“ನಿಮ್ಮಲ್ಲಿ ಸ್ಥೈರ್ಯವಿದೆ, ಧೈರ್ಯವಿದೆ. ನಿಮ್ಮಲ್ಲಿ ತೇಜಸ್ಸಿದೆ, ಶಕ್ತಿಯಿದೆ. ನಿಮ್ಮಲ್ಲಿ ಅಭಿವೃದ್ಧಿ ಹೊಂದ ಬೇಕೆಂಬ ಉತ್ಸಾಹವಿದೆ. ಆದರೂ ನೀವು ಹಿಂದೆ ಉಳಿದಿದ್ದೀರಿ; ಏಕೆ? ನಮ್ಮ ಜನ ಇಂದು ವೈಯಕ್ತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಶೀಲವನ್ನು ಕಳೆದುಕೊಳ್ಳುತ್ತಿದ್ದಾರೆ. ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಸಂಯಮದಿಂದ ಕೂಡಿದ ವ್ಯವಸ್ಥಿತ ಸಾಂಘಿಕ ಪ್ರಯತ್ನದಲ್ಲಿ ಹಿಂದೆ ಬಿದ್ದಿದ್ದಾರೆ.”

– ಇದನ್ನು ನುಡಿದವರು ಡಾಕ್ಟರ್ ನಾರಾಯಣ ಸುಬ್ಬರಾವ್ ಹರ್ಡೀಕರ್. ೧೯೭೩ ರ ಮೇ ೭ ರಂದು ಅವರು ೮೫ ನೆಯ ವರ್ಷಕ್ಕೆ ಕಾಲಿಟ್ಟರು. ಅರವತ್ತು ವರ್ಷಗಳಿಗೂ ಹೆಚ್ಚಿನ ಕಾಲ ಭಾರತದ ಯುವ ಜನಸ್ತೋಮಕ್ಕೆ ಸ್ಫೂರ್ತಿಯಂತಿದ್ದ ಅವರು ಅಂದು ನೀಡಿದ ಸಂದೇಶ ಮೇಲಿನದು; ರಾಷ್ಟ್ರಕ್ಕೆ ಎಚ್ಚರಿಕೆಯ ಮಾತು!

ಮನೆತನ

ಹರ್ಡೀ, ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಗೆ ಸೇರಿದ ಚಿಪಳೂಣ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲೀ ‘ಹರ್ಡೀಕರ’ ಮನೆತನ ಎಂಬುದಿತ್ತು. ಆ ಮನೆತನದ ಪೂರ್ವಜರಲ್ಲಿ ಒಬ್ಬರು ಕಾರಣಾಂತರಗಳಿಂದ ಧಾರವಾಡ ಜಿಲ್ಲೆಯ ತಿಳಿವಳ್ಳಿ ಎಂಬ ಊರಿಗೆ ಹೋಗಿ ನೆಲೆಸಿದರು. ಅವರ ಪೈಕಿ, ಸುಬ್ಬರಾವ್ ಹರ್ಡೀಕರ್ ಎನ್ನುವವರು ಧಾರವಾಡದಲ್ಲಿ ನೆಲೆಸಿದರು.

ಸುಬ್ಬರಾವ್ ಹರ್ಡೀಕರರ ಮಡದಿಯ ಹೆಸರು ಯಮುನಾ ಬಾಯಿ. ಆ ದಂಪತಿಗಳಿಗೆ ಹನ್ನೆರಡು ಮಕ್ಕಳಾದರು. ನಾರಾಯಣ ಎಂಬವನು ೧೮೮೯ ರ ಮೇ ೭ರಂದು ಹುಟ್ಟಿದ. ಐದು ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಕಾಲವಾದರು. ೧೮೯೬ ರಲ್ಲಿ ಸುಬ್ಬರಾವ್ ಕಾಲವಾದರು.

ಹಿರಿಯ ಮಗನಿಗೆ ತಂದೆಯ ಕೆಲಸವೇ ದೊರಕಿತು.  ಅವನ ಅಲ್ಪ ಸಂಬಳದಿಂದಲೇ ಸಂಸಾರವೆಲ್ಲ ನಡೆಯ ಬೇಕಾಗಿತ್ತು. ಸ್ವಲ್ಪ ದಿನಗಳಲ್ಲಿಯೇ ಅವನೂ ಮರಣ ಹೊಂದಿದ. ಎರಡನೆಯ ಮಗ ಬಿಜಾಪುರದಲ್ಲಿ ಉಪಾಧ್ಯಾಯ ವೃತ್ತಿಯಲ್ಲಿದ್ದ. ಯಮುನಾ ಬಾಯಿ ನಾರಾಯಣನನ್ನು ಬಿಜಾಪುರದ ಮಗನ ಮನೆಗೆ ವಿದ್ಯಾಭ್ಯಾಸಕ್ಕೆ ಕಳಿಸಿದರು. ಇನ್ನು ಕೆಲವರನ್ನು ಕಲಘಟಗಿ ಎಂಬ ಊರಿಗೆ ಕಳಿಸಿದರು. ಅಲ್ಲಿ ಅವರ ಅಕ್ಕ ಧೋಂಡೂ ಬಾಯಿ ಶೇವಡೆ ಎಂಬಾಕೆ ಇದ್ದರು. ಪುಣೆ ಯಲ್ಲಿ ಒಬ್ಬ ಮಗ ಕಾಂಪೌಂಡರ್ ಕೆಲಸದಲ್ಲಿ ಇದ್ದ. ನಾರಾಯಣನನ್ನು ಬಿಜಾಪುರಕ್ಕೆ ಕಳಿಸಿದ ಮೇಲೆ, ಇತರ ಮಕ್ಕಳನ್ನು ಕರೆದುಕೊಂಡು ಯಮುನಾ ಬಾಯಿ ಪುಣೆಗೆ ಹೋದರು. ಆದರೆ, ಏನು ವಿಚಿತ್ರವೋ ಬಿಜಾಪುರದಲ್ಲಿ ಇದ್ದ ಮಗನೂ (ನಾರಾಯಣನ ಅಣ್ಣ) ಪ್ಲೇಗು ಮಾರಿಗೆ ತುತ್ತಾದ.

ವಾತ್ಯಲ್ಯದ ಆಶ್ರಯ

ನಾರಾಯಣನಿಗೆ ನೆಲೆ ಇಲ್ಲವಾಯಿತು. ಅವನನ್ನು ತಮ್ಮ ಬಳಿ ಇಟ್ಟುಕೊಳ್ಳಲು ಧೋಂಡೂ ಬಾಯಿ ಶೇವಡೆ ಒಪ್ಪಿದರು; ಅವನು ಚುರುಕಿನ ಹುಡುಗನಾಗಿದ್ದ. ಅವನ ಅದೃಷ್ಟ, ಅವನಿಗೆ ವಾತ್ಸಲ್ಯದ ಆಶ್ರಯ ದೊರಕಿತು. ಧೋಂಡೂ ಬಾಯಿಯ ಮಗ ಭಾವೂರಾಯರೂ ಅವರ ಪತ್ನಿ ರಮಾ ಬಾಯಿಯೂ ನಾರಾಯಣನನ್ನು ತಮ್ಮ ಸ್ವಂತ ಮಗನಂತೆಯೇ ಬೆಳೆಸಿದರು. ನಾರಾಯಣ, ಶೇವಡೆ ಮನೆತನದವನೇ ಆಗಿಬಿಟ್ಟ.

೧೯೦೬ರಲ್ಲಿ ನಾರಾಯಣನಿಗೆ ೧೭ ವರ್ಷ ತುಂಬಿತು. ಪುಣೆಯ ಮಗನ ಮನೆಯಲ್ಲಿದ್ದ ಯಮುನಾ ಬಾಯಿ ಬಡತನದಲ್ಲಿಯೇ ಕಣ್ಮುಚ್ಚಿದರು. ಶೇವಡೆ ಮನೆತನದವರು ವ್ಯಾಪಾರ, ವ್ಯವಸಾಯ ಮಾಡಿಕೊಂಡು ಚೆನ್ನಾಗಿ ಬದುಕುತ್ತಿದ್ದರು. ಅವರು ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಹುಬ್ಬಳ್ಳಿಯಲ್ಲಿ ಮನೆ ಮಾಡಿ, ಅಲ್ಲಿಯೂ ವ್ಯಾಪಾರ ನಡೆಸುತ್ತಿದ್ದರು. ನಾರಾಯಣನ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗಿತ್ತು.

‘ಕೇಸರೀ’ ಪ್ರಭಾವ

ನಾರಾಯಣ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಯಾವುದಾದರೂ ಸರ್ಕಾರೀ ಕೆಲಸಕ್ಕೆ ಸೇರಬೇಕೆಂಬುದು ಭಾವೂರಾಯರ ಆಸೆಯಾಗಿತ್ತು. ಆದರೆ ಅವನ ಸ್ವಭಾವವೇ ಬೇರೆಯಾಗಿತ್ತು. ಅದು ದೇಶದ ಗಹನ ವಿಚಾರಗಳ ಕಡೆ ಒಲಿದಿತ್ತು. ಲೋಕಮಾನ್ಯ ತಿಲಕರು ‘ಕೇಸರೀ’ ಎಂಬ ಮರಾಠೀ ಪತ್ರಿಕೆಯನ್ನು ಹೊರಡಿಸು ತ್ತಿದ್ದರು. ಅದು ದೇಶಾಭಿಮಾನ ಹುಟ್ಟಿಸುವ ಪತ್ರಿಕೆ ಯಾಗಿತ್ತು. ಅದನ್ನು ನಾರಾಯಣ ತಪ್ಪದೆ ಓದುತ್ತಿದ್ದ. ಅವನು ತಿಲಕರನ್ನು ಮಹಾನಾಯಕರೆಂದು ಮನಸಾರೆ ಒಪ್ಪಿದ್ದ.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರಿಂದ ಭಾರತವನ್ನು ಬಿಡಿಸಲು ಸ್ವಾತಂತ್ರ್ಯ ಹೋರಾಟ ಹೂಡಿತ್ತು. ಆ ಹೋರಾಟ ‘ಸ್ವದೇಶೀ’, ‘ಪರದೇಶೀ ವಸ್ತು ಬಹಿಷ್ಕಾರ’, ‘ರಾಷ್ಟ್ರೀಯ ಶಿಕ್ಷಣ’ ಎಂಬ ಮೂರು ಕಾರ್ಯಕ್ರಮಗಳಿಂದ ಕೂಡಿದ್ದಿತು. ಹುಬ್ಬಳ್ಳಿಯ ಲ್ಯಾಮಿಂಗ್‌ಟನ್ ಪ್ರೌಢಶಾಲೆ ಯಲ್ಲಿ ಓದುತ್ತಿದ್ದ ನಾರಾಯಣ ಆಂದೋಲನ ಪ್ರಚಾರ ಕಾರ್ಯದಲ್ಲಿ ತೊಡಗಿದ. ಅವನು ತನ್ನ ವಯಸ್ಸಿನ ಬಾಲಕರ ನಾಯಕನಾದ. ‘ಆರ್ಯ ಬಾಲ ಸಭಾ’ ಎಂಬ ಸಂಘ ಸ್ಥಾಪಿಸಿದ. ಒಂದು ಗರಡಿ ಮನೆ, ಒಂದು ವಾಚನಾಲಯ ಆರಂಭ ಮಾಡಿದ ; ಉತ್ಸಾಹದ, ಕೆಚ್ಚಿನ ಕಾರ್ಯಕರ್ತನಾದ. ಜತೆಯವರೆಲ್ಲ ಸೇರಿ ಸರ್ಕಾರ ನಿಷೇಧ ಮಾಡಿದ್ದ ‘ವಂದೇ ಮಾತರಂ’ ಗೀತೆ ಹಾಡುತ್ತಿದ್ದರು. ಪೊಲೀಸರು ಬಂದು ಚದುರಿಸಿದರೆ, ಇನ್ನೊಂದು ಕಡೆ ಸಭೆ ಸಿದ್ಧವಾಗುತ್ತಿತ್ತು. ನಾರಾಯಣನ ನಾಯಕತ್ವದಲ್ಲಿ ದೇಶಪ್ರೇಮಿ ಬಾಲಕರ ಉತ್ಸಾಹ ಅಗಾಧವಾಗಿತ್ತು. ನಾರಾಯಣನ ಹೆಸರು ಹುಬ್ಬಳ್ಳಿಯಲ್ಲಿ ಮನೆಮಾತಾಯಿತು.

ಲೋಕಮಾನ್ಯರ ದರ್ಶನ

ಇದರಿಂದ ನಾರಾಯಣನ ವಿದ್ಯಾಭ್ಯಾಸ ಸಹಜ ವಾಗಿಯೇ ಕುಂಠಿತವಾಯಿತು. ಭಾವೂರಾಯರು ಆಗಾಗ ಎಚ್ಚರಿಕೆ ಕೊಡುತ್ತಿದ್ದರು. ಆದರೆ ಅವನ ಮನಸ್ಸು ದೃಢವಾಗಿತ್ತು. ಆಂದೋಲನದಲ್ಲಿ ತಪ್ಪದೆ ಭಾಗ ವಹಿಸುತ್ತಿದ್ದ.

ಮೆಟ್ರಿಕ್ ಪರೀಕ್ಷೆಯ ಸಮಯ ಬಂದಿತು. ಅದಕ್ಕಾಗಿ ಪುಣೆಗೆ ಹೋದ. ಪರೀಕ್ಷೆ ಮುಗಿಯಿತು. ತನ್ನ ನೆಚ್ಚಿನ ನಾಯಕ ಲೋಕಮಾನ್ಯರನ್ನು ಸಂದರ್ಶನ ಮಾಡ ಬೇಕೆಂಬುದು ಅವನ ಬಹಳ ದಿವಸಗಳ ಆಸೆಯಾಗಿತ್ತು. ಅವರ ಮನೆಗೆ ಹೋದ.

ಲೋಕಮಾನ್ಯರು ಯಾವುದೋ ಪುಸ್ತಕ ಓದುತ್ತಾ ವಿಶ್ರಾಂತಿ ಪಡೆಯುತ್ತಿದ್ದರು. ನಾರಾಯಣ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಎದ್ದುನಿಂತ. ಮಾತು ಹೊರಡದಂತಾಗಿತ್ತು. ಲೋಕಮಾನ್ಯರೇ ಆರಂಭಿಸಿದರು, “ಯುವಕ, ನೀನು ಯಾರು ? ನಿನಗೆ ನನ್ನಿಂದ ಏನಾಗಬೇಕು ?”

ನಾರಾಯಣ ಉತ್ತರಿಸಿದ, “ನಾನು ಒಬ್ಬ ವಿದ್ಯಾರ್ಥಿ. ಹುಬ್ಬಳ್ಳಿಯಿಂದ ಬಂದಿದ್ದೇನೆ. ಈ ವರ್ಷ ಮೆಟ್ರಿಕ್ ಪರೀಕ್ಷೆಗೆ ಕಟ್ಟಿದ್ದೇನೆ. ನಾನು ದೇಶಸೇವೆ ಮಾಡಬೇಕೆಂಬ ಹಂಬಲದಿಂದ ಕೂಡಿದ್ದೇನೆ. ಅದನ್ನು ನಾನು ಯಾವ ರೀತಿ ಮಾಡಬೇಕು ? ದಯಮಾಡಿ ನನಗೆ ಮಾರ್ಗದರ್ಶನ ಮಾಡಿ.” ಆ ಮಹಾ ನಾಯಕ ಹೀಗೆ ಉತ್ತರವಿತ್ತರು: “ಮೊದಲು ನೀನು ವಿದ್ಯಾಭ್ಯಾಸ ವನ್ನು ಮುಗಿಸು. ಪ್ರಪಂಚದ ಜ್ಞಾನ ಪಡೆದುಕೋ. ಅನಂತರ ರಾಷ್ಟ್ರಸೇವೆಯ ವಿಚಾರ ಮಾಡು.”

ನಾರಾಯಣ ಅವರಿಗೆ ಮತ್ತೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟ. ಅವನು ತನ್ನ ಹೃದಯ ಮೆಚ್ಚಿದ  ನಾಯಕನನ್ನು ನೋಡಿ ಸಂತೋಷಪಟ್ಟ. ಅವನ ಉತ್ಸಾಹ ಇಮ್ಮಡಿಸಿತು.

ತೀರ್ಥಯಾತ್ರೆ

ಪುಣೆಯಿಂದ ಹುಬ್ಬಳ್ಳಿಗೆ ಹಿಂದಿರುಗಿ ಬಂದ ನಾರಾಯಣ ‘ಆರ್ಯ ಬಾಲ ಸಭಾ’ ಕಾರ್ಯಗಳನ್ನು ಚುರುಕುಗೊಳಿಸಿದ. ದೇಶಸೇವೆ ಮಾಡುವವರು ದೃಢ ಕಾಯರಾಗಿ ಕೆಚ್ಚೆದೆಯವರಾಗಿ ಇರಬೇಕೆಂಬುದು ಅವನ ಧ್ಯೇಯವಾಗಿತ್ತಷ್ಟೆ ? ಅದಕ್ಕಾಗಿ ವ್ಯಾಯಾಮ ಶಾಲೆಗಳನ್ನು ಸ್ಥಾಪಿಸಿದ.

ನಾರಾಯಣನ ರಾಷ್ಟ್ರಸೇವಾ ಕಾರ್ಯವನ್ನು ಸರ್ಕಾರ ಸಂಶಯ ದೃಷ್ಟಿಯಿಂದಲೇ ನೋಡುತ್ತಿತ್ತು. ಅವನ ಹಿಂದೆ ಗುಪ್ತ ಪೊಲೀಸರು ಸದಾ ಇರುತ್ತಿದ್ದರು. ಅವನಲ್ಲಿ ಬಹಳ ರಾಷ್ಟ್ರೀಯ ಸಾಹಿತ್ಯವಿತ್ತು. ಅವನು ಕ್ರಾಂತಿಕಾರಿ ರಾಷ್ಟ್ರೀಯವಾದಿಗಳೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದ. ಇದರಿಂದ ಅಪಾಯ ಆಗಬಹುದೆಂದು ಶಂಕಿಸಿದ ಭಾವೂರಾಯರು ಕಾಗದ ಪತ್ರಗಳನ್ನೂ, ಪುಸ್ತಕಗಳನ್ನೂ ಸುಟ್ಟುಬಿಟ್ಟರು. ನಾರಾಯಣನಿಗೆ ಅಪಾರ ದುಃಖ ವುಂಟಾಯಿತು. ಅವನು ಮನೆ ಬಿಟ್ಟು ಎಲ್ಲಿಗಾದರೂ ಹೋಗಲು ನಿರ್ಧಾರ ಮಾಡಿದ. ಸಾಧು_ಸಂತರಂತೆ ಉಡುಪನ್ನು ಧರಿಸಿ, ಫಂಡರಪುರಕ್ಕೆ ತೀರ್ಥಯಾತ್ರೆ ಹೊರಟ. ಹಲವು ಸ್ಥಳಗಳನ್ನು ಸಂದರ್ಶಿಸಿದ. ರಾಷ್ಟ್ರೀಯ ಕಾರ್ಯವನ್ನು ಮುಂದುವರಿಸಿದ. ಆಮೇಲೆ ‘ಕಲಿಯುಗದ ಭೀಮ’ ಎನಿಸಿಕೊಂಡಿದ್ದ ಪ್ರೊ. ರಾಮಮೂರ್ತಿ ಎಂಬಾತನ ಸರ್ಕಸ್ ಕಂಪೆನಿಯಲ್ಲಿ ಪ್ರಚಾರಕನಾಗಿ ಸೇರಿಕೊಂಡ. ನಾರಾಯಣನ ಬಂಧುಗಳಿಗೆ ಅವನು ಸರ್ಕಸ್ ಕಂಪೆನಿಯಲ್ಲಿ ಇರುವುದು ತಿಳಿಯಿತು. ಅವರು ಬಲವಂತ ಮಾಡಿ, ಅವನನ್ನು ಮನೆಗೆ ಕರೆದುಕೊಂಡು ಹೋದರು. ಅವನು ಮತ್ತೆ ಭಾವೂರಾಯರ ಕುಟುಂಬ ದವನೇ ಆದ.

‘ಯುವಕ, ನೀನು ಯಾರು ?

ನಿಮ್ಮ ಸರ್ಕಾರದ ಕೆಲಸ ಮಾಡಲಾರೆ

ಹೇಗಾದರೂ ಮಾಡಿ ನಾರಾಯಣನನ್ನು ಒಂದು ನೌಕರಿಗೆ ಸೇರಿಸಬೇಕೆಂದು ಭಾವೂರಾಯರು ಚಡಪಡಿಸು ತ್ತಿದ್ದರು. ಆದರೆ ಅವನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಲಿಲ್ಲ. ಅವರು ಮಾಮಲೇದಾರರಾಗಿದ್ದ ತಮ್ಮ ಬಂಧುವೊಬ್ಬರ ಬಳಿಗೆ ನಾರಾಯಣನನ್ನು ಕಳಿಸಿ, ಯಾವುದಾದರೂ ಒಂದು ನೌಕರಿ ಕೊಡಬೇಕೆಂದು ಪ್ರಾರ್ಥಿಸಿದರು. ನಾರಾಯಣ ಇಲ್ಲ ಎನ್ನಲಾರದೆ ಅವರ ಬಳಿಗೆ ಹೋದ. ಅವರನ್ನು ಕಂಡಕೂಡಲೆ ಅವರು ಬ್ರಿಟಿಷ್ ಸರ್ಕಾರದಲ್ಲಿ ಕೆಲಸ ಮಾಡುತ್ತಾರೆ ಎಂಬ ಭಾವ ಎಚ್ಚರ ಗೊಂಡು ನಿರ್ಭೀತನಾಗಿ ನುಡಿದ, “ನಾನು ನಿಮ್ಮ ಸರ್ಕಾರದ ಸೇವೆ ಮಾಡಲಾರೆ. ನನ್ನ ಭವಿಷ್ಯ ಜೀವನದ ರೂಪರೇಷೆಗಳನ್ನು ಆಗಲೇ ನಿರ್ಧಾರ ಮಾಡಿಕೊಂಡಿ ದ್ದೇನೆ. ವಿದೇಶೀ ಆಳರಸರ ಗುಲಾಮನಾಗಿ ಹೊಟ್ಟೆ ಹೊರೆದುಕೊಳ್ಳುವುದು ನನಗೆ ಬೇಕಿಲ್ಲ.”

ನಾರಾಯಣ ವ್ಯಾಸಂಗದ ಹವ್ಯಾಸವನ್ನು ತ್ಯಜಿಸಿದ. ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ಹೆಚ್ಚು ನಿರತನಾದ.  ಅವನ ಚಟುವಟಿಕೆಗಳನ್ನು ಕಂಡರೆ ಜನರಿಗೆಲ್ಲ ಒಂದು ಅಭಿಮಾನ ಹುಟ್ಟಿತು.

‘ಕನ್ನಡ ಕೇಸರಿ’ ಪ್ರಸಂಗ

ಹೀಗಿರುವಾಗ ಧಾರವಾಡದಲ್ಲಿ ‘ಕನ್ನಡ ಕೇಸರಿ’  ಎಂಬ ಪತ್ರಿಕೆ ಆರಂಭವಾಯಿತು. ಅದು ಮುದ್ರಿತವಾಗು ತ್ತಿದ್ದುದು ಹುಬ್ಬಳ್ಳಿಯಲ್ಲಿ. ನಾರಾಯಣನಿಗೆ ಆ ಪತ್ರಿಕೆ ಯಲ್ಲಿ ಕೆಲಸ ಸಿಕ್ಕಿತು. ಅವನು ಮರಾಠೀ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿ ಬರೆಯುತ್ತಿದ್ದ. ಒಮ್ಮೆ ಸರ್ಕಾರವನ್ನು ಕಟುವಾಗಿ ಟೀಕಿಸಿ, ಒಂದು ಲೇಖನವನ್ನು ಬರೆದ. ಅದು ಸಂಪಾದಕರ ಗಮನಕ್ಕೆ ಹೋಗದೆ ಅಚ್ಚಾಗಿಬಿಟ್ಟಿತು. ಆದರೆ ಸಂಪಾದಕರು ಅದನ್ನು ಕೊನೆ ಗಳಿಗೆಯಲ್ಲಿ ಗಮನಿಸಿದರು. ಇದರಿಂದ ಸರ್ಕಾರದ ಆಗ್ರಹಕ್ಕೆ ಪಾತ್ರರಾಗುವ ಸ್ಥಿತಿ ಇದ್ದಿತು. ಅವರು ತತ್‌ಕ್ಷಣವೇ ಅಚ್ಚಾದ ಭಾಗದ ಮೇಲೆ ಶಾಯಿ ಹಚ್ಚಿಸಿ, ಬೇರೆ ಕಾಗದದ ಮೇಲೆ ಬೇರೆ ಲೇಖನ ಮುದ್ರಿಸಿ ಆ ಜಾಗದ ಮೇಲೆ ಅಂಟಿಸಿ, ಕಷ್ಟದಿಂದ ಪಾರಾದರು. ಇದು ನಾರಾಯಣನ ಸ್ವತಂತ್ರ ಪ್ರವೃತ್ತಿಯ ಮೇಲೆ ಅಘಾತ ಉಂಟುಮಾಡಿತು. ಅವನಿಗೆ ಕೆಲಸದಲ್ಲಿ ಮುಂದು ವರಿಯಲು ಮನಸ್ಸು ಇಲ್ಲವಾಯಿತು. ಮುಂದೇನು ಮಾಡ ಬೇಕೆಂದು ಯೋಚಿಸಿದ.

ಡಾಕ್ಟರ್ ಹರ್ಡೀಕರ್

ನಾರಾಯಣನ ಇಬ್ಬರು ಆತ್ಮೀಯ ಮಿತ್ರರು (ಗೋವಿಂದ ಅಂಕಲೀಕರ್ ಮತ್ತು ಆರ್. ಎ. ನಾಡಗೀರ್) ಕಲ್ಕತ್ತೆಗೆ ಹೋಗಿ, ಒಂದು ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಇದರಿಂದ ಉತ್ತೇಜಿತನಾಗಿ ಅವನೂ ಕಲ್ಕತ್ತೆಗೆ ಹೋದ. ಬಂಧು ಗಳೂ ಮಿತ್ರರೂ ಕೈಲಾದಷ್ಟು ಹಣ ಸಹಾಯ ಮಾಡಿದ್ದರು. ಅರವಿಂದ ಘೋಷರು ಸ್ಥಾಪಿಸಿದ್ದ ಒಂದು ರಾಷ್ಟ್ರೀಯ ಶಾಲೆಯನ್ನು ಸೇರಿ, ಎಫ್. ಎ. ಪರೀಕ್ಷೆಗೆ ಸಮಾನವಾದ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾರಾಯಣ. ಅನಂತರ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ದಾಖಲಾಗಿ, ಚೆನ್ನಾಗಿ ವ್ಯಾಸಂಗ ಮಾಡಿದ. ೧೯೧೩ ರಲ್ಲಿ ಎಂ.ಬಿ.ಬಿ.ಎಸ್. ಪರೀಕ್ಷೆಗೆ ಸಮವಾದ ‘ಎಂ.ಸಿ.ಸಿ. ಅಂಡ್ ಎಸ್.’ ಎಂಬ ಪದವಿ ಪಡೆದುಕೊಂಡ. ನಾರಾಯಣ ‘ಡಾಕ್ಟರ್ ನಾರಾಯಣ ಸುಬ್ಬರಾವ್ ಹರ್ಡೀಕರ್’ ಆದ. ಈ ಶಿಕ್ಷಣದ ಕಾಲದಲ್ಲಿಯೂ ರಾಷ್ಟ್ರೀಯ ಕಾರ್ಯದಲ್ಲಿ ಬಿಡದೆ ಭಾಗವಹಿಸುತ್ತಿದ್ದ. ಕಲ್ಕತ್ತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಅವನೂ ಅವನ ಮಿತ್ರರೂ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.

ಅಮೆರಿಕದಲ್ಲಿ

ಮೂವರು ಮಿತ್ರರೂ ಅಮೆರಿಕಕ್ಕೆ ಹೋಗಿ, ವೈದ್ಯ ಶಾಸ್ತ್ರದಲ್ಲಿ ಉಚ್ಚ ಶಿಕ್ಷಣ ಪಡೆದುಬರಲು ನಿರ್ಧಾರ ಮಾಡಿದರು. ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಪರಿಣತರಾಗಿ ಬರಬೇಕೆಂದು ಅವರ ಆಶಯವಾಗಿತ್ತು. ಸ್ವದೇಶಕ್ಕೆ ಹಿಂದಿರುಗಿಬಂದು ಕ್ರೈಸ್ತ ಮತ ಪ್ರಸಾರಕರು ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದ್ದಂತೆ ದೀನದಲಿತರ ಸೇವೆ ಸಲ್ಲಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಮಿತ್ರರಿಬ್ಬರೂ ಹಣಕಾಸಿನ ವಿಷಯದಲ್ಲಿ ಉತ್ತಮ ಸ್ಥಿತಿ ಯಲ್ಲಿ ಇದ್ದರು. ಹರ್ಡೀಕರರಿಗೆ ಅನುಕೂಲ ಹೇಗೆ ? ವೆಚ್ಚಕ್ಕೆ ಹಣ ನೀಡುವವರು ಯಾರು ? ಅಲ್ಲದೆ ಅವರು ವಿದೇಶಕ್ಕೆ ಹೋಗಲು ಸರ್ಕಾರದಿಂದ ಅನುಮತಿ ದೊರಕು ವುದೂ ಕಷ್ಟವೇ ಆಗಿತ್ತು. ಕಡೆಗೆ ಅವರ ತಂದೆಯ ಗೆಳೆಯರೊಬ್ಬರ ಸಹಾಯದಿಂದಲೂ ಶೇವಡೆ ಕುಟುಂಬ ದವರ ನೆರವಿನಿಂದಲೂ ಅಷ್ಟಿಷ್ಟು ಹಣ ಸಂಗ್ರಹ ವಾಯಿತು. ಸರ್ಕಾರದ ಅನುಮತಿಯೂ ದೊರಕಿತು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗಕ್ಕೆ ಸ್ಥಾನವೂ ದೊರಕಿತು.

ಅಮೆರಿಕ ದೇಶದಲ್ಲಿ ವಿದ್ಯಾರ್ಥಿದೆಸೆಯಲ್ಲಿ ಇರು ವಾಗಲೇ ವಿರಾಮ ವೇಳೆಯಲ್ಲಿ ಶಿಕ್ಷಣವೆಚ್ಚವನ್ನು ಸಂಪಾದಿಸಿ ಕೊಂಡು ವ್ಯಾಸಂಗ ಮುಂದುವರಿಸಲು ಅವಕಾಶವುಂಟು. ಇದರಿಂದ ಹರ್ಡೀಕರರಿಗೆ ಬಹಳ ಅನುಕೂಲವಾಯಿತು. ಅವರು ಚರ್ಚುಗಳಲ್ಲಿ, ಹೋಟೆಲುಗಳಲ್ಲಿ, ಗಿರಣಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ನಾನಾ ಬಗೆಗಳ ಕೆಲಸ ಮಾಡಿ ಅಗತ್ಯವಿದ್ದ ಹಣ ಕೂಡಿಸಿ ಕೊಳ್ಳುತ್ತಿದ್ದರು. ನೆಲ ಸ್ವಚ್ಛ ಮಾಡುವುದು, ಧೂಳು ಜಾಡಿಸುವುದು, ಸುಣ್ಣ ಹಚ್ಚುವುದು, ಬಣ್ನ ಹಚ್ಚುವುದು, ತೋಟಗಾರಿಕೆ ಕೆಲಸದಲ್ಲಿ ನೆರವಾ ಗುವುದು – ಇವೇ ಆ ಕೆಲಸಗಳು. ಹರ್ಡೀಕರರು ವ್ಯಾಸಂಗದಲ್ಲಿ ಪ್ರಾಧ್ಯಾ ಪಕರುಗಳ ಮೆಚ್ಚುಗೆಯನ್ನು ಗಳಿಸಿಕೊಂಡರು. ಅವರಿಗೆ ೩೦೦ ಡಾಲರುಗಳ ಶಿಷ್ಯವೇತನ ದೊರಕಿತು.

ಲೋಕಮಾನ್ಯರಿಗೆ ಅವರ ಕಷ್ಟದ ವಿಷಯ ತಿಳಿಯಿತು. ಅವರು ಸಾರ್ವಜನಿಕರಲ್ಲಿ ಮನವಿ ಸಲ್ಲಿಸಿ, ಹಣ ಸಂಗ್ರಹಿಸಿ ಕಳಿಸಿದರು. ಇದರಿಂದ ಡಾಕ್ಟರರ ವ್ಯಾಸಂಗದ ಸಮಸ್ಯೆ ಬಗೆಹರಿಯಿತು. ಎರಡು ವರ್ಷ ಗಳೊಳಗೆ ಎಂ.ಎಸ್‌ಸಿ. ಪದವೀಧರರಾದರು. ಮುಂದೆ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಳ್ಳಬೇಕೆಂಬ ಇಚ್ಛೆ ಅವರಿಗೆ ಇತ್ತು.

ಲಾಲಾಜಿಯವರೊಂದಿಗೆ

ಹೀಗಿರುವಾಗ, ೧೯೧೫ ರಲ್ಲಿ, ಅಂದು ಭಾರತದ ಪ್ರಸಿದ್ಧ ನಾಯಕರಲ್ಲಿ ಒಬ್ಬರಾಗಿದ್ದ ಲಾಲಾ ಲಜಪತ್ ರಾಯರು ಇಂಗ್ಲೆಂಡಿನಿಂದ ಅಮೆರಿಕಕ್ಕೆ ಬಂದರು. ಸ್ವಾತಂತ್ರ್ಯವೀರರಾದ ಅವರನ್ನು ಸರ್ಕಾರ ಸಂದೇಹ ದಿಂದಲೇ ನೋಡುತ್ತಿತ್ತು. ಆಗ ಪ್ರಥಮ ಜಾಗತಿಕ ಯುದ್ಧ ವಾಗುತ್ತಿತ್ತು. ಆದುದರಿಂದ ಅವರು ಭಾರತಕ್ಕೆ ಹಿಂದಿರು ಗಲು ಸರ್ಕಾರ ಅವಕಾಶವನ್ನು ನೀಡಲಿಲ್ಲ. ಲಾಲಾಜಿ ಬರುವ ಸುದ್ಧಿ ಕೇಳಿದ ಹರ್ಡೀಕರರು ಅವರನ್ನು ಭೇಟಿ ಮಾಡಿ, ‘ಅಮೆರಿಕದಲ್ಲಿ ಹಿಂದೂಸ್ತಾನ್ ಅಸೋಸಿ ಯೇಷನ್’ ಎಂಬ ಸಂಘದ ಪರವಾಗಿ ಸ್ವಾಗತಿಸಿದರು. ಆ ಸಂಘವು ಭಾರತೀಯ ವಿದ್ಯಾರ್ಥಿಗಳ ಸಂಘವಾಗಿತ್ತು. ಹರ್ಡೀಕರರೇ ಅದನ್ನು ಸಂಘಟಿಸಿ, ಅದರ ಅಧ್ಯಕ್ಷ ರಾಗಿದ್ದರು.

ಲಾಲಾಜಿಯವರಿಗೆ ನೆರವಾಗಲು ಒಳ್ಳೆಯ ಉತ್ಸಾಹದ ಒಬ್ಬ ತರುಣ ಬೇಕಾಗಿತ್ತು. ಅವರು ಮನವಿ ಮಾಡಿಕೊಂಡಾಗ, ರಾಷ್ಟ್ರೀಯ ಪ್ರವೃತ್ತಿಯ ಹರ್ಡೀಕರರು ಇದಕ್ಕೆ ಸಹಜವಾಗಿಯೇ ಓಗೊಟ್ಟರು. ಇದರಿಂದ ಅವರ ಜೀವನಪಥ ತಮ್ಮ ಮೂಲ ಒಲವಿನಂತೆಯೇ ಮುಂದು ವರಿಯಿತು. ಅವರು ಲಾಲಾಜಿಯವರ ಅನುಯಾಯಿ ಯಾಗಿ ಭಾರತ ರಾಷ್ಟ್ರೀಯ ಕಾರ್ಯದಲ್ಲಿ ಪೂರ್ಣವಾಗಿ ಲೀನವಾಗಿಬಿಟ್ಟರು. ಅವರ ಮುಂದಿನ ವ್ಯಾಸಂಗ ನಿಂತು ಹೋಯಿತು.

ಲಾಲಾಜಿ ಸುಮಾರು ಮೂರು ವರ್ಷಗಳಿಗೆ ಮೇಲ್ಪಟ್ಟು ಅಮೆರಿಕದಲ್ಲಿ ನಿಲ್ಲಬೇಕಾಯಿತು. ಹರ್ಡೀ ಕರರು ಅವರ ಹೆಗಲಿಗೆ ಹೆಗಲನ್ನು ಕೊಟ್ಟು ದುಡಿದರು. ಅವರಿಂದ ‘ಸೈ’ ಎನಿಸಿಕೊಂಡರು. ಲಾಲಾಜಿ ಅಮೆರಿಕ ದಲ್ಲಿ ಸ್ಥಾಪಿಸಿದ ‘ಇಂಡಿಯನ್ ಹೋಮ್ ರೂಲ್ ಲೀಗ್’ ಎಂಬ ಸಂಸ್ಥೆಯ ಕಾರ್ಯವೂ, ‘ಯಂಗ್ ಇಂಡಿಯಾ’ ಎಂಬ ಪತ್ರಿಕೆಯ ಸಂಪಾದನ ಕಾರ್ಯವೂ ಅವರ ಪಾಲಿಗೇ ಬಂದಿತು. ಈ ಕಾರ್ಯಗಳಿಗೆಲ್ಲ ಅನುಕೂಲ ವಾಗಲೆಂದು ಲೋಕಮಾನ್ಯರು ೧೬,೦೦೦ ರೂಪಾಯಿ ಗಳನ್ನು ಸಂಗ್ರಹಿಸಿ ಕಳಿಸಿದರು. ಲಾಲಾಜಿ ಭಾರತಕ್ಕೆ ಹಿಂದಿರುಗಿದ ಮೇಲೆ ಅವರು ಮಾಡುತ್ತಿದ್ದ ಕಾರ್ಯದ ಹೊಣೆಗಾರಿಕೆಯೆಲ್ಲ ಹರ್ಡೀಕರರದೇ ಆಯಿತು.

ಭಾರತದಲ್ಲಿ ಪರಿಸ್ಥಿತಿ ಬದಲಾಯಿಸಿತು. ಲೋಕ ಮಾನ್ಯರು ಕಾಲವಾಗಿದ್ದರು. ಗಾಂಧೀ ನಾಯಕತ್ವ ಆರಂಭವಾಗಿತ್ತು. ಜಲಿಯನ್‌ವಾಲಾ ಬಾಗ್‌ನಲ್ಲಿ ಸೈನಿಕ ಅತ್ಯಾಚಾರ, ನಿರಪರಾಧಿ ಜನರ ಕಗ್ಗೊಲೆ ಇತ್ಯಾದಿ ವಿದ್ಯಮಾನಗಳು ಹೊರದೇಶಗಳಲ್ಲಿ ಇದ್ದ ಭಾರತೀಯ ಯುವಕರ ಮನಸ್ಸನ್ನು ಕಲಕಿದ್ದವು. ಹಲವು ವರ್ಷಗಳ ಕಾಲ ಹೊರಗಡೆ ಇದ್ದ ಹರ್ಡೀಕರರ ಮನಸ್ಸು ತುಡಿಯ ತೊಡಗಿತು. ೧೯೨೧ ರ ನವೆಂಬರ್ ೧೧ ರಂದು ಅವರು ಸ್ವದೇಶವನ್ನು ತಲಪಿದರು.

ಭಾರತದಲ್ಲಿ ಕಾರ್ಯಾರಂಭ

ಅದೇ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಮಹಾಧಿ ವೇಶನ ಅಹಮದಾಬಾದಿನಲ್ಲಿ ಸೇರಿತು. ಆಗ ಲಾಲಾಜಿ, ಹರ್ಡೀಕರರನ್ನು ರಾಷ್ಟ್ರದ ಎಲ್ಲ ಮಹಾನಾಯಕರಿಗೂ ಪರಿಚಯ ಮಾಡಿಕೊಟ್ಟರು. ಅವರು ಅಮೆರಿಕದಲ್ಲಿ ಮಾಡಿದ ಸೇವೆಯನ್ನು ಮುಕ್ತಕಂಠರಾಗಿ ಹೊಗಳಿದರು. ಆದರೂ ತಮ್ಮ ಮೆಚ್ಚಿನ ನಾಯಕ ಲೋಕಮಾನ್ಯರು ಕಾಲವಾಗಿದ್ದುದರಿಂದ ಹರ್ಡೀಕರರಿಗೆ ಏನೋ ದೊಡ್ಡ ಆಸರೆ ತಪ್ಪಿದಂತಾಗಿತ್ತು. ಅವರಿಬ್ಬರು ಪರಸ್ಪರ ಭೇಟಿ ಒಂದೇ ಸಲ ಆಗಿದ್ದರೂ ಅಂಥ ಗಾಢ ಪೂಜ್ಯಭಾವ ಅವರಲ್ಲಿ ಜನಿಸಿದ್ದಿತು.

ಡಾಕ್ಟರರು ಹುಬ್ಬಳ್ಳಿಯಲ್ಲಿ ನೆಲೆಸಿದರು. ತಾವು ಹಿಂದೆ ಸ್ಥಾಪಿಸಿದ್ದ ಸಂಘಗಳ ಕಾರ್ಯಗಳಲ್ಲಿ ನಿರತರಾದರು. ಅವರು ‘ಗಣೇಶ ಮಂಡಲಿ’ಯನ್ನು ಮತ್ತೆ ಚೇತನಗೊಳಿ ಸಿದರು. ‘ವಾರ್ತಾ ಪ್ರಸಾರಕ ಸಂಘ’, ‘ಭಗಿನೀ ಮಂಡಲಿ’, ‘ತಿಲಕ್ ಕನ್ಯಾಶಾಲೆ’, ‘ರಾಷ್ಟ್ರೀಯ ಪಾಠಶಾಲೆ’ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ದೇಶ ಸೇವೆಯ ಕಾರ್ಯವನ್ನು ಆರಂಭಿಸಿದರು. ಅವರು ಪಂಜಾಬಿಗೆ  ಬಂದು ತಮ್ಮೊಡನೆ ಕೆಲಸ ಮಾಡಬೇಕೆಂಬುದು ಲಾಲಾಜಿ ಯವರ ಉದ್ದೇಶವಾಗಿತ್ತು. ಮಹಾರಾಷ್ಟ್ರ ಅವರನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿತ್ತು.

ಹರ್ಡೀಕರರು ಸೇವಾದಳದ ಕೆಲವು ಸ್ವಯಂಸೇವಕರೊಡನೆ

ಗಾಂಧೀಜಿ ತಾವು ಆರಂಭಿಸಬೇಕೆಂದು ಯೋಜಿಸಿದ್ದ ‘ಕಾಂಗ್ರೆಸ್ ವಾರ್ತಾ’ ಎಂಬ ಪತ್ರಿಕೆಯ ಹೊಣೆಗಾರಿಕೆ ಯನ್ನು ಡಾಕ್ಟರರಿಗೆ ವಹಿಸಬೇಕೆಂದಿದ್ದರು. ಆದರೆ, ಅಸಹಕಾರ ಆಂದೋಲನ ತೀವ್ರವಾಯಿತು. ಗಾಂಧೀಜಿ ಬಂಧಿತರಾಗಿ ಶಿಕ್ಷೆಗೆ ಒಳಗಾದರು. ಇದರಿಂದ ಅದು ತಾತ್ಕಾಲಿಕವಾಗಿ ನಿಂತುಹೋಯಿತು. ಇದೇ ಸಮಯದಲ್ಲಿ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಮಂಡಲಿ ಡಾಕ್ಟರರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸಿತು.

ನಾಗಪುರ ಧ್ವಜ ಸತ್ಯಾಗ್ರಹ

೧೯೨೩ ರ ಮೇ ೧ರಂದು ನಾಗಪುರದಲ್ಲಿ ಒಂದು ಪ್ರಚಂಡ ಪ್ರಸಂಗ ನಡೆಯಿತು. ಪ್ರಾಂತೀಯ ಸರ್ಕಾರ ಧ್ವಜ ಮೆರವಣಿಗೆಯ ಮೇಲೆ ನಿಷೇಧಾಜ್ಞೆ ವಿಧಿಸಿತು. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ದೊಡ್ಡ ಸವಾಲಾಯಿತು. ವರ್ಧಾ ಪಟ್ಟಣದ ಜಮುನಾಲಾಲ್ ಬಜಾಜರ ನಾಯಕತ್ವದಲ್ಲಿ ಧ್ವಜ ಸತ್ಯಾಗ್ರಹವೇ ಆರಂಭ ವಾಯಿತು. ಇದು ಅಖಿಲ ಭಾರತ ಪ್ರಶ್ನೆಯಾಗಿ ಪರಿಣಮಿಸಿತು. ದೇಶದಾದ್ಯಂತ ನೂರಾರು ಮಂದಿ ಸ್ವಯಂಸೇವಕರು ನಾಗಪುರಕ್ಕೆ ಆಗಮಿಸಿ, ಸತ್ಯಾಗ್ರಹದಲ್ಲಿ ಭಾಗವಹಿಸಿದರು; ಧ್ವಜ ಗೌರವ ರಕ್ಷಣೆಯ ಕಾರ್ಯದಲ್ಲಿ ನಿರತರಾದರು. ಪೊಲೀಸರು ದಬ್ಬಾಳಿಕೆಯನ್ನು ಎದುರಿಸಿ ದರು. ಹರ್ಡೀಕರರು ಕರ್ನಾಟಕದಿಂದ ನೂರಾರು ಸ್ವಯಂಸೇವಕರ ಪಡೆಯನ್ನು ತಂದು, ಸತ್ಯಾಗ್ರಹ ಆಚರಿಸಿ, ಸೆರೆಮನೆ ಸೇರಿದರು. ಕಡೆಗೆ ಸರ್ದಾರ್ ವಲ್ಲಭಭಾಯಿ ಪಟೇಲರೂ ಇದರಲ್ಲಿ ಭಾಗವಹಿಸಿದರುಪ್ಪಿದರ ಪರಿಣಾಮ ವಾಗಿ, ಸರ್ಕಾರ ಒಂದು ಒಪ್ಪಂದಕ್ಕೆ ಬಂದಿತು. ಧ್ವಜದ ಮೆರವಣಿಗೆಯ ಮೇಲಿನ ಪ್ರತಿಬಂಧಕಾಜ್ಞೆಯನ್ನು ತೆಗೆದುಹಾಕಿತು.

ಹಿಂದೂಸ್ತಾನೀ ಸೇವಾದಳ

ನಾಗಾಪುರ ಸತ್ಯಾಗ್ರಹ ಕಾಂಗ್ರೆಸ್ಸಿನ ಶಕ್ತಿಯನ್ನು ತೋರಿಸಿದಂತೆಯೇ ಸ್ವಯಂಸೇವಕ ದಳದ ಅಶಕ್ತತೆ ಯನ್ನೂ ಎತ್ತಿ ತೋರಿಸಿತು. ಅನೇಕರು ಚೆನ್ನಾಗಿ ಯೋಚನೆ ಮಾಡಿ ರಾಷ್ಟ್ರಪ್ರೇಮದಿಂದ ಚಳವಳಿಗೆ ಸೇರಿ ರಲ್ಲಿಲ್ಲ. ಬರಿಯ ಉತ್ಸಾಹದಿಂದ ಸೇರಿ ಸೆರಮನೆಗೆ ಹೋದರು. ಇಂತಹವರು ಅನಂತರ ಕ್ಷಮೆ ಕೇಳಿಕೊಂಡು ಹೊರಬಂದಿದ್ದರು. ಅವರಿಗೆ ಶಿಸ್ತು ಮತ್ತು ಆತ್ಮಗೌರವಗಳ ಪರಿವೆ ಇರಲಿಲ್ಲ. ಇದನ್ನೆಲ್ಲ ಗಮನಿಸಿದ ಹರ್ಡೀಕರರು ಸುವ್ಯವಸ್ಥಿತವಾದ ಸ್ವಯಂಸೇವಕ ದಳವೊಂದನ್ನು ರಚಿಸಲು ಯೋಚಿಸಿದರು ; ತಮ್ಮೊಡನೆ ನಾಗಪುರ ಕಾರಾಗೃಹದಲ್ಲಿದ್ದ ಕೆಲವರು ಮಿತ್ರರೊಡನೆ ವಿಚಾರ ಮಾಡಿದರು. ಅವರೆಲ್ಲ ಅನುಮೋದಿಸಿದರು. ಹೀಗೆ ಸೆರೆಮನೆಯಲ್ಲಿ ಹುಟ್ಟಿದ ವಿಚಾರ, ಮುಂದೆ ಕಾಕಿನಾಡಾ ಕಾಂಗ್ರೆಸ್ ಮಹಾಧಿ ವೇಶನದ ಕಾಲದಲ್ಲಿ ಸ್ಪಷ್ಟರೂಪ ತಾಳಿತು. ೧೯೨೩ರ ಡಿಸೆಂಬರ್ ೨೭ ರಂದು ಅಖಿಲ ಭಾರತ ಸ್ವಯಂ  ಸೇವಕರ ಸಂಘಟನೆಯು ಹಿಂದುಸ್ತಾನೀ ಸೇವಾದಳ’ ಎಂಬ ಹೆಸರಿನಿಂದ ಜನ್ಮ ತಾಳಿತು. ಕಾಂಗ್ರೆಸ್ ಸಂಸ್ಥೆ ಇದನ್ನು ಅಧಿಕೃತ ಸ್ವಯಂಸೇವಕದಳ ಎಂಬುದಾಗಿ ಅಂಗೀಕರಿಸುವ ನಿರ್ಣಯ ಮಾಡಿತು. ಹರ್ಡೀಕರರೇ ಮಹಾಕಾರ್ಯದರ್ಶಿಯಾಗಿ ನೇಮಕವಾದರು.

ರಾಷ್ಟ್ರೀಯ ಜಾಗೃತಿಗೆ ಅಗತ್ಯವಾದ ಶಿಸ್ತು, ಸಂಘಟನೆ, ಪ್ರಭುತ್ವದೊಡನೆ ಹೋರಾಡಲು ದೃಢ ನಿರ್ಧಾರ, ಸಂಯಮ, ತ್ಯಾಗ, ನಿಷ್ಠೆ, ಕಷ್ಟಸಹಿಷ್ಣುತೆ – ಇವುಗಳನ್ನು ಬೆಳೆಸಿಕೊಳ್ಳಲು ಅಗತ್ಯವಿದ್ದ ನೈತಿಕ ಹಾಗೂ ಆತ್ಮಶಕ್ತಿ, ಶರೀರಬಲ ಸಂವರ್ಧನೆ, ಮಾನಸಿಕ ದಾರ್ಢ್ಯ ಇತ್ಯಾದಿಗಳನ್ನು ಯುವ ಭಾರತೀಯ ರಲ್ಲಿ ಸೃಷ್ಟಿಸುವ ಧ್ಯೇಯ ಸೇವಾದಳ ಸಂಸ್ಥೆಯ ದಾಯಿತು. ಅದು ಅಖಿಲ ಭಾರತ ಯುವಜನ ಸಂಸ್ಥೆ ಯಾಗಿ, ಕಾಂಗ್ರೆಸ್ಸಿನ ಆಶೋತ್ತರಗಳನ್ನು ಈಡೇರಿಸುವ ಶಿಸ್ತಿನ ಯೋಧರ ಪಡೆಯಾಯಿತು. ಜವಾಹರಲಾಲ್ ನೆಹರೂ ಅದರ ಪ್ರಥಮ ಅಧ್ಯಕ್ಷರಾದರು.

೧೯೨೪ ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿ ವೇಶನ ನಡೆಯಿತು; ಗಾಂಧೀಜಿಯವರೇ ಅಧ್ಯಕ್ಷರು. ಆ ಸಂದರ್ಭದಲ್ಲಿ ಸೇವಾದಳ ಸ್ವಯಂಸೇವಕರು, ಅದ ರಲ್ಲಿಯೂ ಕರ್ನಾಟಕದ ಸ್ವಯಂಸೇವಕರು ನಡೆಸಿದ ಶಿಸ್ತಿನ ಸೇವಾಕಾರ್ಯ ಗಾಂಧೀಜಿಯ ಮೆಚ್ಚುಗೆಗೆ ಪಾತ್ರವಾಯಿತು. ಸ್ವಯಂಸೇವಕರ ಜೊತೆಗೆ ಸ್ವಯಂ ಸೇವಕಿಯರೂ ಸೇವೆ ಸಲ್ಲಿಸಿದರು. ಗಾಂಧೀಜಿ ಸ್ವಯಂ ಸೇವಕರಿಗೆ ಇತ್ತ ಬುದ್ಧಿವಾದ ಇಂದಿಗೂ ನೆನಪಿಗೆ ತಂದು ಕೊಳ್ಳುವಂಥದ್ದು.

“ಸ್ವಯಂಸೇವಕರು ಸ್ವರಾಜ್ಯ ಸಂಪಾದನೆಗೆ ಬಹು  ಮೌಲ್ಯದ ಇಡುಗಂಟಿನಂತೆ ಇರಬೇಕು. ಹಾಗೆ ಆಗ ಬೇಕಾದರೆ ನಿಷ್ಕಲಂಕ ಸೇವೆ, ಕವಾಯತು ಮಾಡಲು ಅಗತ್ಯ ತರಬೇತಿ, ಆರೋಗ್ಯ ರಕ್ಷಣೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಒದಗಿಸುವುದು – ಇವೇ ಮೊದಲಾದ ಗುಣಗಳು ಆವಶ್ಯಕ. ಇವುಗಳ ಜೊತೆಗೆ, ಅವರು ಸ್ವರಾಜ್ಯ ಕ್ಕಾಗಿ ರಾಷ್ಟ್ರವನ್ನು ಸಿದ್ಧತೆಯಲ್ಲಿ ಇಡುವ ರೀತಿಯನ್ನು ಅರಿತುಕೊಂಡಿರಬೇಕು.”

ಡಾಕ್ಟರರು ಸ್ಥಾಪಿಸಿದ ಸೇವಾದಳ ಇವೆಲ್ಲವನ್ನೂ ಮಾಡಲು ಅನುವಾಯಿತು.

ಒಂದು ಪ್ರಸಂಗ

ಬೆಳಗಾಂ ಕಾಂಗ್ರೆಸ್ ಅಧಿವೇಶನದ ಕಾಲದಲ್ಲಿ ನಡೆದ ಒಂದು ಪ್ರಸಂಗ ಹರ್ಡೀಕರರ ನಾಯಕತ್ವದ ಶಕ್ತಿಯನ್ನು ತೋರಿಸುತ್ತದೆ. ಅವರು ಶಿಸ್ತನ್ನು ಕಲಿಸಿದ ರೀತಿ ಅಪೂರ್ವವಾದುದು.

ಸ್ವಯಂಸೇವಕರು ಭೋಜನಶಾಲೆಗೆ ಹೋದಾಗ ಅಲ್ಲಿ ಒಂದು ಅಚಾತುರ್ಯ ನಡೆಯಿತು. ಇದರಿಂದ ಅವರೆಲ್ಲ ನೊಂದುಕೊಂಡು, ಆ ರಾತ್ರಿ ಊಟವನ್ನು ತ್ಯಜಿಸಿ, ತಮ್ಮ ಪಾಡಿಗೆ ತಾವು ಶಿಬಿರಗಳಿಗೆ ಹೊರಟು ಹೋದರು. ಈ ವಿಚಾರ ಡಾಕ್ಟರರಿಗೆ ಗೊತ್ತಾಗುವ ವೇಳೆಗೆ ಮಧ್ಯರಾತ್ರಿ ಆಗಿತ್ತು. ಅವರು ತಮ್ಮ ಶಿಬಿರಕ್ಕೆ ಬಂದವರೇ, ಎಲ್ಲ ಸ್ವಯಂಸೇವಕರೂ ಧ್ವಜಸ್ತಂಭದ ಬಳಿ ಕಲೆಯಲು ದೀರ್ಘ ತುತ್ತೂರಿ ನಾದ ಮಾಡುವ ಆಜ್ಞೆ ಮಾಡಿದರು. ಏನೆಂದು ಅಚ್ಚರಿಗೊಂಡ ಎಲ್ಲ ಸ್ವಯಂಸೇವಕರೂ ಹಿಂದು ಮುಂದು ಯೋಚಿಸದೆ ಧ್ವಜಸ್ತಂಭದ ಸುತ್ತ ಕಲೆತರು.

ಡಾಕ್ಟರರು ಗಂಭೀರವಾದ ವಾಣಿಯಿಂದ ಹೀಗೆ ನುಡಿದರು, “ಸ್ವಯಂಸೇವಕರೇ, ನಿಮ್ಮ ನಾಯಕನನ್ನು ಹಿಂಬಾಲಿಸಿ. ಅವನ ಆಜ್ಞೆ ಪರಿಪಾಲಿಸಿ.” ನಾಯಕ ಪಾಕಶಾಲೆಯತ್ತ ನಡೆದ. ಎಲ್ಲರೂ ಮರುಮಾತಿಲ್ಲದೆ ಹಿಂಬಾಲಿಸಿದರು. ಅಲ್ಲಿ ಭೋಜನಕ್ಕೆ ಸಕಲವೂ ಸಿದ್ಧವಾಗಿತ್ತು. ‘ಊಟಕ್ಕೆ ಕೂಡಿ’ ಎಂಬ ಆಜ್ಞೆಯಾಯಿತು. ಎಲ್ಲರೂ ಕುಳಿತು ಭೋಜನ ಮಾಡಿದರು. ಕರ್ತವ್ಯ ಸಲ್ಲಿಸುವ ಸಮಯದಲ್ಲಿ ತಮ್ಮ ಅಸಮಾಧಾನಗಲನ್ನು ಮುಂದೊಡ್ಡದೆ ಶಿಸ್ತು, ಸಂಘಟನೆ, ವರಿಷ್ಠರ ಆಜ್ಞಾಪಾಲನೆ ಇವುಗಳ ಕಡೆಗೆ ಗಮನ ಕೊಡಬೇಕೆಂಬ ಪಾಠವನ್ನು ಎಲ್ಲ ಸ್ವಯಂಸೇವಕರೂ ಕಲಿತರು.

ಸೇವಾದಳದ ಸಂಘಟನೆ

ಬೆಳಗಾಂ ಅಧಿವೇಶನವು ಸ್ವಯಂಸೇವಕ ದಳದ ಸಂಘಟನೆಗೆ ಒಳ್ಳೆಯ ಅವಕಾಶವನ್ನು ಒದಗಿಸಿತು. ಬೆಂಗಳೂರಿನ ದೇಶೀಯ ವಿದ್ಯಾಶಾಲೆಯ ದಿವಂಗತ ಸಂಪದ್ಗಿರಿರಾಯರ ಕಾರ್ಯವಿಚಕ್ಷಣೆಯಿಂದ ಹಿಂದೂ ಸ್ತಾನೀ ಸೇವಾದಳ ಕಟ್ಟುವ ಕಾರ್ಯಕ್ಕೆ ಹಲವರು ಒಳ್ಳೆಯ ಕಾರ್ಯಕರ್ತರು ದೊರಕಿದರು.

ಅಧಿವೇಶ ಮುಗಿದ ಮೇಲೆ, ಡಾಕ್ಟರರು ಭಾರತದ  ಎಲ್ಲಾ ಪ್ರಾಂತಗಳಲ್ಲೂ ಸ್ವಯಂಸೇವಕ ಮಂಡಲಿಗಳನ್ನು ವ್ಯವಸ್ಥೆ ಮಾಡಲು ಮುಂದಾದರು. ‘ಸ್ವಯಂಸೇವಕ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಶಿಸ್ತಿನ ಸಿಪಾಯಿಗಳನ್ನೂ ಶೀಲವಂತ ವ್ಯಕ್ತಿಗಳನ್ನೂ ಹೇಗೆ ಅನುಗೊಳಿಸಬೇಕು ಎಂಬ ಬಗೆಗೆ ತಮ್ಮ ಪತ್ರಿಕೆಯಲ್ಲಿ ಮಾಹಿತಿ ನೀಡುತ್ತಿದ್ದರು.

ಸ್ವಯಂಸೇವಕರಿಗೆ ಅದೊಂದು ಅಮೂಲ್ಯ ಕೈಪಿಡಿಯಂತಿತ್ತು. ಹೀಗೆ ಜನ್ಮತಾಳಿದ ಹಿಂದೂಸ್ತಾನೀ ಸೇವಾದಳದ ಧ್ಯೇಯೋದ್ದೇಶಗಳನ್ನು ೧೯೨೫ ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಾಹಾಧಿವೇಶನದ ಸಂದರ್ಭದಲ್ಲಿ ಸ್ಪಷ್ಟಪಡಿಸಲಾಯಿತು.

೧. ಶಾಂತಿಯುತ ಘಟನಾತ್ಮಕ ಮಾರ್ಗದಿಂದ ಸ್ವರಾಜ್ಯ ಗಳಿಸಲು ಅನುಕೂಲವಾಗುವುದಕ್ಕೂ ಭಾರತೀಯ ಜನತೆಗೆ ಶಿಸ್ತು ಮತ್ತು ತ್ಯಾಗ-ಭಾವಗಳಿಂದ ರಾಷ್ಟ್ರಸೇವೆ ಸಲ್ಲಿಸಲು ಅನುಕೂಲವಾಗುವುದಕ್ಕೂ ತರಬೇತಿ ಕೊಡು ವುದು; ಸಂಘಟನೆ ಮಾಡುವುದು.

೨. ಸ್ವಯಂಸೇವಕ ವ್ಯವಸ್ಥೆಯ ಎಲ್ಲ ಘಟಕಗಳ ಮೇಲೂ ನಿಯಂತ್ರಣ; ಏಕರೂಪದ ಶಿಸ್ತು ಮತ್ತು ಸಂಘಟನೆ.

೩. ಒಳ್ಳೆಯ ಶಾರೀರಿಕ ಶಿಕ್ಷಣವಿತ್ತು ರಾಷ್ಟ್ರೀಯ ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸುವುದು.

ರಾಷ್ಟ್ರದ ಮಹಾ ನಾಯಕರುಗಳಾಗಿದ್ದ ಜವಾಹರ ಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಸರೋಜಿನೀ ನಾಯುಡು ಇವರೆಲ್ಲ ಹಿಂದೂ ಸ್ತಾನೀ ಸೇವಾದಳಕ್ಕೆ ಪ್ರೋತ್ಸಾಹವಿತ್ತರು. ಇದರ ಪರಿಣಾಮವಾಗಿ, ಅದು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರಾಂತ, ಕರ್ನಾಟಕ – ಈ ಪ್ರಾಂತ ಗಳಲ್ಲಿ ಚೆನ್ನಾಗಿ ವ್ಯವಸ್ಥಿತವಾಯಿತು.

ರಾಷ್ಟ್ರದ ಉಳಿದ ಪ್ರಾಂತಗಳಲ್ಲಿ ಅದು ಬೆಳೆಯಲು ಅವಕಾಶವಾಗಲಿಲ್ಲ. ಅಲ್ಲಿನ ಕಾಂಗ್ರೆಸ್ ಸಮಿತಿಗಳೇ ಆಸಕ್ತಿ ವಹಿಸಲಿಲ್ಲ. ಅದು ಚೆನ್ನಾಗಿ ಬೆಳೆದ ಕಡೆಗಳಲ್ಲಿ ೧೮ ವರ್ಷ ಮೀರಿದ ಸ್ವಯಂಸೇವಕರು ಕಾಂಗ್ರೆಸ್ ಸದಸ್ಯರಾಗಬೇಕಾಯಿತು. ಅದಕ್ಕಿಂತ ಕಡಿಮೆ ವಯಸ್ಸಿನವರು ಕಾಂಗ್ರೆಸ್ಸಿಗೆ ಸಹಾಯಕರಾಗಿ, ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ತೆಗೆದುಕೊಳ್ಳಬೇಕಾಗಿತ್ತು. ಎಲ್ಲ ಸ್ವಯಂಸೇವಕರೂ ಅಹಿಂಸಾತತ್ತ್ವವನ್ನು ಪಾಲಿಸ ಬೇಕಾಗಿತ್ತು. ಅದರ ಜೊತೆಗೆ ಖಾದಿ ಧರಿಸಬೇಕಾಗಿತ್ತು.

ಉಪ್ಪಿನ ಸತ್ಯಾಗ್ರಹ

೧೯೩೦ರಲ್ಲಿ ಮಹಾತ್ಮ ಗಾಂಧೀಜಿಯವರು ‘ಉಪ್ಪಿನ ಸತ್ಯಾಗ್ರಹ’ ಎಂಬ ಹೋರಾಟವನ್ನು ಆರಂಭಿಸಿದರು. ಆ ಸಮಯದಲ್ಲಿ ‘ಹಿಂದೂಸ್ತಾನೀ ಸ್ವಯಂಸೇವಕ ದಳ’ದವರು ಆಂದೋಲನದಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಸಂಸ್ಥೆ ನ್ಯಾಯಬಾಹಿರವಾದ ಸಂಸ್ಥೆಯೆಂದು ಸರ್ಕಾರ ಘೋಷಿಸಿತು. ಅಂತೆಯೇ ಸೇವಾದಳವೂ ನ್ಯಾಯಬಾಹಿರ ಸಂಸ್ಥೆಯೆಂದು ಘೋಷಿತವಾಯಿತು. ಹರ್ಡೀಕರರೂ ಇನ್ನಿತರ ಪ್ರಮುಖರೂ ಅನೇಕ ಮಂದಿ ಸ್ವಯಂಸೇವಕರೂ ಬಂಧಿತರಾಗಿ, ಸೆರೆಮನೆ ಸೇರಿದರು.

ಕರ್ನಾಟಕದ ಸಿರಸಿ, ಸಿದ್ದಾಪುರ ಮತ್ತು ಅಂಕೋಲಾಗಳಲ್ಲಿ ನಡೆದ ಸತ್ಯಾಗ್ರಹಗಳಲ್ಲಿ ಸೇವಾದಳದ ಪಾತ್ರ ಅಮೋಘವಾಗಿತ್ತು. ರೈತರು ಕಂದಾಯ ನೀಡಲಿಲ್ಲ. ಸಾರಾಯಿ ಅಂಗಡಿಗಳ ಪಿಕೆಟಿಂಗ್, ವಿದೇಶಿ ವಸ್ತ್ರ ಬಹಿಷ್ಕಾರ, ಈಚಲುಮರ ಕತ್ತರಿಸುವ ಅರಣ್ಯ ಸತ್ಯಾಗ್ರಹ ಇತ್ಯಾದಿ ನಡೆದವು. ಇವು ದೇಶದಲ್ಲೆಲ್ಲಾ ಪ್ರಖ್ಯಾತಿ ಪಡೆದವು. ಅಂಕೋಲಾ ತಾಲ್ಲೂಕಿನ ಉಪ್ಪಿನ ಸತ್ಯಾಗ್ರಹ ವಂತೂ ಸರ್ಕಾರಕ್ಕೆ ದೊಡ್ಡ ಸವಾಲು ಆಯಿತು. ಸರ್ದಾರ್ ವಲ್ಲಭಭಾಯಿ ಪಟೇಲರ ನಾಯಕತ್ವದಲ್ಲಿ ನಡೆದ ಬಾರ್ದೋಲೀ ಸತ್ಯಾಗ್ರಹಕ್ಕೆ ಸಮ ಎನಿಸುವಂತೆ ಇವೆಲ್ಲ ನಡೆದವು. ಸರ್ಕಾರದ ದಬ್ಬಾಳಿಕೆಗೆ ಮಿತಿ ಇರಲಿಲ್ಲ. ಆದರೂ ಜನ ಅಂಜಿ ಹಿಂದೆ ನಿಲ್ಲಲಿಲ್ಲ. ಎಲ್ಲ ಕಷ್ಟ ಕೋಟಲೆಗಳಿಗೂ ಎದೆಗೊಟ್ಟು ಹೋರಾಡಿದರು.

ಹಿಂದೂಸ್ತಾನೀ ಸೇವಾದಳಕ್ಕೆ ಜನ ನೀಡಿದ ಬೆಂಬಲ ಅಪಾರವಾಗಿತ್ತು. ಲಾಲಾಜಿಯವರು ಸೇವಾ ದಳದ ಕಾರ್ಯೋತ್ಸಾಹವನ್ನು ಕಂಡು, ಹರ್ಡೀಕರರಿಗೆ ಒಮ್ಮೆ ಪತ್ರ ಬರೆದು ಹೀಗೆ ತಿಳಿಸಿದ್ದು ನಿಜವೆನಿಸಿತು- ‘ನಿಮ್ಮ ನಾಯಕತ್ವದಲ್ಲಿ ನಾನೂ ಸ್ವಯಂಸೇವಕನಾಗುವ ಎಳೆಯ ಬಾಲಕನಾಗಿದ್ದಿದ್ದರೆ, ಎಷ್ಟೊಂದು ಚೆನ್ನಾಗಿರುತ್ತಿತ್ತು!’

ಇಷ್ಟೆಲ್ಲ ಕಾರ್ಯವನ್ನು ಕೈಗೊಳ್ಳಲು ನೆರವಾಗುವಂತೆ ಡಾಕ್ಟರರು ಬಾಗಲಕೋಟೆಯಲ್ಲಿ ಒಂದು ವ್ಯಾಯಾಮ ವಿದ್ಯಾಲಯವನ್ನು ಸ್ಥಾಪಿಸಿದರು. ಅದು ಸ್ವಯಂ ಸೇವಕರನ್ನೂ, ಸ್ವಯಂಸೇವಕರ ಶಿಕ್ಷಕರನ್ನೂ ತರಬೇತಿ ಮಾಡುವ ಕೇಂದ್ರವಾಗಿತ್ತು.

ವಿಧಾಯಕ ಕಾರ್ಯ

ಗಾಂಧೀಜಿಯವರು ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟ ನಡೆಸಲು ರಾಷ್ಟಕ್ಕೆ ಕರೆ ನೀಡಿದಂತೆಯೇ ಸಾಮಾಜಿಕ, ಆರ್ಥಿಕ, ನೈತಿಕ ಕ್ರಾಂತಿ ತರಲು ಖಾದಿ ಮತ್ತು ಗ್ರಾಮೋದ್ಯೋಗಗಳು, ಅಸ್ಟೃಶ್ಯತಾ ನಿವಾರಣೆ, ಪಾನನಿರೋಧ ಇತ್ಯಾದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕರೆ ನೀಡಿದ್ದರು. ಹರ್ಡೀಕರರ ಇಚ್ಚೆಯಂತೆ, ಶಿಸ್ತಿನ ಸಿಪಾಯಿಗಳಾಗಿ, ಅಹಿಂಸಾ ಯೋಧರಾಗಿ ಭಾಗವಹಿಸಿದ ಸ್ವಯಂಸೇವಕರು ಆ ವಿಧಾಯಕ, ರಚನಾತ್ಮಕ ಕಾರ್ಯ ಗಳಲ್ಲಿಯೂ ಭಾಗವಹಿಸಿದರು.

‘ನಿಮ್ಮ ಈ ಸ್ವಯಂಸೇವಕ ಉಡುಪಿನಲ್ಲಿಯೇ ನಿಮ್ಮನ್ನು ಸ್ವಾಗತಿಸುತ್ತೇನೆ.’

೧೯೩೪ ರಲ್ಲಿ ಬಿಹಾರದಲ್ಲಿ ಘೋರ ಭೂಕಂಪ ಸಂಭವಿಸಿತು. ಸಹಸ್ರಾರು ಜನ ಜೀವನದ ನೆಲೆತಪ್ಪಿ ಕಂಗಾಲಾದರು. ಆ ಸಮಯದಲ್ಲಿ ಡಾಕ್ಟರರ ಅಣತಿ ಯಂತೆ ಸೇವೆ ಸಲ್ಲಿಸಲು ಸ್ವಯಂಸೇವಕರು ಅಣಿಯಾದರು. ಇದಕ್ಕೆ ಹಿಂದೆ, ೧೯೨೯ ರಲ್ಲಿಯೇ ಕಾಂಗ್ರೆಸ್ ಸಂಸ್ಥೆ ಡಾಕ್ಟರ್ ಅತಲ್ ಎನ್ನುವವರ ನಾಯಕತ್ವದಲ್ಲಿ ಒಂದು ಸೌಹಾರ್ದದ ಸೇವಾ ತಂಡವನ್ನು ಚೀನಾ ದೇಶಕ್ಕೆ ಕಳಿಸಿದಾಗ, ಹರ್ಡೀಕರರೂ ಆ ತಂಡದ ಒಬ್ಬ ಸದಸ್ಯರಾಗಿದ್ದರು. ಇದು ಮಾನವೀಯ ಕಾರ್ಯ. ಅದನ್ನು ನೆರವೇರಿಸುವುದರಲ್ಲಿ ಅವರಿಗೆ ಇದ್ದ ಆಸಕ್ತಿಗೆ ದೊರೆತ ಮನ್ನಣೆಯಾಗಿತ್ತು.

ಎರಡು ಸೇವಾದಳಗಳು

೧೯೩೪ ರಲ್ಲಿ ಮಹಾತ್ಮ ಗಾಂಧೀಜಿಯವರು ಒಂದು ಹೇಳಿಕೆ ನೀಡಿ, ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದು  ಕೊಂಡರು. ತಮ್ಮನ್ನು ಬಿಟ್ಟು ಬೇರೆ ಯಾರೂ ಸತ್ಯಾಗ್ರಹದ ಹೊಣೆಯನ್ನು ವಹಿಸಿಕೊಳ್ಳಬಾರದೆಂಬ ಅಂಶವನ್ನು ವ್ಯಕ್ತಪಡಿಸಿದರು. ಗಾಂಧೀಜಿಯವರೇ ಹೀಗೆ ಹೇಳಿಕೆ ಕೊಟ್ಟಿದ್ದರಿಂದ ಅಹಿಂಸಾತ್ಮಕ ಯೋಧರನ್ನು ತಯಾರಿಸಲು ಯತ್ನಿಸುತ್ತಿದ್ದ ಹರ್ಡೀಕರರು ತಮ್ಮ ಸ್ವಯಂಸೇವಕರ ಮೂಲಕ ಸತ್ಯಾಗ್ರಹ ಹೋರಾಟ ನಡೆಸಲು ಸಾಧ್ಯವಿಲ್ಲದೆ ಹೋಯಿತು. ಆದ್ದರಿಂದ, ಅವರು ತಮ್ಮ ನೂರಾರು ಮಂದಿ ಕಾರ್ಯಕರ್ತರಿಗೆ ಪತ್ರ ಬರೆದು, ಹಿಂದೂಸ್ತಾನೀ ಸೇವಾದಳವನ್ನು ವಿಸರ್ಜಿಸುವ ತೀರ್ಮಾನವನ್ನು ತಿಳಿಸಿದರು. ಅವರಿಗೆಲ್ಲ ಶುಭಕೋರಿ ಯಾವುದಾದರೂ ಉದ್ಯೋಗವನ್ನು ಅವಲಂಬಿಸಿ, ದೇಶಾಭಿಮಾನದಿಂದ ಜೀವನ ನಡೆಸಬೇಕೆಂದು ಸಲಹೆಯಿತ್ತರು.

೧೯೩೬ ರ ಡಿಸೆಂಬರ್‌ನಲ್ಲಿ ಫೈಜ್‌ಪುರದಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಆ ವೇಳೆಗೆ ಹಿಂದೂಸ್ತಾನೀ ಸೇವಾದಳದ ಸಂಘಟನೆ ನಾನಾ ರೀತಿ ಗಳಲ್ಲಿ ಶಿಥಿಲವಾಗಿದ್ದಿತು. ಸರ್ಕಾರ ಆ ದೇಶಪ್ರೇಮಿ ಯುವಜನ ಸಂಘಟನೆಯ ಮೇಲೆ ಸದಾ ಕೆಟ್ಟ ಕಣ್ಣನ್ನು ಇಟ್ಟಿದ್ದಿತು. ಅನೇಕ ಸ್ವಯಂಸೇವಕರು ಸೆರೆಮನೆಗಳಲ್ಲಿ ಬಂಧಿತರಾಗಿದ್ದರು. ಹಿಂದೆ ಹೇಳಿದಂತೆ, ಮಹಾತ್ಮ ಗಾಂಧೀಜಿಯವರ ಹೇಳಿಕೆಗೆ ಅನುಸಾರವಾಗಿ, ಹರ್ಡೀಕರರು ಅದನ್ನು ವಿಸರ್ಜಿಸಿದ್ದರು.

ಇವೆಲ್ಲದರ ಜೊತೆಗೆ, ಅದು ಒಂದು ಸೈನಿಕ ವ್ಯವಸ್ಥೆಯೆಂದೂ ಅಹಿಂಸೆಗೆ ಹೊಂದಿಕೊಳ್ಳಲಾರದೆಂದೂ ಕಾಂಗ್ರೆಸ್ ವಲಯದಲ್ಲಿ ಅಭಿಪ್ರಾಯ ಮೂಡಿದ್ದಿತು. ಆದರೂ ಫೈಜ್‌ಪುರದ ಕಾಂಗ್ರೆಸ್ ಅಧಿವೇಶನಕ್ಕೆ ಬಂದು, ತಮ್ಮ ಆರೋಗ್ಯ ಸರಿಯಾಗಿ ಇಲ್ಲದಿದ್ದರೂ ಅಳಿದುಳಿದು ನಿಂತಿದ್ದ ಹಿಂದುಸ್ತಾನೀ ಸೇವಾದಳವನ್ನೇ ‘ರಾಷ್ಟ್ರೀಯ ಸೇವಾದಳ’ ಎಂಬ ಹೆಸರಿನಿಂದ ಹರ್ಡೀಕರರು ವ್ಯವಸ್ಥೆಗೊಳಿಸಿದರು.

ಅಧಿವೇಶನ ಮುಗಿದ ಮೇಲೆ, ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಹಿಂದೂಸ್ತಾನೀ ಸೇವಾ ದಳದ ಅಧಿಕೃತ ಸ್ವಯಂಸೇವಕರು ‘ಕಾಂಗ್ರೆಸ್ ಸೇವಾದಳ’ ಎಂಬ ಹೆಸರಿನಿಂದ ಪ್ರತ್ಯೇಕ ವಾದರು. ‘ರಾಷ್ಟ್ರೀಯ ಸೇವಾದಳ’ ಎಂಬ ಹೆಸರನ್ನು ಉಳಿಸಿಕೊಂಡವರು ಸಮಾಜವಾದಿಗಳ ಕಡೆ ಸೇರಿದರು. ಹೀಗೆ, ಯಾವುದೇ ಸೇವಾದಳ ಎಂಬ ವ್ಯವಸ್ಥೆಯಾದರೂ ಅದು ತನ್ನ ಮೂಲಸ್ಫೂರ್ತಿಯನ್ನು ಹಿಂದೂಸ್ತಾನೀ ಸೇವಾದಳದ ಜನಕರಾದ ಹರ್ಡೀಕರರಿಂದಲೇ ಪಡೆದುಕೊಂಡಿತು. ಅಲ್ಲದೆ, ಹಿಂದೂಸ್ತಾನೀ ಸೇವಾದಳ ವ್ಯವಸ್ಥಿತ, ವಿಖ್ಯಾತ ಸ್ವಯಂಸೇವಕ ಸಂಘಟನೆಯಾಗಲು ಕರ್ನಾಟಕದಿಂದಲೇ ಪ್ರಮುಖ ನಾಯಕರು ಮತ್ತು ಬಹುಮಂದಿ ಕಾರ್ಯಕರ್ತರು ದೊರೆತುದು ಗಮನಾರ್ಹ ವಾದದ್ದು.

ಪತ್ರಿಕೆಗಳು

೧೯೩೭ರಲ್ಲಿ ಕಾಂಗ್ರೆಸ್ ಕೆಲವು ಪ್ರಾಂತಗಳಲ್ಲಿ ಆಡಳಿತ ನಡೆಸಿತು. ಸ್ವಲ್ಪಕಾಲ ಹರ್ಡೀಕರರು ಹುಬ್ಬಳ್ಳಿ ಯಲ್ಲಿ ನಿಲ್ಲಲು ಅವಕಾಶವಾಯಿತು. ಆಗ ಹುಬ್ಬಳ್ಳಿ ನಗರದಲ್ಲಿ ರಚನಾತ್ಮಕ ಕಾರ್ಯದ ಕಡೆ ಗಮನ ನೀಡಲು ಅವರಿಗೆ ಸಂದರ್ಭವೊದಗಿತು. ಆ ನಗರ ಬೆಳೆಯುತ್ತ ಹೋಗಿತ್ತು. ಆದರೆ ಪುರಸಭೆ ನಾಗರಿಕ ಸೌಲಭ್ಯಗಳನ್ನು ಒದಗಿಸುವುದರಲ್ಲಿ ವಿಫಲವಾಗಿದ್ದಿತು. ದೀಪದ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಬೀದಿಗಳು ಹದಗೆಟ್ಟಿದ್ದವು. ಮಾರುಕಟ್ಟೆ ಹೀನಸ್ಥಿತಿಯಲ್ಲಿತ್ತು. ಸಾರ್ವಜನಿಕ ಆರೋಗ್ಯದ ಸ್ಥಿತಿಯಂತೂ ಹೇಳಲಾರದಂತಿತ್ತು. ಇದನ್ನೆಲ್ಲ ಪ್ರತ್ಯಕ್ಷ ನೋಡಿದ ಹರ್ಡೀಕರರು ಇದಕ್ಕೆ ಸಂಬಂಧಿಸಿದಂತೆ ನಾಗರಿಕರ ಆಂದೋಲನವನ್ನು ವ್ಯವಸ್ಥೆ ಮಾಡಿದರು. ಇದು ಸುಮಾರು ನಾಲ್ಕು ವರ್ಷಗಳ ಕಾಲ ನಡೆಯಿತು. ಕಡೆಗೆ ಸರ್ಕಾರ ಪುರಸಭೆಯನ್ನು ರದ್ದುಗೊಳಿಸಿತು; ಆಡಳಿತಾಧಿಕಾರಿಯನ್ನು ನೇಮಿಸಿತು.

ಆಡಳಿತಾಧಿಕಾರಿಗೆ ನಾಗರಿಕ ಜೀವನದ ಆವಶ್ಯಕತೆ ಗಳನ್ನು ಅರಿವು ಮಾಡಿಕೊಳ್ಳಲು ‘ಹುಬ್ಬಳ್ಳಿ ಗೆಜೆಟ್’ ಎಂಬ ಪಾಕ್ಷಿಕ (ಹದಿನೈದು ದಿನಗಳಿಗೊಮ್ಮೆ  ಪ್ರಕಟವಾಗುವ) ಪತ್ರಿಕೆಯನ್ನು ಸ್ಥಾಪಿಸಲಾಯಿತು. ಹರ್ಡೀಕರರೇ ಸ್ವತಃ ಅದರ ಸಂಪಾದಕತ್ವವನ್ನು ವಹಿಸಿಕೊಂಡರು. ಇದರಿಂದ ಹುಬ್ಬಳ್ಳಿಯ ನಾಗರಿಕ ಜೀವನದ ಸುಧಾರಣೆಗೆ ತುಂಬ ನೆರವಾಯಿತು. ಕ್ರಮೇಣ ಆ ಪಾಕ್ಷಿಕ ಪತ್ರಿಕೆ ವಾರಪತ್ರಿಕೆ ಯಾಯಿತು. ಅದನ್ನು ಒಂದು ಸಮಿತಿಯ ಆಡಳಿತಕ್ಕೆ ವಹಿಸಿಕೊಡಲಾಯಿತು. ಅದು ಕೇವಲ ಒಂದು ಸ್ಥಾನೀಯ ಪತ್ರಿಕೆ ಎಂಬ ಅಭಿಪ್ರಾಯವನ್ನು ತಪ್ಪಿಸಲು ಅದಕ್ಕೆ ‘ಜಯ ಹಿಂದ್’ ಎಂಬ ಹೆಸರನ್ನು ಇಡಲಾಯಿತು. ಬಾಲ್ಯ ದಿಂದಲೂ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದ ಹರ್ಡೀಕರರಿಗೆ ಇವೆಲ್ಲ ಸಹಜವೇ ಆಗಿತ್ತು.

ಸೆರೆಮನೆ

ರಾಮದುರ್ಗ ಬೆಳಗಾಂ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು. ಹಿಂದೆ ಅದು ಧಾರವಾಡ ಜಿಲ್ಲೆಗೆ ಸೇರಿತ್ತು. ಅದೊಂದು ದೇಶೀಯ ಅರಸರ ಸಣ್ಣ ಸಂಸ್ಥಾನವಾಗಿತ್ತು. ೧೯೩೯ ರ ಏಪ್ರಿಲ್ ೪ ರಂದು ಅಲ್ಲಿ ಕಾಂಗ್ರೆಸ್ ಧ್ವಜಾ ರೋಹಣ ನಡೆದಾಗ, ಸರ್ಕಾರದ ಅಧಿಕಾರಿಗಳು ಅದನ್ನು ಕಿತ್ತು ಎಸೆದರು. ಇದರಿಂದ ಜನ ರೊಚ್ಚಿಗೆದ್ದರು. ಪೊಲೀಸರು ದಬ್ಬಾಳಿಕೆ ನಡೆಸಿದರು. ಲಾಠೀ ಪ್ರಹಾರ, ಗುಂಡಿನ ಸುರಿಮಳೆ ನಡೆಸಿದರು. ಕೆಲವರು ಸತ್ತರು.

ಇದರಿಂದ ಜನ ಇನ್ನೂ ಕೆರಳಿದರು. ಸೆರೆಮನೆಯ ಮೇಲೆ ದಾಳಿ ಮಾಡಿ ತಮ್ಮ ನಾಯಕರನ್ನು ಬಿಡುಗಡೆ ಮಾಡಿದರು. ಆಗ ಗಲಭೆಯಲ್ಲಿ ಕೆಲವು ಪೊಲೀಸರು ಮರಣ ಹೊಂದಿದರು. ರಾಮದುರ್ಗವು ಸೈನ್ಯದ ವಶವಾಯಿತು. ಇದರಿಂದ ಭೀತಿಗೊಂಡ ಜನರು ಊರನ್ನು ತ್ಯಜಿಸಿ, ಕಣ್ಮರೆಯಾದರು. ಹರ್ಡೀಕರರು ೨೦ ಮಂದಿ ಸ್ವಯಂಸೇವಕರೊಂದಿಗೆ ಅಲ್ಲಿಗೆ ಹೋಗಿ, ಕೆಲವು ದಿನ ನಿಂತರು. ಜನರಿಗೆ ಧೈರ್ಯ ತುಂಬಿದರು. ಶಾಂತಿ ಕಲಕಿದ್ದ ಸ್ಥಳದಲ್ಲಿ ನೆಮ್ಮದಿ ಉಂಟಾಯಿತು.

೧೯೪೨ ರಲ್ಲಿ ಮುಂಬಯಿಯಲ್ಲಿ ಸೇರಿದ್ದ ಕಾಂಗ್ರೆಸ್ ಮಹಾಧಿವೇಶನ ‘ಕ್ವಿಟ್ ಇಂಡಿಯಾ’ (ಬ್ರಿಟಿಷರೇ, ಭಾರತದಿಂದ ಹೊರಡಿ) ನಿರ್ಣಯವನ್ನು ಅಂಗೀಕರಿಸಿದ ಕೂಡಲೇ ರಾಷ್ಟ್ರದ ಮಹಾ ನಾಯಕರೆಲ್ಲರ ಬಂಧನ ವಾಯಿತು. ಹರ್ಡೀಕರರರೂ ಸೆರೆಮನೆ ಸೇರಬೇಕಾ ಯಿತು. ೨ನೇ ಮಹಾಯುದ್ಧ ಮುಗಿದು, ರಾಜಕೀಯ ಸಮಸ್ಯೆಗೆ ಪರಿಹಾರ  ದೊರಕುವವರೆಗೂ ಎಲ್ಲರಂತೆ ಅವರೂ ಸೆರೆಮನೆಯಲ್ಲೇ ಇದ್ದರು.

ನಾಡಿನ ಕೃತಜ್ಞತೆ

ದೇಶಕ್ಕೆ ಸ್ವಾತಂತ್ರ್ಯ ಬಂದಿತು. ೧೯೫೦ರ ಮೇ ೭ ರಂದು ಡಾ. ಹರ್ಡೀಕರರಿಗೆ ಅರವತ್ತೊಂದು ವರ್ಷ ತುಂಬಿತು. ಅವರ ಅಪಾರ ಬಂಧುಮಿತ್ರರು ಜೊತೆಗೂಡಿ ೬೧,೦೦೦ ರೂಪಾಯಿಗಳನ್ನು ಸಂಗ್ರಹಿಸಿ ಅವರಿಗೆ ಅರ್ಪಿಸಿದರು. ಆ ಸಮಾರಂಭದ ಸವಿ ನೆನಪಿಗಾಗಿ, ಪ್ರಶಂಸೆಯ ಒಂದು ಸಂಪುಟವನ್ನು ಪ್ರಕಟಿಸಿದರು. ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಹಿಡಿದು ಅನೇಕ ಮಂದಿ ನಾಯಕರು ಡಾಕ್ಟರರ ಸೇವಾಭಾವವನ್ನು ಮುಕ್ತಕಂಠದಿಂದ ಹೊಗಳಿದರು. ಡಾಕ್ಟರರು ತಮಗೆ ಅರ್ಪಿಸಿದ ಹಣವನ್ನು ತಾವು ಸ್ಥಾಪಿಸಿದ್ದ ‘ಹಿಂದ್ ಸೇವಾ ಟ್ರಸ್’ ಸಂಸ್ಥೆಗೆ ನೀಡಿದರು.

ಹರ್ಡೀಕರರು ಎರಡು ಅವಧಿಗಳ ಕಾಲ, ೧೯೬೨ ರವರೆಗೆ, ರಾಜ್ಯಸಭೆಯ ಸದಸ್ಯರಾಗಿದ್ದರು. ಮೊದಲ ಸಲ ಅವರು ನಾಮಪತ್ರವನ್ನು ಸಲ್ಲಿಸುವಾಗ ೫೦೦ ರೂಪಾಯಿ ಠೇವಣಿ ಕೊಡಬೇಕಾಗಿತ್ತು. ಅದನ್ನು ಮುಂಬಯಿ ಪ್ರಾಂತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಎಸ್. ಕೆ. ಪಾಟೀಲರೇ ಕಟ್ಟಿದ್ದರು. ಡಾಕ್ಟರರು ಸರ್ವಾನುಮತ ದಿಂದ ಆಯ್ಕೆಯಾದರು. ಅವರು ಸದಸ್ಯರಾಗಿ ಯಾವ ಉಡುಪನ್ನು ಧರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಅವರು ಸದಾ ಸ್ವಯಂಸೇವಕನ ಉಡುಪು ಧರಿಸುತ್ತಿದ್ದರು. ಅದನ್ನೇ ಧರಿಸಿ ರಾಜ್ಯಸಭೆಯ ಸದಸ್ಯಸ್ಥಾನದಲ್ಲಿ ಕೂಡಬಹುದೇ? ಸಭಾಪತಿ ಡಾಕ್ಟರ್ ರಾಧಾಕೃಷ್ಣನ್‌ರ ಬಳಿಗೆ ಹೋಗಿ, ಸಲಹೆ ಕೇಳಿದರು.

“ನಾನು ೧೯೨೨ ರಿಂದಲೂ ಇದೇ ಉಡುಪನ್ನು ಧರಿಸುತ್ತಿದ್ದೇನೆ. ರಾಜ್ಯಸಭೆಯ ಸದಸ್ಯನಾಗಲು ಇದನ್ನು ಬದಲಾಯಿಸಬೇಕೇ?”

ರಾಧಾಕೃಷ್ಣನ್ ಮುಗುಳುನಗೆ ಬೀರಿ ಹೇಳಿದರು: “ಸಂನ್ಯಾಸಿಗಳಿಗೂ ಸಭಾಭವನದಲ್ಲಿ ಕೂಡಲು ಅವಕಾಶ ನೀಡಿದ್ದೇನೆ. ನಿಮಗೆ ನಿರಾಕರಿಸಲೇ ? ನಿಮ್ಮ ಸ್ವಯಂ ಸೇವಕನ ಸಮವಸ್ತ್ರ ಗೌರವಾನ್ವಿತವಾದುದು ; ನಿಮ್ಮನ್ನು ಈ ಉಡುಪಿನಲ್ಲಿಯೇ ಸ್ವಾಗತಿಸುತ್ತೇನೆ.”

ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ತನು ಮನ-ಧನ ಅರ್ಪಿಸಿದ ಅಜ್ಞಾತ ಹಿಂದೂಸ್ತಾನೀ ಸೇವಾದಳದ ಸ್ವಯಂಸೇವಕನಿಗೆ ಸಂದ ಅಪಾರ ಗೌರವವಿದು.

ಆರೋಗ್ಯಧಾಮ

ಹರ್ಡೀಕರರು ಅಮೆರಿಕಾಕ್ಕೆ ಹೋದುದು ಸಾರ್ವ ಜನಿಕ ಆರೋಗ್ಯ ವಿಭಾಗದಲ್ಲಿ ವಿಶೇಷ ಪರಿಣತನಾಗಿ ಬರಲು ತಾನೆ ? ಆದರೆ ಅವರ ಬಾಳು ಸವೆದ ಜಾಡು ಬೇರೆಯಾಯಿತು. ಹೀಗಿದ್ದರೂ ಅವರು ಆ ಉದ್ದೇಶವನ್ನು ಬಿಡಲಿಲ್ಲ. ಘಟಪ್ರಭಾದಲ್ಲಿ ಡಾಕ್ಟರ್ ಕೋಕಟಕರ್ ಎನ್ನು ವವರೂ, ಡಾಕ್ಟರ್ ಮಾಧವರಾವ್ ವೈದ್ಯ ಎನ್ನುವವರೂ ‘ಕರ್ನಾಟಕ ಆರೋಗ್ಯಧಾಮ’ ಎಂಬ ಸಂಸ್ಥೆಯನ್ನು ಸ್ಥಾಪಿಸಲು ನೆರವಾದರು. ಹರ್ಡೀಕರರು ಆ ಸಂಸ್ಥೆಯ ಆಡಳಿತವನ್ನು ವಹಿಸಿಕೊಂಡರು. ರಾಜ್ಯಸಭೆಯ ಸದಸ್ಯತ್ವ ಮುಗಿದ ಮೇಲೆ, ಆ ಸಂಸ್ಥೆಯಲ್ಲೇ ನೆಲೆನಿಂತರು.

ಇನ್ನೂರು ಎಕರೆಗಳಷ್ಟು ವಿಸ್ತಾರವಾದುದು ಆ ಆರೋಗ್ಯಧಾಮ. ಅಲ್ಲಿ ೧೫೦ ಹಾಸಿಗೆಗಳಿಂದ ಕೂಡಿದ ಸುಸಜ್ಜಿತವಾದ ಸಾಮಾನ್ಯ ವೈದ್ಯಕೀಯ ವಿಭಾಗವಿದೆ. ‘ನಂದನ ವನ’ ಎಂಬ ಹೆಸರನ್ನು ಹೊಂದಿದ ಕ್ಷಯ ರೋಗ ಚಿಕಿತ್ಸಾ ವಿಭಾಗವಿದೆ. ದಾದಿಯರ ಒಂದು ತರಬೇತಿ ಕೇಂದ್ರ ಹಾಗೂ ಒಂದು ಪ್ರಸೂತಿ ಗೃಹ ಸಹ ಇವೆ.

ಸೇವಾ ಭಾವನೆಯ ಪ್ರತೀಕದಂತೆ ಮಹಾತ್ಮಾ ಗಾಂಧೀಜಿಯವರ ಪೂರ್ಣಪ್ರಮಾಣದ ವಿಗ್ರಹವಿದೆ. ಮನಸ್ಸಿನ ಮೇಲೆ ಶಾಂತಿಯ ಪ್ರಭಾವ ಬೀರಲು ಒಂದು ಭವ್ಯವಾದ ಪ್ರಾರ್ಥನಾ ಮಂದಿರವಿದೆ. ಸದಾ ಹಸನ್ಮುಖ ರಾಗಿ ಸೇವೆಗೆ ಸಿದ್ಧರಾದ ವೈದ್ಯರ ಸಿಬ್ಬಂದಿ ಇದೆ. ಆರೋಗ್ಯಧಾಮ, ಮಾನವ ಸೇವೆಯ ಕೇಂದ್ರವೆನಿಸಿದೆ.

ರಾಷ್ಟ್ರೀಯ ಸ್ವಯಂಸೇವಕರನ್ನು ಸೃಷ್ಟಿಸಿದ ಶಿಲ್ಪಿಗೆ ಸೇವಾಭಾವದಿಂದ ದೀನದಲಿತರ, ರೋಗಪೀಡಿತರ ಸೇವೆ ಸಲ್ಲಿಸುವ ಕಾರ್ಯ ಬದುಕಿನ ಕೊನೆಯ ಕಾರ್ಯ ವಾದುದು ಬಹು ಸಮಂಜಸವಾದುದು. ಬಾಲ್ಯದ ಅವರ ಇಚ್ಛೆಯನ್ನು ದೇವರು ಈಡೇರಿಸಿಕೊಟ್ಟಿದ್ದ.

ಸಾರ್ಥಕ ಬಾಳು

೧೯೬೯ ರ ಮೇ ೭ ರಂದು ಅವರಿಗೆ ೮೦ ವರ್ಷ ತುಂಬಿತು. ಅವರ ಮಿತ್ರಬಾಂಧವರೆಲ್ಲ ಸೇರಿ ಅದನ್ನು ಆನಂದದಿಂದ ಆಚರಿಸಿದರು.

೧೯೭೫ ರ ಆಗಸ್ಟ್ ೨೬ ರಂದು ಬೆಳಗ್ಗೆ ಆ ಪುಣ್ಯ ಜೀವಿಯ ದೇಹಾಂತವಾಯಿತು.

ಹರ್ಡೀಕರರು ಸೇವೆ, ಮಾನವಸೇವೆ ಸಲ್ಲಿಸಿ ಕೃತಕೃತ್ಯರಾಗಿದ್ದರು. ಬಡತನದಲ್ಲಿ ಹುಟ್ಟಿಬೆಳೆದ ನಾರಾಯಣ, ಸೇವೆಗೆ ಕಂಕಣ ಕಟ್ಟಿದ್ದ ಆಂಜನೇಯನಂತೆ, ಭೀಷ್ಮನಂತೆ ತಾಯ್ನಾಡಿನ ಅನವರತ ಸೇವೆಗೆ ತಮ್ಮ ಬದುಕನ್ನು ಮುಡಿಪಿಟ್ಟ ಧೀರ, ವೀರ ವ್ಯಕ್ತಿ; ಯುವಜನಕ್ಕೆ ಸದಾ ಆದರ್ಶಪ್ರಾಯ ಅವರು.