ಇಂದು ಕೆನರಾಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿದ್ದು, ನಿವೃತ್ತನಾಗಿರುವ ನಟ ಎಚ್‌.ಜಿ. ಸೋಮಶೇಖರರಾವ್‌ ಉರುಫ್‌ ಸೋಮಣ್ಣ, ಅಲಿಯಾಸ್‌ ಸೋಮು ನಾಮ ವೈವಿಧ್ಯತೆಯಿಂದ ಮಿಂಚುತ್ತ ಹಂತಹಂತವಾಗಿ ಬೆಳೆದು ಬಂದ ಬಗೆಯ ಬಣ್ಣನೆ ಯಾರಿಗಾದರೂ ಭ್ರಮೆ ಬರಿಸುವಂಥದ್ದು.

ಪುರಾತನ ಕಾಲದ ಮಾತು. ಅಂದರೆ ಪುರಾಣ ಕಾಲದ ಮಾತೇನಲ್ಲ. ಇದು ೧೯೫೫-೫೬ರ ಮಾತು. ಈ ಸೋಮಣ್ಣ ಆಗ ಮೈಸೂರಿನಲ್ಲಿದ್ದ. ಮಹಾರಾಜ ಕಾಲೇಜಿನಲ್ಲಿ ಓದಿದ ಈತ ಎಂ.ಎ. ಪರೀಕ್ಷೆಯಲ್ಲಿ ಫಸ್ಟ್‌ ರ್ಯಾಂಕ್‌ ಗಳಿಸಿದಾಗ್ಯೂ ಕೆಲಸಕಾರ್ಯವಿಲ್ಲದೆ ಸುಮಾರು ವರುಷ ಒಂದರ ಕಾಲ ಮೈಸೂರಿನಲ್ಲಿದ್ದ. ವಿದ್ಯಾರ್ಥಿ ದಿಸೆಯಲ್ಲಿದ್ದಾಗಿನಿಂದಲೂ ಈ ಸೋಮುವಿನ ಸಹಚರನಾಗಿದ್ದವನು ನಾನು. ನಾನಾಗ ಮೈಸೂರು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಓಡುತ್ತಿದ್ದೆ.

ಸೋಮು ಮೈಸೂರಿನಲ್ಲಿ ಓದುತ್ತಿದ್ದ ಕಾಲದಲ್ಲಿ ನನಗೆ ಪರಿಚಿತನಾಗುವ ಮುನ್ನ, ಎಲ್ಲೆಲ್ಲಿದ್ದನೋ ಏನೋ ನನಗೆ ತಿಳಿಯದು. ಆದರೆ ಎಂ.ಎ. ಮುಗಿಸಿದ ನಂತರ ಈತ ಭದ್ರವಾಗಿ ಬೇರೂರಿದ್ದು ನಮ್ಮ ಅನಂತುವಿನ (ಮೈಸೂರು ಅನಂತಸ್ವಾಮಿ) ಮನೆಯಲ್ಲಿ.

ಮೈಸೂರಿನಲ್ಲಾಗ ಅನಂತು “ಮ್ಯಾಂಡೊಲಿನ್‌ ಅನಂತಸ್ವಾಮಿ” ಎಂದೇ ಫೇಮಸ್ಸು. ಅನಂತುವೂ ನನಗೆ ಆ ಕಾಲದಿಂದಲೇ ಆತ್ಮೀಯನೆನೆಸಿದ್ದ. ಮೊದಲಿಗೆ ಅನಂತು ಮೈಸೂರು ಮಂದಿಯ ಗಮನ ಸೆಳೆದದ್ದು ಆತ ಸದಾಕಾಲವೂ ಸೊಂಟದಲ್ಲಿರಿಸಿಕೊಂಡಿರುತ್ತಿದ್ದ ಸಣ್ಣ ಕೊಳಲಿನಿಂದ. ಶಾರದಾ ವಿಲಾಸ್‌ ಕಾಲೇಜಿನಲ್ಲಿ ಇಂಟರ್ ಕೋರ್ಸ, ತಪ್ಪು ತಪ್ಪು, ಇಂಟರ್ ಮೀಡಿಯಟ್‌ ಕೋರ್ಸ ಓದುತ್ತಿದ್ದ ಈತ ಮೈಸೂರಿನ ಯಾವುದೇ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂಗೀತ ಸ್ಪರ್ಧೆಯಲ್ಲಿ ತಪ್ಪದೆ ಹಾಜರ್ರು. ‘ಅನಂತಸ್ವಾಮಿ’ ಎಂದು ಕರೆದೊಡನೆ ಈತ ವೇದಿಕೆಯನ್ನೇರಿ ಸೊಂಟದಲ್ಲಿ ಸಿಕ್ಕಿಸಿಕೊಂಡಿರುತ್ತಿದ್ದ ಪಿಳ್ಳಂಗೋವಿಯನ್ನು ಹೊರಗೆಳೆದು ತುಟಿಗಿಕ್ಕಿ ತೂತುಗಳ ಮೇಲೆ ಬೆರಳಾಡಿಸುತ್ತ ನುಡಿಸಿದನೆಂದರೆ ಮುಗಿಯಿತು, ವಾದ್ಯವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಇವನಿಗೇ ಕಟ್ಟಿಟ್ಟ ಬುತ್ತಿ.

ಕಾಲ ಕಳೆದಂತೆ ಈತ ಕೊಳಲೂದುವುದನ್ನೂ ಬಿಟ್ಟು, ಮೌತಾರ್ಗನ್‌ ಊದಲಾರಂಭಿಸಿದ. ನಂತರ ಹಾರ್ಮೋನಿಯಂ. ತದನಂತರ ಬುಲ್‌ ಬುಲ್‌ ತರಂಗ್‌, ತತ್ತದನಂತರ ತಬಲ, ಹೀಗೆ ಈ ವಿವಿಧ ವಾದ್ಯಗಳೆಲ್ಲಾ ಈ ಕಲಾವಿದನ ಕೈಸೇರುತ್ತಿದ್ದಂತೆ ಇವೆಲ್ಲ ಈತನಿಗೆ ಕರತಲಾಮಲಕ. ಆಗ ಅನಂತು ಸಕಲ ವಾದ್ಯವಿದ್ಯಾ ಪಾರಂಗತ.

ಅನಂತು ಆಗ ಇದ್ದದ್ದು ಕೃಷ್ಣಮೂರ್ತಿ ಪುರಮ್ಮಿನ ಹಳೆಯ ಹೆಂಚು ಮನೆಯೊಂದರಲ್ಲಿ. ಈಗಲೂ ಆ ಮನೆ ಅಲ್ಲಿ ಹಾಗೆಯೇ ಇದೆ. ಇತ್ತೀಚಿಗೆ ಮನೆಯ ಮುಂದಿನ ಗೋಡೆಯ ಮೇಲೆ “ಮೈಸೂರು ಅನಂತಸ್ವಾಮಿ, ಸಂಗೀತ ನಿರ್ದೇಶಕರು” ಎಂಬ ಬೋರ್ಡಿರುವುದಷ್ಟೇ ಆ ಮನೆ ಕಂಡಿರುವ ಬದಲಾವಣೆ.

ಆಗ, ಆ ಮನೆಯಲ್ಲಿ, ಅನಂತುವಿನ ಅಪ್ಪ, ಅಮ್ಮ ಯಾರೂ ಅಲ್ಲಿರಲಿಲ್ಲ. ಇಡೀ ಮನೆಯಲ್ಲಿ ಇದ್ದದ್ದು ಈ ಅನಂತು, ಅಷ್ಟೆ. ಮನೆ ಮುಂದಿನ ಜಗುಲಿಯ ಪಕ್ಕಕ್ಕೆ ಒಂದು ಸಣ್ಣ ರೂಮು. ಅದರಲ್ಲೊಂದು ಮರದ ಮಂಚ. ಮದಕರಿನಾಯಕನ ಕಾಲದ್ದಿರಬೇಕು. ಒಂದೆರಡು ಸ್ಟೂಲು, ಚಾಪೆ. ಎಲ್ಲಿ ನೋಡಿದರೂ, ಏತರ ಮೇಲೆ ನೋಡಿದರೂ ವಾದ್ಯಗಳೇ. ಗೋಡೆಯ ಗೂಟದಲ್ಲಿ ಗಿಟಾರು, ಮಂಚದ ಮೇಲೆ ಮ್ಯಾಂಡೋಲಿನ್‌, ತಲೆದಿಂಬಿನ ಪಕ್ಕಕ್ಕೆ ತಬಲಗಳು, ಮೂಲೆಯಲ್ಲಿ ತಂಬೂರಿ, ದಿಂಬಿನಡಿ ಮೌತಾರ್ಗನ್‌, ಸುರಿನ ಬಿದಿರುಗಳ ಮಧ್ಯೆ ತೂರಿಸಿದ್ದ ಕೊಳಲು, ಮತ್ತೆ ಮಂಚ,  ಚಾಪೆ, ಎಲ್ಲದರ ಮೇಲೂ ಅಡಿಗ, ಕುವೆಂಪು, ಕೆ.ಎಸ್‌.ನ., ರಾಜರತ್ನಂ, ಪುತಿನ, ಇವರ ಗೀತಸಂಕಲನಗಳು.

ಈ ರೀತಿಯ ಸವಲತ್ತು ಸಲಕರಣೆಗಳಿಂಧ ತುಂಬಿ ತುಳುಕುತ್ತಿದ್ದ ಕೊಠಡಿಗೆ ಇದ್ದುದೊಂದೇ ಕಿಟಕಿ. ‘ಕಿಟಕಿ’ ಅನ್ನುವುದಕ್ಕಿಂತ ಅದನ್ನು ‘ಕಿಂಡಿ’ ಅನ್ನುವುದೇ ಮೇಲು. ಒಂದಡಿ ಅಗಲ, ಒಂದೂವರೆ ಅಡಿ ಎತ್ತರವಿರಬಹುದು ಅದರ ಸೈಜು. ಸಾಮಾನ್ಯವಾಗಿ ಸದಾಕಾಲವೂ ಬಾಗಿಲು ಜಡಿದು ಕವಿತೆಗಳಿಗೆ ರಾಗ ಸಂಯೋಜಿಸುತ್ತಿದ್ದ ಅನಂತುವಿನ ಈ ಆಸ್ಥಾನಕ್ಕೆ ವಾಯು, ಪ್ರಾಣವಾಯು ತ ಊರಿಬರಬೇಕಿದ್ದುದು ಈ ತೂಬಿನಿಂದಲೇ. ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಅನ್ನ ನೀರಿನ ಆಸೆ, ಆತಂಕವೂ ಇಲ್ಲದೆ ಅಂದಿನ ದಿನಗಳಲ್ಲಿ ಅನಂತು ಅಭ್ಯಾಸ ನಡೆಸುತ್ತಿದ್ದುದನ್ನು ನಾನು ದಿನನಿತ್ಯವೆಂಬಂತೆ ಗಮನಿಸಿದ್ದೇನೆ .

ತಾಳಬ್ರಹ್ಮ ಚಿಕ್ಕರಾಮರಾಯರ ಮೊಮ್ಮಗ ಈ ಮೈಸೂರು ಅನಂಥಸ್ವಾಮಿ. ತಾತನಂತೆಯೇ ಈತ.  ತಾಳದ ಮೇಲೆ ಬೇತಾಳದ ಬಿಗಿಪಟ್ಟು. ಆ ಪಟ್ಟನ್ನು ಗಿಟ್ಟಿಸಿಕೊಳ್ಳಲು ದಿನವಿಡ ಈ ತಬಲ ನುಡಿಸುತ್ತಿದ್ದ ಶ್ರಮಪಟ್ಟು, ಚಿಟುಗುಟ್ಟುವ ಬೆರಳುಗಳಲ್ಲಿ ಬಿರುಕು ಮೂಡುವವರೆಗೆ. ಆ ಕಾಲದಲ್ಲಿ ಅಕ್ಕಪಕ್ಕದವರು ತಲೆಚಿಟ್ಟು ಹಿಡಿದರೂ ಅನಂತುವ ಇನ  ಈ ಯಮಸಾಧನೆಗೆ ಅಡ್ಡಿ ಮಾಡದೆ ಇದ್ದುದೇ ಆಶ್ಚರ್ಯ.

ಸಂಗೀತವಾದ್ಯಗಳೆಂದರೆ ಅನಾದಿ ಕಾಲದಿಂದಲೂ ಅನಂತುವಿಗೆ ಅಪ್ಯಾಯಮಾನ, ಅಭಿಮಾನ. ಒಮ್ಮೆ ಇಬ್ಬರು ಅನಂತುವಿನ ಸಂಗೀತ ಕಾರ್ಯಕ್ರಮವನ್ನು ತಮ್ಮೂರಿನಲ್ಲಿ ಏರ್ಪಡಿಸಲೋಸುಗ ಈತನನ್ನು ಕಾಣಲು ಬಂದಿದ್ದರು. ಅನಂತಸ್ವಮಿ ಅಡ್ರೆಸ್ಸನ್ನು ಹಿಡಿದು, ಅಡ್ಡಾಡಿ ಅರಸಿಬಂದಿದ್ದ ಅವರು ಅನಂತುವಿನ ಕೊಠಡಿಯಲ್ಲಿ ಅಮರಿದ್ದರು. ಅನಂತುವೂ ಅವರೂರಿಗೆ ಹೋಗಿ ಕಾರ್ಯಕ್ರಮವನ್ನು ಕೊಡುವುದರ ಬಗ್ಗೆ ಆಲೋಚಿಸುತ್ತಿದ್ದ. ಏತನ್ಮಧ್ಯೊಎ ಅವರು ಸುಮ್ಮನೆ ಗಂಭೀರವಾಗಿ ಅಮರಿರಲಿಲ್ಲ. ಅಕ್ಕಪಕ್ಕವನ್ನು ಅವಲೋಕಿಸುತ್ತಿದ್ದ ಅವರ ಕೈಗೆ ಗಕ್ಕನೆ ಎಟುಕಿದ್ದು ಶೃತಿ ಮಾಡಿ ಇರಿಸಿದ್ದ ತಬಲ. ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಯಿತು. ಅದನ್ನು ದರದರನೆ ಎಳೆದುಕೊಂಡವರೆ ಢಮಢಮ ಎಂದು ಕುಟ್ಟಲಾರಂಭಿಸಿದರು. ಕೇಳಿದ ಅನಂತುವಿಗೆ ಕೋಪದ ಕಿಚ್ಚೇರಿತು. ಅವರತ್ತ ಕೆಂಗಣ್ಣು ಕಾರುತ್ತ ‘ಏಳ್ರೀ ಮೇಲೆ’ ಎಂದ ಅನಂತು. ‘ಏಕೆ, ಏನಾಯ್ತು’ ಎನ್ನುತ್ತಾ ದಡಬಡನೆದ್ದರು ಅವರು. ‘ಆಗೋದೇನು, ನಿಮ್ಮ ತಲೆ, ಇದನ್ನು ಏನೂಂತ ತಿಳ್ಕೊಂಡಿದ್ದೀರ?, ಇದು ತಬಲ ಸ್ವಾಮಿ? ನಿಮ್ಮೂರ ಮಾರಮ್ಮನ ಜಾತ್ರೇಲಿ ಬಡಿಯೋ ತಮಟೆ ಅಲ್ಲ, ತಿಳೀತೆ?’ ಎಂದು ಅನಂತು ಅರಚಲು ತಬ್ಬಿಬ್ಬಾದ ಆತ ಇಂಗು ತಿಂದ ಮಂಗನಂತೆ ಹ್ಹಿ ಹ್ಹಿ ಹ್ಹೀ ಎಂದು ಹಲ್ಲು ಕಿರಿಯಲು, ‘ಮತ್ಯಾಕ್ರೀ ಹಲ್ಕಿರೀತಾ ನಿಂತಿದ್ದೀರಿ. ನಾನು ನಿಮ್ಮೂರಲ್ಲಿ ಹಾಡೋಲ್ಲ. ದಯವಿಟ್ಟು ಎದ್ಹೋಗಿ’ ಎನ್ನಲು, ಈತನ ಚರ್ಯೆ ಏನೇನೀ ಅರ್ಥವಾಗದ ಅವರು ದುಡುದುಡನೆ ಹೊರಟು ಹೋದರು, ಹಾಕಿಕೊಂಡು ಬಂದಿದ್ದ ಚಪ್ಪಲಿಯನ್ನು ಮರೆತು.

ರಂಗೇರಿದ್ದ ಅನಂತುವನ್ನು ಅಂದು ಸಮಾಧಾನ ಪಡಿಸಲು ನಮಗೆ ಸಾಕಾಯ್ತು. ಸಂಗೀತದ ವಾದ್ಯಗಳೆಂದರೆ ಅನಂತುವಿಗೆ ಲಾಗಾಯ್ತಿನಿಂದಲೂ ಅಷ್ಟು ಅಭಿಮಾನ, ಪ್ರೀತಿ ಎನ್ನುವುದಕ್ಕೆ ಇದೊಂದು ನಿದರ್ಶನ.

ಆ ಕಾಲದಲ್ಲಿ ಈ ಅನಂತುವಿನ ಅರಮನೆಯಲ್ಲಿ ಆಶ್ರಯದಾತರಾಗಿ ಅಂಟಿಕೊಂಡಿದ್ದವರು ಇಬ್ಬರು. ಒಬ್ಬ ಸೋಮು, ಇನ್ನೊಬ್ಬ ಗುಣಸಿಂಗ್‌. (ಗುಣಸಿಂಗ್‌ ಈಗ ಖ್ಯಾತ ಸಂಗೀತ ನಿರ್ದೇಶಕನೆನಿಸಿ ಮದ್ರಾಸಿನಲ್ಲಿದ್ದಾನೆ. ಈ ಅತಿಥಿದ್ವಯರಿಗೆ ಆಶ್ರಯವನ್ನೀಯಲು ಅನಂತುವಿಗೆ ಅಡ್ಡಿಯೇನಿರಲಿಲ್ಲ. ಆದರೆ ಅನ್ನದ ಏರ್ಪಾಡು? ಆಗದ ವಿಷಯ. ಅಲ್ಪದರಲ್ಲಿಯೇ ಆಗಿಸಿಕೊಳ್ಳಲು ಅನ್ನ ಮಾಡಿಕೊಳ್ಳುವುದಂತಿರಲಿ, ಅಗ್ಗಿಷ್ಟಿಕೆ ಹಚ್ಚುವುದನ್ನೂ ಈ ಅಂಗದರು ಅರಿಯರು. ಆ ಸಮಯದಲ್ಲಿ ಈ ತ್ರಿಮೂರ್ತಿಗಳ ತ್ರಿಕಾಲಜ್ಞಾನಕ್ಕೆ ಹೊಳೆದದ್ದು ಅಲ್ಲೇ ಸಮೀಪದಲ್ಲಿದ್ದ ಬಲ್ಲಾಳ, ಮತ್ತವನ ಖ್ಯಾತಿವೆತ್ತ “ಬಲ್ಲಾಳ್‌ ಹೋಟೆಲ್‌”.

ಮುಂಜಾನೆಯಾಗುತ್ತಿದ್ದಂತೆ ಈ ಮೂವರು ಮಂಗಮಾನವ ಸದೃಶರು ದಟ್ಟಿಪಂಚೆಯನ್ನುಟ್ಟು, ಸ್ಯಾಂಡೋಬನಿಯನ್‌ ತೊಟ್ಟು, ಸೋಪು, ಟೂತ್‌ ಪೇಸ್ಟ್‌, ಬ್ರಶ್ಯು ಹಿಡಿದು, H.M.T. ಬಾಬ್ತಿನವರಾಗಿ (ಅಂದರೆ ಹೆಗಲ ಮೇಲೆ ಟವಲ್‌ ಹಾಕಿಕೊಂಡವರಾಗಿ), ಬಲ್ಲಾಳ್‌ ಹೋಟೆಲಿಗೆ ಧಾವಿಸಿ, ದಿನನಿತ್ಯದ ಪ್ರಾತರ್ವಿಧಿ ಕರ್ಮಗಳನ್ನೆಲ್ಲಾ ಅಲ್ಲೇ ಮುಗಿಸಿ, ಮತ್ತಲ್ಲೇ ತಿಂಡಿ ತಿಂದು, ಕಾಫಿ ಕುಡಿದು, ಬೆಳಗಾಗುತ್ತಲೇ ಬೊಟ್ಟಿಡಲು ಬರುತ್ತಿದ್ದವರಿಗಾಗಿಯೇ ಬಲ್ಲಾಳ ಇಟ್ಟಿರುತ್ತಿದ್ದ ‘ಬ್ಲೂ ಬೈಂಡ್‌’ ಬುಕ್ಕಿನಲ್ಲಿ ವರ್ತನೆಯ ಬೊಟ್ಟಿಟ್ಟು, ಭರ್ತಿಯಾದ ಹೊಟ್ಟೆಯ ಮೇಲೆ ಕೈಯ್ಯಾಡಿಸುತ್ತಾ ಉಂಡಾಡಿಗಳಂತೆ ಮನೆಗೆ ಹಿಂತಿರುಗುತ್ತಿದ್ದರು ಇವರು. ನಂತರ ಅನಂತು ಸಂಗೀತಾಭ್ಯಾಸದಲ್ಲಿ ತಲ್ಲೀನ. ಕೆಲಸವಿಲ್ಲದ ಇವರು ಕೆಲಕಾಲ ಕೂಗಾಡಿ ಮತ್ತೇನೂ ತೋಚದೆ ಮತ್ತು ಬಂದವರಂತೆ ಮಲಗಿಬಿಡುತ್ತಿದ್ದರು, ಮಧ್ಯಾಹ್ನದವರೆಗೆ.

ಮಧ್ಯಾಹ್ನ ಎರಡಾಗುತ್ತಿದ್ದಂತೆ ಎದ್ದವರೇ, ಹೊರಗೆ ಹೊಲಕ್ಕೆ ಹೋದ ಹಸು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಲು ದೊಡ್ಡಿಯ ಕಡೆ ಕಾಲಿಕ್ಕುವಂತೆ, ಈ ಮೂವರೂ ಬಲ್ಲಾಳ್‌ ಹೋಟೆಲ್ಲಿನ ಕಡೆ ಕಾಲಿಕ್ಕುತ್ತಿದ್ದರು, ಊಟಕ್ಕಾಗಿ. ಊಟದ ನಂತರ ಭುಕ್ತಾಯಾಸ. ಮನೆಗೆ ಬಂದು ಮತ್ತೆ ಮಲಗುವುದು. ಸಂಜೆ ಏಳರ ಹೊತ್ತಿಗೆ ಏಳುವುದು, ಸಿಂಗರಿಸಿಕೊಂಡು ಅನಂತು ಕಿಟಕಿಯ ಪಕ್ಕ ಇಟ್ಟಿರುತ್ತಿದ್ದ ಟಾಲ್ಕಮ್‌ ಪೌಡರ್ರನ್ನು ಯಾವ ಮುಲಾಜೂ ಇಲ್ಲದೆ ಇವರು ತಮ್ಮ ಕಂಕುಳು ಸಂದು, ಎದೆ, ಬೆನ್ನಮೇಲೆಲ್ಲಾ ಧಾರಾಳವಾಗಿ ಸುರುವಿಕೊಂಡು ವಿಟಪುರುಷ ಶಿಖಾಮಣಿಗಳಂತೆ ಹೊರಬಂದು, ಅಲ್ಲಲ್ಲೇ ಒಸಿ ಅಡ್ಡಾಡಿ, ಎದುರಾಗುವ ಏಂಜೆಲ್ಗಳಿಗೆ ಏಟು ಹಾಕುತ್ತಾ, ಎಂಟರ ಹೊತ್ತಿಗೆ ಸೀಟಿ ಹೊಡೆಯುತ್ತಾ ಮತ್ತೆ ಬಲ್ಲಾಳ್‌ ಹೋಟೆಲ್ಲಿನಲ್ಲಿ ಈ ಬಂಟರು ನೆಂಟರಂತೆ ಹಾಜರ್ರು, ರಾತ್ರಿ ಊಟಕ್ಕೆ. ನಂತರ ಇವರಾರೂ ಮನೆಗೆ ಮಲಗಲು ಹೋಗುತ್ತಿರಲಿಲ್ಲ. ಬದಲಿಗೆ ಆ ಕಾಲದಲ್ಲಿ, ಕೃಷ್ಣಮೂರ್ತಿಪುರಂನಲ್ಲಿ, ಹೆಸರುವಾಸಿಯಾಗಿದ್ದ ಸೂರಿಯ ಸರ್ಕುಲೇಟಿಂಗ್‌ ಲೈಬ್ರರಿ ‘ಬ್ಲೂಶಾಪ್‌’ನ ಹೊರಗಿದ್ದ ಕಟ್ಟೆಯೇ ಈ ಮೂವರು ಹಾಗೂ ನಮ್ಮೆಲ್ಲರಿಗೂ ಹರಟೆ ಹೊಡೆಯಲು ಆ ಕಾಲದಲ್ಲಿ ಅಶ್ವತ್ಥ ಕಟ್ಟೆಯಿದ್ದಂತೆ ಅಥವಾ ಅಯ್ಯಪ್ಪನ ಚಾವಡಿ ಇದ್ದಂತೆ. ನಾವುಗಳೂ ನಮ್ಮ ನಮ್ಮ ಮನೆಗಳಲ್ಲಿ ಉಂಡು ಆ ವೇಳೆಗೆ ಇವರೊಡನೆ ಸೇರಿ ಹರಟೆ ಹೊಡೆಯಲು ಆ ಅಯ್ಯಪ್ಪನ ಚಾವಡಿಯಲ್ಲಿ ತಪ್ಪದೆ ಸೇರುತ್ತಿದ್ದೆವು. ಮಾತೋ ಮಾತು. ಹರಟೆ, ಒಣಹರಟೆ, ಕಾಡುಹರಟೆ.  ಹೆಚ್ಚು ಓದಿರದ ನಮ್ಮಗಳ ಪೈಕಿ ಅತಿ ಹೆಚ್ಚು ಓದಿದ್ದವನೆಂದರೆ, ಅವನು, ಹೆಚ್‌.ಚಿ. ಸೋಮಶೇಖರ ರಾಯನೆ.  ನಮ್ಮ ಅಂದಿನ ದೈನಂದಿನ ಸಭೆಗಳಿಗೆ ಅವನದ್ದೇ ಅಧ್ಯಕ್ಷತೆ. ರಾತ್ರಿ ಹನ್ನೆರಡು ಹೊಡೆದರೂ ನಮ್ಮ ಸಭೆ ಬರಕಾಸ್ತಾಗುತ್ತಿರಲಿಲ್ಲ. ಬೀಟ್‌ ಪೋಲೀಸಿನವರು ಬಂದು ಬೈದ ಬಳಿಕ ಅವರಿಗೊಂದೆರಡು ಬೀಡಿ ದಕ್ಷಿಣೆಯನ್ನಿತ್ತು ಒಲ್ಲದ ಮನಸ್ಸಿನಿಂದಲೇ ಮನೆ ಸೇರಿಕೊಳ್ಳುತ್ತಿದ್ದೆವು.

ಆಗ ನಮ್ಮ ನಮ್ಮಲ್ಲಿ ಅದೆಂತಹ ಆತ್ಮೀಯತೆ, ಅದೆಂತಹ ಮಾತು, ಅದೆಂತಹ ನಗೆ, ಅದನ್ನೆಲ್ಲಾ ನೆನೆದಾಗ ಆ ದಿನಗಳು ಅನ್ಯಾಯವಾಗಿ ಕಳೆದುಹೋದುವಲ್ಲಾ ಎಂದು ಇಂದಿಗೂ ನನಗೆ ಬೇಸರವಾಗುತ್ತದೆ.

* * *