ಗದುಗಿನಲ್ಲಿ ಜನಿಸಿ, ಬೆಂಗಳೂರಿನಲ್ಲಿ ಸಂಗೀತ ಶಿಕ್ಷಣ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿ ಉತ್ತರ ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪ್ರಚಾರ ಪಡಿಸಿ ಅನೇಕ ಶಿಷ್ಯರನ್ನು ತಯಾರಿಸಿರುವ ಶ್ರೀ ನಾರಾಯಣ ಜಿ. ಮೋಡಕ್‌ ಅವರು ಕರ್ನಾಟಕ ಕಂಡ ಅಪರೂಪದ ಸಂಗೀತಗಾರರು. ೧೯೨೬ರಲ್ಲಿ ಗದುಗಿನಲ್ಲಿ ಜನಿಸಿದ ಶ್ರೀ ನಾರಾಯಣ ಜಿ. ಮೋಡಕ್‌ ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದದ್ದು ದಿವಂಗತ ಗೋವಿಂದ ವಿಠಲಭಾವೆಯವರಲ್ಲಿ, ಬೆಂಗಳೂರಿನಲ್ಲೊಮ್ಮೆ ನಡೆದ ಪಂಡಿತ ವಿನಾಯಕರಾವ್‌ ಪಟವರ್ಧನ್ ಅವರ ಸಂಗೀತ ಕಾರ್ಯಕ್ರಮದಿಂದ ಪ್ರೇರಿತವಾಗಿ ೧೯೪೨ ರಿಂದ ಪುಣೆಯಲ್ಲಿ ಪಟವರ್ಧನ್ ರವರಿಂದ ಸಂಗೀತ ಅಭ್ಯಾಸ ಮಾಡಿದರು.

ಗುರು ವಿನಾಯಕರಾವ್‌ ಪಟವರ್ಧನ್‌ ಅವರ ಆಜ್ಞೆಯಂತೆ ಬೆಂಗಳೂರಿಗೆ ಬಂದು, ಹಿಂದೂಸ್ಥಾನಿ ಸಂಗೀತ ಪ್ರಚಾರ ಕಾರ್ಯ ಪ್ರಾರಂಭಿಸಿದ ಮೋಡಕ್‌ ನಂತರ ಹುಬ್ಬಳ್ಳಿಯಲ್ಲಿ ಸಂಗೀತ ಕಲಾ ವಿಹಾರ ಸಂಘ ಪ್ರಾರಂಭಿಸಿ ಉತ್ತರ ಕರ್ನಾಟಕದಲ್ಲಿ ತಮ್ಮ ಸಂಗೀತ ಪ್ರಚಾರ ಸೇವೆಯನ್ನು ಮುಂದುವರಿಸಿದರು. ಸಂಗೀತ ಅಲಂಕಾರ ಪದವಿ, ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್‌ ಪದವಿಗಳನ್ನು ಪಡೆದು, ಧಾರಾವಾಡ ಆಕಾಶವಾಣಿಯಲ್ಲಿ ‘ಬಿ-ಹೈ’ ಶ್ರೇಣಿ ಗಾಯಕರಾಗಿ ಪ್ರಸಿದ್ಧರಾದರು.

ಈಗಲೂ ತಮ್ಮ ಸಂಗೀತ ಪ್ರಚಾರ ಸೇವೆ ಮುಂದುವರಿಸಿಕೊಂಡು ಬರುತ್ತಿರುವ ಮೋಡಕ್‌ರಲ್ಲಿ ಶಿಷ್ಯ ವೃತ್ತಿ ಮಾಡಿ ಪ್ರಸಿದ್ಧರಾದ ಅನೇಕ ಸಂಗೀತ ಕಲಾವಿದರು ದೇಶವಿದೇಶಗಳಲ್ಲಿ ತಮ್ಮ ಗುರುಪರಂಪರೆಯನ್ನು ಮುಂದುವರೆಸುವ ಸ್ತುತ್ಯ ಕಾರ್ಯ ಮಾಡುತ್ತಿದ್ದಾರೆ.

ಶ್ರೀ ನಾರಾಯಣ ಜಿ. ಮೋಡಕ್‌ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.