ಶಾರಿ : ನಾವಿಲ್ಲಿ ಬಯಲಾಟ ಮಾಡಾಕ ಬಂದಿದೀವ? ಇಲ್ಲಾ ಸೂಳಿತನ ಮಾಡಾಕ ಬಂದಿದೀವ?

ಸಾವಂತ್ರಿ : ಎರಡೂ ಮಾಡು, ಯಾರ ಬ್ಯಾಡಂತಾರ? ಸಿಕ್ಕಾನ ಬಾ ಅಂತ ಮೊದಲನೇ ರಾತ್ರೀನs ಅವನ ಮ್ಯಾಲ ಹತ್ತಬ್ಯಾಡ.

ಶಾರಿ : ನಾ ಅವನ ಸೂಳಿ ಆಗಬೇಕ?

ಸಾವಂತ್ರಿ : ಅಂಯ್ ಶಿವನ! ಇನ್ನೇನ ನಾ ಆಗಬೇಕ? ನಿನ್ನ ಮ್ಯಾಲ ಮನಸ್ಸ ಮಾಡ್ಯಾನ, ನಿನ್ನ ನಶೀಬಂತ ತಿಳಕೊ. ಎಷ್ಟ ದಿಲ್‌ದಾರಿದ್ದಾನ! ಇಂದ ರಾತ್ರಿ ಆ ಸಾವ್ಕಾರಗ ಹೇಳಿ ಒಂದ ಸೀರೀ ಕೊಡಸು. ಈ ಹರಕ ಪಡಿಕ್ಯಾಗಿದ್ದರ ಆ ನಾಗ್ಯಾ ನನ್ನ ಕಡೆ ನೋಡೂದ ಇಲ್ಲ. ಬ್ಯಾಡಂದರ ಹಿಂಗ ಮಾಡು : ಹೆಂಗೂ ನಿನಗ ಇಂದೊಂದು ಸೀರೀ ಕೊಡತಾನಲ್ಲ, ಅದನ್ನ ನನಗ ಕೊಡು. ನೀ ಬ್ಯಾರೇ ಇನ್ನೊಂದ ಈಸಿಕೊ. ಗಾಳಿ ಬೀಸಿದಾಗs ತೂರಿಕೋಬೇಕು. ಮಗಳs, ಮೈಯಾಗಿನ ನೆಣ ಆರೋ ಮುನ್ನ ಗುಂಜಿ ತೂಕ ಬಂಗಾರ ಮಾಡಿಕೊ.

ಶಾರಿ : ನಾ ಸೂಳಿ ಆಗಬೇಕ?

ಸಾವಂತ್ರಿ : ಅಯ್ ಹೊಯ್ಕ! ದಾಸರ ಕುಲದಾಗ ಸೂಳಿ ಅಂದರೂ ಒಂದs, ಗರತಿ ಅಂದರೂ ಒಂದs. ಇಂಥಾವ ಸಿಕ್ಕಾನಂತ ಕುಣಿಯೋದ ಬಿಟ್ಟೀದಿ, ‘ಸೂಳ್ಯಾಗಬೇಕ, ಸೂಳ್ಯಾಗಬೇಕ?’ ಅಂತ ಕೇಳಿಕೊಂಡ ಕುಂತೀದಿ! ಇಂಥಾ ಸಾವ್ಕಾರ ನಿನಗ ಸಿಗದs ನನಗ ಸಿಕ್ಕಿದ್ದರ ತೋರಸ್ತಿದ್ದೆ.
(ದಾಸ ಬರುವನು)

ದಾಸ : ಸಾವಂತ್ರೀಬಾಯಿ, ಸಾವ್ಕಾರ ಬಂದಾರ, ಮಾತಾಡಬೇಕಂತ ಬಾ, ಸಂಗೀತಾ ಇನ್ನೂ ಶಿಂಗಾರಾಗಲಿಲ್ಲೇನು? ಲಗು ಆಗು.

ಸಾವಂತ್ರಿ : ಬರ್ತೀನೆವ್ವಾ. ಸೀರೀ ಮರೀಬ್ಯಾಡ, ಎಷ್ಟಂದರೂ ನಾ ನಿನ್ನ ಹಡದವ್ವ ನೋಡು. ಬರ್ತೀನ್ನಡಿಯೋ ದಾಸ….
(ದಾಸ ಹೋಗುವನು)

ದಿನಾ ನೂರ್ರೂಪಾಯಿ ಕೊಡ್ತಾರಲ್ಲ ಸಾವ್ಕಾರ್ರು, ಅವನ್ನ ನೀನs ಈಸಿಕೊ. ದಾಸನ ಕೈಯಾಗ ಕೊಡಬ್ಯಾಡ. ಬೇಕಂದರ ನನ್ನ ಕೈಯಾಗ ಕೊಡು, ನಾ ಇಟಕೊಂಡಿರತೀನಿ.

ಶಾರಿ : ಮೊದಲಿಲ್ಲಿಂದ ಹೊಂಟ್ಹೋಗು ಅಂದೆ.

ಸಾವಂತ್ರಿ : ಅಯ್ ಶಿವನ! ಬೇಕಾದಾಗ ನಿನಗs ತಿರಿಗಿ ಕೊಡ್ತೀನೆವ್ವಾ. ದಾಸನ್ಹಾಂಗ ನಾ ಬೇಕಾಬಿಟ್ಟಿ ಖರ್ಚಿಕಳ? ಇದನ್ನ ಬೇಕಾದರ ನಾಳಿ ಮಾತಾಡೋಣಂತ. ಸೀರೀ ಮರೀಬ್ಯಾಡ. ನನ್ನ ಟ್ರಂಕಿನಾಗ ನಾರೂ ಎಣ್ಣಿ ಐತಿ, ಹಚ್ಚಿಕೊ.
(ಸಾವಂತ್ರಿ ಹೋಗುವಳು. ಆಘಾತ ಹೊಂದಿದ ಶಾರಿ ಏನೂ ಮಾಡಲೂ ತೋಚದೆ ಹಾಗೇ ನಿಂತಿರುವಳು. ಮೇಳ ಹಾಡುತ್ತ ಬರುವದು.)

ಮೇಳ : ನೀನು ನಕ್ಕರು ಅತ್ತರೂ
ದನಿನ ಬಂತು ಗಂಟಲಿಗೆ
ಬಾಯಿಗೆ | ಬಂತು ನಾಲಿsಗೆ |
ಹಸಿರು ಆಡಿತು ಹಾಳು ಸುರಿಯುವ
ಉಸಿಕೆನೆದೆಯೊಳಗೆ | ಸಂಗೀತಾ||

ದೊಡ್ಡದೇವರ ಹಾಡ ಹೇಳಿದಿ ಗುಟ್ಟ ತಿಳಿದಾಕಿ
ಬಂಡೆಯ | ಗುಟ್ಟ ಬಲ್ಲಾಕಿ |
ಸುಡುವ ಬೆಂಕಿಯ ಕುಡಿದು
ಹೂವಿನ ನಗಿಯ ನಕ್ಕಾಕಿ | ಸಂಗೀತಾ||

ನಮ್ಮ ಬಿಟ್ಟಿ ದೂರ ಹೊಂಟಿ
ಹಾಡುವೆವು ಹೆಂಗ
ನಾವು | ಹಾಡುವೆವು ಹೆಂಗ |

ನಾಲಿಗಿಲ್ಲದ ಗಂಟಿ ನಾದ
ಮಾಡುವುದು ಹೆಂಗ | ಸಂಗೀತಾ ||

ಹಿಮ್ಮೇಳ ೧ : ಕೇಳ್ರೆಪೋ ಕೇಳ್ರಿ. ಹರಾಜೈತಿ ಹರಾಜು! ನೀವು ಹಿಂದ ಕಂಡಿಲ್ಲ ಮುಂದ ಕಾಣಾನಿಲ್ಲ, ಅಂಥಾ ವಸ್ತು. ತಪಸ್ಸ ಮಾಡಿದರೂ ಸಿಕ್ಕಲಾರದಂಥಾ ಅಪರೂಪದ ವಸ್ತು ಹರಾಜಿಗೈತಿ! ಬೇಕಾದವರು, ಬ್ಯಾಡಾದವರು, ನೋಡವರು, ಕೊಂಬವರು-ಎಲ್ಲಾರೂ ಬರ್ರೆಪೋ ಬರ್ರಿ.

ಹಿಮ್ಮೇಳ ೨ : ಏನಪಾ ಅದೇನ ಹರಾಜಿಗೈತಿ? ದನಾನೋ ಮನೀನೊ?

ಹಿಮ್ಮೇಳ ೧ : ದನಾ ಆದರ ನೂರು ಮಾತು. ಮನಿ ಆದರ ಸಾವಿರದ ಮಾತು. ಇಕಾ ನೋಡಪಾ….
(ಆಘಾತದಲ್ಲಿ ಹಾಗೇ ನಿಂತ ಶಾರಿಯನ್ನು ತೋರಿಸಿ)

ಬೇಕಂದರ ಕುಣೀತಾಳ, ಬ್ಯಾಡಂದರ ಹಾಸಿಗ್ಯಾಗತಾಳ, ಸೋಳಾ ವರ್ಷ, ಬತ್ತೀಸ ಲಕ್ಷಣ. ಹತ್ತ ವರ್ಷ ಗ್ಯಾರಂಟಿ. ರಿಪೇರಿ ಚಾರ್ಜಿಲ್ಲ ಬೇಡ್ರೆಪೋ ಬೇಡ್ರಿ…

ಹಿಮ್ಮೇಳ ೨ : ನೂರ್ರೂಪಾಯಿ.
( ಮಧ್ಯೆ ನಾಯೀಮಗ ಬಂದು ಬೆರಗಿನಿಂದ ಅವಳನ್ನೇ ನೋಡುತ್ತ ಪ್ರದಕ್ಷಿಸುತ್ತಾನೆ)

ಹಿಮ್ಮೇಳ ೧ : ಯಾವನಪ ಇವನು ನೂರ್ರೂಪಾಯಿಗಿ ಕೇಳತಾನ! ಇದೇನ ಕುರಿ ಏನಲೆ? ನೋಡೋ ನೋಡೊ ಸ್ವರ್ಗದ ರಂಭಾ ಊರ್ವಶಿ ಮೇನಕಾ ಇವರ್ನೆಲ್ಲಾ ಈಕೀ ಮುಂದ ನಿವಾಳಿಸಿ ಒಗೀಬೇಕು. ಮೂಗಿಗೆ ಮುನ್ನೂರು, ಕಣ್ಣಿಗಿ ನಾನ್ನೂರು, ಮೋತಿಗೆ ಹತ್ತಾರ ನೂರು, ಎದಿಗಿ ಎಂಟು ನೂರು, ಸೊಂಟಕ ಸಾವಿರ….. ಹಿಂಗ ಬರೀ ಒಂದೊಂದಕs ಲೆಕ್ಕಾ ಹಾಕಿದರೂ ಸಾವಿರಾರ ರೂಪಾಯಿ ಆಗತಾವ. ಈ ಹುಚ್ಚ ನೂರಂತಾನ, ಹೋಗಲೇ ಹೋಗು.

ಶಾರಿ : (ಕಿರಿಚಿ) ನಾ ಸೂಳಿ ಆಗೋದಿಲ್ಲ.!

ಕಥೆಗಾರ : ಏನಂದಿವಾ ತಾಯಿ?

ಶಾರಿ : ನಾ ಸೂಳಿ ಆಗೋದಿಲ್ಲಾ ಅಂದೆ!

ಕಥೆಗಾರ : ಕೇಳಿದೇನಪಾ ಕಂದ?

ಹಿಮ್ಮೇಳ : (ಥೂ ಹಚ್ಯಾ ಎನ್ನುತ್ತ ನಾಯೀಮಗನನ್ನು ಓಡಿಸಿ)

ಏನ ಗುರುವೆ?

ಕಥೆಗಾರ : ಸಂಗೀತಾ ಸೂಳಿ ಆಗೋದಿಲ್ಲಂತ!
(ಮೇಳದವರು ತಂತಮ್ಮಲ್ಲೇ ಮಾತಾಡಿಕೊಂಡು ಮೆಚ್ಚುತ್ತಾರೆ. ಕೂಡಲೇ ಅವಳ ಸುತ್ತ ಹಾಡುತ್ತ ಕುಣಿಯುವರು.)

ಮೇಳ : ನೂರು ಬಾರಿ ಶರಣು ಬಂದೆವೇ
ಹೊ ತಾಯಿ ನಿನಗೆ
ಬಾಗೀ ಜೀ ಹಸಾದವೆಂದೆವೇ ||

ನಂಬಿದವರಿಗಿಂಬು ಕೊಡವ್ವಾ
ಹೊ ತಾಯಿ ನೀನು
ಮೀರಿದವರ ಮುರಿದು ಬಿಡವ್ವಾ ||
(ಹಾಡುತ್ತ ಮರೆಯಾಗುವರು. ಶಾರಿ ತಕ್ಷಣ ಅರಿವಿಗೆ ಬರುವಳು.)

ಶಾರಿ : ನಾಗಣ್ಣಾ, ನಾಗಣ್ಣಾ…
(ಗಡಿಬಿಡಿಯಿಂದ ತನ್ನ ಸಾಮಾನುಗಳನ್ನು ತಂದು ಟ್ರಂಕಿನಲ್ಲಿ ತುಂಬತೊಡಗುವಳು. ನಾಗಣ್ಣ ಬರುವನು.)

ನಾಗ : ಏನ ಶಾರೀ?

ಶಾರಿ : ನಾ ಹೊಂಟೇನಿ, ಬೇಕಾದರ ನೀನೂ ಬಾ.

ನಾಗ : ಯಾಕ? ಯಾರೇನಾದರೂ ಅಂದರೇನು?

ಶಾರಿ : ನಾ ಸೂಳಿ ಆಗಾಕ ಒಲ್ಲೆ ಅಂದೆ.

ನಾಗ : ಅಂದರ?

ಶಾರಿ : ದಿನಕ್ಕ ನೂರ್ರೂಪಾಯಿ ಕೊಟ್ಟು ಸಾವ್ಕಾರ ಇಲ್ಲಿಗಿ ಕರಿಸಿದ್ದು ನಮ್ಮ ಬಯಲಾಟ ನೋಡಾಕ ಅಲ್ಲಂತ. ನಾ ಸಾವ್ಕಾರನ ಸೂಳಿ ಆಗಬೇಕಂತ. ನಾ ಸೂಳಿ ಆಗಾಕ ತಯಾರಿಲ್ಲ. ಅದಕ್ಕs ಹೊಂಟೇನಿ.

ನಾಗ : ಹಂಗಂತ ಯಾರು ಹೇಳಿದರು?

ಶಾರಿ : ನನ್ನ ಪೂಜ್ಯ ಮಾತೋಶ್ರೀಯವರು ಮತ್ತು ತೀರ್ಥರೂಪರು.

ನಾಗ : ಹಲ್ಕಟ್ಟ ಸೂಳೀಮಕ್ಕಳ್ನ ತಂದು…

ಶಾರಿ : ನೀ ಬರ್ತೀಯೋ ಇಲ್ಲೊ?

ನಾಗ : ಅವರ ಕೈಕಾಲಾದರೂ ಮುರದ ಹೋಗೋಣ ತಡಿ.

ಶಾರಿ : ಬೇಕಾದರ ನೀ ಮುರದ  ಆಮ್ಯಾಲ ಬಾ, ನಾ ಹೊಂಟೆ.

ನಾಗ : ಎಲ್ಲಿದ್ದಾನ ಆ ಬೋಳೀಮಗ? (ದಾಸನನ್ನು ಹುಡಿಕಿಕೊಂಡು ಹೋಗುವನು. ದಾಸ ಇನ್ನೊಂದು ಕಡೆಯಿಂದ ಬರುವನು.)

ದಾಸ : ಸಂಗೀತಾ ಏನ ನಡದೈತಿಲ್ಲಿ? ಸಾವಂತ್ರಿ ಏನಾದರು ಅಂದಗಿಂದಳೇನು? ಭಾಳ ಕೆ‌ಟ್ಟ ಹೆಂಗಸದು. ನೀನs ನೋಡೀಯಲ್ಲ – ಅವಳೂ ಅವಳ ಮಿಂಡನೂ ಕೂಡಿ ನನ್ನನ್ನ ಎಷ್ಟ ಕಾಡಸ್ತಾರಂತ? ನೀ ಮನಸ ಗಟ್ಟಿ ಮಾಡಬೇಕವಾ. ನೀ ಒಬ್ಬಾಕಿ ನನ್ನ ಕಡೆ ಇದ್ದರ ಇವರ್ನ ಕೋತೀಹಾಂಗ ಕುಣಿಸ್ಯಾಡತೀನಿ, ನೋಡತಿರು. ಇಂದ ರಾತ್ರಿ ನೀ ಸಾವ್ಕಾರಗ ಹೇಳಿಬಿಡು : ನಮ್ಮಪ್ಪ ಭಾಳ ಚೆಲೋ ಮನಶ. ಏನs ರೊಕ್ಕಾ ಕೊಡೋದಿದ್ದರೂ ಅವನ ಕೈಯಾಗs ಕೊಡ್ರೀ ಅಂತ. ತಿಳಿತಿಲ್ಲ?

ಶಾರಿ : ತಿಳೀತು.

ದಾಸ : ಮತ್ತ ಯಾಕ ಟ್ರಂಕ ತುಂಬಾಕ ಹತ್ತೀದಿ? ಯಾವುದಾದರೂ ಸೀರಿ ಸಿಗವೊಲ್ದೇನು? ಇನ್ನs ತಲೀ ಸುದ್ದಾ ಬಾಚಿಕೊಂಡಿಲ್ಲ. ಸಾವ್ಕಾರಾಗಲೇ ಬಂದ ಕುಂತಾರ?

ಶಾರಿ : (ತಾಳ್ಮೆಗೆಟ್ಟು) ನಾಗಣ್ಣ ನಿನ್ನ ಹುಡಿಕ್ಕೊಂಡ ಹೋಗ್ಯಾನ. ನಿನ್ನ ಕೈಕಾಲ ಸಮ ಉಳೀಬೇಕಾದರ ಇಲ್ಲಿಂದ ಮೊದಲು ತೊಲಗು.
(ಶಾರಿ ತನ್ನ ಸಾಮಾನು ರೆಡಿಮಾಡುವ ಅವಸರದಲ್ಲಿ ಏನೋ ಮರೆತದ್ದು ನೆನಪಾಗಿ ಅದನ್ನು ತರಲು ಒಳಗೆ ಹೋಗುವಳು. ಸಾವಂತ್ರಿ ಬರುವಳು.)

ದಾಸ : ಏನಾರ ಗಡಿಬಿಡಿ ನಡೀತೇನು? ನಾಗ್ಯಾ ನನ್ನ ಕಾಲ ಮುರೀತಾನಂತ?

ಸಾವಂತ್ರಿ : ನನಗ ಸಿಕ್ಕೇ ಇಲ್ಲ. ಹೇಳ್ಯಾಳೇನೋ ಬಣ್ಣಾ ಹಚ್ಚಿ….

ದಾಸ : ನನ್ನ ಮಗಳು, ನಾ ಬೇಕಾದ್ದ ಮಾಡತೀನಿ. ಕೇಳಾಕ ಇವ ಯಾರು? ಏ ಉಳ್ಳಾಗಡ್ಡಿ ನಿನಗೂ ಗೊತ್ತಿರಲಿ, -ನನ್ನಂಥಾ ಕಲಾವಿದರಿಗೆ ಸಿಟ್ಟು ಬಂದರ… ಆಮ್ಯಾಲ ತಡಿಯೋದ ಕಷ್ಟ. ಹೋಗಿ ನಿನ್ನ ಮಿಂಡಗ ಹೇಳು.

ಸಾವಂತ್ರಿ : ನೀ ಹೇಳು. ಹೆದರ್ತೀಯೇನು?

ದಾಸ : ನಾ ಹೆದರ್ತೀನಿ? ಏಯ್ ಈ ಮ್ಯಾಳದ ಯಜಮಾನ ಯಾರು? ಯಾರೂ ಅಂತೀನಿ.

ಸಾವಂತ್ರಿ : ನೀನs ಹೌಂದು. ಅದಕs ನೀನ ಹೇಳು, ಹುಷಾರಲೆ ಹೇಳಪ್ಪ. ಯಾಕಂದರ ಇಂದ ಹಸೀಖಾರ ತಿಂದಾನ.

ದಾಸ : ಹಸೀಖಾರ ಅಲ್ಲ ಹಸೀ ಕುರಿ ತಿಂದಿದ್ದರೂ ಹೇಳತೀನs. ನನಗೇನಂಜಿಕಿ? ಇಕಾ ಹೊಂಟೆ.
(ಧಿಮಾಕಿನಿಂದ ಬಾಗಿಲತನಕ ಹೋಗಿ ಅಲ್ಲಿ ಏನೋ ನೆನಪಾಗಿ ಮತ್ತೆ ಸಣ್ಣಗೆ ಕುರಿಯಾಗಿ ಹಿಂದಿರುಗುವನು.)

ದಾಸ : ಕುಡದ್ದಾನೇನು?

ಸಾವಂತ್ರಿ : ಪೂರಾ ಒಂದ ಬಾಟ್ಲಿ.

ದಾಸ : ಸಿಟ್ಟಿನಾಗಿದ್ದನೇನು?

ಸಾವಂತ್ರಿ : ಗಂಟಲದಾಗ ಗುರುಗುರು ಅಂತಿದ್ದ.

ದಾಸ : ರಾಮಾ ರಾಮಾ! ಹೋಗೀ ಹೋಗೀ ಹಾದೀ ಬೀದ್ಯಾಗಿನ ನೆರಳಿಗಿ ಅಂಜಬೇಕಾಯ್ತಲ್ಲ! ಎಷ್ಟ ದಿವಸದಿಂದ ಇವನಾಟಾ ನೋಡ್ತಾ ಇದ್ದೀನಿ…

ಸಾವಂತ್ರಿ : ಅಕಾ ಬಂದ, ಹೇಳಿಕೊ.
(ನಾಗ ಬಂದು ದಾಸನನ್ನು ನೋಡಿ ಹಲ್ಲು ಕಚ್ಚುತ್ತ ನಿಲ್ಲುವನು, ದಾಸ ಅಧೀರನಾಗಿ ಹೆಂಡತಿಯ ಹಿಂದೆ ಹೋಗಿ ನಿಂತು)

ದಾಸ : ಬಾ ನಾಗಣ್ಣಾ, ಏನೋ ಮಾತಾಡಬೇಕಿತ್ತು. ಹಂಗ್ಯಾಕ ಹಲ್ಲ ಕಚ್ಚತೀಯೋ, ಥಂಡಿ ಹತ್ತೇತೇನ? ಹೆ ಹೆ ಹೆ…

ನಾಗ : (ಕೋಪದಿಂದ) ಬಾ ಈ ಕಡೆ.

ದಾಸ : ಇಲ್ಲಿದ್ದೀನಿ, ಅದೇನ ಹೇಳಲ್ಲ. ನೋಡೊ, ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದಗ ಕಿಮ್ಮತ್ತ ಕೊಡಬೇಕಪಾ, -ಕಾ ನಾ ಕೊಡ್ತಾ ಇದ್ದೀನ್ನೋಡು…

ನಾಗ : ಸಾವ್ಕಾರ ಯಾಕ ಬಂದಾನ?

ದಾಸ : ಸಾವ್ಕಾರ? ಹೌಂದಲ್ಲ? ಬಯಲಾಟ ನೋಡಾಕ. ಸಾವಂತ್ರೀ ಬಾಯಿ ನೀ ಹೇಳಿಲ್ಲೇನು? ದಿನಕ್ಕ ನೂರ್ರೂಪಾಯಿ ಕೊಡತಾರ. ನಿನಗೂ ಹತ್ತು ರೂಪಾಯಿ ಕೊಡತೀನಿ. ಸಾವಂತ್ರೀಬಾಯಿ ನೀ ಹೇಳು, ನಾ ಬರ್ತೀನಿ.
(ಎನ್ನುತ್ತ ಪಾರಾಗುವಷ್ಟರಲ್ಲಿ ನಾಗ ದಾಸನ ಕತ್ತಿನ ಅಂಗೀ ಹಿಡಿದು ಅಲುಗುತ್ತಾನೆ.)

ನಾಗ : ಖರೆ ಒದರ್ತೀಯೋ?

ದಾಸ : (ಒದ್ದಾಡುತ್ತ)
ಛೇ ಛೇ ನಾಗಣ್ಣಾ ಸಾವ್ಕಾರ ಬಂದಗಿಂದಾರ ಬಿಡೊ. ನಾ ಸಿಟ್ಟಿಗೆದ್ದರ ಭಾಳ ಕೆಟ್ಟ ಮತ್ತ.
(ಸಾವಂತ್ರಿ ಬಿಡಿಸ ಹೋಗುವಳು.)

ಸಾವಂತ್ರಿ : ಏ ನಾಗ, ದೊಡ್ಡ ಸಾವ್ಕಾರ ಸಿಕ್ಕಾರ, ಮಗಳ ಮುಂದಿನ ಬಾಳ್ವೆ ನೋಡಬೇಕೊ ಬ್ಯಾಡೊ? ಮೈಯಾಗ ಅಸರಂತ ನೆಣ ಇರತೈತಿ? ನಾ ಎಲ್ಲಾ ನಿನಗ ಹೇಳ್ತೀನಿ, ಬಿಡವನ್ನ.

ದಾಸ : ನಾಗಣ್ಣಾ ನನಗೂ ಸಿಟ್ಟ ಬರತೈತಿ ಮತ್ತ, ಬಿಡೋ ಏ, ಅಯ್ಯೋ ಸಂಗೀತಾ… (ಶಾರಿ ಬರುವಳು. ಅದೇ ಸಮಯಕ್ಕೆ ಸರಿಯಾಗಿ ಸೋಮಣ್ಣ, ನಾಯೀಮಗ ಬರುವರು.)

ಸೋಮಣ್ಣ : ಏನು ಆಗಲೇ ಆಟ ಸುರು ಮಾಡಿದೀರಿ.

ದಾಸ : ಸಾವ್ಕಾರ್ರು ಬಂದರು, ಬಿಡೊ.
(ಬಿಡುವನು. ದಾಸ ಸಾವರಿಸಿಕೊಳ್ಳುವನು.)

ಡಾಕ್ಟರು ಸಿಟ್ಟಿಗೇಳಬ್ಯಾಡ ಅಂದಾರಂತ ಸುಮ್ಮಕಿದೀನಿ.  ಇಲ್ಲದಿದ್ದರ…

ಸೋಮಣ್ಣ : ಇವ ಯಾರು?

ದಾಸ : ನಮ್ಮ ಮ್ಯಾಳದಾಗ ಅದಾನ್ರಿ. ಸಾವ್ಕಾರ್ರಿಗಿ ನಮಸ್ಕಾರ ಮಾಡೊ.

ಸೋಮಣ್ಣ : ಜಗಳಾ ಯಾಕ ಮಾಡತಾನ?

ಸಾವಂತ್ರಿ : ಥಂಡಿ ಹತ್ತಿದಾಗೊಮ್ಮಿ ಹಿಂಗs ಮಾಡತಾನ್ರಿ.
(ನಾಗ ಈಗ ನೇರವಾಗಿ ಸೋಮಣ್ಣನ ಎದುರಿಗೇ ಬರುವನು.)

ನಾಗ : ನಮ್ಮನ್ಯಾಕ ಕರತಂದರಿ?

ಸೋಮಣ್ಣ : ಯಾಕ, ದಾಸ ಹೇಳಿಲ್ಲೇನು?

ನಾಗ : ನಮ್ಮ ಹುಡುಗಿ ನಿಮ್ಮ ಸೂಳಿ ಆಗಬೇಕು, ಹೌಂದಲ್ಲ?

ಸೋಮಣ್ಣ : ಹುಚ್ಚಗಿಚ್ಚ ಹತ್ತೇತೇನ್ಲೆ? ದಿನಕ್ಕ ನೂರ್ರೂಪಾಯಿ ಕೊಡತೀನಿ ಪುಕ್ಕಟ ಅಲ್ಲ. (ತಕ್ಷಣ ನಾಗ ಸೋಮಣ್ಣನ ಮೇಲೆ ಏರಿ ಹೋಗಿ ಕತ್ತು ಹಿಡಿಯುವನು. ಸೋಮಣ್ಣ ‘ಏನೊ ಏ ಏ ನಾಯೀಮಗನ’ ಎನ್ನುತ್ತ ಬಿಡಿಸಿಕೊಳ್ಳಲು ಹೆಣಗುತ್ತಿರುವಂತೆ ನಾಯೀಮಗ ಹಾರಿ ನಾಗನಿಗೆ ಒಂದೇಟು ಬಿಗಿಯುವನು. ಅದು ತುಂಬ ಜೋರಾಗಿದ್ದುದರಿಂದ ನಾಗ ಹಾಗೇ ತತ್ತರಿಸಿ ಬೀಳುವನು. ಸೋಮಣ್ಣ ಸಾವರಿಸಿಕೊಂಡು ಏನೂ ಆಗಿಲ್ಲವೆಂಬಂತೆ ನಟಿಸುವನು. ತತ್ತರಿಸಿ ಬಿದ್ದ  ನಾಗ ಮೆಲ್ಲನೆ ಎದ್ದು “ನಾ ಈ ಮ್ಯಾಳದಾಗ ಇರಾಣಿಲ್ಲ. ಇನ್ನ ಇಲ್ಲಿ ನಾ ಇರಾಣಿಲ್ಲ” ಎನ್ನುತ್ತ ಹೋಗಿ ಬಿಡುವನು. ‘ನಾಗೂ ನಾಗೂ’ ಎಂದು ಸಾವಂತ್ರಿ ಬೆನ್ನು ಹತ್ತುವಳು. ಇದನೆಲ್ಲ ಮೂಕಳಾಗಿ ನೋಡುತ್ತಿದ್ದ ಶಾರಿ ಎಲ್ಲವನ್ನು ತೀರ್ಮಾನಿಸಿದಂತೆ ಸೋಮಣ್ಣನ ಎದುರು ಬರುವಳು.)

ಶಾರಿ : ಸಾವ್ಕಾರ, ಇನ್ನ ವಿಚಾರ ಮಾಡಬೇಕಾದ್ದೇನೂ ಉಳಿದಿಲ್ಲ. ನಿಮ್ಮ ಸೂಳಿ ಆಗಾಕ ನಾ ತಯಾರಿಲ್ಲ. ನಾವು ದಾಸರು, ಬಡವರು. ನೀವೇನೋ ದೊಡ್ಡ ಕಲಾಪ್ರೇಮಿಗಳು ಅಂತ ಬಂದಿವಿ. ನೀವು ಖರೇನs ಕಲಾಪ್ರೇಮಿ ಆಗಿದ್ದರ ನಿಮ್ಮ ಮುಂದ ಹಗಲೀರಾತ್ರಿ ಕುಣೀತಿದ್ದೆ. ಆದರ ನಿಮ್ಮ ಗುಲಾಬೀ ಮಾತಿನ ಹಿಂದ ಮುಳ್ಳ ತುಂಬ್ಯಾವ. ನೀವೇನೋ ದೊಡ್ಡ ಶ್ರೀಮಂತರು. ಜಗತ್ತಿನಾಗ ಇದ್ದವರನ್ನೆಲ್ಲಾ ನಿಮ್ಮ ನೊಗಕ್ಕ ಹೂಡಬಲ್ಲಿರಿ. ಆದರ ನಾ ನಿಮ್ಮ ದನಾ ಆಗಾಕ ತಯಾರಿಲ್ಲ. ನಮ್ಮಪ್ಪಗ ಇಂದ ರೊಕ್ಕ ಕೊಟ್ಟೀರಲ್ಲಾ,-
(ಎನ್ನುತ್ತ ರಭಸದಿಂದ ದಾಸನ ಬಳಿಗೆ ಹೋಗುವಳು. ಇವೆಲ್ಲ ಅನಿರೀಕ್ಷಿತಗಳನ್ನು ಬೆರಗಿನಿಂದ ನೋಡುತ್ತ ನಿಂತ ಅವನ ಜೇಬಿನಲ್ಲಿ ಕೈ ಹಾಕಿ ನೂರರ ನೋಟು ಹೊರತೆಗೆದು ಸೋಮಣ್ಣನಿಗೆ ಕೊಡಹೋಗುವಳು. ಆತ ಸುಮ್ಮನೆ ನಿಲ್ಲುವನು. ಅವನ ಮೇಲೆ ಎಸೆದು ಹೊರಟಾಗ ಸೋಮಣ್ಣ ಎಲ್ಲರ ಗಮನ ಸೆಳೆಯುವಂತೆ ದೊಡ್ಡದಾಗಿ ನಗುವನು. ಶಾರಿ ತಿರುಗಿ ನಿಲ್ಲುವಳು.)

ಸೋಮಣ್ಣ : ನಾ ಅಂದರ ನಿಮ್ಮ ಆಟದಾಗಿನ ರಾಕ್ಷಸ ಅಂಬವರ್ಹಾಂಗ ಆಡ್ತೀಯಲ್ಲ ಸಂಗೀತಾ! ದುಡ್ಡು ಇದ್ದದ್ದರಿಂದ ನಾ ದೇವರಾಗಲಿಲ್ಲ. ಖರೆ. ಆದರ ಕೊನೇಪಕ್ಷ ಮನುಷ್ಯ ಅಂತೂ ಹೌದೊ? ಮನುಷ್ಯ ಆಗಿ ನಿಮ್ಮ ಆಟ ಮೆಚ್ಚಿಕೊಂಡದ್ದೂ ತಪ್ಪೇನು?

ಶಾರಿ : ನಿಮಗೂ ಮನಶೇರಂದರ ಹೆಂಗರಿ ಸಾವ್ಕಾರ್ರs? ನಿಮ್ಮ ಕೈಯಾಗ ಒಂದ ಮಂತ್ರ ಐತಿ. ಬೇಕಾದ ಗಂಡಹೆಣ್ಣಿರಲಿ, ಅವರ ಹೊಟ್ಟೀಮ್ಯಾಲ ಹಿಂಗ ನೀವು ಮಂತ್ರ ಹಾಕಿದರ ಸಾಕು,-ಅವರೆಲ್ಲ ನಾಯಿಗಳಾಗತಾರ.
(ನಾಯೀಮಗನನ್ನು ತೋರಿಸಿ)

ಅವ ಹಸಿವಿನಿಂದ ನಿಮ್ಮ ನಾಯಿ ಆಗ್ಯಾನ. ನಾವೂ ಆದಿವಿ. ನಿಮ್ಮಂಥವರ ಕೈಯಿಂದ ಮಂತ್ರ ಹಾಕಿಸಿಕೊಳ್ಳುವವರು ನಾವು ಮನುಷ್ಯರು. ನೀವಲ್ಲರಿ.

ಸೋಮಣ್ಣ : ನಾ ಮನುಷ್ಯನೂ ಅಲ್ಲಂತೀಯೇನು?

ಶಾರಿ : ಅಥವಾ ನಿಮ್ಮದs ಬ್ಯಾರೇ ಜಾತಿ ಇದ್ದೀತು. ಅದಲ್ಲದಿದ್ದರೂ ನೀವು ಶ್ರೀಮಂತರಂತೂ ಹೌಂದ? ನಮ್ಮಂಥಾ ಬಡವರಿಗೂ ನಿಮಗೂ ಯಾ ಊರ ಹಾದಿ?

ಸೋಮಣ್ಣ : ಹುಚ್ಚಹುಡಿಗಿ, ನನ್ನನ್ನ ಭಾಳ ತಪ್ಪ ತಿಳಿಕೊಂಡೀದಿ ನೀನು. ಈ ದುಡ್ಡಿನಿಂದಾಗಿ ನಾ ನಿಮಗಿಂತ ಬ್ಯಾರೇ ಆಗಿದ್ದರ ಆ ದುಡ್ಡ ನನಗ ಬ್ಯಾಡs ಬ್ಯಾಡ, ಇಕಾ ತಗೊಳ್ರಿ ಎಸೀತೀನಿ…
(ಎನ್ನುತ್ತ  ತನ್ನ ಬಳಿಯ ದುಡ್ಡನ್ನು ಎಸೆಯತೊಡಗುತ್ತಾನೆ. ಮೂಲಕ ಶಾರಿಗೆ ತನ್ನ ಧಾರಾಳತನ, ತ್ಯಾಗಗಳನ್ನು ಮನದಟ್ಟು ಮಾಡಿಕೊಡುವುದು ಅವನ ಉದ್ದೇಶವಾಗಿತ್ತು. ಆದರೆ ಅದಕ್ಕೆ ದಾಸ ಬಲಿಯಾಗುತ್ತಾನೆ. ಶಾರಿ ಇನ್ನೂ ಹೇಸಿಕೊಳ್ಳುತ್ತಾಳೆ. ದಾಸ ಆಸೆಬುರುಕತನದಿಂದ ಮಂಡೆಗಾಲೂರಿ ನೋಟುಗಳನ್ನು ಆರಿಸಿಕೊಳ್ಳತೊಡಗುವನು.)

ದಾಸ : ಛೇ ಛೇ, ಸಂಗೀತಾ, ಈಗಲಾದರೂ ತಿಳಕೊ ಸಾವ್ಕಾರ್ರು ಎಂಥಾ ದಿಲ್ ದಾರಂತ!

ಶಾರಿ : ಆ ರೊಕ್ಕಾ ಮುಟ್ಟಬ್ಯಾಡ ಅಂದೆ.

ದಾಸ : ಛೇಛೇ ಆರಿಸಿ ತಿರುಗಿ ಸಾವಕಾರ್ರಿಗೇ ಕೊಡತೀನಿ.
(ಸಾವಂತ್ರಿ ಓಡಿಬರುವಳು. ಅಯ್ ಶಿವನ! ಎನ್ನುತ್ತ ಅವಳೂ ಹಣ ಆರಿಸಿಕೊಳ್ಳತೊಡಗುವಳು. ತಕ್ಷಣ ದಾಸ ರೇಗುವನು. ಇಬ್ಬರೂ ನಾಯಿಗಳ ಹಾಗೆ ವಿಕಾರವಾಗಿ ಎದುರಾಗುವರು.)

ಶಾರಿ : (ಕಿರುಚಿ) ಆ ಹಣ ಮುಟ್ಟಬ್ಯಾಡ್ರಿ ಅಂದೆ.

ಸಾವಂತ್ರಿ : ಏನಮಾತು! ಬಡವರು ತಗೊಳ್ಲಿ ಅಂತ ಸಾವ್ಕಾರ್ರು ತೂರ್ಯಾರ. ತಗೋ ಬ್ಯಾಡಂದರ?

ದಾಸ : ನೀ ಹಿಡದರ ನಿನ್ನ ಒದೀತೀನಿ.

ಸಾವಂತ್ರಿ : ಮತ್ತ ನೀಯಾಕ ಆರಿಸಿಕೊಳ್ತೀಯೊ ಭಾಡ್ಯಾ? ಸಾವ್ಕಾರ್ರು ಎಲ್ಲರಿಗೂ ಎಸದ್ದಾರ, ನಿನಗೊಬ್ಬಗs ಅಲ್ಲ.

ದಾಸ : ಏ, ಮ್ಯಾಳದ ಯಜಮಾನ ನಾನು! ಸಂಗೀತಳ ತಂದಿ ನಾನು!

ಸಾವಂತ್ರಿ : ಸಂಗೀತಳ ತಾಯಿ ನಾನು.

ದಾಸ : ನಾ ಆರಿಸಿ ತಿರಿಗಿ ಸಾವ್ಕಾರಿಗೇ ಕೊಡತೀನಿ.

ಸಾವಂತ್ರಿ : ನಾನೂ ಕೊಡತೀನಿ.

ಶಾರಿ : (ಸೋತು) ಆ ಹಣ ಇಲ್ಲಿ ಕೊಡ್ರೀ ಅಂದೆ.
(ಅವಳನ್ನು ನೋಡಿ ದಾಸ, ಸಾವಂತ್ರಿ ಇಬ್ಬರೂ ಗಾಬರಿಯಾಗುವರು. ಶಾರಿ ಹೋಗಿ ಅವರ ಕೈಯಲ್ಲಿಯ ದುಡ್ಡನ್ನು ಕಸಿದುಕೊಂಡು ಸೋಮಣ್ಣನಿಗೆ ಕೊಡ ಹೋಗುವಳು. ಆತ ಸುಮ್ಮನೇ ನಿಂತುದಕ್ಕೆ ಅಲ್ಲೇ ಪಕ್ಕದಲ್ಲಿ ಅದನ್ನು ಚೆಲ್ಲುವಳು.)

ಶಾರಿ : ನಾಟಕ ಭಾಳ ಚಂದ ಮಾಡಿದಿರಿ ಸಾವ್ಕಾರ್ರs. ಎಷ್ಟ ಚಂದ ಮಂತ್ರ ಹಾಕಿದಿರಿ! ಎಂಥಾ ಮೋಡಿಕಾರರು ನೀವು! ನಾ ಹೇಳಿದ್ದಿಲ್ಲಾ, ನೀವು ಮನುಷ್ಯರಲ್ಲಂತ! ನಾ ಇನ್ನ ಇಲ್ಲಿ ಖಂಡಿತ ಇರೋದಿಲ್ಲ.
(ಹೊರಡುವಳು. ಅವಳೆದುರಿಗೆ ಸೋಮಣ್ಣ ಅಡ್ಡ ಬಂದು)

ಸೋಮಣ್ಣ : ಇನ್ನs ಇಬ್ಬರ ಪರಿಚಯ ಮಾಡಿಕೊಡಬೇಕು. ಅದಷ್ಟಾದರ ನೀ ಹೋಗಬಹುದು. ಒಬ್ಬ ನಾನು. ಸಾವ್ಕಾರ ಸೋಮಣ್ಣ ಅಂತ ನನ್ನ ಹೆಸರು. ನೀರಿನಾಗಿನ ನೆರಳ ನೋಡಿ ಹಾರೋ ಹಕ್ಕೀ ಹೊಡೆದ-ಅಂತ ನನ್ನ ಖ್ಯಾತಿ. ಇನ್ನೊಂದು ನನ್ನ ನಾಯಿ.
(ನಾಯೀಮಗನನ್ನು ತೋರಿಸಿ)

ಇದs ನನ್ನ ನಾಯಿ. ಕಚ್ಚಂದರ ಕಚ್ಚತೈತಿ. ಬೊಗಳಂದರ ಬೊಗಳತೈತಿ. ಅಷ್ಟ ಅಲ್ಲ, ಒಮ್ಮೊಮ್ಮಿ ಹಾಡತೈತಿ. ನಿನ್ನಷ್ಟ ಚೆಲೋ ಅಲ್ಲ. ಆದರೂ ಅದರ ಜಾತಿಗಿ ಅದ ಹೆಚ್ಚs ಅನ್ನಬೇಕು. ಎಂಥೆಂಥಾ ಬ್ಯಾಟೀನ ಹೆಂಗೆಂಗ ಹಾರಿ ಹಿಡದೈತಿ ಗೊತ್ತಾ? ಇಡೀ ತಗ್ಗಿನಾಗ ಇಂಥಾ ಜಾತಿವಂತ ನಾಯಿ ಹುಡುಕಿದರೂ ಸಿಕ್ಕೋದಿಲ್ಲ. ಇದು ಯಾವತ್ತೂ ಲೋಡ ಮಾಡಿದ ಬಂದೂಕಿನ್ಹಾಂಗ. ಈಗ ನೀ ಒಂದ ಹೆಜ್ಜೀ ಮುಂದಿಟ್ಟರೂ ಹಾರಿ ನಿನ್ನ ಗಂಟಲ ಹಿಡೀತೈತಿ.

ಶಾರಿ : ನಿಮ್ಮ ನಾಯೀ ಆಟ ನನ್ನ ಮುಂದ ನಡೆಯೋದಿಲ್ಲ.

ಸೋಮಣ್ಣ : ತೋರಿಸಂದ್ಯೇನು? ಏ ನಾಯಿ,-
(ತಕ್ಷಣ ನಾಯೀಮಗ ಹೋಗಿ ಬಾಗಿಲಿಗಡ್ಡ ನಿಲ್ಲುವನು. ಶಾರಿ ಧೈರ್ಯದಿಂದ ಮುನ್ನಗ್ಗಬೇಕೆಂದಾಗ ನಾಯೀಮಗ ಅವಳನ್ನು ಹಿಂದೆ ದಬ್ಬುತ್ತಾನೆ. ಶಾರಿ ಕೆಳಕ್ಕೆ ಬಿದ್ದು ಕಿರಚಬೇಕೆಂಬಷ್ಟರಲ್ಲಿ ಸೋಮಣ್ಣ ಅವಳ ಬಳಿ ಕುಳಿತು ಪ್ರೀತಿಯಿಂದೆಂಬಂತೆ ಅವಳ ಗದ್ದ ಹಿಡಿದು)

ಇನ್ನಮ್ಯಾಲ ಈ ನಾಯೀ ಕಾಲಿನಾಗs ನೀ ಬಿದ್ದಿರತಿ, ನನಗ ಒಳಗಾಗೋ ತನಕ. ಏ ನಾಯೇ ಈಕಿನ್ನ ಹೊರಗ ಬಿಡಬ್ಯಾಡೋ.
(ಧಿಮಾಕಿನಿಂದ ದಾಸನ ಕಡೆ ನೋಡುವನು. ಅವರು ಗಾಬರಿಯಲ್ಲಿದ್ದಾರೆ.)

ಏನ ಮಾವಾ, ಬರೋಬರೀನ?
(ಏನು ಹೇಳಲೂ ತೋಚದೆ ದಾಸ ಕತ್ತು ಹಾಕುವನು. ಸೋಮಣ್ಣ ಶಾರಿಯ ಕಡೆಗೊಂದು ಮುದ್ದು ತೂರುವನು. ಅವಳು ಥೂ ಎಂದು ಉಗುಳಿದೊಡನೆ ಸರ್ರನೆ ಹೋಗುವನು.)