ನೆಹರೂಜಿ ಪಕ್ಕ ನಿಂತು ರಾಷ್ಟ್ರಗೀತೆಯನ್ನು ಹಾಡುವ ಸೌಭಾಗ್ಯ ಎಷ್ಟು ಜನರಿಗೆ ತಾನೇ ಸಿಕ್ಕೀತು? ವಿಷಯ ತಿಳಿದೊಡನೆಯೇ ಕೆಂಪುಮುಖದ ಸುಬ್ಬಣ್ಣನ ಮುಖ ಮತ್ತಷ್ಟು ಕೆಂಪಾಯಿತು. ರೋಮಾಂಚನಗೊಂಡ ಸುಬ್ಬಣ್ಣ ಕ್ಷಣ ಕಾಲ ಕಂಪಿಸಿದ. ‘ರಾಷ್ಟ್ರಗೀತೆ ಹಾಡೋವಾಗ ಅಪ್ಪಿತಪ್ಪಿ ಅಪಸ್ವರ ಬಂದ್ರೂ ನೆಹರೂಜಿ ಕಪಾಳಕ್ಕೆ ತಟ್ಟಿಬಿಡ್ತಾರಂತೋ, ಹುಷಾರು, ಚೆನ್ನಾಗಿ ಅಭ್ಯಾಸ ಮಾಡ್ಕೊ, ಇಲ್ದಿದ್ರೆ ಅಷ್ಟು ಜನರೆದುರ್ಗೆ ಅಭಾಸವಾದೀತು’ ಎಂದು ಸುಬ್ಬಣ್ಣನನ್ನು ಸೋಮಣ್ಣ (ಹೆಚ್‌.ಚಿ. ಸೋಮಶೇಖರರಾವ್‌) ಹೆದರಿಸಿಯೂ ಬಿಟ್ಟ.

ಅಭ್ಯಾಸ ಮಾಡುವುದೆಲ್ಲಿ, ಅದೂ ಆ ಆಹೋರಾತ್ರಿಯಲ್ಲಿ? ಈ ಇಬ್ಬರೂ ಶಾರದಾವಿಲಾಸ್‌ ಕಾಲೇಜಿನ ಒಳಾಂಗಣವನ್ನು ಹೊಕ್ಕರು. ಅಲ್ಲಿ ಅಂದು ರಾತ್ರಿ ಎರಡು ಘಂಟೆಯವರೆವಿಗೂ ಕಾಲಾವಧಿಯನ್ನನುಸರಿಸಿ ‘ಜನಗಣಮನ’ವನ್ನು ಸುಬ್ಬಣ್ಣ (ಶಿವಮೊಗ್ಗ ಸುಬ್ಬಣ್ಣ) ಅಭ್ಯಾಸ ಮಾಡಿದ್ದೂ ಮಾಡಿದ್ದೆ. ಸೋಮಣ್ಣ ಸಿಗರೇಟು ಉರುಬುತ್ತ ಕೇಳಿದ್ದು ಕೇಳಿದ್ದೆ. ಅಂತೂ ರಾಷ್ಟ್ರಗೀತೆಯನ್ನು ಚೊಕ್ಕವಾಗಿ ಹಾಡುವ ತಯಾರಿ ಮುಗಿಯಿತು. ಇನ್ನು ಉಳಿದದ್ದು ಸುಬ್ಬಣ್ಣನನ್ನು ಸಿಂಗರಿಸಬೇಕೆಂದಿದ್ದ ಜುಬ್ಬ, ಪೈಜಾಮ, ವಗೈರೆಗಳನ್ನು ತರುವ ತಯಾರಿ. ‘ಅವನ್ನ ಬೆಳಿಗ್ಗೆ ಹೊಂದಸ್ಕೊಡ್ತೀನಿ. ಈಗ್ಸಾಕು, ಹೊತ್ತಾಗಿದೆ ಬಾ ಮಲಗೋಣ ಎಂದು ಸೋಮಣ್ಣನೆನ್ನಲು ಇಬ್ಬರೂ ಅನಂತುವಿನ ಮನೆಗೆ ಹೋದರು. ಪರಿಚಿತನಿದ್ದ ಅಗಸ ನಾಗಣ್ಣ ಬೆಳಿಗ್ಗೆ ಎಷ್ಟು ಹೊತ್ತಿಗೆ ಬಾಗಿಲು ತೆಗೆದಾನೋ ಎಂದು ಚಿಂತಿಸುತ್ತಲೇ ಮುದುಡಿ ಮಲಗಿಕೊಂಡ ಸೋಮಣ್ಣ.

ಬೆಳಗಾಗುತ್ತಿದ್ದಂತೆ ಸುಬ್ಬಣ್ಣ, ಸೋಮಣ್ಣ, ಈ ಇಬ್ಬರೂ ಅಗಸ ನಾಗಣ್ಣನ ಅಂಗಡಿಯ ಮುಂದೆ ಕುಳುತು ಅವನು ಬಾಗಿಲು ತೆಗೆಯುವುದನ್ನೇ ಬಕಪಕ್ಷಿಗಳಂತೆ ಕಾಯುತ್ತಿದ್ದರು. ಕುಂಟಗಸ ನಾಗಣ್ಣ ಎಂಟರ ಹೊತ್ತಿಗೆ ಬಂದ. ಅಂಗಡಿಯ ಮುಂದೆ ಅಂಡೂರಿ ಭಂಗಿ ಸೇದುತ್ತಿದ್ದ ಸೋಮಣ್ಣನನ್ನು ಕಂಡ ನಾಗಣ್ಣ, ‘ಆಯ್ತೋಲಾಯ್ತು, ಬೆಳ್ಳಂಬೆಳಿಗ್ಗೇನೆ ಬಾಗಲ್ಮುಂದೆ ಈ ಒಂಟಿ ಬಡಬ್ರಾಹ್ಮಣ ಬೈಠಕ್‌ ಹೂಡಿದ್ದಾನೇಂದ್ಮೇಲೆ ಈವತ್ತು ಬಿಸಿನೆಸ್ಸೇನೂ ಆಗೋಲ್ಲಾ. ಬಾಗಿಲು ಬಿಚ್ಚೇನು ಪ್ರಯೋಜನ?’ ಎನ್ನುತ ಸುಬ್ಬಣ್ಣನ ಕಡೆ ನೋಡಿದ ಕಸಿವಿಸಿಯಿಂದ. ಸೋಮು ಅವನತ್ತ ಅಷ್ಟಾವಂಕನ ಪೋಸ್ಕೊಟ್ಟು, ‘ಒಂಟ ಈ ಬ್ರಾಹ್ಮಣಾಂತ ಬೇಸರಪಟ್ಕೋಬ್ಯಾಡ್ವೋ ಕುಂಟ ನನ್ಮಗನೇ. ಪರಂಗಿಯವನಂತೆ ಕಂಡ್ರು ಇವ್ನೂ ಬೊಮ್ಮನ್ನೇ’ ಎಂದು ಪಕ್ಕದಲ್ಲಿ ಅಮರಿದ್ದ ಸುಬ್ಬಣ್ಣನನ್ನು ತೋರಿಸಿದ. ಅವನನ್ನು ದಿಟ್ಟಿಸಿದ ನಾಗಣ್ಣ, ‘ಹಾಗಾದ್ರೆ ನೀವು ಬ್ರಾಮಿನ್ಸಾ?’ ಎನ್ನಲು, ರಾಷ್ಟ್ರಗೀತೆಯ ಗುಂಗಿನಲ್ಲೇ ಇದ್ದ ಸುಬ್ಬಣ್ಣ, ‘ಅಲ್ಲಲ್ಲ, ನಾವು ಸ್ಮಾರ್ತರು’ ಎಂದ. ಈ ಮಾತು ಕೇಳಿ ಘಟ್ಟಿಯಾಗಿ ನಗುತ್ತಾ ‘ಸ್ಮಾರ್ತರೂ ಬೊಮ್ಮನ್ರೇ ಅಲ್ವೇನ್ಲಾ?’ ಎಂದು  ನಾಗಣ್ಣನೆನ್ನಲು, ಸೋಮಣ್ಣ, ಅವುಡುಗಚ್ಚಿ ಕುಳಿತಿದ್ದ ಸುಬ್ಬಣ್ಣನ ತಲೆಯ ಮೇಲೆ ಮಟುಕಿ, ‘ಮಂಗ್ಯಾ ಮಂಗ್ಯಾ, ಈ ಮಡಿವಾಳನಿಗೆ ಗೊತ್ತಿರೋದೂ ಬ್ರಾಹ್ಣಣನಾದ ನಿನಗೇ ಗೊತ್ತಿಲ್ವಲ್ಲೋ’ ಎನ್ನುತ್ತಾ ಈ ಇಬ್ಬರು ಬ್ರಾಹ್ಮಣದ್ವಯರು ಪಕ್ಕ ಸರಿಯಲು ಮೆಟ್ಟಲೇರಿದ ನಾಗಣ್ಣ ತನ್ನ ಅಂಗಡಿಯ ಬಾಗಿಲನ್ನು ತೆರೆದ.  ಪರಕೆಯಾಡಿಸಿ, ಗುಡಿಸಿದ ಶಾಸ್ತ್ರ ಮಾಡಿ, ಅಂಗಡಿಯ ಮುಂದಿಷ್ಟು ನೀರು ಚಿಮುಕಿಸಿ , ಒಳಬಂದು, ಗಂಧದ ಕಡ್ಡಿಯನ್ನು ಹಚ್ಚಿ, ಇಸ್ತ್ರೀಪೆಟ್ಟಿಗೆಗೆ ಅದರಿಂದಲೇ ಧೂಪಾರತಿ ಬೆಳಗಿ, ಬಸವೇಶ್ವರನ ಚಿತ್ರಕ್ಕೂ ಆ ಧೂಮವನ್ನು ಬಿಟ್ಟು, ಅದರ ಚೌಕಟ್ಟಿನ ಕೆಳಮೂಲೆಯ ಬಿರುಕಿನಲ್ಲಿ ಹಿಂದಲ ದಿನದ ಊದುಬತ್ತಿ ಉರಿದು ಆರಿ ಉಳಿದಿದ್ದ ಆ ಕಡ್ಡಿಯ ಲೇಶಾಂಶವನ್ನು ಕಿತ್ತೆಸೆದು, ಮತ್ತೆ ಅದೇ ಬಿರುಕಿನಲ್ಲಿ ಇಂದು ಹಚ್ಚಿ ಹೊಗೆಯಾಡುತ್ತಿದ್ದ ಹೊಸಬತ್ತಿಯನ್ನು ಸಿಕ್ಕಿಸಿ, ದಶದಿಕ್ಕುಗಳಿಗೂ ಕೈಮುಗಿದು, ನಂತರ ಕಿಸೆಯಿಂದ ಗಣೇಶ ಬೀಡಿಯ ಹೊಸಕಟ್ಟನ್ನು ಹೊರತೆಗೆದು, ಮೊಸರು ಕಡೆಯುವಂತೆ ಅದನ್ನು ತನ್ನೆರಡು ಹಸ್ತಗಳಿಂದಲೂ ಹೊಸಕಿ, ನಂತರ ಕಟ್ಟಿನ ಮೇಲಿನ ಲೇಬಲ್‌ ಇರುವ ಭಾಗವನ್ನು ಕಿಂಚಿತ್‌ ಹರಿದು, ಕಟ್ಟಿನ ಕೆಳಭಾಗವನ್ನು ಬಲಹಸ್ತದ ಹೆಬ್ಬೆಟ್ಟಿನಿಂದ ಅದುಮಲು, ಮೇಲಕ್ಕೆ ಮೊಳೆತು ಬಂದ ಹಲವು ಬೀಡಿಗಳ ಪೈಕಿ ಒಂದನ್ನು ಎಳೆದುಕೊಂಡು, ಅದರ ಮುಂಭಾಗವನ್ನು ಎರಡುಬಾರಿ ಉರುಬಿ, ನಂತರ ಹಿಂಭಾಗವನ್ನು ಕಚ್ಚಿಕೊಂಡು ಬೀಡಿಯ ಅರ್ಧದಷ್ಟು ಉದ್ದವನ್ನು ದವಡೆಯಲ್ಲಿ ಒತ್ತರಿಸಿಕೊಂಡು, ಚಿತಾಫೈಟಿನ ಕಡ್ಡಿಯನ್ನು ಚರ್ರ‍ನೆ ಗೀರಿ, ಬೀಡಿಯ ಮುಂತುದಿಗೆ ಬೆಂಕಿ ತಾಗಿಸಿ, ದಮ್ಮಿಂದ ಧೂಮವಳೆದುಕೊಂಡು’ ನಂತರ ಬಾಯ್ಮೂಗುಗಳಿಂದ ಏಕಕಾಲದಲ್ಲಿ ಹೊಗೆಕಾರುತ್ತ, ಮಂದಹಾಸದ ಮುಗುಳ್ನಗೆ ಬೀರಿ ‘ಏನು ಸೋಮಣ್ಣ ಸಮಾಚಾರ’ ಅಂದ.

ಇದುವರೆಗೂ ತಾಳ್ಮೆಯಿಂದಿದ್ದ ಸೋಮು, ‘ಮುಗೀತು ತಾನೆ ನಿನ್ನ ಯಜ್ಞ, ಯಾಗ ಎಲ್ಲವೊವೆ? ನೋಡು ನಾಗಣ್ಣ, ಈವತ್ತು ನೆಹರೂ ಬರ್ತಾರೆ. ಟೌನ್‌ಹಾಲಿನಲ್ಲಿ ಅವರ ಭಾಷಣ. ಅವರ ಭಾಷಣ ಮುಗದ್ಮೇಲೆ ಈ ಸುಬ್ಬಣ್ಣ ಜನಗಣಮನ ಹಾಡ್ಬೇಕು. ಅದನ್ನ ಕಾಂಗ್ರೇಸ್‌ ಡ್ರೆಸ್‌ ಹಾಕ್ಕೊಂಡೇ ಹಾಡ್ಬೇಕೂಂತ ಸಾಹುಕಾರ್ ಚೆನ್ನಯ್ಯನವರು ಹೇಳಿದ್ದಾರೆ’ ಎಂದು ಪೀಠಿಕೆ ಹಾಕಿದ. ಇದನ್ನೆಲ್ಲಾ ಕೇಳಿದ ನಾಗಣ್ಣ, ‘ಆಯ್ತು, ಅದಕ್ಕೆ ನಾನೇನ್ಮಾಡ್ಲೀ? ಎಂದು ರಾಗವೆಳೆದ. ಅದಕ್ಕೆ ಸೋಮಣ್ಣ ನಾಗಣ್ಣನನ್ನು ಪುಸಲಾಯಿಸುತ್ತ ‘ಇನ್ನೇನಿಲ್ಲ, ಇವನ ಹತ್ರ ಜುಬ್ಬ ಪೈಜಾಮ ಇಲ್ಲ. ಅವನ್ನು ಹೊಂದಸ್ಕೊಡೋದು ನಿನ್ನ ಭಾರ ನಾಗಣ್ಣಿ’ ಅಂದ ಮುದ್ದಾಗಿ.  ನಾಗಣ್ಣಿ ತಲೆಯಾಡಿಸುತ್ತ, ‘ಅದೆಲ್ಲ ಆಗದ್ಮಾತು. ವಾಷಿಂಗೆಗೇಂತ ಯಾರ್ಯಾರೋ ಕೊಟ್ಟಿರೋ ಬಟ್ಟೇನ ನಿಮಗೆ ಕೊಡೋದು ಹ್ಯಾಗೆ? ಪಾರ್ಟಿಗೇನಾದ್ರೂ ಗೊತ್ತಾದ್ರೆ ನನ್ನೇ ಈ ಟೇಬಲ್‌ ಮೇಲೆ ಮಲಗ್ಸಿ ಇಸ್ತ್ರೀ ಮಾಡ್ಬಿಡ್ತಾರೆ ಅಷ್ಟೆ . ಅದೆಲ್ಲಾ ಆಗೋಲ್ಲಾ’ ಎಂದು ಕೈಯಾಡಿಸಿದ. ಸೋಮಣ್ಣ, ಸುಬ್ಬಣ್ಣ ಇಬ್ಬರೂ ಗೋಗರೆದರು. ಬಿಕ್ಕತ್ತು ಬೇಡಿದರು. ಬೆದರಿಸಿದರು. ಉಹು, ಏನು ಮಾಡಿದರೂ ನಾಗಣ್ಣ ಜಗ್ಗಲಿಲ್ಲ. ‘ಜುಬ್ಬ ಪೈಜಾಮ ಕೊಡುವುದು ಖಂಡಿತ ಸಾಧ್ಯವಿಲ್ಲ’ ಎಂಧು ಅಧೋಮುಖನಾಗಿ ಬೀಡಿ ಎಳೆಯುತ್ತ ಕುಳಿತುಬಿಟ್ಟ ನಾಗಣ್ಣ.

ಈ ನಿಮಿರಿರುವ ನಾಗಣ್ಣನನ್ನು ನಲುಗಿಸುವುದು ಹೇಗೆಂದು ಸೋಮಣ್ಣ ಯೋಚಿಸಿದ. ಹೊಳೆಯಿತು. ಇಂಗು ತಿಂದ ಮಂಗನಂತೆ ಮುಸುಡಿ ಮಾಡಿಕೊಂಡು ಮೆತ್ತಗಿದ್ದ ಸುಬ್ಬಣ್ಣನ ಕಿವಿಯಲ್ಲಿ, ‘ಸುಮ್ನಿದ್ರೀಗ ಸಾಧ್ಯವಾಗೋಲ್ಲಾ ಸುಬ್ಬಣ್ಣೀ. ಕಾರ್ಯ ವಾಸೀ ಕತ್ತೆ ಕಾಲ್ಕಟ್ಕೋಂತ ಕೇಳಿಲ್ವೇ?’ ಎಂದು ಗದರಿದ. ತಬ್ಬಿಬ್ಬಾದ ಸುಬ್ಬಣ್ಣ, ‘ಕಟ್ಕೊಳ್ಳೋಕೆ ಕತ್ತೆ ಇಲ್ಲೆಲ್ಲಿದೆ ಸೋಮಣ್ಣ?’ ಅಂದ. ರಂಗೇರಿದ ಸೋಮಣ್ಣ, ‘ನಿನ್ತಲೆ, ಕತ್ತೆ ಇಲ್ದಿದ್ರೇನು, ಕತ್ತೆ ಯಜಮಾನನೇ ಇವ್ನಲ್ವೇ. ಇವನ ಕಾಲ್ನೇ ಕಟ್ಕೊಳ್ಳೋ ಕಮಂಗಿ’ ಎಂದ. ಏನೂ ತೋಚ ಸುಬ್ಬಣ್ಣ ನಾಗಣ್ಣನ ಕೈಗಳೆರಡನ್ನು ಹಿಡಿದು, ‘ನಾಗಣ್ಣೋರೆ, ಇದು ನಿಮ್ಮ ಕೈಗಳಲ್ಲ, ಕಾಲ್ಗಳೂಂತ ತಿಳ್ಕೊಳ್ಳಿ. ಹಿಡ್ಕೊಂಡಿದ್ದೀನಿ, ಕಾಪಾಡ್ಬೇಕಲು’ ಅಂದ ನೊಂದ ದನಿಯಲ್ಲಿ. ಸುಬ್ಬಣ್ಣ ಹಿಡಿದದ್ದು ಕೈಗಳಾದರೂ ಕಾಲ್ಗಳನ್ನು ಕೊಸರಾಡುತ್ತ ‘ಆಗೊಲ್ಲಯ್ಯಾ, ನೀನೇ ಏನು, ಆ ನೆಹರುನೇ ಬಂದು ಬೇಡಿದರೂ ನಾನು ಒಬ್ಬರ ಬಟ್ಟೇನ ಇನ್ನೊಬ್ಬರಿಗೆ ಹಾಗೆಲ್ಲ ಸುಮ್ಸುಮ್ನೇ ಕೊಡೋಲ್ಲಾ’ ಎಂದು ಮೂತಿ ತಿರುವಿಕೊಂಡ ನಾಗಣ್ಮ. ‘ಸುಮ್ಸುಮ್ನೇ’ ಎಂಬ ಶಬ್ಧ ಕೇಳಿದೊಡನೆ ಸೋಮು ಚುರುಕಾದ. ಪಿಸುಮಾತಿನಲ್ಲಿ ಸುಬ್ಬಣ್ಣನ ಕಿವಿಯಲ್ಲಿ ‘ಕಿಸೇಲಿ ಕಾಸೆಷ್ಟಿದ್ಯೋ? ಅನ್ನಲು ಸುಬ್ಬಣ್ಣ ‘ಇಷ್ಟೇ ಇರೋದು’ ಎಂದು ಎರಡು ರೂ. ನೋಟನ್ನು ತೆಗೆದು ಎತ್ತೆತ್ತಲೋ ನೋಡುತ್ತಿದ್ದ ನಾಗಣ್ಣನ ಕೈಗೆ ಆ ಎರಡು ರೂ. ನೋಟನ್ನು ನೀಡಲು, ‘ಮನಸ್ಮಾಡು ರಾಜಾ’ ಎಂದು ಮೃದುವಾಗಿ ಬೇಡಿದ ಸೋಮಣ್ಣ.

ಎರಡು ರೂ.ಕೈಗೆ ಬಿದ್ದ ಕೂಡಲೇ ನಾಗಣ್ಣನ ಕೈ ಬಟ್ಟೆಗಳಿದ್ದ ಬೀರೂವಿನತ್ತ ಜಾರಿ, ಒಳಗೆ ಇಸ್ತ್ರಿ ಮಾಡಿ ಇರಿಸಿದ್ದ ಯಾರ್ಯಾರದೋ ಜುಬ್ಬ ಪೈಜಾಮಗಳು ಒಂದರ ಹಿಂದೊಂದರಂಥೆ ಮೂರ್ನಾಲ್ಕು ಸೆಟ್ಟು ಹೊರಬಂದವು. ಸುಬ್ಬಣ್ಣನ ಸೈಜಿಗೆ ಸರಿಹೊಂದುವ ಒಂದು ಸೆಟ್‌ ಜುಬ್ಬ ಪೈಜಾಮವನ್ನು ಆರಿಸಿದ್ದಾಯಿತು. ಪೈಜಾಮದ ಅಗಲವಾದ ಕೆಳಭಾಗವನ್ನು ಮಂಡಿಯವರೆಗೆ ಮಡಿಕೆ ಮಡಿಕೆಯಾಗಿ ಮಡಿಸಿ, ಅಲ್ಲೇ ಕ್ಯಾಲೆಂಡರಿನಲ್ಲಿ ಸಿಕ್ಕಿಸಿದ್ದ ಸೂಜಿದಾರದಿಮದ ಸ್ಟಿಚ್‌ ಹಾಕಿ, ಅದನ್ನು ಸುರವಾಲ್‌ ರೂಪಕ್ಕೆ ಸೋಮಣ್ಣ ಪರಿವರ್ತಿಸಿದ.  ‘ವೇಯಿಸ್ಟ್‌ ಕೋಟು, ಗಾಂಧಿಟೋಪಿ’ ಎಂದು ಸುಬ್ಬಣ್ಣ ಗೊಣಗಲು, ‘ಅದನ್ನ ಹೊಂಸೋದೇನು ಕಷ್ಟವಿಲ್ಲ. ಸಾವ್ರಾರು ಜನ ಕಾಂಗ್ರೇಸ್‌ ಕಾರ್ಯಕರ್ತರು ಬಂದಿರ್ತಾರೆ. ಯಾರ್ದನ್ನಾದ್ರೂ ಬಲ್ಲಾಳಿ ಕಿತ್ಕೊಡ್ತಾನೆ. ಈಗ್ನಡಿ, ಹೊತ್ತಾಗ್ತಿದೆ. ಬಸ್ಸಿಗೆಕಾಯೋಕ್ಕಿತಂ ಬೈಸ್ಕಲ್ಮೇಲೆ ಹೋಗೋದೆ ಬೆಸ್ಟು’ ಎಂದು ಸೋಮಣ್ಣ ಅಲ್ಲೇ ಇರುವ ನಿಂಗಣ್ಣನ ಅಂಗಡಿಯಿಂದ ಸೈಕಲ್ಲೊಂದನ್ನು ಬಾಡಿಗೆಗೆ ಪಡೆದು ಅದರ ಮೇಲೆ ತಾನೇರಿ, ಸುಬ್ಬಣ್ಣನನ್ನು ಕ್ಯಾರಿಯರ್ ಮೇಲೆ ಕೂರಿಸಿಕೊಂಡು, ಏದುಸಿರು ಬಿಡುತ್ತ, ಅಪ್ಪು ಬಂದ ಕಡೆ ಇಬ್ಬರೂ ಸೇರಿ ಒಟ್ಟು ಚತುಷ್ಪಾದಗಳಿಂದ ಪೆಡಲ್‌ ತುಳಿಯುತ್ತ, ಅಂತೂ ಇಂತೂ ಹತ್ತರ ಹೊತ್ತಿಗೆ ಟೌನ್‌ಹಾಲನ್ನು ಸಮೀಪಿಸಿದರು.

ಅಷ್ಟು ಹೊತ್ತಿಗೆ ಟವನ್‌ ಹಾಲಿನ ತುಂಬ ಜನ ಜಮಾಯಿಸಿದ್ದರು. ಜನಗಣಮನದವನು ಏಕಿನ್ನು ಬರಲಿಲ್ಲವೆಂದು ಬಲ್ಲಾಳನ ಭುಜ ಜಗ್ಗುತ್ತ ಚೆನ್ನಯ್ಯನವರು ಅಷ್ಟು ಹೊತ್ತಿಗೆ ಎರಡು ಮೂರು ಬಾರಿ ಕೇಳಿಯಾಗಿತ್ತು. ಮತ್ತೊಮ್ಮೆ ಅವರೆದುರು ಅಡ್ಡಾಡಿದರೆ ಅವರು ಬಹಿರಂಗವಾಗಿಯೇ ಬೆತ್ತದಿಂದ ಬಾರಿಸುವುದು ಖಂಡಿತವೆಂದುಕೊಂಡ ಬಲ್ಲಾಳ ಅವರ ಕಣ್ತಪ್ಪಿಸಿ ಆ ಜನಜಂಗುಳಿಯಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಅಲ್ಲಿದ್ದವರೆಲ್ಲಾ ನೆಹರೂರವರಿಗೆ ಕಾಯುತ್ತಿದ್ದರೆ ಬಲ್ಲಾಳ ಸೋಮುವಿಗಾಗಿ ಕಾಯುತ್ತಿದದ . ಅಂತೂ ಕೊನೆಗೊಮ್ಮೆ ದೂರದಲ್ಲಿ ಇವರಿಬ್ಬರೂ ದುಡುದುಡನೆ ಗಡಿಬಿಡಿಯಿಂದ ಬಾವಿ ಬೀಳಲು ಬರುವವರಂತೆ ಬರುತ್ತಿರುವುದನ್ನು ಕಂಡ ಬಲ್ಲಾಳಿಗೆ ನೆಹರುವೇ ಏನು ಅವರಪ್ಪನನ್ನೂ ಜೊತೆಯಲ್ಲಿ ಕಂಡಂತಾಯಿತು.

ಇವರಿಬ್ಬರನ್ನೂ ಬಾಚಿ ತಬ್ಬಿ, ‘ಬಾಜು ಬಾಜೂ’ ಎನ್ನುತ್ತ ದಾರಿಬಿಡಿಸಿಕೊಂಡು ವೇದಿಕೆಯ ಬಳಿ ಕರೆದೊಯ್ದು ಸಿಂಗರಗೊಂಡಿದ್ದ ಸುಬ್ಬಣ್ಣನನ್ನು ಚೆನ್ನಯ್ಯನವರ ಮುಂದೆ ಬಲ್ಲಾಳ ನಿಲ್ಲಿಸಿದ. ಸುಬ್ಬಣ್ಣನನ್ನು ಮುಡಿಯಿಂದ ಅಡಿಯವರೆಗೆ ಅವಲೋಕಿಸಿದ ಚೆನ್ನಯ್ಯನವರು ‘ಟೋಪೀ’ ಎಂದರು. ಯಾರದ್ದೋ ಟೋಪಿ ಸುಬ್ಬಣ್ಣನ ತಲೆಯ ಮೇಲೆ ಬಿತ್ತು. ‘ವೆಯಿಸ್ಟುಕೋಟು’ ಎಂದು ಗುಡುಗಿದರು. ಮತ್ತಾರದ್ದೋ ವೇಯಿಸ್ಟ್‌ಕೋಟು ಸುಬ್ಬಣ್ಣನ ಮೈಯ್ಯನ್ನಲಂಕರಿಸಿತು. ನಂತರ ‘ಗುಲಾಬಿ’ ಎಂದು ಗುಟುರು ಹಾಕಿದರು ಚೆನ್ನಯ್ಯ. ಕೂಡಲೆ, ನಯನ ಮನೋಹರೆಯಾಗಿ ಪಕ್ಕದಲ್ಲೇ ನಿಂತಿದ್ದ ಕಾಂಗ್ರೇಸ್‌ ಕಾರ್ಯಕರ್ತೆಯೋರ್ವಳು ಉಟ್ಟಿದ್ದ ಖಾದಿ ಸೀರೆಯ ಮೇಲೆ ಸಿಕ್ಕಿಸಿಕೊಂಡಿದ್ದ ಚೆಂಗುಲಾಬಿಯನ್ನು ಬಲ್ಲಾಳ ಕಸಿದುಕೊಂಡು ಸುಬ್ಬಣ್ಣನ ವೇಯಿಸ್ಟ್‌ಕೋಟಿಗೆ ಸಿಕ್ಕಿಸಿದ . (ಸ್ತ್ರೀಯರಿಂದ ಸಹಾಯ ಪಡೆದು ಕಾರ್ಯ ಸಾಧಿಸುವುದರಲ್ಲಿ ಆಗ ಬಲ್ಲಾಳ ಬಹುಚೂಟಿ.)

ಹೀಗೆ ಸಿಂಗರಗೊಂಡ ಸಿಂಗಾರುವೇಲು ಸುಬ್ಬಣ್ಣನನ್ನು ವೇದಿಕೆಯ ಮೇಲಕ್ಕೇರಿಸಿ ನಿಲ್ಲಿಸಿದ್ದಾಯಿತು.

ಅಷ್ಟರಲ್ಲಿ ಆಕಾಶವೇ ಅದುರಿ, ಮೇಘಮಂಡಲವೇ ಮುರಿದುಬೀಳುವುದೇನೋ ಎಂಬಂತೆ ಜನರಿಂದ ಜಯಘೋಷ.  ಬಂದು ಬಿಟ್ಟರು! ಮಂಡಕಳ್ಳಿಯಲ್ಲಿಳಿದ ಚಾಚಾ ನೆಹರು ತೆರೆದ ಕಾರಿನಲ್ಲಿ ನಿಂತು, ರಸ್ತೆಯುದ್ದಕ್ಕೂ ಇಕ್ಕೆಡೆಯಲ್ಲಿ ಸಾಲುಸಾಲಾಗಿ ಗುಂಪು ಸೇರಿದ್ದ ಜನರತ್ತ ಮೈಸೂರು  ಮಲ್ಲಿಗೆಯ ಮೊಗ್ಗುಬಿರಿವಂತೆ ತುಂಬು ನಗೆ ಚೆಲ್ಲುತ್ತ, ತಮಗೆ ಒಬ್ಬರು ಹಾಕಿದ ಹಾರವನ್ನು ಇನ್ನೊಬ್ಬರತ್ತ ಎಸೆಯುತ್ತ, ತಮ್ಮ ಕಾರಿನ ಹಿಂದಿದೆಯೇ ಹಿಮ್ಮೆಟ್ಟಿ ಬರುತ್ತಿದ್ದ ಜನರ ಹಿಂಡನ್ನು ಸೂಜಿಗಲ್ಲಿನಂತೆ ಸೆಳೆಯುತ್ತ, ನೆಹರೂಜಿ ಟವನ್‌ ಹಾಲಿನೊಳಕ್ಕೆ ಬಂದುಬಿಟ್ಟರು!

ಟೌನ್‌ಹಾಲಿನಲ್ಲಿದ್ದವರ ಸಂಖ್ಯೆಯೇ ಸಾವಿರಾರು. ಅವರನ್ನು ಹಿಂಬಾಲಿಸಿ ಬಂದವರ ಸಂಖ್ಯೆ ಅದಕ್ಕೂ ಹೆಚ್ಚು. ಒಟ್ಟಾರೆ ಸೇರಿದ್ದು ಸಹಸ್ರಾರು ಜನ. ಮೈಸೂರಿನವರಷ್ಟೇ ಅಲ್ಲ. ಸುತ್ತಮುತ್ತಲ ಹತ್ತಾರು ಹಳ್ಳಿ ಹೋಬಳಿಯವರೆಲ್ಲಾ ಒಟ್ಟಾಗಿ ಒಂದೆಡೆ ಸೇರಿದ್ದರು. ಬಂದವರೆಲ್ಲಾ ನೆಹರೂಜೀಯನ್ನು ನೋಡಲು ತಮ್ಮಷ್ಟಕ್ಕೆ ತಾವೇ ಆಸೆ ಪಟ್ಟು ಬಂದವರು. ಎಲ್ಲೆಲ್ಲಿಂದ ಬಂದವರೋ, ಏತೇತರಲ್ಲಿ ಬಂದವರೋ, ಆ ಭಗವಂತನೇ ಬಲ್ಲ.

ಬಂದ ನೆಹರೂ ಸರಸರನೆ ಓಡುತ್ತಲೇ ಮೆಟ್ಟಿಲುಗಳನ್ನೇರಿ ವೇದಿಕೆಯ ಮೇಲೆ ನಿಂತು ಜನಸಾಗರದತ್ತ ಕೈಬೀಸಿದಾಗ ಎಲ್ಲರ ಮೈಮನದಲ್ಲಿ ವಿದ್ಯುತ್‌ ಪ್ರವಹಿಸಿದಂತಾಯಿತು. ತೆರೆದ ಮೈದಾನದಲ್ಲಿ ಮೈಯ್ಯನ್ನೇ ದಾನವಾಗಿ ದೇಶಕ್ಕೆ, ಸಮಾಜಕ್ಕೆ, ಸಾರ್ವಜನಿಕರಿಗೆ ಸಮರ್ಪಿಸಿದ ಸರ್ವಶ್ರೇಷ್ಠನಂತೆ ಮೈನಿಮಿರಿಸಿ ನಿಂತಿದ್ದರು ನೆಹರು.

ಅಂದವರು ಬುಲೆಟ್‌ ಪ್ರೂಫ್‌ ಬಾಕ್ಸಿನ ಹಿಂದೆ ಬಚ್ಚಿಟ್ಟುಕೊಂಡು ಭಾಷಣ ಬಿಗಿಯಲಿಲ್ಲ. ಸೆಕ್ಟುರಿಟಿಯ ಸರದಾರರು ಅವರನ್ನು ಸುತ್ತುವರಿದಿರಲಿಲ್ಲ. ವಾಕಿಟಾಕಿ ಹಿಡಿದವರ ಹಿಂಡು ಅವರ ಹಿಂದುಮುಂದಿರಲಿಲ್ಲ. ಬಂಧವಿಮುಕ್ತರಾಗಿ ಬಟ್ಟಬಯಲಿನ ಬಿಚ್ಚು ವಾತಾವರಣ, ಮುಕ್ತಮನಸ್ಸಿನ ನೆಹರೂಜಿ ಮಾತು, ನೋಡಿದವರು, ಕೇಳಿದವರು ತಮ್ಮ ಜನ್ಮ ಸಾರ್ಥಕವಾಯಿತೆಂದು ತೃಪ್ತಿಗೊಂಡರು.

ನೆಹರೂರವರ ಮಾತು ಮುಗಿಯಿತು. ತಯಾರಾಗಿ ನಿಂತಿದ್ದ ಸುಬ್ಬಣ್ಣ ರಾಷ್ಟ್ರಗೀತೆಯನ್ನು ಎತ್ತರದ ದನಿಯಲ್ಲಿ ಹುರುಪಿನಿಂದ ಹಾಡಿದ. ಆಲಿಸಿದ ನೆಹರು ಮುಖಮಂಡಲದಲ್ಲಿ ಮಂದಹಾಸ ಮಿನುಗಿತು. ಸೊಗಸಾಗಿ ಹಾಡಿದ ಸುಬ್ಬಣ್ಣನ ಬೆನ್ನು ಚಪ್ಪರಿಸಿ, ‘ಭೇಷ್‌’ ಎಂದರು ನೆಹರು. ಪುನೀತನಾದವನಂತೆ ಪುಳಕಿತಗೊಂಡ ಸುಬ್ಬಣ್ಣನವರದು ಎಂಥಹ ಪುಣ್ಯ!

ನೆಹರು ಹೋದರು. ಜನ ಚದುರಿದರು. ರಾಷ್ಟ್ರಗೀತೆ ಹಾಡಿದ ಸುಬ್ಬಣ್ಣನಿಗೆ ಸಿಕ್ಕ ಸಂಭಾವನೆ ಹದಿನೈದು ರೂ.ವನ್ನು ಸ್ಥಳದಲ್ಲೇ ಎರಡರಿಂದ ಭಾಗಿಸಿದ ಸುಬ್ಬಣ್ಣ ಹಾಗೂ ಸೋಮಣ್ಣ ತಲಾ ಏಳೂವರೆಯಂತೆ ಹಂಚಿಕೊಂಡು ನಾಗಣ್ಣನ ಅಂಗಡಿಯನ್ನು ತಲುಪಲು ಯಥಾಪೂರ್ವಂ ಸೈಕಲ್‌ ಮೇಲೆ ಡಬ್ಬಲ್‌ ರೈಡ್‌ ಹೊಡೆಯುತ್ತಾ ಹೊರಟರು.

ನಾಗಣ್ಣ ಇವರಿಗಾಗಿ ಕಾಯುತ್ತಿದ್ದ. ಇವರಿಬ್ಬರೂ ಬಂದರು. ಸುಬ್ಬಣ್ಣ ಪೈಜಾಮ ಜುಬ್ಬವನ್ನು ಕಳಚಿ ನಾಗಣ್ಣನ ಕೈಗಿತ್ತು, ‘ತುಂಬಾ ಥ್ಯಾಂಕ್ಸ್‌’ ಅಂದ. ಸುಬ್ಬಣ್ಣನ ಭುಜದ ಮೇಲೆ ಕೈಯ್ಯಿಟ್ಟ ನಾಗಣ್ಣ ‘ತುಂಬಾ ಚೆನ್ನಾಗಿ ಹಾಡ್ದೆ ರಾಜ ಭೇಷ್‌’ ಎಂದು ಸುಬ್ಬಣ್ಣನ ತಲೆ ನೇವರಿಸಿ, ‘ನೆಹರು ಕುಶ್‌ ಆಗ್ಬಿಟ್ರೂ’ ಎಂದ. ‘ನೀನು ಬಂದಿದ್ಯಾ?’ ಎಂದ ಸೋಮಣ್ಣ. ‘ಬರ್ದೇ, ನಮ್ಮೂರ್ಗೇ ನೆಹ್ರು ಬಂದಿರೋವಾಗ ನೋಡ್ದೇ ಬಿಟ್ಟಾನಾ  ಈ ನಾಗಣ್ಣ’ ಎಂದು ಟೇಬಲ್ಮೇಲೆ ಹರವಿದ್ದ ಬೆಡ್‌ಶೀಟ್ಗಳ ಪದರದಿಂದ ಎರಡೂ ರೂ. ನೋಟನ್ನು ಹೊರತೆಗೆದು ಸುಬ್ಬಣ್ಣನ ಕೈಗಿತ್ತು, ‘ಬಹಳ ದಣ್ದಿದ್ದೀರಿ. ಬಾದಾಮಿ ಹಾಲ್ಕುಡೀರಿ’ ಎಂದಾಗ ಸೋಮಣ್ಣ ಸುಬ್ಬಣ್ಣ ಇವರಿಬ್ಬರಿಗೂ ಅಗಸ ನಾಗಣ್ಣನ ಬಗ್ಗೆ ಅಭಿಮಾನ ಮೂಡಿತು.

* * *