ಭಗವಾನ್ ಬುದ್ಧನು  ಹೇಳಿದ ಕತೆಯೊಂದು ನೆನಪಿಗೆ ಬರುತ್ತಿದೆ.

ನಾಲ್ಕು ಜನ ಪ್ರಯಾಣಿಕರು, ದಾರಿಗೆ ಅಡ್ಡವಾಗಿ ಹರಿಯುತ್ತಿದ್ದ ನದಿಯೊಂದನ್ನು ದಾಟುವ ಸಂದರ್ಭ ಬಂತು. ಹೇಗೆ ದಾಟುವುದು? ಅವರೆಲ್ಲರೂ ಸೇರಿ, ನದಿ ದಾಟಲು ತೆಪ್ಪವೊಂದನ್ನು ಕಟ್ಟಲು ಯೋಚಿಸಿದರು. ಹತ್ತಿರದ ಕಾಡಿನಿಂದ ಬಿದಿರನ್ನು ಕಡಿದರು. ಬೊಂಬುಗಳನ್ನು ಸೇರಿಸಿ ಹೇಗೋ ಮಾಡಿ ಪುಟ್ಟದೊಂದು ತೆಪ್ಪವನ್ನು ಕಟ್ಟಿದರು. ಆನಂತರ ಸಲೀಸಾಗಿ ನದಿಯನ್ನು ದಾಟಿ ಆಚೆಯ ದಂಡೆಯನ್ನು ತಲುಪಿದರು. ಆಚೆಯ ದಡ ಸೇರಿದ ಮೇಲೆ ಅವರಿಗೆ ಅನಿಸಿತಂತೆ, ಈ ತೆಪ್ಪವಿಲ್ಲದಿದ್ದರೆ ನಾವು ಖಂಡಿತ ಈ ನದಿಯನ್ನು ದಾಟಲು ಆಗುತ್ತಿರಲಿಲ್ಲ. ಇದರಿಂದ ತುಂಬ ಉಪಕೃತರಾಗಿದ್ದೇವೆ. ಆದ್ದರಿಂದ ಈ ತೆಪ್ಪಕ್ಕೆ ನಮ್ಮ ಕೃತಜ್ಞತೆಯನ್ನು ಸೂಚಿಸದಿದ್ದರೆ ತಪ್ಪಾಗುತ್ತದೆ. ಹೀಗೆಂದುಕೊಂಡು ಆ ನಾಲ್ಕೂ ಜನ, ತಮ್ಮ ಕೃತಜ್ಞತೆಯನ್ನು ಸೂಚಿಸಲು ಆ ತೆಪ್ಪವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಪ್ರಯಾಣವನ್ನು ಮುಂದುವರಿಸಿದರಂತೆ!

ಸ್ವಾತಂತ್ರೊ ತ್ತರ ಭಾರತದಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಕನ್ನಡಿಗರಾದ ನಾವು ತಾಳಿರುವ ನಿಲುವು ಇದೇ ರೀತಿಯಾಗಿದೆ. ಬಹುಶಃ ಇಡೀ ಇಂಡಿಯಾದ ಬಹುಪಾಲು ಜನತೆಯ ನಿಲುವೂ ಇದೇ. ಈ  ದೇಶದ ನಾವು ಇಂಗ್ಲಿಷ್ ಭಾಷೆ ಹಾಗೂ ಶಿಕ್ಷಣದ ಮೂಲಕ ಒಂದಾದೆವು. ಆ ಭಾಷೆಯ ಮೂಲಕ ಹರಿದು ಬಂದ ಪಶ್ಚಿಮದ ಹಾಗೂ ರಾಷ್ಟ್ರೀಯ ಭಾವನೆಗಳಿಂದ ಹೊಸ ಎಚ್ಚರವನ್ನು ಪಡೆದೆವು. ನಾವು ಆತ್ಮಪ್ರತ್ಯಯವುಳ್ಳ ಒಂದು ಜನಾಂಗವಾಗಿ ನಮ್ಮನ್ನು ನಿಯಂತ್ರಿಸುತ್ತಿದ್ದ ಪರಕೀಯ ಪ್ರಭುತ್ವವನ್ನು ಕಿತ್ತು ಒಗೆಯುವ ಸಂಕಲ್ಪ ಮಾಡಿದೆವು. ರಾಷ್ಟ್ರೀಯ ಚಳುವಳಿಯನ್ನು ಹೂಡಿ, ಹೋರಾಡಿ ದಾಸ್ಯದಿಂದ ವಿಮುಕ್ತರಾಗಿ, ಸ್ವಾತಂತ್ರ ವನ್ನು ಪಡೆದೆವು. ಈ ಬಗೆಯ ಎಚ್ಚರಿಕೆ ಮತ್ತು ಹೋರಾಟಕ್ಕೆ ನಾವು ಇಂಗ್ಲಿಷ್ ಭಾಷೆಯ ಮೂಲಕ ಪಡೆದ ತಿಳಿವಳಿಕೆಗಳು ಮತ್ತು ನಮ್ಮನ್ನೆಲ್ಲ ಒಂದುಗೂಡಿಸಿದ ಕ್ರಮ ಬಹು ಮುಖ್ಯವಾದ ಕಾರಣವೆನ್ನಬಹುದು.

ಆದರೆ ಸ್ವಾತಂತ್ರ  ಬಂದ ಮೇಲೂ ಸಹ ನಾವು ನಮಗೆ, ಈ ಹೋರಾಟಕ್ಕೆ ಅಗತ್ಯವಾದ ಐಕ್ಯತೆ ಹಾಗೂ ವೈಚಾರಿಕ ಎಚ್ಚರಗಳನ್ನು ತಂದುಕೊಟ್ಟಿತೆಂಬ ಕಾರಣದಿಂದ, ಕೇವಲ ಕೃತಜ್ಞತೆಯಿಂದ ಇಂದೂ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದ ಶಿಕ್ಷಣ ಮಾಧ್ಯಮವನ್ನಾಗಿ ಮುಂದುವರಿಸುತ್ತಿದ್ದೇವೆ. ಇಂದು ಹೇಗಿದೆ ಎಂದರೆ ಹೊಳೆಯನ್ನು ದಾಟಲು ನೆರವಾಯಿತೆಂಬ ಕಾರಣದಿಂದ ಹೊಳೆಯನ್ನು ದಾಟಿದ ನಂತರವೂ ಕೃತಜ್ಞತೆಯಿಂದ ತೆಪ್ಪವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವವರ ಎಗ್ಗತನದಂತೆ ತೋರುತ್ತದೆ.

ಈಗ ನಾವಿರುವುದು ಸ್ವತಂತ್ರ ಭಾರತದಲ್ಲಿ. ಸ್ವಾತಂತ್ರ  ಪೂರ್ವದಲ್ಲಿ ಇಂಗ್ಲಿಷ್ ಭಾಷೆ ನಮ್ಮ ಶಿಕ್ಷಣ ಹಾಗೂ ಆಡಳಿತ ಕ್ರಮದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದದ್ದಕ್ಕೆ ಚಾರಿತ್ರಿಕವಾದ ಕಾರಣಗಳಿವೆ. ಯಾವಾಗಲೂ ಆಳುವವರ ಭಾಷೆ ಅಲ್ಲಲ್ಲಿನ ಜನರ ಬದುಕನ್ನು ಆಳುವ ಭಾಷೆಯಾಗಿರುತ್ತದೆ. ಹಿಂದೆ ನಮ್ಮನ್ನು ಇಂಗ್ಲಿಷ್ ಆಳುತ್ತಿದ್ದದ್ದು ಸಹಜವಾಗಿದೆ.  ಈಗ ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋದ ಐದು ದಶಕಗಳ ಆನಂತರವೂ ಇಂಗ್ಲಿಷ್ ನಮ್ಮ ಬದುಕನ್ನು ಆಳುವ ಭಾಷೆಯಾಗಿರುವುದು ವಿಲಕ್ಷಣವಾಗಿದೆ. ಆಳುವವರ ಭಾಷೆ ಆಳುವ ಭಾಷೆಯಾಗಿರುತ್ತದೆ ಎಂಬ ಮಾತನ್ನು ಒಪ್ಪುವುದಾದರೆ, ಈಗ ನಮ್ಮನ್ನು ಆಳುತ್ತಿರುವವರು ಯಾರು? ಈ ನಮ್ಮನ್ನು ಆಳುತ್ತಿರುವವರು, ಹೊರಗಿನವರೇನಲ್ಲ; ನಮ್ಮವರೇ. ಕರ್ನಾಟಕದಲ್ಲಿ ಕನ್ನಡಿಗರು, ತಮಿಳುನಾಡಿನಲ್ಲಿ ತಮಿಳರು, ಕೇರಳದಲ್ಲಿ ಮಲೆಯಾಳಿಗಳು, ಆಂಧ್ರದಲ್ಲಿ ತೆಲುಗರು, ಮಹಾರಾಷ್ಟ್ರದಲ್ಲಿ ಮರಾಠರು. ಹೀಗೆ ಇಡೀ ಇಂಡಿಯಾದ ವಿವಿಧ ಭಾಷಾವಾರು ಪ್ರಾಂತ್ಯಗಳಲ್ಲಿ ಆಯಾ ಭಾಷೆಯನ್ನಾಡುವ ಜನ ಅಲ್ಲಲ್ಲಿ ತಮ್ಮ ರಾಜ್ಯಗಳನ್ನು ಆಳುತ್ತಾರೆ. ಹೀಗಿರುವಾಗ ಅವರವರ ರಾಜ್ಯಗಳಲ್ಲಿ ಅವರವರ ತಾಯಿ ನುಡಿ ಆಳುವ ಭಾಷೆಯಾಗಬೇಕು. ನಮ್ಮನ್ನು ನಮ್ಮ ಜನವೇ ಆಳುವಾಗ ನಮ್ಮದಲ್ಲದ ಭಾಷೆಯೊಂದು ಇನ್ನೂ ನಮ್ಮನ್ನು ಆಳುತ್ತಿರುವುದು ಅಥವಾ ಆಳಲು ಅವಕಾಶ ಮಾಡಿಕೊಟ್ಟಿರುವುದು ಅತ್ಯಂತ ಅಸಹಜ, ಅತಾರ್ಕಿಕ ಮತ್ತು ಅವಲಕ್ಷಣದ ಸಂಗತಿಯಾಗಿದೆ.

ಯಾಕೆ ಹೀಗಿದೆ? ಕಾರಣಗಳು ಹಲವು. ನಾವು ಬಹಿರಂಗದ ದಾಸ್ಯದಿಂದ ವಿಮುಕ್ತರಾಗಿದ್ದೇವೆ. ಆದರೆ ಇನ್ನೂ ಒಳಗಿನ ದಾಸ್ಯದಿಂದ ಮುಕ್ತವಾಗಿಲ್ಲ. ನಮ್ಮದಲ್ಲದ ಭಾಷೆಯಲ್ಲಿ ನಾವು ಏನು ಮಾಡಿದರೂ ಪರಿಗಣಿತರಾಗಲಾರೆವೆಂಬ ತಿಳಿವಳಿಕೆ ನಮಗೆ ಮೂಡುತ್ತಿಲ್ಲ. ಇಂಗ್ಲಿಷ್ ಅಂತರ್ ರಾಷ್ಟ್ರೀಯ ಭಾಷೆ ಎಂಬ ಸುಳ್ಳು ಕಾರಣಕ್ಕೆ, ಬಹುಭಾಷೆಗಳಿರುವ ಈ ದೇಶದಲ್ಲಿ ಇಂಗ್ಲಿಷ್ ಇನ್ನೂ ನಮ್ಮನ್ನು ಹಿಡಿದು ಕೂಡಿಸುವ ಶಕ್ತಿಯಾಗಿದೆ ಎಂಬ ಭ್ರಮೆಗೆ, ಇಂಗ್ಲಿಷ್ ಭಾಷೆಯ ಮೂಲಕ ಶಿಕ್ಷಣ ಪಡೆದರೆ, ಉದ್ಯೋಗ ಖಚಿತ ಎಂಬ ತಿಳುವಳಿಕೆಗೆ ನಾವು ಕಟ್ಟುಬಿದ್ದು ಇನ್ನೂ ಇಂಗ್ಲಿಷ್ ಅನ್ನು ಶಿಕ್ಷಣ ಮಾಧ್ಯಮವನ್ನಾಗಿ ಮುಂದುವರಿಸುತ್ತಿದ್ದೇವೆ.

ಈ ಹಲವು ಕಾರಣಗಳಲ್ಲಿ ಎಲ್ಲಕ್ಕಿಂತ ನಿಜವಾದದ್ದು ಕಡೆಯದು ಮತ್ತು ಅದು ಅನುಭವ ಸಿದ್ಧವಾದದ್ದು. ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದವರೇ ಉದ್ಯೋಗ ಕ್ಷೇತ್ರದ ಸ್ಪರ್ಧೆಯಲ್ಲಿ  ಮುಂದಾಳುಗಳಾಗಿ ಗೆಲ್ಲಬಲ್ಲರು ಎಂಬುದನ್ನು ಈ ದೇಶದ ನಡವಳಿಕೆ ನಿಜ ಮಾಡಿ ತೋರಿಸಿದೆ. ಶಿಕ್ಷಣದ ಗುರಿಯನ್ನು ಕುರಿತು ಎಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ ನಾಳಿನ ಉದ್ಯೋಗಕ್ಕೂ  ಈ ಹೊತ್ತು ನಾವು ಪಡೆಯುವ ಶಿಕ್ಷಣಕ್ಕೂ ಅನಿವಾರ್ಯವಾದ ನಂಟು ಇರುವ ನಮ್ಮ ದೇಶದ ಪರಿಸ್ಥಿತಿಯಲ್ಲಿ, ಯಾವ ಭಾಷೆಯ ಮೂಲಕ ಶಿಕ್ಷಣ ಪಡೆದರೆ ಉದ್ಯೋಗದ ಅವಕಾಶಗಳಿವೆ ಎಂಬುದನ್ನು ನಿರ್ಲಕ್ಷಿಸುವಷ್ಟು ದಡ್ಡರಲ್ಲ ಕನ್ನಡ ನಾಡಿನ ತಂದೆ ತಾಯಂದಿರು. ಆದುದರಿಂದಲೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಲು ಅವರು ಕಾತರರಾಗಿದ್ದಾರೆ.ಒಂದು ವೇಳೆ, ಕನ್ನಡ ಮಾಧ್ಯಮದ ಮೂಲಕ ಕಲಿತವರಿಗೇ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆಯನ್ನು ಕೊಡಲಾಗುವುದೆಂಬ ಔದ್ಯೋಗಿಕ ನೀತಿಯನ್ನು ನಾವು ಜಾರಿಗೆ ತಂದರೆ, ಆಗ ತಾನೇ ತಾನಾಗಿ ಕನ್ನಡ ಮಾಧ್ಯಮದ ಕಡೆ ನುಗ್ಗುತ್ತಾರೆ. ಇರುವ ಸಮಸ್ಯೆಯೇ ಇದು. ಎಲ್ಲಿಯವರೆಗೆ ಇಂಗ್ಲಿಷ್ ಮಾಧ್ಯಮದ ಮೂಲಕ ಶಿಕ್ಷಣ ಪಡೆದವರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡುವಂತಹ ಔದ್ಯೋಗಿಕ ನೀತಿಯನ್ನು ನಮ್ಮ ಸರ್ಕಾರ ಮುಂದುವರಿಸಿಕೊಂಡು ಹೋಗುವುದೋ, ಅಲ್ಲಿನ ತನಕ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಹಜವಾಗಿ ಸಲ್ಲಬೇಕಾದ ಸ್ಥಾನಮಾನಗಳು ಸಲ್ಲುವುದೇ ಇಲ್ಲ.

ಹೀಗೆಂದರೆ ಇವತ್ತು ನಮಗೆ ಇಂಗ್ಲಿಷ್ ಬೇಡ ಎಂದು ಈ ಮಾತಿನ ಅರ್ಥವಲ್ಲ. ನಮಗೆ ಖಂಡಿತ ಇಂಗ್ಲಿಷ್ ಬೇಕು. ಕನ್ನಡದ ಜೊತೆ ಇಂಗ್ಲಿಷ್ ಒಂದೇ ಯಾಕೆ, ಸಾಧ್ಯವಾಗಬಹುದಾದ ಇನ್ನೂ ಹಲವು ಭಾಷೆಗಳೂ ಬೇಕು. ಆದರೆ ಯಾರಿಗೆ, ಎಲ್ಲಿ, ಯಾವ ಭಾಷೆಗಳು ಎಷ್ಟು ಮಟ್ಟಿಗೆ ಬೇಕು ಎನ್ನುವುದು ಬೇರೆಯ ಪ್ರಶ್ನೆ. ಆದರೆ ಕನ್ನಡ ನಾಡಿನಲ್ಲಿ ಕನ್ನಡ ಕೇಂದ್ರ ಭಾಷೆಯಾಗಿರಬೇಕು, ಎಲ್ಲ ಹಂತಗಳಲ್ಲೂ ಅದು ಶಿಕ್ಷಣ ಹಾಗೂ ವ್ಯವಹಾರದ ಭಾಷೆಯಾಗಬೇಕು ಎಂಬ  ನಿಲುವು ಇಂಗ್ಲಿಷ್ ವಿರೋಧಿಯಾದದ್ದೆಂದು ಕೆಲವು ಚತುರರು ವ್ಯಾಖ್ಯಾನಿಸುತ್ತಾರೆ. ಅದು ತಪ್ಪು. ನಮಗೆ ಇಂಗ್ಲಿಷ್ ಬೇಕು. ಇಂಗ್ಲಿಷ್ ಮಾಧ್ಯಮ ಬೇಡ. ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಅಥವಾ ಸಾಹಿತ್ಯವನ್ನಾಗಿ ಓದುವುದು ಬೇರೆ; ಇಂಗ್ಲಿಷನ್ನು ಶಿಕ್ಷಣದ ಹಾಗೂ ಆಡಳಿತ ಮಾಧ್ಯಮವನ್ನಾಗಿ ಇರಿಸಿಕೊಳ್ಳುವುದು ಬೇರೆ.  ಈ ದೇಶದ ವಿಚಾರವಂತರು ಈಗಲಾದರೂ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಬೇಕಾಗಿದೆ.

ಚದುರಿದ ಚಿಂತನೆಗಳು : ೨೦೦೦