‘ಇಳಿದು ಬಾ ತಾಯೆ ಇಳಿದು ಬಾ’ ಬೇಂದ್ರೆಯವರ ‘ಗಂಗಾವತರಣ’ ಗೀತ ಸಂಕಲನದಲ್ಲಿರುವ ಸುಪ್ರಸಿದ್ಧ ಗೀತೆ. ಈ ಗೀತೆಗೆ ಮೂಲತಃ ರಾಗಸಂಯೋಜನೆ ಮಾಡಿದ್ದು ನಮ್ಮ ಮೈಸೂರು ಅನಂತಸ್ವಾಮಿ. ಈ ಗೀತೆಯನ್ನು ಅನಂತಸ್ವಾಮಿಯಿಂದ ಕೇಳಿಸ ಸುಗಮ ಸಂಗೀತ ಕ್ಷೇತ್ರದ ಸಾರ್ವಭೌಮರೆನಿಸಿದ್ದ ಕಾಳಿಂಗರಾಯರು ಅದನ್ನು ಬಹುವಾಗಿ ಮೆಚ್ಚಿದ್ದಲ್ಲದೆ ತಾವು ತಮ್ಮ ಕಾರ್ಯಕ್ರಮಗಳಲ್ಲಿ ಈ ಗೀತೆಯನ್ನು ಅದೇ ರಾಗ ಹಾಗೂ ಧಾಟಿಯಲ್ಲೂ ಹಾಡುತ್ತಿದ್ದರು. ಇದನ್ನು ಹಾಡುವುದರಲ್ಲಿ ರಾಯರು ಮಾಡಿಕೊಂಡ ವ್ಯತ್ಯಾಸವೆಂದರೆ, ಆರಂಭದಲ್ಲಿ ಒಂದು ಸಂಸ್ಕೃತ ಶ್ಲೋಕವನ್ನು ಹಾಡಿ ನಂತರ ಅದಕ್ಕೆ ಹೊಂದಿಕೊಳ್ಳುವಂತೆ ‘ಇಳಿದು ಬಾ ತಾಯೆ’ಯನ್ನು ಹಾಡುತ್ತಿದ್ದರು.

ಶ್ರೀ ಜಿ.ಪಿ.ರಾಜರತ್ನಂರವರ ‘ರತ್ನನ ಪದಗಳು’ ಕವನ ಸಂಕಲನದಲ್ಲಿರುವ ‘ಬ್ರಹ್ಮ ನಿಂಗೆ ಜೋಡಸ್ತೀನಿ ಎಂಡ ಮುಟ್ಟಿದ ಕೈನ’ ಎಂಬ ಗೀತೆಗೆ ರಾಗ ಸಂಯೋಜಿಸಿದವರು ಮೂಲತಃ ಕಾಳಿಂಗರಾಯರು. ಇದರ ಧ್ವನಿಮುದ್ರಿಕೆಯೂ ಆಯಿತು. ಅನಂತರದಲ್ಲಿ ಅದೇ ಪದ್ಯ ಸಂಕಲನದ ಇತರೇ ಕೆಲವು ಹಾಡುಗಳಿಗೆ ಅನಂತು ರಾಗ ಹಾಕಿ ಹಾಡಲಾರಂಭಿಸಿದ . ಅವುಗಳನ್ನಾಲಿಸಿದ ಕಾಳಿಂಗರಾಯರು ಅನಂತಸ್ವಾಮಿಯ  ರಾಗಸಂಯೋಜನ ಸಾಮರ್ಥ್ಯವನ್ನು ಬಹುವಾಗಿ ಮೆಚ್ಚಿಕೊಂಡರೇ ಅಲ್ಲದೆ ಅವುಗಳ ಪೈಕಿ ಒಂದೆರಡನ ನು ತಮ್ಮ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಆ ಹಾಡುಗಳನ್ನು ಹಾಡಿದಾಗ ‘ಬಹಳ ಸೊಗಸಾಗಿ ಹಾಡದ್ರೀ ರಾಯ್ರೆ’ ಎಂದು ಯಾರಾದರೂ ಅಂದರೆ ಕೂಡಲೇ ಕಾಳಿಂಗರಾಯರು ‘ಈ ಹಾಡುಗಳಿಗೆ ರಾಗ ಹಾಕಿದ್ದು ನಾನಲ್ಲ.  ಅದು ನಮ್ಮ ಅನಂತೂ ಕಂಡ್ರೀ! ಹುಡುಗ ಅದೆಷ್ಟು talended ನೋಡಿ . I like him very much. He perhapas is the only guy next to me in the field of light muxic’ ಎಂದು ಅನಂತಸ್ವಾಮಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರು.

ಆ ಕಾಲದಲ್ಲಿ  ಇದ್ದದ್ದೂ ಹಾಗೆಯೇ. ಕಾರ್ಯಕ್ರಮಗಳಲ್ಲಿ ಮೊದಲಿನಿಂದ ಕೊನೆಯವರೆಗೆ ಕೇವಲ ಕನ್ನಡಗೀತೆಗಳನ್ನಷ್ಟೇ ಹಾಡಿ ಜಯಭೇರಿ ಹೊಡೆಯುತ್ತಿದ್ದವರೆಂದರೆ ಈ ಇಬ್ಬರೇ. ಅಂದಿನ ವರುಷಗಳಲ್ಲಿ ಮೈಸೂರು, ಬೆಂಗಳೂರು ನಗರಗಳಲ್ಲಿ ಆರ್ಕೆಸ್ಟ್ರಾ ಪಾರ್ಟಿಗಳು ಸಾಕಷ್ಟಿದ್ದವು. ರಫಿ, ತಲತ್‌, ಕಿಶೋರ್, ಮನ್ನಾಡೆ, ಇಂಥವರನ್ನು ಅನುಕರಿಸಿ ಹಾಗೆಯೇ ಹಾಡುವವರೂ ಕೆಲವರಿದ್ದರು. ಅವರೆಲ್ಲ ಹಾಡುತ್ತಿದ್ದುದು ಹಿಂದಿ ಚಲನಚಿತ್ರಗೀತೆಗಳನ್ನಷ್ಟೆ. ಅಲ್ಲದೆ ಅವರ ಆರ್ಕೆಸ್ಟ್ರಾಗಲೆಲ್ಲಾ ಅಬ್ಬರದ ತಂಡಗಳು. ಹತ್ತಾರು ಮೈಕುಗಳಿಂದ ಹೊರಹೊಮ್ಮುವ ಹಲವಾರು ವಾದ್ಯಗಳ ಹೊಡೆತ. ಅವನ್ನು ಕೇಳುತ್ತಿದದ ಅಂದಿನ ಜನ ಕಿವುಡರಾಗದೆ ಉಳಿದದ್ದೇ ಒಂದು ಪವಾಡ.

ಕಾಳಿಂಗರಾಯರು ಕಟ್ಟಾ ಕನ್ನಡಾಭಿಮಾನಿ. ತನ್ನಂತೆಯೇ ಕನ್ನಡಗೀತೆ, ಜಾನಪದಗೀತೆಗಳನ್ನಷ್ಟನ್ನೇ ಹಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಮುಂಬರುತ್ತಿದ್ದ ಅನಂತುವಿನ ಬಗ್ಗೆ ರಾಯರಿಗೆ ತುಂಬ ಅಭಿಮಾನ. ಈ ಸುಗಮ ಸಂಗೀತ ಕ್ಷೇತ್ರದಲ್ಲಿ ಅನಂತಸ್ವಾಮಿ ಭವ್ಯವಾದ ರೀತಿಯಲ್ಲಿ ಬೆಳಗುತ್ತಾನೆಂದು ಭವಿಷ್ಯವನ್ನು ಕಾಳಿಂಗರಾಯರು ಎಷ್ಟೋ ವರುಷಗಳ ಹಿಂದೆಯೇ ನುಡಿದಿದ್ದರು.

ಅನಂತುವಿನ ಅಪ್ಪ ಡಬ್ಬಲ್‌ ಎಂ.ಎ. ತಮ್ಮ ಮಗ ಅನಂತು ಸಿಂಗಲ್‌ ಬಿ.ಎ. ಆದರೂ ಸಾಕು ಎಂದು ಆಶಿಸಿದ್ದರು. ಆದರೆ ಅನಂತುವಿಗೆ ಕಾಲೇಜು ವಿದ್ಯೆ ಕೂಡಿಬರಲಿಲ್ಲ. ಓದು ಇವನಿಗೆ ಒಗ್ಗಲಿಲ್ಲ. ಸಂಗೀತ ವಿದ್ಯೆಯಲ್ಲಿವ ರಾಜಧಾನಿ ಎಕ್ಸ್‌ಪ್ರೆಸ್ಸು , ಬಲು ಚುರುಕು. ಅದೇ ಕಾಲೇಜು ವಿದ್ಯೆಯಲ್ಲಿ ಕೆಂಗೇರಿ ಶೆಟ್ಲು, ಬಲು ಮೊದ್ದು.

ಆರಂಭದಿಂದಲೂ ನಿಂತು ನಿಂತು ಕಂತುಕಂತಾಗಿ ಹೈಸ್ಕೂಲು ಹಂತವನ್ನು ಮುಗಿಸಿ ಕಾಲೇಜಿನೊಳಗೆ ಕಾಲಿಟ್ಟವನು ಅನಂತು. ಕಾಲೇಜಿನಲ್ಲೂ ಅಷ್ಟೇ, ಅಲ್ಲಿ ಸೆಂಟರ್ ಆಫ್‌ ಅಟ್ರಾಕ್ಷನ್‌ ಅನಿಸಿದ್ದ ಅನಂತುವಿಗೆ ಇಂಟರ್ ದಾಟುವುದೂ ಆಗಲಿಲ್ಲ. ಕುಂಟಿ ಕುಂಟಿ ಕೂತೇಬಿಟ್ಟ. ಇಂಗ್ಲೀಷು ಕನ್ನಡ ಪರವಾಗಿಲ್ಲ. ಮ್ಯಾಥ್ಸ್ ಅಂದ ಕೂಡಲೆ ಮೈಪರಚಿಕೊಳ್ಳುತ್ತಿದ್ದ ಇವನಿಗೆ ಹಾಳು ಲೆಕ್ಕ ಮೊದಲಿನಿಂದಲೂ ದಕ್ಕಲಿಲ್ಲ. ಇನ್ನು ಪರೀಕ್ಷೆ, ದೇವರೇ ಗತಿ. ಅಟ್ಟದ ಕೊಂಡಿಗೆ ಕಟ್ಟಿದ ದಾರವನ್ನು ಜುಟ್ಟಿಗೆ ಕಟ್ಟಿಕೊಂಡು ಘಂಟೆಗಟ್ಟಲೆ ಕೂಡಿ, ಕಳೆದು, ಗುಣಿಸುವವರಿಗೇ ಮ್ಯಾಥ್ಸ್ ನಲ್ಲಿ ಮಾರ್ಕ್ಸ್ ಬಂದು ಪಾಸಾಗುವುದು ಕಷ್ಟ. ಅಂಥವರಲ್ಲಿ ಲೆಕ್ಕವನ್ನು ಲೆಕ್ಕಿಸದೆ ಅಲಕ್ಕಾಗಿದ್ದು ಮ್ಯಾಥ್ಸ್‌ ಪೇಪರಿನ ದಿನ ಮನೆಯಲ್ಲಿದ್ದು, ಪಿಳ್ಳಂಗೋವಿ ಊದುತ್ತಾ ಕೂರುವವನಿಗೆ ಪಾಸಾಗುವುದೇ? ಇಲ್ಲ. ಇವನು ಮ್ಯಾಥ್ಸ್‌ನಲ್ಲಿ ಮುಂದುವರೆಯಲೂ ಇಲ್ಲ. ಪರೀಕ್ಷೆಯಲ್ಲಿ ಪಾಸೂ ಆಗಲಿಲ್ಲ. ಮೂಲತಃ ಪರೀಕ್ಷೆಗೆ ಕುಳಿತಿದ್ದರಲ್ಲವೇ ಪಾಸಾಗುವ ಯೋಚನೆ. ಅಂತೂ ಅಷ್ಟಕ್ಕೆ ಅನಂತು ಕಾಲೇಜಿಗೆ ಕೈಮುಗಿದುಬಿಟ್ಟ. ಅನಂತುವಿನ ಅಪ್ಪ ಕೆಲಕಾಲ, ಕುದುರೆಯ ಹೊಟ್ಟೆಯಲ್ಲಿ ಕುರಿಹುಟ್ಟಿತಲ್ಲಾ ಎಂದು ಪರಿತಪಿಸಿ, ಈ ಅಯೋಗ್ಯನ ಅದೃಷ್ಟ ಅಷ್ಟೆ ಎಂದುಕೊಂಡು ಸುಮ್ಮನಾಗಿ ಬಿಟ್ಟರು.

ಲಾಗಾಯ್ತಿನಿಂದಲೂ ಅನಂತಸ್ವಾಮಿ ಎತ್ತರದ ಆಳೇನಲ್ಲ. ವಯಸ್ಸು ಮೀರಿದ್ದರೂ ವಾಮನನೇ. ಅವನೆತ್ತರ ಐದಡಿಗಿಂತ ಕೆಳಗಿದ್ದಿತೇ ಹೊರತು ಮೇಲಿರಲಿಲ್ಲವೆಂಬುದೇ ನನ್ನೂಹೆ. ಇದು ಸುಳ್ಳು ಎನ್ನುವುದಾದರೆ ಇನ್ನೊಂದರ್ಧ ಇಂಚು ಹೆಚ್ಚಿದ್ದಾನೆಂಬುದಂತೂ ಸತ್ಯ. ಒಪ್ಪಬಹುದು. ವರ್ಣ ಕಪ್ಪೂ ಅಲ್ಲ, ಬಿಳುಪೂ ಅಲ್ಲ, ಅದೊಂದು ರೀತಿಯ ಮಂದಬಿಳುಪು. ಕಪ್ಪನೆ ಮಿರುಮಿರುಗುಟ್ಟುವ ಗುಂಗುರು ಕೂದಲು ತಲೆತುಂಬ. ವಿಶಾಲವಾದ `S’ ಆಕಾರದ ಹಣೆ. ಉಬ್ಬಿದ ಕಡುಬಿನಂತಹ ಕೆನ್ನೆಗಳೆರಡರ ಮಧ್ಯೆ ಎದ್ದು ಕಾಣುವ ಗೆಡ್ಡೆ ಮೂಗು.  ತೀಡಿ ತಿಕ್ಕಿದ ತಳವಾರ್ ಕಟ್‌ ಮೀಸೆ. ಮುಖದ ಮಾಟಕ್ಕೆ ಮ್ಯಾಚಾಗುವ ಮೌತು. ಗುಂಡುಗಲ್ಲ. ಒಟ್ಟಿನಲ್ಲಿ ಉಂಡೆಉಂಡೆಯಾಗಿ ಕಾಣುತ್ತಿದ್ದ ಅನಂತು ಆ ಕಾಲದಲ್ಲಿ ಬಹಳ ಅಟ್ರಾಕ್ಟಿವ್‌ ಆಗಿಯೇ ಇದ್ದನೆನ್ನಿ.

೧೯೬೦ರ ಹೊತ್ತಿಗೆ ಅಪಾರ ಖ್ಯಾತಿಯನ್ನು ಗಳಿಸಿದ್ದ ಅನಂತುವಿನ ಬಳಿ ಲಘುಸಂಗೀತವನ್ನು ಹೇಳಿಸಿಕೊಳ್ಳಲು ಅವನ ಸಾನ್ನಿಧ್ಯಕ್ಕೆ ಹುಡುಗಿಯರು ಹಿಂಡುಹಿಂಡಾಗಿ ಬರುತ್ತಿದ್ದುದುಂಟು. ಅವರ ಪೈಕಿ ಹಲವರು ಇವನ ಸ್ನೇಹ, ಸಂಗಸುಖಕ್ಕಾಗಿಯಷ್ಟೇ ಹಾತೊರೆಯುತ್ತಿದ್ದುದುಂಟು. ಆದರೆ ಅನಂತು ಜಾಣ. ಯಾವ ಒತ್ತಡಕ್ಕೂ ಬಗ್ಗದೆ, ಯಾರಿಗೂ ದಕ್ಕದೆ ಬಿಸಿಲುಕುದುರೆಯಂತೆ ಬಾಳು ದೂಡುತ್ತಿದದ. ಇಂಥವರೆಲ್ಲರ ಪಾಲಿಗೆ ಆಗವನು ಮಾನವರೂಪದ ಮಾಯಾಮೃಗ.

ಅನಂತುವಿನ ಪಾಂಡಿತ್ಯ, ಪ್ರತಿಭೆಯನ್ನು ಗುರುತಿಸಿದ್ದ ಹಲವು ತಂದೆತಾಯಿಯರು ಅನಂತುವನ್ನು ತಮ್ಮ ಅಳಿಯನನ್ನಾಗಿಸಿ ಕೊಳ್ಳುವ ಆಕಾಂಕ್ಷೆ, ಆತುರವನ್ನು ತೋರಿದ್ದುಂಟು. ಆ ಕಾಲದಲ್ಲಿ ಲಘುಸಂಗೀತ ಲೋಕದಲ್ಲಿ ರಾರಾಜಿಸುತ್ತಿದ್ದ ಘನಸಂಗೀತ ಕಲಾವಿದರೊಬ್ಬರಲ್ಲೂ ಈ ರೀತಿಯ ಆಸೆ ಅಂಕುರಿಸಿತ್ತು . ಆದರೆ ಯಾರ ಆಸೆಯೂ ಕೈಗೂಡಲಿಲ್ಲ. ಮಿಕ್ಕವರೆಲ್ಲಾ ಮುಂದೆ ಬಂದು ಮಂಡೆ ಕೆಡಿಸುವ ಮೊದಲೇ ಈ ಮನುಷ್ಯ ಅನಂತಸ್ವಾಮಿ ತನ್ನ ಮನಸ್ಸನ್ನು ‘ಶಾಂತ’ ಎಂಬ ಹುಡುಗಿಗೆ ಒಪ್ಪಿಸಿಬಿಟ್ಟಿದ್ದ.

ಈ ‘ಶಾಂತ’ ಮೈಸೂರಿನ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿದ್ದ ಹುಡುಗಿ. ಅನಂತಸ್ವಾಮಿಯ ಮನೆಯಿದ್ದುದೂ (ಹಾಲಿ ಇರುವುದು) ಅಲ್ಲಿಯೇ. ಮನೆಯಲ್ಲಿ ಒಬ್ಬನೇ ಇರುತ್ತಿದ್ದ ಅನಂತುವಿನಿಂದ ಕನ್ನಡಗೀತೆಗಳನ್ನು ಹೇಳಿಸಿಕೊಳ್ಳಲು ಬರುತ್ತಿದ್ದವರ ಪೈಕಿ ಶಾಂತ ಸಹ ಒಬ್ಬಳು.

ನಿಲುವಿನಲ್ಲಿ ಎತ್ತರವಲ್ಲದ ಅನಂತಸ್ವಾಮಿಗೆ ತಕ್ಕ ಎತ್ತರದವಳು ಶಾಂತ. ಆದರೆ ಬಹು ಮುದ್ದಾಗಿದ್ದ, ತೆಳ್ಳನೆ ಬೆಳ್ಳನೆ ಬಳ್ಳಿಯಂತೆ ಬಳುಕುತ್ತಿದ್ದ ಲವಲವಿಕೆಯ ಹೆಣ್ಣು ಈಕೆ. ಅಲ್ಲದೆ ಎಂ.ಎಸ್ಸಿ. ಓದುತ್ತಿದದ ಜಾಣೆ. ಈ ಹುಡುಗಿ, ಎಡವಿ ಎಮಪರಲಾಡಿದರೂ ಇಂಟರ್ ಮೀಡಿಯಟ್ಟನ್ನೇ ದಾಟಲಾಗದೆ ಸುಮ್ಮನಿದ್ದ ಅನಂತಸ್ವಾಮಿಯ ಕೈಹಿಡಿಯಲು ಬಯಸಿ ಬಂದಿದ್ದಳು. ಈಕೆ ಅನಂತುವಿನ ವಿದ್ಯಾರ್ಹತೆಗೆ ಬೆಲೆ ಇತ್ತವಳಲ್ಲ. ಈತನ ಗಾನಕಲೆಗೆ, ಕಂಠಮಾಧುರ್ಯಕ್ಕೆ ಮನಸೋತಿದ್ದವಳು. ಎಂದಿದ್ದರೂ ಈತ ಕೀರ್ತಿಯ ಶಿಖರಕ್ಕೇರಿ ಕಂಗೊಳಿಸುವುದು ಖಂಡಿತವೆಂಬ ಕನಸನ್ನು ಶಾಂತ ಅಂದೇ ಕಂಡಿದ್ದಳು. ಅಂತೂ ಈ ಇಬ್ಬರು ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದರು ಗುಟ್ಟಾಗಿ. ಆದರೇನು, ಇಂಥ ವಿಷಯಗಳೆಲ್ಲಾ ಬಟ್ಟ ಬಯಲಾಗದೇ ಬಹುಕಾಲ ಗುಟ್ಟಾಗಿಯೇ ಉಳಿದಿರುವುದು ಸಾಧ್ಯವಿಲ್ಲ. ಇವರಿಬ್ಬರ ಒಡಂಬಡಿಕೆಯ ಗುಟ್ಟೂ ರಟ್ಟಾಯಿತು. ಆದದ್ದಷ್ಟೆ, ಅನಂತರದ ದಿನಗಳಲ್ಲಿ ಅನಂತುವಿನ ಕೊಠಡಿಗೆ ಶಾಂತಳೊಬ್ಬಳನ್ನುಳಿದು ಬೇರಾವ ಕನ್ಯೆಯೂ ಕಾಲಿರಿಸಿದ್ದು ಕಂಡುಬರಲಿಲ್ಲ. ಏಕೆಂದರೆ ಅನಂತುವಿನೊಟ್ಟಿಗೆ ಸದಾ ಕಾಲವೂ ಶಾಂತ ಇರಲಾರಂಭಿಸಿದ್ದರಿಂದ ಮಿಕ್ಕವರಿಗೆ ಅನಂತುವಿನ ಸಾನ್ನಿಧ್ಯ ದಕ್ಕುವುದು ತಪ್ಪಿಹೋಯಿತು . ಆ ಸಮಯದಲ್ಲಿ ಶಾಂತಳನ್ನು ಕಂಡಾಗಲೆಲ್ಲ ಹೊಟ್ಟೆ ಹಿಚುಕಿಕೊಳ್ಳುತ್ತಿದ್ದ ಹೆಣ್ಣುಗಳೂ ಹಲವರಿದ್ದರು.

ಅನಂತು ಶಾಂತ ಒಬ್ಬರನ್ನೊಬ್ಬರು ಒಪ್ಪಿಕೊಂಡು ಬಿಟ್ಟರು. ಇವರಿಬ್ಬರ ವರಸಾಮ್ಯದ ಬಗ್ಗೆ ಯಾರೊಬ್ಬರೂ ಚಕಾರವೆತ್ತುವಂತಿರಲಿಲ್ಲ. ಹೇಳಿ ಮಾಡಿಸಿದ ಜೋಡಿ. ಆದರೆ ಇವರಿಬ್ಬರ ವಿದ್ಯಾರ್ಹತೆಯಲ್ಲಿ ಎಂತಹ ಏರುಪೇರು!

ಅನಂತುವಿಗೆ ಆತ್ಮೀಯರಾಗಿದ್ದ ನಾವು ಕೆಲವರು ಸ್ನೇಹದ ಸಲುಗೆಯಿಂದ ಅನಂತುವನ್ನು ನಮ್ಮೊಡನೆ ಕೂರಿಸಿಕೊಂಡು ‘ಅಲ್ವೋ ಅನಂತು, ನೀನು ಇನ್ನೂ ಇಂಟರ‍್ರು, ಅವ್ಳು ಎಂ. ಎಸ್ಸಿ! ಹೊಂದುತ್ಯೇ? ಈ ಬಗ್ಗೆ ಯೋಚ್ಸಿದ್ದೀಯಾ?’ ಎನ್ನಲು, ಅನಂತು ನಕ್ಕು, ‘ನೋಡ್ರೋ ನನ್ಗಂತೂ ಈ ಕಾಲೇಜು ವಿದ್ಯೆ ಕೈಗೂಡ್ಲಿಲ್ಲ. ಈ ಸುಗಮ ಸಂಗೀತವನ್ನೇ ನೆಚ್ಕೊಂಡು ಇದಕ್ಕೆ ಬಲವಾಗಿ ಕಚ್ಕೊಂಡಿದ್ದೀನಿ. ಇದ್ರಲ್ಲಿ ಮುಂದಕ್ಬರ್ತೀನೋ, ಹಿಂದಕ್ಬೀಳ್ತೀನೋ ಗೊತ್ತಿಲ್ಲ. ಹೀಗಿರಬೇಕಾದ್ರೆ ನನ್ನ ಹೆಂಡ್ತಿಯಾಗೋಳು ಅವಳಾದ್ರೂ ವಿದ್ಯಾವಂತೆಯಾಗಿದ್ರೆ, ನನ್ನ ಹಣೇಬರಹ ಕೈಕೊಟ್ಟೂ ಅವಳ ಹಣೆಬರಹವಾದ್ರೂ ಚೆನ್ನಾಗಿರುತ್ತೆ. ಹೇಗೋ ಸಂಸಾರ ಸಾಗಸ್ಬಹುದು. ಅದ್ಬಿಟ್ಟು ಹೆಂಡ್ತೀನೂ ಅವಿದ್ಯಾವಮತೆಯಾಗಿದ್ದು, ನನ್ನ ವೃತ್ತೀನೂ ಕೈಕೊಟ್ಟೆ ಮುಂದೆ ನಮ್ಮ ಗತಿ ಏನ್ರೋ?’ ಎಂದಾಗ ಅನಂತಸ್ವಾಮಿಯ ಯೋಜನೆ ಖಂಡಿತ ದುರಾಲೋಚನೆಯಲ್ಲ, ಇದು ದೂರಾಲೋಚನೆಯೇ ಸರಿ ಎಂದು ನಮಗೆಲ್ಲ ಖಾತರಿಯಾಗಿ ನಾವೆಲ್ಲಾ ಅನಂತುವಿನ ತೀರ್ಮಾನಕ್ಕೆ ‘ಅಸ್ತು’ ಎಂದೆವು.

ಆದರೆ ಇವರಿಬ್ಬರ ಒಡಂಬಡಿಕೆಯನ್ನು ಒಪ್ಪಿ ಅಸ್ತು ಎನ್ನಲು ನಾವಾರು? ನಮಗೆ ಹಾಗೆನ್ನಲು ಯಾವ ಅಧಿಕಾರ?’ ಹಾಗೆನ್ನಬೇಕಿದ್ದವರು ಅನಂತಸ್ವಾಮಿಯನ್ನು ಹೆತ್ತು ಹೊತ್ತು ಸಾಕಿ ಸಲಹಿದವರಲ್ಲವೇ? ಆದರೆ ಅಂದು ಅನಂತು ಅವರೆಲ್ಲರ ಭಾಗಕ್ಕೆ ಕೇವಲ ‘ಅಯೋಗ್ಯ’ ಅನ್ನಿಸಿದ್ದ.

ವಿಷಯ ತಿಳಿದ ಕೂಡಲೇ ಅಸ್ತು ಅನ್ನಬೇಕಿದ್ದ ಅನಂತುವಿನ ಅಪ್ಪಅಮ್ಮ ಸುಮ್ಮನೆ ಸುಸ್ತು ಹೊಡೆದರು. ‘ಬೇಸ್ತು ಬೀಳಿಸಿದನಲ್ಲೊ ಬೇಕೂಫಾ’ ಎಂದು ಬೈದರು. ‘ಆಗೋಲ್ಲಾ’ ಎಂದು ಅರಚಿದರು, ಅಪ್ಪ. ಗೋಳಿಡುತ್ತ ಅತ್ತರು, ಅಮ್ಮ. ಮಿಕ್ಕವರೆಲ್ಲ ಮುಖ ಮುದುಡಿಕೊಂಡರು. ಪ್ರಯೋಜನವೇನೂ ಆಗಲಿಲ್ಲ.

ಅತ್ತ ಶಾಂತಾಳ ಮನೆಯಲ್ಲೂ ಶಾಂತಿ ಉಡುಗಿ ಮೇಲಿನ ಸೀನೇ ಡಿಟೋ. ಈ ಸೀನಿನಲ್ಲಿ ಅನಂತು, ಆ ಸೀನಿನಲ್ಲಿ ಶಾಂತ, ಅಷ್ಟೇ ವ್ಯತ್ಯಾಸ. ಮತ್ತೆಲ್ಲ ಡಿಟೋ. ಶಾಂತಳಾ ಮನೆಯವರೂ ಈ ಕೂಡಾವಳಿ ಖಂಡಿತ ಕೂಡದು ಎಂದು ಕಿರುಚಿದರು, ಅದೂ ಪ್ರಯೋಜನವಾಗಲಿಲ್ಲ.

ಹಂತ ಕೈಮೀರಿತ್ತು. ಇವರಿಬ್ಬರಿಗೂ ಪರಸ್ಪರ ತಮ್ಮಿಬ್ಬರ ಒಡಂಬಡಿಕೆ ಒಪ್ಪಿಗೆಯಾಗಿತ್ತು. ಶಾಂತ ಅನಂತುವಿನ ನಿರ್ಧಾರ ಅಚಲವಾಗಿತ್ತು! ಯಾರದೇ ‘ಒಪ್ಪಿಗೆ-ಓ’ಗಳಿಗೆ ಸೊಪ್ಪುಹಾಕದ ಅನಂತಸ್ವಾಮಿಯ ಮದುವೆ ಹರಿದ್ರಾ ಕುಂಕುಮ ಶೋಭಿತೆ ಶಾಂತಳೊಡನೆ ಮೈಸೂರಿನ ಗಾಂಧೀಚೌಕದ ಬಳಿ ಇರುವ ಕಾವೇರಿ ಪಟ್ಣಂ ಛತ್ರದಲ್ಲಿ ಶಾಂತವಾಗಿ ನಡೆದೇ ಹೋಯಿತು.