ಬಹಳ ದಿನಗಳ ಹಿಂದೆ, ನಡೆದ ಒಂದು ಘಟನೆಯನ್ನು ನನ್ನ ಹೆಂಡತಿ ಸೌ|| ಸತ್ಯಭಾಮಾ ಹೇಳಿದಳು. ಹಿಂದಿನಿಂದ ಅದನ್ನು ನಾಟಕವಾಗಿಸಬೇಕೆಂದು ಹೊಂಚುತ್ತಲೇ ಇದ್ದೆ. ಅನೇಕ ಬಾರಿ ಅದನ್ನು ಮಿತ್ರರಾದ ಲಂಕೇಶ್ ಜೊತೆಗೆ ಚರ್ಚಿಸಿದ್ದೆ. ಈ ಮಧ್ಯೆ ಬಿಡುವಾಗಲಿಲ್ಲ. ಮರೆತೂಬಿಟ್ಟೆ. ಆಮೇಲೆ, ಎಂದೋ ಬರೆಯಬೇಕಿದ್ದ ಈ ನಾಟಕವನ್ನು ಕೊನೆಗೂ ಬರೆಯುವಂತೆ ಮಾಡಿದವರು ಶ್ರೀಮತಿ ಪ್ರೇಮಾ ಕಾರಂತ. ಅವರು ಇದನ್ನು ಗುಲ್ಬರ್ಗಾದಲ್ಲೂ, ಬೆಂಗಳೂರಿನಲ್ಲೂ ಆಡಿಸಿದರು. ಬಿ.ವಿ.ಕಾರಂತರು ಓದಿ ಕೆಲವು ಅಮೂಲ್ಯ ಸಲಹೆಗಳನ್ನು ಕೊಟ್ಟರು. ಇದೆಲ್ಲ ಒಟ್ಟಾಗಿ ‘ನಾಯೀಕಥೆ’ಯಾಗಿ ಇದೀಗ ಹೊರಬರುತ್ತಿದೆ. ಈ ಎಲ್ಲ ನನ್ನ ಆತ್ಮೀಯರಿಗೆ ಪ್ರಥಮದಲ್ಲಿ ವಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಗೆಳೆಯರಾದ ಬರಗೂರು ರಾಮಚಂದ್ರಪ್ಪನವರು ಇದಕ್ಕೊಂದು ಒಪ್ಪವಾದ ಮುನ್ನುಡಿ ಬರೆದುಕೊಟ್ಟಿದ್ದರೆ. ಅವರಿಗೂ, ಮುಖಚಿತ್ರ ಬರೆದು ಕೊಟ್ಟ ಚಂದ್ರಕಾಂತ ಕುಸನೂರ ಅವರಿಗೂ, ‘ಸಂಗೀತಾ’ ಎಂಬ ಹೆಸರಿನಲ್ಲಿ ಈ ನಾಟಕವನ್ನು ಚಲನಚಿತ್ರವಾಗಿಸಿದ ವ್ಹೀಲ್ ಪ್ರೊಡಕ್ಷನ್ಸ್ ಸ್ನೇಹಿತರಿಗೂ, ಡಾ|| ಹಾ.ಮಾ.ನಾಯಕರಿಗೂ ಹಾಗೂ ಪ್ರಕಾಶಪಡಿಸಿದ ಕೆ.ವಿ. ಸುಬ್ಬಣ್ಣನವರಿಗೂ ವಂದನೆಗಳು.

ಚಂದ್ರಶೇಖರ ಕಂಬಾರ
ಮಾರ್ಚ್ ೧೯೮೧