ಭಾರತೀಯರಾದ ನಮಗೆ ’ಗುರು’ ಎನ್ನುವ ಮಾತು ಬಹಳ ಪೂಜ್ಯವಾದುದು. ’ಗುರು’ ಎಂದರೆ, ಭಾರವಾದುದು, ಬೆಲೆಯುಳ್ಳದ್ದು. ಗೌರವಕ್ಕೆ ಪಾತ್ರವಾದುದು, ಆಜ್ಞಾನವನ್ನು ನಾಶಮಾಡುವಂಥದು ಎಂಬ ನಾನಾ ಅರ್ಥಗಳುಂಟು, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿಯೂ ಇದೇ ಮಾತಿ ಭಾವ ಒಂದಲ್ಲ ಒಂದು ರೂಪದಲ್ಲಿ ಶಿಕ್ಷಣ ಮತ್ತು ಮತಧರ್ಮಗಳ ಮೂಲಕ ಪರಿಚಯವಿದೆ. ಗುರುತ್ವಕ್ಕೆ, ಗುರುಭಾವಕ್ಕೆ ಪೂಜ್ಯತೆಯಿದೆ.

ಗುರುಗಳು

ಹುಟ್ಟಿದ ಮಗುವಿಗೆ ತಾಯಿಯೇ ಮೊದಲ ಗುರು; ಅನಂತರ ತಂದೆ; ಆಮೇಲೆ ವಿದ್ಯೆ ಕಲಿಸಿದ ಗುರು; ಅದರ ತರುವಾಯ ಹೇಗೆ ಬದುಕಬೇಕು ಎಂಬುದನ್ನೂ  ನಿಜವಾದ ಸುಖವನ್ನೂ ತಿಳಿಸುವ ಗುರು; ಕೊನೆಗೆ ಬುದ್ಧಿಯನ್ನು ತಂದುಕೊಂಡಾಗ ತಾನೇ ಗುರು; ಹೀಗೆ ಗುರುಭಾವ ನಾನಾಪರಿ. ಹೀಗಿದ್ದರೂ ಈ ಎಲ್ಲರೂ ಒಂದೇ……….. ಗುರುತತ್ವ – ಗುರುಭಾವ. ಒಬ್ಬ ಗುರು ನೀಡಿದ ಅರಿವಿನಿಂದ ಶಿಷ್ಯ ಗುರುವಾಗುತ್ತಾನೆ. ಆ ಗುರು ಮತ್ತೆ ತನ್ನ ಶಿಷ್ಯನಿಗೆ ಅರಿವನ್ನು ನೀಡುತ್ತಾನೆ. ಹೀಗೆ ಗುರುತತ್ವ ಪರಂಪರೆ ಅನಾದಿ ಕಾಲದಿಂದ ಬಂದಿದೆ. ಆ ಆ ಕಾಲದ ಗುರುಗಳು ಮನುಷ್ಯ ಹೇಗೆ ಬಾಳಬೇಕು, ಬಾಳಿನಲ್ಲಿ ಯಾವುದು ಮುಖ್ಯ ಎಂಬ ತಿಳುವಳಿಕೆಯನ್ನು ಲೋಕಕ್ಕೆ ಕೊಟ್ಟಿದ್ದಾರೆ. ಪ್ರಪಂಚದ ಚರಿತ್ರೆಯಲ್ಲಿ ಎಷ್ಟೋ ವಿಪತ್ತುಗಳು ಬಂದಿವೆ. ಆದರೂ ಈ ತಿಳುವಳಿಕೆ ಉಳಿದುಬಂದಿದೆ.

ಭಾರತದಲ್ಲಿ ವೇದಗಳ ಕಾಲದ ಋಷಿ, ಅದಕ್ಕೂ ಹಿಂದಿನ ಕಾಲದ ಶಿವಾನುಭವ ಯೋಗಿ (ಶಿವನನ್ನು ಅರಿತುಕೊಂಡ ಯೋಗಿ), ಉಪನಿಷತ್ತುಗಳು ಕಾಲದ ದ್ರಷ್ಟಾರರು (ತತ್ವವನ್ನು ಕಂಡವರು), ಅನಂತರ ಬಂದ ವಾಲ್ಮೀಕಿ, ವ್ಯಾಸ, ಬುದ್ಧ, ಶಂಕರ, ರಾಮಾನುಜ, ಬಸವ, ಮಧ್ವ, ಸಮರ್ಥ ರಾಮದಾಸ, ರಾಮಕೃಷ್ಣ, ವಿವೇಕಾನಂದ, ಗಾಂಧಿ ಇಂತಹ ಅದೆಷ್ಟೋ ಮಂದಿ ಗುರು  ಪರಂಪರೆಯಲ್ಲಿ ಬಂದು ಹೋಗಿದ್ದಾರೆ. ಇವರಲ್ಲಿ ಸಂತರು, ಜ್ಞಾನಿಗಳು, ಮಾನವ ಪ್ರೇಮಿಗಳು ಇದ್ದಾರೆ. ಇವರು ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಅಧ್ಯಾತ್ಮ ಇವುಗಳನ್ನು ಬೆಳೆಸಲು ನೆರವಾಗಿದ್ದಾರೆ, ಇವರ ಸುತ್ತ ಕಥೆ, ಕಟ್ಟುಕಥೆ ಚರಿತ್ರೆ ಬೆಳೆದಿವೆ.

ಭಾರತದ ಒಂದೊಂದು ಪ್ರಾಂತವೂ ಯಾರಾದರೊಬ್ಬ ಗುರುವಿನ ಪ್ರಭಾವದಿಂದ ಪುಣ್ಯಭೂಮಿ ಅನಿಸಿದರೂ, ಕೆಲವರು, ಮಾನವಕುಲಕ್ಕೆಲ್ಲ ಅವಿರೋಧವಾಗಿ ಅನ್ವಯಿಸುವ ಆದಿ ಗುರುತತ್ವದ ಅಮರ ವಿಚಾರಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತಂದು, ಆ ಮೂಲಕ ಬೋಧಿಸಿ, ಹಿರಿಯ ಸಂಪದವನ್ನಾಗಿ ಬಿಟ್ಟು ಹೋಗಿದ್ದಾರೆ. ಅವುಗಳಿಗೆ ದೇಶ-ಕಾಲಗಳ ಕಟ್ಟಿಲ್ಲ; ಜಾತಿ ಮತಗಳ ಬಂಧನವಿಲ್ಲ; ಅವು ಎಲ್ಲೆಲ್ಲಿಯೂ ಅಡಿಯಿಲ್ಲದೆ ಬೀಸುವ ಶುದ್ಧವಾಯುವಿನಂತೆ; ಸರ್ವರಿಗೂ, ಸರ್ವಕಾಲಕ್ಕೂ ಗೋತ್ರ-ಕುಲಗಳ ವ್ಯತ್ಯಾಸವಿಲ್ಲದೆ ಸತ್ವ ನೀಡುವ ಅಮೃತದಂತೆ, ಭಾರತೀಯರ ಹಿರಿತನದ ಆರ್ಯತ್ವದ ವೈಶಿಷ್ಟ್ಯದ ಅಚ್ಚಳಿಯದ ಸಂಕೇತ ಈ ಗುರುಗಳು. ಮಾತಿನಿಂದ ವರ್ಣಿಸಲಾಗದ, ಸತ್ವಭರಿತ ಮೌನದಿಂದ ಕೂಡಿದ ಆದಿಗುರುತತ್ವದ ಅಂಶಗಳೇ ಈ ಗುರುಗಳು.

ಗುರುವಾಣಿ ಲೋಕಕ್ಕೆ ದಾರಿ ತೋರಿಸಬಲ್ಲದು; ಕೇರಳದ ನಾರಾಯಣ ಗುರುವಿನ ವಾಣಿ ಇಂಥ ಪರಂಪರೆಗೆ ಸೇರಿದೆ.

ಚೆಲುವಿನ ನಾಡನಲ್ಲಿ – ಪುಣ್ಯ ಜೀವಿಗಳು

ದಕ್ಷಿಣ ಭಾರತದ ಪಶ್ಚಿಮ ಸಮುದ್ರ ತೀರದಲ್ಲಿ ’ಕೇರಳ’ ರಾಜ್ಯವಿದೆ. ಇದು ಪಶ್ಚಿಮ ಘಟ್ಟಗಳ ಬೆಟ್ಟ – ಗುಡ್ಡಗಳಿಂದಲೂ,ಝರಿ ಹೊಳೆಸಳಿಂದಲೂ ಕೂಡಿದೆ. ಆದ್ದರಿಂದ ಇದು ಹಿಂದೆ ’ಮಲಬಾರ್’ ಮತ್ತು ’ಮಲೆಯಾಳ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದಿತು. ಮಲಬಾರ್ ’ತಿರುವಾಂಕೂರು’ ಮತ್ತು ’ಕೊಚ್ಚಿ’ ಎಂಬ ಎರಡು ಪುಟ್ಟ ದೇಶಿಯ ರಾಜ್ಯಗಳಿಂದ ಕೂಡಿದ್ದಿತು. ಸ್ವತಂತ್ರ ಭಾರತದಲ್ಲಿ ಆ ಎರಡು ರಾಜ್ಯಗಳೂ ’ಕೇರಳ’ ಎಂಬ ಹೆಸರಿನಿಂದ ಒಂದಾದವು.

ಕೇರಳ ರಾಜ್ಯ ಇತಿಹಾಸದ ಆದಿಕಾಲದಿಂದಲೂ ದೇಶ-ವಿದೇಶಗಳಲ್ಲಿ ಪರಿಚಿತವಾಗಿದೆ. ಯೂರೋಪಿನ ಬೇರೆಬೇರೆ ರಾಜ್ಯಗಳಿಗೆ ಭಾರತದ ಪರಿಚಯವಾದುದು, ಈ ಪ್ರದೇಶದ ಜನರು ಸಮುದ್ರದ ಮೇಲೆ ನಡೆಸುತ್ತಿದ್ದ ವ್ಯಾಪಾರ – ವಾಣಿಜ್ಯಗಳಿಂದಲೇ.

ಕೇರಳದಲ್ಲಿ ಪ್ರಕೃತಿಯ ಚೆಲುವಿದೆ, ಶಾಂತಿ ಇದೆ. ಇಲ್ಲಿ ವೇದೋಪನಿಷತ್ತುಗಳ ಕಾಲದ ಋಷಿಮುನಿಗಳು ನಿಸರ್ಗದ ತೊಟ್ಟಿಲಿನಲ್ಲಿ ಬೆಳೆದು ಪಾವನರೆನಿಸಿದರು. ಆದಿಶಂಕರ ಗುರುವಿಗೆ ಜನ್ಮವಿತ್ತುದು ಇದೇ ಕೇರಳವೇ.

ಕೇರಳ ರಾಜ್ಯದ ಮುಖ್ಯಪಟ್ಟಣದ ಹೆಸರು ತಿರುವನಂತಪುರ. ಈ ಪಟ್ಟಣದಲ್ಲಿ ಪ್ರಸಿದ್ಧವಾದ ದೇವಾಲಯವೊಂದಿದೆ. ಅದು ಶ್ರೀ ಅನಂತಪದ್ಮನಾಭ ದೇವಾಲಯ. ’ಪದ್ಮನಾಭ’ನೆಂಬುದು ವಿಷ್ಣುವಿನ ಅನೇ‌ಕ ಹೆಸರುಗಳಲ್ಲಿ ಒಂದು. ಅವನ ಹೊಕ್ಕಳಿನಿಂದ (ನಾಭಿ) ಒಂದು ಕಮಲ (ಪದ್ಮ) ಹುಟ್ಟಿದುದರಿಂದ ಅವನಿಗೆ ’ಪದ್ಮನಾಭ’ನೆಂದು ಹೆಸರಾಯಿತು.

ತಿರುವನಂತಪುರಕ್ಕೆ ಈಶಾನ್ಯಕ್ಕೆ ಸುಮಾರು ಹನ್ನೆರಡು ಮೈಲಿ ದೂರದ ಒಂದು ಹಳ್ಳಿ ಚೆಂಪಾಝಂಡಿ. ಅಲ್ಲಿ ಬತ್ತದ ಗದ್ದೆಗಳ ಅಂಚಿನ ಮೇಲೆ ಎಲ್ಲೆಲ್ಲಿಯೂ ತೆಂಗಿನ ಮರಗಳು ಬೆಳೆದು ಶೋಭಿಸುತ್ತವೆ. ಅಲ್ಲಿ ಮನೆಗಳ ಚಾವಣಿಯೂ ತೆಂಗಿನ ಗರಿಗಳದೇ. ಹಲಸು, ಮಾವು ಮೊದಲಾದ ವೃಕ್ಷಗಳೂ ಅಲ್ಲಿ ಹೇರಳ. ಅಲ್ಲಲ್ಲೇ ಮೆಣಸಿನ ಬಳ್ಳಿಗಳು. ಹೀಗೆ ಸಸ್ಯ ಸಂಪತ್ತಿನಿಂದ ಕೂಡಿದ ಪ್ರದೇಶವದು. ಅಲ್ಲಿ ಎಳವ ಪಂಗಡದವರಲ್ಲಿ ವಯ್ಯಾಳ್‌ವಾರಂ ಎಂಬ ಒಂದು ರೈತ ಕುಟುಂಬ. ಕುಟುಂಬದ ಯಜಮಾನ ಮಾದನ್ ಆಸನ್, ಯಜಮಾನಿ ಕುಟ್ಟಿ ಅಮ್ಮ. ಇವರಿಗೆ ೧೧೮ ವರ್ಷಗಳ ಹಿಂದೆ,(೧೮೫೪-೧೮೫೫?)ಆಗಸ್ಟ್‌೨೦ರಂದು ಒಂದು ಗಂಡುಶಿಶು ಜನಿಸಿತು. ಅದಕ್ಕೆ ’ನಾಣು’ (ನಾರಾಯಣ) ಎಂಬ ಹೆಸರನ್ನು ಇಟ್ಟರು.

ಮಾದನ್ ಆಸನ್ ಕೇವಲ ಕೃಷಿಯಲ್ಲಿಯೇ ನಿರತನಾದ ಒಬ್ಬ ರೈತನಾಗಿರಲಿಲ್ಲ. ಅವನು ’ಆಸನ್’ (ಆಚಾರ್ಯ) ಎಂದರೆ ಬೋಧಕ ಸಹ ಆಗಿದ್ದನು. ಅವನು ಸಂಸ್ಕೃತ, ಜ್ಯೋತಿಷ್ಯ ಮತ್ತು ಆಯುರ್ವೇದ ವಿದ್ಯೆಗಳನ್ನು ಬಲ್ಲವನಾಗಿದ್ದನು. ಗ್ರಾಮದ ಎಲ್ಲ ಜನರೂ ಅವನನ್ನು ಗೌರವಿಸುತ್ತಿದ್ದರು. ಅವನು ರೈತರಿಗೆ ಕೃಷಿ ಮತ್ತು ಭೂಮಾಲಿಕತ್ವ ಇವುಗಳಿಗೆ ಸಂಬಂಧಿಸಿದ ವಿಷಯಗಳಲ್ಲೆಲ್ಲ ಸಲಹೆ ನೀಡುತ್ತಿದ್ದನು. ಅವನ ಉಡುಪು ಬಹಳ ಸರಳವಾಗಿತ್ತು. ಉಡಲು ಒಂದು ಪಂಚೆ, ಮೇಲೊಂದು ಉತ್ತರೀಯ (ಎಂದರೆ ಹೊದಿಕೆ), ಎಲ್ಲಾದರೂ ಹೋಗುವಾಗ ತಾಳೆಗರಿಯ ಕೊಡೆ, ಇಷ್ಟೆ. (ಈ ಬಗೆಯ ಕೊಡೆಯನ್ನು ಇಂದಿಗೂ ಕೇರಳದಲ್ಲಿ ಅಲ್ಲಲ್ಲಿ ಕಾಣಬಹುದು.)

ಮಾದನ್ ರಾಮಾಯಣ ಮತ್ತು ಮಹಾಭಾರತಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು. ಅವನು ತನ್ನ ಮನೆಯ ಜಗುಲಿಯ ಮೇಲೆ ಕುಳಿತು ವಾರಕ್ಕೆ ಒಂದು ದಿನ ಅವುಗಳನ್ನು ಸರಳವಾದ ಗದ್ಯದಲ್ಲಿ ವಿವರಿಸುತ್ತಿದ್ದನು. ಜನರೆಲ್ಲ ಅಲ್ಲಿ ನೆರೆದು ಆಸಕ್ತಿಯಿಂದ ಕೇಳುತ್ತಿದ್ದರು. ಬಾಲಕ ನಾಣು ಸಹ ಉತ್ಸುಕತೆಯಿಂದ ಕೇಳುತ್ತಿದ್ದನು. ಎಷ್ಟೋ ವೇಳೆ ತಂದೆ ಇಲ್ಲಿದಿದ್ದಾಗ ಅವನು ಆ ವ್ಯಾಖ್ಯಾನಗಳನ್ನು ಮಾಡಬೇಕಾಗುತ್ತಿದ್ದಿತು.

ನಾಣುವಿನ ತಾಯಿ ಕುಟ್ಟಿ ಅಮ್ಮ ತನ್ನ ಹೆಸರಿಗೆ ತಕ್ಕಂತೆ ‘’ಕುಟ್ಟಿ’’ಯೇ (ದೋಷವೇ ಇಲ್ಲದ ಮಗು) ಆಗಿದ್ದಳು. ಅವಳದು ಸರಳ ಸ್ವಭಾವ; ಹಾಗೆಯೇ ಅವಳು ಬುದ್ಧಿವಂತಳು, ಕರುಣೆಯ ಸ್ವಭಾವದವಳು. ಆಕೆ ಸದಾ ಸೌಮ್ಯಭಾವದಿಂದ ಕೂಡಿರುತ್ತಿದ್ದಳು. ನಾಣುವಿನಲ್ಲಿಯೂ ತಂದೆತಾಯಿಯರ ಗುಣಗಳು ಬೆಳೆದು ಬಂದವು.

ನಾಣು ‘’ನಾಣು ಆಸನ್’’ ಆದ

ಬಾಲಕ ನಾಣು ತೆಳ್ಳಗಿದ್ದರೂ ಚುರುಕು, ಜಾಣ. ಅವನ ದೇಹದಾರ್ಢ್ಯ ಚೆನ್ನಾಗಿತ್ತು. ಅವನು ಆಟ ಮತ್ತು ಪಾಠಗಳೆರಡರಲ್ಲಿಯೂ ಬಹಳ ಆಸಕ್ತಿಯುಳ್ಳವನಾಗಿದ್ದನು. ಹಳ್ಳಿಯ ಹುಡುಗರ ಜತೆಯಲ್ಲಿ ದನಕಾಯುವಾಗ, ಎತ್ತರವಾದ ಮಾವಿನ ಮರದಲ್ಲಿದ್ದ ಕಾಯಿಗಳಿಗೆ ಗುರಿಯಿಟ್ಟು ಹೊಡೆದು, ಒಂದೇ ಏಟಿಗೆ ಅವುಗಳನ್ನು ಕೆಡಹುವ ನಿಪುಣತೆಯನ್ನು ಅವನು ಹೊಂದಿದ್ದನು. ಓದಿನಲ್ಲಿಯೂ ಅವನು ಮುಂದಾಗಿದ್ದನು. ಅವನ ಬರಹ ತಪ್ಪಿಲ್ಲದೆ ಸ್ಫುಟವಾಗಿ ಇರುತ್ತಿತ್ತು.

ನಾಣುವಿನ ಹದಿನೈದನೆಯ ವಯಸ್ಸಿನಲ್ಲಿ ಅವನ ತಾಯಿ ಕಾಲವಾದಳು; ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ತಂದೆಯೂ ಕಾಲವಾದನು; ಈ ಕಾಲದ ಅಂತರದಲ್ಲಿ ನಾಣುವಿನ ವಿದ್ಯಭ್ಯಾಸ ಸಾಗಿತು. ಅವನು ತನ್ನ ಊರಿಗೆ ಐವತ್ತು ಮೈಲಿ ದೂರದಲ್ಲಿದ್ದ ಕರುನಾಗಪಲ್ಲಿ ಎಂಬಲ್ಲಿಗೆ ಹೋಗಿ, ರಾಮನ್ ಪಿಳ್ಳೈಆಸನ್ ಎಂಬ ಗುರುವಿನಲ್ಲಿ ವ್ಯಾಸಂಗ ಮಾಡಿದನು. ರಾಮನ್ ಪಿಳ್ಳೈ ಉದಾರ ಸ್ವಭಾವದವನಾಗಿದ್ದನು; ವಿಶಾಲ ಮನಸ್ಸಿನವನಾಗಿದ್ದನು. ಅವನು ನಾಣುವನ್ನು ರೈತ ಎಂದು ಕಡೆಗಣಿಸಲಿಲ್ಲ, ಚೆನ್ನಾಗಿ ಪಾಠ ಹೇಳಿಕೊಟ್ಟ. ನಾಣು ಸಂಸ್ಕೃತದಲ್ಲಿ ಪರಿಣತನಾದನು. ವೇದೋಪನಿಷತ್ತುಗಳನ್ನೂ ಅಧ್ಯಯನ ಮಾಡಿದ. ಅವನ ಪರಿಶುದ್ಧ ಜೀವನ, ಶಾಸ್ತ್ರಜ್ಞಾನ ಎಲ್ಲರ ಮನ್ನಣೆಗೆ ಪಾತ್ರವಾಯಿತು. ಐವತ್ತು ಮೈಲಿ ಸುತ್ತಲ ಪ್ರದೇಶದಲ್ಲಿ ಅವನು ‘’ನಾಣು ಆಸನ್’’ ಎಂದು ಪ್ರಸಿದ್ಧಿ ಪಡೆದನು. ರೈತನ ಮಗ ‘’ಆಚಾರ್ಯನ್’’ ಆದನು.

ನಾಣು ತನ್ನ ತಾಯಿಯು ಕಾಲವಾದ ತರುವಾಯ, ತಂದೆಗೆ ಅರಿವಿಲ್ಲದಂತೆ ಮನೆ ಬಿಟ್ಟು ಹೋಗಿದ್ದನು. ಆದರೆ ತಂದೆಯ ಪ್ರಾಣ ಹೋಗುವ ಸಮಯಕ್ಕೆ ಸರಿಯಾಗಿ ಹೇಗೋ ಊರಿಗೆ ಬಂದನು. ಮಗನನ್ನು ಕಂಡ ತಂದೆಗೆ ಆದ ಆನಂದ ಅಪರಿಮಿತ. ಅವನನ್ನು ’ವಿದ್ವಾನ್’ ಎಂದು ಸಂಭೋಧಿಸಿದನು. ಸಂನ್ಯಾಸಿಯಂತೆ, ಭಿಕ್ಷುವಿನಂತೆ ‘’ಮಧುಕರ ಭಿಕ್ಷ’’ ವಿಧಾನದಿಂದ (ಹೂವಿಗೆ ನೋವನ್ನುಂಟು ಮಾಡದೆ ದುಂಬಿ ಜೇನನ್ನು ಶೇಖರಿಸುವಂತೆ ಭಿಕ್ಷೆಯಿಂದ) ಜೀವಿಸಿ, ಪವಿತ್ರವಾದ ಹಸ್ತಗಳಿಂದ ತನಗೆ ತುತ್ತು ಆಹಾರವನ್ನಿತ್ತು, ತನ್ನನ್ನೂ ಪಾವನಗೊಳಿಸಬೇಕೆಂದು ಇಚ್ಛಿಸಿದನು. ತನ್ನ ತಂದೆಯಿಂದಲೇ ನಾಣು ಆಸನ್ ವಿದ್ವಾನ್ ಎನಿಸಿಕೊಂಡುದು ಎಷ್ಟು ಹೆಮ್ಮೆಯ ವಿಷಯ? ಹೀಗೆ ಹೇಳಲು ಆ ತಂದೆಗೆ ಎಷ್ಟೊಂದು ಹರ್ಷವೆನಿಸಿರಬೇಕು?

ನಾಣು ಅಂತರಿಕ್ಷದ ಕಡೆ ನೋಡುತ್ತ ಮೌನವಾಗಿ ಪ್ರಾರ್ಥನೆ ಸಲ್ಲಿಸಿದ.

ನಾಣು ಆಸನ್‌ನ ವೈವಾಹಿಕ ಜೀವನದ ಬಗೆಗೆ ತಿಳಿದು ಬರುವ ವಿಚಾರ ಬಹಳ ಕಡಿಮೆ. ಚಿರಯಿಂದಲ್ ಎಂಬ ಪಕ್ಕದ ಗ್ರಾಮದಲ್ಲಿ ಒಬ್ಬ ವಿಷವೈದ್ಯ (ಹಾವು, ಚೇಳು ಮೊದಲಾದ ವಿಷಜಂತುಗಳು ಕಡಿದರೆ ವಾಸಿ ಮಾಡುವವನು) ಇದ್ದನು. ಅವನಿಗೆ ಒಬ್ಬಳು ಮಗಳಿದ್ದಳು. ತನ್ನ ಸೋದರಿಯರ ಇಷ್ಟದಂತೆ ನಾಣು ಆ ಹುಡುಗಿಯನ್ನು ಮದುವೆಯಾದನು. ಸರಳವಾದ ವಿವಾಹ ನಡೆಯಿತು. ನಾಣುವಿಗೆ ಆಸಕ್ತಿ ಇರಲಿಲ್ಲ; ತನ್ನ ಪಾಡಿಗೆ ತಾನು ರಾಮಾಯಣವನ್ನು ಓದುತ್ತಾ ಅದನ್ನು ವಿವರಿಸುತ್ತಿದ್ದನು. ಸೋದರಿಯರೇ ಅವನ ಪರವಾಗಿ ಹೆಣ್ಣಿಗೆ ತಾಳಿ ಕಟ್ಟಿದರು. ಮಲೆಯಾಳದ ಪದ್ಧತಿಯ ಪ್ರಕಾರ ಹೆಣ್ಣು ತೌರುಮನೆಯಲ್ಲಿಯೇ ನಿಂತಳು. ನಾಣು ಅಲ್ಲಿಗೆ ಹೋಗಿ ಬರುತ್ತಿದ್ದುದುಂಟು. ಕೆಲವು ಕಾಲದ ನಂತರ ಆಕೆ ಕಾಲವಾದಳು. ನಾಣು ಆಸನ್ ಮತ್ತು ಅವನ ಹೆಂಡತಿಗೆ ಮಕ್ಕಳಾದುವೆ ಎಂಬುದು ತಿಳಿದುಬಂದಿಲ್ಲ.

ಪರಿವ್ರಾಜಕ

ತಂದೆ ಕಾಲವಾದಮೇಲೆ, ನಾಣು ಆಸನ್ ಅದಕ್ಕೆ ಮೊದಲೇ ಕೈಗೊಂಡಿದ್ದ ಮಧುಕರ ಭಿಕ್ಷ ಜೀವನ ಮುಂದುವರಿಯಿತು. ಅವನು ಪರವ್ರಾಜಕನಾಗಿ (ಎಂದರೆ ಸಂಚರಿಸುವ ಸಂನ್ಯಾಸಿಯಾಗಿ) ಒಂದು ಸ್ಥಳದಿಂದ ಮತ್ತೊಂದಕ್ಕೆ ಸಂಚರಿಸತೊಡಗಿದನು. ಈ ಸಂಚಾರ ಕಾಲದಲ್ಲಿ ಅವನ ಮೇಲೆ ಇಬ್ಬರು ಉಪಗುರುಗಳು ಪ್ರಭಾವ ಬೀರಿದರು. ಮೊದಲನೆಯವನ ಹೆಸರು ಕುಂಜನ್ ಪಿಳ್ಳೈ. ಅವನಿಗೆ ಚೆಟ್ಟಾಂಬಿ ಸ್ವಾಮಿ ಎಂದೂ ಹೆಸರಿತ್ತು. ಇನ್ನೊಬ್ಬನ ಹೆಸರು ಥಿಕ್ಕಾಡ್ ಅಯ್ಯಾವು. ಚೆಟ್ಟಾಂಬಿ ಸ್ವಾಮಿ ಮಹಾ ಪಂಡಿತನಾಗಿದ್ದನು. ಆತನು ನಾಣು ಆಸನ್‌ನ ಪ್ರತಿಭಾ ಸಾಮರ್ಥ್ಯವನ್ನು ಚೆನ್ನಾಗಿ ಅರಿತುಕೊಂಡಿದ್ದನು. ಸಹಜ ನಾಚಿಕೆಯಿಂದ ಕೂಡಿದ ನಾಣುವಿಗೆ ಅವನು ಪ್ರೋತ್ಸಾಹವಿತ್ತು, ಸಂಸ್ಕೃತದಲ್ಲಿ ಕವನ ರಚನೆ ಮಾಡಿಸಿದನು. ’ನವ ಮಂಜರಿ’ ಎಂಬ ಒಂಬತ್ತು ಶ್ಲೋಕಗಳನ್ನು ರಚಿಸುವಂತೆ ಮಾಡಿದನು. ಅದು ಚೆಟ್ಟಾಂಬಿ ಸ್ವಾಮಿಗೇ ನವೇದಿತವಾಗಿದ್ದಿತು.

ಥಿಕ್ಕಾಡ್ ಅಯ್ಯಾವು ಯೋಗವಿದ್ಯೆಯನ್ನು ಚೆನ್ನಾಗಿ ಅರಿತವನಾಗಿದ್ದನು.

ಯೋಗೆ ನಾಣುವಿನ ಆಶ್ರಮ

ವೇದಶಾಸ್ತ್ರಜ್ಞಾನ, ಯೋಗವಿದ್ಯೆ ಇವುಗಳನ್ನೆಲ್ಲ ಕಲಿತರೂ ನಾಣು ಆಸನ್ ತೃಪ್ತಿ ಹೊಂದಲಿಲ್ಲ. ಅವನು ತನ್ನ ಪರಿವ್ರಾಜಕ ಸ್ಥಿತಿಯನ್ನು ಮುಂದುವರಿಸಿದನು. ಹೀಗೆ ಅಲೆದಾಡುತ್ತಾ ಅರನವೀಪುರಂ ಎಂಬಲ್ಲಿಗೆ ಬಂದನು. ಅದು ಅರಣ್ಯದ ಪ್ರದೇಶವಾಗಿದ್ದಿತು. ಅಲ್ಲಿ ಸುತ್ತಲೂ ಬೆಟ್ಟಗುಡ್ಡಗಳು; ಮಂಜುಳ ಗಾನ ಮಾಡುತ್ತಾ ಹರಿಯುವ ಒಂದು ಸಣ್ಣ ಹೊಳೆ; ಅದೊಂದು ಪ್ರಶಾಂತವಾದ, ಏಕಾಂತ ತುಂಬಿದ ಸ್ಥಳವಾಗಿದ್ದಿತು, ಆ ಸ್ಥಳ ಅವನಿಗೆ ತುಂಬ ಹಿತವಾಗಿ ಕಾಣಿಸಿತು. ನಾಣು ಧ್ಯಾನ ಮಗ್ನನಾದನು. ಅಲ್ಲಿಗೆ ಅಗಾಗ ಬರುತ್ತಿದ್ದವರು ದನಕಾಯುವವರು ಮಾತ್ರ. ಅವರು ಧ್ಯಾನಮಗ್ನನಾದ ಈ ಯೋಗಿಯನ್ನು ಕಂಡು, ಅವನ ಮುಖದ ತೇಜಸ್ಸಿಗೆ ಬೆರಗಾಗಿ ಸುದ್ದಿಯನ್ನು ಹರಡಿದರು. ಇದನ್ನು ನೋಡಲು ಜನ ತಂಡತಂಡವಾಗಿ ಬಂದರು. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಭಾವಿಸಿದರು. ಕೆಲವರು ಆಕ್ಷೇಪಿಸಿದರೆ, ಕೆಲವರು ಶ್ಲಾಘಿಸಿದರು. ಜನಸಂದಣಿ ಹೆಚ್ಚಿದುದನ್ನು ಕಂಡ ನಾಣು ತನ್ನ ಧ್ಯಾನದ ಸ್ಥಳವನ್ನು ಬಿಟ್ಟು ಇನ್ನೂ ಏಕಾಂತದ ಸ್ಥಳಕ್ಕೆ ಹೋದನು. ಅವನ ಧ್ಯಾನ ಹೆಚ್ಚು ಗಾಢವಾಯಿತು. ಕಡೆಗೊಂದು ದಿನ ಅವನು ಮನಸ್ಸಿನ ಶಾಂತಿಯನ್ನು ಕಂಡನು. ಹಿಂದಿನ ಶುದ್ಧ ಅನುಭವ ಭವಿಷ್ಯತ್ತಿನ ಚಿಂತನೆ ಇವುಗಳಿಂದ ಅವನಿಗೆ ತನ್ನ ಜೀವನದ ಬಗೆಗೆ ಒಂದು ರೀತಿಯ ವಿಶ್ವಾಸ ಹುಟ್ಟಿತು; ಕರ್ತವ್ಯಜ್ಞಾನ ಜನಿಸಿತು. ಇತರರಿಗೆ ಒಳ್ಳೆಯದನ್ನು ಮಾಡುವುದರಲ್ಲಿಯೆ ನಿಜವಾದ ಸಂತೋಷವಿದೆ ಎಂದು ಅವನು ಕಂಡುಕೊಂಡನು. ಏಕಾಂತ ಮೌನಕ್ಕಾಗಿ ಜನತೆಯಿಂದ ದೂರ ದೂರ ಸರಿಯುತ್ತಿದ್ದ ನಾಣು ಜನತೆಯ ಸಹವಾಸದಲ್ಲಿ ಅಚ್ಚ ಸುಖ ಕಾಣಲಾರಂಭಿಸಿದನು ಯೋಗಿ ನಾಣು ಇದ್ದ ಸ್ಥಳ ಪವಿತ್ರ ಸ್ಥಳವಾಯಿತು. ಅಲ್ಲೊಂದು ಆಶ್ರಮ ಸ್ಥಾಪನೆಯಾಯಿತು. ಆದರೆ ಅಲ್ಲಿನ ಒಂದು ಕೊರತೆಯೆಂದರೆ, ದೇವಾಲಯದ ಅಭಾವ. ಯೋಗಿ ನಾಣುವಿನ ಸಲಹೆಯಂತೆ ಒಂದು ಶಿವ ದೇವಾಲಯ ಸ್ಥಾಪನೆಗೆ ಎಲ್ಲರೂ ಒಪ್ಪಿದರು. ಸ್ಥಾಪನೆಯ ಕಾರ್ಯ ಹೇಗೆ ನಡೆಯಬೇಕು? ಪರಂಪರೆಯ ರೀತಿಯಲ್ಲಿ ಬಂದಂತೆಯೇ ನಡೆಯಬೇಕೆ?

ಗುರುಗಳು ಅಸ್ಪೃಶ್ಯರಿನ್ನಿಸಿಕೊಂಡ ಇಬ್ಬರು ಹುಡುಗರನ್ನು ಹತ್ತಿರ ಕರೆದು ಕೂಡಿಸಿಕೊಂಡರು.

ದೇವಾಲಯದ ಸ್ಥಾಪನೆ – ಹೊಸ ರೀತಿಯಲ್ಲಿ

ದೇವಾಲಯದ ಸ್ಥಾಪನೆಯ ದಿನ ಬಂದಿತು. ಸಾವಿರಾರು ಜನ ಉತ್ಸುಕರಾಗಿ ಸೇರಿದರು. ಯೋಗಿ ನಾಣು ಬೆಳಗಿನ ಜಾವ ಎದ್ದು, ನದಿಯಲ್ಲಿ ಮಿಂದು ಬಂದ. ಇನ್ನೂ ಮುಂಜಾವಿನ ಸಮಯ. ಶಿವಪ್ರತಿಷ್ಠೆ ಯಾವ ಮಂತ್ರ ಯಾವ ತಂತ್ರಗಳಿಂದ ಆದೀತೆಂದು ಜನ ತವಕಗೊಂಡಿದ್ದರು. ಅವರ ಮಧ್ಯೆ ಧ್ಯಾನಮಗ್ನನಾಗಿ ನಿಂತಿದ್ದ ನಾಣು, ಶಿವನ ಪ್ರತೀಕವಾದ ಶಿಲೆಗೆ ಪಂಚಾರತಿ ಬೆಳಗಿದ, ಅಷ್ಟೇ. ಎಲ್ಲ ಆಗಿ ಹೋಯಿತು. ನಾಣು ಅಂತರಿಕ್ಷದ ಕಡೆ ನೋಡುತ್ತಾ, ಮೌನ ಪ್ರಾರ್ಥನೆ ಸಲ್ಲಿಸಿದ: “ಶಿವಕೃಪೆ ಅಧಿಕವಾಗಲಿ ಬಡವರು ಮತ್ತು ಹಸಿದವರು ಸುಖ ಕಾಣಲಿ. ಅವರು  ಅಭಿವೃದ್ಧಿ ಹೊಂದಲಿ. ದಿನದಿನವೂ ಅನ್ನ ಅವರಿಗೆ ತಪ್ಪದೆ ದೊರಕಲಿ. ಎಲ್ಲ ಜನ ಸತ್ಯವಂತರಾಗಲಿ, ಪರಸ್ಪರ ಸಹಕಾರದಿಂದ ಒಬ್ಬರ ಸುಖವನ್ನು ಮತ್ತೊಬ್ಬರು ಹೆಚ್ಚಿಸಲಿ. ದಿನದಿನಕ್ಕೆ ಅವರು ಪರಿಶುದ್ಧರಾಗಲಿ. ದ್ವೇಷ, ಮತ್ಸರಭಾವ ಕಣ್ಮರೆಯಾಗಲಿ. ಭಗವಂತನ ಸೃಷ್ಟಿಯಲ್ಲಿ ಅತ್ಯಂತ ಚಿಕ್ಕದನ್ನೂ ಗೌರವಿಸುವ ಬುದ್ಧಿ ಜನಿಸಲಿ. ಪರಸತ್ಯದ ಕನಿಷ್ಠಾಂಶವಾದರೂ ಅವರಲ್ಲಿ ಹುಟ್ಟಿ, ಎಲ್ಲಿರಿಗೂ ಶಾಂತಿ ದೊರಕಲಿ.”

ಯೋಗಿ ನಾಣುವಿನ ಕಣ್ಣಿನಿಂದ ಅಶ್ರು ಧಾರೆಧಾರೆಯಾಗಿ ಸುರಿಯುತ್ತಿತ್ತು. ಅವನು ಲಕ್ಷಾಂತರ ಮಂದಿ ಸಾಮಾನ್ಯ ಜನರ ಪ್ರತಿನಿಧಿಯಾಗಿ ಈ ಶಿವ ಪ್ರತಿಷ್ಠಾಪನೆಯ ಕಾರ್ಯವನ್ನು ಮಾಡಿದನು. ಸುತ್ತಲೂ ಹರಡಿದ್ದ ಮೌನದಲ್ಲಿಯೇ ಹಗಲು ಮೂಡುತ್ತದ್ದಂತೆ ಎಲ್ಲ ಜನ ಏನೋ ವಿವರಿಸಲಾಗದ ಆನಂದದಿಂದ ಒಬ್ಬೊಬ್ಬರಾಗಿ ಅಲ್ಲಿಂದ ನಡೆದರು. ಅಂದಿನಿಂದ ಯೋಗಿ ನಾಣು ಆಸನ್ ’ನಾರಾಯಣಗುರು’ ಆದನು.  ಯಾವ ಬಗೆಯ ಆಡಂಬರವೂ ಇಲ್ಲದೆ, ಬೂಟಾಟಿಕೆಯೂ ಇಲ್ಲದೆ, ಶುದ್ಧ ಹೃದಯದಿಂದ ಪೂಜೆ ಮಾಡಿದರೆ ಸಾಕು; ಪೂಜಾರಿಗಳ ಮತ್ತು ಮಂತ್ರಗಳ ಅಗತ್ಯವಿಲ್ಲ; ದೇವರ ಇದಿರಿನಲ್ಲಿ ಮೇಲು-ಕೀಳು ಎಂಬ ಭಾವವಿಲ್ಲದೆ ಎಲ್ಲರೂ ಸಮಾನರು ಎಂಬ ಸಹಸ್ರಾರು ವರ್ಷಗಳ ನಿಜ ತತ್ವವನ್ನು ಅವನು ಆಚರಣೆಗೆ ತಂದಿದ್ದನು. ಜನರಿಗೆ ಹೊಸ ಆದರ್ಶವನ್ನು ತೋರಿಸಿದ್ದನು.

ಕರುಣೆಯ ಮೂರ್ತಿ

ಆದರೆ ಮೂಢ ಆಚಾರ ಸುಲಭವಾಗಿ ಸಾಯದು. ಶಿವರಾತ್ರಿಯ ದಿನ ಬಂದಿತು. ಎಲ್ಲಿ ನಾರಾಯಣಗುರು ಶುದ್ಧ, ಸರಳ ಸಂಪ್ರದಾಯ ಆರಂಭಿಸಿದ್ದರೋ ಅಲ್ಲೇ ದೊಡ್ಡ ಜಾತ್ರೆ ಸೇರಿತು. ಎಲ್ಲ ಜಾತ್ರೆಗಳಂತೆಯೇ ಅದು! ಜನ ರಾತ್ರಿ ಜಾಗರಣೆ ಮಾಡಲು ಸಂಗೀತಗಾರರ ಕೋಲಾಹಲ, ಕೀರ್ತನಕಾರರ ವಿಜೃಂಭಣೆ; ಶಿವನಿಗೆ ಸಜೋತ್ಸವ; ಮರುದಿನ ಬೆಳಗ್ಗೆ ಮದ್ದುಗುಂಡುಗಳ ಸೇವೆ; ಮಧ್ಯ ರಾತ್ರಿಯ ವೇಳೆಗೆ ಗುರುವಿನ ಅಧ್ಯಕ್ಷತೆಯಲ್ಲಿ ಒಂದು ಸಭ; ಈ ರೀತಿ ಎಲ್ಲ ಏರ್ಪಾಡಾಗಿತ್ತು.

ಗಾಂಧೀಜಿ ಮತ್ತು ಗುರು

ಸಭೆ ಆರಂಭವಾಯಿತು. ಭಾಷಣಕಾರರು ಗುರುವಿನ ಆದರ್ಶಗಳ ಬಗೆಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದರು. ಜನ ಇದನ್ನು ಏದಮನಸ್ಕರಾಗಿ ಕೇಳುತ್ತಿದ್ದರು. ಅವರ ಪೈಕಿ ಒಂದು ಗುಂಪು ದೂರದಲ್ಲಿ ಪ್ರತ್ಯೇಕವಾಗಿ ಕುಳಿತಿತ್ತು. ಅವರಿಗೆ ದೊಡ್ಡ ಗುಂಪಿನಲ್ಲಿ ಮಿಲನವಾಗಲು ಹಕ್ಕಿಲ್ಲ. ಅವರು ‘’ಅಸ್ಪೃಶ್ಯರು’’ ಎಂದರೆ ಮುಟ್ಟಲು ಯೋಗ್ಯರಲಲದವರು, ಜಾತಿಬಾಹಿರರು ಎಂದು ಆಗ ಬಹುಜನರ ತಪ್ಪು ಭಾವನೆ. ಗುರುವಿನ ಕಣ್ಣು ಅತ್ತ ಹರಿಯಿತು ಅವರು ಉಪನ್ಯಾಸಕಾರರನ್ನು ಸ್ವಲ್ಪ ನಿಲ್ಲಿಸಲು ಹೇಳಿದರು. ದೂರದಲ್ಲಿ ಪ್ರತ್ಯೇಕವಾಗಿ ಕುಳಿತಿದ್ದ ಗುಂಪಿನಿಂದ ಇಬ್ಬರು ಮಕ್ಕಳನ್ನು ಹತ್ತಿರ  ಕರೆದು, ಪ್ರೀತಿಯಿಂದ ಮಾತಾಡಿಸಿದರು. ಅವರನ್ನು ತಮ್ಮ ಪಕ್ಕದಲ್ಲಿಯೇ ಕೂಡಿಸಿಕೊಂಡರು. “ಎಲ್ಲರಂತೆಯೇ ಇವರೂ ದೇವರ ಮಕ್ಕಳು” ಎಂದು ತಮ್ಮಲ್ಲಿಯೇ ಹೇಳಿಕೊಂಡರು. ಮರುಕದಿಂದ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಗುರು ಈ ನಾಲ್ಕು ಮಾತನ್ನು ಜನ ಸಮೂಹಕ್ಕೆ ಸಂದೇಶವಾಗಿ ಇತ್ತರು:

ಜಾತಿಕುಲದ ಭೇದವಿಲ್ಲದೆ
ಭಿನ್ನ ಮತದ ದ್ವೇಷವಿಲ್ಲದೆ
ಸೋದರತ್ವದಿಂದ
ಬಾಳ್ವೆವೆಲ್ಲರಿಲ್ಲಿಯೆ.
ಇದುವೆ ಆದರ್ಶವಿಲ್ಲಿದೆ.
ಇದನು ಅರಿಯಿರೆಲ್ಲರು.

ಆ ಗಳಿಗೆಯಿಂದ ಆರಂಭವಾಯಿತು ನಾರಾಯಣ ಗುರುವಿನ ಸಮಾಜ ಸುಧಾರಣೆಯ ಕಾ‌ರ್ಯ. ಭಾರತದ ಎಲ್ಲ ಕಡೆಗಳಲ್ಲಿಯೂ ಇ‌ದ್ದಂತೆ ತಿರುವಾಂಕೂರು ರಾಜ್ಯದಲ್ಲಿಯೂ ಅಸ್ಪೃಶ್ಯತೆ, ದೇವಿಯ ತೃಪ್ತಿಗಾಗಿ ಪ್ರಾಣಿವಧೆ, ಮದ್ಯಪಾನ ಇತ್ಯಾದಿ ಪಿಡುಗುಗಳು ಇದ್ದವು. ಎಲ್ಲರೂ ಮನಷ್ಯರು ಎಂಬುದನ್ನು ಜನ ಮರೆತಿದ್ದರು. ಆಗೊಮ್ಮೆ ಈಗೊಮ್ಮೆ ಧರ್ಮಗುರುಗಳು ಜನಿಸಿ, ನಿಜಧರ್ಮ ಸ್ವರೂಪವನ್ನು ಬೋಧಿಸಿದ್ದರು; ಆದರೂ ಮೂಢ ಸಂಪ್ರದಾಯಗಳು ಬಿಗಿಯಾಗಿದ್ದವು. ಇದನ್ನು ಸುಧಾರಣೆ ಮಾಡುವ ಕಾ‌ರ್ಯ ಸುಲಭವಾಗಿರಲಿಲ್ಲ. ನಾರಾಯಣಗುರು ಜನರೊಡನೆ ಸೇರಿ ಅವರ ತಪ್ಪು ಭಾವನೆಗಳನ್ನು ತೋರಿಸಿಕೊಟ್ಟರು. ಅವರೊಡನೆ ಸೌಮ್ಯ ಭಾವದಿಂದ ವಾದಿಸಿ, ಮನಸ್ಸನ್ನು ಒಲಿಸಿಕೊಂಡು, ದೇವಿಯ ತೃಪ್ತಿಗಾಗಿ ನಡೆಯುತ್ತಿದ್ದ ಪ್ರಾಣಿವಧೆಯನ್ನು ನಿಲ್ಲಿಸಲು ಶ್ರಮಿಸಿದರು. ಅಂಥ ವಧೆಗಾಗಿ ಮೀಸಲಾಗಿದ್ದ ದೇವಾಲಯಗಳನ್ನು ಪ್ರಾಣಿವಧೆ ಮಾಡುತ್ತಿದ್ದವರಿಂದಲೇ ಕೆಡವಿಸಿ, ಹೊಸ ದೇವಾಲಯಗಳನ್ನೂ ಶಾಲಾ ಕಟ್ಟಡಗಳನ್ನೂ ಕಟ್ಟಿಸಿದರು. ಒಂದುಸಲ ಅವರು ಕುಳತುಕೊಂಡು ಪ್ರಯಾಣ ಮಾಡುತ್ತಿದ್ದ ವಾಹನವನ್ನು ಎಳೆಯುತ್ತಿದ್ದ ಪ್ರಾಣಿಗೆ ಕೊಟ್ಟ ಹಿಂಸೆಯನ್ನು ನೋಡಿ ಸಹಿಸಲಾರದೆ, ಕೆಳಗಿಳಿದು ಇಪ್ಪತ್ತು ಮೈಲಿ ದೂರ ನಡೆದೇ ಹೋದರು. ಹಾಲು ಕರೆಯುವವರು ಎಳೆಯ ಕರುವಿಗೆ ಸಾಕಷ್ಟು ಹಾಲನ್ನು ಬಿಡದೆ ಹಿಂಡಿದರೆಂಬ ಕಾರಣದಿಂದ, ಎಷ್ಟೋ ಸಲ ಅವರು ಹಾಲನ್ನು ಸ್ವೀಕರಿಸದೆ, ಉಪವಾಸ ಮಾಡಿದುದುಂಟು.

ಹೀಗೆ ದಯಾಭರಿತರಾದ ನಾರಾಯಣಗುರು ಹದಿನೈದು ವರ್ಷಗಳ ಕಾಲ ಮಲೆಯಾಳದಲ್ಲೆಲ್ಲ ಸಂಚರಿಸಿ, ದೀನದಲಿತ ಜನರ ಮೂಢನಂಬಿಕೆಗಳನ್ನು ಕಳೆಯಲು ಪ್ರಯತ್ನಿಸಿದರು. ಕೊಳೆ ಇಲ್ಲದಂತೆ ಮನೆಯನ್ನೂ, ಸುತ್ತಮುತ್ತಲಿನ ಸ್ಥಳವನ್ನೂ ಇಟ್ಟುಕೊಳ್ಳುವಂತೆ ಉಪದೇಶ ಮಾಡಿದರು. ಒಳ್ಳೆಯ ರೀತಿಯಲ್ಲಿ ಬದುಕುವುದನ್ನು ಹೇಳಿಕೊಟ್ಟರು.

ಗುರುವಿನ ದಯಾಭಾವ ಅನೇಕ ಮಂದಿಯನ್ನು ಆಕರ್ಷಿಸಿತು. ಅವರಲ್ಲಿ ಹಲವಾರು ಯುವಕರು ಸೇರಿ ’ನಾರಾಯಣ ಧರ್ಮ ಪರಿಪಾಲನ ಯೋಗಂ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೧೯೦೩ರಲ್ಲಿ ಗುರು ಕೊಚಿನ್ ರಾಜ್ಯದಲ್ಲೆಲ್ಲ ಸಂಚರಿಸಿದರು. ಸಾರ್ವಜನಿಕರು ಅದ್ಭುತ ಸ್ವಾಗತ ನೀಡಿ ಗೌರವಿಸಿದರು. ಜಗಳವಾಡಿಕೊಂಡು ನ್ಯಾಯಾಲಯಕ್ಕೆ ಹೋಗಬೇಕೆಂದಿದ್ದವರಿಗೆ ಗುರುಗಳು ಬುದ್ಧಿ ಹೇಳುತ್ತಿದ್ದರು, ನ್ಯಾಯಾಲಯಕ್ಕೆ ಹೋಗದಂತೆ ವಿವಾದವನ್ನು ಪರಿಹರಿಸುತ್ತಿದ್ದರು. ತಿರುವಾಂಕೂರು ನ್ಯಾಯಾಲಯದ ವರದಿಯೇ ಇದನ್ನು ಹೊಗಳಿತು.

’ಓಂ ಸಹೋದರ್ಯಂ ಸರ್ವತ್ರ’

೧೯೦೪ರ  ವೇಳೆಗೆ ಗುರುವಿನ ಜೀವನದಲ್ಲಿ ಮತ್ತೊಂದು ಘ‌ಟ್ಟ ಬಂದಿತು. ಅವರು ಸಂಚಾರ ನಿಲ್ಲಿಸಿ, ಒಂದು ಕಡೆ ಖಚಿತವಾಗಿ ನಿಂತು ತಮ್ಮ ಸಾಧನೆಯನ್ನು ಮುಂದುವರಿಸಲು ನಿರ್ಧಾರ ಮಾಡಿದರು. ವರ್ಕಲ ಎಂಬ ಬಳಿ ಶಿವಗಿರಿಯಲ್ಲಿ ನೆಲೆಸಿದರು. ಈ ಸ್ಥಳ ತಿರುವನಂತಪುರದ ಉತ್ತರಕ್ಕೆ ಇಪ್ಪತ್ತು ಮೈಲಿ ದೂರದಲ್ಲಿದೆ. ಸಮುದ್ರ ತೀರ ಅಲ್ಲಿಗೆ ಬಹಳ ಸಮೀಪ. ಅಲ್ಲೊಬ್ಬ ಬಡ ರೈತ ಅವರಿಗೆ ತೆಂಗಿನ ಗರಿಯ ಕುಟೀರವನ್ನು ಕಟ್ಟಸಿಕೊಟ್ಟನು. ಅಲ್ಲಿ ನೆಲೆ ನಿಂತ ಮೇಲೆ ಗುರುವಿನ ಸಾಧನ ಕ್ರಮ ಬದಲಾಯಿಸಿತು. ’ಅಂಬಾ’ ಅವರ ಆರಾಧ್ಯ ದೇವತೆಯಾದಳು.

ಕೆಲವು ದಿನಗಳಲ್ಲಿಯೇ ವರ್ಕಲ ಒಂದು ಯಾತ್ರಾಸ್ಥಳವಾಗಿ ಪರಿಣಮಿಸಿತು. ಗುರುವಿನ ಸಾನ್ನಿಧ್ಯದಿಂದ ಅದೊಂದು ’ಪುಣ್ಯಭೂಮಿ’ ಎನಿಸಿತು. ಗುರು ಅತ್ಯಂತ ಬಡ ಬಾಲಕರನ್ನು ಕಲೆಹಾಕಿ, ಅವರನ್ನು ರಕ್ಷಿಸಿ, ಬೆಳೆಸಲಾರಂಭಿಸಿದರು. ಒಬ್ಬೊಬ್ಬರಿಗೂ ವಿದ್ಯೆ, ಬುದ್ಧಿ, ವಿವೇಕ ಇವುಗಳನ್ನೂ ಜತೆಗೆ ಯಾವುದಾದರೊಂದು ಉಪಯುಕ್ತ ಕಲೆಯನ್ನೂ ಕಲಿಸಿದರು. ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿ, ಜಾತಿ ವ್ಯತ್ಯಾಸವಿಲ್ಲದೆ ಎಲ್ಲ ಬಾಲಕರಿಗೂ ಸಂಸ್ಕೃತ ವಿದ್ಯೆ ಕಲಿಸಿದರು. ದಿನದಲ್ಲಿ ಬಹುಭಾಗ ಯಾವುದಾದರೂ ಕೆಲಸವನ್ನು ಮಾಡುತ್ತಲೇ ಇರುತ್ತಿದ್ದರು. ಅನೇಕ ಶಿಷ್ಯರು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಆಗಾಗ ಅವರ ಸಂದರ್ಶನ ಮಾಡುತ್ತಿದ್ದರು. ಅವರಿಗೆ ಗುರುಬೋಧೆ ಹೀಗಿರುತ್ತಿತ್ತು:”ನಮ್ಮ ಕೈಗಳು, ಕಾಲುಗಳು, ಬೆರಳುಗಳಿಗೆ ಸದಾ ಕೆಲಸವಿರಬೇಕು. ಅವು ವಿಶ್ರಾಂತಿಯರಿಯದ ಕುದುರೆಗಳಂತೆ. ಅವುಗಳಿಗೆ ನಾವು ಸಾಕಷ್ಟು ಕೆಲಸವನ್ನು ಕೊಡದಿದ್ದರೆ, ರೋಗಕ್ಕೆ ತುತ್ತಾಗುತ್ತೇವೆ.” ಇದಕ್ಕೆ ಅವರೇ ಮೆಲ್ಪಂಕ್ತಿಯಾಗಿದ್ದರು. ಅವರು ತಮ್ಮ ಆಹಾರವನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು; ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರು.

ವರ್ಕಲದ ಆಶ್ರಮಕ್ಕೆ ದೂರದ ಸಿಂಹಳದಿಂದಲೂ, ಮಂಗಳೂರಿನಿಂದಲೂ ಶಿಷ್ಯರು ಬರುತ್ತಿದ್ದರು. ಗುರು ಯಾವ ಕೆಲಸದಲ್ಲಿಯೂ ಆಸಕ್ತಿಯಿಂದ ತೊಡಗದಿದ್ದಂತೆ, ವೈರಾಗ್ಯಭಾವದಿಂದ ಕಂಡುಬರುತ್ತಿದ್ದರು. ಆದರೂ ಅವರು ೧೯೦೪ರಿಂದ ೧೯೧೩ರವರೆಗೆ ಅನೇಕ ಕಡೆಗಳಲ್ಲಿ ದೇವಾಲಯಗಳನ್ನೂ ವಿದ್ಯಾಮಂದಿರಗಳನ್ನೂ (ಸಂಸ್ಕೃತ ಹಾಗೂ ಇಂಗ್ಲಿಷ್) ಸ್ಥಾಪಿಸಿದರು. ವರ್ಕಲದಲ್ಲಿಯೇ ಅಂಜೆಂಗೋ (ಆಂಜನೇಯ) ದೇವಾಲಯವನ್ನೂ, ತಿರುಚೂರು, ಕಣ್ಣಾನೂರು, ತೆಲ್ಲಿಚೆರಿ, ಕಲ್ಲಿಕೋಟೆ, ಮಂಗಳೂರು ಈ ಪಟ್ಟಣಗಳಲ್ಲಿ ಬೇರೆಬೇರೆ ದೇವಾಲಯಗಳನ್ನೂ, ಕಟ್ಟಸಿದರು. ೧೯೧೨ರಲ್ಲಿ ವರ್ಕಲದ ಶಿವಗಿರಿಯಲ್ಲಿ ಶಾರದಾದೇವಿ ದೇವಾಲಯವನ್ನು ಸ್ಥಾಪಿಸಿದರು. ಸಾತ್ವಿಕ ದೇವತೆಗಳ ಈ ದೇವಾಲಯಗಳ ಪ್ರಭಾವದಿಂದ ಜನ ಆವರೆಗೂ ಪೂಜೆ ಸಲ್ಲಿಸುತ್ತಿದ್ದ ಮಾರಿ ಮೊದಲಾದ ದೇವತೆಗಳಲ್ಲಿ ಮೂಢ ನಂಬಿಕೆ ಕಡಿಮೆಯಾಯಿತು. ೧೯೧೩ರಲ್ಲಿ ಕೊಚ್ಚಿಯ ಬಳಿ ಆಳ್ವಾಯಿಯಲ್ಲಿ ’ಅದ್ವೈತ ಆಶ್ರಮ’ವನ್ನು ಸ್ಥಾಪಿಸಿದುದು ನಾರಾಯಣಗುರುಗಳ ಜೀವನದ ಸಾಧನೆಯಲ್ಲಿ ಒಂದು ಮುಖ್ಯ ಅಂಶ. ಆ ಆಶ್ರಮ ಮಾನವ ಸೋದರಭಾವದ ತತ್ವವನ್ನು ಆಚರಣೆಗೆ ತರುವ ಕೇಂದ್ರವಾಯಿತು. ’ಓಂ ಸಹೋದರ್ಯಂ ಸರ್ವತ್ರ’ (ಈಶ್ವರನ ದೃಷ್ಟಿಯಲ್ಲಿ ಎಲ್ಲರೂ ಸಹೋದರರು) ಎಂಬುದು ಅಲ್ಲಿ ಧ್ಯೇಯ.

೧೯೧೬ರಲ್ಲಿ ನಾರಾಯಣಗುರುವಿಗೆ ಅರವತ್ತು ವರ್ಷ ತುಂಬಿತು. ಅದನ್ನು ಪಶ್ಚಿಮ ಸಮುದ್ರದ ತೀರಪ್ರದೇಶದಲ್ಲೆಲ್ಲ (ಮಂಗಳೂರಿನಿಂದ ಸಿಂಹಳದವರೆಗೆ) ಹರಡಿದ್ದ ಅವರ ಅಸಂಖ್ಯಾತ ಶಿಷ್ಯರು ವೈಭವದಿಂದ ಆಚರಿಸಿದರು. ನಾರಾಯಣಗುರು ೧೯೧೮ ಮತ್ತು ೧೯೨೩ರಲ್ಲಿ ಸಿಂಹಳ ದ್ವೀಪದಲ್ಲಿ ’ಓಂ ಸಹೋದರ್ಯಂ ಸರ್ವತ್ರ’ ತತ್ವವನ್ನು ಪ್ರಸಾರ ಮಾಡಿದರು. ೧೯೨೧ರಲ್ಲಿ ಆಳ್ವಾಯಿಯಲ್ಲಿ ಸರ್ವತ್ರ ಸಹೋದರ ಭಾವದ ಸಮ್ಮೇಳನವನ್ನು ನಡೆಸಿದರು. ೧೯೨೪ರಲ್ಲಿ ಅದೇ ಆಳ್ವಾಯಿಯಲ್ಲಿ ಸರ್ವಧರ್ಮ ಸಮ್ಮೇಳನವನ್ನು ನಡೆಸಿದರು. ಬೇರೆಬೇರೆ ಧರ್ಮಗಳ ತುಲನಾತ್ಮಕ, ಎಂದರೆ ಪರಸ್ಪರ ಹೋಲಿಸುವ, ಅಧ್ಯಯನಕ್ಕೆ ಅನುಕೂಲವಾಗುವಂತೆ ’ಬ್ರಹ್ಮ ವಿದ್ಯಾಲಯ’ ವೊಂದನ್ನು ಸ್ಥಪಿಸುವ ಸಲಹೆ ನೀಡಿದರು. ನೀಲಗಿರಿಯಲ್ಲಿ ’ನಾರಾಯಣ ಗುರುಕುಲ” ಸ್ಥಾಪನೆಯಾಯಿತು.

ಪುಣ್ಯಭೂಮಿಗೆ ಪುಣ್ಯಚೇತನರು

ವರ್ಕಲದ ಶಿವಗಿರಿಯಲ್ಲಿ ನೆಲೆಸಿದ ನಾರಾಯಣ ಗುರುವಿನ ಜೀವನದಲ್ಲಿ ಎರಡು ಪ್ರಮುಖ ಘಟನಿಗಳು ನಡೆದುವು. ಮೊದಲನೆಯದು ಆಶ್ರಮಕ್ಕೆ ಕವಿವರ್ಯ ರವೀಂದ್ರನಾಥ ಠಾಕೂರರ ಭೇಟಿ; ಎರಡನೆಯದು ಮಹಾತ್ಮಾ ಗಾಂಧೀಜಿಯವರ ಭೇಟಿ. ಆಧುನಿಕ ಭಾರತದ ಈ ಮಹಾಪುರುಷರು ಆಶ್ರಮಕ್ಕೆ ಭೇಟಿಯಿತ್ತುದು ಗುರುವಿನ ಮಹತ್ವವನ್ನು ತೋರಿಸುತ್ತದೆ.

ರವೀಂದ್ರನಾಥ ಠಾಕೂರರು ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದರು. ಅವರು ನಾರಾಯಣಗುರು ವಿಷಯವಾಗಿ ಕೇಳಿ, ಅವರನ್ನು ಕಂಡು ಸಂಭಾಷಿಸಲು ಇಚ್ಛಿಸಿದರು. ಆ ಮಹಾಕವಿಗೆ ಗೌರವ ತೋರಿಸಲು ಆಶ್ರಮದ ಸುತ್ತಮುತ್ತಲ ಜನ ತುಂಬು ಉತ್ಸಾಹ ತೋರಿಸಿದರು; ರಾಜಯೋಗ್ಯವಾದ ಸ್ವಾಗತ ನೀಡಲು ಆನೆಗಳನ್ನು ತಂದರು.  ಶಿವಗಿರಿಯ ತಪ್ಪಲಿನವರೆಗೂ ಅಂಬಾರಿಯ ಮೇಲೆ ಕವಿಯ ಮೆರವಣಿಗೆ ನಡೆಯಿತು. ಮಹಾಕವಿ ಮತ್ತು ಗುರುಗಳ ಸಮಾಗಮವನ್ನು ಕಂಡ ಜನಕ್ಕೆ ಹೇಳಲಾರದಷ್ಟು ಸಂತೋಷ.

ಇನ್ನೊಂದು ಮಹತ್ವದ ಘಟನೆ ೧೯೨೫ರಲ್ಲಿ ನಡೆಯಿತು. ಅದು ಗುರು ಮತ್ತು ಮಹಾತ್ಮಾ ಗಾಂಧೀಜಿಯವರ ಭೇಟಿ. ನಾರಾಯಣಗುರು ಅನೇಕ ವಿಷಯಗಳಲ್ಲಿ ಮಹಾತ್ಮರ ವಿಚಾರಧಾರೆಯನ್ನು ಮೆಚ್ಚಿಕೊಂಡು ಅದಕ್ಕೆ ಪ್ರೋತ್ಸಾಹವಿತ್ತಿದ್ದರು. ಖಾದೀ ಉತ್ಪನ್ನ, ಗ್ರಾಮೋದ್ಯೋಗಗಳಿಗೆ ನೆರವು, ಇವುಗಳಿಗಿಂತ ಹೆಚ್ಚಾಗಿ ದೀನ ದಲಿತ ವರ್ಗಗಳ ಉದ್ಧಾರ ಕಾರ್ಯ-ಪ್ರಧಾನವಾಗಿ ಅಸ್ಪೃಶ್ಯತಾ ನಿವಾರಣೆ – ಇವಕ್ಕೆಲ್ಲ ಅವರು ಬೆಂಬಲ ಕೊಟ್ಟಿದ್ದರು. ಸ್ವಾಮಿ ದಯಾನಂದ ರಾಜಾ ರಾಮ ಮೋಹನರಾಯ್, ಸ್ವಾಮಿ ವಿವೇಕಾನಂದ ಇವರುಗಳಿಂ‌ದ ಆರಂಭವಾದ ಸಮಾಜ ಸುಧಾರಣೆಯ ಕಾರ್ಯ, ಅಂದು ವಿಚಾರವಂತರ ಗಮನವನ್ನು ಸೆಳೆದಿದ್ದಿತು. ಈ ಕಾರ್ಯವನ್ನು ನಾರಾಯಣಗುರು ಕೇರಳದಲ್ಲಿ ಹೇಗೆ ಮಾಡಿದರು ಎಂಬುದನ್ನು ಹಿಂದೆ ನೋಡಿದ್ದೇವೆ ಆಡಂಬರವಿಲ್ಲದ ಅರ್ಚನೆ, ಸರ್ವರಿಗೂ ಭಗವಂತನ ಸಾನ್ನಿಧ್ಯದಲ್ಲಿ ಸಮಾನತೆ, ಇವು ಅವರ ಕಾರ್ಯ ವಿಧಾನಗಳಾಗಿದ್ದವು. ಮೂಢನಂಬಿಕೆಗಳ ನಿರ್ಮೂಲನ ಅವರ ಉದ್ದೇಶವಾಗಿತ್ತು. ’ನಾರಾಯಣ ಧರ್ಮ ಪರಿಪಾಲನ ಯೋಗಂ’ ಸಂಘದ ಸದಸ್ಯರು ಈ  ಕಾರ್ಯಗಳಲ್ಲಿ ನಿರತರಾಗಿದ್ದರು. ಎಲ್ಲ ಹಿಂದೂ ದೇವಾಲಯಗಳಿಗೂ ಪ್ರವೇಶದ ಹಕ್ಕನ್ನು, ಜಾತಿ  ವ್ಯತ್ಯಾಸವಿಲ್ಲದಂತೆ ಎಲ್ಲ ಜನರಿಗೂ ಲಭಿಸುವಂತೆ ಮಾಡುವ ಕನಸನ್ನು ಕಂಡರು. ಅವರು ತಮ್ಮ ಚಳವಳಿಯನ್ನು ಮಹತ್ಮಾ ಗಾಂಧೀಜಿಯವರ ಸತ್ಯಗ್ರಹ ರೀತಿಯಲ್ಲಿ ರೂಪಿಸಲು ಯತ್ನಿಸಿದರು.

ಕೇಳಪ್ಪನ್, ಮಾಧವನ್, ಕೃಷ್ಣಸ್ವಾಮಿ ಎನ್ನುವವರು ಈ ಸತ್ಯಾಗ್ರಹ ಚಳವಳಿಯ ನಾಯಕತ್ವವನ್ನು ವಹಿಸಿಕೊಂಡರು. ಅವರು ಗಾಂಧೀಜಿಯವರ ಸಂಪರ್ಕ ಹೊಂದಿ, ಅವರ ಆಶೀರ್ವಾದ ಪಡೆದು, ತಿರುವಾಂಕೂರಿನ ವೈಕಂ ಎಂಬ  ಊರಿನಲ್ಲಿ ಸತ್ಯಾಗ್ರಹವನ್ನು ಆರಂಭಿಸಿದರು. ಆ ಊರಿನಲ್ಲಿ ಶಿವದೇವಾಲಯಕ್ಕೆ ಹೋಗಲು ಒಂದೇ ದಾರಿಯಿದ್ದ ಬೀದಿಯ ಮೂಲಕ ಹರಿಜನರಿಗೆ ಹೋಗಲು ಅವಕಾಶವಿರಲಿಲ್ಲ. ಇದನ್ನು ಪಡೆದುಕೊಳ್ಳಲು ಸತ್ಯಾಗ್ರಹ ಆರಂಭವಾಯಿತು. ಗಾಂಧೀಜಿ ಅಹಮದಾಬಾದಿನಿಂದಲೇ ಸ್ವಯಂಸೇವಕರಿಗೆ ಸಲಹೆ ನೀಡುತ್ತಿದ್ದರು. ನಾರಾಯಣ ಗುರು ನೇರವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸದಿದ್ದರೂ ತಮ್ಮ ಶಿಷ್ಯರಿಗೆ ಪ್ರೋತ್ಸಾಹವಿತ್ತರು. ಸಂಪ್ರದಾಯದಲ್ಲಿ ನಂಬಿಕೆ ಇದ್ದವರು ಇದನ್ನೆಲ್ಲ ಸಹಿಸದೆ, ಸತ್ಯಾಗ್ರಹಿಗಳಿಗೆ ಕಿರುಕುಳವನ್ನಿತ್ತರು. ಸತ್ಯಾಗ್ರಹಿಗಳು ಇದನ್ನೆಲ್ಲ ತಾಳ್ಮೆಯಿಂದ ಸಹಸಿಕೊಂಡರು. ಕಡೆಗೆ ಗಾಂಧೀಜಿಯೇ ಸಮಸ್ಯೆಯನ್ನು ಬಗೆಹರಿಸಲು ೧೯೨೫ರ ಏಪ್ರಿಲ್ ತಿಂಗಳಲ್ಲಿ ವೈಕಂಗೆ ಬಂದರು. ಸತ್ಯಾಗ್ರಹ ಚಳವಳಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಎಲ್ಲ ಜನರಿಗೂ ಸಾರ್ವಜನಿಕ ರಸ್ತೆಯಲ್ಲಿ ಹೋಗುವ ಹಕ್ಕು ದೊರಕಿತು. ಮುಂದೆ ೧೯೩೭ರಲ್ಲಿ ತಿರುವಾಂಕೂರು ರಾಜ್ಯ ಸರಕಾರ ತಾನಾಗಿಯೇ ಭಾರತದಲ್ಲಿಯೇ ಪ್ರಪ್ರಥಮವಾಗಿ ಹರಿಜನರಿಗೆ ದೇವಾಲಯ ಪ್ರವೇಶದ ಹಕ್ಕನ್ನು ನೀಡುವ ಶಾಸನ ಮಾಡಿತು.

ಈ ಸಂದರ್ಭದಲ್ಲಿಯೇ ಗುರು ಮತ್ತು ಗಾಂಧೀಜಿ ಈರ್ವರ ಭೇಟಿ ನಡೆಯಿತು. ತಮ್ಮ ಕರ್ತವ್ಯವನ್ನು ನಾರಾಯಣಗುರು ಶ್ರದ್ಧೆಯಿಂದ ಮಾಡುತ್ತಿದ್ದರು. ಏನೇ ಆಗಲಿ, ಸೋಲಾಗಲಿ ಗೆಲುವಾಗಲಿ, ಶಾಂತಿಯಿಂದ ಇರುತ್ತಿದ್ದರು. ಗೀತೆ ತೋರಿಸಿದ ದಾರಿ ಇದೇ. ಗಾಂಧೀಜಿ ಗುರುವನ್ನು ಮೆಚ್ಚಿಕೊಂಡರು.

ಸತ್ಯಾಗ್ರಹ ಚಳವಳಿ ನಿಂತ ಮೇಲೆ, ಅದರ ಜ್ಞಾಪಕಾರ್ಥವಾಗಿ, ಅದು ನಡೆದ ಸ್ಥಳದಲ್ಲಿ ಬಡಮಕ್ಕಳ ಉಪಯೋಗಕ್ಕಾಗಿ ಒಂದು ಪಾಠಶಾಲೆಯನ್ನು ನಾರಾಯಣಗುರು ಕಟ್ಟಿಸಿದರು.

ಮಹಾಸಮಾಧಿ

೧೯೨೮ರ ಸೆಪ್ಟೆಂಬರ್ ತಿಂಗಳಲ್ಲಿ ಗುರುಗಳಿಗೆ ತೀವ್ರ ವ್ಯಾಧಿ ಕಾಣಿಸಿಕೊಂಡಿತು ಕೆಲವು ಕಾಲ ಹಾಸಿಗೆ ಹಿಡಿದರು. ಅವರ ಸಂದರ್ಶನಕ್ಕಾಗಿ ಬರುತ್ತಿದ್ದ ಅಸಂಖ್ಯಾತ ಶಿಷ್ಯರಿಗೆ ಅವರ ಒಂದೇ ಒಂದು ಮಾತು ಕೇಳಿಬರುತ್ತಿತ್ತು. ’ಅಂಬಾ, ಅಂಬಾ’ ಎಂಬುದೇ ಅದು. ಇದು ಶಿಷ್ಯರ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಲು ಅವಕಾಶವಾಯಿತು. ಇಷ್ಟೆಲ್ಲ ಆದರೂ, ಅವರ ಮುಖದ ಕಾಂತಿ ಕುಂದಿರಲಿಲ್ಲ. ಅವರ ವಾತ್ಸಲ್ಯ ಭಾವ ಕುಗ್ಗಿರಲಿಲ್ಲ. ಅದೇ ಸೆಪ್ಟೆಂಬರ್ ತಿಂಗಳಲ್ಲಿ ಗುರುವಿನ ೭೩ನೆಯ ಹುಟ್ಟುಹಬ್ಬ ನಡೆಯಿತು. ಕೇರಳ, ಮದರಾಸು, ಸಿಂಹಳ ಈ ಕಡೆಗಳಲ್ಲೆಲ್ಲ ಇದ್ದ ಅವರ ಶಿಷ್ಯರು ಅದನ್ನು ಬಹಳ ಪೂಜ್ಯಭಾವದಿಂದ ಆಚರಿಸಿದರು. ಅವರ ಪ್ರಧಾನ ಶಿಷ್ಯರಾಗಿದ್ದ ಡಾ|| ನಟರಾಜನ್ ( ಈಗ ನಟರಾಜಗುರು) ಆಗ ಜಿನೀವಾ ನಗರದಲ್ಲಿ ಇದ್ದರು. ಆ ದೂರದ ಮಹಾನಗರದಲ್ಲಿಯೂ ಗುರುವಿನ ಜನ್ಮ ದಿನಾಚರಣೆ ನಡೆಯಿತು. ಅವರ ಸಂದೇಶ ಯೂರೋಪಿಗೂ ಮುಟ್ಟಿತು.

ಸೆಪ್ಟೆಂಬರ್ ೨೦ರಂದು ಗುರು ಸ್ವತಃ ಪುಣ್ಯಭೂಮಿ ಎಂದು ಕರೆಯುತ್ತಿದ್ದ ವರ್ಕಲದಲ್ಲಿ ’ಮಹಾಸಮಾಧಿ’ ಹೊಂದಿದರು.

ಹೀಗೆ ನಾಣು – ’ಆಸನ್’ ಎನಿಸಿಕೊಂಡು, ’ಯೋಗಿ’ ಎನಿಸಿಕೊಂಡು, ’ಗುರು’ ಎನಿಸಿಕೊಂಡು ಜೀವನದ ಕೊನೆ ಕಂಡನು. ಆ ಗುರುವಿನ ಮೊರೆಹೊಕ್ಕು, ಶಾಂತಿ, ಶಕ್ತಿ, ತೃಪ್ತಿಗಳನ್ನು ಕಂಡರು ಸಹಸ್ರಾರು ಶಿಷ್ಯರು.

ಜನತೆಯ ಉದ್ಧಾರದ ಸಾಹಿತ್ಯ

ನಾರಾಯಣಗುರು ಸಂಸ್ಕೃತಲ್ಲಿ ಮಹಾಪಂಡಿತರಾಗಿದ್ದರು. ಅವರು ಮಲೆಯಾಳಂ ಭಾಷೆಯಲ್ಲಿಯೂ ಮತ್ತು ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಜನರಿಗೆ ಸರಿಯಾದ ದಾರಿ ತೋರಿಸುವುದೇ ಅವರ ಗುರಿ.

ಕೇರಳದ ಪ್ರಥಮ ರಾಷ್ಟ್ರಕವಿ ಎಂದು ಪ್ರಸಿದ್ಧಿ ಪಡೆದಿದ್ದ ಕುಮಾರನ್ ಆಸನ್ ನಾರಾಯಣಗುರುವಿನ ಕೃಪೆಗೆ ಪಾತ್ರರಾಗಿದ್ದರು. ಅವರ ಪ್ರೋತ್ಸಾಹ ಮತ್ತು ಪ್ರತ್ಯಕ್ಷ ನೆ‌ರವಿನಿಂದಲೇ ಕುಮಾರನ್ ಅಭಿವೃದ್ಧಿಗೆ ಬಂದು, ವರಕವಿಯೆಂದು ಹೆಸರು ಪಡೆದರು.

ಮಂಗಳದ ಹಾದಿ

ಜಾತಿಯನ್ನು ಕುರಿತು ನಾರಾಯಣಗುರು ’ಜಾತಿ ಮೀಮಾಂಸಾ’ ಎಂಬುದನ್ನು ಬರೆದಿದ್ದಾರೆ. ಇದರ ಮೊದಲನೆಯ ಶ್ಲೋಕ ಸಂಸ್ಕೃತದಲ್ಲಿಯೂ ಮತ್ತು ಉಳಿದ ನಾಲ್ಕು ಶ್ಲೋಕಗಳು ಮಲೆಯಾಳಂ ಭಾಷೆಯಲ್ಲಿಯೂ ಇವೆ. ಅವುಗಳಲ್ಲಿ ಮೊದಲನೆಯ ಶ್ಲೋಕದ ಸಾರಾಂಶ ಕನ್ನಡದಲ್ಲಿ ಹೀಗೆ: ಜಾತಿ ವ್ಯತ್ಯಾಸಕ್ಕೆ ಕಾರಣವೇ ಇಲ್ಲ. ಮನುಷ್ಯತ್ವವಿರುವವರೆಲ್ಲ ಮಾನವರಲ್ಲದೆ ಬೇರೆಯಲ್ಲ. ಬೇರೆಬೇರೆ ಭಾಷೆಗಳಿರುವಂತೆ, ಬೇರೆಬೇರೆ ಪದ್ಧತಿಗಳಿರುವಂತೆ, ಮಾನವರು ಬೇರೆಬೇರೆ ಎಂದು ಕಂಡರೂ, ಮನುಷ್ಯತ್ವ ಎಲ್ಲರಲ್ಲಿಯೂ ಸಮಾನವಾಗಿ ಇರುವುದರಿಂದ ಜಾತಿ ವ್ಯತ್ಯಾಸವೆನ್ನುವುದಕ್ಕೆ ಕಾರಣವೇ ಇಲ್ಲ. ಇದು ಗುರುವಿನ ವಿಚಾರ ಧಾಟಿ. ಇದರಿಂದ ಅವರು ಜಾತಿ ವ್ಯತ್ಯಾಸಗಳನ್ನು ಒಪ್ಪಲಿಲ್ಲ.

ಎರಡನೆಯ ಶ್ಲೋಕ ಹೀಗಿದೆ:

“ಒಂದೆ ಜಾತಿ, ಒಂದೆ ಧರ್ಮ
ಒಂದೆ ದೈವವು;
ಜಗದ ಜನತೆಗೆಲ್ಲಕು.
ಒಂದೆ ರೂಪು, ಒಂದೆ ರಕುತ
ಭೇದ ಕಾಣೆನಿದರಲಿ.”

ಇದು ಎಲ್ಲ ಮಾನವರೂ ಸಮಾನರೆಂಬುದನ್ನು ಹೇಳುತ್ತದೆ. ಹಿಂದೆ ಹೇಳಿರುವ ’ಓಂ ಸಹೋದರ್ಯಂ ಸರ್ವತ್ರ’ ಎಂಬುದಕ್ಕೆ ಇನ್ನೊಂದು ರೂಪವಿದು. ವ್ಯವಹಾರದಲ್ಲಿ ಹೇಗಿರಬೇಕೆಂಬುದನ್ನು ಗುರು ಒಮ್ಮೆ ಹೀಗೆ ಸ್ಪಷ್ಟಪಡಿಸಿದರು. “ಮಾನವರ ನಂಬಿಕೆ, ಉಡುಪು, ಭಾಷೆ ಇತ್ಯಾದಿಗಳಲ್ಲಿ ಯಾವುದೇ ಬಗೆಯ ವ್ಯತ್ಯಾಸವೇ ಇದ್ದರೂ ಅವರೆಲ್ಲ ಒಂದೇ ಸೃಷ್ಟಿಗೆ ಸೇರಿರುವುದರಿಂದ – ಒಟ್ಟಿಗೆ ಭೋಜನ ಮಾಡುವುದರಿಂದಲೂ ಮದುವೆಗಳಿಂದಲೂ ಯಾವ ಕೆಡಕೂ ಆಗದು.” ಇದನ್ನೇ ಅವರು ಆಚರಣೆಗೆ ತಂದರು. ಜಾತಿಭೇದ ಇರದ ಸಮಾಜ ಅವರ ಗುರಿಯಾಗಿದ್ದಿತು.

ಮತಭಾವನೆಯನ್ನು ಕುರಿತು ಅವರ ಬೋಧೆಯೂ ಗಮನಾರ್ಹವಾದುದು.

ಒಮ್ಮೆ ಆಳ್ವಾಯಿ ಆಶ್ರಮದ ವಾರ್ಷಿಕೋತ್ಸವಕ್ಕೆ ಸಿದ್ಧತೆ ನಡೆದಿತ್ತು. ಗುರುವಿನ ಯುವಕ ಶಿಷ್ಯರುಗಳು ನಾನಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿದ್ದರು. ಇಂಥ ಸಂದರ್ಭಗಳಲ್ಲಿ ಗುರು ಶಿಷ್ಯರನ್ನು ಒತ್ತಟ್ಟಗೆ ಕರೆದು, ತಮ್ಮ ಅಂತರಂಗದ ವಿಚಾರಗಳನ್ನು ಅವರ ಮುಂದೆ ಇಡುತ್ತಿದ್ದರು. ಅಂದು ಗುರುವಿನ ವಚನ ಹೀಗಿತ್ತು:”ಒಬ್ಬ ಮನುಷ್ಯನ ಮತ ಅವನ ವೈಯಕ್ತಿಕ ನಂಬಿಕೆಯ ವಿಚಾರ. ಇದು ಭಿನ್ನ ಭಿನ್ನ ವ್ಯಕ್ತಿಗಳಿಗೆ ಅವರವರ ವಿಕಾಸದ ಮಟ್ಟಕ್ಕೆ ತಕ್ಕಂತೆ ಇರುತ್ತದೆ. ಆದುದರಿಂದ ಒಬ್ಬೊಬ್ಬನದೂ ಒಂದೊಂದು ಮತವೆಂದು ಭಾವಿಸಬಹುದು. ಜಗತ್ತಿನ ಎಲ್ಲ ಮತಧರ್ಮಗಳೂ ಮತದ ತಿರುಳೆನಿಸಿದ ಆತ್ಮವನ್ನು ಒಪ್ಪುತ್ತವೆ; ಎಲ್ಲ ಮತಧರ್ಮಗಳೂ ಸತ್ಯ ಅಥವಾ ಧರ್ಮವನ್ನು ಕುರಿತು ಹೇಳುತ್ತವೆ. ಎಲ್ಲ ಗುರಿ ಒಂದೇ. ಹೀಗಿರುವಾಗ ಮಾನವರೇಕೆ ತಮ್ಮ ಮತಕ್ಕಾಗಿ ಹೋರಾಡಬೇಕು? ಇದು ಅವಿವೇಕ. ಮತಗಳು ಬೇರೆ ಎಂದು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಬಾರದು. ಏಕೆಂದರೆ, ಎಲ್ಲ ಮಾನವರ ಪ್ರಯತ್ನದ ಗುರಿಯೂ ಶಾಶ್ವತ ಸುಖ ತಾನೆ? ಮಾನವರ ಉಡುಪಿನಲ್ಲಿ ವ್ಯತ್ಯಾಸವಿರುವುದಿಲ್ಲವೆ? ಕೆಲವರು ಗಡ್ಡ ಬೆಳೆಸಲು ಇಚ್ಛಿಸುತ್ತಾರೆ; ಕೆಲವರು ನುಣ್ಣಗೆ ಬೋಳಿಸಿಕೊಳ್ಳಲು ಇಚ್ಛಿಸುತ್ತಾರೆ. ವಿಚಾರವಂತರು ಇವುಗಳ ವಿಷಯಕ್ಕಾಗಿ ಕಲಹವಾಡುವುದಿಲ್ಲ. ಮಾನವರ ಭಾಷೆಗಳು ಭಿನ್ನವಾಗಿರುವುದಿಲ್ಲವೆ? ಇಂಥ ವ್ಯತ್ಯಾಸಗಳಿದ್ದರೂ ಮನುಷ್ಯರೆಲ್ಲ ಒಂದೇ ಅಲ್ಲವೆ? ಹೀಗಿರುವಾಗ ಮಾನವರೇಕೆ ತಮ್ಮ ಮತಗಳು ಬೇರೆ ಎಂದು ಪರಸ್ಪರ ದ್ವೇಷಿಸಬೇಕು? ಪರಸ್ಪರ ಹೋರಾಡುವುದರಿಂದ ವಿನಾಶವಲ್ಲದೆ ಮತ್ತೇನೂ ಆಗಲಾರದು. ಮನುಷ್ಯರೆಲ್ಲ ಒಂದೇ ಜಾತಿ, ಅವರಿಗೆಲ್ಲ ಒಂದೇ ಧರ್ಮ, ಒಬ್ಬನೇ ದೇವರು.” ಯಾರೇ ಆಗಲಿ ತಮ್ಮ ಧರ್ಮವನ್ನು ಬಿಟ್ಟು ಬೇ‌ರೆ ಧರ್ಮಕ್ಕೆ ಸೇರುವುದು ಅವರಿಗೆ ಒಪ್ಪಿಗೆ ಇರಲಿಲ್ಲ.

ನಾರಾಯಣಗುರು ಭಾರತಕ್ಕೆ, ಲೋಕಕ್ಕೆ ನೀಡಿ ಶಾಶ್ವತ, ಸಾರ್ವತ್ರಿಕ ಬೋಧೆಯಿದು. ’ಸರ್ವೇ ಜನಾಃ ಸುಖಿನೋ ಭವಂತು’(ಎಲ್ಲ ಜನರಿಗೂ ಸುಖವಾಗಲಿ) ಎಂಬ ಉತ್ಕಟ ಬಯಕೆ ಇದರಲ್ಲಿ ಅಡಗಿದೆ. ಇದನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಿದುದು ಅವರ ಬದುಕಿನ ಹಿರಿಮೆ. ಇದನ ಅನಾದಿ ಕಾಲದಿಂದ ಬೆಳೆದು ಬಂದ ಗುರುಭಾವದ ರೀತಿ; ಗುರುತತ್ವ. ಇದರಿಂದಲೇ ಮಾನವಲೋಕ ಸ್ವರ್ಗವಾದೀತು. ಸಂಸ್ಕೃತ ಕವಿಯೊಬ್ಬ ಹಾಡಿದಂತೆ – ’ಶಿವಮಸ್ತು ಜಗತಾಂ’ – ಜಗತ್ತು ’ಶಿವಮಯ’ವಾದೀತು, ಎಂದರೆ ’ಆನಂದಭರಿತ’ವಾದೀತು. “ಮಂಗಳಮಯ”ವಾದೀತು.

ಇಂಥ ನಾರಾಯಣಗುರು ಮುಂಜಾನೆ, ತಂಪು ಸಮಯದಲ್ಲಿ ಸ್ಮರಣೆಗೆ ಯೋಗ್ಯರು; ಶಾಶ್ವತ ಪೂಜೆಗೆ ಅರ್ಹರು.

ಗುರು ತೋರಿಸಿದ ದಾರಿ

ನಾರಾಯಣಗುರುವಿಗೆ ಸಂಬಂಧಿಸಿದ ಕೆಲವು ಕಥೆಗಳು ಅವರ ಜೀವನತತ್ವವನ್ನು ಅರಿತುಕೊಳ್ಳಲು ನೆರವಾಗುತ್ತವೆ. ಇಂಥ ಒಂದು ಕಥೆ ಇಲ್ಲಿದೆ.

ಒಂದುದಿನ ಬೆಳಗ್ಗೆ ಗುರು ಶಿವಗಿರಿಯಲ್ಲಿ ಸೊಂಪಾಗಿ ಬೆಳೆದಿದ್ದ ಒಂದು ಮಾವಿನ ಮರದ ಬಳಿ ನಿಂತಿ‌ದ್ದರು.

ಒಬ್ಬ ಯುವಕ ಬ್ರಹ್ಮಚಾರಿ ಶಿಷ್ಯ ಮುಂಜಾನೆ ಎದ್ದು, ನಾನಾ ಬಗೆಯ ಹೂಗಳನ್ನು ಶೇಖರಿಸಿ, ದೇವಾಲಯದಿಂದ ದೇವಾಲಯಕ್ಕೆ ಹೋಗಿ, ಅವುಗಳನ್ನು ವಿಗ್ರಹದ ಮುಂದಿಟ್ಟು ನಮಸ್ಕರಿಸಿ ಬರುತ್ತಿದ್ದ. ಒಂದು ದೇವಾಲಯದಲ್ಲಿ ಗುರುವಿನ ಸೊಗಸಾದ ತೈಲಚಿತ್ರ ಇದ್ದಿತು. ಆ ಚಿತ್ರದ ಮುಂದೆಯೂ ಹೂಗಳನ್ನು ಇಟ್ಟು, ಕರ್ಪೂರ ಹಚ್ಚಿ, ಕೈಮುಗಿದು ನಿಂತು, “ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ” ಎಂಬ ಸಂಸ್ಕೃತ ಶ್ಲೋಕವನ್ನು ಹೇಳುತ್ತಿದ್ದ.

ಆ ವೇಳೆಗೆ ಹತ್ತಾರು ಜನ ಭಕ್ತರು ಗುರುವಿನ ಸುತ್ತ ಬಂದು ನಿಂತರು. ಆಗ ಗುರು ಹೀಗೆ ನುಡಿದರು: ” ಈ ವಿಚಿತ್ರ ನೋಡಿ! ನಾನು ಎದುರಿಗೇ ನಿಂತಿದ್ದೇನೆ. ನನಗಿನ್ನೂ ಬೆಳಗಿನ ತಿಂಡಿ ಆಗಿಲ್ಲ. ನನ್ನ ಭಾವಚಿತ್ರದ ಅದೃಷ್ಟವೇ ಅದೃಷ್ಟ. ಅದಕ್ಕೆ ಕರ್ಪೂರದ ಆರತಿ, ಹೂವಿನ ಸೇವೆ, ಸ್ತ್ರೋತ್ರಪಾಠ; ಎಷ್ಟೊಂದು ನಡೆದಿದೆ!”

ಸ್ವತಃ ಯೋಚನೆ ಮಾಡದೆ ಪದ್ಧತಿಯ ಪ್ರಕಾರ ನಡೆಯುವವರ ರೀತಿಯೇ ಹೀಗೆ ಎಂದು ಗುರು ಹಾಸ್ಯದ ಮೂಲಕ ಕಲಿಸಿಕೊಟ್ಟರು.

ಒಬ್ಬ ಶ್ರೀಮಂತ ಯುವಕ ಯೂರೋಪಿಗೆ ವ್ಯಾಸಂಗಕ್ಕೆ ಹೋದ. ಅಲ್ಲಿ ಒಬ್ಬ ಹುಡುಗಿಯನ್ನು ಮದುವೆಯಾಗಲು ಇಷ್ಟಪಟ್ಟ. ಹುಡುಗಿಗೂ ಅವನನ್ನು ಮದುವೆಯಾಗಲು ಇಷ್ಟ. ಅವರು ಭಾರತಕ್ಕೆ ಬಂದರು. ಹುಡುಗನ ತಂದೆಗೆ ಅವರು ಮದುವೆಯಾದರೆ ಜನ ಏನೆನ್ನುವರೊ ಎಂದು ಹೆದರಿಕೆ. ಆದರೆ ಗುರು ಆಶ್ರಮದಲ್ಲಿ ಮದುವೆ ,ಮಾಡಿಸಿದರು. ಎಲ್ಲ ಸಂತೋಷದಿಂದ ನಡೆಯಿತು.

ಹೀಗೆ ನಾರಾಯಣಗುರು ಸಮಾಜದಲ್ಲಿ ನೆಲೆನಿಂತ ಅರ್ಥಹೀನ ಸಂಪ್ರದಾಯಗಳನ್ನು ತೊಡೆದುಹಾಕಿ, ನವ ಸಮಾಜದ ರಚನೆಗೆ, ಮಾನವರೆಲ್ಲ ಸಹೋದರರು ಎಂಬ ತತ್ವದ ಆಚರಣೆಗೆ ನಾಂದಿ ಹಾಡಿದರು.

ಭಾರತದ ಭವಿಷ್ಯ ಸಮಾಜ ಮಾನವ ಸಮಾಜದಿಂದ ಭಿನ್ನವಾಗಿ ನಿಲ್ಲದೆ, ಮಾನವೀಯತೆ, ಮನುಷ್ಯತ್ವ ಇವುಗಳ ಆಧಾರದ ಮೇಲೆ ನಿಲ್ಲಲು ಗುರು ಮಾರ್ಗದರ್ಶನ ಮಾಡಿದರು.

ಗುರುವಿನ ಕೆಲವು ವಚನಗಳು

ದೇವಾಲಯ

ಯಾವ ಉದ್ದೇಶ ಸಾಧನೆಗಾಗಿ ದೇವಾಲಯಗಳು ಸೃಷ್ಟಿಯಾದವೋ ಅದು ವಾಸ್ತವವಾಗಿ ಸಾಧಿತವಾಗಿದೆಯೆ? ಈಶ್ವರಪೂಜೆ ಕೇವಲ ದೇವಾಲಯಗಳಿಗೇ ಸೀಮಿತವಾಗಿದೆ, ಅದು ಪ್ರತಿಯೊಂದು ಹೃದಯವನ್ನೂ ಪ್ರತಿಯೊಂದು ಮನೆಯನ್ನೂ ತಲುಪಬೇಕು.

ಪ್ರಾಣಿವಧೆ

ಜೀವರಾಶಿಯೆಲ್ಲ ಸಹೋದರರಂತೆ; ಇದು ಜೀವನ ತತ್ವವಾಗಬೇಕು. ಹೀಗಿರುವಾಗ, ಪ್ರಾಣಿವಧೆ ಮಾಡುವುದಾದರೂ ಹೇಗೆ? ದಯಾಹೀನರಾಗಿ ಪ್ರಾಣಿಗಳನ್ನು ತಿನ್ನುವುದಾದರೂ ಹೇಗೆ?

ಪೂಜೆ

ದೇವರನ್ನು ಎಲ್ಲಿ ಬೇಕಾದರೂ ಪೂಜಿಸಬಹುದು. ವಿಗ್ರಹಗಳು ಅಗತ್ಯವೇನಿಲ್ಲ. ಆದರ್ಶವೇ ಪ್ರಧಾನ. ಆದರ್ಶಗಳನ್ನು ಪೂಜಿಸಿ. ನಿಮ್ಮ ದೇವಾಲಯಗಳಲ್ಲಿ ಸತ್ಯ, ಪ್ರೇಮ, ಕರ್ತವ್ಯನಿಷ್ಠೆ ಈ ಧ್ಯೇಯಗಳನ್ನು ಘೋಷಿಸಿ ಇವನ್ನೇ ನಿಮ್ಮ ಜೀವನದಲ್ಲಿ ಆಚರಣೆಗೆ ತನ್ನಿ.

ಮದ್ಯಪಾನದ ಕೆಡುಕು

ಮದ್ಯಪಾನವೆಂದರೆ ವಿಷಪಾನ ಮಾಡಿದಂತೆ. ಮದ್ಯವನ್ನೆ ಉತ್ಪನ್ನ ಮಾಡಬಾರದು. ಇತರರಿಗೆ ಪಾನಮಾಡಲು ಕೊಡಬಾರದು; ತಾವೂ ಸೇವಿಸಬಾರದು.

ಶಿಕ್ಷಣ

ಯಾರೇ ಆಗಲಿ, ಈ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣ ಒಂದು ಸಾಧನಾದುದರಿಂದ ಅದನ್ನು ಸಾರ್ವತ್ರಿಕವಾಗಿ ಹರಡಬೇಕು…. ಪುರುಷರಂತೆಯೇ ಎಲ್ಲ ಸ್ತ್ರೀಯರೂ ಶಿಕ್ಷಣ ಪಡೆಯಬೇಕು:

ಸಾಮಾಜಿಕ ಅಭ್ಯುದಯ

ಉದ್ಯೋಗದಲ್ಲಿ ತೊಡಗದೆ ಒಂದು ಜನಾಂಗದ ಸಂಪತ್ತನ್ನು ವೃದ್ಧಿಪಡಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಔದ್ಯೋಗಿಕ ಶಾಲೆಗಳಲ್ಲಿ ಶಿಕ್ಷಣ ಪಡೆಯಬೇಕು.