ಎಪ್ಪತ್ತೆಂಟು ವಯಸ್ಸಿನ ಈ ಹಿರಿಯ ತಬಲಾ ಕಲಾವಿದರು ಬೆಳಗಾಂ ಜಿಲ್ಲೆಯ ಚಿಕ್ಕೋಡಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ತಬಲಾ ವಾದನ ಕಲೆಯಿಂದ ಆಕರ್ಷಿತರಾಗಿ ಬೆಳಗಾವಿಯಲ್ಲಿ ಪ್ರಖ್ಯಾತ ತಬಲಾವಾದನ ಪಟು ಉಸ್ತಾದ್‌ ಮೆಹಬೂಬ್‌ ಖಾನರಲ್ಲಿ ಹನ್ನೆರಡು ವರ್ಷಗಳ ಕಾಲ ಶಿಷ್ಯವೃತ್ತಿ ಮಾಡಿದರು. ನಂತರ ಪ್ರಖ್ಯಾತ ಹಿಂದೂಸ್ಥಾನಿ ಗಾಯಕ ವಾದಕರಿಗೆಲ್ಲಾ “ತಬಲ ಸಾಥಿ” ನೀಡಿದ್ದಾರೆ. ಇವರ ತಬಲಾವಾದನ ವೈಖರಿಯನ್ನು ದಿ|| ಉಸ್ತಾದ್‌ ಅಹಮದ್‌ ಜಾನ್‌ ಥಿರಕ್‌ವಾ ಮೆಚ್ಚಿದ್ದರು. ಶ್ರೀಯುತರು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.

 

 

ಲಲಿತಾ ಉಭಯಕರ

ಶ್ರೀಮತಿ ಲಲಿತಾ ಉಭಯಕರರು ಕರ್ನಾಟಕದ ಹಿಂದೂಸ್ಥಾನಿ ಸಂಗೀತದ ಹಿರಿಯ ತಲೆಮಾರಿನ ಗಾಯಕಿಯರಲ್ಲೊಬ್ಬರು. ಅವರು ಜನಿಸಿದ್ದು ೧೫-೧-೧೯೨೮ ರಂದು, ಮಂಗಳೂರಿನಲ್ಲಿ. ಈಗ ನೆಲೆಸಿದ್ದು ಬೆಂಗಳೂರಿನಲ್ಲಿ.

ಶ್ರೀಮತಿ ಲಲಿತಾ ಅವರು ಬಾಲ್ಯದಲ್ಲಿ ತಾಯಿಯಿಂದ ಸಂಗೀತ ವಿದ್ಯೆಯ ಶ್ರೀಕಾರ, ನಂತರ ಪಂ. ಚಿದಾನಂದ ನಗರಕರ ಹಾಗೂ ಆಗ್ರಾಘರಾಣಿಯ ಖ್ಯಾತಗಾಯಕ ಪಂ. ರಾಮರಾವ್‌ ನಾಯಕರಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡರು. ಗುರುಗಳ ಮಾರ್ಗದರ್ಶನ, ಸತತ ಪರಿಶ್ರಮದ ಫಲವಾಗಿ ಅವರು ಆಗ್ರಾ ಘರಾಣಿಯ ಖ್ಯಾತ ಗಾಯಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

೧೯೫೦ರಲ್ಲಿ ಬೆಂಗಳೂರಿನಲ್ಲಿ ಮೊದಲ ಸಂಗೀತ ಕಛೇರಿ ವಿಶ್ವವಿಖ್ಯಾತ ಪಿಟೀಲುವಾದಕ ಯಹೂದಿ ಮೆನುಹೀನ್‌ರ ಸಮ್ಮುಖದಲ್ಲಿ ಸಂಗೀತ ಕಛೇರಿ ನೀಡಿ ‘ಸೈ’ ಎನಿಸಿಕೊಂಡರು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್ ಮತ್ತು ಮುಂಬೈಯಲ್ಲಿ ನಡೆದ ರಾಜ್ಯಮಟ್ಟದ ಸಂಗೀತೋತ್ಸವದಲ್ಲಿ ಕಛೇರಿ ನೀಡಿದ ಹಿರಿಮೆ ಅವರದು. ೧೯೬೦ ರಿಂದ ಅವರ ಗಾಯನ ಆಕಾಶವಾಣಿಯಿಂದ ಪ್ರಸಾರಗೊಳ್ಳುತ್ತಿದೆ. ರಾಜ್ಯದೆಲ್ಲೆಡೆ ಮತ್ತು ಹೈದ್ರಾಬಾದ್‌, ಕೋಲ್ಕತ್ತಾ, ಪಾಶ್ಚಾತ್ಯ ದೇಶಗಳಿಗೆ ಭಾರತದ ಸಾಂಸ್ಕೃತಿಕ ಮಂಡಳಿಯ ಸದಸ್ಯರಾಗಿ ಸಂಗೀತ ಕಛೇರಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ‘ಸ್ಮೃತಿ ನಂದನ ಕಲ್ಚರಲ್‌ ಸೆಂಟರ್ (ಎಸ್‌.ಎನ್‌.ಸಿ.ಸಿ.) ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಹುಟ್ಟುಹಾಕಿ ಸಂಗೀತ ಕಲೆಯ ವಿಕಾಸ ಹಾಗೂ ಅಭಿವೃದ್ಧಿ ಕಾರ್ಯ ಮಾಡುತ್ತ ‘ನಾದ ದಾಸೋಹ’ ಕಾಯಕದಲ್ಲಿ ನಿರತರಾಗಿದ್ದಾರೆ. ಶ್ರೀಮತಿ ಲಲಿತಾ ಉಭಯಕರ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ನೀಡಿ (೧೯೮೬-೮೭) ಪುರಸ್ಕರಿಸಿದೆ.