ಮೇಳ : ಸೋಮಣ್ಣಂಬೊ ಸಾವ್ಕಾರ
ಚಕ್ಕಡಿ ಏರಿ ಹೊಂಟದಾರ
ಬೆರಗಿನಿಂದ ಮಂದಿ ಹಾದಿ ಬಿಟ್ಟಾರಲ್ಲಾ |
ಕವಿಗಾರೆಲ್ಲಾ ಹಾಡಿ ಹೊಗಳಿ ಹರಸ್ಯಾರಲ್ಲಾ | ಭಲೆ
ಸೂಸಗಾಳಿ ಬೀಸ್ಯಾವಲ್ಲ ಖುಶಿಯಾಲಾ | ಹಾ
ಬಿಸಿಗಾಳಿ ಮೂಡ್ಯಾವೋ ಶಿವನೆ |
ಬಡವರ ಉಸಿರೊಳಗೊ ||

ಎತ್ತಿನ ಕಣ್ಣು ನೆತ್ಯಾಗೇರಿ
ಕಾಣಲಿಲ್ಲ ಶಿವನೆ ದಾರಿ
ಎಳಿಸಸಿ ಕಾಲಾಗ್ಹಾಕಿ ತುಳದಾವಲ್ಲಾ |
ಹಾಡೋ ಹಕ್ಕಿ ಆದಾವಲ್ಲ ಕಂಗಾಲಾ | ಎಲಾ
ಏನ ಬಂತೊ ಎಂಥಾ ಕಾಲ ಹುಯ್ಯಾಲಾ | ಹಾ
ಬಿಸಿಗಾಳಿ ಮೂಡ್ಯಾವೋ ಶಿವನೆ
ಬಡವರ ಉಸಿರೊಳಗೊ ||

ಕಥೆಗಾರ : ನೋಡ್ರಿ ಶಿವಾ, ಈ ಪ್ರಕಾರ ಸಾವ್ಕಾರ ಸೋಮಣ್ಣನವರು ಸಕಲ ಸೌಭಾಗ್ಯ ಸಮೇತ ತಮ್ಮ ಸೌಭಾಗ್ಯವತೀನ ಕರಕೊಂಬಾರಾಕ ಹೊಂಟಿರೋ ವ್ಯಾಳ್ಯಾದಲ್ಲಿ, ದಾರ್ಯಾಗ ಒಂದ ಹಳ್ಳಿ ಸಿಕ್ಕಿತು. ಅಲ್ಲಿ ಎಡಗೈ ದಾಸರು ಆಟಾ ಹೂಡ್ಯಾರ್ರಿ.

ಹಿಮ್ಮೇಳ : ಅಲ್ಲ ಗುರುವೆ, ಆ ಮ್ಯಾಳದಾಗಿನ ದಾಸಿ ಭಾಳ ಚಂದ ಅದಾಳಂತ, ಖರೆ ಏನ್ರಿ?

ಕಥೆಗಾರ : ಕಂದಾ, ಆಕೀ ಚೆಲಿವಿಕಿ ಹೆಂಗ ಹೊಗಳಲಿ? ಸೋಳಾ ವರ್ಷದಾಕಿ, ಬತ್ತೀಸ ಲಕ್ಷಣಾದಾಕಿ, ಕೋಕಿಲಧಾಂಗ ಹಾಡುವಾಕಿ, ನವಿಲಿನ್ಹಾಂಗ ಕುಣೀವಾಕಿ, ನಿಂಬೀ ಹಣ್ಣಿನ್ಹಾಂಗ ಬಾಗಿದಾಕಿ. ಆಹಾ ಕಣ್ಣಿನ ನೋಟ, ಅಬಬಬಾ, -ಕಂದಾ ಮಸದ ಕತ್ತಿ! ಹಾಕಿ ಎಳದರ ಹೊಟ್ಯಾಗಿನ ಕರಳ ಕಿತ್ತ ಹೊರಗ ಬರಬೇಕು! (ಹೀಗೆ ಹೇಳುತ್ತ ಮೇಳದವರು ಮರೆಯಾಗುತ್ತಾರೆ. ಕೂಡಿದ ಪ್ರೇಕ್ಷಕರಲ್ಲಿ ಹಗಲು ವೇಷ ಹಾಕುವ ಎಡಗೈ ದಾಸರು ತಮ್ಮ ಬಯಲಾಟ ಪ್ರದರ್ಶಿಸುತ್ತಿದ್ದಾರೆ. ಅಷ್ಟರಲ್ಲಿ ಸೋಮಣ್ಣನ ಚಕ್ಕಡಿ ಅಲ್ಲಿಗೆ ಬರುತ್ತದೆ. ಸೋಮಣ್ಣ ಚಕ್ಕಡಿಯಿಂದಿಳಿದು ಬಯಲಾಟ ನೋಡತೊಡಗುತ್ತಾನೆ.)

ನಾಯಕಿ : ಸಂಗೀತಾ ಸಂಗೀತಾ
ಸಂಗೀತಾ ಎಂಬೋದು ನಮ್ಮ ಹೆಸರ
ಕೇಳಯ್ಯ ಹೇಳೂವೆ ಮಜಕೂರ ||

ನಟುವಾನ : ಉನ್ನತ ಹರುಷದಿಂದ ಚೆನ್ನಾಗ ಕುಣಿಯುತ್ತ ಬಂದ ಚೆನ್ನಿಗಳೇ, ನಿನ್ನ ನಾಮಾಂಕಿತವೇನು? ನಿನ್ನ ಮಹಿಮೆ ಎಂಥಾದ್ದು? ಚಂದದಿಂದ ಹೇಳುವಂಥವಳಾಗು.

ನಾಯಕಿ : ಮನ್ನಣೆಯಿಂದ ಎನ್ನ ಸನ್ನಿಧಿಯಲ್ಲಿ ನಿಂತು ಕೇಳುವ ಸೂತ್ರಧಾರನೇ, ಹುಟ್ಟಿದ ಹುಳು ಮೊದಲು, ಮನುಷ್ಯ ಕಡೆಯಾಗಿ, ಎಲ್ಲರ ಒಡಲಲ್ಲಿ ಗಡಿಬಿಡಿ ಹುಟ್ಟಿಸಿ ಅವರ ಎದೆ ಬಡಿದುಕೊಳ್ಳುವ ಹಾಗೆ ಮಾಡುವಂಥಾ ಪ್ರೇಮ ನಾನು! ಹೇಡಿಯಾದವನು ಕೂಡ ನನ್ನ ಕಂಡರೆ ಸಾಕು, ಉಬ್ಬುಬ್ಬಿ ವೀರ ಬೊಬ್ಬೆ ಹಾಕಿ, ಅಬ್ಬರಿಸಿ ಆರ್ಭಟಿಸಿ ಶತ್ರುಗಳನ್ನು ಗೆಲ್ಲುವಂತೆ ಮಾಡುವಂಥ ಶಕ್ತಿ ಪ್ರೀತಿ ನಾನು! ನನ್ನಿಂದ ಕುರೂಪಿ ಸುರೂಪಿ ಆಗತಾನ. ಮನಿಶ್ಯಾ ದೇವರಾಗತಾನ. ಅಯ್ಯಾ ನಟ್ಟುವಾನಾ, ಹೆಣ್ಣು ಗಂಡೆನ್ನದೆ ಎಲ್ಲರ ಮನಸ್ಸಿನಲ್ಲಿ ಶ್ರಮವಿಲ್ಲದೆ ಕ್ರಮದಿಂದ ಕಾರುಬಾರು ಮಾಡುವಂಥಾ ದೇವಿ ನಾನು! ನನಗ  ಬಂದು ಸಂಗೀತಾ, ಸಂಗೀತಾ, ಸಂಗೀತಾ-ಅಂತಾರ ನೋಡು.

ನಟುವಾನ : ಏನವಾ ನಿನ್ನ ಹೆಸರು ಸಂಗೀತಾ ಅಂತ ನನಗಾದರು ತಿಳೀತು, ಕುಂತ ಸಭಾಕಾದರೂ ತಿಳಿದ ಬಂತ. ಇನ್ನು ನಿನ್ನ ಮಹಿಮಾ ಏನೈತಿ-

ಅದನ್ನಷ್ಟು ತಿಳಿಸುವಂಥವಳಾಗು.

ನಾಯಕಿ : ಅಯ್ಯಾ ನಟುವಾನ, ನನ್ನ ಹಾಡು ಕೇಳಿ ಮುದುಕರು ಪ್ರಾಯದ ಹುಡುಗರಾಗುತ್ತಾರೆ.

ನಟುವಾನ : ಇಷ್ಟೇನೊ? ತಡಿ ತಡಿ. ಲೇ ಉಳ್ಳಾಗಡ್ಡಿ,
(ಮೇಳದಿಂದ ಅವನ ಹೆಂಡತಿ ದಾಸಿ ಬರುವಳು.)

ದಾಸಿ : ಏನ ಸ್ವಾಮಿ?

ನಟುವಾನು : ಅವ್ವಾ ಸಂಗೀತಾ, ಇಕಾ ಇಲ್ಲಿದ್ದಾಳಲ್ಲಾ, ಉಳ್ಳಾಗಡ್ಡಿ, ಇವಳ ಬಳಿ ಬೇಕಾದಂಥಾ ಪ್ರಾಯದ ಹುಡುಗನ್ನ ಕಳಿಸು, ಒಂದೇ ಗಂಟೆಯಲ್ಲಿ ಮುದುಕನನ್ನಾಗಿ ಮಾಡಿಬಿಡುತ್ತಾಳೆ!
(ಪ್ರೇಕ್ಷಕರು ಚಪ್ಪಾಳೆ ತಟ್ಟಿ ನಗುತ್ತಾರೆ. ಇಲ್ಲಿಗೆ ಸೋಗು ಮುಗಿಸಿ ದಾಸ ಅಂದರೆ ನಟುವಯ್ಯ ಕಾಣಿಕೆ ಇಸಿದುಕೊಳ್ಳತೊಡುಗುತ್ತಾನೆ. ಜನ ಚದುರತೊಡಗುತ್ತಾರೆ. ಸೋಮಣ್ಣ ಮೊದಲ ನೋಟಕ್ಕೇ ನಾಯಕಿಯ ಸೌಂದರ್ಯದಿಂದ ಪರವಶನಾಗಿದ್ದಾನೆ.)

ಸೋಮಣ್ಣ : ಸಂಗೀತಾ! ಸಂಗೀತಾ! ಮಗನs…

ನಾಯೀಮಗ : ಎಪಾ.

ಸೋಮಣ್ಣ : ಇದ್ಯಾವುದೋ ವಿಸ್ಕಿ ಹೆಸರ ಇದ್ಧಾಂಗ ಐತೆಲ್ಲೊ!

ನಾಯೀಮಗ : ಎಪಾ!

ಸೋಮಣ್ಣ : ಏನ ಹೆಸರ! ಏನ ರೂಪ! ಸಣ್ಣ ನಡ ಏನ! ಖಿಲಖಿಲ ನಗಿಯೇನ! ಮಗನs ಹೊಕ್ಕಳೋ ಹೊಕ್ಕಳು!

ನಾಯೀಮಗ : ಎಪೋ!

ಸೋಮಣ್ಣ : ಎದಿ ಬಾಗಲಾ ತಗದ ಒಳಗ ಹೊಕ್ಕಳು!

ನಾಯೀಮಗ : ಎಪೊ.

ಸೋಮಣ್ಣ : ಏನವಳ ಸೊಲ್ಲ, ಅಚ್ಚಿನ ಬೆಲ್ಲ! ಹಚ್ಚಿದಳೋ ಮಗನ ಹಚ್ಚಿದಳು!

ನಾಯೀಮಗ : ಎಪಾ!

ಸೋಮಣ್ಣ : ಹುಚ್ಚ ಹಚ್ಚಿದಳೊ! ಕಾಮನ ಬಾಣಾ, ಹತ್ಯಾವೋ ಬೆನ್ನಾ, ನಾಯೀಮಗನೂ ಮಾಡಲಿನ್ನೇನಾ?

ನಾಯೀಮಗ : ಹೆಸರ ಭಾಳ ಚಂದ ಇದ್ದರ ನಿಮ್ಮ ನಾಯೀಗೂ ಅದs ಹೆಸರ ಇಟ್ಟರಾಯ್ತು ಬಿಡರೀಯೆಪ.

ಸೋಮಣ್ಣ : ಎಲಾ ಮಗನs ಬಾರೋ ಇಲ್ಲಿ.

ನಾಯೀಮಗನ ಕೈ ತಗೊಂಡು ಎನ್ನ (ಎದೆಯ ಮೇಲಿಟ್ಟುಕೊಂಡು)

ಜೋರಿನಿಂದ ಸಂಗೀತ ಅನ್ನು. ನನ್ನ ಎದಿ ಹೆಂಗ ಬಡಕೋತದ ನೋಡು. ಅನ್ನೊ ಸಂಗೀತಾ ಅಂತ.

ನಾಯೀಮಗ : ಸಂಗೀತಾ,-

ಸೋಮಣ್ಣ : ಹೌಂದ? ಎಂದಿ ಹೆಂಗ ಹಾರತೈತಿ!

ನಾಯೀಮಗ : ಹೌಂದ್ರಿ ಡಬ್‌ಡಬ್ ಅಂತೈತಿ!

ಸೋಮಣ್ಣ : ಈಗಿಂದೀಗ ಹೋಗು. ಅಕಾ, ಆ ಮುದುಕ ರೊಕ್ಕಾ ಇಸಕೊಳ್ಳಾಕ ಹತ್ಯಾನಲ್ಲ, ಅವನ್ನ ಕರಕೊಂಬಾ.
(ನಾಯೀಮಗ ಹೋಗಿ ದಾಸನನ್ನು ಕರೆತರುವನು. ಅಲ್ಲೀತನಕ ಇವನು ಎದೆಯ ಮೇಲೆ ಕೈ ಇಟ್ಟುಕೊಂಡು ಸಂಗೀತಾ ಸಂಗೀತಾ ಎಂದು ಹೇಳುತ್ತಿರುವನು.)

ದಾಸ : ನಮಸ್ಕಾರರೀ ಸಾವ್ಕಾರ, ಶ್ರೀಮಂತರ.

ಸೋಮಣ್ಣ : ಏ ದಾಸ, ದಿನಾ ನಿನ್ನ ಆಟಕ್ಕ ಎಷ್ಟು ರೂಪಾಯಿ ಸಿಗತದನೊ?

ದಾಸ : ನಾಕೆಂಟ ಸಿಗಬೇಕಾದರ ಕಣ್ಣೀರ ಕಪಾಳಿಗಿ ಬರತಾವರಿ. ಏನೊ, ನಿಮ್ಮಂಥವರು ಸಿಕ್ಕ ದಿವಸ ಹತ್ತೋ ಹದಿನೈದೋ ಸಿಗತಾವರಿ.

ಸೋಮಣ್ಣ : ದಿನಕ್ಕ ನೂರ್ರೂಪಾಯಿ ಕೊಡತೀನಿ. ಬರ್ತಿಯೇನು?

ದಾಸ : (ನಂಬದೆ) ಬಡವರ ಜೋಡೀ ನೀವೂ ಚ್ಯಾಷ್ಟೀ ಮಾಡ್ತಿರ‍್ರೇನ್ರಿ ಸಾವ್ಕಾರ್ರ?

ಸೋಮಣ್ಣ : ನಂಬಿಕಿಲ್ಲೇನು? ತಗೊ ನೂರು.
(ನೂರರ ನೋಟು ಕೊಡುವನು. ದಾಸ ತುಂಬ ಉತ್ಸಾಹಿತನಾಗುತ್ತಾನೆ.)

ದಾಸ : ಏ ಸಾವಂತ್ರೀಬಾಯಿ, ಸಾವ್ಕಾರ್ರು ನೂರ್ರೂಪಾಯಿ ಕೊಟ್ಟರು!

ಸಾವಂತ್ರಿ : (ಓಡಿಬಂದು) ತೋರಿಸು.

ದಾಸ : (ತೋರಿಸುತ್ತ) ದಿನಾ ನೂರ ಕೊಡತಾರಂತ.

ಸಾವಂತ್ರಿ : ಖರೆ ಏನ್ರಿ ಸಾವ್ಕಾರ್ರ?

ಸೋಮಣ್ಣ : ಒಂದು ತಿಂಗಳ ರೊಕ್ಕಾ ಈಗs ಕೊಡಂದೇನು?

ಸಾವಂತ್ರಿ : ಬ್ಯಾಡ್ರೀಯೆಪ, ಸತ್ತಗಿತ್ತಾನು.

ಸೋಮಣ್ಣ : ಅದರ ಒಂದ ಕರಾರು. ದಿನಾ ನನ್ನ ಮನ್ಯಾಗs ಇರಬೇಕು. ನನ್ನ ಮುಂದs ಆಟ ಆಡಬೇಕು. ತಯಾರಿದ್ದೀಯೇನು?

ದಾಸ : ಹೂನ್ರಿ!

ಸೋಮಣ್ಣ : ಹೋಗಿ ಸಂಗೀತಾಗ ನಾ ನೂರ್ರೂಪಾಯಿ ಕೊಟ್ಟದ್ದ ಹೇಳು.

ದಾಸ : ಆಕೀ ಹೆಸರು ಸಂಗೀತಾ ಅಲ್ಲರಿ, ಶಾರಿ.

ಸೋಮಣ್ಣ : ಇಂದಿನಿಂದ ಆಕೀ ಹೆಸರು ಸಂಗೀತಾ!

ಸಾವಂತ್ರಿ : ಆಕೀ ಹೆಸರು ಅದಲ್ಲರಿ.

ದಾಸ : ಸುಮ್ಮನ ಬಾಯ್ಮುಚ್ಚಕೊಳ್ಳೇ. ಆ ಹೆಸರಿನಾಗ ಒಂದ ಬುಟ್ಟಿ ಲಾಭ ತುಂಬ್ಯಾವ, ಮರೀಬ್ಯಾಡ. ಹೌಂದ್ರೀಯೆಪ ಆಕೀ ಹೆಸರು ಸಂಗೀತಾ.

ಸೋಮಣ್ಣ : ಮಗಳೇನು?

ಸಾವಂತ್ರಿ : ಹೂನ್ರಿ.

ದಾಸ : ಮಗಳಲ್ಲರೀ ನನ್ನ ತಿ‌ಜೋರಿ! ಇನ್ನs ಮದಿವ್ಯಾಗಿಲ್ಲ.

ಸಾವಂತ್ರಿ : ಮದಿವ್ಯಾದರೂ ನಮ್ಮಲ್ಲಿ ಏನಡ್ಡೀಯಿಲ್ಲರಿ.

ದಾಸ : ಯಾಕಿಲ್ಲ? ಅಡ್ಡಿ ಐತಿ! ಆದರ ನಿಮಗೇನೂ ಅಡ್ಡಿಯಿಲ್ಲರಿ.

ಸಾವಂತ್ರಿ : ನನ್ನ ಮಗಳ ಸಲುವಾಗಿ ಎಷ್ಟಮಂದಿ ಸಾವ್ಕಾರ ಶ್ರೀಮಂತರು ನಿಟ್ಟುಸಿರು ಬಿಟ್ಟಾರ‍್ರೀ! ಆದರ…

ದಾಸ : ನಿಟ್ಟುಸಿರೂ ಬಿಡತಾರ, ಉಸರೂ ಬಿಡತಾರ, -ನನ್ನ ಪರವಾನಿಗಿ ಬೇಕಲ್ಲ! ನಿಮಗ ನನ್ನ ಪರವಾನಿಗಿ ಐತ್ರಿ!

ಸೋಮಣ್ಣ : ಹೊರಡೋಣಲ್ಲ?

ದಾಸ : ಹೂನ್ರಿ, ಹೋಗs ಸಾವಂತ್ರಿ, ಸಂಗೀತಾನ್ನ ಕರಕೊಂಬಾ ಹೋಗು.
(ಸಾವಂತ್ರಿ ಹೋಗುವಳು.)

ಸಂಗೀತಾನನ್ನ ಬೆಳೆಸಾಕ ಎಷ್ಟ ಖರ್ಚು ಮಾಡೇನಿ! ಹಾಡಾಕ, ಕುಣ್ಯಾಕ ಕಲಸಬೇಕಾದರ, ಛೇ ಛೇ, ಖರೆ ಹೇಳತೇನ್ರಿ ಸಾವ್ಕಾರ್ರs ಆ ಭಗವದ್ಗೀತಾ ಅಂತಾರಲ್ಲರೀ, ಅದರಲ್ಲಿರೋ ಹಂಗs ಈಕೀನ ಬೆಳಸಿದೇನ ನೋಡ್ರಿ.

ಸೋಮಣ್ಣ : ಭಗವದ್ಗೀತಾದಾಗ ಹೆಂಗಸನ್ನ ಹೆಂಗ ಬೆಳಸಬೇಕಂತ ಬರದ್ದಾರೇನು?

ದಾಸ : ಬರದಿಲ್ಲರಿ?

ಸೋಮಣ್ಣ : ಅದರಾಗ ಕುವರೀ ಹೆಂಗ ಬೆಳಸಬೇಕಂತ ಬರಧಾಂಗಿತ್ತು.

ದಾಸ : ಹೌಂದ ಹೌಂದರಿ, ಹಾಂಗs ಬೆಳಸೀನ್ನೋಡ್ರಿ!
(ಅಷ್ಟರಲ್ಲಿ ಸಂಗೀತಾ, ಸಾವಂತ್ರೀ ಹಾಗೂ ಮೇಳದ ಇನ್ನೊಬ್ಬ ನಾಗ ಎಲ್ಲರೂ ಆಟದ ಸಾಮಾನು ಸಮೇತ ಬರುವರು.)

ಸೋಮಣ್ಣ : ಏ ನಾಯೀಮಗನs ಚಕ್ಕಡೀ ಹೂಡು. ತಿರುಗಿ ಊರಿಗಿ ನಡಿ.

ನಾಯೀಮಗ : ನಿಮ್ಮ ಹೆಂಡತಿ ಊರಿಗೆ….

ಸೋಮಣ್ಣ : ಹೇಳಿದಷ್ಟ ಕೇಳು.
(ಹಾಡುತ್ತ ಬಂದ ಮೇಳ ಅವರನ್ನು ಮುಚ್ಚುತ್ತದೆ.)

ಮೇಳ : ಚಿತ್ತ ಚಂಚಲಾದವಯ್ಯ
ಚಿತ್ತಜಾನ ಉಪಟಳಕ್ಕ
ಗೊತ್ತ ಮರೆತು ತಿರುಗಿ ಹೊಂಟರೋ |

ಕಾಲತುದಿಯ ಮ್ಯಾಲ ನಿಂತು
ಹುಬ್ಬಗೈಯ ಹಚ್ಚಿಕೊಂಡು
ತೌರಿನಲ್ಲಿ ಮಡದಿ ನಿಂತಳೊ || ಹಾ ರಾಮ ರಾಮ
ನಿಂತಳೋ ನಿಂತಳೋ ಮಡದಿ ನಿಂತಳೊ ||

ಪ್ರೀತಿ ಎಂದರ್ಯಾಕೆ ನಕ್ಕಿ
ಹೊತ್ತಿ ಉರಿವ ಎದಿಯ ಬೆಂಕಿ
ಬೆಳಕಿನಾಗ ಏನ ಕಂಡಿಯೋ |
ಏನ ಬಯಸಿ ಏನ ಪಡದಿ
ಬಂದರ್ಯಾರು ಯಾರ ಕರಿದಿ
ಹಣ್ಣ ಹರಿದರ್ಯಾರು ತಿಂದರೋ | ಹಾ ರಾಮ ರಾಮ
ತಿಂದರೋ ತಿಂದರೋ ಹಣ್ಣ ತಿಂದರೋ ||

ಕಥೆಗಾರ : ಇನ್ನ ಮುಂದ ಕಲಿಯುಗದಾಗಿ ಕೌತುಕ ಹೇಳತೇವು, ಕೇಳಬೇಕ್ರಿ ಕುಂತ ಶಾಣೇರು : ಸಾವ್ಕಾರ ಸೋಮಣ್ಣನವರು ತಮ್ಮ ಅರ್ಧಾಂಗಿನ್ನ ಅಲ್ಲೇ ಬಿಟ್ಟು. ಶಾರೀನ್ನ ಕರಕೊಂಡು ಶಿವಾಪಟ್ಟಣಕ್ಕ ಬಂದರು. ಶಿವಾ ಬರೂದರೊಳಗ ಕತ್ತಲಾಗಿ ರಸ್ತಾದಾಗ ದೀಪ ಇರಲಿಲ್ಲ.

ಹಿಮ್ಮೇಳ : ಕರಂಟ ಹೋಗಿತ್ತೇನ್ರಿ?

ಕಥೆಗಾರ : ಹೌಂದಪ.

ಹಿಮ್ಮೇಳ : ಕತ್ತಲಾಗ ಭಾಳ ಗದ್ದಲ ಆಗತಾವ್ರಿ, ಹಿಂದ ನ್ಯೂಯಾರ್ಕದಾಗ…

ಕಥೆಗಾರ : ಅಲ್ಲೇನಾತಾಪ?

ಹಿಮ್ಮೇಳ ಹಿಂಗs ಒಮ್ಮಿ ಕರಂಟ ಹೋಗಿತ್ತರಿ. ಇಡೀ ಊರಾಗ ಕತ್ತಲಂದರ ಕತ್ತಲಿ! ಬೆರಳ ಚುಚ್ಚಿದರ ನೆಡಬೇಕು, ಅಂಥಾ ಕತ್ತಲಿ!

ಕಥೆಗಾರ : ಆಯ್ತಪ, ಆಮೇಲೇನಾಯ್ತು?

ಹಿಮ್ಮೇಳ : ಆಮ್ಯಾಲಂದರ…ಕರಂಟ ಬಂತರಿ.

ಕಥೆಗಾರ : ಇಷ್ಟsನ?

ಹಿಮ್ಮೇಳ : ಛೇ ಛೇ, ಇಷ್ಟs ಆಗಿದ್ದರ ನಾ ಯಾಕ ಹೇಳೇನ್ರಿ? ಕರಂಟ ಬಂದ ಮ್ಯಾಲ ನೋಡಿದರ ಬಿಳೀ ಹೆಂಗಸರೆಲ್ಲಾ ಕರೀ ನೀಗ್ರೊ ಮಂದೀನ್ನ ತಬ್ಬಿಕೊಂಡಿದ್ದರಂತ!

ಕಥೆಗಾರ : ಮುಗೀತೇನಪಾ ನಿಂದು?

ಹಿಮ್ಮೇಳ ಖರೇನರಿ. ನಿಮ್ಮಾಣಿ, ಪೇಪರದಾಗ ಬಂದಿತ್ತು.

ಕಥೆಗಾರ : ಆಯ್ತಪ, ಶಿವಾಪಟ್ಟಣದಾಗ ಹಂಗಾಗಲಿಲ್ಲ. ಬಡವರ ಗುಡಸಲದಾಗ ಎಣ್ಣೀ ದೀಪಿತ್ತು. ಅದರ ಬೆಳಕು ಗುಡಿಸಲಾ ಮೀರಿ ರಸ್ತಾದಾಗ ಚೆಲ್ಲವರಿದಿತ್ತು. ಬರೋಬರಿ ದಾರಿ ಬೇಕ? ತಗೊ ಬಡವರ ಬೆಳಕು. ಬ್ಯಾಡಂತೀಯ? ಕಣ್ಣ ಮುಚ್ಚಿಕೊಂಡ ಅಡ್ಡ ಹಾದೀ ಹಿಡಿ. ಏನಂತಿ?

ಹಿಮ್ಮೇಳ : ಮುಂದಿನ ಕತಿ ಹೇಳ್ರಿ.

ಕಥೆಗಾರ : ನೋಡ್ರಿ ಶಿವಾ, ಸಾವ್ಕಾರ ಸೋಮಣ್ಣನವರು ಬಡವರ ಬೆಳಕಿನಾಗ ತಮ್ಮ ಅರಮನೀಗಿ ಹೋದರು. ಅಲ್ಲಿ ಅವರ ಮಾತೋಶ್ರೀ ಅವರು ಸೊಸೀ ಬಂದಳಂತ ಖುಶಿಯಾಗಿ ಎದ್ದ ಬಂದರ ದೇಶದಾಗ ಹೆಸರಾದ ದಾಸಿ ಬಂದಿದ್ದಳು! ಆಕೀನ್ನ ಕಂಡು ಮಾತೋಶ್ರೀಯವರು ಹೇಸಿಕೊಂಡ ಹೇಳಿದರು : ಊರಿಗಿ ದೊಡ್ಡೋನು ಕೇರಿಗಿ ದೊಡ್ಡೋನು ಇಂಥಾ ಸಣ್ಣ ಕೆಲಸಾ ಮಾಡ್ತಾರೇನೋ ಮಗನೆ ತಕ್ಕಂಥ ಮಡದೀ ಬಿಟ್ಟು ಇದೆಲ್ಲೀ ಬೆಡಗೀನ ತಂದ್ಯೊ ಮಗನೆ? ಈ ವಯ್ಯಾರಿ ಘಿಲಘಿಲನೆ ಬರುವಾಗ ಸಾಲುದೀಪಗಳ್ಯಾರ್ಯಾವು, ಈಕಿನ್ಯಾಕ ಕರತಂದ್ಯೋ ಮಗನೆ? ನಮ್ಮ ಮನ್ಯಾಗ ಈಕಿ ಬ್ಯಾಡಂತ ಹೇಳಿ ತಮ್ಮ ಅರಮನಿ ಬಾಗಿಲಾ ಮುಚ್ಚಿಕೊಂಡರು. ಆಗ ನಮ್ಮ ಕಥಾನಾಯಕರು ದಾಸರ ತಂಡವನ್ನ ಒಯ್ದು ತೋಟದಲ್ಲಿರುವಂಥಾ ಇನ್ನೊಂದು ಅರಮನೆಯಲ್ಲಿಟ್ಟರು.

ಮೇಳ : ತೋಟದ ಮನೆಗೊಯ್ದು ಇಟ್ಟರೋ
ದಾಸರನ್ನ
ತೋಟದ ಮನೆಯಲ್ಲಿ ಇಟ್ಟರೋ ||
(ಹಾಡುತ್ತ ಮೇಳ ಸರಿಯುತ್ತದೆ. ತೋಟದ ಮನೆಯಲ್ಲಿಯ ಒಂದು ದೊಡ್ಡ ಹಾಲು, ಸುಸಜ್ಜಿತವಾದುದು, ಕಾಣಿಸುತ್ತದೆ. ದಾಸರ ತಂಡದವರು ಊಟ ಮಾಡಿ ಒಬ್ಬೊಬ್ಬರೇ ಹಾಲಿಗೆ ಬರತ್ತಾರೆ. ದಾಸ ಬಂದು, ಅಲ್ಲಿದ್ದ ಎಲ್ಲಾ ಕುರ್ಚಿಗಳ ಮೇಲೆ ಒಂದೊಂದು ಬಾರಿ ಕೂತು ಮತ್ತೊಂದಕ್ಕೆ ಹಾರುತ್ತಿದ್ದಾನೆ. ಅವನ ಹೆಂಡತಿ ಸಾವಂತ್ರೀಬಾಯಿ ಬಂದು ಇವನಾಟ ನೋಡುತ್ತಾ ನಿಲ್ಲುತ್ತಾಳೆ.)

ಸಾವಂತ್ರಿ : ಕುರ್ಚೀದಿಂದ ಕುರ್ಚೀಕ ಅದ್ಯಾಕ ಹಾಂಗ ಹಾರತೀಯೋ ಕೋತಿಮೂಳಾ?

ದಾಸ : ಸಾವಂತ್ರೀಬಾಯಿ, ಊಟಕ್ಕ ಹೋಗೋ ಮುನ್ನ ಒಂದ ಕುರ್ಚೀದಾಗ ಕುಂತಿದ್ದೆ,ಅದ್ಯಾವುದೂ ಅಂತ ತಿಳೀವೊಲ್ದು. ಅಂಧಾಂಗ ನಾ ಎದರಾಗ ಕುಂತಿದ್ದೆ? (ಇನ್ನೊಂದು ಕುರ್ಚೀಗೆ ಹಾರಿ, ಕೂತು ಕುಂಡಿಯಿಂದ ತಿಕ್ಕಿ ನೋಡುವನು.)

ಹಾ! ಇದs ಆಹಾಹಾ ಏ ಕುರ್ಚಿ! ಏನ ಊಟ! ಸಾವಂತ್ರೀಬಾಯಿ,

(ಸಿಗರೇಟು ತೆಗೆಯುತ್ತ)

ನನ್ನನ್ನ ಮಾಡಿಕೊಂಡದ್ದರಿಂದ ಏನೇನ ಕಂಡಿ! ನನ್ನಲ್ಲದs ಇನ್ಯಾರನ್ನಾದರೂ ಮದಿವ್ಯಾಗಿದ್ದರ ಇಂಥಾ ಅರಮನ್ಯಾಗ ಕಾಲ ಹಾಕಾಕಾದರೂ ಆಗಿತಿತ್ತ? ನಿನಗಿಂಥಾ ಊಟ ಸಿಗತಿತ್ತ?, ಅದೂ ಹೊಟ್ಟಿತುಂಬ!

ಸಾವಂತ್ರಿ : ಸಿಗರೇಟು ಎಲ್ಲಿ ಕದ್ದಿ?

ದಾಸ : ಇಂಥಾ ದೊಡ್ಡ ಮನೀಗಿ ಬಂದರೂ ನಿನ್ನ ಸಣ್ಣ ಬುದ್ಧೀ ಬಿಡಬಾರದ?

ಸಾವಂತ್ರಿ : ಸಿಗರೇಟ ಎಲ್ಲಿ ಕದ್ದಿ ಅಂದರ?

ದಾಸ : ಸಾವ್ಕಾರ ಕೊಟ್ಟರು.

ಸಾವಂತ್ರಿ : ಕೊಟ್ಟರ ಒಂದ ಕೊಟ್ಟಿರತಾರ. ಇಡೀ ಪಾಕೀಟ ತಂದೀದಿ?

ದಾಸ : ಸಾವಂತ್ರೀಬಾಯೀ ನಾ ಕದ್ದಿಲ್ಲ. ನಮ್ಮಂಥಾ ಕಲಾವಿದರು ಒಂದು ಸಿಗರೇಟ ಪಾಕೀಟ ಕದ್ದರೂ ತಪ್ಪಿಲ್ಲ. ನಿನಗೂ ಗೊತ್ತೈತಿ; ನನಗೀಗ ದಿನಕ್ಕ ನೂರ್ರೂಪಾಯಿ ವರಮಾನ.

ಸಾವಂತ್ರಿ : ನನಗೊಂದ ಕೊಡು.

ದಾಸ : ಬೀಡೀ ತಗೊ.
(ಸಿಗರೇಟು ಪಾಕೀಟು ಮುಚ್ಚಿಕೊಂಡು ಜೇಬಿನಿಂದ ಬೀಡಿ ತೆಗೆದುಕೊಡುವನು.)

ಸಾವಂತ್ರಿ : ನೂರ್ರೂಪಾಯದಾಗ ನನಗೆಷ್ಟು? ನಾಗ್ಯಾಗೆಷ್ಟು? ಶಾರಿಗೆಷ್ಟು?

ದಾಸ : ನಿಂದಷ್ಟs ಮಾತಾಡು. ದಿನಕ್ಕ ಹತ್ತುರೂಪಾಯಿ, ಒಂದ ಕಟ್ಟ ಬೀಡಿ, ಬೇಕಾದರ ಆ ನಿನ್ನ ಮಿಂಡ ಇದ್ದಾನಲ್ಲಾ, ಅವನಿಗೊಂದ ಹತ್ತ ಕೊಡೋಣಂತ. ದಿನಕ್ಕ ಹತ್ತಂದರ ಭಾಳಾತು. ನಾಟಕದ ಕಂಪನ್ಯಾಗೂ ಇಷ್ಟ ಕೊಡೋದಿಲ್ಲ.

ಸಾವಂತ್ರಿ : ದಿನಕ್ಕ ಹತ್ತಂದರ ನನಗ ಆಗೋದಿಲ್ಲಾ ಅಂದೆ.

ದಾಸ : ಏನ ದಿನಮಾನಪ! ಕೂತ ಉಣ್ಣಾಕ ದಿನಾ ಹತ್ತುರೂಪಾಯಿ ಸಾಲದಿಲ್ಲಂತ! ಸಾವಂತ್ರೀಬಾಯೀ, ಸಾವ್ಕಾರ ನಿನ್ನನ್ನಿಲ್ಲಿ ಕರಸಿದ್ದು ನಿನ್ನ ಆಟ ನೋಡಿ ಜೊಲ್ಲ ಸುರಸಾಕಲ್ಲ, ಸಂಗೀತಾ, ಅರ್ಥಾತ್ ನಿನ್ನ ಮಗಳ ಮೈ ಹಾಸಿಕೊಳ್ಳಾಕ!

ಸಾವಂತ್ರಿ : ನನಗ ಹತ್ತು, ನಾಗ್ಯಾಗ ಹತ್ತುಕೊಟ್ಟ ಉಳದದ್ದ ನೀ ಇಟ್ಟಕೊಳ್ಳಾವಾ?

ದಾಸ : ಈ ಮ್ಯಾಳದ ಯಜಮಾನ ಯಾರು? ನಾನು!

ಸಾವಂತ್ರಿ : ಹಾಂಗಿದ್ದರ ನಾಗ್ಯಾಗ ನೀನ ಹೇಳಿಕೊ.

ದಾಸ : (ಅಣಗಿಸುತ್ತ)
‘ಹಾಂಗಿದ್ದರ ನಾಗ್ಯಾಗ ನೀನs ಹೇಳಿಕೊ’- ಅಂದರ? ಏಯ್ ಯಾವೋನs ನಿನ್ನ ಗಂಡ? ಯಾವೋನs ಸಂಗೋತಾ ತಂದಿ?

ಸಾವಂತ್ರಿ : ಕಾಯ್ದೇ ಪ್ರಕಾರ ನೀನs ಖರೆ. ಆದರ ನಾಗ್ಯಾ ನಿನ್ನ ನಡ ಮುರಿಯೋವಾಗ ಇದ್ಯಾವುದೂ ಅಡ್ಡ ಬರೋದಿಲ್ಲ.

ದಾಸ : ನೋಡ ಸಾವಂತ್ರೀಬಾಯಿ, ನಿನಗ ಕಿವಿ ಅದಾವ, ಮತ್ತ ನಾ ಹೇಳಿದ್ದ ನಿನಗ ಕೇಳಸಾಕs ಬೇಕು, ಕೇಳು : ನಿಂದೂ ಆ ನಿನ್ನ  ಮಿಂಡಂದೂ ಆಟ ಇಂದಿಗಿ ಅನೇಕ ದಿನದಿಂದ ಕಣ್ಣಮುಚ್ಚಿ ನೋಡ್ತಾ ಬಂದೀನಿ. ಏನೊ, ಈ ಮ್ಯಾಳ ನಾಕ ದಿನ ಉಳೀಲಿ, ಕಲಾ ಸೇವಾ ಮಾಡಲಿ ಅಂತ, ಹಾಸಿಗ್ಯಾಗಿನ ಹೇಂತೀನ ಕೊಟ್ಟೆ. ಇನ್ನೇನ ಕೊಡಬೇಕಂತ ಅವಗ?

ಸಾವಂತ್ರಿ : ಶಾರಿಗೆಷ್ಟು?

ದಾಸ : ಶಾರಿ ಅಲ್ಲ, ಸಂಗೀತಾ ಅನ್ನು. ಆಕಿ ನನ್ನ ಮಗಳು, ನಾ ನೋಡಿಕೊಳ್ತೀನಿ. ಹೋಗಿ ಸಂಗೀತಾಗ ತಲಿ ಬಾಚಿಕೊ ಅಂತ ಹೇಳು, ಸಾವ್ಕಾರ ಬರೋ ಯಾಳೇ ಆತು.

ಸಾವಂತ್ರಿ : ನೀನs ಹೇಳಿಕೊ, ಅಕಾ ಬಂದಳು.
(ಶಾರಿ ಬರುತ್ತಾಳೆ. ದಾಸ ಸಾವಂತ್ರೀಬಾಯಿಯ ಕಿವಿಯಲ್ಲಿ)

ದಾಸ : ಮರೀಬ್ಯಾಡ, ನಾ ನಿನ್ನ ಗಂಡ. ನಿನ್ನ ಬಿಟ್ಟ ನಾ ಎಲ್ಲಿ ಓಡಿ ಹೋಗೋದಿಲ್ಲ. ಬಂದದ್ದರಾಗ ಹಂಚಿಕೊಳ್ಳೋಣಂತ. ಹಾ ಸಂಗೀತಾ, ಲಗು ತಯರಾಗಿರಿ. (ಹೋಗುವನು.)

ಸಾವಂತ್ರಿ : ಬಾ ಮಗಳs, ನನ್ನ ಕಣ್ಣ ನಂಬಾಕs ಆಗವೊಲ್ದು. ಕಣ್ಣ ಮುಚ್ಚಿ ಕಣ್ಣ ತಗ್ಯೂದರಾಗ ಎಲ್ಲಿಂದ ಎಲ್ಲಿಗಿ ಬಂದಿವಿ! ನಶೀಬಂದರ ಹಿಂಗs. ಇದ ಹುಲಂಡ್ಯಾಗ ಸಾವ್ಕಾರಗ ಹೇಳಿ ನನಗೊಂದ ಸೀರೀ ಕೊಡಸಬಾರದ?

ಶಾರಿ : ಸಾವ್ಕಾರಗ ಯಾಕ, ಅಪ್ಪಗ ಹೇಳಲ್ಲ. ದಿನಾ ನೂರ್ರೂಪಾಯಿ ತಗೋತಾನ.

ಸಾವಂತ್ರಿ : ಅದಕ್ಕs ನಿನಗ ಬುದ್ಧಿ ಕಮ್ಮಿ ಅನ್ನೋದು. ದಿನಕ್ಕ ನಿನಗೆಷ್ಟ ಕೊಡತಾನಂತ?

ಶಾರಿ : ನನಗ್ಯಾಕ ಕೊಡತಾನ?

ಸಾವಂತ್ರಿ : ಎಂಥಾ ಹುಚ್ಚಿ! ದಿನಾ ನಮಗ ಹತ್ತತ್ತ ಕೊಟ್ಟ ಬಾಕೀದೆಲ್ಲಾ ತಾನ ಇಟ್ಟಕೊಳ್ತಾನಂತ. ನೋಡಿಕೊಂಡ ಗಪ್ಪs ಇರತಿ?

ಶಾರಿ : ನನಗ ರೊಕ್ಕದ ಮಾತ ತಿಳಿಯಾಣಿಲ್ಲವಾ.

ಸಾವಂತ್ರಿ : ತಿಳಿಯಾಣಿಲ್ಲಂದರ ಹೆಂಗ? ಸಾವ್ಕಾರ ರೊಕ್ಕ ಕೊಡೂದs ನಿನ್ನ ಸಲುವಾಗಿ.

ಶಾರಿ : ನನ್ನ ಸಲುವಾಗಿ ಯಾಕ ಕೊಡತಾರ? ಎಲ್ಲಾರು ಆಟ ಮಾಡತೀವಿ, ಎಲ್ಲಾರಿಗೂ ಕೊಡತಾರ.

ಸಾವಂತ್ರಿ : ಇಂದ ಎಷ್ಟ ಚಂದ ಕಾಣ್ತೀಯೇ ಸಂಗೀತಾ, ಥೇಟ ಸಿನಿಮಾದಾಗಿನ ಗೊಂಬೀ ಹಾಂಗs ಕಾಣ್ತಿ ನೋಡು.

ಶಾರಿ : ಸಂಗೀತಾ? ನಮಗ ಬ್ಯಾರೇ ಹೆಸರಲೆ ಕರೀಬ್ಯಾಡವಾ. ನಿನಗೂ ಸಾವ್ಕಾರನ್ಹಾಂಗ ಹುಚ್ಚ ಹತ್ತಿತೇನ?

ಸಾವಂತ್ರಿ : ನಿನಮ್ಯಾಲ ಇಂದೆಷ್ಟು ಅಕ್ಕರತಿ ಬರಾಕ ಹತ್ತೇತಂದರ, ಹಿಡಕೊಂಡ ಲಟಲಟ ಮುದ್ದು ಕೊಡೋ ಹಾಂಗ ಆಗತೈತಿ, ಬಾ ಒಂದ ಮುದ್ದ ಕೊಡತೇನ.

ಶಾರಿ : ತಗಿ ತಗಿ ನಮಗ, ಇಂಥಾ ನಾಟಕ ಸರಿ ಬರಾಣಿಲ್ಲ.

ಸಾವಂತ್ರಿ : (ತಬ್ಬಿಕೊಂಡು) ನನಗೊಂಬೇ, ಗೊಂಬೇ!

ಶಾರಿ : ಬಿಡs ಎವ್ವಾ, ತಗಿ ನಾ ಇನ್ನs ಸೀರೀ ಉಟ್ಟ ತಯಾರಾಗಬೇಕು.

ಸಾವಂತ್ರಿ : ಆದೀಯಂತ ಬಾ. ಮೊದಲನೇ ರಾತ್ರಿ ತಾಯಾದಾಕಿ ಮಗಳಿಗಿ ಬುದ್ದಿ ರೀತಿ ಹೇಳೋದಿರತೈತಿ.

ಶಾರಿ : ಮೊದಲನೇ ರಾತ್ರಿ ಅನ್ನಾಕ ನಂದೇನ ಮದಿವ್ಯಾಗೇತಿ?

ಸಾವಂತ್ರಿ : ನಮ್ಮಂಥವರಿಗಿ ಮದಿವ್ಯಾದರೂ ಅಷ್ಟs, ಆಗದಿದ್ದರೂ ಅಷ್ಟ. ನನ್ನs ನೋಡಲ್ಲ, ಮದಿವ್ಯಾಗೇ ಎಷ್ಟಮಂದಿ ಗಂಡಸರನ್ನ ನಿಭಾಯಿಸಿದೆ. ಲೋಕಾನೋಡೇನಂತ ಅನುಭೋಗದಿಂದ ಹೇಳ್ತಿನವಾ : ಗಂಡಸರ ಸೊಭಾವ ನಿನಗ ಗೊತ್ತs ಇಲ್ಲ. ಭಾಳ ಚಂಚಲ ಮನಸ್ಸು. ಅವರಿಗೆ ಒಂದ ಮಗ್ಗಲಾ ತೋರಿಸಿದರ ಇನ್ನೊಂದ ಮಗ್ಗಲಾ ತೋರಿಸಬಾರದು. ಮದಿವೀ ಹೇಂತಿ ಆದರ ಅದೊಂದ ನಮೂನಿ. ನಮ್ಮಂಥ ಅಡಬಿಟ್ಟೇವು ಇರ್ತೀವಲ್ಲ, ನಿದ್ದ್ಯಾಗೂ ಎಚ್ಚರ ಇರಬೇಕು. ಅವರ ಮೈ ಯಾವತ್ತೂ ನಿನಗಾಗಿ ಹಸಿದಿರೋ ಹಾಂಗ ನೋಡಿಕೋಬೇಕು. ಒಮ್ಮಿ ಅವರ ಹೊಟ್ಟಿ ತುಂಬಿತೋ, ಎಂಜಲೆಲಿ ಹಾಂಗ ಬಿಸಾಡಿ ಹೋಗತಾರ. ಒಂದಿಲ್ಲೊಂದ ದಿನ ಬಿಸಾಡವರs ಅಂತಿಟ್ಟಕ. ಅದಕ್ಕೂ ತಯಾರಿರಬೇಕು. ಮಗಳs. ಅದಕ್ಕs ದಿನಾ ನಿನ್ನ ಕಣ್ಣು ಅವರ ಮೋತೀ ಮ್ಯಾಲಿರಬೇಕು, ಕೈ ಕಿಸೇದಾಗ ಇರಬೇಕು. ಶಾಣೇತನ ಅಂದರ ಅದು.
(ಮೇಲಿನ ಮಾತು ನಡೆದಾಗ ಶಾರಿ ಆಘಾತ ಹೊಂದಿದವಳಾಗುತ್ತ ಭಯಗೊಳ್ಳುತ್ತಾಳೆ. ಸಾವಂತ್ರಿಗೆ ಇದ್ಯಾವುದರ ಕಡೆ ಗಮನವಿಲ್ಲ.)