ನಾಲ್ವಡಿ ಕೃಷ್ಣರಾಜ ಒಡೆಯರ್ —ಹಿಂದಿನ ಮೈಸೂರು ಸಂಸ್ಥಾನದ ಮಹಾರಾಜರು. ಆದರ್ಶ ಹಿಂದು, ಆದರ್ಶ ಮಾನವ. ರಾಜರ್ಷಿ ಎನ್ನಿಸಿಕೊಂಡರು, ತಮ್ಮ ಸಂಸ್ಥಾನವನ್ನು ಮಾದರಿ ಮೈಸೂರನ್ನಾಗಿ ಮಾಡಿದರು. ಸ್ವೇಚ್ಛಾಚಾರಿಗಳಾದ ಅರಸರುಗಳ ಕಾಲದಲ್ಲಿ ಇವರು ಅಪ್ರತಿಮ ದೈವ ಭಕ್ತರು, ಅಸಮಾನ ಪ್ರಜಾಸೇವಕರು. ಕರುಣೆ, ದಕ್ಷತೆ, ಶಿಸ್ತುಗಳ ತ್ರಿವೇಣೀ ಸಂಗಮ.

ನಾಲ್ವಡಿ ಕೃಷ್ಣರಾಜ ಒಡೆಯರ್

ಇತ್ತೀಚೆಗಿನವರೆಗೆ ನಮ್ಮ ದೇಶದಲ್ಲಿ ರಾಜ ಮಹಾರಾಜರು ಗಳಿದ್ದರು, ಅಲ್ಲವೇ ?

ಸ್ವಾತಂತ್ರ್ಯ ಬರುವ ಮೊದಲು ಅವರಿಗಿದ್ದ ಅಧಿಕಾರ ಅಪಾರ. ಕೆಲವು ವಿಷಯಗಳಲ್ಲಿ ಬ್ರಿಟಿಷರು ಹೇಳಿದಂತೆ ಕೇಳಬೇಕು. ಉಳಿದ ವಿಷಯಗಳಲ್ಲಿ ಅವರ ಇಚ್ಛೆಯೇ ಸಂಸ್ಥಾನಕ್ಕೆ ಶಾಸನ.

ಭಾರತದ ಅತಿ ದೊಡ್ಡ, ಅತಿ ಶ್ರೀಮಂತ ಸಂಸ್ಥಾನಗಳಲ್ಲಿ ಒಂದು ಹಿಂದಿನ ಮೈಸೂರು.

ಪಾಪ, ಅವರು ದುಡಿಯುತ್ತಾರೆ

ಅಲ್ಲಿನ ಅರಮನೆಯಲ್ಲಿ ಒಂದು ದಿನ ಒಂದು ಪ್ರಸಂಗ ನಡೆಯಿತು.

ಮಹಾರಾಜರ ಊಟಕ್ಕೆ ಎಲ್ಲ ಸಿದ್ಧವಾಗಿತ್ತು. ಆದರೆ ಮಹಾರಾಜರು, “ಇವತ್ತು ನನಗೆ ಊಟ ಬೇಡ” ಎಂದುಬಿಟ್ಟರು.

ಅವರ ತಾಯಿಯೇ ಅನಂತರ ಕೇಳಿದರು ; “ಊಟಕ್ಕೆ ಸಿದ್ಧವಾಗಿದ್ದರೂ ಬೇಡ ಎಂದುಬಿಟ್ಟಿರಲ್ಲ ಏಕೆ ?”

“ಏನೋ ಹಸಿವಿರಲಿಲ್ಲ, ಬೇಡವಾಯಿತು” ಎಂದರು ಮಹಾರಾಜರು. ಸ್ವಲ್ಪ ಹೊತ್ತು ಬಿಟ್ಟು, “ಅಮ್ಮಾಜಿ, ಇನ್ನು ಮೇಲೆ ಅಡಿಗೆಯವರೂ ಪರಿಚಾರಕರೂ ಊಟ ಮಾಡಿದ ಮೇಲೆ ನಾವು ಮಾಡೋಣ. ಪಾಪ, ನಮಗಿಂತ ಬಹಳ ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ. ಅಡಿಗೆ ಮಾಡುವಾಗ ಅಡಿಗೆಯ ಸುವಾಸನೆ ಬರುತ್ತದೆ, ಹಸಿವು ತಡೆಯುವುದು ಕಷ್ಟವಾಗುತ್ತದೆ” ಎಂದರು. ಮಹಾರಾಜರ ತಾಯಿ ಒಪ್ಪಿದರು.

ಎಷ್ಟೋ ದಿನಗಳನಂತರ ಮಹಾರಾಜರ ತಾಯಿಗೆ ಮಹಾರಾಜರು ಅಂದು ಊಟ ಮಾಡದೇ ಹೋದುದಕ್ಕೆ ಕಾರಣ ತಿಳಿಯಿತು. ಅಡಿಗೆಯವನು ಬಂಗಾರ- ಬೆಳ್ಳಿ ತಟ್ಟೆಗಳಲ್ಲಿ ಊಟ ತಂದಿಟ್ಟವನು ಆತುರಾತುರವಾಗಿ ಕೆಲವು ಚಮಚ ಆಹಾರವನ್ನು ಬಾಯಿಗೆಸೆದುಕೊಂಡ. ಮಹಾರಾಜರು ಅದನ್ನು ನೋಡಿದರು. ಅನಂತರ ಊಟ ಮಾಡಲು ಮನಸ್ಸು ಬರಲಿಲ್ಲ. ಆದರೆ ವಿಷಯ ಇತರರಿಗೆ ತಿಳಿದರೆ ಅಡಿಗೆಯವನಿಗೆ ಶಿಕ್ಷೆಯಾಗುತ್ತದೆ. ಆದ್ದರಿಂದ ತಮಗೆ ಹಸಿವಿಲ್ಲ ಎಂದು ಊಟ ಬಿಟ್ಟರು. ತಮಗಿಂತ ಅಡಿಗೆಯವರಿಗೆ, ಪರಿಚಾರಕರಿಗೆ ಮೊದಲು ಊಟವಾಗುವಂತೆ ವ್ಯವಸ್ಥೆ ಮಾಡಿದರು.

ಎಷ್ಟೋ ಸಂಸ್ಥಾನಗಳಲ್ಲಿ ನಿರಪರಾಧಿ ಪ್ರಜೆಗಳನ್ನು ವಿಚಾರಣೆ ಇಲ್ಲದೆ ರಾಜರುಗಳು- ನವಾಬರುಗಳು ಸೆರೆಮನೆಗೆ ಕಳುಹಿಸುತ್ತಿದ್ದಾಗ ಈ ದಯೆ ತೋರಿಸಿದವರು- ನಾಲ್ವಡಿ ಕೃಷ್ಣರಾಜ ಒಡೆಯರು.

ರಾಜಕುಮಾರ

ನಾಲ್ವಡಿ ಕೃಷ್ಣರಾಜ ಒಡೆಯರು ೧೮೮೪ನೇ ಇಸವಿ ಜುಲೈ ೪ರಂದು ಮೈಸೂರಿನಲ್ಲೇ ಹುಟ್ಟಿದರು. ತಂದೆ ಮೈಸೂರಿನ ಮಹಾರಾಜರು ಚಾಮರಾಜೇಂದ್ರ ಒಡೆಯರು, ತಾಯಿಯ ಹೆಸರು ಕೆಂಪನಂಜಮ್ಮಣ್ಣಿಯವರು. ಯುವರಾಜರು ಹುಟ್ಟಿದರೆಂದು ಪ್ರಜೆಗಳಿಗೆಲ್ಲ ಸಂತೋಷ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಯಾಯಿತು. ಚಾಮರಾಜೇಂದ್ರ ಒಡೆಯರು ಮಗ ಹುಟ್ಟಿದನೆಂದು ಬಂಡಿಗಳಲ್ಲಿ ಹಣ್ಣು, ಸಕ್ಕರೆ ತುಂಬಿಸಿ ಮನೆಮನೆಗಳಿಗೆಲ್ಲ ಹಂಚಿಸಿದರು. ಬಡವರಿಗೆಲ್ಲ ಅನ್ನಹಾಕಿಸಿ, ಬಟ್ಟೆಗಳನ್ನು ದಾನ ಮಾಡಿದರು.

ಕೃಷ್ಣರಾಜರಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ, ಒಬ್ಬ ತಂಗಿ. ಇವರೆಲ್ಲರ ವಿದ್ಯಾಭ್ಯಾಸಕ್ಕಾಗಿ ’ರಾಯಲ್ ಸ್ಕೂಲ್’ ಎಂಬ ಪಾಠಶಾಲೆಯೂ ಸ್ಥಾಪಿಸಲ್ಪಟ್ಟಿತು. ಎಂಟನೆಯ ವಯಸ್ಸಿನಲ್ಲಿ ಕೃಷ್ಣರಾಜರಿಗೆ ತುಂಬ ಕಾಯಿಲೆಯಾಯಿತು. ಅದರಿಂದ ಚೇತರಿಸಿಕೊಂಡ ಮೇಲೆ ತುಂಬ ಸಂತೋಷಗೊಂಡ ಚಾಮರಾಜೇಂದ್ರ ಒಡೆಯರು ಕುಲದೇವತೆಯಾದ ಚಾಮುಂಡೇಶ್ವರಿ ಗೆ ನವರತ್ನಗಳ ಕಿರೀಟ ಮಾಡಿಸಿ ಹರಕೆ ಒಪ್ಪಿಸಿದರು. ಈ ಕಿರೀಟ ಈಗಲೂ ಚಾಮುಂಡೇಶ್ವರಿ ದೇವಾಲಯದಲ್ಲಿದೆ. ಇದನ್ನು ’ಚಾಮರಾಜ ಮುಡಿ’ ಎನ್ನುತ್ತಾರೆ.

ಗುರುಭಕ್ತಿ

ಕೃಷ್ಣರಾಜರಿಗೆ ಚಿಕ್ಕಂದಿನಿಂದ ದೇವರಲ್ಲಿ ಭಕ್ತಿ. ತಂದೆತಾಯಿಗಳು, ಗುರುಹಿರಿಯರಲ್ಲಿ ತುಂಬಾ ವಿಧೇಯತೆ. ದಿನಕ್ಕೆ ಎರಡು ಸಲ ಅವರು ದೇವರ ಪ್ರಾರ್ಥನೆ ಮಾಡುತ್ತಿದ್ದರು. ಅಕ್ಕಂದಿರು ಸಂಗೀತ ಹೇಳಿಸಿಕೊಳ್ಳುತ್ತಿದ್ದಾಗ ಕೃಷ್ಣರಾಜರು ಪಕ್ಕದ ಕೋಣೆಯಲ್ಲಿ ಕೇಳಿಸಿಕೊಳ್ಳುತ್ತಾ ಕುಳಿತುಬಿಡುತ್ತಿದ್ದರು. ಆಗ ಅವರ ವಯಸ್ಸು ಆರು. ಸಂಗೀತ ಕಲಿಯಲು ಬಯಸಿದಾಗ ಅವರಿಗೂ ಸಂಗೀತ ಪಾಠ ಪ್ರಾರಂಭವಾಯಿತು. ಚೆನ್ನಾಗಿ ಸಂಗೀತ ಕಲಿತರು. ಕೃಷ್ಣರಾಜರ ತಾಯಿ ಸೊಗಸಾಗಿ ವೀಣೆ ನುಡಿಸುತ್ತಿದ್ದರು, ತಂದೆ ಪಿಟೀಲು ನುಡಿಸುತ್ತಿದ್ದರು.

ಕೃಷ್ಣರಾಜರು ರಾಯಲ್ ಸ್ಕೂಲಿನಲ್ಲಿ ಇಂಗ್ಲಿಷ್, ಕನ್ನಡ, ಸಂಸ್ಕೃತ, ಉರ್ದು ಭಾಷೆಗಳನ್ನು ಕಲಿತರು.

ಒಂದು ಸಲ ಚಾಮರಾಜೇಂದ್ರ ಒಡೆಯರು ಶೃಂಗೇರಿ ಜಗದ್ಗುರುಗಳನ್ನು ಅರಮನೆಗೆ ಕರೆಸಿ ಪಾದಪೂಜೆ ಮಾಡಿದರು. ಆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಗುರುಗಳನ್ನು ಬರಮಾಡಿಕೊಂಡು ಎಲ್ಲರೂ ಅವರ ಸೇವೆಯಲ್ಲಿದ್ದಾಗ ಏಳುವರ್ಷದ ಕೃಷ್ಣರಾಜರು ಹೊರಗಿದ್ದ ಗುರುಗಳ ಪಾದುಕೆಯನ್ನು ಕೈಗೆತ್ತಿಕೊಂಡು,

ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ||
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ||

ಎಂದು ಹೇಳಿ ಪಾದುಕೆಗಳನ್ನು ಭಕ್ತಿಯಿಂದ ತಮ್ಮ ಕಣ್ಣಿಗೊತ್ತಿಕೊಂಡು ನಮಸ್ಕಾರ ಮಾಡಿದರಂತೆ.

ಚಾಮರಾಜೇಂದ್ರ ಒಡೆಯರು ಮಗನನ್ನು ಮುಂಬಯಿ, ಕಾಶಿ ಮುಂತಾದ ದೊಡ್ಡದೊಡ್ಡ ಪಟ್ಟಣಗಳಿಗೆಲ್ಲಾ ಕರೆದುಕೊಂಡು ಹೋದರು. ಮಗ ಊರೂರು ಸುತ್ತಬೇಕು, ದೇಶದ ಸ್ಥಿತಿಗತಿಗಳು ಅವನಿಗೆ ತಿಳಿಯಬೇಕು ಎಂಬುದು ಅವರ ಅಭಿಲಾಷೆ. ಮಗನ ವಿದ್ಯಾಭ್ಯಾಸಕ್ಕೆ ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟರು.

ಹತ್ತು ವರ್ಷದ ಮಹಾರಾಜರು

ಆದರೆ ಕೃಷ್ಣರಾಜರ ಹತ್ತನೆಯ ವಯಸ್ಸಿನಲ್ಲೇ ಚಾಮರಾಜೇಂದ್ರ ಒಡೆಯರು ತೀರಿಕೊಂಡರು.

೧೮೯೫ನೇ ಇಸವಿ ಫೆಬ್ರವರಿ ೧ನೇ ತಾರೀಕು ಕೃಷ್ಣರಾಜ ಒಡೆಯರಿಗೆ ಅದ್ದೂರಿಯಿಂದ ಪಟ್ಟಾಭಿಷೇಕವಾಯಿತು. ಆಗ ಮಹಾರಾಜರಿಗೆ ವಯಸ್ಸು ಹತ್ತು. ಅವರು ಪ್ರಾಪ್ತವಯಸ್ಸಿಗೆ ಬರುವವರೆಗೆ ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ’ರೀಜೆಂಟ’ರಾಗಿದ್ದುಕೊಂಡು ರಾಜ್ಯದ ಆಡಳಿತವನ್ನು ದಿವಾನರ ಸಹಾಯದಿಂದ ನೋಡಿಕೊಳ್ಳಬೇಕೆಂದು ತೀರ್ಮಾನವಾಯಿತು.

ಶಿಸ್ತಿನ ಜೀವನ ಕೃಷ್ಣರಾಜ ಒಡಯರಿಗೆ ಚಿಕ್ಕಂದಿನಲ್ಲೇ ಪ್ರಾರಂಭವಾಯಿತು. ಅವರು ದಿನವೂ ಬೆಳಿಗ್ಗೆ ಐದು ಘಂಟೆಗೆ ಏಳುತ್ತಿದ್ದರು. ಸ್ನಾನ, ಪ್ರಾರ್ಥನೆಗಳನ್ನು ಮುಗಿಸಿಕೊಂಡು ಸಂಗೀತ ಅಭ್ಯಾಸ ಮಾಡುತ್ತಿದ್ದರು. ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತ ಎರಡನ್ನೂ ಕಲಿಯುತ್ತಿದ್ದರು. ಕುದುರೆ ಸವಾರಿ, ಮೈಸೂರು ಸಿಪಾಯಿಗಳೊಡನೆ ಡ್ರಿಲ್, ಗುರಿ ಇಟ್ಟು ಗುಂಡು ಹೊಡೆಯುವುದು, ನಾಲ್ಕು ಕುದುರೆಗಳನ್ನು ಕಟ್ಟಿದ ರಥಗಳನ್ನು ನಡೆಸುವುದು ಮುಂತಾದ ವ್ಯಾಯಾಮಗಳನ್ನು ಅವರು ಬೆಳಗಿನ ಹೊತ್ತು ತಪ್ಪದೇ ಮಾಡುತ್ತಿದ್ದರು. ಸಂಜೆಯ ಹೊತ್ತು ಟೆನಿಸ್, ಪೋಲೋ, ಕ್ರಿಕೆಟ್ ಮುಂತಾದ ಆಟಗಳನ್ನು ಆಡಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಓದುತ್ತಿದ್ದರು. ರಾತ್ರಿ ಎಂಟೂವರೆಗೆ ಊಟ, ಅನಂತರ ಓದುತ್ತಿದ್ದು ಮಲಗುತ್ತಿದ್ದರು. ಇದು ಕೃಷ್ಣರಾಜರ ದಿನಚರಿ. ಅನುಭವವುಳ್ಳವರಿಂದ ಅವರಿಗೆ ಸೈನಿಕ ಶಿಕ್ಷಣ ಕೊಡಿಸಲಾಗುತ್ತಿತ್ತು. ನೂರು ಜನ ಸೈನಿಕರನ್ನು ಅವರ ವಶಕ್ಕೆ ಕೊಟ್ಟು ಯುದ್ಧಕಾಲದಲ್ಲಿ ಅವರನ್ನು ಹೇಗೆ ನಡೆಸಬೇಕೆಂಬುದನ್ನು ಹೇಳಿಕೊಡಲಾಗುತ್ತಿತ್ತು.

ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಕೃಷ್ಣರಾಜರನ್ನು ತಾಯಿಯೇ ತುಂಬ ಎಚ್ಚರಿಕೆಯಿಂದ ನೋಡಿಕೊಂಡರು. ಆಕೆ ತುಂಬ ಜಾಣೆ. ಮಕ್ಕಳನ್ನೆಲ್ಲ ಸರಿಯಾದ ರೀತಿಯಲ್ಲಿ ವಿದ್ಯೆ, ಬುದ್ಧಿ ಕಲಿಸಿ ಬೆಳೆಸಿದರು.

ವಿವೇಕದಿಂದ ಆಳುವುದು

ಕೃಷ್ಣರಾಜ ಒಡೆಯರಿಗೆ ಹದಿನೆಂಟು ವರ್ಷವಾಗುತ್ತಲೇ ೧೯೦೨ರಲ್ಲಿ ರಾಜ್ಯದ ಆಡಳಿತದ ಅಧಿಕಾರವನ್ನು ವಹಿಸಿಕೊಂಡರು. ಬ್ರಿಟಿಷ್ ಸರ್ಕಾರದ ಪರವಾಗಿ ಆಗಿನ ವೈಸರಾಯ್ ಕರ್ಜನ್ ಎಂಬಾತ ಬಂದಿದ್ದ. ಕೃಷ್ಣರಾಜ ಒಡೆಯರು ಭಾಷಣ ಮಾಡುತ್ತ, “ನಮ್ಮ ರಾಜಪದವಿಯಿಂದ ಒಳ್ಳೆಯ ಕೆಲಸ ಮಾಡುವುದಕ್ಕೆ ಲಭಿಸುವ ಮಹತ್ತರವಾದ ಅವಕಾಶವನ್ನು ವಿವೇಕದಿಂದ ಚೆನ್ನಾಗಿ ಉಪಯೋಗಿಸಿಕೊಳ್ಳುವುದು, ನಮ್ಮ ಪ್ರಜೆಗಳ ಶಾಶ್ವತವಾದ ಸುಖಸಂತೋಷಗಳಿಗೆ ಸಾಧಕವಾಗುವಂತೆ ನಿರ್ಭಯದಿಂದ ನಿಷ್ಪಕ್ಷಪಾತವಾಗಿ ರಾಜ್ಯಭಾರ ಮಾಡುವುದು ನಮ್ಮ ಆಸೆ, ಪ್ರಯತ್ನ” ಎಂದು ಹೇಳಿದರು. ಹಾಗೆಯೇ ನಡೆದುಕೊಂಡರು.

ಕೃಷ್ಣರಾಜರು ಮಹಾರಾಜರಾದ ಕೂಡಲೆ ಒಂದು ಮಂತ್ರಿಮಂಡಲವನ್ನು ನೇಮಿಸಿದರು. ಅದಕ್ಕೆ ದಿವಾನರು ಅಧ್ಯಕ್ಷರಾದರು. ಅವರ ಸಹಾಯಕ್ಕೆ ಇಬ್ಬರು ಮಂತ್ರಿಗಳಿದ್ದರು. ಈ ಮಂತ್ರಿಮಂಡಲ ರಾಜ್ಯದ ಆಡಳಿತವನ್ನು ನಡೆಸುತ್ತಿತ್ತು. ಆದರೆ ಒಡೆಯರ ಅಪ್ಪಣೆಯಿಲ್ಲದೇ ಯಾವ ಕಾನೂನೂ ಆಗುತ್ತಿರಲಿಲ್ಲ, ಯಾವ ತೆರಿಗೆಯನ್ನೂ ಪ್ರಜೆಗಳ ಮೇಲೆ ಹಾಕುವಂತಿರಲಿಲ್ಲ. ರಾಜರು ದಿನವೂ ಅರಮನೆಯ ಕಚೇರಿಗೆ ಹೋಗಿ ಕೆಲಸಗಳನ್ನು ತಾವೇ ಪರಿಶೀಲಿಸುತ್ತಿದ್ದರು.

ಇಂತಹ ಕಾಲದಲ್ಲಿ

ಕೃಷ್ಣರಾಜ ಒಡೆಯರು ಮೈಸೂರಿನ ಮಹಾರಾಜರಾದದ್ದು ಎಷ್ಟರ ಮಟ್ಟಿಗೆ ರಾಜ್ಯದ ಭಾಗ್ಯ ಎಂದು ಅರ್ಥಮಾಡಿಕೊಳ್ಳಲು ಆಗಿನ ಕಾಲದ ಹಿನ್ನೆಲೆ ತಿಳಿಯಬೇಕು. ರಾಜಮಹಾರಾಜರುಗಳು, ನವಾಬರು ಕೆಲವು ವಿಷಯಗಳಲ್ಲಿ ಬ್ರಿಟಿಷರಿಗೆ ಅಧೀನರಾಗಿದ್ದರೂ ಒಟ್ಟಿನಲ್ಲಿ ಸರ್ವಾಧಿಕಾರಿಗಳೇ. ಇವರಲ್ಲಿ ಇಬ್ಬರು- ಮೂವರನ್ನು ಬಿಟ್ಟರೆ ಉಳಿದವರೆಲ್ಲ ತಮಗೆ ಖುಷಿ ಬಂದಂತೆ ಅಧಿಕಾರವನ್ನೂ ಹಣವನ್ನೂ ಬಳಸಿಕೊಂಡವರು. ಇವರಿಗೆ ಯಾವ ನಿಯಮವೂ ಇಲ್ಲ. ರಾಜ್ಯದ ಆದಾಯದಲ್ಲಿ ತಮಗೆ ಬೇಕಾದಷ್ಟನ್ನು ಸ್ವಂತಕ್ಕೆ- ತಮ್ಮ ಅರಮನೆಗೆ, ಉಡುಪಿಗೆ, ಲಂಡನ್- ಪ್ಯಾರಿಸ್‌ಗಳಲ್ಲಿ ಖುಷಿಯಾಗಿರುವುದಕ್ಕೆ- ಉಪಯೋಗಿಸುತ್ತಿದ್ದರು. ಒಬ್ಬ ನವಾಬನಂತೂ ತನ್ನ ಅರಮನೆಯ ಎರಡು ನಾಯಿಗಳಿಗೆ ಮದುವೆ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡಿದ, ಅವತ್ತು ಸಂಸ್ಥಾನದಲ್ಲೆಲ್ಲ ರಜ ! ರಾಜ್ಯದ ಸರ್ಕಾರಕೆ ಬರುವ ಹಣ ಇಷ್ಟು, ಇದು ಇಂತಿಂತಹ ಇಲಾಖೆಗಳಿಗೆ ಇಷ್ಟಿಷ್ಟು ಖರ್ಚಾಗಬೇಕು ಎಂದು ಅಂದಾಜು ಪಟ್ಟಿ ಮಾಡಿ ಜನಕೆ ತಿಳಿಸುವ ಗೋಜೇ ಇಲ್ಲ. ಕೃಷ್ಣರಾಜ ಒಡೆಯರು ಪ್ರತಿವರ್ಷ ಅಂದಾಜು ಪಟ್ಟಿಯನ್ನು ಪ್ರಜಾಪ್ರತಿನಿಧಿಸಭೆಯ ಮುಂದಿಡುವ ಏರ್ಪಾಟು ಮಾಡಿದರು, ಪ್ರತಿವರ್ಷ ಮಹಾರಾಜರ ಖರ್ಚಿಗೆ ಇಷ್ಟು ಹಣ ಎಂದು ಆ ಪಟ್ಟಿಯಲ್ಲಿ ಖಚಿತವಾಗಿ ತೋರಿಸುತ್ತಿದ್ದರು.

ಜನಕ್ಕೆ ಮುಖ್ಯವಾದದ್ದು ಅನ್ನ, ಬಟ್ಟೆ, ಮನೆ, ವೈದ್ಯಚಿಕಿತ್ಸೆ, ವಿದ್ಯಾಭ್ಯಾಸ. ಇವೆಲ್ಲಕ್ಕೆ ಮೊಟ್ಟಮೊದಲು ಗಮನ ಕೊಟ್ಟರು ಕೃಷ್ಣರಾಜ ಒಡೆಯರು.

ಸಮರ್ಥರ ಆಯ್ಕೆ

ರಾಜ್ಯವನ್ನು ಆಳುವವರು ಬಹಳ ಒಳ್ಳೆಯವರೇ ಇರಬಹುದು, ಸಮರ್ಥರೇ ಇರಬಹುದು. ಆದರೆ ಆಡಳಿತದಲ್ಲಿ ಅಗತ್ಯವಾಗುವ ಸಾವಿರಾರು ಮುಖ್ಯ ಕೆಲಸಗಳನ್ನು ಅವರೊಬ್ಬರೇ ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರಲ್ಲಿ ಇರಬೇಕಾದ ಒಂದು ಮುಖ್ಯ ಗುಣ- ಹೊಣೆಗಾರಿಕೆಯ ಸ್ಥಾನಗಳಿಗೆ ಸಮರ್ಥರಾದವರನ್ನು ಆರಿಸುವುದು.

ಸಮರ್ಥರನ್ನು ಆರಿಸಿದರೆ ಸಾಲದು. ಎಷ್ಟು ಪ್ರಾಮಾಣಿಕರೇ ಆಗಲಿ ಅವರ ವಿರುದ್ಧ ಆಕ್ಷೇಪಣೆ ಮಾಡುವವರು ಇದ್ದೇ ಇರುತ್ತಾರೆ. ಅವರ ದೂರದೃಷ್ಟಿಯನ್ನು ಅರ್ಥಮಾಡಿಕೊಳ್ಳದೆ ವಿರೋಧಿಸುವವರು ಇದ್ದೇ ಇರುತ್ತಾರೆ. ರಾಜ್ಯವನ್ನು ಆಳುವವರು ತಮ್ಮ ಸಮರ್ಥ ಅಧಿಕಾರಿಗಳಿಗೆ ತಕ್ಕಷ್ಟು ಸ್ವಾತಂತ್ರ್ಯ ನೀಡಬೇಕು, ಬೆಂಬಲ ನೀಡಬೇಕು.

ಕೃಷ್ಣರಾಜ ಒಡೆಯರಲ್ಲಿ ಈ ಎರಡು ಗುಣಗಳೂ ಸಮೃದ್ಧವಾಗಿದ್ದವು. ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಇವರನ್ನು ದಿವಾನರಾಗಿ (ಆಗಿನ ಕಾಲದಲ್ಲಿ ಮುಖ್ಯಮಂತ್ರಿಯನ್ನು ದಿವಾನರು ಎಂದು ಕರೆಯುತ್ತಿದ್ದರು) ಆರಿಸಿದವರು ಅವರೇ.

ಇಂಜಿನಿಯರಾಗಿದ್ದ ಎಂ. ವಿಶ್ವೇಶ್ವರಯ್ಯನವರನ್ನು ಪ್ರಭುಗಳು ದಿವಾನರನ್ನಾಗಿ ಮಾಡಿದಾಗ ಅನೇಕರಿಗೆ ಹೊಟ್ಟೆ ಉರಿಯಾಯಿತು. ಅವರ ಮೇಲೆ ಏನೇನೋ ಸುಳ್ಳುಮಾತು ಚಾಡಿ ಹೇಳಿದರು. ಆದರೆ ಮಹಾರಾಜರು ಯಾರ ಮಾತನ್ನೂ ಕೇಳುವವರಲ್ಲ. ವಿಶ್ವೇಶ್ವರಯ್ಯನವರ ಸ್ವಭಾವ, ಬುದ್ಧಿಶಕ್ತಿ ಅವರಿಗೆ ಗೊತ್ತಿತ್ತು. ವಿರೋಧಿಗಳ ಮಾತಿಗೆ ಬೆಲೆಕೊಡದೆ ವಿಶ್ವೇಶ್ವರಯ್ಯನವರ ಸಲಹೆಗಳಿಗೆಲ್ಲ ಉತ್ತೇಜನಕೊಟ್ಟರು. ವ್ಯಕ್ತಿಹಿತವಲ್ಲ, ಪ್ರಜೆಗಳ ಸುಖಸಾಧನೆ ರಾಜರ ಏಕೈಕ ಗುರಿಯಾಗಿತ್ತು. ಅವರ ಬೆಂಬಲದಿಂದ ದಿವಾನರು ಅನೇಕ ಮಹತ್ಕಾರ್ಯಗಳನ್ನು ಸಾಧಿಸಿದರು.

ಸಂಸ್ಥಾನದ ಸ್ವರ್ಣಯುಗ

ಕೃಷ್ಣರಾಜ ಒಡೆಯರ ಆಡಳಿತದಲ್ಲಿ ಮೈಸೂರು ಸಂಸ್ಥಾನ ಎಷ್ಟು ರೀತಿಗಳಲ್ಲಿ ಬೆಳೆಯಿತು ಎಂದು ನೋಡಿದರೆ ಆಶ್ಚರ್ಯವಾಗುತ್ತದೆ.

ಮೈಸೂರು ನಗರಕ್ಕೆ ಹತ್ತಿರ ಇರುವ ಕೃಷ್ಣರಾಜಸಾಗರದಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಭೂಮಿಗೆ ನೀರು ಸಿಕ್ಕುವಂತಾಯಿತು. ಕನ್ನಂಬಾಡಿ ಕಟ್ಟೆಯ ಸುತ್ತ ಬೃಂದಾವನ ತೋಟ ನಿರ್ಮಾಣವಾಯಿತು. ಬುಗ್ಗೆಗಳಿಂದ, ಬಣ್ಣಬಣ್ಣದ ದೀಪಗಳಿಂದ ಅದು ಸುಂದರವಾಯಿತು. ಭಾರತದಲ್ಲೇ ಅತ್ಯಂತ ಆಕರ್ಷಣೆಯ ಸ್ಥಳಗಳಲ್ಲಿ ಒಂದಾಯಿತು. ಕಾವೇರಿ ಜಲಪಾತದಿಂದ ಶಿವನಸಮುದ್ರದ ಬಳಿ ವಿದ್ಯುಚ್ಛಕ್ತಿ ಪಡೆಯುವ ಏರ್ಪಾಟನ್ನೂ ಮಾಡಿದರು. ಇದರಿಂದ ಲಕ್ಷಾಂತರ ಎಕರೆ ಭೂಮಿಗೆ ನೀರು ಸಿಕ್ಕಿತು. ಸಾವಿರಾರು ಹಳ್ಳಿ, ಊರುಗಳಿಗೆ ಮನೆಮನೆಗೆ ದೀಪದ ಬೆಳಕು ಸಿಕ್ಕಿತು. ಆಗ ಮೈಸೂರಿನ ಪ್ರಜೆಗಳೆಲ್ಲ ‘ಕೃಷ್ಣರಾಜ ಭೂಪ, ಮನೆಮನೆಗೆ ದೀಪ’ ಎನ್ನುವಂತಾಯ್ತು. ಮೊಟ್ಟಮೊದಲು ವಿದ್ಯುಚ್ಛಕ್ತಿ ದೀಪ ಬಂದದ್ದು ಬೆಂಗಳೂರಿಗೆ ೧೯೦೫ ರಲ್ಲಿ. ಆಗ ಭಾರತದ ಬೇರಾವ ನಗರದಲ್ಲೂ ವಿದ್ಯುಚ್ಛಕ್ತಿ ದೀಪಗಳು ಇರಲಿಲ್ಲ. ಷಿಂಷಾ ಮತ್ತು ಜೋಗ್ ಜಲಪಾತಗಳನ್ನು ಬಳಸಿಕೊಂಡು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಏರ್ಪಾಟಾಯಿತು.

ಕೃಷ್ಣರಾಜರ ಕಾಲದಲ್ಲಿ ಕೈಗಾರಿಕೆ, ವ್ಯವಸಾಯ, ವಿದ್ಯಾಭ್ಯಾಸಕ್ಕೆ ತುಂಬ ಪ್ರೋತ್ಸಾಹ ಸಿಕ್ಕಿತು. ಭದ್ರಾವತಿಯ ಉಕ್ಕಿನ ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ, ರೇಷ್ಮೆ, ಗಾಜು, ಪಿಂಗಾಣಿ ಸಾಮಾನು, ನೇಯ್ಗೆ, ಸಕ್ಕರೆ, ಕಾಗದ, ರಾಸಾಯನಿಕ ಗೊಬ್ಬರ, ಸಿಮೆಂಟ್- ಈ ಕಾರ್ಖಾನೆಗಳು ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪನೆಯಾದವು. ಬೆಂಗಳೂರಿನಲ್ಲಿ ಹಿಂದುಸ್ಥಾನ ವಿಮಾನ ಕಾರ್ಖಾನೆ ಸ್ಥಾಪಿತವಾಗಲು ಕೃಷ್ನರಾಜ ಒಡೆಯರ ಸರ್ಕಾರ ಬಹುಮಟ್ಟಿಗೆ ಕಾರಣ. ಕಾರ್ಖಾನೆಗಳಲ್ಲಿ ಸಾವಿರಾರು ಜನಕ್ಕೆ ಕೆಲಸ ಸಿಕ್ಕಿತು. ರೈಲು ಹಾದಿ ದೊಡ್ಡದಾಗಿ ದೇಶದ ವ್ಯಾಪಾರಕ್ಕೆ, ಜನರ ಪ್ರಯಾಣಕ್ಕೆ ಅನುಕೂಲವಾಯಿತು.

ಕೃಷ್ಣರಾಜ ಒಡೆಯರಿಗೆ ತಮ್ಮ ಪ್ರಜೆಗಳಲ್ಲಿ ಮೇಲು-ಕೀಳು ಎಂಬ ಭಾವನೆ ಇರಲಿಲ್ಲ. ಹಿಂದುಳಿದವರು, ಕಷ್ಟದಲ್ಲಿರುವವರು ಎಂದರೆ ಅವರಿಗೆ ವಿಶೇಷ ಗಮನ ಕೊಡುತ್ತಿದ್ದರು. ಭಾರತದ ಸಂಸ್ಥಾನಗಳಲ್ಲೆಲ್ಲ ತಿರುವಾಂಕೂರು ಹರಿಜನರು ದೇವಸ್ಥಾನದ ಒಳಕ್ಕೆ ಹೋಗಲು ಅವಕಾಶ ಕೊಟ್ಟಿತು ಎಂದು ಪ್ರಸಿದ್ಧಿ. ಆದರೆ ಅದಕ್ಕೆ ಮೊದಲೇ ಕೃಷ್ಣರಾಜ ಒಡೆಯರು ಹರಿಜನರು ಅರಮನೆಯಲ್ಲಿ ದರ್ಬಾರಿಗೆ ಬರಲು ಅವಕಾಶ ಮಾಡಿಕೊಟ್ಟಿದ್ದರು. ಹರಿಜನ ವಿದ್ಯಾರ್ಥಿವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನಗಳನ್ನು ಮೈಸೂರು ಸರ್ಕಾರ ಕೊಡಲು ಏರ್ಪಾಟು ಮಾಡಿತು. ಹರಿಜನರಿಗಾಗಿ ಸಹಕಾರಿ ಸಂಘಗಳು ಪ್ರಾರಂಭವಾದವು.

ಮೈಸೂರು ಸಂಸ್ಥಾನದಲ್ಲಿ ಪ್ರಜೆಗಳಿಗಿದ್ದ ವೈದ್ಯಕೀಯ ಸಹಾಯ ಕೃಷ್ಣರಾಜರ ಆಡಳಿತದಲ್ಲಿ ವೇಗವಾಗಿ ಬೆಳೆಯಿತು. ಮಹಾರಾಜರ ಸರ್ಕಾರ ತಾನೇ ಆಸ್ಪತ್ರೆಗಳನ್ನು ಕಟ್ಟಿಸಿತು. ಪ್ರಜೆಗಳಲ್ಲಿ ಹಣವಂತರಾದವರು ಹಣ ಖರ್ಚುಮಾಡಿ ಆಸ್ಪತ್ರೆಗಳನ್ನು ಕಟ್ಟಲು ಪ್ರೋತ್ಸಾಹ ಕೊಟ್ಟರು. ಹೀಗೆ ಹಣ ಕೊಟ್ಟ ಉಪಕಾರಿಗಳಿಗೆ ಮಹಾರಾಜರು ಮೆಚ್ಚಿಕೆಯ ಮಾತುಗಳನ್ನು ಆಡುತ್ತಿದ್ದರು, ಉಡುಗೊರೆಗಳನ್ನು ಕೊಡುತ್ತಿದ್ದರು. ಬಿರುದುಗಳನ್ನು ಕೊಡುತ್ತಿದ್ದರು. ಮಹಾರಾಜರ ಸಹೋದರಿ ಕೃಷ್ಣಾಜಮ್ಮಣ್ಣಿಯವರೂ ಅವರ ಮೂವರು ಹೆಣ್ಣುಮಕ್ಕಳೂ ಕ್ಷಯರೋಗದಿಂದ ತೀರಿಕೊಂಡಿದ್ದರು. ಸಂಸ್ಥಾನದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಮಾಡುವ ಆಸ್ಪತ್ರೆ ಇರಲಿಲ್ಲ. ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನಲ್ಲಿ ‘ಶ್ರೀಕೃಷ್ಣಾಜಮ್ಮಣ್ಣಿ ಕ್ಷಯರೋಗ ಆಸ್ಪತ್ರೆ’ ಯ ನಿರ್ಮಾಣವಾಯಿತು. ಇದಕ್ಕೆ ಖರ್ಚಾದದ್ದು ಸುಮಾರು ಒಂದು ಲಕ್ಷ ಮೂರು ಸಾವಿರ ರೂಪಾಯಿಗಳು. ಇದರಲ್ಲಿ ಎಪ್ಪತ್ತೈದು ಸಾವಿರದಷ್ಟು ಅರಮನೆಯಿಂದ ಬಂದಿತು. ಉಳಿದ ಇಪ್ಪತ್ತೆಂಟು ಸಾವಿರದಷ್ಟು ಸರ್ಕಾರ ಖರ್ಚುಮಾಡಿತು.

ಪ್ರಜೆಗಳು ವಿದ್ಯಾವಂತರಾಗದೆ ರಾಜ್ಯ ಮುಂದುವರಿಯುವುದಿಲ್ಲ ಎಂದು ಕೃಷ್ಣರಾಜರಿಗೆ ಸ್ಪಷ್ಟವಾಯಿತು. ಸಾವಿರಾರು ಶಾಲೆಗಳನ್ನು ಪ್ರಾರಂಭಿಸಲು ಇವರ ಸರ್ಕಾರ ಉತ್ತೇಜನ ಕೊಟ್ಟಿತು. ಅವರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೂ ಉತ್ತೇಜನಕೊಟ್ಟು ಅವರಿಗಾಗಿ ಪ್ರತ್ಯೇಕ ಶಾಲೆಗಳನ್ನು ಪ್ರಾರಂಭಿಸಿದರು. ಹೆಣ್ಣುಮಕ್ಕಳಿಗಾಗಿಯೇ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಪ್ರಾರಂಭವಾಯಿತು. ವಿದ್ಯಾರ್ಥಿನಿಯರಿಗಾಗಿ ಮೊಟ್ಟಮೊದಲ ಬಾರಿಗೆ ಹಾಸ್ಟೆಲ್‌ಗಳು ಪ್ರಾರಂಭವಾದವು. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜನ್ನು ಕೃಷ್ಣರಾಜರು ತಮ್ಮ ಸ್ವಂತ ಹಣದಿಂದ ನಡೆಸುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭವಾದದ್ದು ಇವರ ಕಾಲದಲ್ಲಿ; ಭಾರತದ ಸಂಸ್ಥಾನಗಳಲ್ಲಿ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಇದೇ. ಪಂಡಿತ ಮದನ ಮೋಹನ ಮಾಳವೀಯರು ಕಾಶಿ ಹಿಂದು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದಾಗ ಉದಾರವಾಗಿ ಹಣ ಸಹಾಯ ಮಾಡಿದರು ಕೃಷ್ಣರಾಜ ಒಡೆಯರು. ಆ ವಿಶ್ವವಿದ್ಯಾನಿಲಯದ ಮೊದಲನೆಯ ಕುಲಪತಿ ಅವರೇ. ಜೆ.ಎನ್.ತಾತಾ ಎಂಬುವರು ವಿಜ್ಞಾನದಲ್ಲಿ ಬಹು ಮೇಲ್ಮಟ್ಟದ ಓದು, ಹೊಸಹೊಸ ವಿಷಯಗಳನ್ನು ಕಂಡುಹಿಡಿಯುವುದು ಇದಕ್ಕಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಲು ಯೋಚಿಸಿದರು. ಇಂತಹ ಕೇಂದ್ರಕ್ಕೆ ಬೆಂಗಳೂರು ಒಳ್ಳೆಯ ಸ್ಥಳ ಎಂದು ನಿಪುಣರು ಅಭಿಪ್ರಾಯಪಟ್ಟರು. ಕೃಷ್ಣರಾಜ ಒಡೆಯರು ಇದಕ್ಕೆ ಬಹಳ ಸಹಾಯ ಮಾಡಿದರು. ಮೈಸೂರು ಸರ್ಕಾರ ೩೭೨ ಎಕರೆಗಳಷ್ಟು ವಿಶಾಲವಾದ ಜಮೀನನ್ನು ಉಚಿತವಾಗಿ ಕೊಟ್ಟಿತು; ಅಲ್ಲದೆ ಕಟ್ಟಡ ಕಟ್ಟಿಸಲು ಐದು ಲಕ್ಷ ರೂಪಾಯಿಗಳ ಸಹಾಯ ಮಾಡಿತು. ಈ ಸಂಸ್ಥೆಯೇ ಪ್ರಪಂಚದಲ್ಲೆಲ್ಲಾ ಪ್ರಸಿದ್ಧವಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಥವಾ ತಾತಾ ಇನ್ಸ್‌ಟಿಟ್ಯೂಟ್. ಎಂಜಿನಿಯರಿಂಗ್ ಕಾಲೇಜ್, ಯಂತ್ರವಿಜ್ಞಾನದ ಶಾಲೆ, ವ್ಯವಸಾಯದ ಶಾಲೆ, ಪಶುವೈದ್ಯ ಶಾಲೆಗಳನ್ನು ಪ್ರಾರಂಭಿಸಲು ಮಹಾರಾಜರೇ ಪ್ರೋತ್ಸಾಹಿಸಿ ಹಣ ಒದಗಿಸಿದರು.

ಬಹು ಸಂಸ್ಥಾನಗಳಲ್ಲಿ ರಾಜರು-ನವಾಬರ ಇಚ್ಛೆಯೇ ಕಡೆಯ ಮಾತು. ಪ್ರಜೆಗಳ ಅಭಿಪ್ರಾಯವನ್ನು ಕೇಳುವವರೇ ಇರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜೇಂದ್ರ ಒಡೆಯರ ಕಾಲದಲ್ಲೇ ‘ಪ್ರಜಾಪ್ರತಿನಿಧಿ ಸಭೆ’ ಎಂಬ ಸಂಸ್ಥೆ ಜನ್ಮ ತಾಳಿತು. ಜನರಲ್ಲಿ ವಿದ್ಯಾಭ್ಯಾಸ ಹರಡಿರಲಿಲ್ಲ. ಆದುದರಿಂದ ಚುನಾವಣೆ ಇರಲಿಲ್ಲ. ಸರ್ಕಾರವೇ ಸದಸ್ಯರನ್ನು ಅರಿಸುತ್ತಿತ್ತು. ೧೪೪ ಸದಸ್ಯರಿಂದ ಕೂಡಿತ್ತು ಈ ಸಭೆ. ಸರ್ಕಾರವೇ ಸದಸ್ಯರನ್ನು ಆರಿಸಿದ್ದರೂ ಅವರು ತಮ್ಮ ಅಭಿಪ್ರಾಯವನ್ನು ಸ್ವತಂತ್ರವಾಗಿ, ನಿರ್ಭಯವಾಗಿ ಹೇಳಬಹುದಾಗಿತ್ತು. ಕೃಷ್ಣರಾಜ ಒಡೆಯರ ಕಾಲದಲ್ಲಿ -೧೯೦೭ ರಲ್ಲಿ- ನ್ಯಾಯವಿಧಾಯಕ ಸಭೆಯ ಸ್ಥಾಪನೆ ಆಯಿತು. ಇದರ ಸದಸ್ಯರ ಸಂಖ್ಯೆ ಹತ್ತರಿಂದ ಹದಿನೈದು. ಇವರಲ್ಲಿ ಐದರಲ್ಲಿ ಎರಡು ಭಾಗದಷ್ಟು ಸದಸ್ಯರು ಸರ್ಕಾರದ ಅಧಿಕಾರಿಗಳಲ್ಲದವರೇ ಆಗಿರಬೇಕು ಎಂದು ನಿರ್ಧಾರವಾಯಿತು. ಸರ್ಕಾರಿ ಅಧಿಕಾರಿಗಳೂ ಇತರರೂ ಒಟ್ಟಿಗೆ ಸೇರಿ ತಮ್ಮ ನಾಡಿಗಾಗಿ ಕೆಲಸ ಮಾಡಲು ಸಂಪದಭಿವೃದ್ಧಿ ಸಮಾಜ ಎಂಬ ಸಂಸ್ಥೆಯನ್ನು ೧೯೧೧ ರಲ್ಲಿ ಸ್ಥಾಪಿಸಲಾಯಿತು.

ಮೈಸೂರು ಬ್ಯಾಂಕ್ ( ಈಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್) ಹಿಂದಿನ ಮೈಸೂರು ಸಂಸ್ಥಾನದಲ್ಲಿ ಬಹು ಪ್ರಮುಖ ಹಣಕಾಸಿನ ಸಂಸ್ಥೆ. ಒಳ್ಳೆಯ ಬ್ಯಾಂಕುಗಳು ದೇಶದ ವ್ಯಾಪಾರ, ಕೈಗಾರಿಕೆಗಳಿಗೆ ಬೆನ್ನೆಲುಬು ಇದ್ದಂತೆ. ಮೈಸೂರು ಬ್ಯಾಂಕಿನ ಸ್ಥಾಪನೆ ಆದದ್ದು ಕೃಷ್ಣರಾಜ ಒಡೆಯರ ಕಾಲದಲ್ಲಿ.

ಕೃಷ್ಣರಾಜರ ಕಾಲದಲ್ಲಿ ಮೈಸೂರು ಸಂಸ್ಥಾನದ ಪ್ರಗತಿಗಾಗಿ ಎಷ್ಟು ಕ್ಷೇತ್ರಗಳಲ್ಲಿ, ಎಷ್ಟು ರೀತಿಗಳಲ್ಲಿ ಒಳ್ಳೆಯ ಕೆಲಸಗಳಾದವು ಎಂದು ಪಟ್ಟಿ ಮಾಡುತ್ತ ಹೋದರೆ ಎಷ್ಟು ದೊಡ್ಡದಾಗುವುದೊ ! ಅವರ ಕಾಲದಲ್ಲಿ ಈ ಸಂಸ್ಥಾನ ‘ಮಾದರಿ ಮೈಸೂರು’ ಎಂದು ಹೆಸರಾಯಿತು. ಭಾರತದ ಹಲವು ಸಂಸ್ಥಾನಗಳ ರಾಜಕುಮಾರರು ಶಿಕ್ಷಣಕ್ಕಾಗಿ ಮೈಸೂರು ಸಂಸ್ಥಾನಕ್ಕೆ ಬರುವಂತಾಯಿತು.

ಸಂಸ್ಥಾನಕ್ಕೆ ಇಷ್ಟೆಲ್ಲ ಒಳ್ಳೆಯದಾಗುವುದಕ್ಕೆ ಕಾರಣ ಕೃಷ್ಣರಾಜ ಒಡೆಯರ ವ್ಯಕ್ತಿತ್ವ.

ಪ್ರವಾಸಗಳು

ಮಹಾರಾಜರಿಗೆ ಒಳ್ಳೆಯ ಶಿಕ್ಷಣ ದೊರೆತಿತ್ತು. ಜೊತೆಗೆ ಅವರಿಗೆ ಪ್ರವಾಸದಲ್ಲಿ ತುಂಬ ಆಸಕ್ತಿ. ಅಮರನಾಥ, ಕಾಶ್ಮೀರ, ಬದರಿ, ಅಮೃತಸರ ಮೊದಲಾದ ಪುಣ್ಯಕ್ಷೇತ್ರಗಳ ಯಾತ್ರೆ ಕೈಗೊಂಡರು. ಹಿಮಾಲಯ ಪರ್ವತಕ್ಕೂ ಹೋಗಿ, ಆ ಚಳಿಗಾಳಿಯಲ್ಲೂ ತಣ್ಣೀರು ಸ್ನಾನ ಮಾಡಿ ಪೂಜೆಮಾಡಿದ ಕೃಷ್ಣರಾಜ ಒಡೆಯರು ಎಲ್ಲ ಕಡೆಗಳಲ್ಲೂ ‘ಮೈಸೂರಿನ ನನ್ನ ಪ್ರಜೆಗಳ ಶ್ರೇಯಸ್ಸಿಗಾಗಿ ಮೊದಲ ಪೂಜೆ ನಡೆಯಬೇಕು’ ಎಂದು ಹೇಳುತ್ತಿದ್ದರು. ಸದಾಕಾಲವೂ ಅವರಿಗೆ ಮೈಸೂರು ಪ್ರಜೆಗಳ ಚಿಂತೆಯೇ.

ಅವರು ವಿದೇಶಗಳಿಗೂ ಹೋಗಿಬಂದರು. ಅವರಿಗೆ ಪವಿತ್ರ ಸ್ಥಳಗಳನ್ನು ನೋಡುವ ಶ್ರದ್ಧೆ, ಜೊತೆಗೆ ಬೇರೆ ಬೇರೆ ದೇಶಗಳವರು ತಮ್ಮ ನಾಡುಗಳ ಭಾಗ್ಯವನ್ನು ಬೆಳೆಸಲು ಏನು ಮಾಡಿದ್ದಾರೆ ಎಂದು ಕಣ್ಣಾರೆ ನೋಡಿ ತಿಳಿಯುವ ಶ್ರದ್ಧೆ. ಬರ್ಮಾಕ್ಕೆ ಹೋಗಿ ಅಲ್ಲಿನ ದೇವಾಲಯಗಳು, ಎಣ್ಣೆ ಬಾವಿಗಳು, ಕಾರ್ಖಾನೆಗಳನ್ನು ನೋಡಿ ಮೆಚ್ಚಿಕೊಂಡರು. ಮೊಟ್ಟಮೊದಲು ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋದ ಮೈಸೂರು ಮಹಾರಾಜರು ಕೃಷ್ಣರಾಜರೇ. ತುಂಬಾ ಆಚಾರಶೀಲರಾದ ರಾಜರಿಗೆ ಹಡಗಿನಲ್ಲೂ ಊಟ, ಉಪಚಾರಗಳಿಗೆ ಪ್ರತ್ಯೇಕವಾದ ಅಡುಗೆಮನೆ, ಸ್ನಾನಕ್ಕೆ ಗಂಗೆಯ ನೀರಿನ ಏರ್ಪಾಡಾಗುತ್ತಿತ್ತು. ಆಗಲೂ ಅವರಿಗೆ ಅನೇಕ ಪಂಡಿತರು ಧರ್ಮಶಾಸ್ತ್ರ, ತತ್ವಶಾಸ್ತ್ರ, ಗೀತೆ ಮುಂತಾದ ಪವಿತ್ರ ಗ್ರಂಥಗಳನ್ನು ಓದಿ ಹೇಳುತ್ತಿದ್ದರು. ಜರ್ಮನಿಗೆ ಭೇಟಿಕೊಟ್ಟು ಅಲ್ಲಿನ ಕಾರ್ಖಾನೆ, ವೈಜ್ಞಾನಿಕ ಸಂಸ್ಥೆಗಳನ್ನು ಆಸಕ್ತಿಯಿಂದ ಗಮನಿಸಿದರು.

ಮಹಾರಾಜರು ಸೌಂದರ್ಯೋಪಾಸಕರು. ವಿದೇಶಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿದರು. ಪ್ರಪಂಚದ ಸ್ಥಿತಿಗತಿಯನ್ನೆಲ್ಲ ಚೆನ್ನಾಗಿ ಅರ್ಥಮಾಡಿಕೊಂಡರು. ಊರು ಸುತ್ತುವಾಗಲೂ ರಾಜರು ಒಂದು ದಿನವೂ ಚಾಮುಂಡೇಶ್ವರಿಯ ಪೂಜೆ ಮರೆಯಲಿಲ್ಲ. ದಿನವೂ ಸಂಧ್ಯಾವಂದನೆ, ಪೂಜೆಗಳನ್ನು ಮಾಡುತ್ತಿದ್ದರು.

ವಿದೇಶಗಳಲ್ಲೂ ನಮ್ಮ ಮಹಾರಾಜರಿಗೆ ಸಂಭ್ರಮದ ಸ್ವಾಗತ ಸಿಕ್ಕಿತು. ‘ಇವರು ಭಾರಿ ಶ್ರೀಮಂತರು, ಮೈಸೂರು ಮಹಾರಾಜರು’ ಎಂದು ಎಲ್ಲರೂ ಅವರನ್ನು ಮರ್ಯಾದೆಯಿಂದ ಕಂಡು ಸತ್ಕರಿಸಿದರು.

‘ನಾನು ಶ್ರೀಮಂತನಲ್ಲ. ಪ್ರಜೆಗಳ ಕ್ಷೇಮಕ್ಕಾಗಿ ದುಡಿಯುವ ಸೇವಕ. ಬಡಪ್ರಜೆಗಳ ಉದ್ಧಾರಕ್ಕಾಗಿ ನನ್ನ ಹಣ ಮೀಸಲು’ ಎಂದು ವಿನಯದಿಂದ ಮಹಾರಾಜರು ಹೇಳಿದರು. ಅವರಲ್ಲಿ ಸಹಾಯ ಕೇಳಲು ಅನೇಕ ಸಂಘಗಳವರು, ವ್ಯಕ್ತಿಗಳು ಬಂದರು. ಬಂದವರಿಗೆಲ್ಲ ಮಹಾರಾಜರು ನೆರವು ನೀಡಿ ಕಳುಹಿಸಿದರು.

ಕನ್ನಡಕ್ಕಾಗಿ

‘ಕನ್ನಡ ಭಾಷೆ ನನ್ನ ಪ್ರೀತಿಯ ತಾಯಿ ನುಡಿ’ ಎನ್ನುತ್ತಿದ್ದ ಕೃಷ್ಣರಾಜರಿಗೆ ಕನ್ನಡ ಭಾಷೆಯ ಮೇಲೆ ತುಂಬ ಮಮತೆ. ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಇವರು ತುಂಬ ಪ್ರೋತ್ಸಾಹಕೊಟ್ಟರು. ಅನೇಕ ಸಾಹಿತಿಗಳಿಗೆ ಪ್ರೋತ್ಸಾಹಕೊಟ್ಟು ಅವರಿಂದ ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳನ್ನು ಬರೆಸಿದರು. ‘ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ಸಂಸ್ಥೆ ಇದೆ. ಕನ್ನಡ ನಾಡಿನ ಹಿರಿಯರು, ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ಸ್ಥಾಪಿಸಿದ ಸಂಸ್ಥೆ ಇದು. ಇದಕ್ಕಾಗಿ ಕಟ್ಟಡ ಕಟ್ಟುವಾಗ ಹಣ ಸಾಲಲಿಲ್ಲ. ಕೃಷ್ಣರಾಜ ಒಡೆಯರು ಐದು ಸಾವಿರ ರೂಪಾಯಿಗಳನ್ನು ಕೊಟ್ಟರು. ( ಅವರ ತಮ್ಮ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಮೂರು ಸಾವಿರ ರೂಪಾಯಿಗಳನ್ನು ಕೊಟ್ಟರು. ) ಕೃಷ್ಣರಾಜ ಒಡೆಯರ ಸರ್ಕಾರ ಕಟ್ಟಡಕ್ಕೆ ಭೂಮಿಯನ್ನು ಉಚಿತವಾಗಿ ಕೊಟ್ಟಿತು. ಹದಿನಾರು ಸಾವಿರ ರೂಪಾಯಿಗಳನ್ನೂ ಕೊಟ್ಟಿತು. ಕೃಷ್ಣರಾಜ ಒಡೆಯರು ಸಾಹಿತ್ಯ ಪರಿಷತ್ತಿನ ಮಹಾಪೋಷಕ ರಾಗಿದ್ದರು. ೧೯೪೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ಳಿಯ ಹಬ್ಬದ ಸಮಾರಂಭವನ್ನು ಉದ್ಘಾಟಿಸಿದರು. ‘ಸಿರಿಗನ್ನಡಂ ಗೆಲ್ಗೆ’ ಎಂದು ತುಂಬಿದ ಸಭೆಯಲ್ಲಿ ಘೋಷಿಸಿದರು. (ಆಗ ಅವರಿಗೆ ಕಾಯಿಲೆ. ಸ್ವಲ್ಪ ಹೊತ್ತು ಕುಳಿತುಕೊಳ್ಳುವುದೂ ಕಷ್ಟ. ಸಾರ್ವಜನಿಕ ಸಮಾರಂಭಕ್ಕೆ ಅವರು ಬಂದದ್ದು ಇದೇ ಕಡೆ.) ಮಹಾರಾಜರು ಕನ್ನಡ ನಾಡಿನ ದೊರೆಯಾಗಿ, ಕನ್ನಡ ಸಾಹಿತ್ಯ ಪ್ರೇಮಿಯಾಗಿ, ಕನ್ನಡ ಕಲಾವಿದರಿಗೆ, ವಿದ್ವಾಂಸರಿಗೆ, ಸಂಗೀತ ಪ್ರೇಮಿಗಳಿಗೆ ಆಶ್ರಯವಾಗಿದ್ದರು.

ನ್ಯಾಯಶಿಸ್ತು

ಮಹಾರಾಜರು ಅಧಿಕಾರಿಗಳನ್ನು ವಿಶ್ವಾಸದಿಂದ ನೋಡಿ ಕೊಳ್ಳುತ್ತಿದ್ದರು. ಅವರು ಬೆಂಗಳೂರು-ಮೈಸೂರುಗಳಲ್ಲಿದ್ದರೂ ಸರ್ಕಾರದ ಮುಖ್ಯ ಅಧಿಕಾರಿಗಳಲ್ಲಿ ಯಾರು ಸಮರ್ಥರು, ಯಾರು ಪ್ರಾಮಾಣಿಕರು, ಯಾರು ಅಸಮರ್ಥರು, ಯಾರು ಅಹಂಕಾರಿಗಳು, ಯಾರು ಹಣಕ್ಕೆ ಆಸೆ ಪಡುತ್ತಾರೆ ಎಂದು ತಿಳಿದುಕೊಂಡಿರುತ್ತಿದ್ದರು. ಸಮರ್ಥರಾದ ಮತ್ತು ಪ್ರಾಮಾಣಿಕವಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಮುಂಬಯಿಯಿಂದ ಬರುವಾಗ, ಇಬ್ಬರು ಅಧಿಕಾರಿಗಳಿಗೆ ತಾಯಿಯರಿದ್ದಾರೆ ಎಂದು ನೆನಪಿಟ್ಟುಕೊಂಡು ಅವರಿಗೆ ಒಳ್ಳೆಯ ಶಾಲುಗಳನ್ನು ತಂದುಕೊಟ್ಟರು. ಸರಿಯಾಗಿ ಕೆಲಸ ಮಾಡದವರಿಗೆ ಮೃದುವಾಗಿ ಅಥವಾ ಹಾಸ್ಯವಾಗಿ ಮಾತನಾಡುತ್ತಲೇ ಎಚ್ಚರಿಕೆ ಕೊಡುತ್ತಿದ್ದರು. ಒಬ್ಬ ಜಿಲ್ಲಾಧಿಕಾರಿಗಳಿಗೆ ‘ನಿಮ್ಮನ್ನು ಹೊಗಳಬೇಕು ಎಂದು ನಮಗೆ ಆಸೆ. ಅಂತಹ ಅವಕಾಶ ಮಾಡಿಕೊಡಬಾರದೇ ?’ ಎಂದು ಕೇಳಿದರಂತೆ. ಮೈಸೂರಿನಲ್ಲಿದ್ದಾಗ ಸರಿಯಾಗಿ ಹನ್ನೊಂದು ಘಂಟೆಗೆ ಅರಮನೆಯ ಕಚೇರಿಗೆ ಹೋಗುತ್ತಿದ್ದರು. ನಿಯಮಿತವಾದಷ್ಟು ಕಾಲ ಎಲ್ಲರಂತೆ ಕೆಲಸ ಮಾಡುತ್ತಿದ್ದರು. ಕೃಷ್ಣರಾಜರದು ಬಹು ಕಟ್ಟುನಿಟ್ಟಾದ ನ್ಯಾಯದೃಷ್ಟಿ. ಅವರ ಬಂಧುಗಳೊಬ್ಬರು ಓದುವಾಗ ಮಹಾರಾಜರು ಅವರಿಗೆ ಸಹಾಯ ಮಾಡುತ್ತಿದ್ದರು. ಅವರು ವಿದ್ಯಾಭ್ಯಾಸ ಮುಗಿದ ನಂತರ ಮಹಾರಾಜರ ಬಳಿ ಬಂದು ವಿಷಯವನ್ನು ತಿಳಿಸಿದರು. “ ನನಗೆ ಒಂದು ಕೆಲಸವನ್ನು ಕೊಡಿಸಬೇಕು” ಎಂದು ಪ್ರಾರ್ಥಿಸಿದರು. ಕೃಷ್ಣರಾಜರು ಉತ್ತರ ಕೊಟ್ಟರು: “ನಿಮ್ಮ ವಿದ್ಯಾಭ್ಯಾಸಕ್ಕೆ ನಾವು ಸಹಾಯ ಮಾಡಿದೆವು. ಆದರೆ ಸರ್ಕಾರಿ ಕೆಲಸಗಳಿಗೆ ನೇಮಕ ಮಾಡುವ ಅಧಿಕಾರವನ್ನು ಬೇರೆ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಈಗ ನಾವು ನಿಮ್ಮನ್ನು ನೇಮಿಸಿದರೆ ಅವರ ಅಧಿಕಾರವನ್ನು ನಾವು ಚಲಾಯಿಸಿದ ಹಾಗಾಗುತ್ತದೆ. ಇದು ಸರಿಯಲ್ಲ. ಅಷ್ಟೇ ಅಲ್ಲ, ನಿಮಗಿಂತ ಯೋಗ್ಯತೆ ಇರುವವರಿಗೆ ಅನ್ಯಾಯವಾಗುತ್ತದೆ.”

ಕೃಷ್ಣರಾಜ ಒಡೆಯರದು ಬಹು ಶಿಸ್ತಿನ ಜೀವನ. ಹಾಗೆಯೇ ಇತರರಲ್ಲಿ ಶಿಸ್ತನ್ನು ಮೆಚ್ಚುವವರು.

ಒಂದು ಬಾರಿ ವೈಸರಾಯ್ ಮೈಸೂರು ಸಂಸ್ಥಾನಕ್ಕೆ ಬಂದವರು ತಾರಾಪುರಕ್ಕೆ ಹೋಗಿದ್ದರು. ಅವರ ಶಿಬಿರಕ್ಕೆ ಹೋಗಲು ಯಾರೇ ಆದರೂ ಗೊತ್ತಾಗಿದ್ದ ಒಂದು ಲೋಹದ ಬಿಲ್ಲೆಯನ್ನು ತೋರಿಸಬೇಕಾಗಿತ್ತು. ಕೃಷ್ಣರಾಜ ಒಡಯರು ಅವರ ಶಿಬಿರಕ್ಕೆ ಹೋದರು.

ಕಾವಲಿನವನು ‘ಹಾಲ್ಟ್’ (ನಿಲ್ಲಿ) ಎಂದ.

ಮಹಾರಾಜರು ನಿಂತುಕೊಂಡರು.

ಕಾವಲುಗಾರ ಬಿಲ್ಲೆ ಕೇಳಿದ.

“ಬಿಲ್ಲೆ ಮರೆತು ಬಂದಿದ್ದೇವೆ. ನಾವು ಯಾರು ಎಂದು ನಿನಗೆ ಗೊತ್ತಿಲ್ಲವೇ ?” ಎಂದರು.

“ತಾವು ನಮ್ಮ ದಣಿಗಳು, ಮಹಾರಾಜರು. ಆದರೆ ಬಿಲ್ಲೆ ಇಲ್ಲದೆ ಯಾರನ್ನೂ ಒಳಕ್ಕೆ ಬಿಡಕೂಡದು ಅಂತ ತಾವೇ ಅಪ್ಪಣೆ ಮಾಡಿದ್ದೀರಿ. ಒಳಕ್ಕೆ ತಮ್ಮನ್ನು ಬಿಡುವ ಹಾಗಿಲ್ಲ.”

“ಸರಿಯೇ, ಈಗ ನಾವೇ ಅಪ್ಪಣೆ ಮಾಡುತ್ತಿದ್ದೇವೆ, ನಮ್ಮನ್ನು ಬಿಲ್ಲೆ ಇಲ್ಲದೆ ಒಳಕ್ಕೆ ಬಿಡಬಹುದು.”

“ಪ್ರಭುಗಳು ಕ್ಷಮಿಸಬೇಕು. ತಮ್ಮ ಮೊದಲನೆಯ ಅಪ್ಪಣೆ ನನ್ನ ಮೇಲಿನ ಅಧಿಕಾರಿಗಳಿಂದ ನನಗೆ ಬಂದಿತು. ತಾವು ತಮ್ಮ ಡೇರಾಕ್ಕೆ ಹೋಗಿ ಈ ಎರಡನೆಯ ಅಪ್ಪಣೆಯನ್ನೂ ನನ್ನ ಮೇಲಿನ ಅಧಿಕಾರಿಗಳ ಮೂಲಕ ಕಳುಹಿಸಿದರೆ ಅದನ್ನೇ ನಡೆಸುತ್ತೇನೆ, ನಾವೆಲ್ಲ ತಮ್ಮ ಸೇವಕರು.”

ಮಹಾರಾಜರು ಇಷ್ಟು ಮಾಡಿದ್ದು ಕಾವಲುಗಾರನನ್ನು ಪರೀಕ್ಷಿಸುವುದಕ್ಕೆ. ಅವರು ಡೇರಾಕ್ಕೆ ಹಿಂದಕ್ಕೆ ಹೋದರು. ಕಾವಲಿದ್ದಾತನಿಗೆ ರಾತ್ರಿ ಎಲ್ಲ ನಿದ್ರೆ ಇಲ್ಲ- ಭಯ, ಅತಂಕ. ಮಾರನೆಯ ದಿನ ಬೆಳಗ್ಗೆ ಆತನಿಗೆ ಐವತ್ತು ರೂಪಾಯಿಗಳನ್ನು ಸಂಬಳ ಹೆಚ್ಚು ಮಾಡಿದ ಆಜ್ಞೆಯನ್ನೂ ಅವನ ಮೇಲಿನ ಅಧಿಕಾರಿಗಳ ಮೂಲಕ ಮಹಾರಾಜರು ಕಳುಹಿಸಿದರು.

ಇನ್ನೊಂದು ಬಾರಿ ಮಹಾರಾಜರ ಕಾರು ರೈಲು ಕಂಬಿಗಳನ್ನು ದಾಟಿಕೊಂಡು ಹೋಗಬೇಕಾಗಿತ್ತು. ಕಂಬಿಗಳ ಬಳಿ ಬರುವ ಹೊತ್ತಿಗೆ, ರೈಲು ಬರುತ್ತದೆ ಎಂದು ಕಾವಲುಗಾರ ‘ಗೇಟ್’ ಮುಚ್ಚಿದ್ದ. ಮಹಾರಾಜರ ಕಾರಿನ ಚಾಲಕನು ಆತನಿಗೆ, “ನೋಡು, ಮಹಾರಾಜರು ಬಂದಿದ್ದಾರೆ. ಬಾಗಿಲು ತೆಗಿ” ಎಂದ.

ಕಾವಲುಗಾರ ಹೇಳಿದ: “ಈಗ ರೈಲೇ ನನಗೆ ಮಹಾರಾಜರು. ಆ ಮಹಾರಾಜರು ಹೋದಮೇಲೆ ಉಳಿದ ಮಹಾರಾಜರ ವಿಷಯ !”

ರೈಲು ಬಂದು ಹೋಯಿತು. ಕಾವಲುಗಾರ ಬಾಗಿಲು ತೆಗೆದು ಮಹಾರಾಜರ ಕಾರಿನ ಬಳಿ ಬಂದು ಕೈಮುಗಿದ.

ಮಹಾರಾಜರು ‘ಭೇಷ್’ ಎಂದು ಹೇಳಿ ಮೂವತ್ತು ರೂಪಾಯಿಗಳ ಬಹುಮಾನ ಕೊಟ್ಟು ಮುಂದಕ್ಕೆ ಹೋದರು.

ಕರುಣೆ

ಕೃಷ್ಣರಾಜ ಒಡೆಯರದು ಬಹು ಕರುಣೆಯ ಸ್ವಭಾವ. ಆದುದರಿಂದಲೇ ಅವರ ಬಳಿ ಕೆಲಸ ಮಾಡುತ್ತಿದ್ದವರೂ ಅವರ ಪ್ರಜೆಗಳೂ ಅವರನ್ನು ತಂದೆಯಂತೆ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು.

ಪಿಟೀಲು ನುಡಿಸುತ್ತಿದ್ದ ಶಿವರುದ್ರಪ್ಪ ಹುಟ್ಟು ಕುರುಡರು. ಆತ ತುಂಬ ಬಡವರಾಗಿದ್ದರಿಂದ ಮಹಾಪ್ರಭುಗಳು ಅವರಿಗೆ ಅರಮನೆಯಲ್ಲಿಯೇ ಊಟ, ಉಪಚಾರಗಳ ವ್ಯವಸ್ಥೆ ಮಾಡಿದ್ದರು. ಒಂದು ದಿನ ಪ್ರಭುಗಳು ಆತನನ್ನು ಕೇಳಿದರು :

“ಶಿವರುದ್ರೂ . . . ಬಿಡದಿಯಲ್ಲಿ ನಿನಗೆ ಸರಿಯಾಗಿ ಊಟ ಹಾಕ್ತಾರೆಯೇ ?”

“ಹುಂ….ಮಹಾಸ್ವಾಮಿ.”

“ಊಟಕ್ಕೆ ತುಪ್ಪ ಹಾಕ್ತಾರೆ ತಾನೆ ?”

“ಹಾಕುತ್ತಾರೆ ಸ್ವಾಮಿ…..”

“ಅದು ನಿನಗೆ ಹೇಗೆ ಗೊತ್ತೋ ? ನೀನು ಕುರುಡ.”

“ಕುರುಡನಿಗೆ ಯಾರು ಅನ್ಯಾಯ ಮಾಡುತ್ತಾರೆ ಸ್ವಾಮಿ ?”

“ಹಾಗಲ್ಲ…. ಇನ್ನು ಮೇಲೆ ಕೈಯೊಡ್ಡಿ ಕೈತುಂಬ ತುಪ್ಪ ಹಾಕಿಸಿಕೊಂಡು ಊಟ ಮಾಡು. ಬಡಿಸುವವರು ಅನ್ನದ ಮೇಲೆ ತುಪ್ಪ ಹಾಕಿದ್ದೇವೆಂದರೆ ನಂಬಬೇಡ” ಎಂದರು ಒಡೆಯರು. ಸಂಗೀತ ಕಲಿಯಲು ಬಯಸಿದ ಶಿವರುದ್ರಪ್ಪನವರಿಗೆ ಮಹಾ ಪ್ರಭುಗಳು ಬಿಡಾರದ ಕೃಷ್ಣಪ್ಪನವರನ್ನೇ ಗುರುಗಳನ್ನಾಗಿ ನೇಮಿಸಿದರು.

ಪ್ರತಿದಿನ ಕೃಷ್ಣರಾಜ ಒಡೆಯರು ದೇವರ ಪೂಜೆ ಮಾಡುತ್ತಿರುವಾಗ ಶಿವರುದ್ರಪ್ಪನವರು ಪಿಟೀಲು ನುಡಿಸುತ್ತಿದ್ದರು. ಒಂದು ದಿನ ಅವರು ಪಿಟೀಲು ನುಡಿಸಲು ತಡವಾಗಿ ಹೋದರು. ಪೂಜೆಯಾದ ಮೇಲೆ ಪ್ರಭುಗಳು ಕೇಳಿದರು : “ಇವತ್ತು ಪೂಜೆಗೆ ಯಾಕೆ ತಡವಾಗಿ ಬಂದೆ ಶಿವರುದ್ರೂ ?”

“ನಾನು ಕುರುಡ, ಪರಾವಲಂಬಿ, ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕು. ಇನ್ನೊಬ್ಬರನ್ನು ಗಂಟೆ ಕೇಳಿಕೊಂಡು ಬರಬೇಕಾಯಿತು. ತಡವಾಯಿತು ಸ್ವಾಮಿ…. ಕ್ಷಮಿಸಬೇಕು.”

ಈ ಮಾತನ್ನು ಒಡೆಯರು ನೆನಪಿನಲ್ಲಿಟ್ಟುಕೊಂಡು ಮುಂದೊಮ್ಮೆ ಯೂರೋಪಿಗೆ ಹೋಗಿದ್ದಾಗ ಅಲ್ಲಿಂದ ಕುರುಡರ ಗಡಿಯಾರವೊಂದನ್ನು ತಂದು ಶಿವರುದ್ರಪ್ಪನವರಿಗೆ ಕೊಟ್ಟರು. ಅದನ್ನು ನೋಡುವುದು ಹೇಗೆಂಬುದನ್ನೂ ತಾವೆ ಹೇಳಿಕೊಟ್ಟರು.

ಮಹಾರಾಜರು ನೀಲಗಿರಿಗೆ ಹೋಗುವ ದಾರಿಯಲ್ಲಿ ಸಾಲುಮರಗಳಿಗೆ ಸುಣ್ಣ ಕೆಮ್ಮಣ್ಣುಗಳ ಪಟ್ಟೆಗಳನ್ನು ಹಾಕಿಸುವ ಪದ್ಧತಿ ಇತ್ತು. ಹಳ್ಳಿಯ ಅಧಿಕಾರಿಗಳು ಈ ಕೆಲಸವನ್ನು ಸರದಿಯಿಂದ ಸಂಬಳವಿಲ್ಲದೇ ಮಾಡಿಸುತ್ತಿದ್ದರು. ಒಂದು ಬಾರಿ ಅಕಸ್ಮಾತ್ತಾಗಿ ಮಹಾರಾಜರು ಮೊದಲೇ ಆ ದಾರಿಯಲ್ಲಿ ಬಂದರು. ಅನಾಥ ಮುದುಕಿಯೊಬ್ಬಳು ಪಟ್ಟೆ ಹಾಕುತ್ತಿದ್ದಳು. ಮಹಾರಾಜರು ಕಾರನ್ನು ನಿಲ್ಲಿಸಿ, “ಯಾಕಮ್ಮ,  ಈ ಬಿಸಿಲಿನಲ್ಲಿ ಹೀಗೆ ಕಷ್ಟಪಡುತ್ತಿದ್ದೀಯ ?” ಎಂದು ಕೇಳಿದರು.

ಅವಳು ಹೇಳಿದಳು : “ಅಪ್ಪಾ, ನನಗೆ ಹೊಟ್ಟೆಗಿಲ್ಲ. ಯಾರೋ ಮಹಾರಾಜರು ಈ ಕಡೆ ಹೋಗ್ತಾರಂತೆ. ಪಟೇಲ ಪ್ರಾಣಹಿಂಡಿ ಈ ಬಿಟ್ಟಿ ಕೆಲಸ ಮಾಡಿಸ್ತಾನೆ. ಮಹಾರಾಜರು ಬಂದ್ರೇನು, ಹೋದ್ರೇನು, ನನ್ನ ಜೀವ ಹೋಗ್ತಾ ಇದೆ.”

ಮಹಾರಾಜರು ಆಕೆಗೆ ಕೆಲಸ ನಿಲ್ಲಿಸುವ ಹಾಗೆ ಹೇಳಿ ಹಣವನ್ನೂ ಹಣ್ಣುಗಳನ್ನೂ ಕೊಟ್ಟು ಮುಂದೆ ಹೋದರು. ಸಾಲುಮರಗಳಿಗೆ ಇನ್ನು ಮುಂದೆ ಪಟ್ಟಿ ಹಾಕಿಸಬೇಕಾಗಿಲ್ಲ ಎಂದು ಅಪ್ಪಣೆ ಮಾಡಿದರು.

ಒಂದು ಬಾರಿ ಮಹಾರಾಜರು ಕಾರಿನಲ್ಲಿ ಬರುತ್ತಿದ್ದರು. ಎದುರಿಗೆ ಎತ್ತಿನ ಗಾಡಿ ಬರುತ್ತಿತ್ತು. ಎತ್ತುಗಳು ಕಾರನ್ನು ಕಂಡು ಬೆದರಿದವು. ಗಾಡಿ ಹಿಂದಕ್ಕೆ ಜಾರುತ್ತಿತ್ತು. ನೆಲವೆಲ್ಲ ಕೊಚ್ಚೆ. ಅಕ್ಕಪಕ್ಕದಲ್ಲಿದ್ದವರೆಲ್ಲ ತಾವು ಮುಂದೆ ಕಾಲಿಟ್ಟರೆ ಪಾದರಕ್ಷೆಗಳೂ ಬಟ್ಟೆಗಳು ಕೆಸರಾಗುತ್ತವೆ ಎಂದು ಹಿಂಜರಿಯುತ್ತಿದ್ದರು. ಮಹಾರಾಜರು ಕಾರಿನಿಂದ ಇಳಿದು ಹೋಗಿ ಗಾಲಿಗೆ ಹೆಗಲು ಕೊಟ್ಟು ನಿಲ್ಲಿಸಿದರು. ಗಾಡಿಯವನು ಕೆಳಗಿಳಿದು ಎತ್ತುಗಳನ್ನು ಹಿಡಿದುಕೊಂಡು ಗಾಡಿಯನ್ನು ನಡೆಸಲು ಸಾಧ್ಯವಾಯಿತು. ಮಹಾರಾಜರ ಬಟ್ಟೆಯೆಲ್ಲ ಕೆಸರು, ಕೈಯೆಲ್ಲ ತರಚಿಹೋಗಿತ್ತು.

ಧರ್ಮದ ತಿರುಳನ್ನು ಅರಿತ ಹಿಂದು

ಕೃಷ್ಣರಾಜರು ಬಹು ಶ್ರದ್ಧಾವಂತ ಹಿಂದುಗಳು ಎಂಬುದು ಎಲ್ಲರಿಗೂ ತಿಳಿದಿದ್ದ ಸಂಗತಿ. ಬೇರೆ ದೇಶಗಳಿಗೆ ಹೋದಾಗಲೂ ಜೊತೆಗೆ ಗಂಗಾನದಿಯ ನೀರನ್ನು ತೆಗೆದುಕೊಂಡು ಹೋದರು. ಸಂಧ್ಯಾವಂದನೆ, ಹಬ್ಬ, ವ್ರತಗಳನ್ನು ಬಿಡಲಿಲ್ಲ. ತಂದೆ ತಾಯಿಯರ ಶ್ರಾದ್ಧವನ್ನು ನಿಜವಾದ ಶ್ರದ್ಧೆಯಿಂದ ಆಚರಿಸುತ್ತಿದ್ದರು. ಪುಣ್ಯ ಕ್ಷೇತ್ರಗಳ ಯಾತ್ರೆಯನ್ನು ಪೂಜ್ಯ ಭಾವನೆಯಿಂದ ಮಾಡಿದರು. ಹಿಮಾಲಯ ಪ್ರದೇಶದ ಮಾನಸ ಸರೋವರಕ್ಕೆ ಹೋಗುವುದು ಬಹಳ ಕಷ್ಟ. ಬಹು ಕಡಿದಾದ ಮಾರ್ಗದಲ್ಲಿ ಹೋಗಬೇಕು. ಅಲ್ಲಿಗೂ ಹೋದರು. ಅಮರಗಂಗೆಯಲ್ಲಿ ನೀರು ಕೊರೆಯುತ್ತಿರುತ್ತದೆ. ಕೆಲವರಿಗೆ ಅಲ್ಲಿ ಸ್ನಾನ ಮಾಡಿದರೆ ಮೈಮೇಲೆ ಸ್ವಾಧೀನ ತಪ್ಪುತ್ತದಂತೆ. ಅಲ್ಲಿ ಸ್ನಾನ ಮಾಡಿದರು. ಕೈಲಾಸ ಶಿಖರ ದರ್ಶನ ಮಾಡಿದರು. ದೇವಾಲಯಗಳಿಗೆ ಅವರು ನೀಡಿದ ಕಾಣಿಕೆಗಳಿಗೆ ಲೆಖ್ಖವಿಲ್ಲ. ಕಾಶಿಯ ಮಹಾರಾಜರಿಗೆ ಮೂವತ್ತು ಸಾವಿರ ರೂಪಾಯಿ ಕೊಟ್ಟು ಜಮೀನನ್ನು ಕೊಂಡರು. ಕಾಶಿಯಲ್ಲಿ ಈಗ ಮಹಾರಾಜರ ಛತ್ರವೂ ಸ್ನಾನ ಘಟ್ಟವೂ ಇರುವುದು ಅಲ್ಲೆ. ಚಾಮುಂಡೇಶ್ವರಿಯ ಪೂಜೆ ಎಂದರೆ ಅವರು ಮೈಮರೆಯುವರು. ರಥೋತ್ಸವದಲ್ಲಿ ಶ್ರದ್ಧೆಯಿಂದ ಭಾಗವಹಿಸಿ ರಥವನ್ನೆಳೆಯುವರು.

ಆದರೆ ಬಹು ಮುಖ್ಯವಾದ ಸಂಗತಿ ಎಂದರೆ, ಕೃಷ್ಣರಾಜರು ಹಿಂದೂ ಧರ್ಮದ ತಿರುಳನ್ನು ಅರ್ಥಮಾಡಿಕೊಂಡು ಆಚರಿಸುತ್ತಿದ್ದರು ಎನ್ನುವುದು. ಎಲ್ಲರನ್ನೂ ಸಮಭಾವನೆಯಿಂದ ಕಾಣುವುದು ಅವರಿಗೆ ಉಸಿರಾಡುವಷ್ಟು ಸಹಜವಾಗಿತ್ತು. ಹೊರಗಿನ ನೋಟಕ್ಕೆ ಅವರ ಜೀವನದಲ್ಲಿ ಬಹು ವೈಭವ. ನವರಾತ್ರಿಯಲ್ಲಿ ಚಿನ್ನದ ಸಿಂಹಾಸನದ ಮೇಲೆ ಕುಳಿತು ದರ್ಬಾರು ನಡೆಸುವರು. ಅರಮನೆ ಎಲ್ಲ ವಿದ್ಯುದ್ದೀಪಗಳಿಂದ ಝಗಝಗಿಸುವುದು, ಲಕ್ಷಾಂತರ ಜನ ನೋಡಿ ಆನಂದಿಸುವರು. ವಿಜಯದಶಮಿಯಂದು ಅವರ ಮೆರವಣಿಗೆ ಜಗತ್ತಿನ ಬಹು ವೈಭವದ ದೃಶ್ಯಗಳಲ್ಲಿ ಒಂದು. ಪ್ರಪಂಚದ ಬೇರೆ ಬೇರೆ ದೇಶಗಳಿಂದ ಇದನ್ನು ನೋಡಲು ಜನ ಬರುತ್ತಿದ್ದರು. ಅವರು ಹುಟ್ಟಿದ ಹಬ್ಬದ- ವರ್ಧಂತಿಯ- ದಿನವೂ ಸಂಭ್ರಮದ, ವೈಭವದ ದರ್ಬಾರು. ಆದರೆ, ಅವರ ವೈಯಕ್ತಿಕ ಜೀವನ ಬಹು ಸರಳ. ಸಂಪ್ರದಾಯದಂತೆ ಪ್ರತಿನಿತ್ಯ ಅರಮನೆಯಲ್ಲಿ ಭಕ್ಷ್ಯಭೋಜ್ಯಗಳು ಆಗುತ್ತಿದ್ದವು. ಅವರು ಊಟ ಮಾಡುತ್ತಿದ್ದುದು ಸ್ವಲ್ಪವೇ, ಅದೂ ಸರಳ ಆಹಾರ. ತಾಯಿ ತೀರಿಕೊಂಡನಂತರ ರಾತ್ರಿ ಊಟವನ್ನೂ ಬಿಟ್ಟರು. ಎಲ್ಲ ಅಧಿಕಾರಿಗಳಂತೆ ಕಚೇರಿಗೆ ಹೋಗಿ ಕೆಲಸ ಮಾಡುವರು. ತಮ್ಮ ಕೆಲಸಕ್ಕಾಗಿಯೇ ಜನರಿಗಾಗಿಯೇ ಬದುಕಿದರು ಎನ್ನಬೇಕು.

ಆದರ್ಶ ಹಿಂದುಗಳಾದ ಮಹಾರಾಜರಿಗೆ ಎಲ್ಲ ಮತಗಳಲ್ಲಿಯೂ ಗೌರವ, ಎಲ್ಲ ಮತಗಳವರಲ್ಲಿಯೂ ಸಹೋದರ ಭಾವ.

ಮಹಾರಾಜರದು ಬಲಶಾಲಿ ದೇಹ. ಚಿಕ್ಕ ವಯಸ್ಸಿನಿಂದ ಸಾಮು ಮಾಡಿ, ಶಿಸ್ತಿನಿಂದ ಜೀವನ ನಡೆಸಿದವರು. ಅವರ ಶಕ್ತಿಯನ್ನು ನೋಡಿ ಜನ ಬೆರಗಾಗುತ್ತಿದ್ದರು. ಒಂದು ರಾತ್ರಿ ಅವರ ಕಾರಿನ ದೀಪಗಳಿಗೆ ಹೆದರಿ ಒಂದು ಎತ್ತಿನ ಬಂಡಿಯ ಎತ್ತುಗಳು ಹಿಂದಕ್ಕೆ ಸರಿದವು. ಎರಡು ಕಡೆಯೂ ಕಮರಿಗಳು. ಬಂಡಿ ಕೆಳಕ್ಕುರುಳುವುದರಲ್ಲಿತ್ತು. ಮಹಾರಾಜರು ಉಳಿದವರಿಗೆಲ್ಲ ಕಾರಿನಲ್ಲೆ ಇರುವಂತೆ ಹೇಳಿ ಮುಂದೆ ಓಡಿ ಗಾಡಿಯ ಮೂಕಿಯನ್ನು ಹಿಡಿದು ನಿಲ್ಲಿಸಿದರು. ಎತ್ತುಗಳು ಎಡಕ್ಕೆ ಎಳೆಯುತ್ತಿವೆ, ಮಹಾರಾಜರು ಬಲಕ್ಕೆ ಎಳೆಯುತ್ತಿದ್ದಾರೆ. ಅನಂತರ ಹಿಂದಿನ ಗಾಡಿಗಳವರು ಬಂದು ಗಾಡಿಯನ್ನು ಮುಂದಕ್ಕೆ ತಳ್ಳಿದರು. ಇಂತಹ ಪ್ರಸಂಗಗಳು ಹಲವು. ಅವರು ಸಾಹಸವಂತರು. ಷಿಕಾರಿಗೆ ಹೋದಾಗ ಅವರ ಧೈರ್ಯವನ್ನು ಕಂಡು ಪಾಶ್ಚಾತ್ಯ ಬೇಟೆಗಾರರೇ ಬೆಕ್ಕಸಬೆರಗಾಗುತ್ತಿದ್ದರು. ಒಮ್ಮೆ ನೀಲಗಿರಿಯಲ್ಲಿ ಒಬ್ಬರೇ ಕುದುರೆಯನ್ನು ಏರಿ ಹೋಗುತ್ತಿದ್ದರು. ಕೆಳಗೆ ಪೊದರೆಯಲ್ಲಿ ಐರೋಪ್ಯರೊಬ್ಬರು ಬಿದ್ದು ಜ್ಞಾನ ತಪ್ಪಿದುದನ್ನು ಕಂಡರು. ಅಲ್ಲಿ ಒಂದೊಂದು ಹೆಜ್ಜೆಗೂ ಪ್ರಾಣಾಪಾಯ. ಆದರೂ ತಾವೇ ಇಳಿದು ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಬಂದು ಚಿಕಿತ್ಸೆಗೆ ಏರ್ಪಾಟು ಮಾಡಿದರು.

ಮಹಾರಾಜರಿಗೆ ಆಟಗಳಲ್ಲಿ ತುಂಬ ಆಸಕ್ತಿ. ದಿನವೂ ಕ್ರಿಕೆಟ್, ಟೆನಿಸ್, ಪೋಲೋ ಮುಂತಾದ ಆಟಗಳನ್ನು ಆಡುತ್ತಿದ್ದರು. ’ಮೈಸೂರು ದರ್ಬಾರ್ ಟೀಮ್’ಅನ್ನು ಅವರೇ ಸ್ಥಾಪಿಸಿ, ಪೋಲೋ ಆಟದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ನಾಲ್ಕು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಆಟಗಾರರನ್ನು ಸೋಲಿಸಿ ಅನೇಕ ಬಹುಮಾನಗಳನ್ನು ಗಿಟ್ಟಿಸಿದರು.

ಕಲೆಗೊಲಿದ ಚೇತನ

ಸಂಗೀತ, ಸಾಹಿತ್ಯದಲ್ಲೂ ಕೃಷ್ಣರಾಜರಿಗೆ ತುಂಬ ಒಲವು. ಗಾನ, ವಾದ್ಯಗಾಯನ ಎರಡನ್ನೂ ಅವರು ಚೆನ್ನಾಗಿ ಕಲಿತಿದ್ದರು. ನಾಗಸ್ವರ, ಕೊಳಲು, ದಿಲ್‌ರುಬಾ, ಸಿತಾರ್, ವೀಣೆ, ಪಿಟೀಲು ಮುಂತಾದ ವಾದ್ಯಗಳನ್ನು ಅವರು ನುಡಿಸುತ್ತಿದ್ದರು, ಸೊಗಸಾಗಿ ಹಾಡುತ್ತಿದ್ದರು. ವೀಣೆ ರಾಮಣ್ಣ, ವೀಣೆ ಶೇಷಣ್ಣ ಎಂಬ ಪ್ರಖ್ಯಾತ ವಿದ್ವಾಂಸರಿಂದ ಅವರು ವೀಣೆ ನುಡಿಸಲು ಕಲಿತರು. ಅವರಿಂದ ’ಭೇಷ್’ ಎನ್ನಿಸಿಕೊಂಡರೆ ಸಾಕು ಎಂದು ಎಂತಹ ಪ್ರಸಿದ್ಧ ವಿದ್ವಾಂಸರಿಗೂ ಬಯಕೆ. ಸಂಗೀತಗಾರರಿಗೆ ಕಲ್ಪವೃಕ್ಷವಾಗಿದ್ದರು ಮಹಾರಾಜರು.

ಕೃಷ್ಣರಾಜ ಒಡೆಯರಿಗೆ ಚಿತ್ರಕಲೆಯಲ್ಲಿ ತುಂಬ ಆಸಕ್ತಿ. ಮೈಸೂರಿನ ಜಗನ್ಮೋಹನ ಬಂಗಲೆಯಲ್ಲಿ ಚಿತ್ರಶಾಲೆ ಯನ್ನೇರ್ಪಡಿಸಿ, ಉತ್ತಮ ಚಿತ್ರಕಾರರಿಂದ ಚಿತ್ರಗಳನ್ನು ಬರೆಸಿ ಅವುಗಳನ್ನು ಸಂಗ್ರಹಿಸಿಟ್ಟರು. ಕಲಾ ಶಾಲೆಗಳಿಗೆ ತುಂಬ ಉತ್ತೇಜನ ಕೊಟ್ಟರು. ರಾಜಾ ರವಿವರ್ಮ, ವೆಂಕಟಪ್ಪ, ಕೇಶವಯ್ಯ ಮುಂತಾದ ಕಲಾವಿದರನ್ನು ಅರಮನೆಗೆ ಬರಮಾಡಿಕೊಂಡು ಅವರಿಂದ ಪ್ರಭುಗಳು ಚಿತ್ರಪಟಗಳನ್ನು ಬರೆಸಿ ಕೈತುಂಬ ಹಣ ಕೊಟ್ಟು ಮರ್ಯಾದೆಮಾಡಿದರು.

ವಿನೋದಪ್ರಿಯರು

ಮಹಾರಾಜರು ಸರಸಗುಣವುಳ್ಳವರು ಮತ್ತು ಹಾಸ್ಯ ಪ್ರಿಯರು. ಆದರೆ ಅವರದು ತುಂಬ ಗಂಭೀರವಾದ ಹಾಸ್ಯ. ಒಂದು ಸಲ ಮಹಾರಾಜರು ವೈಸರಾಯ್ ದಂಪತಿಗಳೊಡನೆ ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭ ಬಂತು. ಕಾರಿನ ಮುಂದುಗಡೆ ಆಸನದ ಮೇಲೆ ಒಂದು ಕಿಂಕಾಪಿನ ಮೆತ್ತೆಯಿತ್ತು. ವೈಸರಾಯರ ಹೆಂಡತಿ ಅದನ್ನು ತೆಗೆದುಕೊಳ್ಳಲು ಹೋದಾಗ ಮಹಾರಾಜರು, “ಅದನ್ನು ತೆಗೆದುಕೊಳ್ಳಬೇಡಿ, ಅದು ಡ್ರೈವರ್ ಕುಳಿತುಕೊಳ್ಳುವ ಆಸನ” ಎಂದರು. ಆಕೆಗೆ ಅವಮಾನವಾದಂತೆ ಆಯಿತು. ಆ ದಂಪತಿಗಳಿಗೆ ಒಡೆಯರು ಇನ್ನೂ ಉತ್ತಮವಾದ ಎರಡು ಮಕಮಲ್ ದಿಂಬುಗಳನ್ನು ಕೊಡಿಸಿದರು. ಆದರೂ ಆಕೆಯ ಕೋಪ ಕಡಿಮೆಯಾಗಲಿಲ್ಲ. ಮುಖ ಗಂಟುಹಾಕಿಕೊಂಡೇ ಕುಳಿತಿದ್ದರು. ’ನಾನು ಡ್ರೈವರಿಗಿಂತ ಕಡಿಮೆಯಾದೆನೆ ?’ ಎನ್ನುವ ಅಸಮಾಧಾನ ಆಕೆಗೆ. ಸ್ವಲ್ಪ ಹೊತ್ತಾದ ಮೇಲೆ ಮಹಾರಾಜರೇ ಡ್ರೈವರ್ ಸ್ಥಳದಲ್ಲಿ ಕುಳಿತು ಕಾರು ನಡೆಸಿದರು. ಆಗ ಆಕೆಗೆ ಅವರಾಡಿದ ಮಾತು ಅರ್ಥವಾಗಿ ನಿಜಸಂಗತಿ ತಿಳಿಯಿತು. ನಗು ಬಂದಿತು.

ಅರಮನೆಯ ಕಾವಲು ಸಿಪಾಯಿಯೊಬ್ಬ ನಿಂತೇ ನಿದ್ರೆ ಮಾಡುವುದನ್ನು ಕಲಿತಿದ್ದ. ಮಹಾರಾಜರು ಇದನ್ನು ಗುರುತಿಸಿದ್ದರು. ಒಮ್ಮೆ ಅವನು ಕಾವಲು ನಿಂತಿದ್ದಂತೆಯೇ ಸದ್ದಿಲ್ಲದೇ ಅವನ ಪೇಟಾ ತೆಗೆದುಕೊಂಡು ಬಂದುಬಿಟ್ಟರು. ಅವನಿಗೆ ಎಚ್ಚರಿಕೆಯಾದಾಗ ನೋಡಿಕೊಳ್ಳುತ್ತಾನೆ- ಪೇಟಾ ಇಲ್ಲ ! ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ ! ನಗುನಗುತ್ತ ಅದನ್ನು ಹಿಂದಿರುಗಿಸಿದರು ಕೃಷ್ಣರಾಜರು.

ಸಿಂಹಾಸನಕ್ಕೆ ಘನತೆ

೧೯೩೪ರಲ್ಲಿ ಮಹಾರಾಜರ ತಾಯಿ ತೀರಿಕೊಂಡರು. ಇದು ಅವರಿಗೆ ದೊಡ್ಡ ಆಘಾತ. ೧೯೪೦ ರ ಮಾರ್ಚ್‌ನಲ್ಲಿ ಇದ್ದಕ್ಕಿದಂತೆ ಅವರ ತಮ್ಮ ನಿಧನರಾದರು. ಕೃಷ್ಣರಾಜರಿಗೆ ಸಿಡಿಲು ಬಡಿದಂತಾಯಿತು. ಆಗಿನಿಂದ ಅವರ ಆರೋಗ್ಯ ಕೆಟ್ಟಿತು. ೧೯೪೦ರ ಆಗಸ್ಟ್ ಮೂರನೆಯ ತಾರೀಕು ಶನಿವಾರ ರಾತ್ರಿ ಒಂಬತ್ತು ಘಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಇಹಲೋಕ ಬಿಟ್ಟರು.

ಕೃಷ್ಣರಾಜರಿಗೆ ಹದಿನಾರು ವರ್ಷ ವಯಸ್ಸಾಗಿದ್ದಾಗ ಕಾಥೇವಾಡದ ರಾಜವಂಶ ಒಂದರ ರಾಣಾ ಸಾಹೇಬ ವಿನಯಸಿಂಹರ ಮಗಳು ಪ್ರತಾಪಕುಮಾರಿ ದೇವಿಯವರೊಡನೆ ಮದುವೆಯಾಗಿತ್ತು. ಮಕ್ಕಳಿರಲಿಲ್ಲ. ಕೃಷ್ಣರಾಜರನಂತರ ಅವರ ತಮ್ಮ ಕಂಠೀರವ ನರಸಿಂಹರಾಜ ಒಡೆಯರ ಮಗ ಜಯಚಾಮರಾಜ ಒಡೆಯರು ಮೈಸೂರಿನ ಸಿಂಹಾಸನವನ್ನು ಏರಿದರು.

ಮೈಸೂರು ನಗರದಲ್ಲಿ ಅರಮನೆಯಿಂದ ಸ್ವಲ್ಪ ದೂರದಲ್ಲಿ ಕೃಷ್ಣರಾಜರ ವಿಗ್ರಹವಿದೆ.

ಭಾರತದಲ್ಲಿ ರಾಜಮಹಾರಾಜರುಗಳ ಕಾಲ ಆಗಿ ಹೋಯಿತು. ಆದರೆ ಕೃಷ್ಣರಾಜರು ಮಹಾರಾಜರಾದುದರಿಂದ ದೊಡ್ಡವರು ಎನಿಸಿಕೊಂಡವರಲ್ಲ. ಅವರಿಂದ ಮಹಾರಾಜ ಪದವಿಯ ಘನತೆ ಏರಿತು.