ಬಡತನದಲ್ಲಿ ಹುಟ್ಟಿ, ಕಷ್ಟದ ಕಾಲದಲ್ಲಿಯೂ ಸಹ ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡಿ ಹಿಂದೂಸ್ಥಾನಿ ಸಂಗೀತದಲ್ಲಿ ಹೆಸರು ಸಂಪಾದಿಸಿದ ಗ್ವಾಲಿಯರ ಘರಾಣೆಯ ಹಿರಿಯ ತಲೆಮಾರಿನ ಗಾಯಕರಲ್ಲಿ ಧಾರವಾಡದ ದಿ. ಶ್ರೀ ನಾರಾಯಣರಾವ ಮುಜುಂದಾರರು ಒಬ್ಬರು.

ಅವರು ಜನಿಸಿದ್ದು ಗದಗ ಜಿಲ್ಲೆಯ ಹರ್ಲಾಪೂರದಲ್ಲಿ; ೧೯೧೭ರಲ್ಲಿ, ಆರನೇ ವಯಸ್ಸಿನಲ್ಲಿಯೇ ದಾಸರ ಪದಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡುತ್ತ ಹಾಡುತ್ತ ಸಂಗೀತದತ್ತ ಒಲಿದರು. ೧೯೩೦ರಲ್ಲಿ ನರಗುಂದದ ಪಂ. ಸದು ಅವರಲ್ಲಿ ಸಂಗೀತದ ಶ್ರೀಕಾರ ಹಾಕಿಸಿಕೊಂಡು ಎರಡು ವರ್ಷ ಸಂಗೀತ ಕಲಿಕೆ. ನಂತರ ೧೯೩೪ ರಿಂದ ಹನ್ನೆರಡು ವರ್ಷಗಳ ಗ್ವಾಲಿಯರ್ ಘರಾಣೆಯ ಖ್ಯಾತ ಗಾಯಕ ಪಂ. ಗುರುರಾವ ದೇಶಪಾಂಡೆಯವರಲ್ಲಿ ಸುದೀರ್ಘ ಸಂಗೀತ ತಾಲೀಮು ಪ್ರಾಪ್ತಿ. ಬಡತನದ ನೆರಳಿನಲ್ಲಿಯೇ ಸರಸ್ವತಿಯ ಆರಾಧನೆ ಮಾಡುತ್ತ ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡುತ್ತ ಹೆಸರು ಸಂಪಾದಿಸಿದರು.

ಬ್ಯಾಡಗಿಯ ಲಕ್ಷ್ಮಣಶಾಸ್ತ್ರಿಗಳ ಜೊತೆ ಸಹ ಗಾಯಕರಾಗಿ ಸಂಗೀತ ಲೋಕದಲ್ಲಿ ಧುಮುಕಿದ ಅವರು ನಾಡಿನ ಒಳ-ಹೊರಗೆ ಅನೇಕ ಸಂಗೀತ ಕಚೇರಿ ನೀಡಿ ಶ್ರೋತೃಗಳ ಮನಗೆದ್ದಿದ್ದಾರೆ. ತಮ್ಮ ಬದುಕನ್ನು ಸಂಪೂರ್ಣವಾಗಿ ಸಂಗೀತ ಸಾಧನೆ ಹಾಗೂ ಬೋಧನೆಗೆ ಮೀಸಲಿಟ್ಟು ತಮ್ಮ ಮನೆಯಲ್ಲಿಯೇ ಸಂಗೀತ ಶಿಕ್ಷಣಕ್ಕೆ ಅವಕಾಶ ನೀಡಿ ಅನೇಕ ಶಿಷ್ಯರನ್ನು ತಯಾರಿಸಿದ್ದಾರೆ. ೧೯೭೨ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಹಾಡಿ ಜನಮನ ಗೆದ್ದುದು ಅವರ ಜೀವನದ ಮರೆಯದ ಘಳಿಗೆ.

ಅವರ ಶಿಷ್ಯ ಸಂಪತ್ತು ಅಪಾರ. ಅವರ ಶಿಷ್ಯರಲ್ಲಿ ಶ್ರೀ ವಿನಾಯಕ ತೊರವಿ, ವೆಂಕಟೇಶ ಗೋಡಖಿಂಡಿ, ಶ್ರೀಮತಿ ರತ್ನ ಪ್ರಭಾಜೋಶಿ, ಶ್ರೀ ಎಂ.ಜಿ. ಪಟವರ್ಧನ, ಶ್ರೀಮತಿ ಸುಧಾ ಪಿ. ಕುಲಕರ್ಣಿ, ಶ್ರೀ ಮೋಹಕುಮಾರ ಬೆಂಡೇಕರ, ಶ್ರೀ ಯಶವಂತ ಹಳಬಂಡಿ, ಶ್ರೀಮತಿ ರಾಧಿಕಾ ಕಾಖಂಡಕಿ, ಡಾ. ನಂದಾ ಎಂ. ಪಾಟೀಲ, ಶ್ರೀಮತಿ ಸುರೇಖಾ ಕಲ್ಲೂರಕರ, ಶ್ರೀಮತಿ ಅಮೃತಾ ದೇಶಪಾಂಡೆ, ಪ್ರೊ. ಶ್ರೀಮತಿ ಸುಲಭಾದತ್ತ ನೀರಲಗಿ, ಶ್ರೀಮತಿ ಮಂಜುಳಾ ಜೋಶಿ ಮುಂತಾದವರು ಪ್ರಮುಖರಾಗಿದ್ದಾರೆ.

ಕೆಲವರ್ಷ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದಲ್ಲಿ ಗೌರವ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೫೦ ರಿಂದ ತಮ್ಮ ಬದುಕಿನ ಕೊನೆವರೆಗೂ ಅವರು ಧಾರವಾಡ ಆಕಾಶವಾಣಿಯಲ್ಲಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನೀಡಿದ್ದಾರೆ. ೧೯೯೯ರ ನವೆಂಬರ್ ೧೮ ರಂದು ತಮ್ಮ ೮೩ನೇ ವಯಸ್ಸಿನಲ್ಲಿ ವೈಕುಂಠ ವಾಸಿಗಳಾದ ದಿ. ಶ್ರೀ ನಾರಾಯಣರಾವ ಮುಜುಂದಾರ ಅವರಿಗೆ ಅನೇಕ ಗೌರವ ಪುರಸ್ಕಾರ ಸಂದಿವೆ. ಅಂಥವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ (೧೯೯೦-೯೧) ಪ್ರಶಸ್ತಿ ಉಲ್ಲೇಖನೀಯವಾಗಿದೆ. ಅವರ ಮಗ ಹಾಗೂ ಖ್ಯಾತ ತಬಲಾ ವಾದಕ ಪಂ. ಬಸವರಾಜ ಬೆಂಡಿಗೇರಿಯವರ ಶಿಷ್ಯ ಶ್ರೀ ಸುದೀಂದ್ರ ಮುಜುಂದಾರ ಕ.ವಿ.ವಿ. ಸಂಗೀತ ಅಧ್ಯಯನ ಪೀಠದಲ್ಲಿ ತಬಲಾ ಸಹಾಯಕರಾಗಿ ಹಾಗೂ ಸೊಸೆ ಡಾ. ಶ್ರೀಮತಿ ಮುಕ್ತಾ ಮುಜುಂದಾರ ಧಾರವಾಡ ಆಕಾಶವಾಣಿ ನಿಲಯದ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತ ಶ್ರೀ ನಾರಾಯಣರಾವ್‌ ಮುಜುಂದಾರ ಅವರ ಸಂಗೀತ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.