನೀ ಏನೂ ಕಾಳಜಿ ಮಾಡಬ್ಯಾಡ. ನೀ ಸತ್ತರೂ ನಾಯೀ ಸಂತಾನ ಜಗತ್ತಿನಾಗ ಇನ್ನs ಬೇಕಾದಷ್ಟು ತುಂಬೇತಿ. ಸಂತೋಷದಿಂದ. ಆಗಳೆ ಹಾಡಿದೆಲ್ಲ, ಆ ಹಾಡ ಹೇಳಿಕೊಂಡ ಸತ್ತಹೋಗು. ಬಾ ಶಾರೀ.
(ಹೋಗುವನು.)

ಶಾರಿ : ನಾಗಣ್ಣಾ, ಸಾವ್ಕಾರ ಇವನ್ನ ಕೊಲ್ಲತಾನಂತಲ್ಲ?

ನಾಗ : (ಹೊರಗಿನಿಂದ) ಅವನ ಮ್ಯಾಲ ಕರುಣಾ ಬಂತ?

ದಾಸ : ಅದs ಅಂತೀನ್ನಾನೂ. ಪಾಪ ನಮ್ಮ ಸಲುವಾಗಿ ಯಾರೋ ಯಾಕ ಜೀವಾ ಕೊಡಬೇಕು? ಅವ ಎಷ್ಟಂದರೂ ಆಳಮಗ. ನಾವೇನು, ಇಂದ ಇದ್ದೇವು, ನಾಳಿ ಹೋದೇವು. ಅವ ದಿನ ಬೆಳಗಾದರ ಸಾವ್ಕಾರ್ರ ಊಳಿಗ ಮಾಡಬೇಕು. ಅವನ ಬಾಳ್ವೆ ಹೆಂಗಂತ?

ಸಾವಂತ್ರಿ : ಅವ ಎಷ್ಟಂದರೂ ಕಾವಲಿದ್ದಾವ. ಕಾವಲಿಗಿಟ್ಟಾವ ಸಾವ್ಕಾರ. ಸಾವ್ಕಾರಗ ಹೇಳಿಕೇಳಿ ನಾಳಿ ರೋಬರೋಬ ಹೋಗೋಣಲ್ಲ. ಬಿಡಾಣಿಲ್ಲಂದರ, ಯಾಕ ಬಿಡಾಣಿಲ್ಲ? ಪೊಲೀಸ ಪೋಜದಾರ ಸತ್ತಾರೇನು?

ದಾಸ : ದುಡಕಬ್ಯಾಡ ಮಗಳs. ಸಾವ್ಕಾರ ನಿನ್ನ ಪ್ರೀತಿ ಮಾಡ್ತೀನಿ ಅಂದ. ನೀ ಒಲ್ಲೆ ಅಂದಿ. ಅಲ್ಲಿಗಿ ಆ ಮಾತ ಮುಗೀತು. ಕಟ್ಟಿಹಾಕಿ ಪ್ರೀತಿ ಮಾಡಾಕ ಆಗತೈತೇನು? ನೀ ದನಾನ? ಅಷ್ಟೂ ಮೀರಿ ಕಟ್ಟಿಹಾಕಿದರ ನಾವಿಲ್ಲೇನು? ಕಾಯ್ದೆ ಕಾನೂನು ಇಲ್ಲೇನು?

ಶಾರಿ : ಏನಪಾ, ನಾ ಹೋದರ ಸವ್ಕಾರ ನಿನ್ನ ಕೊಲ್ಲತಾನಂತಿ. ಹಂಗಿದ್ದರ ನೀನೂ ನಮ್ಮ ಜೋಡೀ ಬರ್ತೀಯೇನು? ನಮ್ಮ ಮ್ಯಾಳದಾಗಿದ್ದೀಯಂತ…

ನಾಗ : (ಹೊರಗಿನಿಂದ) ಏ ಶಾರೀ….

ನಾಯೀಮಗ : ಬರತೀನಿ. ನಾನೂ ನಿಮ್ಮ ಜೋಡೀ ಬರತೀನ್ರೆವಾ.

ಶಾರಿ : ಈ ಮಾತ ನಂಬಲಿ?

ನಾಯೀಮಗ : ನನ್ನಾಣಿ, ನಮ್ಮವ್ರಾಣಿ, ನಂಬವಾ.
(ಲಗುಬಗೆಯಿಂದ ಶಾರಿ ಅವನ ಕಟ್ಟು ಬಿಚ್ಚತೊಡುಗುವಳು. ದಾಸ, ಸಾವಂತ್ರಿ ಅವಳಿಗೆ ಸಹಾಯ ಮಾಡುವರು. ಬಿಚ್ಚಿದ ತಕ್ಷಣ ನಾಯೀಮಗ ನೆಗೆದು ಬಾಗಿಲಿಗಡ್ಡ ಕಟ್ಟಿ ನಿಲ್ಲುವನು.)

ನಾಯೀಮಗ : ಖಬರದಾರ್! ಆ ಸೂಳೀಮಗನ್ನ ಆಮ್ಯಾಲ ನೋಡಿಕೊಳ್ತೀನಿ. ನೀವು ಯಾರಾದರೂ ಹೊರಗ ಕಾಲಿಟ್ಟರ ಕಾಲ ಮುರೀತೀನಿ!
(ಎಲ್ಲರಿಗೂ ಅನಿರೀಕ್ಷಿತ ಆಘಾತವಾಗುತ್ತದೆ. ಬಾಗಿಲಲ್ಲಿ ನಾಗ ಬಂದು ಹಣಿಕಿ ಹಾಕುತ್ತಲೂ ನಾಯೀಮಗ ಅವನನ್ನು ಗಮನಿಸಿ ಖೆಕ್ಕರಿಸಿ ನೋಡುತ್ತಾನೆ. ನಾಗನಿಗೆ ಪರಿಸ್ಥಿತಿಯ ಅರಿವಾಗಿ ಹೊರಗೇ ಹೋಗುತ್ತಾನೆ. ಮೇಳ ಪ್ರವೇಶಿಸುತ್ತದೆ.)

ಮೇಳ : ಪ್ರೀತಿ ಎಂದರ್ಯಾಕೆ ನಕ್ಕಿ
ಹೊತ್ತಿ ಉರಿವ ಎದಿಯ ಬೆಂಕಿ
ಬೆಳಕಿನಾಗ ಏನ ಕಂಡಿವೋ |

ಏನ ಬಯಸಿ ಏನಪಡದಿ
ಬಂದರ್ಯಾರು ಯಾರ ಕರದಿ
ಹಣ್ಣ ಹರಿದರ್ಯಾರು ತಿಂದರೋ || ಹಾ ರಾಮ ರಾಮ
ತಿಂದರೋ ತಿಂದರೋ ಹಣ್ಣ ತಿಂದರೋ ||

(ಮೇಳ ಮರೆಯಾಗುವುದು. ಸೋಮಣ್ಣನ ಮನೆ. ತಾಯಿ ಯಥಾಪ್ರಕಾರ ಹಾಸಿಗೆಯಲ್ಲಿದ್ದಾಳೆ. ಲಕ್ಷ್ಮಿಅವನ ಹೆಂಡತಿ ಹಾಗೂ ರಾಮಣ್ಣಅವಳ ತಂದೆ ಇದ್ದಾರೆ. ಸೋಮಣ್ಣ ಸಂಗೀತಾ ಎಂಬೂದು ನಮ್ಮ ಹೆಸರಾ ಎಂದು ಕುಡಿದ ಗುಂಗಿನಲ್ಲಿ ಹಾಡುತ್ತ ಪ್ರವೇಶಿಸುತ್ತಾನೆ.)

ತಾಯಿ : ಅಕಾ ಬಂದ, ನೀ ಆದರೂ ಬುದ್ಧೀರೀತಿ ಹೇಳಿ ದಾರಿಗಿ ತರತೀಯೋ, ಇಲ್ಲಾ ಹೀಂಗs ಹಾಳಾಗಲೆಂತ ಬಿಟ್ಟಹೋಗತೀಯೋ ನೋಡು.

ರಾಮಣ್ಣ : ನಮಸ್ಕಾರಪ.

ಸೋಮಣ್ಣ : ನಮಸ್ಕಾರ.

ತಾಯಿ : ಯಾರಂತ ಗುರುತು ಸಿಕ್ಕಿತೊ?

ಸೋಮಣ್ಣ : ಇದರ ಕಣ್ಣೀಗೆ ಕಾಣಸಾಕ ಹತ್ಯಾರ.

ತಾಯಿ : ಲಕ್ಷ್ಮೀನ ಕರ್ಯಾಕ ಹೋಗತೇನಂದಾವ ಅವರೂರಿಗಿ ಹೋಗಲಿಲ್ಲಂತ ನೀನು?

ಸೋಮಣ್ಣ : ಅರೆ ಹೌಂದಲ್ಲ! ನನ್ನ ಮನ್ಯಾಗ ಬೇಕಾದಷ್ಟು ಲಕ್ಷ್ಮೀ ಬಿದ್ದೈತಿ, ಮತ್ತ್ಯಾಕ ಅವಳು ಅಂತ ಸುಮ್ಮನಾದೆ.
(ರಾಮಣ್ಣನಿಗೆ ಹೇಸಿಕೆಯಾಗಿ ಚಡಪಡಿಸುತ್ತಿದ್ದಾನೆ.)

ತಾಯಿ : ನೀನು ದಾಸೀನ ಕರತಂದು ತೋಟದ ಮನ್ಯಾಗಿಟ್ಟದ್ದು  ಆಕಿಗೂ ಗೊತ್ತಾಗೇತಿ.

ಸೋಮಣ್ಣ : ಆಯ್ತಲ್ಲ, ನಾನs ಹೇಳಬೇಕಂತಿದ್ದೆ. ಇನ್ನ ಹೇಳಬೇಕಾದ್ದ ಏನಿಲ್ಲ ಅಂಧಂಗಾಯ್ತು.

ತಾಯಿ : ಹಿಂಗಂದರ ಹೆಂಗೋ ತಮ್ಮ? ಇದನ್ನ ಕೇಳಿ, ಬಂದ ಗಾಡ್ಯಾಗ ತಂದೀಕೂಡ ತಿರಿಗಿ ಹೊಂಟಾಳ ಆಗಲೇ.

ಸೋಮಣ್ಣ : ಹೋಗನ್ನು. ಬೇಕಾದಾಗ ನಾನs ಹೋಗಿ ಕರಕೊಂಬರತೀನಿ. ನನ್ನ ಕೇಳಿದರ ಹೇಳದs ಕೇಳದs ಬಂದದ್ದs ತಪ್ಪು.

ರಾಮಣ್ಣ : ಆಯ್ತಲ್ಲವಾ, ದೊಡ್ಡ ಮನಿಶಾ ಅಪ್ಪಣಿ ಕೊಟ್ಟ. ಲಕ್ಷ್ಮೀ, ಬಾ ಹೋಗೋಣು.

ತಾಯಿ : ಏನ ಮಾತಾಡ್ತೀಯೋ ಸೋಮೂ? ಹೇಳಾವರ ಕೇಳಾವರ ಯಾರಿಲ್ಲೇನ ನಿನಗ?

ಸೋಮಣ್ಣ : ನೀ ಇದ್ದೀಯಲ್ಲಬೆ, ನನ್ನ ಪಾಪ ತೊಂಬತ್ತೊಂಬತ್ತಾಗಿದ್ದವು. ಇದೊಂದ ಆದರ ಪೂರ ನೂರ ಆಗತಾವ. ಆಮ್ಯಾಲ ಎಲ್ಲಾ ಬಿಟ್ಟು ಹೇಂತಿಗಿ ಗಂಡಾಗಿ, ನಿನಗ ಮಗಾ ಆಗಿ, ಊರಿಗಿ ಸಜ್ಜನ ಆಗಿ ಬದಕ್ತೀನಂತ. ಆಯ್ತ? ಅಲ್ಲೀತನಕಾ ಕಸೂತಿ ಬಿಡಸ್ತಾ, ಗುಲಾಬಿ ಕನಸ ಕಾಣತಾ ತೌರಿನಾಗ ಬಿದ್ದಕೊಂಡಿರಲಿ.
(ರಾಮಣ್ಣನಿಗೆ)

ನಾ ಹೇಳಿದ್ದ ತಮಗೂ ತಿಳೀತಲ್ಲ?

ರಾಮಣ್ಣ : ಸೋಮೂ, ನೀನು ಶ್ರೀಮಂತ. ಹಣದಿಂದ ಏನ ಬೇಕಾದ್ದನ್ನ ಕೊಳ್ಳಬಲ್ಲಿಯಪ್ಪ, ಹೊಸಾ ಹೆಂತೀನ್ನ ಕೂಡ. ಈಗ ಲಕ್ಷ್ಮಿ ನಿನಗ ಬೇಕಿಲ್ಲ ಅಂಧಂಗಾಯ್ತು. ಲಕ್ಷ್ಮೀ, ಬಾರವಾ.

ಲಕ್ಷ್ಮಿ : ಅತ್ತೀ ಮೈಯಾಗ ಆರಾಮಿಲ್ಲ, ಅವರನ್ನ ಯಾರ ನೋಡಿಕೊಳ್ತಾರಪ?

ತಾಯಿ : ಏನ ರಾಮಣ್ಣ. ಹಿಂಗ ಮಾಡತೀ, ನಿನಗೂ ಸಮ ಬುದ್ಧಿ ಇಲ್ಲಂದರ ಹೆಂಗ?

ರಾಮಣ್ಣ : ಇನ್ನ ಈ ಮನ್ಯಾಗ ಒಂದ ಗಳಿಗಿ ಇರಾಕ ಶಕ್ಯ ಇಲ್ಲಬೇ. ಲಕ್ಷ್ಮೀ ಇರೋದಾದರ ಇದ್ದಕೊ. ಆದರ ಇಂದಿನಿಂದ ನಿನ್ನ ಪಾಲಿಗಿ ತಂದೀತಾಯೀ ಸತ್ತರಂತ ತಿಳಕೊ.
(ರಭಸದಿಂದ ಹೋಗುವನು. ಲಕ್ಷ್ಮಿ ಅಳುವಳು.)

ತಾಯಿ : ರಾಮಣ್ಣಾ, ರಾಮಣ್ಣಾ ನನ್ನ ಮಾತು ಕೇಳು….
(ರಾಮಣ್ಣ ಮರೆಯಾದೊಡನೆ ತಾಯಿಗೆ ನಿರಾಸೆಯಾಗಿದೆ.)

ಸೋಮಣ್ಣ : ಯಾರಲೇ ಅಲ್ಲಿ?
(ಮಾರುತಿ ಬರುವನು.)

ಅಂಧಾಂಗ ನಿನ್ನ ಸೊಸೀಗಿ ಇವನ ಪರಿಚಯ ಮಾಡಿಕೊಡ್ಲಿಲ್ಲ. ಅಲ್ಲ? ನೋಡs ಇವs ಚೆಲಿವೀಗಂಡ. ಚೆಲಿವೀನ ಕೆಡಿಸಿ ನಾನs ಕೊಂದೆ ಅಂತ ಅವ್ವಗ ಸಂಶೆ. ಏನಪಾ, ಚೆಲಿವೀ ಸಾವಿಗಿ ನಾ ಏನೊ ಕಾರಣ? ಅಂಥಾ ಬದ್ಮಾಸನs ನಾನು?

ಮಾರುತಿ : ಛೇಛೇ ಅಲ್ಲ ತಗೀರಿ.

ಸೋಮಣ್ಣ : ಏನ ಅಲ್ಲರೀ ಅಂತೀಯೋ ಬೋಳೀಮಗನ? ಚೆಲಿವೀನ ಕೆಡಿಸಿದ್ದೂ ನಾನs, ಅವಳು ಸಾಯೋದಕ್ಕೂ ನಾನs ಕಾರಣ. ಅದs ನನ್ನ ತೊಂಬತ್ತೊಂಬತ್ತನೇ ಪಾಪ. ಮೋತೀ ಹಂಗ ಮಾಡಬ್ಯಾಡ, ಹೊಟ್ಟೀಮ್ಯಾಲ ಒದೀತೀನಿ… ಹಾಂಗ ಬಾ ಹಾದಿಗೆ. ಹೊರ ಹೋಗಿ ಯಾರೋ ಬಂದಾರ ನೋಡ ಹೋಗು.
(ಮಾರುತಿ ಹೋಗಿ ದಾಸನನ್ನು ಕರೆತರುವನು. ಅವನನ್ನು ಗಮನಿಸಿ ಲಕ್ಷ್ಮೀ, ತಾಯಿ ಮರೆಯಾಗುವರು. ಸೋಮಣ್ಣನ ವ್ಯಂಗ್ಯವೀಗ ಇನ್ನೂ ಮೊನೆಯಾಗುತ್ತದೆ.)

ಸೋಮಣ್ಣ : ಬಾ ಮಾವಾ, ಸಂಗೀತಾ ಸಂತೋಷವಾಗಿದ್ದಾಳಾ?

ದಾಸ : (ಏನು ಹೇಳಬೇಕೆಂದು ತೋಚದೆ) ಹೂನ್ರಿ.

ಸೋಮಣ್ಣ : ಸಂಗೀತಾ ಆನಂದವಾಗಿದ್ದಾಳಾ?

ದಾಸ : ಹೂನ್ರಿ.

ಸೋಮಣ್ಣ : ಇನ್ನಮ್ಯಾಲೆ ಮಾವ ಅಳಿಯಾ ಸೇರಿಕೊಂಡು ಮೀನ ಹಿಡಿಯೋದರ ಬಗ್ಗೆ ಮಾತಾಡೋಣ : ಮಾವಾ, ಈ ಕೋಟ ಹಾಕ್ಕೊಂಡ ಗಾಳಾ ಹಾಕಿದರ ಮೀನ ಸಿಕ್ಕಾವೇನು?

ದಾಸ : ಈ ಕೋಟ ನಿಮಗ ಭಾಳ ಚಂದ ಕಾಣತೈತ್ರಿ ಖರೆ ಹೇಳತೀನಿ, ನೀವು ಈ ಕೋಟ ಹಾಕಿದಾಗ ಥೇಟ ಕಾಮಣ್ಣನ್ಹಾಂಗ ಕಾಣತೀರಿ. ಚಿನ್ನದವೇನ್ರಿ ಇದರ ಗುಂಡಿ?

ಸೋಮಣ್ಣ : ನಿನಗ ಚಂದ ಕಂಡರ ಏನ ಬಂತೋ ಮಾವ? ನಿನ್ನ ಮಗಳಿಗಿ ಕಾಣಬೇಕಲ್ಲ!

ದಾಸ : ಬೆಂಕೀ ಹಂತ್ಯಾಕ ಬೆಣ್ಣಿ ಇದ್ದರ ಎಷ್ಟ ದಿನ ಕರಗದs ಇದ್ದೀತ್ರಿ? ಸಾವ್ಕಾರ್ರ. ಇಚೀಚೇ ಪವಾಡ ಕಮ್ಮೀ ಆಗ್ಯಾವ. ಇಲ್ಲದಿದ್ದರ ನಾನs ಒಂದ ಪವಾಡ ಮಾಡಿ ನನ್ನ ಮಗಳು ಸಂಗೀತಾ ನಿಮ್ಮ ಬೆನ್ನ ಹತ್ತಿ ಮಾವಾ ಮಾವಾ ಅನ್ನೋ ಹಾಂಗ ಮಾಡತಿದ್ದೆ.

ಸೋಮಣ್ಣ : ಮಾವಾ, ಮೀನಿನಾಗ ಮೀನು ಯಾವುದು ಶ್ರೇಷ್ಠ?

ದಾಸ : ನಾ ಬರೀ ಕೆರ್ಯಾಗನ ಮೀನ ತಿಂದಿದೀನ್ರಿ; ಅಷ್ಟ ಮಾಹಿತಿ ಇಲ್ಲ.

ಸೋಮಣ್ಣ : ನಾನs ಹೇಳತೀನಿ; ಮೀನಿನಾಗ ಅಗ್ಗದೀ ರುಚಿಕಟ್ಟಾದ ಮೀನು ಯಾವುದಪಾ ಅಂದರ ಕೈಯಿಂದ ತಪ್ಪಿಸಿಕೊಂಡ ಹೋಗತದಲ್ಲಾ-ಅದು. ತಪ್ಪಿಸಿಕೊಂಡಷ್ಟೂ ಅದನ್ನ ಬಿಡಬಾರದಂತ ಹಟ ಬರತದ.
(ತಕ್ಷಣ ನಾಟಕವಾಡುವುದನ್ನು ಬಿಟ್ಟು ದಾಸನ ತೋಳು ಹಿಡಿದುಕೊಳ್ಳುವನು. ಮಾರುತಿ ಇದ್ದುದು ಗಮನಕ್ಕೆ ಬರುತ್ತದೆಅವನಿಗೆ ಹೊರಗಡೆ ಹೋಗುವುದಕ್ಕೆ ಸೂಚಿಸುವನು, ಅವನು ಹೋಗುವನು.)

ಖರೆ ಹೇಳೊ ದಾಸ, ನನ್ನಲ್ಲೇನ ಕಮ್ಮಿ ಐತಿ?

ದಾಸ : (ಸಾವರಿಸಿಕೊಳ್ಳುತ್ತ)
ಕಮ್ಮಿ? ಏನ್ರಿ ಸಾವ್ಕಾರ ಹಿಂಗಂತೀರಿ? ಮನೀ ತುಂಬ ರೊಕ್ಕೇನು! ಊರ ತುಂಬ ಆಸ್ತಿಯೇನು! ಬೇಕಂದರ ಸರ್ಕಾರ ಕೊಳ್ಳತೀರಿ, ಮಾರತೀರಿ!

ಸೋಮಣ್ಣ : ನನ್ನ ಐಸಿರಿಯೆಲ್ಲಾ ವ್ಯರ್ಥ ಅಂದಳಲ್ಲೊ ನಿನ್ನ ಮಗಳು!
(ದೂಡುವನು, ದಾಸ ಬಿದ್ದು ಸಾವರಿಸಿಕೊಳ್ಳುತ್ತ ಏಳುವನು.)

ದಾಸ : ಎಪಾ, ಹರೇದಾಗ ತಿಳಿವಳಿಕಿ ಇರಾಣಿಲ್ಲರೀ. ಯಾವುದರ ಹರೇದ ಹುಡಿಗೀನ್ನ ಏನಾರ ಕೇಳ್ರಿ, ಅದು ಮೊದಲ ಮಾಡೋ ಕೆಲಸ ಏನ ಗೊತ್ತೈತ್ರಿ? – ಮಡಿಪಕ್ಕಿ ಕೆರಕೊಳ್ಳೋದು.

ಸೋಮಣ್ಣ : ಖರೆ ಹೇಳು. ನನಗ ವಯಸ್ಸಾಗೇತೇನು?

ದಾಸ : ಛೇಛೇ ಸಾವ್ಕಾರ್ರಿಗಿ ವಯಸ್ಸಾಗೋದಂದರೇನ್ರಿ! ಕುಸ್ತೀ ಹುಡುಗನ್ಹಾಂಗ ಕಾಣತೀರಿ!

ಸೋಮಣ್ಣ : ಬಯಲಾಟದ ಬಣ್ಣಾ ಅಳಿಸೋದs ಇಲ್ಲ ನೀನು. ರೊಕ್ಕದಾಸೇಕಾಗಿ ಏನೇನೋ ಬೊಗಳ್ತಿ. ನಿಮ್ಮ ಜಾತ್ಯಾಗ ಹುಟ್ಟೋ ಹುಡುಗೀನs ಅಲ್ಲೊ ಅವಳು. ಯಾವಳೋ ರಾಜಕುಮಾರಿ ನಿನಗ ತಪ್ಪಿ ಸಿಕ್ಕಾಳ.

ದಾಸ : ಅದs ಅಂತೇನ್ರಿ ನಾನೂ, ಯಾವ ಕೆಟ್ಟ ಮುಹೂರ್ತದಾಗ ಹುಟ್ಟ್ಯಾಳೊ, ಗರತಿ ಗಂಗವ್ವ ಆಗತೇನಂತಾಳ! ದಾಸರ ಜಾತ್ಯಾಗ ಗರತೇರಿದ್ದದ್ದನ್ನ ಹಿಂದ ಮುಂದ ಎಂದಾದರೂ ಕೇಳೀರೇನ್ರಿ?

ಸೋಮಣ್ಣ : (ಖೇದದಿಂದ) ಬುದ್ಧಿಗಲಿತಾಗಿನಿಂದ ನೋಡತೇನು : ಹೆಂಗಸು ಗಂಡಸು, ಯಾವುದೂ ನನ್ನ ಎದರ ನಿಂತಿರಲಿಲ್ಲ. ಎಲ್ಲಾರೂ ನನಗs ದೇವರಂತಿದ್ದರು. ಸುಳ್ಳ ಹೇಳಿದರೋ ಏನೊ. ಯಕ್ಕಶ್ಚಿತ್ ಒಂದ ದಾಸರ ಹುಡುಗಿ ಎದರ ನಿಂತ ಖರೆ ಹೇಳಿದಳಲ್ಲೊ!

ದಾಸ : ಏನಂತರಿ?

ಸೋಮಣ್ಣ : ನಾ ಕೊಳಕ ಅಂತ.

ದಾಸ : ಛೇ ಛೇ…

ಸೋಮಣ್ಣ : ನನ್ನ ನೋಡಿದಾಗೆಲ್ಲಾ ಆಕೀ ಕಣ್ಣ ಅದನ್ನs ಹೇಳತಾವ! ಆದರ ನಾ ಸೋಲೋದಿಲ್ಲಂತ ಆಕಿಗಿ ಹೇಳು.

ದಾಸ : ಖರೇ ಹೇಳತೇನ್ರಿ ಸಾವ್ಕಾರs, ನನಗೆಷ್ಟ ಸಾಧ್ಯ ಐತಿ ಅಷ್ಟ ಕೆಡಕನ್ನಿಸ್ತು. ಬೇಕಾದರ, ನಿರಾಸೆ ಬಗ್ಗೆ ಒಂದ ಪದ ಐತಿ, ಹಾಡಲೇನ್ರಿ?
(ಸೋಮಣ್ಣನ ಮೇಲೆ ತನ್ನ ಮಾತಿ ಪ್ರಭಾವ ಏನೇನೂ ಆಗದೇ ಇರುವುದನ್ನು ಗಮನಿಸಿ)

ಒರಟ ಹುಡಿಗಿ, ಭಾಳ ಒರಟ ಹುಡುಗಿ. ನಿನ್ನಿ ನನಗs ನಾಯಿ ಅಂದ್ಲು! ಬೇಕಾದರ ಹಿಂಗ ಮಾಡೋಣೇನ್ರಿ? ಸಂಗೀತಾ ಹಾದಿಗಿ ಬರೂತನಕ ಸಾವಂತ್ರೀಬಾಯೀನ್ನ ನೋಡತೀರೇನು? ಹೊಸಾ ಸೀರಿ ಉಟ್ಟಾಗ ಆಕೀನೂ ಚಂದ ಕಾಣತಾಳ. ಹೊಟ್ಟೀಕಿಚ್ಚಿನಿಂದ ಸಂಗೀತಾ ಲಗು ಹಾದಿಗೆ ಬಂದರೂ ಬಂದಾಳು…

ಸೋಮಣ್ಣ : ನಿನಗೂ ನಾಯಿ ಅಂದಳಲ್ಲ,-ಅದ ಬರೋಬರಿ. ಹೆಚ್ಚ ಮಾತಾಡಬ್ಯಾಡ, ನಿನಗೀಗ ಎಷ್ಟ ರೊಕ್ಕ ಬೇಕು? ತಗೊ.
(ಹಣ ಕೊಡುವನು. ದಾಸ ತಗೊಂಡು ಹಾಗೇ ನಿಲ್ಲುವನು.)

ಮತ್ತೇನು?

ದಾಸ : ನಾವು ಕಲಾವಿದರು….

ಸೋಮಣ್ಣ : ಕಲಾವಿದರಿಗಿನ್ನೇನಾಗಬೇಕು?

ದಾಸ : ಈ ಕೋಟ ಒಂದ ಕೊಟ್ಟರ…

ಯಾಕಂದರ, ಸಾವ್ಕಾರರ ಮಾವ ಅಂದಮ್ಯಾಲ ಒಂದ ಕೋಟ ಇದ್ದರ ಚೆಲೋ ಅಂತ…..
(ಸೋಮಣ್ಣ ತಕ್ಷಣ ಕಳಚಿ ಕೋಟು ಕೊಡುವನು.)

ಸೋಮಣ್ಣ : ಇನ್ನ ಹೊರಡು.
(ದಾಸ ಆನಂದದಿಂದ ಹೋಗುವನು. ಮೇಳ ರಂಗವನ್ನಾಕ್ರಮಿಸುವುದು.)