ನೆನಪಿನಲ್ಲಿ ಅನವರತ ಉಳಿದ ಮೈಸೂರು ಅನಂತಸ್ವಾಮಿ

ನಮ್ಮೆಲ್ಲರ ಅಚ್ಚುಮೆಚ್ಚಿನ ಅನಂತು ದಿಗಂತವನ್ನು ಸೇರಿ ಆಗಲೇ ಹತ್ತು ತಿಂಗಳು ಎಗರಿಹೋಯಿತು. ಈಚೀಚಿಗೆ ಕಾಲವೂ ಬಹು ಅಗ್ಗವಾಯಿತು ಅನ್ನಿಸುತ್ತಿದೆ. ನನಗೆ ಬಹು ಹತ್ತಿರದವರು ಎನ್ನುವವರ ಪೈಕಿ ಬಹು ಎತ್ತರದ ಸ್ಥಾನವನ್ನು ಅನಂತುವಿಗೆ ನಾನು ಇತ್ತಿದ್ದೆ. ನನ್ನ ಅವನ ಸ್ನೇಹ ಸಲುಗೆಯ ಒಡನಾಟ ಐವತ್ತು ವಸಂತಗಳಿಗೂ ಆಚಿನದು. ಆದರೆ ನನಗೆ ಅಷ್ಟು ಆತ್ಮೀಯನಾಗಿದ್ದ ಅವನು, ಅನಂತು, ಈಗಿಲ್ಲವೆಂದರೆ ಈಗಲೂ ನನಗೆ ನಂಬಿಕೆಯಾಗುವುದಿಲ್ಲ . ಅಷ್ಟರಮಟ್ಟಿಗೆ ತನ್ನ ವ್ಯಕ್ತಿತ್ವವನ್ನು ಆತ್ಮೀಯರಲ್ಲಿ ಅಚ್ಚೊತ್ತಿ ಅದೃಶ್ಯನಾಗಿದ್ದಾನೆ ಅನಂತು. ಕೊನೆಯುಸಿರೆಳೆಯುವ ಕೆಲವೇ ತಿಂಗಳ ಕೆಳಗಷ್ಟೇ ತನ್ನ ಕೋಮಲ ಕಂಠಕ್ಕೆ ಕಟ್ಟಲಾರಂಭಿಸಿದ್ದ ಕೆಂಡಸರದ ಕಿಲುಬನ್ನು ಕ್ಯಾಕರಿಸಿ ಚೇತರಿಸಿಕೊಂಡಿದ್ದ ಅನಂತು, ನಂಜು ನುಂಗಿದ ನೀಲಕಂಠನಂತೆ, ನೂರ್ಕಾಲ ನಲಿದೇನೆಂಬ ನಂಬಿಕೆಯನ್ನು ನೆಚ್ಚಿದ್ದವರಿಗೆಲ್ಲಾ ನೀಡಿ ಅಂತೆಯೇ ನಡೆಯಲಾರಂಭಿಸಿದ್ದ, ಚಿಕಿತ್ಸೆ ಪಡೆದು ಬಂದ ಬಳಿಕ. ಅದಕ್ಕೆ ಮೊದಲು.

ಕೆಂಡಸರದ ಹೆಸರು ಕೇಳುತ್ತಲೇ ಕುಸಿಯುವಂತಾಗುವುದು ಸಾಮಾನ್ಯ. ಪಿಂಡ ಬಯಸುವ ಪಿಡುಗು. ಅಂಥದರಲ್ಲಿ ತನ್ನನ್ನು ಆ ಭೇತಾಳ ಬೆನ್ನೇರಿ ಮುಟ್ಟಿಕೊಂಡಿದೆ ಎಂದು ತಿಳಿದಾಗಲೂ ಮಾತನಾಡಿಸಲು ಮನೆಗೆ ಬಂದ ಮಿತ್ರರೆದುರು ಮಂದಸ್ಮಿತ ಮುಖಮುದ್ರೆಯನ್ನೇ ಬೀರುತ್ತ, ಸಾಂತ್ವನ ಸಾರಲು ಬಂದವರನ್ನು ಇವನೇ ಸಂತೈಸುತ್ತ, ದುಃಖವಾತಾವರಣದ ದಿಕ್ಕು ಬದಲಿಸಲು ಸುಗಮಸಂಗೀತದ ವಿಚಾರವನ್ನೆತ್ತಿ ಬಂದವರ ಚಿತ್ತವನ್ನು ಬೇರೆತ್ತಲೋ ಬದಲಿಸುತ್ತ, ದಂ ಅಡಗುತ್ತಿದ್ದರೂ ಧೃತಿಗೆಡದೆ ಮಾತನಾಡುತ್ತಿದ್ದ ಅನಂತುವಿನ ಗಟ್ಟಿಮನದ ದಿಟ್ಟತನವನ್ನು ಕಂಡು ನಾನು ಬೆಕ್ಕಸ ಬೆರಗಾಗಿದ್ದುಂಟು. ಯಮಧೈರ್ಯ ಅನ್ನುವುದು ಇದನ್ನೇ.

ಬೆಂಗಳೂರು ಆಸ್ಪತ್ರೆ, ಡಿಸ್‌ಗ್ರೇಸ್‌ ಆಗಿದ್ದ ಗಂಟಲಿನ ಚಿಕಿತ್ಸೆಯಿಂದ ಗುಣಮುಖನಾಗಿ ಆಯುಷ್ಯದ ಗ್ರೇಸ್‌ ಪಡೆದು ಆಗತಾನೆ ಅನಂತು ಆಚೆ ಬಂದಿದ್ದ. ಜೆ.ಪಿ.ನಗರದಲ್ಲಿರುವ ‘ಭಾವಸಂಗಮ’ ಅನಂತುವಿನ ಅರಮನೆ. ಆ ಸಮಯದಲ್ಲಿ ಭಾವಸಂಗಮದ ಬಾಗಿಲಲ್ಲಿ ತನ್ನನ್ನು ಕರೆದೊಯ್ಯಲು ಕಾದು ನಿಂತಿದ್ದ ಯಮನಿಗೆ ಅನಂತರ ಬಾ ಅನ್ನುತ್ತ ಅನಂತು ಬೈ ಬೈ ಹೇಳಿ ಬಾಗಿಲು ಹಾಕಿಕೊಂಡಿದ್ದ. ಹಾಗೆ ಅಂದು ಸಾವಿನ ಸುಂಕ ಸಿಗದೆ ಮುಂದೆ ಸಾಗಿದ್ದ ಯಮರಾಯ ಮತ್ತಿರುಗಿ ಇನ್ನೊಮ್ಮೆ ಅಷ್ಟು ಬೇಗನೆ ಬಂದು ‘ಭಾವಸಂಗಮ’ದ ಬಾಗಿಲು ಬಡಿದಾನೆಂದು ಅನಂತುವಾಗಲಿ ಅಥವಾ ಅವನವರಾಗಲಿ ಅಂದುಕೊಂಡಿರಲಿಲ್ಲ.

ಕಂಠವನ್ನು ಸರಿಪಡಿಸಿಕೊಂಡು ಹಿಂದಿರುಗಿದ್ದ ಅನಂತುವನ್ನು ಕಾಣಲು ಆ ಸಮಯದಲ್ಲೊಮ್ಮೆ ಅವನ ಮನೆಗೆ ಹೋಗಿದ್ದೆ. ಕುತ್ತಿಗೆಯ ಸುತ್ತಲೂ ಸುಕ್ಕುಗಟ್ಟಿದ್ದ ಚರ್ಮ ಸುಟ್ಟು ಕಲಕಲಾಗಿದ್ದುದನ್ನು ಬಿಟ್ಟು ಬೇರಾವ ವ್ಯತ್ಯಾಸವೂ ಅನಂತುವಿನ ಆಕೃತಿಯಲ್ಲಾಗಲಿ ಚಹರೆಯಲ್ಲಾಗಲಿ ಕಂಡು ಬರಲಿಲ್ಲ. ನನ್ನನ್ನು ಬಾಗಿಲಲ್ಲಿ ಕಂಡೊಡನೆ ಅದೇ ಆತ್ಮೀಯತೆಯಿಂದ ಎದ್ದು ಬಂದ ಅನಂತು “ಬಾರೋ ಕೇಶವ, ಬಾ’’ ಎನ್ನುತ್ತ ನನ್ನ ಕೈ ಹಿಡಿದು ಒಳಗೊಯ್ದು ಪಕ್ಕದಲ್ಲಿ ಕೂರಿಸಿಕೊಂಡ. ಹಜಾರದಲ್ಲಿದ್ದ ಹಲವರಿಗೆ ‘ಇವ್ನೆ ಬಿ.ಎಸ್‌.ಕೇಶವರಾವ್‌ ದಿ ಗ್ರೇಟ್‌, ತುಂಬ ಒಳ್ಳೆ ಆರ್ಟಿಸ್ಟು, ನಮ್ಮ ಕಾಳಿಂಗರಾಯರ ಜೀವನ ಚರಿತ್ರೆಯನ್ನು ಸೊಗಸಾಗಿ ಬರ್ದಿದ್ದಾನೆ. ನೀವೆಲ್ಲ ಓದ್ಬೇಕು’ ಎಂದು ಪರಿಚಯಿಸಿದ. ಅನಂತರ ನಾನು ಬರೆದಿದ್ದ ‘ನಾ ಕಮಡ ಪುಂಡ ಪಾಂಡವರು’ ಲೇಖನಗಳ ಕಟ್ಟು ಹೊರತೆಗೆದು “ಓದ್ಲೆನೋ ಅನಂತು?” ಎಂದೆ. “ಆಫ್‌ ಕೋರ್ಸ ಓದಮ್ಮಾ, ಗಟ್ಟಿಯಾಗಿ ಓದು. ಎಲ್ಲೂ ಕೇಳ್ಲಿ’ ಎಂದವನೆ ಆರಾಮವಾಗಿ ಕಣ್ಮುಚ್ಚಿ ಕೇಳುತ್ತ ಕೂತ. ಓದಿದ್ದಾಯಿತು. ಆಲಿಸಿದ ಅನಂತು ‘ವಂಡರ್ ಫುಲ್‌ ಕೇಶವ, ಅದೇನು ಜ್ಞಾಪಕಶಕ್ತೀನೋ ನಿಂದು! ನಿನ್ನ ರೀಡಿಂಗ್‌ ಕೇಳ್ತಾ ಕೇಳ್ತಾ ನಾನು ನಲವತ್ತು ವರ್ಷ ಹಿಂದಕ್ಕೆ ಹೊರಟ್ಹೋಗ್ಬಿಟ್ಟೆ ಕಣೋ, ರಿಮಾರ್ಕಬಲ್‌’ ಎಂದು ಮೆಚ್ಚಿ ಮಾತಾಡಿದ. ಬಳಿಕ ನಾನು ಲೇಖನಗಳೊಡನೆ ಲಗತ್ತಿಸಲು ಅವನ ಹಿಂದಿನ ವರುಷಗಳ ಚಿತ್ರಗಳು ಬೇಕೆಂದೆ. ಅದಕ್ಕವನು ಆಕಳಿಸುತ್ತ ‘ನನ್ನ ಯಂಗ್‌ ಏಜಿನ ಫೋಟೋಗಳು ಯಾವ್ದೂ ಇಲ್ಲಾಮ್ಮಾ. ಗಿವ್‌ ಮಿ ಎ ಡೇಸ್‌ ಟೈಮ್‌, ಹುಡುಕ್ಬಿಟ್ಟು ನಿನ್ಮನೇಗೇ ತಂದ್ಕೊಡ್ತೀನಿ’ ಅಂದ. ‘ಆಯಿತು’ ಎಂದು ಹೊರಬಂದೆ.

ಮಾರನೆಯ ದಿನ ಬೆಳಿಗ್ಗೆ ತಾನೇ ತನ್ನ ಕೈನೆಟಿಕ್‌ ಹೋಂಡಾದಲ್ಲಿ ನನ್ನ ಮನೆಗೆ ಬಂದು ತನ್ನ ಮಡದಿಯ ಜೊತೆ ತೆಗೆಸಿಕೊಂಡಿರುವ ಮುದ್ದಾದ ಚಿತ್ರವನ್ನಿತ್ತು ಹೋದ. ಅದೇ ಕೊನೆ, ಅನಂತರ ಮತ್ತೆ ನಾನು ಅನಂತುವನ್ನು ಕಾಣುವುದೇ ಇಲ್ಲ ಎಂದು ಅಂದುಕೊಂಡಿರಲಿಲ್ಲ.

ಆರಂಭದಿಂದಲೂ ಅನಂತು ಬದುಕನ್ನು ಆರಾಮವಾಗಿಯೇ ತೆಗೆದುಕೊಂಡವನು. ವಿದ್ಯಾಭ್ಯಾಸದ ದಿನಗಳಲ್ಲಿ ಸೈನ್‌ ತೀಟಾ ಕಾಟಾ ತೀಟಾಗಳ ಕಾಟಕ್ಕೆ ಸಿಕ್ಕದೆ ಜಾರಿಕೊಂಡುಳಿದವನು. ಕಾಲೇಜಿಗೆ ಎಂಟರ‍್ರಾದರೂ ಇಂಟ್ರರನ್ನೇ ಮುಗಿಸಲಾಗದ ಮಹಾನುಭಾವ ಅನಂತು. ಆಗ, ಎಲ್ಲರ ದೃಷ್ಟಿಯಲ್ಲಿ ಅನಂತು ಅಪ್ರಯೋಜಕ. ಆದರೆ, ಆಗ ಲಘುಸಂಗೀತ ವಿಭಾಗದಲ್ಲಿ ಮುನ್ನಡೆಯುತ್ತಿದ್ದ ಈ ಮನುಷ್ಯ, ಸುಗಮಸಂಗೀತ ಕ್ಷೇತ್ರದಲ್ಲಿ ಮುಂದಿವನೇ ಒಂದು ‘ಇನ್‌ಸ್ಟಿಟ್ಯೂಶನ್‌’ ಆಗುತ್ತಾನೆಂದು ‘ಇಂಟ್ಯೂಶನ್ನಿ’ನಿಂದ ನುಡಿದ ಕಾಳಿಂಗರಾಯರ ‘ಇಲ್ಯೂಷನ್ನು’ ಸುಳ್ಳಲ್ಲವೆಂಬುದಕ್ಕೆ ಅಮರನಾಗಿರುವ ಅನಂತುವೇ ಸಾಕ್ಷಿ.

ಲಾಗಾಯ್ತಿನಿಂದಲೂ ಅನಂತು ಸ್ವಭಾವತಃ ಸರಸಿ. ಯಾರೊಡನೆಯೂ ಅವ ವಿರಸಗೊಂಡದ್ದನ್ನು ನಾನು ಕಂಡಿಲ್ಲ. ಸುಗಮ ಸಂಗೀತವನ್ನು ಸಾರಾಸಗಟಾಗಿ ಸರ್ವಸ್ವವೆಂಬಂತೆ ಸ್ವೀಕರಿಸಿದ್ದ ಅನಂತುವಿಗೆ ಲಾಗಾಯ್ತಿನಿಂದಲೂ ಕುಚೇಷ್ಟೆಯ ಹವ್ಯಾಸ, ಅವನ ಜೀವಿತಾಕಾಲದ ಆದಿಯಿಂದ ಅಂತ್ಯದವರೆವಿಗೆ, ಹಮ್ಮಿಕೊಂಡಿತ್ತು. ಸಂಗೀತವೃತ್ತಿಯಲ್ಲಿ ಬಹು ಎತ್ತರಕ್ಕೆ ಏರಿದ್ದರೂ ಪ್ರವೃತ್ತಿಯಲ್ಲಿ ಕುಚೇಷ್ಟೆ ಮಾಡುವ ಕಸುಬನ್ನಿವನು ಬಿಟ್ಟಿರಲಿಲ್ಲ.

೧೯೮೨ರ ಸುಮಾರು, ಮಂಗಳೂರಿನ ಪಾಲಿಟೆಕ್ನಿಕ್ಕಿನಲ್ಲಿ ಪ್ರಾಕ್ಟಿಕಲ್‌ ಪರೀಕ್ಷೆಗಳನ್ನು ನಡೆಸಲು ಅಲ್ಲಿಗೆ ಹೋಗಿದ್ದೆ. ಹೋಟೆಲೊಂದರಲ್ಲಿ ಉಳಿದಿದ್ದೆ. ರಾತ್ರಿ ಹತ್ತೂ ಮೂವತ್ತರ ಹೊತ್ತು. ಪಕ್ಕದ ರೂಮಿನಿಂದ ಯಾರೋ ಒಬ್ಬರು ‘ನೀನ್ನನ್ನಟ್ಟೀಗ್‌ ಬೆಳಕಂಗಿದ್ದೆ ನಂಜು’ ಎಂಬ ರಾಜರತ್ನಂರ ಗೀತೆಯನ್ನು ಹಾಡುತ್ತಿದ್ದುದು ಕೇಳಿಸಿತು. ಆಲಿಸಿದ್ದ ಅದೇ ಧ್ವನಿ. ಅಲರ್ಟ ಆದೆ. ಕಿವಿಯನ್ನು ಅಗಲಿಸಿ ಅತ್ತ ಕಡೆ ಮಾಡಿ ಆಲಿಸಿದೆ. ಹೌದು! ಆ ಧ್ವನಿ ಅನಂತುವಿನದೆ. ಆಶ್ಚರ್ಯವಾಯ್ತು. ಹೊರಬಂದೆ. ಪಕ್ಕದ ರೂಮಿನ ಬಾಗಿಲು ಅರೆಗದ ತೆಗೆದಿತ್ತು. ಮುಂದೆ ನಿಂತು ಮೆಲ್ಲನೆ ಬೆರಳ ಹಿಂಭಾಗದಿಂದ ಬಾಗಿಲನ್ನು ಬಡಿದೆ. ಹಾಡುವುದನ್ನು ನಿಲ್ಲಿಸಿ ಗಡುಸಾಗಿ ‘ಎಸ್‌’ ಎಂದಿತು ಒಳಗಿದ್ದ ವ್ಯಕ್ತಿ. ಬಾಗಿಲನ್ನು ಮತ್ತುಷ್ಟು ಸೆರಿಸಿ ಕುತ್ತಿಗೆಯನ್ನು ಕೊಕ್ಕರೆಯಂತೆ ಒಳಚಾಚಿ ಹಣಿಕಿದೆ. ಅಯ್ಯಯ್ಯೋ, ಅವನೆ, ನನ್ನ ಅಚ್ಚುಮೆಚ್ಚಿನ ಅನಂತು, ಮಂಚದ ಮೇಲೆ ಕುಳಿತು ಹಾರ್ಮಣಿ ನುಡಿಸುತ್ತ ಹಾಡುತ್ತಿದ್ದಾನೆ! ಎದುರಿಗೆ ಯಾರೋ ಇಬ್ಬರು ಮಧ್ಯವಯಸ್ಕರು ಕುಳಿತು ಕೇಳುತ್ತಿದ್ದಾರೆ. ಲೂಸಾಗಿದ್ದ ಲುಂಗಿಯನ್ನು ಬಿಗಿಪಡಿಸಿಕೊಳ್ಳುತ್ತ ‘ಏನೋ ಕೇಶವ, ನೀನಿಲ್ಲಿ?’ ಎಂದು ಉದ್ಗರಿಸಿದ. ನಾನಲ್ಲಿಗೆ ಬಂದಿದ್ದ ವಿಚಾರವನ್ನರುಹಿದೆ.

ಮಂಗಳೂರು ಆಕಾಶವಾಣಿಯವರು ಮರುದಿನ ಅಲ್ಲಿಯ ಪುರಭವನದಲ್ಲಿ ಏರ್ಪಡಿಸಿದದ ಸಂಗೀತ ಸಂಜೆಯಲ್ಲಿ ಭಾಗವಹಿಸಲು ಅನಂತು ವಿಶೇಷ ಆಹ್ವಾನಿತನಾಗಿ ಬೆಂಗಳೂರಿನಿಂದ ಬಂದಿದ್ದ. ‘ನಾಳೆ ಸಂಜೆ ಖಂಡಿತ ಬಾರೋ’ ಎಂದು ಆತ್ಮೀಯತೆಯಿಂದ ಆಹ್ವಾನಿಸಿದ ಅನಂತು, ‘ವಸಿ ಗುಂಡ್ಹಾಕ್ತೀಯಾ?’ ಎನ್ನುತ್ತ ವಿಸ್ಕಿ ಬಾಟಲಿನ ಬಿರುಟೆಯನ್ನು  ತಿರುಚಲಾರಂಭಿಸಿದ. ‘ಬೇಡಮ್ಮಾ ರಾಜ, ಬೆಳಿಗ್ಗ ಪ್ರಾಕ್ಟಿಕಲ್ಸ್‌ನ ಕಂಡಕ್ಟ್‌ ಮಾಡಬೇಕು, ಹ್ಯಾಂಗೋವರ್ನಲ್ಲಿ ಹೋದ್ರೆ ಸರಿಹೋಗೋಲ್ಲಾ ಅಂದೆ. ‘ಎಲ್ರನ್ನೂ ಪಾಸ್ಮಾಡ್ಸೊ ಪಾಪಿ’ ಎಂದು ನಕ್ಕ. ‘ಓಕೆ, ಗುಡ್‌ನೈಟ್‌’ ಅಂದವನೆ ನನ್ನ ರೂಮಿಗೆ ಹಿಂದಿರುಗಿದೆ. ಪಕ್ಕದ ರೂಮಿನಲ್ಲಿ ಅನಂತು ಗುಂಡೇರಿಸುತ್ತ ಗುನುಗುತ್ತಿದ್ದುದು ರಾತ್ರಿ ಎರಡಾದರೂ ನಿಂತಿರಲಿಲ್ಲ.

ಮರುದಿನ ಅಲ್ಲಿಯ ಪಾಲಿಟೆಕ್ನಿಕ್ಕಿನಲ್ಲಿ ಪ್ರಾಯೋಗಿಕ ಪರೀಕ್ಷಾ ಕಾರ್ಯವನ್ನು ಮುಗಿಸಿದೊಡನೆಯೇ ಅನಂತು ಹಾಡುವುದನ್ನು ಕೇಳಲು ಟವನ್‌ ಹಾಲಿಗೆ ಓಡಿದೆ.

ಹಿಂದಿನ ರಾತ್ರಿ ಅನಂತುವಿನೊಡನೆ ಗೊಂಡು ಹಾಕುತ್ತಿದ್ದ ಆ ಇಬ್ಬರು ನನ್ನನ್ನು ಕಾಣುತ್ತಲೇ ಆತುರಾತುರವಾಗಿ ಬಂದು ಕೈಮುಗಿದು ಕರಹಿಡಿದು ಸಭಾಂಗಣದ ಮುಂದಿನ ಸಾಲಿನಲ್ಲಿದ್ದ ಕುರ್ಚಿಯೊಂದರಲ್ಲಿ ಕೂರಿಸಿದರು. ಗರಿಗರಿಯಾಗಿದ್ದ ಜುಬ್ಬಾ ಸುರ್ವಾಲು ತೊಟ್ಟು, ಬೀಡಾ ಜಗಿಯುತ್ತಿದ್ದ ನಾನು ಬಿಗುಮಾನ ಬೀಗುತ್ತಲೇ ಕುರ್ಚಿಯಲ್ಲಿ ಕೂತೆ.

ವೇದಿಕೆಯ ಮಧ್ಯೆ ಹಾರ್ಮೋನಿಯಂ ಹಿಡಿದು ಹಾಡಲು ಸಿದ್ಧನಾಗಿದ್ದ ಅನಂತಸ್ವಾಮಿ ಹಾಗೆಯೇ ಎಲ್ಲರತ್ತ ಕಣ್ಣಾಡಿಸುತ್ತ ನನ್ನನ್ನು ಕಂಡೊಡನೆ ತುಸು ಎದ್ದಂತೆ ಮಾಡಿ ಅತಿ ವಿನಯದಿಂದ ನಮಸ್ಕರಿಸಿದ, ಶಿಷ್ಯನೊಬ್ಬ ತನ್ನ ಗುರುವಿಗೆ ಭಯಭಕ್ತಿಯಿಂದ ನಮಿಸುವಂಥೆ. ನನಗೆ ಇವ ಹೀಗೇಕೆ ಮಾಡುತ್ತಿದ್ದಾನೆಂಬುದೇ ಅರ್ಥವಾಗಲಿಲ್ಲ. ಇಂಗುತಿಂದ ಮಂಗನಂತೆ ಅಕ್ಕಪಕ್ಕ ನೋಡಿದೆ. ಆ ಇಬ್ಬರೂ ಹಾಗೂ ಅವರೊಡನಿದ್ದ ಇನ್ನೂ ಕೆಲವರು ಬಹು ನಮ್ರತೆಯಿಂದ ಕೈಮುಗಿದರು. ಏನೊಂದೂ ತೋಚದೆ ನಾನೂ ಅವರಿಗೆ ಕೈಮಿಗಿದೆ, ಯಾಂತ್ರಿಕವಾಗಿ.

ಅನಂತು ಹಾಡಲಾರಂಭಿಸಿದ ಅಮೋಘವಾಗಿ. ಅಂದವನು ಅಲ್ಲಿ ಹಾಡಬೇಕಿದ್ದುದು ಕೇವಲ ನಲವತ್ತೈದು ನಿಮಿಷ ಮಾತ್ರ. ಮುಗಿಯಿತು. ಒನ್ಸಮೋರ್ ಗಳ ಸುರಿಮಳೆ; ಎದ್ದ ಅನಂತು “ಕ್ಷಮಿಸಿ, ಇದು ಆಕಾಶವಾಣಿಯವರ ಕಾರ್ಯಕ್ರಮ, ಎಲ್ಲವೂ ಕರಾರುವಾಕ್ಕು. ಹೆಚ್ಚು ಹಾಡಲು ಅವಕಾಶವಿಲ್ಲ” ಎಂದವನೆ ಎಲ್ಲರಿಗೂ ಕೈಮುಗಿದು ನಿಷ್ಕ್ರಮಿಸಿದ.

ನಾನೂ ಹೊರಬಂದೆ. “ಎಕ್ಸಲೆಂಟ್‌ ಅನಂತು, ತುಂಬಾ ಚೆನ್ನಾಗಿ ಹಾಡ್ದೆ” ಎಂದು ಅವನ ಕೈಕುಲುಕಿದೆ. ಅವನು “ಓಕೆ ಕೇಶವ, ನಾನಿನ್ನು ಬರ್ತೀನಯ್ಯ, ಬಸ್ಸಿಗೆ ಲೇಟಾಯ್ತು. ಬೆಳಿಗ್ಗೆ ಮೈಸೂರಿನಲ್ಲಿರಬೇಕಯ್ಯಾ, ಪ್ರೋಗ್ರಾಮಿದೆ’ ಎಂದವನೆ ಆತನಿಗಾಗಿ ಕಾದಿದ್ದ ಆ ಇಬ್ಬರೊಡನೆ ಅದೇನನ್ನೋ ಪಿಸಿಪಿಸಿ ಎಂದು ಮಾತನಾಡಲಾರಂಭಿಸಿದ. ಇತ್ತ ನನ್ನ ಪಾಡಿಗೆ ನಾನು ಲಾಡ್ಜಿಗೆ ಹಿಂತಿರುಗಿದೆ.

ರಾತ್ರಿ ಹತ್ತರ ಹೊತ್ತಾಗಿತ್ತು. ಮಲಗುವುದರಲ್ಲಿದ್ದೆ. ‘ಕಟ್‌ ಕಟ್‌ ಕಟ್‌’ ಬಾಗಿಲು ತಟ್ಟಿದ ಶಬ್ದ. ತೆಗೆದೆ. ಆ ಇಬ್ಬರು ಬಹುನಮ್ರತೆಯಿಂದ “ನಮಸ್ಕಾರ ಸಾರ್, ಡಿಸ್ಟರ್ಬ್ ಮಾಡಿದ್ದಕ್ಕೆ” ಎಂದರು. “ಏನಿಲ್ಲ, ಬನ್ನಿ” ಎಂದೆ. ಬಂದರು. ‘ಕೂತ್ಕೊಳ್ಳಿ’ ಎಂದೆ ಕೂತರು. ‘ಏನ್ಸಮಾಚಾರ’ ಎಂದೆ. ಅವರ ಪೈಕಿ ಒಬ್ಬರೆಂದರು. ‘ನಾನು ಕಾಮತ್‌ ಅಂತ. ಇವರು ಕುಲಕರ್ಣಿ. ನಾವು ಇಲ್ಲೆ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದೇವೆ. ನಾವು ಸಣ್ಣದಾಗಿ ಒಂದು ಸಂಗೀತ ಸಭಾವನ್ನು ನಡೆಸುತ್ತಿದ್ದೇವೆ’ ಎಂದರು.

‘ತುಂಬ ಸಂತೋಷ’ ಎಂದೆ.

‘ತಮ್ಮಿಂದ ಒಂದು ಉಪಕಾರವಾಗಬೇಕಿತ್ತು’ ಎಂದರು.

‘ಹೇಳಿ, ಏನಾಗಬೇಕಿತ್ತು’ ಎಂದೆ ಅನುಮಾನಿಸುತ್ತ

‘ನಾಳೆ ಸಂಜೆ ತಾವು ನಮ್ಮ ಸಂಗೀತ ಸಭಾದಲ್ಲಿ ಹಾಡಬೇಕು’ ಎಂದರು. ನನಗೆ ದಿಕ್ಕೇ ತೋಚದೆ ‘ಏನದು ನೀವನ್ನುತ್ತಿರುವುದು? ನನಗ್ಯಾವ ಸಂಗೀತ ಬರುತ್ತೆ? ನನಗಿರುವ ಅಲ್ಪ ಸಂಗೀತ ಜ್ಞಾನದಲ್ಲಿ ನನ್ನಷ್ಟಕ್ಕೆ ನಾನೇ ಒಂದಿಷ್ಟು ಗುನುಗುವುದುಂಟು’ ಎಂದೆ. ಅದಕ್ಕವರು ‘ತುಂಬಿದ ಕೊಡ ತುಳುಕುವುದಿಲ್ಲಾ ಮಾರಾಯ್ರೆ, ನೀವು ಅಘ್ರಾ ಫರಾನದಲ್ಲಿ ಪ್ರಕಾಂಡ ಪಂಡಿತರೆಂಬುದು ನಮಗೆ ತಿಳಿದಿದೆ’ ಎಂದರು. ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕೆ. ‘ಯಾರು ನಿಮಗೆ ಹಾಗಂದದ್ದೂ? ಎಂದು ಪ್ರಶ್ನಿಸಿದೆ.

‘ತಮ್ಮ ಪಟ್ಟಶಿಷ್ಯ ಮೈಸೂರು ಅನಂತಸ್ವಾಮಿಯವರೇ ಹಾಗೆ ಹೇಳಿದರು, ಪಂಡಿತ್‌ ಕೇಶವರಾಯರೇ’ ಎಂದರವರು. ಗಟ್ಟಿಯಾಗಿ ನಕ್ಕ ನಾನು ಆ ಅಯೋಗ್ಯ ಹಾಗೆ ಹೇಳಿದನೆ? ಅದೆಲ್ಲಾ ಸುಳ್ಳೂರಿ. ಫರಾನ ಗಿರಾನ ಅವೆಲ್ಲಾ ನಂಗೊತ್ತಿಲ್ರೀ’ ಅಂದೆ.

ಭದ್ರವಾಗಿ ನನ್ನ ಕೈ ಹಿಡಿದುಕೊಂಡ ಅವರು ‘ಪಂಡಿತ್‌ ಕೇಶವರಾಯ್ರೆ, ನೀವು ಹಾಗೆ ಅಂತೀರೀಂತ್ಲೂ ಅನಂತಸ್ವಾಮಿ ಹೇಳಿದ್ರು. ಪಂಡಿತ್‌ ಕೇಶವರಾಯ್ರು ಹಿಂದೂಸ್ಥಾನಿ ಸಂಗೀತದಲ್ಲಿ ಹುಲಿ. ಆದರೆ ಬಡಪೆಟ್ಟಿಗೆ ಹಾಡೋಲ್ಲಾ. ಅವರನ್ನೇನಾದ್ರೂ ಮಾಡಿ ಒಪ್ಸಿದ್ದೇ ಆದ್ರೆ, ಅದು ನಿಮ್ಮ ಪುಣ್ಯ ಅಂತ ಹೇಳಿ ಹೋಗಿದ್ದಾರೆ ಮಾರಾಯ್ರೆ. ಸುಮ್ನೆ ಸತಾಯಿಸ್ಬೇಡಿ, ಒಪ್ಕೊಳ್ಳಿ, ಹೆಚ್ಚೇನು ಬೇಡ, ಎರಡು ತಾಸು ಹಾಡಿ ಸಾಕು’ ಎಂದು ಮತ್ತೆ ಕೈ ಜೋಡಿಸಿದರು.

ನನಗೆ ನಗಬೇಕೋ, ಅಳಬೇಕೋ ಅರ್ಥವಾಗಲಿಲ್ಲ. ಇಂತಹ ಕುಚೇಷ್ಟೆಗಳಿಗೆ ಅನಂತು ಅನಾದಿಕಾಲದಿಂದಲೂ ಅನವರತ ಹೆಸರಾದವನು. ಆದರೂ ಕುಚೇಷ್ಟೆಗೂ ಒಂದು ಮಿತಿ ಬೇಡವೇ? ಹಾಳಾದವನು ಈ ಅಮಾಯಕರಿಗೆ ಕಿಂಚಿತ್ತೂ ಅನುಮಾನ ಬಾರದಂತೆ ನನ್ನನ್ನು ಒಬ್ಬ ಘನಗವಾಯಿ ಎಂಬಂತೆ ಚಿತ್ರಿಸಿ ಹೊರಟುಹೋಗಿದ್ದ. ಈ ಇಬ್ಬರೋ, ಏನು ಹೇಳಿದರೂ ನಂಬದೆ ಹಲ್ಲು ಕಿರಿಯುತ್ತ ನಿಂತೇ ಇದ್ದರು. ಒಂದು ಹಂತದಲ್ಲಿ ಆ ಇಬ್ಬರನ್ನೂ ಪರಚಿಬಿಡುವಷ್ಟು ಸಿಟ್ಟು ನೆತ್ತಿಗೇರಿತ್ತು. ಮತ್ತೆ ಆ ಸಮಯದಲ್ಲೇನಾದರೂ ಈ ಅನಂತು ಸಿಕ್ಕಿದ್ದರೆ ಅವನನ್ನು ಹುಚ್ಚುನಾಯಿಯಂತೆ ಅಟ್ಟಿಸಿಕೊಂಡು ಹೋಗಿ ಕಚ್ಚಿಬಿಡುತ್ತಿದ್ದೆ.

‘ಆಯಿತು, ಹನ್ನೊಂದರ ಮೇಲಾಯಿತು. ಸುಮ್ಮನೆ ಅನಂತುವಿನ ಮಾತನ್ನು ನಂಬಿ ನನ್ನನ್ನು ಅಟಕಾಯಿಸಬೇಡಿ. ಪ್ಲೀಸ್‌ ಗೋ, ಗುಡ್‌ ನೈಟ್‌ ’ ಎನ್ನುತ್ತ ಆ ಇಬ್ಬರನ್ನೂ ಕೊಠಡಿಯಿಂದ ಕಳಿಸಿ ಬಾಗಿಲನ್ನು ಹಾಕಿದೆ.

‘ಕಲಾವಿದರಿಗೆ ಅಹಂಕಾರವಿರಬೇಕು, ನಿಜ. ಆದರೆ ನಿಮ್ಮಷ್ಟು ದುರಹಂಕಾರವಿರಬಾರದು, ಪಂಡಿತ್‌ ಕೇಶವರಾಯರೇ’ ಎಂದು ಆ ಇಬ್ಬರ ಪೈಕಿ ಒಬ್ಬರು ಜೋರಾಗಿಯೇ ಅಂದದ್ದು ಕೇಳಿಸಿತು.

ಈಗೆರಡು ವರುಷದ ಹಿಂದಿನ ಮಾತು. ಒಂದು ದಿನ ನಾನು ರವೀಂದ್ರ ಕಲಾಕ್ಷೇತ್ರದ ಬಳಿ ನನ್ನ ಸುವೇಗದ ಮೇಲೆ ಸವಾರಿ ಮಾಡಿಕೊಂಡು ಮನೆಯತ್ತ ಬರುತ್ತಿದ್ದೆ. ಮೋಡ ಮುಸುಕಿತ್ತು. ಸಂಜೆ ಸಮೀಪಿಸುತ್ತಿತ್ತು. ಹಿಂದಿನಿಂದ ಒಬ್ಬ ಆಸಾಮಿ ‘ಪೀ’ ಎಂದು ಜೋರಾಗಿ ಹಾರನ್‌ ಹೊಡೆಯುತ್ತ ನನ್ನನ್ನು ರಸ್ತೆಯ ಅಂಚಿಗೆ ಒತ್ತರಿಸುವಂತೆ ತನ್ನ ಕೈನೆಟಿಕ್‌ ಹೋಂಡಾವನ್ನು ನನ್ನ ಸುವೇಗದ ಅಕ್ಕಪಕ್ಕಕ್ಕೇ ತರಲು, ಮತ್ತೆಲ್ಲಿ ಈ ಮಹಾರಾಯ ತನ್ನ ಸ್ಕೂಟರ್ ಸಮೇತ ನನ್ನ ಮೇಲೆಲ್ಲಿ ಎಗರಿಬಿದ್ದಾನೋ ಎಂದು ಬೆದರಿದ ನಾನು ಬೆಪ್ಪು ಹಿಡಿದು ಬಲವಾಗಿ ಬ್ರೇಕ್‌ ಹಾಕಿದೆ. ಆತನೂ ತನ್ನ ಹೋಂಡಾದ ಬ್ರೇಕ್‌ ಅಮುಕಿ ರೊಯ್ಯನದನ್ನು ತಿರುಗಿಸಿ ನನ್ನ ಸುವೇಗದ ಮುಂದೆ ಅಡ್ಡಲಾಗಿ ನಿಲ್ಲಿಸಿದಾಗ, ನನಗೆ ಬಾಲ್ಯದಲ್ಲಿ ನೋಡಿದ್ದ ‘ಹಂಟರ್ ವಾಲೀ ಕಾ ಭೇಟಾ’ ಚಿತ್ರದ ದೃಶ್ಯವೊಂದರ ನೆನಪಾಯಿತು.

ಮುಖಮುಚ್ಚಿದ್ದ ಹೆಲ್ಮೆಟ್‌ ಧರಿಸಿ, ಕಪ್ಪು ಕನ್ನಡಕವೇರಿಸಿ, ಕುತ್ತಿಗೆಯ ಸುತ್ತ ಮಫ್ಲರನ್ನು ಸುತ್ತಿಕೊಂಡು, ಕರೀ ಪ್ಯಾಂಟಿನ ಮೇಲೆ ಗರಿಗರಿಯಾಗಿ ಇಸ್ತ್ರಿ ಮಾಡಿದ್ದ ಸಿಲ್ಕ ಜುಬ್ಬ ಧರಿಸಿದ್ದ ಈ ವ್ಯಕ್ತಿಯನ್ನು ಎದುರಿಗೆ ಹತ್ತಿರದಿಂದ ಕಂಡಾಗಲೂ, ಆ ಮುಸುಕುಮಲ್ಲನ ಮುಖ ಚಹರೆ ಆ ಮಬ್ಬುಸಂಜೆಯಲ್ಲಿ ಗೋಚರವಾಗದೆ, ಹೆಂಡ ಕುಡಿದವನೊಬ್ಬ ಹೋಂಡಾದಲ್ಲಿ ಅಸಹಾಯಕನೊಬ್ಬನನ್ನು ಅಟ್ಟಿಸಿಕೊಂಡು ಬಂದು ಅಟಕಾಯಿಸಿಕೊಂಡಿರುವನೇನೋ ಅನ್ನಿಸಿತು. ಬಾಡಿಯಲ್ಲಿ ಬಲವಿಲ್ಲದಿದ್ದರೂ ಬಾಯಲ್ಲಿ ಬಲು ಜೋರಿನವ ನಾನು, ಮಲೆಯಾಳಂ ಚಿತ್ರ ಖಳನಾಯಕನಂತಿದ್ದ ಆ ಅಗೋಚರ ವ್ಯಕ್ತಿಯನ್ನು ಕ್ರೂರವಾಗಿಯೇ ದಿಟ್ಟಿಸುತ್ತ , ‘ಯಾರಯ್ಯ ನೀನು, ನೆಟ್ಗಿರೋ ರಸ್ತೇಲಿ ಸೊಟ್ಟಕ್ಯಾಕೆ ಸ್ಕೂಟರ್ನ ಬಿಡ್ತಿದ್ದೀಯಾ? ಎಂದು ರಫ್‌ ಆಗಿಯೇ ರೋಪ್‌ ಹಾಕಿದೆ. ಅವನು ಸ್ಕೂಟರನ್ನಾಕಡೆ ನಿಲ್ಲಿಸಿ, ಸೀರಿಯಸ್ಸಾಗಿ ಹೆಜ್ಜೆ ಹಾಕುತ್ತ ಹತ್ತಿರ ಬಂದು ತನ್ನ ಶಿರಕವಚವನ್ನು ಮೇಲೆತ್ತಿದಾಗ ಅದರಡಿಯಲ್ಲಿ ಅಡಗಿದ್ದುದು ಅನಂತುವಿನ ತಲೆ ಎಂಬುದರ ಅರಿವಾದಾಗ ನನಗಾದ ಆನಂದ ಅಪಾರ. ಅವನೂ ಗಟ್ಟಿಯಾಗಿ ನಕ್ಕ. ಅನಂತರ ‘ಈಗ ನಿನಗೆಷ್ಟೋ ಸಂಬ್ಳ ಕೇಶವ? ಅಂದ. ‘ಎಂಟೂವರೆ ಸಾವಿರ’ ಅಂದೆ. ಅದಕ್ಕವನು ‘ಅಲ್ವೋ, ಆಪಾಟಿ ದುಡೀತಿದ್ರೂ ಈ ಗುಜರಿ ಗಾಡಿಗ್ಯಾಕಯ್ಯ ಗಂಟ್ಹಾಕ್ಕೊಂಡಿದ್ದೀ’ ಎಂದು ಬಳಿಕ ಎರಡರ್ಥ ಬರುವಂತೆ, ‘ನೋಡೋ ಕೇಶವ, ಹೆಚ್ಚು ಹೆಚ್ಚಾಗಿ ದುಡೀತಾ ದುಡೀತಾ ಚೆನ್ನಾಗಿರೋ ಗಾಡಿಗಳ್ಮೇಲೆ ಸವಾರಿ ಮಾಡೋ ಶೋಕೀನ ಬೆಳೆಸ್ಕೋಬೇಕಯ್ಯಾ ಮನುಷ್ಯ. ಹಾರ್ಸ ಪವರ್ನ ಇಂಕ್ರೀಸ್‌ ಮಾಡ್ಕೋಬೇಕು ಮರೀ’ ಎಂದು ಕಿಲಕಿಲನೆ ನಕ್ಕ.

ಲಾಗಾಯ್ತಿನಿಂದಲೂ ರಸಿಕ ಶಿಖಾಮಣಿಯಾಗಿದ್ದ ಅನಂತು ತನ್ನ ಆತ್ಮೀಯರೊಡನೆ ಆಡುತ್ತಿದ್ದ ಇಂತಹ ಮಾತುಗಳು ನೂರಾರು. ಅರವತ್ತರ ಅಂಚಿನಲ್ಲಿ ಸಂಚರಿಸುತ್ತಿದ್ದರೂ, ಇವನದ್ದು, ಮಾತಿನಲ್ಲಿ ಮೂವತ್ತರ ಪ್ರಾಯ.

ನಾಡಿನಾದ್ಯಂತ ಮೈಸೂರು ಅನಂತಸ್ವಾಮಿ ಮಿಂಚಿ ಮೆರೆಯುತ್ತಿದ್ದರೂ ನನಗವನು ಎಂದೆಂದೂ ಹಿಂದಿನ ಅನಂತುವೇ ಆಗಿದ್ದ. ಇದೆಲ್ಲಾ ಈಗ ಇತಿಹಾಸದ ಮಾತೆಂಬಂತಾಗಿ ಹೋಯಿತು.

ಅನ್ಯಾಯ, ಅರವತ್ತರ ಅಂಚಿನಲ್ಲಿದ್ದ ಅಂತಹ ಅನಂತು ಅಟಕಾಯಿಸಿಕೊಂಡ ಅರ್ಬುದದಿಂದ ಅಲಕ್ಕಾಗಿ ಅಸುನೀಗಿ ಆತ್ಮೀಯರೆಲ್ಲಾ ಅಚ್ಚರಿಯೊಡನೆ ಅಶ್ರುಧಾರೆ ಸುರಿಸುವಂತೆ ಅನಂತದಲ್ಲಡಗಿ ಅದೃಶ್ಯನಾಗಿ ಹೋದ.

ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ನಾನು ಆಗಾಗ ಮೈಸೂರಿಗೆ ಹೋದಾಗೆಲೆಲ್ಲಾ ಅಲ್ಲಿ ಅನಂತುವಿದ್ದ ಮನೆಯ ಮುಂದೆ ಓಡಾಡುತ್ತೇನೆ. ಅದೇ ಮನೆ. ಅನೇಕ ವರುಷ ಅನಂತು ಅಭ್ಯಾಸ ಮಾಡುತ್ತಿದ್ದ ಅದೇ ಕೊಠಡಿ. ಹೆಚ್ಚು ಕಡಿಮೆ ಎಲ್ಲವೂ ಹಾಗೇ ಇವೆ. ಈಗಲೂ ಅತ್ತ ತಿರುಗುತ್ತಲೇ ಆ ಕೊಠಡಿಯಲ್ಲಿ ಅನಂತು ಎತ್ತರದ ದನಿಯಲ್ಲಿ ಏನನ್ನೋ ಹಾಡುತ್ತಿರುವಂತೆ ಭಾಸವಾಗುತ್ತದೆ. ಅವನ ಹೆಸರು ಹಿಡಿದು ಕೂಗಬೇಕೆನ್ನಿಸುತ್ತದೆ. ಎಲ್ಲವೂ ಭ್ರಮೆ.

ಈಗ ಅನಂತು ಅಲ್ಲಿಲ್ಲ. ಅಲ್ಲೇ ಏನೂ, ಎಲ್ಲಿಯೂ ಇಲ್ಲ. ನೆನೆಯುತ್ತಲೇ ಕಣ್ಣುಗಳಲ್ಲಿ ನೀರಾಡುತ್ತದೆ. ಭಾರವೆನಿಸುವ ಹೆಜ್ಜೆಗಳನ್ನೆಳೆದುಕೊಂಡು ಮುಂದೆ ಸಾಗುತ್ತೇನೆ. ಒಟ್ಟಿನಲ್ಲಿ ನನಗನ್ನಿಸುವುದಿಷ್ಟೆ. ಅಪೂರ್ವನೆನೆಸಿದ್ದ ಅನಂತುವನ್ನು ಕಳೆದುಕೊಂಡ ನಾವು ಬಡವಾದೆವು. ನಾಡೂ ಬಡವಾಯಿತು.

* * *