ಬಿ.ಎ., ಬಿ.ಕಾಂ., ಎಲ್‌.ಎಲ್‌.ಬಿ. ಪದವಿಗಳನ್ನು ತನ್ನ ಹೆಸರಿನ ಪಕ್ಕಕ್ಕೆ ಪೋಣಿಸಿಕೊಂಡಿರುವ ಶಿವಮೊಗ್ಗ ಸುಬ್ಬಣ್ಣ ವೃತ್ತಿಯಿಂದ ವಕೀಲ. ಎಂಕಮ್ಮನ ಟ್ಯಾಕ್ಸಿಯ ಪ್ರಾಕ್ಟೀಶನರು ಬೇರೆ. ಪ್ರಸ್ತುತ ನೋಟರಿಯೂ ಅಹುದು. ಆದರೆ  ಹಾಡುಗಾರಿಕೆಯನ್ನು ಇಂದಿಗೂ ಪ್ರವೃತ್ತಿಯಾಗಿಯೇ ಉಳಿಸಿಕೊಂಡಿರುವ ಸುಬ್ಬಣ್ಣನ ಹೆಸರು ಇಂದು ಸುಗಮಸಂಗೀತಗಾರರ ಜೊತೆಗೆ ಅಗ್ರಪಂಕ್ತಿಯಲ್ಲಿದೆ. ಬಾಲ್ಯದಿಂದಲೇ ತನ್ನ ತಾತ ಶಾಮಣ್ಣ, ರಾಮನಾಥನ್‌ ಹಾಗೂ ಎಂ.ಪ್ರಭಾಕರ್ ಅವರಿಂದ ಕರ್ನಾಟಕ ಸಂಗೀತವನ್ನು, ನಂತರ ಶೇಷಾದ್ರಿಗವಾಯಿ ಅವರಿಂದ ಉತ್ತರಾದಿ ಸಂಗೀತವನ್ನೂ ಸಾಕಷ್ಟು ಕಲಿತಿರುವ ಸುಬ್ಬಣ್ಣ ಇಂದು ಸುಗಮಸಂಗೀತ ಲೋಕದಲ್ಲಿ ಮೈಸೂರು ಅನಂತಸ್ವಾಮಿ, ಅಶ್ವಥ್‌, ಪುತ್ತೂರು ನರಸಿಂಹನಾಯಕ್‌, ಎಚ್‌.ಆರ್ .ಲೀಲಾವತಿ, ಇಂಥವರ ಸಾಲಿನಲ್ಲಿರುವವನು. ಅನಾದಿಕಾಲದಿಂದ ಹಾಡುತ್ತಿರುವ ಅನಂತು  ಈ ನಿಟ್ಟಿನಲ್ಲಿ ಇವರೆಲ್ಲರಿಗಿಂತ ಹಿರಿಯ. ನಂತರದವರೇ ಅಶ್ವಥ್‌. ಮುದ್ದುಕೃಷ್ಣ, ಹಳೆಬಂಡಿ, ಅತ್ರಿ , ರತ್ನಮಾಲ, ಮಾಲತಿಶರ್ಮ, ಇವರೆಲ್ಲಾ ಇತ್ತೀಚಿನವರು.

ಸದಾಕಾಲ ವೇದ, ಮಂತ್ರ, ಪೂಜೆ, ಪುನಸ್ಕಾರಗಳಲ್ಲೇ ಮುಳುಗಿದ್ದ ಅರ್ಚಕರ ವಂಶದ ಕುಡಿಯಾಗಿ ಜನಿಸಿದ ಸುಬ್ಬಣ್ಣನಿಗೆ ಸಾಹಿತ್ಯಶುದ್ಧಿ ಸ್ವಾಭಾವಿಕವಾಗಿ ರಕ್ತಗತವಾಗಿ ಹುಟ್ಟಿನಿಂದಲೇ ಬಂದದ್ದು. ಪಕ್ಕಾ ಪದೋಚ್ಛಾರಣೆಯೇ ಸುಬ್ಬಣ್ಣನ ಪ್ಲಸ್‌ ಪಾಯಿಂಟು. ಹರಿತವಾದ ಹತ್ಯಾರಿನಿಂದ ಕಲ್ಲಂಗಡಿಯನ್ನು ಕೊಚ್ಚುವ ಹಾಗೆ ಈತ ಗೀತಸಾಹಿತ್ಯದ ಪದ ವಿಭಾಗ ಮಾಡಿ ಚೊಕ್ಕವಾಗಿ ಹಾಡುವುದನ್ನು ಕೇಳಿದಾಗ ಯಾರಾದರೂ ಮೆಚ್ಚಲೇಬೇಕು.

ಆಕೃತಿಯಲ್ಲಿ, ಎತ್ತರದ ದೃಷ್ಟಿಯಿಂದ, ಇದ್ದ ಕಾಳಿಂಗರಾಯರೂ ಸೇರಿದಂತೆ, ಸುಗಮಸಂಗೀತ ಹಾಡುವ ಎಲ್ಲ ಕಲಾವಿದರೂ ಸಾಮಾನ್ಯವಗಿ ಕುಬ್ಜರ ಸಂತತಿಯವರೇ! ಅಶ್ವತ್ಥ ಒಬ್ಬರು ಈ ಮಾತಿಗೆ ಹೊರತು. ಇವರು ಎತ್ತರದಲ್ಲಿ ಎಲ್ಲರಿಗಿಂತ ಎತ್ತರದವರು. ಆಕೃತಿಯಲ್ಲಷ್ಟೇ ಅಲ್ಲ, ದನಿಯಲ್ಲೂ ಅಶ್ವಥ್‌ರ ದನಿ ಎಲ್ಲರದಕ್ಕಿಂತ ಎತ್ತರ. ಶಿಶುನಾಳ ಷರೀಫರ ಗೀತೆಗಳನ್ನು ಭಕ್ತಿ, ಭಾವ, ಚೈತನ್ಯಪೂರಿತವಾಗಿ ಹಾಡುತ್ತ ಅವಕ್ಕ ಚಾಲನೆ ಇತ್ತವರೇ ಅಶ್ವಥ್‌ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗದು. ಖ್ಯಾತ ಕವಿ ಎಸ್‌.ಎಲ್‌.ಲಕ್ಷ್ಮೀನಾರಾಯಣಭಟ್ಟರು, ದಿವಂಗತ ಪ್ರೊ|| ವೆಂಕಟರಾಮಪ್ಪನವರನ್ನು ಅತಿಯಾಗಿ ಹೋಲುವ ಅಶ್ವಥರನ್ನು ಆತ್ಮೀಯತೆಯಿಂದ ‘ದಾದಾ’ ಎನ್ನುತ್ತಾರೆ. ಸುಗಮಸಂಗೀತ ವಲಯದಲ್ಲಿಂದು ಸರ್ವರೀತಿಯಲ್ಲೂ ಎತ್ತರವಾಗಿರುವ ಅಶ್ವಥ್‌ ನಿಜಕ್ಕೂ ಒಬ್ಬ ‘ದಾದಾ’ ನೇ.

೧೯೬೪ ರಷ್ಟು ಹಿಂದೆಯೇ ಸಂಗೀತ ಅಕಾಡೆಮಿಯು ಏರ್ಪಡಿಸಿದ್ದ ಅಖಿಲ ಕರ್ನಾಟಕ ಸಂಗೀತ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ ಗಿಟ್ಟಿಸಿದ ಸುಬ್ಬಣ್ಣನ ಹೆಸರು ಹೆಚ್ಚಾಗಿ ಕೇಳಲಾರಂಭಿಸಿದ್ದು ೧೯೭೯ರಲ್ಲಿ, ಕಂಬಾರರ ‘ಕಾಡುಕುದುರೆ’ ಚಿತ್ರದಲ್ಲಿ ಈತ ಹಾಡಿದಾಗ. ‘ಕಾಡು ಕುದುರೆ ಓಡಿಬಂದಿತ್ತಾ’ ಎಂಬ ಹಾಡನ್ನು ಹಾಡಿ ಶ್ರೇಷ್ಠ ಹಿನ್ನೆಲೆ ಗಾಯಕನೆಂದು ರಾಷ್ಟ್ರೀಯ ಪ್ರಶಸ್ತಿ ಪಡೆದು ರಜತಕಮಲ ಸ್ವೀಕರಿಸಿದ ಸುಬ್ಬಣ್ಣನಿಗೆ ಆ ಸಮಯದಲ್ಲಿ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನದ ಸುರಿಮಳೆ, ಹಲವು ಹತ್ತು ಊರುಗಳಲ್ಲಿ.

‘ಕಾಡುಕುದುರೆ’ ಚಿತ್ರದ ಕಥೆ, ನಿರ್ದೇಶನ, ಸಂಗೀತ ಇವೆಲ್ಲಾ ಕಂಬಾರರದ್ದೆ. ಕಂಬಾರರಿಗೆ ಸುಬ್ಬಣ್ಣನನ್ನು ಪರಿಚಯಿಸಿದ ಹೆಗ್ಗಳಿಕೆ ಲಕ್ಷ್ಮೀನಾರಾಯಣಭಟ್ಟರದ್ದು. ಈ ‘ಕಾಡುಕುದುರೆ ಓಡಿ ಬಂದಿತ್ತಾ’ ಹಾಡು ಹಿಟ್ಟಾಯಿತು. ಇದಕ್ಕೂ ಮೊಲದಲು ಕಂಬಾರರ ‘ಕರಿಮಾಯಿ’ ಚಿತ್ರದಲ್ಲೂ ಸುಬ್ಬಣ್ಣ ಹಾಡಿದ್ದ . ಆದರೆ ಆ ಚಿತ್ರ ತೆರೆ ಕಾಣಲಿಲ್ಲ.

ನಂತರ ಅಶ್ವಥ್‌ರ ಸಂಗೀತ ನಿರ್ದೇಶನದ ‘ಶಿಶುನಾಳ ಷರೀಫ್‌ ಚಿತ್ರದಲ್ಲಿ “ಅಳಬೇಡ ತಂಗಿ ಅಳಬೇಡ” ಮತ್ತು ‘ಹಾಕಿದೆ ಜನಿವಾರವ’ ಹಾಡುಗಳನ್ನು ಹಾಡಿರುವುದು ಸುಬ್ಬಣ್ಣನೇ.

ಮೊದಲಿಗೆ ಕಂಬಾರರ ಚಿತ್ರ ‘ಕರಿಮಾಯಿ’ಯಲ್ಲಿ ಸುಬ್ಬಣ್ಣ ಹಾಡಿದಾಗ, ಹೊರಬಂದ ಧ್ವನಿತಟ್ಟೆಗಳ ಮೇಲೆ ‘ಹಾಡಿರುವವರು ಜಿ.ಸುಬ್ರಹ್ಮಣ್ಯಂ’ ಎಂದು ಛಾಪಿಸಲಾಗಿದೆ. ಸುಬ್ಬಣ್ಣನ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ ಎಂದೇ. ಆದರೆ ಆ ಸಮಯದಲ್ಲಿ ಈ ಧ್ವನಿತಟ್ಟೆಗಳನ್ನು ಆಲಿಸಿದವರೆಲ್ಲಾ ಅದರಲ್ಲಿ ಹಾಡಿರುವ ವ್ಯಕ್ತಿ ಖ್ಯಾತಿವೆತ್ತ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಎಂದೇ ಭಾವಿಸಿದರು. ಅಷ್ಟೇ ಏಕೆ, ಸಿಲೋನ್‌ ರೇಡಿಯೋ ಸಹ ಕರಿಮಾಯಿಯ ಹಾಡನ್ನು ಹಾಡಿರುವುದು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಎಂದೇ ಬಿತ್ತರಿಸಿ ಬಿಟ್ಟಿತು. ಈ ಗೊಂದಲವನ್ನೆಲ್ಲಾ ತಪ್ಪಿಸಲು ಕಂಬಾರರು ತಮ್ಮ ಎರಡನೇ ಚಿತ್ರ ‘ಕಾಡುಕುದುರೆ’ಯಲ್ಲಿ ಈ ಜಿ.ಸುಬ್ರಹ್ಮಣ್ಯಂ ಹಾಡಿದಾಗ ಈತನ ಹೆಸರನ್ನು ಶಿವಮೊಗ್ಗ ಸುಬ್ಬಣ್ಣ ಎಂದು ಕರೆದರು. ಜಿ.ಸುಬ್ರಹ್ಮಣ್ಯಂ ಶಿವಮೊಗ್ಗ ಸುಬ್ಬಣ್ಣನಾದುದು ಈ ರೀತಿಯ ಅನಿವಾರ್ಯದಿಂದ.

ರಜತಕಮಲವನ್ನು ಗಿಟ್ಟಿಸಿದ ತಾರುಣ್ಯದಲ್ಲಿ ತರುಣನಾಗಿದ್ದ ಸುಬ್ಬಣ್ಣನ ಸಾದಾ ಸಣ್ಣಮುಖ, ಸಮಾರಂಭ, ಸನ್ಮಾನ, ಚಪ್ಪಾಳೆಗಳ ಸಪ್ಪಳಕ್ಕೆ, ಹಬೆಯಾಡುವ ಎಣ್ಣೆಗೆ ಹಾಕಿದ ಹಸಿಹಪ್ಪಳದಂತೆ ಅರಳಿ ಅಗಲವಾಗಲಾರಂಭಿಸಿದಾಗ, ಈತನನ್ನು ಅಹಂಕಾರದ ಅಹಂ ಅಟಕಾಯಿಸಬಹುದೆಂದು ಭ್ರಮಿಸಿ, ‘ಹಾಡುವುದನ್ನು ಹವ್ಯಾಸವಾಗಷ್ಟೇ ಉಳಿಸಿಕೊಂಡು ಗುಣಮಟ್ಟದ ಕಡೆ ಗಮನ ಕೊಡಿ. ಕಾಸಿಗಾಗಿ ಕಂಠವನ್ನು ಬೇಕಾಬಿಟ್ಟಿ ಬಳಸಿಕೊಳ್ಳಬೇಡಿ’ ಎಂದು ಚುಚ್ಚುವ ರೀತಿಯಲ್ಲಿ ಎಚ್ಚರಿಕೆಯನ್ನಿತ್ತವರು ಬಿ.ಜಿ.ಎಲ್‌.ಸ್ವಾಮಿ. ಅಂದವರು ಅಂದದ್ದು ತಲೆಗೆ ತಟ್ಟಿದ್ದರಿಂದ ಸುಬ್ಬಣ್ಣ ಇಂದಿಗೂ ಹಾಡುವುದನ್ನು ಹವ್ಯಾಸವಾಗಿಯೇ ಇರಿಸಿಕೊಂಡಿದ್ದಾನೆ.

ಸುಬ್ಬಣ್ಣನ ಸಂಭ್ರಮದ ಜೀವನದಲ್ಲಿ ಮತ್ತೊಂದು ಮರೆಯಲಾಗದ ಸನ್ನಿವೇಶ. ರಾಷ್ಟ್ರಪ್ರಶಸ್ತಿಯನ್ನು ಹೊಡೆದ ಹೊಸತರಲ್ಲಿ ಸುಬ್ಬಣ್ಣನನ್ನು ಸನ್ಮಾನಿಸಲು ಹಿರೇಕೆರೂರಿನ ನಾಗರಿಕ ಸಂಘದವರು ಆಹ್ವಾನಿಸಿದ್ದರು. ಸುಬ್ಬಣ್ಣ ಸಿಂಗಾರಗೊಂಡು ವರಪೂಜೆಯ ಗಂಡಿನಂತೆ ಹೊರಟ. ಇನ್ನೇನು, ಆ ಕೆರೂರು ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಎನ್ನಬೇಕಿದ್ದರೆ ಈ ಸುಬ್ಬಣ್ಣನಿದ್ದ ಬಸ್ಸು ಠುಸ್ಸೆಂದು ಕೆಟ್ಟು ಕೂತಿತು . ಸರಿ. ಆಟೋಮೊಬೈಲ್‌ ಕೈಕೊಟ್ಟಾಗ ವಾಕೋಮೊಬೈಲೇ ಗತಿ ಎಂದುಕೊಂಡ ಸುಬ್ಬಣ್ಣ ಸನ್ಮಾನ ಮಾಡುವ ಸ್ಥಳವರೆಸಿ ಸರಸರನೆ ಹೊರಟ.

ಹೀಗೆ ಸ್ವಲ್ಪ ದೂರ ಕಳೆದಂತೆ, ಅಲ್ಲೊಂದು ದೊಡ್ಡ ಆಲದ ಮರ. ಅದರಡಿಯ ನೆರಳಲ್ಲಿ ಸೊಪ್ಪುಸೆದೆ ಸೇರಿಸಿ, ಗುಡ್ಡೆಯಾಗಿ ಪೇರಿಸಿ, ಅದಕ್ಕೊಡ್ಡಿದ್ದ ಉರಿ ಜ್ವಾಲೆಯಾಗ ಇ ಜಿಗಿಯುತ್ತಿರಲು, ಅದರ ಸುತ್ತ ಹತ್ತುಹದಿನಾರು ಹದಿಹರೆಯದ ವ್ಯಕ್ತಿಗಳು ತಮ್ಮ ತುಂಬುಶಕ್ತಿಯನ್ನು ಒಗ್ಗೂಡಿಸಿಕೊಂಡು ಜೋರಾಗಿ ಹಾಡುತ್ತ, ತಮಟೆಯ ಹೊಡೆತಕ್ಕೆ ತಕ್ಕಂತೆ ತಾಳಹಾಕುತ್ತ ಕೇಕೆಹಾಕಿಕೊಂಡು ಕುಣಿಯುತ್ತಿದ್ದುದು ಕಂಡುಬಂತು. ವಿಸ್ಮಿತನಾದ ಸುಬ್ಬಣ್ಣ ಅತ್ತ ಸಾಗುತ್ತಿದ್ದಂತೆ ಆ ಮುಗ್ಧಜೀವಿಗಳು ಹಾಡುತ್ತಿದ್ದುದು ತನ್ನ ಕೀರ್ತಿಗೆ ಕಳಶವನ್ನಿಟ್ಟ ‘ಕಾಡು ಕುದುರೆ ಓಡಿಬಂದಿತ್ತಾ’ ಎಂಬ ಹಾಡೇ! ಸುಬ್ಬಣ್ಣ ಹತ್ತಿರ ಹತ್ತಿರ ಹೋದ. ಆ ಹಾಡನ್ನು ಎತ್ತರದ ದನಿಯಲ್ಲಿ ಹಾಡುತ್ತ ಮೈಮರೆತು ಕುಣಿಯುತ್ತಿದ್ದ ಅವರ ಉತ್ಸಾಹಾನಂದಕ್ಕೆ ಮಾರುಹೋದ ಸುಬ್ಬಣ್ಣ, ತನ್ಮಯನಾಗಿ, ತನಗಾಗಿ ಹಿರೇಕರೂರಿನಲ್ಲಿ ಕಾದಿದ್ದ ಸಂಘ, ಸಮಾರಂಭ, ಸನ್ಮಾನ, ಇವೆಲ್ಲವನ್ನೂ ಮರೆತು ಆ ಹಾಡನ್ನು ಕೇಳುತ್ತ ಅಲ್ಲೇ ನಿಂತುಬಿಟ್ಟ.

ಹಾಡು ಮುಗಿಯಿತು. ಸುಬ್ಬಣ್ಣ ಜೋರಾಗಿ ಚಪ್ಪಾಳೆ ತಟ್ಟುತ್ತ ತನಗಾದ ಆನಂದವನ್ನು ವ್ಯಕ್ತಪಡಿಸುತ್ತಿದ್ದಂತೆ, ಟ್ರಿಮ್ಮಾಗಿ ಸೂಟುಬೂಟು ಟೈ ಧರಿಸಿ ನಿಂತಿದ್ದ ಈಸಿಟಿಸುಬ್ಬಣ್ಣನನ್ನು ಕಂಡ ಆ ಹಳ್ಳಿ ಹೈದರು ಅಚ್ಚರಿಯಿಂದ ಸುತ್ತುವರದು ನಿಂತಾಗಲೇ ಸುಬ್ಬಣ್ಣನಿಗೆ ಎಚ್ಚರ. ‘ನಾನು ಶಿವಮೊಗ್ಗಾದಿಂದ ಬಂದೆ. ಇಲ್ಲೇ ಹಿರೇಕೆರೂರಿನಲ್ಲಿ ಸ್ವಲ್ಪ ಕೆಲಸವಿತ್ತು. ಹಾಳಾದ್ದು ಬಸ್ಸು ಕೆಟ್ಹೋಯ್ತು. ಆದ್ರೆ ಅದು ಕೆಟ್ಟಿದ್ದು ಒಳ್ಳೇದೇ ಆಯ್ತು ಅನ್ನಿ. ಇಲ್ದಿದ್ರೆ ನಿಮ್ಮ ಹಾಡನ್ನ ಕೇಳೋ ಅದೃಷ್ಟ ಸಿಗ್ತಿರ್ಲಿಲ್ಲ’ ಎಂದು ನಕ್ಕ ಸುಬ್ಬಣ್ಣ, ಅವರೆಲ್ಲರತ್ತ ಕಣ್ಣಾಡಿಸಿ, ‘ಅಂದ್ಹಾಗೆ ನೀವೆಲ್ಲ ಯಾರು? ಎಂದ. ಆ ಗುಂಪಿನ ಮುಖಂಡ ‘ನಾವೆಲ್ಲ ಇಲ್ಲೇ ಹತ್ತಿಗಿರಣೀಲಿ ಕೆಲ್ಸ ಮಾಡ್ತೀವಿ ಬುದ್ಧೀ’ ಎಂದ. ನಂತರ ಸುಬ್ಬಣ್ಣ ‘ಭೇಷ್‌, ತುಂಬ ಚೆನ್ನಾಗಿ ಹಾಡ್ತೀರಿ. ಇದಲ್ದೇ ಇನ್ನೂ ಏನೇನು ಹಾಡ್ತೀರಿ?’ ಎನ್ನಲು ಆ ಮುಖಂಡ ‘ಬೇಕಾದಸ್ಟು ಪದ್ಗೋಳ್ನ ಆಡ್ತೀವಿ ಬುದ್ಧೀ, ಆದ್ರೆ ಈ ಕಾಡುಕುದ್ರೆ ಆಡು ನಮ್ಗೆಲ್ಲ ಬೋಕುಸಿ ಕೊಡ್ತದೆ. ಪಿಚ್ಚನಾಗೆ ಅದ್ಯಾವನೋ ಬಡ್ಡೀಐದ ಸುಬ್ಬಣ್ಣಾಂತ, ಅವ್ನಯ್ಯನ್‌, ಅದೇನು ಸೂಪರಾಗಿ ಆಡವ್ನೇಂತೀರಿ!, ಏಟ್ದಪ ಕೇಳದ್ರು ಮತ್ತೆ ಕೇಳವಾಂತ ಅನ್ನಸ್ತದೆ. ಅವ್ನೂ ಸಿವಮೊಗ್ದಾಗೆ ಅವ್ನಂತೆ. ನೀವು ಅಲ್ಲೀವ್ರೆ ಅಂದ್ಮ್ಯಾಗೆ ನಿಮ್ಗವ ಗೊತ್ರಾ? ಎನ್ನಲು, ಆ ಅರಿಯದವರಿಂದ ನಿಂದಾಸ್ತುತಿಯಿಂದ ಆನಂದತುಂದಿಲನಾದರೂ ತೋರ್ಗೊಡದೆ ತಲೆಯಾಡಿಸಿದ ಸುಬ್ಬಣ್ಣ, ‘ಇಲ್ಲಿಲ್ಲ, ನಾನು ಅವನ ಬಗ್ಗೆ ಕೇಳಿದ್ದೇನ್ಯೇ ಹೊರತು ಕಂಡಿಲ್ಲ ಎಂದು ಹೇಳಿ, ಇನ್ನಲ್ಲಿ ಹೆಚ್ಚು ಹೊತ್ತು ನಿಂತರೆ ತಾನಾರೆಂಬುದನ್ನು ಇನ್ನಷ್ಟು ಅಮರಕೋಶದ ಮಾತುಗಳನ್ನು ಆಡಿಯಾರು ಎಂದು ಅಂಜಿದ ಸುಬ್ಬಣ್ಣ, ಅವರೆಲ್ಲರಿಗೂ ವಂದಿಸಿ ಕೆರೂರಿನ ಕಡೆ ಕಾಲು ಹಾಕಿದಾಗ ‘ಕಾಡುಕುದುರೆ ಓಡಿ ಬಂದಿತ್ತಾ’ ಹಾಡು ಕಿವಿಯಲ್ಲಿ ಗುಯ್ಗುಟ್ಟುತ್ತಿರಲು ಈತನ ನಡಿಗೆಯೂ ತನಗೆ ತಾನೇ ಕುದುರೆಯ ನಡಿಗೆಯಂತೆ ಕುದುರಿತು.

ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರನಾಗಿರುವ ಸುಬ್ಬಣ್ಣ ಹಾಡುವಾಗ ಹೆಚ್ಚಾಗಿ ಬಳಸುವುದು ತರಂಗಿಣಿ, ತಬಲ, ಪಿಟೀಲು, ಹಾರ್ಮೋನಿಯಂ, ಇವಿಷ್ಟನ್ನೆ. ತರಂಗಿಣಿ ವಾದಕ ಬಿ.ವಿ.ರಾಧಾಕೃಷ್ಣ ಸುಬ್ಬಣ್ಣನ ಬಲಗೈ ಬಂಟ. ಆಕಾಶವಾಣಿಗೆ ಅಡಿಯಿರಿಸಿದ್ದು ಖ್ಯಾತ ಗಾಯಕಿ ಹೆಚ್‌.ಆರ್.ಲೀಲಾವತಿಯವರು ತೋರಿದ ಪ್ರೋತ್ಸಾಹ ಹಾಗೂ ಪ್ರಚೋದನೆಯಿಂದ. ಈಗಲ್ಲಿ ‘ಎ’ ಗ್ರೇಡ್‌ ಕಲಾವಿದನೆನಿಸಿರುವ ಸುಬ್ಬಣ್ಣ ಇತ್ತೀಚಿಗೆ ಸುಗಮಸಂಗೀತವನ್ನು ಬಾನುಲಿಯ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಹಾಡಿದ್ದು ಅವನ ಹೆಗ್ಗಳಿಕೆ.

ಬೆಂಗಳೂರು ಬನಶಂಕರಿಯಲ್ಲಿ ಭಾರಿಸೈಟು. ಕರುಣಿಸಿದ್ದು ರಾಮಕೃಷ್ಣಹೆಗಡೆ. ಕಟ್ಟಿರುವ ಮನೆಯ ವಿಸ್ತೀರ್ಣ ಹದಿನಾರು ಚದುರ. ಹೆಸರು ‘ಶ್ರೀಗಣೇಶ’.

ಸುಬ್ಬಣ್ಣನ ಮಡದಿ ಶಾಂತ. ಇವರಿಬ್ಬರಿಗೆ ಇಬ್ಬರು ಮಕ್ಕಳು. ಮಗಳು ಬಾಗೇಶ್ರೀ ಬಲು ಬುದ್ಧಿವಂತೆ. ಎಂ.ಎ.ಇಂಗ್ಲೀಷಿನಲ್ಲಿ ಮೊದಲ ರ‍್ಯಂಆಕ್‌ಗಳಿಸಿದ ಈಕೆ ಈಗ ಡೆಕನ್‌ಹೆರಾಲ್ಡಿನ ಸಹಸಂಪಾದಕಿ. ಮಗ ಶ್ರೀರಂಗ ಅಕ್ಕನಂತೆಯೇ ಅತಿ ಬುದ್ಧಿವಂತ. ಎಲ್‌.ಎಲ್‌.ಬಿ. ಪದವೀಧರನಾದ ಈತ ಅಪ್ಪ ಹಾಕಿದ ಆಲದಮರಕ್ಕೆ ಜೋತುಬೀಳುವ ಜಾಣತನವನ್ನು ತೋರುತ್ತಿದ್ದಾನೆ.

ಸಿ.ಆರ್. ಸಿಂಹರ ‘ರಸ ಋಷಿ ಕುವೆಂಪು’ಗೆ ಸಂಗೀತ ನಿರ್ದೇಶಿಸಿರುವ ಸುಬ್ಬಣ್ಣ ಹಲವು ಬಾರಿ ನಮ್ಮ ಮನೆಗೆ ಬಂದಿರುವುದುಂಟು. ನಾವು ಕೇಳಿದ ಕೇಳದ ಹಾಡುಗಳನ್ನು ಯಾವ ಬೀಗು ಬಿನ್ನಾಣವನ್ನು ತೋರದೆ ಈತ ಹಾಡುವುದುಂಟು. ನಾ ಕಂಡಿರುವಂತೆ ನಮ್ಮ ಸುಬ್ಬಣ್ಣ ನಿಜಕ್ಕೂ ಸರಳರಲ್ಲಿ ಸರಳ. ಇಂತಹ ವ್ಯಕ್ತಿ ಸಿಗುವುದು ವಿರಳ, ಅತಿವಿರಳ.

* * *