ಮರಗಳೇ ಅಲ್ಲ ಇವು-
ಈಗಲೋ ಆಗಲೋ ಹಾರಿಹೋಗಲೆಂದು
ಸದಾ ಗರಿಬಿಚ್ಚಿಕೊಂಡು ನಿಂತಿರುವ ಹಕ್ಕಿಗಳು
ಈ ತೆಂಗಿನ ಮರಗಳು !

ಶಾಖೋಪಶಾಖೆಗಳನ್ನು ಹರಡಿಕೊಂಡು
ನಿಂತ ಈ ಮಹಾವೃಕ್ಷಗಳು
ನೆಲದಿಂದ ಎತ್ತರಕ್ಕೆ ಹರಿದುಹೋಗುತ್ತಿರುವ
ಸ್ತಬ್ದವಾದ ಹಸುರಿನ ಪ್ರವಾಹಗಳು !
ಈ ಗಿಡಗಳು ಮತ್ತು ಬಳ್ಳಿಗಳು
ನೆಲದಿಂದ ಮೇಲಕ್ಕೆ ಸದಾ
ಪುಟಿಯುತ್ತಿರುವ ಚಿಲುಮೆಗಳು.
ನಾವು ಮಾತ್ರ ಈ ನೆಲದಲ್ಲಿ ಕಾಲೂರಿ
ನಿಂತಿದ್ದರೂ, ಕೇವಲ
ಈ ಮಣ್ಣಿಗಂಟಿಕೊಂಡೇ
ಬದುಕುವವರು
ಆದರೂ ಒಂದೊಂದು ಸಲ
ಆಕಾಶದ ಕನಸ ಕಾಣುವವರು.