“ನಿನ್ನ ಸೈನ್ಯವನ್ನೂ ಯುದ್ಧಯಂತ್ರಗಳನ್ನೂ ಸದಾ ಸಿದ್ವವಾಗಿ ಇಟ್ಟಿರು…. ಸೇವಕರನ್ನು ಪ್ರೀತಿಯಿಂದ ಒಲಿಸಿಕೊಳ್ಳಬೇಕು…. ಕಾಲಕ್ಕೆ ಸರಿಯಾಗಿ ಸೇವಕರಿಗೂ ಸೈನಿಕರಿಗೂ ಸಂಬಳವನ್ನು ಕೊಟ್ಟುಬಿಡಬೇಕು. ಆದಾಯಕ್ಕಿಂತ ಹೆಚ್ಚಾಗಿ ಎಂದಿಗೂ ಖರ್ಚು ಮಾಡಬಾರದು. ಕೆರೆ ಕಾಲುವೆಗಳನ್ನು ನಿರ್ಮಿಸಿ ರೈತರಿಗೆ ಬೇಕಾದ ಸೌಕರ್ಯವನ್ನು ಮಾಡಿಕೊಡು.”

ಆಧುನಿಕ ಕಾಲದ ರಾಜ್ಯಶಾಸ್ತ್ರ ವಿಶಾರದನೊಬ್ಬ ರಾಜ್ಯದ ಹಿರಿಯ ಆಡಳಿತಗಾರನಿಗೆ ಹೇಳುವ ಬುದ್ಧಿವಾದ ಎಂದು ತೋರುತ್ತದೆ ಇದು, ಅಲ್ಲವೆ? ಸೈನ್ಯ, ಯುದ್ಧ ಯಂತ್ರಗಳು, ಆದಾಯ-ವೆಚ್ಚ, ರೈತರು, ಕೆರೆ ಕಾಲುವೆಗಳು-ಇವುಗಳ ವಿಷಯ ಈ ಮಾತುಗಳನ್ನು ಹೇಳಿದವರು ಯಾರು, ಗೊತ್ತೆ?

ನಾರದರು! ಜಗಳಕ್ಕೆ ಕಾರಣರು ಎಂದು ನಾವು ಭಾವಿಸುವ ನಾರದರು.

ಮಹಾಭಾರತ ಮಹಾಕಾವ್ಯದಲ್ಲಿ ನಾರದರು ಯುಧಿಷ್ಠಿರನಿಗೆ ಮಾಡುವ ಉಪದೇಶ ಇದು.

ಎಷ್ಟು ವಿವೇಕದ ಮಾತುಗಳು, ಅಲ್ಲವೆ?

ನಾರದ ಮುನಿಗಳ ಹೆಸರನ್ನು ಯಾರು ಕೇಳಿಲ್ಲ? ಪ್ರತಿಯೊಂದು ಪುರಾಣದಲ್ಲಿಯೂ ನಾರದರ ಪ್ರವೇಶವಿರುತ್ತದೆ. ಹರಿಕಥೆಗಳಲ್ಲಿ, ಪೌರಾಣಿಕ ನಾಟಕಗಳಲ್ಲಿ, ಯಕ್ಷಗಾನ ಪ್ರಸಂಗಗಳಲ್ಲಿ ಅವರು ಬರದೆ ಇರುವುದಿಲ್ಲ. ನಾರದರು ಬರದೆ ಯಾವ ಕಥೆಯೂ ಮುಂದೆ ಸಾಗದು! ಕಥೆಗೆ ಕಳೆಯೇ ಏರದು! ವೀಣೆಯನ್ನು ನುಡಿಸುತ್ತ ‘ನಾರಾಯಣ! ನಾರಾಯಣ!’ ಎಂದು ನಾಮಸ್ಮರಣೆ ಮಾಡುತ್ತ ಬರುತ್ತಾರೆ ಈ ನಾರದರು. ಕೃತ, ತ್ರೇತಾ, ದ್ವಾಪರ- ಈ ಮೂರು ಯುಗಗಳ ಕಥೆಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ನಾರದರ ನಿಜವಾದ ಉದ್ದೇಶ

‘ನಾರ’ ಎಂದರೆ ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನ; ‘ದ’ ಎಂದರೆ ಕೊಡುವವರು. ‘ನಾರದ’ ಎಂದರೆ ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನವನ್ನು ಕೊಟ್ಟು ಸರಿಯಾದ ದಾರಿಯನ್ನು ತೋರಿಸುವವರು.

ನಾರದನು ಸಂಗೀತವಿದ್ಯೆಯಲ್ಲಿ ವಿಶಾರದರು. ಸದಾ ಭಗವಂತನ ನಾಮಾವಳಿಯನ್ನು ಹಾಡಿ ಆನಂದಿಸತಕ್ಕವರು. ವೀಣೆಯನ್ನು ಬಳಕೆಗೆ ತಂದವರು ನಾರದರೆಂದು ಹೇಳುತ್ತಾರೆ. ಅವರ ವೀಣೆಯ ಹೆಸರು ‘ಮಹತೀ’ ಎಂದು, ದೇವರ್ಷಿಗಳಲ್ಲಿ ಅವರು ಶ್ರೇಷ್ಠರು.

ಸಕಲರಿಗೂ ನಾರದರಲ್ಲಿ ಗೌರವ. ಎಲ್ಲಿ ಹೋದರೂ ಅವರಿಗೆ ಸ್ವಾಗತ. ಜನರಿಗೆ ಧರ್ಮೋಪದೇಶವನ್ನು ಮಾಡುತ್ತ, ಬುದ್ಧಿವಾದವನ್ನು ನೀಡುತ್ತ, ನೀತಿಕಥೆಯನ್ನು ಹೇಳುತ್ತ ಸಂಚರಿಸುತ್ತಿರುವುದು ಅವರ ಸ್ವಭಾವ. ದೇವತೆಗಳು, ರಾಕ್ಷಸರು, ಮನುಷ್ಯರು – ಎಲ್ಲರಿಗೂ ಅವರು ಬೇಕಾದವರು. ದೇವತೆಗಳ ಗುಟ್ಟನ್ನು ರಾಕ್ಷಸರಿಗೂ ರಾಕ್ಷಸರ ಗುಟ್ಟನ್ನು ದೇವತೆಗಳಿಗೂ ನಾರದರು ತಿಳಿಸಿ ಬಿಡುವುದುಂಟು! ಮೊದಲೇ ದೇವತೆಗಳಿಗೂ ರಾಕ್ಷಸರಿಗೂ ವೈರ. ನಾರದರ ಮಾತುಗಳಿಂದ ವೈರವು ಮಸೆದು ಯುದ್ಧವೇ ನಡೆಯುತ್ತದೆ! ಹೀಗಾಗಿ ನಾರದರು ‘ಕಲಹ ಪ್ರಿಯ’ರೆಂದು ಪ್ರಸಿದ್ಧಿಯಾಯಿತು!

ಮಹರ್ಷಿಗಳು ಹೀಗೆ ಮಾಡಬಹುದೆ? ಚಾಡಿಯ ಮಾತುಗಳನ್ನು ಹೇಳಿ ಜಗಳಕ್ಕೆ ದಾರಿ ಮಾಡಬಹುದೆ? ಅವರ ಮಾತು ಕೆಲವು ವೇಳೆ ಚಾಡಿಯಾಗಿ ಕಂಡರೂ ಉದ್ದೇಶವು ಒಳ್ಳೆಯದೇ. ಕೆಟ್ಟವರಿಗೆ ಬೇಗನೆ ಶಿಕ್ಷೆಯಾಗಲಿ, ಅಹಂಕಾರಿಗಳಿಗೆ ಬುದ್ಧಿ ಬರುವಂತಾಗಲಿ, ಒಳ್ಳೆಯವರು ಸುಖವಾಗಿ ಬಾಳಲಿ ಎಂದೇ ಅವರ ಅಂತರಂಗದ ಹಾರೈಕೆ.

ನೀನು ಅಲೆಮಾರಿಯಾಗಿ ತಿರುಗುತ್ತಿರು

ನಾರದರು ತ್ರಿಲೋಕಸಂಚಾರಿಗಳು. ಈ ವಿಷಯದಲ್ಲಿ ಒಂದು ಕಥೆಯುಂಟು:

ದಕ್ಷಬ್ರಹ್ಮನ ಮಕ್ಕಳಿಗೆ ಹರ್ಯಶ್ವರೆಂದು ಹೆಸರು. ದಕ್ಷನು ಅವರನ್ನು ಕುರಿತು “ಮಕ್ಕಳಿರಾ, ನೀವು ತಪಸ್ಸು ಮಾಡಿ ತೇಜಸ್ಸನ್ನೂ ಶಕ್ತಿ ಸಾಮರ್ಥ್ಯಗಳನ್ನೂ ಪಡೆಯಿರಿ. ಅನಂತರ ಮದುವೆಯಾಗಿ ಗೃಹಸ್ಥ ಧರ್ಮವನ್ನು ಪಾಲಿಸುತ್ತ ಬಾಳಿರಿ’’ ಎಂದು ತಿಳಿಸಿದನು. ತಂದೆಯ ಆಜ್ಞೆಯಂತೆ ಅವರು ನಾರಾಯಣ ಸರಸ್ಸಿನ ಬಳಿಯಲ್ಲಿ ಉಗ್ರವಾದ ತಪಸ್ಸನ್ನಾರಂಭಿಸಿದರು. ಅಲ್ಲಿಗೆ ನಾರದ ಮುನಿಗಳು ಹೋದರು. ಅವರಿಗೆ, “ಎಲೈ ಹರ್ಯಶ್ವರೆ, ನೀವು ತಪಸ್ಸು ಮಾಡುತ್ತಿರುವುದು ಏಕೆ? ಮುಂದೆ ಮದುವೆ ಮಾಡಿಕೊಳ್ಳುವುದಕ್ಕಾಗಿಯೋ? ಸಂಸಾರದಲ್ಲಿ ಸ್ವಲ್ಪವೂ ಸುಖವಿಲ್ಲ. ಭಗವಂತನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಂಸಾರದ ಕಷ್ಟದಿಂದ ತಪ್ಪಿಸಿಕೊಳ್ಳುವುದೇ ನಮ್ಮ ಗುರಿಯಾಗಿರಬೇಕು. ಮತ್ತೆ ಕಷ್ಟದಿಲ್ಲ ಸಿಕ್ಕಿಕೊಳ್ಳುವುದಕ್ಕಾಗಿ ತಪಸ್ಸು ಮಾಡಬೇಕೆ! ವೈರಾಗ್ಯವನ್ನು ಕಲಿಯಿರಿ, ಮುಕ್ತಿಗಾಗಿ ಪ್ರಯತ್ನಿಸಿರಿ’’ ಎಂದು ಉಪದೇಶಿಸಿ ಹೊರಟುಹೋದರು.

ದಕ್ಷನ ಮಕ್ಕಳಿಗೆ ನಾರದರ ಉಪದೇಶವು ನಾಟಿತು. ಅವರು ಮದುವೆಯ ಚಿಂತೆಯನೆ ತ್ಯಜಿಸಿದರು. ಈ ವೃತ್ತಾಂತವನ್ನು ಕೇಳಿ ದಕ್ಷ ಬ್ರಹ್ಮನಿಗೆ ಬಹಹ ಅಸಮಾಧಾನವಾಯಿತು. ಅವನು ಶಬಲಾಶ್ವರೆಂಬ ಇನ್ನು ಕೆಲವು ಮಕ್ಕಳನ್ನು ಕರೆದು ಹಿಂದಿನಂತೆಯೇ ಆಜ್ಞಾಪಿಸಿ ತಪಸ್ಸಿಗೆ ಕಳಿಸಿದನು. ಆಗಲೂ ನಾರದರು ಬಂದು ವಿರಕ್ತಿ ಮಾರ್ಗವನ್ನು ಉಪದೇಶಿಸಿ ಅವರೆಲ್ಲರನ್ನೂ ವಿರಕ್ತರನ್ನಗಿ ಮಾಡಿಬಿಟ್ಟರು!

‘ನಾರದ, ನೀನು ಅಲೆಮಾರಿಯಾಗಿ ತಿರುಗುತ್ತಿರು’

ದಕ್ಷಬ್ರಹ್ಮನಿಗೆ ಬಹಳ ಕೋಪ ಬಂದಿತು. ನಾರದರನ್ನು ಕಂಡು “ನಾರದ, ನನ್ನ ಮಕ್ಕಳು ಮದುವೆಯಾಗಿ ಸಂತೋಷದಿಂದ ಸಹಾರಿಗಳಾಗಿ ಬಾಳಲಿ ಎಂದು ನಾನು ಆಸೆಯನ್ನಿಟ್ಟುಕೊಂಡಿದ್ದೆ. ನೀನು ಅವರಿಗೆ ಸಲ್ಲದ ಬೋಧೆಯನ್ನು ಹೇಳಿ ದಾರಿ ತಪ್ಪಿಸಿದೆಯಾ? ನಿನಗೆ ಬೇರೆ ಕೆಲಸವೇನೂ ಇಲ್ಲವೆಂದು ಕಾಣುತ್ತದೆ! ಹೀಗೆಯೇ ಅಲೆಮಾರಿಯಾಗಿ ತಿರುಗುತ್ತಿರು’’ ಎಂದು ಶಪಿಸಿಬಿಟ್ಟನು!

ನಾದರು ಇದಕ್ಕಾಗಿ ಚಿಂತಿಸಲಿಲ್ಲ. “ಒಳ್ಳೆಯದೇ ಆಯಿತು! ಜನರಿಗೆ ಶೆಯಸ್ಕರವಾದದ್ದನ್ನು ಬೋಧಿಸುತ್ತ ಸಂಚರಿಸುತೆನೆ’’ ಎಂದು ಶಾಪವನ್ನು ಸ್ವೀಕರಿಸಿದರು.

ಪೂರ್ವಜನ್ಮದ ವೃತ್ತಾಂತ

ನಾರದ ಮಹರ್ಷಿಗಳು ತಮ್ಮ ಹುಟ್ಟಿನ ಕಥೆಯ ವಿಷಯವನ್ನು ತಾವೇ ಹೇಳಿದರು ಎಂದು ಕಥೆ ಇದೆ.

ವೇದವ್ಯಾಸ ಮಹರ್ಷಿಗಳು ಜನರ ಹಿತಕ್ಕಾಗಿ ಅಪಾರವಾದ ವೇದರಾಶಿಯನ್ನು ಋಗ್, ಯಜುಸ್, ಸಾಮ, ಅಥರ್ವಣ ಎಂದು ನಾಲ್ಕು ಭಾಗವಾಗಿ ವಿಂಗಡಿಸಿದರು. ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ ಎಂದಪು ತೋರಿ, ವೇದಾರ್ಥವನ್ನು ವಿವರಿಸುವ ಪುರಾಣಗಳನ್ನು ಬರೆದರು. ಮಹಾಭಾರತವನ್ನು ರಚಿಸಿದರು. ಅದರಲ್ಲಿರುವ ಭಗವದಿತೆಯಲ್ಲಿ ಉಪನಿಷತ್ತುಗಳು ತತ್ವವನ್ನು ಸರಳ ಭಾಷೆಯಲ್ಲಿ ತಿಳಿಸಿದರು.

ಲೋಕೋಪಕಾರಕ್ಕಾಗಿ ಇಷ್ಟು ಆಗಾಧ ಕಾರ್ಯಗಳನ್ನು ನೆರವೇರಿಸಿದರೂ ಆ ಮಹಾತ್ಮರ ಮನಸ್ಸಿಗೆ ನೆಮ್ಮದಿಯಾಗಲಿಲ್ಲ. ಜನರ ಕಲ್ಯಾಣಕ್ಕಾಗಿ ತಾವು ಮಾಡಬೇಕಾದ ಯಾವುದೋ ಒಂದು ಕಾರ್ಯವು ಉಳಿದಿದೆ ಎಂದು ವೇದವ್ಯಾಸರಿಗೆ ಅನ್ನಿಸುತ್ತಿತ್ತು. ಅವರು ಚಿಂತಾಮಗ್ನರಾಗಿ ಸರಸ್ವತೀ ನದಿಯ ತೀರದಲ್ಲಿ ಕುಳಿತಿದ್ದರು. ಅಲ್ಲಿಗೆ ನಾರದು ಆಗಮಿಸಿದರು.

ನಾರದರಿಗೆ ವ್ಯಾಸ ಮುನಿಗಳ ಚಿಂತೆ ತಿಳಿದಿತ್ತು. ಅವರು “ವ್ಯಾಸ ಮುನಿಗಳೆ, ಲೋಕಹಿತಕ್ಕಾಗಿ, ನೀವು ಬಹಳ ಕಾರ್ಯಗಳನ್ನು ಮಾಡಿದಿರಿ. ಆದರೂ ನಿಮ್ಮ ಮನಸ್ಸಿಗೆ ತೃಪ್ತಿ ಇಲ್ಲ. ಏಕೆಂದರೆ, ಇದುವರೆಗೆ ನೀವು ರಚಿಸಿದ ಗ್ರಂಥಗಳಲ್ಲಿ ಭಗವಂತನಾದ ಶಿಮನ್ನಾನಾರಾಯಣನ ಮಸಿಮೆ ಸಾಂಗವಾಗಿ ಬಂದಿಲ್ಲ. ಭಕ್ತಿಯ ಶ್ರೇಷ್ಠತೆಯನ್ನು ನೀವು ತಿಳಿಸಿದ್ದು ಸಾಲದು. ಮುಂದೆ ಕಲಿಯುಗದಲ್ಲಿ ಹುಟ್ಟುವ ಜನರು ಈಗಿನವರಷ್ಟು ಕಾಲ ಬದುಕುವುದಿಲ್ಲ. ಅವರು ತತ್ತ್ವಜ್ಞಾನವನ್ನು ಪಡೆಯುವುದು ಕಠಿಣ. ಆ ಜನರಿಗೆ ಭಕ್ತಿಯೇ ಉತ್ತಮ ಮಾರ್ಗ. ಭಗವಂತನ ಲೀಲೆಗಳನ್ನು ಭಕ್ತಿಯ ಮಹಿಮೆಯನ್ನು ಕೊಂಡಾಡುವ ಒಂದು ಗ್ರಂಥವನ್ನು ರಚಿಸಿರಿ. ಆಗ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸಜ್ಜನರ ಸಹವಾಸದಿಂದ ಭಕ್ತಿಯು ನೆಲೆಗೊಳ್ಳುತ್ತದೆ. ವ್ಯಾಸರೆ, ಒಳ್ಳೆಯವರ ಸಹವಾಸ ಮತ್ತು ದೇವರಲ್ಲಿ ಭಕ್ತಿ – ಇವುಗಳ ಮಹಿಮೆಯನ್ನು ಏನೆಂದು ಹೇಳಲಿ! ತೀರ ಸಣ್ಣ ಮನುಷ್ಯನಾಗಿದ್ದ ನಾನು ಈಗ ನಾರದ ಮುನಿ ಎನಿಸಿಕೊಂಡಿರುವುದು ಸತ್ಸಂಗದ ಬಲದಿಂದ; ಭಗವದ್ಭಕ್ತಿಯ ಮಹಿಮೆಯಿಂದ!” ಎಂದು ಹೇಳಿದರು.

ವ್ಯಾಸ ಮುನಿಗಳಿಗೆ ಪರಮಾಶ್ಚರ್ಯವಾಯಿತು. ದೇವರ್ಷಿಗಳೆನಿಸಿ ಪರಮಪೂಜ್ಯರಾದ ನಾರದ ಮುನಿಗಳು ಹಿಂದೆ ಒಬ್ಬ ಅಲ್ಪ ವ್ಯಕ್ತಿಯಾಗಿದ್ದರೆ? ಕುತೂಹಲದಿಂದ ಕಣ್ಣರಳಿಸಿ ವ್ಯಾಸರು ನಾರದರನ್ನು ನೋಡತೊಡಗಿದರು. ಅವರ ಅಭಿಪ್ರಾಯವನ್ನರಿತು ನಾರದ ಮಹರ್ಷಿಗಳು ಹೀಗೆಂದರು:

“ವ್ಯಾಸ ಮುನಿಗಳೆ, ಬಹು ಹಿಂದೆ ನಾನು ಗಂಧರ್ವನಾಗಿದ್ದೆ. ನನಗೆ ಉಪಬರ್ಹಣ ಎಂದು ಹೆಸರಿತ್ತು. ನಾನು ಬಹು ಸುಂದರನಾಗಿದ್ದೆ , ಗಾನವಿದ್ಯೆಯಲ್ಲಿ ನಿಪುಣನಾಗಿದ್ದೆ. ಒಂದು ಸಲ ದಕ್ಷಬ್ರಹ್ಮನು ಯಾಗ ಮಾಡಲು ತೀರ್ಮಾನಿಸಿದ; ದೊಡ್ಡ ಸಭೆಯನ್ನೇರ್ಪಡಿಸಿದ.  ಭಗವಮತನ ಮಹಿಮೆಯನ್ನು ಕೊಂಡಾಡುವ ಕೀರ್ತನೆಯನ್ನು ಸಭೆಯಲ್ಲಿ ನಾನು ಹಾಡುತ್ತಿದ್ದೆ. ಆದರೆ ನನಗೆ ಭಗವಂತನ ಕೀರ್ತನೆಯಲ್ಲಿ ಗಮನವಿರಲಿಲ್ಲ. ಸಭೆಯಲ್ಲಿ ನಾನು ಹಾಡುತ್ತಿದ್ದೆ.  ಆದರೆ ನನಗೆ ಭಗವಂತನ ಕೀರ್ತನೆಯಲ್ಲಿ ಗಮನವಿರಲಿಲ್ಲ. ಸಭೆಯಲ್ಲಿ ಕುಳಿತಿದ್ದ ಅಪ್ಸರ ಸ್ತ್ರೀಯರನ್ನು ನೋಡುತ್ತಿದ್ದೆ. ನನ್ನ ವರ್ತನೆಯಿಂದ ದಕ್ಷಬ್ರಹ್ಮನಿಗೆ ಕೋಪ ಬಂದಿತು. ನನ್ನ ಕಡೆಗೆ ತಿರುಗಿ ‘ಎಲೈ ಅಧಮನಾದ ಗಂಧರ್ವನೆ , ನಿನ್ನ ವಿದ್ಯೆ, ತೇಜಸ್ಸುಗಳೆಲ್ಲವೂ ಹೋಗಲಿ! ನೀನು ದೇವಲೋಕದಲ್ಲಿರಲು ಅರ್ಹನಲ್ಲ. ಮನಲುಷ್ಯ ಲೋಕದಲ್ಲಿ ಒಬ್ಬ ಕ್ಷುದ್ರ ಮನುಷ್ಯನಾಗಿ ಹುಟ್ಟು!’ ಎಂದು ಶಾಪ ಕೊಟ್ಟ.

“ಕ್ರೂರವಾದ ಶಾಪವನ್ನು ಕೇಳಿದ ಮೇಲೆ ನನಗೆ ಬುದ್ಧಿ ಬಂದಿತು. ಪಶ್ಚಾತ್ತಾಪದಿಂದ ಕಂಗೆಟ್ಟ ನಾನು ಅವನ ಕ್ಷಮೆಯನ್ನು ಬೇಡಿದೆನು. ಆಗ ದಕ್ಷನು ‘ಉಪಬರ್ಹಣ, ದುಃಖಿಸಬೇಡ. ಸಜ್ಜನರ ಸಹವಾಸದಿಂದ ನಿನಗೆ ಶ್ರೇಯಸ್ಸಾಗುವುದು’ ಎಂದು ಸಮಾಧಾನ ಹೇಳಿದನು. ವ್ಯಾಸ ಮುನಿಗಳೆ, ಆ ಶಾಪದಿಂದ ನಾನು ಭೂಲೋಕದಲ್ಲಿ ಒಬ್ಬ ದಾಸಿಯ ಮಗನಾಗಿ ಹುಟ್ಟಿದೆನು.

“ಸ್ವಲ್ಪ ಕಾಲದ ನಂತರ ನನ್ನ ತಾಯಿ ಒಂದು ಆಶ್ರಮದಲ್ಲಿ ಕೆಲಸ ಮಾಡಲಾರಂಭಿಸಿದಳು. ನಾನು ಇನ್ನೂ ಚಿಕ್ಕ ಹುಡುಗ. ಮಳೆಗಾಲ ಬಂದಿತು. ಆಗ ಕೆಲವು ಸನ್ಯಾಸಿಗಳು ಆಶ್ರಮಕ್ಕೆ ಬಂದು ಅಲ್ಲಿಯೇ ತಂಗಿದರು. ಆ ಸಂನ್ಯಾಸಿಗಳು ತತ್ತ್ವಜ್ಞಾನಿಗಳು, ಶ್ರೇಷ್ಠರಾದ ಭಗವದ್ಭಕ್ತರು. ಅವರು ಪ್ರತಿದಿನವೂ ಆಶ್ರಮದಲ್ಲಿ  ವೇದಾಂತ ತತ್ವವನ್ನು ಬೋಧಿಸುತ್ತ ಹರಿಕೀರ್ತನೆಗಳನ್ನು ನಡೆಸುತ್ತ, ಶ್ರೀಮನ್ನಾರಾಯಣನ ಲೀಲೆಗಳನ್ನು ರಸವತ್ತಾಗಿ ವಿವರಿಸುತ್ತಿದ್ದರು. ಆ ಸಂನ್ಯಾಸಿಗಳ ಬೋಧನೆಯಿಂದ ನನ್ನ ವರ್ತನೆಯೇ ಬದಲಾಯಿಸಿತು. ದಿನದಿನವೂ ಅವರ ಉಪದೇಶವನ್ನು ಕೇಳುವುದರಲ್ಲಿ ಆಸಕ್ತಿ ಬೆಳೆಯಿತು. ದೇವರಲ್ಲಿ ಭಕ್ತಿ ಮೂಡಿತು. ನನ್ನ ವಿಷಯದಲ್ಲಿ ಆ ಮುನಿಗಳಿಗೆ ವಾತ್ಸಲ್ಯ ಹುಟ್ಟಿತು. ಒಳ್ಳೆಯ ಮಾತುಗಳನ್ನಾಡಿ ಹಣ್ಣು ಹಂಪಲುಗಳನ್ನು ಕೊಡುತ್ತಿದ್ದರು. ನಾನು ಭಕ್ತಿಯನ್ನಿಟ್ಟು ಅವರು ಹೇಳಿದಂತೆ ಕೆಲಸ ಮಾಡುತ್ತಿದ್ದೆನು. ಆ ಮಹಾತ್ಮರ ಅನುಗ್ರಹದಿಂದ ಮನಸ್ಸು ಯಾವಾಗಲೂ ಭಗವಂತನ ಧ್ಯಾನದಲ್ಲಿ ನಿರತವಾಯಿತು.

“ಮಳೆಗಾಲವು ಕಳೆಯಿತು. ಮುನಿಗಳು ಆಶ್ರಮದಿಂದ ಬೇರೆ ಕಡೆಗೆ ಹೊರಡಲು ಸಿದ್ಧರಾದರು. ನನಗೆ ಬಹಳ ದುಃಖವಾಯಿತು. ಕರುಣಾಶಾಲಿಗಳಾದ ಆ ಸಂನ್ಯಾಸಿಗಳು ನನ್ನ ಕಳವಳವನ್ನು ಕಂಡರು. ‘ಮಗು’, ಚಿಂತಿಸಬೇಡ. ದೇವರಲ್ಲಿ ಸ್ಥಿರವಾದ ಭಕ್ತಿಯನ್ನಿಡು. ಅವನನ್ನು ಕಾಣುವುದಕ್ಕಾಗಿ ಹಂಬಲಿಸುತ್ತಿರು. ಈ ಮನುಷ್ಯ ಜನ್ಮವನ್ನು ವ್ಯರ್ಥವಾಗಿ ಹಾಳು ಮಾಡಿಕೊಳ್ಳಬೇಡ. ಈ ಜಗತ್ತು ಭಗವಂತನಿಂದ ಹುಟ್ಟಿದೆ,  ಅವನಿಂದ ನಿಂತಿದೆ. ಅವನಲ್ಲಿಯೇ ಲಯವಾಗುತ್ತದೆ. ಅವನ ಇಚ್ಛೆಯಿಲ್ಲದೆ ಒಂದು ಕಡ್ಡಿಯೂ ಅಲ್ಲಾಡದು. ‘ಓಂ ನಮೋ ಭಗವತೇ ವಾಸುದೇವಾಯ’ ಎಂದು ಸದಾ ಜಪಿಸುತ್ತಿರು. ನಿನಗೆ ಶ್ರೇಯಸ್ಸಾಗುವುದ’ ಎಂದು ಹೇಳಿ ಆಶೀರ್ವದಿಸಿ ಹೊರಟುಹೋದರು.

“ಆ ಮಹನೀಯರು ಹೋದ ಮೇಲೆ ನನಗೆ ಬಹಳ ದುಃಖವಾಯಿತು. ಅವರು ಬೋಧಿಸುವಂತೆ ಜಪಿಸುತ್ತಿದ್ದೆ. ಭಗವಂತನ ಯೋಚನೆಯಲ್ಲೇ ಮುಳುಗಿರುತ್ತಿದ್ದೆ.

“ಹೀಗೆ ಸ್ವಲ್ಪ ಕಾಲ  ಕಳೆಯಿತು. ಒಂದು ದಿನ ನನ್ನ ತಾಯಿಯನ್ನು ಸರ್ಪವು ಕಚ್ಚಿದ್ದರಿಂದ, ಅವಳು ಸತ್ತುಹೋದಳು. ದೇವರೇ ನನ್ನ ತಾಯಿತಂದೆ ಎಂದು ನಿಶ್ಚಯಿಸಿ, ನಾನು ಉತ್ತರ ದಿಕ್ಕಿಗೆ ಹೊರಟುಬಿಟ್ಟೆನು. ಎಲ್ಲಿಗೆ ಹೋಗಬೇಕು. ಏಕೆ ಹೋಗಬೇಕು- ಎಂಬುದರ ಅರಿವೂ ನನಗಿರಲಿಲ್ಲ. ಭಗವಂತನ ಹೆಸರನ್ನೇ ಉಚ್ಚರಿಸುತ್ತ ಸಾಗಿದೆನು. ಬಹು ದೂರ ಹೋದ ಮೇಲೆ ಒಂದು ರಮ್ಯ ವಾದ ಪ್ರದೇಶವು ಗೋಚರಿಸಿತು. ಅಲ್ಲಿ ಜನ ಸಂಚಾರವಿರಲಿಲ್ಲ. ಅಲ್ಲಿದ್ದ ಒಂದು ಕೊಳದಲ್ಲಿ ಸ್ನಾನ ಮಾಡಿ ನೀರನ್ನು ಕುಡಿದೆನು. ದಣಿವು ನೀಗಿತು. ದೇಹದಲ್ಲಿ ಹೊಸ ಶಕ್ತಿ ಬಂದಂತೆ ತೋರಿತು. ಮನಸ್ಸು ಹಗುರವಾಯಿತು. ಆಶ್ರಮದಲ್ಲಿ ಸಾಧುಗಳು ಬೋಧಿಸಿದ ಹಿತನುಡಿ ಸ್ಮರಣೆಗೆ ಬಂದಿತು. ಒಂದು ಅರಳಿಯ ಮರದ ಕಳೆಗೆ ಭಗವಂತನನ್ನು ಧ್ಯಾನಿಸುತ್ತ ಕುಳಿತುಬಿಟ್ಟೆನು.

“ಅದೇ ರೀತಿಯಲ್ಲಿ ಎಷ್ಟು ವರ್ಷಗಳು ಕಳೆದು ಹೋದವೊ! ಕಾಡಿನಲ್ಲಿ ದೊರಕುತ್ತಿದ್ದ ಹಣ್ಣುಗಳನ್ನೋ ಎಲೆಗಳನ್ನೋ ತಿಂದು ಪ್ರಾಣಧಾರಣೆ ಮಾಡಿಕೊಂಡಿದ್ದೆನು. ಭಗವಂತನ ಧ್ಯಾನದಲ್ಲಿಯೆ ಮುಳುಗಿದೆನು. ಮನಸ್ಸು ಶಾಂತವಾಯಿತು. ಕಾಲವು ಕಳೆದಂತೆ ನನಗೆ ಅದ್ಭುತವಾದ ಅನುಭವಗಳಾಗತೊಡಗಿದವು. ಎಲ್ಲೆಲ್ಲಿಯೂ ಭಗವಂತನು ವ್ಯಾಪಿಸಿರುವನೆಂದೂ ಅವನಲ್ಲದೆ ಇನ್ನೊಂದು ವಸ್ತುವೇ ಇಲ್ಲವೆಂದೂ ನನಗೆ ಸ್ಪಷ್ಟವಾಯಿತು. ವ್ಯಾಸ ಮಹರ್ಷಿಗಳೆ, ಒಂದು ದಿನ ಅದ್ಭುತವಾದ ಒಂದು ದಿವ್ಯಪ್ರಭೆ ಮಿಂಚಿನಂತೆ ಪ್ರಕಾಶಿಸಿತು. ಶ್ರೀಮನ್ನಾರಾಯಣನ ದಿವ್ಯಮೂರ್ತಿಯನ್ನು ಒಂದು ಕ್ಷಣಕಾಲ ಕಂಡೆನು! ಆಹಾ! ಅದರ ಸೌಂದರ್ಯವನ್ನೂ ವೈಭವವನ್ನೂ ನಾನು ವರ್ಣಿಸಲಾರೆ. ಮರುಕ್ಷಣದಲ್ಲಿಯೇ ಅದು ಅದೃಶ್ಯವಾಯಿತು. ಆನಂದದ ಅತಿರೇಕದಲ್ಲಿದ್ದ ನಾನು ಕುಸಿದುಹೋದೆ. ಎಲ್ಲರೂ ಶೂನ್ಯವಾದಂತೆ ಕಾಣಿಸಿತು. ನಾನು ಹುಚ್ಚನಂತಾದೆ. ಆ ಸ್ಥಳವನ್ನು ಬಿಟ್ಟೆದ್ದು ಅಲೆಯಲಾರಂಭಿಸಿದೆನು. ಮಂಗಳಕರವಾದ ಆ ಭಗವನ್ಮೂರ್ತಿಯನ್ನು ಮತ್ತೆ ನೋಡಬೇಕೆಂಬ ತವಕದಿಂದ, ಏನನ್ನೋ ಕಳೆದುಕೊಂಡವನಂತೆ ಸುತ್ತಾಡಿದೆನು. ದೇಹದ ಪರಿವೆಯೇ ನನಗಿರಲಿಲ್ಲ. ಆ ಸ್ಥಿತಿಯಲ್ಲಿ ಒಂದು ದಿವ್ಯವಾಣಿಯು ನನಗೆ ಕೇಳಿಸಿತು. ‘ಈ ಜನ್ಮದಲ್ಲಿ ನಿನಗೆ ನನ್ನ ದರ್ಶನವು ಮತ್ತೆ ಆಗಲಾರದು. ಆಸೆ, ಕೋಪ ಮೊದಲಾದ ಕೊಳೆ ಯಾರ ಮನಸ್ಸಿನಿಂದ ಸಂಪೂರ್ಣವಾಗಿ ತೊಡೆದುಹೋಗಿಲ್ಲವೋ ಅವರಿಗೆ ನಾನು ಗೋಚರಿಸತಕ್ಕವನಲ್ಲ ಒಂದು ಸಲ ನಿನಗೆ ದರ್ಶನವನ್ನು ಕೊಟ್ಟಿದ್ದೇನೆ. ನನ್ನಲ್ಲಿ ಭಕ್ತಿಯು ನಿನಗೆ ದೃಢವಾಗಿ ನಿಲ್ಲುವುದು. ಸತ್ಸಂಗದ ಮಹಿಮೆಯೇ ಇದಕ್ಕೆ ಕಾರಣ. ಮುಂದಿನ ಜನ್ಮದಲ್ಲಿ ನೀನು ನನ್ನ ಪರಿಜನರಲ್ಲಿ ಒಬ್ಬನಾಗಿ ಸೇರಿಕೊಳ್ಳುವೆ.’

“ಆ ಭಗವದ್ವಾಣಿಯನ್ನು ಕೇಳಿದ ಮೇಲೆ ನನಗೆ ಸ್ವಲ್ಪ ಸಮಾಧಾನವಾಯಿತು. ಮತ್ತೆ ಚೇತರಿಸಿಕೊಂಡೆನು. ಪರಮ ವೈರಾಗ್ಯವು ಮೂಡಿತು. ಜಗತ್ತೆಲ್ಲವೂ ವಿಷ್ಣುಮಯವಾಗಿ ತೋರಿತು. ನಾನೆಂಬ ಅಹಂಕಾರವಾಗಲಿ ನನ್ನದೆಂಬ ಮಮತೆಯಾಗಲಿ ನನ್ನಲ್ಲಿ ಉಳಿಯಲಿಲ್ಲ. ತಾವರೆಯ ಎಲೆಯಲ್ಲಿರುವ ನೀರಿನಂತೆ ಯಾವುದಕ್ಕೂ ಅಂಟದೆ, ಕೆಲವು ಕಾಲ ಆ ದೇಹವನ್ನು ಧರಿಸಿ ಜಗತ್ತಿನಲ್ಲಿದ್ದೆನು.  ಒಂದು ಸಲ ನಾನು ಧ್ಯಾನಯೋಗದಲ್ಲಿದ್ದಾಗ ಒಂದು ದಿವ್ಯ ಪ್ರಕಾಶವು ದೇಹವನ್ನು ಸೋಕಿದಂತಾಯಿತು. ಕೂಡಲೆ ನನ್ನ ದೇಹವು ಬಿದ್ದು ಹೋಯಿತು. ಆ ವೇಳೆಗೆ ಪ್ರಳಯವಾಯಿತು. ನಾನೂ ಸಕಲ ಜೀವರಾಶಿಗಳೂ ಶ್ರೀಮನ್ನಾರಾಯಣನ ಉದರದಲ್ಲಿ ಸೇರಿಹೋದೆವು.

“ಪ್ರಳಯವಾದ ಕೆಲವು ಕಾಲದ ಮೇಲೆ ಮತ್ತೆ ಇನ್ನೊಂದು ಸೃಷ್ಟಿ ಆರಂಭವಾಯಿತು. ಶ್ರೀಮನ್ನಾರಾಯಣನ ನಾಭಿಕಮಲದಿಂದ ಬ್ರಹ್ಮದೇವನು ಉದಿಸಿದನು. ಅವನು ಭಗವಂತನ ಆಜ್ಞೆಯಂತೆ ತಪಸ್ಸಿದ್ಧಿಯನ್ನು ಪಡೆದು ಜಗತ್ತಿನ ಸೃಷ್ಟಿಕಾರ್ಯದಲ್ಲಿ ಉದ್ಯುಕ್ತನಾದನು. ಆಗ ಮರೀಚಿ, ಅತ್ರಿ ಮುಂತಾದ ಹತ್ತು ಮಂದಿ ಪ್ರಜೇಶ್ವರನನ್ನು ಬ್ರಹ್ಮನು ಸೃಜಿಸಿದನು.  ಅವರಲ್ಲಿ ನಾನೊಬ್ಬನಾದೆನು.

“ವ್ಯಾಸ ಮಹರ್ಷಿಗಳೆ, ನಾನು ವಿಷ್ಣುವಿನ ಅನುಗ್ರಹದಿಂದ ನಾರದನಾದೆನು. ಮಹತಿಯೆಂಬ ಈ ವೀಣೆಯನ್ನು ನುಡಿಸುತ್ತ ಭಗವಂತನ ನಾಮಕೀರ್ತನವನ್ನು ಮಾಡುತ್ತ ಸಂಚರಿಸುತ್ತಿದ್ದೇನೆ. ಭಕ್ತಿಯ ಮಹಿಮೆಯನ್ನು ಸಾರುತ್ತ ಜನರನ್ನು ಸನ್ಮಾರ್ಗಕ್ಕೆ ತಿರುಗಿಸುವುದೇ ನನ್ನ ಉದ್ದೇಶವಾಗಿದೆ. ಮುಂದೆ ಬರುವ ಕಲಿಯುಗದಲ್ಲಿ ಯಜ್ಞದಾನಾದಿಗಳಿಗಿಂತ ಭಗವಂತನ ನಾಮದ ಜಪದಿಂದ ಒಳ್ಳೆಯ ಗತಿ ಲಭಿಸುತ್ತದೆ. ಭಕ್ತಿ ಮಾರ್ಗವು ಅತ್ಯಂತ ಸುಲಭವೂ  ಶ್ರೇಷ್ಠವೂ ಆದದ್ದು. ಅದರಿಂದ ಚಿತ್ತವು ನಿರ್ಮಲವಾಗುವುದು. ಆಸೆ, ಕೋಪ ಇಂತಹ ಕಶ್ಮಲಗಳು ಹೋಗುವುವು.  ಚಿತ್ತವು ಪರಿಶುದ್ಧವಾದಾಗಲೇ ಜ್ಞಾನದ ಪ್ರಾಪ್ತಿ. ಇವೆಲ್ಲವೂ ನಿಮಗೆ ತಿಳಿದ ವಿಷಯಗಳೇ. ಆದ್ದರಿಂದ ಭಕ್ತಿಯ ಶ್ರೇಷ್ಠತೆಯನ್ನು ಬೋಧಿಸುವ ಮತ್ತು ಭಗವಂತನ ಲೀಲೆಗಳನ್ನು ವರ್ಣಿಸುವ ಗ್ರಂಥವನ್ನು ರಚಿಸಿರಿ. ಬ್ರಹ್ಮದೇವನು ನನಗೆ ಸಂಕ್ಷೇಪವಾಗಿ ಬೋಧಿಸಿದ ವೇದಾಂತ ತತ್ವವನ್ನು ನಿಮಗೆ ಹೇಳುತ್ತೇನೆ. ನೀವು ರಚಿಸುವ ಮಹಾಗ್ರಂಥಕ್ಕೆ ಈ ತತ್ವವೇ ಆಧಾರವಾಗಿರಲಿ. ಆ ಗ್ರಂಥದಿಂದ ಜನರಿಗೆ ಕಲ್ಯಾಣವಾಗುವುದು.  ನಿಮ್ಮ ಮನಸ್ಸಿಗೆ ಶಾಂತಿ ಲಭಿಸುವುದು.”

ಹೀಗೆ ಹೇಳಿ ನಾರದರು ಆ ವೇದಾಂತ ರಹಸ್ಯವನ್ನು ವ್ಯಾಸ ಮುನಿಗಳಿಗೆ ಉಪದೇಶಿಸಿದರು. ನಾರದರ ಪ್ರೇರಣೆಯಂತೆ ವೇದವ್ಯಸರು ಭಾಗವತವನ್ನು ರಚಿಸಿದರು.

ವಾಲ್ಮೀಕಿಗಳ ಆಶ್ರಮದಲ್ಲಿ

ಶ್ರೀಮದ್ರಾಮಾಯಣದ ರಚನೆಯಲ್ಲೂ ನಾರದರ ಪಾತ್ರ ಉಂಟು. ಒಂದು ಸಲ ನಾರದ ಮಹರ್ಷಿಗಳು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಬಂದರು. ವಾಲ್ಮೀಕಿಗಳು ಅವರನ್ನು ಆದರಿಸಿ ಸತ್ಕರಿಸಿದರು. ಇಬ್ಬರಿಗೂ ಕುಶಲ ಪ್ರಶ್ನೆಗಳಾದವು. ವಾಲ್ಮೀಕಿ ಮುನಿಗಳ ಮನಸ್ಸಿನಲ್ಲಿ ಒಂದು ಚಿಮತೆ ಮೊದಲಿನಿಂದ ಇತ್ತು.  “ಲೋಕದಲ್ಲಿ ಸಂಸಾರಿಯಾಗಿದ್ದು ಎಂತಹ ಸಂದರ್ಭದಲ್ಲಿಯೂ ಸನ್ಮಾರ್ಗವನ್ನು ಬಿಡದೆ ಧರ್ಮವನ್ನು ಮೀರದೆ ಇರುವವರು ಯಾರು? ಎಲ್ಲರಿಗೂ ಆದರ್ಶಪ್ರಾಯರಾಗಿ ಬಾಳತಕ್ಕವರು ಇದ್ದಾರೆಯೆ?” ಎಂದು ಯೋಚಿಸುತ್ತಿದ್ದರು.

ನಾರದರು ಮೂರು ಲೋಕಗಳಲ್ಲಿಯೂ ಸಂಚರಿಸುವವರು. ಅವರನ್ನು ಕೇಳಿದರೆ ತಮ್ಮ ಪ್ರಶ್ನೆಗೆ ಉತ್ತರ ಸಿಕ್ಕಬಹುದು ಎಂದು ವಾಲ್ಮೀಕಿಗಳಿಗೆ ತೋರಿತು. ಅವರು ನಾರದರನ್ನು ಕೇಳಿದರು:

“ನಾರದ ಮಹರ್ಷಿಗಳೆ, ನೀವು ತ್ರಿಲೋಕ ಸಂಚಾರಿಗಳು. ಸರ್ವವನ್ನೂ ಬಲ್ಲವರು. ತಪಸ್ವಿಗಳೂ ವೇದಗಳನ್ನು ಚೆನ್ನಾಗಿ ತಿಳಿದವರೂ ಆಗಿದ್ದೀರಿ. ಈ ಲೋಕದಲ್ಲಿ ಗುಣವಂತನೂ ಧರ್ಮಜ್ಞನೂ ಕೃತಜ್ಞನೂ ಸತ್ಯವಾದಿಯೂ ದೃಢಸಂಕಲ್ಪನೂ ಆದ ಪುರುಷನೊಬ್ಬನಿದ್ದಾನೆಯೆ? ಅವನು ಒಳ್ಳೆಯ ಮಾರ್ಗದಲ್ಲಿ ನಡೆಯುವವನೂ., ಎಲ್ಲ ಪ್ರಾಣಿಗಳಿಗೆ ಹಿತವನ್ನು ಬಯಸತಕ್ಕವನೂ, ವಿದ್ವಾಂಸನೂ, ಕಾರ್ಯದಕ್ಷನೂ ಆಗಿರಬೇಕು. ಅವನು ಧೀರನೂ ಶೂರನೂ ಧರ್ಮನಿಷ್ಠನೂ ಆಗಿರಬೇಕು. ಇತರರನ್ನು ಕಂಡು ಅಸೂಯೆ ಇಲ್ಲದವನಾಗಿರಬೇಕು. ಮೂರು ಲೋಕಗಳಲ್ಲಿ ಯಾರಿಗೂ ಅವನನ್ನು ಗೆಲ್ಲಲು ಶಕ್ಯ ವಿಲ್ಲದಂತಹ ವೀರಾಗ್ರಣಿಯಾಗಿರಬೇಕು. ನೋಡಲು ಅತ್ಯಂತ ಸುಂದರನಾಗಿರಬೇಕು. ಇಂತಹ ಪುರುಷ ನೊಬ್ಬನಿದ್ದಾನೆಯೆ, ನಾರದರೆ? ಇದ್ದರೆ ದಯವಿಟ್ಟು ಹೇಳಿರಿ.”

‘ವ್ಯಾಸ ಮಹರ್ಷಿಗಳೇ, ಜನರನ್ನು ಸನ್ಮಾರ್ಗಕ್ಕೆ ತಿರುಗಿಸುವುದೇ ನನ್ನ ಉದ್ದೇಶ.’

ವಾಲ್ಮೀಕಿ ಮುನಿಗಳ ಪ್ರಶ್ನೆಯನ್ನು ಕೇಳಿ ನಾರದರು ಮುಗುಳ್ನಗೆಯನ್ನು ಬೀರುತ್ತ ಹೇಳಿದರು: “ವಾಲ್ಮೀಕಿ ಮುನಿಗಳೇ, ನಿಮ್ಮ ಅಭಿಪ್ರಾಯ ಗೊತ್ತಾಯಿತು! ಯಾವ ದೃಷ್ಟಿಯಿಂದ ನೋಡಿದರೂ ದೋಷವಿಲ್ಲದಿರುವ ಆದರ್ಶ ಪುರುಷನ ವಿಷಯ ತಿಳಿಯಲು ನೀವು ಬಯಸಿದ್ದೀರಿ. ಎಲ್ಲ ಒಳ್ಳೆಯ ಗುಣಗಳೂ ಒಬ್ಬನಲ್ಲಿಯೇ ಸೇರಿರುವುದು ದುರ್ಲಭ.  ಆದರೂ ಅಂತಹ ಪುರುಷನೊಬ್ಬನಿದ್ದಾನೆ. ನಾನು ಕಂಡಿದ್ದೇನೆ. ನೀವು ಈಗ ಹೇಳಿದ ಮತ್ತು ಹೇಳದಿರುವ ಸಕಲ ಸದ್ಗುಣಗಳೂ ಅವನಲ್ಲಿ ನೆಲೆಸಿವೆ. ಆತನು ಈಗ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆ. ಆತನೇ ಶ್ರೀರಾಮ.” ಹೀಗೆಂದು ನಾರದರು ಶ್ರೀರಾಮನ ಚರಿತ್ರೆಯನ್ನು ವಿವರಿಸಿದರು. ಅನಂತರ ನಾರದರು ವೀಣೆಯನ್ನು ನುಡಿಸುತ್ತ ತೆರಳಿದರು.

ಶ್ರೀರಾಮನ ಕಥೆಯನ್ನು ಕೇಳಿ ವಾಲ್ಮೀಕಿ ಮುನಿಗಳು ಹಿಗ್ಗಿದರು. ಶ್ರೀರಾಮನೇ ಆದರ್ಶ ಪುರುಷನೆಂದು ಅವರು ನಿಶ್ಚಯಿಸಿದರು. ಶ್ರೀರಾಮನ ಕಥೆಯನ್ನೇ ಮನಸ್ಸಿನಲ್ಲಿ ಮೆಲಕು ಹಾಕುತ್ತ ಸ್ನಾನಕ್ಕಾಗಿ ತಮಸಾ ನದಿಗೆ ಹೋದರು. ನದಿಯ ದಡದಲ್ಲಿ ಎರಡು ಹಕ್ಕಿಗಳು ಆಟವಾಡುತ್ತಿದ್ದವು. ಒಬ್ಬ ಬೇಡನು ಗಂಡು ಹಕ್ಕಿಯನ್ನು ಹೊಡೆದು ಕೆಡವಿದನು. ಹೆಣ್ಣು ಹಕ್ಕಿ ಚೀ ಚೀ ಎಂದು ಕೂಗುತ್ತ ಗೋಳಾಡಿತು. ಅದರ ದುಃಖವನ್ನು ಕಂಡು ವಾಲ್ಮೀಕಿ ಮುನಿಗಳ ಕೋಮಲವಾದ ಮನಸ್ಸು ಕರಗಿತು. ಅವರು ಶೋಕ ಸಂತೃಪ್ತರಾದರು.

ಶೋಕವನ್ನು ತಡೆದುಕೊಳ್ಳಲಾರದೆ ವಾಲ್ಮೀಕಿ ಮುನಿಗಳು ಆ ಬೇಡನನ್ನು ಗದರಿದರು. ಗದರಿಸಿದ ಮಾತು ಒಂದು ಶ್ಲೋಕರೂಪವಾಗಿ ಬಾಯಿಂದ ಹೊರಟಿತು! ‘ಬಾಯಿಂದ ಬಂದ ಮಾತು ಒಂದು ಶ್ಲೋಕವಾಗಿ ಬಿಟ್ಟಿತಲ್ಲ!’ ಎಂದು ವಾಲ್ಮೀಕಿಗಳಿಗೆ ವಿಸ್ಮಯವಾಯಿತು.

ಅವರು ಸ್ನಾನಾಹ್ನಿಕಗಳನ್ನು ಮುಗಿಸಿ ಆಶ್ರಮಕ್ಕೆ ಹಿಂದಿರುಗಿ ಬಂದರು. ಅಷ್ಟರಲ್ಲಿ ಸಾಕ್ಷಾತ್‌ ಬ್ರಹ್ಮದೇವನು ಆಗಮಿಸಿದನು! ವಾಲ್ಮೀಕಿ ಮುನಿಗಳಿಗೆ ಪರಮಾಶ್ಚರ್ಯವಾಯಿತು. ಪ್ರಾತಃಕಾಲ ನಾರದರ ದರ್ಶನ.  ರಾಮಾಯಣದ ಶ್ರವಣ.  ಹಕ್ಕಿಯ ಮರಣ. ಬಾಯಿಂದ ಶ್ಲೋಕದ ಉಚ್ಚಾರ. ಈಗ ಬ್ರಹ್ಮನ ಆಗಮನ! ಬ್ರಹ್ಮನು “ಮಹರ್ಷಿ, ನಿನ್ನ ಬಾಯಿಂದ ಹೊರಟ ಶ್ಲೋಕವು ನನ್ನ ಇಚ್ಛೆಯಿಂದಲೇ ಬಂದಿದೆ. ನಿನ್ನ ಮನಸ್ಸು ಕಾವ್ಯರಚನೆ ಮಾಡಲು ಈಗ ಪರಿಪಕ್ವವಾಗಿದೆ. ನಾರದನು ಯಾವ ರಾಮಕಥೆಯನ್ನು ಹೇಳಿದನೋ ಅದನ್ನು ಈ ಬಗೆಯ ಶ್ಲೋಕಗಳಿಂದ ರಚಿಸು. ನಿನ್ನ ಕಾವ್ಯವು ರಾಮಾಯಣವೆಂಬ ಹೆಸರಿನಿಂದ ವಿಶ್ವವಿಖ್ಯಾತವಾಗುವುದು” ಎಂದು ಹೇಳಿ ಅದೃಶ್ಯನಾದನು. ವಾಲ್ಮೀಕಿ ಮುನಿಗಳು ಬ್ರಹ್ ಮನ ಆದೇಶದಂತೆ ರಾಮಾಯಣವೆಂಬ ಮಹಾಕಾವ್ಯವನ್ನು ರಚಿಸಿದರು. ರಾಮಾಯಣದ ಮೊದಲನೆಯ ಸ್ವರ್ಗದಲ್ಲಿ ನೂರು ಶ್ಲೋಕಗಳಿವೆ. ಅದರಲ್ಲಿ ನಾರದರು ಹೇಳಿದ ಸಂಕ್ಷೇಪ ರಾಮಾಯಣವಿದೆ.

ರಾಮಾಯಣ, ಮಹಾಭಾರತ, ಭಾಗವತ ಮೂರರೊಡನೆಯೂ ನಂಟು

ನಾರದರು ಮಹಾಭಾರತವನ್ನು ಬಹುಜನಕ್ಕೆ ತಿಳಿಸಿ ಕೊಟ್ಟವರೂ ಹೌದು. ನಮಗೆ ದೊರೆಯುವ ಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. ಮೂರು ಲಕ್ಷ ಶ್ಲೋಕಗಳಿರುವ ಮಹಾಭಾರತವನ್ನು ವ್ಯಾಸ ಮುನಿಗಳು ರಚಿಸಿದ್ದರಂತೆ. ಅದನ್ನು ನಾರದರು ದೇವತೆಗಳಿಗೆ ಶ್ರವಣ ಮಾಡಿಸಿದರು. ಹೀಗೆ ರಾಮಾಯಣ, ಮಹಾಭಾರತ, ಭಾಗವತ-ಈ ಮೂರು ಗ್ರಂಥಗಳಲ್ಲಿಯೂ ನಾರದರ ಪಾತ್ರವನ್ನು ನಾವು ನೋಡಬಹುದು. ಈ ಮೂರು ಗ್ರಂಥಗಳು ಜಗತ್ತಿಗೆ ಭಾರತ ದೇಶವು ಕೊಟ್ಟ ಅಮೂಲ್ಯ ಕಾಣಿಕೆಗಳು.

ನಾರದರಿಗೆ ಮದುವೆಯ ಆಸೆ

ನಾರದರ ವಿಷಯವಾಗಿ ವಿಚಿತ್ರ ಕಥೆಗಳುಂಟು. ಅವುಗಳಲ್ಲಿ ಇದೊಂದು :

ನಾರದನ ಸೋದರಳಿಯ ಪರ್ವತನೆಂಬ ಋಷಿ. ಒಂದು ದಿನ ನಾರದ ಪರ್ವತರಿಬ್ಬರೂ ಅಯೋಧ್ಯಾಪತಿಯಾದ ಅಂಬರೀಷನ ಅರಮನೆಗೆ ಬಂದರು.

ಅಂಬರೀಷನಿಗೆ ಶ್ರೀಮತಿಯೆಂಬ ಮಗಳಿದ್ದಳು. ಅವಳು ಬಹು ಚೆಲುವೆ. ಒಳ್ಳೆಯ ಗುಣಗಳ ಮೂರ್ತಿ. ಅವಳ ಸೌಂದರ್ಯವನ್ನು ನೋಡಿ ನಾರದ ಪರ್ವತರಿಬ್ಬರೂ ಮುಗ್ಧರಾದರು. ಈ ರಾಜಪುತ್ರಿಯನ್ನು ಮದುವೆಯಾಗಬೇಕೆಂದು ಇಬ್ಬರಿಗೂ ಆಸೆ ಹುಟ್ಟಿತು ! ಇಬ್ಬರೂ ಅಂಬರೀಷನಿಗೆ ರಹಸ್ಯವಾಗಿ ತಮ್ಮ ಇಚ್ಛೆಯನ್ನು ತಿಳಿಸಿದರು.

ಅಂಬರೀಷನಿಗೆ ದಿಕ್ಕು ತೋರದಾಯಿತು. ಮುನಿಗಳ ಮಾತನ್ನು ಮೀರುವುದು ಹೇಗೆ? ಅವನು ಇಬ್ಬರನ್ನೂ ಕುರಿತು “ ಮಹರ್ಷಿಗಳೆ, ನೀವಿಬ್ಬರೂ ನನ್ನ ಮಗಳನ್ನು ಬಯಸುತ್ತಿದ್ದೀರಿ. ನಾನು ಹೇಗೆ ನಿರ್ಧರಿಸಲಿ? ಒಳ್ಳೆಯದು. ನಾನು ಸ್ವಯಂವರ ಸಭೆಯನ್ನು ಏರ್ಪಡಿಸುತ್ತೇನೆ. ಶ್ರೀಮತಿಯು ಒಪ್ಪಿದವರಿಗೆ ವಿವಾಹ ಮಾಡಿ ಕೊಡುತ್ತೇನೆ”  ಎಂದು ಹೇಳಿದನು.

ತಾವೇ ಬುದ್ಧಿವಂತರೆಂದುಕೊಂಡ ಮುನಿಗಳು

ನಾರದರು ಪರ್ವತರಿಗೆ ತಿಳಿಯದಂತೆ ವೈಕುಂಠಕ್ಕೆ ಹೋಗಿ ವಿಷ್ಣುವನ್ನು ಸಂದರ್ಶಿಸಿದರು. ಅವನಿಗೆ ನಡೆದುದನ್ನು ತಿಳಿಸಿದರು. “ನನ್ನಲ್ಲಿ ಕರುಣೆಯಿಟ್ಟು ಒಂದು ಉಪಕಾರವನ್ನು ಮಾಡು. ಸ್ವಯಂವರ ಸಮಯದಲ್ಲಿ ಪರ್ವತನ ಮುಖವು ಶ್ರೀಮತಿಗೆ ಮಂಗನ ಮುಖದಂತೆ ಕಾಣಲಿ” ಎಂದು ಬೇಡಿದರು. ವಿಷ್ಣುವು ನಸುನಕ್ಕು ಹಾಗೆಯೇ ಆಗಲಿ ಎಂದು ಹೇಳಿ ಕಳಿಸಿದನು.

ಅನಂತರ ನಾರದರಿಗೆ ಗೊತ್ತಾಗದಂತೆ ಪರ್ವತ ಮನಿಗಳೂ ವಿಷ್ಣುವಿನ ಬಳಿಗೆ ಹೋದರು. “ಸ್ವಾಮಿ, ನನ್ನಲ್ಲಿ ಕೃಪೆದೋರು. ಸ್ವಯಂವರ‍ ಸಮಯದಲ್ಲಿ ನಾರದನ ಮುಖವು ಕರಡಿಯ ಮುಖದಂತೆ ಕಾಣಲಿ. ಶ್ರೀಮತಿಗೆ ಮಾತ್ರ ಹಾಗೆ ಕಾಣುವಂತೆ ಮಾಡು” ಎಂದು ಪ್ರಾರ್ಥಿಸಿದರು. ವಿಷ್ಣುವು ಮನಸ್ಸಿನಲ್ಲಿ “ಆಹಾ! ಇಬ್ಬರ ಗುಣವೂ ಒಂದೇ ಬಗೆಯಾಯಿತಿಲ್ಲ! ಇವರಿಗೇಕೆ ಈ ಬುದ್ಧಿ ಬಂದಿತು!” ಎಂದುಕೊಂಡು ನಗುತ್ತ “ಹಾಗೆಯೇ ಆಗಲಿ” ಎಂದು ಹೇಳಿದನು.

ಸ್ವಯಂವರದ ದಿನ ಬಂದಿತು. ಇಬ್ಬರೂ ತಮ್ಮ ಜಾಣ್ಮೆಗೆ ತಾವೇ ಮೆಚ್ಚಿಕೊಳ್ಳುತ್ತ ಒಳಗೊಳಗೆ ಹಿಗ್ಗುತ್ತ ಸಭೆಗೆ ಬಂದರು.

ಶ್ರೀಮತಿ ಆರಿಸಿದಳು

ಅಂಬರೀಷನು ಶ್ರೀಮತಿಯನ್ನು ಸ್ವಯಂವರ ಮಂಟಪಕ್ಕೆ ಕರೆತಂದನು. ಶ್ರೀಮತಿಯು ನಾಚುತ್ತ ಹೂಮಾಲೆಯನ್ನು ಹಿಡಿದು ಸಖಿಯರೊಡನೆ ಬಂದು ಋಷಿಗಳೆದುರಿಗೆ ನಿಂತಳು. ಆಮೇಲೆ ತಲೆ ಎತ್ತಿ ನಾರದ ಪರ್ವತರಿಬ್ಬರನ್ನೂ ನೋಡಿ ದಿಗ್ಭಾಂತಳಾದಳು. ಅವಳ ಕೈ ನಡುಗಿತು. ಮೈ ಬೆವರಿತು. “ಅಪ್ಪ, ಇಲ್ಲಿ  ಯಾವ ಋಷಿಗಳೂ ನನಗೆ ಕಾಣಿಸುತ್ತಿಲ್ಲ. ಒಬ್ಬ ಕರಡಿಯ ಮುಖದವನೂ ಇನ್ನೊಬ್ಬ ಮಂಗನ ಮುಖದವನೂ ಕುಳಿತಿದ್ದಾರೆ! ಆದರೆ ಇವರ ನಡುವೆ ಆಜಾನುಬಾಹುವಾದ ಒಬ್ಬ ಸುಂದರ ತರುಣನಿದ್ದಾನೆ. ಸರ್ವಾಭರಣಗಳನ್ನೂ ಧರಿಸಿ ಮುಗುಳ್ನಗೆ ಬೀರುತ್ತಿದ್ದಾನೆ. ನನ್ನನ್ನು ಕರೆಯುವಂತೆ ಬಲಗೈಯನ್ನು ಮುಂದೆ ಚಾಚಿದ್ದಾನೆ!” ಎಂದಳು. ನಾರದ ಪರ್ವತರಿಬ್ಬರಿಗೂ ಆಶ್ಚರ್ಯವಾಯಿತು. ನಾರದರು “ರಾಜ, ನಮ್ಮನ್ನು ವಂಚಿಸುವುದಕ್ಕೆ ಯಾವುದೋ ಉಪಾಯವನ್ನು ಹೂಡಿರುವೆಯಾ?” ಎಂದು ಕೇಳಿದರು. ಆಗ ಶ್ರೀಮತಿಯು ‘ಈ ಮುನಿಗಳು ಕೋಪದಿಂದ ನನ್ನ ತಂದೆಗೆ ಶಾಪವನ್ನು ಕೊಟ್ಟಾರು. ದೈವೇಚ್ಛೆಯಿದ್ದಂತಾಗಲಿ’ ಎಂದು ಆಲೋಚಿಸಿದಳು. ಆಮೇಲೆ ಯಾರ ಕೊರಳಿಗೆ ಈ ಹಾರವು ಬೀಳುವುದೋ ಅವನೇ ನನ್ನ ಪತಿ ಎಂದು ಹೇಳಿ ಹೂಮಾಲೆಯನ್ನು ಬೀಸಿದಳು. ಶ್ರೀಮತಿಗೆ ಕಾಣಿಸುತ್ತಿದ್ದ ದಿವ್ಯಪುರುಷನ ಕೊರಳಲ್ಲಿ ಹೂಮಾಳೆ ಬಿದ್ದಿತು. ಒಡನೆಯೇ ಆ ದಿವ್ಯಪುರುಷನೂ ಶ್ರೀಮತಿಯೂ ಅದೃಶ್ಯರಾದರು! ಆ ದಿವ್ಯಪುರುಷನು ಇನ್ಯಾರೂ ಅಲ್ಲ, ಮಹಾವಿಷ್ಣುವೇ!

ನಾರದ, ಪರ್ವತರಿಬ್ಬರಿಗೂ ಆಗ ಜ್ಞಾನೋದಯವಾಯಿತು. ಒಬ್ಬರನ್ನೊಬ್ಬರು ವಂಚಿಸಲು ಯತ್ನಿಸಿದ್ದಕ್ಕೆ ತಕ್ಕ ಫಲ ದೊರಕಿತೆಂದುಕೊಂಡರು. ಮದುವೆಯಾಗುವ ಇಚ್ಛೆ ಬಂದುದಕ್ಕಗಿ ಅವರಿಗೆ ಲಜ್ಜೆಯಾಯಿತು. ಇನ್ನು ಮುಂದೆ ಎಂದಿಗೂ ಮದುವೆಗೆ ಯತ್ನಿಸುವುದಿಲ್ಲವೆಂದೂ ಬ್ರಹ್ಮಚಾರಿಗಳಾಗಿಯೇ ಇರುತ್ತೇವೆಂದೂ ಪ್ರತಿಜ್ಞೆ ಮಾಡಿದರು.

ನಾರದರುಮಾರ್ಗದರ್ಶಕರು

ನಾರದರು  ಒಂದೆಡೆ ತಪಸ್ಸು ಮಾಡುತ್ತ ಕುಳಿತು ಕೊಳ್ಳುವ ಋಷಿಗಳಲ್ಲ. ಲೋಕಹಿತಕ್ಕಾಗಿ ಸದಾ ಕಾರ್ಯದಲ್ಲಿ ತೊಡಗಿದವರು. ಯಾವಾಗಲೂ ಭಗವನ್ನಾಮವನ್ನೂ ಜಪಿಸತಕ್ಕವರಾದ್ದರಿಂದ, ಸಂಚರಿಸುವಾಗಲೇ ಅವರ ತಪಸ್ಸು ನಡೆಯುತ್ತಿತ್ತು. ಯೋಗ್ಯರಾದವರಿಗೆ ಜ್ಞಾನೋಪದೇಶ ಮಾಡುವುದು, ಮಾರ್ಗದರ್ಶನವಿಲ್ಲದೆ ತೊಳಲುವವರಿಗೆ ಸನ್ಮಾರ್ಗವನ್ನು ತಿಳಿಸಿಕೊಡುವುದು, ದುಃಖಿತರಿಗೆ ತಿಳುವಳಿಕೆಯನ್ನಿತ್ತು ಸಂತೈಸುವುದು, ತಿಳಿಯದವರಿಗೆ ವಿವೇಕವನ್ನು ಹೇಳುವುದು, ಜನರು ದೈವಭಕ್ತರಾಗುವಂತೆ ಭಗವನ್ಮಹಿಮೆಯನ್ನು ವರ್ಣಿಸಿ ಭಕ್ತಿಯನ್ನು ಪ್ರಚೋದಿಸುವುದು, ದುಷ್ಟರಿಗೆ ಶಿಕ್ಷೆಯಾಗುವಂತೆ ತಕ್ಕ ಉಪಾಯವನ್ನು ಕೈಗೊಳ್ಳುವುದು, ಸಜ್ಜನರಿಗೆ ರಕ್ಷಣೆಯನ್ನೊದಗಿಸುವುದು – ಈ ಬಗೆಯ ಸತ್ಕಾರ್ಯಗಳಲ್ಲಿ ಅವರು ತತ್ಪರರಾಗಿದ್ದರು.

ಧ್ರುವ

ಉತ್ತಾನಪಾದ ಎಂಬ ರಾಜನಿಗೆ ಇಬ್ಬರು ಹೆಂಡತಿಯರು. ದೊಡ್ಡ ಹೆಂಡತಿ ಸುನೀತಿಯ ಮಗ ಧ್ರುವ;  ಚಿಕ್ಕ ಹೆಂಡತಿ ಸುರುಚಿಯ ಮಗ ಉತ್ತಮ. ಒಮ್ಮೆ ಸುರುಚಿ ಧ್ರುವನಿಗೆ, “ರಾಜನ ಸಿಂಹಾಸನವನ್ನು ಏರುವ ಯೋಗ್ಯತೆ ನಿನಗಿಲ್ಲ” ಎಂದು ಹಂಗಿಸಿದಳು. ಧ್ರುವನಿಗೆ ತುಂಬ ದುಃಖವಾಯಿತು. ತಪಸ್ಸು ಮಾಡಿ ವಿಷ್ಣುವನ್ನು ಮೆಚ್ಚಿಸಿ ರಾಜನಾಗುತ್ತೇನೆ ಎಂದು ಕಾಡಿಗೆ ಹೊರಟ.

ಆಗ ಅವನಿಗೆ ಐದು ವರ್ಷ ವಯಸ್ಸು. ಐದು ವರ್ಷದ ಹುಡುಗನಿಗೆ ತಪಸ್ಸನ್ನು ಮಾಡುವುದು ಹೇಗೆಂಬುದು ತಿಳಿದಿರುತ್ತದೆಯೆ? ಇದನ್ನು ತಿಳಿದು ಕರುಣಿಗಳಾದ ನಾರದರು ದಾರಿಯಲ್ಲಿ ಧ್ರುವನಿಗೆ ಕಾಣಿಸಿ ಕೊಂಡರು. ತಪಸ್ಸು ಮಾಡುವ ಬಗೆಯನ್ನೂ ಭಗವಂತನ ಯಾವ ರೂಪವನ್ನು ಧ್ಯಾನಿಸಬೇಕೆಂಬುದನ್ನು ತಿಳಿಸಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನೂ ಉಪದೇಶಿಸಿ ಹರಸಿದರು. ನಾರದರು ಹೇಳಿದಂತೆಯೇ ಧ್ರುವನು ತಪಸ್ಸನ್ನು ಆಚರಿಸಿ ಶ್ರೀಮನ್ನರಾಯಣನನ್ನು ಮೆಚ್ಚಿಸಿದನು. ಯೋಗಿಗಳಿಗೂ ದುರ್ಲಭವಾದ ಪದವಿಯನ್ನು ಪಡೆದನು.

ಚಿತ್ರಕೇತು

ಶೂರಸೇನ  ದೇಶದಲ್ಲಿ ಚಿತ್ರಕೇತುವೆಂಬ ರಾಜನಿದ್ದನು. ಅವನಿಗೆ ಬಹುಕಾಲದ ಮೇಲೆ ಒಬ್ಬ ಮಗನು ಹುಟ್ಟಿದನು. ಮಲತಾಯಿಯರು ಹೊಟ್ಟೆಕಿಚ್ಚಿನಿಂದ ಮಗುವಿಗೆ ವಿಷವನ್ನು ಕುಡಿಸಿ ಸಾಯಿಸಿದರು. ಚಿತ್ರಕೇತುವು ಮಗುವಿನ ದೇಹದ ಬಳಿಯಲ್ಲಿ ಅಳುತ್ತ ಕುಳಿತಿದ್ದನು. ಆಗ ನಾರದರು ಬಂದು ರಾಜನಿಗೆ ಸಮಾಧಾನವನ್ನು ಹೇಳಿದರು. ರಾಜನ ದುಃಖವು ಹಿಂಗಲಿಲ್ಲ.  ಆಗ ತಮ್ಮ ಯೋಗಶಕ್ತಿಯಿಂದ ನಾರದರು ಬಾಲಕನನ್ನು ಬದುಕಿಸಿದರು. ಬಾಲಕನು ಎದ್ದುಕುಳಿತು “ನನಗೆ ಎಷ್ಟೋ ಜನ್ಮಗಳಾದವು. ಲೆಕ್ಕವಿಲ್ಲದಷ್ಟು ತಾಯಿ ತಂದೆಯರನ್ನು ಕಂಡೆನು. ಸಂತೆಯಲ್ಲಿ ನಾಣ್ಯವು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ದಾಟುತ್ತಲೇ ಇರುತ್ತದೆ. ಅದು ಯಾರಿಗೆ ಸೇರಿದ್ದು? ಯಾರ ಬಳಿ ಶಾಶ್ವತವಾಗಿ ನೆಲಸುತ್ತದೆ ? ಹಾಗೆಯೇ ಜೀವನು ಕರ್ಮವಶದಿಂದ ಒಬ್ಬಳ ಹೊಟ್ಟೆಯಲ್ಲಿ ಹುಟ್ಟುತ್ತಾನೆ. ಕರ್ಮವಶದಿಂದಲೇ ಸತ್ತು ಇನ್ನೊಬ್ಬಳ ಗರ್ಭವನ್ನು ಸೇರುತ್ತಾನೆ. ಈಗ ನನಗೆ ಒಂದು ಜನ್ಮ ಕಳೆದಿದೆ. ಮತ್ತೆ ಇದರಲ್ಲಿ ಸಿಕ್ಕಿಕೊಳ್ಳಲು ಬಯಸುವುದಿಲ್ಲ!” ಎಂದು ಹೇಳಿ ಮತ್ತೆ ದೇಹವನ್ನು ಬಿಟ್ಟನು. ಆಗ ಚಿತ್ರಕೇತುವಿಗೆ ವಿವೇಕ ಹುಟ್ಟಿತು. ಮನಸ್ಸು ಶಾಂತವಾಯಿತು. ನಾರದರು ಆತನಿಗೆ ಮುಂದೆ ಮಂತ್ರೋಪದೇಶವನ್ನು ಮಾಡಿ ಸನ್ಮಾರ್ಗವನ್ನು ತೋರಿಸಿದರು.

ಪ್ರಹ್ಲಾದ

ಹಿರಣ್ಯಕಶಿಪು ದೇವತೆಗಳ ವೈರಿ.  ಅವನು ತಪಸ್ಸಿಗಾಗಿ ಮಂದರ ಪರ್ವತಕ್ಕೆ ಹೋಗಿದ್ದನು. ಗರ್ಭಿಣಿಯಾಗಿದ್ದ ಅವನ ಹೆಂಡತಿ ಕಯಾಧುವನ್ನು ಇಂದ್ರನು ಅಪಹರಿಸಿದ, ಅವಳ ಗರ್ಭದಲ್ಲಿದ್ದ ಶಿಶುವನ್ನು ಕೊಲ್ಲಲು ಯತ್ನಿಸಿದ. ಆಗ ನಾರದ ಮಹರ್ಷಿಗಳು ಬಂದು ಇಂದ್ರನಿಗೆ ಬುದ್ಧಿವಾದವನ್ನು ಹೇಳಿ ಈ ದುಷ್ಕೃತ್ಯವನ್ನು ತಡೆದರು. ಅಲ್ಲದೆ ಕಯಾಧುವನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ, ಹಿರಣ್ಯಕಶಿಪು ಬರುವವರೆಗೆ ಸಂರಕ್ಷಿಸಿದರು. ಅವಳ ಗರ್ಭದಲ್ಲಿದ್ದವನು ಪ್ರಹ್ಲಾದ. ಗರ್ಭದಲ್ಲಿದ್ದ ಪ್ರಹ್ಲಾದನನ್ನು ಉದ್ದೇಶಿಸಿ ಅವನ ತಾಯಿಗೆ ಧರ್ಮವನ್ನು ಬೋಧಿಸಿ ಭಗವಂತನ ಮಹಿಮೆಯನ್ನು ವರ್ಣಿಸುತ್ತಿದ್ದರು. ಅದರ ಬಲದಿಂದ ಪ್ರಹ್ಲಾದನು ಮಹಾ ವಿಷ್ಣುಭಕ್ತನಾಗಿ ಜನಿಸಿದನು.

ಸಾವಿತ್ರಿ

ಮದ್ರದೇಶದಲ್ಲಿ ಅಶ್ವಪತಿಯೆಂಬ ರಾಜನಿದ್ದನು. ಅವನ ಮಗಳು ಸಾವಿತ್ರಿ. ಆ ಬಾಲಿಕೆ ವಿದ್ಯಾವತಿಯೂ ರೂಪವತಿಯೂ ತೇಜಸ್ವಿನಿಯೂ ಆಗಿ ಬೆಳೆದಳು.

ಸಾವಿತ್ರಿಯು ಸತ್ಯವಾನ್‌ ಎಂಬ ಯುವಕನನ್ನು ನೋಡಿ ಅವನೇ ತನ್ನ ಪತಿಯಾಗಲು ಯೋಗ್ಯನೆಂದು ನಿಶ್ಚಯಿಸಿದಳು. ಇದನ್ನು ಕೇಳಿ ನಾರದರು ಹೀಗೆಂದರು: “ರಾಜ, ನಾನು ಆ ಯುವಕನನ್ನು ಬಲ್ಲೆನು. ಸತ್ಯವಾನನು ಸೂರ್ಯನಂತೆ ತೇಜಸ್ವಿ. ಬೃಹಸ್ಪತಿಯಂತೆ ಬುದ್ಧಿಶಾಲಿ, ದೇವೇಂದ್ರನಂತೆ ಪರಾಕ್ರಮಿ. ಆದರೆ ಆತನ ಆಯಸ್ಸು ಇನ್ನೊಂದು ವರ್ಷ ಮಾತ್ರವೇ. ಇದೊಂದೇ ಕೊರತೆ.”

ನಾರದನ ಮಾತುಗಳನ್ನು ಕೇಳಿ ಅಶ್ವಪತಿ ಬೆಚ್ಚಿದ. ಅವನ ಮುಖ ಮಂಕಾಯಿತು. ಒಂದೇ ವರ್ಷ ಆಯುಸ್ಸಿರುವವನಿಗೆ ಮಗಳನ್ನು ಕೊಟ್ಟು ಮದುವೆ ಮಾಡುವುದೆ? ಸಾವಿತ್ರಿಯು “ಅಪ್ಪ, ನಾನು ಮನಸ್ಸಿನಿಂದ ಸತ್ಯವಾನನನ್ನು ವರಿಸಿದ್ದೇನೆ. ಆದ್ದರಿಂದ ಅವನೇ ನಿನಗೆ ಪತಿ” ಎಂದು ಹಠ ಹಿಡಿದಳು. ನಾರದರು “ರಾಜ, ಸಾವಿತ್ರಿಯ ನಿರ್ಧಾರವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ. ಸತ್ಯವಾನನಂತಹ ಗುಣಶಾಲಿ ಇನ್ನೊಬ್ಬನಿಲ್ಲ. ಅವನಿಗೆ ನಿನ್ನ ಮಗಳನ್ನು ಕೊಡುವುದು ಯಕ್ತವೆಂದು ನನಗೆ ತೋರುತ್ತದೆ. ಭಗವಂತನಿದ್ದಾನೆ. ಎಲ್ಲವೂ ಒಳ್ಳೆಯದಾಗುತ್ತದೆ!” ಎಂದು ಹೇಳಿ ಹೊರಟುಹೋದರು.

ಅನಂತರ ಸಾವಿತ್ರಿ ಸತ್ಯವಾನರ ವಿವಾಹ ನಡೆಯಿತು. ನಾರದರ ನುಡಿಯಂತೆ ಒಂದು ವರ್ಷಕ್ಕೆ ಸರಿಯಾಗಿ ಸತ್ಯವಾನನು ಮೃತನಾದನು. ಅವನ ಜೀವವನ್ನೊಯ್ಯಲು ಯಮದೇವನೇ ಬಂದಿದ್ದನು. ಸಾವಿತ್ರಿಯು ತನ್ನ ಸದ್ಗುಣಗಳಿಂದಲೂ ಪತಿಭಕ್ತಿಯಿಂದಲೂ ಯಮನನ್ನು ಮೆಚ್ಚಿಸಿ ತನ್ನ ಗಂಡನನ್ನು ಬದುಕಿಸಿಕೊಂಡಳು. ಹೀಗೆ ನಾರದರು ಸತ್ಯವಾನನ ಆಯಸ್ಸಿನ ವಿಷಯ ಹೇಳಿದುದರಿಂದ ಸಾವಿತ್ರಿಯು ಬಹು ಎಚ್ಚರದಿಂದಿದ್ದು ತನ್ನ ಪತಿಯನ್ನು  ಉಳಿಸಿಕೊಳ್ಳಲು ಸಾಧ್ಯವಾಯಿತು.

ದುಷ್ಟಶಿಕ್ಷೆಕಂಸ

ಕೆಲವು ಸಂದರ್ಭಗಳಲ್ಲಿ ನಾರದರ ಹೇಳಿಕೆ ಮೇಲು ನೋಟಕ್ಕೆ ಚಾಡಿಯಂತೆ ಕಾಣುತ್ತದೆ. ಆದರೆ ಸಜ್ಜನರಿಗೆ ಒಳ್ಳೆಯದಾಗಲೆಂದೂ ದುರ್ಜನರಿಗೆ ದಂಡನೆಯಾಗಲೆಂದೂ ನಾರದರ ಉದ್ದೇಶ.  ಪರಿಣಾಮದಲ್ಲಿ ಹಾಗೆಯೇ ಆಗುತ್ತದೆ. ಕಂಸನ ಸಂದರ್ಭವನ್ನು ಉದಾಹರಣೆಗಾಗಿ ತೆಗೆದುಕೊಳ್ಳಬಹುದು. ಕಂಸನು ಕ್ರೂರ ಬುದ್ದಿಯವನು; ದುರುಳ. ದುಷ್ಟರಾದ ರಾಕ್ಷಸರ ಗುಂಪನ್ನು ಕಟ್ಟಿಕೊಂಡು ಜನರಿಗೆ ಹಿಂಸೆ ಕೊಡುತ್ತಿದ್ದನು. ಅವನ ತಂಗಿಯಾದ ದೇವಕಿಗೂ ವಸುದೇವನಿಗೂ ಮದುವೆಯಾಯಿತು. ಆಗ “ಎಲೈ ಕಂಸ, ದೇವಕಿಯ ಎಂಟನೆಯ ಗರ್ಭದಲ್ಲಿ ಜನಿಸುವ ಶಿಶುವಿನಿಂದ ನಿನ್ನ ಮರಣವಾಗುವುದು” ಎಂದು ಅಶರೀರ ವಾಣಿಯಾಯಿತು. ಅದನ್ನು ಕೇಳಿ ಕಂಸನ ಕೋಪ ಭುಗಿಲೆಂದು ಎದ್ದಿತು. ದೇವಕಿಯನ್ನು ಕೊಲ್ಲುವುದಕ್ಕಾಗಿ ಕತ್ತಿಯನ್ನು ಹಿರಿದನು. ದೇವಕಿಯನ್ನು ಕೊಲ್ಲಬಾರದೆಂದು ವಸುದೇವನು ನಾನಾ ಬಗೆಯಲ್ಲಿ ಪ್ರಾರ್ಥಿಸಿಕೊಂಡನು. ದೇವಕಿಯಲ್ಲಿ  ಜನಿಸುವ ಮಕ್ಕಳೆಲ್ಲರನ್ನೂ ಕಂಸನಿಗೆ ಒಪ್ಪಿಸುವುದಾಗಿ ಹೇಳಿದನು. ಕಂಸನು ದೇವಕಿಯನ್ನು ಸಂಹರಿಸದೆ ಬಿಟ್ಟನು.

ಆಮೇಲೆ ನಾರದ ಮುನಿಗಳು ರಹಸ್ಯವಾಗಿ ಕಂಸನನ್ನು ಕಂಡು “ಕಂಸ, ನಿನ್ನನ್ನು ಕೊಲ್ಲಲು ದೇವತೆಗಳು ಸಂಚು ಮಾಡಿದ್ದಾರೆ. ವಸುದೇವ, ದೇವಕಿ ನಿನ್ನ ತಂದೆ ಉಗ್ರಸೇನ-ಮೊದಲಾದವರು ದೇವತೆಗಳ ಪಕ್ಷಕ್ಕೆ ಸೇರಿದವರು. ನೀನು ರಾಕ್ಷಸ ಪಕ್ಷದವನು. ದೇವತೆಗಳೂ, ರಾಕ್ಷಸರೂ ಬದ್ಧವೈರಿಗಳೆಂಬುದು ನಿನಗೆ ತಿಳಿಯದೆ?” ಎಂದು ಹೇಳಿದರು. ಕಪಿಗೆ ಹೆಂಡವನ್ನು ಕುಡಿಸಿದಂತಾಯಿತು. ಒಡನೆಯೇ ಕಂಸನು ವಸುದೇವ ದೇವಕಿಯರನ್ನು ಸೆರೆಮನೆಯಲ್ಲಿಟ್ಟನು. ತಂದೆಯಾದ ಉಗ್ರಸೇನನನ್ನು ಬಂಧಿಸಿ, ತಾನೇ ರಾಜನೆಂದು ಘೋಷಿಸಿದನು.

ಈ ಬಗೆಯ ಚಾಡಿಮಾತು ನಾರದ ಮುನಿಗಳಿಗೆ ಏಕೆ ಬೇಕಿತ್ತು ಎನಿಸುತ್ತದೆ. ಆದರೆ ನಾರದರ ಉದ್ದೇಶವೇ ಬೇರೆ. ಪಾಪಿಗಳ ಪಾಪವು ಪರಮಾವಧಿಯನ್ನು ಮುಟ್ಟಿದಾಗಲೇ ಅವರಿಗೆ ದಂಡನೆ. ಕಂಸನ ಕ್ರೂರ ಕೃತ್ಯಗಳು ಒಂದರ ಹಿಂದೆ ಇನ್ನೊಂದರಂತೆ ಬಹು ಬೇಗನೆ ನಡೆದವು. ನಂದಗೋಕುಲದಲ್ಲಿ ಬೆಳೆಯುತ್ತಿದ್ದ ಶ್ರೀಕೃಷ್ಣನನ್ನು ಸಂಹರಿಸುವುದಕ್ಕಾಗಿ ಬಹು ಮಂದಿ ರಾಕ್ಷಸರನ್ನು ಕಳಿಸಿದನು. ಅವರೆಲ್ಲರ ವಧೆಯೂ ಆಯಿತು. ಕಂಸನನ್ನು ಸಂಹರಿಸಲು ಶ್ರೀಕೃಷ್ಣನಿಗೆ ಸರಿಯಾದ ಕಾರಣವೂ ಬೇಗನೆ ಒದಗಿತು. ಕಂಸನ ಸಂಹಾರ ಆಯಿತು.

‘ಕಂಸ, ನಿನ್ನನ್ನು ಕೊಲ್ಲಲು ದೇವತೆಗಳು ಸಂಚು ಮಾಡಿದ್ದಾರೆ.’

ಮಹಾಭಾರತದಲ್ಲಿ

ಮಹಾಭಾರತದಲ್ಲಿ ನಾರದ ಮಹರ್ಷಿಗಳು ಪ್ರವೇಶಿಸುವ ಸಂದರ್ಭಗಳು ಹಲವಾರು.

ಪಾಂಡವರು ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ಧರ್ಮರಾಜ ಸತ್ಯವಂತ ಎಂದು ನಾರದರಿಗೆ ಗೊತ್ತು. ಆತನು ಇಂದ್ರಪ್ರಸ್ಥದಲ್ಲಿ ಕೆಲವು ಕಾಲ ರಾಜ್ಯಭಾರ ಮಾಡುತ್ತಿದ್ದ. ಅವನು ಇನ್ನೂ ತರುಣನಾದ್ದರಿಂದ ಅವನಿಗೆ ರಾಜಧರ್ಮದ ವಿಷಯದಲ್ಲಿ ಹಿತೋಪದೇಶವನ್ನು ಮಾಡಬೇಕೆಂದು ನಾರದರಿಗೆ ತೋರಿತು. ಈಗ ಇಂದ್ರಪ್ರಸ್ಥಕ್ಕೆ ಬಂದು ಧರ್ಮರಾಜನಿಗೆ ರಾಜನೀತಿ ಯನ್ನು ಬೋಧಿಸಿದರು. ಅವರು ಹೀಗೆ ಉಪದೇಶ ಮಾಡಿದರು: “ಯುಧಿಷ್ಠಿರ, ನಿನ್ನ ಹಿರಿಯರು ಪ್ರಜೆಗಳ ವಿಷಯದಲ್ಲಿ ಎಷ್ಟು ದಯೆಯಿಂದ ನಡೆದುಕೊಳ್ಳುತ್ತಿದ್ದರೋ ಹಾಗೆಯೇ ನೀನೂ ನಡೆದುಕೋ. ಅವರು ಹಾಕಿಕೊಟ್ಟ ದಾರಿಯನ್ನು ಬಿಡಬೇಡ. ಒಳ್ಳೆಯ ನಡತೆಯುಳ್ಳವರೂ ಹಿರಿಯರೂ ಜ್ಞಾನಿಗಳೂ ಆದವರನ್ನೇ ಮಂತ್ರಿಗಳನ್ನಾಗಿ ನೇಮಿಸಿಕೊ. ಬೆಳಗಿನ ಜಾವದಲ್ಲೆದ್ದು ಆ ದಿನ ಮಾಡಬೇಕಾದ ಕಾರ್ಯಗಳನ್ನು ನಿರ್ಣಯಿಸು. ಯಾವ ಕೆಲಸವನ್ನು ಮಾಡುವಾಗಲೂ ಮಂತ್ರಿಗಳೊಡನೆ ಆಲೋಚಿಸು. ನಿನ್ನ ಸೈನ್ಯವನ್ನೂ ಯುದ್ಧಯಂತ್ರಗಳನ್ನೂ ಸದಾ ಸಿದ್ಧವಾಗಿ ಇಟ್ಟಿರು. ಅಪರಾಧಿಗಳನ್ನು ದಂಡಿಸದೆ ಇರಬೇಡ. ಹೆಂಗಸರು, ಹುಡುಗರು ಮತ್ತು ಮುದುಕರ ವಿಷಯದಲ್ಲಿ ಕನಿಕರವಿರಲಿ. ಸೇವಕರನ್ನು ಪ್ರೀತಿಯಿಂದ ಒಲಿಸಿಕೊಳ್ಳಬೇಕು. ಅವರಿಗೆ ಅಸಮಾಧಾನವಾಗುವಂತೆ ನಡೆಯಬಾರದು. ಕಾಲಕ್ಕೆ ಸರಿಯಾಗಿ ಸೇವಕರಿಗೂ ಸೈನಿಕರಿಗು ಸಂಬಳವನ್ನು ಕೊಟ್ಟುಬಿಡಬೇಕು. ಆದಾಯಕ್ಕಿಂತ ಹೆಚ್ಚಾಗಿ ಎಂದಿಗೂ ಖರ್ಚು ಮಾಡಬೇಡ. ಕೆರೆ ಕಾಲುವೆಗಳನ್ನು ನಿರ್ಮಿಸಿ ರೈತರಿಗೆ ಬೇಕಾದ ಸೌಕರ್ಯವನ್ನು ಮಾಡಿ ಕೊಡು. ಬಡವರನ್ನು ಧನಿಕರು ಸುರೆ ಮಾಡದಂತೆ ಎಚ್ಚರವನ್ನು ವಹಿಸು. ಮುಖಸ್ತುತಿ ಮಾಡತಕ್ಕವರನ್ನು ಹತ್ತಿರ ಸೇರಿಸಬೇಡ. ಸುಖದಲ್ಲಿ ಮೈಮರೆಯಬೇಡ. ಯಾವಾಗಲೂ ಕಾರ್ಯದಲ್ಲಿ ನಿರತನಾಗಿರು.  ಧರ್ಮವು ಮಾತ್ರವೇ ಧರ್ಮವನ್ನು ರಕ್ಷಿಸಬಲ್ಲದು. ಯಾವ ಸಮಯದಲ್ಲಿಯೂ ಧರ್ಮಲೋಪವಾಗದಂತೆ ಎಚ್ಚರಿಕೆಯಿಂದಿರು.”

ಇಷ್ಟೇ ಅಲ್ಲ, ಪಾಂಡವರು ವನವಾಸದಲ್ಲಿ ಕಷ್ಟ ಪಡುತ್ತಿರುವಾಗ ಅವರ ಮನಃಶ್ಯಾಂತಿಗಾಗಿ ಕೆಲವು ಪೂರ್ವ ಕಥೆಗಳನ್ನು ಹೇಳಬೇಕೆಂದು ಮಾರ್ಕಂಡೇಯ ಮುನಿಗಳನ್ನು ಪ್ರಾರ್ಥಿಸಿ,  ತಾವೂ ಆ ಕಥೆಗಳನ್ನು ಕೇಳಿದರು. ಕರ್ಣನನ್ನು ಕೊಂದುದಕ್ಕಾಗಿ ದುಃಖಿಸುತ್ತಿದ್ದ ಧರ್ಮರಾಜನನ್ನು ಸಂತೈಸಿದರು. ಶರತಲ್ಪದಲ್ಲಿ ಭೀಷ್ಮರು ಮಲಗಿದ್ದಾಗ ಪಾಂಡವರನ್ನು ಕಂಡು, ಭೀಷ್ಮನು ಜ್ಞಾನವೃದ್ಧ, ಅವನಿಂದ ಉಪದೇಶವನ್ನು ಪಡೆಯಿರಿ ಎಂದು ಪಾಂಡವರಿಗೆ ಸೂಚಿಸಿದರು. ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದ ಧೃತರಾಷ್ಟ್ರನ ಪರಿಸ್ಥಿತಿಯನ್ನು ಕಂಡು ಮರುಗಿ, ತಪಸ್ಸು ಮಾಡುವಂತೆ ಹೇಳಿ ಅವನಿಗೆ ಶಾಂತಿಯ ಮಾರ್ಗವನ್ನು ತೋರಿಸಿದರು.

ಗ್ರಂಥಗಳನ್ನೋದಿದರೆ

ಒಂದು ಸಲ ನಾರದ ಮಹರ್ಷಿಗಳು ಕೈಲಾಸದಲ್ಲಿ ಈಶ್ವರನ ಸಭೆಯಲ್ಲಿ ಕುಳಿತಿದ್ದರು. ಮಹಾಯೋಗಿಗಳೂ ಬ್ರಹ್ಮರ್ಷಿಗಳೂ ಸಭೆಯನ್ನಲಂಕರಿಸಿದ್ದರು. ಆ ವೇಳೆಗೆ ದುರ್ವಾಸ ಮುನಿಗಳು ಗ್ರಂಥಗಳ ಒಂದು ದೊಡ್ಡ ಹೊರೆಯನ್ನು ಹೊತ್ತುಕೊಂಡು ಸಭೆಗೆ ಬಂದರು. ದುರ್ವಾಸರೂ ದೊಡ್ಡ ಋಷಿಗಳು, ಆದರೆ ಅವರಿಗೆ ಕೋಪ ಹೆಚ್ಚು. ಅವರು ಸಭೆಯಲ್ಲಿದ್ದವರನ್ನು ಲೆಕ್ಕಿಸದೆ ನೇರವಾಗಿ ಹೋಗಿ ಶಿವನ ಬಳಿಯಲ್ಲಿ ಕುಳಿತರು. ಶಿವನು ನಸುನಗುತ್ತ “ದುರ್ವಾಸರೇ , ನಿಮ್ಮ ಅಧ್ಯಯನ ಎಲ್ಲಿಯವರೆಗೆ ಸಾಗಿದೆ?” ಎಂದು ಕೇಳಿದನು. ದುರ್ವಾಸರು ಹೆಮ್ಮೆಯಿಂದ ಗ್ರಂಥಗಳ ಹೊರೆಯನ್ನು ತೋರಿಸಿ ‘ಈ ಗ್ರಂಥಗಳೆಲ್ಲವನ್ನೂ ಅಧ್ಯಯನ ಮಾಡಿರುವೆ. ಇವು ನನಗೆ ಕಂಠ ಪಾಠ!” ಎಂದು ಹೇಳಿ, ದರ್ಪದಿಂದ ಸಭೆಯಲ್ಲಿದ್ದವರನ್ನು ನೋಡಿದರು. ಆಗ ನಾರದರು ಎದ್ದು ನಿಂತು “ಗ್ರಂಥಗಳ ಹೊರೆಯನ್ನು ಹೊತ್ತಿರುವ ಒಂದು ಕತ್ತೆ!” ಎಂದುಬಿಟ್ಟರು. ದುರ್ವಾಸರು ಸಿಟ್ಟಿನಿಂದ ಘುಡಿಘುಡಿಸಿದರು. ನಾರದರು “ಅದಕ್ಕೇ ನಾನು ಹೇಳಿದ್ದು! ಅಷ್ಟು ಗ್ರಂಥಗಳನ್ನೋದಿದರೂ ಕೋಪ ಹೋಗಲಿಲ್ಲ. ಅಹಂಕಾರ ನೀಗಲಿಲ್ಲ. ಸಭೆಯಲ್ಲಿದ್ದವರನ್ನು ಲೆಕ್ಕಿಸದೆ ಪರಮೇಶ್ವರನ ಪಾರ್ಶ್ವದಲ್ಲಿ ಹೋಗಿ ಕುಳಿತಿರಿ. ತಾಳ್ಮೆ ಮತ್ತು ಕ್ಷಮೆ ಲಭಿಸದಿದ್ದರೆ , ಓದಿನಿಂದೇನು ಫಲ? ಆ ಗ್ರಂಥಗಳು ಕತ್ತೆಯ ಹೊರೆಯಲ್ಲದೆ ಇನ್ನೇನು?” ಎಂದರು. ದುರ್ವಾಸರಿಗೆ ತಮ್ಮ ತಪ್ಪು ತಿಳಿಯಿತು. ಪುಸ್ತಕಗಳ ಹೊರೆಯನ್ನು ಸಮುದ್ರದಲ್ಲಿ ಮುಳುಗಿಸಿ ತಪೋನಿರತರಾದರು.

ಪೂಜ್ಯರು, ಜ್ಞಾನಿಗಳು

ಮಹಾಭಾರತದ ಆದಿಪರ್ವದಲ್ಲಿ ವ್ಯಾಸರು ನಾರದ ಮಹರ್ಷಿಗಳನ್ನು ಹೀಗೆ ವರ್ಣಿಸಿದ್ದಾರೆ: “ನಾರದ ಮುನಿಗಳು ವೇದಾಂತಶಾಸ್ತ್ರದಲ್ಲಿ ಪಾರಂಗತರು. ಮಹಾ ತೇಜಸ್ವಿಗಳು, ತಪಸ್ವಿಗಳಲು, ನೀತಿಕೋವಿದರು. ಶಾಂತರು. ಮೃದು ಸ್ವಭಾವದವರು. ದೇವ ದಾನವ ಮಾನವರೆಲ್ಲರಿಂದಲೂ ಪೂಜಿತರು. ಶುಭ್ರವಾದ ದೇಹಕಾಂತಿಯುಳ್ಳವರು. ಬುದ್ಧಿಶಕ್ತಿಯಲ್ಲಿ  ಬೃಹಸ್ಪತಿಗೆ ಸಮಾನರು. ಸಾಮ ವೇದದಲ್ಲಿ ನಿಷ್ಣಾತರು. ಸಂಗೀತದಲ್ಲಿ ನಿಪುಣರು. ಯಾರಿಗೆ ಯಾವ ಸಂಶಯ ಬಂದರೂ ನಿವಾರಿಸುವ ಸಾಮರ್ಥ್ಯವಿರತಕ್ಕವರು. ಕಾಲೋಚಿತವಾಗಿ ಉಪಾಯವನ್ನು ಹೇಳಿ ಜನರ ಸಂಕಷ್ಟವನ್ನು ನೀಗಿಸಬಲ್ಲವರು. ಮಧುರವಾಗಿ ಮಾತನ್ನಾಡಿ ಜನರನ್ನು ವಶ ಪಡಿಸಿಕೊಳ್ಳಲು ಶಕ್ತರು. ಒಂದೊಂದು ಅಕ್ಷರವನ್ನೂ ಹೇಗೆ ಉಚ್ಚರಿಸಬೇಕೆಂಬುದನ್ನು ತಿಳಿಸಿದ್ದಾರೆ. ಪ್ರತಿಯೊಂದು ಶಬ್ದದ ಅರ್ಥವೂ ಅವರಿಗೆ ಗೊತ್ತಿದೆ. ಒಂದೊಂದು ಶಬ್ದ ಹೇಗೆ ಬೆಳೆದುಬಂದಿತು, ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ.”

ವೇದ ಉಪನಿಷತ್ತುಗಳಲ್ಲಿ ನಾರದರ ಹೆಸರಿದೆ. ಜ್ಯೋತಿಶಾಸ್ತ್ರ, ಸಂಗೀತಶಾಸ್ತ್ರಗಳಲ್ಲಿ ಅವರು ಆಚಾರ್ಯರು. ‘ನಾರದಸ್ಮೃತಿ’ ಎಮಬ ಧರ್ಮಶಾಸ್ತ್ರದ ಗ್ರಂಥವಿದೆ. ವರ್ಣೋಚ್ಚಾರಣೆಯನ್ನು ತಿಳಿಸುವ ‘ನಾರದಾಶಿಕ್ಷಾ’ ಎಂಬ ಗ್ರಂಥವನ್ನು ಅವರು ರಚಿಸಿದ್ದಾರೆ. ‘ನಾರದಪುರಾಣ’ ಎಂಬ ಪ್ರಸಿದ್ಧವಾದ ಪುರಾಣವೂ ಅವರ ಹೆಸರಲ್ಲಿದೆ. ‘ಪಾಂಚರಾತ್ರ’ ಎಂಬ ಗ್ರಂಥದ ಕರ್ತೃಗಳು ನಾರದರು. ಇವುಗಳಲ್ಲದೆ ‘ನಾರದ ಭಕ್ತಿಸೂತ್ರ’ ಎಂದು ಪ್ರಸಿದ್ಧವಾದ ಒಂದು ಗ್ರಂಥ ಉಂಟು. ಅದರಲ್ಲಿ ಎಂಬತ್ತನಾಲ್ಕು ಸೂತ್ರಗಳಿಂದ ಭಕ್ತಿಯ ಸ್ವರೂಪವನ್ನೂ ಸಾಧನ ಕ್ರಮವನ್ನೂ ಅದರ ಮಹಿಮೆಯನ್ನೂ ನಾರದ ಮುನಿಗಳು ವಿವರಿಸಿದ್ದಾರೆ. ಲೋಕಹಿತಕ್ಕಾಗಿ ದುಡಿದ ಮಹಾತ್ಮರಲ್ಲಿ ನಾರದ ಮಹರ್ಷಿಗಳು ಅಗ್ರಗಣ್ಯರು.