ಆ ಕಾಲದಲ್ಲಿ ಮೈಸೂರಿನಲ್ಲಿ, ಇಡೀ ಕೃಷ್ಣಮೂರ್ತಿಪುರಂ, ಚಾಮರಾಜಪುರಂ, ಲಕ್ಷ್ಮಕೀಪುರಂ, ಕನ್ನೇಗೌಡನ ಕೊಪ್ಪಲು, ಈ ಎಲ್ಲ ಬಡಾವಣೆಗಳಿಗೂ ಎಡತಾಕಲಾಗಿ ಎಟುಕುತ್ತಿದ್ದ ಹೋಟೆಲೆಂದರೆ ಅದು ‘ಬಲ್ಲಾಳ್‌ ಹೋಟೆಲ್‌’. ಅದು ಈ ಎಲ್ಲ ಬಡಾವಣೆಗಳತ್ತ ಚಾಚುವ ದಾರಿಗಳ ಸಂಗಮಕ್ಷೇತ್ರದಲ್ಲಿದ್ದುದರಿಂದ ಆ ಕ್ಷೇತ್ರ ‘ಬಲ್ಲಾಳ್‌ ಸರ್ಕಲ್‌’ ಎಂದೇ ಪ್ರಸಿದ್ಧವಾಗಿತ್ತು. ಈ ಹೋಟೆಲಿನ ಮುಂದಿರುವುದೇ ಬಲ್ಲಾಳ್‌ ಬಸ್‌ ಸ್ಟಾಪು. ಬಸ್‌ ಸ್ಟಾಂಡಿನ ಬೋರ್ಡುಗಳಲ್ಲಿ, ಬಸ್‌ ಟಿಕೀಟುಗಳಲ್ಲೆಲ್ಲಾ ಬಲ್ಲಾಳ್‌ ಹೋಟೆಲಿನ ಹೆಸರೇ. ನಿಜ ಬಲ್ಲಾಳ, ಬಿಜ್ಜಳರಿಗೂ ಬರದ ಭಾಗ್ಯ ನಮ್ಮ ಈ ಬಲ್ಲಾಳನಿಗೆ ಬಂದಿತ್ತು. ಅವರವರು ಪಡೆದು ಬಂದದ್ದು ಅವರವರಿಗೆ. ‘ಹಿಂದೆ ಕೊಟ್ಟವರು ಮುಂದೆ ಉಣ್ಣುತ್ತಾರೆ’ ಅನ್ನುವುದು ಇದಕ್ಕೇ.

ದಿನಂಪ್ರತಿ ಮುಂಜಾನೆಯಾಗುವುದಕ್ಕೂ ಮುಂಚೆಯೇ ಹೋಟೆಲನ್ನು ಆರಂಭಿಸುತ್ತಿದ್ದ ಬಲ್ಲಾಳ. ಅದರ ಹೆಬ್ಬಾಗಿಲನ್ನು ತೆರೆಯುತ್ತಿದ್ದಂತೆ, ಆ ನಸುಬೆಳಕಿನಲ್ಲಿ ಒಬ್ಬ ಕಣ್ಣು, ಮತ್ತೊಬ್ಬ ಕಿವಿ, ಮಗದೊಬ್ಬ ಬಾಯಿಮುಚ್ಚಿಕೊಂಡು ಮಾನವ ರೂಪದ ಮಂಗಗಳಂತೆ ಮುಸುಡಿ ತೋರುತ್ತ ಬಲ್ಲಾಳನಿಗೆ ದಿವ್ಯದರ್ಶನವನ್ನೀಯುತ್ತಿದ್ದರು ಈ ತ್ರಿಮೂರ್ತಿಗಳು.

‘ನಿಮ್ದಮ್ಮಯ್ಯ, ಬಾಗಲ್ತೆಗೀತಿದ್ಹಾಗೆ ಬಂದ್ಯಾಕ್ರಯ್ಯ ಕಾಡಸ್ತೀರೀ, ಬೋಣೀ ಆದ್ಮೇಲೆ ಬನ್ರೋ ಬೇಕೂಫರಾ’ ಎಂದು ಬಲ್ಲಾಳ ಬೊಗಳುತ್ತಿದ್ದ. ಇವರು ಕೇಳಬೇಕಲ್ಲಾ. ‘ಕಾಫಿ ಕೊಡೊ ಬಲ್ಲಾಳ, ಕೊಡದಿರೆ ಕೇಳೇವು ಮನೆಹಾಳ’ ಎಂದು ಕೋರಸ್ಸಿನಲ್ಲಿ ಕೂಗುತ್ತಿದ್ದರು, ಕಾಂಪೌಂಡಿನ ಮರದ ಗೇಟಾಚೆ ನಿಂತು. ಬಯ್ಯುತ್ತಲೇ ಬಲ್ಲಾಳ ಇವರನ್ನು ಒಳಗೆ ಬಿಟ್ಟುಕೊಂಡು ಬಿಸಿಬಿಸಿ ಕಾಫಿ ಕೊಟ್ಟು ಕಳಿಸುತ್ತಿದ್ದ.

ಬಲ್ಲಾಳಿ ನಮಗೆಲ್ಲಾ ಬಹಳ ಬೇಕಾಗಿದ್ದ ವ್ಯಕ್ತಿ. ಇದಕ್ಕೆ ಕೆಲವು ಕಾರಣಗಳುಂಟು. ಮೊದಲನೆಯದು ಆಗ ಕೆಲಸವಿಲ್ಲದೆ ಕಾಸಿಲ್ಲದೆ ಓಡಾಡುತ್ತಿದ್ದ ನಮಗೆಲ್ಲಾ ತನ್ನ ಹೋಟೆಲಿನಲ್ಲಿ ತಿಂಡಿ, ಕಾಫಿಯನ್ನು ಸುಲಭವಾಗಿ, ಸಲೀಸಾಗಿ, ಸಾಲವಾಗಿ ಕೊಡುತ್ತಿದ್ದವನು ಈ ಬಲ್ಲಾಳ. ಎರಡನೆಯದಾಗಿ, ಯಾವ ಅಡ್ಡಿ ಅಡಚಣೆಯಿಲ್ಲದೆ ಹಾಯಾಗಿ ಕೂತು ಹರಟೆ ಹೊಡೆಯಲು ಅವನ ಹೋಟೆಲಿನಲ್ಲಿ ನಮಗೆ ಸದವಕಾಶವಿತ್ತು. ಮೂರನೆಯದಾಗಿ, ಪಾಳ್ಳೇಗಾರನಂತೆ ಬಲ್ಲಾಳ ಬಲಶಾಲಿಯಾಗಿದ್ದುದರಿಂದ, ಅಲ್ಲದೆ ಪ್ರಭಾವಶಾಲಿಲಯೂ ಆಗಿದ್ದುದರಿಂದ ಸಮಯದಲ್ಲಾತ ನಮಗೆ ಬೆಂಗಾವಲಾಗಿರುತ್ತಿದ್ದ. ಈ ಎಲ್ಲಾ ಕಾರಣಗಳಿಂದ, ಮುಖ್ಯವಾಗಿ ಮೊದಲನೆಯ ಕಾರಣದಿಂದ, ಬಲ್ಲಾಳ ನಮಗೆ ಆಗ ಬಹಳ ಬೇಕಿದ್ದವ.  ಆತ್ಮೀಯ ಬಂಧು. ಆಪದ್ಬಾಂಧವ, ಆ ಸೈಂಧವ.

ಅಲ್ಲದೆ ನಾವು ರಾತ್ರಿಯ ವೇಳ ಸೈಕಲ್ಲಿಗೆ ಲೈಟಿಲ್ಲದೆ ನೈಟು ಪೋಲೀಸಪ್ಪರಿಗೆ ಸಿಕ್ಕಿಕೊಂಡರೆ, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೆ ಟ್ರಾಫಿಕ್‌ ಇನ್ಸ್‌ಪೆಕ್ಟರುಗಳ ಬಲೆಗೆ ಬಿದ್ದರೆ, ಸಿನಿಮಾದಲ್ಲಿ ಬೀಡಿ, ಸಿಗರೇಟು, ಚುಟ್ಟಾ ವಗೈರೆಗಳನ್ನು ಕದ್ದು ಕುಡಿಯುತ್ತಿದ್ದಾಗ ಮಫ್ತಿಯಲ್ಲಿದ್ದ ಪೋಲಿಸ್‌ ಪ್ಯಾದೆ ಕಳ್ಳ ಹೆಜ್ಜೆಯಿರಿಸಿಕೊಂಡು ಬಂದು ನಮ್ಮ ಕುತ್ತಿಗೆಗೆ ಕೈ ಹಾಕಿ ಸ್ಟೇಷನ್ನಿಗೆ ಎಳೆದೊಯ್ದರೆ, ಹೀಗೆ, ಇಂಥಹ ಸೂಕ್ಷ್ಮವೆನಿಸುವ ಸಂಕಷ್ಟ ಸನ್ನಿವೇಶಗಳಲ್ಲೆಲ್ಲಾ ಸಂಬಂಧಪಟ್ಟ ಸರ್ಕಲ್‌ ಇನ್ಸಪೆಕ್ಟರುಗಳಿಗೆ ಹೇಳಿ ನಮ್ಮನ್ನು ಅವರ ಕಪಿಮುಷ್ಟಿಯಿಂದ ಬಿಡಿಸಿ ಪಾರುಮಾಡುತ್ತಿದ್ದವನು ಈ ಬಲ್ಲಾಳ.

ಸೋಮು, ಅನಂತು, ಗುಣಸಿಂಗ್‌, ಈ ವಕ್ರತ್ರಯರನ್ನು ಬಹಿರಂಗವಾಗಿ ಬಲ್ಲಾಳ ಬೈಯ್ಯುತ್ತಿದ್ದನೇ ಹೊರತು, ಆಂತರ್ಯದಲ್ಲಿ ಇವರ ಬಗ್ಗೆ ಆತನಿಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ.

ಒಮ್ಮೆ ಅವನ ಗಲ್ಲಾದ ಪಕ್ಕದ ಕುರ್ಚಿಯಲ್ಲಿ ಕೂತು ಕಾಫಿ ಹೀರುತ್ತಿದ್ದೆ. ಸಾಲದ ಗಿರಾಕಿಗಳ ಬೊಟ್ಟಿನ ಬುಕ್ಕನ್ನು ಬಲ್ಲಾಳ ತಿರುವುತ್ತಿದ್ದ . ಪಕ್ಕದಲ್ಲಿದ್ದ ನನಗೆ ಆ ಪಾಣೀಪುಸ್ತಕದ ಪ್ರಾರಂಭದ ಪುಟಗಳನ್ನು ತೋರುತ್ತ, ‘ನೋಡೋ ಕೇಶವ, ಅನಂತೂ ಅಂಢ್‌ ಕಂಪ್ನಿ ಅಕೌಂಟನ್ನ, ಹನುಮಂತನ ಬಾಲ ಬೆಳ್ದಾಂಗೆ ಬೆಳ್ದಿದೆ . ಆ ಸೋಮು, ಗುಣ, ಫಾಟಿಗಳು. ನನ್ನ ಪಟ್ಟಿಗೆ ಸಿಕ್ಕದ ಪಾಖಡಾಗಳು . ಈಗ್ನಾನು ಅಟಕಾಯಿಸೋದಾದ್ರೆ ಆ ಅನಂತೂಗೆ ಅಟಕಾಯಿಸ್ಕೋಬೇಕು. ಸೋಮು ಸಿಕ್ದಾಗ ಹೇಳು. ಕೊಡ್ಬೇಕಾದ ಕಾಸು ಹದ್ಮೀರಿ ಬೆಳ್ದಿದೇಂತ’ ಎನ್ನುತ್ತ ಆ ಬ್ಲೂಬೈಂಡ್‌ ಬುಕ್ಕನ್ನು ನನ್ನ ಕೈಗಿತ್ತ. ನೋಡಿದೆ. ಸಾಲ ತಿಂದು ತೇಗಿದವರ ಲೆಕ್ಕವನ್ನು ಅದರಲ್ಲಿ ಬಲ್ಲಾಳಿ ಬಹು ಅಚ್ಚುಕಟ್ಟಾಗಿ ಬರೆದಿದ್ದ. ಅಕ್ಷರಮಾಲೆಗೆ ತಕ್ಕಂತೆ, ‘ಅ’ ಇಂದ ಪ್ರಾರಂಭಿಸಿ, ‘ಕ್ಷ’ ವರೆಗೆ ಅವರವರ ಹೆಸರಿನ ಆರಂಭದಕ್ಷರವನ್ನು ಅನುಸರಿಸಿ, ಒಂದೊಂದು ಹೆಸರಿಗೂ ಎರಡೆರಡು ಪುಟಗಳನ್ನು ಇರಿಸಿದ್ದರಿಂದ, ಆಯಾಯ ಹೆಸರಿನವರ ಋಣಪಟ್ಟಿಯ ಪುಟಗಳನ್ನು ಹುಡುಕುವುದು ಸುಲಭವಾಗಿತ್ತು. ಅದರಲ್ಲೂ ಅನಂತಸ್ವಾಮಿಯ ಹೆಸರು ಅಕ್ಷರಮಾಲೆಯ ಮೊದಲಕ್ಷರವಾದ್ದರಿಮದ ಅವನದ್ದೇ ಆರಂಭದ ಎರಡು ಪುಟಗಳು. ಸೋಮು, ಗುಣಸಿಂಗ ತಿನ್ನುತ್ತಿದ್ದುದೂ ಅನಂತುವಿನ ಅಕೌಂಟಿನಲ್ಲೇ. ಅನಂತಸ್ವಾಮಿ ನಾಮಾಂಕಿತ ಪುಟಗಳ ಪೂರ್ತ ಸಾಲದ ಪಟ್ಟಿ ಪೊಗದಸ್ತಾಗಿ ಪಸರಿಸಿತ್ತು. ನೋಡಿ ‘ಆನಂದವಾಯ್ತು, ಸೋಮೂಗೆ ಹೇಳ್ತೀನಯ್ಯಾ’ ಎಂದೆದ್ದೆ.

ಅಂದೇ ಸಂಜೆ ಸಿಕ್ಕಿದ ಸೋಮು, ಗುಣಸಿಂಗರಿಗೆ “ಅಲ್ರೋ, ಆ ಬಲ್ಲಾಳಿಭವನದಲ್ಲಿ ತಿಂದು ತಿಂದೂ ತೇಗಿದ್ದೀರಲ್ಲಾ., ಎಂದ್ರೋ ನೀವು ಅವನ ಋಣ ತೀರ್ಸೋದು?’ ಎಂದೆ. ಈ ಮಾತನ್ನು ಕೇಳಿದ ಸೋಮು, ‘ನೋಡು ಕೇಶವ, ತಿನ್ನೋದು ನಮ್ಮ ಧರ್ಮ.  ತಿನ್ಸೋದು ಅವನ ಕರ್ಮ, ಏನಂತಿ?’ ಎಂದು ಗೊರಗೊರನೆ ನಕ್ಕ.  ಗುಣಸಿಂಗನೂ ಗೂಳಿಯಂತೆ ಗುಟುರುಗುಟ್ಟಿದ. ‘ಭಂಡರ ಭಂಡರಿವರು, ಶತಭಂಡರು’ ಎಂದುಕೊಂಡು ನಾನು ತೆಪ್ಪನಾದೆ.

ವಾರದ ಮೇಲಾಯ್ತು. ಮತ್ತೊಮ್ಮೆ ಅತ್ತ ಕಾಫಿ ಕುಡಿಯಲು ಹೋದ ನನ್ನತ್ತ ಬಲ್ಲಾಳ ಮತ್ತದೇ ಬುಕ್ಕನ್ನು ತೆಗೆದು, ಒದರುತ್ತ “ಬಡ್ಡಿಕೇಗಳು, ನೋಡದ್ಯ ಅವರ ಬುದ್ಧೀನ?’ ಎಂದ. ‘ಏನಯ್ಯಾ?’ ಅಂದೆ. ‘ಅವರು ಮೂರುಜನವೂ ಗದಕಿ ಸಾಲ ಬರೆಸಿದ್ದ ಎರಡು ಪೇಜನ್ನ ನಾನು ನಿನಗೆ ಆವತ್ತು ತೋರ್ಸಿದ್ದೆ ಅಲ್ವೇ ?’ ಎಂದ. `Hope So’ ಎಂದೆ ನಗುತ್ತ. `Hope So ಏನ್ಬಂತೋ, hopeless fellow, it was so’ ಎಂದ ಬಲ್ಲಾಳಿ. ‘ಆಯ್ತಯ್ಯಾ ಬಲ್ಲಾಳಿ, ಈಗೇನಾಯ್ತು?’ ಅಂದೆ. ಆ ಬುಕ್ಕನ್ನು ತೆರೆದು ‘ನೋಡಿಲ್ಲಿ ಆಗಿರೋದನ್ನ! ಲೆಕ್ಕ ಬರ್ದಿದ್ದ ಎರಡು ಹಾಳೆಗಳ ಪೈಕಿ ಒಂದು ಹಾಳೇನ ಹರಿದು ಎಗರಸ್ಬಿಟ್ಟಿದ್ದಾರೆ ಪಾಖಡಾಗಳು. Total  ನಲ್ಲಿ fifty percent ಏ Outಉ’ ಎಂದ . ನಗುತ್ತಾ ನಾನು ‘ಯಾರ್‌ಮೇಲೆ ನಿಂಗುಮಾನಿ? ಎಂದೆ. ಅದಕ್ಕವನು ‘ಹೇಗ್ಹೇಳೋದು. ಅನಂತು ಆನೆಷ್ಟು. ಗುಣಂಗೆ ಗೈರತ್ತಿಲ್ಲ . ಈ ಕೆಲ್ಸ ಏನಿದ್ರೂ ಆ ಎಂ.ಎ. ಮಾಡಿರೋ ಎಮ್ಮೆದೇ. ಬರ್ಲೀ ಸೋಮ, ಬಡದ್ಬಿಡ್ತೀನಿ’ ಎಂದು ಬೊಬ್ಬೆಯಿಟ್ಟ. ಅಷ್ಟೇ. ಈ ಎಮ್ಮೆ ಸೋಮು ಸಿಗಲಿಲ್ಲ. ಆ ಬಲ್ಲಾಳ ಇವನನ್ನು ಬಡಿಯಲಿಲ್ಲ.

ನಮ್ಮ ಸೋಮಣ್ಣ ಲಾಗಾಯ್ತಿನಿಂದಲೂ ಖಯಾಲಿ ಕಪ್ಪಣ್ಣ, ಶೋಕಿಲಾಲ್‌ ಶಿವಣ್ಣ. ಒಂದು ವಕ್ರಕೋನದಿಂದ ಇವನನ್ನು ದಿಟ್ಟಿಸಿದಾಗ ಶಿವಾಜಿಗಣೇಶನನ್ನು ಅಲ್ಪಸ್ವಲ್ಪ ಹೋಲುವ ಸೋಮಣ್ಣನ ಪೂರ್ವಾಶ್ರಮದ ಲೀಲೆಗಳನ್ನು ನೆನೆದರೆ ಈಗಲೂ ನಗು ಬರುತ್ತದೆ.

ರಸ್ತೆಯಲ್ಲಿ ಜೋರಾಗಿ ಸುಮ್ಮನೆ ಚಪ್ಪಾಳೆ ತಟ್ಟುವುದು. ಮುಂದೆ ಹೋಗುತ್ತಿರುವವರೆಲ್ಲಾ ತಮ್ಮನ್ನು ಯಾರೋ ಕರೆಯುತ್ತಿರಬಹುದೆಂದು ಹಿಂದಿರುಗಿ ನೋಡಿದರೆ, ನೋಡಿದವರನ್ನೆಲ್ಲಾ ಬಿಟ್ಟು ನೋಡದವರತ್ತ ಕೈತೋರಿ ಕೂಗಿ ಮತ್ತೆ ಚಪ್ಪಾಳೆ ತಟ್ಟುವುದು. ಇದೊಂದು ರೀತಿಯ ಚೆಲ್ಲಾಟ. ಮತ್ತೆ ತನಗೆ ಪರಿಚಯವೇ ಇಲ್ಲದ ವೃದ್ಧರನ್ನು ನಿಲ್ಲಿಸಿ ತನಗವರು ಬಹುಕಾಲದಿಂದ ಪರಿಚಿತರೆಂಬಂತೆ ಸೋಗುಹಾಕುತ್ತ, ಅವರ ಪೂರ್ವಾಪರಗಳನ್ನು ವಿಚಾರಿಸುತ್ತಾ, ಅವರು ಆವಾಕ್ಕಾಗಿ ತಬ್ಬಿಬ್ಬಾಗುವಂತೆ ಮಾಡಿ ವಿನಾಕಾರಣ ಅವರನ್ನು ಗೋಳು ಹೊಯ್ದುಕೊಳ್ಳುವುದು,’ ಮತ್ತೊಂದು ರೀತಿಯ ಆಟ. ಯಾರು ಎಷ್ಟೇ ಬೇಡವೆಂದರೂ ಸೋಮು  ಈ ತೆರನ ಕುಚೇಷ್ಟೆಯನ್ನು ಬಿಡುತ್ತಿರಲಿಲ್ಲ.

ಸೋಮುವಿನ ಕಪಿಚೇಷ್ಟೆ ಕುಚೇಷ್ಟೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದವನು ನರಪೇತಲನಂತಿದ್ದ ಗುಣಿಸಿಂಗ್. ಈ ಗುಣಸಿಂಗ ಗೋಂದಿನಲ್ಲಿ ಜೋಡಿಸಿದ ಹಂಚಿಕಡ್ಡಿಯಂತಿದ್ದವನು. ಈಗಲೂ ಡಿಟೋ, ಹಾಗೆಯೇ ಇದ್ದಾನೆ. ಬಣ್ಣ – ಕಾಗೆ ಇವನಿಗಿಂತ ಬಿಳುಪೆನ್ನಬಹುದು. ಕಾಡುಬೆಕ್ಕಿಗೂ ಇರದ ಕಪ್ಪು ಮೈಬಣ್ಣ. ಗುಣಸಿಂಗ್‌ ಜನ್ಮತಾರಭ್ಯ ಬಹುಸಣ್ಣ. ಎಷ್ಟು ಸಣ್ಣ ಎಂದರೆ ಇನ್ನಿದಕ್ಕಿಂತ ಸಣ್ಣಗಾಗಲು ಸಾಧ್ಯವೇ ಇಲ್ಲ ಎಂಬಷ್ಟು ಸಣ್ಣ. “ಇಷ್ಟರ ಮೇಲೆ ಇವ ಇನ್ನೂ ಸಣ್ಣಗಾದರೆ ಆಗಿವ ಅದೃಶ್ಯನಾಗಿಬಿಡುತ್ತಾನೆ. If at all he becomes thin any further he can only become invisible” ಎಂದು ಗುಣಸಿಂಗನ Girth ನ ಬಗ್ಗೆ ಒಬ್ಬರು ಗುಣಗಾನ ಮಾಡಿದ್ದರು. ಹೀಗಿದ್ದರೂ ಗುಣಸಿಂಗ್‌ ನಮ್ಮೆಲ್ಲರಿಗೂ ಇಷ್ಟವೆನಿಸಿದ್ದ. ಅವನಲ್ಲಿದ್ದ ಹಾಸ್ಯ ಸ್ವಭಾವ ಅಂಥಾದ್ದು. ಈ ಗುಣ ದಟ್ಟವಾದ ಕಪ್ಪನೆಯ ಮೀಸೆಯನ್ನು ಬಿಟ್ಟಿದ್ದ . ಆದರೆ ಹತ್ತಿರದಿಂದ ದಿಟ್ಟಿಸದ ಹೊರತು ಅದು ಯಾರಿಗೂ ಕಾಣುತ್ತಿರಲಿಲ್ಲವೆನ್ನಿ. ಅಂತಹ ಕ್ಯಾಮೋಫ್ಲ್ಯಾಜು.

ಸೋಮಣ್ಣ ಗುಣಸಿಂಗರದು ಲಾರೆಲ್‌ ಮತ್ತು ಹಾರ್ಡಿಯ ಕಾಂಬಿನೇಶನ್ನು. ಸದಾಕಾಲವೂ ಜೊತೆಜೊತೆಯಾಗಿ ಪೋಣಿಸಿಕೊಂಡಿರುತ್ತಿದ್ದರು, ಏಕೋದರರಂತೆ.

ಒಂದು ದಿನ ಸಂಜೆ, ಆರರ ಹೊತ್ತು. ಗಣೇಶ ಟಾಕೀಸಿನ ಎದುರಿಗಿರುವ ಕಲ್ಲುಬೆಂಚೊಂದರ ಮೇಲೆ ಲುಂಗಿ ಪಂಚೆಯುಟ್ಟಿದ್ದ, ತೆಳ್ಳನೆಯ ಮಲ್ಲು ಹಾಫ್‌ ಆರಮ್‌ ಷರಟು ತೊಟ್ಟಿದ್ದ, ಕನ್ನಡಕ ಧರಿಸಿದ್ದ, ಕಪ್ಪುವರ್ಣದ, ಬಕ್ಕತಲೆಯ, ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬರು ಏನನ್ನೋ ಯೋಚಿಸುತ್ತ ಕುಳಿತಿದ್ದರು. ಇಂದು ಇವರನ್ನು ಕಿಚಾಯಿಸಿ ತಬ್ಬಿಬ್ಬು ಮಾಡುವುದೆಂದು ಲೆಕ್ಕ ಹಾಕಿದ ಸೋಮಣ್ಣ.

‘ರೈಟೋ’ ಎಂದ ಗುಣಸಿಂಗ.

ಇಬ್ಬರು ಅವರತ್ತ ಹೋಗಿ ಎದುರು ನಿಂತು ಮಾಮೂಲಿನಂತೆ ‘ನಮಸ್ಕಾರ ಸ್ವಾಮಿ’ ಎಂದರು ನಯವಾಗಿ.

ಅವರು ಇವರನ್ನು ದಿಟ್ಟಿಸಿ `yes?’ ಎಂದರು ಪ್ರಶ್ನಾರ್ಥಕವಾಗಿ.ಸೋಮು ಮುಗುಳ್ನಗುತ್ತ ಮುಂದೆ ಸರಿದು ‘ನಾನು ಸಾರ್, ಸೋಮಶೇಖರ, ಗೊತ್ತಾಗ್ಲಿಲ್ವೇ?’ ಎಂದ ಪೀಠಿಕೆಯಾಗಿ.

ಅವರು ತಿಳಿಯದೆಂಬಂತೆ ತಲೆಯಾಡಿಸುತ್ತ ‘Well, I don’t remember to have seen you earlier’ ಎಂದರು ಮುಗುಮ್ಮಾಗಿ.

ಸೋಮು ಸುಮ್ಮನಾಗಲಿಲ್ಲ. ಬದಲಿಗೆ  ಈ ಬಕ್ಕತಲೆಯ ಬಕರ ಬಲೆಗೆ ಬೀಳುವುದರಲ್ಲಿದೆ ಎಂದು ಭಾವಿಸಿ, ಮೆಲ್ಲನೆ ಅವರ ಪಕ್ಕ ಕೂತು, ‘ಏನ್ಸಾರ್ ಹೀಗಂತೀರಿ, ನೀವು ಸಂತೆ ಸರಗೂರು ಸುಬ್ರಾಯ್ರಲ್ವೇ?’ ಎಂದ ಸ್ವಲ್ಪ ಸ್ಟೈಲಾಗಿ.

ಅದಕ್ಕವರು ನಕ್ಕಲು, ‘No No, you are mistaken’ ಎಂದರು ಮೃದುವಾಗಿ.

ಮತ್ತಿವನು ಸೋಮಣ್ಣ ಪೆದ್ದುಪೆದ್ದಾಗಿ ಫೋಸ್‌ ಕೊಡುತ್ತ ಏನೂ ಅರಿಯದ ನಸುಗುನ್ನಿಯಂತೆ ನುಲಿಯುತ್ತ ‘ಹಾಗಾದ್ರೆ ತಮ್ಮ ಪರಿಚಯ? ಎಂದ ರಾಗವಾಗಿ.

ಆಗವರು ಇವರಿಬ್ಬರನ್ನು ಕ್ಷಣಕಾಲ ನುಂಗುವಂತೆ ನೋಡಿ, ‘Well gentleman, I am R.K. Narayan’ ಅನ್ನುತ್ತಲೇ ಆ ಮಾತನ್ನು ಕೇಳಿದ ಸೋಮು, ಗುಣಸಿಂಗ, ಈ ಇಬ್ಬರಿಗೂ ಒಮ್ಮಿಂದೊಮ್ಮೆಲೆ ಏಕಾಏಕಿ ಹಿಂಭಾರ ಹೆಚ್ಚಾಗಿ, ಮತ್ತೆ ಅಲ್ಲಿವರು ಅರೆಕ್ಷಣವೂ ನಿಲ್ಲಲಾಗದೆ ಅಂಡದುಮಿಕೊಂಡು ಅಡ್ಡಾದಿಡ್ಡಿಯಾಗಿ ಅನಂತುವಿನ  ಮನೆಯ ಹಿತ್ತಲಿನತ್ತ ದೌಡಾಯಿಸಿದರು.

* * *