ವ್ಯಾಸರು ತಮ್ಮ ಕೃತಿಯಾದ ಮಹಾಭಾರತ, ಅದರ ಭಾಗವಾದ ಭಗವದ್ಗೀತೆಯಲ್ಲಿ, ಅದರ ಒಂದು ಪಾತ್ರವಾದ ಕೃಷ್ಣನ ಹೇಳಿಕೆಯಾಗಿ ವಿಶ್ವವನ್ನು, ಆಕಾಶದಲ್ಲಿ ಬೇರುಗಳು ಮತ್ತು ನೆಲದಲ್ಲಿ ಕೊಂಬೆಗಳು ಇರುವ ಮರಕ್ಕೆ ಹೋಲಿಸುತ್ತಾರೆ.
ರುಡಾಲ್ಫ್ ಸ್ಟೇನರ್ ಎಂಬ ಜರ್ಮನ್ ಶಿಕ್ಷಣತಜ್ಞ ಮಗುವಿನ ಬೆಳವಣಿಗೆಯನ್ನು ವಿವರಿಸುತ್ತಾ ನಾವು ಬೆಳೆಯುತ್ತೇವೆನ್ನುವುದು ಕೆಳಗಿನಿಂದ ಮೇಲಕ್ಕೆ ಅಲ್ಲ, ಮೇಲಿನಿಂದ ಕೆಳಕ್ಕೆ ಎನ್ನುತ್ತಾರೆ. ಅಂದರೆ ಹುಟ್ಟಿದಾಗ ಕೂರಲಾಗದ, ನಿಲ್ಲಲಾರದ, ಓಡಾಡಲಾಗದ, ಕೈಯಲ್ಲಿ ಏನನ್ನೂ ಹಿಡಿಯಲಾಗದ ಒಂದು ಮೆದುಳಿನ ಮುದ್ದೆಯಾದ ಮಗು ಕ್ರಮೇಣ ತನ್ನ ಅಂಗಾಂಗಗಳಿಗೆ, ಮುಖ್ಯವಾಗಿ ಕೈ, ಕಾಲುಗಳಿಗೆ ಮೆದುಳಿನ ನಿಯಂತ್ರಣವನ್ನು ಹರಿಸುವುದರ ಮೂಲಕ ಕೂರಲು, ನಿಲ್ಲಲು, ದೇಹದ ಸಮತೋಲನ ಸಾಧಿಸಿ ಓಡಾಡಲು, ಕುಣಿದಾಡಲು, ಶಕ್ತವಾದಾಗ ಮಗು ಬೆಳೆಯಿತು ಎಂದು ಹೇಳುವುದು ವಾಡಿಕೆಯಾಗಿದೆ. ಹೀಗೆ, ಮೆದುಳಿನ ಶಕ್ತಿ ಕೈಕಾಲುಗಳಿಗೆ ಇಳಿಯದ ಮಕ್ಕಳನ್ನು ಬೆಳವಣಿಗೆ ಕುಂಠಿತಗೊಂಡ ಮಗು ಎಂದು ಹೇಳುತ್ತಾರೆ.
ಸಂತ ಕಬೀರರು, ನಾವು ‘ಉಲ್ಟಾಬಾನಿ’ (ತಲೆಕೆಳಗು ಮಾತು) ಎಂದು ಕರೆಯುವ ತಮ್ಮ ದೋಹಾ ಒಂದರಲ್ಲಿ ‘ಮೊದಲು ನಾನು ಹುಟ್ಟಿದೆ, ಆಮೇಲೆ ನನ್ನ ಸಹೋದರರು ಹುಟ್ಟಿದರು, ಕೊನೆಗೆ ನನ್ನ ತಂದೆ-ತಾಯಿಯರು ಹುಟ್ಟಿದರು’ ಎಂದು ಹೇಳುತ್ತಾರೆ.
ವಿಲಿಯಮ್ ವರ್ಡ್‌ಸ್‌ವರ್ತ್ ತಮ್ಮ ಕವನವೊಂದರಲ್ಲಿ, ‘ಮಗು ಮನುಜನ ತಂದೆ’ ಎಂದು ಕಾವ್ಯಾತ್ಮಕವಾಗಿ ಹೇಳುತ್ತಾರೆ.
ಜನಪ್ರಿಯ ಯಕ್ಷಗಾನದ ಪ್ರಸಂಗವೊಂದರಲ್ಲಿ ಎರಡು ಪಾತ್ರಗಳ ಮಧ್ಯೆ ಮಗುವಿನಿಂದ ತಂದೆಯೋ? ತಂದೆಯಿಂದ ಮಗುವೋ? ಎಂಬ ಜಿಜ್ಞಾಸೆ ಏಳುತ್ತದೆ. ‘ತಂದೆಯಿಲ್ಲದೆ ಮಗು ಸಾಧ್ಯವಿಲ್ಲ ಆದ್ದರಿಂದ ತಂದೆಯಿಂದಲೇ ಮಗು’ ಎಂದು ದೇವತೆಯ ಪಾತ್ರ ಪ್ರತಿಪಾದಿಸುತ್ತದೆ. ‘ಎಲ್ಲ ಗಂಡಸರನ್ನೂ ಮದುವೆಗೆ ಮುಂಚೆಯಾಗಲಿ, ಅಥವಾ ಮದುವೆಯಾದ ಮಾತ್ರಕ್ಕೆ, ತಂದೆಯೆಂದು ಯಾರೂ ಕರೆಯುವುದಿಲ್ಲ. ಮಗು ಜನ್ಮ ತಳೆದಮೇಲೆ ಮಾತ್ರ ಅದರ ಹುಟ್ಟಿಗೆ ಕಾರಣನಾದವನನ್ನು ತಂದೆ ಎಂದು ಕರೆಯುತ್ತಾರೆ. ಆದ್ದರಿಂದ ಮಗುವಿನಿಂದ ತಂದೆ’, ಎಂದು ರಾಕ್ಷಸಪಾತ್ರ ವಾದಿಸುತ್ತದೆ.
ಸೃಷ್ಟಿಯ ತಲೆಕೆಳಗು ಚಿತ್ರಣ
ಡಾರ್ವಿನ್ನರ ವಿಕಾಸವಾದದ ಅನ್ವಯ ಈ ನಮ್ಮ ಭೂಗೋಳ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಜೀವಿಗಳಿಗೆ ವಾಸಯೋಗ್ಯವಾದ ಭೂಮಿಯಾಗಿ ರೂಪುಗೊಂಡಿದೆ.ಯಾವುದೋ ಒಂದು ಹಂತದಲ್ಲಿ ಜೀವಾಣು ರೂಪಪಡೆದು ಕ್ರಮೇಣ ಆಲ್ಗೆ, ಸಸ್ಯ, ಮರ-ಗಿಡ, ಜಲಚರ-ಪ್ರಾಣಿ-ಪಕ್ಷಿ-ಮೃಗ-ವಾನರಗಳು… ಹೀಗೆ ಜೀವವಿಕಾಸದ ಕೊನೆಯಲ್ಲಿ ಮಾನವ ಕಾಣಿಸಿಕೊಂಡಿದ್ದಾನೆ. ದೇವರು-ದಿಂಡಿರು ಯಾವುದೂ ಇಲ್ಲದ ವನ್ಯಜೀವಿಯಾಗಿ, ಬೇಟೆಗಾರ-ಅಲೆಮಾರಿಯಾಗಿ, ನರಭಕ್ಷಕ-ಪ್ರಾಣಿಭಕ್ಷಕ-ಸಸ್ಯಭಕ್ಷಕ ಜೀವಿಯಾಗಿ ತಾನು ವಾಸಿಸುವ ಭೌಗೋಳಿಕ, ಪ್ರಾಕೃತಿಕ ಆವರಣಗಳಿಗೆ ಲಗತ್ತಾದ ಜೀವನಶೈಲಿಯನ್ನು ರೂಪಿಸಿಕೊಂಡಿದ್ದಾನೆ. ಈ ವಿಕಾಸದ ಹಂತಗಳಲ್ಲಿ ಯಾವಾಗಲೋ ಪ್ರಜ್ಞೆ ರೂಪುಗೊಂಡು, ಬೆಳೆದು, ಭಯದಿಂದ, ಕುತೂಹಲದಿಂದ-ತರ್ಕಸಾಧ್ಯತೆಯಾಗಿ ಸೃಷ್ಟಿಕರ್ತನ/ಳ ಕಲ್ಪನೆಯನ್ನು ಸೃಷ್ಟಿಸಿಕೊಂಡಿದ್ದಾನೆ. ‘ದೇವರೇ ಸಕಲ ಚರಾಚರಗಳನ್ನು, ಏನೇನಿದೆಯೋ ಅದೆಲ್ಲವನ್ನೂ ಪೂರ್ಣವಾಗಿ ವಿಕಾಸಗೊಂಡ ಸ್ಥಿತಿಯಲ್ಲಿ ಸೃಷ್ಟಿಸಿದ ಎಂಬ ತಲೆಕೆಳಗು ನಂಬಿಕೆಯ ಸೃಷ್ಟಿಕರ್ತನೂ, ಫಲಾನುಭವಿಯೂ ಒಟ್ಟಿಗೆ ಆಗಿದ್ದಾನೆ. ತನ್ನ ವಿವಿಧ ಪವಿತ್ರಗ್ರಂಥ-ಧರ್ಮಗ್ರಂಥಗಳಲ್ಲಿ ತಲೆಕೆಳಗಾದ ಸೃಷ್ಟಿಯ ಚಿತ್ರಣವನ್ನು ಮಾಡಿದ್ದಾನೆ. ಬೈಬಲ್ಲಿನ ಪ್ರಕಾರ ದೇವರು ಗಂಡಸನ್ನು ತನ್ನ ಆಕಾರದಲ್ಲಿ ಸೃಷ್ಟಿಸಿ ಆನಂತರ ಹೆಂಗಸನ್ನು ಗಂಡಸಿನ ಪಕ್ಕೆಲುಬಿನಿಂದ ಮಾಡಿದ. ಇಡೀ ಮಾನವ ಜನಾಂಗ ಈ ಗಂಡು-ಹೆಣ್ಣಿನ ಸಂತಾನ. ಬ್ರಾಹ್ಮಣ ಧರ್ಮಗ್ರಂಥಗಳ ಪ್ರಕಾರ ಸ್ವಯಂಭೂ ಆದ ವಿಷ್ಣುವು ಮೊದಲು ಬ್ರಹ್ಮನನ್ನು, ಬ್ರಹ್ಮನು ಅನಂತರ ಉಳಿದೆಲ್ಲ ಜೀವಿಗಳನ್ನು ಸೃಷ್ಟಿಸಿದ.
ಇಸ್ಲಾಂ, ಯಹೂದಿ ಧರ್ಮಗಳಲ್ಲಿಯೂ ತಲೆಕೆಳಗಾದ ಸೃಷ್ಟಿಯ ಕಲ್ಪನೆಯಿದೆ. ಅವುಗಳ ಪ್ರಕಾರ ಮೊದಲು ದೇವರು ಹುಟ್ಟಿ ಅಥವಾ ಇದ್ದು ಅನಂತರ ಅವನಿಂದ ಸೃಷ್ಟಿ ಬಂದಿದೆ.
ತಲೆಕೆಳಗಾದ ಈ ದೃಷ್ಟಿಯಲಿ, ಈ ಭೂಮಿ ಮೇಲಿರುವ ಯಾವುದೂ ನೈಜವಾದುದಲ್ಲ. ಎಲ್ಲವೂ ಸ್ವರ್ಗದಲ್ಲಿರುವುದರ ಪ್ರತಿಕೃತಿ. ಇಲ್ಲಿರುವುದು ಅಲ್ಲಿರುವುದರ ಪ್ರತಿಬಿಂಬ. ಆದ್ದರಿಂದ ಮನುಷ್ಯ ನಿರ್ಮಿತ ಶಿಲ್ಪ-ಸಾಹಿತ್ಯ-ಕಲೆ ಎಲ್ಲವೂ ಈ ಪ್ರತಿಕೃತಿಯ ಪ್ರತಿಕೃತಿ. ಶಿಲ್ಪ-ಸಾಹಿತ್ಯ-ಕಲೆಯ ಬಗ್ಗೆ ಪ್ಲೇಟೋನ ಅಪ್ರೀತಿ ಈ ಕಾರಣಕ್ಕಾಗಿ. ದಾಸರು ಅಲ್ಲಿರುವುದು ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ ಎನ್ನುವುದು ಈ ತಲೆಕೆಳಗು ದೃಷ್ಟಿಯ ಭಾರತೀಯ ಅವತರಣಿಕೆ.
ನಮಗೆ ಈಗ ಗೊತ್ತಿರುವ, ಗ್ರೀಕ್, ಚೀನಾ, ಇಂಡಿಯಾದಿಂದ ಬಂದಿರುವ ಎಲ್ಲಾ ಪುರಾತನ ತತ್ವಜ್ಞಾನಗಳೂ, ಅವುಗಳ ವಿವಿಧ ಶಾಖೆಗಳೂ ಒಟ್ಟಿನಲ್ಲಿ ಹೇಳುವುದು ಇಷ್ಟು: ವಿಕಾಸಗೊಂಡ ಪ್ರಜ್ಞೆಯ ಮನುಷ್ಯ ದೇವರನ್ನು ಸೃಷ್ಟಿಸಲಿಲ್ಲ. ದೇವರು ಮನುಷ್ಯನನ್ನು ಸೃಷ್ಟಿಸಿದ. ಈ ನಂಬಿಕೆಗೆ ಹೊರತಾದ ಆಲೋಚನೆ, ವಿವರಣೆ, ಕಲ್ಪನೆಗಳನ್ನೆಲ್ಲಾ ನಾಶಗೊಳಿಸಲಾಗಿದೆ. ಅಥವಾ ವಿಕೃತರೂಪದಲ್ಲಿ ಉಳಿಸಿಕೊಳ್ಳಲಾಗಿದೆ.
ಮಸೂರ–ಮೆದುಳಿನ ಈ ಪರಿ ಹೊಂದಾಣಿಕೆ!
ಎದುರಿಗಿರುವ ವಸ್ತು ನಮ್ಮ ಕಣ್ಣಿನ ಮಸೂರದಲ್ಲಿ ತಲೆಕೆಳಗಾದ ಬಿಂಬವಾಗಿ ಮೂಡುತ್ತದೆ. ನಮ್ಮ ಮೆದುಳಿನಲ್ಲಿ ಇದರ ತಲೆಕೆಳಗಾದ ಚಿತ್ರ ಅನುಭವವಾಗುವುದರಿಂದ ವಸ್ತು ತಲೆಕೆಳಗಾಗಿ ಕಾಣುವುದಿಲ್ಲ. ಇದನ್ನು ಮೆದುಳು ಸರಿಯಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಸಾಧಾರಣವಾಗಿ ಎಲ್ಲರೂ ನಂಬುತ್ತಾರೆ. ಆದರೆ ಇದು ತಲೆಕೆಳಗಾದ ಬಿಂಬವನ್ನು ‘ಸರಿ’ಯಾಗಿಸುವ ಪ್ರಶ್ನೆ ಅಲ್ಲ. ಹಾಗಿದ್ದರೆ ತಲೆಕೆಳಗಾಗಿ ನಿಂತ ಮನುಷ್ಯನ ಬಿಂಬ ಕಣ್ಣಿನ ಮಸೂರದಲ್ಲಿ ‘ಸರಿ’ಯಾಗಿಯೇ ಮೂಡುತ್ತದಲ್ಲ? ಅದನ್ನು ಮೆದುಳು ಮತ್ತೆ ತಲೆಕೆಳಗಾಗಿಸುವುದು ಏಕೆ? ಎಂಬ ಪ್ರಶ್ನೆಗಳು ಏಳುತ್ತವೆ. ಎದುರಿಗಿರುವ ವಸ್ತು ಸರಿ ಎಂದಿಟ್ಟುಕೊಂಡರೆ, ಬಿಂಬ ತಲೆಕೆಳಗು. ಮೆದುಳು ಅದನ್ನು ತಲೆಕೆಳಗು ಮಾಡಿಕೊಳ್ಳುತ್ತದೆ. ಅದನ್ನೆ ಸರಿ ಎನ್ನುವುದು ನಮಗೆ ರೂಢಿಯಾಗಿದೆ ಅಷ್ಟೆ. ಒಂದುವೇಳೆ ಕಣ್ಣಿನ ಮಸೂರದ ಮುಂದೆ ಅಂಥದೇ ಮತ್ತೊಂದು ಮಸೂರವನ್ನು ಜೋಡಿಸಿಕೊಂಡು ನೋಡಿದರೆ ಇಡೀ ಪ್ರಪಂಚ ‘ಸರಿ’ಯಾಗಿ ಕಾಣುವ ಬದಲು ತಲೆಕೆಳಗಾಗಿ ಕಾಣಿಸುತ್ತದೆ. ಹಾಗೆ ನೋಡುವುದೇ ಅಭ್ಯಾಸವಾದರೆ, ಸ್ವಲ್ಪಕಾಲವಾದಮೇಲೆ ಮೆದುಳು ಅದಕ್ಕೆ ಹೊಂದಿಕೊಂಡು ಪ್ರಪಂಚ ‘ತಲೆಕೆಳಗು’ ಅನ್ನಿಸುವುದಿಲ್ಲ, ಸರಿಯಾಗಿದೆ ಎಂದು ತೋರುತ್ತದೆ.
ಎಡ ಬಲ ಎಂದು ಎರಡು ಪಾರ್ಶ್ವಗಳಿರುವುದು ನಿಜ. ಆದರೆ ಅವೂ ತಲೆಕೆಳಗಾಗಿ ನಿಜ. ನಾವು ಎಡ ಎಂದು ಕರೆಯುವ ದೇಹದ ಭಾಗಗಳನ್ನು ತಲೆಯ ಬಲಭಾಗದ ಮೆದುಳಿನ ಹೋಳು ನಿಯಂತ್ರಿಸುತ್ತದೆ. ಬಲ ಎಂದು ಕರೆಯುವ ದೇಹದ ಭಾಗಗಳನ್ನು ಎಡಭಾಗದ ಮೆದುಳಿನ ಹೋಳು ನಿಯಂತ್ರಿಸುತ್ತದೆ. ಈ ದೃಷ್ಟಿಯಿಂದ ‘ಎಡಚ’ರು ಬಳಸುವುದು ಬಲಗೈ. ತಾಯಿಯ ನಿರ್ದೇಶನದಂತೆ ಮಗು ಏಳುವ ಬಲಮಗ್ಗುಲು ಎಡಮಗ್ಗುಲು ಎಂದಾಗುತ್ತದೆ. ಹಾಗಿದ್ದರೆ ಎಡ-ಬಲ ಎರಡೂ ಒಂದೆ ಎಂದು ಹೇಳಬಹುದೆ? ಇಲ್ಲ. ಭಾಗಕ್ರಮ ಸರಿಯಾಗಿದೆ. ಆದರೆ ತಲೆಕೆಳಗಾಗಿ ಮಾತ್ರ ನಿಜ. ಕನ್ನಡಿಯ ಪ್ರತಿಬಿಂಬದಲ್ಲಾಗುವ ಪಾರ್ಶ್ವಪಲ್ಲಟ ಕನ್ನಡಿಯ ತೊಂದರೆಯಲ್ಲ. ನೋಡುವವರಲ್ಲಿರುವ ದೃಷ್ಟಿ ಪಲ್ಲಟ.
ಒಳಗೆ-ಹೊರಗೆ ಎಂದರೆ ಮನೆಯ ಒಳಗೆ-ಹೊರಗೆ. ದೇಹದ ಒಳಗೆ-ಹೊರಗೆ ಎಂದಾದರೂ ಅಂತಿಮವಾಗಿ ಮೆದುಳಿನ ಒಳಗೆ, ಮೆದುಳಿನ ಹೊರಗೆ ಎಂದೇ ಅರ್ಥ. ಮೆದುಳಿನ ಜಾಗದಲ್ಲಿ ಪ್ರಜ್ಞೆ, ಮನಸ್ಸು, ನನ್ನ, ಇತ್ಯಾದಿ ಪದಗಳನ್ನು ಬಳಸಿದರೂ ಅರ್ಥ ಅದೇ. ಹಾಗಿದ್ದರೆ ನಾವು ಇರುವುದೆಲ್ಲವನ್ನೂ ತಲೆಕೆಳಗಾಗಿಯೇ ಅನುಭವಿಸುತ್ತಿದ್ದೇವೆಯೆ?
ಬುದ್ಧಿ–ಭಾವಗಳೆಂಬ ಸಯಾಮಿ ಅವಳಿ
ನಮ್ಮನ್ನು, ನಾವಿರುವ ಪ್ರಪಂಚವನ್ನು ತಿಳಿಯುವ ಎರಡು ವಿಧಾನಗಳು ಇವೆ. ಒಂದು: ಭಾವಿಸಿ ಅನುಭವಿಸುವುದು. ಉದಾಹರಣೆಗೆ, ಇಂದ್ರಿಯಾನುಭವಕ್ಕೆ ದಕ್ಕುವುದನ್ನು, ಕಣ್ಣೆದುರೇ ಇದ್ದರೂ ಇಲ್ಲವೆಂದು ಭಾವಿಸುವುದು, ಇಲ್ಲದಿರುವುದನ್ನು ಇದೆಯೆಂದು ಭಾವಿಸುವುದು ಸಾಧ್ಯ. ಕಲ್ಪನೆ, ಭ್ರಮೆ, ಕನಸು, ನೆನಪು ಮುಂತಾದ ಅನುಭವದ ರೀತಿಗಳಿಗೆ ಭಾವನೆಯೇ ಮಾಧ್ಯಮ.
ಇನ್ನೊಂದು: ಇಂದ್ರ್ರಿಯಾನುಭವಕ್ಕೆ ದಕ್ಕುವ ಪ್ರತಿಯೊಂದನ್ನೂ ಪ್ರತ್ಯೇಕಿಸಿ, ಪರೀಕ್ಷಿಸಿ, ವಿಚಾರಿಸಿ ಹೋಲಿಸಿ, ವಿಂಗಡಿಸಿ, ತರ್ಕಿಸಿ, ಪರಸ್ಪರವಾದ ಅಂತಸ್ಸಂಬಂಧವನ್ನು ಜೋಡಿಸಿಕೊಂಡು ಅನುಭವಿಸುವುದು. ತಿಳುವಳಿಕೆ ಹುಟ್ಟುವುದೇ ವಿಂಗಡನೆಯಿಂದ. ಹೀಗೆ ವಿವೇಚಿಸುವ ಶಕ್ತಿಯಿಂದ ಲಭಿಸುವುದನ್ನೇ ಆ ವಸ್ತುವಿನ ಜ್ಞಾನ ಎನ್ನುತ್ತಾರೆ. ‘ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತ ಜ್ಞಾನಂ ಮತಂ ಮಮ’ ಎನ್ನುವುದು ಕೃಷ್ಣನ ಅಭಿಪ್ರಾಯ. ವಿವೇಚನಾಶಕ್ತಿಯಿಲ್ಲದವರಿಗೆ ಎಲ್ಲವೂ ಒಂದೆ. ಒಟ್ಟು ಅನುಭವದಲ್ಲಿ ಭಾವನೆಯಾಗಲಿ, ವಿವೇಚನೆಯಾಗಲಿ ಸ್ವತಂತ್ರವಾಗಿ, ಪ್ರತ್ಯೇಕವಾಗಿ ಬಳಕೆಯಾಗುವುದಿಲ. ಭಾವನೆ, ವಿವೇಚನೆ ಈ ಎರಡರಲ್ಲಿ ಯಾವುದು ಪ್ರಧಾನವಾಗಿರುತ್ತದೆಯೋ ಅದರಿಂದ ಆ ಅನುಭವವನ್ನು ಗುರುತಿಸುವುದು ವಾಡಿಕೆ. ಇದನ್ನೆ ಕೆಲವರು ತಲೆ-ಹೃದಯ ಎಂದು, ಬುದ್ಧಿ-ಭಾವ ಎಂದು, ಮೆದುಳು-ಕರುಳು ಎಂದು ದೈಹಿಕ ಭಾಗಗಳಲ್ಲಿ ಪ್ರತ್ಯೇಕಿಸಿ ಗುರುತಿಸುತ್ತಾರೆ. ಕಲೆ ಹುಟ್ಟಲು, ಅನುಭವಿಸಲು ಬೇಕಾದ ಸಂವೇದನೆ -ಸಹೃದಯತೆ ಭಾವಪ್ರಧಾನವಾದದ್ದು. ಕಲಾವಿಮರ್ಶೆಯ ಸಂವೇದನೆ-ಸಹೃದಯತೆ ವಿವೇಚನಾಪ್ರಧಾನವಾದದ್ದು. ಕುವೆಂಪು ಹೇಳುವಂತೆ ‘ಬುದ್ಧಿ-ಭಾವಗಳ ವಿದ್ಯುದಾಲಿಂಗನ’ದಲ್ಲಿ ಕಲಾನುಭವ ಏರ್ಪಡುತ್ತದೆ.
ಹುಟ್ಟಿದಾಗ ಕೇವಲ ಹಸಿವು-ಭಯಗಳ ಮುದ್ದೆಯಾದ ಮಗು ತಾಯಿಯ ಪಾಲನೆ-ಲಾಲನೆಯಲ್ಲಿ ಸುರಕ್ಷತೆಯ ಭಾವನೆಯನ್ನು ಅನುಭವಿಸುತ್ತದೆ. ತನ್ನನ್ನು ತಾಯಿಯಿಂದ ಪ್ರತ್ಯೇಕಿಸಿ ನೋಡಲಾಗದ ಅದ್ವೈತ ಸ್ಥಿತಿಯಲ್ಲಿರುತ್ತಾ ಕ್ರಮೇಣ ತಾಯಿ-ತಂದೆ-ಪ್ರೀತಿಪಾತ್ರರ ಒಡನಾಟದಲ್ಲಿ ತನ್ನ ಮತ್ತು ಸುತ್ತಲಿನ ಪ್ರಪಂಚದ ಪ್ರತ್ಯೇಕತೆಯನ್ನು ಗುರುತಿಸಲು ತೊಡಗುತ್ತದೆ. ಅಂದರೆ, ಭಾವನೆಯ ಪ್ರಪಂಚದಿಂದ ವಿವೇಚನೆಯ ಪ್ರಪಂಚಕ್ಕೆ ಕಾಲಿಡುತ್ತದೆ. ಮಗು ಬೆಳೆಯುತ್ತಿದೆ ಎಂದರೆ ದೇಹ ಬೆಳೆಯುವುದರ ಜೊತೆಜೊತೆಗೇ ತಾನು ಬೇರೆ, ಪ್ರಪಂಚ ಬೇರೆ ಎಂಬ ವಿಂಗಡನೆಯ ಶಕ್ತಿ ಗಟ್ಟಿಯಾಗುತ್ತಾ ಹೋಗುವುದು. ಬೆಳವಣಿಗೆ ಕುಂಠಿತವಾಗಿದೆಯೆಂದರೆ ದೇಹ ಮಾತ್ರ ಬೆಳೆದು ವಿಂಗಡನೆಯ ಶಕ್ತಿ ಬೆಳೆದಿಲ್ಲ ಎಂದರ್ಥ.
ಭಾವನೆ ಮತ್ತು ವಿವೇಚನೆಗಳು ಕಲೆಸಿಹೋಗುವ ಸ್ಥಿತಿಯಲ್ಲಿ ಪಡೆದ ಅನುಭವ ಗೊಂದಲಮಯವಾಗಿರುತ್ತದೆ. ಶಿಶುಸಹಜವಾದ ಭಾವನೆಯೇ ಮೇಲುಗೈ ಪಡೆದು ವಿವೇಚನೆ ಕ್ಷೀಣವಾಗಿರುತ್ತದೆ. ಇದು ಸಮತೋಲಿತ ಜೀವನ ನಡೆಸಲು ಆಗದ ತೊಂದರೆಯೇ.
ವಿವಿಧ ಕಾರಣಗಳಿಂದಾಗಿ ವಿವೇಚನೆ ಪೂರ್ಣ ಬೆಳೆಯದ ಮಕ್ಕಳಲ್ಲಿ, ವೃದ್ಧಾಪ್ಯದಿಂದ, ಇಲ್ಲವೆ ರೋಗಗ್ರಸ್ತವಾದ ಸ್ಥಿತಿಯಲ್ಲಿ ನರಕೋಶಗಳು ಸಾಯುತ್ತಿರುವ ವ್ಯಕ್ತಿಗಳಲಿ, ಮತ್ತು ಹುಟ್ಟಿನಿಂದಲೇ ಭ್ರಮಾಧೀನತೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾದವರಲ್ಲಿ ಈ ತೊಂದರೆ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಬಹುತೇಕವಾಗಿ ಎಲ್ಲರೂ ಕಲೆ, ಸೌಂದರ್ಯ, ಧಾರ್ಮಿಕ ನಂಬಿಕೆಗಳ ವಿಷಯದಲ್ಲಿ ಭಾವನೆಯನ್ನೂ, ಆಹಾರ, ಆಸ್ತಿ, ಹಣ ಮುಂತಾದ ವಿಷಯಗಳಲ್ಲಿ ವಿವೇಚನೆಯನ್ನೂ ಬಳಸುತ್ತಾರೆ. ಧರ್ಮ-ದೇವರನ್ನು ನಂಬಿಕೆಯ ವಿಷಯವೆಂದೂ, ಆಸ್ತಿ-ಹಣವನ್ನು ವ್ಯವಹಾರದ ವಿಷಯವೆಂದೂ ಎರಡು ಭಾಗ ಮಾಡಿ ಇವೆರಡೂ ಕಲೆಸಬಾರದ ಪಾರಮಾರ್ಥಿಕ ಸತ್ಯ ಮತ್ತು ವ್ಯಾವಹಾರಿಕ ಸತ್ಯ ಎಂಬ ಪ್ರತ್ಯೇಕ ಸತ್ಯಗಳೆಂದು ಪ್ರತಿಪಾದಿಸುತ್ತಾರೆ. ಇದು ತಲೆಕೆಳಗಾದರೆ, ಅಥವಾ ಕಲೆಸಿಹೋದರೆ ಅಂಥವರನ್ನು ಹುಚ್ಚರೆಂದು ಅಥವಾ ಮಹಾತ್ಮರೆಂದು ಕರೆಯುತ್ತಾರೆ. ಭಾವನೆಯ ತೀವ್ರತೆಯಲ್ಲಿ ಮೈಮರೆಯುತ್ತಿದ್ದ ಪರಮಹಂಸರೂ ಮೊಸರು ಕೊಳ್ಳುವಾಗ ಕೊಸರನ್ನು ಕೇಳಿ ಹಾಕಿಸಿಕೊಳ್ಳಬೇಕೆಂಬ ಎಚ್ಚರವನ್ನು, ನೀರೆಲ್ಲಾ ಒಂದೇ ಆದರೂ ಕುಡಿಯುವ ನೀರು ಬೇರೆ, ಶೌಚದ ನೀರು ಬೇರೆ ಎಂಬ ವಿವೇಚನೆಯನ್ನು ಇಟ್ಟುಕೊಂಡಿದ್ದರೆಂದು ಕೇಳಿದ್ದೇವೆ.
ನಡುವಿನಲ್ಲೊಂದು ನೀರ ಪೊರೆ…
ಭಾವನೆಯ ಮೂಲದ ಅನುಭವ ಮತ್ತು ವಿವೇಚನೆಯ ಮೂಲದ ಅನುಭವ ಎಂಬ ಎರಡು ರೀತಿಗಳಲ್ಲದೆ ಎರಡರ ನಡುವಿನ ‘ತೋರಿಕೆಯ ಅನುಭವ’ ಎಂಬ ಮತ್ತೊಂದು ರೀತಿಯಿದೆ. ತಲೆಕೆಳಗು ದೃಷ್ಟಿಯಲ್ಲಿ ಇದರ ಪಾತ್ರ ಮಹತ್ವದ್ದು. ಅಧ್ವೈತಿಗಳ ಮಾಯಾವಾದದಲ್ಲಿನ ಹಾವು-ಹಗ್ಗ, ಕಪ್ಪೆಚಿಪ್ಪು-ಬೆಳ್ಳಿ ಸಾಮತಿಯಲ್ಲಿ ತೋರಿಕೆಯ ಅನುಭವದ ಚರ್ಚೆ ಬರುತ್ತದೆ.
ಸಾಮಾನ್ಯ ಅನುಭವದಲ್ಲಿ ಯಾರಿಗೇ ಆದರೂ ಸೂರ್ಯ ಬೆಳಗ್ಗೆ ಹುಟ್ಟಿದಂತೆ, ಸಂಜೆ ಮುಳುಗಿದಂತೆ ತೋರುವುದು ಸಹಜ. ಆದರೆ ವಿವೇಚನೆಯಿಂದ ಇದು ನಿಜವಲ್ಲ ಎಂಬುದು ಎಲ್ಲಾ ಪ್ರಬುದ್ಧರಿಗೂ ತಿಳಿದಿದೆ. ತೋರಿಕೆಯಿಂದಾಗಿಯೇ ಭೂಮಿ ಚಪ್ಪಟೆಯಾಗಿದೆಯೆಂತಲೂ, ಸೂರ್ಯ ಭೂಮಿಯ ಸುತ್ತ ಸುತ್ತುತ್ತಿದೆಯೆಂತಲೂ ಬಹಳ ಜನ ಬಹಳ ಕಾಲ ನಂಬಿದ್ದರು. ತಿರುಗುವ ಭೂಮಿಯಲ್ಲಿ ನಿಂತು ಸಾಪೇಕ್ಷವಾಗಿ ಸ್ಥಿರವಾಗಿರುವ ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿದೆಯೆಂದು ತಿಳಿಯುವುದು ತಲೆಕೆಳಗು ದೃಷ್ಟಿಯೆ. ಪಕ್ಕದಲ್ಲಿ ಚಲಿಸುವ ರೈಲನ್ನು ಚಲಿಸದ ರೈಲಿನಲ್ಲಿ ಕುಳಿತು ನೋಡುವ ಮಗುವಿಗೆ ತಾನು ಕುಳಿತ ರೈಲೇ ಚಲಿಸುತ್ತಿದೆ ಎನಿಸುವುದು, ಚಲಿಸುವ ರೈಲಿನಲ್ಲಿ ಕುಳಿತು ಕಿಟಕಿಯಲ್ಲಿ ನೋಡಿದಾಗ ಮರಗಿಡಗಳೆಲ್ಲಾ ಓಡುತ್ತಿರುವಂತೆ ತೋರುವುದು ಕೇವಲ ಶಿಶುಸಹಜ ಅನುಭವವಲ್ಲ. ನೋಡುವವರನ್ನೂ ಒಳಗೊಂಡಂತೆ ವಿಶ್ವದಲ್ಲಿರುವ ಪ್ರತಿಯೊಂದೂ ಸದಾ ಒಂದಲ್ಲ ಒಂದು ಸ್ತರ-ವೇಗ-ರೀತಿಯಲ್ಲಿ ಚಲಿಸುತ್ತಲೇ ಇದ್ದು ತಾವು ಮಾತ್ರ ಸ್ಥಿರವಾಗಿದ್ದೇವೆಂದು ನಂಬುವುದು ತೋರಿಕೆಯ ಅನುಭವದಿಂದ ಗಟ್ಟಿಯಾದ ತಲೆಕೆಳಗು ದೃಷ್ಟಿ. ಐನ್‌ಸ್ಟೈನ್ ಪ್ರತಿಪಾದಿಸಿದ ಸಾಪೇಕ್ಷ ಸಿದ್ಧಾಂತದಲ್ಲಿನ ಮೂಲ ಗ್ರಹಿಕೆ ಇದು. ಎಲ್ಲವೂ ಸದಾ ಸ್ಥಿತ್ಯಂತರಗೊಳ್ಳ್ಳುತ್ತಲೇ ಇವೆ, ಸ್ಥಿರವಾದದ್ದು ಯಾವುದೂ ಇಲ್ಲ ಎಂಬುದು, ಬುದ್ಧ ಪ್ರತಿಪಾದಿಸಿದ ‘ಎಲ್ಲವೂ ಕ್ಷಣಿಕ’ ಎಂಬ ಸೂತ್ರದ ಅರ್ಥ.
ಭೌತದಿಂದಲ್ಲವೆ ಚೇತನ?!
ಈ ವಿಶ್ವವು ಯಾವ ಸೃಷ್ಟಿಕರ್ತನ ಹಂಗೂ ಇಲ್ಲದೆ ತನಗೆ ತಾನೇ ಅಸ್ತಿತ್ವದಲ್ಲಿದ್ದು, ನಿರಂತರವಾಗಿ ವಿಕಾಸಗೊಂಡಿರುವ ವಸ್ತುವೆಂದೂ, ವಸ್ತುವೇ ಸೂಕ್ಷ್ಮಸ್ಥಿತಿಯಲ್ಲಿ ಚೇತನವೆಂದು ಕರೆಸಿಕೊಳ್ಳುತ್ತದೆಂದೂ ಇಂದ್ರಿಯಗ್ರಾಹ್ಯ ಅನುಭವವನ್ನು ಆಧರಿಸಿದ ಭೌತಿಕವಾದಿಗಳು ಹೇಳುತ್ತಾರೆ. ಅಂದರೆ ಇರುವುದೆಲ್ಲಾ ವಸ್ತುವೇ, ಅದು ಸ್ಥೂಲ ರೂಪದ ಭೌತಿಕ ವಸ್ತುವಾಗಿರ ಬಹುದು ಅಥವಾ ಸೂಕ್ಷ್ಮರೂಪದ ಚೇತನವಾಗಿರಬಹುದು. ಆದ್ದರಿಂದ ಚೇತನದಿಂದ ಭೌತಿಕ ವಸ್ತುಗಳು ಬಂದಿವೆಯೆಂದು ಹೇಳುವುದಾಗಲಿ, ಚೇತನಸ್ವರೂಪಿಯಾದ ದೇವರು ವಿಶ್ವವನ್ನು ಸೃಷ್ಟಿಸಿದ ಎಂದು ನಂಬುವುದು ತಲೆಕೆಳಗು ದೃಷ್ಟಿ.
ಇದಕ್ಕೆ ವ್ಯತಿರಿಕ್ತವಾಗಿ, ಅಧ್ಯಾತ್ಮವಾದಿಗಳು, ಚೇತನದಿಂದಲೇ ಭೌತಿಕವಸ್ತುಗಳು ಸೃಷ್ಟಿಯಾಗಿವೆಯೆಂದು, ಈ ಸೃಷ್ಟಿಗೆ ಕಾರಣಕರ್ತನಾದ ದೇವರಿದ್ದಾನೆಂದೂ, ಅಥವಾ ಮೈ ಮನಸ್ಸುಗಳಿಗೆ ಅತೀತವಾದ, ಅದ್ವಿತೀಯವಾದ ಬ್ರಹ್ಮತತ್ವ ಎಂಬುದು ತಾನೇ ಅನೇಕವಾಗಿ ಇರುವುದೆಲ್ಲವೂ ಸೃಷ್ಟಿಯಾಗಿದೆ ಎಂದು ಹೇಳುತ್ತಾರೆ.
ಉಪನಿಷತ್ ಪ್ರಣೀತ ವಾದದಂತೆ, ಮೊದಲು ಬ್ರಹ್ಮವೊಂದೇ ಇತ್ತು. (ತದೇವ ಸೋಮ್ಯ ಇದಮಗ್ರಮಾಸೀತ್). ಅದು ಅನೇಕವಾಗುತ್ತೇನೆಂದು ಯೋಚಿಸಿತು. ಅದು ಅನೇಕವಾಯಿತು. ಆದ್ದರಿಂದ ಚೇತನ, ಭೌತಿಕವಸ್ತುವಿನಿಂದ ವಿಕಾಸವಾಗಿದೆಯೆನ್ನುವ ಭೌತಿಕವಾದಿಗಳ ದೃಷ್ಟಿಯೇ ತಲೆಕೆಳಗು ದೃಷ್ಟಿಯೆಂದು ಅಧ್ಯಾತ್ಮವಾದಿಗಳು ವಾದಿಸುತ್ತಾರೆ. ಇವರ ಪ್ರತಿಪಾದನೆಗೆ ಆಧಾರ ಭಾವನೆಯಾದ್ದರಿಂದ ಇವರನ್ನು ಭಾವನಾವಾದಿಗಳು ಎನ್ನುತ್ತಾರೆ. ಅಂದರೆ ಭೌತಿಕವಾದಿಗಳ ವಾಸ್ತವಿಕ ನೆಲೆಯಿಂದ ನೋಡಿದರೆ ಭಾವನಾವಾದಿಗಳ ದೃಷ್ಟಿ ತಲೆಕೆಳಗುದೃಷ್ಟಿ.
ವೈಜ್ಞಾನಿಕ ದೃಷ್ಟಿಯಾಗಲಿ, ತಾತ್ವಿಕ ದೃಷ್ಟಿಯಾಗಲಿ ವಿಶ್ಲೇಷಿಸುವಾಗ ನಮ್ಮ ಅನುಭವದ ತಲೆಕೆಳಗು ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಆದರೆ ತೀರ್ಮಾನದಲ್ಲಿ ತಲೆಕೆಳಗು ದೃಷ್ಟಿಯೇ ಮತ್ತೆ ತಲೆಕೆಳಗಾಗಿ ‘ಸರಿ’ ಎಂದು ಬಿಂಬಿತವಾಗುವುದಿಲ್ಲವೆಂಬ ಖಾತರಿಯೇನಿಲ್ಲ.
ದೇಹವೇ ನಿತ್ಯ; ಆತ್ಮ…
ನಂಬಿಕೆಯೇ ಆಧಾರವಾದ ಧರ್ಮಗ್ರಂಥಗಳಲ್ಲಿ ದೇವರು ವಿಶ್ವಕ್ಕೆ ಕಾರಣಕರ್ತನಾಗಿದ್ದಾನೆಂದು ಧಾರ್ಮಿಕರು ನಂಬುತ್ತಾರೆ. ಭಾವನೆಗಳ ಮಟ್ಟದಲ್ಲಿ ಇದು ನಿಜವೆನ್ನಿಸಬಹುದು. ದೇವರು-ಧರ್ಮಗ್ರಂಥಗಳನ್ನು ಮನುಷ್ಯನೇ ಸೃಷ್ಟಿಸಿದ್ದಾನಲ್ಲವೆ? ಎಂದು ಕೇಳುವವರನ್ನು ಸಿಹಿಮಾತಿನ ರಾಕ್ಷಸ (ಲೋಕಾಯತ) ರೆಂದು ಜರೆದು ನಿರ್ನಾಮಮಾಡುವ ಪ್ರಯತ್ನ ಭಾರತದ ಚರಿತ್ರೆಯಲ್ಲಿ ಕಾಣಸಿಗುತ್ತದೆ. ಇದಲ್ಲದೆ, ಸ್ವಾಭಾವಿಕವಾಗಿ ಅಥವಾ ಸತತ ಅಭ್ಯಾಸದಿಂದ ಅಂತರ್ಮುಖಿಗಳಾಗಿದ್ದು ಏಕಾಏಕಿ ಮೆದುಳು-ನರಮಂಡಲದಲ್ಲಿ ಆತ್ಯಂತಿಕ ಬದಲಾವಣೆಯಾಗುವ ಮನುಷ್ಯರಲ್ಲಿ ಅಸಾಧಾರಣ ವಿವೇಚನಾಶಕ್ತಿ, ತಾರ್ಕಿಕ ಸಾಮರ್ಥ್ಯ ಇದ್ದೂ ಭಾವನೆಯ ಮಟ್ಟದಲ್ಲಿ ದ್ವಂದ್ವಗಳು ಕಲೆಸಿಹೋಗುವುದು ಸಾಧ್ಯ. ಇಂಥ ವ್ಯಕ್ತಿತ್ವವನ್ನು ಸಮಾಧಿಗೇರಿದ ಸಂತ, ಅನುಭಾವಿ, ಪ್ರವಾದಿ, ಮಹಾತ್ಮ ಎಂದೆಲ್ಲಾ ಗೌರವಿಸುವುದು ಲೋಕರೂಢಿ. ಆಧ್ಯಾತ್ಮಿಕ ಪರಿಭಾಷೆಯನ್ನು ಬಳಸುವವರು ಅನುಭಾವವೆಂದು, ಜ್ಞಾನೋದಯವೆಂದು ಕರೆಯುವ ಈ ಸ್ಥಿತಿಯನ್ನು, ನಮ್ಮ ಕಾಲದ ಅತಿದೊಡ್ಡ ‘ಅನಧ್ಯಾತ್ಮಿಕ ಸಂತ’ರೆನ್ನಬಹುದಾದ ಯು.ಜಿ. ಕೃಷ್ಣಮೂರ್ತಿ ‘ಅನಾಹುತ’( ಕೆಲಾಮಿಟಿ), ‘ನರಮಂಡಲದಲ್ಲಿ ಅಯಾಚಿತವಾಗಿ ಆಗುವ ನೈಸರ್ಗಿಕ ಬದಲಾವಣೆ’ ಎನ್ನುತ್ತಾರೆ. ವೇದಾಂತಿಗಳು ಆತ್ಮ ನಿತ್ಯ, ಶರೀರ ಅನಿತ್ಯ ಎಂದರೆ ಯು.ಜಿ. ಬುದ್ಧನಂತೆ, ಆತ್ಮ ಎನ್ನುವುದು ಯಾವುದೂ ಇಲ್ಲ. ಇರುವುದು ಪ್ರಜ್ಞೆ ಮಾತ್ರ. ಸದಾ ಅವಸ್ಥಾಂತರ ಹೊಂದುವ, ವಿಘಟನೆಗೊಳ್ಳುವ ದೇಹದಲ್ಲಿ ಪ್ರಜ್ಞೆ ಸಾಯುತ್ತದೆ. ಆದರೆ ದೇಹ ತನ್ನ ಅವಸ್ಥಾಂತರವನ್ನು ನಿರಂತರವಾಗಿ ಮುಂದುವರೆಸುತ್ತದೆ. ಅದು ಮನುಷ್ಯದೇಹದ ರೂಪದಲ್ಲೇ ಇರಬೇಕಾದ್ದಿಲ್ಲ. ದೇಹ ಕೊಳೆಯುವುದೆಂದರೆ ಇದೇ. ಪ್ರಜ್ಞೆಗೆ ಸಾವಿದೆ, ದೇಹಕ್ಕೆ ಸಾವಿಲ್ಲ. ಆದ್ದರಿಂದ ‘ಆತ್ಮ’ ಅನಿತ್ಯ, ದೇಹ ನಿತ್ಯ ಎನ್ನುತ್ತಾರೆ. ಸಾಂಪ್ರದಾಯಿಕ ಅಧ್ಯಾತ್ಮವಾದಿಗಳ ಪಾಲಿಗೆ ಇದು ತಲೆಕೆಳಗು ದೃಷ್ಟಿ. ಅರಿಯದವರ ಪಾಲಿಗೆ ಮಹಾತ್ಮರು ಹುಚ್ಚರೇ. ಅಥವಾ ಹುಚ್ಚರೂ, ವಿಲಕ್ಷಣ ವ್ಯಕ್ತಿತ್ವದವರೂ ಮಹಾತ್ಮರೆ. ಮನೋರೋಗದ ಪರಿಭಾಷೆಯಲ್ಲಿ ಒಡೆದ ವ್ಯಕ್ತಿತ್ವ ಉಳ್ಳ (ಸ್ಖಿಜ಼ೋಫ್ರೇನಿಯಾ), ಅಥವಾ ಭ್ರಮಾಧೀನತೆ (ಡಿಲ್ಯೂಷನ್), ಅತೀಂದ್ರಿಯ ಶಕ್ತಿಯುಳ್ಳವರೆಂಬ ನಂಬಿಕೆ (ಕ್ರಿಪ್ಟಸ್ತೇಸಿಯಾ) ಗೆ ಒಳಗಾದ, ಅಸಾಮಾನ್ಯರು ಎಂದು ಪರಿಗಣಿತರಾಗುವವರು. ಯಾರೋ ಯಾರಿಗೋ ಹೊಡೆದರೆ ತಮ್ಮ ಮೈಮೇಲೆ ಬಾಸುಂಡೆ ಬರಿಸಿಕೊಳ್ಳುವ ತೀವ್ರಭಾವನೆಯ ವಿಲಕ್ಷಣ ವ್ಯಕ್ತಿಗಳು. ಅಸಾಧಾರಣ ತರ್ಕಬದ್ಧತೆಯುಳ್ಳ ಇವರ ಸಾಮಾನ್ಯಗುಣ ಸದಾ ಅಲ್ಲದಿದ್ದರೂ ಭಾವತೀವ್ರತೆಯ ಸ್ಥಿತಿಯಲ್ಲಿ ಒಳಗು-ಹೊರಗು, ಕನಸು-ಎಚ್ಚರ, ತಾನು-ಇತರರು ಎಂಬಂಥ ದ್ವಂದ್ವಗಳು ಕಲೆಸಿಹೋಗುವುದು. ರಾಮಕೃಷ್ಣ ಪರಮಹಂಸರು ಇಂಥ ಸ್ಥಿತಿಯನ್ನು ಆಗಾಗ ಅನುಭವಿಸುತ್ತಿದ್ದರು ಎಂದು ಹೇಳುತ್ತಾರೆ. ಕಾಳಿಯ ಪೂಜೆಗೆ ಕುಳಿತಾಗ ಒಮ್ಮೆ ಮೂರ್ತಿಗೆ ಹೂ ಹಾಕುವುದು, ಇನ್ನೊಮ್ಮೆ ತನ್ನ ತಲೆಯಮೇಲೇ ಹೂ ಹಾಕಿಕೊಳ್ಳುವ ಅವರ ನಡವಳಿಕೆ ಇತರರಿಗೆ ವಿಚಿತ್ರವಾಗಿ ಕಾಣಿಸುತ್ತಿತ್ತು. ಜನಸಾಮಾನ್ಯರು ಅದ್ಭುತ-ವಿಸ್ಮಯ-ಆರಾಧನೆಯ ದೃಷ್ಟಿಯಿಂದ ಅಪರೋಕ್ಷಜ್ಞಾನಿಗಳು, ಅವಧೂತರು, ಯೋಗಿ-ಮಹರ್ಷಿಗಳು ಎಂದು ವರ್ಣಿಸುವ ವ್ಯಕ್ತಿಗಳು ಈ ಬಗೆಯ ಜನರು.
ಸಕಲ ಚರಾಚರ ವಸ್ತುಗಳು ಸಮಾನ; ಮನುಷ್ಯರು ಹೆಚ್ಚು ಸಮಾನ, ಅವರಲ್ಲಿ ಕೆಲವರು ಮತ್ತೂ ಸಮಾನ!
ವೇದಾಂತ ಪ್ರತಿಪಾದಿಸುವ ಆಧ್ಯಾತಿಕ ದೃಷ್ಟಿಯಲ್ಲಿ ವಿಶ್ವದ ಆತ್ಯಂತಿಕ ಸತ್ಯವೇ ಬ್ರಹ್ಮ. ವಸ್ತು ಬ್ರಹ್ಮವೇ ಆಗಿದ್ದರೂ ನಾಮ-ರೂಪಗಳ ಭೇದದಿಂದಾಗಿ ಬೇರೆಬೇರೆ ಎಂಬಂತೆ ಕಾಣುವ ಚರಾಚರ ವಸ್ತುಗಳು ತಾತ್ವಿಕವಾಗಿ ಸಮಾನ. ಆದರೆ ಊಟ, ವಸತಿ, ನಿದ್ರೆಗಳ ಅಗತ್ಯವನ್ನು ಪೂರೈಸಿಕೊಳ್ಳಲು ಇತರರಂತೆಯೇ ಜೀವಿಸಬೇಕಾದ ಅನಿವಾರ್ಯತೆ ಇರುವ ವೇದಾಂತಿಗಳು, ಧರ್ಮಗುರುಗಳು, ಆಧ್ಯಾತ್ಮವಾದಿಗಳು ಬಾಯಲ್ಲಿ ಸರ್ವಸಮಾನತೆಯನ್ನು ಪ್ರತಿಪಾದಿಸಿದರೂ ಕೃತಿಯಲ್ಲಿ ಮಾನವಜನ್ಮದ ಶ್ರೇಷ್ಠತೆಯನ್ನು ಸಮರ್ಥಿಸುತ್ತಾರೆ. ಪ್ರಾಣಿ-ಪಕ್ಷಿಗಳು ಹಾಗಿರಲಿ, ಇಂಥ ‘ಶ್ರೇಷ್ಠಜೀವಿ’ಗಳಾದ ಎಲ್ಲ ಮನುಷ್ಯರೂ ಸಾಮಾಜಿಕವಾಗಿ ಸಮಾನರೆಂದು ಇವರು ಒಪ್ಪುವುದಿಲ್ಲ. ಜೀವವೈವಿಧ್ಯವನ್ನೇ ಅಸಮಾನತೆಯೆಂದು ತಪ್ಪಾಗಿ ಗ್ರಹಿಸುವುಷ್ಟೇ ಅಲ್ಲ, ಅದೇ ನೈಸರ್ಗಿಕವೆಂದು, ಸಹಜವಾದುದೆಂದು ಉಪದೇಶಿಸುತ್ತಾರೆ. ದೇಶೀಯವಾಗಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿಯೂ ಸಂತರು, ಧರ್ಮಗುರುಗಳು, ಮಠಾಧೀಶರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಸಮರ್ಥಿಸುತ್ತಾರೆ. ವ್ಯಕ್ತಿಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಶ್ರೀಮಂತರ, ಅಧಿಕಾರಸ್ಥರ ಬೆನ್ನಿಗಿರುತ್ತಾರೆ. ಸಮಾಜಪಾರಮ್ಯದ ಸಮಾಜವಾದವನ್ನು ಅಸಹನೆಯಿಂದ ಕಾಣುತ್ತಾರೆ. ಬಡಜನರ, ಅಮಾಯಕರ ದೇಣಿಗೆಗಳಿಂದ ಸುಖಜೀವನ ನಡೆಸುತ್ತಾರೆ. ಇದೂ ತಲೆಕೆಳಗು ಅಧ್ಯಾತ್ಮವೇ.
ಇದಕ್ಕೆ ಅಪವಾದವೆಂಬಂತೆ, ಧ್ಯಾನಮಾಡುವಾಗ ಮೈಮೇಲೆ ಜನಿವಾರವಿದ್ದರೆ ತಾನು ಶ್ರೇಷ್ಠನೆಂಬ ಅಹಂಕಾರ ಬಾಧಿಸುತ್ತದೆ ಎಂದು ಜನಿವಾರವನ್ನು ತೆಗೆದಿರಿಸುವ ನಡವಳಿಕೆಯ; ತಾನು ಚಿಕ್ಕವನಿದ್ದಾಗ ಕೊಟ್ಟ ಮಾತಿನಂತೆ ಉಪನಯನದ ಸಂದರ್ಭದಲ್ಲಿ ಶೂದ್ರಳಿಂದ ಭಿಕ್ಷೆ ಸ್ವೀಕರಿಸುತ್ತೇನೆಂದಾಗ ಆಕ್ಷೇಪಿಸಿದ ಹಿರಿಯರಿಗೆ “ಕೊಟ್ಟ ಮಾತನ್ನು ಪಾಲಿಸದಿರುವುದು ಅದೆಂಥ ಬ್ರಾಹ್ಮಣತನ?” ಎಂದು ಬಾಯಿ ಮುಚ್ಚಿಸಿದ ರಾಮಕೃಷ್ಣರು ಸೀಮಿತ ಅರ್ಥದಲ್ಲಿ ಸಾಮಾಜಿಕ ಸಮಾನತೆಯನ್ನು ಬದುಕಿದವರು. ‘ನುಡಿಯನ್ನು ಸಮರ್ಥಿಸುವ ನಡೆ ಮುಖ್ಯ’ವೆನ್ನುವ ಅವರ ಲೋಕದೃಷ್ಟಿ ತಲೆಕೆಳಗಲ್ಲ. ಅವರ ಶಿಷ್ಯರಾದ ವಿವೇಕಾನಂದರು ವೇದಾಂತಕ್ಕಿಂತ ಬಡಜನರ ಸೇವೆ ಮುಖ್ಯ ಎಂದು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಮುಕ್ತಿ-ಜ್ಞಾನೋದಯ-ಆತ್ಮಸಾಕ್ಷಾತ್ಕಾರ ಎಂಬುದೆಲ್ಲ ಸುಳ್ಳು. ಇರುವುದು ಕೇವಲ ಸಹಜ ಆರೋಗ್ಯ ಮತ್ತು ಸುಖ-ನೆಮ್ಮದಿಗಳಿಂದ ಬದುಕಲು ಬೇಕಾದ ಭೌತಿಕ ಸೌಲಭ್ಯಗಳನ್ನು ಸಂಪಾದಿಸಿಕೊಳ್ಳುವ ಅಗತ್ಯ ಮಾತ್ರ, ಎನ್ನುವ ಯು.ಜಿ.ಕೃಷ್ಣಮೂರ್ತಿ ಮಾನವಜನ್ಮದ ಶ್ರೇಷ್ಠತೆಯನ್ನು ಒಪ್ಪುವುದಿಲ್ಲ. ತನ್ನ ಕೈಮೇಲೆ ಕುಳಿತು ರಕ್ತಹೀರುವ ಸೊಳ್ಳೆಗಿಂತ ತಾನು ಯಾವ ದೃಷ್ಟಿಯಲ್ಲೂ ಮೇಲಲ್ಲ, ಎಂಬ ಮನುಷ್ಯತನ-ಸಾಮಾಜಿಕತೆಯನ್ನೂ ಮೀರುವ ಸಮಾನತೆಯನ್ನು ಸಾರುತ್ತಾರೆ. ವ್ಯಕ್ತಿಗತ ದ್ವಂದ್ವಗಳನ್ನು ಕಳೆದುಕೊಳ್ಳದೆ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ. ಎಷ್ಟೇ ಬದಲಾವಣೆಗಳನ್ನು ತಂದರೂ ವಿಶ್ವವು ಮೂಲಭೂತವಾಗಿ ಈಗಿರುವುದಕ್ಕಿಂತ ಭಿನ್ನವಾಗಿರುವುದಿಲ್ಲ ಎನ್ನುತ್ತಾರೆ. ಗುರು, ಪ್ರವಾದಿ, ಮಾರ್ಗದರ್ಶಿ ಮುಂತಾದ ಹೆಸರಿನಲ್ಲಿ ಜನರಿಗೆ ಬೋಧನೆ ಮಾಡುವವರನ್ನು ಅಧ್ಯಾತ್ಮ ವ್ಯಾಪಾರಿಗಳು ಎಂದು ಕಟುವಾಗಿ ನಿಂದಿಸುತ್ತಾರೆ. ಆದರೆ ಬದುಕಲು ಬೇಕಾದ ಭೌತಿಕ ಸೌಲಭ್ಯಗಳು ಸಾಮಾಜಿಕ ನೆಲೆಯಲ್ಲಿ ಹೇಗೆ, ಯಾರಿಂದ ಸಾಧ್ಯವಾಗುತ್ತವೆ ಎಂಬುದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.
ಸಂತನೆಂದಿಗೂ ಸಮಾಜಮುಖಿ
‘ತನ್ನನ್ನು ಬಿಟ್ಟು ದೇವರಿಲ್ಲ, ಮಣ್ಣನ್ನು ಬಿಟ್ಟು ಮಡಕೆಯಿಲ’ ಎಂಬುದು ಜನಸಾಮಾನ್ಯರ ಸಾಮುದಾಯಿಕ ಅನುಭವಕ್ಕೆ ದಕ್ಕಿರುವ ಸತ್ಯ. ದೇವರ ಅನ್ವೇಷಣೆಯಲ್ಲಿ ಏಕಾಂಗಿತನವನ್ನು ಆರಿಸಿಕೊಂಡು ಸಾಧನೆಯ ಹಂತದಲ್ಲಿ ಜನರಿಂದ ದೂರವಿರಬಯಸುವ ಬೆರಳೆಣಿಕೆಯ ಆಧ್ಯಾತ್ಮಿಕ ಅನ್ವೇಷಕರು ಈ ಸಾಮುದಾಯಿಕ ಅನುಭವವನ್ನು ತಮ್ಮದಾಗಿಸಿಕೊಂಡಮೇಲೆ ಜನರ ಕಲ್ಯಾಣಕ್ಕಾಗಿ, ಅದರಲ್ಲೂ ಬಡಜನರನ್ನು ಸಾಂತ್ವನಗೊಳಿಸುವ ಸಂತರಾಗುತ್ತಾರೆ. ಇಹದ ಬದುಕಿಗೆ ಮಹತ್ವಕೊಡುವ ಈ ಸಮಾಜಮುಖಿ ಸಂತರು ಎಲ್ಲ ಸಮಾಜಗಳಲ್ಲೂ, ಎಲ್ಲ ಕಾಲಗಳಲ್ಲೂ ಜನಸಾಮಾನ್ಯರ ಪಾಲಿಗೆ ಆರಾಧ್ಯ ದೈವಗಳಾಗಿದ್ದಾರೆ. ಮತಧರ್ಮಗಳ ಆವರಣದಲ್ಲಿದ್ದೂ ಅವುಗಳನ್ನು ಮೀರಿದ ಜೀವನಕ್ರಮವನ್ನು ಅಳವಡಿಸಿಕೊಂಡು ಜನಸಾಮಾನ್ಯರ ಅದರಲ್ಲೂ ನೊಂದವರ, ದೀನದಲಿತರ ಮಧ್ಯೆ ಬದುಕಿದ್ದಾರೆ. ಆದರೆ ಆಳುವವರ, ಶ್ರೀಮಂತರ ಕ್ರೌರ‍್ಯಕ್ಕೆ ತುತ್ತಾಗಿ ನರಳಿದ್ದಾರೆ. ಪ್ರಾಣ ಕಳೆದುಕೊಂಡಿದ್ದಾರೆ.
ದುರಂತವೆಂದರೆ ಇಂಥವರು ಸತ್ತಮೇಲೆ ಶ್ರೀಮಂತರ ಪಾರುಪತ್ತೆಗೆ ಒಳಪಟ್ಟ, ಬಡವರಿಗೆ ಭ್ರಮಾತ್ಮಕ ಸಾಂತ್ವನವನ್ನು ಕೊಡಬಲ್ಲ, ಅಧಿಕಾರಸ್ಥರ ಸಾಧನವಾಗಿ, ಶ್ರೀಮಂತಿಕೆ-ವೈಭವಗಳ ಪ್ರತೀಕವಾದ ದೇವರಾಗಿ ಪೂಜೆಗೊಳ್ಳುತ್ತಾರೆ. ಹಾಗೆ ನೋಡಿದರೆ ಎಲ್ಲ ದೇವರುಗಳೂ ಒಂದಲ್ಲ ಒಂದು ರೀತಿಯಲ್ಲಿ ಸಮುದಾಯದ ಹಿತಕ್ಕಾಗಿ ಪ್ರಾಣ ತೆತ್ತ ಮನುಷ್ಯರೇ. ರಕ್ತ-ಮಾಂಸಗಳ ಈ ಮನುಷ್ಯರು, ಅಧರ್ಮ-ಅನ್ಯಾಯಗಳ ನಾಶಕ್ಕಾಗಿ, ಸತ್ಯದ ಜಯಕ್ಕಾಗಿ, ಧರ್ಮಸಂಸ್ಥಾಪನೆಗಾಗಿ, ದುರ್ಬಲರ, ದೀನ-ದಲಿತರ ಉದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದೇವರೆಂದು, ದೇವದೂತರೆಂದು, ಪ್ರವಾದಿಗಳೆಂದು ನಂಬುವುದು, ನಂಬಿಸುವುದು ತಲೆಕೆಳಗು ದೃಷಿ.
ವಸ್ತುಗಳಲ್ಲಿರುವುದು ದ್ವಂದ್ವ ಗುಣ; ಎಲ್ಲಿದೆ ತರ ತಮ ಗಣನ?
ಸದಾ ಸ್ಥಿತ್ಯಂತರದಲ್ಲಿರುವ ಎಲ್ಲ ವಸ್ತುಗಳಲ್ಲಿಯೂ ಪರಸ್ಪರ ವಿರೋಧಗುಣಗಳು ಒಟ್ಟಿಗೆ ಇರುವುದು ಈ ತಲೆಕೆಳಗು ದೃಷ್ಟಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತಷ್ಟು ತೊಡಕನ್ನು ಉಂಟುಮಾಡಿದೆ. ಮೆದು-ಕಠಿಣ, ಧನಾತ್ಮಕ-ಋಣಾತ್ಮಕ, ಕತ್ತಲೆ-ಬೆಳಕು, ಸೃಷ್ಟಿ-ನಾಶ, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವಾತ್ಮಕವಾಗಿವೆ. ಮಿತವಾಗಿ ಕುಡಿದರೆ ಜೀವಪೋಷಕವಾದ ನೀರು ಮಿತಿಮೀರಿದರೆ ಸಾವಿಗೆ ಕಾರಣವಾಗುತ್ತದೆ. ಜೀರ್ಣಿಸಿಕೊಳ್ಳಲಾಗದ ಆಹಾರ ವಿಷವಾದರೆ, ಔಷಧವಾಗಿ ಬಳಸುವ ವಿಷ ಜೀವವನ್ನುಳಿಸುತ್ತದೆ. ಹಡಗು ನೀರಿನರಾಶಿಯ ಮೇಲಿದ್ದರೆ ತೇಲುತ್ತದೆ. ನೀರು ಹಡಗಿನೊಳಗೆ ತುಂಬಿಕೊಂಡರೆ ಹಡಗು ಮುಳುಗುತ್ತದೆ. ಪ್ರತಿಯೊಂದು ಅಣುವಿನಲ್ಲೂ ಋಣಶಕ್ತಿಚೋದಿತವಾದ ಎಲೆಕ್ಟ್ರಾನ್‌ಗಳು, ಧನಶಕ್ತಿಚೋದಿತವಾದ ಪ್ರೋಟಾನ್‌ಗಳು ಒಟ್ಟಿಗೆ ಇವೆ. ಹೊತ್ತಿ ಉರಿಯುವ ಜಲಜನಕದ ಅಣುಗಳು, ಉರಿಯಲು ಸಹಾಯಮಾಡುವ ಆಮ್ಲಜನಕದ ಅಣುಗಳೊಂದಿಗೆ ಸೇರಿ ಬೆಂಕಿಯನ್ನಾರಿಸಬಲ್ಲ ನೀರು ಉತ್ಪತ್ತಿಯಾಗುತ್ತದೆ. ಪ್ರಖರ ಬೆಳಕಿನ ಶುಕ್ಲ ನಕ್ಷತ್ರಗಳನ್ನು ದಟ್ಟಕತ್ತಲೆಯ ಕೃಷ್ಣಕುಳಿ ನುಂಗಿಹಾಕುತ್ತದೆ.
ಜೀವಶಾಸ್ತ್ರದ ಜೀವಾಣುಗಳ ಮಧ್ಯೆ, ರಸಾಯನಶಾಸ್ತ್ರದ ಅಣು ಪ್ರಪಂಚದಲ್ಲಿ ಅಸಮಾನತೆ, ಶ್ರೇಷ್ಠತೆ ಎಂಬ ಯಾವ ಮೌಲ್ಯಗಳೂ ಇಲ್ಲ. ಭೌತಶಾಸ್ತ್ರದ ಪರಮಾಣು ಮತ್ತು ಅದರ ಸೂಕ್ಷ್ಮಾತಿಸೂಕ್ಷ್ಮ ಕಣ- ಶಕ್ತಿಪ್ರವಾಹಗಳ ಮಟ್ಟದಲ್ಲಿ ದ್ವಂದ್ವಾತ್ಮಕ ಗುಣಭೇದದ ವಸ್ತು ಚಿತ್ರಣ ವಿದೆಯೇ ಹೊರತು ತರ-ತಮದ, ಸಮಾನತೆ-ಅಸಮಾನತೆಯ, ನಿಕೃಷ್ಠ-ಶ್ರೇಷ್ಠತೆಯ ದೃಷ್ಟಿಯಿಲ್ಲ. ಈ ಸೌಲಭ್ಯವಿದ್ದೂ ಸಾಮಾಜಿಕವಾಗಿ, ರಾಜಕೀಯವಾಗಿ ಹೀಗೆ ಯೋಚಿಸಲಾಗದ ವಿಜ್ಞಾನಿಗಳ ಸಂಖ್ಯೆ, ಸರ್ವಸಮಾನತೆ, ಮಾನವೀಯತೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಕಾಣಬಲ್ಲ ವಿಜ್ಞಾನಿಗಳ ಸಂಖ್ಯೆಗಿಂತ ಅನೇಕಪಟ್ಟು ದೊಡ್ಡದು. ಶ್ರೇಷ್ಠತೆ, ಅಸಮಾನತೆ ಮತ್ತು ತಾರತಮ್ಯಗಳನ್ನು ಸಾರ್ವಕಾಲಿಕ ಮೌಲ್ಯಗಳೆಂದು ನಂಬಿದ ರಾಜಕಾರಣಿಗಳು ಹೂಡುವ ಯುದ್ಧಗಳಲ್ಲಿ ತಮ್ಮ ವಿಜ್ಞಾನತನವನ್ನು ಮೂಲೆಗೆಸೆದು ರಾಷ್ಟ್ರಧುರೀಣರ ಬೆನ್ನಿಗೆ ನಿಲ್ಲುವ ‘ದೇಶಪ್ರೇಮಿ ವಿಜ್ಞಾನಿ’ಗಳನ್ನು ಜಾರ್ಜ್ ಆರ‍್ವೆಲ್ ಲೇವಡಿಮಾಡುತ್ತಾರೆ.
ತಲೆಕೆಳಗಾದ ವೈಜ್ಞಾನಿಕ ದೃಷ್ಟಿಗೆ ಮಾತ್ರ ಜನವಿರೋಧಿ ರಾಜಕೀಯದ ಬಲಾತ್ಕಾರ ಕ್ರಮವಾದ ಯುದ್ಧವನ್ನು ಬೆಂಬಲಿಸುವುದು ಸಾಧ್ಯ.
ಆಧುನಿಕ ಶಿಕ್ಷಣ ಪಡೆದ, ಸಾಮಾನ್ಯ ತಿಳುವಳಿಕೆಯ ಯಾರಿಗಾದರೂ ನಿಲುಕುವ ವಸ್ತುವಿನ ದ್ವಂದ್ವಾತ್ಮಕತೆಯನ್ನು ಮೊದಲು ತಾತ್ವಿಕವಾಗಿ ಗಮನಿಸಿದ ಹೆಗಲ್ ದ್ವಂದ್ವಾತ್ಮಕ ಸೃಷ್ಟಿವಾದವನ್ನು ಪ್ರತಿಪಾದಿಸಿದರು. ಆದರೆ ಚೇತನದಿಂದ ಭೌತವಸ್ತುಗಳು ವಿಕಾಸವಾಗಿವೆ ಎಂದು ಹೇಳುವ ಭಾವನಾವಾದಿ ಹೆಗಲ್‌ರನ್ನು ಡಾರ್ವಿನ್ನನ ಭೌತವಿಕಾಸವಾದವನ್ನು ಒಪ್ಪುವ ಕಾರ್ಲ್ ಮಾರ್ಕ್ಸ್ ‘ತಲೆಕೆಳಗಾಗಿ ನಿಂತ ತತ್ವಜ್ಞಾನಿ’ ಎನ್ನುತ್ತಾರೆ. ಮತ್ತೊಬ್ಬ ಜರ್ಮನ್ ತತ್ವಜ್ಞಾನಿಯಾದ ಫ್ಯೂಅರ್‌ಬಾಖ್ ಭೌತವಿಕಾಸವಾದವನ್ನು ಪ್ರತಿಪಾದಿಸಿದರೂ ವಸ್ತುವಿನ ಸ್ಥಿತ್ಯಂತರಗುಣವನ್ನು ಅಂದರೆ ದ್ವಂದ್ವಾತ್ಮಕತೆಯನ್ನು ಗುರುತಿಸುವುದಿಲ್ಲ. ಹೆಗಲ್‌ರಿಂದ ದಂದ್ವಾತ್ಮಕ ವಾದವನ್ನು, ಫ್ಯೂಅರ್‌ಬಾಖ್‌ನಿಂದ ಭೌತವಾದೀ ವಸ್ತುವಿಕಾಸವಾದವನ್ನು ಪಡೆದು ಸಮಾಜವಾದೀ ವಿಶ್ವದ ಆದರ್ಶವನ್ನು ಪ್ರತಿಪಾದಿಸುವ ಕಾರ್ಲ್ ಮಾರ್ಕ್ಸ್, ದ್ವಂದ್ವಾತ್ಮಕಭೌತವಾದದ ಜನಕರೆನ್ನಿಸಿದ್ದಾರೆ.
ವ್ಯಕ್ತಿ ಮತ್ತು ಸಮಾಜ ಎಂಬ ವಿಭಾಗಕ್ರಮದಲ್ಲಿ ಸಮಾಜ ಮೊದಲೊ ವ್ಯಕ್ತಿ ಮೊದಲೊ ಎಂಬ ಜಿಜ್ಞಾಸೆ ಅಂತರ್ಗತವಾಗಿದೆ. ಪ್ರಜ್ಞೆ ಮತ್ತು ಪರಿಸರಗಳ ಅವಿನಾಭಾವ ಸಂಬಂಧವನ್ನು ಅರ್ಥಮಾಡಿಕೊಳ್ಳುವಾಗಲೂ ಈ ಪ್ರಶ್ನೆ ಎದುರಾಗುತ್ತದೆ. ಬೀಜ-ವೃಕ್ಷ ನ್ಯಾಯ, ಮೊಟ್ಟೆ-ಕೋಳಿ ನ್ಯಾಯದ ಹಾದಿ ಹಿಡಿದು ಹೊರಟರೆ ಎಂದಿಗೂ ಬಗೆಹರಿಯದ ಜಟಿಲತೆ ಇದಕ್ಕೆ ಅಂಟಿಕೊಳ್ಳುತ್ತದೆ.
ಸಮುದಾಯದಲ್ಲಿಲ್ಲ ಸಾರ್ವಜನಿಕ ಮತ್ತು ಖಾಸಗಿ
ಆದರೆ, ಮನುಷ್ಯ ಜೀವನ, ನಾಗರಿಕತೆ, ಚರಿತ್ರೆ ಎಂದಿನಿಂದಲೂ ಸಾಮುದಾಯಿಕವಾಗಿದೆಯೇ ಹೊರತು ಎಂದೂ ವ್ಯಕ್ತಿಗತವಾಗಿಲ್ಲ. ಪ್ರಾಣಿಗಳು ಅದರಲ್ಲೂ ಸಸ್ತನಿಗಳು ಸಾಮುದಾಯಿಕವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡುಬಂದಿವೆ. ಇತಿಹಾಸಪೂರ್ವ ಮತ್ತು ಪ್ರಾಚೀನ ದಿನಗಳಲ್ಲಿ ಅರಣ್ಯವಾಸಿಗಳಾಗಿ, ಬುಡಕಟ್ಟುಗಳಾಗಿ ಸಮಾಜಕೇಂದ್ರಿತ ಜೀವನ ನಡೆಸಿದ ಮನುಷ್ಯರು ಸಂಘಜೀವಿಗಳಾಗಿದ್ದರು. ಆಹಾರ ಸಂಪಾದನೆ, ಸಂತಾನವೃದ್ಧಿ, ಬೇಟೆ, ಕ್ರೀಡೆ, ಹೊಡೆದಾಟ, ವಲಸೆ, ಆರಾಧನೆ ಎಲ್ಲವೂ ಸಾಂಘಿಕ ಕ್ರಿಯೆಗಳೇ ಆಗಿದ್ದವು. ವ್ಯಕ್ತಿವಾದ, ವ್ಯಕ್ತಿಪಾರಮ್ಯ, ವ್ಯಕ್ತಿಕೇಂದ್ರಿತ ದೃಷ್ಟಿ, ನಾಗರಿಕತೆಯ ಬೆಳವಣಿಗೆಯ ಆಧುನಿಕ ಕಾಲಘಟ್ಟದ ವಿವಿಧ ಹಂತದಲ್ಲಿ ಕವಲೊಡೆದ ವಿದ್ಯಮಾನ. ಊಳಿಗಮಾನ್ಯ ಮತ್ತು ಬಂಡವಾಳವಾದದ ಮುಂಚಿನ ಹಂತಗಳಲ್ಲಿ ಎಲ್ಲವೂ ಸಾಮುದಾಯಿಕವೇ. ಆಧುನಿಕ ಬಂಡವಾಳದ ವಿವಿಧ ರೂಪಗಳು ಎಷ್ಟೇ ಪ್ರಬಲವಾಗಿ ವ್ಯಕ್ತಿವಾದವನ್ನು ತಾತ್ವಿಕವಾಗಿ ಪ್ರತಿಪಾದಿಸಿದರೂ ವಾಸ್ತವದಲ್ಲಿ ಆಹಾರದ ಉತ್ಪಾದನೆ, ಸರಕುಗಳ ಸಾಗಣೆ, ದೇಶೀಯ ಅಥವಾ ಜಾಗತಿಕ ವ್ಯಾಪಾರ, ಆಡಳಿತ, ಯುದ್ಧ, ಶಿಕ್ಷಣ, ಕ್ರೀಡೆ, ಮನೋರಂಜನೆ, ಎಲ್ಲವೂ ಈಗಲೂ ವ್ಯವಸ್ಥಿತ ಸಾಮುದಾಯಿಕ ಚಟುವಟಿಕೆಗಳೇ ಆಗಿವೆ. ವ್ಯತ್ಯಾಸವಿರುವುದು ಈ ವ್ಯವಸ್ಥೆಗಳನ್ನು ವ್ಯಕಿ ಅಥವಾ ವ್ಯಕ್ತಿಕೇಂದ್ರಿತ ಸಂಸ್ಥೆಗಳು ನಿಯಂತ್ರಿಸುತ್ತವೋ ಇಲ್ಲವೋ ಎಂಬುದರಲ್ಲಿ ಮಾತ್ರ. ಸಾರ್ವಜನಿಕ-ಖಾಸಗಿ ಎಂಬ ವಿಭಾಗ ಕ್ರಮಗಳು ಸಾಧ್ಯವಾಗುವುದು ಸಮುದಾಯದ ಮಹತ್ವವನ್ನು ಪಲ್ಲಟಗೊಳಿಸಿದಾಗ ಮಾತ್ರ.
ಪರಿಸರ, ಪ್ರಜ್ಞೆಯನ್ನು ರೂಪಿಸುತ್ತದೆ, ನೈಸರ್ಗಿಕವಾಗಿ ಮನುಷ್ಯರು ಅಸಮಬಲರಾದರೂ ಸಾಮಾಜಿಕವಾಗಿ ಸಮಾನರು, ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ನಿಸ್ಸಂದಿಗ್ಧ ಧ್ಯೇಯದ ಸಮಾಜವಾದೀ ದೃಷ್ಟಿ ಸಹಜ ನ್ಯಾಯವನ್ನು ಆಧರಿಸಿದ್ದ್ದು. ಇದನ್ನು ಹತ್ತಿಕ್ಕಿ ಪ್ರಜ್ಞೆಯೇ ಪರಿಸರದ ನಿಯಂತ್ರಕ-ಕೇಂದ್ರ, ಸಮಾನ ಅವಕಾಶವಿದ್ದರೂ ಅಸಮಬಲದ ಮನುಷ್ಯರು ಸಮಾನರಾಗಿರುವುದು ಸಾಧ್ಯವಿಲ್ಲ, ಆದ್ದರಿಂದ ಸಾಮಾಜಿಕ ತಾರತಮ್ಯ ಅನಿವಾರ್ಯ, ಬಲವಿದ್ದವರಿಗೆ ಜಯ ಎಂಬ ಪ್ರಾಣಿಸಹಜ ಜೀವನವನ್ನು, ಬಂಡವಾಳವಾದ, ಸ್ವಾಭಾವಿಕ, ಸಹಜ ಆದ್ದರಿಂದ ಸರಿ ಎನ್ನುತ್ತದೆ. ಈ ಅಮಾನವೀಯ ದೃಷ್ಟಿಯನ್ನು ಪ್ರತಿಷ್ಠಾಪಿಸಲು ಶಿಕ್ಷಣ, ದಂಡನೆ, ಕಾನೂನು ರೂಪದ ಬಲಪ್ರಯೋಗದ ಅಗತ್ಯ ಬೀಳುತ್ತದೆ. ಆದ್ದರಿಂದಲೇ ಬಂಡವಾಳವಾದಕ್ಕೂ ಯುದ್ಧ-ಆಕ್ರಮಣ-ಸಾಮ್ರಾಜ್ಯ ವಿಸ್ತರಣೆಗಳಿಗೂ ಮೊದಲಿನಿಂದಲೂ ಬಲವಾದ ನಂಟು. ಫ್ರಾನ್ಸಿನ ಮಹಾಕ್ರಾಂತಿ, ರಷ್ಯಾ, ಚೀನಾ, ಮತ್ತು ಬೆರಳೆಣಿಕೆಯ ದಕ್ಷಿಣ ಅಮೆರಿಕೆಯ ಚಿಕ್ಕ ಚಿಕ್ಕ ದೇಶಗಳಲ್ಲಿ, ಆದ ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಗಳಿಂದಾಗಿ ಜನಸಮುದಾಯಗಳ ಜೀವನ ಮಟ್ಟದಲ್ಲಿ ಆದ ಅನುಕೂಲಗಳನ್ನು ಮರೆಮಾಚಿ ಆ ಕ್ರಾಂತಿಗಳ ಸಂದರ್ಭದಲ್ಲಿ, ಶ್ರೀಮಂತರ-ಬಲಾಢ್ಯರ ಕೈಲಿ ಪ್ರಾಣತೆತ್ತ ಜನರ ಸಂಖ್ಯೆಯನ್ನು ರಣೋತ್ಸಾಹದಿಂದ ದಾಖಲಿಸುವ ಪರಿಣತರು, ಬಂಡವಾಳವಾದದಡಿಯಲ್ಲಿ ಜೀವವಿದ್ದೂ ಜೀವಚ್ಛವವಾಗಿ ನಿರಂತರವಾಗಿ ನರಳುವ ಜನಸಾಮಾನ್ಯರ ಅಗಾಧ ಸಂಖ್ಯೆಯನ್ನು ಪರಿಗಣಿಸುವುದೇ ಇಲ್ಲ. ಹೀಗಾಗಿ ಮೇಲುನೋಟಕ್ಕೆ ಸಮಾನತೆ-ಮಾನವೀಯ ಸಮಾಜಕ್ಕಾಗಿ ಕರೆಕೊಡುವ ಸಮಾಜವಾದವೇ ಹಿಂಸೆ, ಸರ್ವಾಧಿಕಾರ, ಬಲಾತ್ಕಾರಗಳ ಬುನಾದಿಯ ಮೇಲೆ ನಿಂತಿರುವಂತೆ; ಹಿಂಸೆ-ಕ್ರೌರ್ಯ-ನಿರ್ಭಾವಗಳ ಬಂಡವಾಳವಾದವೇ ಶಾಂತಿ, ಸ್ವಾತಂತ್ರ್ಯ, ಪ್ರಜಾತಂತ್ರ, ಮಾನವೀಯತೆಯ ಆಕರವೆಂಬಂತೆ ತೋರುತ್ತದೆ. ಇದೂ ತಲೆಕೆಳಗು ದೃಷ್ಟಿಯ ಫಲವೇ.
ಬದುಕಿಗೆ ಅತ್ಯಗತ್ಯವಾದ ಶ್ರಮಶಕ್ತಿ, ಭೂಮಿ, ನೀರು, ಗಾಳಿ, ಆಕಾಶ ಮತ್ತು ನೈಸರ್ಗಿಕ ಶಕ್ತಿಮೂಲಗಳು ಸಾರ್ವಜನಿಕವಾದ ಅಂದರೆ ಎಲ್ಲರೂ ಅನಿರ್ಬಂಧಿತವಾಗಿ ತಮ್ಮ ಹಿತಕ್ಕಾಗಿ ಬಳಸಬಹುದಾದ ಮೂಲ ಸಂಪತ್ತು. ಬಂಡವಾಳವಾದ ಇವುಗಳನ್ನು ಖಾಸಗಿ ನಿಯಂತ್ರಣಕ್ಕೆ ಒಳಪಡಿಸಿ ಜನರ ಜೀವನವನ್ನು ನಿಯಂತ್ರಿಸುವುದೇ ರಾಜಕೀಯ. ಈ ನಿಯಂತ್ರಣವನ್ನು ಸ್ಥಿರೀಕರಿಸಲು ದೈವವಾದ, ಧರ್ಮಭೀರುತ್ವ, ರಾಜಭಕ್ತಿ, ವಿಧೇಯತೆಗಳನ್ನು ಪರಮ ಮೌಲ್ಯಗಳೆಂದು ಹೇಳುವ ಮತಧರ್ಮಗಳು, ಧರ್ಮಗುರುಗಳು, ಧರ್ಮಗ್ರಂಥಗಳು ಸಹಾಯಮಾಡುತ್ತವೆ. ಬದುಕನ್ನು ಇಹ-ಪರಗಳೆಂದು ಭಾಗಮಾಡಿ, ಇರುವಾಗ ಕಷ್ಟಪಟ್ಟರೂ ತ್ಯಾಗ-ಬಲಿದಾನಗಳ ಮೂಲಕ ಸತ್ತಮೇಲೆ ಸುಖ ಸಿಗುತ್ತದೆಂದು ಜನರನ್ನು ನಂಬಿಸುವ ಎಲ್ಲಾ ಧಾರ್ಮಿಕ ಪಂಗಡಗಳೂ ಬಂಡವಾಳವಾದವನ್ನು ಬೆನ್ನಿಗೆ ಕಟ್ಟಿಕೊಂಡ ತಲೆಕೆಳಗು ದೃಷ್ಟಿಯನ್ನೇ ಪ್ರತಿಪಾದಿಸುತ್ತವೆ. ಬದುಕಿದ್ದಾಗ ಇರುವ ಅಸಮಾನತೆ ಸಾವಿನಲ್ಲಿ ಇಲ್ಲವಾಗುತ್ತದೆ ಎಂದು ಎಗ್ಗಿಲ್ಲದೆ ಪ್ರತಿಪಾದಿಸುತ್ತವೆ. ವಾಸ್ತವದಲ್ಲಿ ಎಲ್ಲೂ ನ್ಯಾಯ ಸಿಗದ ಜನರ ಪಾಲಿಗೆ ಭ್ರಮಾತ್ಮಕ ನ್ಯಾಯ ಕೊಡುವ, ಸಾಂತ್ವನವಿಲ್ಲದ ಜನರಿಗೆ ಸಾಂತ್ವನವಾಗಿ, ಹೃದಯಹೀನರ ಕೈಗೆ ಸಿಕ್ಕಿ ನರಳುವವರ ಹೃದಯವಾಗಿ ಮತಧರ್ಮ ಆಪ್ಯಾಯಮಾನವಾಗುತ್ತದೆ. ಈ ಮೋಸದಾಟವನ್ನು ಬಯಲಿಗೆಳೆಯುವ ಸಮಾಜವಾದ ಬಹುಜನರ ದೃಷ್ಟಿಯಲ್ಲಿ ಧರ್ಮವಿರೋಧಿ ಸಿದ್ಧಾಂತವಾಗಿ, ಬಿಂಬಿತವಾಗುತ್ತದೆ.
ವಾಸ್ತವದಲ್ಲಿ ತ್ರಿಕರಣಪೂರ್ವಕ, ತ್ರಿಕರಣಶುದ್ಧಿ, ಕಾಯಾ-ವಾಚಾ-ಮನಸಾ ಎಂಬ ಪದಗಳು ಮೈ-ಮನಸ್ಸು ಒಂದಾದ, ಕೈ-ಬಾಯಿ, ನಡೆ-ನುಡಿ-ಯೋಚನೆ ಒಡಗೂಡಿದ ‘ಕೃತಿ’ಯನ್ನು ನಿರ್ದೇಶಿಸುತ್ತವೆ. ನುಡಿದಂತೆ ನಡೆ, ವಾಕ್ ಯುವರ್ ಟಾಕ್, ಎನ್ನುವುದು ಎಲ್ಲ ಸಂಸ್ಕೃತಿಗಳಲ್ಲೂ ನಿಜವಾದ, ಪ್ರಾಮಾಣಿಕ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಇವುಗಳಲ್ಲಿನ ಬಿರುಕು ನೈತಿಕತೆಯ ಬಿರುಕಾಗಿ, ನಂಬಿಕೆಗೆ ಯೋಗ್ಯವಲ್ಲದ ಕಪಟ, ಆಷಾಢಭೂತಿ ಜೀವನಕ್ರಮವಾಗಿ ಕಾಣಿಸುತ್ತದೆ. ಮಹಾತ್ಮರೆನ್ನಿಸಿಕೊಂಡವರ ಸತ್ಯಸಂಧತೆ ಇರುವುದೇ ಅವರ ನಡೆ-ನುಡಿಗಳ ಸಂಲಗ್ನಸ್ಥಿತಿಯಲ್ಲಿ. ಇವರಲ್ಲಿ ಅಂತರ್ಗತವಾಗಿರುವ ಭಾವನೆ, ಯೋಚನೆ, ಸಂಕಲ್ಪಗಳಿಗೆ ಬೆಲೆ ಬರುವುದು, ನಿಜವಾಗುವುದು ಅವು ದೈಹಿಕವಾಗಿ ಪ್ರಕಟಗೊಂಡು ಭೌತಿಕರೂಪದಲ್ಲಿ ಇತರರನ್ನು ತಲುಪಿದಾಗ ಮಾತ್ರ.
‘ಆಡದೆಲೆ ಕೊಡುವವನು ರೂಢಿಯೊಳಗುತ್ತಮನು/ಆಡಿಕೊಡುವವನು ಮಧ್ಯಮ/ಅಧಮ ತಾನಾಡಿಯೂ ಕೊಡದವನು’ ಎಂಬ ಸರ್ವಜ್ಞನ ನುಡಿ ಇದನ್ನೇ ಹೇಳುತ್ತದೆ. ಅಂದರೆ, ಅಂದುಕೊಂಡದ್ದೆಲ್ಲಾ ನಿಜವಲ್ಲ, ಆಡಿದ್ದೆಲ್ಲಾ ನಿಜವಲ್ಲ, ಮಾಡಿದ್ದು ಮಾತ್ರ ನಿಜ. ಎಷ್ಟೋ ಜನ ಆಲೋಚನೆಯ ಮಟ್ಟದಲ್ಲಿ ಒಳ್ಳೆಯದನ್ನೇ ಬಯಸಬಹುದು. ನೈತಿಕತೆಯ ಪ್ರಪಂಚದಲ್ಲಿ ಆಲೋಚನೆ ಉನ್ನತ ಸ್ಥಾನ ಪಡೆದರೂ ಅದಕ್ಕೆ ಸ್ವತಂತ್ರವಾದ ಭೌತಿಕ-ಸಾಮಾಜಿಕ ಅಸ್ತಿತ್ವವಿಲ್ಲ. ಕನಸು-ಮನಸಿನಲ್ಲಿಯೂ ಎನ್ನುವುದು ವ್ಯಕ್ತಿಯ ಆಳದ ಪದರ ಅಷ್ಟೆ. ಭೌತಿಕ ಕ್ರಿಯೆಯ ಸಹಯೋಗವಿಲ್ಲದೆ ಕಾನೂನು ಅದನ್ನು ‘ನಿಜ’ವೆಂದು ಪರಿಗಣಿಸುವುದಿಲ್ಲ. ಲೇಖಕರು, ಕಲಾವಿದರು, ಧಾರ್ಮಿಕರು, ತತ್ವಜ್ಞಾನಿಗಳು ಅಥವಾ ಬುದ್ಧಿಜೀವಿಗಳ ಮಾತು-ಕೃತಿಗಳ ನಡುವೆ ಬಿರುಕು ಕಂಡಾಗ ಜನ ಅವರನ್ನು ನಂಬುವುದಿಲ್ಲ.
ಯೋಚನೆ, ಮಾತು, ಕೃತಿ
ತಲೆಯಲ್ಲಿ ಹುಟ್ಟುವ ಆಲೋಚನೆಗಿಂತ ಆಡುವ ಮಾತು ಹೆಚ್ಚು ನಿಜವಾದದ್ದು. ಅಂದರೆ ಭೌತಿಕವಾದ ನಾಲಗೆಯನ್ನು ಬಳಸಿ ಆಲೋಚನೆಯನ್ನು ಪ್ರಕಟಿಸಿದಾಗ ಅದಕ್ಕೆ ಸಾಮಾಜಿಕ ಮೌಲ್ಯ ಬರುತ್ತದೆ. ಕಿವಿ-ಕಣ್ಣುಗಳ ಮೂಲಕ ಮತ್ತೆ ಮನಸ್ಸನ್ನು ತಲುಪುವ ಪ್ರಕಟಿತ ಆಲೋಚನೆಗಳು ಎಲ್ಲ ಕಾಲದಲ್ಲಿ, ಎಲ್ಲ ಬಗೆಯ, ಶ್ರವ್ಯ-ದೃಶ್ಯರೂಪದ ‘ಕೃತಿ’ಗಳಾಗಿ ಸಮಾಜದಲ್ಲಿ ಸ್ಥಾನ ಪಡೆದಿವೆ. ಕೃತಿ ಎಂದರೇನೆ ಭೌತಿಕರೂಪ ಪಡೆದ ಆಲೋಚನೆ.
ಆಡುವ ಮಾತು ಆಲೋಚನೆಗಿಂತ ಹೆಚು ನಿಜ, ಆದರೆ ಕೃತಿಗಿಂತ ಕಡಿಮೆ ನಿಜ. ಆಲೋಚಿಸಲು ಒಬ್ಬರೇ ಸಾಕು. ಮಾತಾಡಲು ಇಬ್ಬರು ಬೇಕು. ಈ ದೃಷ್ಟಿಯಿಂದ ಆಲೋಚನೆ ವ್ಯಕ್ತಿಗತ. ಮಾತು ಸಾಮಾಜಿಕ. ಕೃತಿ ಮತ್ತೂ ಸಮಾಜಿಕ. ಮೂರೂ ಒಗ್ಗೂಡಿದರೆ ಸಂಪೂರ್ಣ ಸಾಮಾಜಿಕ. ಆದ್ದರಿಂದ ಕೃತಿಯಾಗದ ಆಲೋಚನೆ, ಮಾತಿಗೆ ಬೆಲೆಯಿಲ್ಲ. ಯಾವುದೇ ಆಗಲಿ ನಿಜವೆನ್ನಿಸಬೇಕಾದರೆ ಅದು ಕೃತಿಯಾಗಬೇಕು, ಸಾಮಾಜಿಕವಾಗಬೇಕು. ಹಾಗೆ ನೋಡಿದರೆ ಸಾಮಾಜಿಕವಲ್ಲದ ಕೃತಿ ಯಾವುದೂ ಇಲ್ಲ.
ಸಾಮಾಜಿಕತೆಗೆ ಒಳಪಡದ ಪ್ರಾಕೃತಿಕ-ಭೌತವಸ್ತುಗಳಿಗೆ ತಮ್ಮದೇ ಆದ ಮೌಲ್ಯವಿಲ್ಲ. ಅವುಗಳೊಂದಿಗೆ ಶ್ರಮಶಕ್ತಿ ಕೂಡಿಕೊಂಡಾಗ ಮಾತ್ರ ಅವಕ್ಕೆ ಮೌಲ್ಯ ಬರುತ್ತದೆ. ಯಾವುದೇ ವಸ್ತುವಿನ ಮೌಲಿಕತೆ ಅದರೊಟ್ಟಿಗೆ ಸೇರಿಕೊಳ್ಳುವ ಶ್ರಮಶಕ್ತಿಯ ಪ್ರಮಾಣವನನ್ನನುಸರಿಸಿ ಹೆಚ್ಚು-ಕಡಿಮೆಯಾಗುತ್ತದೆ. ಶ್ರಮಶಕ್ತಿ ಎಂದರೆ ದೇಹ-ಮನಸ್ಸಿನಿಂದ ಹುಟ್ಟುವ ಸೃಜನಶಕ್ತಿ. ಇದರಲ್ಲಿ ವ್ಯಕ್ತಿಯ ದೈಹಿಕಶಕ್ತಿ, ಪ್ರತಿಭೆ, ಕೌಶಲ ಎಲ್ಲವೂ ಸೇರಿವೆ. ಇತರ ಜೀವಿಗಳ ಮತ್ತು ಪ್ರಾಕೃತಿಕ ವಸ್ತುಗಳ ದ್ವಂದ್ವಾತ್ಮಕ ಗುಣಗಳು ಶ್ರಮಶಕ್ತಿಯೊಂದಿಗೆ ಸೇರಿದಾಗ ಮಾತ್ರ ಸಂಪತ್ತು ಉತ್ಪತ್ತಿಯಾಗುತ್ತದೆ. ಶ್ರಮಶಕ್ತಿಯನ್ನು ಉಪಕರಣಗಳ ಮೂಲಕ ಬಳಸಿ ಸಂಪತ್ತನ್ನು ಸೃಷ್ಟಿಸಬಹುದು. ಉಪಕರಣಗಳ ಸುಧಾರಿತ ರೂಪಗಳೇ ಯಂತ್ರಗಳು. ಯಂತ್ರಗಳನ್ನು ಸೃಷ್ಟಿಸಲೂ ಶ್ರಮಶಕ್ತಿಯೇ ಬೇಕು. ಶ್ರಮಶಕ್ತಿಯಲ್ಲಿ ನೇರ ಅಥವಾ ಜೀವಂತ ಶ್ರಮಶಕ್ತಿ, ಸಂಗ್ರಹಿತ ಅಥವಾ ಜಡ ಶ್ರಮಶಕ್ತಿ ಮತ್ತು ಪರೋಕ್ಷ ಶ್ರಮಶಕ್ತಿ ಎಂದು ಮೂರು ವಿಧ. ಸಂಪತ್ತಿನ ಸೃಷ್ಟಿಯ ನೇರ ಪ್ರಕ್ರಿಯೆಯಲ್ಲಿ ಬಳಸುವ ಶ್ರಮಶಕ್ತಿ ಜೀವಂತ ಶ್ರಮಶಕ್ತಿ. ಸಂಪತ್ತಿನ ಸೃಷ್ಟಿಗೆ ಮುಂಚೆಯೇ ಅಸ್ತಿತ್ವದಲ್ಲಿರುವ ಕಚ್ಚಾ ಸಾಮಗ್ರಿ, ಯಂತ್ರ, ಕಟ್ಟಡ, ಭೂಮಿ, ಬಂಡವಾಳದಲ್ಲಿ ಅಂತರ್ಗತವಾಗಿರುವ ಶ್ರಮಶಕ್ತಿ ಸಂಗ್ರಹಿತ ಅಥವಾ ಜಡ ಶ್ರಮಶಕ್ತಿ. ಶ್ರಮಿಕರ ಆರೋಗ್ಯ-ಶ್ರಮಶಕ್ತಿಯ ಸಂಚಯಕ್ಕಾಗಿ ಗೃಹಕೃತ್ಯದಲ್ಲಿ ತೊಡಗುವ ಕುಟುಂಬದ ಸದಸ್ಯರ ಅದರಲ್ಲೂ ತಾಯಿ, ಹೆಂಡತಿ, ಸೋದರಿಯರ ಶ್ರಮಶಕ್ತಿ ಪರೋಕ್ಷ ಶ್ರಮಶಕ್ತಿ. ಇವೆಲ್ಲವೂ ಕೂಡಿ ಸಂಪತ್ತು ಸೃಷ್ಟಿಯಾಗುತ್ತದೆ. ಸಂಪತ್ತೆಂದರೆ ಬದುಕಲು ಬೇಕಾದ ಎಲ್ಲ ಬಗೆಯ ಜೀವನಾಗತ್ಯಗಳ ಸಾಮಾಜಿಕ ಮೌಲ್ಯದ ಒಟ್ಟು ಮೊತ್ತ. ಸಂಪತ್ತಿನ ಸೃಷ್ಟಿ-ಸಂಗ್ರಹ-ವಿನಿಯೋಗ ಶ್ರಮಶಕ್ತಿ ಮೂಲದ್ದು ಮತ್ತು ಸಾಮಾಜಿಕವಾದದ್ದು. ಅದನ್ನು ಶ್ರಮಿಕರಿಂದ ಬೇರ್ಪಡಿಸಿ ವಿನಿಮಯಕ್ಕೊಳಪಡಿಸಿದರೆ ಆಗ ಅದು ಸರಕು ಎನಿಸುತ್ತದೆ. ಸರಕಿನ ಶ್ರಮಶಕ್ತಿಯ ಮೌಲ್ಯವೇ ಅದರ ಅಂತರ್ಗತಮೌಲ್ಯ. ದುರ್ಲಭತೆ, ಸುಭಗತೆ, ಉಪಯುಕ್ತತೆ ಮತ್ತು ಬೇಡಿಕೆಗಳನ್ನಾಧರಿಸಿ ಸರಕಿನ ಬೆಲೆಯನ್ನು ಹೆಚ್ಚು-ಕಡಿಮೆ ಮಾಡಬಹುದು. ಶ್ರಮಶಕ್ತಿಯನ್ನು ಮಾರದೆ ಬದುಕಲಾಗದವರು ಶ್ರಮಿಕರು. ರೈತ-ಕೂಲಿ-ಕಾರ್ಮಿಕರು. ಶ್ರಮಶಕ್ತಿಯನ್ನು ಕೊಂಡು ಅದರ ಫಲವನ್ನು ಮಾರುವುದೇ ಉದ್ಯೋಗವಾಗುಳ್ಳವರು ಉದ್ಯಮಿಗಳು, ವ್ಯಾಪಾರಿಗಳು, ಧನವಂತರು. ಇವರೇ ಬಂಡವಳಿಗರು. ಶ್ರಮಿಕರ ಶ್ರಮಶಕ್ತಿಯ ಪೂರ್ಣಫಲ ಶ್ರಮಿಕರಿಗೆ ದಕ್ಕದಂತೆ ಸಂಪತ್ತನ್ನು ಸಂಗ್ರಹಿಸಿ ಅದರಿಂದ ಪ್ರಾಪ್ತವಾಗುವ ಬಲದಿಂದ ಕಾಯಿದೆ-ಕಟ್ಟಳೆ ಮಾಡಿಕೊಂಡು ಇಡೀ ಸಮಾಜವನ್ನು ನಿಯಂತ್ರಿಸುವವರು ಇವರೇ. ಸರ್ಕಾರದ ನಿಯಂತ್ರಕರೂ ಇವರೇ. ಒಟ್ಟಿನಲ್ಲಿ ಸಂಪತ್ತನ್ನು ಸೃಷ್ಟಿಸುವ ಶ್ರಮಿಕರು ಸದಾ ದುಃಖಿಗಳು, ಬಡತನ-ಕೊರತೆ-ಪರದಾಟಗಳ ಜಂಜಾಟದಲ್ಲಿ ಮುಳುಗಿರುವವರು. ಅವರಿಗೆ ಕನಿಷ್ಠ ಗೌರವ. ಶ್ರಮಶಕ್ತಿ, ಪರಿಕರ ಮತ್ತು ಸಂಪತ್ತಿನ ನಿಯಂತ್ರಕರು ಸದಾ ಸಿರಿವಂತರು, ಸುಖ-ಸಮೃದ್ಧಿಯ ಜೀವನದ ‘ಪುಣ್ಯವಂತರು’. ಐಹಿಕ ಅಭ್ಯುದಯದ ಎಲ್ಲ ಸೌಲಭ್ಯಗಳನ್ನು ಹಕ್ಕಿನಿಂದ ಅನುಭವಿಸುವ ದೊಡ್ಡ ಮನುಷ್ಯರು. ಸಂಪತ್ತಿನ ಈ ಪಾರುಪತ್ತೆಗಾರರಿಗೆ ಗರಿಷ್ಠ ಗೌರವ. ಇದು ಬಂಡವಳಿಗರ ಪ್ರಪಂಚ. ಇದರಲ್ಲಿ ಮಹಲುಗಳನ್ನು ಕಟ್ಟುವವರು ಅವುಗಳಲ್ಲಿ ವಾಸಮಾಡುವಂತಿಲ್ಲ. ಕಾರುಗಳನ್ನು ತಯಾರಿಸುವವರು ಅವುಗಳಲ್ಲಿ ಓಡಾಡುವಂತಿಲ್ಲ. ಕಬ್ಬು ಬೆಳೆಯುವವರಿಗೆ ಸಕ್ಕರೆಯನ್ನು ಕೊಂಡು ತಿನ್ನುವ ಸಾಮರ್ಥ್ಯವಿಲ್ಲ. ಕೋಳಿ ಸಾಕುವವರಿಗೆ ಆಮ್ಲೆಟ್ಟಿನ ಪುಷ್ಟಿ ಸಿಗದು. ಹಸು ಕಟ್ಟಿದವರ ಮನೆಯ ಹಸು ಮಕ್ಕಳು ಹಾಲು ಕುಡಿಯಲಾರರು. ಬೂಟು-ಮೆಟ್ಟು ಹೊಲೆಯುವವರು ಬರಿಗಾಲಲ್ಲಿ ಓಡಾಡುವುದು ಅನಿವಾರ್ಯ. ಹೀಗೆ ಬಂಡವಳಿಗರ ಪ್ರಪಂಚ ತಲೆಕೆಳಗು ಪ್ರಪಂಚ.
ಸಾಲದಾತನೇ ಕೃಪಣ, ಸಾಲಗಾರನಿವ ಸಿರಿವಂತ!
ಹಣವಿಲ್ಲದ ರೈತರು ಲೇವಾದೇವಿಗಾರರಿಂದ, ಬ್ಯಾಂಕುಗಳಿಂದ ಸಾಲ ಪಡೆದು ಬಿತ್ತನೆ ಬೀಜ, ಔಷಧ, ಗೊಬ್ಬರ ಇತ್ಯಾದಿಗಳನ್ನು ಹೊಂದಿಸಿಕೊಂಡು ಹೊಲಗದ್ದೆಗಳಲ್ಲಿ ದುಡಿಯುತ್ತಾರೆ. ಬಂದ ಫಸಲನ್ನು ಮಾರಿ ಜೀವನ ಮಾಡುತ್ತಾರೆ. ಸಾಲಕ್ಕೆ ಬಡಿ ತೆರುತ್ತಾರೆ. ಅಥವಾ ಹಳೆಯ ಸಾಲ ತೀರಿಸಿ ಹೊಸ ಸಾಲ ಮಾಡುತ್ತಾರೆ. ಮೇಲುನೋಟಕ್ಕೆ ಬಡ ರೈತರ ಜೀವನ ಲೇವಾದೇವಿಗಾರರಿಂದ, ಅಥವಾ ಬ್ಯಾಂಕುಗಳಿಂದ ನಡೆಯುತ್ತಿರುವಂತೆ ತೋರುತ್ತದೆ. ಆದರೆ ವಾಸ್ತವವಾಗಿ ರೈತರು ಕೊಡುವ ಬಡ್ಡಿಯಿಂದ ಲೇವಾದೇವಿಗಾರರ ಜೀವನ ಸಾಗುತ್ತದೆ. ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತವೆ. ಜಾಗತಿಕ ಮಟ್ಟದಲ್ಲಿ ವಿಶ್ವಬ್ಯಾಂಕು, ಐಎಮ್‌ಎಫ್ ಮುಂತಾದ ಹಣಕಾಸುಸಂಸ್ಥೆಗಳು ಅಭಿವೃದ್ಧಿಶೀಲ ದೇಶಗಳಿಗೆ ಸಹಾಯ ಮಾಡುತ್ತಿವೆ ಎಂದು ಅನ್ನಿಸುತ್ತದೆ. ವಾಸ್ತವದಲ್ಲಿ ಈ ಹಣಕಾಸು ಸಂಸ್ಥೆಗಳ ಅಸ್ತಿತ್ವ ಸಾಧ್ಯವಾಗುವುದೇ ಅಭಿವೃದ್ಧಿಶೀಲದೇಶಗಳ ಶ್ರಮಿಕರು ಅವರ ಸರ್ಕಾರಗಳ ಮೂಲಕ ಪಾವತಿ ಮಾಡುವ ಬಡ್ಡಿ ಹಣದಿಂದ. ಜಾಗತಿಕ ಆರ್ಥಿಕ ‘ಸಹಾಯ’ ಯೋಜನೆ, ಆಡಳಿತ ಕುರಿತಂತೆ ಟೀವಿ ಮತ್ತು ಪತ್ರಿಕೆಗಳ ವೇದಿಕೆಗಳಲ್ಲಿ ನಡೆಯುವ ಚರ್ಚೆ-ಸಂವಾದ-ಅಭಿಪ್ರಾಯಗಳ ಮುಖೇನ ಕಾಣುವ ಆರ್ಥಿಕ ಚಿತ್ರ ವಾಸ್ತವವಾಗಿ ತಲೆಕೆಳಗು ಚಿತ್ರ.
ಭಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು…
ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ, ಮಠ-ಮಾನ್ಯಗಳಲ್ಲಿ, ಪುಣ್ಯಕ್ಷೇತ್ರಗಳಲ್ಲಿ ಪ್ರತಿದಿನವೂ ಭಕ್ತಾದಿಗಳಿಗಾಗಿ ಎಂದು ಅನ್ನ ಸಂತರ್ಪಣೆ ನಡೆಯುತ್ತದೆ. ಸಾವಿರಾರು ಜನರು ಒಟ್ಟಿಗೆ ಕುಳಿತು ಊಟಮಾಡಿ ಅಂಥ ಏರ್ಪಾಡು ಮಾಡಿದವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಆ ಸ್ಥಳಗಳಿಗೆ ಭೇಟಿಕೊಡುವ ಎಲ್ಲರೂ ಬಡವರಲ್ಲದಿದ್ದರೂ ಬಹಳಷ್ಟು ಜನ ಬಡವರೇ ಆಗಿರುವುದು ವಿಶೇಷವೇನಲ್ಲ. ಬಡವರಲ್ಲದವರಿಗೆ ಬೇರೆ ಏರ್ಪಾಡು ಇರಲಿ ಇಲ್ಲದಿರಲಿ, ದೇವಸನ್ನಿಧಿಯಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಉದ್ದೀಪಿಸುವಂತೆ ಅಲ್ಲಿನ ವಾತಾವರಣ ಇರುತ್ತದೆ. ಅನ್ನಸಂತರ್ಪಣೆ ಏರ್ಪಡಿಸುವ ಆಡಳಿತ ಮಂಡಳಿ ಅಥವಾ ಧರ್ಮದರ್ಶಿಗಳು ಆ ವ್ಯವಸ್ಥೆಯ ಫಲದಾತರೋ, ಫಲಾನುಭವಿಗಳೋ ಎಂಬ ಪ್ರಶ್ನೆ ಸಾಧಾರಣವಾಗಿ ಏಳುವುದಿಲ್ಲ. ಅವರೆಲ್ಲ ಉಳಿದವರಿಗಿಂತ ಅನುಕೂಲವಂತರು ಎಂಬ ಅಂಶ ಎದ್ದು ತೋರುತ್ತದೆ. ಆದ್ದರಿಂದ ಅವರು ಫಲಾನುಭವಿಗಳಲ್ಲ ಎಂದು ಬೋಧೆಯಾಗುತ್ತದೆ. ಆದರೆ ಯಾವುದೇ ಧರ್ಮಕಾರ್ಯ-ಪುಣ್ಯಕಾರ್ಯಗಳ ಯೋಜನೆಯಲ್ಲಿ ‘ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ತನು ಮನ ಧನಗಳನ್ನು ಅರ್ಪಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂಬ’ ಕರೆ ತಪ್ಪದೆ ಇರುತ್ತದೆ. ಈ ಭಕ್ತ ಮಹಾಶಯರಲ್ಲಿ ನೇರವಾಗಿ ತಮ್ಮಲ್ಲಿರುವ ಪುಡಿಗಾಸನ್ನು ಧಾರಾಳವಾಗಿ ಅರ್ಪಿಸುವ ಬಡವರು, ಮತ್ತು ಬಡವರಿಂದ-ಶ್ರಮಿಕರಿಂದ ತಾವು ಕಾನೂನು ರೀತ್ಯವೇ ಸಂಗ್ರಹಿಸಿದ ಧನದಲ್ಲಿ ಒಂದು ಪಾಲನ್ನು ಭಗವಂತನಿಗೆ, ಅಂದರೆ ಆಡಳಿತ ವ್ಯವಸ್ಥೆಗೆ ಅರ್ಪಿಸುವ ಅನುಕೂಲಸ್ಥರು ಎಂದು ಎರಡು ವಿಧ. ಬಡವರು ಡಬ್ಬಿಗೆ ಹಾಕುವ ಹಣ, ಅಥವಾ ಏರ್ಪಾಡಿಗೆ ನೇರವಾಗಿ ವಿನಿಯೋಗಿಸುವ ದೈಹಿಕಶ್ರಮಕ್ಕೆ ಬಿಡಿಬಿಡಿಯಾಗಿ ಲೆಕ್ಕ ಸಿಗುವುದಿಲ್ಲ. ಆದರೆ ಚೆಕ್ಕು, ರಸೀತಿ ಮುಂತಾದ ಕಾಯಿದೆಬದ್ಧ ಲೆಕ್ಕಕ್ಕೊಳಪಟ್ಟು, ಸಾಧ್ಯವಾದರೆ ತೆರಿಗೆವಿನಾಯಿತಿ ಸಿಗುವ ಧನ ಎಲ್ಲರ ಕಣ್ಣಿಗೆ ಕಾಣಿಸುವಂಥದ್ದು. ಭಗವಂತನ/ಳ ವಸ್ತ್ರ-ಆಭರಣ-ಆಯುಧ-ವಾಹನ-ಕಟ್ಟಡ ಮತ್ತಿತರ ಸೌಲಭ್ಯಗಳ ಏರ್ಪಾಡಿಗೆ ಸ್ಮರಣಫಲಕಗಳು ಇದ್ದೇ ಇವೆ. ಲೆಕ್ಕಕ್ಕೆ ಸಿಗಬಾರದ ಕಾಣಿಕೆಯಾದರೆ, ಹಾಗೂ ಅರ್ಪಿಸಲು ಮಾಡುವ ಏರ್ಪಾಡೂ ಕಾನೂನು ಸಮ್ಮತವೇ. ನೇರವಾಗಿ ಮತ್ತು ಪರೋಕ್ಷವಾಗಿ ಭಗವಂತನಿಗೆ ಅರ್ಪಿಸುವ ಬಡವರ ತನುಮನಧನಗಳ ಪಾಲು ಸದಾ ಅಧಿಕವಾಗಿದ್ದರೂ ಎದ್ದು ಕಾಣಿಸುವುದು ಮಾತ್ರ ಅನುಕೂಲವಂತರ ಸಮರ್ಪಣೆಯ ಪಾಲು. ಈ ಲೆಕ್ಕಾಚಾರದ ಭರದಲ್ಲಿ ಭಕ್ತರ ತನುಮನಧನಗಳಿಂದಲೇ ಧರ್ಮದರ್ಶಿಗಳ ಸುಖಮಯ ಜೀವನ ನಡೆಯುತ್ತಿರುವುದು ಜನರ ಗಮನಕ್ಕೆ ಬರದೆ ನುಣುಚಿಕೊಳ್ಳುತ್ತದೆ. ಹೊರಗಿನಿಂದ ನೋಡಿದರೆ ಬಡವರು, ಸಿರಿವಂತ ಭಕ್ತಜನರ ನಿಸ್ವಾರ್ಥಸೇವೆಯ ದೀನ ಫಲಾನುಭವಿಗಳಂತೆ ಕಾಣಿಸುತ್ತಾರೆ. ಆದರೆ, ನಿಜವಾದ ದಾನಿಗಳು ಬಡವರೆ, ಸಿರಿವಂತರು ಬಡಜನರ ದಾನದ ಫಲಾನುಭವಿಗಳು.
ದೀನ ನಾನು ಸಮಸ್ತ ಲೋಕಕೆ/ ದಾನಿ ನೀನು ವಿಚಾರಿಸಲು ಮತಿ/ಹೀನ ನಾನು…ಎಂದು ಕವಿ ಯಾರನ್ನು ಕುರಿತು ಹೇಳಿದ್ದಾರೆ?
ಸಾರ್ವಜನಿಕವಾದ ನೈಸರ್ಗಿಕ, ಶ್ರಮಶಕ್ತಿ ನಿರ್ಮಿತ ಸಂಪತ್ತನ್ನು ಖಾಸಗಿ ತೆಕ್ಕೆಗೊಳಪಡಿಸಿ, ಸಾರ್ವಜನಿಕರ ಶ್ರಮಶಕ್ತಿಯನ್ನು ಖಾಸಗಿ ಸಂಪತ್ತಿನ ಸಂಗ್ರಹಕ್ಕೆ ದುಡಿಸಿಕೊಂಡು ಅದರ ಯಾವುದೋ ಒಂದು ಪಾಲನ್ನು ಸಾರ್ವಜನಿಕರ ಅನುಕೂಲಕ್ಕೆಂದು ಖರ್ಚುಮಾಡುವವರನ್ನು, ಕಲಾವಿದರು, ಲೇಖಕರಿಗೆ ಪ್ರಶಸ್ತಿ-ಬಿರುದು-ಬಾವಲಿಗಳನ್ನು ದಯಪಾಲಿಸುವವರನ್ನು ಸಮಾಜಸೇವಾಧುರೀಣರೆಂದು ಮಹಾದಾನಿಗಳೆಂದು ಗೌರವಿಸುವುದು ತಲೆಕೆಳಗು ಪ್ರಪಂಚದ ರೀತಿ.
ಶ್ರಮಿಕರಿಗೆ ಸಲ್ಲಬೇಕಾದ ಸಂಪತ್ತನ್ನು ಖಾಸಗಿಯಾಗಿಸಿ, ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ತಮ್ಮದೇ ಉತ್ಪಾದನೆಯ ಪ್ರಚಾರಕ್ಕೆ ಜಾಹಿರಾತುಗಳಿಗೆ ಖರ್ಚುಮಾಡುವ ಹಣಕ್ಕೆ ತೆರಿಗೆ ವಿನಾಯತಿ ಪಡೆಯುವುದು ದುಪ್ಪಟ್ಟು ವಂಚನೆ. ಮೊದಲನೆಯದು, ತೆರಿಗೆ ಕೊಡದಿರುವುದು. ಎರಡನೆಯದು ಸಾರ್ವಜನಿಕ ಬಳಕೆಗೆ ಸಿಗಬೇಕಾದ ಮೊತ್ತವನ್ನು ಕಾನೂನು ರೀತ್ಯವೆ ತಮ್ಮದೇ ಸರಕುಗಳ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು. ಇಂಥ ತೆರಿಗೆ ವಿನಾಯತಿ ತಲೆಕೆಳಗು ಆರ್ಥಿಕತೆಯಲ್ಲಿ ಮಾತ್ರ ದೊರೆಯುವ ಸೌಲಭ್ಯ.
ಈ ಜೀವನ ಸಾಧ್ಯವಾಗಿರುವುದೇ ಸಾಮುದಾಯಿಕವಾದ ಮತ್ತು ಭೌತಿಕವಾದ ಶ್ರಮದಿಂದಾಗಿ. ಆದರೆ ತಲೆಕೆಳಗು ಪ್ರಪಂಚದಲ್ಲಿ ಶ್ರಮಕ್ಕೆ ಸಿಗಬೇಕಾದ ಬೆಲೆ ಹಣಕ್ಕೆ ಸಿಗುತ್ತದೆ. ಸಂಪತ್ತಿನ ಸೃಷ್ಟಿಕರ್ತರಾದ ಶ್ರಮಿಕರಿಗೆ ಸಿಗಬೇಕಾದ ಮಹತ್ವ, ಗೌರವಗಳು ಸಂಪತ್ತಿನ ಪಾರುಪತ್ತೆ ಗಾರರಾದ, ನಿಯಂತ್ರಕರಾದ ಬಂಡವಳಿಗರಿಗೆ ಸಿಗುತ್ತದೆ. ಕೋನಪಲ್ಲಟ ಅಥವಾ ವಿನ್ಯಾಸ ಪಲ್ಲಟ (ಪ್ಯಾರಡೈಮ್ ಷಿಫ್ಟ್) ಎಂದು ಹೇಳುವ ಆಧುನಿಕೋತ್ತರ ತಾತ್ವಿಕತೆಗಳು ಈ ತಲೆಕೆಳಗು ದೃಷ್ಟಿಯನ್ನು ಸಮರ್ಥಿಸುತ್ತವೆ. ರಾಜಕೀಯ, ನ್ಯಾಯಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ತಲೆಕೆಳಗು ದೃಷ್ಟಿಯನ್ನೇ ಸ್ಥಿರೀಕರಿಸಲು ಪ್ರಯತ್ನಿಸುತ್ತವೆ. ಹೀಗಾಗಿ ಸಾಮುದಾಯಿಕ ದೃಷ್ಟಿ ಪಲ್ಲಟವಾಗಿ ಈ ತಲೆಕೆಳಗು ದೃಷ್ಟಿಯ ಫಲವಾದ ವ್ಯಕ್ತಿ ಪಾರಮ್ಯ, ವ್ಯಕ್ತಿಕೇಂದ್ರಿತ ಜೀವನಶೈಲಿ ಮತ್ತು ಮೌಲ್ಯಗಳು ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ ದಿಂದಾಗಿಯೇ ತಲೆಕೆಳಗು ದೃಷ್ಟಿಯೇ ‘ಸರಿ’, ಸಹಜ, ಮತ್ತು ಸ್ವಾಭಾವಿಕ ಎಂದು ತೋರುತ್ತಿದೆ.
ಪೂರ್ವ ನಿರ್ದೇಶಿತ ‘ಮುಕ್ತ’ ದೃಷ್ಟಿ
ಒಂದು ಕಡೆಯಿಂದ ನೋಡಿದರೆ ಸಿಂಹದಂತೆ, ಮತ್ತೊಂದು ಕಡೆಯಿಂದ ನೋಡಿದರೆ ಆನೆಯಂತೆ ಕಾಣುವ ಹಾಗೆ ರಚಿಸಿದ ಚಿತ್ರಗಳಿವೆ. ಒಂದು ರೀತಿಯಲ್ಲಿ ಹಿಡಿದರೆ, ಸಾಧುವಿನಂತೆ, ತಲೆಕೆಳಗಾಗಿ ಹಿಡಿದರೆ ರಾಕ್ಷಸನಂತೆ ಕಾಣುವ ಹಾಗೆ ರಚಿಸಿದ ಮುಖವಾಡಗಳನ್ನು ಮಕ್ಕಳು ಧರಿಸಿ ಆನಂದಿಸುತ್ತಾರೆ. ವಸ್ತುವು ನೋಡುವವರ ದೃಷ್ಟಿಯನ್ನು ಅನುಸರಿಸಿ ಇದೆ; ನೀವು ಹೇಗೆ ನೋಡಿದರೆ ಹಾಗೆ ಪ್ರಪಂಚ ಕಾಣಿಸುತ್ತದೆ ಎಂಬ ವಾದವನ್ನು ಮುಂದಿಡಲು ಇಂಥ ಉದಾಹರಣೆಗಳನ್ನು ಕೆಲವರು ಬಳಸುತ್ತಾರೆ. ಪ್ರಪಂಚ ಮುಕ್ತವಾಗಿದ್ದು ಅದರಲ್ಲಿ ಯಾರ‍್ಯಾರಿಗೆ ಏನೇನು ಬೇಕೋ ಅದನ್ನು ಆರಿಸಿಕೊಳ್ಳಲು ಮುಕ್ತರು ಎಂದು ಸಾರುತ್ತಾರೆ. ಆದರೆ ಚಿತ್ರದ ಸಿಂಹ-ಆನೆಗಳು, ಮುಖವಾಡದ ಸಾಧು-ರಾಕ್ಷಸರ ಮುಖಗಳು ಹಾಗೆ ಕಾಣುವಂತೆ ಪೂರ್ವನಿರ್ದೇಶಿತವಾಗಿವೆ ಎಂಬುದನ್ನು ಗಮನಿಸಿದರೆ ‘ಮುಕ್ತದೃಷ್ಟಿ’ ನಿರ್ದೇಶಿತವಾದದ್ದು ಎಂದು ಅರ್ಥವಾಗುತ್ತದೆ. ಹೊರನೋಟಕ್ಕೆ ಮುಕ್ತವೆಂದು ತೋರುವ ವೃತ್ತಪತ್ರಿಕೆಗಳಾಗಲಿ, ಟೀವಿ ಮಾಧ್ಯಮಗಳಾಗಲಿ ಜನರಿಗೆ ತಲುಪಿಸುವ ಜೀವನವಾಸ್ತವ-ದೃಷ್ಟಿಕೋನಗಳು ಬಲಿಷ್ಠರ ಆಯ್ಕೆಗೊಳಪಟ್ಟು ಪೂರ್ವನಿರ್ದೆಶಿತವಾಗಿರುತ್ತವೆ. ದೃಷ್ಟಿ ತಲೆಕೆಳಗಾಗಿರುವಾಗ ಚಿತ್ರ ‘ಸರಿ’ಯಾಗಿರುವುದು ಸಾಧ್ಯವಿಲ್ಲ. ಸಮಾಜವಾದವಾಗಲಿ, ಬಂಡವಾಳವಾದವಾಗಲಿ ಸಾಮಾಜಿಕ ವ್ಯವಸ್ಥೆಗಳಾಗಿ ಜನಸಮುದಾಯದ ಲೋಕದೃಷ್ಟಿಯನ್ನು ನಿರ್ದೇಶಿಸುತ್ತವೆ. ಎಲ್ಲರೂ ಎರಡರಲ್ಲಿ ಯಾವುದು ಜನಸಮುದಾಯದ ಹಿತವನ್ನು ಕಾಯುತ್ತದೆ ಎಂದು ಅರ್ಥಮಾಡಿಕೊಳ್ಳಬಹುದೇ ಹೊರತು ತಟಸ್ಥರಾಗಿ, ಅಲಿಪ್ತರಾಗಿ ಅಥವಾ ಯಾವ ಪಕ್ಷಕ್ಕೂ ಸೇರದೆ ಸಾಮಾಜಿಕರಾಗಿರುವುದು ಸಾಧ್ಯವಿಲ್ಲ. ನಿಜವಾಗಿ ನಿಷ್ಪಕ್ಷಪಾತವೆಂಬುದೇ ಇಲ್ಲ. ಆಯ್ಕೆ ಇರುವುದು ರೂಢಿಗತವಾಗಿ ಒಪ್ಪಿರುವ ತಲೆಕೆಳಗು ‘ಸರಿ’ ಅಥವಾ ‘ತಲೆಕೆಳಗು ಸರಿ’ಯನ್ನು ತಲೆಕೆಳಗುಮಾಡಿದ ಸರಿಪಡಿಸಿಕೊಂಡ ’ಸರಿ’ಗಳ ಮಧ್ಯೆ. ಆಧುನಿಕೋತ್ತರ ತಾತ್ವಿಕತೆ ‘ತಲೆಕೆಳಗು’ ಎನ್ನುವುದರ ನಿರ್ವಚನವನ್ನೇ ಬದಲಿಸಿದರೆ ಆಯ್ಕೆಯ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುತ್ತದೆ. ಅಂದರೆ ತಲೆಕೆಳಗು ದೃಷ್ಟಿಯ ಬಲಿಷ್ಠರು ಯಾವುದನ್ನು ಸರಿ ಎನ್ನುತ್ತಾರೋ ಅದೇ ‘ಸರಿ’ ಎಂದಾಗುತ್ತದೆ.
ಯಥಾಸ್ಥಿತಿಯನ್ನು ಬದಲಿಸುವುದು ಹೇಗೆ?
ಇರುವ ವಾಸ್ತವವನ್ನು ಇರುವಂತೆಯೇ ವಿವರಿಸಬೇಕೆನ್ನುವ ದೃಷ್ಟಿ ಪಾರಂಪರಿಕ, ರೂಢಿಗತ ತಾತ್ವಿಕತೆಯಾದರೆ ಇದನ್ನು ಬದಲಿಸುವುದು ಹೇಗೆ ಎಂಬುದು ಮಾರ್ಕ್ಸ್‌ವಾದದ ತಾತ್ವಿಕತೆ.
ದುಃಖ, ದಾರಿದ್ರ್ಯ, ಅಸಮಾನತೆಗಳನ್ನು ತುಂಬಿಕೊಂಡಂತೆ ಕಾಣುವ ನಮ್ಮ ಪ್ರಪಂಚವಾಗಲಿ, ಅದಕ್ಕೆ ಪರಿಹಾರವಾಗಿ ನಾವು ರೂಪಿಸಿಕೊಳ್ಳುವ ಜೀವನದೃಷ್ಟಿಯಾಗಲಿ ಎರಡಕ್ಕೂ ನಾವೇ ಬಾಧ್ಯರು. ಆದ್ದರಿಂದ ವಿಶ್ವದಲ್ಲಿ ಬದಲಾವಣೆ ಬೇಕಿದ್ದರೆ, ಪ್ರತಿಯೊಬ್ಬರೂ ತಮ್ಮನ್ನು ಬದಲಾಯಿಸಿಕೊಂಡರೆ ಒಟ್ಟಿನಲ್ಲಿ ಪ್ರಪಂಚ ಬದಲಾಯಿಸುತ್ತದೆ ಎಂದು ನೈತಿಕವಾದಿಗಳು, ವಾದಿಸುತ್ತಾರೆ. ಕಾಡಿನಲ್ಲಿ ನಡೆಯಬೇಕಿದ್ದರೆ ಮುಳ್ಳನ್ನು ತುಳಿಯುವುದು ಅನಿವಾರ್ಯ. ಮುಳ್ಳು ಚುಚ್ಚಿಸಿಕೊಳ್ಳುವುದು ಬೇಡವೆಂದರೆ ಕಾಡಿನಲ್ಲಿರುವ ಮುಳ್ಳನ್ನೆಲ್ಲಾ ತೆಗೆಯಬೇಕಾಗುತ್ತದೆ ಅಥವಾ ಕಾಡಿಗೆಲ್ಲಾ ಚರ್ಮವನ್ನು ಹಾಸಬೇಕಾಗುತ್ತದೆ. ಅದು ಅಸಾಧ್ಯದ ಮಾತು. ಅದರ ಬದಲು ಪಾದಗಳಿಗೇ ಚರ್ಮವನ್ನು ಕಟ್ಟಿಕೊಂಡರೆ ಮುಳ್ಳಿನ ಸಮಸ್ಯೆ ಸುಲಭದಲ್ಲಿ ಬಗೆಹರಿಯುತ್ತದೆ. ವ್ಯಾವಹಾರಿಕವಾಗಿ ಸುಲಭಸಾಧ್ಯವಾದ, ಬುದ್ಧಿವಂತಿಕೆಯ, ಅನುಭವಯುಕ್ತವಾದ ಈ ಮಾತಿನಲ್ಲಿ ತಥ್ಯವಿದೆ ಎಂದು ಯಾರಿಗಾದರೂ ಅನ್ನಿಸುತ್ತದೆ. ಅಲ್ಲದೆ ಸಮಷ್ಟಿಯಲ್ಲಿರುವುದೇ ವ್ಯಕ್ತಿಯಲ್ಲೂ ಇರುವುದರಿಂದ ವ್ಯಕ್ತಿಗಳಾಗಿ ಜನರು ಸಂತುಷ್ಟರಾದರೆ ಇಡೀ ವಿಶ್ವವೇ ಸಂತುಷ್ಟವಾದಂತೆ ಆಯಿತಲ್ಲ ಎಂಬ ತಾರ್ಕಿಕ ನಿರ್ಣಯಕ್ಕೆ ಅಧ್ಯಾತ್ಮವಾದಿಗಳು ಬರುತ್ತಾರೆ. ಇರುವೆಯ ಜೀವಕೋಶದಲ್ಲಿರುವ ಜೀವತತ್ವವೇ ಆನೆಯಲ್ಲೂ ಇರುವುದರಿಂದ ಇರುವೆಯನ್ನು ಸಂತೃಪ್ತಗೊಳಿಸಿದರೆ ಆನೆಯನ್ನು ಸಂತೃಪ್ತಗೊಳಿಸಿದಂತೆ ಆಯಿತಲ್ಲವೇ ಎಂಬುದು ಮತ್ತೊಂದು ಬಗೆಯ ತಾರ್ಕಿಕ-ಧಾರ್ಮಿಕ ನಿಲುವು. ಇದು ಸಾಂಕೇತಿಕ ಪರಿಹಾರವೂ ಹೌದು. ಆದರೆ ನೈತಿಕ, ಧಾರ್ಮಿಕ ಮತ್ತು ತಾರ್ಕಿಕ ಪರಿಹಾರಗಳು ವ್ಯಕ್ತಿಕೇಂದ್ರಿತ ಮಾತ್ರವಲ್ಲ, ಸ್ವಾರ್ಥಕೇಂದ್ರಿತವೂ ಹೌದು. ಇರುವೆ ತಿಂದರೆ ನೀವೇ ತಿಂದಂತೆ ಆಗುವುದಿಲ್ಲವೆ? ಆದ್ದರಿಂದ ಇರುವೆಗೆ ತಿನ್ನಿಸಿ, ನೀವು ಊಟಮಾಡಬೇಡಿ ಎಂದಾಗ ಇಂಥ ನಿಲುವಿನ ಬರಡುತನ ತಿಳಿಯುತ್ತದೆ. ಆಯ್ಕೆಯನ್ನು ಸರಳೀಕರಿಸಿ-ವ್ಯಕ್ತೀಕರಿಸಿ ಜೋಡಿಸಿದ ಈ ಉದಾಹರಣೆಗಳು ದ್ವಂದ್ವಾತ್ಮಕವೂ ಸದಾ ಚಲನಶೀಲವೂ ಆದ ಸಾಮಾಜಿಕ ವಿಷಮತೆಗಳಿಗೆ ಹೊಂದುವುದಿಲ್ಲ ಎಂಬ ಅಂಶ ವಿಶದವಾಗಿ ವಿಚಾರಿಸಿದರೆ ಮಾತ್ರ ತಿಳಿಯುತ್ತದೆ. ಹೊರ ರೂಪದಲ್ಲಿ ವ್ಯಕ್ತಿಯಾಗಿ, ಭೌತಿಕ ಹೂರಣದಲ್ಲಿ ಸಾಮುದಾಯಿಕವಾಗಿರುವ ಮನುಷ್ಯ ಸಂಬಂಧಗಳನ್ನು ಸಾಮಾಜಿಕ ಸಂದರ್ಭದಲ್ಲಿ ಅರ್ಥಮಾಡಿಕೊಂಡರೆ ವ್ಯಕ್ತಿವಾದದ ತಲೆಕೆಳಗು ದೃಷ್ಟಿ ಬಯಲಾಗುತ್ತದೆ.
ಎಚ್ಚೆತ್ತ ಶೇ. ತೊಂಬತ್ತೊಂಬತ್ತು
ತಲೆಕೆಳಗು ದೃಷ್ಟಿ ಆಧಾರಿತ ರಾಜಕೀಯ ಮತ್ತು ಆರ್ಥಿಕತೆಗಳ ಫಲಾನುಭವಿಗಳಾಗಿ ಬಂಡವಾಳವಾದವನ್ನು ಸಮರ್ಥಿಸುತ್ತಿದ್ದ ಅಥವಾ ಪ್ರಶ್ನಿಸದೆ ಇದ್ದ ಅಭಿವೃದ್ಧಿಹೊಂದಿದ ದೇಶಗಳ ಜನಸಾಮಾನ್ಯರು, ಶ್ರೀಮಂತರ ಹಿತವನ್ನು ಕಾಪಾಡುವ ಸಾಲ, ಯುದ್ಧ, ವಿಮಾವ್ಯಾಪಾರದ ವಿಷಮತೆಗಳು, ಬ್ಯಾಂಕುಗಳ ದಿವಾಳಿ, ಮತ್ತು ಆರ್ಥಿಕ ಕುಸಿತಗಳ ಹೊಡೆತದಿಂದಾಗಿ ವಿಶ್ವಾದ್ಯಂತ ಎದ್ದಿರುವ ದೃಷ್ಟಿ ಜಾಗೃತಿ, ತಲೆಕೆಳಗು ಪ್ರಪಂಚವನ್ನು ತಲೆಕೆಳಗಾಗಿಯೇ ಕಾಣಲು ಸಹಾಯಮಾಡಿದೆ. ಸಮಾಜವಾದೀ ದೇಶಗಳಲ್ಲಿದ್ದು ವ್ಯಕ್ತಿಸ್ವಾತಂತ್ರ್ಯ-ಪ್ರಜಾತಂತ್ರಗಳಿಂದ ವಂಚಿತರಾಗಿದ್ದೇವೆಂದು ಕೊರಗುತ್ತಿದ್ದ ಜನ ಮತ್ತೆ ಸಮಾಜಕೇಂದ್ರಿತ ಸಾಮುದಾಯಿಕ ಜೀವನದ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದಾರೆ.
ಇಡೀ ವಿಶ್ವದ ಸಂಪನ್ಮೂಲಗಳ ಶೇಕಡ ೪೦ರಷ್ಟನ್ನು ವಿಶ್ವದ ಜನಸಂಖ್ಯೆಯ ೧ ರಷ್ಟಿರುವ ವ್ಯಕ್ತಿ ಪಾರಮ್ಯದ ಶ್ರೀಮಂತರು ಅನುಭವಿಸುತ್ತಿದ್ದಾರೆ ಎಂಬ ವಾಸ್ತವಸಂಗತಿ ಮುನ್ನೆಲೆಗೆ ಬರುತ್ತಿದ್ದಂತೆ ‘ನಾವು ಶೇಕಡ ೯೯’ ಎಂಬ ಆಂದೋಲನಗಳು ಎಲ್ಲೆಲ್ಲೂ ಕಾಣಿಸಿಕೊಂಡಿವೆ.
ತಲೆಕೆಳಗು ಪ್ರಪಂಚವೇ ‘ಸರಿ’ ಎಂದು ನಿಶ್ಚಿಂತರಾಗಿದ್ದ ಜನ ‘ಎಡ-ಬಲ’ಗಳ ಬಗ್ಗೆ ಮತ್ತೆ ಯೋಚಿಸತೊಡಗಿದ್ದಾರೆ.