ನೂರಾರು ಬೆಳಕುಗಳ ನೂಲಿರದ ಹಗ್ಗಕ್ಕೆ
ಹಿಗ್ಗಾ ಮುಗ್ಗಾ ಜಗ್ಗುವ ಕುದುರೆಯಾಗಿ
ತಡವರಿಸಬೇಡ.

ನೂರು ಧ್ವನಿವರ್ಧಕದ ಮಾತುಗಳ ಸೆಳೆತಕ್ಕೆ
ನಿನ್ನ ಕಿವಿಯೊಡ್ಡುತ್ತ, ನಿನ್ನ ಒಳಗಿನ ದನಿಗೆ
ಕಿವುಡಾಗಬೇಡ.

ಅವರಿವರ ಬಾಲವನ್ನೇ ಗದೆಯೆಂದು
ಹೆಗಲಲ್ಲಿ ಹೊತ್ತು, ಬಂದಳಿಕೆ ಭೀಮನ ಪಾತ್ರ
ವಹಿಸಬೇಡ.

ನಿನೊಳಗನ್ನು ನೀನೇ ಅಗೆದು, ತೆಗೆದು,
ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದು
ನಿನ್ನಿಷ್ಟಕ್ಕೆ ತಕ್ಕಂತೆ ಎರಕ ಹೊಯ್ಯುವವರೆಗು
ತೆಪ್ಪಗಿರಬೇಡ.