ಇದೊಂದು ವಿಭಿನ್ನ ವೃಕ್ಷಸಂರಕ್ಷಣೆಯ ಯೋಜನೆ. ಕಾಡಿನಲ್ಲಿ ವರುಷಕ್ಕೆ ನೂರೆಂಟು ಜಾತಿಯ ತಲಾ ಹನ್ನೊಂದು ಗಿಡ ನಾಟಿ. ಒಮ್ಮೆ ನೆಟ್ಟ ಗಿಡಕ್ಕೆ ಮತ್ತೆ ಅವಕಾಶವಿಲ್ಲ.

ಸಾಗರ ತಾಲೂಕು ಹೊಸಗುಂದದ ‘ದೇವರ ಕಾಡಿನ’ ವಿಸ್ತಾರ ಆರುನೂರು ಎಕ್ರೆ. ಶರಾವತಿ ನದಿ ಕಣಿವೆಯ ಮೇಲ್ಭಾಗದಲ್ಲಿ ಬರುವ ಈ ಕಾಡಿಗೆ ಶತಮಾನದ ಇತಿಹಾಸ. ಒತ್ತಟ್ಟಿಗೆ ಇಷ್ಟಾದರೂ ದಟ್ಟಕಾಡು ಇಂದು ಕಾಣಸಿಗುವುದು ದುರ್ಲಭ.

ಕಾಡಿನ ಅಂಚಿನಲ್ಲೇ ಪ್ರಾಚೀನ  ಉಮಾಮಹೇಶ್ವರ ದೇವಾಲಯ ಕಾಯಕಲ್ಪಗೊಳ್ಳುತ್ತಿದೆ. ಶ್ರೀ ಉಮಾಮಹೇಶ್ವರೀ ಸೇವಾ ಟ್ರಸ್ಟ್‌ನಿಂದ ಇಲ್ಲೇ ಕಳೆದ ಮೂರು ವರುಷಗಳಿಂದ ಹಸಿರಿನ-ನೀರಿನ ಅರಿವು ಬಿತ್ತುವ ಕೆಲಸ ಪ್ರಗತಿಯಲ್ಲಿದೆ.

‘ನೂರೆಂಟು ಗಿಡ ಯೋಜನೆ’ – ನಾಶ ಆಗಿರುವ, ಆಗುತ್ತಿರುವ ಸಸ್ಯಗಳನ್ನು ಗುರುತು ಹಿಡಿದು ‘ದೇವರ ಕಾಡಿನಲ್ಲಿ’ ನೆಡುವ ಕಾರ್ಯಕ್ರಮ. ಐದು ವರುಷದ ಯೋಜನೆ. ಪ್ರತಿವರ್ಷವೂ ನೂರೆಂಟು ಬೇರೆಬೇರೆ ಗಿಡಗಳನ್ನು – ಪ್ರತಿಯೊಂದು ಜಾತಿಯದೂ ಹನ್ನೊಂದರಂತೆ ನೆಡುವುದು.  ವರುಷಕ್ಕೆ ೧೧೮೮ ಗಿಡ. ವರುಷಕ್ಕೆ ೧೧೮೮ ಗಿಡಗಳು, ಐದು ವರುಷದಲ್ಲಿ ೫೪೦ ಜಾತಿಯ ೫೭೪೦.

‘ಪ್ರತಿವರ್ಷವೂ ನೂರೆಂಟು ವಿವಿಧ ಸಸ್ಯಗಳನ್ನು ನೂರೆಂಟರಂತೆ ನೆಡುವ ಇರಾದೆಯಿತ್ತು. ಆದರೆ ಅಷ್ಟೊಂದು ಗಿಡಗಳ ತಯಾರಿ ಮತ್ತು ನಿರ್ವಹಣೆ ತ್ರಾಸ. ಹಾಗಾಗಿ ಹನ್ನೊಂದಕ್ಕೆ ಸೀಮಿತ’ ಎನ್ನುತ್ತಾರೆ ಟ್ರಸ್ಟ್‌ನ ಗೌರವಾಧ್ಯಕ್ಷ ಶ್ರೀ ಸಿ.ಎಂ.ಎನ್.ಶಾಸ್ತ್ರಿ.

೨೦೦೭ ಜೂನ್ ತಿಂಗಳಲ್ಲಿ ಮೊದಲ ಸುತ್ತಿನ ಗಿಡ ನಾಟಿಯ ಉದ್ಘಾಟನೆ. ‘ಇದಕ್ಕೆ ಸಸ್ಯಗಳ ಹುಡುಕಾಟ ಅಷ್ಟೊಂದು ಕಷ್ಟವಾಗಲಿಲ್ಲ. ಶೇ.೩೦ರಷ್ಟು ನರ್ಸರಿಗಳಲ್ಲಿ ಸುಲಭದಲ್ಲಿ ಸಿಕ್ಕವು. ಮಿಕ್ಕುಳಿದವುಗಳನ್ನು ನಾವೇ ಅಭಿವೃದ್ಧಿ ಮಾಡಿದ್ದೇವೆ, ನೋಡಿ’ ಎಂದು ನರ್ಸರಿಯೊಳಗೆ ಕರೆಯೊಯ್ಯುತ್ತಾರೆ ಉಮೇಶ ಅಡಿಗ. ಮುಂದಿನ ವರ್ಷಗಳಲ್ಲಿ ಗಿಡಗಳ ಆಯ್ಕೆ ಮತ್ತು ಸಂಗ್ರಹ ಹೆಚ್ಹೆಚ್ಚು ಕಠಿಣವಾಗುತ್ತಾ ಹೋಗಲಿದೆ.

‘ವನಮಹೋತ್ಸವಗಳಂತೆ ಗಿಡಗಳನ್ನು ನೆಟ್ಟು ಮರೆಯುವ ಯೋಜನೆ ಇದಲ್ಲ. ಎಲ್ಲಾ ಗಿಡಗಳು ಬದುಕಬೇಕು ಎಂಬ ಕಾಳಜಿ’. ಪ್ರಥಮ ವರುಷ ಅರ್ಧದಷ್ಟು ಕಾಡೊಳಗೆ ನೆಡಲಾಗಿದೆ. ಉಳಿದುದು ಕಾಡಿನ ಸರಹದ್ದಿನಲ್ಲಿ. ಪಶುಗಳಿಂದ ರಕ್ಷಿಸಲು ಪ್ರತಿ ಗಿಡಕ್ಕೂ ಬಲೆಯ ಕೋಟೆ. ನಿರಂತರ ನಿಗಾ.

ಸಸ್ಯಾಭಿವೃದ್ಧಿಯ ಪೂರ್ವದಲ್ಲಿ ಅದರ ಸಸ್ಯಶಾಸ್ತ್ರೀಯ ಹೆಸರು, ಗುಣ, ಯಾವ ಸಮಯದಲ್ಲಿ ನೆಡಬೇಕು – ಮುಂತಾದವುಗಳ ದಾಖಲಾತಿ. ‘ಗಿಡಗಳ ಹುಡುಕಾಟ ಕಷ್ಟ.  ಸಸ್ಯಗಳಲ್ಲಿ ಕೆಲವು ಒಂದೇ ಸಾಮ್ಯದವುಗಳಿರುತ್ತವೆ. ಅಂತಹವುಗಳ ಪತ್ತೆ ತ್ರಾಸಕರ. ಕೆಲವು ಗಿಡ ಸಿಕ್ತದೆ.  ವಿಳಾಸ ಗೊತ್ತಾಗದ ಸಸ್ಯಗಳು ನಮ್ಮ ಪಟ್ಟಿಯಿಂದ ಹೊರಗೆ.’

ಗಿಡಗಳನ್ನು ನೆಡುವ ಹಿಂದೆ ಕಾಡಿನ ಸಂರಕ್ಷಣೆಯ ಕಾಳಜಿಯಿದೆ. ಕೆಲವೊಂದು ಗಿಡಗಳು ಪಕ್ಷಿಗಳನ್ನು ಆಕರ್ಷಿಸುತ್ತವೆ. ಉದಾ: ದಾತಕೀಪುಷ್ಪ, ಕೆಂಪುಪೇರಳೆ, ಚೆರ್ರಿ ಹಣ್ಣು… ಇಂತಹ ಗಿಡಗಳು ಕಾಡಲ್ಲಿಲ್ಲದಿದ್ದರೆ ಪಕ್ಷಿಗಳೂ ದೂರವಾಗುತ್ತದೆ. ಕಾಡೆಂದಾಗ ಪಕ್ಷಿ, ವನ್ಯಜೀವಿ ಬೇಕಲ್ವಾ. ಹಾಗಾಗಿ ಮನುಷ್ಯರಿಗೆ ಉಪಯೋಗವಿಲ್ಲದಿದ್ದರೂ, ಪಕ್ಷಿಗಳಿಗಾಗಿಯೇ ನೆಡುವುದು ಅನಿವಾರ್ಯ- ಎನ್ನುತ್ತಾರೆ ಉಮೇಶ ಅಡಿಗ.

ಎಲ್ಲ ಗಿಡಗಳೂ ಕರ್ನಾಟಕದಲ್ಲಿ ಸಿಕ್ಕದು. ಹುಡುಕಾಟ ನಿರಂತರ. ಹಿಮಾಲಯದ ರುದ್ರಾಕ್ಷಿ ಇಲ್ಲೂ ಬೆಳೆಯುತ್ತದೆ. ಹಿಮಾಚಲ ಪ್ರದೇಶದ ಕಟುಕರೋಹಿಣಿ, ಜಟಮಾಸಿ… ಪತ್ತೆಯಾಗಬೇಕಷ್ಟೇ. ಅಂತಹ ಗಿಡಗಳ ಆಯ್ಕೆ. ಸಸ್ಯಾಭಿವೃದ್ಧಿಗೆ ಕೆಲವಕ್ಕೆ ಬೀಜಗಳ ಬಳಕೆಯಾದರೆ, ಕಟ್ಟಿಂಗ್‌ನಲ್ಲೇ ಬೆಳೆಸಬಹುದಾದದ್ದು ಕೆಲವು. ಕೆಲವು ಬೀಜಗಳದು ಸಮಸ್ಯೆ. ಮೊಳಕೆ ಬಾರದೆ ತಲೆನೋವು ತರುತ್ತವೆ.

ಅಡಿಗರದ್ದೇ ಆದ ಕೆಲವು ಪ್ರಯೋಗ ನೋಡಿ – ತುಳಸಿ ಮೊಳಕೆ ಬಾರದೆ ಅವರಿಗೆ ಕೈಕೊಡುತ್ತಿತ್ತು. ವಿಜ್ಞಾನಿಗಳನ್ನು ಕೇಳಿದರು. ಸಮಸ್ಯೆ ಪರಿಹಾರವಾಗಲಿಲ್ಲ. ಒಮ್ಮೆ ಬೀಜಗಳನ್ನು ಬಿತ್ತಿ ಕಾದು ಕುಳಿತರು. ಸಣ್ಣ ಇರುವೆಗಳು ಸ್ವಲ್ಪ ಹೊತ್ತಲ್ಲೇ ಬೀಜಗಳನ್ನು ಹೊತ್ತೊಯ್ಯುವುದನ್ನು ಕಂಡರು. ಕಳ್ಳ ಸಿಕ್ಕಿದ ಮೇಲೆ ಶಿಕ್ಷೆ ಬೇಕಲ್ವಾ! ತುಳಸಿ ಬೀಜಗಳಿಗೆ ಅರಸಿನವನ್ನು ಮಿಶ್ರ ಮಾಡಿ ಬಿತ್ತಿದರು. ಎಲ್ಲವೂ ಮೊಳಕೆಯೊಡೆಯಿತು.

ಜ್ಯೋತಿಷ್‌ಮತಿ – ಇದರ ಬೀಜವೂ ಹಾಗೆ. ಗೋಮೂತ್ರದಲ್ಲಿ ಎರಡು ದಿವಸ ನೆನೆಹಾಕಿ ಬಿತ್ತಿದರು. ಮೊಳಕೆ ಬಂತು.  ಮತ್ತೊಂದು ಗರುಡಫಲ. ಅದರ ಹಣ್ಣನ್ನು ಯಾವುದೋ ಪ್ರಾಣಿಪಕ್ಷಿ ತಿನ್ನುತ್ತವೆ. ಅವುಗಳ ಹಿಕ್ಕೆಯಲ್ಲಿ ದೊರೆತ ಬೀಜಗಳು ಮಾತ್ರ ಮೊಳಗೆ ಬರುತ್ತವಂತೆ ಅಂತೇ ಈ ಹಣ್ಣನ್ನು ಕಾಡುಕೋಣ, ಕಾಡೆಮ್ಮೆ ಅಥವಾ ಈ ಜಾತಿಗೆ ಸೇರಿದ ಪ್ರಾಣಿಗಳು ಮೆಟ್ಟಿದರೆ ಮಾತ್ರ ಅವು ಮೊಳಕೆ ಬರುತ್ತವೆ ಅಂತ ಅನುಭವಿಗಳು ಹೇಳುತ್ತಾರೆ. ಅದಿನ್ನೂ ಅನುಭವಕ್ಕೆ ಬಂದಿಲ್ಲ! ಇಂತಹ ಕೇಳಿದ,ಓದಿದ, ಮತ್ತು ಸ್ವತಃ ಮಾಡಿದ ಪ್ರಯೋಗಗಳು ಅಡಿಗರ ಬತ್ತಳಿಕೆಯಲ್ಲಿ ಬೇಕಾದಷ್ಟಿವೆ.

ದೇವರ ಕಾಡೊಳಗಿನ ಖಾಲಿ ಜಾಗದಲ್ಲಿ ಸದ್ಯ ಗಿಡಗಳನ್ನು ನೆಡಲಾಗುತ್ತದೆ. ಏನಿಲ್ಲವೆಂದರೂ ‘ಒಂದು ಗಿಡ ನೆಡುವ ಹಂತಕ್ಕೆ ಬೆಳೆಸಲು ಮುನ್ನೂರು ರೂಪಾಯಿ ವೆಚ್ಚ ಕೇಳುತ್ತದೆ’.

ಗಿಡ ನೆಡುವ, ಪೋಷಿಸುವ ಪ್ರತ್ಯಕ್ಷ ಪಾಠ ಊರವರಿಗೆ ಬೋನಸ್. ಉಳಿಸುವ-ಬೆಳೆಸುವ ಮನಸ್ಸು ಬೇಕು. ಸನಿಹದ ಐಗಿನಬೈಲು ಶಾಲೆಯ ವಿದ್ಯಾರ್ಥಿಗಳಿಗೆ ತುಳಸಿ, ಶತವಾರಿ, ಜೀರಿಗೆಮೆಣಸುಮುಂತಾದ ಕೃಷಿ ಪಾಠಗಳನ್ನು ಟ್ರಸ್ಟ್ ಹೇಳಿಕೊಟ್ಟಿದೆ. ಈ ಎಲ್ಲಾ ಕಾರ್ಯಕ್ರಮಗಳ ಹಿಂದೆ ‘ಫಲದಾಯಿ ಪೌಂಡೇಶನ್’ ಇದೆ.

ಯೋಜನೆ ಪೂರ್ಣಗೊಂಡ ಮೇಲೆ  ಇದು ಪಶ್ಚಿಮಘಟ್ಟಗಳ ಇದೊಂದು ಅತ್ಯಪೂರ್ವ ಜೀನ್‌ಪೂಲ್ ಸಂಗ್ರಹ ಆಗುವ ಸಾಧ್ಯತೆಯಿದೆ. ಮಲೆನಾಡಿನ ವಿನಾಶದಂಚಿನ ಯಾವುದಾದರೂ ಗಿಡಮರ ಉಳಿಸಬೇಕೆನ್ನುವವರು ಹನ್ನೊಂದು ಗಿಡ ಕೊಟ್ಟು ಈ ಕೆಲಸದಲ್ಲಿ ಕೈಜೋಡಿಸಬಹುದು.

ಫಲದಾ ಆಗ್ರೋ ರೀಸರ್ಚ್ ಪೌಂಡೇಶನ್ ಪ್ರೈ ಲಿ.,
೦೮೦-೨೮೬೦೩೨೧೪, ೨೮೬೦೩೨೧೫
adiga@phaladaagro.com
info@ phaladaagro.com