ನನ್ನ ಮಿತ್ರರಾದ, ಕನ್ನಡದ ಖ್ಯಾತ ನಾಟಕಕಾರ ಹಾಗೂ ಕವಿ ಡಾ|| ಚಂದ್ರಶೇಖರ ಕಂಬಾರರ ಈ ನಾಟಕಕ್ಕೆ ಮುನ್ನುಡಿ ಬರೆಯುವುದು ನನಗೆ ಸಂತೋಷದ ವಿಷಯವೆಂದರೆ ಅದು ಔಪಚಾರಿಕವಲ್ಲ. ‘ನಾಯಿಕಥೆ’ ಎಂಬ ಈ ನಾಟಕವನ್ನು ಓದಿ ಮುಗಿಸಿದ ಮೇಲೆ ಅದು ಕೊಟ್ಟ ಅನುಭವದಲ್ಲಿ ನೇರ ಹಾಗೂ ಸಂದಿಗ್ಧ ದೂರ ನೆಲೆಗಳು ಇರುವುದೂ ನನ್ನ ಖುಷಿಗೆ ಕಾರಣವಾಗಿದೆ. ಜೊತೆಗೆ ಭಾಷೆ ಮತ್ತು ಬಂಧಗಳಲ್ಲಿ ವಿಶಿಷ್ಟರಾಗಿ ಕಾಣಿಸುತ್ತ, ಗ್ರಾಮೀಣ ಸಂಸ್ಕೃತಿಯ ಸ್ಮೃತಿ ಮತ್ತು ಸಂಘರ್ಷದ ಎಳೆಗಳಿಂದ ಕೃತಿ ಕಟ್ಟ ಹೊರಡುವ ಕುಶಲತೆ ತೋರಿಸುತ್ತ ಬಂದ ಕಂಬಾರರು ಒಂದು ರೀತಿಯಲ್ಲಿ ಕುತೂಹಲಕರ ಸಾಹಿತ್ಯವ್ಯಕ್ತಿ. ನವ್ಯಕಾವ್ಯದ ಸೆಲೆಯಲ್ಲಿ ಸೇರಿದಾಗಲೂ ತಮ್ಮ ಶೈಲಿಯ ವಿಶಿಷ್ಟತೆಯಿಂದ ವಿಭಿನ್ನರಾಗಿ ಕಂಡ ಕಂಬಾರರ ಕನ್ನಡ ಆಧುನಿಕ ಪ್ರಭಾವಗಳ ಕಲೆಯೊಳಗೆ ರೊಯ್ಯನೆ ಹರಿಯುವ ಗ್ರಾಮೀಣ ಸಂಸ್ಕೃತಿಯ ಕುರುಹೋ ಎಂಬಂತಿತ್ತು. ನವ್ಯ ಸಾಹಿತ್ಯ ಒಗ್ಗಿಸಿಕೊಂಡ ನಯ ನಾಜೂಕಿನ ಮಧ್ಯಮವರ್ಗದ ಸಂಸ್ಕೃತಿಯ ಸೆಳೆತ ಅವರ ನಾಟಕಗಳ ವಸ್ತುವಿನಲ್ಲಿದ್ದರೆ ಲಯ ಮತ್ತಿತರ ಮಜಲುಗಳಲ್ಲಿ ಕಾಣುವ ಮಣ್ಣಿನ ಮಿಡಿತಗಳ ದ್ವಂದ್ವ ಅವರ ಭಾಷಾಪ್ರಯೋಗದಲ್ಲಿ ಇರುತ್ತದೆ. ಇದು ಗ್ರಾಮೀಣ ಬದುಕಿನಿಂದ ಬರುವ ಕಲಾಕಾರರು ಎದುರಿಸುವ ಸಮಸ್ಯೆಯೂ ಹೌದು. ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಿವಾರಿಸಿಕೊಳ್ಳಲು ಪ್ರಯತ್ನಿಸಬಹುದು. ನಾರ್ಸಿಸಸ್, ಚಾಳೇಶದಂಥ ನಾಟಕಗಳನ್ನು ಬರೆದ ಕಂಬಾರರೇ ‘ಹೇಳತೇನ ಕೇಳ’ದಂಥ ಕಾವ್ಯಕೃತಿ ಹಾಗೂ ಜೋಕುಮಾರಸ್ವಾಮಿ, ಜೈಸಿದನಾಯಕ, ಸಂಗ್ಯಾಬಾಳ್ಯ ಅನಬೇಕೊ ನಾಡೋಳಗ ಮುಂತಾದ ಕೃತಿಗಳನ್ನು ಕೊಟ್ಟರೆಂಬುದನ್ನಿಲ್ಲಿ ಜ್ಞಾಪಿಸಿಕೊಳ್ಳಬಹುದು. ಅದೇನೆ ಇರಲಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಭಾಷೆಯ ದೃಷ್ಟಿಯಿಂದ ಕಂಬಾರರನ್ನು ವಿಮರ್ಶಕರು ವಿಶಿಷ್ಟರೆಂದು ಗುರುತಿಸಿದ್ದಾರೆ. ನನಗೆ ಇದೇ ಅಂಶ ವಿಶಿಷ್ಟ ಎನ್ನಿಸುವುದು ಮಧ್ಯಮವರ್ಗದ ರೋಚಕ ಮನಸ್ಸಿನ ಫಲವಾದ ವಿಮರ್ಶಾ ಉದಾರಗಳ ಮಾದರಿಯಲ್ಲಲ್ಲ. ಶಿಷ್ಟ ಸಂಸ್ಕೃತಿಯ ಸ್ತರದಲ್ಲೇ ಸ್ಥಗಿತಗೊಳ್ಳಬಹುದಾದ ಭಾಷಾಬಳಕೆಯಿಂದ ಬಿಡುಗಡೆ ಹೊಮದಲು ಸಾಧ್ಯಮಾಡಿದ ಗ್ರಾಮೀಣ ಸತ್ವದ ಕಾರಣಕ್ಕಾಗಿ ಕಂಬಾರರ ಭಾಷೆ ನನಗೆ ಮುಖ್ಯವೆನ್ನಿಸುತ್ತದೆ.

ಕಂಬಾರರ ‘ನಾಯೀಕಥೆ’ಯಲ್ಲಿ ಅನಗತ್ಯ ಗೋಜಲು ಇಲ್ಲದಿರುವುದೊಂದು ವಿಶೇಷ. ಅತ್ಯಂತ ಸಮಕಾಲೀನ ಜ್ವಲಂತ ಸಮಸ್ಯೆಯೂ ಕಂಬಾರರ ಕೈಯ್ಯಲ್ಲಿ ಸೆಕ್ಸ್ ಸ್ಪರ್ಶವಿಲ್ಲದೆ ಹೊರಬರಲಾರದೇನೊ ಎಂಬಂಥ ಗುಮಾನಿ ಅನೇಕ ಪ್ರಗತಿಪರ ವಿಚಾರಶಿಲರಲ್ಲಿದದರೆ ಅದಕ್ಕೆ ಕಾರಣವಿದೆ. ಜೋಕುಮಾರ ಸ್ವಾಮಿ ಮತ್ತು ಜೈಸಿದನಾಯಕ ನಾಟಕಗಳ ವಸ್ತುವಿನಲ್ಲಿರುವ ಪ್ರಖರ ಸಾಮಾಜಿಕ ಸತ್ಯವನ್ನು ಯಾರಾದರೂ ಗುರುತಿಸಬಹುದು. ಆದರೆ ಅದು ಹೆಣ್ಣಿನೊಂದಿಗೆ ಹೆಣೆದುಕೊಳ್ಳುತ್ತ ಗೌಣವಾಗುವ ಅಥವಾ ಬೇರೆ ಮಗ್ಗುಲಾಗುವ ರೀತಿಯಿಂದ ಸಂದಿಗ್ಧ ಉಂಟಾದರೆ ಆಶ್ಚರ್ಯವಿಲ್ಲ. ಕಂಬಾರರು ಕೊಡುವ ಸಮೃದ್ಧ ಸಂಕೇತಗಳು ಹೊರಡಿಸುವ ಧ್ವನಿ ವಸ್ತುವಿನ ಮೂಲಸ್ತರವನ್ನು ಮರೆಸುವಷ್ಟು ಶಕ್ತವಾಗುವ ಸೋಜಿಗಕ್ಕೆ ಕಾರಣವನ್ನು ನವ್ಯ ಸಾಹಿತ್ಯದ ನಿಲುವುಗಳಲ್ಲೇ ಕಾಣಬಹುದು. ಕಲೆಯೊಂದು ಕಟ್ಟಿಕೊಳ್ಳುವ ಕೃತಿಬಂಧಕ್ಕೆ ಅದು ಕೊಟ್ಟ ಪ್ರಾಶಸ್ತ್ಯವನ್ನು ನಿರ್ದಿಷ್ಟ ವಸ್ತು ಮತ್ತು ಧೋರಣೆಗಳಿಗೆ ಕೊಟ್ಟಿರಲಿಲ್ಲ. ಹೀಗಾಗಿ ಗ್ರಾಮೀನ ಬದುಕಿನ ವಾಸ್ತವ, ಜಾನಪದ ತಂತ್ರದ ಬಳಕೆಗಳಿದ್ದೂ ನವ್ಯದ ಛಾಪು ಕಾಣುವ ನಾಟಕಗಳನ್ನು ಕಂಬಾರರು ಕೊಟ್ಟರು. ಈ ದ್ವಂದ್ವವನ್ನು ನಾವು ಆಳದಲ್ಲಿ ಸಮಾಜದ ಕಟುವಾಸ್ತವದ ಎಳೆಗಳನ್ನುಳಿಸಿದ ಅನುಬವ ಮತ್ತು ನಿರ್ದಿಷ್ಟ ಸಾಹಿತ್ಯ ಚಳುವಳಿಯ ಪ್ರಜ್ಞೆಗಳ ಹೊಂದಾಣಿಕೆ ಹುಟ್ಟಿಸಿದ ಬಿರುಕೆಂದು ಭಾವಿಸಬಹುದು. ಆದರೆ ‘ನಾಯಿಕಥೆ’ಯಲ್ಲಿ ಕಂಬಾರರು ಇದರಿಂದ ಹೊರಬಂದು ಸ್ಪಷ್ಟ ನೆಲೆಯಲ್ಲಿ ನಿಂತು ಸಮಕಾಲೀನ ಆಶಯವುಳ್ಳ ನಾಟಕವನ್ನು ಕೊಟ್ಟಿದ್ದಾರೆ. ಜಾನಪದ ತಂತ್ರದಿಂದ ಕೂಡಿದ ಈ ನಾಟಕ ಜನಪ್ರಿಯ ಮಾದರಿಯನ್ನು ರೂಪಿಸಿಕೊಂಡಿದೆ. ‘ಜನಪ್ರಿಯ’ ಎಂದ ತಕ್ಷಣ ಅದರ ದರ್ಜೆಯನ್ನು ಕುರಿತು ಗುಮಾನಿ ಪಡಬೇಕಿಲ್ಲ. ಹೆಚ್ಚು ಜನರೊಂದಿಗೆ ಸಂವಾದ ಸಾಧ್ಯವಾಗಿಸುವ ಹಾಗೂ ಸಮಾಜೀಕರಣಗೊಂಡ ಕೃತಿಯೆಂಬ ಅರ್ಥದಲ್ಲಿ ಈ ಮಾತನ್ನು ಬಳಸಲಾಗಿದೆ. ಇದೇ ಸಂದರ್ಭದಲ್ಲಿ ‘Concept of popularity’ ಯನ್ನು ಕುರಿತು ಬರ್ಟೋಲ್ಟ್ ಬ್ರೆಕ್ಟ್ ಕೊಡುವ ವಿವರಣೆಯನ್ನು ಉಲ್ಲೇಖಿಸಿದರೆ ಸೂಕ್ತವಾದೀತು : “Popular-means intelligible to the broad masses, taking over their own forms of Expression and Enriching them/adopting and consolidating their stand point/representing the most progressive section of the people in such a way that it can be take over the leadership.”

ಕಂಬಾರರ ಉಳಿದ ನಾಟಕಗಳ ವಿಷಯ ಒತ್ತಟ್ಟಿಗಿರಲಿ, ಸರಳ, ಸ್ಪಷ್ಟ, ಶಕ್ತ ನಾಟಕವಾದ ‘ನಾಯಿಕಥೆ’ಗೆ ಮೇಲಿನ ಮಾತುಗಳು ಹಿನ್ನೆಲೆ ಒದಗಿಸುತ್ತವೆ. ಈ ನಾಟಕ ಸಾಮಾನ್ಯ ಸಮುದಾಯಕ್ಕೆ ಸ್ಪಷ್ಟವಾಗುವ, ಅವರದೇ ವಸ್ತು ಮತ್ತು ರೂಪಗಳನ್ನು ಅಳವಡಿಸಿಕೊಂಡ, ನಿರ್ದಿಷ್ಟ ನಿಲುವನ್ನು ನಿರೂಪಿಸುವ ನಾಟಕ. ಮುಂದೆ ಈ ಮಾತನ್ನು ವಿವರಿಸಲು ಪ್ರಯತ್ನಿಸುತ್ತೇನೆ.

ನಾಟಕದ ಮೊದಲ ಹತ್ತು ಪುಟಗಳಲ್ಲಿ ವಸ್ತುವಿನ ಒಳಸುಳಿಗೆ ಸಂಬಂಧಿಸಿದ ಭೂಮಿಕೆ ಸಿದ್ಧವಾಗುತ್ತದೆ. ಕಥೆಗಾರನಿಗೆ ಪ್ರೀತಿ ಪ್ರೇಮದ ಮೇಲೆ ಕತೆ ಹೇಳುವ ಆಸೆ. ಅದರ ಅಖಂಡ ಶಕ್ತಿಯ ಬಗ್ಗೆ ಅವನಿಗೆ ನಂಬಿಕೆ. ಆದರೆ ಹಿಮ್ಮೇಳದವನಿಗೆ ಅದು ಹಳೇ ಕತೆ.. ಈಗಿನ ಸಮಾಜದಲ್ಲಿ ದುಡ್ಡೇ ಮುಖ್ಯ ಎಂಬುದು ಅವನ ವಾದ. ಈ ಘರ್ಷಣೆಯನ್ನು ಅವರ ಚಕಮಕಿಯಲ್ಲಿ ನಾಟಕಕಾರರು ಸ್ಪಷ್ಟಗೊಳಿಸಿದ್ದಾರೆ. ‘ಹಗುರಲ್ಲವೊ ಪ್ರೀತಿ ಪ್ರೇಮಾ| ಏನ ಹೇಳಲಿ ಅದರ ಮಹಿಮಾ|’ ಎನ್ನುವ  ಕಥೆಗಾರ- ‘ಭೂಮಿ ತಿರಗತೈತಿ ಯಾತಕ | ಆ ರವಿಯ ಸುತ್ತ | ಪ್ರೀತಿ ಪ್ರೇಮದಿಂದ ಅಲ್ಲವೆ?|’ ಎಂದು ಹಾಡಲಿಕ್ಕೆ ಹೊರಟರೆ, ಹಿಮ್ಮೇಳದವನು ‘ದುಡ್ಡಿದ್ದವ ದೊಡ್ಡವಲ್ಲವೆ?| ಹೇಳೆನ್ನ ಗುರುವೆ | ದುಡ್ಡಿದ್ದವ ದೊಡ್ಡವಲ್ಲವೆ? |’ ಎಂದು ಶುರುಮಾಡಿ ವಾದ ಹೂಡುತ್ತಾನೆ. ಈ ವಾದ-ವಿವಾದಗಳ ಕಡೆಗೆ ಕಥೆಗಾರನೇ “ದುಡ್ಡೂ ದೊಡ್ಡದಿರಬೌದು. ಆದ್ದರಿಂದ ಈ ಹೊತ್ತಿನ ದಿವಸ, ನಾವು ಪ್ರೇಮ ಮತ್ತು ದುಡ್ಡು ಎರಡೂ ಇರುವಂಥಾ ಕತಿ ಹೇಳೋಣ” ಎಂಬ ಹೊಂದಾಣಿಕೆಗೆ ಬರುತ್ತಾನೆ. ಇದು ನಾಟಕದ ಥೀಮನ್ನು ಕುರಿತ ಮಾತೇ ಆಗಿದೆ. ನಾಟಕದಲ್ಲಿ ದುಡ್ಡು ಮತ್ತು ಪ್ರೇಮ ಪರಸ್ಪರ ಒಂದರೊಳಗೊಂದಾಗುವ ರೀತಿಯಿಂದಲೇ ಇದು ಕೇವಲ ಪ್ರೇಮದ ಕತೆಯಾಗಿಲ್ಲ. ‘ಕಥೆಗಾರ’ನಿಗೆ ಪ್ರೀತಿ ಪ್ರೇಮದ ಕತೆ ಹೇಳಿದರೆ ಸಾಕೆಂಬ ಭಾವನೆಯಿದ್ದರೂ ‘ನಾಟಕಕಾರ’ ಕಂಬಾರರು ಕಂಡುಕೊಂಡಿರುವ ನಮ್ಮ ‘ಕ್ರೌರ್ಯ’ ಈ ನಾಟಕವನ್ನು ‘ಆದರ್ಶ ಪ್ರೇಮ’ದ ಸುಂದರತೆಯಿಂದ ಪಾರುಮಾಡಿದೆ. ‘ಕಥೆಗಾರ’ ಕಡೆಯಲ್ಲಿ ಪ್ರೀತಿಪ್ರೇಮದ ‘ಮಹಿಮೆ’ಯನ್ನು ಹೊಗಳಿ ಹಾಡಿದರೂ ಅದು ಸಾಧಿತವಾಗುವುದಕ್ಕೆ ಕಾರಣ ನಾಟಕಕ್ಕೆ ಒದಗಿದ ಒಡಲು ಸಮಕಾಲೀನ ಸತ್ವ ಪಡೆದದ್ದೇ ಆಗಿದೆ. ಪ್ರೇಮಕ್ಕೆ ಪ್ರತಿಭಟನೆಯ ಧ್ವನಿ ಕೊಡುತ್ತದೆ. ಕಥೆಗಾರ ಮತ್ತು ಹಿಮ್ಮೇಳದ ನಡುವೆ ನಡೆದ ವಾದ ವಿವಾದದಲ್ಲಿ ಯಾವುದಕ್ಕಿಂತ ಯಾವುದು ದೊಡ್ಡದೆಂಬ ಸರಳ ಪ್ರಶ್ನೆ ಮಥ್ರ ಅಡಗಿದೆ. ಆದ್ದರಿಂದಲೇ ಕಡೆಯಲ್ಲಿ ಕಥೆಗಾರ “ಪ್ರೀತಿಪ್ರೇಮ ಕಾಸಿಗಿಂತ ದೊಡ್ಡದಂತ, ದೊಡ್ಡ ದೊಡ್ಡವರೆಲ್ಲ ಸಣ್ಣಮಂದಿಗಿ ತೋರಿಸಿಕೊಟ್ಟರು” ಎಂದು ಬೀಗಲು ಸಾಧ್ಯವಾಗಿದೆ. ಆದರೆ ನಡುವೆ ಬರುವ ನಾಟಕದ ಭಾಗ ಇಷ್ಟು ಸರಳವಾಗಿಲ್ಲ. ಅದಕ್ಕಿಂತ ಇದು ದೊಡ್ಡದೆಂದು ಸಾಧಿಸುವ ಸಾಧನ ಮಾತ್ರವಾಗದೆ ಅದನ್ನು ಮೀರಿದ ಸಾಮಾಜಿಕ ಆಯಾಮವನ್ನು ಪಡೆಯುತ್ತದೆ.

ನಾಟಕದ ಭಾಗದಲ್ಲಿ ಬರುವ ಕತೆಯ ಸಂಕ್ಷಿಪ್ತ ವಿವರ ಹೀಗಿದೆ :

ಸೋಮಣ್ಣ ಒಬ್ಬ ಸೊಕ್ಕಿನ ಶ್ರೀಮಂತ. ಕಣ್ಣಿಗೆ ಬಿದ್ದ ಹೆಣ್ಣುಗಳನ್ನು ಕೂಡಲೇಬೇಕೆಂಬ ಹಟದ ಅಹಂಕಾರಿ. ದಾಸರ ಶಾರಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಈತ ನೀರಿನಂತೆ ಹಣ ಸುರಿಯಲು ಸಿದ್ಧನಾಗುತ್ತಾನೆ. ಆಕೆಯಿಂದ ನಿರಂತರ ವಿರೋಧವನ್ನು ಎದುರಿಸುತ್ತಾನೆ. ಜೊತೆಗೆ ನಿಷ್ಠಾವಂತ ಸೇವಕ ‘ನಾಯೀಮಗ’ ತನ್ನ ‘ದಣಿ’ ಸೋಮಣ್ಣನ ವಿರುದ್ಧ ತಿರುಗಿ ಬೀಳುತ್ತಾನೆ. ಶಾರಿ ಮತ್ತು ನಾಯೀಮಗ ಒಂದಾಗುತ್ತಾರೆ.

-ಇದಿಷ್ಟು ಕಥಾ ಹಂದರ ನಾಟಕವಾಗಿ ಹಬ್ಬುವ ಕ್ರಮದಲ್ಲಿ ಪ್ರತಿಭಟನೆಯ ದನಿ ಸ್ಫೋಟಗೊಂಡು ಬಾಯಿಲ್ಲದವನಾದ ‘ನಾಯೀಮಗ’ ತಾನು ಮನುಷ್ಯನೆಂದು ಸಾರುವ ಘಟ್ಟಕ್ಕೆ ಬರುತ್ತದೆ. ಇದು ಅತ್ಯಂತ ಮುಖ್ಯವಾದ ಬೆಳವಣಿಗೆ. ನಾಟಕದ ಪ್ರಾರಂಭದಲ್ಲೇ ‘ನಾಯೀಮಗ’ನ ವಿವರ ಬರುತ್ತದೆ. ಕಥೆಗಾರನೇ ಹೇಳುವ ಪ್ರಕಾರ ಆತನ “ಬೆನ್ನಾಗ ಬಲ ಇರಲಿಲ್ಲ. ಸೆಟೆದೇನೆಂದರ ಎದಿ ಇರಲಿಲ್ಲ. ಯಾವತ್ತೂ ಬಗ್ಗಿಕೊಂಡು ಇರತಿದ್ದ. ಹಿಂಗಾಗಿ ಸಾವ್ಕಾರ ಸೋಮಣ್ಣನ ಪಾದಾ ಕಂಡಿದ್ನs ಹೊರತು ಮೋತೀ ಕಂಡಿರಲಿಲ್ಲ. ಹಡದವರಿರಲಿಲ್ಲ, ಮನೀ ಇಲ್ಲಾ, ಒಂದು ವಿಳಾಸ ಅಂತ ಇರಲಿಲ್ಲಾ. ಅಷ್ಟs ಅಲ್ಲ ಅವಗೊಂದು ಹೆಸರs ಇರಲಿಲ್ಲ” – ಈ ವಿವರಗಳಲ್ಲೇ ನಾಯೀಮಗ ಕೇವಲ ಒಬ್ಬ ವ್ಯಕ್ತಿಯಾಗದೆ, ಅಸಮಾನತೆಯ ಕ್ರೂರ ಸಮಾಜದಲ್ಲಿ ನಿರಂತರವಾಗಿ ನಡೆದುಕೊಂಡು ಬಂದ  ಪರಮ ವಿಧೇಯತಾ ಮೌಲ್ಯದ ಕಡುನಿಷ್ಠ ಪ್ರತಿನಿಧಿಯಾಗಿದ್ದಾನೆ. ಇಡೀ ನಾಟಕದಲ್ಲಿ ಈತನ ಮಾತುಗಳೂ ಕಡಿಮೆ. ಕೇವಲ ಆಜ್ಞಾಪಾಲಕನಾಗಿ ‘ನಿಷ್ಠೆ’ಗೆ ತನ್ನನ್ನು ಮಾರಿಕೊಂಡವ ಈತ. ಈ ಸ್ಥಿತಿಯನ್ನು ಶ್ರೀಮಂತವರ್ಗ ಹೇಗೆ ವೈಭವಿಸಿ ವಂಚಿಸುತ್ತದೆಯೆಂಬುದಕ್ಕೆ ಸೋಮಣ್ಣನ ಈ ಮಾತುಗಳು ಸಾಕ್ಷಿ : “ಇದು ನನ್ನ ನಾಯಿ, ಕಚ್ಚಂದರ ಕಚ್ಚತೈತಿ, ಬೊಗಳಂದರ ಬೊಗಳುತೈತಿ. ಅಷ್ಟs ಅಲ್ಲ, ಒಮ್ಮೊಮ್ಮಿ ಹಾಡತೈತಿ…. ಎಂಥೆಂಥಾ ಬ್ಯಾಟೀನ ಹೆಂಗೆಂಗ ಹಾರಿ ಹಿಡಿದೈತಿ ಗೊತ್ತಾ? ಇಡೀ ತಗ್ಗಿನಾಗ ಇಂಥಾ ಜಾತಿವಂತ ನಾಯಿ ಹುಡುಕಿದರೂ ಸಿಕ್ಕೋದಿಲ್ಲ. ಇದು ಯಾವತ್ತೂ ಲೋಡ ಮಾಡಿದ ಬಂದೂಕಿನ್ಹಾಂಗ.”

ನಾಯೀಮಗನ ಬಗೆಗಿನ ತಿರಸ್ಕಾರ ಮತ್ತು ನಿಷ್ಠೆಯ ವೈಭವೀಕರಣ-ಎರಡೂ ಸೇರಿರುವ ಈ ಮಾತುಗಳು ಊಳೀಗಮಾನ್ಯ ಪದ್ಧತಿಯ ‘ಪ್ರಭು’ಗಳಿಗೆ ತೀರಾ ಸಹಜವೆಮಬುದನ್ನು ಇತಹಾಸವೇ ತೋರಿಸಿಕೊಟ್ಟಿದೆ. ಇವನದು ಇಂಥ ‘ಖ್ಯಾತಿ’ಯಾದರೆ ಸೋಮಣ್ಣನದು ‘ನೀರಿನಾಗಿನ ನೆರಳ ನೋಡಿ ಹಾರೋ ಹಕ್ಕಿ ಹೊಡದ- ಅಂತ ಖ್ಯಾತಿ.’ ಹೀಗೆ ಸೋಮಣ್ಣ ಮತ್ತು ನಾಯೀಮಗ ಈ ಶ್ರೇಣೀಕೃತ ಸಮಾಜದ ವಿರುದ್ಧ ನೆಲೆಗಳಲ್ಲಿ ನಿಂತಿದ್ದಾರೆ. ಒಬ್ಬ ಒಡೆಯ, ಇನ್ನೊಬ್ಬ ಆಳು. ಆಳಿನ ಸ್ಥಿತಿಗೆ ಸರಿಯಾದ ಕಾರಣ ಕೊಡುವವಳು ಸೋಮಣ್ಣನ ಬಲತ್ಕಾರಕ್ಕೊಳಗಾಗಲು ಪ್ರತಿಭಟಿಸುವ ಶಾರಿ. ಅವಳ ಪ್ರಕಾರ ನಾಯೀಮಗ ‘ಹೊಟ್ಟೆ ಸಲುವಾಗಿ ನಾಯಿ ಆಗ್ಯಾನ.’ ಆಕೆ ಸಾವ್ಕಾರ್ ಸೋಮಣ್ಣನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ : “ನೀವೇನೊ ದೊಡ್ಡ ಶ್ರೀಮಂತರು. ಜಗತ್ತಿನಾಗ ಇದ್ದವರನ್ನೆಲ್ಲ ನಿಮ್ಮ ನೊಗಕ್ಕೆ ಹೂಡಬಲ್ಲಿರಿ. ಆದರ ನಾ ನಿಮ್ಮ ದನಾ ಆಗಾಕ ತಯಾರಿಲ್ಲ.”- ಇಲ್ಲಿಯೇ ಈ ನಾಟಕ ಇನ್ನೊಂದು ಆಯಾಮ ಪಡೆಯುವುದು.

ಶೋಷಕ ಸಂಸ್ಕೃತಿಯ ಪ್ರಧಾನ ಲಕ್ಷಣವೆಂದರೆ ಕೆಲವರಿಗೆ ಪರಮ ಅಧಿಕಾರವನ್ನು ಕೊಟ್ಟರೆ ಅನೇಕರಿಗೆ ಪರಮ ವಿಧೇಯತೆಯನ್ನು ಉಪದೇಶಿಸುತ್ತದೆ. ಊಳಿಗಮಾನ್ಯ ಪದ್ಧತಿಯಲ್ಲಿ ಇದು ಮೌಲ್ಯವ್ಯವಸ್ಥೆಯಾಗಿ ರೂಪುಗೊಂಡಿದೆ. ನಾನು ದುಡಿಯುವ ಜನರಿಗೆ ಸಕಲ ಸವಲತ್ತುಗಳಿಂದ ವಂಚಿಸುವ ವಿಚಾರಧಾರೆಯನ್ನು ರೂಪಿಸಿದ್ದನ್ನು ಮತ್ತು ಯಾಜ್ಞವಲ್ಕ್ಯ ಮಹಿಳೆಯನ್ನು ಮಿಥ್ಯೆಯೆಂದು ಕರೆದದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಇವರಿಬ್ಬರೂ ಹೆಣ್ಣಿನ ಹಕ್ಕುಗಳ ಬಗ್ಗೆ ಮಾತಾಡಲಿಲ್ಲ. ಶೋಷಕ ಸಂಸ್ಕೃತಿಯಲ್ಲಿ ಶೂದ್ರರು (ದುಡಿಯುವ ಜನ) ಮತ್ತು ಹೆಣ್ಣು ಸಮಾನರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ನಾಟಕದಲ್ಲಿ ದುಡಿಯುವ ಜನರ ಪ್ರತಿನಿಧಿಯಾಗುವ ‘ನಾಯೀಮಗ’ ಮತ್ತು ವಂಚನೆಯ ವೃತ್ತದಲ್ಲಿ ಸಿಕ್ಕಿ ಸಿಡಿಯುವ ಹೆಣ್ಣಾಗಿ ‘ಶಾರಿ’ ಬರುವುದರಿಂದ ನಾಟಕಕ್ಕೆ ಸಾಂಪ್ರದಾಯಿಕ ಸಂಸ್ಕೃತಿಯ ಸೂಕ್ಷ್ಮಗಳ ಅರಿವು ಒದಗಿ ಬಂದಿದೆ. ಇವರಿಬ್ಬರೂ ಪ್ರತಿಭಟಿಸುವ ಹಂತ ತಲುಪುವುದರಿಂದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಸೀಳಿ ಹೊರಡುವ ಶಕ್ತಿಗಳಾಗಿ ನಮಗೆ ಮುಖ್ಯರಾಗುತ್ತಾರೆ. ಈ ಮೂಲಕ ನಾಟಕವೂ ಮುಖ್ಯವಾಗುತ್ತದೆ. ಶಾರಿಯನ್ನು ಹರಾಜು ಹಾಕುವ ‘ಮೇಳ’ದ ಮಾತುಗಳು ಸಂಸ್ಕೃತಿಯ ಕ್ರೌರ್ಯಕ್ಕೆ ಉತ್ತಮ ಉದಾಹರಣೆ. ಹೀಗೆ ನಾಟಕ ಶೋಷಣೆಯ ಸುರಳಿಬಿಚ್ಚುತ್ತ ಸಾಗಿ ನಾಯೀಮಗ ಮತ್ತು ಶಾರಿಯ ಸ್ಫೋಟದಲ್ಲಿ ಸಾರ್ಥಕತೆ ಪಡೆಯುತ್ತದೆ. ವಿಚಿತ್ರವೆಂದರೆ ‘ಕಥೆಗಾರ’ ತನ್ನ ಪ್ರೀತಿಪ್ರೇಮದ ಮಹಿಮೆಗೆ ಶೋಷಕ ಸಂಸ್ಕೃತಿಯ ಸೂಕ್ಷ್ಮಗಳು ಕೇವಲ ಸಾಧನವೆಂಬಂತೆ ಬಳಸಿಕೊಳ್ಳಲು ಇಚ್ಛಿಸಿದರೂ ನಾಟಕದಲ್ಲಿ ಶೋಷಕ ಸಂಸ್ಕೃತಿಯ ಸೂಕ್ಷ್ಮಗಳ ಮಂಡನೆಗೆ ಪ್ರೀತಿಪ್ರೇಮವೇ ಸಾಧನ ಮಾತ್ರವಾಗುತ್ತದೆ. ನಾಟಕದೊಳಗಿನ ಕಥೆಗಾರನ ಆಶಯವನ್ನು ಮೀರಿ ನಾಟಕ ಬೆಳೆಯುವುದರಿಂದಲೇ ಇದಕ್ಕೆ ಮಹತ್ವ ಬಂದಿದೆ.

ಗೆಳೆಯ ಕಂಬಾರರ ಭಾಷೆಯ ತುರ್ತಿನ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ಕೆಲವು ಕಡೆ ಬಳಸುವ ಭಾಷೆ ಮತ್ತು ಸಂವಾದ ನಾನು ಮೇಲೆ ವಿವರಿಸಿದ ಸೂಕ್ಷ್ಮಗಳಿಗೆ ಪೂರಕವಾಗಿ ಬರುವುದನ್ನು ಕಾಣಬಹುದು :

‘ಸಾವ್ಕಾರ ಸೋಮಣ್ಣನವರು ಬಡವರ ಬೆಳಕಿನಾಗ ತಮ್ಮ ಅರಮನೀಗಿ ಹೋದರು’

‘ಸಾವ್ಕಾರ್ರಿಗಿ ವಯಸ್ಸಾಗೋದಂದರೇನ್ರಿ!’

‘ಏನ್ರೀ ಸಾವ್ಕಾರ ಹೀಗಂತೀರಿ? ಮನೀ ತುಂಬ ರೊಕ್ಕೇನು! ಊರ ತುಂಬ ಆಸ್ತಿಯೇನು! ಬೇಕಂದರ ಸರ‍್ಕಾರ ಕೊಳ್ಳತೀರಿ, ಮಾರತೀರಿ!’

‘ಸೊಕ್ಕಿನಿಂದ ನಿಮ್ಮ ಕಣ್ಣು ನೆತ್ಯಾಗ ಹೋಗ್ಯಾವ ಸಾವ್ಕಾರರs. ಅದಕ್ಕs ನಿಮಗ ಮನಿಶೇರೆಲ್ಲಾ ನಾಯಿಹಾಂಗ ಕಾಣತಾರ.’

‘ಬಡವರಿಗೆ ಉಳಿಗಾಲವಿಲ್ಲಾ ತನಗ ಭಯ ಇಲ್ಲಾಂತ ಹುಟ್ಟುವಾಗಲೇ ವರ ಪಡೆದಾತ. ಮರೆತವರನ್ನ ಮುರೀತಿದ್ದ; ನಂಬಿದವರಿಗಿ ತುಂಬಿ ತುಳುಕತಿದ್ದ.’

‘ಸುಡುವ ಬೆಂಕಿಯ ಕುಡಿದು ಹೂವಿನ ನಗಿಯ ನಕ್ಕಾಕಿ.’

ಎತ್ತಿನ ಕಣ್ಣು ನೆತ್ಯಾಗೇರಿ
ಕಾಣಲಿಲ್ಲ ಶಿವನ ದಾರಿ
ಎಳಿಸಸಿ ಕಾಲಾಗ್ಹಾಕಿ ತುಳದಾವಲ್ಲಾ |
ಹಾಡೋ ಹಕ್ಕಿ ಆದಾವಲ್ಲಾ ಕಂಗಾಲಾ| ಎಲಾ
ಏನ ಬಂತೊ ಎಂಥಾ ಕಾಲ ಹುಯ್ಯಲಾ | ಹಾ
ಬಿಸಿಗಾಳಿ ಮೂಡ್ಯಾವೋ ಶಿವನೆ
ಬಡವರ ಉಸಿರೊಳಗೊs
ಇತ್ಯಾದಿ.

ಇನ್ನು ಸಾವ್ಕಾರ ಸೋಮಣ್ಣನ ‘ಸಾಹಸ’ವನ್ನಾಗಲಿ, ಶಾರಿಯ ಸೌಂದರ್ಯವನ್ನಾಗಲಿ ಜೀವ ತುಂಬಿ ಚಿತ್ರಿಸುವದರಲ್ಲಿ ಕಂಬಾರರು ಯಶಸ್ವೀ ಭಾಷೆ ಬಳಸುತ್ತಾರೆ.

ನಾಟಕದಲ್ಲಿ ನನಗೆ ಕಂಡ ಒಂದು ದೋಷವೆಂದರೆ ಕೆಲವು ಕಡೆ ಅತಿ ನಾಟಕೀಯತೆಯಲ್ಲಿ ಸನ್ನಿವೇಶಕ್ಕೆ ಲಘುತ್ವ ಒದಗುವುದು. ಮೊದಲು ಬರುವ ಬಿಕ್ಷುಕನ ಸನ್ನವೇಶ ನಿರ್ದಿಷ್ಟ ವಿಷಯದ ಸ್ಪಷ್ಟನೆಗಾಗಿ ಬಂದಿರುವುದು ಸರಿಯಾದರೂ ಅತಿನಾಟಕೀಯವಾಗುವುದರಿಂದಲೊ ಏನೊ ವಸ್ತುವಿನ ಗಾಂಭೀರ್ಯಕ್ಕೆ ಒಗ್ಗುವುದಿಲ್ಲ. ದಾಸ ಮತ್ತು ಸಾವಂತ್ರಿಯ ಸಂವಾದಗಳ ಹಾಸ್ಯವೂ ಅಷ್ಟೆ. ಶಾರಿಯ ನಿಲುವನ್ನು ಮೆಚ್ಚಿಕೊಳ್ಳುವ ಮೇಳವೇ ಆಕೆಯ ಹರಾಜಿನ ಸಂದರ್ಭದಲ್ಲಿ ‘ರಿಪೇರಿ ಚಾರ್ಜಿಲ್ಲ’ ಎಂದು ಮುಂತಾಗಿ ಮಾತಾಡುವುದೂ ಅಷ್ಟೆ. ಇನ್ನು ಕಡೆಯಲ್ಲಿ ಸೋಮಣ್ಣನ ಹೆಂಡತಿ ಲಕ್ಷ್ಮಿ ಆಳು ಮಾರುತಿಯ ಜೊತೆ ಓಡಿಹೋದದ್ದು ಅನಿರೀಕ್ಷಿತ ಚಮತ್ಕಾರವೆನ್ನಿಸಿತು. ಇಂಥ ಬೆರಳೆಣಿಕೆಯ ಸಣ್ಣಪುಟ್ಟ ಅಂಶಗಳನ್ನು ಬಿಟ್ಟರೆ ಈ ನಾಟಕ ನಮ್ಮ ಸಂದರ್ಭದ ಗಟ್ಟಿ ನೆಲೆ ಪಡೆದ ಕೃತಿಯೆಂದು ಧಾರಳವಾಗಿ ಹೇಳಬಹುದು.

ಚಂದ್ರಶೇಖರ ಕಂಬಾರರು, ಬದುಕಿನ ಕಟುವಾಸ್ತವದ ವಿಶ್ಲೇಷಣೆಯ ಹಾದಿಯಲ್ಲಿ, ಚರಿತ್ರೆಯ ಗತಿಯಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುವ ಇಂಥ ನಾಟಕಗಳನ್ನು ಮತ್ತಷ್ಟು ಕೊಡಲೆಂಬುದು ನನ್ನ ಆಸೆ ಮತ್ತು ನಿರೀಕ್ಷೆ.

ಬರಗೂರು ರಾಮಚಂದ್ರಪ್ಪ