ಜನನ : ೧೧-೧೦-೧೯೩೧ ರಲ್ಲಿ ಕೋಲಾರ ಜಿಲ್ಲೆ – ಮಾಲೂರು ತಾ|| ಉಪ್ಪಾರಹಳ್ಳಿಯಲ್ಲಿ

ಮನೆತನ : ತಂದೆ ಕೃಷ್ಣಾಜಿರಾವ್ ಮಾನೆ – ತಾಯಿ ಲಕ್ಷ್ಮೀಬಾಯಿ.

ಗುರುಪರಂಪರೆ : ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಗಾಯನದಲ್ಲಿ ಪರಿಶ್ರಮ. (ಗುರುಗಳ ಬಗ್ಗೆ ಮಾಹಿತಿ ಇಲ್ಲ).

ಸಾಧನೆ : ಸುಗಮ ಸಂಗೀತ ಕ್ಷೇತ್ರದ ಮೊದಲ ತಲೆಮಾರಿನ ಗಾಯಕರು. ಹಲವು ದಶಕಗಳಿಂದ ತಮ್ಮದೇ ಆದ ವಿಶಿಷ್ಠ ಶೈಲಿಯಿಂದ ಕನ್ನಡ ಗೀತೆಗಳನ್ನು ಹಾಡಿ ಜನಪ್ರಿಯಗೊಳಿಸಿದ್ದಾರೆ. ೧೯೪೬ರ ಸುಮಾರಿಗೆ ಸ್ವತಂತ್ರ ಹೋರಾಟ ಚಳುವಳಿಗೆ ಧುಮುಕಿ ದೇಶಭಕ್ತಿ ಗಾಯನಗಳ ಮೂಲಕ ಜನರನ್ನು ಬಡಿದೆಬ್ಬಿಸಿದವರು. ಗಡಿ ಹೋರಾಟದಲ್ಲಿ ಪಾಲ್ಗೊಂಡು ಜಿ. ನಾರಾಯಣ ಅವರ ಜೊತೆಗೂಡಿ ಆಂಧ್ರದ ಗಡಿ ಭಾಗಗಳಲ್ಲಿ ಸಂಚರಿಸಿ ಕನ್ನಡ ಗೀತೆಗಳನ್ನು ಹಾಡಿ ನಾಡು ನುಡಿಗಳ ಬಗ್ಗೆ ಅಭಿಮಾನ ಮೂಡುವಂತೆ ಶ್ರಮಿಸಿದ್ದಾರೆ. ರಾಷ್ಟ್ರಪತಿ ವಿ.ವಿ. ಗಿರಿ, ಪ್ರಧಾನಿಗಳಾಗಿದ್ದ ಪಂ. ನೆಹರು, ಇಂದಿರಾಗಾಂಧಿ ಮುಂತಾದ ರಾಷ್ಟ್ರನಾಯಕರ ಸಮ್ಮುಖದಲ್ಲಿ ಹಾಡಿ ಅವರಿಂದ ಪ್ರಶಂಸೆ ಗಿಟ್ಟಿಸಿದ್ದಾರೆ.

ಪ್ರವಾಹ ಪೀಡಿತ ನಿಧಿ ಸಂಗ್ರಹಣೆಗಾಗಿ, ವಯಸ್ಕರ ಶಿಕ್ಷಣ ಪ್ರಸಾರ, ಕುಟುಂಬ ಕಲ್ಯಾಣ ಪ್ರಸಾರ ಕುರಿತು ಜನಜಾಗೃತಿ ಮೂಡಿಸಿ ಗಾಯನದ ಮೂಲಕ ಪ್ರಚಾರ ಮಾಡಿದ ಹಿರಿಮೆ ಇವರದು. ೧೯೯೭ ರಲ್ಲಿ ಅಮೆರಿಕಾ ಪ್ರವಾಸ ಮಾಡಿ ಕ್ಯಾಲಿಫೋರ್ನಿಯಾ – ಆಯೋವಾ, ಆರಿಜೊನಾ ರಾಜ್ಯಗಳಲ್ಲಿ, ಚಿಕಾಗೋವಿನ ಗ್ರೀಷ್ಮ ಮೇಳದಲ್ಲಿ ಭಾಗವಹಿಸಿ ಗಾಯನ ಕಾರ್ಯಕ್ರಮ ನೀಡಿರುವುದೇ ಅಲ್ಲದೆ ಅಲ್ಲಿನ ಅನೇಕ ಆಸಕ್ತ ಕಲಾವಿದರಿಗೆ ಗೀತೆಗಳನ್ನು ಕಲಿಸಿದ್ದಾರೆ. ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಸನ್ಮಾನ : ೧೯೫೪ ರಲ್ಲಿ ’ಸ್ವೀಟ್ ವಾಯ್ಸ್ ಆಫ್ ಮೈಸೂರ್’ ಪುರಸ್ಕಾರ. ೧೯೯೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಪಡೆದಿರುವ ಮಾನೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.