ಪುರಾತನ ಕಾಲ, ೧೯೫೯ರ ಸುಮರು. ಸುಬ್ಬಣ್ಣ (ಶಿವಮೊಗ್ಗ ಸುಬ್ಬಣ್ಣ) ಶಿವಮೊಗ್ಗೆಯಲ್ಲಿ ಬಿ.ಎ. ಮುಗಿಸಿ, ಬಿ.ಕಾಂ ಓದಲು ಮೈಸೂರಿಗೆ ಬಂದಿದ್ದ. ಈತ ಆಗ ಓದುತ್ತಿದ್ದುದು ಬನುಮಯ್ಯನವರ ಕಾಲೇಜಿನಲ್ಲಿ. ಇದ್ದದ್ದು ಶಾರದಾವಿಲಾಸ ಕಾಲೇಜಿನ ಹಿಂಭಾಗಕ್ಕಿರುವ ಮಾಧ್ವ ಹಾಸ್ಟೆಲಿನಲ್ಲಿ. ಅಂದ ಮಾತ್ರಕ್ಕೆ ಸುಬ್ಬಣ್ಣ ಮಧ್ವಮತದವನು ಎಂದು ವಾಚಕರು ಊಹಿಸಕೂಡದು. ಸ್ಮಾರ್ಟಾಗಿರುವ ಸುಬ್ಬಣ್ಣ ಸ್ಮಾರ್ಥ. ಆ ಮಾಧ್ವರ ವಿದ್ಯಾರ್ಥಿನಿಲಯ ಮುದ್ರೆಯವರಿಗಷ್ಟೇ ಸೀಮಿತವಾಗಿರಲಿಲ್ಲ ಆಗ. ವಿಭೂತಿ, ನಾಮದವರಿಗೂ ಅಲ್ಲಿರಲು ಅವಕಾಶವಿತ್ತು. ಈಗಲೂ ಅಲ್ಲಿ ಹಾಗೆಯೇ. ತ್ರಿಮತಸ್ಥ ಬ್ರಾಹ್ಮಣರ ಬಚ್ಚಾಗಳು ಅಲ್ಲಿ ಒಂದಾಗಿರುವುದನ್ನು ನೋಡಲು ಬಹು ಚೆಂದ. ಸೋಮುವೂ (ಹೆಚ್.ಚಿ.ಸೋಮಶೇಖರರಾವ್‌) ಆಗ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದ ಸಮಯ.

ಆ ಕಾಲದಲ್ಲೊಮ್ಮೆ ಪಂಡಿತ್‌ ಜವಾಹರಲಾಲ್‌ ನೆಹರೂರವರು ಮೈಸೂರಿಗೆ ಬರುವುದಿತ್ತು. ನೆಹರೂ ಬರುತ್ತಾರೆಂದು ತಿಳಿದ ಕೂಡಲೇ ಮೈಸೂರಿನವರ ಸಂಭ್ರಮ, ಸಡಗರ ಹೇಳತೀರದು. ಎಲ್ಲರ ಬಾಯಲ್ಲೂ ನೆಹರೂಜಿ ಮಾತೆ. ಅವರ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಸಾಹುಕಾರ್ ಚೆನ್ನಯ್ಯನವರಂತೂ ಗರಿಗೆದರಿದ ನವಿಲಿನಂತಾಗಿದ್ದರು. ಕೇವಲ ಒಂದು ರೂಪಾಯಿ ವಂತಿಗೆಯನ್ನಿತ್ತು ಆ ಕಾಲದಲ್ಲಿ ಕಾಂಗ್ರೆಸ್ಸಿನ ಸದಸ್ಯರಾಗುವ ಸವಲತ್ತನ್ನಿತ್ತವರು ಚೆನ್ನಯ್ಯನವರು. ಚೆನ್ನಯ್ಯನವರಿಗೆ ಆಪ್ತನಾಗಿದ್ದ ಬಲ್ಲಾಳ್‌ ಹೋಟೆಲ್‌ ಮಾಲೀಕ ಲಕ್ಷ್ಮೀನಾರಾಯಣ ಬಲ್ಲಾಳನೂ ಸಾಹುಕಾರರ ಆದೇಶದಂತೆ ತನ್ನ ಹೋಟೆಲಿಗೆ ಬರುತ್ತಿದ್ದವರಿಗೆಲ್ಲಾ ಈ ಒಂದು ರೂಪಾಯಿಯ ಚೀಟಿಯನ್ನಿತ್ತು ಅನೇಕ ಮಂದಿಯನ್ನು ಕಾಂಗ್ರೆಸ್‌ ಸದಸ್ಯರನ್ನಾಗಿಸಿದ್ದು ನನಗೆ ನೆನಪು.

ಹೀಗೆ ಬಲ್ಲಾಳನ ಮೂಲಕ ಒಂದು ರೂ. ಸದಸ್ಯತ್ವವನ್ನು ಪಡೆದಿದ್ದ ನಮ್ಮ ಸೋಮು ಆ ಸಮಯದಲ್ಲಿ ಕೆಲವು ದಿನ ತನ್ನ ಓದು ವಿದ್ಯೆಗೆಲ್ಲಾ ಶರಣು ಹೊಡೆದು, ತಾನೂ ಒಬ್ಬ ಪ್ರತಿಷ್ಠಿತ ಕಾಂಗ್ರೆಸ್‌ ವ್ಯಕ್ತಿ ಎಂಬಂತೆ ಸೋಗುಹಾಕುತ್ತ, ನೆಹರೂಜಿ ಅಂಬೆಗಾಲಿಡುತ್ತಿದ್ದಾಗಿನಿಂದಲೂ ಅವರು ತನಗೆ ಹತ್ತಿರದಿಂದ ಗೊತ್ತೆಂಬಂತೆ ಅವರ ಬಗ್ಗೆ ತನಗೆ ಗೊತ್ತಿದ್ದ, ಅದಕ್ಕಿಂತ ಹೆಚ್ಚಾಗಿ ಗೊತ್ತಿರದ ವಿಷಯ ವಿವರಗಳನ್ನೆಲ್ಲಾ ರಾಜಕೀಯ ಕ್ಷೇತ್ರದ ಒಬ್ಬ ಮುದಿಮುತ್ಸದ್ದಿ ಬಣ್ಣಿಸುವಂತೆ ಬಡಬಡಿಸುತ್ತಿದ್ದ. ಹೇಳುವವ ಹೆಡ್ಡನಾದರೆ ಕೇಳುವವ ಕಿವುಡ ಎಂಬಂಥೆ ಇವನಂದದ್ದಕ್ಕೆಲ್ಲಾ ‘ಹೌದು ಬುದ್ಯೋ’ ಎಂದು ಕೋಲೆಬಸವನಂತೆ ನಾವುಗಳು ಗೋಣಲ್ಲಾಡಿಸುತ್ತಿದ್ದೆವು.

ಮೈಸೂರು ಟೌನ್‌ ಹಾಲಿನ ದಕ್ಷಿಣ ಭಾಗದ ಮೈದಾನದಲ್ಲಿ ಸುಮಾರು ಎರಡಾಳು ಎತ್ತರದ ಒಂದು ವೇದಿಕೆಯನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ನಿಂತು ನೆಹರೂಜಿ ಮಾತನಾಡುವುದೆಂದು ಏರ್ಪಾಡಾಗಿತ್ತು.

ನಮ್ಮ ರಾಷ್ಟ್ರಗೀತೆಯೆಂದರೆ ನೆಹರು ಅವರಿಗೆ ಪಂಚಪ್ರಾಣ. ಅದನ್ನು ಹಾಡುವಾಗ ಕಿಂಚಿತ್‌ ಲೋಪವಾದರೂ ಅವರು ಸಹಿಸುತ್ತಿರಲಿಲ್ಲ. ಅಂದು ಅವರ ಭಾಷಣ ಮುಗಿದ ನಂತರ ಅವರ ಪಕ್ಕ ನಿಂತು ಸಹಸ್ರಾರು ಜನರ ಎದುರು ಧೈರ್ಯವಾಗಿ, ಸುಶ್ರಾವ್ಯವಾಗಿ, ಕಾಲಕ್ರಮಬದ್ಧವಾಗಿ ರಾಷ್ಟ್ರಗೀತೆಯನ್ನು ಒಬ್ಬ ಹಾಡಬೇಕೆಂದೂ, ಹಾಗೆ ಹಾಡುವ ವ್ಯಕ್ತಿ ಯುವಕನೂ, ಸ್ವುರಧ್ರೂಪಿಯೂ ಆಗಿದ್ದು, ಬಿಳೀ ಸುರುವಾಲುಜುಬ್ಬ, ವೇಯಿಸ್ಟಕೋಟು, ಗಾಂಧಿಟೋಪಿ ಹಾಕಿಕೊಂಡಿದ್ದು , ವೇಯಿಸ್ಟ ಕೋಟಿಗೆ ಅಗಲವಾದ ಕೆಂಪುಗುಲಾಬಿಯೊಂದನ್ನು ಸಿಕ್ಕಿಸಿಕೊಂಡಿರಬೇಕೆಂದೂ , ಅಂತಹ ವರ್ಚಸ್ವೀ ಯುವಕನನ್ನು ಪತ್ತೆ ಹಚ್ಚಿ, ಅಂದು ರಾಷ್ಟ್ರಗೀತೆಯನ್ನು ಹಾಡುವ ಜವಾಬ್ದಾರಿಯನ್ನು ಆತನಿಗೆ ಒಪ್ಪಿಸಬೇಕೆಂದೂ, ಮಾನ್ಯ ಶ್ರೀಬಲ್ಲಾಳನಿಗೆ ಸನ್ಮಾನ್ಯ ಶ್ರೀ ಸಾಹುಕಾರ್ ಚೆನ್ನಯ್ಯನವರು ಆದೇಶವಿತ್ತರು. ‘ಆಗಲೀ ಸಾಹುಕಾ‌‌ರೇ, ರಾಷ್ಟ್ರಗೀತೆ ಯೋಚ್ನೆ ಬಿಟ್ಬಿಡಿ. ನಾನು ನೋಡ್ಕೊತೀನಿ’ ಎಂದು ಸಾಹುಕಾರರಿಗೆ ಆಶ್ವಾಸನೆಯನ್ನಿತ್ತ ಬಲ್ಲಾಳ ತನ್ನ ಬೈಸಿಕಲ್ಲನ್ನೇರಿ ರಸ್ತೆಯುದ್ದಕ್ಕೂ ‘ಜನಗಣಮನ’ವನ್ನು ಶಿಳ್ಳೆ ಹೊಡೆಯುತ್ತ ತನ್ನ ಹೋಟೆಲಿಗೆ ಬಂದುಬಿಟ್ಟ.

ಈ ನಮ್ಮ ಬಲ್ಲಾಳನ ಬಗ್ಗೆ ಎರಡು ಮಾತು. ಬಲ್ಲಾಳ ಆ ಕಾಲದಲ್ಲಿ ತುಂಬು ಯುವಕ. ಬ್ರಿಟೀಷರ ಬಣ್ಣ, ರಷ್ಯನ್ನರ ಎತ್ತರ, ಆಫ್ರಿಕನ್ನರ ಅಂಗಸೌಷ್ಠವ, ಸ್ವುರದ್ರೂಪಿ. ಮೈಸೂರಿನಲ್ಲಾಗ ಇವನು ಒಬ್ಬ ಮನ್ಮಥ ಸ್ವರೂಪಿ. ಜೊತೆಗೆ ಸಿರಿವಂತಿಗೆಯಿಂದ ಮೆರೆಯುತ್ತಿದ್ದ ವೈಭವದ ವ್ಯಕ್ತಿ. ದಸರಾವಸ್ತು ಪ್ರದರ್ಶನದ ವಿವಿಧ ವೇಷ ಸ್ಪರ್ಧೆಯಲ್ಲಿ ರಾಬಿನ್‌ ಹುಡ್‌, ರುಡಾಲ್ಫ್‌ ವ್ಯಾಲೆಂಟಿನೋ, ರೆಡ್‌ಇಂಡಿಯನ್‌ಕಿಂಗ್‌, ಇತ್ಯಾದಿ ವೇಷಗಳನ್ನು ಅತಿ ಅಚ್ಚುಕಟ್ಟಾಗಿ ಅಳವಡಿಸಿಕೊಂಡು ಪ್ರತಿವರುಷವೂ ಪ್ರಥಮ ಬಹುಮಾನ ಪಡೆಯುತ್ತಿದ್ದ ಬಲ್ಲಾಳನಿಗೆ ಚೆನ್ನಯ್ಯನವರು ಸೂಚಿಸಿದ ಸುರುವಾಲು ಸರಂಜಾಮುಗಳನ್ನು ಹೊಂದಿಸಿ ಕೊಳ್ಳುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಅಲ್ಲದೆ ಲಾಗಾಯ್ತಿನಿಂದಲೂ ಖದ್ದರ್ ಪ್ರಿಯನಾಗಿದ್ದ ಬಲ್ಲಾಳನ ಬಳಿ ಈ ರೀತಿಯ ದಿರುಸು ಸಾಕಷ್ಟು ಸ್ಟಾಕಿದ್ದವು. ಅಲ್ಲದೆ ಈ ದಿರುಸನ್ನು ಹಾಕಿಕೊಂಡು ನಮ್ಮ ಬಲ್ಲಾಳನೇ ಅಂದು ನೆಹರೂ ಪಕ್ಕದಲ್ಲಿ ನಿಂತಿದ್ದರೆ, ಇವರಿಬ್ಬರ ಪೈಕಿ ನಿಜವಾದ ನೆಹರು ಯಾರೆಮಬ ಅನುಮಾನ ಕಂಡವರಿಗೆ ಆಗುತ್ತಿತ್ತೋ ಏನೋ! ಅಲ್ಲದೆ ಹಾಗೆ ಒಬ್ಬ ವ್ಯಕ್ತಿಯ ಚಹರೆಯನ್ನು ಯಾರೂ ಚಕಾರವೆತ್ತದ ರೀತಿಯಲ್ಲಿ ನಖಶಿಖಾಂತ ಕಾಪಿ ಮಾಡಿ ವೇಷ ಹಾಕುವುದರಲ್ಲಿ ನಮ್ಮ ಬಲ್ಲಾಳ ನಿಸ್ಸೀಮ. ಇವನು ಹಾಕಿದ ರಾಬಿನ್‌ ಹುಡ್‌ ವೇಷದ ಚಿತ್ರವನ್ನು ನೀವು ನೋಡಬೇಕು. ಆ ವೇಷದಲ್ಲಿ ಮಿಂಚಿ ಮೆರೆದು ಬೆಳ್ಳಿತೆರೆಯ ಭಾಗ್ಯವೆನಿಸಿದ್ದ ಎರಾಲ್‌ಫ್ಲಿನ್ನನ್ನೆ ಎದ್ದುಬಂದಂತಿದೆ.

ಇದೆಲ್ಲಾ ಸರಿಯೆ, ಆದರೆ ಹಾಡಬೇಕಲ್ಲಾ? ಬಾಯಿಗೆ ಬಂದಂತೆ ಬೊಗಳುವುದರಲ್ಲಷ್ಟೆ ಬಲ್ಲಿದನಾಗಿದ್ದ ಬಲ್ಲಾಳನಿಗೆ ಹಾಡುವುದೆಂದರೆ ಮೊದಲಿನಿಂದಲೂ ಮೈಗಾಗದು. ಸಂಗೀತದಲ್ಲಿವ ಸೊನ್ನೆ. ಸದಾಕಾಲ ತನ್ನ ಹೋಟೆಲ್ಲಿನ ಗಲ್ಲದಾ ಹಿಂದೆ ಗೂಟ ಹೊಡೆದಂತೆ ಕೂತು ಒಳಗಿರುವ ಅಡಿಗೆಭಟ್ಟರಿಗೆ ಕೇಳುವಂತೆ ‘ದೋಸೆ, ಇಡ್ಲಿ, ಕಾಫಿ’ ಎಂದು ಕೂಗಿ ಕೂಗಿ ಗೊಗ್ಗರಾಗಿದ್ದ ಇವನ ಗಂಟಲು ಗಾರ್ಧಬ ಗಂಟಲು. ಅಲ್ಲದೆ ಚಡ್ಡಿ ಹಾಕಿಕೊಂಡವರೆಲ್ಲಾ ಫುಟ್‌ ಬಾಲ್‌ ಆಡುವುದು ಸಾಧ್ಯವಿಲ್ಲ. ಹಾಗೆಯೇ ಕಂಠವಿದ್ದ ಮಾತ್ರಕ್ಕೆ ಹಾಡುವುದು ಎಲ್ಲರಿಂದ ಸಾಧ್ಯವಿಲ್ಲ. ಬೇಕಾದರೆ ಕೇಳುವವರ ಕಿವಿ ಕಿತ್ತುಹೋಗುವ ಹಾಗೆ ಕಿರುಚಿಕೊಳ್ಳಬಹುದು. ಅಷ್ಟೆ. ಹಾಡುವುದು, ಅಂದರೆ ಹತ್ತುಜನ ಒಪ್ಪುವಂತೆ ಹಾಡುವುದು, ಹಲವರಿಗಷ್ಟೇ ಸಾಧ್ಯ. ಅದಕ್ಕೆ ಪೂರ್ವಜನ್ಮದಿಂದಲೇ ಪುಣ್ಯವನ್ನು ಪಡೆದುಬಂದಿರಬೇಕು. ಬಲ್ಲಾಳಿ ಇದನ್ನು ಪಡೆದು ಬಂದವನಲ್ಲ. ಆಯಸ್ಸಿನಲ್ಲಿ ಅನೇಕ ವರುಷ ಅಂಡಖಂಡ ಬ್ರಹ್ಮಾಂಡದ ಸವಿಯನ್ನೆಲ್ಲಾ ಅಂಡೂರುವಷ್ಟು ಅಗಲದ ಆಸನದಲ್ಲಿದ್ದುಕೊಂಡೇ ಕಂಡುಂಡುಬಿಡುವ ವರ್ತಕರ ಪೈಕಿ ನಮ್ಮ ಬಲ್ಲಾಳನೂ ಒಬ್ಬ. ಹೀಗಾಗಿ, ನೆಹರೂ ಸಮ್ಮುಖದಲ್ಲಿ ಸುಶ್ರಾವ್ಯವಾಗಿ ರಾಷ್ಟ್ರಗೀತೆಯನ್ನು ಹಾಡುವ ಬೇರೊಬ್ಬ ವ್ಯಕ್ತಿಯನ್ನು ಹುಡುಕುವುದು ಬಲ್ಲಾಳನಿಗೆ ಅನಿವಾರ್ಯವಾಯಿತು.

ತನ್ನಿಂದಾಗದ ಈ ಕೆಲಸವನ್ನು ಬಲ್ಲಾಳ ದಿನಂಪ್ರತಿಯ ಉದರಂಭರಣೆಗೆ ತನ್ನ ಹೋಟೆಲನ್ನೇ ನಂಬಿದ್ದ ಖಾಯಂ ಸಾಲದ ಗಿರಾಕಿ ಹಾಗೂ ಪರೋಪಜೀವಿ ಸೋಮುವಿಗೆ ಒಪ್ಪಿಸಿದ. ಬಲ್ಲಾಳನ ಮರ್ಜಿ ಬೇಕಿದ್ದುದರಿಂದ, ಮೇಲೆ ಹೇಳಿದ ಗುಣವಿಶೇಷಣಗಳುಳ್ಳ ಒಬ್ಬ ವ್ಯಕ್ತಿಯನ್ನು ರಾಷ್ಟ್ರಗೀತೆ ಹಾಡಲೊಪ್ಪಿಸಿ ಎಳೆತರುವುದಾಗಿ ಬಲ್ಲಾಳನಲಿಗೆ ಭರವಸೆಯನ್ನಿತ್ತ ಸೋಮಣ್ಣ. ಬಲ್ಲಾಳ ಬದುಕಿದೆಯ ಬಡಜೀವವೇ ಎಂದು ನಿರಾತಂಕದಿಂದ ನಿಟ್ಟುಸಿರುಬಿಟ್ಟ.

ಇದೆಲ್ಲಾ ನಡೆದದ್ದು ನೆಹರೂಜಿ ಮೈಸೂರಿಗೆ ಬರಬೇಕಿದ್ದ ಹಿಂದಲ ದಿನ ಸಂಜೆ. ಬಲ್ಲಾಳ ಚೆನ್ನಯ್ಯನವರಿಗೆ ಭರವಸೆ ಇತ್ತ. ಇತ್ತ ಸೋಮು ಬಲ್ಲಾಳನಿಗೆ ಭರವಸೆ ಇತ್ತ. ಆದರೆ ಆ ಭರವಸೆಗಳನ್ನು ಈಡೇರಿಸುವ ವ್ಯಕ್ತಿ ಇರುವನೆತ್ತ ಎಂಬುದರ ಪರಿಜ್ಞಾನವೇ ಇವರಿಬ್ಬರ ಚಿತ್ತಕ್ಕೆ ಬಂದಿರಲಿಲ್ಲ. ಪರಸ್ಪರ ಒಬ್ಬರ ತಪ್ಪ ಒಬ್ಬರು ಒಪ್ಪಿಕೊಂಡಿದ್ದರು, ಅಷ್ಟೆ.

ಸೋಮು ಸ್ವಲ್ಪ ತರಲೆ ತಕರಾರಿನ ಮನುಷ್ಯನೆಂದೆನಿಸಿದರೂ, ಒಂದು ರೀತಿಯಲ್ಲಿ ಅವ ತ್ರಿಕಾಲಜ್ಞಾನಿ. ಛಲಗಾರ. ಹೇಳಿ ಕೇಳಿ ಚಿತ್ರದುರ್ಗದ ಗಂಡು. ಮದಕರಿನಾಯಕನ ನೆಲದ ಮಣ್ಣಿನವನು. ಆ ಮಣ್ಣಿನ ಮಹಿಮೆಯನ್ನು ಮೈಗೂಡಿಸಿಕೊಂಡು ಬಾಲ್ಯಪೂರ್ತಿ ಬೆಳೆದವನು. ಡೈಲಾಗಿನಲ್ಲಾಗಿವ ‘ಢೋಂಗರೆ ಬಾಲಮೃತದ ಕಂಪನಿಯವ ಅನ್ನಿಸಿದ್ದರೂ ಚಾಕಚಕ್ಯತೆಯಲ್ಲಿವ ಚಾಣಕ್ಯ. ಅಂತೆಯೇ ಏನಕ್ಕಾದರು ಹಚ್ಚಿಕೊಂಡರೆ ಹಲಸಿನ ಮೇಣ. ಮುಟ್ಟಿದ ಕೂಡಲೆ ಮೈಗಂಟಿಕೊಳ್ಳಲುವ ಮನುಷ್ಯ. ಪಟ್ಟು, ಉಡದಪಟ್ಟು; ಊದುಬತ್ತಿ ಹಚ್ಚೆಂದರೆ ಊರನ್ನೇ ಹಚ್ಚಿಬಿಡುವ ಹುಮ್ಮಸ್ಸು. ಇದು ಆಗ ಈ ಸೋಮಣ್ಣನ ವೃತ್ತಿ ಪ್ರವೃತ್ತಿಯೆಂಬುದು ಬಲ್ಲಾಳನಿಗೆ ಗೊತ್ತಿತ್ತು. ತನಗಿವನು ತರಬೇಕಿದ್ದ ಸಾಲದ ಬಗ್ಗೆ ಆ ಸಮಯದಲ್ಲಿ ಸೊಲ್ಲೆತ್ತದೆ, ಬದಲಿಗೆ ಬಲ್ಲಾಳ ಖುದ್ದಾಗಿ ತಾನೇ ತಯಾರಿಸಿದ ಬಿಸಿಬಿಸಿ ಕಾಫಿಯನ್ನಿವನಿಗೆ ಕುಡಿಸಿ, ಒಂದು ಪ್ಯಾಕ್‌ ಸಿಗರೇಟನ್ನು ಕೈಗಿತ್ತಾಗ, ಹೆಬ್ಬಾವಿನಂತಿದ್ದ ಸೋಮ ಪೊರೆಬಿಟ್ಟ ನಾಗರದಂತೆ ಚುರುಕಾದ.

ರಾತ್ರಿ ಊಟ ಮುಗಿಸಿ ಬೀಡ ಜಗಿಯುತ್ತ, ‘ಮುಂಡೇ ಮದುವೇಲಿ ಉಂಡೋನೆ ಜಾಣ’ ಎಂಬ ಗಾದೆಗೆ ತಕ್ಕಂತೆ ಆ ಸಮಯದಲ್ಲಿ ಬಲ್ಲಾಳ ಪುಗಸಟ್ಟೆ ಇತ್ತಿದ್ದ ಸಿಗರೇಟು ಪ್ಯಾಕಿನಿಂದ ಎರಡು ಮೂರನ್ನು ಧಾರಾಳವಾಗಿ ಎಳೆದು ದಂ ಹೊಡೆದ ನಂತರ ಮಾರನೆಯ ದಿನ ಪ್ರಧಾನಿಯವರ ಮುಂದೆ ಜನಗಣಮನವನ್ನು ಹಾಡುವ ಜಾಣಜನಾರ್ಧನನು ಯಾರೆಂಬುದು ಸೋಮುವಿಗೆ ಹೊಳೆಯಿತು. ಆ ಜಾಣ ಜನಾರ್ಧನನೇ ನಮ್ಮ ಶಿವಮೊಗ್ಗ ಸುಬ್ಬಣ್ಣ.

ಈ ಸುಬ್ಬಣ್ಣನನ್ನು ಹುಡುಕುತ್ತ ಸೋಮಣ್ಣ ಮಾಧ್ವ ಹಾಸ್ಟೆಲನ್ನು ಸಮೀಪಿಸಿದಾಗ ಅಠಾರ ಕಛೇರಿಯಲ್ಲಿ ಘಂಟೆ ಹನ್ನೆರಡು ಹೊಡೆಯುತ್ತಿತ್ತು. ಹಾಸ್ಟೆಲಿನ ಕೊಲಾಪ್ಸಿಬಲ್‌ ಗೇಟು ಹಾಕಿತ್ತು. ಯಾವ ರೂಮಿನಲ್ಲೂ ಲೈಟಿರಲಿಲ್ಲ. ಹುಡುಗರೆಲ್ಲಾ ಮಲಗಿಯಾಗಿತ್ತು. ಹಾಸ್ಟೆಲಿನ ಪ್ಯಾಸೇಜಿನಲ್ಲಿ ಗೇಟಿಗೆದುರಾಗಿ ವಾಚ್ಮನ್‌ ವೆಂಕಟಯ್ಯ ಮಲಗಿದ್ದ. ಸುತ್ತಲೂ ಶ್ಮಶಾನ ಮೌನ . ವಾತಾವರಣ ಹೀಗಿರುವಾಗ, ಸೋಮಣ್ಣ ಆ ಕಬ್ಬಿಣದ ಗೇಟಿನ ಕಿಂಡಿಗಳ ಮೂಲಕ ಮೂತಿಯನ್ನು ತೂರಿಸಿ, ಇಡೀ ಹಾಸ್ಟೆಲಿನವರೆಲ್ಲಾ ಬೆಚ್ಚುವಂತೆ ಘಟ್ಟಿಯಾಗಿ ‘ಸುಬ್ಬಣ್ಣಾ, ಲೋ ಸುಬ್ಬಣ್ಣಾ’ ಎಂದು ಕೂಗುತ್ತಾ ಗೇಟನ್ನು ಗುದ್ದಲಾರಂಭಿಸಿದ. ಬೆಚ್ಚಿಬಿದ್ದ ವಾಚ್ಮನ್‌ ವೆಂಕಟಯ್ಯ ಧಿಗ್ಗನೆದ್ದು, “ಏಯ್‌ ಯಾರಯ್ಯಾ ಅದು ಬಡ್ಕೊಂತಿರೋದು?” ಎನ್ನುತ್ತಾ ಬಾಗಿಲನ್ನು ಸಮೀಪಿಸಿ, ಆಚೆಕಡೆ ಬೆಡ್‌ಶೀಟನ್ನು ಹೊದ್ದು ನಿಂತಿದ್ದ ಈ ಸೈಂಧವ ಸೋಮುವನ್ನು ಕಂಡು ‘ಯಾರಯ್ಯ ನೀನು ಈ ಹೊತ್ನಲ್ಲಿ, ಏನು ಇಸ್ಯಾ?’ ಎಂದು ಗುಡುಗಿದ. ಸಾಫ್ಟಾದ ಸೋಮಣ್ಣ ‘ಬೇಗ ಬಾಗಿಲು ತೆಗಿಯಯ್ಯಾ, ನೆಹರೂ ಬರ್ತಿದ್ದಾರೆ’ ಎಂದು ಬಡಬಡಿಸಿದ. ಆ ವೆಂಕಟಪ್ಪನಿಗೆ ಸೋಮಣ್ಣ ಬಡಬಡಿಸಿದುದರ ತಳಬುಡವೇ ಅರ್ಥವಾಗದೇ, ‘ನೆಅರೂ ಬತ್ತಾ ಅವ್ರಾ? ಯೋಳ್ದೆ ಕೇಳ್ದೆ ಈ ಮಾದ್ವ ಆಸ್ಟಲ್ಗೆ, ಅದೂ ಈ ಒತ್ನಲ್ಲಿ, ಅವರ್ಯಾಕಯ್ಯಾ ಬತ್ತಾರೆ? ಯೆಂಡಗಿಂಡ ಏರ್ಸಿದ್ದೀಯೇನು?’ ಎಂದ. ಆಗ ಸೋಮು ‘ನಿನಗೆ ವರದಿ ಒಪ್ಸೋಷ್ಟ್ರಲ್ಲಿ ನೆಹರು ಬಂದೇ ಬಿಡ್ತಾರೆ. ನಾಳೆ ಅವರೆರ್ದುಗೆ ಸುಬ್ಬಣ್ಣನಿಂದ ಜನಗಣಮನ ಹಾಡಸ್ಬೇಕು. ಅವನ್ನ ಬೇಗ ಕರಿ ಮಹರಾಯ’ ಎಂದು ಯಾಚಿಸಿದಾಗ್ಯೂ ವೆಂಕಟಪ್ಪ ಕಾರ್ಯೋನ್ಮುಖನಾಗದೆ ತೆಪರನಂತೆ ನಿಂತಿರಲು ಮತ್ತೆ ಸೋಮಣ್ಣ ಜೋರಾಗಿ ‘ಸುಬ್ಬಣ್ಣಾ, ಲೋ ಸುಬ್ಬಣ್ಣೀ, ಶಿವಮೊಗ್ಗ ಸುಬ್ಬಣ್ಣೀ, ಬಾರೋ ಬೇಗ’ ಎಂದು ಕೂಗುತ್ತಿದ್ದಂತೆ ಕೇಳಿ ಕಂಗಲಾಗಿದ್ದ ಸುಬ್ಬ ಣ್ಣ ಮಹಡಿಯಿಂದ ದಡದಡನೆ ಇಳಿದು ಬಂದು ಇವನೆದುರು ಬೆದುರುಬೊಂಬೆಯಂತೆ ಬೆಪ್ಪಗಿ ನಿಂತು ಸೋಮುವನ್ನು ದಿಟ್ಟಿಸಿ ‘ಅರೆ, ಸೋಮಣ್ಣ! ಯಾಕೆ, ಏನಾಯ್ತು?’ ಎಂದ ಎಲ್ಲಿಲ್ಲದಾತುರದಿಂದ. ಆಗ ಸೋಮು ‘ಅದ್ನೆಲ್ಲಾ ಹೇಳ್ತೀನಿ, ಮೊದ್ಲು ನೀನು ಈ ಬಂಧನದಿಂದ ಬಯಲಿಗ್ಬಾರೋ. ನೆಹರೂ! ನೆಹರೂ!’ ಅಂದ ಒಂದೇ ಉಸುರಿನಲ್ಲಿ’. ಅರ್ಥವಾಗದ ಸುಬ್ಬಣ್ಣ ವಾಚ್ಮನ್‌ ವೆಂಕಟಪ್ಪನ ಕಡೆ ನೋಡಿದ. ಅವನು ಸುಬ್ಬಣ್ಣ ಕಿವಿಯಲ್ಲಿ ‘ಆಚ್ಗೋದೀಯೆ ಸುಬ್ಬಣ್ಣಪ್ಪ. ಅರ್ಧರಾತ್ರಿ. ಆ ವಯ್ಯಂಗೆ ಪಿತ್ತ ನೆತ್ತಿಗೇರೈತೇನ್ಸುತ್ತೆ. ಉಚ್ಚುಚ್ಚಾಗಿ ಆಡ್ತಾಆವ್ನೆ.  ಆತ್ರ ಓದ್ರೆ ಕಚ್ಗಿಚ್ಚುಟ್ಟಾನು, ಉಸಾರು’ ಎಂದುರುಬಿದ. ಅದನ್ನು ಕೇಳಿದ ಸುಬ್ಬಣ್ಣ ನಗುತ್ತ, ‘ಛೆ ಛೆ, ಅವ್ನು ಮಾತಾಡೋದೆ ಹಾಗೆ. ತಮಾಷೆ ತೆನಾಲಿರಾಮ ಅವ್ನು, ಬಾಗಿಲು ತೆಗೆಯಯ್ಯಾ’ ಎಂದ. ಆಗ ವೆಂಕಟಪ್ಪ ಸೋಮುವನ್ನುದ್ದೇಶಿಸಿ, ‘ಅಲ್ಲಯ್ಯೋ, ಈಗ ರಾತ್ರಿ ಅನ್ನೆಲ್ಡಾಗದೆ. ಈಟೊತ್ತಿನ್ಮೇಲೆ ಏನ್ಲಾ ಅದು ನಿಮ್ಮಿಬ್ಬರ ಯವ್ವಾರ, ಒಸಿ ಬುಡ್ಸಿಬುಡ್ಸಿ ಯೋಳಿಯಾ?’ ಎಂದ. ಸೋಮು ‘ನೋಡಯ್ಯಾ ನಾಳೆ ನೆಹರೂಜಿ ಮೈಸೂರಿಗೆ ಬರ್ತಿದ್ದಾರೆ. ಅವರೆದುರು ಈ ಸುಬ್ಬಣ್ಣನಿಂದ ರಾಷ್ಟ್ರಗ ಈತೆ ಹಾಡಸ್ಬೇಕು. ಅದಕ್ಕೆ ಅಭ್ಯಾಸ ಮಾಡ್ಕೋಬೇಡ್ವೇ?’ ಎಂದು ಹಲ್ಲುಗಿಂಜಿದ. ಆಗಲೂ ಅರ್ಥವಾಗದ ವೆಂಕಟಪ್ಪ ‘ಒಳ್ಳೆ ಐಕ್ಳು ಕಂಡ್ರಯ್ಯ ನೀವು. ಏನಾರ ಮಾಡ್ಕಳ್ಳಿ. ಆದ್ರೆ ಮೊದ್ಲು ಮನೆ ಸೇರ್ಕಳ್ಳಿ. ಬೀಟ್‌ ಪೋಲಿಸ್ನೋರು ಟೀಸನ್ಗೆ ಎಳ್ಗಂಡೋಗಿ ಎಕ್ಬಿಟ್ಟಾರು’ ಎಂದು ಸುಬ್ಬಣ್ಣನತ್ತ ತಿರುಗಿ ಮತ್ತೆ ಪಿಸುಮಾತಿನಲ್ಲಿ ‘ಅಂಗಾರೆ ಈ ಗೊಗ್ಗೆಯ ನಿನ್ಗೆ ಚೆಂದಾಗಿ ಗೊತ್ತ?’ ಎನ್ನಲು, ‘ಗೊತ್ತೂ’ ಎಂದು ತಲೆಯಾಡಿಸಿದ ಸುಬ್ಬಣ್ಣ. ‘ಅಂಗಾರೆ ನಿನ್ನಿಷ್ಟ, ಆಳಾಗೋಗು’ ಎಂದು ಗೇಟನ್ನು ಸರಿಸಿ ಹೊರಹೊರಡಲು ಸಿದ್ಧವಾಗಿದ್ದ ಸುಬ್ಬಣ್ಣನನ್ನು ಹೊರಗಟ್ಟಿ ಮತ್ತೆ ಗೇಟನ್ನು ಮುಚ್ಚಿಕೊಂಡ.

* * *