ಸೂಚನೆ ||
ಜಡಿದು ಭದ್ರಾವತಿಯೊಳಮಲತರ ವಾಜಿಯಂ |
ಪಿಡಿದು ಕಲಿಯೌವನಾಶ್ವನ ಚಾತುರಂಗಮಂ |
ಬಡಿದವನನಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮಂ ಬಂದನು ||

ಜನಮೇಜಯಕ್ಷಿತಿಪ ಕೇಳ್ ಪ್ರಣಯ ಕಲಹದೊಳ್ |
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್ |
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ ||
ಅನಿಲಸುತನಾಹಯಂ ಪೊಳಲ ಪೊರಮಡುವಿನಂ |
ಮನದುಬ್ಬೆಗದೊಳೆ ಚಿಂತಿಸಿ ಮತ್ತೆ ಕರ್ಣಜಾ |
ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು ||೧||

ಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ಗು |
ರುದ್ರೋಹಮೊಂದಚ್ಯುತನೊಳಾಡಿ ಹೊಳೆದ ದೈ |
ವದ್ರೋಹಮೆರಡರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು ||
ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ |
ತ್ಮದ್ರೋಹಮದುವೆ ನಾಲ್ಕಿದರ ಸಂಗಡಕೆ ಧ |
ರ್ಮದ್ರೋಹಮೈದಾಗದಿಹುದೆ ತನಗಶ್ವಮಂ ಕಂಡು ಕೊಂಡೊಯ್ಯದಿರಲು ||೨||

ಪುಸಿದನೆ ಬಯಲ್ಗೆ ವೇದವ್ಯಾಸಮುನಿ ಪುಸಿದೊ |
ಡಸುರಾರಿ ಸೈರಿಪನೆ ಸೈರಿಸಿದೊಡೊಳ್ಳಿತೆಂ ||
ದುಸಿರುವುದೆ ಶಕುನಂಗಳುಸಿರಿದೊಡಭಾಗ್ಯನೇ ಭೂವರನಭಾಗ್ಯನಾಗೆ ||
ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದಪುದೆ |
ವಸುಧೆಯದ್ದೊಡೆ ತನ್ನ ನುಡಿ ಬಂಜೆಯಪ್ಪುದಿದು |
ಪೊಸತದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ ಚಿಂತಿಸಿದನು ||೩||

ಪಾತಕಿಗೆ ನುಡಿದ ಸೊಲ್ ಪುಸಿಯಹುದು ಪರದಾರ |
ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ರ |
ಘಾತಕಿಗೆ ಕಾಣ್ಬೊಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವ ಭವದ ||
ಜಾತಕಿಲ್ಬಿಷವೊ ಯಾದವಕುಲ ಮಹಾಂಬುನಿಧಿ |
ಶೀತಕಿರಣಂ ತನ್ನ ಶರಣನುಳಿದನೊ ಹಯ |
ಮೇತಕಿಂತಕಟ ಕಾಣಿಸದೊ ಶಿವಶಿವಯೆಂದೂ ಪವನಜಂ ಚಿಂತಿಸಿದನು ||೪||

ತಲ್ಲಕ್ಷಣಂಗಳಿಂ ಸಲ್ಲಲಿತಮಾದ ಹಯ |
ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ|
ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತದೊಳು ||
ಎಲ್ಲಿರ್ದೊಡಾ ತಾಣದಲ್ಲಿ ಪೊಕ್ಕರಸಿ ತಂ |
ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ |
ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರುತಿರ್ದನು ||೫||

ಅನಿತರೊಳನೇಕ ಸೇನೆಗಳ ಸನ್ನಾಹದಿಂ |
ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂ |
ದನುಕರಿಸಿದಮಲ ವಸ್ತ್ರಾಭರಣ ಗಂಧಮಾಲ್ಯಾದಿಗಳ ಪೂಜೆಯಿಂದೆ ||
ವಿನುತಾತಪತ್ರ ಚಮರಂಗಳಿಂದೆಡಬಲದೊ |
ಳನುವಾಗಿ ವಾಘೆಯಂ ಪಿಡಿದು ನಡೆತಪ್ಪ ನೃಪ |
ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೈತರುತಿರ್ದುದು ||೬||

ವಿಧುಬಿಂಬದುದಯಮಂ ಕಂಡೊತ್ತರಿಸಿ ಪಯೋ |
ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ |
ಸುಧೆಯೇಳ್ಗೆಯಂ ಕಂಡು ಪುಳಕಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ ||
ಅಧಿಕಬಲ ಯೌವನಾಶ್ವಾವನಿಪನೈಶ್ವರ್ಯ |
ವಧುವಿನ ಕಟಾಕ್ಷದಂತೊಪ್ಪುವ ತುರಂಗಮಂ |
ಕುಧರೋಪಮಾನ ಪವಮಾನಜಂ ಕಂಡು ನೆರೆ ಸಮ್ಮಾನಮಂ ತಾಳ್ದನು ||೭||

ಚತುರಪದಗತಿಯ ಸರಸಧ್ವನಿಯ ವರ್ಣಶೋ |
ಭಿತದಲಂಕಾರದ ಸುಲಕ್ಷಣದ ಲಾಲಿತ |
ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ ||
ನುತ ಸತ್ಕವಿಪ್ರೌಢತರ ಸುಪ್ರಬಂಧದಂ |
ತತಿ ಮನೋಹರಮೆನಿಪ ವಾಜಿಯಂ ಕಂಡು ಹ |
ರ್ಷಿತನಾಗಿ ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು ||೮||

ಮೂಜಗದೊಳೀ ತುರಂಗಮವೆ ಪೊಸತೆಂದು ವರ |
ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ |
ರೋಜಯುಗಳಕ್ಕೆರಗಿ ಮೇಘನಾದಂ ನೀವು ನೋಳ್ಪುದೆನ್ನಧಟನೀಗ ||
ವಾಜಿಯಂ ತಹೆನೆನುತ್ತಲ್ಲಿಂ ತಳರ್ದು ಮಾ |
ಯಾಜಾಲಮಂ ಬೀಸಿದ ನಭೋಮಂಡಲ |
ಕ್ಕಾಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪ ಕೇಳದ್ಭುತವನು ||೯||

ತುರುಗಿತೆತ್ತೆಲುಂ ಪ್ರಳಯಕಾಲದ ಮೇಘ |
ಮೆರಗುತಿವೆ ಬರಿಯ ಬರಸಿಡಲ್ಗಳೆತ್ತೆತ್ತಲುಂ |
ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ ||
ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿ |
ಕ್ಕರಿಯಬಾರದು ಮಹಾದ್ಭುತಮಿದೆತ್ತಣದೊ ಜಗ |
ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕೃತಮಾಯೆಗೆ ||೧೦||

ಗಗನದೊಳ್ ಸುಳಿಯುತನಿಮಿಷನೊರ್ವನಿವನ ಮಾ |
ಯೆಗೆ ಭಯಂಗೊಂಡು ಕಡುವೇಗದಿಂ ಪೋಗಿ ವ |
ಜ್ರಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ ||
ಮಗನಧ್ವರಕೆ ಹಯವನೊಯ್ದು ಪೆನೆನಲ್ಕವಂ |
ಮಗುಳವಂ ಪೋಗಿ ಸುರಪತಿಗೆ ಬಿನ್ನೈಸೆ ನಸು |
ನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸಮರಮಂ ನೋಡಲು ||೧೧||

ಇತ್ತಲೀಕುದುರೆಗಾಪಿನ ಭಟರ ಕಣ್ಗೆ ಬ |
ಲ್ಗತ್ತಲೆಗಳಂ ಧೂಲ್ಗಳಂ ಕವಿಸಿ ಭೀತಿಯಂ |
ಬಿತ್ತಿ ನೆಲಕಿಳಿದು ಪಡಿವಾಘೆಯಂ ಪಿಡಿದರಸುಮಕ್ಕಳಂ ಬೀಳೆಯೊಯ್ದು ||
ತತ್ತುರಗಮಂ ಕೊಂಡು ಚಿಗಿದನಾಗಸಕೆ ಸರ |
ದತ್ತಣಿಂದಂಚೆ ಬೆಳುದಾವರೆಯನಳ್ತಿಯಿಂ |
ಕಿತ್ತು ನಭಕೇಳ್ವಂತೆ ಮೇಘನಾದಂ ಭೀಮಕರ್ಣಜರ್ ಬೆರಗಾಗಲು ||೧೨||

ರಾಹು ತುಡುಕಿದ ಚಂದ್ರಮಂಡಲವೊ ಗರುಡನು |
ತ್ಸಾಹದಿಂದೆತ್ತಿ ಕೊಂಡೊಯ್ವಮೃತಕಲಶವೊ ಬ |
ಲಾಹಕಂ ತಾಳ್ದ ಬೆಳ್ಮಿಂಚಿನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು ||
ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ |
ಹಾಹಯಂ ಗಗನಮಾರ್ಗದೊಳೈದುತಿರೆ ಕುದುರೆ |
ಗಾಹಿನ ಚತುರ್ಬಲಂ ಕಂಡು ಬೊಬ್ಬಿರದಾರ‍್ದು ಕಾಳಗಕೆ ಮುಂಕೊಂಡುದು ||೧೩||

ಜೋಡಾಗಿ ಪೂಡುವೊಡೆ ಸಾಲದೇಳೇ ಹಯಂ |
ಜೋಡಿಸುವೆನೀ ತುರಗಮಂ ತನ್ನ ತೇರ್ಗೆಂದು |
ಗಾಢದಿಂ ಬಾಂಗೆತ್ತಿ ಕೊಂಡೊಯ್ಯದಿರನಬ್ಜಸಖನೆಂಬ ಶಂಕೆಯಿಂದೆ ||
ರೂಢಿಸಿದ ಮಂದೇಹಸೇನೆ ಬಂದೆಣ್ದೆಸೆಗೆ |
ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ |
ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕೆಸದವಂ ಸೈವರಿದನಾಗಸದೊಳು ||೧೪||

ಬಳಿಕಾಬಲಂ ಕಂಡುದಭ್ರಮಾರ್ಗದೊಳೆ ಮುಂ |
ದಳೆಯುತಿಹ ಮೇಘನಾದನನೆಲವೊ ಬರಿಮಾಯೆ |
ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು
ಉಳುಹುವರೆ ಯೌವನಾಶ್ವನ ಸುಭಟರಕಟ ನಿ |
ನ್ನಳವನರಿಯದೆ ಬಂದು ಕೆಣಕಿದೆಯಲಾ ಜೀವ |
ದುಳಿವನಾರೈದುಕೊಳ್ಳೆನುತಾತನಂ ಮುತ್ತಿಕೊಂಡು ಕವಿದಿಸುತಿರ್ದುದು ||೧೫||

ಪಿಂತಿರುಗಿ ನೋಡಿದಂ ಕಂಡೆನಲ್ಲವ ಜೀವ |
ಮಂ ತೆಗೆದುಕೊಂಡೊಯ್ಯ ಕಾಲನಂ ಪೆಣನಟ್ಟು |
ವಂತಾಯ್ತಲಾ ನಿಮ್ಮ ಸಾಹಸಂ ಜಾಗುಜಾಗೆನುತೆ ಹೈಡಿಂಬಿ ನಗುತೆ ||
ಸಂತತಂ ಕರೆವ ಕಲ್ಮಳೆಗಳಂ ಸೃಜಿಸಿ ಬಲ |
ಮಂ ತವೆ ಪೊರಳ್ಚಿ ಮುಂದಲೆಯಲಾಪುಯ್ಯಲೂ |
ರಂ ತಾಗೆ ಪೊರವಟ್ಟುದಾ ನೃಪನ ಸೈನ್ಯಕ್ಷೌಹಿಣಿಯ ಗಣನೆಯಿಂದೆ ||೧೬||

ತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ |
ವಿನ್ನಭಸ್ಥಳಕೊಯ್ದನೆಂಬ ಕಡುಗೋಪದಿಂ |
ಬೆನ್ನ ಬಿಡದೆದ್ದು ನಡೆದುದೊ ಗಗನೀಧರಣಿಯೆನೆ ಘಟೋತ್ಕಚತನುಜನು ||
ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ ಪಡಿ |
ಯನ್ನೆಗಳ್ಚಿದರೊ ವೈರಿಗಳೆನೆ ರಣೋತ್ಸಾಹ |
ದಿನ್ನಡೆವ ಚಾತುರಂಗದ ಪದಹತಕ್ಕೇಳ್ವ ಧೂಳ್ ಮಸಗಿತಂಬರದೊಳು ||೧೭||

ಪಟಹ ನಿಸ್ಸಾಳ ತಮ್ಮಟ ಭೇರಿಗಳ ಸಮು |
ತ್ಕಟನಾದಮುಗ್ರಗಜಘಟೆಯ ಘಂಟಾರವಂ |
ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ ||
ಲಟಕಟಿಪ ಸಮರಲಂಪಟರ ಭುಜಗಳ ಹೊಯ್ಲ |
ಧಟರ ಚಾಪಸ್ವನಂ ಪಟುಭಟರ ಬೊಬ್ಬೆಯಾ |
ರ್ಭಟೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ ||೧೮||

ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ |
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ |
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕೆ ||
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ |
ಮುತ್ತಿನಡೆಯುತೆಲರನೊತ್ತಿ ನಿಲಿಸುತ್ತಿರಲು |
ದತ್ತಚಮರೋತ್ಥಿತ ಮರುತ್ತತಿಯೊಳುತ್ತಮ ಹಿಮೋತ್ತರಂ ಬಿತ್ತರಿಸಿತು ||೧೯||

ತಡೆಯೊಳಿರ್ದಖಿಳ ಮೇಘಂಗಳಂ ಪ್ರಳಯದೊಳ್ |
ಬಿಡಲು ಘಡಿಘಡಿಸುತ್ತೆ ನಡೆವಂದದಿಂದೆ ಬೊ |
ಬ್ಬಿಡುತವಧಿಯಿಲ್ಲದೈತರುತಿರ್ಪ ಯೌವನಾಶ್ವನ ಸೈನ್ಯಮಂ ನೋಡುತೆ ||
ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ |
ಕಡುಗಮಂ ಜಡಿದನಿಬರೆಲ್ಲರಂ ಚಿತ್ತದೊಳ್ |
ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು ||೨೦||

ಡಿಳ್ಳಮಾದುದೆ ಯೌವನಾಶ್ವಭೂಪತಿಯ ಬಲ |
ಮೊಳ್ಳೆಗರ ನೂಕು ನೂಕಾವೆಡೆಯೊಳಾ ಕುದುರೆ |
ಗಳ್ಳನಂ ತೋರು ತೋರೆನುತೆ ನಡೆತಂದು ಹೈಡಿಂಬಿಯಂ ಮುತ್ತಿಕೊಂಡು ||
ಒಳ್ಳಿತೋ ವೀರ ಹಯಚೋರ ಜೀವದೊಳಾಸೆ |
ಯುಳ್ಳೊಡೀಕುದುರೆಯಂ ಬಿಟ್ಟು ಸಾಗಲ್ಲದೊಡೆ |
ಕೊಳ್ಳಾ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ ತುಂಬಿಸಿದರು ||೨೧||

ನಿಮ್ಮರಾಯನ ಪೊರೆಯ ಪರಿವಾರದೊಳ್ ನೀವೆ |
ದಿಮ್ಮಿದರೊ ಮತ್ತೆ ಕೆಲರೊಳರೊ ಕಳವಲ್ಲ ಹಯ |
ಮಮ್ಮೊಗದ ಮುಂದೆ ಕೊಂಡೊಯ್ವೆನಾರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ ಬರಿದೆ ||
ಉಮ್ಮಳಿಸಬೇಡ ನೀವತಿಸಾಹಸಿಗಳಾದೊ |
ಡೊಮ್ಮೆ ಹಮ್ಮೈಸದಿರಿ ಸಾಕೆಂದು ಮೇಘನಾ |
ದಮ್ಮಹಾಮಾಯಾಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು ||೨೨||

ಪೊಡೆವ ಸಿಡಿಲ್ ಕರೆವ ಮಳೆ ಜಡಿವ ಕಲ್ಗುಂಡು ಧೂ |
ಳಿಡುವ ಬಿರುಗಾಳಿ ಕಂಗೆಡಿಪ ಕತ್ತಲೆ ಮೇಲೆ |
ಕೆಡೆವ ಗಿರಿತರುಗಳುರೆ ಕಡಿವ ವಿವಿಧಾಯುಧಂ ನಡುವ ಶಸ್ತ್ರಾಸ್ತ್ರಂಗಳು ||
ಪಿಡಿವ ಪುಲಿಕರಡಿ ಬಾಯ್ವಿಡುವ ಭೂತಂಗಳಸು |
ಗುಡಿವ ಪಾವುಗಳಟ್ಟಿ ಸುಡುವ ಕಾಳ್ಕಿಚ್ಚುಳಿಯ |
ಗುಡವವನ ಮಾಯೆಮಂ ತಡೆವರಿಲ್ಲಾಬಲಂ ಪುಡಿದೆದುದೇವೇಳ್ವೆನು ||೨೩||

ಮಾಯೆಯಿಂ ಪಡೆಯೆಲ್ಲಮಂ ಕೊಂದು ಹಯಮಂ ವಿ |
ಹಾಯಸಪಥದೊಳೊಯ್ವ ಹೈಡಿಂಬಿಯಂ ಕಂಡ |
ಜೇಯರಂಬರದ ವಿವರಂಗಳಂ ಪುಗುವೆಂಟುಸಾವಿರ ಮಹಾರಥರನು ||
ಆ ಯೌವನಾಶ್ವನೃಪನಟ್ಟಿದೊಡೆ ನಭದೊಳಸ |
ಹಾಯಶೂರನ ಮಾರ್ಗಮಂ ಕಟ್ಟಿ ನಿಲ್ಲು ಖಳ |
ಸಾಯದಿರ್ ಬಿಡು ಬಿಡು ತುರಂಗಮವನೆನುತೆ ಸೈಗರೆದರಂಬಿನ ಮಳೆಯನು ||೨೪||

ವೀರರಹುದೋ ಜಗಕೆ ನೀವಲಾ ಸ್ವಾಮಿಹಿತ |
ಕಾರಿಗಳ್ ತಲೆಯಾಸೆಯಿಲ್ಲೆನುತೆ ಹೈಡಿಂಬಿ |
ತೋರಗದೆಯಿಂದವರ ತೇರ್ಗಳಂ ಚಾಪಬಾಣಂಗಳಂ ಕುದುರೆಗಳನು ||
ಸಾರಥಿಗಳಂ ಧ್ವಜಪತಾಕೆಗಳನಪ್ಪಳಿಸಿ |
ವಾರುವಂಬೆರಸಿ ಕಡುವೇಗದಿಂದೈತಂದು |
ಮಾರುತಸುತನ ಮುಂದೆ ನಿಲುತಿರ್ದನನ್ನೆಗಂ ಮತ್ತೆ ಪಡಿಬಲಮೊದವಿತು ||೨೫||

ಹರಿಗಳಿಂ ನಾಗಂಗಳಿಂ ಸ್ಯಂದನಂಗಳಿಂ |
ಶರಜಾಲ ಕದಳಿಗಳ ಪುಂಡರೀಕಂಗಳಿಂ |
ಸುರಗಿಖಡ್ಗಂಗಳಿಂ ನಡೆವ ಕಾಂತಾರದಂತೆಸವ ಚತುರಂಗದೊಡನೆ ||
ಭರದಿಂ ಸುವೇಗನೆಂಬಾ ಯೌವನಾಶ್ವ ಭೂ |
ವರನ ತನುಜಾತನಾಹವಕೆ ನಿರ್ಭೀತನು |
ಬ್ಬರದ ಬಿಲ್ದಿರುವಿನಬ್ಬರದ ಕೊಳಾಹಳಕೆ ಧರೆ ಬಿರಿಯೆ ನಡೆತಂದನು ||೨೬||

ಅಂಬರದೊಳಡ್ಡೈಸಿದೊಡೆ ನಮ್ಮ ರಥಿಕರ್ಕ |
ಳಂ ಬಗೆಯದಹಿತಂ ಹಯಂಬೆರಸಿ ಸೈವರಿದ |
ನೆಂಬುದಂ ಕೇಳ್ದಾಗಳಾ ಯೌವನಾಶ್ವಭೂಪಂ ತಾನೆ ಕೋಪದಿಂದೆ ||
ತುಂಬಿವರಿ ಸಂಪಗೆಯಲರ ಪರಿಮಳದ ಸೂರೆ ||
ಗಂ ಬಯಸಿ ಬಂದುದಿದು ಮಿಗೆ ಪೊಸತೆನುತೆ ಹರಸಿ |
ದಂ ಬೇಗದಿಂ ಮಣಿವರೂಥಮಂ ಕೆಲಬಲದ ಮನ್ನೆಯರ ಗಡಣದಿಂದೆ ||೨೭||

ಇದು ಭಗೀರಥರಥವ ಬೆಂಕೊಂಡು ಪರಿವ ಸುರ |
ನದಿಯ ಪ್ರವಾಹಮೆನಲಾ ನೃಪನ ವರವರೂ |
ಥದ ಪಿಂತೆ ಬಹುವಾದ್ಯರಭಸದಿಂದೆಡೆವರಿಯದೈತಪ್ಪ ಚತುರಂಗದ ||
ಪದಹತಿಗೆ ಧರೆ ನಡಗುತಿರೆ ಜಹ್ನುಮುನಿಪನಂ |
ತದರ ಸಂಭ್ರಮಕೆ ಸೈರಿಸದಂರಂಗದೊಳ್ |
ಕುದಿಯುತಿರ್ದಂ ಕರ್ಣಸುತನವನ ಭಾವಮಂ ಪವನಜಾತಂ ಕಂಡನು ||೨೮||

ಕಟ್ಟಿ ತರುಮೂಲಕಶ್ವಮನದರ ಕಾವಲ್ಗೆ |
ದಿಟ್ಟಹೈಡಿಂಬಿಯಂ ಬೈಚಿಟ್ಟು ತಮ್ಮನರೆ |
ಯಟ್ಟಿ ಬಹ ಯೌವನಾಶ್ವನ ಪಡೆಗೆ ಕಾರ್ಣಿಯಂ ಕಳುಹಿ ಕಾಲಾಗ್ನಿಯಂತೆ ||
ಇಟ್ಟಣಿಸುತೈದುವ ಸುವೇಗದ ಬಲೌಘಕಿದಿ |
ರಿಟ್ಟು ನಿಂದಂ ಭೀಮನುತ್ಸಾಹದಿಂದೆ ಪೆ |
ರ‍್ಬೆಟ್ಟೊತ್ತಿ ನೂಕುವ ಮಹಾವಾತಗಾತಮಂ ತಡೆದೊಲೆಯದಿಪ್ಪಂತಿರೆ ||೨೯||

ಕೇಳ್ ಮಹೀಪಾಲಕ ಸುವೇಗನ ಭಟರ್ ಚೂಣಿ |
ಯೊಳ್ ಮುತ್ತಿಕೊಂಡರ್ ವೃಕೋದರನನಿತ್ತ ಕೆಂ |
ಧೂಳ್ ಮುಸುಕಲೆಣ್ದೆಸೆಗಳಂ ನೃಪರ ಮಣಿಭೂಷಣದ ಕಾಂತಿ ಝಗಝಗಿಸಲು |
ತೋಳ್ ಮಿಡುಕಿನಿಂದಾರ್ದು ಝಳಪಿಸುವ ಭಟರ ಕರ |
ವಾಳ್ ಮಿಂಚೆ ಛತ್ರಚಮರಂಗಳ ವಿಡಾಯಿ ಮಿಗೆ |
ಸೂಳ್ ಮೆರೆಯೆ ನಿಸ್ಸಾಳಕೋಟಿ ಕಲಿಯೌವನಾಶ್ವಕ್ಷಿತಿಪನೈತಂದನು ||೩೦||

ಒತ್ತಿಬಹ ಯೌವನಾಶ್ವನ ಪಡೆಯ ಚೂಣಿಯಂ |
ಕಿತ್ತು ನಿಂದಂ ಕರ್ಣಸುತನದಂ ಕಂಡು ಕವಿ |
ದತ್ತವನಮೇಲೆ ಕರಿ ತುರಗ ರಥ ಪಾಯದಳಮೊಂದಾಗಿ ಸಂದಣಿಯೊಳು ||
ಹತ್ತಿಸಿದ ಚಾಪಮಂ ಜೇಗೈದು ಕೂಡೆ ಮಸೆ |
ವೆತ್ತ ಕೂರಂಬುಗಳನಾರ್ದಿಸಲ್ ಸೇನೆ ಮುರಿ |
ದತ್ತವನ ಬಾಣಘಾತಿಗೆ ಹಯದ ಚೋರನೇಂ ವೀರನೋ ಜಗದೊಳೆನುತೆ ||೩೧||

ಎಲ್ಲಿ ಹಯಚೋರನಂ ತೋರವನ ನೆತ್ತರಂ |
ಚೆಲ್ಲುವೆಂ ಭೂತಗಣಕೆನುತೆ ಖತಿಯಿಂದೆ ನಿಂ |
ದಲ್ಲಿ ನಿಲ್ಲದೆ ಬರ್ಪ ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು ||
ಬಿಲ್ಲೊಳಂಬಂ ಪೂಡಲಾರು ನೀನೆಲವೊ ನ |
ಮ್ಮಲ್ಲಿ ಸೆಣಸಿದ ನೋಡಿದೊಡೆ ಬಾಲಕಂ ನಿನ್ನೊ |
ಳೊಲ್ಲೆನಾಹವಕೆಮ್ಮ ಕುದುರೆಯಂ ಬಿಟ್ಟು ಪೋಗೆಂದೊಡನಿಂತೆಂದನು ||೩೨||

ಆರಾದೊಡೇನಶ್ವಮಂ ಬಿಡುವನಲ್ಲ ಮದ |
ವಾರಣಂ ಪಿರಿದಾದೊಡೆಳಸಿಂಗಮಂಜಿ ಕೆಲ |
ಸಾರುವುದೆ ನಿನ್ನ ತನುವಿನ ತೋರುದಾಯತಕೆ ಕಲಿಗಳೆದೆ ಕಾತರಿಪುದೆ ||
ವೀರನಾದೊಡೆ ಕೈದುಮುಟ್ಟಿಗಳ ಘೋರ ಪ್ರ |
ಹಾರಮಂ ತೋರಿಸೀ ಸ್ಥೂಲಸೂಕ್ಷ್ಮಂಗಳ ವಿ |
ಚಾರಮೇಕೆನುತ ವೃಷಕೇತು ತೆಗೆದೆಚ್ಚನಾ ನೃಪನ ಕಾಯಂ ನೋಯಲು ||೩೩||

ಲೋಕದೊಳ್ ತನ್ನೊಳ್ ಪೊಣರ್ವ ಭಟರಿಲ್ಲ ನೀ |
ನೇ ಕಲಿಕಣಾ ಪಸುಳೆಯೆಂದು ಸೈರಿಸಿದೆ ನಿನ |
ಗಾಕೆವಾಳೀಕೆಯ ಧಿರತ್ವಮುಂಟಾದೊಡದು ಬಳಿಕೆಮ್ಮ ಪುಣ್ಯಮೆನುತೆ ||
ಆಕರ್ಣಪೂರದಿಂ ತೆಗೆದೆಚ್ಚನಾ ಭೂಪ |
ನೀಕರ್ಣಸಂಭವಂ ಕಡಿದನೆಡೆಯೊಳ್ ಸರಳ |
ನೇಕಾರ್ಣವಂ ಮೇರೆದಪ್ಪೆತೆನೆ ಮುಸುಕಿದಂ ಕಣೆಯಿಂದವನ ರಥವನು ||೩೪||

ಮಾರ್ಗದೊಳ್ ಮಾರ್ಗಣಂಗಳನರಿದು ಕರ್ಣಜಂ |
ಕೂರ್ಗಣೆಯ ಕಾರ್ಗಾಲಮಂ ಸೃಜಿಸಲಾ ನೃಪನ |
ತೇರ್ಗೆರಗಿ ಕೂರ್ಗೊಂಡು ಮುತ್ತಿತು ಶತಾಘಮದನೇನೆಂಬೆನಾಕ್ಷಣದೊಳು ||
ಏರ್ಗಳಿಂದೊರ್ಗುಡಿಸಿ ಸಾರಥಿ ಬಿಳಲ್ಕೆ ಕೆ |
ನ್ನೀರ್ಗಾರಿ ದೀರ್ಘಶಯನಂಗೆಯ್ಯ ಕುದುರೆಗಳ್ |
ನೆರ್ಗೋಲ ಪೋರ್ಗಳಾ ನೃಪನಂಗದೊಳ್ ಕಾಣಿಸಿದುವು ಜಾಳಂದ್ರದಂತೆ ||೩೫||

ಒಡಲೊಳಿಡಿದಸ್ತ್ರಮಂ ಕಿತ್ತೊಡನೆ ಚಿತ್ತದೊಳ್ |
ಕಿಡಿಯಿಡುವ ಕಡುಗೋಪದುರಿ ಮೆಯ್ಯೊಳಿರದೆ ಪೊರ |
ಮಡುವುದೋ ಕಣ್ಗಳಿಂದೆನೆ ಕೆಂಪಡರ್ದಾಲಿಗಳ್ ಭಯಂಕರಮಾಗಲು ||
ತುಡುಕಿ ಪಾವಕಮಹಾಬಾಣಮಂ ತಿರುವಿನೊಳ್ |
ತುಡಿಸಿ ಕಿವಿವರೆಗೆ ತೆಗೆದೆಚ್ಚೊಡವನಂದು ಕೈ |
ಗೆಡಬೆ ಕಣಾತ್ಮಜಂ ವಾಗುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು ||೩೬||

ಹವ್ಯವಾಹಾಸ್ತ್ರಮಂ ವರುಣಾಸ್ತ್ರದಿಂ ಗೆಲ್ದು |
ನವ್ಯಮೇಘಾಸ್ತರಮಂ ಕರ್ಣಜಂ ಪೊಡೆ ವಾ |
ಯವ್ಯಾಸ್ತ್ರದಿಂದೆ ಬರಿಕೈದವಂ ತಿಮಿರಾಸ್ತ್ರಮಂ ಜೋಡಿಸಲ್ಕೀತನು ||
ರವ್ಯಸ್ತ್ರದಿಂ ಜೈಸಿ ಶೈಲಾಸ್ತ್ರಮಂ ತುಡಲ್ |
ದಿವ್ಯ ಕುಲಿಶಾಸ್ತ್ರದಿಂ ಮುರಿದಾ ನೃಪಾಲನು |
ಗ್ರವ್ಯಾಳದಸ್ತ್ರಮಂ ತೆಗೆಯಲ್ಕೆ ಗರುಡಾಸ್ತ್ರದಿಂದಿವಂ ಖಂಡಿಸಿದನು ||೩೭||

ತುರೇ ತರುಣ ಮಂತ್ರಾಸ್ತ್ರಪ್ರತೀಕಾರ |
ಚಾತುರ್ಯಮುಂಟಲಾ ನಿನ್ನೊಳದು ಲೇಸು ಗೆ |
ಲ್ವಾತುರಮದೇಕೆ ನಿನಗೆನುತವಂ ಕೈದೋರಿಸಲ್ ಕಣೆಗಳಾಗಸದೊಳು ||
ಸೇತುವಂ ಕಟ್ಟಿದವೊಲಿಟ್ಟಣಿಸಲಾಗ ವೃಷ |
ಕೇತು ತರಿದೊಟ್ಟುತಿರಲವರಿರ್ವರೆಡೆಯೊಳ |
ಡ್ಡಾತು ನಿಂದುದು ಬಳೆಯ ಚಿನಗಡಿದ ಶರಗಿರಿಯದೇನೆಂಬೆನದ್ಭುತವನು ||೩೮||

ಅವರಿರ್ವರಿಸುಗೆಯೊಳ್ ಮಂಡಲಾಕೃತಿಯೊಳೊ |
ಪ್ಪುವ ಕಾರ್ಮುಕಂಗಳುದಯಾಸ್ತ ಮಯಮಪ್ಪ ಶಶಿ |
ರವಿಬಿಂಬದಾಯತದೊಲಿರೆ ನಡುವಣಂಬುಗಳ್ ತನ್ಮರೀಚಿಗಳಂತಿರೆ ||
ಅವಯವದ ಗಾಯದೊಳುಗುವ ರಕ್ತಧಾರೆಗಳ್ |
ತವೆ ಸಂಜೆ ಗೆಂಪಿಡಿದ ತೆರದಿಂದೆ ಕಂಗೊಳಿಸೆ |
ಭುವನದೊಳ್ ಪೊಸತಾಯ್ತು ಸಂಗರಂ ಸಂಧ್ಯಾಗಮವನಂದು ಸೂಚಿಪಂತೆ ||೩೯||

ಎಚ್ಚು ಕೈಗೆಡನಾ ನೃಪಾಲನಾ ಕಣೀಗಳಂ |
ಕೊಚ್ಚಿ ಬೇಸರನೀ ವೃಷಧ್ವಜಂ ಬಳಿಕದಕೆ |
ಮೆಚ್ಚಿ ಕೇಳ್ದಂ ಯೌವನಾಶ್ವನೆಲೆ ಬಾಲ ನೀಂ ಪಸುಳೆಯಾಗಿರ್ದೊಡೇನು ||
ಕೆಚ್ಚೆದೆಯ ಭಟನಪ್ಪೆ ನಿನ್ನ ಪಡೆದವನಾವ |
ನೆಚ್ಚರಿಸು ನಿಮ್ಮ ಮುತ್ತಯ್ಯನಾರೆನುತ ತೆಗೆ |
ದೆಚ್ಚೊಡಾತನ ಕೋಲ್ಗಳಂ ಕಡಿದು ನಸುನಗುತೆ ಕರ್ಣಸುತನಿಂತೆಂದನು |೪೦||

ಪುಯ್ಯಲೊಳ್ ಬಂದಳವುದೋರುತಿರ್ಪಾಗ ನಿ |
ಮ್ಮಯ್ಯ ಮುತ್ತಯ್ಯನಾರೆಂದು ತನ್ನಂ ಕೇಳ್ವೆ |
ಕಯ್ಯರಿದು ಕಾಣಬೇಡವೆ ಕರ್ಣ ಕಮಲಹಿತಕರರವರನುಸಿರಬಹುದೆ ||
ಪೊಯ್ಯಲೆಳಸಿದ ವರೋಧಿಯ ಕಿವಿಗೆ ವಿರಹಿತಂ |
ಗೆಯ್ಯಬೇಕಲ್ಲದೆಲೆ ಮರುಳೆ ಕೋವಿದನಾದೊ |
ಡೊಯ್ಯನೆ ಪರೋಕ್ಷದೊಳ್ ತಿಳಿದು ಕೊಳ್ ಸಾಕೆನುತೆ ವೃಷಕೇತು ತೆಗೆದೆಚ್ಚನು |೪೧||

ಅಪ್ರತಿಮನಪ್ಪೆ ಬಾಲಕ ಲೇಸುಲೇಸು ಬಾ |
ಣಪ್ರಯೋಗಂಗಳೆನುತೊಂದು ಕಣೆವೂಡಿ ಕ |
ರ್ಣಪ್ರದೇಶಕೆ ತೆಗೆದವಂ ಬಿಡಲ್ಕಿವನುರವನುಗಿಯೆ ಮೈಮೆರೆದು ಕೂಡೆ ||
ಸಪ್ರಾಣಿಸುತೆ ಕೆರಳಿದ್ದನ್ನು ನೋಡೀ ಸಾಯ |
ಕಪ್ರಭಾವವನೆನುತೆ ದೆಸೆದೆಸೆಗುಗುಳ್ವ ಕನ |
ಕಪ್ರಭೆಯೊಳೆಸೆವ ಸರಳಂ ತೊಟ್ಟು ಕೆನ್ನೆದಾರ್ದೆಚ್ಚನಾನೃಪನನು ||೪೨||

ಏನೆಂಬೆನರಸ ಕರ್ಣಜನ ಬಾಣದ ಘಾತ |
ಕಾ ನರೇಂದ್ರಂ ಕರದ ಚಾಪಮಂ ಬಿಟ್ಟು ಮೂ |
ರ್ಛಾನುಗತನಾಗಲಾತನ ಬಲಂ ಮುಂಕೊಂಡು ಬಂದಿವನಮೇಲೆ ಕವಿಯೆ ||
ಆನೆಯಂ ಪೊಯ್ದೆಳೆವ ಸಿಂಗಮಂ ಮುತ್ತುವ ಮೃ |
ಗಾನೀಕಮಂ ಕಂಡೆವಿಂದೆನುತೆ ತುಳುಕಿದನ |
ನೂನ ಶರಜಾಲಮಂ ಕರಿ ತುರಗ ರಥ ಪದಾತಿಗಳ ಸಂದಣಿ ದಣಿಯಲು ||೪೩||

ತರಿತರಿದು ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ |
ಕೊರೆದರೆದು ಕಡಿದಿರಿದು ಬಗಿದುಗಿದು ಗಬ್ಬರಿಸಿ |
ಪರಿದು ಸೀಳ್ದುತ್ತರಿಸಿ ಕೆತ್ತಿ ಖಂಡಿಸಿ ಬಳಿಚಿ ತಿವಿದಿಕ್ಕಿ ಕೊಯ್ದು ಪೊಯ್ದು ||
ಎರಗಿ ಕವಿದಿಡಿದೊತ್ತಿ ಕದುಕಿ ಕೀಲಿಸಿ ಕೇರಿ |
ತುರುಗಿ ತುಂಡಿಸಿ ತುಳುಕಿ ನಾಂಟಿ ಮರುಮೊನೆಗೊಂಡು |
ನೆರೆ ಪೊರಳ್ಚಿದುವರಿಚತುರ್ಬಲವನೆಲ್ಲಮಂ ಕರ್ಣಜನಿಸುವ ಕಣೆಗಳು ||೪೪||

ತಲೆ ಬೀಳಲಟ್ಟೆಗಳ್ ಕಾದಿದುವು ಮೇಣಟ್ಟೆ |
ನೆಲಕುರುಳೆ ತಲೆಗಳೆದ್ದಾಡಿದುವು ಕೈದುಗಳ |
ನಲುಗಿದುವು ಖಂಡಿಸಿದ ತೋಲ್ಗಳುರೆ ಕಡಿದ ಕಾಲ್ಗಳ್ ಮುಂದಕಡಿಯಿಟ್ಟುವು ||
ಕಲಿತನಮದೆಂತೊ ಪಟುಭಟರಳವಿಗೊಟ್ಟಾಗಿ |
ಸಲೆ ಸರಳ ಸಾರದಿಂ ಮಡಿಯುತಿರ್ದರು ಸಮು |
ಜ್ವಲ ದೀಪದೆಡೆಗೆ ಮುಗ್ಗವ ಪತಂಗದಪ್ರಸರಮೆನೆ ವೃಷಧ್ವಜನಿದಿರೊಳು ||೪೫||

ಕಡಿಕಡಿದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ |
ಪೊಡೆಗೆಡೆದ ಹೇರೊಡಲ ಸೀಳ್ಗಳಿಂ ಪೋಳ್ಗಳಿಂ
ಮಡಿಮಡಿದುರುಳ್ವ ಕಟ್ಟಾಳ್ಗಳಿಂ ಬಾಳ್ಗಳಿಂದೊಡೆದ ತಲೆವೋಳ್ಗಳಿಂದೆ ||
ಕಡುಭಯಂಕರಮಾಗಲಾರಣದ ಮಾರಣದ |
ನಡುವೆ ಕಲ್ಪಾಂತಭೈರವನಂತೆ ಜವನಂತೆ |
ಕಡುಮುಳಿದವನ ಕಾಣುತವೆ ಬಿಟ್ಟು ಸಲೆ ಕೆಟ್ಟು ಸರಿದರೆಣ್ದೆಸೆಗೆ ಭಟರು ||೪೬||

ಮೈಮರೆದ ಭೂಪನಂ ಬಿಟ್ಟು ಪಟುಭಟರುಳಿದೆ |
ವೈ ಮಹಾದೇವೆನುತೆ ಸರಿದರೆಣ್ದೆಸೆಗಿವಂ |
ಕೈಮಾಡಲೊರ್ವರಂ ಕಾಣದೆ ಬಳಲ್ದ ರಿಪು ಚೇತರಿಸಿಕೊಳ್ಳದಿರಲು ||
ವೈಮನಸ್ಯದೊಳಕಟ ತಪ್ಪಿತೆ ರಣಾಟೋಪ |
ವೈಮೊಗಂ ಬಲ್ಲನೆನುತವನೆಡೆಗೆ ಬಂದಿದೇ |
ನೈ ಮೂರ್ಛೆ ನಿನಗೆನಲ್ ನುಡಿಯದಿರಲೊಯ್ಯನಾ ನೃಪನುಸಿರನಾರೈದನು ||೪೭||

ಸತ್ಯಮೆನಗುಂಟಾದೊಡಾಂ ಧಿರನಾದೊಡಾ |
ದಿತ್ಯಂಗೆ ಪೌತ್ರನಾದೊಡೆ ತನ್ನ ತಾತಂಗ |
ಪತ್ಯ ನಾನಾದೊಡೀ ನೃಪತಿ ಜೀವಿಸಲೆನುತ ಕರ್ಣಜಂ ಪಗೆಮಾಡುವ ||
ಕೃತ್ಯಮಂ ಬಿಟ್ಟಾ ಮಹೀಶನ ಬಳಲ್ಕೆಗೌ |
ಚಿತ್ಯಮಾದುಪಚಾರದಿಂದೆ ಸಮರಶ್ರಮ ಪ |
ರಿತ್ಯಾಗಮಪ್ಪಂತೆ ಸಂತ್ಯೇಸುತಿರಲಾ ಧರಾಧಿಪಂ ಮೈಮುರಿದನು ||೪೮||

ಅರಸ ಕೇಳಾ ಯೌವನಾಶ್ವನಿಂತಾಗ ಮೈ |
ಮುರಿದು ಕಣ್ದೆರೆವನಿತರೊಳಗಾತನರಿಯದಂ |
ತಿರೆ ಕರ್ಣಸಂಭವಂ ಮುನ್ನ ತಾನಿರ್ದ ಪ್ರದೇಶಕೈತಂದು ನಿಂದು ||
ಕರದ ಕಾರ್ಮುಕವನೊದರಿಸಿ ದಿವ್ಯಬಾಣಮಂ |
ತಿರುಪುತಾರ್ದಿಸುವ ತೆರದಿಂ ಬರಿದೆ ಮುಳಿಸಿನು |
ಬ್ಬರಮಂ ನೆಗಳ್ಚಿ ತನ್ನಾಳ್ತನದ ಬಿಂಕಮಂ ಕಾಣಿಸಿದನೇವೇಳ್ವೆನು ||೪೯||

ಕೂಡೆ ಕಣ್ದೆರೆದೆದ್ದು ಚೇತರಿಸಿ ದೆಸೆಗಳಂ |
ನೋಡಿ ತನ್ನ ವರೊರ್ವರಂ ಕಾಣದಿದಿರೆ ಕೈ |
ಮಾಡದೆ ವೃಥಾಟೋಪಮಂ ನೆಗಳ್ಚುವ ವಿರೋಧಿಯ ವಕ್ರಮವನೆ ಕಂಡು ||
ಮೂಡಿದ ವಿರಕ್ತಿಯಿಂ ನಾಚಿ ಮನದೊಳ್ ಪಂತ |
ಪಾಡಿವನೊಳಿನ್ನು ಸಲ್ಲದು ತನಗೆ ಕಾರುಣ್ಯ |
ಕೀಡಾದ ಬಳಿಕದೇತಕೆ ಸಮರವೆನುತವಂ ಕರ್ಣಜಂಗಿಂತೆಂದನು ||೫೦||

ಮೂಲೋಕದೊಳ್ ತನಗೆ ಸಮರಾದ ಮೇದಿನೀ |
ಪಾಲರಂ ಸುಭಟರಂ ಕಾಣೆನೆಂದಾನಿನಿತು |
ಕಾಲಮುಂ ಬೆರೆತಿರ್ದೆನೆನ್ನುವಂ ಗೆಲ್ದು ನೀನತಿಬಲನೆನಿಸಿಕೊಂಡೆಲಾ ||
ಚಾಲ ನೀನಾರವಂ ನಿನ್ನ ಪೆಸರೇನಿಳೆಗೆ |
ಮೇಲೆನಿಸುವೀ ಹಯಂ ನಿನಗದೇತಕೆ ನಿನ್ನ |
ಶೀಲಕಾಂ ಮಾರುವೋದೆಂ ಕಾದಲೊಲ್ಲೆನಿನ್ನುಸಿರೆಂದೊಡಿಂತೆಂದು ||೫೧||

ಅದೊಡೀ ಜಗಕೆ ಲೋಚನನೆನಿಸಿ ನಭದೊಳೆಸೆ |
ವಾದಿತ್ಯನಿಂದೊಗೆದ ಕರ್ಣನಂ ಕೇಳ್ದರಿವೆ |
ಯದೊಡಾತನಸುತಂ ಪೆಸರೆನಗೆ ವೃಷಕೇತುವೆಂದು ನರಲೀಲೆಗಾಗಿ ||
ಯಾದವರ್ಗರಸಾದ ಕೃಷ್ಣಂ ಭರತಕುಲದ |
ಮೇದಿನೀಶ್ವರ ಯುಧಿಷ್ಟರನಿಂ ಮಖಂಗೈಸ |
ಲೀ ದಿವ್ಯಹಯಕೆ ಭೀಮನನಟ್ಟಲವನೊಡನೆ ಬಂದೆನಿದು ಹದನೆಂದನು ||೫೨||

ಎಂದೊಡೆಲೆ ಕುವರ ನೀನಿನ್ನೆಗಂ ತನ್ನೊಳಿಂ |
ತೆಂದುದಿಲ್ಲಕಟ ಧರ್ಮದ ರೂಪು ತಾನೀತ |
ನೆಂದೆಂಬರಾ ಯುಧಿಷ್ಠಿರಮಹೀಪತಿಯನವನಿಂ ಮಖಂಗೈಸಿದಪನೆ |
ಇಂದಿರಾವಲ್ಲಭನ ಪದಕೆ ನವಿಹಯವ |
ನೊಂದನೊಯ್ವರೆ ತನ್ನ ಸರ್ವಸ್ವಮಂ ತಾನೆ |
ತಂದು ಹರಿಪದಕರ್ಪಿಸುವೆನೆಲ್ಲಿ ಭೀಮನಂ ತೋರೆಂದನಾ ಭೂಪನು ||೫೩||

ಎನಲಚ್ಯುತನ ಪದಕೆ ಸರ್ವಸ್ವಮೊಪ್ಪಿಸುವ |
ಮನಮುಳ್ಳನಾವನಾತಂಗೆ ಪಾಂಡವರೊಳೆರ |
ವಿನಿತಿಲ್ಲಮಾ ಪಾರ್ಥಿವರ ಸಖ್ಯಮಾವಂಗೆ ದೊರೆವುದಾತಂಗೆ ಹರಿಯ ||
ಮುನಿಸಿಲ್ಲಮದರಿಂದೆ ಭೀಮನಂ ಕಾಣ್ವುದೀ |
ಗನುನಯಂ ನಿನಗೆಂದು ಕರ್ಣಜಂ ನುಡಿದೊಡಾ |
ಜನಪನುತ್ಸವದೊಳಳವಡಿಸಿದಂ ತನ್ನ ಮಣಿರಥವನಿರ್ವರುಮೈದಲು ||೫೪||

ಮಾನವಾಧಿಶ ಕೇಳ್ ಬಳಿಕ ವೃಷಕೇತು ಸು |
ಮ್ಮಾನದಿಂದಾ ಯ್ವವನಾಶ್ವಭೂಪತಿಗೆ ಪವ |
ಮಾನಸುತನಂ ಕಾಣಿಸುವೆನೆಂಬ ತವಕದಿಂದಾತನ ವರೂಥದೊಳಗೆ ||
ಮಾನದಿಂದಡರ್ದವಂವೆರಸಿ ನಡೆತರುತಿರೆ ವಿ |
ಮಾನದಿಂ ನೋಡುವನಿಮಿಷನಿಕರವಿತನ ಸ |
ಮಾನದವರಿಲ್ಲೆಂದು ಕೊಂಡಾಡುತಾಗದೊಳರ ಸರಿಯಂ ಕರೆದರು ||೫೫||

ಅನ್ನೆಗಂ ಭದ್ರಾವತೀಶ್ವರನ ಸುತನ ಸೈ |
ನ್ಯನ್ನಡೆಯ ಬಂದಾ ವೃಕೋದರನ ಮುತ್ತಿದೊಡ |
ವನ್ನಿಜಗದಾದಂಡಮಂ ಕೊಂಡು ದಿಂಡುಗೆಡಪಿದೊಡಾ ನೃಪಾಲಸೂನು ||
ತನ್ನ ಸಾಹಸದೊಳನಿಲಜನ ಕೋಪಾಟೋಪ |
ಮನ್ನಿಲಿಸಿ ಕಾದುತಿರಲಾ ಸಮಯಕಿವರೊಂದೆ |
ರನ್ನದೇರೊಳಗಿರ್ವರುಂ ಬರುತಿರಲ್ ಕಂಡು ಬೆರಗಾದರವರತ್ತಲು ||೫೬||

ಪವಮಾನನಂದನ ಸುವೇಗರನ್ಯೋನ್ಯಮಾ |
ಹವದ ಬೇಳಂಬಮಂ ಮರೆದೊಂದೆ ಪೊಂದೇರೊ |
ಳವರಿರ್ವರುಂ ಬರಲ್ ಕಂಡು ವಿಸ್ಮಿತರಾಗಿ ನಿಂದರನಿತರೊಳಿತ್ತಲು ||
ರವಿಸುತನ ಸೂನು ಕಲಿಯೌವನಾಶ್ವಂಗೆ ಪಾಂ |
ಡವರಾಯನನುಜನಂ ತೋರಿಸಿದೊಡಾ ವರೂ |
ಥಳನಿಳಿದು ನಡೆಯುತಾ ಭೂವರಂ ತನ್ನ ತನುಸಂಭವಂಗಿಂತೆಂದನು ||೫೭||

ತನಯ ದಿವ್ಯಾಶ್ವಮಂ ಪಿಡಿದರಿವರೆಂಬ ಮನ |
ದನುತಾಪವಂ ಬಿಡು ಸರೋಜಾಂಬಕಂ ಪಾಂಡು |
ಜನಪನಂದನ ಯುಧಿಷ್ಠಿರನರೇಶ್ವರನ ಮಖಕೆಂದು ನವಿ ಕುದುರೆಗೆ ||
ಅನಿಲಸುತನಂ ಕಳುಹಿದೊಡೆ ಬಂದನಾತಂಗೆ |
ವಿನಯದಿಂದೆಮ್ಮ ಸರ್ವಸ್ವಮಂ ಕುಡುವೆವಿ |
ನ್ನನುವರವದೇಕೆ ನಿಲ್ಲೆನಲವಂ ಶರಧನುವನಿಳುಹಿ ಪಿತನಂ ಸಾರ್ದನು ||೫೮||

ಬಳಿಕ ತನುಜಾತನಂ ಕೂಡಿಕೊಂಡಾ ನೃಪಂ |
ನಳಿನಸಖಸುತನ ಮಗನೊಡನೆ ಬಂದನಿಲಜನ |
ಬಳಿಸಾರ್ದು ಕಾಲ್ಗೆರಗಲವನೀ ವೃಷಧ್ವಜನ ಮೊಗನೋಡುತಿವರಾರೆನೆ ||
ಎಳನಗೆಯೊಳಾತನಿವನೀಗಳೀ ಮೇದಿನೀ |
ತಳಕರಸೆನಿಪ ಯೌವನಾಶ್ವನೀತಂಗೆ ಮೈ |
ನೆಳಲೆನಿಪ ಕುವರಂ ಸುವೇಗನೆಂಬವನೀತನೆನುತೆ ಮಣಿದಂ ಪದದೊಳು ||೫೯||

ಇವರಚ್ಯುತಾಂಘ್ರಿ ದರ್ಶನಲಂಪಟತ್ವದಿಂ |
ದವನಿಪತಿಕುಲಶಿರೋಮಣಿಯೆನಿಪ ಧರ್ಮಸಂ |
ಭವನಡಿಯನೋಲೈಸಲೆಂದು ನಿನ್ನಂ ಕಾಣಲೋಸುಗಂ ಬಂದರೆಂದು ||
ಪವನಜಂಗಾ ವೃಷಧ್ವಜನೊರೆದೊಡಾತನು |
ತ್ವವದೊಳಾ ಭೂಪಾಲನಂ ತೆಗೆದು ತಕ್ಕೈಸು |
ತವನ ತನುಪಾತನಂ ಬಿಗಿಯಪ್ಪಲಾ ನೃಪಂ ಬಕವೈರಿಗಿಂತೆಮದನು ||೬೦||

ಎಲೆ ವೃಕೋದರ ಬಾಹುಬಲಮುಳ್ಳ ವೀರರುಂ |
ಪಲಬರುಂಟಿಳೆಯೊಳವರಂ ಕಂಡು ಬಲ್ಲೆನಾಂ |
ಕಲಹದೊಳ್ ಮಲೆತವಂ ಮೈಮರೆದೊಡಿವರಲ್ಲದೆ ಪಗೆಯ ಪೊರೆಗೆ ಬಂದು ||
ಅಲಸಿದವನಿವಂ ಧುರದೊಳೆಂದವನನುಪಚರಿಸಿ |
ಸಲಹಿದ ಪರಾಕ್ರಮಿಗಳಾರ್ ಮಹೀತಲದೊಳೀ |
ಕಲಿವೃಷಧ್ವಜನಲ್ಲದಮರ ದಾನವ ಮಾನವರೊಳೊಗೆದ ಪಟುಭಟರೊಳು ||೬೧||

ಅವನ ವಿನೋದಮಾತ್ರದೊಳೀ ಸಮಸ್ತಭುವ |
ನಾವಳಿಗಳಾಗಿ ಬಾಳ್ದಳಿವುವಾವಿಭು ನಿಮ್ಮ |
ಸೇವೆಯಾಳ್ ಗಡ ನಾನದೇಸರವನೆಂದೆನ್ನ ಮೇಲೆ ಸಾಹಸವನೆಸಗಿ ||
ಈ ವಾಜಿಯಂ ಪಿಡಿದಿರಕಟ ತಪ್ಪಿದಿರಿ ಲ |
ಕ್ಷ್ಮೀವರನ ಕಿಂಕರರ್ಗೀಯದನೆ ತಾನೆನ್ನ |
ಜೀವಮಂ ಸಮರದೊಳ್ ಕಾದುಳಿಪಿದಂ ಕರ್ಣತನಯನದನೇವೇಳ್ವೆನು ||೬೨||

ಈ ವೃಷಧ್ವಜನಿಂದು ಸಮರದೊಳ್ ಕಾಯದೊಡೆ |
ಹಾ ವೃಥಾಕೃತಮಾಗಿ ಪೋಗುತಿರ್ದುದು ಜನ್ಮ |
ಮಾವೃತಸಮಸ್ತಯಾದವನಾಗಿ ನಿಮ್ಮೊಳಗೆ ನರಲೀಲೆಯಂ ನಟಿಸುವ ||
ಶ್ರೀವೃತ್ತಕುಚ ಕುಂಕುಮಾಂಕನಂ ಕಂಡಪೆನ |
ಲಾ ವೃಕೋದರ ನೀವು ಮಾಡಿದುಪಕಾರಕಬ |
ಲಾವೃಂದ ಸಹಿತ ಬಂದೆನ್ನ ಸರ್ವಸ್ವಮಂ ಹರಿಗರ್ಪಿಸುವೆನೆಂದನು ||೬೩||

ಎಂದೊಡರಸಮಗೆ ಸೋದರರಾವು ನಾಲ್ವರುಂ |
ಟಂದುವರೆಗಿನ್ನು ನೀಂ ಸಹಿತೈವರಾದೆವಿದ |
ರಿಂದೆ ಹರಿದರ್ಶನಮಸಾಧ್ಯಮಪ್ಪುದೆ ನಿನಗೆ ಧರ್ಮಜನ ವರಮುಖವನು ||
ನಿಂದು ಮಾಡಿಸುವ ಭಾರಕನಸುರಹರನಾ ಮು |
ಕುಂದನಂ ಕಾಣ್ಬುದೊಳ್ಳೊಡೆ ತನ್ನ ಕೂಡೆ ನೀಂ |
ಬಂದು ಸೇವಿಪುದೆನಲ್ ಮಾರುತಿಗೆ ವಿನಯದಿಂದಾ ಭೂಪನಿಂತೆಂದನು ||೬೪||

ಅಹುದು ನೀನೆಂದುದಂ ವಿರೆ ನೆನ್ನೂರ್ವುಗದೆ |
ಬಹಿರಂಗದಿಂ ತೆರಳ್ವುದು ನೀತಿಯಲ್ಲೆನ್ನೊ |
ಳಹ ಸೇವೆಯಂ ಪುರದೊಳೊಂದೆರಡು ದಿವಸಂಗಳಿರ್ದು ಕೈಕೊಂಡ ಬಳಿಕ ||
ಬಹು ವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ |
ಬಹೆನೆನ್ನನೊಡಗೊಂಡು ಮುದದೆ ಪೋಪಂತನು |
ಗ್ರಹಿಸೆಂದವಂ ಬೇಡಿಕೊಳಲೊಪ್ಪಿದಂ ಕೀಚಕಾಂತಕಂ ಸಂತಸದೊಳು ||೬೫||

ತರಿಸಿ ಕೋಲ್ವಿಡಿದ ಹಯಮಂ ಸುವೇಗದ ವಶದೊ |
ಳಿರಿಸಿ ಬಳಿಕನಿಲಜಂ ಹೈಡಿಂಬಿಕರ್ಣಜ |
ರ್ವೆರಸಿ ಭದ್ರಾವತಿಗೆ ಬರಲಾನೃಪಂ ಪೊಳಲ ಸಿಂಗರಿಸಿ ಮೇಣಿವರನು ||
ಅರಸಿಯರ ಗಡಣದೊಳಿದಿರ್ಗೊಂಡು ವನೆಯೊಳಾ |
ದರಿಸಿ ದಿವಸತ್ರಯಂ ತಡೆದೊಡನೆ ಮಂತ್ರಿಯಂ |
ಕರೆಸಿ ರಾಜ್ಯದ ಭಾರಮಂ ಪೋರಿಸಿ ಹಸ್ತಿನಾಪುರಕೈದಲನುವಾದನು ||೬೬||

ತೀವಿರ್ದ ನಿಖಿಳಭಂಡಾರಮಂ ತೆಗಿಸಿ ನಾ |
ನಾವಸ್ತುನಿಚಯಮಂ ಪೇರಿಸಿ ಸಮಸ್ತಸೇ |
ನಾವಿತತಿ ಸಹಿತಾಹಯಂ ಸಹಿತ ಸುತ ಸಹೋದರ ಬಂಧುವರ್ಗ ಸಹಿತ ||
ಆ ವಸುಮತೀವಲ್ಲಭಂ ಪ್ರಭಾವತಿಯೆಂಬ |
ದೇವಿಸಹಿತಗಣಿತ ವಧೂಜಾಲಸಹುತ ಭ |
ದ್ರಾವತಿಯ ಪುರಜನಂಸಹಿತ ಪೊರಮಟ್ಟನೊಲವಿಂ ಭೀಮಸೇನನೊಡನೆ ||೬೭||

ಎಲ್ಲರುಂ ಪೊರಮಟ್ಟ ಬಳಿಕಾನೃಪಂ ರಮಾ |
ವಲ್ಲಭನ ದರ್ಶನಕೆ ಮಾತೆಯಂ ಕರೆಯಲವ |
ಳೊಲ್ಲೆ ನಾನಿಲ್ಲಿರದೊಡೀಬದುಕ ಸಾಗಿಸಿವರಾರೆಮದು ಚಂಡಿಗೊಳಲು ||
ಪುಲ್ಲನಾಭಂಗೆ ಸರ್ವಸ್ವಮೊಪ್ಪಿಸುವೆಡಿವ |
ಳಿಲ್ಲದಿರಬಾರದೆಂದಾಕೆಯಂ ಬಲ್ಪಿನಿಂ |
ನಿಲ್ಲದಂದಳವನೇರಿಸಿ ಮತ್ತೆ ಮಾರುತಿಯೊಡನೆ ಪಯಣಕನುವಾದನು ||೬೮||

ಪಟ್ಟಣದೊಳಾರುಮಿಲ್ಲೆನಿಸಿ ತನ್ನೊಡನೆ ಪೊರ |
ಮಟ್ಟುವಖಿಳಪ್ರಜೆಗಳಿವರ ನಡೆಸಲ್ ದಿನಂ |
ತಟ್ಟಿಸದಿರಲ್ ಮಾಣದನ್ನೆಗಂ ಧರ್ಮಜಂಗೀ ರಾಜಕಾರ್ಯದನುವ ||
ಮುಟ್ಟಿಸದಿರಲ್ ಬಾರದೆಂದಾ ಮಹೀಶ್ವರನ |
ಬಟ್ಟೆಗಾವಲ್ಗೆ ಕರ್ಣಜ ಮೇಘನಾದರಂ |
ಕೊಟ್ಟು ನಿಂದಲ್ಲಿನಿಲ್ಲದೆ ಬಂದು ಭೀಮಸೇನಂ ಪೊಕ್ಕನಿಭಪುರಿಯನು ||೬೯||

ನುತವಸಮತಾಗಮವನೆಚ್ಚರಿಪ ಮಲಯಮಾ |
ರುತನುಪವನಸ್ಥಳಕ್ಕೆ ಸುಳಿವಂತೆ ಪವನಜಂ |
ಕ್ಷಿತಿಪನಾಸ್ಥಾನಮಂ ಪೊಕ್ಕರಸನಂ ಕಂಡು ಪಾದಪಲ್ಲವಕೆರಗಲು ||
ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪ ರವಿ |
ಸುತಜ ಹೈಡಿಂಬಿಗಳದಲ್ಲಿ ನೀಂ ಪೋದಸಂ |
ಗತಿಯದೆಂತೈ ನಿನ್ನ ಭಾಷೆಗಳಿವಿಲ್ಲಲಾ ತುರಗವಿಷಯದೊಳೆಂದನು ||೭೦||

ಎನಲವನಿಪತಿಗೆ ಬಿನ್ನೈಸಿದಂ ಪವಮಾನ |
ತನಯನಲ್ಲಿಂದೆ ಭದ್ರಾವತಿಗೆ ನಡೆದುದಂ |
ವಿನುತ ಹಯರತ್ನಮಂ ಪಿಡಿದುದಂ ಮುಕೊಂಡು ಸೇನೆಯಂ ಸದೆಬಡಿದುದಂ ||
ಅನುವರದೊಳಹಿತನಂ ಜಡಿದುದಂ ಬಳಿಕವಂ |
ತನಗೆರಗಿ ನುಡಿದುದಂ ತನ್ನ ಸರ್ವಸ್ವಮಂ |
ದನುಜಾರಿಗೀಯಲ್ ಕುದುರೆವೆರಸಿ ಹೈಂಡಿಂಬಿಕರ್ಣಜರೊಡನೆ ಬಹುದನು ||೭೧||

ಕೇಳಿ ನೃಪನುತ್ಸವದೊಳನುಜನಂ ತಕ್ಕೈಸಿ |
ಬೀಳುಕೊಡಲರಸಿಯರ ತಂಡದಾರತಿಗಳ ನೀ |
ವಾಳಿಗಳ ಸಡಗರದೊಳರಮನೆಗೆ ಬಂದು ಪಾಂಚಾಲಿಗೀ ಸಂಗತಿಯನು ||
ಹೇಳಿ ಮುರಹರನ ಮಂದಿರಕೆ ನಡೆತಮದು ನಿಜ |
ಭಾಳಮಂ ಚರಣದೊಳ್ ಚಾಚಿ ತಮ್ಮಯ ವಿಜಯ |
ದೇಳಿಗೆಯನೊರೆಯಲ್ಕೆ ಮನ್ನಿಸಿದನಾತನಂ ದೇವಪುರ ಲಕ್ಷ್ಮೀಶನು ||೭೨||