ಮೇಳ : ಒಂದಾನೊಂದೂರಾಗ ರಾಜಕುಮಾರಿ
ಮದುವೆಯಾದಳು ಒಂದು ಪ್ರಾಣಿಯ ಜೋಡಿ |
ಮೈತುಂಬ ಕೂದಲು ಕಣ್ಣಾಗ ಪಿಸರಾ
ಹೇಸಿ ಇಟ್ಟಾಳದಕ ಕರಡಿಯ ಹೆಸರಾ ||

ಕಥೆಗಾರ : ನೋಡ್ರಿ ಶಿವಾ, ಈಗೊಂದು ಅಡ್ಡಕತಿ ಹೇಳತೇವ್ರಿ,

ಒಂದಾನೊಂದೂರಾಗ ಒಬ್ಬ ರಾಜಕುಮಾರಿ ಇದ್ದಳು.

ದೊಡ್ಡವಳಾದಳು. ಮದಿವೀ ವಯಸ್ಸಿಗಿ ಬಂದಳು.

ಎಷ್ಟೋ ಮಂದಿ ರಾಜಕುಮಾರರು ಆಕೀನ್ನ ನೋಡಿ

ನಿಟ್ಟುಸಿರ ಬಿಡತಾರರಿ.

ಹಿಮ್ಮೇಳ : ನಿದ್ಯಾಗ ಒದ್ದಿ ಆಗತಾರರಿ.

ಕಥೆಗಾರ : ಆದರ ಆಕಿ ಯಾರನ್ನೂ ಮದಿವ್ಯಾಗಲಿಲ್ಲ. ಅವ್ವ ಅಪ್ಪಗ ಚಿಂತಿ ಆಯ್ತು. ಬೆಳದ ಮಗಳ ಗತಿ ಹೆಂಗಪಾ…? ಅಂದರು. ರಾಜ್ಯೇಕ ಇನ್ನೇನ ದಿಕ್ಕಪ ಅಂದರು. ಪರಿಪರಿಯಿಂದ ಮಗಳ ಮನಸ್ಸು ಒಲಿಸಾಕ ಪ್ರಯತ್ನ ಮಾಡಿದರೂ ಮಗಳು, ಶಿವಾ ಒಪ್ಪಲಿಲ್ಲ. ಯಾರನ್ನ ತೋರಿಸಿದರೂ,-

ಎಪಾ, ಇವ ಮೂಗ ಸುದ್ದಿಲ್ಲಾ, ನೆಗಡ್ಯಾಗ್ಯಾವ. ಎಪಾ, ಇವನ ಕಾಲ ಸಮ ಇಲ್ಲಾ ಕುಂಟ ಇದ್ದಾನ – ಅಂತ ಹೇಳತಿದ್ದಳು. ಕಡೀಕಂದರ ಅವ್ವಾ, ಅಪ್ಪಾ ಬ್ಯಾಸತ್ತರು.

“ಥೂ ನಿನ್ನ ಕರಡಿ ಒಯ್ಯಲಿ” ಅಂತ ಶಾಪ ಹಾಕಿದರು. ಆಗ ನೋಡ್ರಿ ಶಿವಾ, ಚಮತ್ಕಾರ ನಡೀತು : ಏಕದಂ ಒಂದ ದೊಡ್ಡ ಕರಡಿ ನೆಲಕ್ಕ ಮುಗಿಲಿಗೆ ಏಕಾಗಿ ಎದರ ನಿಂತು ಆಕೀನ ಹೊತ್ತುಕೊಂಡ ಹೋಯ್ತು! ತನ್ನ ಗವೀಗಿ ಎತ್ತಿಕೊಂಡ್ಹೋಗಿ ಮದಿವೀ ಮಾಡಿಕೊಂಡಿತು! ಆಯ್ತಲ್ಲ, ಮಂಗಳಸೂತ್ರ ಕರಡಿ ಕಟ್ಟಿದರೂ ಒಂದs. ಮನಿಶ್ಯಾ ಕಟ್ಟಿದರೂ ಒಂದ. ಕಡೀಕಂದರ ಕರಡೀನs ಗಂಡ ಅಂತ ಒಪ್ಪಿಕೋಬೇಕಾತರಿ. ಶಿವಾ,-

ಮೊದಲನೇ ರಾತ್ರಿ ಹಾಸಿಗ್ಯಾಗ ಕುಂತು ವಿಚಾರ ಮಾಡತಾಳ; ಶಿವನ ಎಂಥಾ ಗಂಡನ್ನ ಕೊಟ್ಟೆಪ! ನಾ ಎಂಥಾ ಧಿಮಾಕಿನಾಕಿ. ಇಷ್ಟ ಮಂದಿ ನಾ ನೀ ಅನ್ನೋವಂಥಾ ಧೀಮಂತ ರಾಜಕುಮಾರರಿಗೆ ಹುಚ್ಚ ಹಚ್ಚಿದಾಕಿ. ಮೆಚ್ಚಿ ಬಂದ ದೇವತೆಗಳಿಗೆ ಮೂಗು ಮುರಿದಾಕಿ. ಅಂಥಾಕೀ ಸೊಕ್ಕ ಮುರ್ಯಾಕ ದೇವರs ಹಿಂಗ ಮಾಡಿದ್ಯಾ? ನಾ ಸರಿಕರೊಳಗ ಮೋತೀ ಹೆಂಗ ತೋರಿಸಲೊ ಶಿವನs? ಅವ್ವಾ ಅಪ್ಪಗ ಏನಂತ ಹೇಳಲೊ ಶಿವನ? ಅಂತ ಭಾರೀ ದೊಡ್ಡ ದುಃಖ ಮಾಡಿದಳು.

ಆ ಟೈಂದಲ್ಲಿ ಶಿವಾ ಪಾರೋತಿ ಆಕಾಶ ಗಮನ ಮಾಡ್ತಿರೋಣ, ಅವರ ಕಿವಿಗೆ ಈಕೀ ಬೀಳೋಣ. ಶಿವಾ ಅಲ್ಲಿಂದಲೇ ಆಕಾಶವಾಣಿ ಗುಡುಗಿದ. ಏನಂತ?

ಮಗಳೇ, ಜಗತ್ತಿನಾಗ ಪ್ರೀತಿ ಪ್ರೇಮಾ ಅಂದರ ಐತಿ ಭಾಳ ಮಹಿಮಾ! ನಿನ್ನ ಪ್ರೀತಿ ಪ್ರೇಮದಿಂದ ಬಂದಂಥಾ ದುಃಖ ದೂರ ಮಾಡಿಕೋಬೇಕವಾ. ಎಲಾ ಶಿವನ! ಹೌಂದಲ್ಲ!- ಅಂದ್ಲು. ಎದ್ಯಾಗ ಪ್ರೇಮಾ ಪ್ರೀತಿಯ ಬೆಂಕೀ ಹೊತ್ತಿಸಿಕೊಂಡಳು. ಪತಿದೇವರಾದಂಥಾ ಕರಡಿಯನ್ನ ಪ್ರದಕ್ಷಿಣೆ ಹಾಕಿದಳು. ಆಗ ನೋಡ್ರಿ ಶಿವಾ,-

ಮೇಳ : ಪ್ರೀತಿಯೆಂಬ ಬೆಂಕಯೆದುರಿಗೆ
ನೋಡೆನ್ನ ಶಿವನೆ
ಕರಡಿರೂಪ ಕರಗಿ ಹೋದವೇ ||

ಒಳಗ ಒಬ್ಬ ರಾಜಕುವರನೇ
ನೋಡೆನ್ನ ಶಿವನೆ
ಇವಳ ಧ್ಯಾನ ಮಾಡುತಿರುವನೇ ||

ಪ್ರೀತಿ ಪ್ರೇಮ ದೊಡ್ಡದಲ್ಲವೆ
ಹೇಳೆನ್ನ ಗುರುವೆ
ಪ್ರೀತಿ ಪ್ರೇಮ ದೊಡ್ಡದಲ್ಲವೇ
ಹೇಳೆನ್ನ ಗುರುವೆ
ಪ್ರೀತಿ ಪ್ರೇಮ ದೊಡ್ಡದಲ್ಲವೇ ||

(ಮೇಲಿನ ಅಡ್ಡಕತೆಯನ್ನು ಸೂತ್ರಧಾರ ಹೇಳುತ್ತಿದ್ದಂತೆ ಮೇಳದವರು ಅಭಿನಯಿಸುವರು.)
(
ಮೇಳ ಸರಿದಾಗ ತೋಟದ ಮನೆಯಲ್ಲಿ ಸಾವಂತ್ರಿ ಮತ್ತು ನಾಯೀಮಗ ಕೂತಿದ್ದಾರೆ. ದಾಸ ಬರುವನು.)

ಸಾವಂತ್ರಿ : ಕೋಟ ಯಾರದು?

ದಾಸ : ಸಾವಂತ್ರೀಬಾಯಿ ತುಸು ಮರ್ಯಾದಿ ಕೊಟ್ಟ ಮಾತಾಡು.

ಸಾವಂತ್ರಿ : ನಿನಗೂ ಮರ್ಯಾದೀನಾ?

ದಾಸ : ನಾ ಅಂದರ ಏನಂದುಕೊಂಡಿ? ನಾ ಯಾವಾಗಲೂ ಮರ್ಯಾದಸ್ಥ. ನಿನ್ನ ಮದವೀ ಮಾಡಿಕೊಂಡ ಮ್ಯಾಲ ತುಸು ಕಮ್ಮಿ ಆಯ್ತಷ್ಟ. ಈ ಕೋಟ ಹಾಕ್ಕೊಂಡ ಊರಾಗ ಬಂದರ ಮೂರ‍್ನಾಲ್ಕು ಮಂದಿ ನಮಸ್ಕಾರ ಮಾಡಿದರು, ಗೊತ್ತಾ?

ಸಾವಂತ್ರಿ : ಖರೇ ಹೇಳ ಆ ಕೋಟ ಹೆಂಗ ಸಿಕ್ಕಿತು?

‌ದಾಸ : ಛೇ ಮತ್ತ ಕೇಳ್ತಾಳಲ್ಲೊ! ಸಾವ್ಕಾರ ಹಾಕ್ಕೊಂಡಿದ್ದರು. ಏನ ಛೆಲೋ ಐತಿರಿ ಇದು! ನನ್ನ ಹಂತ್ಯಾಕ ಈ ಕೋಟ ಇದ್ದಿದ್ದರ ಉಸರಿಗೊಮ್ಮಿ ನಿಮ್ಮ ಹೆಸರ ಹೇಳತಿದ್ದೆ-ಅಂದೆ. ಕೊಟ್ಟರು.

ಸಾವಂತ್ರಿ : ಹಂಗಾದರ ನಾ ಹೇಳಿದ್ದ ಕೇಳಿಲ್ಲ ಅಂಧಂಗಾಯ್ತು.

ದಾಸ : ಹೇಳತೇನ ಸಮಾಧಾನ ತಾಳು. ಹೋಗಿ ಮೊದಲ ಗಲಾಸ ತಗೊಂಬಾ. ಅಪ್ಪಾ ನಾಯಪ್ಪಾ, ನಿನಗಷ್ಟ ಬೇಕೇನು? ಬೇಕಿದ್ದರ ಮುಂದ ಬಾ…
(ಸಾವಂತ್ರಿ ಒಳಗೆ ಹೋಗಿ ಮೂರು ಲೋಟ ತರುವಳು. ದಾಸ ತನ್ನ ಕೋಟಿನ ಜೇಬಿನಿಂದ ಸೆರೆಯ ಬಾಟ್ಲಿ ತೆಗೆದು ಮೂರಕ್ಕೂ ಸುರಿಯುವನು.)

ಇಬ್ಬರೂ ನನ್ನ ಹೆಸರ ಹೇಳಿ ಕುಡೀರಿ.
(ಮೂವರೂ ಕುಡಿಯತೊಡಗುವರು. ಆಗಾಗ ದಾಸ ಭರ್ತಿ ಮಾಡುವನು.)

ಸಾವಂತ್ರಿ : ಸಾವ್ಕಾರನ್ನ ಕೇಳಿದೇನ?

ದಾಸ : ಕೇಳಿದೆ. ಅದಕ್ಕ ಈ ಕೋಟ ಕೊಟ್ಟ ಹೊರಬೀಳು ಅಂದರು.

ಸಾವಂತ್ರಿ : ಥೂ ನೀ ಬರೋಬರಿ ಕೇಳಿಲ್ಲ.

ದಾಸ : ಪ್ರಿಯೆ…

ಸಾವಂತ್ರಿ : ಇನ್ನೊಮ್ಮಿ ಹಂಗದರ ಈ ಕೋಟ ಕಸೀತೀನಿ ಅಷ್ಟ.

ದಾಸ : ನಿನ್ನ ಹಂತ್ಯಾಕಿನ ಕೋಟೂ ಕೊಡೋದಿಲ್ಲಂತಿ. ಇದನ್ನೂ ಕಸೀತೀನಿ ಅಂತಿ, ಥಂಡಿ ಹತ್ತಿ ನಾ ಸತ್ತಹೋಗಲೆಂತೀ ಏನು?
(ಈಗ ಇಬ್ಬರೂ ಪರಸ್ಪರ ಹಿಂಸಿಸುವ ಆಟಕ್ಕೆ ತೊಡಗುವರು.)

ಸಾವಂತ್ರಿ : ಅವ್ ನನ ಗಂಡಾ! ನಿನ್ನ ಮ್ಯಾಲ ನಾ ಭಾಳ ಪಿರೂತಿ. ಎಷ್ಟ ಪಿರೂತಿ ಅಂದರ ನಾಕೈದ ಬರೆ ನನ್ನ ಕನಸಿನಾಗ ಬಂದಿದ್ದಿ, ಆದರ ನಾಕೈದ ಬರೇನೂ ಸತ್ತಿದ್ದಿ.
(ಗಹಗಹಿಸಿ ನಗುವಳು.)

ದಾಸ : ನಾ ಕುಡದಾಗ ಪ್ರತಿಯೊಬ್ಬರನ್ನ ಅವರ ನಿಜವಾದ ಹೆಸರಿನಿಂದ  ಕರೀತೀನಿ. ಯಾರೂ ಸಿಟ್ಟಾಗಬಾರದು. ಸಾವಂತ್ರೀಬಾಯೀ, ನಿನ್ನ ಹೆಸರ ಹೇಳಲಿ?-ಚರಂಡಿ! ಹೆ ಹೆ ಹೆ…
(ಇವನೂ ಗಹಗಹಿಸಿ ನಗುವನು. ಆಟಬಿಟ್ಟು.)

ಸಾವಂತ್ರಿ : ನೀ ಸಾವ್ಕಾರನ್ನ ಕೇಳೇ ಇಲ್ಲ.

ದಾಸ : ಕೇಳೀನಿ ಅಂದರ.

ಸಾವಂತ್ರಿ : ಸುಳ್ಳ ಯಾಕ ಹೇಳ್ತಿಯೋ ಭಾಡ್ಯಾ.

ದಾಸ : ಭಾಡ್ಯಾ, ಅದನ್ನ ನೂರ ಬರೆ ಹೇಳೀದಿ. ಬ್ಯಾರೇ ಏನಾದರೂ ಇದ್ದರ ಬೊಗಳು.

ಸಾವಂತ್ರಿ : ಲುಚ್ಛಾ.

ದಾಸ : ಇದನ್ನೂ ಸಾವಿರ ಬರೆ ಹೇಳೇದಿ.

ಸಾವಂತ್ರಿ : ಸುಳ್ಳ.

ದಾಸ : ಸುಳ್ಳ? ಏನಪಾ ನಾಯಪ್ಪಾ, ನನ್ನ ಮಾತು ಕೇಳಿ ನಿನಗ ನೆಗಡಿ ಆದರೂ ಅಡ್ಡೀಯಿಲ್ಲ. ಒಂದ ಮಾತ ಕೇಳ್ತೀನಿ-ಸಾವ್ಕಾರಗ ಈಕಿಗೆ-ಜೋಡೀಯೇನಪ? ಈಕೀ ವಯಸ್ಸೇನು? ಮಾತೇನು? ಸಾವ್ಕಾರ ಬೇಕಂತಾಳ, ಒಪ್ಪಕೊಂಡಾರs ಹೆಂಗ, ನೀನs ಹೇಳಪಾ. ನೀ ಒಬ್ಬ, ಆ ನಾಗ್ಯಾ ಓಡಿಸಿದಿ. ಈಗ ತಗೊಳ್ಳಪಾ….

ಸಾವಂತ್ರಿ : ಇನ್ನಷ್ಟ ಸುರಿಯೋ ಭಾಡ್ಯಾ.

ದಾಸ : ಏ ಚರಂಡಿ, ನನ್ನಂಥಾ ಇಸ್ವಾಸಿಕ ಗಂಡ ನಿನಗ ಹುಡಿಕ್ಯಾಡಿದರೂ ಸಿಕ್ಕಾನೇನ? ಹೋಗಲಿ ಬಾ, ಆಮ್ಯಾಲ ಹೇಳತೇನಂತ. ಸಂಗೀತಾ ಉಂಡಳೇನ?

ಸಾವಂತ್ರಿ : ಹರ್ಯಾಗಿಂದ ಉಂಡs ಇಲ್ಲ. ಒಂದ ಸವನ ಮಂಡ ಹಟ ಹಿಡದ್ದಾಳ.

ದಾಸ : ಏಳ ಏಳು. ಹಸಿವಾಗೇತಿ ನನಗ, ಊಟಕ್ಕ ಹಾಕೇಳು. ನಾಯಪ್ಪಾ ನಾಳಿ ಮುಂಜಾನಿ ಭೇಟಿ ಆಗಪಾ.

ನಾಯೀಮಗ : ಯಾಕ?

ದಾಸ : ಯಾಕಂದರ ಒಂದ ಚಂದ ಗುಡ್ ಮಾರ್ಲಿಂಗ್ ಹೇಳತೀನಿ.
(ಹೆಹೆಹೇ ಎಂದು ನಗುತ್ತ ಹೋಗುವನು. ಸಾವಂತ್ರಿಯೂ ಹೋಗುವಳು. ತುಸು ಸಮಯ ನಾಯೀಮಗ ಹಾಗೇ ಕೂತಿದ್ದು ಬಾಟ್ಲಿಯಲ್ಲಿ ದಾಸ ಬಿಟ್ಟುಹೋದ ಸೆರೆಯನ್ನೂ ಗಟಗಟ ಕುಡಿಯುವನು. ಮತ್ತು ನೆತ್ತಿಗೇರಿದ ಬೆರಗಿನಲ್ಲಿ ಹಾಗೇ ಕೂತಿದ್ದಾಗ ಸಾವಂತ್ರಿ ಬಂದು ಅವನಿಗೆ ಊಟಕ್ಕೆ ಹಾಕುವಳು.)

ಸಾವಂತ್ರಿ : ನೀನೂ ಊಟಾ ಮಾಡ ಬಾ ಮಗಳs.

ಶಾರಿ : (ಒಳಗಿನಿಂದ)

ನನಗ ಬ್ಯಾಡ. ಕೂತಾನಲ್ಲ, ಅವನಿಗೇ ಇನ್ನಷ್ಟ ಹಾಕು. ಯಾಕಂದರ ಪಾಪ, ಹೊಟ್ಟೀ ಸಲುವಾಗಿ ನಾಯಿ ಆಗ್ಯಾನ ನೋಡು.
( ಮಾತಿನಿಂದ ನೋವಾಗಿ ನಾಯೀಮಗ ಊಟ ಮಾಡದೇ ಹಾಗೇ ಎಲೆ ಎತ್ತಿಕೊಂಡು ಹೊರಗೆ ಹೋಗುವನು.)

ಸಾವಂತ್ರಿ : ಇಬ್ಬರಿಗೂ ಏನಾಗೇತಿ? ಹರ್ಯಾಗಿಂದ ಊಟ ಬಿಟ್ಟಿದೀರಿ.
(ಎನ್ನುತ್ತ ಒಳಗೆ ಗಂಡನಲ್ಲಿಗೆ ಹೋಗುವಳು. ನಾಯೀಮಗ ಎಲೆ ಎಸೆದು ಒಳ ಬರುವನು. ಶಾರಿಯೂ ಬರುತ್ತಾಳೆ.)

ಸಾವಂತ್ರಿ : ನೀ ಯಾಕ ಬಿಟ್ಟಿ?

ನಾಯೀಮಗ : ನೀನೂ ಊಟಾ ಮಾಡ ಹಂಗಾದರ.

ಶಾರಿ : ನಾ ನಿನ್ಹಾಂಗ ಹೊಟ್ಟೀ ಮಾರಿಕೊಂಡಿಲ್ಲ. ನಿಂದೆಲ್ಲಾ ನೋಡೇನಿ. ಉಣ್ಣತಿದ್ದರು ಉಣ್ಣು, ಇಲ್ಲದಿದ್ದರ ಬಿದ್ದಕೊ.

ನಾಯೀಮಗ : ನಾ ಸಾಯತೀನಿ.

ಶಾರಿ : ಏನಂದಿ?

ನಾಯೀಮಗ : ಸಾವ್ಕರ ನನ್ನ ಕೊಂದರ ಕೊಲ್ಲಲಿ. ನೀ ಪಾರಾಗಿ ಹೋಗು.
(ಶಾರಿಯ ಮನಸ್ಸು ಕರಗುತ್ತದೆ)

ಶಾರಿ : ಬಾ ಇಲ್ಲಿ. (ಬಂದು ನಿಲ್ಲುವನು.)

ಕುಂತಕೊ. (ಕೂರುವನು)

ನಿನ್ನ ಹೆಸರೇನಂದಿ?

ನಾಯೀಮಗ : ನಾಯೀಮಗ! ನಮ್ಮ ಸಾವ್ಕಾರ ಏ ನಾಯೇ ಅಂತ ಕರೀತಾರ.

ಶಾರಿ : ನಾಯೀಮಗ! ಮನಸೇರಿಗಿ ನಾಯೀ ಹೆಸರ ಇಡಾಕ ಶಕ್ಯs ಇಲ್ಲ. ಖರೇನs ನೀ ನಾಯೀಮಗಾನ?
(ಅಲ್ಲವೆಂಬಂತೆ ಕತ್ತು ಹಾಕುವನು.)

ಮತ್ತ ನಾಯೇ ಅಂತ ಕರದಾಗ ಯಾಕ ಓ ಅಂತಿ? ನನ್ನ ಹೆಸರೇನ ಹೇಳು.

ನಾಯೀಮಗ : ಸಂಗೀತಾ.

ಶಾರಿ : ಅಲ್ಲ, ಶಾರಿ. ಅದು ಬಯಲಾಟದಾಗಿನ ಹೆಸರು. ನಿನ್ನ ಸಾವ್ಕಾರ ಹಾಂಗಂತ ಕರೀತಾನ. ನಿನ್ನ ಸಾವ್ಕಾರಗ ಎರಡ ಕಣ್ಣದಾವ ಖರೆ. ಆದರ ಅವು ಬರೋಬರಿ ಕಾಣಸೂದs ಇಲ್ಲ. ಅದಕ್ಕs ಅವಗ ಮನಶೇರು ನಾಯೀಹಾಂಗ ಕಾಣಸ್ತಾರ. ನಾ ಸಂಗೀತಾನ ಹಾಂಗ ಕಾಣಸ್ತೀನಿ. ನಾ ಅಂತೀನಿ : ನೀ ಮನಶಾ ಅಂತ. ಹಾಂಗಿದ್ದರ ನಿನ್ನ ಹೆಸರು ಸಿದ್ದು. ಸಿದ್ಧರಾಮಾ-ಹೀಂಗೇನೋ ಇರಬೇಕು. ಒಪ್ಪತೀಯೇನು?

ನಾಯೀಮಗ : ನೀ ಹೆಂಗ ಕರದರೂ ಓ ಅಂತೀನಿ.

ಶಾರಿ : ಹೆಂಗ ಕರದರೂ ಅಂದರ? ಹಂದೇ ಅಂತ ಕರೀತೀನಿ. ಓ ಅಂತಿ?

ನಾಯೀಮಗ : ಊಹೂ, ಸಿದ್ದೂ ಸಿದ್ದರಾಮಾ-ಹೆಂಗಂದರೂ.

ಶಾರಿ : ನಾನs ನಿನ್ನ ಸಾವ್ಕಾರಂತ ತಿಳಕೊ. ನಾ ಬಂದ ಕರೀತೀನಿ : ಏ ನಾಯೇ.

ನಾಯೀಮಗ : ಓ ಎಪಾ.

ಶಾರಿ : ಥೂ, ಓ ಅನ್ನೋದಿಲ್ಲ ಅಂದಿದ್ದಿ?

ನಾಯೀಮಗ : ರೂಢಿ ತಪ್ಪವೊಲ್ದು.
(ಸಮೀಪ ಬಂದು ಅವನ ಬೆನ್ನಮೇಲೆ ಕೈ ಇಡುವಳು. ಆಮೆಯಂತೆ ಸಂಕೋಚಗೊಳ್ಳುವನು)

ಈ ಅಂಗಿ ಹೊಲಸೈತಿ.

ಶಾರಿ : ಹೌಂದು.

ನಾಯೀಮಗ : ಥೇಟ ನಾಯೀಚರ್ಮಧಾಂಗs ಐತಿ.
(ಎಂದು ಹೇಳಿ ಅವಳನ್ನು ನಗಿಸಲು ಪ್ರಯತ್ನಿಸುವನು. ಅವಳು ಮಂದಹಾಸ ಬೀರಿದೊಡನೆ ತುಂಬ ಖುಶಿಯಾಗುವನು.)

ಇದು ಇರೋತನಕ ನಾ ನಾಯೇ…. ಖೆ ಖೆ ಖೆ…

ಶಾರಿ : ನಿನಗ ರಾಜಕುಮಾರಿ ಮತ್ತ ಕರಡೀ ಕತಿ ಗೊತ್ತೈತೇನು?

ನಾಯೀಮಗ : ಓಹೊ…

ಶಾರಿ : ಯಾವುದು ಹೇಳು.

ನಾಯೀಮಗ : ಅದs. ರಾಜಕುಮಾರಿ ಕರಡೀನ ಮದಿವ್ಯಾಗಿ ಅತ್ತಗೊಂತ ಕುಂತ್ಲು. ಶಿವಾ ಬಂದ ಬುದ್ಧಿ ಹೇಳಿದ. ಹೇಳಾನಾ ಆಕಿ ಪ್ರೀತಿ ಹೊತ್ತಿಸಿದ್ಲು. ಕರಡೀ ಮೈ ಕರಗಿ ಅದರಾಗಿಂದ ಒಬ್ಬ ರಾಜಕುಮಾರ ಬಂದ…

ಶಾರಿ : ಕರಡೀ ಮೈ ಹೆಂಗ, ಹಿಂಗ ಕರಗಿತೇನ?
(ಎನ್ನುತ್ತ ಅವನ ಅಂಗಿ ಹರಿಯುವಳು. ಇವನು ಅವಳು ಖುಶಿಗಾಗೆ ಹರಿಯುತ್ತಿರುವಳೆಂದು ಭಾವಿಸಿ ಖೆ ಖೆ ಖೆ ಎಂದು ನಗುತ್ತ ಎದ್ದು ಮೈ ಮುರಿದಾಡುತ್ತಾನೆ. ಅವಳೂ ನಗುತ್ತ ಪೂರ್ತಿ ಹರಿಯುತ್ತಾಳೆ. ಅವಳನ್ನು ಸಮೀಪದಿಂದ ನೋಡಿದೊಡನೆ ನಾಯೀಮಗ ತುಂಬ ಭಾವುಕನಾಗುತ್ತಾನೆ. ಜೊತೆಗೆ ಕುಡಿದುದೂ ನೆತ್ತಗೇರಿದೆ.)

ಶಾರಿ : ಮುಂದೇನಾಯ್ತು?

ನಾಯೀಮಗ : ಗೊತ್ತಿಲ್ಲ.

ಶಾರಿ : ನಾ ಹೇಳಲಾ? ರಾಜಕುಮಾರ ಹಾಡಿದ.

ನಾಯೀಮಗ : ನಾನೂ ಹಾಡತೀನಿ.

ಶಾರಿ : ರಾಜಕುಮಾರ ಕುಣಿದ.

ನಾಯೀಮಗ : ನಾನೂ ಕುಣೀತೀನಿ.
(ಕಳ್ಳೆಮಳ್ಳೆ ಆಡತೊಡಗುವನು)

ಸಂಗೀತಾ ಸಂಗೀತಾ….ನನಗ ಅಂಜಿಕಿ ಬರತೈತಿ. ನಿನ್ನ ಬಿಟ್ಟ ದೂರ ಹೋಗತೇನಿ.

ಶಾರಿ : ನಿಲ್ಲಿಸು ನಿಲ್ಲಿಸಂದರ.

ನಾಯೀಮಗ : ಸಂಗೀತಾ ಮಂದಿ ನನ್ನ ಜೋಡೀ ಬರಾಕ ಹತ್ಯಾರ!

ಶಾರಿ : ಹೌಂದ? ಯಾರ್ಯಾರು? ಗುರುತ ಹಿಡಿ.

ನಾಯೀಮಗ : ಎಲ್ಲಾರು ಹರಕ ಅಂಗಿ ಹಾಕ್ಯಾರ. ಹಸದ್ದಾರ. ಆದರ ಎಲ್ಲಾರು ನಗಾಕ ಹತ್ಯಾರ.

ಶಾರಿ : ಯಾಕಂತ?

ನಾಯೀಮಗ : ಹಾಡಾಕ ಹತ್ಯಾರ.

ಶಾರಿ : ಏನಂತ?

ನಾಯೀಮಗ : ನಾವು ನಾಯಿಗಳಲ್ರೆಪೋ ಅಂತ.

ಶಾರಿ : ಎಲ್ಲಾರು ಕೂಡಿ ಹಾಡಿಕೋತ ಎಲ್ಲಿಗಿ ಹೊಂಟೀರಿ?

ನಾಯೀಮಗ : ನಿನ್ನ ಹಂತ್ಯಾಕ.

ಶಾರಿ : ಹೌಂದ? ನೀ ನನ್ನ ಬಿಟ್ಟ ದೂರ ಹೋಗಾಕ ಆಗೂದs ಇಲ್ಲ. ಮತ್ತ ನನ್ನ ಹಂತ್ಯಾಕs ಬಂದಿ!
(ನಿಲ್ಲಿಸಿ ನೋಡುವನು.)

ನಾಯೀಮಗ : ಹೌಂದಲ್ಲ!

ಶಾರಿ : ನೀ ಎಷ್ಟ ಚಂದ ಕಾಣತಿ ಗೊತ್ತೈತಿ?

ನಾಯೀಮಗ : ಹೌಂದ? ನನ್ನ ತಲಿ ತಿರಗೇತಿ, ನನಗ ಗೊತ್ತಾಗೂದs ಇಲ್ಲ. ಸಂಗೀತಾ ಕುಡದಾಗ ತಲೀ ತಿರಗತೈತಿ ಅಂತಾರ ಸುಳ್ಳಲ್ಲ ನೋಡು.

ಶಾರಿ : ನೀ ಎಷ್ಟ ಚಂದ ಕಾಣತಿ ಗೊತ್ತೈತಿ?

ನಾಯೀಮಗ : ಹೌಂದಲ್ಲ!

ಶಾರಿ : ನೀ ಎಷ್ಟ ಚಂದ ಕಾಣತಿ ಗೊತ್ತೈತಿ?

ನಾಯೀಮಗ : ಹೌಂದ? ನನ್ನ ತಲಿ ತಿರಗೇತಿ, ನನಗ ಗೊತ್ತಾಗೂದ ಇಲ್ಲ. ಸಂಗೀತಾ ಕುಡದಾಗ ತಲೀ ತಿರಗತೈತಿ ಅಂತಾರ ಸುಳ್ಳಲ್ಲ ನೋಡು.

ಶಾರಿ : ಯಾಕ?

ನಾಯೀಮಗ : ನನಗೀಗ ನನ್ನ ಬೆನ್ನ ಕಾಣಸಾಕ ಹತ್ತೇತಿ.

ಶಾರಿ : ಯಾಕ?

ನಾಯೀಮಗ : ನನಗೀಗ ನನ್ನ ಬೆನ್ನ ಕಾಣಸಾಕ ಹತ್ತೇತಿ.

ಶಾರಿ : ಹೌಂದ? ಬೆನ್ನ ಮ್ಯಾಲ ಎನೈತಿ?

ನಾಯೀಮಗ : ಸಾವ್ಕಾರ ಕುಂತಾನ.

ಶಾರಿ : ಕೆಳಗ ಎಸೀಬಾರದ?

ನಾಯೀಮಗ : ಅವ ಭಾಳ ಎತ್ತರಾಗ್ಯಾನ. ಅವನ ಜೋಡೀ ಮಾತಾಡಬೇಕಾದರ ನಾ ಒದರಿ ಒದರಿ ಮಾತಾಡತೀನಿ. ಅವ ಹಂಗ್ಯಾಕ ನಾಯೀಹಾಂಗ ಒದರ್ತೀಯೋ ಅಂತಾನ.

ಶಾರಿ : ನಾಯಿ ನಾ ಅಲ್ಲ, ನೀ ಅಂತ್ಹೇಳು.

ನಾಯೀಮಗ : ಓಡಿಹೋದ.

ಶಾರಿ : ಬೆನ್ನಹತ್ತಿ ಬ್ಯಾಟೀ ಆಡು.

ನಾಯೀಮಗ : ಏಏಏs…ಯಾರಾದರೂ ಆ ದೊಡ್ಡ ನಾಯೀ ನೋಡೀರೇನ್ರೆಪೊ? ಕರ್ರಗೈತಿ, ಎತ್ತರೈತಿ ನೆತ್ತ್ಯಾಗ ಕಣ್ಣದಾವ. ಮಾತಿಗೊಮ್ಮೆ ಏ ನಾಯೀಮಗನs ಅಂತಿರತೈತಿ. ಸಿಕ್ಕರ ನನಗಷ್ಟ ಲಗೂನ ಹೇಳಿಕಳಸರಿ. ನನ್ನ ವಿಳಾಸ ಸಿದ್ದರಾಮ ಉರ್ಪ್ ನಾಯೀಮಗ. ಮುಕ್ಕಾಂ ಪೋಸ್ಟ್ ಶಿವಾಪುರ ಜಿಲ್ಲಾ ಬೆಳಗಾವಿ.
(ಹೀಗೆಯೇ ನಶೆಯಲ್ಲಿ ಹೇಳುತ್ತ ತೇಲಾಡುತ್ತ ಕೈಗೊಂದು ಕುಡುಗೋಲು ತಗೊಂಡಿದ್ದಾನೆ. ಸಿಕ್ಕಿತು ಸಿಕ್ಕಿತು ಎನ್ನುತ್ತ ಕುಡುಗೋಲು ಎಸೆಯುತ್ತಾನೆ. ಅದು ದೂರದ ಯಾವದೊ ನಾಯಿಗೆ ಹತ್ತಿ ಒದರುತ್ತದೆ. ನಾಯೀಮಗ ಗಾಬರಿ ಆಗುತ್ತಾನೆ.)

ಸಂಗೀತಾ, ನಾಯೀನ್ನ ಕೊಂದೆ! ಇನ್ನ ನನ್ನ ಜೇಲಿನಾಗ ಇಡತಾರೋ ಏನೊ! ಇಟ್ಟರ ಇಡಲಿ. ಜೇಲs ಬರೋಬರಿ ನನಗ!
(ಅವನ ಹುಚ್ಚಾಟ ನೋಡಿ ಶಾರಿ ನಗುತ್ತಿರುವಂತೆ ಮೇಳ ಬಂದು ರಂಗವನ್ನಾಕ್ರಮಿಸುವುದು.)

ಮೇಳ : ಪ್ರೀತಿಯೆಂಬ ಬೆಂಕಿಯೆದುರಿಗೆ
ನೋಡೆನ್ನ ಶಿವನೆ
ಕರಡಿರೂಪ ಕರಗಿ ಹೋದವೇ ||

ಪ್ರೀತಿ ಪ್ರೇಮ ದೊಡ್ಡದಲ್ಲವೇ
ಹೇಳೆನ್ನ ಶಿವನೆ
ಪ್ರೀತಿ ಪ್ರೇಮ ದೊಡ್ಡದಲ್ಲವೇ ||

(ಮೇಳ ಸರಿಯುತ್ತದೆ. ಸೋಮಣ್ಣ ತನ್ನ ಮನೆಯಲ್ಲಿ ಶಿಂಗಾರವಾಗುತ್ತಿದ್ದಾನೆ. ಪಕ್ಕದಲ್ಲಿ ದಾಸ ನಿಂತಿದ್ದಾನೆ. ತಾಯಿ ನಿಂತಿರಲಾರದೆ ನಿಂತು ಮಾತಾಡಲಿಕ್ಕೆ ಪ್ರಯತ್ನಿಸುತ್ತಿದ್ದಾಳೆ.)

ತಾಯಿ : ಮನೀಕಡೆ ಹಿಂಗ ನಿಷ್ಕಾಳಜಿ ಇದ್ದರ ಹೆಂಗೋ ಮಗನ? ರಾತ್ರಿ ಯಾರೋ ಮನ್ಯಾಗ ಪಿಸಗುಟ್ಟಿಧಾಂಗ ಕೇಳಸತೈತಿ. ಗಂಡಸಿಂದು ಹೆಂಗಸಿಂದು ದನಿ ಕೇಳತೈತಿ, ಚೆಲಿವಿ ದೆವ್ವಾಗಿ ಮಾರ್ಯಾನ ಅಟ್ಟಿಸಿಕೊಂಡ ಬರ್ತಾಳಂತ ಹೇಳತಾರು. ನಿನ್ನ ಹೇಂತಿ ಹೆದರತಾಳು. ನಿನ್ನ ನೋಡಿದರ ಬರೀ ತೋಟದ ಮನ್ಯಾಗ ಹೋಗಿ ಕುಂತಿರತಿ, ಏನ್ಹೇಳಲಿ…

ಸೋಮಣ್ಣ : ಆಯ್ತಬೇ. ಇಂದ ಕಡೀ ದಿನ. ಏ ದಾಸಾ, ಇನ್ನ ತಡ್ಯಾಕಾಗೋದಿಲ್ಲಾ ಅಂದೆ.

ದಾಸ : ಇನ್ನs ಹಾದಿಗಿ ಬಂದಿಲ್ಲರೀ.

ಸೋಮಣ್ಣ : ಬರದಿದ್ದರ ನನ್ನ ಹಾದಿ ನನಗ. ನನ್ನ ನೂರ ಪಾಪ ಇಂದಿಗೇ ಮುಗ್ಯಾಕಬೇಕು. ಇಷ್ಟ ದಿನ ಆದರೂ ಒಂದ ಪಾಪ ಮಾಡಾಕ ಆಗಲಿಲ್ಲಂದರ ದೇವರೆಲ್ಲಾ ನನ್ನ ನೋಡಿ ನಗತಾರ, ಗೊತ್ತದೇನು? ಇಷ್ಟ ದಿವಸ ನಾ ತಡದದ್ದs ಹೆಚ್ಚು. ನಾ ಯಾರನ್ನೂ ಎರಡ ಸಲ ಕ್ಷಮಿಸೋದಿಲ್ಲ. ಹೋಗಿ ನಾಯೀಮಗನಿಗ್ಹೇಳು : ಇಂದ ಸಂಜಿಕ ಸಂಗೀತಾನ್ನ ಕರಕೊಂಡು ಊರ ಹೊರಗಿನ ಹಾಳ ಮಠಕ್ಕ ಬಾ ಅಂತ. ಮುಂದಿಂದೆಲ್ಲಾ ಅವನಿಗೇ ಗೊತ್ತದ.

ದಾಸ : ಹಾಳ ಮಠದಾಗ ಯಾಕ್ರಿ? ಅಲ್ಲೇನೈತಿ?

ಸೋಮಣ್ಣ : ನಿನ್ನ ಮಗಳಂದರ ಹಲಸಿನ ಹಣ್ಣ ಇದ್ದಾಂಗ. ಅಲ್ಲಿ ನಿನ್ನ ಮಗಳ ಗಂಡ ಕುಂತಿರತಾನ. ಹಣ್ಣ ಸುಲದು ಆಕೀ ಮೈಯಾಗಿನ ತೊಳಿ ಬಿಡಿಸಿ ಬಿಡಿಸಿ ತಿಂತಾನ!

ದಾಸ : ಅವಸರ ಬ್ಯಾಡ್ರೀ, ಇನ್ನೆರಡ ದಿನ  ಬುದ್ಧೀರೀತಿ ಹೇಳೋಣು.

ಸೋಮಣ್ಣ : ಯಾಕ? ನನಗ ವಯಸ್ಸಾಗೇತೇನು? ಹಾದರ ಮಾಡಾಕ ಒಲ್ಲೆ ಅಂದರ ಮದಿವಿಯಾಗತೀನಿ ಅಂತ ಹೇಳು.

ದಾಸ : ಮದಿವ್ಯಾಗೂದ ಖರೆ ಏನ್ರಿ?

ಸೋಮಣ್ಣ : ಯಾಕ ನನ್ನ ಮಾತಿನಾಗ ನಂಬಿಕಿಲ್ಲಾ?
(ಒಳಗಿನ ಹೆಂಡತಿಗೆ)

ಏ ಕೇಳಿದೇನ? ನಾನು ಆ ದಾಸರ ಹುಡಿಗಿ ಸಂಗೀತಾನ್ನ ಮದಿವೀ ಮಾಡಿಕೊಳ್ತೀನಿ. ಪರವಾನಿಗಿ ಕೊಟ್ಟಿದೀನಂತ ನನ್ನ ಮಾವಗ ಹೇಳು.
(ಒಳಗೆ ಲಕ್ಷ್ಮಿ ಬಿಕ್ಕುತ್ತಾಳೆ. ತಾಯಿ ಮರೆಯಾಗುತ್ತಾಳೆ.)

ಕೇಳಿದೇನಪ. ಕಬೂಲಿ ಅದಾಳಂತ. ಏ ಮಾರ್ಯಾ.
(ಮಾರುತಿ ಬರುವನು.)

ಆಕಿಗಿ ಔಷಧ ತಂದಕೊಟ್ಟೇನೊ?

ಮಾರುತಿ : ಅವರಿಗೇನೂ ರೋಗ ಇಲ್ಲಂತ ಹೇಳ್ಯರ‍್ರೀ ಡಾಕ್ಟರು.

ಸೋಮಣ್ಣ : ಏನ ಆಲಸೀ ಡಾಕ್ಟರಪಾ! ಹೊಸ ಹೊಸ ರೋಗ ಕಂಡ ಹಿಡ್ಯಾಕ ಆಗೂದ ಇಲ್ಲ., ಹೋಗು ಕಣ್ಣೀರ ಬರದಂಥಾ ಔಷಧ ಇದ್ದರ ಕೊಡಂತ ಹೇಳು. ಹೋಗು.
(ಮಾರುತಿ ಹೋಗುವನು.)

ಏನ ಮಾವಾ, ಈ ಡ್ರೆಸ್ ನಿಮ್ಮ ಮಗಳು ಒಪ್ಯಾಳೇನು?

ದಾಸ : ಹೂನ್ರಿ.

ಸೋಮಣ್ಣ : ನಿನ್ನ ಮಗಳು ಮೆಚ್ಚುವಂಥಾದ್ದು ಇನ್ನೇನಾದರೂ ಸ್ಪೆಶಲ್ ಇದ್ದರ ಹೇಳು. ಅದನ್ನೂ ಮಾಡಿಕೊಳ್ತೀನಿ.

ದಾಸ : ಇನ್ನೇನಿಲ್ಲರಿ.

ಸೋಮಣ್ಣ : ಮತ್ತ ಯಾಕ ಕಣ್ಣ ಬಿಟ್ಟ ಹೆಣಧಾಂಗ ನನ್ನ ನೋಡತಾ ನಿಂತಿ? ಹೋಗಿ ಮಗಳ್ನ ರೆಡಿ ಮಾಡಬಾರದ?

ದಾಸ : ಮದಿವೀ ಮಾತಾದರ ಹೊರಗಿನ ಮಠಕ್ಕ ಯಾಕ ಹೋಗಬೇಕ್ರಿ? ತೋಟದಾಗಿನ ಮನ್ಯಾಗs ಮಾತಾಡಬಹುದಲ್ಲ?

ಸೋಮಣ್ಣ : ನಿನ್ನ ಮಗಳು ಮೊದಲಗಿತ್ತಿ. ಮೊದಲನೇ ರಾತ್ರಿ ಗುದಮುರಿಗಿ ಜಾಸ್ತಿ. ಆಸಪಾಸ ಯಾರೂ ಇರದಿದ್ದರ ಅನುಕೂಲ. ಹೌಂದಲ್ಲ? ಇದು ನಿನಗೂ ಗೊತ್ತದs ಅಂತ ತಿಳಿದಿದ್ದೆ.

ದಾಸ : ಬೇಕಾದರ ನಾವಿಬ್ಬರೂ ಗಂಡಹೆಂಡತಿ ಹೊರಗ ಹೋಗತೀವಿ. ತೋಟದ ಮನ್ಯಾಗs….

ಸೋಮಣ್ಣ : ಆಜೂಬಾಜೂ ಮಂದಿ ಹಾದಾಡತಾರ. ಮಠದೊಳಗಾದರ ಎಷ್ಟ ಕಿರಚಾಡಿದರೂ ಕೇಳಿಸೋದಿಲ್ಲ. ಅಲ್ಲದ ನಾ ಸತ್ಕಾರ್ಯ ಮಾಡೋದೆಲ್ಲ ಅದs ಜಾಗದಾಗ. ತಿಳೀತಲ್ಲ? ತಗೊ.

(ಹಣ ಎಸೆಯುವನು. ದಾಸ ತಗೊಳ್ಳುವನು.)

ದಾಸ : ಏನೊ ಕಲಾವಿದರು…

ಸೋಮಣ್ಣ : ಅದಕ್ಕ ಕೊಟ್ಟೇನಿ. ಇದರಾಗೇನಾದರೂ ಹೆಚ್ಚು ಕಮ್ಮಿ ಆದರ ನೀನು ಈ ತನಕ ತಗೊಂಡದ್ದನ್ನೆಲ್ಲಾ ಕಕ್ಕಬೇಕಾಗತದ. ನಿನ್ನ ಮಗಳಿಗಿ ಇದನ್ನು ಬರೋಬರಿ ತಿಳಸು. ಯಾಕಂದರ ಅದರ ಪರೀಕ್ಷೆ ನಡೆಯೋದು ಇಂದs. ಇನ್ನ ಹೋಗಿ ಮಗಳ್ನ ರೆಡಿ ಮಾಡ್ತೀಯಲ್ಲಾ?
(ದಾಸ ಗಾಬರಿಯಿಂದ ಕತ್ತು ಹಾಕುತ್ತ ಹೋಗುವನು. ಮೇಳ ಬಂದು ರಂಗವನ್ನಾಕ್ರಮಿಸುವುದು.)