Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ನಾರಾಯಣ ಸುಬ್ರಾಯ ಹೆಗಡೆ

ಬಹುರಂಗಗಳಲ್ಲಿ ಸಾರ್ಥಕ ಸಮಾಜಸೇವೆಗೈದ ಬಹುರೂಪಿ ಎನ್.ಎಸ್. ಹೆಗಡೆ (ಕುಂದರಗಿ, ಗ್ರಾಮೀಣ ಭಾಗದ ಏಳೆಗೆ ಆರು ದಶಕಗಳಿಂದಲೂ ಪರಿಶ್ರಮಿಸುತ್ತಿರುವ ಸಮಾಜಬಂಧು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕುಂದರಗಿಯವರಾದ ನಾರಾಯಣ ಸುಬ್ರಾಯ ಹೆಗಡೆ ಅವರು ಹರೆಯದಿಂದಲೂ ಸಮಾಜಸೇವಾನಿರತರು. ಹಿಂದುಳಿದ ಪ್ರದೇಶವೆನಿಸಿದ್ದ ಕುಂದರಗಿಯಲ್ಲಿ ಪ್ರಪ್ರಥಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ತೆರೆದವರು. ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರು. ಬಡಮಕ್ಕಳಿಗೆ ಅನಾಥಾಲಯ, ವಾಚನಾಲಯ ಸೌಲಭ್ಯ, ಸಹಕಾರ ಸಂಘಗಳ ಸ್ಥಾಪನೆ-ಸೇವೆ, ಹಲವು ದೇವಸ್ಥಾನಗಳ ಆಡಳಿತ ಮಂಡಳಿಯ ಸದಸ್ಯರಾಗಿ ದುಡಿಮೆ. ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾಧ್ಯಕ್ಷ, ಸಮ್ಮೇಳನಗಳ ಸಂಘಟನೆ, ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕನ್ನಡದ ಕೈಂಕರ್ಯ, ಹತ್ತಾರು ಸಂಘಟನೆಗಳ ಹೊಣೆಗಾರಿಕೆಯ ಸಮರ್ಥ ನಿರ್ವಹಣೆ, ಪತ್ರಕರ್ತ, ಅಂಕಣಕಾರರಾಗಿಯೂ ಅಕ್ಷರಸೇವೆಗೈದ ಎನ್.ಎಸ್. ಹೆಗಡೆ ಅವರು ಶ್ರಮಿಸಿದ ಕ್ಷೇತ್ರಗಳಿಲ್ಲ. ೮೭ರ ವಯದಲ್ಲೂ ಸಮಾಜಸೇವೆಗೆ ಮಿಡಿವ ವಿರಳಾತಿವಿರಳ ಜೀವಿ.