ಮೈಸೂರು ಅನಂತಸ್ವಾಮಿಯ ಮದುವೆ ಆದಂದು ಸಂಜೆ ಆರಕ್ಕೆ ಆರತಕ್ಷತೆ. ಅದೇನು ಆರತಕ್ಷತೆಯೋ, ಯುವಜನ ಸಮ್ಮೇಳನವೋ ಹೇಳಲಾಗದು. ಇಕ್ಕಡೆಯವರ ಬಂಧುಮಿತ್ರರಿಗಿಂತ ಇಪ್ಪಟ್ಟು ಹೆಚ್ಚಾಗಿ ಮೈಸೂರಿನ ಎಲ್ಲ ಕಾಲೇಜು ಸಂಘಸಂಸ್ಥೆಗಳ ಹುಡುಗ ಹುಡುಗಿಯರು ರಂಗುರಂಗಾಗಿ ಸಿಂಗರಿಸಿಕೊಂಡು ಸಂಜೆ ಐದರಿಂದಲೇ ಆಗಮಿಸಲಾರಂಭಿಸಿದ್ದರಿಂದ ಆರರ ಹೊತ್ತಿಗೇ ಕಾವೇರಿ ಪಟ್ಟಣಂ ಹಾಲು (ಮೊದಲಿಗಿದು ಶ್ರೀಕೃಷ್ಣ ಟಾಕೀಸು) ಇವರಿಂದ ತುಂಬಿ ಹೋಯಿತು. ಹೀಗೆ ಹಿಂಡುಹಿಂಡಾಗಿ ಆಗಮಿಸಿ, ಆಸೀನರಾದವರ ಪೈಕಿ ಅದೆಷ್ಟು ಮಂದಿ ಆಮಂತ್ರಿತರೋ ಅಥವಾ ಅಲ್ಲವೋ ಆ ದೇವರಿಗೇ ಗೊತ್ತು! ಅಲ್ಲಿ ತುಂಬಿ ತುಳುಕುತ್ತಿದ್ದ ಎಲ್ಲ ಯುವಕ ಯುವತಿಯರಿಗೂ ಅಚ್ಚುಮೆಚ್ಚಿನ ಅನಂತು “ನಮ್‌ ಪೈಕಿ ಹುಡುಗನೇ”

ಆ ಯುವಕರ ಪೈಕಿ ಅನೇಕರು ಹಾಡಿದರು. ಹಾಡುಬರದವರು ಕುಣಿದರು. ಎಲ್ಲರಿಗೂ ಅನಂತು ಮದುವೆ ತಂದಿದ್ದ ಆನಂದ ಅಷ್ಟಿಷ್ಟಲ್ಲ. ಆದರೆ, ಮುದುಡಿ ಮುನಿಸಿಕೊಂಡು ಮೂಲೆಯಲ್ಲಿ ಮುಟ್ಟಾದವರಂತೆ ಅಟ್ಟ ನೋಡುತ್ತ ಕುಳಿತಿದ್ದವರೆಂದರೆ ಅನಂತು, ಶಾಂತರನ್ನು ಹೊತ್ತು ಹೆತ್ತವರು, ಮತ್ತವರ ಕಡೆಯವರು.

ಆಯಿತು. ಮುಂದಾದದ್ದೇನು? ನಂಬಿಕೆಗೂ ನಿಲುಕದ ಘಟನೆಗಳು. ಬೆಂಗಳೂರಿನ ಎಲ್‌.ಆರ್.ಡಿ.ಯಿ. ಸಂಸ್ಥೆಯ ಮುಖ್ಯಸ್ಥರಾಗಿದ್ದ ಚಕ್ರವರ್ತಿಯವರ ಕಣ್ಣಿಗೆ ಬಿದ್ದ ಅನಂತುವಿಗೆ ಅಲ್ಲಿ ಕೆಲಸ ಸಿಕ್ಕಿತು. ದಿನ ಕಳೆದಂತೆ ಸುಗಮಸಂಗೀತ ಕ್ಷೇತ್ರದಲ್ಲಿ ಅನಂತಸ್ವಾಮಿ ಪ್ರಜ್ವಲಿಸಲಾರಂಭಿಸಿದ. ಈ ನರರೂಪಿನಾರದ ನಾಡಿನಾದ್ಯಂತ ಮೇಲಿಂದ ಮೇಲೆ ಹಾಡಲಾರಂಭಿಸಿದ.

ಪ್ರಶಸ್ತಿ, ರಾಜ್ಯಪ್ರಶಸ್ತಿ, ಅಕಾಡೆಮಿಯ ಪ್ರಶಸ್ತಿ, ಪದಕಗಳ ಸುರಿಮಳೆ. ಮೊಟ್ಟಮೊದಲಿಗೆ ಕನ್ನಡದಲ್ಲಿ ಕ್ಯಾಸೆಟ್‌ ತಂದ ಹೆಗ್ಗಳಿಕೆ. ಅದು ಪ್ರೊ|| ನಿಸಾರ್ ಅಹಮದ್‌ ರವರ ‘ನಿತ್ಯೋತ್ಸವ’! ನಾಂದಿಯಾಗಿ ಹೊರಬಂದ ನಿತ್ಯೋತ್ಸವದ ನಂತರ ಮತ್ತೆ ಅನಂತುವೇ ಹಾಡಿದ ಅನೇಕ ಧ್ವನಿಸುರುಳಿಗಳ ನಿರಂತರೋತ್ಸವ. ಮತ್ತೆ ಆಗೀಗ ಎಂಬಂತೆ ಚಿತ್ರಗಳಲ್ಲಿ ಸಂಗೀತ ನಿರ್ದೇಶನ. ಹೀಗಾಗಿ ೧೯೮೫ರ ಹೊತ್ತಿಗೆ ಅನಂತಸ್ವಾಮಿ ಪಡೆಯುತ್ತಿದ್ದ ಸಂಭಾವನೆ ಕಾರ್ಯಕ್ರಮ ಒಂದಕ್ಕೆ ಐದುಸಾವಿರ! ನಾಡಿನಾದ್ಯಂತ ಬಿಡುವಿಲ್ಲದಷ್ಟು ಕಾರ್ಯಕ್ರಮಗಳು. ಅಂತೂ ಇಂತೂ ಅನಂತುವಿನ ಸಂಕಲ್ಪ ಸಿದ್ಧಿಯಾಗಿತ್ತು. ಎಂತಹ ಸಾಧನೆ!

ಸಮಯಕ್ಕಿರಲಿ ಎಂಬ ಸದುದ್ದೇಶದಿಂದ ಅನಂತಸ್ವಾಮಿಯ ಮಡದಿ ಶಾಂತ ಇಂದಿಗೂ ದುಡಿಯುತ್ತಿದ್ದಾರೆ. ಯಾವುದೋ ಶಾಲೆಯಲ್ಲಿ ಮೇಡಂ ಆಗಿ. ಅದರಿಂದ ಬರುವ ಆದಾಯ ಅವರಿಗೆ ಇಂದು ‘ಪಾಕೆಟ್‌ ಮನಿ’ ಅಷ್ಟೆ.

‘ಶಾಂತ ಅನಂತಸ್ವಾಮಿ’ ಈ ಇಬ್ಬರಿಗೆ ಹುಟ್ಟಿದವರು ನಾಲ್ವರು. ಮೂರು ಹೆಣ್ಣು, ಒಂದು ಗಂಡು. ಒಬ್ಬರಿಗಿಂತೊಬ್ಬರು ಮುದ್ದುಮುಖದವರೆ. ಇವರೆಲ್ಲರಿಗೂ ಸುಗಮಸಂಗೀತ ಸೀಕರಣೆ ತಿಂದಷ್ಟೇ ಸಲೀಸು. ಮೊದಲನೆಯ ಮಗಳು ಮದುವೆಯಾಗಿ ತನ್ನ ಇಂಜಿನಿಯರ್ ಗಂಡನೊಡನೆ ಬೆಂಗಳೂರಿನಲ್ಲಿ ಸುಖವಾಗಿದ್ದಾಳೆ. ಬಲು ಮುದ್ದಾಗಿರುವ ಮಧ್ಯದ ಹುಡುಗಿ ಅಪ್ಪ ಅನಂತಸ್ವಾಮಿಯ ಜೊತೆ ಕೂತು ಅವನಷ್ಟೇ ದಿಟ್ಟತನದಿಂದ ಹಾಡುವುದನ್ನು ಕೆಲವು ವರುಷದ ಹಿಂದೆ ಮೈಸೂರಿನ ಕಲಾಮಂದಿರದಲ್ಲಿ ಕಂಡಾಗ ಆಶ್ಚರ್ಯ ಆನಂದ ಒಟ್ಟಿಗಾಯಿತು. ಮನದಲ್ಲೇ ಶಹಬಾಸ್‌ ಎಂದೆ.  ಈಗ ಈ ಹುಡುಗಿ ಸುನಿತ ಮದುವೆಯಾಗಿ ಒಳ್ಳೆಯ ಹುದ್ದೆಯಲ್ಲಿರುವ ತನ್ನ ಗಂಡನೊಡನೆ ಅಮೇರಿಕಾದಲ್ಲಿ ಸುಖವಾಗಿದ್ದಾಳೆ. ಕೊನೆಯ ಹುಡುಗಿ ರಾಣಿ ಇನ್ನೂ ಪುಟ್ಟದು. ಬಲು ಚೂಟಿ. ನಯನಾಜೂಕುಗಳನ್ನು ಇದರಿಂದ ಇತರರು ಕಲಿಯಬೇಕು. ಮಗ ರಾಜು ಮನ್ಮಥ ಸ್ವರೂಪಿ, ವಿನಯಸಂಪನ್ನ. ನಡೆ, ನುಡಿ ಎಲ್ಲದರಲ್ಲೂ ಅನಂತುವಿನ ಕಾರ್ಬನ್‌ ಕಾಪಿ. ಸಂಗೀತಕ್ಕೆ ಸಂಬಂಧಿಸಿದಂತೆ ಅಪ್ಪ ಅನಂತುವಿಗೆ ಕೊನೆಕೊನೆಯಲ್ಲಿ ಸಿಕ್ಕಿರುವ ನವೀನ ಯುಗದ ತಾಂತ್ರಿಕ  ಸಲಕರಣೆ, ಸವಲತ್ತುಗಳೆಲ್ಲಾ ಮಗ ರಾಜುವಿಗೆ ಎಳವೆಯಲ್ಲೇ ಸಿಕ್ಕಿರುವುದರಿಮದ, ಈತ ಸುಗಮಸಂಗೀತ ದಿಗಂತದಲ್ಲಿ ಉಳಿದವರು ನಡುಗುವಂತೆ ಗುಡುಗುವುದು ಖಡಾಖಂಡಿತ. ಈಗಲೇ ಇವನು ಅಪ್ಪನನ್ನು ಮೀರಿಸಿ ಹಾಡುತ್ತಾನೆ. ಇನ್ನು ಮುಂದೆ ಎಷ್ಟು ಎತ್ತರಕ್ಕೇರುತ್ತಾನೋ ಏನೋ! ಮುಖ್ಯ, ಅಹಂಕಾರ ಅಟಕಾಯಿಸಿಕೊಳ್ಳದಂತೆ ಅಲರ್ಟಾಗಿರಬೇಕು ಅಷ್ಟೆ.

ಅನಾದಿಕಾಲದಿಂದ ನಾಡಿನಾದ್ಯಂತ ಹಾಡಿ ಹೆಸರಾಗಿರುವ ಅನಂತಸ್ವಾಮಿಯು ಸುಗಮಸಂಗೀತ ಪಥದಲ್ಲಿ ನೆಟ್ಟುಬಿಟ್ಟಿರುವ ಮೈಲಿಗಲ್ಲುಗಳ ಸಂಖ್ಯೆ ಸಾಕಷ್ಟು. ನಾಡಿನಾದ್ಯಂತ ಹಾಡುತ್ತ ಸುತ್ತಿ ಸವೆದಿರುವ ಅನಂತಸ್ವಾಮಿ ದೇಶದಾದ್ಯಂತ ಸಂಚರಿಸಿ ಕಾರ್ಯಕ್ರಮಗಳನ್ನು ಕೊಟ್ಟಿರುವುದೂ ಉಂಟು. ಅಲ್ಲದೆ ದೇಶದೆಲ್ಲೆಯನ್ನೂ ಮೀರಿ ಸಾಗರದಾಚೆಯಿರುವ ಅಮೇರಿಕೆಯಲ್ಲಿ ಸತತ ಇಪ್ಪತ್ಮೂರು ಕಾರ್ಯಕ್ರಮಗಳನ್ನು, ಇತ್ತೀಚೆಗೆ ಅಬಿದಾಬಿಯಲ್ಲಿ ಐದಾರು ಕಾರ್ಯಕ್ರಮಗಳನ್ನಿತ್ತು ಸುಗಮಸಂಗೀತ ವಲಯದಲ್ಲೊಂದು ವಿಕ್ರಮವನ್ನೇ ಈ ವಾಮನ ಸೃಷ್ಟಿಸಿದ್ದಾನೆಂದರೆ, ಅದು ಕನ್ನಡಿಗರೆಲ್ಲಾ ಅನಂತುವಿನ ಬಗ್ಗೆ ಅಭಿಮಾನ ತಾಳಬೇಕಾದ ಅಂಶ.

ಕಾಳಿಂಗರಾಯರು ಲಘುಸಂಗೀತಗಾರರ ಪೈಕಿ ಮೆಚ್ಚುತ್ತಿದ್ದುದು ಕೇವಲ ಕೆಲವರನ್ನಷ್ಟೆ. ಗಂಡಸರ ಪೈಕಿ ಅನಂತಸ್ವಾಮಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಮತ್ತೆ ಅಶ್ವಥ್‌ರ ಕಂಠಸಿರಿಯನ್ನು ಕೊಂಡಾಡುತ್ತಿದ್ದರು. ಆದರೆ ಇವರುಗಳು ಕೂತುಹಾಡುವುದನ್ನು ರಾಯರು ಇಷ್ಟಪಡುತ್ತಿರಲಿಲ್ಲ. ನಿಂತು ಹಾಡುವುದರಿಂದ ಹಾಡುವವನ ವ್ಯಕ್ತಿತ್ವ ಎದ್ದು ತೋರುವುದೆಂದೂ ಅಲ್ಲದೆ ಸ್ವಾತಂತ್ಯ್ರದಿಂದ ಹೆಚ್ಚು ಭಾವಪೂರ್ಣವಾಗಿ ಹಾಡಬಹುದೆಂದೂ ಅವರು ನಂಬಿದ್ದರು. ಹಾಗೆ ನಿಂತು ಹಾಡುವ ಪದ್ಧತಿಯನ್ನು ಕಾಳಿಂಗರಾಯರು ತಮ್ಮ ಕೊನೆಯ ತನಕ ಆಚರಿಸಿಕೊಂಡು ಬಂದರು. ಕೊನೆಯಲ್ಲಿ ಅವರ ಕಾಲು ಮುರಿದಿದ್ದಾಗಲೂ ಸಹ ಅವರು ನಿಂತು ಹಾಡಿದರೇ ಹೊರತು ಕೂತು ಹಾಡಲಿಲ್ಲ. ಆದರೆ ಅನಂತಸ್ವಾಮಿ ಈ ಪದ್ಧತಿಯನ್ನು ಅಳವಡಿಸಲಿಲ್ಲ. ಅವನು ಕೂತಿದ್ದೇ ಕೇಳುಗರ ಮೇಲೆ ಮೋಡಿ ಮಾಡಿ ಹಾಡುತ್ತ ಎಲ್ಲರ ಗಮನವನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದುಕೊಳ್ಳಬಲ್ಲ ಚಾಣಾಕ್ಷತನವನ್ನು ಬೆಳೆಸಿಕೊಂಡ. ಲಕ್ಷಣವಾಗಿ ಕೂತು ಹಾಡುವುದಕ್ಕೆ ಅನಂತು ಕೊಡುವ ಕಾರಣಗಳೆಂದರೆ, ಒಂದು, ಆತ ಹಾಡುವಾಗ ತಾನೇ ಹಾರ್ಮೋನಿಯಂ ನುಡಿಸಿಕೊಂಡು ಹಾಡುವುದರಿಂದ ಕೂತು ಹಾಡುವುದು ಅನಿವಾರ್ಯ. ಮತ್ತೊಂದು ಸುಗಮ ಸಂಗೀತಕ್ಕೂ ಲಕ್ಷಣವಾಗಿ ಕಚೇರಿಯ ಕಳೆ ಸಿಗಬೇಕಾದರೆ ಕೂತು ಹಾಡುವುದರಿಂದಷ್ಟೇ ಅದು ಸಾಧ್ಯ. ಈ ಉದ್ದಿಶ್ಯವನ್ನು ಒಪ್ಪಬೇಕಾದ್ದೆ. ಒಟ್ಟಿನಲ್ಲಿ ಇದೆಲ್ಲಾ ಅವರವರ ಇಷ್ಟ.

ಇಲ್ಲಿ ಮತ್ತೊಂದು ವಿಷಯ. ೧೯೮೦ಕ್ಕೆ ಮೊದಲು ‘ಸುಗಮ ಸಂಗೀತ’ ಎಂಬ ಹೆಸರು ಚಾಲ್ತಿಯಲ್ಲಿರಲಿಲ್ಲ. ಕನ್ನಡಗೀತೆ, ಭಾವಗೀತೆ, ದೇವರನಾಮ, ಜಾನಪದಗೀತೆ, ಇವುಗಳನ್ನು ಒಟ್ಟಾಗಿ ಹಾಡುವುದನ್ನು ‘ಲಘುಸಂಗೀತ’ವೆಂದು ಕರೆಯುವುದು ವಾಡಿಕೆಯಾಗಿತ್ತು.

೧೯೮೦ರಲ್ಲಿ ನಮ್ಮ ಮೈಸೂರು ಅನಂತಸ್ವಾಮಿ ‘ಸಂಗೀತ ಅಕಾಡೆಮಿ’ಯ ಸದಸ್ಯನಾದ. ಆಗ ಲಘುಸಂಗೀತವನ್ನು ಸುಗಮಸಂಗೀತವೆಂದು ಪರಿಗಣಿಸಿ, ಈ ವಿಭಾಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಖ್ಯಾತರಾದ ಕಲಾವಿದರಿಗೆ ವರ್ಷಂಪ್ರತಿ ಒಬ್ಬರಿಗೆಂಬಂತೆ ಅಕಾಡೆಮಿಯಿಂದ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ವಾದಿಸಿ, ಈ ಪದ್ಧತಿಯನ್ನು ಆ ವರುಷದಿಂದಲೇ ಆಚರಣೆಗೆ ತರುವಲ್ಲಿ ಅನುವಾದವನು ಅನಂತಸ್ವಾಮಿ. ಇದರಂತೆ ೧೯೮೦-೮೧ರ ಸಾಲಿನ ಸುಗಮಸಂಗೀತ ವಿಭಾಗದ ಪ್ರಶಸ್ತಿಯನ್ನು ಮೊಟ್ಟಮೊದಲು ಪಡೆದವರು ಮೈಸೂರಿನ ಎಚ್‌.ಆರ್. ಲೀಲಾವತಿ.

ಅನಂತಸ್ವಾಮಿ ಸ್ವಭಾವತಹ ಬಹು ಸಂಕೋಚದ ಮನುಷ್ಯ. ತಾನು ಸಂಗೀತ ಅಕಾಡಮಿಯ ಸದಸ್ಯನಾಗಿದ್ದುದರಿಂದ ಅಲ್ಲಿ ತನ್ನ ಕಾಲಾವಧಿ ಪೂರ್ಣವಾಗುವವರೆಗೆ ಈತ ತನಗೆ ಸಲ್ಲಬೇಕಿದ್ದ ಸುಗಮಸಂಗೀತ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಬದಲು ಬೇರೆಯವರಿಗೆ ಬಿಟ್ಟುಕೊಟ್ಟ.  ಅಂದರೆ ತನ್ನ ಸದಸ್ಯತ್ವದ ಅವಧಿ ಮುಗಿದ ಮಾರನೆಯ ವರುಷ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅನಂತು ಪಡೆದ.

ನಾಲ್ಕು ದಶಕಗಳ ಹಿಂದೆ ಆರ್ಡಿನರಿ ಆಗಿದ್ದ ಅನಂತು ಹೀಗೆ ಎಕಸ್ಟ್ರಾರ್ಡಿನರಿಯಾಗುತ್ತಾನೆಂದು ಅವನ ಅಪ್ಪಅಮ್ಮರಾಗಲೀ, ಅತ್ತೆಮಾವರಾಗಲೀ, ಅಥವಾ ನಾವೇ ಆಗಲಿ ಅಂದುಕೊಂಡಿರಲಿಲ್ಲ. ಅದರಲ್ಲೂ ಅನಂತುವಿನ ಪೈಕಿಯವರ ಗೋಳು ಹೇಳತೀರದು . ‘ಈ ಅವಿವೇಕಿ ಅನಂತು ಹಾಳುಹಾದಿ ಹಿಡಿದು ಹಾಳಾದನಲ್ಲಾ’ ಎಂದು ಅನಂತುವಿನ ಅಪ್ಪಅಮ್ಮ ಹಂಬಲಿಸಿದರೆ, ‘ಗಿಳಿಯಂತೆ ಬೆಳೆದಿದ್ದ ಮಗಳು ಗಿಡುಗನ ಪಾಲಾದಳಲ್ಲಾ’ ಎಂದು ಅನಂತುವಿನ ಅತ್ತೆಮಾವ ಅತ್ತು ಆಕಳಿಸಿದ್ದರು. ಆದರೆ ವರುಷ ಉರುಳಿದಂತೆ ಹರುಷದ ಹೊನಲು ಹರಿದು ನಾಡಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು, ಕೀರ್ತಿಖಿಲ್ಲತ್ತುಗಳನ್ನೂ ಮೇಲಿಂದಮೇಲೆ ಗಿಟ್ಟಿಸಿಕೊಂಡು ಮಹಾಮಾನವನಾಗಿ ಮೂಡಿರುವ ಅನಂತು ಈಗ ಎಲ್ಲರಿಗೂ ಬಹು ಅಚ್ಚುಮೆಚ್ಚು. ‘ಅನಂತುವಿನ ಪೈಕಿಯವರು ನಾವು’ ಅನ್ನುವುದರಲ್ಲೇ ಅವನ ಪೈಕಿಯವರಿಗೆ ಆನಂದ.

ಇತ್ತೀಚಿಗಷ್ಟೇ ನಾನು ಮೈಸೂರಿನಲ್ಲಿ ಅನಂತಸ್ವಾಮಿಯ ತಂದೆ ತಾಯಿಯನ್ನು ಭೇಟಿಯಾಗಿದ್ದೆ. ಹಿಂದಿನ ದಿನಗಳ ಬಗ್ಗೆ ಅದೂ ಇದೂ ಮಾತನಾಡುತ್ತ ‘ಈಗ ಅನಂತಸ್ವಾಮಿಯ ಬಗ್ಗೆ ಏನಂತೀರಿ ಸ್ವಾಮಿ? ಎಂದೆ. ಆಗ ಆ ಮುದಿದಂಪತಿಗಳು ಪರಸ್ಪರ ಒಬ್ಬರ ಮುಖವನ್ನೊಬ್ಬರು ನೋಡಿ ನಕ್ಕಾಗಿ ಇಬ್ಬರ ಮುಖದಲ್ಲೂ ಸಂತೃಪ್ತಿಯ ಭಾವ ಚಿಮ್ಮುತ್ತಿತ್ತು.

* * *