ಮೇಳ : ಕರಡೀ ಮದುವೆಗೆ ಬನ್ನಿರೇ | ರಾಜನ
ಮಗಳ ಮದುವೆಗೆ ಬನ್ನಿರೇ
ತುಂಬು ಹೃದಯಗಳಿಂದ ವಧೂವರರ ಹರಸೀರೆ
ಸೋ ಎನ್ನಿ ಶುಭವೆನ್ನಿರೇ | ಶಿವಶಿವ
ಸೋಬಾನವೆನ್ನಿರೇ || ಸೋ ||

ಗರತಿಗೆ ಜಯವೆನ್ನಿರೇ | ಗರತಿಯ
ಪತಿಗೆಂಟು ಜಯವೆನ್ನಿರೇ
ಸುಂದರ ಮುಖದಿಂದ ಶುಭವಾಕ್ಯ ನುಡಿಯಿರೆ
ಸೋ ಎನ್ನಿ ಶುಭವೆನ್ನಿರೇ || ಹರ ಹರ
ಸೋಬಾನವೆನ್ನಿರೇ|| ಸೋ ||

(ಮೇಲಿನ ಹಾಡು ನಡೆದಾಗ ಶಾರಿ ಶಿಂಗಾರಾಗುತ್ತಿರುವಳು. ಹಾಡು ಮುಗಿಯತ್ತಲೂ ಮುಂದಿನ ಶಿಂಗಾರಕ್ಕೆ ಒಳಕ್ಕೆ ಹೋಗುವಳು. ಮೇಳ ಮರೆಯಾಗಿ ದಾಸ ಮತ್ತು ಸಾವಂತ್ರಿ ಇಬ್ಬರೂ ಸಾಮಾನು ಸಮೇತ ಓಡಿಹೋಗುವ ತರಾತುರಿಯಲ್ಲಿ ಬರುವರು.)

ಸಾವಂತ್ರಿ : ಹೋಗೇಬಿಡೂಣಂದಿ?

ದಾಸ : ಒಂದs ಮಿನಿಟ ತಡ ಮಾಡಿದರೂ ಮಸೋತಿ ಕೊರಳಿಗಿ ಬೀಳತೈತಿ. ಸಾವ್ಕಾರನ ಮಾತ ಕೇಳಿದ್ದರ ನೀ ಒಂದ ಅರಗಳಿಗಿ ಈ ಮನ್ಯಾಗ ಇರತಿರಲಿಲ್ಲ.

ಸಾವಂತ್ರಿ : ಶಾರಿಗಿ ಎಲ್ಲಾ ಹೇಳಿದಿ?

ದಾಸ : ಎಲ್ಲಾ ಹೇಳೇನಿ. ಅಷ್ಟs ಅಲ್ಲ ಆಕಿ ಸಂತೋಷದಿಂದ ಕುಣಿದಾಡಾಕ ಹತ್ಯಾಳ.

ಸಾವಂತ್ರಿ : ಹಾಗಿದ್ದರ ಎಲ್ಲಾ ಸುರಳೀತ ಆಗತೈತಿ ಮತ್ತು ಯಾಕ ಹೋಗೋದು?

ದಾಸ : ಆಕಿ ಏನ ತಿಳಕೊಂಡಳೋ! ಸಾವ್ಕಾರ ಏನ ತಿಳಿಕೊಂಡನೊ! ಅವರವರ ಶಿಂಗಾರ ನೋಡಿದರ ನನಗ್ಯಕೋ ಅಂಜಿಕಿ ಬರತೈತಿ. ನಾವು ಹೆಂಗೂ ಪಾರಾಗಿ ಹೋಗೂಣು. ಮುಂದ ಇಬ್ಬರೂ ಚೆಲೋ ಇದ್ದರ, ತಿರಿಗಿ ಬರೂಣಂತ. ಇಲ್ಲದಿದ್ದರ ಆಕೀ ಹಾದಿ ಆಕಿಗೆ, ನಮ್ಮ ಹಾದಿ ನಮಗ.

ಸಾವಂತ್ರಿ : ಆಕಿ ಶಿಂಗಾರಾಗೋದನ್ನ ನೋಡಿದರ ಸುಖರೂಪ ಮುಗಿದೀತಂತ ಅನ್ನಿಸೋದಿಲ್ಲಾ?

ದಾಸ : ಈಗೇನು, ನೀ ಬರತೀಯೊ ಇಲ್ಲೊ? ಅಕಾ ಬಂದರು.
(ದಾಸ ಹೊರಡುವನು. ಸಾವಂತ್ರಿಯೂ ಬೆನ್ನು ಹತ್ತುವಳು. ಶಾರಿ ಹೊಸ ಸೀರೆ ಉಟ್ಟುಕೊಂಡು ಮದುಮಗಳಂತೆ ಶಿಂಗಾರಾಗಿ ಸಂಭ್ರಮಿಸುತ್ತ ಬರುತ್ತಾಳೆ. ನಿಧಾನವಾಗಿ ನಾಯೀಮಗನೂ ಬರುತ್ತಾನೆ. ಅವನು ಕುದಿಯುತ್ತಿದ್ದಾನೆ.)

ನಾಯೀಮಗ : ನೀ ಸಿಂಗಾರಾಗೋದ ನೋಡಿ ನನಗ ಅಂಜಿಕಿ ಬರಾಕ ಹತ್ತೇತಿ.

ಶಾರಿ : ಯಾಕ? ಇಂದ ನನಗ ಮದಿವೀ ಗಂಡ ಸಿಗತಾನ. ತಯಾರಾಗಬಾರದೇನು? ನೀ ನನ್ನ ಗಂಡನ್ನ ನೋಡಾಕ ಬರೂದಿಲ್ಲಾ?

ನಾಯೀಮಗ : ಬರತೀನಿ.

ಶಾರಿ : ತಯಾರಾಗ ಮತ್ತ.

ನಾಯೀಮಗ : ಸಂಗೀತಾ ಮಠಕ್ಕ ಹೋಗಬ್ಯಾಡ.

ಶಾರಿ : ಗಂಡಂದ ಮ್ಯಾಲ ಮಠ ಏನು? ಮನೀ ಏನು?

ನಾಯೀಮಗ : ಮದಿವೀ ಮಾತಾದರ ಇಲ್ಲೇ ಮಾತಾಡಲಿ.

ಶಾರಿ : ಮದಿವೀ ಮಾತ ನಾ ಎಲ್ಲಿ ಬೇಕಾದರೂ ಮಾತಾಡಾಕ ತಯ್ಯಾರ. ಇಲ್ಲಿ ಯಾರ್ಯಾರೋ ಇರತಾರ. ಮದಿವೀ ಮುಂಚಿ ಅವನು ನಾನು ಏಕಾಂತ ಮಾತಾಡಿದರ ಎಷ್ಟ ಚಂದ ಇರತೈತಿ! ತುರುಬ ಬರೋಬರಿ ಆಗತೇನ್ನೋಡು. ಯಾಕ ಮಾತಾಡವೊಲ್ಲಿ? ನಾ ಮದಿವ್ಯಾದರ ನಿನಗ ಆನಂದ ಆಗಲಿಲ್ಲಾ?

ನಾಯೀಮಗ : ಇಲ್ಲ.

ಶಾರಿ : ಯಾಕ? ನಾ ಚಂದ ಇಲ್ಲೇನು?

ನಾಯೀಮಗ : ಮಠಕ್ಕ ಹೋಗಬ್ಯಾಡ ಸಂಗೀತಾ.

ಶಾರಿ : ನಾ ಗೊಂಬೀ ಹಾಂಗ ಕಾಣ್ತೇನಂತ, ಖರೆ ಏನು?

ನಾಯೀಮಗ : ಖರೆ.

ಶಾರಿ : ಮತ್ತ ನೀ ಯಾಕ ಹಾಂಗನ್ನೋದಿಲ್ಲ? ನಾ ಗೊಂಬೀ ಹಾಂಗಿಲ್ಲೇನು?

ನಾಯೀಮಗ : ಸಾವ್ಕಾರಂದಾರಲ್ಲಾ.

ಶಾರಿ : ನೀ ಅಂದಾಗ ನಾಚಿಕಿ ಬರತೈತೇನಂತ ನೋಡತೀನಿ. ಅನ್ನಲ್ಲಾ.

ನಾಯೀಮಗ : ಏನೋ ಹೇಳಬೇಕಂತಿದ್ದೆ.

ಶಾರಿ : ಹೇಳಲ್ಲ.

ನಾಯೀಮಗ : ಅದು….

ಶಾರಿ : ಏನದು? ಹೇಳಂದರ. ನನಗ ಆಗಲೇ ನಾಚಿಕಿ ಬರಾಕ ಹತ್ತೇತಿs.

ನಾಯೀಮಗ : ಅದಲ್ಲ.

ಶಾರಿ : ಮತ್ತೇನು?

ನಾಯೀಮಗ : ನನಗ ಸಾಯಬೇಕನಸತೈತಿ.

ಶಾರಿ : ಥೂ, ನನಗ ಎಷ್ಟೊಂದ ಒಳ್ಳೆ ನಾಚಿಕಿ ಬರಾಕ ಹತ್ತಿತ್ತು. ನಿನ್ನ ನೋಡಿ ಎಲ್ಲಾ ಹೊಂಟ್ಹೋಯ್ತು. ಸಾಯೋದಾದರ ಈ ಹೊತ್ತು ಮಂಗಳವಾರ, ಬ್ಯಾಡ. ಮುಂದ ಒಂದ ಒಳ್ಳೆ ದಿನ ನೋಡಿ ಸತ್ತೀಯಂತ. ಇಂದ ನನ್ನ ಜೋಡೀ ಬಾ. ನೀ ಏನs ಅನ್ನು. ನನ್ನ ಗಂಡ ಭಾಳ ನಶೀಬವಂತ. ಯಾಕಂದರ ಅವನ ಜೋಡೀ ಸಾಯಾಕ ನನ್ನಂಥಾ ಹುಡುಗಿ ಸಿಗತಾಳ ನೋಡು. ಅಳೋವಾಗ ನಾ ಎಷ್ಟ ಚಂದ ಕಾಣ್ತೀನಂತ ಗೊತ್ತಾ?

ನಾಯೀಮಗ : ನೀ ಅಲ್ಲಿಗಿ ಹೋಗಬ್ಯಾಡಾ ಅಂದೆ.

ಶಾರಿ : ಇಂದ ಏನಾಗೇತಿ ನಿನಗ? ಮಠಕ್ಕ ಕರಕೊಂಬಾ ಅಂತ ಸಾವ್ಕಾರ ನಿನಗ ಹೇಳಿ ಕಳಿಸ್ಯಾರ. ಹಾಂಗ ನೋಡಿದರ ನೀನs ಅವಸರ ಮಾಡ್ಬೇಕು. ಅದು ಬಿಟ್ಟು ನೀನs ಹೋಗಬ್ಯಾಡಂದರ ಈ ಸುದ್ದಿ ಸಾವ್ಕಾರಗ ಗೊತ್ತಾದರ ನಿನ್ನ ಗತಿ ಏನಾದೀತು? ಅಲ್ಲಿ ಏನಾದರೂ ಎಡವಟ್ಟ ಆಯ್ತು ಅನ್ನು, ನನ್ನ ಕಾಪಾಡಾಕ ನೀ ಇದ್ದs ಇರತಿ. ನನಗೇನ ಕಾಳಜಿ ಹೇಳು. ಯಾಕ ನೀ ನನ್ನ ರಕ್ಷಣಾ ಮಾಡೋದಿಲ್ಲಾ?

ನಾಯೀಮಗ : ಮಾಡತೀನಿ.

ಶಾರಿ : ಬಾ ಹಂಗಾದರ.
(ಹೊರಡುವರು. ಮೇಳ ಬಂದು ರಂಗವನ್ನಾಕ್ರಮಿಸುವುದು.)

ಮೇಳ : ಕಾಸು ಕಾಸೆಂದರೆ ಕಾಸೇನ ದೊಡ್ಡದೊ?
ಕಾಸಿಗೆಲ್ಲಿಯ ಹೃದಯವೋ | ಏನೆಂಬೆಯೊ
ಕಾಸು ಕಂಡರೆ ಹೂವು ಹಸಿರು
ಚಿಗರ್ಯಾವೇನು |

ಕಾಸು ಎಸೆದಾಗೊಮ್ಮೆ ಬಿಸಿಲು
ಬಿದ್ದಾವೇನು |

ಕೂಸಿನ ನಗೆಗೇಸು ಬೆಲೆಯೊ | ಏನೆಂಬೆಯೊ ||

ಕೊಂಬುದಲ್ಲದೆ ಕೊಡುವ ಘನತೆ ಕಾಸಿಗೆ ಉಂಟೆ |
ನೋಟನ ಗೊಂಬಿಗೆ ಕಣ್ಣೀರು
ಬಂದಾವೆ |
ಪ್ರೀತಿಯೆಂಬುದಕಿದು ಸಮವೇ | ಏನೆಂಬೆಯೊ ||

(ಮೇಳ ಸರಿಯುತ್ತಲೂ ಸಾವ್ಕಾರ ಸೋಮಣ್ಣ ಮಠದಲ್ಲಿ ಕಾಯುತ್ತಿರುವುದು ಕಾಣಿಸುತ್ತದೆ. ನಾಯೀಮಗ, ಶಾರಿ ಬರುತ್ತಾರೆ. ನೋಡಿ ಸೋಮಣ್ಣ ಉತ್ಸಾಹಿತನಾಗುತ್ತಾನೆ.)

ಸೋಮಣ್ಣ : ಭೇಶ್ ನಾಯೀಮಗನs ಭೇಶ್! ತಗೊ ನಿನ್ನ ಬಹುಮಾನ.
(ಒಂದು ನಾಣ್ಯ ಎಸೆಯುವನು. ನಾಯೀಮಗ ಹಿಡಿದುಕೊಳ್ಳುವನು.)

ಬಾ ಸಂಗೀತಾ, ನಮ್ಮ ನಾಯಿ ಹೇಳಿದ ಕೆಲಸ ಯಾವುದೂ ಇಲ್ಲೀತನಕ ಹುಸಿಮಾಡಿಲ್ಲ. ಅದಕ್ಕs ಬಹುಮಾನ ಕೊಟ್ಟೆ. ಇಂಥಾ ಬಹುಮಾನ ಅವನ ಹಂತ್ಯಾಕ ತುಂಬ್ಯಾವ.

ಶಾರಿ : ಹೌಂದ್ರಿ ಭಾಳ ಖರೇತನದ ನಾಯಿ. ನೀವು ಕನಿಷ್ಟಂದರೂ ಅದರ ಕತ್ತಿಗೊಂದ ಚರ್ಮದ ಪಟ್ಟಿ ಬಹುಮಾನ ಕೊಡಬೇಕಿತ್ತರಿ.

ಸೋಮಣ್ಣ : (ದೊಡ್ಡದಾಗಿ ನಗುತ್ತ)
ಎಲಾ ಹುಡಿಗಿ! ಮಾತಿನಾಗ ನನ್ನs ಸೋಲಿಸಿದೆಲ್ಲ! ಎಷ್ಟಂದರೂ ಬಯಲಾಟದವಳು ನೋಡು. ಭೇಶ್! ಇಲ್ಲದಿದ್ದರ ನನ್ನಂಥವಗ ಇಷ್ಟ ಹುಚ್ಚ ಹತ್ತಿಸೋದು ಸಾಧ್ಯ ಇತ್ತೇನು? ನಿಮ್ಮಪ್ಪ, ಅಂದರ ನನ್ನ ಮಾವ ಎಲ್ಲಾ ಹೇಳ್ಯಾನಂಧಾಂಗಾಯ್ತು.

ಶಾರಿ : ಎಲ್ಲಾ ಹೇಳ್ಯಾನ್ರಿ. ಅದಕ್ಕs ಇಷ್ಟ ಶಿಂಗಾರಾಗಿ ಬಂದೇನಿ.

ಸೋಮಣ್ಣ : ಎಷ್ಟ ದಿಗಲ ಹುಟ್ಟಿಸಿದಿ! ಹಗಲು ರಾತ್ರಿ ಎಷ್ಟ ಕಾಡಿದಿ! ಅದೆಲ್ಲ ಆಮ್ಯಾಲ ಹೇಳೇನಂತ. ಏ ನಾಯೇ ಹೊರಗ ನಡಿ.

ಶಾರಿ : ಅವ ಇಲ್ಲೇ ಇರಲಿ. ಯಾಕಂದರ ಅವನ ಮೂಗ ನೋಡಿದರ ನನಗ ನಗಿ ಬರತೈತಿ.

ಸೋಮಣ್ಣ : ಇನ್ನ ಮ್ಯಾಲ ಆ ತೋಟ ಇಂದು, ತೋಟದ ಮನೆ ನಿಂದು. ನಿನ್ನ ನಗಸಾಕ ಖಾಯಂ ಇವನ್ನ ನಿನ್ನ ಹಂತ್ಯಾಕs ಬಿಟ್ಟಿರತೀನಿ. ಆಯ್ತ? ನಾಯೇ, ಹೊರಗ ನಡಿ.

ಶಾರಿ : ಅವಯ್ಯಾ, ಅವನ್ನ ಬಿಟ್ಟ ನಾ ಹೆಂಗಿರಲಿ?

ಸೋಮಣ್ಣ : ಯಾಕ?

ಶಾರಿ : ಏನೊ ಸಾವ್ಕಾರ್ರು, ಮದಿವ್ಯಾಗಲಿ ಅಂತ ದೊಡ್ಡ ಮನಸ್ಸ ಮಾಡಿ ಹೇಳಿಕಳಿಸಿದಿರಂತ. ಅದಕ್ಕ ನಾನೂ ತಯಾರಾಗಿ ನನ್ನ ಗಂಡನ್ನ ನಾನs ಆರಿಸಿಕೊಂಡಬಿಟ್ಟೆ. ಇವನs ನನ್ನ ಗಂಡ. ಸಿದ್ದೂ, ಸಾವ್ಕರ್ರಿಗಿ ನಮಸ್ಕಾರ ಮಾಡು.
(ನಾಯೀಮಗ, ಸೋಮಣ್ಣಇಬ್ಬರಿಗೂ ಆಘಾತವಾಗುತ್ತದೆ.)

ಸೋಮಣ್ಣ : ಏನ ಮಾತಾಡ್ತಿ ಅನೋದು ನಿನಗಾದರೂ ತಿಳದದ ಇಲ್ಲ?

ಶಾರಿ : ತಿಳದs ಮಾತಾಡೇನಿ, ಇವು ಬಯಲಾಟದಾಗಿನ ಮಾತಲ್ಲ.

ಸೋಮಣ್ಣ : ಚಾಷ್ಟೀ ಮಾಡಬ್ಯಾಡ. ನನ್ನ ನಾಯಿ ಎಲ್ಲಿ? ನಿನ್ನಂಥ ಬೆರಿಕಿ ಎಲ್ಲಿ?

ಶಾರಿ : ಸೊಕ್ಕಿನಿಂದ ನಿಮ್ಮ ಕಣ್ಣು ನೆತ್ಯಾಗ ಹೋಗ್ಯಾವ ಸಾವ್ಕಾರರs. ಅದಕ್ಕ ನಿಮಗೆ ಮನಿಸೇರೆಲ್ಲಾ ನಾಯೀಹಂಗ ಕಾಣತಾರ. ಆಯ್ತು, ನಾಯೀಜೋಡಿ ಮದಿವ್ಯಾಗಾಕ ನಾನs ತಯಾರಾಗೇನಿ ಅಂದಮ್ಯಾಲೇನು?

ಸೋಮಣ್ಣ : ಇನ್ನ ನಿನ್ನ ಧಿಮಾಕ ಇಳದಿಲ್ಲಂಧಾಂಗಾಯ್ತು. ಏ ನಾಯೇ, ಇದೆಲ್ಲಾ ಖರೆ ಏನೊ?
(ನಾಯೀಮಗ ಸುಮ್ಮನಿರುವನು.)

ಆಯ್ತು. ಅದೇನಿದ್ದರೂ ಇಂದ ನೀ ನನ್ನ ಕೈಯಾಗಿಂದ ಪಾರಗೋದು ಶಕ್ಯs ಇಲ್ಲ. ಇದು ನಾಯಿಗೂ ಗೊತ್ತೈತಿ. ಬೇಕಾದರ ಕೇಳಿಕೊ. ನಿನಗ ಇಂದ ನನ್ನ. ನಾಯೀನೂ ತೋರಸ್ತೀನಿ. ಸಾವ್ಕಾರ ಸೋಮಣ್ಣ ಯಾರಂತ್ಲೂ ತೋರಸ್ತೀನಿ. ನನ್ನ ಜೋಡೀ ಚಾಷ್ಟೀ ಮಾಡ್ತೀಯೇನ ಭೋಸಡೆ…
(ಕೈ ಹಿಡಿದು ಎಳೆಯುವನು. ರಭಸಕ್ಕೆ ಶಾರಿ ಬೀಳುವಳು. ನಾಯೀಮಗ ಒಳಗೊಳಗೇ ಕುದಿಯುತ್ತಿದ್ದಾನೆ. ಆತ ಸುಮ್ಮನೇ ನಿಂತುದನ್ನು ಗಮನಿಸಿ ಶಾರಿಗೆ ನಿರಾಸೆಯಾಗಿ ಕೆಣಕುತ್ತಾಳೆ.)

ಶಾರಿ : ಥೂ ಹಲ್ಕಟ್ಟ, ನಾಲಾಯಖ, ನಾ ನಿನ್ನ ಹೇಂತಿ ಅಂತ ಹೇಳಲಿಲ್ಲಾ? ನಿನ್ನ ಹೇಂತೀ ಮಾನ ನಿನ್ನ ಎದುರಿಗೇ ತಗೀತೇನಂತಾನ, ನಿನಗ ಒಂದೀಟಾದರೂ ಅಭಿಮಾನ ಇಲ್ಲಾ? ನೀನೊಬ್ಬ ಗಂಡಸು ಅಂತ ತಿಳಿದಿದ್ದೆ, ಯಾವುದೋ ಶಾಪ ಹೊಂದಿದ ದೇವರೂ ಅಂತ ಅಂದ್ಕೊಂಡಿದ್ದೆ. ನನ್ನ ನಂಬಿಕಿ ಹುಸಿ ಮಾಡಿದೆಲ್ಲೊ! ಬರೋವಾಗ ಏನ ಹೇಳಿದ್ದೀ? ನನ್ನ ರಕ್ಷಣಾ ಮಾಡ್ತೀನಂತ ಹೇಳಿರಲಿಲ್ಲಾ? ಇಷ್ಟ ಲಗು ಮರತಿ?

ಸೋಮಣ್ಣ : ಎಷ್ಟ ಚಂದ ಆಟ ಆಡತಿ? ಹಂಗೆಲ್ಲಾ ಹೇಳಿದ್ನ ಇವ?
(ಗಹಗಹಿಸಿ ನಗುವನು.)

ನೀ ಭಾಳ ನಗಸ್ತಿ ನನ್ನ.

ಶಾರಿ : ಯಾಕ?

ಸೋಮಣ್ಣ : ನಾಯೀ ಜೋಡಿ ಮದಿವ್ಯಾಗತೇನಂತೀ ನೋಡಲ್ಲ! ಇಷ್ಟೊಂದ ಕತಿ ಕೇಳೇನಿ, ಒಬ್ಬ ಆಳು ರಾಜಕುಮಾರೀನ ಮದಿವ್ಯಾದದ್ದ ಕೇಳಿಲ್ಲ ತಗಿ. ಅಪಾ ರಾಜಕುಮಾರ, ನಿನ್ನ ರಾಜಕುಮಾರೀನ ಕಾಪಾಡಿಕೊ.
(ಶಾರಿಯ ಮೈಮೇಲೇರಿ ಹೋಗುವನು.)

ಶಾರಿ : ನನ್ನ ಮುಟ್ಟಿದರ ನೀ ಹಾಳಾಗಿ ಹೋಗ್ತಿ.

ಸೋಮಣ್ಣ : ಇಲ್ಲಿಗಿ ಬಂದ ಹುಡಿಗೇರೆಲ್ಲಾ ಮೊದಮೊದಲ ಹಿಂಗs ಹೇಳತಾರ. ಆಮ್ಯಾಲ ಅವರs ಸಾವ್ಕಾರ ಸೀರೀ ಕೊಡಸರಿ. ಕುಬಸಾ ಕೊಡಸರಿ ಅಂತಾರ. ಹೇಳತಾನ ಕೇಳ ನಾಯೀನ. ಯಾಕೋ ನಾಯೇ…
(ನಗುತ್ತ  ನಿರ್ಲಕ್ಷ್ಯದಿಂದ ಅವಳ ಮೇಲೆ ಬೀಳಹೋಗುವನು. ಮಾತಿನ ಏಟುಗಳಿಂದ ನಾಯೀಮಗ ಈಗ ಒಂದು ನಿರ್ಧಾರಕ್ಕೆ ಬಂದವನು ಹಾರಿ ಸೋಮಣ್ಣನಿಗೆ ಏಟು ಹಾಕುವನು. ಸೋಮಣ್ಣ ಆಘಾತ ಮತ್ತು ಏಟಿನಿಂದ ತತ್ತರಿಸಿ ಬೀಳುವನು. ದನ ಬಡಿದಂತೆ ಇನ್ನೆರಡು ಏಟು ಹಾಕುವನು. ಕೊನೆಗೆ ಶಾರಿಯನ್ನು ಹಿಂದೆ ಹಾಕಿಕೊಂಡು ನಿಲ್ಲುವನು. ಶಾರಿಗೆ ಆನಂದ ಆಶ್ಚರ್ಯಗಳಾಗಿವೆ.)

ಸೋಮಣ್ಣ : ಯಾಕೋ ನಾಯೇ?

ನಾಯೀಮಗ : ನಾಯಿ ಅಲ್ಲ ಮನಿಶ್ಯಾ ಅನ್ನರಿ, ಇಲ್ಲಾ ಸಿದ್ದರಾಮಾ ಅನ್ನರಿ.
(ಎನ್ನುತ್ತ ಅವನಿಂದ ತೆಗೆದುಕೊಂಡ ನಾಣ್ಯವನ್ನು ತಿರಿಗಿ ಎಸೆಯುವನು. ಸೋಮಣ್ಣ ಆಘಾತದಿಂದ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.)

ಸೋಮಣ್ಣ : ಏನಿದರ ಅರ್ಥ?

ನಾಯೀಮಗ : ಸಂಗೀತಾ ನನ್ನ ಹೇಂತಿ.

ಸೋಮಣ್ಣ : ಏನಲೇ, ನಿನಗ ಈಕೀನ್ನ ಮದಿವೀಮಾಡಿ ಮನರಂಜನೆ ಮಾಡಾಕ ನಾ ಸಾವ್ಕಾರಾದದ್ದು?

ನಾಯೀಮಗ : ಎದಕ್ಕ ಆಗಿದ್ದೀರೊ. ಈಕೀ ಮೈಮಾಲ ಕೈಮಾಡಿದರ ನೀವು ಉಳಿಯೋದಿಲ್ಲ. ನಿಮ್ಮ ಒಳ್ಳೇದಕ್ಕs ಹೇಳತೇನಿ. ನೀವು ಈ ಜಾಗಾ ಬಿಡೋದs ಮೇಲು.
(ಸೋಮಣ್ಣನಿಗೆ ನಾಯೀಮಗನನ್ನು ಎದುರಿಸುವುದು ಅಸಾಧ್ಯವೆನ್ನಿಸಿ ಅವಮಾನಿತನಾಗಿ ಸೋತ ದನದಂತೆ ಹೊರಗೆ ಹೋಗುತ್ತಾನೆ. ಶಾರಿಗೆ ಅಭಿಮಾನ ತುಂಬುತ್ತದೆ. ಉತ್ಸಾಹದಿಂದ ಚಪ್ಪಾಳೆ ತಟ್ಟಿ ಅವನ ಸುತ್ತ ಕುಣಿಯತೊಡಗುತ್ತಾಳೆ. ಆದರೆ ನಾಯೀಮಗನಿಗೆ ಬಹುಬೇಗ ಪರಿಸ್ಥಿತಿಯ ಅರಿವಾಗುತ್ತದೆ.)

ಸಂಗೀತಾ ಇನ್ನೇನ ಮಾಡೋಣ?

ಶಾರಿ : ಯಾಕ ಚಿಂತೀ ಮಾಡತಿ? ಇಬ್ಬರೂ ತಪ್ಪಿಸಿಕೊಂಡ ಓಡಿ ಹೋಗೋಣು, ಮ್ಯಾಳ ಕಟ್ಟೋಣು. ನಾವಿಬ್ಬರೂ ಹೆಂಗ ಪ್ರೀತಿ ಮಾಡಿದಿವಿ, ಹೆಂಗ ಮದಿವ್ಯಾದಿವಿ ಅಂತ ಹಾಡ ಕಟ್ಟಿ ಬಯಲಾಟ ಮಾಡ್ತಾ ಊರೂರು ಅಡ್ಡಾಡೋಣು.

ನಾಯೀಮಗ : ಸಾವ್ಕಾರನ ಕೈ ನಿನಗ್ಗೊತ್ತಿಲ್ಲ, ಲಗು ಏಳು.

ಶಾರಿ : ಏ ನನ್ನ ಗಂಡಸs, ಇನ್ನ ಗುಡ್ಡ ಕೂಡಾ ನಮಗ ಅಡ್ಡ ಬರಾಣಿಲ್ಲ. ನಿನ್ನ ಕಣ್ಣಾಗಾಗಲೇ ನಾಳಿ ಮುಂಜಾನೆ ಬೆಳಕ ಮೂಡೇತಿ. ಈಗಾದರೂ ಹೇಳ್ತೀಯಿಲ್ಲೊ, ನಾ ಹೆಂಗ ಕಾಣ್ತೀನಂತ?

ನಾಯೀಮಗ : ಚಂದ ಕಾಣತಿ. ಲಗು ಬಾ.
(ಹೊರಡುವರು. ಬಾಗಿಲು ಹಾಕಿದೆ ನಾಯೀಮಗನಿಗೆ ಇನ್ನಷ್ಟು ಆತಂಕವಾಗುತ್ತದೆ.)

ಘಾತ ಆತು, ಬಾಗಿಲಾ ಹಾಕ್ಕೊಂಡಾನ.

ಶಾರಿ : ಚೆಲೋ ಆಯ್ತು ಬಿಡು. ಊರ ಹೊರಗಿನ ಮಠ, ಹೊರಗ ಕತ್ತಲಿ, ನಿನ್ನಂಥಾ ಹರೇದ ಹುಡುಗನ ಜೋಡಿ ನಾ ಒಬ್ಬಾಕೀನs ಇರೂದಂದರ…. ಅಬ್ಬಾ ನನಗ ಅಂಜಿಕಿ ಬರತೈತಿ.

ನಾಯೀಮಗ : ಅಯ್ಯೋ ನಿನಗ ಹೆಂಗ ಹೇಳಲಿ? ಇದು ಚಾಷ್ಟೀ ಮಾಡೋ ಹೊತ್ತಲ್ಲ. ಈಗ ಸಾವ್ಕಾರ ಕುಸ್ತಿ ಪೈಲವಾನರನ್ನ ಕರಕೊಂಬರತಾನ. ಅವರು ಬರೋದರೊಳಗs ಪಾರಾಗಬೇಕು. ಹಾ! ಈ ಮಠದಾಗೊಂದ ಸುರಂಗ ಮಾರ್ಗ ಐತಿ. ಮುಂದಿಂದ ಮುಂದ ನೋಡೋಣ, ಬಾ ಲಗು.

ಶಾರಿ : ನಡಿ ನಡಿ.
(ಹೊರಡುವರು, ಮೇಳದವರು ಬಂದು ರಂಗವನ್ನಾಕ್ರಮಿಸುವರು.)

ಕಥೆಗಾರ : ಮುಂದಿನ ಕತಿ ಕೇಳ್ರಿ ಶಿವಾ.
ಸಾವ್ಕಾರ ಸೋಮಣ್ಣನವರು ಹತ್ತೆಂಟ ಮಂದಿ |
ಕುಸ್ತಿಯವರನ್ನ ಕರೆಸಿ ಎಲ್ಲಾ ಬಂದೋಬಸ್ತ ಮಾಡಿದರು.
ಒಬ್ಬೊಬ್ಬರ ಕೈಯಾಗೂ ಲೋಡಮಾಡಿದ ಬಂದೂಕ
ಕೊಟ್ಟು | ಕಂಡಲ್ಲಿ ಗುಂಡ ಹಾರಸರಿ ಅಂತ ಅಪ್ಪಣಿ
ಕೊಟ್ಟರು | ಸ್ವಥಾ ತಾವೂ ಒಂದ ಬಂದೂಕ ಹಿಡಕೊಂಡು ||

ಹಾಳಮಠದ ಸುರಂಗ ದಾರಿ ಮುಗಿಯೋವಂಥಾ
ಆಯಕಟ್ಟಿನ ಜಾಗಾಕ್ಕ ಬಂದು ಕೂತರು |

ಹಿಮ್ಮೇಳ : ಇನ್ನೆಂಗ ಹೋಗತಾನ ಹೋಗಲಿ ನಾಯೀಮಗ.

ಕಥೆಗಾರ : ದಾರೀ ಕಾಯ್ತಾ ಕಾಯ್ತಾ| ಜಾಗರಣಿ ಮಾಡ್ತಾ ಮಾಡ್ತಾ|
ಬೆಳ್ಳೀ ಚಿಕ್ಕಿ ಮೂಡಿತು | ಮುಂಗೋಳಿ ಕೂಗಿ
ಮೂಡಣದಾಗ ಬಂಗಾರ ಬೆಳಕ ಮೂಡಿತು|

ಆಗ ನೋಡ್ರಿ ಶಿವಾ, ಖರೇ ಹೇಳಿದರ ಕೇಳತೀರಿ|
ಖೊಟ್ಟಿ ಹೇಳಿದರ ಕೇಳತೀರಿ| ಅಷ್ಟರಾಗ ಒಬ್ಬ
ಆಳಮಗ ಓಡಿಬಂದ,-

ಆಳಮಗ : ಸಾವ್ಕಾರs ಸಾವ್ಕಾರs

ಸೋಮಣ್ಣ : ಯಾಕೊ :

ಆಳಮಗ : ಘಾತ ಆತರಿ. ಮಾರ್ಯಾ ಇರಾಕಿಲ್ಲರಿ?

ಸೋಮಣ್ಣ : ಯಾ ಮಾರ್ಯಾ?

ಆಳಮಗ : ಅವನs ಆ ಚೆಲವೀಗಂಡ, ನಿಮ್ಮ ಮನ್ಯಾಗ ಚಾಕರ ಇದ್ದನಲ್ಲರಿ,-

ಸೋಮಣ್ಣ : ಮುಂದೇನಾಯ್ತು ಒದರು

ಆಳಮಗ : ಅವನ ನಿಮ್ಮ ಹೆಂಡರ‍್ನ ಓಡಿಸಿಕೊಂಡ ಹೋದ್ನಂತ.

ಸೋಮಣ್ಣ : ಖರೆ ಏನು?

ಆಳಮಗ : ಹೂನ್ರಿ, ನಿಮ್ಮ ತಾಯಿ ಹೇಳಿ ಕಳಿಸಿದರು.

ಬಂಟ : ಸಾವ್ಕಾರ ಸಾವ್ಕಾರ, ನಾಯೀಮಗ ಸಂಗೀತಾ ಓಡಿ ಹೊಂಟಾರ…
(ಎಂದು ಓಡಿಹೋಗುತ್ತಿದ್ದ ನಾಯೀಮಗ ಶಾರಿಯನ್ನು ತೋರಿಸಿ ಬಂದೂಕು ರೆಡಿ ಮಾಡುವನು. ಸೋಮಣ್ಣ ಖಿನ್ನನಾಗಿ ಏನುಮಾಡಬೇಕೆಂದು ತೋಚದೆ, ಓಡುತ್ತಿರುವ ಜೋಡಿಯನ್ನೇ ಕ್ಷಣಹೊತ್ತು ನೋಡುತ್ತಾನೆ. ಬಂದೂಕು ಹಾರಿಸಕೂಡದೆಂದು ಎಲ್ಲರಿಗೂ ಸನ್ನೆ ಮಾಡಿ ಮೆಲ್ಲಗೆ ಮುಖ ತಿರುಗಿಸುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಮೇಳ ಅವರನ್ನು ಮರೆಮಾಡುತ್ತದೆ.)

ಕಥೆಗಾರ : ನೋಡ್ರಿ ಶಿವಾ, ಇಲ್ಲಿಗೆ ಕತಿ ಸುರುವಾಯ್ತು,
ಪ್ರೀತಿ ಪ್ರೇಮಾ ಕಾಸಿಗಿಂತ ದೊಡ್ಡದಂತೆ, ದೊಡ್ಡ ದೊಡ್ಡದವರೆಲ್ಲಾ ಸಣ್ಣ ಮಂದಿಗಿ ತೋರಿಸಿಕೊಟ್ಟರು.
ಅದಕ್ಕ ನಾವೂ ಹಾಡತೇವ್ರಿ.

ಭೂಮಿ ತಿರಗತೈತಿ ಯಾತಕೆ
ರವಿಯ ಸುತ್ತ
ಪ್ರೀತಿ ಪ್ರೇಮದಿಂದ ಅಲ್ಲವೇ ||

ಸುರಿಯತಾವು ಮಳಿಗಳ್ಯಾತಕೆ
ನೆಲದ ಮ್ಯಾಲೆ
ಪ್ರೀತಿ ಪ್ರೇಮದಿಂದ ಅಲ್ಲವೇ ||

ಹುಟ್ಟತಾವು ಹಸುರು ಯಾತಕೆ
ಹೂ ನಗುವುದ್ಯಾಕೆ
ಪ್ರೀತಿ ಪ್ರೇಮದಿಂದ ಅಲ್ಲವೇ ||

ಮಂಗಳಂ