೧೯೫೮, ನಾನು ಮೈಸೂರಿನ N.I.E. ಕಾಲೇಜಿನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಡಿಪ್ಲೊಮೊ ಮುಗಿಸಿದ್ದೆ. ಆಗ ಸಿವಿಲ್‌ ಇಂಜಿನಿಯರಿಂಗ್‌ ಓದುತ್ತಿದ್ದವರು ಕೋಡಂಗಿಗಳಂತಾಡುತ್ತಿದ್ದರೆ, ಇದನ್ನು ಮುಗಿಸಿದವರು ಕೋಡು ಮೂಡಿದ ಕೋಡುಗೆ ನಂತಾಡುತ್ತಿದ್ದರು.

ಓದುವಾಗ ಈ ಸಿವಿಲ್‌ ವಿದ್ಯಾರ್ಥಿಗಳ ಸಡಗರವೇ ಸಡಗರ.  ನೀಟಾಗಿ ತಲೆಬಾಚಿ, ಸ್ನೋ ಪೌಡ್ರನ್ನು ಲಿಬರಲ್ಲಾಗಿ ಲೇಪಿಸಿಕೊಂಡು, ಸ್ಕಿನ್‌ ಟೈಟ್‌ ಪ್ಯಾಂಟಿನೊಳಗೆ ತೋಳು ಮಡಿಚಿದ ಷರಟನ್ನು ತೂರಿಸಿ, ಚೂಪದ ಶೂ ಧರಿಸಿ, ಬೆನ್ನು ಚೀಲದಲ್ಲಿ ಡ್ರಾಯಿಂಗ್‌ ಶೀಟ್‌ ಸುರುಳಿಗಳು ಹಾಗೂ ‘T’ ಸ್ಕೇರನ್ನು ಪ್ರತಿಷ್ಠಾಪಿಸಿ, ಸೈಕಲ್ಲಿನ ಹಿಂಭಾಗದ ಚಕ್ರದ ಬಲಪಕ್ಕಕ್ಕೆ ಡ್ರಾಯಿಂಗ್‌ ಬೋರ್ಡನ್ನು ಸಿಕ್ಕಿಸಿ , ಬಲಗೈಯ್ಯಲ್ಲಿ ಉದ್ದನೆಯ ರೇಂಜಿಂಗ್‌ ರಾಡ್‌ ಹಿಡಿದು, ಕಾಳಗಕ್ಕೆ ಹೊರಟ ಪರಶುರಾಮನ ಪಡೆಯ ಪೈಕಿಯವರೆಂಬಂತೆ, ಒಂಟಿಕೊಪ್ಪಲಿನ ವಿದ್ಯಾರ್ಥಿಗಳು ಹಾಗಿರಲಿ, ಚಾಮುಂಡಿಪುರಂನಲ್ಲಿದ್ದ ವಿದ್ಯಾರ್ಥಿಗಳು ಸಹ ಬಳಸಿಕೊಂಡು ಮಹಾರಾಣಿ ಕಾಲೇಜಿನ ಮಾರ್ಗವಾಗಿ ಸೈಕಲ್‌ ಮೇಲೆ ಸವಾರಿ ಮಾಡುತ್ತ N.I.E ತಲುಪುತ್ತಿದ್ದುದು ಅಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು. ಕಾರಣ, ಆಗಿನ ಹುಡುಗಿಯರಿಗೂ ಅಷ್ಟೆ, N.I.E. ಹಾಗೂ ಮೆಡಿಕಲ್‌ ಕಾಲೇಜಿನ ಹುಡುಗರೆಂದರೆ ಹುಮ್ಮಸ್ಸು ಹೆಚ್ಚು, ಒಲವು ಜಾಸ್ತಿ. ಇವರನ್ನು ಕಂಡೊಡನೆ ಇವರತ್ತ ‘ವಸಿ’ ವಾಲುತ್ತಿದ್ದರು.

ಸಿವಿಲ್‌ ಇಂಜಿನಿಯರಿಂಗ್‌ ಓದಿದವರಿಗೆ ಆ ಕಾಲದಲ್ಲಿ ಎಲ್ಲಿಲ್ಲದ ಡಿಮ್ಯಾಂಡು. ಕಂಡ ಕಂಡ ಕಡೆ ಕೆಲಸ ಸಿಗುತ್ತಿದ್ದ ಕಾಲ. ಒಂಬತ್ತು ಕಡೆ ಅರ್ಜಿ ಎಸೆದರೆ, ಹತ್ತು ಕಡೆ ಕೆಲಸ ಸಿಗುತ್ತಿತ್ತು. ಅದನ್ನೆಲ್ಲಾ ಈಗ ನೆನೆದರೆ ಬೋಳಿ ತುರುಬು ನೆನೆಸಿಕೊಂಡಂತಾಗುತ್ತದೆ. ಈಚೀಚೆಗಂತೂ ಸಿವಿಲ್‌ ಇಂಜಿನಿಯರಿಂಗ್‌ ಓದಿದವರಿಗೆ ಸ್ಕಾವೆಂಜರ್ ಕೆಲಸ ಸಿಗುವುದೂ ಕಷ್ಟ. ಸಿವಿಲ್‌ ಬಿ.ಇ.ಗಳು ಬಸ್‌ ಕಂಡಕ್ಟರುಗಳಾಗಿರುವುದುಂಟು. ಈ ವಿಚಾರ ಹೇಳುತ್ತ ಹೋದಷ್ಟು ಹೊಟ್ಟೆ ಉರಿಯುತ್ತದೆ, ಬೇಡ ಬಿಡಿ.

ಫೈನಲ್‌ ಇಯರ್ ಪಾಸಾದ ಕೂಡಲೇ ನಾನು ಕೆಲಸಕ್ಕೆ ಹೋಗುವ ತಯಾರಿ, ತರಾತುರಿಯಲ್ಲಿದ್ದೆ. ‘ವಿನಾಯಕ್‌ ಕನ್ಸಟ್ರಕ್ಷನ್‌ ಕಂಪೆನಿ’ ಎಂದು ನೆನಪು. ಕೆಲಸಕ್ಕೆ ಕರೆದಿದ್ದರು. ಕನ್ಸ್ ಟ್ರಕ್ಷನ್‌ ಸೂಪರ್ ವೈಸರ್ ಪೋಸ್ಟು. ಸಂಬಳ; ನೂರೈವತ್ತು ಬೇಸಿಕ್ಕು; ಹೆಚ್‌.ಆರ್.ಎ. ಹದಿನೈದು; ಇಪ್ಪತ್ತು, ಅದಾವುದೋ ಅಡುಗೂಲಜ್ಜಿ ಅಲೋಯನ್ಸು. ಒಟ್ಟಾರೆ ನೂರರವತ್ತೈದು ರೂಪಾಯಿ! ಅಯ್ಯೋ ಅಯ್ಯೋ, ಆಗಿನ ಕಾಲದಲ್ಲಿ ಅದೇ ಅದ್ಭುತವಾದ ಅಟ್ಯ್ರಾಕ್ಟಿವ್‌ ಸ್ಯಾಲರಿ. ಸರಿ, ಅರ್ಜಿ ಗುಜರಾಯಿಸಿಬಿಡುವುದೆಂದು ಹಾಳೆ ತೆಗೆದುಕೊಂಡೆ. ಪ್ಲೇನ್‌ ಪೇಪರಿನಲ್ಲಿ ಶುರುವಿಗೆ ಸಣ್ಣಗೆ  ಶ್ರೀಕಾರ ಹಾಕಿ ನಂತರ ನನ್ನ ನಾಮ, ಕುಲ, ಗೋತ್ರ , ಜಾತಿ, ವಯಸ್ಸು, ಇತ್ಯಾದಿ ಇತ್ಯಾದಿ ಎಲ್ಲವನ್ನೂ ಗಮನವಿರಿಸಿ ಗುಂಡಗೆ ಬರೆದು, ನೀಟಾಗಿ ಮಡಿಚಿ, ಅದನ್ನಿರಿಸಲು ಸರಿಯೆನಿಸು ವ ಲಾಂಗ್‌ ಕವರನ್ನು ತರಲು ಬಲ್ಲಾಳ್‌ ಸರ್ಕಲ್ಲಿನ ಬಳಿ ಇದ್ದ ಅಂಗಡಿಯೊಂದಕ್ಕೆ ಹೋದೆ. ಅಲ್ಲಿ ಸಿಗರೇಟು ಸೇದುತ್ತ ನಿಂತಿದ್ದ ಸೋಮು. ನನ್ನನ್ನು ಕಂಡೊಡನೆ “ಹಲ್ಲೋ ಕೇಶವರಾಯ, ಏನದು ಕೈಯ್ಯಲ್ಲಿ. ಕಥೇನೋ, ನಾಟ್ಕನೋ?’ ಎಂದ. ಅದಕ್ಕೆ ನಾನು ‘ಏನು ಇಲ್ವೋ, ಕೆಲಸಕ್ಕೆ ಅರ್ಜಿ’ ಅಂದೆ. ಅದಕ್ಕವನು ಹುಳ್ಳನೆ ನಕ್ಕು, ‘ಯಾಕೇ, ಈ ಅಂಗ್ಡೀಲೇ ಕೆಲಸಕ್ಕೆ ಸೇರ್ಕೋತೀಯಾ? ಇವರ ಅಕ್ಕಿ ಅಂಗ್ಡೀಲಿ ಕೆಲಸಕ್ಕೆ ಸೇರೋದಾದ್ರೆ ಅರ್ಜಿ ಯಾಕೋ? ಎಂದು ನಕ್ಕ. ನಾನೂ ನಗುತ್ತಾ, ‘ಅದಲ್ವೋ, ಯಾವ್ದೋ ಕಂಪನಿಯವರು ಕೆಲಸಕ್ಕೆ ಕರ್ದಿದ್ದಾರೆ…’ ಅನ್ನುವಷ್ಟರಲ್ಲಿ ಸೋಮು, ‘ನಾಟಕದ ಕಂಪ್ನಿವ್ರೇನೋ, ಅಡ್ರೆಸ್‌ ಕೊಡು. ನಾನು ಅರ್ಜಿ ಹಾಕ್ಬಿಡ್ತೀನಿ. ನಾನು ಭೀಮ, ಬಕಾಸುರನ ಪಾರ್ಟು ಮಾಡ್ತೀನಿ. ನೀನು, ಸಿಂಗ್ಳೇಕ್‌ ಮುಂಡೇದು, ಶಕುನಿ, ಧೃತರಾಷ್ಟ್ರನ ಪಾರ್ಟು ನಿನಗೊಪ್ಪುತ್ತೆ. ಅಂಥವೇ ನಿನಗೆ ದಕ್ಕೋದು. ಅನಂತೂ ಗುಣಸಿಂಗನ್ನೂ ಕರ್ಕೊಂಡು ಹೊರಟ್ಹೋಗೋಣ. ಪಿಟ್ಟಲ್ಕೂತ್ಕೊಂಡು ಪಿಟೀಲು ಪಿಳ್ಳಂಗೋವಿ ಬಾರಸ್ತಿರ್ಲಿ ಬಡ್ಡೀಗಂಡ್ರು’ ಅಂದ. ಅಂಗಡಿಯಾಚೆ ನಮ್ಮ ಅಕ್ಕಪಕ್ಕದಲ್ಲಿದ್ದವರೆಲ್ಲ ಘೊಳ್ಳೆಂದು ನಕ್ಕರು. ನಾನು ‘ಹಾಳಾದವ್ನೇ, ನಾಟಕದ ಕಂಪನಿಯವರಲ್ವೋ ಕರ್ದಿರೋದು. ಇಂಜಿನಿಯರಿಂಗ್‌ ಕಂಪನಿಯವರ’ ಎನ್ನುತ್ತಾ, ಅವನ ಕೈಗೆ ನನ್ನ ಅರ್ಜಿಯ ಕಾಗದವನ್ನಿತ್ತೆ. ಯಾವ ಮರ್ಜಿಯೂ ಇಲ್ಲದೆ ಅದನ್ನು ಬಿಡಿಸುತ್ತಾ, ‘ಹಾಗೆ ಬೊಗ್ಳು. ಇದ್ದದ್ದನ್ನ ಇದ್ದ ಹಾಗೆ ಬೊಗಳ್ದೆ ಸುಮ್ನೆ ಕಂಪ್ನೀವ್ರು ಕರ್ದಿದ್ದಾರೇಂದ್ರೆ ನಾನೇನು ತಿಳ್ಕೋಬೇಕು?, ಹೇಳಿ ಕೇಳಿ ನೀನು ನಾಟಕದ ಮನುಷ್ಯ. ಯಾವ್ದೋ ನಾಟಕದ ಕಂಪ್ನೀವ್ರು ಕರ್ದಿರ್ಬೇಕೂಂತ ಅಂದ್ಕೊಂಡೆ. ಅಂದ್ಹಾಗೆ ನಿನಗೆ ನಾಟಕಗಳನ್ನು ಆಡ್ಸೀ ಆಡ್ಸೀ ಅಭ್ಯಾಸ್ವೇ ಹೊರತು, ಅರ್ಜಿ ಮೂಗರ್ಜಿಗಳನ್ನು ಬರ್ದು ಅಭ್ಯಾಸವಿಲ್ಲ’ ಎಂದು ನಾನು ಬರೆದಿದ್ದ ಆ ಅರ್ಜಿಯನ್ನು ಒಂದು ರೀತಿಯ ಅಲರ್ಜಿ ಬಂದವನಂತೆ ಅವಲೋಕಿಸಿ, ‘ಅಲ್ವೋ ಅವಿವೇಕಿ, ಅರ್ಜಿ ಬರ್ಯೋದು ಹೀಗೇನೋ? ಆಂಗ್ಲ ಭಾಷೆಯ ಆಲ್ಫಬಿಟ್ಸೇ ಅರಿಯದ ಒಬ್ಬ ದರ್ಜಿ ಬರೆಯೋ ಹಾಗೆ ಬರ್ದಿದ್ದೀಯಲ್ಲಾ’ ಎಂದು ಮೂತಿಯನ್ನು ವಕ್ರ ಮಾಡಿಕೊಂಡು ಗಕ್ಕನೆ ನಕ್ಕ. ನನ್ನ ಮುಖದ ತುಂಬ ಅವನ ಉಗುಳು ಹಾರಿತು. ಒರೆಸಿಕೊಳ್ಳುತ್ತ ‘ಅಯ್ಯಾ ಪನ್ನೀರುದಾನಿ, ಯಾಕೆ, ನಾನು ಬರ್ದಿರೋ ಇಂಗ್ಲೀಷು ಚೆನ್ನಾಗಿಲ್ವೇನ್ಲಾ? ಅಂದೆ. ಅದಕ್ಕವನು ‘ಚೆನ್ನಾಗಿದ್ಯೋ ರಾಜಾ, ಆದ್ರಿದು ಇಂಜಿನಿಯರ್ ಗಳ ಇಂಗ್ಲೀಷು. ಇಂಗ್ಲೀಷ್ನವರ ಇಂಗ್ಲೀಷಲ್ಲ. ಇಂಗ್ಲೀಷು ಫ್ಲವರಿ ಲಾಂಗ್ವೇಜು. ಅದನ್ನು ಸರಿಯಾಗಿ ಬರದ್ರೆ ಓದ್ರೋವ್ರಿಗೆ ವರ್ಡ್ಸೇ ಅರ್ಥವಾಗ್ದೇ ವರಿ ಆಗಿ ಡಿಕ್ಷನರೀ ರೆಫರ್ ಮಾಡೋ ಮಟ್ಗಿರ್ಬೇಕು. ಓದೋ ನನ್ಮಕ್ಳು ಅಲ್ಲಾಡಿ ಹೋಗ್ಬೇಕು. ಹಾಗೆ ಬರಸ್ತೀನಿ ಬಾ. ನಾನು ಹೇಳ್ಹಾಗೆ ಬರ್ದು ಹಾಕು. ಕೆಲಸ ನೂರಕ್ನೂರು ಗ್ಯಾರಂಟಿ ನನ್ಮಗ್ನೆ’ ಎಂದು ಗ್ರಿಮ್ಮಾಗಿ ಫೋಸು ಕೊಟ್ಟು ಫರ್ಮಾಗಿ ಹುಬ್ಬೇರಿಸಿದಾಗ ಅವನ ಮುಖದಲ್ಲಿ ಮಹಿಷಾಸುರನ ಕಳೆಯಿತ್ತು.

ಎಂಥದೇ ವಿಚಾರಗಳಲ್ಲಿ ಎಂದೂ ನಾನು ಈ ಸೋಮನನ್ನು ಅಷ್ಟಾಗಿ ನಂಬಿದವನಲ್ಲ. ಈತ ಹುಟ್ಟು ಅಷ್ಟಾವಕ್ರ ಎಂಬುದು ನನಗೆ ಗೊತ್ತಿತ್ತು. ಆದರಂದು ಏಕೋ ಏನೋ, ಇವನ ಮಾತಿನಲ್ಲಿ ಎಲ್ಲಿಲ್ಲದ ನಂಬಿಕೆ ನನ್ನಲ್ಲಿ ಅಂಕುರಿಸಿತು. ಅಪರೂಪಕ್ಕೆ ಅನಿಷ್ಟದವರಾಡುವ ಮಾತೂ ಇಷ್ಟವೆನಿಸುತ್ತದೆ. ಹಾಗಾಗಿ ‘ಆಯ್ತು ಗುರುವೇ, ಅದೇನು ಬರಸ್ತೀಯೋ ಬರೆಸು. ನೀನು ಹೇಳ್ದಾಗೆ ಬರ್ದು ಪರಮಾತ್ಮನ ಮೇಲೆ ಭಾರ ಹಾಕಿ ಪೋಸ್ಟ್‌ ಮಾಡ್ತೀನಿ’ ಅಂದೆ. ‘Thats like a good boy. ಪಾರ್ಕಿಗೆ ಹೋಗೋಣ ಬಾ. ಆ ಮೋರೀ ಪಕ್ಕದ ಮರದಡಿ ಕೂತ್ರೆ ಮೊಂಡಾಗಿರೋ ಮೈಂಡು ರೀವೈಂಡಾಗಿ ಮುಂದೋಡುತ್ತೆ’ ಎಂದು ಅಡ್ಡಗಾಲು ಹಾಕುತ್ತ ತನ್ನ ಕೊಬ್ಬಿ ಉಬ್ಬಿದ್ದ ಉದರದ ಮೇಲೆ ಫಟ ಬಾರಿಸುವವರಂತೆ ಬೆರಳಾಡಿಸುತ್ತ ಗಣೇಶ ಟಾಕೀಸಿನ ಪಕ್ಕಕ್ಕಿರುವ ಪಾರ್ಕಿನತ್ತ ಪಾದಬೆಳಸಿದ. ಹಸುವಿನ ಹಿಂದೆಯೇ ಹಿಂಬಾಲಿಸುವ ಕರುವಿನಂತೆ ಆತನ ಹಿಂದ್ಹಿಂದೆ ಹೆಜ್ಜೆಯಿಡುತ್ತಿದ್ದ ನನ್ನತ್ತ ಗಕ್ಕನೆ ತಿರುಗಿ, ‘ಹಾಗೆ ಅರ್ಧಪ್ಯಾಕ್‌ ಸಿಗರೇಟನ್ನ ತೊಗೊಂಬಾ. ಬೆಂಕಿಪೊಟ್ಟಣ ಬ್ಯಾಡ, ಅದು ನನ್ನ ಹತ್ರ ಇದೆ’ ಎಂದು ನನ್ನ ಮರುಮಾತಿಗೂ ಕಾಯದೆ ಬೇಲಿಯೊಳಗೆ ಗೂಳಿಯಂತೆ ನುಗ್ಗಿ ಆ ಪಾರ್ಕಿನೊಳಕ್ಕೆ ಹೊಕ್ಕ  ಈ ಸೋಮ.

ಆತ ಆಜ್ಞೆ ಮಾಡಿದ ಅರ್ಧಪ್ಯಾಕ್‌ ಸಿಗರೇಟು ಅಂದು ಅರ್ಜಿ ಬರೆಸಲು ಅವನು ನನ್ನಿಂದ ಅಪೇಕ್ಷಿಸಿದ್ದ ಆನರೇರಿಯಮ್ಮು! ಹಾಳಾಗಿ ಹೋಗಲಿ ಎಂದು ಅದನ್ನು ತಂದು ಅವನ ಕೈಗಿತ್ತೆ. ‘Veryo good, Thank you ಮ್ಮಾ’ ಎಂದು ಒಂದು ಸಿಗರೇಟನ್ನೆಳೆದುಕೊಂಡು ಅದರ ಮೂತಿಗೆ ಚರ್ರ‍ನೆ ಬೆಂಕಿಕಡ್ಡಿ ಗೀರಿಟ್ಟು, ದಂ ಎಳೆದು ದಟ್ಟವಾಗಿ ಧೂಮವನ್ನು ಹೊರಬಿಟ್ಟು, ಅನಂತರ ಆಮೆಯಂತೆ ಅಡಿಯಿಡುತ್ತಾ ನಡೆದು ಮರವೊಂದರ ಕೆಳಗೆ ಹರಡಿದ್ದ ನೆರಳನ್ನು ಕಂಡು, ಅಲ್ಲಿ ಕೆಲ ಸೆಕೆಂಡು ಕೂತು, ತದನಂತರ ಹಾಗೇ ತನ್ನ ದೊಡ್ಡ ದೇಹವನ್ನು ದೂಡಿ, ಕಾಲ್ಗಳನ್ನು ಚಾಚಿ, ಓರೆಯಾಗಿ ಪವಡಿಸಿ, ಮಡಿಚಿ ಎದ್ದಿದ್ದ ಬಲಗೈ ಹಸ್ತದ ಮೇಲೆ ಮಹಾಮಸ್ತಕವನ್ನಿರಿಸಿಕೊಂಡು, ಮಂದಹಾಸದಿಂದ ಚಂದ್ರಹಾಸನ ಫೋಸು ಕೊಡುತ್ತಾ, ‘ಬರ್ಕೊ ಕೇಶವ’ ಎಂದು ಕಣ್ಮುಚ್ಚಿದಾಗ, ಈ ಬ್ರಹ್ಮೇತಿ ಆ ಸಮಯದಲ್ಲಿ ತಾನೂ ಕೈಲಾಸಂರಂತೆಯೇ ಎಂದು ಭಾವಿಸಿದನೇನೋ ಎನ್ನಿಸಿದರೂ ಬದಲ್‌ ಮಾತನಾಡದೆ ಬರೆದುಕೊಳ್ಳಲಾರಂಭಿಸಿದೆ.

(ಏನೇ ಅನ್ನಿ. ಸೋಮುವಿನ ಇಂಗ್ಲೀಷೇ ಇಂಗ್ಲೀಷು. ಶೇಕ್ಸಪಿಯರ‍್ರು, ಶಾ ಕೂಡ ಸುಸ್ತಾಗಿಬಿಡಬೇಕು. ಅಷ್ಟಿಲ್ಲದೆ ಅಯ್ಯರ್ ರವರು ತಮ್ಮ ವಿವೇಕಾನಂದ ಚಿತ್ರದ ಆಂಗ್ಲಭಾಷಾ ಅವತರಣಿಕೆಗೆ ಇವನಿಂದ ಮಾತುಗಳನ್ನು ಬರೆಸುತ್ತಿದ್ದರೇ!?)

ಆಯಿತು. ಸೋಮು ಡಿಕ್ಟೇಟ್‌ ಮಾಡಿದ್ದನ್ನು ಚೂರೂ ಮಿಸ್ಟೇಕ್‌ ಮಾಡದೆ ಬರೆದುಕೊಂಡೆ. ‘ಒಂದಪಾ ಜೋರಾಗಿ ಓದ್ಲಾ’ ಎಂದ. ಓದಿದೆ. ‘ವಂಡರ್ ಫುಲ್‌, ಇದನ್ನ ನೀಟಾಗಿ ಟೈಪ್‌ ಮಾಡಿಸಿ ಸೈನ್‌ ಹಾಕಿ ಪೋಸ್ಟ್‌ ಮಾಡು’ ಅಂದ. ಹಾಗೆಯೇ ಮಾಡಿದೆ.

ಹದಿನೈದು ದಿನವಾಯಿತು. ವಿನಾಯಕ ಕನ್ಸ್ ಟ್ರಕ್ಷನ್‌ ಕಂಪನಿಯ ಮ್ಯಾನೇಜರಿಂದ ನನಗೆ ಕಾಗ ಬಂತು. ನನಗಾದ ಸಂತೋಷ ಅಷ್ಟಿಷ್ಟಲ್ಲ. ಆ ಲಕೋಟೆಯನ್ನು ಹಿಡಿದು, ಸೋಮುವಿನ ಅಮೃತಹಸ್ತದಿಂದಲೇ ಅದರ ಅನಾವರಣವನ್ನು ಮಡಿಸಿ, ಅವನೊಟ್ಟಿಗೆ ಆನಂದ ಅನುಭವಿಸುವುದು ಆಹ್ಲಾದಕರವೆಂದು ಆಲೋಚಿಸಿ, ಅವನಿದ್ದ ಅನಂತುವಿನ ಅರಮನೆಯತ್ತ ಒಂದೇ ಉಸಿರಿಗೆ ಓಡಿದೆ.

ಆಗತಾನೆ ಎದ್ದಿದ್ದ ಸೋಮು ಅನಂತೂ ಮನೆಯ ಮುಂದಲ ಜಗಲಿಯ ಮೇಲೆ ಮಂಕೀಬ್ರಾಂಡ್‌ ಪುಡಿಯಿಂದ ಹಲ್ಲುಜ್ಜುತ್ತಿದ್ದ. ನನಗೆ ಬಂದಿದ್ದ ಲಕೋಟೆಯನ್ನು ಅವನ ಮುಂದೆ ಚಾಚಿ ‘ಆ ಕಂಪ್ನೀಗೆ ಅರ್ಜಿ ಹಾಕಿದ್ನಲ್ಲಾ ಅದ್ರಿಂದ ಲೆಟರ್ ಬಂದಿದ್ಯೋ ಸೋಮಾ’ ಅಂದೆ.  ಕಪ್ಪನೆಯ ಉಗುಳನ್ನು ಪಿಚಕಾರಿಯಂತೆ ಪೀಚಿ ಮೂತಿಯನ್ನು ಮೇಲಕ್ಕೆತ್ತಿ, “ಇದ್ನ ಲೆಟರ್ರೂ ಅನ್ಬೇಡ್ವೋ ಅವಿವೇಕಿ. ಅಪಾಯಿಂಟ್ಮೆಂಟ್‌ ಆರ್ಡರ್ರೂನ್ನು. ಇಂಜಿನಿಯರ್ಸು ಇಂಗ್ಲೀಷಲ್ಲಿ ವೀಕು ಅನ್ನೋದು ಇದಕ್ಕೇನೆ. ದ್ರ್ಯಾಬೆ ಮುಂಡೇದೆ. ಅಂತು ಹೊಡದ್ಯಲ್ಲಾ ಛಾನ್ಸು. ಕೆಲ್ಸಾ ಸಿಕ್ತೂಂತ ಕೋತಿ ಹಾಗಾಡ್ಬೇಡ. ನಾಟ್ಕಾನ ನಿಲ್ಸೀ ಕಷ್ಟಪಟ್ಟು ಕೆಲ್ಸ ಮಾಡೋದ್ನ ಕಲಿ. ಎಂದು ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ ಮಾಡಿ ‘ಜೈ ಜಗದ್ಗುರು ಜಗದಾನಂದ’ ಎಂದು ಹೇಳುತ್ತ ಲಕೋಟೆಯನ್ನು ಒಡೆದು ಒಳಗೆ ಮಡಿಚಿರಿಸಿದ್ದ ಜಲ್ಲೀಕಾಗದವನ್ನು ಹೊರತೆಗೆದು, ಅದರ ಮಡಿಕೆಯನ್ನು ಮೃದುವಾಗಿ ಬಿಡಿಸಿ, ‘ವಂಡರ್ ಫುಲ್‌  ವಂಡರ್ ಫುಲ್‌ ವಂಡರ್ ಫುಲ್‌, ಒಳ್ಳೇ ಕಂಪ್ನೀನ್ಸುತ್ತೋ ಕೇಶವ. ಬೋಲ್ಡಾಗಿ ಬಿಡ್ಸಿಬಿಡ್ಸಿ ಟೈಪ್‌ ಮಾಡಿರೋದ್ನ ನೋಡ್ತಿದ್ಹಾಗೆ ಆ ಕಂಪ್ನಿ ಕಿಮ್ಮತ್ತೆನೂಂಬೋದ್ನ ಕಂಡ್ಕೊಂಡ್ಬಿಟ್ಟೆ. ಕಂಗ್ರಾಚುಲೇಶನ್ಸ ಕೇಶವ, ಕೀಪಿಟಪ್‌’ ಎನ್ನುತ್ತ ಕ್ಯಾಕರಿಸಿ ಕಂಠಸರಿ ಮಾಡಿಕೊಂಡು ‘ಓದ್ತೀನ್ಕೇಳೋ ಓಫತ್ಲಾ ನನ್ಮಗ್ನೆ’ ಎಂದು ಆ ಕಾಗದವನ್ನು ತನ್ನ ಕಣ್ಣನೇರಕ್ಕೆ ಎತ್ತಿ ಹಿಡಿದು, ‘ಅದ್ಸರಿ , ಎಸ್‌.ಕೇ.ಸೀ.ಗೆ ದುಡ್ಡು ತಂದಿದ್ದೀ ತಾನೇ?’ ಎನ್ನುತ್ತ ಮಾಲ್ಗಣ್ಣು ಮಾಡಿಕೊಂಡ ಸೋಮು ತೆಪರನ ಪೋಸ್ಕೊಟ್ಟ. ‘ಬಲ್ಲಾಳ ಬದ್ಕೀರೋವರ್ಗೀ ಭಯವೇನ್ಬಂತು,. ಮೊದ್ಲು ಅಪಾಯಿಂಟ್ಮೆಂಟ್‌ ಆರ್ಡರ್ ಓದಯ್ಯ, ಆಮೇಲಿಂದ ಮಿಕ್ಮಾತು’ ಎಂದು ನಾನು ಚಡಪಡಿಸಿದೆ.  ‘ಆಯ್ತಾಯ್ತು, ಆತುರಪಡಬೇಡ. ಆರ್ತಿಂಗ್ಳಿಗೇ ಆತುರಾತುರವಾಗಿ ಅರ್ಜೆಂಟೂಂತ ಹುಟ್ಟಿ, ಹಳ್ಳಿಯೋರ ಹಟ್ಟೀಲಿ ಬೆಳೆದ ಬೆಪ್ತಕ್ಕಡಿ ಹಾಗಾಡ್ಬೇಡ. ಓದ್ತೀನಿ ಕೇಳು’ ಎಂದು ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಓದಲಾರಂಭಿಸಿದ. ನಾನು ಕೇಳಲಾರಂಭಿಸಿದೆ. ಅವನು ಓದುತ್ತೋದುತ್ತಾ ನಾನು ಕೇಳುತ್ಕೇಳುತ್ತಾ ನಮ್ಮಿಬ್ಬರ ಮುಖವು ಬಾಡಿದ ಬೆಂಡೇಕಾಯಿ ಯಂತಾಯಿತು. ಆ ಇಂಜಿನಿಯರಿಂಗ್‌ ಕಂಪನಿಯ ಮ್ಯಾನೇಜರು ಇಂಗ್ಲೀಷಿನಲ್ಲೇ ಸರಳವಾಗಿ, ಯಾರಿಗಾದರೂ ಅನಾಯಾಸವಾಗಿ ಅರ್ಥವಾಗುವಂತೆ ಹೀಗೆ ಬರೆದಿದ್ದರು.

“ರಾಯರೇ, ನಿಮ್ಮ ಅರ್ಜಿ ತಲುಪಿ ತನ್ಮೂಲಕ ನಿಮ್ಮ ವಿಚಾರವೆಲ್ಲ ತಿಳಿಯಿತು. ನಮಗೆ ಬೇಕಿರುವುದು ಇಂಜಿನಿಯರಿಂಗ್‌ ಸೂಪರ್ವೈಸರುಗಳೇ ಹೊರತು ಇಂಗ್ಲೀಷ್‌ ಪ್ರೊಫೆಸರುಗಳಲ್ಲ. ಮುಂದೆ ನೀವು ಇಂಜಿನಿಯರಿಂಗ್‌ ಹುದ್ದೆಗಳಿಗೆ ಅರ್ಜಿ ಹಾಕುವ ಬದಲು ಆಂಗ್ಲಭಾಷಾ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಗುಜರಾಯಿಸುವುದು ಉತ್ತಮ.  ನಿಮಗೆ ಶುಭವಾಗಲಿ” ಎಂದು ಬರೆದಿದ್ದರು.

ಕೇಳಿದ ನಾನು ಕುಸಿಯುತ್ತ ‘ಸೋಮಾ’ ಎಂದೆ. ಅದಕ್ಕೆ ಸೋಮ ‘ಆ ಮ್ಯಾನೇಜರ್ರು ಒಬ್ಬ ಮಡೆಯ, ಮೂರ್ಖ. ಈ ಕಾಗ್ದನಾ ಕಸದ ತೊಟ್ಟಿಗ್ಹಾಕು. ಈವತ್ತು ನಾನೇ ನಿನ್ಗೆ ಎಸ್‌.ಕೆ.ಸಿ. ಕೊಡಸ್ತೀನಿ ಬಾ’ ಅಂದ. ಪ್ರಶ್ನಾರ್ಥಕವಾಗಿ ಅವನ ಮುಖವನ್ನೊಮ್ಮೆ ನೋಡಿದೆ. ‘ನೀನಂದ್ಹಾಗೆ ನಮ್ಮ ಬಲ್ಲಾಳಿ ಬದ್ಕಿರೋವರ್ಗೂ ಭಯವಿಲ್ಲ. ಬಾರೋ’ ಎಂದು ನನ್ನ ಕೈಹಿಡಿದು ಕೊಠಡಿಯೊಳಕ್ಕೆಳೆದುಕೊಂಡ.

* * *