ಗಣ್ಣಪದ

ಸೊಲ್ಲೀನ ಮೊದಲೀಗೆ ಸಾವಿರ ಶರಣೆಂಬೆ
ಸಾವಳಗಿ ಶಿವನಿಂಗಗೆ |

ಶ್ರೇಷ್ಠ ದೇವತೆಗಳಿಗೆ ಚಿತ್ತದಲಿ ನಮಿಸುವೆ
ಭೂಸನೂರಮಠದಯ್ಯಗೆ ||

ಸಾರಾಂಶ ವಚನಕ್ಕೆ ಸಹಕಾರಿಯಗೆಂಬೆ
ತಾಯವ್ವ ಸರಸೋತಿಗೆ |
ಸತ್ಯದ ಮಳೆಯಾಗಿ ಸುರಿಯಲಿ ನಮ ಹಾಡು
ಮತಿವಂತರೆದೆಯೊಳಗೆ ||

(ಮೇಳದವರು ಗಣ್ಣಪದ ಹಾಡಿದ ಮೇಲೆ ಕಥೆಗಾರ ಮುಂದೆ ಬಂದು ಕಥೆ ಹೇಳತೊಡಗುತ್ತಾನೆ.)

ಕಥೆಗಾರ : ಆದಿಯಲ್ಲಿ ಶಿವಾ, ಶಿವಲಿಂಗಾ, ಶಿವಲಿಂಗೇಶ್ವರಾ ಅಂದು, ಸಾವಿರದೊಂದು ನಮಸ್ಕಾರವ ಮಾಡಿ, ಶರಣು ಬಂದೇವು ಕರುಣದಿಂದ ಕಾಪಾಡು ತಂದೇ ಅಂದೇವ್ರಿ,-

ಮೇಳ : ಶರಣ್ರೀಯೆಪ, ಶರಣು.

ಕಥೆಗಾರ : ಧಾರವಾಡದಾಗ ಕುಂತು ಲೋಕಕ್ಕೆಲ್ಲಾ ಸಾಕಂಬೋ ತನಕ ಬೆಳಕನ್ನ ಕೊಡೋವಂಥಾ ಭೂಸನೂರ ಮಠದ ಸಂಗಯ್ಯಸ್ವಾಮಿಗೆ ಶರಣಂದೇವ್ರಿ,-

ಮೇಳ : ಶರಣ್ರೀಯೆಪ ಶರಣು.

ಕಥೆಗಾರ : ಆದಿ ಮೊದಲಾದ, ತುದಿ ಕಡೆಯದ ಮೂಲೆ ಮೂಲೆಯ ದೇವರಿಗೆಲ್ಲಾ ಶರಣು. ಕುಂತವರಿಗೆ ಶರಣು, ನಿಂತವರಿಗೆ ಶರಣು. ಬಡವರಿಗೆ ಸಣ್ಣ ಶರಣು, ಶ್ರೀಮಂತರಿಗೆ ದೊಡ್ಡ ಶರಣು ಮಾಡಿ, ಮುಂದಿನ ಕತಿ ಹೇಳತೇವ್ರಿ,- ನೋಡ್ರಿ ಶಿವಾ, ನಾವು ನಿಮಗೆ ಈ ದಿನ ಒಂದು ಪ್ರೇಮದ ಕತೀ ಹೇಳತೇವ್ರಿ. ಪ್ರೇಮ, ಪ್ರೀತಿ ಅಂದರ ಜಗತ್ತಿನಾಗ ಹೆಚ್ಚಿಂದೈತಿ. ಅದು ಎಷ್ಟ ಹೆಚ್ಚಿಂದೈತಿ ಅಂದರ ಇಡೀ ಪ್ರಪಂಚದಾಗ ಅದs ತುಂಬೇತಿ. ಪಡುವಣ ಸೀಮ್ಯಾಗ ಅದಕ್ಕ ಲವ್ ಅಂತಾರ. ಉತ್ತರ ದೇಶದಾಗ ಅದಕ್ಕ ಪ್ಯಾರ್ ಮೊಹಬ್ಬತ್ ಅಂತಾರ್ರಿ. ಅಚ್ಚ ಕನ್ನಡದಾಗ ಒಲವು ಅಂತಾರ್ರಿ. ಹಿಮಾಲಯ ದೊಡ್ಡದಂತಾರ. ಅದರ ಪ್ರೇಮ ಅದಕ್ಕಿಂತ ದೊಡ್ಡದೈತಿ. ಗಂಗಾನದಿ ಉದ್ದ ಅಂತಾರ, ಅದರ ಪ್ರೀತಿ ಅದಕ್ಕಿಂತ ದೊಡ್ಡದೈತಿ. ಗಂಗಾನದಿ ಉದ್ದ ಅಂತಾರ, ಅದರ ಪ್ರೀತಿ ಅದಕ್ಕಿಂತ ಉದ್ದ ಐತಿ. ಇದರಾಗೇನ ಸಂಶೆ ಐತಿ? ಯಾಕಯ್ಯ ಕಂದಾ ಹಾಂಗ ನಿಂತಿ?

ಹಿಮ್ಮೇಳ : ಏನ ಗುರುವೆ, ಎಂಥಾ ಕತಿ ಹೇಳತೇನಂದಿರಿ! ಅಂಥಾ ಸವಕಳಿ ಕತಿ ಯಾರು ಕೇಳತಾರ? ಇಂಥಾ ಸಭಿಕರ ಮುಂದ ಅಗ್ಗದೀ ಹೊಸಾ ಕತಿ ಹೇಳಬೇಕ್ರಪ.

ಕಥೆಗಾರ : ಹೊಸಾ ಕತಿ ಅಂದರ ಎಂಥದಪ?

ಹಿಮ್ಮೇಳ : ಹೊಸಾ ಕತಿ ಅಂದರ,-ಹಣ, ಕಾಸು, ಸಸ್ಪನ್ಸು, ಡಿಶ್ಕುಂ ಡಿಶ್ಕುಂ-ಇಂಥಾ ಕತಿ ಹೇಳಿದರ ಕೂತವರೆಲ್ಲಾ ಮೈತುಂಬ ಕಣ್ಣ ಕಿವಿ ಆಗಿ, ಕೂದಲಾ ನೆಟ್ಟಗ ಮಾಡಿಕೊಂಡ ಕೇಳತಾರ. ಅದಬಿಟ್ಟು ಪ್ರೇಮಾ ಪ್ರೀತಿ ಅಂದರ ಅದನ್ನೆಲ್ಲಾ ಸಿನಿಮಾದಾಗ ನೋಡಿ ನೋಡಿ ಬ್ಯಾಸತ್ತಿರತಾರ. ಹೋಗಲಿ ಜೀವಾ ಗಟ್ಟಿ ಮಾಡಿ ಕೇಳೋಣಂದರ ಇಂದ ಶಿವರಾತ್ರೀನೂ ಅಲ್ಲ.

ಕಥೆಗಾರ : ಹುಚ್ಚಾ, ಹಗರಲ್ಲವೋ ಪ್ರೀತಿ ಪ್ರೇಮಾ! ಏನ ಹೇಳಲಿ ಅದರ ಮಹಿಮಾ!

ಭೂಮಿ ತಿರಗತೈತಿ ಯಾತಕೆ
ರವಿಯ ಸುತ್ತ
ಪ್ರೀತಿ ಪ್ರೇಮದಿಂದ ಅಲ್ಲವೆ? ||

ಸುರಿಯತಾವು ಮಳೆಗಳ್ಯಾತಕೆ
ನೆಲದ ಮ್ಯಾಲೆ
ಪ್ರೀತಿ ಪ್ರೇಮದಿಂದ ಅಲ್ಲವೆ?||

ಹುಟ್ಟತಾವು ಹಸುರು ಯಾತಕೆ
ಹೂ ನಗುವುದ್ಯಾಕೆ
ಪ್ರೀತಿ ಪ್ರೇಮದಿಂದ ಅಲ್ಲವೆ? ||

ಹಿಮ್ಮೇಳ : ನೋಡ ಗುರುವೆ, ಮಳಿ ಎದುರಿಂದಾಗತೈತಿ, ಭೂಮಿ ಯಾಕ ತಿರಗತೈತಿ, ಇವಕ್ಕೆಲ್ಲಾ ಬ್ಯಾರೇ ಬ್ಯಾರೇ ಸೈಂಟಿಫಿಕ್ ಆಧಾರ ಅದಾವ. ಅವನ್ನ ಬಿಟ್ಟು ಪ್ರೇಮ, ಪ್ರೀತಿನs ಆಧಾರಂದರ ನಂಬೂದ ಹೆಂಗ? ಬ್ಯಾರೇ ಇನ್ನೇನಾದರೂ ಇದ್ದರ ಹೇಳ್ರಿ, ಇದನ್ನ ನಾ ಒಪ್ಪೋದಿಲ್ಲ.

ಕಥೆಗಾರ : ಕಂದಾ, ಪ್ರೇಮದಿಂದ ಕುರೂಪಿ ಆಗತಾನ. ಇರಿವಿ ಆನಿ ಆಗತದ ಮಂಗ್ಯಾ ಮನಿಶ್ಯಾ ಆಗತಾನ! ಮನಿಶ್ಯಾ ದೇವರಾಗತನ! ಸಣ್ಣಾವ ದೊಡ್ಡಾವಾಗತಾನ!

ಹಿಮ್ಮೇಳ : ಗುರುವೇ, ಮಂಗ್ಯಾನಂಥಾವ ಮನಿಶಾ ಆಗೋದು ದುಡ್ಡಿನಿಂದ! ನಾನೂ ಹಾಡಲೇನು?-

ದುಡ್ಡಿದ್ದವ ದೊಡ್ಡವಲ್ಲವೆ?
ಹೇಳೆನ್ನ ಗುರುವೆ
ದುಡ್ಡಿದ್ದವ ದೊಡ್ಡವಲ್ಲವೆ? ||

ಕಾಸಿದ್ದರ ಕೈಲಸಲ್ಲವೇ
ಹೇಳೆನ್ನ ಗುರುವೆ
ಕಾಸಿದ್ದರ ಕೈಲಾಸವಲ್ಲವೆ? ||

ಕಥೆಗಾರ : ಕಂದಾ, ಹಂಗೆಲ್ಲಾ ವಾದ ಮಾಡಬಾರದು. ಪ್ರೇಮ ಬಾಳ ದೊಡ್ಡದು.

ಹಿಮ್ಮೇಳ : ನೀ ಏನs ಹೇಳ ಗುರುವೆ, ದುಡ್ಡೇ ದೊಡ್ಡದು.

ಕಥೆಗಾರ : ಪ್ರೇಮ ದೊಡ್ಡದಂತೀನಿ.

ಹಿಮ್ಮೇಳ : ದುಡ್ಡು ದೊಡ್ಡದಂತೀನಿ.

ಕಥೆಗಾರ : ಪ್ರೇಮ.

ಹಿಮ್ಮೇಳ : ದುಡ್ಡು.

ಕಥೆಗಾರ : ಆಯ್ತಪ, ನನ್ನೊಳಗಿಂದ ಪ್ರೇಮ ಮಾತಾಡ್ತಾ ಇದೆ. ನಿನ್ನೊಳಗಿಂದ ದುಡ್ಡು ಮಾತಾಡ್ತಾ ಇದೆ. ಈಗ ನಮ್ಮ ಜಗಳ ಬಗಿಹರಿಸೋರ್ಯಾರು?

ಹಿಮ್ಮೇಳ : ಇಲ್ಲೊಬ್ಬ ಬುದ್ಧಿಜೀವಿ ಇದ್ದಾನ. ಕರೀಲೇನ್ರಿ?

ಕಥೆಗಾರ : ಕರತಾರಪ.
(ಹಿಮ್ಮೇಳ ಹೋಗಿ ಮೇಳದಲ್ಲಿ ನಿಂತಿದ್ದ ಒಬ್ಬನನ್ನು ಕರೆತರುವನು. ಆತ ಕೂದಲು ಚೆದುರಿ, ಚಷ್ಮಾ ಹಾಕಿಕೊಂಡು ಸಿಗರೇಟು ಸೇದುತ್ತಿದ್ದಾನೆ. ಬಗಲಲ್ಲಿ ಒಂದು ಹಡಪ ತೂಗು ಹಾಕಿಕೊಂಡಿದ್ದಾನೆ.)

ಹಿಮ್ಮೇಳ : ಅಪಾ ಬುದ್ಧಿಜೀವಿ, ಗುರುಶಿಷ್ಯರಿಗೆ ಜಗಳ ಬಂದೈತಿ. ಅವರು ಪ್ರೇಮ ದೊಡ್ಡದು ಅಂತಾರ. ನಾ ದುಡ್ಡು ದೊಡ್ಡದು ಅಂತೀನಿ. ನೀನಾದರೂ ಹೇಳೊ ನಮ್ಮಪ್ಪ, ಯಾವುದು ದೊಡ್ಡದು?

ಬುದ್ಧಿಜೀವಿ : ಅಯ್ಯಾ, ಕೆಲವರು ಪ್ರೇಮ ದೊಡ್ಡದಂತಾರ, ಕೆಲವರು ದುಡ್ಡು ದೊಡ್ಡದಂತಾರ. ನನ್ನ ಅಭಿಪ್ರಾಯದಲ್ಲಿ ಇಬ್ಬರೂ ಸರಿ.

ಹಿಮ್ಮೇಳ : ಹೆಂಗಂದಿರಿ?

ಬುದ್ಧಿಜೀವಿ : ದುಡ್ಡು ಇದ್ದರೆ ದುಡ್ಡೇ ದೊಡ್ಡದು. ಅದಿಲ್ಲಾ ಪ್ರೇಮ ದೊಡ್ಡದು. ನೀವೇನಂತೀರಿ?

ಹಿಮ್ಮೇಳ : ತಾವು ಹೋಗಬಹುದು ಅಂತೀನಿ.
(ಬುದ್ಧಿಜೀವಿ ಹೋಗಿ ಮೇಳದಲ್ಲಿ ಸೇರಿಕೊಳ್ಳುವನು.)

ಗುರುವೆ, ಅವ ಅಡ್ಡಗ್ವಾಡೀ ಮ್ಯಾಲ ದೀಪಾ ಹಚ್ಚಿದ. ಈಗ ಹೆಂಗ ಮಾಡೋಣು? ಅಕಾ ಅಲ್ಲೊಬ್ಬ ಸಜ್ಜನ ನಿಂತಾನ ತಡೀರಿ. ಏs ಬಾರೋ ಇಲ್ಲಿ.
(ಮೇಳದಲ್ಲಿ ಒಬ್ಬ ದಟ್ಟ ದರಿದ್ರ ಭಿಕ್ಷುಕ. ಚಿಂದಿ ಬಟ್ಟೆಯಿಟ್ಟು ಹಸಿದು ಬೆನ್ನು ಬಾಗಿ ಕೋಲೂರಿ ನಿಂತಿದ್ದಾನೆ. ಹಿಮ್ಮೇಳ ಕರೆದೊಡನೆ ನಮ್ರನಾಗಿ ಬರುತ್ತಾನೆ.)

ಗುರುವೆ, ಬಂದ ನಿಂತಾನ. ಅದೇನ ಕೇಳ್ತೀರೋ ಕೇಳ್ರಿ.

ಕಥೆಗಾರ : ಅಪಾ, ಪ್ರೇಮ ದೊಡ್ಡದಲ್ಲೇನೊ?

ಭಿಕ್ಷುಕ : ಹಂಗಂದರೇನ್ರಿ?

ಕಥೆಗಾರ : ಪ್ರೀತಿ ದೊಡ್ಡದಲ್ಲೇನೊ?

ಭಿಕ್ಷುಕ : ಹಂಗಂದರೇನ್ರಿ?

ಕಥೆಗಾರ : ಛೇ?

ಹಿಮ್ಮೇಳ : ಇನ್ನ ನಾ ಕೇಳಲೇನ್ರಿ?
(ಕಿಸೆಯಿಂದ ಐದು ರೂಪಾಯಿಯ ನೋಟು ತೆಗೆದು ತೋರಿಸುತ್ತ)

ಅಯ್ಯಾ, ಈ ನೋಟ ದೊಡ್ಡದೊ ಪ್ರೇಮ ಪ್ರೀತಿ ದೊಡ್ಡದೊ?

ಭಿಕ್ಷುಕ : ನೋಟ ದೊಡ್ಡದರಿ.
(ಎನ್ನುತ್ತ ಆಸೆಬುರುಕತನದಿಂದ ಹಿಮ್ಮೇಳನ ಹತ್ತಿರ ಹೋಗುವನು. ಹಿಮ್ಮೇಳದವನ ನೋಟಿನ ಕೈ ಎಲ್ಲೆಲ್ಲಿ ಆಡುತ್ತದೋ ಅಲ್ಲಲ್ಲಿ ಹೋಗುವನು. ಕೊನೆಗೆ ಹಿಮ್ಮೇಳ ಅವನಿಗೆ ನೋಟು ಕೊಡುವನು. ನೋಟು ಸಿಕ್ಕೊಡನೆ ಭಿಕ್ಷುಕ ಮೈ ತುಂಬಿದಂತೆ ನಡಗುತ್ತ ಸೆಟೆದು ಹೆಮ್ಮೆ ಸೊಕ್ಕುಗಳಿಂದ ಬೀಗಿ ನಿಲ್ಲುವನು.)

ಭಿಕ್ಷುಕ : ಯಾವನೋ ಅವನು? ಪ್ರೇಮ ದೊಡ್ಡದು ಅಂದವನು?

ಹಿಮ್ಮೇಳ : ಇವರೆ, ಇವರೆ.
(ಎಂದು ಕಥೆಗಾರನನ್ನು ತೋರಿಸುವನು. ಭಿಕ್ಷುಕ ಕಥೆಗಾರನನ್ನೇ ದುರುಗಟ್ಟಿ ನೋಡುತ್ತ)

ಭಿಕ್ಷುಕ : ಬೋಳೀಮಗನೆ….

ಹಿಮ್ಮೇಳ : ಎಲೀ ಇವನ!

ಭಿಕ್ಷುಕ : (ಹಿಮ್ಮೇಳದವನಿಗೆ) ಅಯೋಗ್ಯ ನನ ಮಗನೆ.

ಮೇಳ : (ಆಶ್ಚರ್ಯದಿಂದ) ಛೇ ಛೇ!

ಭಿಕ್ಷುಕ : (ಮೇಳಕ್ಕೆ) ನಾಯೀಮಕ್ಕಳ್ರಾ…
(ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಅವನು ಹಾಗೇ ಒದರುತ್ತ ನಿಂತಾಗ ಹಿಮ್ಮೇಳ ಹಿಂದಿನಿಂದ ಹೋಗಿ ಅವನನ್ನು ತೆಕ್ಕೆ ಹಾಯುತ್ತಾನೆ. ಬೇರೆ ಮೇಳದವರು ಅವನ ಬಳಿಯಿದ್ದ ನೋಟು ಕಸಿಯುತ್ತಾರೆ. ಭಿಕ್ಷುಕ ಈಗ ಮತ್ತೆ ಮೊದಲಿನಂತೆ ವಿನಯಶಾಲಿಯಾಗುತ್ತಾನೆ.)

ಭಿಕ್ಷುಕ : ಹೌಂದರಿ. ಪ್ರೇಮವೇ ದೊಡ್ಡದು. ಪ್ರೀತೀನೇ ದೊಡ್ಡದು.
(ಎನ್ನುತ್ತ ಹೋಗಿ ಮೇಳದಲ್ಲಿ ಸೇರಿಕೊಳ್ಳುತ್ತಾನೆ.)

ಹಿಮ್ಮೇಳ : ನೋಡಿದ್ಯಾ ಗುರುವೇ?

ಕಥೆಗಾರ : ಆಯ್ತಪ. ದುಡ್ಡೂ ದೊಡ್ಡದಿರಭೌದು. ಆದ್ದರಿಂದ ಈ ಹೊತ್ತಿನ ದಿವಸ, ನಾವು ಪ್ರೇಮ ಮತ್ತು ದುಡ್ಡು ಎರಡೂ ಇರುವಂಥಾ ಕತೀ ಹೇಳೋಣ. ಆದೀತೋ?

ಹಿಮ್ಮೇಳ : ಹಿಂಗ ಬರ್ರಿ ಹಾದಿಗೆ. ಇನ್ನ ಅದೇನ ಹೇಳ್ತಿರೋ ಹೇಳ್ರಿ,-

ಮೇಳ : ಶರಣು ಗುರುವೆ ಶರಣು ಬಂದೆವೋ
ನಿನ್ನಡಿಗೆ ಬಾಗಿ
ಹಾಡಿಗೊದಗು ಶಿವನೆ ಎಂದೆವೋ||

ಕರಗಳೆತ್ತಿ ಕೈಯ ಮುಗಿದೆವೋ
ಸಂಗಯ್ಯ ಸ್ವಾಮಿ
ಬರದ ಹಾಡಿಗೊದಗು ಎಂದೆವೋ||

ಕಥೆಗಾರ : ಕತಿ ಹೇಳತೇವು ಕೇಳ್ರಿ ಶಿವಾ,-

ನಿಮ್ಮ ಎದುರಿಗೆ ಒಂದು ಪಟ್ಟಣ ಕಾಣತೈತಿ.

ಕಂದಾ ಅದ್ಯಾವ ಪಟ್ಟಣ?

ಹಿಮ್ಮೇಳ : ಬೆಂಕಿ ಪಟ್ಣ.

ಕಥೆಗಾರ : ಕಂದಾ ಹಂಗೆಲ್ಲಾ ನಿಂದಕದ ಮತಾಡಬಾರದು. ಅದು ಶಿವಾಪುರ. ಶಿವಾ ಪಟ್ಟಣದಲ್ಲಿ ಕರ್ತೃ ಸಾವ್ಕಾರ ಸೋಮಣ್ಣನ ಒಡೆತನ. ನಾಕು ರಾಜ್ಯ, ಎಂಟು ದಿಕ್ಕಿನಾಗಿರಲಿಲ್ಲ, ಅಂಥಾ ರಾಜರೇಖೆ ಇದ್ದಂಥಾ ಶ್ರೀಮಂತ. ಸಾಲಿಗೆ ಸಾವಿರ ಕಂಬ, ಮೂಲೆಗೆ ಮುನ್ನೂರು ಕಂಬಗಳಿರುವಂಥಾ ನೂರಂಕಣದ ಅರಮನೆ. ಮಹಡೀ ಮ್ಯಾಲ ಮಹಡಿ ಉಂಟು, ಮ್ಯಾಲ ಚಿನ್ನದ ಕಳಸ ಉಂಟು. ಮುತ್ತಿನ ಮುಂಬಾಗಿಲು, ರತ್ನದ ತೊಲೆಗಂಬ, ಹವಳದ ಹರಿಗೋಡೆ ಆ ಅರಮನೆಗೆ. ಊಟಾ ಮಾಡಾಕ ಚಿನ್ನದ ತಟ್ಟೆ, ಬೆಳ್ಳೀ ಗಿಂಡಿ. ತುಪ್ಪಾ ಅನ್ನಾ ಉಂಡು ಸುಪ್ಪತ್ತಿಗೆ ಮ್ಯಾಲಿರುವಂಥಾ ಸೋಮಣ್ಣನಿಗೆ ನೂರಾರು ಬಿರುದು : ಸಾವ್ಕಾರ, ಧನಿ, ಒಡೆಯಾ, ಶ್ರೀಮಂತ ಅಂತ. ಬಡವರಿಗೆ ಉಳಿಗಾಲಿವಿಲ್ಲಾ ತನಗ ಭಯ ಇಲ್ಲಾಂತ ಹುಟ್ಟುವಾಗಲೇ ವರ ಪಡೆದಾತ. ಮರೆತವರನ್ನ ಮುರೀತಿದ್ದ; ನಂಬಿದವರಿಗಿ ತುಂಬಿ ತುಳುಕತಿದ್ದ. ಅವ ನೋಡ್ರಿ ಶಿವಾ, ಭಾಳ ಚಂದ ಇದ್ದಾ,-

ಹಿಮ್ಮೇಳ : ಯಾಕಂದರ ಅವ ಶ್ರೀಮಂತ ಇದ್ದಾ.

ಕಥೆಗಾರ : ಊರಮಂದಿ ಹೆತ್ತಹೆ‌ಣ್ಣ ಮಕ್ಕಳ್ನ ಅವನ ಹೆಸರಿಗೆ ಮೀಸಲಿಡುತ್ತಿದ್ದರು,-

ಹಿಮ್ಮೇಳ : ಯಾಕಂದರ ಅವನ ಹಂತ್ಯಾಕ ರೊಕ್ಕ ಇತ್ತು.

ಕಥೆಗಾರ : ಜೀತಾ ನಿಂತು ಬಿತ್ತಿದ ಬೆಳೆ ಮೀಸಲಾ ಇಡತಿದ್ದರು,-

ಹಿಮ್ಮೇಳ : ಯಾಕಂದರ ಅವನ ಹಂತ್ಯಾಕ ನಾಯಿಗಳಿದ್ದುವು.

ಕಥೆಗಾರ : ನೋಡ್ರಿ ಶಿವಾ, ಅವನ ಹಂತ್ಯಾಕೊಬ್ಬ ಆಳಮಗ ಇದ್ದಾ,-

ಹಿಮ್ಮೇಳ : ಅಂದರ ಸರ್ವಂಟ್, ಸರ್ವಂಟಿದ್ದಾ,

ಕಥೆಗಾರ : ಉಣ್ಣಾಕ ಅನ್ನ ಇರಲಿಲ್ಲ, ಉಡಾಕ ಬಟ್ಟೆ ಇರಲಿಲ್ಲ, ಬಡವ.

ಹಿಮ್ಮೇಳ : ಥೂ ಅವನ ಹಟ್ಟಿ ಹಾಳಾಗಲಿ.

ಕಥೆಗಾರ : ಹುಟ್ಟಿದಾಗಿಂದ ಮುಖ ತೊಳೆದವನಲ್ಲ, ಮೈ ತುಂಬ ಮೂರು ಕೋಟಿ ನೊಣ ಮುತ್ತಿಕೊಂಡು ಗತಗತ ನಾರತಿದ್ದ.

ಹಿಮ್ಮೇಳ : ಥೂ ಅವನ ಇರೋ ಕೊಟ್ಟಿಗಿ ಹಾಳಾಗಲಿ.

ಕಥೆಗಾರ : ಬೆನ್ನಾಗ ಬಲ ಇರಲಿಲ್ಲ, ಸೆಟದೇನಂದರ ಎದಿ ಇರಲಿಲ್ಲ. ಯಾವತ್ತೂ ಬಗ್ಗಿಕೊಂಡs ಇರತಿದ್ದ. ಹಿಂಗಾಗಿ ಸಾವ್ಕಾರ ಸೋಮಣ್ಣನ ಪಾದಾ ಕಂಡಿದ್ನs ಹೊರತು ಮೋತೀ ಕಂಡಿರಲಿಲ್ಲ. ಹಡದವರಿರಲಿಲ್ಲ, ಮನೀ ಇಲ್ಲ, ಒಂದ ವಿಳಾಸ ಅಂತ ಇರಲಿಲ್ಲಾ, ಅಷ್ಟ ಅಲ್ಲ, ಅವಗೊಂದ ಹೆಸರs ಇರಲಿಲ್ಲ. ಅದಕ್ಕs ಸಾವ್ಕಾರ ಸೋಮಣ್ಣನವರು ದಯಮಾಡಿ ಅವನಿಗೊಂದು ಹೆಸರ ಇಟ್ಟಿದ್ದರು, ಅದೇನಪಾ ಅಂದರ,-

ಹಿಮ್ಮೇಳ : ನಾಯೀ ಮಗಾ.

ಕಥೆಗಾರ : ಯಾಕಂದರ ಅವ ನಾಯೀ ಹಾಂಗ ಸ್ವಾಮಿನಿಷ್ಠ ಇದ್ದ. ಇಂಥಾ ನಾಯೀಕಥೀ ಹೇಳತೇವು ಕೇಳ್ರಿ ಶಿವಾ,-

ಒಂದು ದಿನಾ ಸಾವ್ಕಾರ ಸೋಮಣ್ಣನವರ ಮಾತೋಶ್ರೀ ಅವರು ಮಗನಿಗೆ ಹೇಳ್ತಾರ,-
(ಸೋಮಣ್ಣನ ಮನೆ, ತಾಯಿ ಹಾಸಿಗೆಯಲ್ಲಿ ಮಲಗಿದ್ದಾಳೆ. ಇನ್ನೊಂದು ಬದಿಗೆ ಸೋಮಣ್ಣ ಕನ್ನಡಿ ನೋಡಿಕೊಳ್ಳುತ್ತ ಶೃಂಗಾರವಾಗುತ್ತಿದ್ದಾನೆ.)

ತಾಯಿ : ಮಗನೇ ಸೋಮಣ್ಣಾ,

ಸೋಮಣ್ಣ : ಯಾಕೆವ್ವಾ?

ತಾಯಿ : ಮಗನೇ ನಿನ್ನ ವಾರಿಗೆಯ ಹೆಂಡತಿ ತೌರಿಗೆ ಹೋಗಿ ನಾಕೆಂಟ ತಿಂಗಳಾಯ್ತಲ್ಲಪ.

ಸೋಮಣ್ಣ : ಹೌಂದಲ್ಲವ.

ತಾಯಿ : ನಾ ಮುದುಕಿ. ಕಾಲಾಗ ಶಕ್ತಿ ಇಲ್ಲ. ಕಣ್ಣ ಕಾಣ್ಸಾಣಿಲ್ಲ. ನನ್ನ ಉಪಚಾರ ಮಾಡಾಕಾದರೂ ನಿನ್ನ ಹೇಂತಿ ಬೇಕಲ್ಲಪ.

ಸೋಮಣ್ಣ : ಹೌಂದಲ್ಲಪ.

ತಾಯಿ : ವಯಸ್ಸಾದರೂ ನಿನ್ನ ಭಾನಗಡಿಯೇನೂ ಕಡಿಮ್ಯಾಗಲಿಲ್ಲ. ನಿನ್ನ ಪಾಪ ದಿನದಿನಕ್ಕ….

ಸೋಮಣ್ಣ : ನನ್ನ ಪಾಪ ಒಂದನೂರಾ ಎಂಟಸಲ ಎಣಿಸೀದಿ ಬೇ.

ತಾಯಿ : ನೂರಾ ಒಂಬತ್ತನೇ ಬಾರೀ ಕೇಳು, ಹೋಗಿ ನಿನ್ನ ಹೆಂತೀನ ಕರತಾರಪ.

ಸೋಮಣ್ಣ : (ಮನೆಯಾಚಿಗಿರುವ ನಾಯೀಮಗನಿಗೆ)

ಏ ನಾಯೀಮಗನs ಗಾಡಿಗಿ ಸವಾರಿ ಬಿಗದೇನೊ?

ನಾಯೀಮಗ : (ಹೊರಗಿನಿಂದ) ಹೂನ್ರಿ.

ಸೋಮಣ್ಣ : ನಾ ಬರ್ತೀನಿಬೇ.

ತಾಯಿ : ನನ್ನ ಮಾತ ನಿವಾರಿಸಿ ಹೋಗಬ್ಯಾಡ.

ಸೋಮಣ್ಣ : ಹೇಂತೀ ಊರಿಗಿ ಹೋಗಿ ಕರಕೊಂಬಾ ಅನ್ನುವಾಕೀನೂ ನೀನs. ಹೊಂಟ ನಿಂತರ ಅಡ್ಡಬಾಯಿ ಹಾಕವಾಕೀನೂ ನೀನs. ಈಗೇನು ಹೋಗಂತೀಯೊ, ಬ್ಯಾಡಂತೀಯೊ? ಏ ನಾಯೇ, ಎತ್ತಿಗಿ ಹುರಿಗೆಜ್ಜಿ ಕಟ್ಟಿದೇನೊ?

ನಾಯೀಮಗ : (ಹೊರಗಿನಿಂದ) ಹೂನ್ರಿ.

ತಾಯಿ : ನಿನ್ನ ಪಾಪದ ಕೊಡ ತುಂಬಿ ಬಂದೈತೋ ಮಗನ.

ಸೋಮಣ್ಣ : ಆಯ್ತು, ನೀ ಎಣಿಸಿದಾಗೊಮ್ಮಿ ಪಾಪದ ಅಂಕಿ ಹೆಚ್ಚುಕಮ್ಮಿ ಆಗತದ. ಬರೋಬ್ಬರಿ ಎಣಿಸು. ಬೇಕಾದರ ನಾನs ಹೇಳಿರತೀನಿs ಇಲ್ಲೀತನಕ ನಿನ್ನ ಲೆಕ್ಕದ ಪ್ರಕಾರ ನಾ ಮಾಡಿದ ಪಾಪ ತೊಂಬತ್ತೊಂಬತ್ತು. ಹೋಗಿ ಬರೋದರೊಳಗ ನಾಕೆಂಟು ಸೇರಿಸಬ್ಯಾಡ. ನಿನಗ ಬರೋಬರಿ ಲೆಕ್ಕಾ ಇಡಾಕ ಬರೂದs ಇಲ್ಲ. ಏ, ನಾಯೀಮಗನs,-

ನಾಯೀಮಗ : (ಹೊರಗಿನಿಂದ) ಓರಿ,

ತಾಯಿ : ಸೋಮು….

ಸೋಮಣ್ಣ : ಮತ್ತೇನಬೆ? ಒಂದನೂರು ಪೂರಾ ಆಯ್ತೇನು? ಜೋರಿನಿಂದ ಉಸಿರಾಡಿದರೂ ಪಾಪ ಅಂತಿ.

ತಾಯಿ : ಹೌಂದು, ಇಂತ ಹರೀವತ್ತ ಚೆಲಿವೀ ಗಂಡ ಬಂದಿದ್ದ.

ಸೋಮಣ್ಣ : ಹೌಂದ? ಯಾರವ?

ತಾಯಿ : ನೀ ಇತ್ತೀಚೆ ಕೆಡಿಸಿದ್ದರಿಂದ ಬಾವೀ ಬಿದ್ದ ಸತ್ತಳಲ್ಲ. ಆಕೀ ಗಂಡ.

ಸೋಮಣ್ಣ : ಛೇ ಛೇ ಏನಂತ ಮಾತಾಡ್ತೀಬೆ?

ತಾಯಿ : ಇನ್ನೊಬ್ಬರ ಜೀವದ ಜೋಡಿ ಆಟ ಆಡಬಾರದೋ ಮಗನs. ಬಡವರs ಇರಲಿ, ಅವರಿಗೂ ‌‌ಜೀವಾ ಇರತೈತಿ. ಮಾಡೋ ಕಾರಭಾರ ಮಾಡಿದಿ, ಚೆಲಿವಿ ಸತ್ತಹೋದ್ಲು. ಆಕೀ ಗಂಡ ಅರೀದವರ್ಹಾಂಗ ತನ್ನ ಪಾಡಿಗಿ ತಾ ತಣ್ಣಗಿದ್ದರೂ ಚಾಕರಿ ಬಿಡಿಸಿ ಹೊರಗ ಹಾಕಿದಿ. ತಿಳೀಬಾರದ? ಇಷ್ಟ ಮಂದಿ ಜೀತದವರಿಗಿ ಅನ್ನಾ ಹಾಕತಿ, ಅವಗೂ ಹಾಕಿದರ ನೀ ಆಳೋ ರಾಜ್ಯ ಹಾಳಾಗೋದಿಲ್ಲ. ನಿನ್ನ ಪುಂಡಾಟವನ್ನ ಪಾಪ, ಅವನೇನೂ ಮನಸ್ಸಿಗಿ ಹಚ್ಚಿಕೊಂಡಿಲ್ಲ. ಚಾಕರಿಗೆ ಇಟ್ಟಕ. ನಾ ಮಾತ ಕೊಟ್ಟೀನಿ. ನನ್ನ ಮಾತ ಉಳಸಾಕಾದರೂ ಅವನ ಗಂಜೀ ಆಧಾರ ತಪ್ಪಿಸಬ್ಯಾಡ.

ಸೋಮಣ್ಣ : ಚೆಲಿವಿ ಯಾಕ ಸತ್ತಳೋ ಏನ ಕತಿಯೊ! ಎಲ್ಲಾದಕ್ಕೂ ನಾನs ಜವಾಬ್ದಾರಂತೀಯಲ್ಲಬೆ? ನೀ ಇಂಥಾದ್ದರಾಗೆಲ್ಲ ತಲೀ ಹಾಕಬ್ಯಾಡ. ದನಿ ತಗದ ಅತ್ತರ ಎಂಥವರು ಕಣ್ಣೀರ ಒರಸ್ತಾರಂತ ಗೊತ್ತದ ಅವರಿಗೆ. ಏ ನಾಯೀಮಗನs…
(ಹೊರಗಿನಿಂದ ನಾಯೀಮಗ ಬರುವನು.)

ನಾಯೀಮಗನs, ನಾ ಇಲ್ಲಿ ಸಾಯ್ತಾ ಇದೀನಿ, ನೀ ಅಲ್ಲಿ ಆಕಳಸ್ತಾ ನಿಂತೀದಿಯೇನೊ?
(ನಾಯೀಮಗನನ್ನು ಒದೆಯುವನು.)

ತಾಯಿ : ಯಾರದೋ ಸಿಟ್ಟ ಯಾರದೋ ಮ್ಯಾಲ ಹಾಕಬ್ಯಾಡ. ಈಗೇನು, ಅವನ್ನ ಚಾಕರಿ ಇಟ್ಟಕೊಳ್ತೀಯೋ ಇಲ್ಲೊ?

ಸೋಮಣ್ಣ : ಯಾಕ? ನಾ ಮಾಡಿದ ಪಾಪ ಯಾವತ್ತೂ ನನ್ನ ಕಣ್ಣ ಮುಂದs ಇರಲೆಂತ?

ತಾಯಿ : ಈಗ ಆ ಹುಡುಗ್ಗ ಏನ್ಹೇಳಲಿ?

ಸೋಮಣ್ಣ : ಸಾಯನ್ನು.

ತಾಯಿ : ಹಾಂಗಿದ್ದರ ಹೇಂತಿನ ಕೊಂದಿ. ಗಂಡನ್ನೂ ನೀನs ಕೊಂದಬಿಡು.

ಸೋಮಣ್ಣ : ಸಾಯೋದಕ್ಕ ಸಾವಿರ ಹಾದಿ ಅದಾವ. ಅದರಾಗ ಸಮೀಪದ್ದೊಂದ ಆರಿಸಿಕೊಂಡು ಸಾಯನ್ನು.

ತಾಯಿ : ತಿಳದೂ ತಿಳದೂ ಇಂಥಾ ಮಾತಾಡ್ತಿ.. ಇವೆಲ್ಲಾ ನಿನ್ನ ವಿನಾಶ ಕಾಲದಾಗ ಆಡೋ ಮಾತೋ ಮಗನs!
(ಕಣ್ಣೀರು ಹಾಕುವಳು. ಸೋಮಣ್ಣ ಬೇಸರದಿಂದ ಹೊರಡುವನು. ಎದುರಿಗೆ ಮಾರೋತಿ ಬರುವನು. ನೋಡಿ ಅಪಶಕುನವೆಂಬಂತೆ ಸೋಮಣ್ಣ ಅಲ್ಲೇ ನಿಲ್ಲುವನು.)

ಸೋಮಣ್ಣ : ಯಾವ ಬೋಳೀಮಗನೊ ಇವನು?

ನಾಯೀಮಗ : ಇವನೇ ಚೆಲಿವೀ ಗಂಡ, ಮಾರೋತಿ.

ಸೋಮಣ್ಣ : ಆಯ್ತಬೇ, ನೀ ಹೇಳ್ತೀಯಂತ ಇವನ್ನ ಚಾಕರಿ ಇಟ್ಟುಕೊಳ್ತೀನಿ, ಆಯ್ತ? ಮನ್ಯಾಗಿನ ದನಕರಾ ನೋಡಿಕೊಂಡಿರೊ. ನಾಯೀಮಗs ನಡಿಯೊ. (ಹೊರಡುವರು. ಮೇಳದವರು ಹಾಡುತ್ತ ಬಂದು ಹಿಂದಿನ ದೃಶ್ಯವನ್ನು ಮುಚ್ಚುವರು.)