‘ನಿಮ್ಮ ನಾಳೆಯ ಕವಿತೆ ಹೇಗಿರಬಹುದು?’ ವಿಲ-
ಕ್ಷಣ ಪ್ರಶ್ನೆ! ನಾನೇನು ಜ್ಯೋತಿಷಿಯೆ? ನಾಳೆಯ
ಕವಿತೆ ಎಂದರೇನು? ನಾ ಬರೆದ ಇವತ್ತಿನ ಕವಿತೆ
ನಾಳೆಯದಷ್ಟೇ ಅಲ್ಲ, ನಿನ್ನೆಯದೂ ಕೂಡ!
ಕಾಲದ ಅನಂತತೆಯಲ್ಲಿ ವಿಶ್ವಾಸವಿಡ-
ದವನು ಕವಿಯಾಗಲಾರ. ಕವಿತೆ
ಅನ್ನುವುದು ವರ್ತಮಾನದಲ್ಲಿ ನಿಂತು ಕವಿ
ಭೂತ ಭವಿಷ್ಯತ್ತುಗಳೊಂದಿಗೆ ನಡೆ-
ಯಿಸುವ ಅನುಸಂಧಾನ. ಎಲ್ಲಿತ್ತು ಕವಿತೆ?
ಅಲ್ಲೇ ಇತ್ತು ಒಳಗೆ, ನಿನಗೆ ಕಾಣದ ಹಾಗೆ,
ಕವಿ ಕಲ್ಪನೆಯ ಕಿರಣದಿಂದನಾವರಣಗೊಂ-
ಡಾಗ ಅದು ಎಂಥ ಸೋಜಿಗ ನಿನಗೆ!
ವಾಸ್ತವವಾಗಿ ಅದೊಂದು ಬಗೆ ಅರಿವು; ಅರಿವೆಂ-
ದರೂ ಏನು? ಈಗಾಗಲೇ ಇದ್ದದರ ಮೇಲ-
ಕಸ್ಮಾತ್ತಾಗಿ ಬಿದ್ದ ಬೆಳಕಿಂದ ವಸ್ತು ಪ್ರತ್ಯಕ್ಷ
ವಾಗುವ ಮಾಟ. ಈವರೆಗೆ ಕಂಡಿರಲಿಲ್ಲ
ನಿನಗೆ. ಹಾಗಂತ ನಿನಗೆ ಕಾಣದ್ದೆಲ್ಲ ಇಲ್ಲ-
ವೆಂದೇನಲ್ಲ. ಇರುವುದೆಲ್ಲವು ನಮಗೆ
ಕಾಣಲೇಬೇಕೆಂಬ ನಿಯಮವೇನಿಲ್ಲ; ಕಂಡ
ಕಾಣ್ಕೆಯ ರೀತಿಯೇ ಬೇರೆ ಪ್ರತ್ಯಭಿಜ್ಞರಿಗೆ.
ಆದರೂ ಕವಿಗೆ ಕಂಡದ್ದನ್ನು ಹಿಡಿದೆನೆನ್ನುವ ಮರುಳು
ಕುಂಭದೊಳಗಂಬುಧಿಯ ತುಂಬಬಹುದೇ ಹೇಳು?
Leave A Comment