ನಾರಾಯಣ ಮಲ್ಹಾರ್ ಜೋಷಿ

“ನಾನು ಸದಾ ದೇಶದ ವಿಷಯವನ್ನೇ ಮೊದಲು ಯೋಚಿಸುತ್ತೇನೆ. ನನ್ನಲ್ಲಿರುವುದರಲ್ಲಿ ಶ್ರೇಷ್ಠವಾದುದನ್ನೆಲ್ಲ ದೇಶದ ಸೇವೆಗೆ ಅರ್ಪಿಸುತ್ತೇನೆ.

“ದೇಶಕ್ಕಾಗಿ ದುಡಿಯುವುದರಲ್ಲಿ ನನ್ನ ಸ್ವಂತ ಲಾಭದ ಯೋಚನೆ ಮಾಡುವುದಿಲ್ಲ.

“ಜಾತಿಮತಗಳ ವ್ಯತ್ಯಾಸವನ್ನು ಗಮನಿಸದೆ, ಎಲ್ಲ ಭಾರತೀಯರೂ ನನ್ನ ಸಹೋದರರು ಎಂದು ಭಾವಿಸಿ ಅವರ ಏಳಿಗೆಗಾಗಿ ಶ್ರಮಿಸುತ್ತೇನೆ.

“ ಈ ಸಂಸ್ಥೆ ನನಗಾಗಿ ಅಥವಾ ನನ್ನ ಸಂಸಾರಕ್ಕಾಗಿ ಏನನ್ನು ಕೊಟ್ಟರೆ ಅಷ್ಟನ್ನು ತೆಗೆದುಕೊಂಡು ತೃಪ್ತನಾಗುತ್ತೇನೆ. ನನಗಾಗಿ ಹಣ ಸಂಪಾದಿಸಲು ನನ್ನ ಸಾಮರ್ಥ್ಯವನ್ನು ಬಳಸುವುದಿಲ್ಲ.

“ನಾನು ಪರಿಶುದ್ಧವಾದ ಜೀವನವನ್ನು ನಡೆಸುತ್ತೇನೆ. “ವೈಯುಕ್ತಿಕವಾಗಿ ನಾನು ಯಾರೊಂದಿಗೂ ಜಗಳ ಆಡುವುದಿಲ್ಲ.”

ಮೂವತ್ತು ವರ್ಷದ ತರುಣ, ಆಗಲೇ ಮದುವೆಯಾಗಿ ಒಬ್ಬ ಮಗಳ ತಂದೆಯಾಗಿದ್ದವನು, ಈ ಪ್ರಮಾಣಪತ್ರಕ್ಕೆ ಸಹಿ ಹಾಕಿದ. ಮೂವತ್ತು ವರ್ಷಗಳ ಕಾಲ ಈ ಷರತ್ತುಗಳನ್ನು ಅಕ್ಷರಶಃ ಪಾಲಿಸಿಕೊಂಡು ಬಂದ. ತನಗಾಗಿ ಒಂದು ಪೈಸೆ ಸಂಪಾದಿಸಲಿಲ್ಲ. ದೇಶದ ಜನರಿಗಾಗಿ, ಮುಖ್ಯವಾಗಿ ಕಾರ್ಮಿಕರಿಗಾಗಿ – ಕಾರ್ಖಾನೆಗಳಲ್ಲಿ, ರೈಲ್ವೆ ಇಲಾಖೆಯಲ್ಲಿ ಶ್ರಮಿಸುವವರಿಗಾಗಿ – ದುಡಿದ. ಅರವತ್ತನೆಯ ವರ್ಷದಲ್ಲಿ ನಿವೃತ್ತನಾದಾಗ ಸಂಸ್ಥೆ ತಿಂಗಳಿಗೆ ನೂರು ರೂಪಾಯಿ ನಿವ್ರತ್ತಿ ವೇತನ ಕೊಟ್ಟಿತು. ತಮ್ಮ ಬಾಳಿನುದ್ದಕ್ಕೂ ಕ್ಷಾಮದಿಂದ ಬಳಲಿದವರಿಗಾಗಿ, ಕಾರ್ಮಿಕರಿಗಾಗಿ ಲಕ್ಷಾಂತರ ರೂಪಾಯಿ ಗಳನ್ನು ಸಂಗ್ರಹಿಸಿಕೊಟ್ಟ ವ್ಯಕ್ತಿ ಅವರು. ಕಷ್ಟದಲ್ಲಿದ್ದ ಕಾಯಿಲೆ ಮಗಳಿಗೆ ಸಹಾಯ ಮಾಡಬೇಕೆಂದರೆ ಕೈಯಲ್ಲಿ ಹಣವಿಲ್ಲ. ಹತ್ತು ಹನ್ನೆರಡು ವರ್ಷಗಳ ನಂತರ, ತಮಗೇ ೭೩ ವರ್ಷ ವಯಸ್ಸಾಗಿದ್ದಾಗ ಸ್ನೇಹಿತರು ಅವರ ಕೆಲಸವನ್ನು ಮೆಚ್ಚಿದವರು ಕೊಟ್ಟ ಹಣದಿಂದ ಮಗಳಿಗೆ ಇಷ್ಟು ಸಹಾಯ ಮಾಡಿದರು.

ಇಂತಹ ದೇಶಸೇವಕರು ನಾರಾಯಣ ಮಲ್ಹಾರ್ ಜೋಷಿ. ಮೂವತ್ತನೆಯ ವರ್ಷದಲ್ಲಿ ಅವರು ಸೇರಿದ ಸಂಸ್ಥೆ ‘ಸರ್ವೆಂಟ್ಸ್ ಆಫ್ ಸೊಸೈಟಿ.’

ದೇಶದ ಸಂಪತ್ತು

ಒಂದು ದೇಶದ ಸಂಪತ್ತು ಯಾವುದು?

ಹಣ ಸಂಪತ್ತಲ್ಲ, ಅದನ್ನು ತಿನ್ನುವುದಕ್ಕಾಗುವುದಿಲ್ಲ, ಕುಡಿಯುವುದಕ್ಕಾಗುವುದಿಲ್ಲ, ಅದರಿಂದ ಮನೆ ಕಟ್ಟುವಂತಿಲ್ಲ.

ದೇಶದ ಭೂಮಿ, ಖನಿಜ, ಕಾಡುಗಳು, ನೀರು ಎಲ್ಲ ದೇಶದ ಸಂಪತ್ತು. ಆದರೆ ಬಹು ಮುಖ್ಯವಾದ ಸಂಪತ್ತು ಜನ. ಜನರಿಗೆ ತಕ್ಕಷ್ಟು ಆಹಾರ ಸಿಕ್ಕುತ್ತದೆಯೆ, ಅವರು ನೆಮ್ಮದಿಯಿಂದ ಬದುಕಲು ಬೇಕಾದುದೆಲ್ಲ ದೊರೆಯುತ್ತದೆಯೆ, ವಿದ್ಯೆ ಮತ್ತು ವೈದ್ಯರ ನೆರವು ಕಷ್ಟವಿಲ್ಲದೆ ಸಿಕ್ಕುತ್ತದೆಯೆ ಇವೆಲ್ಲ ದೇಶದ ಜನರನ್ನೇ ಹೊಂದಿಕೊಂಡಿದೆ.

ದೇಶದ ಒಳಿತಿಗಾಗಿ ದುಡಿಯುವದರಲ್ಲಿ ಹಲವು ಗುಂಪುಗಳುಂಟು – ವರ್ತಕರು, ವೈದ್ಯರು, ಪೊಲೀಸರು, ವಿಜ್ಞಾನಿಗಳು, ಯೋಧರು ಇತ್ಯಾದಿ ಇವುಗಳಲ್ಲಿ ಎರಡು ಮುಖ್ಯವಾದ ಗುಂಪುಗಳು ರೈತರದು ಮತ್ತು ಕಾರ್ಮಿಕರದು. ದೇಶದ ಜನರಿಗೆ ಅನ್ನ ಒದಗಿಸುವವರು ರೈತರು, ಗಣಿಗಳಲ್ಲಿ, ಕಾರ್ಖಾನೆಗಳಲ್ಲಿ, ರೈಲ್ವೆ ಇಲಾಖೆಯಲ್ಲಿ, ಬಂದರುಗಳಲ್ಲಿ ಶ್ರಮಿಸುವ ಕಾರ್ಮಿಕರು ದೇಶದ ಸಂಪತ್ತನ್ನು ಹೆಚ್ಚಿಸುತ್ತಾರೆ. ಜೀವನವನ್ನು ಸುಗಮಗೊಳಿಸುತ್ತಾರೆ. ಆದರೆ ಈ ಎರಡು ಗುಂಪುಗಳಿಗೆ ನ್ಯಾಯ ದೊರಕುವುದು ವಿರಳ. ರಟ್ಟೆ ಮುರಿದು ದುಡಿಯುವವರು ಇವರು. ಆದರೆ ಇತರರು ಇವರ ಶ್ರಮದ ಲಾಭ ಪಡೆಯುತ್ತಾರೆ. ಹೀಗಾಗ ದಿರಬೇಕಾದರೆ ಇವರಲ್ಲಿ ಒಗ್ಗಟ್ಟಿರಬೇಕು. ಇವರು ತಮ್ಮ ಹಕ್ಕುಗಳಿಗಾಗಿ ವ್ಯವಸ್ಥಿತವಾಗಿ ಹೋರಾಡಬೇಕು.

ಸ್ವಾತಂತ್ರ್ಯ ಇರುವ ಪ್ರಜಾಪ್ರಭುತ್ವ ದೇಶಗಳಲ್ಲಿ ಕಾರ್ಮಿಕರಿಗೆ ನ್ಯಾಯ ದಕ್ಕಿಸಿಕೊಳ್ಳುವುದು ಕಷ್ಟವಾದರೆ ಸ್ವಾತಂತ್ರ್ಯ ಇಲ್ಲದ ದೇಶದಲ್ಲಿ ಎಷ್ಟು ಕಷ್ಟ! ೧೯೪೭ರಲ್ಲಿ ನಮಗೆ ಸ್ವಾತಂತ್ರ್ಯ ಬರುವ ಮುನ್ನ ಬ್ರಿಟಿಷರು ಈ ದೇಶವನ್ನು ಆಳುತ್ತಿದ್ದರು – ತಮ್ಮ ಲಾಭಕ್ಕಾಗಿ, ಇಲ್ಲಿನ ಕಾರ್ಮಿಕರಲ್ಲಿ ನೂರಕ್ಕೆ ತೊಂಬತ್ತೆಂಟು ಮಂದಿಗೆ ಓದು ಬರಹ ಬಾರದು. ಪೊಲೀಸರೆಂದರೆ ನಡುಕ. ಅವರನ್ನೆಲ್ಲ ಒಟ್ಟುಗೂಡಿಸಿ, ‘ಹೀಗೆ ಮಾಡಿ’ ಎಂದು ಹೇಳುವವರು, ಅವರ ಪರವಾಗಿ ಧೈರ್ಯವಾಗಿ ಮಾತನಾಡುವವರು ಯಾರು?

ಆ ಅನ್ಯಾಯದ ದಿನಗಳಲ್ಲಿಯೂ ಕೆಲವರು ಕಾರ್ಮಿಕರಿಗಾಗಿ ಹೋರಾಡಲು ಧೈರ್ಯ ಮಾಡಿದರು. ಅವರಲ್ಲಿ ಜೋಷಿಯವರು ಒಬ್ಬರು.

ಮನೆತನ

ಜೋಷಿಯವರು ೧೮೭೯ರ ಜೂನ್ ಐದರಂದು ಮಹಾರಾಷ್ಟ್ರದ ಗಡೆಗಾತನ್ ಎಂಬ ಹಳ್ಳಿಯಲ್ಲಿ ಹುಟ್ಟಿದರು. ತಂದೆ ಮಲ್ಹಾರ್ – ಅವರನ್ನು ಎಲ್ಲರೂ ನಾಥು ಜೋಷಿ ಎಂದೇ ಕರೆಯುತ್ತಿದ್ದರು. – ದೊಡ್ಡ ವಿದ್ವಾಂಸರು, ಪುರೋಹಿತರು. ಸಂಸ್ಕೃತ ಶಾಲೆ ನಡೆಸುತ್ತಿದ್ದರು. ಬಡವರು, ಆದರೆ, ಅದಕ್ಕಾಗಿ ದುಃಖಪಟ್ಟವರಲ್ಲ, ಅವರದು ಸರಳ ಜೀವನ. ಇಡೀ ಹಳ್ಳಿಗೆ ಅವರು, ಅವರ ಸಂಸಾರ ಎಂದರೆ ಪ್ರೀತಿ, ಗೌರವ.

ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ನಾರಾಯಣ  ಮೂರನೆಯವನು. ದೊಡ್ಡ ಅಣ್ಣ ವಾಸುದೇವ ಹಳ್ಳಿಯಲ್ಲೇ ನಿಂತು ತಂದೆಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋದ. ಅವನು ಎಂದೂ ಹಳೆಯ ಕಾಲದ ಸಂಪ್ರದಾಯಗಳು ಮತ್ತು ನಂಬಿಕೆಗಳಲ್ಲೇ ಉಳಿದ. ತಮ್ಮಂದಿರ ಅಭಿಪ್ರಾಯಗಳು, ಹೋರಾಟಗಳು ಅವನಿಗೆ ವಿಚಿತ್ರವಾಗಿ ಕಂಡವು. ಆದರೂ ತಮ್ಮಂದಿರಿಗೆ ಅವನಲ್ಲಿ ತುಂಬಾ ಗೌರವ. ಎರಡನೆಯ ಮಗ ಮಾಧವ ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಪುಣೆಗೆ ಹೋದ. ಇದು ಅವನ ತಂದೆಗೆ ಇಷ್ಟವಿರಲಿಲ್ಲ. ಆದರೆ ಅವನು ಧೈರ್ಯಮಾಡಿ ಹೋದದ್ದರಿಂದ ಅವನಿಗೂ ಒಳ್ಳೆಯದಾಯಿತು. ಮುಂದೆ ತಮ್ಮಂದಿರೂ ಪುಣೆಗೆ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ಮುಂದೆ ಮಾಧವ ಬಹು ದೊಡ್ಡ ಸಂಸ್ಕೃತ ವಿದ್ವಾಂಸರಾದರು, ನಾರಾಯಣ ಕಾರ್ಮಿಕ ಮುಖಂಡರಾದರು. ಅವರ ತಮ್ಮ ವಾಮನರಾವ್ ಪತ್ರಿಕೋದ್ಯಮಿಯಾಗಿ ಬ್ರಿಟಿಷ್ ಸರ್ಕಾರವನ್ನು ಎದುರಿಸಿ, ಹೋರಾಡಿ ಸೆರೆಮನೆಗೆ ಹೋದರು; ದೊಡ್ಡ ಸಾಹಿತಿ ಎಂದು ಮಹಾರಾಷ್ಟ್ರದಲ್ಲಿ ಖ್ಯಾತಿ ಪಡೆದರು.

ಶಿಕ್ಷಣ

ನಾರಾಯಣನ ಪ್ರಾರಂಭದ ವಿದ್ಯಾಭ್ಯಾಸ ಗಡೆಗಾತನ್‌ನಲ್ಲಿ ನಡೆಯಿತು. ತುಂಬಾ ಚಟುವಟಿಕೆಯ ಹುಡುಗ, ಧೈರ್ಯಶಾಲಿ ಎನ್ನಿಸಿಕೊಂಡ.

ನಾರಾಯಣ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡರು. ಅಣ್ಣ ವಾಸುದೇವನಿಗೆ ಪೌರೋಹಿತ್ಯವನ್ನೂ ನಡೆಸಿ ಶಾಲೆಯನ್ನೂ ನಡೆಸುವುದು ಕಷ್ಟ ಅಯಿತು. ನಾರಾಯಣನನ್ನು ಶಾಲೆಯಿಂದ ಬಿಡಿಸಿ, ಸಂಸ್ಕೃತದಲ್ಲಿ ವೇದವನ್ನೂ ಇತರ ಧರ್ಮಗ್ರಂಥಗಳನ್ನೂ ಶಾಸ್ತ್ರಗಳನ್ನೂ ಓದಲು ಬೇರೆ ಶಾಲೆಗೆ ಸೇರಿಸಿದ. ಮೂರು ವರ್ಷಗಳು ಈ ವಿದ್ಯಾಭ್ಯಾಸ ನಡೆಯಿತು.

ಆ ಹೊತ್ತಿಗೆ ಮಾಧವ ಪುಣೆಯಿಂದ ಬಂದ. ತಮ್ಮ ಹೊಸ ರೀತಿಯ ಶಿಕ್ಷಣ ಪಡೆಯಬೇಕು, ಇಂಗ್ಲಿಷ್ ಕಲಿಯಬೇಕು ಎಂದು ಅವನಿಗೆ ಎನ್ನಿಸಿತು. ಅವನನ್ನು ಪುಣೆಗೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದ. ನಾರಾಯಣ ಸ್ಕಾಲರ್‌ಷಿಪ್ ಪಡೆಯುವಷ್ಟು ಒಳ್ಳೆಯ ಅಂಕಗಳನ್ನು ಗಳಿಸುತ್ತಿದ್ದ. ಒಳ್ಳೆಯ ಭಾಷಣಕಾರ ಎನ್ನಿಸಿಕೊಂಡ.

ಈ ವರ್ಷಗಳಲ್ಲಿ ನಾರಾಯಣ ನಡೆಸಿದ ಜೀವನ ಬಹು ಸರಳ. ತಿನ್ನಲು ಕಡಲೆಕಾಯಿ, ಅವಲಕ್ಕಿ ಸಿಕ್ಕರೆ ಅವನಿಗೆ ಹಬ್ಬ. ಆಗ ಒಂದಾಣೆಗೆ (ಆರು ಪೈಸೆ) ಒಂದು ಸೋಡಾ ವಾಟರ್ ಸೀಸೆ, ಎಷ್ಟೋ ದಿನಗಳ ಕಾಲ ಹಣ ಕೂಡಿಸಿ ನಾರಾಯಣ ಒಂದು ಸೀಸೆ ಸೋಡಾ ವಾಟರ್ ಕುಡಿದು ಹಿಗ್ಗುತ್ತಿದ್ದ. ನ್ಯಾಯಕ್ಕಾಗಿ ಹೋರಾಡುವ ಧೀರ ಎಂದು ಶಾಲೆಯಲ್ಲಿ ಹೆಸರು ಮಾಡಿದ್ದ. ಒಬ್ಬ ಉಪಾಧ್ಯಾಯರು ಪರೀಕ್ಷೆಯಾದನಂತರ ಉತ್ತರ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು., ಹಿಂದಿರುಗಿಸುತ್ತಲೇ ಇರಲಿಲ್ಲ. ನಾರಾಯಣನ ತರಗತಿಯ ಹುಡುಗರು ಉತ್ತರ ಪತ್ರಿಕೆಗಳನ್ನು ತಿದ್ದಿ ಅಂಕ ಹಾಕಿಕೊಡಬೇಕೆಂದು ಕೇಳಿದರು, ನಾರಾಯಣನೇ ಮುಖಂಡ. ಮತ್ತೆ ಮತ್ತೆ ಪ್ರಾರ್ಥಿಸಿದರೂ ಫಲವಾಗದಿದ್ದಾಗ ಅವರ ತರಗತಿಗೆ ಹೋಗದೆ ಮುಷ್ಕರ ಹೂಡಿದರು. ಮರುದಿನ ಶಾಲೆಯಲ್ಲಿ ಅವರಿಗೆಲ್ಲ ಬೆತ್ತದೇಟು ಬಿತ್ತು.

ದೇಶಾಭಿಮಾನದ ಮೊಳಕೆ

ನಾರಾಯಣ ಓದಿದ ಶಾಲೆಯನ್ನೂ ಕಾಲೇಜನ್ನೂ ನಡೆಸುತ್ತಿದ್ದವರು ಅಗರ್‌ಕರ್ ಎಂಬ ಹಿರಿಯ ದೇಶಭಕ್ತರು ಮತ್ತು ಅವರ ಸ್ನೇಹಿತರು. ಇವರು ದೇಶಕ್ಕಾಗಿ ಬದುಕಿದವರು. ಸಮಾಜದಲ್ಲಿನ ಕೆಟ್ಟ ಪದ್ಧತಿಗಳನ್ನೂ ಮೂಢನಂಬಿಕೆಗಳನ್ನೂ ತೊಡೆದುಹಾಕಲು ದುಡಿದವರು. ಅವರ ಪ್ರಭಾವದಿಂದ ನಾರಾಯಣನಿಗೂ ದೇಶಸೇವೆ ಮಾಡಬೇಕು, ಸಮಾಜ ಸುಧಾರಣೆಗಾಗಿ ದುಡಿಯಬೇಕು ಎಂಬ ಹಂಬಲ ಬೆಳೆಯಿತು. ಜೊತೆಗೆ ಇಂಗ್ಲೆಂಡಿನ ಪ್ರಸಿದ್ಧ ಚಿಂತಕರಾದ ಜಾನ್ ಸ್ಟೂಆರ‍್ಟ್ ಮಿಲ್ ಮತ್ತು ಹರ್ಬರ್ಟ್ ಸ್ಪೆನ್ಸರರ ಗ್ರಂಥಗಳನ್ನು ಕಾಲೇಜಿನಲ್ಲಿ ಓದಿದ. ಅವುಗಳಿಂದ ಸ್ವಾತಂತ್ರ್ಯ ಪ್ರೇಮ, ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಭಿಮಾನ, ಸ್ವತಂತ್ರವಾಗಿ ಆಲೋಚಿಸಿ ಸರಿ ಎಂದು ಕಂಡದ್ದನ್ನು ಮಾತ್ರ ಸ್ವೀಕರಿಸುವ ಧೈರ್ಯ ಎಲ್ಲವನ್ನೂ ಕಲಿತ. ೧೮೯೫ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಕ್ಕೆ ಹೋಗಿ ನಾಯಕರ ಭಾಷಣಗಳನ್ನು ಕೇಳಿದ. ನಾರಾಯಣ ಇದ್ದ ವಿದ್ಯಾರ್ಥಿನಿಲಯದಲ್ಲಿ ಸಂಪ್ರದಾಯದ ಮನೋಭಾವದ ವಿದ್ಯಾರ್ಥಿಗಳೂ ಸುಧಾರಣೆಯನ್ನು ಬಯಸುತ್ತಿದ್ದ ವಿದ್ಯಾರ್ಥಿಗಳೂ ಬೇರೆ ಬೇರೆ ಕುಳಿತು ಊಟ ಮಾಡುತ್ತಿದ್ದರು. ನಾರಾಯಣನ ಅಣ್ಣ ಮಾಧವ ಸಂಪ್ರದಾಯಸ್ಥರೊಂದಿಗೆ ಊಟ ಮಾಡುತ್ತಿದ್ದ. ನಾರಾಯಣ ಮೊದಲ ವರ್ಷ ಹಾಗೆಯೇ ಮಾಡಿದ; ಎರಡನೆಯ ವರ್ಷ ಸುಧಾರಣಾವಾದಿಗಳನ್ನು ಸೇರಿದ. ಅವನು ಕ್ರಿಕೆಟ್, ಟೆನಿಸ್ ಆಡುತ್ತಿದ್ದ. ದೋಣಿ ನಡೆಸುತ್ತಿದ್ದ.

ನಾರಾಯಣ ಜೋಷಿ ೧೯೦೧ರಲ್ಲಿ ಬಿ.ಎ. ಮುಗಿಸಿದರು. ಎಂ.ಎ. ಓದಬೇಕೆಂದು ಆಸೆ ಇದ್ದರೂ ಮನೆಯ ಹಣಕಾಸಿನ ಸ್ಥಿತಿ ಚೆನ್ನಾಗಿರಲಿಲ್ಲ. ಜೋಷಿಯವರಿಗೆ ೧೯೦೦ ರಲ್ಲೇ ಮದುವೆಯಾಗಿತ್ತು. ಇದರಿಂದ ಜೋಷಿ ಕೆಲಸ ಹುಡಕಬೇಕಾಯಿತು.

ಉಪಾಧ್ಯಾಯ ಜೋಷಿ

ಅಹಮದ್‌ನಗರದಲ್ಲಿ ಕ್ಷಾಮ ತಲೆದೋರಿತು. ಸರ್ಕಾರ ಕ್ಷಾಮಪೀಡಿತ ಜನರಿಗಾಗಿ ಕೆಲವು ಉಚಿತ ಭೋಜನ ಮಂದಿರಗಳನ್ನು ತೆರೆಯಿತು. ಒಂದು ಮಂದಿರದ ಮೇಲ್ವಿಚಾರಕ ರಾಗಿ ಕೆಲಸಕ್ಕೆ ಸೇರಿದರು ಜೋಷಿ. ಇದೇ ಅವರ ಮೊದಲ ನೌಕರಿ. ಇದೇ ಅವರನ್ನು ಬಡಬಗ್ಗರ ಹತ್ತಿರ ಕರೆದೊಯ್ದಿತು. ಮತ್ತೆ ಮತ್ತೇ ಕ್ಷಾಮದ ದವಡೆಯಲ್ಲಿ ಕಣ್ಣೀರು ಹಾಕುವ ರೈತರ ಕಷ್ಟಗಳನ್ನು ತೋರಿಸಿಕೊಟ್ಟಿತು. ಈ ಬಡವರಿಗಾಗಿ ದುಡಿಯಬೇಕೆಂಬ ಹಂಬಲವನ್ನು ಗಾಢ ಮಾಡಿತು.

ಆರು ತಿಂಗಳಿಗೆ ಈ ಕೆಲಸ ಮುಗಿಯಿತು. ಅನಂತರ ಜೋಷಿ ಕೆಲವು ಶಾಲೆಗಳಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಒಳ್ಳೆಯ ಉಪಾಧ್ಯಾಯ ಎನ್ನಿಸಿಕೊಂಡರು, ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದರು. ಆದರೆ ಅವರ ಮನಸ್ಸಿಗೆ ತೃಪ್ತಿ ಇರಲಿಲ್ಲ. ಸಮಾಜಸೇವೆ ಮಾಡಬೇಕು ಎಂಬ ಹಂಬಲ ಬಲವತ್ತರವಾಗಿತ್ತು. ಸಮಾಜದ ದುಷ್ಟ ಪದ್ಧತಿಗಳನ್ನು ಕಂಡು ಅವರು ಸಿಡಿದೇಳುತ್ತಿದ್ದರು. ಅವರು ಉಪಾಧ್ಯಾಯ ರಾಗಿದ್ದಾಗ ನಡೆದ ಒಂದು ಸಂಗತಿಯನ್ನು ಅವರ ಶಿಷ್ಯರಾಗಿದ್ದ ಬಿ.ಆರ್. ಅಂಬೇಡ್ಕರರು ಹೇಳುತ್ತಿದ್ದರು. ಅಂಬೇಡ್ಕರರು ಮುಂದೆ ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾದರು. ಅವರು ಕೆಳ ಜಾತಿಯವರು ಎಂದು ಭಾವಿಸುತ್ತಿದ್ದ ಬಹುಮಂದಿ ವಿದ್ಯಾರ್ಥಿಗಳು ಅವರನ್ನು ಮುಟ್ಟುತ್ತಿರಲಿಲ್ಲ. ಅಂಬೇಡ್ಕರರು ತರಗತಿಯಲ್ಲಿ ಕಡೆಯ ಬೆಂಚಿನಲ್ಲಿ ಒಬ್ಬರೇ ಕುಳಿತುಕೊಳ್ಳಬೇಕಾಗಿತ್ತು. ಇದು ಜೋಷಿಯವರಿಗೆ ಸರಿ ತೋರಲಿಲ್ಲ. ಅಂಬೇಡ್ಕರರನ್ನು ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಒಂದು ದಿನ ಜೋಷಿಯವರು ಅಂಬೇಡ್ಕರರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ಕರೆದರು. ಅನೇಕ ಮಂದಿ ಹುಡುಗರು ತಮ್ಮ ತಿಂಡಿಯ ಪಾತ್ರೆಗಳನ್ನು ಕಪ್ಪು ಹಲಗೆಗೆ ತಗುಲಿ ಹಾಕಿದ್ದರು. ಅಂಬೇಡ್ಕರರು ಕಪ್ಪು ಹಲಗೆಯನ್ನು ಮುಟ್ಟಿದರೆ ತಮ್ಮ ತಿಂಡಿ ಮೈಲಿಗೆಯಾಗುತ್ತದೆ, ಅವರು ಕಪ್ಪು ಹಲಗೆಯನ್ನು ಮುಟ್ಟಕೂಡದು ಎಂದು ಅವರೆಲ್ಲ ಹಠಹಿಡಿದರು. ಜೋಷಿಯವರು ಅಂಬೇಡ್ಕರರಿಗೆ ಕಪ್ಪು ಹಲಗೆಯ ಮೇಲೆ ಬರೆಯುವಂತೆ ಹೇಳಿದರು, ಬರೆಸಿದರು. ಅನೇಕ ಮಂದಿ ವಿದ್ಯಾರ್ಥಿಗಳು ಮಾತ್ರವಲ್ಲ. ದೊಡ್ಡವರೂ ಜೋಷಿಯವರ ಮೇಲೆ ಉರಿದು ಬಿದ್ದರು. ಆದರೆ ಜೋಷಿಯವರು ಲಕ್ಷ್ಯ ಮಾಡಲಿಲ್ಲ.

ಭಾರತ ಸ್ವತಂತ್ರವಾಗಬೇಕೆಂಬುದು ಜೋಷಿಯವರ ಮತ್ತೊಂದು ಹಂಬಲ. ಆಟಗಳಲ್ಲಿ ಆಸಕ್ತಿಹೊಂದಿದ್ದ ಅವರು ವಿದ್ಯಾರ್ಥಿಗಳೊಡನೆ ಆಟದ ಮೈದಾನದಲ್ಲಿ ಸೇರಿದಾಗ ದೇಶದ ಗುಲಾಮಗಿರಿಯ ವಿಷಯ ಮಾತನಾಡುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸುತ್ತಿದ್ದರು.

ಸೇವೆಯ ಹಂಬಲಕ್ಕೆ ತೆರೆದ ದಾರಿ

ಅಧ್ಯಾಪಕ ವೃತ್ತಿಯಲ್ಲಿ ಅತೃಪ್ತಿಗೊಂಡು ದೇಶದ ಸೇವೆಗೆ ತಮ್ಮ ಬಾಳನ್ನು ಧಾರೆ ಎರೆಯಬೇಕು ಎಂದು ಅವರು ಚಡಪಡಿಸುತ್ತಿದ್ದಾಗ ೧೯೦೯ರಲ್ಲಿ ದಿನಪತ್ರಿಕೆ ಒಂದರಲ್ಲಿ ಒಂದು ಪ್ರಕಟಣೆ ಕಣ್ಣಿಗೆ ಬಿತ್ತು. ಅವರ ಜೀವನರೀತಿಯೇ ಬದಲಾಯಿತು.

ಪ್ರಕಟಣೆ ‘ಸರ್ವೆಂಟ್ಸ್ ಆಫ್ ಇಂಡಿಯ’ ಸಂಸ್ಥೆಯದು.

ಇದು ೧೯೦೫ರಲ್ಲಿ ಗೋಪಾಕೃಷ್ಣ ಗೋಖಲೆಯವರು ಸ್ಥಾಪಿಸಿದ ಸಂಸ್ಥೆ. ದೇಶಕ್ಕಾಗಿ ತನು ಮನ ಧನಗಳನ್ನರ್ಪಿಸುವ ತರುಣರಿಗೆ ಒಂದು ಅವಕಾಶ ಕಲ್ಪಿಸುವುದು ಅವರ ಉದ್ದೇಶ. ದೇಶಸೇವೆ, ವಿದ್ಯಾಕ್ಷೇತ್ರದಲ್ಲಿ ಸೇವೆ, ಹಿಂದುಳಿದ ವರ್ಗದವರಿಗೆ ನೆರವು, ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ದೇಶದಲ್ಲಿ ವಿಜ್ಞಾನದ ಅಧ್ಯಯನ ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಶ್ರಮಿಸುವುದು ಇವೆಲ್ಲ ಅದರ ಮುಖ್ಯ ಗುರಿಗಳು. ಈ ಸಂಸ್ಥೆಯಲ್ಲಿ ಪೂರ್ಣಾವಧಿ ಕೆಲಸಗಾರರಿಗೆ ದುಡಿಯಲು ತರುಣರಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿತ್ತು.

ಮೂವತ್ತು ವರ್ಷದ ಜೋಷಿ ಸಂಸ್ಥೆಯನ್ನು ಸೇರಿದರು. ಅವರು ಸಹಿ ಹಾಕಿದ ಪ್ರಮಾಣಪತ್ರದ ಒಂದು ಭಾಗವನ್ನು ಪುಸ್ತಕದ ಪ್ರಾರಂಭದಲ್ಲಿ ಓದಿದಿರಿ, ನೆನಪಿದೆಯೇ?

ಸೇವೆಯ ಮಾರ್ಗದಲ್ಲಿ ಮೊದಲ ಹೆಜ್ಜೆಗಳು

ಪೂನಾದಲ್ಲಿ ಅವರ ಕೆಲಸ ಪ್ರಾರಂಭವಾಯಿತು. ಅನಂತರ ೧೯೧೧ರಲ್ಲಿ ಮುಂಬಯಿಗೆ ಹೋಗಿ ನೆಲಸಿದರು.

ಪ್ರಾರಂಭದಲ್ಲಿ ಅವರ ಕೆಲಸ ‘ದಾನ್ ಪ್ರಕಾಶ್’ ಎಂಬ ಪತ್ರಿಕೆಯ ಮುಂಬಯಿ ಆವೃತ್ತಿಯ ಮೇಲ್ವಿಚಾರಣೆ. ಅನಂತರ ಸಮಾಜ ಸುಧಾರಣೆಗಾಗಿ ಶ್ರಮಿಸಲು ಪ್ರಾರಂಭಿಸಿದರು. ಮೊದಲು ಅವರು ಕೆಲಸ ಮಾಡಿದ್ದು ಹೋಳಿಯ ಹಬ್ಬದ ಆಚರಣೆಯಲ್ಲಿ ನುಸುಳಿದ ಕೆಟ್ಟ ಪದ್ಧತಿಗಳನ್ನು ತೊಲಗಿಸಲು, ಹದ್ದು ಮೀರಿ ಕುಡಿಯುವುದು, ಮನಸ್ಸು ಬಂದಂತೆ ರಸ್ತೆಗಳಲ್ಲಿ ಕುಣಿಯುವುದು, ಬಣ್ಣದ ನೀರನ್ನು ಎಲ್ಲರ ಮೇಲೆ ಎರಚುವುದು, ಹೆಣ್ಣು ಮಕ್ಕಳನ್ನು ಪೀಡಿಸುವುದು – ಇಂತಹ ದುಷ್ಟ ಅಂಶಗಳು ಸೇರಿ ಹೋಳಿ ಹಬ್ಬದ ಮೂರು ದಿನಗಳೆಂದರೆ ಮಾನ ಮರ್ಯಾದೆ ಇರುವವರು, ವಿವೇಚನೆ ಇರುವವರು ಹೇಸಿಕೊಳ್ಳುವಂತಾಗಿತ್ತು. ಜೋಷಿಯವರು ಇತರರೂ ಸೇರಿ, ಈ ಕೆಟ್ಟ ಅಂಶಗಳನ್ನು ಕಿತ್ತು ಹಾಕಲು ಶ್ರಮಿಸಿದರು. ‘ಹೋಳಿಕಾ ಸಮ್ಮೇಳನ’ವನ್ನು ವ್ಯವಸ್ಥೆಮಾಡಿ ಸಂಗೀತ, ಕ್ರೀಡೆಗಳು ಮೊದಲಾದುವನ್ನು ಸೇರಿಸಿದರು. ಈ ಸಮ್ಮೇಳನ ಮುಂದೆ ‘ಸೋಷಿಯಲ್ ಸರ್ವೀಸ್ ಲೀಗ್’ ಎಂದು ಪರಿವರ್ತಿತವಾಗಿ ಸೇವೆ ಸಲ್ಲಿಸಿತು.

ಇಲ್ಲಿಂದ ಮುಂದೆ ಜೋಷಿಯವರ ಬಾಳೆಲ್ಲ ಇತರರ ಸೇವೆಯೇ ಕಥೆಯೇ ಆಯಿತು. ೧೯೧೧ರಲ್ಲಿ ಗುಜರಾತಿನಲ್ಲಿ ಭೀಕರ ಕ್ಷಾಮ ತಲೆದೋರಿತು. ಜೋಷಿಯವರು ಐದು ನೂರು ಮಂದಿ ಸ್ವಯಂಸೇವಕರೊಡನೆ ಮನೆ ಮನೆಗೆ ಅಲೆದು ಸಾವಿರಾರು ರೂಪಾಯಿಗಳನ್ನು ಸಂಗ್ರಹಿಸಿ ಜನರ ಸಹಾಯದ ಕೆಲಸಗಳಿಗೆ ಕೊಟ್ಟರು. ಮರುವರ್ಷ ಉತ್ತರ ಪ್ರದೇಶದಲ್ಲಿ ಕ್ಷಾಮ ತಲೆದೋರಿದಾಗ ಹೀಗೆಯೇ ದುಡಿಯುತ್ತಿದ್ದಾಗಲೇ ಪುಣೆಯ ಬಳಿ ಒಂದು ಹಳ್ಳಿಯಲ್ಲಿ ಬೆಂಕಿ ಅನಾಹುತವಾಗಿ ಹಳ್ಳಿಯ ಎಲ್ಲ ಮನೆಗಳು ಸುಟ್ಟುಹೋದ ಸುದ್ದಿ ಬಂದಿತು. ಜೋಷಿಯವರು ಅಲ್ಲಿಗೆ ಧಾವಿಸಿದರು. ಇತರರೊಂದಿಗೆ ಸೇರಿ ಹಣ ಸಂಗ್ರಹಿಸಿ ಮತ್ತೆ ಮನೆಗಳನ್ನು ಕಟ್ಟಲು ನೆರವಾದರು. ಈ ಹಳ್ಳಿಯವರಿಂದ ಕಂದಾಯ ವಸೂಲು ಮಾಡಬಾರದೆಂದು ಸರ್ಕಾರದೊಡನೆ ವ್ಯವಹರಿಸಿ ಯಶಸ್ವಿಯಾದರು.

೧೯೧೧-೧೯ರಲ್ಲಿ ಭಾರತದಲ್ಲೆಲ್ಲ ಇನ್‌ಫ್ಲ್ಯ್ಲುಯೆಂಜ ಪಿಡುಗು ಭಯಂಕರವಾಗಿತ್ತು. ಮುಂಬಯಿಯಲ್ಲಿ ಸಾವಿರಾರು ಮಂದಿ ಸತ್ತರು. ದಿನಕ್ಕೆ ಸುಮಾರು ಒಂದು ಸಾವಿರ ಮಂದಿ ಸಾಯುತ್ತಿದ್ದರೆಂದು ಅಂದಾಜು. ಜೋಷಿಯವರು ಹಣ ಕೂಡಿಸಿದರು, ತಾವೆ ಮನೆಗಳಿಗೆ ಗಂಜಿಯನ್ನು ತೆಗೆದುಕೊಂಡು ಹೋಗಿ ರೋಗಿಗಳಿಗೆ ಕೊಟ್ಟರು, ಔಷಧ ಕುಡಿಸಿದರು, ಸ್ವಯಂ ಸೇವಕರನ್ನು ಕರೆದುಕೊಂಡು ಹೋಗಿ ಅನಾಥ ಹೆಣಗಳನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆಗೆ ಏರ್ಪಾಟು ಮಾಡುತ್ತಿದ್ದರು. ಎಷ್ಟೋ ಬಾರಿ ದಿನವೆಲ್ಲ ಕಷ್ಟಪಟ್ಟು ಕೆಲಸ ಮಾಡಿ ಅಲೆದು ಮನೆಗೆ ಬಂದವರು ಮಧ್ಯರಾತ್ರಿ ಯಾರೋ ರೋಗಿಗಳ ಮನೆಯವರು ಕರೆದಾಗ ಮೈಲಿಗಟ್ಟಲೆ ಹೋದದ್ದುಂಟು.

ನಾನು ಕಾರ್ಮಿಕರ ವಕೀಲ

ಮುಂಬಯಿಯ ಬಡಬಗ್ಗರ ನಡುವೆ ಓಡಾಡುವಾಗ ಜೋಷಿಯವರಿಗೆ ಕಾರ್ಖಾನೆಗಳ ಕೆಲಸಗಾರರ ಕಷ್ಟಕಾರ್ಪಣ್ಯಗಳ ಪರಿಚಯವಾಯಿತು. ಕೆಲವರು ‘ಕಾಮಗಾರ್ ಹಿತವರ್ಧಕ ಸಂಘ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು, ಜೋಷಿಯವರು ಈ ಸಂಘದಲ್ಲಿಯೂ ಮತ್ತು ಹೊರಗೂ ಕಾರ್ಮಿಕರಿಗಾಗಿ ದುಡಿದರು. ಕಾರ್ಮಿಕರು ಅನೇಕ ಕಾರ್ಖಾನೆಗಳಲ್ಲಿ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಅವರಿಗಾಗಲೀ ಅವರ ಮನೆಯವರಿಗಾಗಲೀ ಕಾಯಿಲೆ ಯಾದರೆ, ಔಷಧಕ್ಕೆ ಏರ್ಪಾಟಿಲ್ಲ. ಹುಡುಗರ ಓದಿಗೆ ನೆರವಿಲ್ಲ, ಜೋಷಿಯವರು ಕೆಲಸಗಾರರ ಮನೆಗಳಿಗೆ ಹೋದರು, ಕಾರ್ಖಾನೆಗಳಿಗೆ ಹೋದರು, ಕಣ್ಣಾರೆ ಅವರ ಸ್ಥಿತಿಗತಿಗಳನ್ನು ಕಷ್ಟಗಳನ್ನೂ ಕಂಡರು. ಅಂಕಿಅಂಶಗಳನ್ನು ಸಂಗ್ರಹಿಸಿದರು. ಸಾರ್ವಜನಿಕರಿಗೆ ಕಾರ್ಮಿಕರ ದುಸ್ಥಿತಿಯ ವಿಷಯ ತಿಳಿದಿರಲಿಲ್ಲ. ಮುಷ್ಕರ ನಡೆದರೆ ಕಾರ್ಮಿಕರು ಸುಮ್ಮನೆ ಗಲಭೆ ಎಬ್ಬಿಸುತ್ತಾರೆ ಎಂದು ಹಲವರ ಅಭಿಪ್ರಾಯವಾಗಿತ್ತು. ಜೋಷಿಯವರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು. ಜನತೆಯ ನ್ಯಾಯಪ್ರಜ್ಞೆಯನ್ನು ಹೊಡೆದೆಬ್ಬಿಸಿದರು. ಅವರ ಕೆಲವರು ಸ್ನೇಹಿತರು “”ನೀವು ಕಾರ್ಮಿಕರ ಪರ ವಕೀಲಿ ವಹಿಸುತ್ತೀರಿ, ನೀವು ತೀರ್ಪುಗಾರರಾಗಬೇಕು” ಎಂದು ಹೇಳುತ್ತಿದ್ದರು. ಜೋಷಿಯವರ ಉತ್ತರ ಒಂದೇ, “”ಕಾರ್ಮಿಕರ ವಿಷಯ ತೀರ್ಪು ಕೊಡಲು ಬೇಕಾದಷ್ಟು ಮಂದಿ ಸಿದ್ಧ್ದರಿದ್ದಾರೆ. ಅವರ ಪರ ಮಾತನಾಡುವವರು ಎಷು ಮಂದಿ? ನಾನು ಎಂದೂ ಅವರ ವಕೀಲನೇ.”

೧೯೧೧ರಲ್ಲಿ ಜೋಷಿಯವರೂ ಅವರ ಸ್ನೇಹಿತರೂ ಸೇರಿ ‘ಸೋಷಿಯಲ್ ಸರ್ವೀಸ್ ಲೀಗ್’ನ್ನು ಪ್ರಾರಂಭಿಸಿದರಷ್ಟೆ. ಜನತೆಯಲ್ಲಿ ಶಿಕ್ಷಣವನ್ನು ಬೆಳಸುವುದಕ್ಕೆ, ಅವರ ಉದ್ಯೋಗದಲ್ಲಿ ಅವರಿಗೆ ನ್ಯಾಯ ದೊರಕುವಂತೆ ಮತ್ತು ಶೋಷಣೆ ತಪ್ಪುವಂತೆ ಶ್ರಮಿಸಲು ಅದು ಕಂಕಣಬದ್ಧವಾಯಿತು. ದಾನಧರ್ಮ ಅದರ ಉದ್ದೇಶವಲ್ಲ; ಸಮಾಜದಲ್ಲಿ ಅನ್ಯಾಯವಾದವರಿಗೆ ಮರುಕ ತೋರಿಸುವುದು ಉದ್ದೇಶವಲ್ಲ; ಅವರಿಗೆ ತಾನು ಕೀಳು, ಇತರರ ಕರುಣೆಯಿಂದ ಬದುಕಬೇಕು ಎಂಬ ದೈನ್ಯ ಭಾವವನ್ನು ಹೋಗಲಾಡಿಸಿ ಆತ್ಮಗೌರವವನ್ನು ತುಂಬುವುದು ಉದ್ದೇಶ ವಾಗಿತ್ತು. ಜೋಷಿಯವರು ಪ್ರಾರಂಭದಿಂದ ಇದರ ಕಾರ್ಯದರ್ಶಿಗಳಾಗಿದ್ದು ೧೯೫೨ರಲ್ಲಿ ಉಪಾಧ್ಯಕ್ಷರಾದರು.

ಸೋಷಿಯಲ್ ಸರ್ವೀಸ್ ಲೀಗ್

ಜೋಷಿಯವರು ಕಾರ್ಯದರ್ಶಿಗಳಾಗಿದ್ದಾಗ ಲೀಗ್ ಹಲವು ಕಡೆಗಳಲ್ಲಿ ವಯಸ್ಕರ ಅಕ್ಷರಾಭ್ಯಾಸಕ್ಕಾಗಿ ರಾತ್ರಿ ಶಾಲೆಗಳನ್ನು ತೆರೆಯಿತು. ಸ್ವಲ್ಪ ವಿದ್ಯಾಭ್ಯಾಸ ಮಾಡಿ ಮುಂದುವರೆಸಲು ಅನುಕೂಲವಿಲ್ಲದೆ ಕೆಲಸಕ್ಕೆ ಸೇರಿದವರ ಪ್ರೌಢಶಿಕ್ಷಣಕ್ಕಾಗಿ ರಾತ್ರಿ ಶಾಲೆಗಳನ್ನು ನಡೆಸಿತು. ದೊಡ ನಗರಗಳ ಬೇರೆ ಬೇರೆ ಭಾಗಗಳಿಗೆ ಮತ್ತು ಸಣ್ಣ ಹಳ್ಳಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಒಯ್ದು ಜನ ಪುಸ್ತಕಗಳನ್ನು ಓದಲು ಅನುಕೂಲ ಮಾಡಿ ಕೊಡುವ ಸಂಚಾರೀ ಪುಸ್ತಕ ಭಂಡಾರಗಳನ್ನು ನಡೆಸಿತು. ವಾಚನಾಲಯಗಳನ್ನು ವ್ಯಾಯಾಮ ಶಾಲೆಗಳನ್ನೂ  ಪ್ರಾರಂಭಿಸಿತು. ಬಡವರಿಗೂ ವೈದ್ಯರ ನೆರವು ಸಿಕ್ಕಲು ವ್ಯವಸ್ಥೆ ಮಾಡಿತು. ಹೆಂಗಸರು ಉದ್ಯೋಗಕ್ಕೆ ಸೇರಲು ಸಹಾಯವಾಗುವಂತೆ ವೃತ್ತ್ತಿ ಶಿಕ್ಷಣ ಶಾಲೆಗಳನ್ನು ನಡೆಸಿತು, ಸಹಕಾರ ಸಂಘಗಳನ್ನು ನಿರ್ವಹಿಸಿತು. ಸಂತತವಾಗಿ ಸಮಾಜ ಸುಧಾರಣೆಯ ಕೆಲಸ ನಡೆದುಕೊಂಡು ಹೋಗುವುದು ಸಾಧ್ಯವಾಗುವಂತೆ ಕೆಲಸಗಾರರಿಗೆ ಶಿಕ್ಷಣ ನೀಡಿತು.

ಜೋಷಿಯವರು ಕರೀಂಭಾಯಿ ಎಬ್ರಾಹಿಂ ಕೆಲಸಗಾರರ ಸಂಸ್ಥೆ, ತಾತಾ ಸನ್ಸ್ ಕೆಲಸಗಾರರ ಸಂಸ್ಥೆ, ಮುಂಬಯಿ ಕೆಲಸಗಾರರ ಸಂಸ್ಥೆ ಇವೆಲ್ಲವನ್ನೂ ಸ್ಥಾಪಿಸಿ ಹಲವು ವರ್ಷಗಳ ಕಾಲ ನಡೆಸಿದರು. ಕೆಲಸಗಾರರಿಗೆ ಮತ್ತು ಅವರ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಬೇಕು, ಅವರಿಗೆ ಆರ್ಥಿಕವಾಗಿ ಸಹಾಯವಾಗುವಂತೆ ಹಣವನ್ನು ಸಾಲಕೊಡುವ ಸಹಕಾರ ಸಂಘಗಳ ಸ್ಥಾಪನೆಯಾಗಬೇಕು, ನ್ಯಾಯವಾದ ಬೆಲೆಗೆ ತಿಂಡಿ, ಕಾಫಿ, ಟೀ, ಸಿಕ್ಕುವಂತಾಗಬೇಕು, ಅವರ ಆಟ, ಸಂಗೀತ, ವಿನೋದ ವಿಹಾರಗಳಿಗೆ ನೆರವಾಗಬೇಕು – ಈ ಗುರಿಗಳನ್ನಿಟ್ಟು ಕೊಂಡು ಈ ಕಾರ್ಮಿಕ ಸಂಸ್ಥೆಗಳನ್ನು ನಡೆಸಿದರು. ಈ ಎಲ್ಲ ಸಂಸ್ಥೆಗಳಿಗೆ ಯೋಜನೆಗಳನ್ನು ಸಿದ್ಧಗೊಳಿಸಿದರು. ಈ ಯೋಜನೆಗಳಿಂದಾಗಿ ಮುಂಬಯಿಯ ಶ್ರೀಮಂತರಿಂದಲೇ ಸಾವಿರಾರು ರೂಪಾಯಿ ಸಂಗ್ರಹಿಸಿದವರು ಜೋಷಿ.

ಈಗಿನ ದಿನಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾದರೆ ಅವರು ತಮ್ಮ ಸಂಘಗಳ ಮೂಲಕ ಹೋರಾಟ ನಡೆಸುತ್ತಾರೆ. ಎಂದರೆ ಅವರಲ್ಲಿ ಒಗ್ಗಟ್ಟಿರುತ್ತದೆ, ಅವರಿಗೆ ನಾಯಕರಿರುತ್ತಾರೆ. ಆಗಿನ ದಿನಗಳಲ್ಲಿ ಕಾರ್ಮಿಕರ ಸಂಘಗಳೇ ಇರಲಿಲ್ಲ. ಆದುದರಿಂದ ಸೋಷಿಯಲ್ ಸರ್ವೀಸ್ ಲೀಗ್ ಕಷ್ಟದಲ್ಲಿದ್ದ ಕಾರ್ಮಿಕರಿಗೆ ನೆರವಾಯಿತು. ಬಟ್ಟೆ ಕಾರ್ಖಾನೆಗಳ ಸಾವಿರಾರು ಮಂದಿ ೧೯೨೪ರಲ್ಲಿ ೧೯೨೫ಮತ್ತೆ ಮುಷ್ಕರ ಹೂಡಿದರು. ಕಾರ್ಖಾನೆಗಳ ಯಜಮಾನರು ಕಾರ್ಮಿಕರ ಕೂಲಿಯನ್ನು ಇದ್ದಕ್ಕಿದ್ದಂತೆ ಇಳಿಸಿದುದು ಮುಂತಾದವು ಮುಷ್ಕರಗಳಿಗೆ ಕಾರಣ. ತಿಂಗಳುಗಟ್ಟಲೆ ಮುಷ್ಕರ ನಡೆದಾಗ ಬಡ ಕೆಲಸಗಾರರಿಗೆ ತುಂಬಾ ಕಷ್ಟವಾಯಿತು. ಜೋಷಿಯವರೂ ಅವರ ಜೊತೆಯವರೂ ಅವರ ಮನೆಗಳಿಗೆ ಹೋಗಿ ಬಟ್ಟೆ ಬರೆ ಹಂಚಿದರು. ಸುಮಾರು ಹದಿನೆಂಟು ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದರು. ಮುಷ್ಕರಗಾರರ ಪರವಾಗಿ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ರಚಿತವಾದ ಸಮಿತಿಗೆ ಜೋಷಿಯವರನ್ನೇ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಕಡೆಗೆ ಮಾಲೀಕರು ಮೊದಲಿನಂತೆ ಕೂಲಿ ಕೊಡಲು ಒಪ್ಪಿದರು.

ಕಾರ್ಮಿಕರ ನಾಯಕ

ಮೊದಲನೆಯ ಮಹಾಯುದ್ಧ (೧೯೧೪-೧೯೧೮) ಮುಗಿದ ನಂತರ ಕಾರ್ಮಿಕರ ಸ್ಥಿತಿಯನ್ನು ಉತ್ತಮಗೊಳಿಸಲು ಒಂದು ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ೧೯೧೯ರಲ್ಲಿ ಅಮೆರಿಕದ ವಾಷಿಂಗ್‌ಟನ್ ನಗರದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಿತು. ಭಾರತದ ಪರವಾಗಿ ಜೋಷಿ ಯವರನ್ನು ಭಾರತ ಸರ್ಕಾರ ಕಳುಹಿಸಿತು. ಅನಂತರ ಅವರು ಹಲವು ಬಾರಿ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹಲವು ದೇಶಗಳಿಗೆ ಹೋದರು. ಈ ಎಲ್ಲ ದೇಶಗಳಲ್ಲಿ ಜೋಷಿಯವರು ಕೆಲಸಗಾರರ ಸ್ಥಿತಿಗತಿಗಳನ್ನು ಅಧ್ಯಯನ ಮಾಡುತ್ತಿದ್ದರು. ಕ್ರಮೇಣ ಭಾರತದಲ್ಲಿ ಹಲವು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಘಗಳನ್ನು ಮಾಡಿಕೊಂಡರು. ಆದರೆ ಎಲ್ಲ ಕಾರ್ಮಿಕರ ಪರವಾಗಿ ಮಾತನಾಡಬಲ್ಲ ಕೇಂದ್ರ ಸಂಸ್ಥೆಯೊಂದು ಇರಬೇಕು ಎಂದು ತೋರಿತು. ೧೯೨೦ರಲ್ಲಿ ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಾರಂಭವಾಯಿತು. ಈ ಸಂಸ್ಥೆಗೆ ಒಂದು ನೂರ ಏಳು ಕಾರ್ಮಿಕರ ಸಂಸ್ಥೆಗಳ ಬೆಂಬಲವಿತ್ತು. ಜೋಷಿಯವರು ಉಪಕಾರ್ಯದರ್ಶಿ ಗಳಾಗಿದ್ದರು. ಲಾಲ ಲಜಪತರಾಯ್, ಚಿತ್ತರಂಜನ ದಾಸ್ ಮೊದಲಾದ ಹಿರಿಯ ನಾಯಕರು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚು ಕಾಲವನ್ನೂ ಶಕ್ತಿಯನ್ನು ಮುಡುಪು ಮಾಡುತ್ತಿದ್ದಂತೆ ಜೋಷಿಯವರ ಹೊಣೆ ಹೆಚ್ಚಿತು. ೧೯೨೭ರಲ್ಲಿ ಅವರು ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಆದರು.

ಟೆಕ್ಸ್‌ಟೈಲ್ಸ್ ಲೇಬರ್ ಯೂನಿಯನ್ ಮೊದಲಾದ ಹಲವು ಕಾಮಿಕರ ಸಂಘಗಳಿಗೆ ಜೋಷಿಯವರು ಚೈತನ್ಯದ ಮೂಲವಾಗಿದ್ದರು. ಎಲ್ಲೇ ಅಗಲಿ, ಕೆಲಸಗಾರರಿಗೆ ಅನ್ಯಾಯವಾಗಿದೆ ಎಂದು ಕಂಡರೆ ಅವರಿಗಾಗಿ ದುಡಿಯಲು ಸಿದ್ಧರಾಗಿದ್ದರು. ಅನ್ಯಾಯವನ್ನು ಮಾಲೀಕರ ಗಮನಕ್ಕೆ, ಸಾರ್ವಜನಿಕರ ಗಮನಕ್ಕೆ, ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲು ಪ್ರಯುತ್ನಿಸುತ್ತಿದ್ದರು. ಈ ಎಲ್ಲ ಪ್ರಯತ್ನಗಳೂ ವ್ಯರ್ಥವಾದರೆ ಮುಷ್ಕರಕ್ಕೆ ಕರೆ ಕೊಡುತ್ತಿದ್ದರು. ಮುಷ್ಕರದಲ್ಲಿ ಭಾಗವಹಿಸಿದವರಿಗೆ ಹೊಟ್ಟೆಗಿಲ್ಲದಂತಾಗದಂತೆ ಶ್ರಮಿಸಿ ಹಣ ಕೂಡಿಸಿ ವ್ಯವಸ್ಥೆ ಮಾಡುತ್ತಿದ್ದರು. ೧೯೨೭ರಲ್ಲಿ ರೈಲ್ವೆ ಇಲಾಖೆ ನೂರಾರು ಮಂದಿ ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಿದಾಗ ಜೋಷಿಯವರೇ ಒಂದು ವಾರ ಮುಷ್ಕರಕ್ಕೆ ನಾಯುಕರಾಗಿ ನಿಂತರು. ೧೯೨೮ರಲ್ಲಿ ಅವರ ಮುಖಂಡತ್ವದಲ್ಲಿ ಭಾರೀ ಮುಷ್ಕರ ನಡೆಯಿತು. ಈ ಎರಡು ಮುಷ್ಕರಗಳಲ್ಲಿಯೂ ಅವರಿಗೆ ಸಂಪೂರ್ಣ ಜಯ ಲಭಿಸಿತು.

ಅಡ್ಡಿ ಅತಂಕಗಳು

ತಮಗಾಗಿ ತಮ್ಮ ಹೆಂಡತಿ ಮಕ್ಕಳಿಗಾಗಿ ಏನನ್ನೂ ಬಯಸದೆ ಜೋಷಿಯವರು ದುಡಿದರೂ ಅವರ ದಾರಿ ಸುಗಮವಾಗಿರಲಿಲ್ಲ. ಕಾರ್ಮಿಕರ ಅನಕ್ಷರತೆ, ಒಗ್ಗಟ್ಟಿಲ್ಲ ದಿರುವುದು ಇಂತಹ ಅಡ್ಡಿಗಳು ಒಂದು ಕಡೆ, ಮತ್ತೊಂದು ಕಡೆ ರಾಜಕೀಯ ಪಕ್ಷಗಳು ಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡುತ್ತಿಲ್ಲ ಎಂಬುದು. ಅವಕ್ಕೆಲ್ಲ ಶ್ರೀಮಂತರ ಹಣದ ಸಹಾಯ ಬೇಕೇಬೇಕಿತ್ತು. ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಎರಡು ಬಗೆಯ ಕಾರ್ಮಿಕ ನಾಯಕರದು. ಒಂದು ಬಗೆಯವರು ಯೋಚಿಸದೆ ಮುಷ್ಕರಗಳಿಗೆ ಕರೆ ಕೊಡುತ್ತಿದ್ದರು. ಸಾಕಷ್ಟು ಸಿದ್ಧತೆ ಇಲ್ಲದಿದ್ದುದ್ದರಿಂದ ಕೆಲವೇ ದಿನಗಳಲ್ಲಿ ಕಾರ್ಮಿಕರು ಕಷ್ಟ ತಡೆಯಲಾರದೆ ಮುಷ್ಕರ ನಿಲ್ಲಿಸುತ್ತಿದ್ದರು. ಇಲ್ಲವೇ ಕಾರ್ಮಿಕರ ಸಮಸ್ಯೆಗಳು ಜನಕ್ಕೆ ತಿಳಿಯದಿದ್ದುದ್ದರಿಂದ ಸಾರ್ವಜನಿಕರಿಗೆ ಮುಷ್ಕರದ ವಿಷಯದಲ್ಲಿ ಅಸಮಾಧಾನ ವಾಗುತ್ತಿತ್ತು. ಎರಡನೆಯ ಬಗೆಯ ನಾಯಕರು ಸಾಕಷ್ಟು ನ್ಯಾಯಾನ್ಯಾಯಗಳ ಗಮನವಿಲ್ಲದೆ ಕಾರ್ಮಿಕರನ್ನು ತಮ್ಮ ಏಳಿಗೆಗೆ ಅಥವಾ ತಮ್ಮ ರಾಜಕೀಯ ಪಕ್ಷದ ಪ್ರತಿಷ್ಠೆಗೆ ಬಳಸಿಕೊಳ್ಳುತ್ತಿದ್ದರು. ಇದರಿಂದ ಕಾರ್ಮಿಕರಿಗೆ ಸಾರ್ವಜನಿಕರ ಸಹಾನುಭೂತಿ ತಪ್ಪುತ್ತಿತ್ತು. ಮಾತ್ರವಲ್ಲ, ಅವರ ಅದ್ಭುತ ಶಕ್ತಿ ಒಬ್ಬ ಮನುಷ್ಯನಿಗಾಗಿ ಅಥವಾ ಒಂದು ಪಕ್ಷಕ್ಕಾಗಿ ವ್ಯಯವಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಜೋಷಿ ಬಹು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಇದರಿಂದ ಹಲವರು ಅವರ ವಿರೋಧಿಗಳಾದದ್ದೂ ಉಂಟು. ಒಮ್ಮೆ ಅದು ರಾಜಕೀಯ ಪಕ್ಷ, ಜವಳಿ ಕಾರ್ಖಾನೆಗಳ ಕಾರ್ಮಿಕರಿಗೆ ಮುಷ್ಕರ ಹೂಡಲು ಪ್ರೇರೇಪಿಸಿತು. ಕಾರಣ – ಪ್ರತಿಯೊಬ್ಬ ಕೆಲಸಗಾರ ಮೂರು ಮಗ್ಗಗಳನ್ನು ನೋಡಿಕೊಳ್ಳಬೇಕಾಗಿದೆ. ಎರಡೇ ಮಗ್ಗಗಳನ್ನು ವಹಿಸಬೇಕು. ಜೋಷಿ ತಮ್ಮ ಸಂಸ್ಥೆ ಈ ಮುಷ್ಕರಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿ ಈ ರೀತಿ ಕಾರಣವನ್ನು ವಿವರಿಸಿದರು. “ಇತರ ದೇಶಗಳಲ್ಲಿ ಹುಡುಗಿಯರೂ ಮೂರು ಮಗ್ಗಗಳನ್ನು ನಿರ್ವಹಿಸುವಾಗ ನಮ್ಮ ಕಾರ್ಮಿಕರು ತಾವು ಎರಡೇ ಮಗ್ಗಗಳನ್ನು ನೋಡಿಕೊಳ್ಳಲು ಸಾಧ್ಯ ಎಂದು ಹೇಳಿಕೊಂಡರೆ ಅಪಮಾನ.” ಅವರು ಮತ್ತೊಂದು ಎಚ್ಚರಿಕೆಯನ್ನು ನೀಡಿದರು: “ಅಕ್ಟೋಬರ್ ಅಥವಾ ನವೆಂಬರಿನಲ್ಲಿ ಮಾಲೀಕರು ಕೂಲಿಯನ್ನು ತಗ್ಗಿಸಲಿದ್ದಾರೆ. ಆಗ ಮುಷ್ಕರ ಹೂಡಬೇಕಾ ಗುತ್ತದೆ. ಈಗ ಮುಷ್ಕರ ನಡೆಸಿದರೆ ಆ ಹೊತ್ತಿಗೆ ನಮ್ಮ ಚೈತನ್ಯ ಉಡುಗಿ ಹೋಗಿರುತ್ತದೆ.”

ಜೋಷಿಯವರ ಮಾರ್ಗ, ನಿಲುವು

ಕೆಲಸಗಾರರ ಮುಖಂಡರಾಗಿ ಜೋಷಿಯವರ ಮಾರ್ಗ ವಿಶಿಷ್ಟವಾಗಿತ್ತು. ಅವರದು ಬರಿಯ ಹೋರಾಟ, ಪ್ರತಿಭಟನೆ ಅಲ್ಲ. ಏನು ಆಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಇತ್ತು; ಇದಕ್ಕೆ ಕಾರಣ ಅವರು ಶ್ರಮಪಟ್ಟು ಮಾಡಿದ ಅಧ್ಯಯನ. ಇಂಗ್ಲೆಂಡಿನಲ್ಲಿ ಕಾರ್ಖಾನೆಗಳ ಕಾರ್ಮಿಕರಿಗೆ ಎಂತಹ ಮನೆಗಳನ್ನು ಕಟ್ಟಿಸಿದ್ದಾರೆ, ಮುಂಬಯಿಯಲ್ಲಿ ಕಾರ್ಮಿಕರು ಎಂತಹ ಮನೆಗಳಲ್ಲಿ ವಾಸಿಸುತ್ತಾರೆ ಎಂದು ವಿವರಿಸಿ ಒಂದು ಪುಸ್ತಕವನ್ನೇ ಬರೆದರು. ಮುಂಬಯಿ ಕಾರ್ಮಿಕನ ಮನೆ ಸುಮಾರು ೧೨೦ ರಿಂದ ೧೫೦ ಚದರ ಅಡಿ ಇರುತ್ತದೆ. ಮಹಡಿ ಮೆಟ್ಟಿಲು ಯಾವಾಗ ಬೀಳುತ್ತದೋ ಎನ್ನುವ ಹಾಗಿರುತ್ತದೆ. ಮನೆಯ ಗೋಡೆಗಳೆಲ್ಲ ಹೊಗೆಯಿಂದ ಕಪ್ಪು, ವರ್ಷಗಟ್ಟಲೇ ಅವು ಸುಣ್ಣ ಕಾಣುವುದಿಲ್ಲ. ಮನೆಗೊಂದೇ ಕಿಟಕಿ, ರಾತ್ರಿ ಅದನ್ನು ಮುಚ್ಚಬೇಕು, ನೀರು ಹೋಗಲು ಚರಂಡಿ ಇಲ್ಲ, ಮಳೆ ಬಂದರೆ ರಸ್ತೆಯ ನೀರು ಹಲವು ಮನೆಗಳಿಗೆ ನುಗ್ಗುತ್ತದೆ. ಹೀಗೆ ಅವರು ಅಂಕಿ ಅಂಶಗಳನ್ನು ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದರು., ಕಾರ್ಮಿಕರ ಸ್ಥಿತಿಯನ್ನೂ ಅಗತ್ಯಗಳನ್ನು ವಿವರಿಸಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು, ಪುಸ್ತಕಗಳನ್ನು ಬರೆಯುತ್ತಿದ್ದರು, ಸಮಾಜದ ಮುಖಂಡರನ್ನು ಸೇರಿಸಿ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಮುಷ್ಕರ ನಡೆದರೂ ಸದಾ ನ್ಯಾಯವಾದ ಸಂಧಾನಕ್ಕೆ ಸಿದ್ಧರಾಗಿರುತ್ತಿದ್ದರು. ಕಾರ್ಮಿಕರು ತಮಗೆ ಮುಷ್ಕರ ಮಾಡುವ ಶಕ್ತಿ ಇದೆ ಎಂದು ಮತ್ತೆ ಮತ್ತೆ ಮುಷ್ಕರ ಹೂಡಬಾರದು, ಅನಗತ್ಯವಾಗಿ ಮುಷ್ಕರವನ್ನು ಮುಂದುವರಿಸ ಬಾರದು. ಮುಷ್ಕರದಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ಗಮನಿಸಬೇಕು. ಆದರೆ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವುದು ಅವರ ಮತ್ತು ಅವರ ನಾಯಕರಷ್ಟೇ ಜನರ ಹೊಣೆಯಲ್ಲ ಇಡೀ ಸಮಾಜದ ಹೊಣೆ. ಇದು ಅವರ ನಿಲವು.

ಕಾರ್ಮಿಕರ ಸಂಘಗಳಲ್ಲಿಯೇ ಜೋಷಿಯವರು ಹಲವರು ಸ್ವಾರ್ಥಿಗಳಿಂದ, ಕಾರ್ಮಿಕರನ್ನು ತಮ್ಮ ಪಕ್ಷಕ್ಕಾಗಿ ಬಳಸಲು ಪ್ರಯತ್ನಿಸಿದವರಿಂದ ವಿರೋಧವನ್ನು ಎದುರಿಸಬೇಕಾಯಿತು. ಒಮ್ಮೆ ಒಂದು ಪಕ್ಷದವರು, ಜೋಷಿಯವರು ಹಿಂದುಗಳು, ಮುಸ್ಲಿಮ್ ಕಾರ್ಮಿಕರು ಅವರ ಮಾತನ್ನು ಕೇಳಬಾರದು ಎಂದು ಉಪದೇಶಿಸಿದರು. ಆದರೆ ಯಾವ ಕೆಲಸಗಾರರೂ ಈ ಹಿತಶತ್ರುಗಳ ಮಾತನ್ನು ಕೇಳಲಿಲ್ಲ. ಜೋಷಿಯವರು ಅಂತರರಾಷ್ಟ್ರೀಯ ಸಮ್ಮೇಳನಗಳಿಗೆ ಪ್ರತಿನಿಧಿಗಳಾಗಿ ಹೋಗಲು ಮುಸ್ಲಿಮರು, ಹರಿಜನರು, ಅಲ್ಪ ಸಂಖ್ಯಾತರ ಪ್ರತಿನಿಧಿಗಳನ್ನೂ ದೇಶದ ಬೇರೆ ಬೇರೆ ಪ್ರದೇಶಗಳವರನ್ನೂ ಆರಿಸುತ್ತಿದ್ದರು, ೧೯೨೬ರಲ್ಲಿ ಇಂಗ್ಲೆಂಡಿನಲ್ಲಿ ಕಾರ್ಮಿಕರ ಮುಷ್ಕರವಾದಾಗ ಭಾರತದ ಕಾರ್ಮಿಕರಿಂದ ಆರು ನೂರು ಪೌಂಡುಗಳಷ್ಟು ಹಣವನ್ನು ಸಂಗ್ರಹಿಸಿ ಇಂಗ್ಲೆಂಡಿನ ಕಾರ್ಮಿಕರಿಗೆ ಕಳುಹಿಸಿಕೊಟ್ಟರು.

ಶಾಸನ ಸಭೆಯಲ್ಲೂ ಕಾರ್ಮಿಕರ ಬಂಧು

೧೯೨೧ರಲ್ಲಿ ಸರ್ಕಾರ ಜೋಷಿಯವರನ್ನು ಕೇಂದ್ರ ಶಾಸನ ಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಿತು. ಸರ್ಕಾರ ತಮ್ಮನ್ನು ನಾಮಕರಣ ಮಾಡಿದರೂ ತಾವು ಸ್ವತಂತ್ರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇರಬೇಕು, ತಾವು ಸರ್ಕಾರದ ಕೈಗೊಂಬೆಯಲ್ಲ. ತಮಗೆ ಅಗತ್ಯ ಕಂಡರೆ ತಾವು ಸರ್ಕಾರದ ವಿರುದ್ಧ ವೋಟು ಮಾಡಬಹುದು ಎಂಬುದನ್ನು ಸ್ಪಷ್ಟಪಡಿಸಿ ಅವರು ಶಾಸನ ಸಭೆಯನ್ನು ಪ್ರವೇಶಿಸಿದರು.

ಶಾಸನ ಸಭೆಯ ಸದಸ್ಯರಾಗಿ ಜೋಷಿ ಅವರು ಕಾರ್ಮಿಕರ ಸೇವೆಯನ್ನು ಮುಂದುವರಿಸಿದರು. ಸರ್ಕಾರ ಮಾಡಿದ ಅನ್ಯಾಯಗಳತ್ತ ಬೆರಳುಮಾಡಿ ತೋರಿಸಿದರು. ಭಾರತ ಸರ್ಕಾರ ಮಾಡಿದ ನಿಯಮಗಳು ಇಂಗ್ಲೆಂಡಿನ ಲ್ಯಾಂಕಾಷೈರಿನ ಕಾರ್ಖಾನೆಗಳಿಗೆ ಸಹಾಯವಾಗು ವಂತಹವು ಎಂದು ವಿವರಿಸಿದರು. ಒಮ್ಮೆ ಅವರು ಸರ್ಕಾರದ ವಿರುದ್ಧ ವೋರ್ಟ್ ಮಾಡಿದಾಗ ಹಣಕಾಸು ಮಂತ್ರಿಯಾಗಿದ್ದ ಜೇಮ್ಸ್ ಗ್ರೆಗ್ “ಸರ್ಕಾರದ ನಾಮಕರಣ ಸದಸ್ಯರು ಸರ್ಕಾರದ ಪರ ವೋಟ್ ಮಾಡಬೇಕು” ಎಂದರು ಜೋಷಿಯವರು. ತಾವು ರಾಜೀನಾಮೆ ಕೊಡಲು ಸಿದ್ಧವೆಂದೂ ಆದರೆ ಹೇಳಿಕೆ ಯೊಂದನ್ನು ಕೊಟ್ಟು ಕಾರಣಗಳನ್ನು ವಿವರಿಸುವುದಾಗಿಯೂ ಹೇಳಿದರು. ಮಂತ್ರಿ ಹೆದರಿ ತೆಪ್ಪಗಾದ. ಕಾರ್ಮಿಕರಿಂದ ವಾರಕ್ಕೆ ೪೮ ಗಂಟೆಗಳಿಗಿಂತ ಹೆಚ್ಚು ಕೆಲಸ ತೆಗೆಯದಂತೆ ಕಾನೂನನ್ನು ಮಾಡಬೇಕು ಎಂದು ಜೋಷಿ ವಾದಿಸಿದರು. ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಪ್ರತ್ಯೇಕ ವಿಭಾಗವನ್ನು ತೆರೆಯಬೇಕೆಂದು ಸಲಹೆ ಮಾಡಿದರು. ಚಹಾ ತೋಟಗಳಲ್ಲಿ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಪ್ರತಿವರ್ಷವೂ ಅವರು ಶಾಸನ ಸಭೆಯಲ್ಲಿ ಒತ್ತಾಯಮಾಡುತ್ತಿದ್ದರು.

ಪ್ರಗತಿಪರ ಮನೋಭಾವ

ಜೋಷಿಯವರು ಕೇಂದ್ರ ಶಾಸನ ಸಭೆಯ ಸದಸ್ಯರಾಗಿ ಪ್ರಗತಿಪರವಾದ ಎಲ್ಲ ಕ್ರಮಗಳಿಗೆ ಬೆಂಬಲ ಕೊಟ್ಟರು. ಅವರ ತಂದೆ ಪುರೋಹಿತರಾಗಿದ್ದರು. ಅವರದು ಸಂಪ್ರದಾಯಕ್ಕೆ ಮನ್ನಣೆ ಕೊಡುವ ಮನೆತನ. ಆದರೆ ಬೇರೆ ಬೇರೆ ಜಾತಿಗಳಿಗೆ ಅಥವಾ ಧರ್ಮಗಳಿಗೆ ಸೇರಿದವರು ಮದುವೆ ಮಾಡಿಕೊಳ್ಳಲು ಅವಕಾಶ ಕೊಡುವ ಮಸೂದೆಗಳಿಗೆ ಬೆಂಬಲ ಕೊಟ್ಟರು. ಆಗ ಹೆಂಗಸರು ಶಾಸನಸಭೆಯ ಸದಸ್ಯರಾಗುವಂತಿರಲಿಲ್ಲ. ಈ ಅನ್ಯಾಯವನ್ನು ಸರಿಪಡಿಸುವ ಮಸೂದೆಯನ್ನು ಸ್ವಾಗತಿಸಿದರು. ಹಲವು ಸಂದರ್ಭಗಳಲ್ಲಿ ಕಮ್ಯೂನಿಸ್ಟರು ಅವರನ್ನು ವಿರೋಧಿ ಸಿದ್ದರು. ಆದರೆ ಭಾರತ ಸರ್ಕಾರ ಕಮ್ಯೂನಿಸ್ಟರ ಮೇಲೆ ನಿಬಂಧ ವನ್ನು ಹೇರುವ ಮಸೂದೆಯನ್ನು ಶಾಸನಸಭೆಯ ಮುಂದೆ ತಂದಾಗ ಜೋಷಿಯವರು ತೀವ್ರವಾಗಿ ವಿರೋಧಿಸಿದರು.

ಎಲ್ಲ ದೇಶಗಳ ಕಾರ್ಮಿಕರ ಒಳಿತಿಗಾಗಿ

ಭಾರತದ ಪರವಾಗಿ ಜೋಷಿಯವರು ಹಲವು ಅಂತರರಾಷ್ಟೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಎಲ್ಲ ಕಡೆ ಅವರು ನಿಸ್ಸಂಕೋಚವಾಗಿ ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಶ್ರಮಿಸಿದರು. ಅವರು ಭಾರತದ ಕಾರ್ಮಿಕರ ಪ್ರತಿನಿಧಿ ಎಂದಷ್ಟೇ ಕೆಲಸ ಮಾಡಿದವರಲ್ಲ. ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ತುಳಿತಕ್ಕೆ ಸಿಕ್ಕ ಎಲ್ಲ ಕಾರ್ಮಿಕರ ವಾಣಿಯಾದರು. ಈ ಖಂಡಗಳ ದೇಶಗಳಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳು ತಮ್ಮ ಕಚೇರಿಗಳನ್ನು ತೆರೆಯಬೇಕು, ಕಾರ್ಮಿಕರ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಿಬೇಕು. ಈ ಸಂಸ್ಥೆಗಳ ತಮ್ಮ ಕಚೇರಿಗಳೆಲ್ಲ ವಾಷಿಂಗ್‌ಟನ್, ಲಂಡನ್, ಪ್ಯಾರಿಸ್, ಜಿನಿವಾಗಳಲ್ಲಿ ಏಕೆ, ಭಾರತದಲ್ಲಿ ಏಕಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಜಗತ್ತಿನಲ್ಲಿ ಎಲ್ಲೂ ಹದಿನಾಲ್ಕು ವರ್ಷಕ್ಕೆ ಕಡಿಮೆ ವಯಸ್ಸಿನ ಮಕ್ಕಳು ವಾರಕ್ಕೆ ಮೂವತ್ತು ಗಂಟೆಗಿಂತ ಹೆಚ್ಚುಕೆಲಸ ಮಾಡದಂತೆ ಶಾಸನವಾಗಬೇಕು ಎಂದು ಸಲಹೆ ಮಾಡಿದರು.

ಭಾರತವು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ತೀವ್ರಗೊಳಿಸಿದ ಮೇಲೆ ಬ್ರಿಟನ್ ಭಾರತದ ಪ್ರತಿನಿಧಿಗಳನ್ನು ಲಂಡನ್ನಿಗೆ ಕರೆಸಿ ಸಮಾಲೋಚನೆ ನಡೆಸಿತು. ಈ ಸಮ್ಮೇಳನಗಳನ್ನು ‘ಗುಂಡು ಮೇಜಿನ ಪರಿಷತ್ತು’ ಎಂದು ಕರೆಯುವುದು ವಾಡಿಕೆ. ಮೂರು ಸಮ್ಮೇಳನಗಳಿಗೂ ಜೋಷಿಯವರನ್ನು ಆಹ್ವಾನಿಸಲಾಯಿತು. ಆಗಿನ ಕಾಲದಲ್ಲಿ ಆಸ್ತಿ ಇದ್ದವರು, ವರಮಾನ ತೆರಿಗೆ ಕೊಡುತ್ತಿದ್ದವರು ಇವರಿಗೆ ಮಾತ್ರ ವೋಟು ಮಾಡುವ ಹಕ್ಕಿತ್ತು. ಜೋಷಿಯವರು ಆಸ್ತಿ ಇರಲಿ, ಇಲ್ಲದಿರಲಿ, ದೇಶದ ಪ್ರಜೆಗಳಿಗೆಲ್ಲ ಎಂತಹ ಸರ್ಕಾರ ಆಳುತ್ತದೆ ಎನ್ನುವುದು ಮುಖ್ಯ ಎಂದು ಸಾರಿ ವಯಸ್ಕರ ಮತದಾನಕ್ಕಾಗಿ ಒತ್ತಾಯ ಮಾಡಿದರು.

ನೆಚ್ಚಿನ ಸಂಸ್ಥೆಯ ಸಂಬಂಧ ಕಡೆಯಿತು

೧೯೩೯ರಲ್ಲಿ ಜೋಷಿಯವರಿಗೆ ಒಂದು ಕಠಿಣವಾದ ಪರೀಕ್ಷೆ ಪ್ರಾಪ್ತವಾಯಿತು. ಎರಡನೆಯ ಮಹಾಯುದ್ಧ ಪ್ರಾರಂಭವಾದಾಗ ಭಾರತವನ್ನು ಕೇಳದೆಯೇ ಬ್ರಿಟಿಷ್ ಸರ್ಕಾರ ಈ ದೇಶವನ್ನು ಯುದ್ಧಕ್ಕೆ ಸೆಳೆಯಿತು. ಇದನ್ನು ಪ್ರತಿಭಟಿಸಿ ಹಲವು ಪ್ರಾಂತಗಳಲ್ಲಿದ್ದ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ಕೊಟ್ಟವು. ಭಾರತದಲ್ಲಿ ಭಾರತೀಯರ ಸರ್ಕಾರ ಬಾರದೆ ಭಾರತದ ಸಹಕಾರದ ಪ್ರಶ್ನೆಯೇ ಇಲ್ಲ ಎಂದರು ದೇಶದ ನಾಯಕರು. ಜೋಷಿಯವರ ಅಭಿಪ್ರಾಯವೂ ಅದೇ. ಆದರೆ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಪ್ರಮುಖರು ಭಾರತದಲ್ಲಿ ರಾಷ್ಟ್ರೀಯ ಸರ್ಕಾರದ ಸ್ಥಾಪನೆ ಆಗುವುದು ಅಗತ್ಯ, ಆದರೆ ಯುದ್ಧ ಕಾಲದಲ್ಲಿ ಬ್ರಿಟನಿಗೆ ನೆರವು ನೀಡಲು ಅದನ್ನು ಷರತ್ತನ್ನಾಗಿ ಮಾಡಕೂಡದು ಎಂದು ಅಭಿಪ್ರಾಯಪಟ್ಟರು. ಜೋಷಿಯವರಿಗೂ ಅವರಿಗೂ ಈ ವಿಷಯದಲ್ಲಿಯೂ ಇತರ ಕೆಲವು ವಿಷಯಗಳಲ್ಲಿಯೂ ಭಿನ್ನಾಭಿಪ್ರಾಯ ಬಂದು ೧೯೪೦ರಲ್ಲಿ ಜೋಷಿ ಸಂಸ್ಥೆಯಿಂದ ನಿವೃತ್ತರಾದರು.

ಜೋಷಿಯವರು ಕೇಂದ್ರ ಶಾಸನಸಭೆಯಲ್ಲಿ ‘ನಮಗೆ ಜರ್ಮನಿಯ ಸರ್ವಾಧಿಕಾರವೂ ಬೇಡ, ಇಂಗ್ಲೆಂಡಿನ ಸಾಮ್ರಾಜ್ಯಷಾಹಿಯೂ ಬೇಡ’ ಎಂದು ಘೋಷಿಸಿದರು. ಸರ್ಕಾರವು ಯಾರನ್ನಾದರೂ ಬಂಧಿಸುವ ಅಧಿಕಾರ ಪಡೆಯಲು ‘ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್’ ಮಸೂದೆಯನ್ನು ಶಾಸನಸಭೆಯ ಮುಂದೆ ಇಟ್ಟಾಗ ಉಗ್ರವಾಗಿ ಖಂಡಿಸಿದರು. ಗಾಂಧೀಜಿಯವರನ್ನೂ ಸಾವಿರಾರು ಜನರನ್ನೂ ಸರ್ಕಾರ ಬಂಧಸಿದಾಗ ‘ಗಾಂಧೀಜಿ ಮತ್ತು ಅವರ ಹಿಂಬಾಲಕರ ಮಾರ್ಗ ನಿಮಗೆ ಹಿಡಿಸದಿರಬಹುದು, ಆದರೆ ಸ್ವಾತಂತ್ರ್ಯ ಗಳಿಸುವುದು ಅವರ ಹಕ್ಕು’ ಎಂದು ಘೋಷಿಸಿದರು.

ವಿಧಿಯ ಮುಳಿಸು

ಕಾರ್ಮಿಕರಿಗಾಗಿ, ದೇಶಕ್ಕಾಗಿ ದುಡಿಯುತ್ತಿದ್ದ ಜೋಷಿ ಯವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಕಂಡರು. ೧೯೨೬ರಲ್ಲಿ ಅವರ ಮಗ ಬೆಂಕಿಯ ಅಪಘಾತಕ್ಕೆ ಒಳಗಾದ, ಹಲವಾರು ತಿಂಗಳ ಕಾಲ ಅವನು ಆಸ್ಪತ್ರೆಯಲ್ಲಿರ ಬೇಕಾಯಿತು. ಅವನಿನ್ನೂ ಆಸ್ಪತ್ರೆಯಲ್ಲಿದ್ದಾಗಲೇ ಜೋಷಿಯವರ ಹೆಂಡತಿ ತೀರಿಕೊಂಡರು. ಆಕೆ ತೀರಿಕೊಂಡ ಕೆಲವೇ ಗಂಟೆಗಳಲ್ಲಿ, ಜೋಷಿಯವರು ನಿರ್ವಹಿಸುತ್ತಿದ್ದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಅಚ್ಚುಕೂಟಕ್ಕೆ ಬೆಂಕಿ ಹತ್ತಿ ಅಲ್ಲಿದ್ದ ಕಾಗದವೆಲ್ಲ ಸುಟ್ಟು ಹೋಯಿತು, ಯಂತ್ರಗಳೂ, ಅಚ್ಚಿನ ಮೊಳೆಗಳು ಹಾಳಾದವು. ೧೯೨೭ರಲ್ಲಿ ಅವರ ಅಣ್ಣ ನಿಧನರಾದರು. ಇದೇ ಕಾಲದಲ್ಲಿ ಜೋಷಿಯವರೂ ಹಲವು ತಿಂಗಳಕಾಲ ಕಾಯಿಲೆ ಬಿದ್ದರು. ಕಾಯಿಲೆಯಾಗಿದ್ದಾಗಲೇ ಅವರು ಫಾಸೆಟ್ ಕಮಿಟಿಯ ಮುಂದೆ ಹಾಜರಾಗಿ ಕಾರ್ಮಿಕರ ಪರವಾಗಿ ವಾದಿಸಬೇಕಾಯಿತು. ೧೯೩೪ರಲ್ಲಿ ಅವರ ಮೊದಲ ಮಗಳು ತೀರಿಕೊಂಡಳು. ಆಗ ಅವಳಿಗೆ ೨೮ ವರ್ಷ. ಎಲ್ಲ ದುಃಖವನ್ನು ನುಂಗಿಕೊಂಡು ಅವರು ತಮ್ಮ ಕೆಲಸವನ್ನು ಮುಂದುವರಿಸಿದರು.

ನಿವೃತ್ತರಾದರೂ……

೧೯೪೯ರ ಹೊತ್ತಿಗೆ ಜೋಷಿಯವರಿಗೆ ವಯಸ್ಸು ಹತ್ತಿರ ಹತ್ತಿರ ಎಪ್ಪತ್ತು ವರ್ಷ, ಅರೋಗ್ಯವೂ ಅಷ್ಟು ಸಮರ್ಪಕ ವಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದುದರಿಂದ ಕಾರ್ಮಿಕರ ಸ್ಥಿತಿ ಉತ್ತಮವಾಗುವ ಆಶಾಕಿರಣ ಕಾಣಿಸಿಕೊಂಡಿತು. ಜೋಷಿ ಕಾರ್ಮಿಕರ ಚಳವಳಿಯ ನಾಯಕತ್ವದಿಂದ ನಿವೃತ್ತರಾದರು. ಆದರೆ ಕಾರ್ಮಿಕರ ಸ್ಥಿತಿ ಉತ್ತಮವಾಗಬೇಕೆಂಬ ಕಳಕಳಿ ಹಾಗೆಯೇ ಇದ್ದಿತು. ೧೯೫೧ರಲ್ಲಿ ಕರಾಚಿಯಲ್ಲಿ ನಡೆದ ಮೊದಲನೆಯ ಏಷ್ಯನ್ ಟ್ರೇಡ್ ಯೂನಿಯನ್ ಕಾನ್‌ಫರೆನ್ಸಿಗೆ ಹೋಗಿ ಬಂದರು. ಅನೇಕ ಮಂದಿ ಕಾರ್ಮಿಕ ನಾಯಕರು ಅವರ ಬಳಿ ಮಾರ್ಗದರ್ಶನಕ್ಕಾಗಿ ಬರುತ್ತಲೇ ಇದ್ದರು. ಮೊದಲಿನಿಂದ ಸಹಕಾರ ಸಂಸ್ಥೆಗಳಲ್ಲಿ ಅವರಿಗೆ ಆಸಕ್ತಿ. ಈಗ ಸ್ವಲ್ಪ ಬಿಡುವು ದೊರೆಯಿತೆಂದು ಎಪ್ಪತ್ತು ವರ್ಷದ ಈ ಹಿರಿಯರು ಹಲವು ಸಹಕಾರ ಸಂಸ್ಥೆಗಳಿಗೆ ನೆರವಾದರು. ಹಿಂದೂ ಸಮಾಜದ ಕುಂದುಕೊರತೆಗಳನ್ನು ಸರಿಪಡಿಸಲು ದುಡಿಯುತ್ತಿದ್ದ ಮಹಾರಾಷ್ಟ್ರ ಸೋಷಿಯಲ್ ಕಾನ್‌ಫರೆನ್ಸಿನಲ್ಲಿ ಆಸಕ್ತಿ ವಹಿಸಿ ಅದಕ್ಕೆ ಹೊಸ ಚೈತನ್ಯ ನೀಡಿದರು.

ಸುಮಾರು ನಲವತ್ತು ವರ್ಷಗಳ ಕಾಲ ಹಲವು ಕ್ಷೇತ್ರಗಳಲ್ಲಿ ತಮ್ಮ ದೇಶ ಬಾಂಧವರಿಗಾಗಿ ಶ್ರಮಿಸಿದ ಜೋಷಿಯವರಿಗೆ ಹಲವು ಸಂಘಸಂಸ್ಥೆಗಳು ಗೌರವ ಸಲ್ಲಿಸಿದವು. ೧೯೫೦ರಲ್ಲಿ ಗೋಖಲೆ ಎಜ್ಯುಕೇಶನ್ ಸೊಸೈಟಿ ಅವರನ್ನು ಸನ್ಮಾನಿಸಿತು. ೧೯೫೨ರಲ್ಲಿ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅವರಿಗೆ ಹದಿನೈದು ಸಾವಿರ ರೂಪಾಯಿಗಳ ನಿಧಿಯನ್ನು ಸಮರ್ಪಿಸಿತು.

೧೯೫೫ರ ಮೇ ೨೪ರಂದು ಅವರ ಆಪ್ತ ಸ್ನೇಹಿತ ರೊಬ್ಬರು ತೀರಿಕೊಂಡರು. ಅವರ ಅಂತ್ಯಕ್ರಿಯೆಗೆ ಜೋಷಿ ಹೋಗಿಬಂದರು. ಸ್ನೇಹಿತರ ಸಾವು ಅವರಿಗೆ ತುಂಬಾ ಆಘಾತವಾಯಿತು. ಮೇ ೩೦ ಜೋಷಿ ಅವರು ಆರಾಮ ಕುರ್ಚಿಯಲ್ಲಿ ಕುಳಿತಿದ್ದಂತೆ ಪ್ರಾಣ ಹೋಯಿತು.

ಕೆಲವು ಮಾತುಗಳು

ಜೋಷಿ ಅವರ ಇಡೀ ಜೀವನ ಕಾರ್ಮಿಕರ ಸ್ಥಿತಿಯನ್ನು ಉತ್ತಮಗೊಳಿಸುವ ಕಾರ್ಯಕ್ಕೆ ಮುಡಿಪಾಯಿತು. ಆದರೆ ಅವರು ಕ್ರಾಂತಿಕಾರಿಗಳಲ್ಲ. ಕ್ರಾಂತಿ ಎಂದರೆ ಗೊಂದಲ, ಕ್ಷೋಭೆ, ಇದರಿಂದ ಇಡೀ ಸಮಾಜಕ್ಕೆ ಕಷ್ಟ ಎಂದು ಅವರ ನಂಬಿಕೆ. ಸಮಾಜದಲ್ಲಿ ದೋಷಗಳಿವೆ, ಅನ್ಯಾಯಗಳಿವೆ, ಇವನ್ನು ಸರಿಪಡಿಸಬೇಕು, ಎಲ್ಲಿ ತಪ್ಪಿದೆ ಎಂಬುದನ್ನು ಸಮಾಜದ ಗಮನಕ್ಕೆ ತರಬೇಕು, ಇದಕ್ಕಾಗಿ ಲೇಖನಗಳು, ಸಭೆಗಳು, ಪುಸ್ತಕಗಳು ಎಲ್ಲವನ್ನೂ ಬಳಸಿಕೊಳ್ಳಬೇಕು. ಇದು ಅವರ ಕಾರ್ಯವಿಧಾನ. ಕಾರ್ಮಿಕರು ತಾವು ಸಮಾಜದ ಭಗ ಎಂಬುದನ್ನು ಮರೆಯಬಾರದು, ಕಾರ್ಮಿಕ ವರ್ಗ ತನ್ನ ಬಹು ಮುಖ್ಯವಾದ ಅಂಗಗಳಲ್ಲಿ ಒಂದು ಎನ್ನುವುದನ್ನು ಸಮಾಜ ಮರೆಯಬಾರದು. ಕಾರ್ಮಿಕರ ತಾಳ್ಮೆಗೂ ಮಿತಿ ಉಂಟು. ಅವರೇ ಹೇಳುತ್ತಿದ್ದರು, “ನಾನು ಕ್ರಾಂತಿಕಾರಿಯಲ್ಲ, ಬದಲಾವಣೆಗಳು ಕ್ರಮವಾಗಿ ಆಗಬೇಕು ಎಂದು ನನ್ನ ನಂಬಿಕೆ. ಆದರೆ ಈ ಕ್ರಮೇಣ ಎನ್ನುವುದು ಅತಿನಿಧಾನವಾಗಬಾರದು”.

ಜೋಷಿಯವರು ಒಮ್ಮೆ ಕಾರ್ಮಿಕರ ಪರವಾಗಿ ಚಾರ್ಲ್ಸ್ ಇನ್ಸ್ ಎಂಬ ಮಂತ್ರಿಗಳಿಗೆ ಒಂದು ಕಾಗದ ಬರೆದರು. ಇದನ್ನು ಕೇಂದ್ರ ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಮಂತ್ರಿ ಹೇಳಿದರು : ಈವರೆಗೆ ನನಗೆ ಜೋಷಿಯವರ ವಿಷಯದಲ್ಲಿ ಬಹು ಒಳ್ಳೆಯ ಅಭಿಪ್ರಾಯವಿತ್ತು. ಈ ಕಾಗದವನ್ನು ಬರೆದು ಅವರು ಅದನ್ನು ಕಳೆದುಕೊಂಡರು. “ಜೋಷಿ ಉತ್ತರ ಕೊಟ್ಟರು, “ಇನ್ಸರಂತಹ ಪ್ರಭಾವಶಾಲಿ ವ್ಯಕ್ತಿಯ ಒಳ್ಳೆಯ ಅಭಿಪ್ರಾಯವನ್ನು ಕಳೆದುಕೊಂಡುದಕ್ಕೆ ನನಗೆ ವಿಷಾದ ವಾಗುತ್ತದೆ. ಆದರೆ ಅವರಿಗೆ ನಾನು ಹೇಳಬೇಕಾದ ಒಂದು ಮಾತಿದೆ – ಇತರರನ್ನು ಸಂತೋಷಪಡಿಸಬೇಕೆಂದು ನನಗೆ ಇಷ್ಟ. ಆದರೆ ನನ್ನ ಆತ್ಮಸಾಕ್ಷಿಯನ್ನು ಸಂತೋಷಪಡಿಸುವುದು ನನಗೆ ಮುಖ್ಯ.”

ಕೇಂದ್ರ ಶಾಸನ ಸಭೆಯಲ್ಲಿ ಜೋಷಿಯವರು ಕಾರ್ಮಿಕರು, ಬಡವರು ಇವರ ಸ್ಥಿತಿಯನ್ನು ಕುರಿತು ಮತ್ತೆ ಮತ್ತೆ ಮಾತನಾಡುತ್ತಿದ್ದುದನ್ನು ಕೇಳಿ ಒಬ್ಬ ಸದಸ್ಯರು ಎಂದರಂತೆ, ’ಇವರು ಬಡವರನ್ನು ಕುರಿತೇ ಮಾತನಾಡುತ್ತಾರೆ ಬೇರೆ ವಿಷಯ ಇಲ್ಲವೇ? ಜೋಷಿ ಉತ್ತರ ಹೇಳಿದರು. “ಈ ಸದಸ್ಯರಿಗೆ ಬಡವರು ಎಂಬ ಶಬ್ದವನ್ನು ಕೇಳುವುದೇ ಬೇಸರವಾದರೆ ಬಡತನವೇ ಇಲ್ಲದಂತೆ ಮಾಡಿಬಿಡಲಿ. ಆದರೆ ಬಡವರು ಇರುವವರೆಗೆ ಬಡವರ ವಿಷಯ ಕೇಳುವುದು ತಮಗೆ ಬೇಸರ ಎಂದು ಯಾರೂ ಹೇಳದಿರಲಿ, ನಾನಂತೂ ಅವರ ವಿಷಯ ಮಾಡನಾಡುವವನೇ.”