ಬೆಂಗಳೂರಿನ ಶ್ರೀ ನಾರಾಯಣ ಪ್ರಸಾದ ಅವರು ಹಿಂದೂಸ್ಥಾನಿ ಸಂಗೀತವನ್ನು ಬೆಳೆಸುತ್ತಿರುವ ಕರ್ನಾಟಕದ ಹಿಂದುಸ್ಥಾನಿ ಸಂಗೀತಗಾರರಲ್ಲೊಬ್ಬರು. ೧೯೧೭ರಲ್ಲಿ ಜನಿಸಿದ ಶ್ರೀ ನಾರಾಯಣ ಪ್ರಸಾದ್‌, ತಮ್ಮ ಎಂಟನೇ ವಯಸ್ಸಿನಲ್ಲಿಯೇ ಭಜನ ಮಂದಿರಗಳಲ್ಲಿ ಹಾಡಲು ಆರಂಭಿಸಿದರು. ಹಿಂದೂಸ್ಥಾನಿ ಸಂಗೀತದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡ ಶ್ರೀ ನಾರಾಯಣ ಪ್ರಸಾದ್‌ ಸಂಗೀತ ಶಿಕ್ಷಣ ಪಡೆದಿದ್ದು ಪಂಡಿತ ಶಂಕರರಾವ್ ಹೊಂಬಾಳ್ಕರ್, ಪಂಡಿತ ಶಂಕರ ಸದಾಶಿವ ಜೋಶಿ, ಪಂಡಿತ ಆರ್. ಜಿ. ಹೊನ್ನಾವರ ಅವರುಗಳಲ್ಲಿ ಪಂಡಿತ್‌ ರಾಮರಾವ್‌ ವಿ. ನಾಯಕ್‌ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಶ್ರೀಯುತರು. ಮುಂಬಯಿಯ ಪಂಡಿತ ದಿವಾನಜಿ ಅವರಿಂದ ಹಲವಾರು ವಿರಳಮಯ ರಾಗಗಳನ್ನು ಕಲಿತರು.

‘ಹಿಂದಿ ಭಾಷಾ ರತ್ನ’, ‘ಸಂಗೀತ ವಿಶಾರದ’ ಸೇರಿದಂತೆ ಹಲವಾರು ಪ್ರತಿಷ್ಠಿತ ಪದವಿಗಳನ್ನು ಪಡೆದಿರುವ ಶ್ರೀ ಪ್ರಸಾದ್‌ ಅವರು, ಬೆಂಗಳೂರು ಸಂಗೀತ ಸಭಾದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ನಾದಶ್ರೀ’ ಬಿರುದಾಂಕಿತ ಶ್ರೀ ನಾರಾಯಣ ಪ್ರಸಾದ್‌ ಹಲವಾರು ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೇ, ಹಲವಾರು ಹೊಸ ಸಂಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದ್ದಾರೆ.

ಶ್ರೀ ನಾರಾಯಣ ಪ್ರಸಾದ್‌ ಅವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.