ದಶಕಗಳ ಹಿಂದಿನ ಮಾತು. ನಾವೆಲ್ಲಾ ಅಂದರೆ, ನಾನು ಹೆಚ್‌.ಜಿ. ಸೋಮಶೇಖರರಾಯ, ಅನಂತಸ್ವಾಮಿ, ಓದುತ್ತಿದ್ದ ಕಾಲವದು. ನಾನು ಮೈಸೂರಿನ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮಿಡಿಯೆಟ್‌ ವಿದ್ಯಾರ್ಥಿ. ಅನಂತೂ ಶಾರದಾ ವಿಲಾಸ ಕಾಲೇಜಿನಲ್ಲಿ ಡಿಟೋ. ಸೋಮಶೇಖರ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಮಾಡುತ್ತಿದ್ದ. ನಮ್ಮೊಡನೆ ಹೊಕ್ಕಲು ಹೊಸೆದಾಡುತ್ತಿದ್ದ ಗುಣಸಿಂಗ ಯಾವ ಶಾಲಾಕಾಲೇಜಿಗೂ ಮಣ್ಣು ಹಾಕಿದ ನೆನಪಿಲ್ಲ. ಲಕ್ಷ್ಮೀನಾರಾಯಣ ಬಲ್ಲಾಳನಂತೂ ಬೆಳಗಾಗುತ್ತಲೇ ಬಸ್ಕಿ ಹೊಡೆಯಲು ಬೈಸಿಕಲ್ಲೇರಿ ಕನ್ನೇಗೌಡರ ಕೊಪ್ಪಲಿನ ಗರಡಿಯೊಂದಕ್ಕೆ ಬೀಗುತ್ತ ಹೋಗುತ್ತಿದ್ದುದನ್ನು ನೋಡುತ್ತಿದ್ದೆನೇ ಹೊರತು ಅವನೆಂದೂ ಪುಸ್ತಕ ಪೆನ್ನು ಪೆನ್ಸಿಲ್ಲು ಹಿಡಿದು ಯಾವ ಶಾಲಾಕಾಲೇಜಿಗೂ ಹೋದದ್ದನ್ನು ನಾನು ಕಂಡಿಲ್ಲ. ಆದರೆ ಹೇಗೆ ಯಾವಾಗ ಯಾರಿಂದ ಕಲಿತನೋ ಏನೋ ಸೊಗಸಾಗಿ ಇಂಗ್ಲೀಷಿನಲ್ಲಿ ಮಾತಾನಾಡುತ್ತಿದ್ದ. ಆಗ ಅವನಾಡುತ್ತಿದ್ದ ಇಂಗ್ಲೀಷು ವ್ಯಾಕರಣ ಬದ್ಧವಾಗಿ ಶುದ್ಧವಾಗಿರುತ್ತಿತ್ತೆಂದು ನಾನಂತು ನಿರ್ದಿಷ್ಟವಾಗಿ ಹೇಳಲಾರೆ. ಆದರೆ ಆ ಪರಂಗಿಯವರ ಭಾಷೆಯನ್ನು ಬಹಳ ಧೈರ್ಯವಾಗಿ ಸ್ಪೀಡಾಗಿ ಮಾತನಾಡುತ್ತಿದ್ದ. ಈ ಬಲ್ಲಾಳನ ಭಾಷಾ ಪ್ರಭುತ್ವವನ್ನು ಬಚ್ಚಾಗಳಂತಿದ್ದ ನಾವು ಮೆಚ್ಚಿಕೊಳ್ಳುತ್ತಿದ್ದೆವು. ಆದರೆ ಎಂ.ಎ ಓದುತ್ತಿದ್ದ ಸೋಮುವನ್ನು ಕಾಣುತ್ತಿದ್ದಂತೆ ಬಲ್ಲಾಳ ಸ್ವಲ್ಪ ಸೈಲೆಂಟಾಗುತ್ತಿದ್ದ. ಆ ಕಾಲದಲ್ಲಿ ಬಲ್ಲಾಳನ ಪಾಲಿಗೆ ಸೋಮಣ್ಣನೇ ಬರ್ನಾರ್ಡ್ ಶಾ, ಶೇಕ್ಸ್‌ಪಿಯರು, ಇಬ್ಸನ್ನು ಇತ್ಯಾದಿ ಇತ್ಯಾದಿ.

ಬಲವಾಗಿ ಬೆಣ್ಣೆ ಮಸಾಲೆ ಬಾರಿಸಿ, ಸ್ಪೆಷಲ್‌ ಸ್ಟ್ರಾಂಗ್‌ ಕಾಫಿ ಸೇವಿಸಿ, ಉಬ್ಬಿದ ಉದರವನ್ನು ಮುದ್ದಾಗಿ ನೇವರಿಸುತ್ತ ಹೊರಬಂದು, ಬಲ್ಲಾ ಳನ ಗಲ್ಲಾದ ಎದುರು ನಿಂತು, ಸುತ್ತಮುತ್ತಲವರೆಲ್ಲ ಕತ್ತು ತಿರುಗಿಸಿ ಇವನತ್ತಲೆ ನೋಡುವಷ್ಟರ ಮಟ್ಟಿಗೆ ಗಟ್ಟಿಯಾಗಿ ಢರ‍್ರ ಎಂದು ತೇಗಿ, ಬಲ್ಲಾಳನನ್ನು ದಿಟ್ಟಿಸುತ್ತಾ, ‘ಭಲೆ ಭಲೆ, ಅದೇನು ಬೆಣ್ಣೆ ಮಸಾಲೇನೋ ಬಲ್ಲಾಳಿ, ಬೆಸ್ಟ್‌ ಇನ್‌ ದ ವರ್ಲ್ಡ್!’ ಎಂದು ಗುಣಗಾನ ಮಾಡಿ, ಇದಕ್ಕೆ ಒಯಾವ ರೀತಿಯಲ್ಲೂ ಸಂಬಂಧಿಸಿಯೇ ಇಒರದ ಶೆಲ್ಲಿಯ ಸಾನೆಟ್ಗಳ ಸಾಲುಗಳನ್ನೋ, ‘ಮರ್ಚೆಂಟ್‌ ಆಫ್‌ ವೆನ್ನಿಸ್‌’ ನಾಟಕದ ಮಾತುಗಳನ್ನೋ, ಎಲ್ಲರೂ ನಿಬ್ಬೆರಗಾಗುವಂತೆ ನುಡಿದು, ಗಲ್ಲಾದ ಮೇಲೆ ಒಂದು ಪಕ್ಕಕ್ಕೆ ಓರಣವಾಗಿ ಪೇರಿಸಿಟ್ಟಿರುತ್ತಿದ್ದ ಪ್ಯಾಕುಗಳ ಪೈಕಿ ಒಂದರಿಂದ ಒಂದು ಸಿಗರೇಟನ್ನು ಸೆಳೆದುಕೊಂಡು, ಹೊತ್ತಿಸಿ, ಎಳೆದುಕೊಂಡ ಹೊಗೆಯನ್ನು ಉಫ್‌ ಎಂದು ಬಲ್ಲಾಳನ ಮುಖಕ್ಕೆ ಉರುಬಿ, ಗುಜ್ಜಾನೆಮರಿಯಂತೆ ಹೆಜ್ಜೆಯಿರಿಸುತ್ತ ಹೊರಟುಹೋಗುತ್ತಿದ್ದ  ಈ ಸೋಮಣ್ಣನ ಸ್ಟೈಲಿಗೆ ಸೋತುಹೋಗುತ್ತಿದ್ದ ಬಲ್ಲಾಳನಿಗೆ ಇವನಿಂದ ಬಿಲ್‌ ಬಾಬ್ತು ಹಣ ಕೇಳಲೂ ಬಾಯಿ  ಬರುತ್ತಿರಲಿಲ್ಲ. ಅಷ್ಟರಮಟ್ಟಿಗೆ  ಈ ಸ್ಟಂಟ್‌ ಸೋಮಣ್ಣ, ಬಡಾಯಿಯಿಂದ ಬೀಗುತ್ತಿದ್ದ ಬಲ್ಲಾಳನಿಗೆ, ಬೆಪ್ಪುಹಿಡಿಸಿ ಬಾಯಿ ಮುಚ್ಚಿಸಿಬಿಡುತ್ತಿದ್ದ. ಅವ ಎಚ್ಚೆತ್ತು ಕೊಳ್ಳುವಷ್ಟರಲ್ಲಿ ಇವ ಎತ್ತ ಹೋದನೆಂಬುದೇ ಪತ್ತೆಯಾಗುತ್ತಿರಲಿಲ್ಲ. ಸೋಮಣ್ಣ ಅಂತಹ ಚಾಣಾಕ್ಷ. ಸಾಲಗಾರರೂ ಸೊಲ್ಲೆತ್ತದಂತೆ ಮೋಡಿ ಮಾಡಿ ಅವರಾರೂ ಅಡೆತಡೆಯೊಡ್ಡದಂತೆ ಒಡನಿರಿಸಿಕೊಂಡೇ ಮುನ್ನಡೆಯುತ್ತಿದ್ದ ಈ ಮಾರ್ಜಾಲ ಸದೃಶ ಮಾನವ ಸೋಮಣ್ಣ ನಿಜಕ್ಕೂ ಆ ಕಾಲದಲ್ಲಿ ಮಾಯಮಂತ್ರತಂತ್ರಗಳಲ್ಲಿ ಸಿದ್ಧಿ ಸಾಧಿಸಿದ್ದ ಒಬ್ಬ ಮಂತ್ರವಾದಿಯಂತಿದ್ದ.

ಅದೇ ಆ ಸೋಮಣ್ಣನಿಗೆ ಆಶ್ರಯವನ್ನೀಯುವುದರ ಜೊತೆಗೆ ಅನ್ನದಾತನೂ ಆಗಿದ್ದ ಅನಂತು ಆಗ ಅಮಾಯಕ.  ಮಗುವಿನಂತೆ ಮುಗ್ಧ.  ತರಲೆ ತಟವಟ ಇವುಗಳ ಅರ್ಥವನ್ನೇ ಅರಿಯದ ಹಸುಗೂಸು ಇದ್ದಂತೆ. ಸದಾಕಾಲವು ಅನವರತ ಅವನಾಯಿತು, ಅವನ ಸಂಗೀತವಾಯಿತು ಅಷ್ಟೆ.

ದಿನನಿತ್ಯವೆಂಬಂತೆ ಕೆಲವು ಗಂಟೆಗಳ ಕಾಲವಾದರೂ ನಾನು, ಸೋಮಣ್ಣ, ಅನಂತು, ಗುಣಸಿಂಗ, ಒಟ್ಟಾರೆ ಒಂದು ಕಡೆ ಸೇರಿ ಹರಟೆಕೊಚ್ಚುತ್ತಿದ್ದುದು ಮಾಮೂಲು ಇದಕ್ಕಾಗಿ ನಾವು ಸೆಲೆಕ್ಟ್‌ ಮಾಡಿಕೊಂಡಿದ್ದ ಸ್ಥಳವೂ ವಿಶಿಷ್ಟವಾದದ್ದೇ. ಅದು ಗಣೇಶ ಟಾಕೀಸಿನ ಪಕ್ಕಕ್ಕಿದ್ದ, ಹಾಲಿ ಇರುವ, ಮೈಸೂರು ಮುನಿಸಿಪಾಲಿಟಿಯ ಪಾರ್ಕು. ‘ಉದ್ಯಾನವನ’ ವೆಂಬ ಬೋರ್ಡೊಂದನ್ನು ಬಿಟ್ಟರೆ ಆಗದು ಎಲ್ಲಾ ರೀತಿಯಿಂದಲೂ ‘ಅಧ್ವಾನವನ’ವೇ ಆ ಪಾರ್ಕಿನ ಪಾರ್ಶ್ವಕ್ಕೆ ಅದರ ಉದಕ್ಕೂ ಇರುವ ಮ ಳೆ ನೀರಿನ ಮಜಭೂತಾದ ಮೋರಿಯೇ ಅಲ್ಲಿಯ ಅಟ್ರಾಕ್ಷನ್ನು. ಮುಖ್ಯವಾಗಿ ನಾವು ಮೂವರು ಅಂದರೆ ನಾನು ಸೋಮಣ್ಣ, ಅನಂತು, ಮಂತ್ರಾಲೋಚನೆಯಲ್ಲಿ ಮುಳುಗುತ್ತಿದ್ದುದು ಆ ಮೋರಿಯ ಮೇಲಿನ ಮರವೊಂದರಡಿಯಲ್ಲೆ. ವಿಚಿತ್ರವೆಂದರೆ ಆ ಮೋರಿಯಿಂದ ಮೂಡುತ್ತಿದ್ದ ಮಿಶ್ರಿತ ಮಲದ ವಾಸನೆ ಮೂಗಿಗೆ ಬಡಿಯದಿದ್ದರೆ ಮಾತನಾಡಲು ನಮಗೆ ಮೂಡೇ ಬರುತ್ತಿರಲಿಲ್ಲ. ಅಂತಹ ವಾತಾವರಣದಲ್ಲಿ ಅನಂತು ಹಾಡಿದ ಕವಿವರ್ಯರ ಕವನಗಳ ಸಂಖ್ಯೆ ಅದೆಷ್ಟೋ!

ಯಾವುದೇ ಗೀತೆಗೆ ರಾಗೆ ಸಂಯೋಜಿಸಿದಾಗಲೆಲ್ಲಾ ಅನಂತು ಮೊದಲಿಗೆ ಹಾಡುತ್ತಿದ್ದುದು ನಮ್ಮೆಡೆಯಲ್ಲೇ. ಕಾರಣವಿಷ್ಟೆ, ಅನಂತುವಿಗೆ ತಾನು ಗೀತೆಗಳಿಗೆ ಅಳವಡಿಸುತ್ತಿದ್ದ ರಾಗಸಂಯೋಜನೆ ಎಷ್ಟು ಮುಖ್ಯವೆನಿಸಿತ್ತೋ ಅಷ್ಟೇ ಮುಖ್ಯೊವೆನಿಸಿತ್ತು ಸಾಹಿತ್ಯಶುದ್ಧಿ. ರಾಗತಾಳಗಳಿಗೆ ತಕ್ಕಂತೆ ಕವನಗಳ ಪದವಿಭಾಗ ಮಾಡಿ ಹಾಡುವಾಗ ಯಾವ ಕಾರಣಕ್ಕೂ ಸಾಹಿತ್ಯಕ್ಕೆ ಅಪಚಾರವಾಗಬಾರದೆಂಬುದೇ ಅನಂತುವಿನ ಅಪೇಕ್ಷೆಯಾಗಿತ್ತು. ಈ ಕಾರಣದಿಂದ ತಪ್ಪೇನಾದರೂ ಇದ್ದರೆ ತಿದ್ದಿಕೊಳ್ಳುವ ಸಲುವಾಗಿ ಅನಂತು ನಮ್ಮೆದುರು ಭಾವಗೀತೆಗಳನ್ನು ಹಾಡುತ್ತಿದ್ದ. ನಾವು ಕಾಳಜಿವಹಿಸಿ ಕಿವಿ ನಿಮಿರಿಸಿಕೊಂಡು ಕೇಳುತ್ತಿದ್ದೆವು. ತಪ್ಪೇನಾದರೂ ಕಿವಿಗೆ ಬಿದ್ದರೆ ತಿದ್ದುತ್ತಿದ್ದೆವುಇ. ಈ ನಿಟ್ಟಿನಲ್ಲಿ ಅನಂತುವನ್ನು ಹೆಚ್ಚಾಗಿ ತಿದ್ದುತ್ತಿದ್ದವನು ಸೋಮಣ್ಣ. ಅನಂತುವಿನ ಕೊಠಡಿಯಲ್ಲೆ ದಿನದ ಬಹುವೇಳೆ ಅವನಿರುತ್ತಿದ್ದುದರಿಂದ ಸೋಮುವಿಗೆ ಅನಂತುವನ್ನು ತಿದ್ದುವ ಅವಕಾಶ ಹೆಚ್ಚಾಗಿ ಲಭ್ಯವಾಗುತ್ತಿತ್ತು.

ಏತನ್ಮಧ್ಯೆ ನಮ್ಮೊಟ್ಟಿಗೆ ಸದಾಕಾಲವೂ ಇರುತ್ತಿದ್ದ ಗುಣಸಿಂಗನ ಸ್ಟೈಲೇ ಬೇರೆ. ವಿದ್ಯೆಗೆ ಎಂದೋ ವಿದಾಯ ಹೇಳಿ, ಉದ್ಯೋಗ ನಿರುದ್ಯೋಗಗಳಿಗೆ ಅರ್ಥವನ್ನೇ ಅರಿಯದೆ ಒಂದು ರೀತಿಯ ವ್ಯರ್ಥಜೀವನದಲ್ಲೇ ತೃಪ್ತಿ ಕಾಣುತ್ತ ಬದುಕನ್ನು ಸರಳ ಸುಂದರ ಶೈಲಿಯಲ್ಲೆ ಸವೆಸುತ್ತ ನಿರಾಶಾವಾದಿಯಿಂತಿದ್ದು, ಕೆಲವೊಮ್ಮೆ ಸಂಶಯಾತ್ಮಕ ನಿಗೂಢವ್ಯಕ್ತಿಯಂತೆ ಗೋಚರಿಸುತ್ತಿದ್ದ ಈ  ಗುಣಸಿಂಗನ ಆಂತರ್ಯವನ್ನು ಅರಿಯುವುದು ಆರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಕಲರಿನಲ್ಲಿ ಕೃಷ್ಣನಂತಿದ್ದ ಗುಣಸಿಂಗ ಕೊಳಲೂದವುದನ್ನು ಅದಾರಿಂದ ಕಲಿತನೋ ತಿಳಿಯದು. ಆದರೆ ಅದರ ತೂತಿಗೆ ತುಟಿ ತಗುಲಿಸಿದನೆಂದರೆ ಮುಗಿಯಿತು. ಕೇಳುವವರು ಅದರ ನಾದಮಾಧುರ್ಯಕ್ಕೆ ಸೋತು ತಲೆದೂಗುವ ನಾಗರದಂತಾಗಿಬಿಡುತ್ತಿದ್ದರು.

ಆ ಕಾಲದಲ್ಲಿ ಗುಣಸಿಂಗನಂತೆ ಕೊಳಲನ್ನಾಗಲೀ, ಅನಂತುವಿನಂತೆ ಮ್ಯಾಂಡೊಲಿನ್ನನ್ನಾಗಲಿ ಶ್ರೀಕಂಠುವಿನಂತೆ ತಬಲವನ್ನಾಗಲೀ ನುಡಿಸುವವರು ಮೈಸೂರಿನಲ್ಲಿ ಮತ್ತೊಬ್ಬರಿರಲಿಲ್ಲ. ಈ ವಾದ್ಯಗಳನ್ನು ನುಡಿಸುವುದರಲ್ಲಿ ಇವರಿಗೆ ಆವುದೋ ದೈವೀಕ ಶಕ್ತಿ ಲಭಿಸಿತ್ತು. ಕಿಂಚಿತ್ತೂ ಅಪಸ್ವರ ಬರದಂತೆ ತಾಸುಗಟ್ಟಲೆ ಮ್ಯಾಂಡೋಲಿನ್ನನ್ನು ಮೀಟುತ್ತ ಎಂತಹ ಕ್ಲಿಷ್ಟರಾಗ ಸ್ವರವನ್ನು ಮೃದುಮಧುರವಾಗಿ ಹೊರಹೊಮ್ಮಿಸುತ್ತಿದ್ದ ಅನಂತಸ್ವಾಮಿ ಯಾರಾದರೊಬ್ಬ ಕಣಿವೆ ಕೆಳಗಿನ ಘನವಿದ್ವಾಂಸನೊಬ್ಬನಿಂದ ಕ್ರಮಬದ್ಧವಾಗಿ ಸಂಗೀತವನ್ನು  ಕಲಿತು ಮ್ಯಾಂಡೋಲಿನ್‌ ಮೀಟಲಾರಂಭಿಸಿದ್ದರೆ ಪ್ರಾಯಶಃ ಮದರಾಸಿನ ಮ್ಯಾಂಡೋಲಿನ್‌ ಶ್ರೀನಿವಾಸನನ್ನೂ ಮೀರಿ ಮಿಂಚುತ್ತಿದ್ದನೇನೋ. ಆದರೆ ಅನಂತು ಹಾಗೆ ಮಾಡಲಿಲ್ಲ. ತಬಲ, ಹಾರ್ಮೊನಿಯಮ್ಮು , ಮೌತಾರ್ಗನ್‌, ಕೊಳಲು, ಮ್ಯಾಂಡೋಲಿನ್ನು ಹೀಗೆ ಈ ಎಲ್ಲ ವಾದ್ಯಗಳನ್ನು ಚೆನ್ನಾಗಿ ನುಡಿಸುವುದನ್ನು ಕಲಿತನೇ ಹೊರತು ಯಾವ ವಾದ್ಯವನ್ನೂ ಅಪ್ರತಿಮ ಪ್ರಬುದ್ಧತೆಯಿಂದ ನುಡಿಸಿ ಮೆರೆಯುವ ಪ್ರಯತ್ನವನ್ನು ಅವನು ನಡೆಸಲಿಲ್ಲ. ಬದಲಿಗೆ ಈ ಎಲ್ಲವನ್ನು ಪಕ್ಕಕ್ಕಿರಿಸಿಕೊಂಡು ಹಾಡುವ ಹವ್ಯಸವನ್ನು ಹಮ್ಮಿಕೊಂಡ.

ನಿಜ ನುಡಿಯುವುದಾದರೆ, ಆರಂಭದ ದಿನಗಳಲ್ಲಿ ಅನಂತುವಿನ ಧ್ವನಿಯಲ್ಲಿ ಇಂಪೆನಿಸುವ ಮಾರ್ದವತೆಯಾಗಲಿ, ಮಾಧುರ್ಯವಾಗಲಿ ಅಷ್ಟಾಗಿ ಇರಲಿಲ್ಲ. ಧ್ವನಿ ಎತ್ತರಿಸಿ ತಾರಕದಲ್ಲಿ ಹಾಡುವಾಗಲಂತೂ ಇವ ಹಾಡುತ್ತಿದ್ದಾನೆ ಅನ್ನುವುದಕ್ಕಿಂತ ಕಿರುಚುತ್ತಿದ್ದಾನೆ ಅನ್ನುವಂತಿರುತ್ತಿತ್ತು. ನನಗೆ ಬಹು ಆತ್ಮೀಯನಾಗಿದ್ದುದರಿಂದ ಒಂದೆರಡು ಬಾರಿ ಈ ನನ್ನ ಅನಿಸಿಕೆಯನ್ನು ಅನಂತುವಿಗೆ ಅರುಹಿದ್ದು ಉಂಟು. ‘ನನಗದು ಗೊತ್ತು’ ಎಂದು ಅವ ಗತ್ತಿನಿಂದಲೇ ನುಡಿದಿದ್ದ. ಆದರೆ ದಿನಗಳು ಉರುಳಿದಂತೆ ಮುಂದಾದದ್ದೇನು?

‘ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ’ ಅಂಬುದು ನಮ್ಮಲ್ಲಿರುವ ಒಂದು ಗಾದೆ. ಪ್ರಾಯಶಃ ಈ ಗಾದೆ ಅನಂತುವಿಗೆ ಮೀಸಲೇನೋ ಎಂಬಷ್ಟರ ಮಟ್ಟಿಗೆ ದಿನಗಳು ಕಳೆಯುತ್ತಿದ್ದಂತೆ ಅನಂತುವಿನ ಧ್ವನಿಯಲ್ಲಾಗುತ್ತಿದ್ದ ಮಾರ್ಪಾಡನ್ನು ಗಮನಿಸದೆ. ಅವನ ಮನೆ ಮುಂದೆ ಓಡಾಡುವಾಗಲೆಲ್ಲಾ ಈ ಅನಂತು ತನ್ನ ಕೋಣೆಯ ಕಿಟಕಿ ಬಾಗಿಲು ಬಡಿದುಕೊಂಡು, ಶೃತಿಪೆಟ್ಟಿಗೆ ಹಿಡಿದುಕೊಂಡು, ಎತ್ತರದ ಧ್ವನಿಯಲ್ಲಿ ಸ್ವರವೆತ್ತಿ ಹಾಡುತ್ತಿದ್ದುದು ಫರ್ಲಾಂಗು ದೂರದಾಚೆಗೂ ಕೇಳಿಸುತ್ತಿತ್ತು. ಅಂದಿನ ಆ ದಿನಗಳಲ್ಲಿ ಅನಂತುವಿನ ಅಬ್ಬರದ ಆರ್ಭಟದ ಅಭ್ಯಾಸವನ್ನು ಅ ನವರತ ಆಲಿಸುತ್ತಿದ್ದ ಅಕ್ಕಪಕ್ಕದವರು ನಿಬ್ಬೆರಗಾಗಿ ಹುಬ್ಬೇರಿಸುತ್ತಿದ್ದರೇ ಹೊರತು ಅವರಾರು ಆಕ್ಷೇಪಿಸದೆ, ಅಟಕಾಯಿಸಿಕೊಳ್ಳದೆ ಅದುಮಿ ಕೊಂಡಿರುತ್ತಿದ್ದುದೇ ಅಚ್ಚರಿಮೂಡಿಸುತ್ತಿದ್ದ ಸಂಗತಿ. ಸೆಂಟರ್ ಆಫ್‌ ಗ್ಯ್ರಾವಿಟಿಯನ್ನೇ ಕಳೆದುಕೊಂಡು ಕನಲುತ್ತಿದ್ದ ಆಜುಬಾಜುವಿನವರಿಗೆ ಅನಂತು ಮನೆಯಲ್ಲಿಲ್ಲದಿದ್ದ ಸಮಯ ಇಂಟರ್ವೆಲ್ಲೆಂಬಂತೆ ಭಾಸವಾಗುತ್ತಿತ್ತು. ‘ನನ್ನ ನಿರಂತರ ಸಂಗೀತಾಭ್ಯಾಸದಿಂದ ನಿಮಗೆ ತೊಂದರೆಯಾಗ್ತಿದ್ರೆ ಕ್ಷಮಿಸಿ’ ಎನ್ನುತ್ತ ಈ ಅನಂತು ಅಕ್ಕಪಕ್ಕದವರನ್ನು ಆಗಾಗ ಅಂಗಲಾಚುತ್ತಿದ್ದುದನ್ನು ನಾನು ಹಲವು ಹತ್ತು ಬಾರಿ ಕಂಡದ್ದುಂಟು. ಅಲ್ಲದೆ ಹೀಗಿವನು ತನ್ನ ಕೋಣೆಯಲ್ಲಿ ಕೂತು ‘ಇಳಿದು ಬಾ ತಾಯೆ ಇಳಿದು ಬಾ’, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ’, ‘ನೀನ್ನನ್ನಟ್ಟೀಗ್‌ ಬೆಳಕಂಗಿದ್ದೆ ನಂಜೀ’ ಇತ್ಯಾದಿ ಗೀತೆಗಳನ್ನು ಗಟ್ಟಿಯಾಗಿ ಹೇಳುತ್ತಿದ್ದರೆ ಇವನೊಟ್ಟಿಗೆಯೇ ಎಂಬಂತೆ ಅಕ್ಕಪಕ್ಕದ ಮನೆಗಳ ಹೆಣ್ಣುಗಳೂ ನಮಗೆ ಕೇಳುವಷ್ಟರ ಮಟ್ಟಿಗೆ ಗಟ್ಟಿಯಾಗಿಯೇ ಗುನುಗುತ್ತಿದ್ದುದು ಸ್ಪಷ್ಟವಾಗಿಯೆ ಕೇಳಿಸುತ್ತಿತ್ತು.

ಹೀಗಾಗಿ ಅನಂತಸ್ವಾಮಿಯ ಮನೆಸಾಲಿನಲ್ಲಿದ್ದ ಮನೆಮಂದಿಗೆಲ್ಲಾ, ಮುಖ್ಯವಾಗಿ ಬಲಿತಿದ್ದ ಬಾಲಕಿಯರಿಗೆಲ್ಲಾ ಇವನು ಹಾಡುತ್ತಿದ್ದ ಭಾವಗೀತೆಗಳ ಬಹುಪಾಲು ಸಾಲುಸಾಲುಗಳು ಬಾಯಿಪಾಠವಾಗಿ ಹೋಗುತ್ತಿತ್ತು. ಇವ ಹಾಡುತ್ತಿದ್ದ ಬಹುತೇಕ ಭಾವಗೀತೆಗಳನ್ನು ಆ ಭಗಿನಿಯರೂ ಹಾಡುತ್ತಿದ್ದರು.

ಹೀಗೆ ಪರೋಕ್ಷವಾಗಿ ಪಾಠ ಕಲಿಯುತ್ತಿದ್ದ ಆಪಾವನೆಯರ ಭಾವನೆಯಲ್ಲಿ ಅನಂತುವಿಗೆ ಅಸದೃಶ ಆಚಾರ್ಯನೊಬ್ಬನ ಸ್ಥಾನಮಾನ. ಅಷ್ಟೇಹೊರತು ಕಟ್ಟುನಿಟ್ಟಾಗಿ ಬಿಗುಮಾನದಿಂದಿರುತ್ತಿದ್ದ ಅನಂತುವಿನ ಎಡೆಯಲ್ಲಿ ಸುಗಮಸಂಗೀತ ಕಲಿಯಲು ಬರುತ್ತಿದ್ದ ಸುಕನ್ಯೆಯರ ಸರಸಲ್ಲಾಪ ಸುಮ್ಮಾನಗಳಿಗೆ ಅವಕಾಶವಿರಲಿಲ್ಲ. ಹೀಗಿದ್ದರೂ ಒಬ್ಬಿಬ್ಬರು ಕನ್ಯಾಮಣಿಗಳು ಅನಂತುವನ್ನು ಸೆರಗಿನಲ್ಲಿ ಸೆರೆಹಿಡಿದು ಈತನ ಪತ್ನಿತ್ವ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದುಂಟು. ಆದರೆ ಅನಂತುವಿನ ಅಂತಃಪುರಕ್ಕೆ ‘ಶಾಂತಾ’ಳ ಆಗಮನ ಅಧಿಕೃತವಾಗಿ ಆ ಬಳಿಕ  ಈ ಆಚಾರ್ಯನ ಬಗ್ಗೆ ಕನಸು ಕಾಣುತ್ತ ಏನೇನೋ ಆಸೆ ಹೊತ್ತಿದ್ದ ಬೇರೆ ಹಣ್ಣುಗಳು ಇವನ ಮನೆಗೆ ಬರುವುದಂತಿರಲಿ, ಅತ್ತ ಕಡೆ ಅಡ್ಡಾಡುವುದನ್ನೂ ನಿಲ್ಲಿಸಿಬಿಟ್ಟರು. ಮುಂದಾದ್ದನ್ನು ಈ ಪುಸ್ತಕದ ನನ್ನ ಲೇಖನಗಳಲ್ಲೋದಿ.

ಅಂದಿನ ದಿನಗಳಲ್ಲಿ ಹಾರ್ಮೋನಿಯಮ್ಮನ್ನು ಸೈಕಲ್ಲಿನ ಕ್ಯಾರಿಯರ್ ಮೇಲಿರಿಸಿಕೊಂಡು, ಬೀಳದಂತೆ ಅದನ್ನು ಒಂದು ಕೈಯಿಂದ ಭದ್ರವಾಗಿ ಹಿಡಿದುಕೊಂಡು, ಭಾವಗೀತೆಗಳ ಬುಕ್ಕುಗಳಿದ್ದ ಬ್ಯಾಗನ್ನು ಭುಜಕ್ಕೆ ತೂಗುಹಾಕಿಕೊಂಡು, ಇನ್ನೊಂದು ಕೈಯ್ಯಿಂದ ಸೈಕಲ್ಲ್ ಹ್ಯಾಂಡಲ್ಲನ್ನು ಹಿಡಿದು ದೂಡಿಕೊಂಡು ಕಾರ್ಯಕ್ರಮ ಕೊಡುವ ಜಾಗಕ್ಕೆ ಹೋಗುತ್ತಿದ್ದ ಅನಂತಸ್ವಾಮಿಯನ್ನು ಈ ರೀತಿಯಲ್ಲಿ ನಾನು ಹಲವಾರು ದಿನ ಕಂಡಿರುವುದುಂಟು.

ಆ ದಿನಗಳಲ್ಲಿ ಕರೆದ ಕಡೆ ಕಾರ್ಯಕ್ರಮ ಕೊಡುವುದು ಅನಂತುವಿಗೆ ಮುಖ್ಯವಗಿತ್ತೇ ಹೊರತು, ಹಾಡುವುದರಿಂದ ಹಣ ಹೆಕ್ಕುವುದು ಮುಖ್ಯವೆನಿಸಿರಲಿಲ್ಲ. ಹಣಕ್ಕಾಗಿಯೇ ಅನಂತ ಎಂದೂ ಹಾಡಿದವನಲ್ಲ. ಅಲ್ಲದೆ ಅಪ್ಪನ ಆಸ್ತಿಯ ಆಸ್ತಿಭಾರವೂ ಸಾಕಷ್ಟು ಭದ್ರವಾಗಿದ್ದುದರಿಂದ ಅನಂತು ಹಣಕ್ಕಾಗಿ ಹಪಹಪಿಸುವ ಅಗತ್ಯವೂ ಇರಲಿಲ್ಲ. ಅಲ್ಲದೆ ಮೆಚ್ಚಿ ಮದುವೆಯಾದ ಶಾಂತಾಳೊಡನೆ ಸಂಸಾರ ಹೂಡುವ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಎಲ್‌.ಆರ್.ಡಿ.ಇ. ಸಂಸ್ಥೆಯಲ್ಲಿ ತಿಂಗಳಿಗೆ ಸರಿಯಾಗಿ ಸಂಬಳ ತರುವ ಉದ್ಯೋಗವೂ ದೊರೆತದ್ದರಿಂದ ಈ ವೃತ್ತಿಯ ಜೊತೆಗೆ ಸುಗಮ ಸಂಗೀತವನ್ನು ಪ್ರಮುಖ ಪ್ರವೃತ್ತಿಯಾಗಿ ಉಳಿಸಿಕೊಂಡು ಜನಪ್ರಿಯತೆ ಗಳಿಸಲು ಅನಂತುವಿಗೆ ಸಾಧ್ಯವಾಯಿತು. ಇದೆಲ್ಲಾ ಸರಿಯೇ, ಆದರೆ ಇದಕ್ಕೆ ಮುನ್ನ, ಅಂದರೆ ಮದುವೆಗೆ ಮುನ್ನ, ಅನಂತುವಿನ ಬದುಕಿನಲ್ಲಿ ಸಂಭವಿಸಿದ ಮುಖ್ಯ ತಿರುವೊಂದನ್ನು ಕುರಿತು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆಂದೆನ್ನಿಸುತ್ತದೆ. ಅದೂ ….

ಐವತ್ತು ಅರವತ್ತರ ದಶಕಗಳಲ್ಲಿ ಮೈಸೂರಿನ ಬಿಡಾರಂ ಕೃಷ್ಣಪ್ಪನವರ ರಾಮ ಮಂದಿರದ ಹಿಂಬದಿಗಿದ್ದ ವಠಾರವೊಂದರಲ್ಲಿ ಬಹುಕಾಲ ಬೀಡುಬಿಟ್ಟಿದ್ದ ಕಾಳಿಂಗರಾಯರಿಗೆ ಆಗ ಎಲ್ಲಿಲ್ಲದ ಬೇಡಿಕೆ, ನಾಡಿನಾದ್ಯಂತ. ಕಾಳಿಂಗರಾಯರು ಕೀರ್ತಿಶಿಖರವನ್ನೇರಿ ಮಿಂಚಿಮೆರೆಯುತ್ತಿದ್ದ ಉತ್ತುಂಗದ ಪರ್ವಕಾಲವದು. ಆ ಕಾಲದಲ್ಲಿ ಬಹುಜನಪ್ರಿಯತೆಗಳಿಸಿದ್ದ ಕಾಳಿಂಗರಾಯರು ಪಡೆಯುತ್ತಿದ್ದ ಸಂಭಾವನೆ ಅತಿ ಹೆಚ್ಚಿನದು! ಹೀಗಿದ್ದಾಗ್ಯೂ ತಿಂಗಳೊಂದರಲ್ಲಿ ಏನಿಲ್ಲವೆಂದರೂ ಇಪ್ಪತ್ತು ಕಡೆ ಕಾರ್ಯಕ್ರಮ ಕೊಡುತ್ತಿದ್ದ ಕಾಳಿಂಗರಾಯರು ಬಿಡುವಿಲ್ಲದೆ ನಾಡಿನಾದ್ಯಂತ ತಮ್ಮ ತಂಡದವರೊಡನೆ ತಿರುಗಾಡುತ್ತಿದ್ದುದುಂಟು.

ಮನ್ಮಥ ಸ್ವರೂಪಿ ಎನಿಸಿದ್ದ ಕಾಳಿಂಗರಾಯರು ಗರಿಗರಿಯಾಗಿರುತ್ತಿದ್ದ ಸೂಟು ಧರಿಸಿ, ಫಳಫಳನೆ ಹೊಳೆಯುವ ಉಂಗುರಗಳನ್ನು ತೊಟ್ಟು, ಮುಗುಳ್ನಗೆ ಬೀರುತ್ತ, ಸೇರಿರುತ್ತಿದ್ದ ಸಭಿಕರಿಗೆ ನಮ್ರತೆಯಿಂದ ಕೈಜೋಡಿಸಿ ನಮಸ್ಕರಿಸುತ್ತ ಬಂದು, ವೇದಿಕೆಯ ಮಧ್ಯೆ ಇರುತ್ತಿದ್ದ ಮೈಕನ್ನು ಹಿಡಿದು ಭಾವಾಭಿನಯದಿಂದ ಹಾಡಲಾರಂಭಿಸಿದರೆ ಶೋತೃಗಳಿಗಾಗುತ್ತಿದ್ದ ರೋಮಾಂಚನದ ಅನುಭವವನ್ನು ಸಾದ್ಯಂತವಾಗಿ ವರ್ಣಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಅಂತಹ ಅಪೂರ್ವ ವರ್ಚಸ್ವ ಈ ಕಲಾವಿದರು ಕಾಳಿಂಗರಾಯರು.

ಕಾಳಿಂಗರಾಯರು ಕೊಡುತ್ತಿದ್ದ ಕಾರ್ಯಕ್ರಮಗಳಲ್ಲಿ ಒಮ್ಮೊಮ್ಮೆ ಪಕ್ಕವಾದ್ಯದವರ ಪೈಕಿ ಕೂತು ಮ್ಯಾಂಡೊಲಿನ್‌ ಅಥವಾ ಹಾರ್ಮೊನಿಯಂ ನುಡಿಸುತ್ತಿದ್ದ ಅನಂತು ಹೀಗೆ ಹೇಳುತ್ತಿದ್ದುದುಂಟು.

“ಕಾಳಿಂಗರಾಯರು ಹೇಳ್ತೀನಿ, ಅದೇನು ಹಾಡ್ತಾರಯ್ಯಾ! ಅವರಹಾಗೆ ಹಾಡ್ಬೇಕಾದ್ರೆ ಪೂರ್ವಜನ್ಮಗಳಲ್ಲಿ ಪುಣ್ಯ ಮಾಡಿರ್ಬೇಕು. ಅದೇನು ಗತ್ತು, ಅದೆಂಥ ಫಲಕು, ಮತ್ತದೆಂಥ ನುಡಿಕಾರ, ಆಶ್ಚರ್ಯವಾಗುತ್ತಯ್ಯ! ಕನ್ನಡಗೀತೆಗಳನ್ನು ಇಷ್ಟು ಇಂಪಾಗಿ ಹಾಡುವ ಈ ಸರಳ ಸಂಗೀತದ ಸರದಾರ ಸಾವಿರ ವರುಷವಾದ್ರೂ ಇರಬೇಕಯ್ಯಾ” ಎಂದು ಮುಕ್ತಮನದಿಂದ ಹೊಗಳುತ್ತಿದ್ದುದನ್ನು ನಾನು ಹಲವು ಬಾರಿ ಕೇಳಿದ್ದೇನೆ.

ಹೀಗೆ ಕಾಳಿಂಗರಾಯರನ್ನು ಪರೋಕ್ಷವಾಗಿ ಗುರುವೆಂದೇ ಭಾವಿಸಿದ್ದ ನಮ್ಮ ಅನಂತಸ್ವಾಮಿಯ ಆಂತರ್ಯ ಹಾಗೂ ಸ್ವಭಾವವನ್ನು ಕುರಿತು ಸ್ವಲ್ಪ ಮಾತು. ಮೊದಲಿನಿಂದಲೂ ಅಷ್ಟೆ, ಅನಂತು ಛಲದ ಸ್ವಭಾವದವನು. ಮನಸ್ಸಿಗೆ ನಾಟಿದ್ದನ್ನು ಮಾಡದೆ ಬಿಡುತ್ತಿರಲಿಲ್ಲ. ಅಲ್ಲದೆ ತಾನೇ ಕೆಲಸವಿಲ್ಲದೆ ಕೈ ಚಾಚಿಕೊಂಡು ಕುಳಿತಿರುತ್ತಿದ್ದ ಕಾಲದಲ್ಲಿ ಬೇಡಿ ಬರುತ್ತಿದ್ದವರಿಗೆ ಸಹಾಯ ಮಾಡುವ ಉದಾರಬುದ್ಧಿ. ಈ ಮಾತಿಗೆ ಒಪ್ಪೆನಿಸುವಂತೆ ಇಲ್ಲೊಂದು ನಿದರ್ಶನ.

೧೯೫೬-೫೭ರ ಸುಮಾರು, ಅಥವಾ ಇನ್ನೂ ಒಂದೆರಡು ವರುಷ ಮೊದಲೇ ಇರಬಹುದು. ಇದ್ದಕ್ಕಿದ್ದಂತೆ ಅನಂತುವಿಗೆ ಏನನ್ನಿಸಿತೋ, ಅದೊಂದು ದಿನ ಸ್ನಾನ ಮಾಡಿ ಒದ್ದೆ ಟವಲನ್ನು ಸೊಂಟಕ್ಕೆ ಸುತ್ತಿಕೊಂಡಿದ್ದ ಅನಂತು ತನ್ನ ಇಷ್ಟದೇವರನ್ನು ನೆನೆದ ನಂತರ “ಎಷ್ಟೇ ಕಷ್ಟವಾದರೂ ಸರಿಯೆ, ನಾನು ಕೊಡುವ ಕಾರ್ಯಕ್ರಮಗಳಲ್ಲಿ ಕನ್ನಡಗೀತೆಗಳನ್ನಲ್ಲದೆ ಬೇರಾವ ಭಾಷೆಯ ಗೀತೆಗಳನ್ನು ಖಂಡಿತ ಹಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದ. ಅಂದು ತೆಗೆದುಕೊಂಡ ಈ ಸಂಕಲ್ಪವನ್ನು ಅನಂತು ಅನವರತ ಪಾಲಿಸಿದ್ದೇ ಅಲ್ಲದೆ ಯಾವ ಕಾರಣಕ್ಕೂ ತನ್ನ ಕೊನೆ ಉಸಿರಿರುವವರೆಗೆ ಮುರಿಯಲಿಲ್ಲ. ಈ ವಿಷಯವನ್ನು ಕುರಿತು ಮಾತನಾಡುವಾಗಲೆಲ್ಲಾ “ದಟ್‌ ವಾಸ್‌ ದ ಗ್ರೇಟ್‌ ಓತ್‌ ಆರ್ಫ ಅನಂತು ದ ಗ್ರೇಟ್‌” ಎಂದು ಸೋಮಣ್ಣ ಇಂದಿಗೂ ಹೆಮ್ಮೆಯಿಂದ ಹೇಳುತ್ತಾನೆ.

ಹೀಗಂದು ಪ್ರಮಾಣ ಮಾಡಿದ ಅನಂತು ಅನೂಚಾನವಾಗಿ ತಾನು ಕೊಡುತ್ತಿದ್ದ ಕಾರ್ಯಕ್ರಮಗಳಲ್ಲೆಲ್ಲಾ ಕನ್ನಡಗೀತೆಗಳನ್ನು ಹಾಡುವುದನ್ನೇ ರೂಢಿಸಿಕೊಂಡ-ಕಾಳಿಂಗರಾಯರಂತೆ.

ದಿನಗಳು ಕಳೆದಂತೆ ಜನಪ್ರಿಯತೆಯನ್ನು ಗಳಿಸುತ್ತಿದ್ದ ಅನಂತುವಿಗೆ ಬೇಡಿಕೆಗಳು ಹೆಚ್ಚಾಗಿ ಬರಲಾರಂಭಿಸಿದವು. ತನ್ನ ಕಛೇರಿಗಳಿಗೆ ಇನ್ನಷ್ಟು ರಂಗು ಬರಲೆಂಬ ಉದ್ದೇಶದಿಂದ ತನ್ನೊಡನೆ ಕೂಡಿ ಹಾಡಲು ‘ರಂಗು’ ಎಂಬ ಒಬ್ಬ ಶಿಷ್ಯನನ್ನು ತಯಾರಿಸಿದ, ಆ ಕಾಲದಲ್ಲಿ ಅನಂತು.

ಇಂಪೆನಿಸುವ ಕಂಠಮಾಧುರ್ಯವಿದ್ದ ಈ ರಂಗೂವಿನ ಪೂರ್ಣ ಹೆಸರು. ಟಿ.ಎಸ್‌.ರಂಗನಾಥ್‌. ದೇಶವಿದೇಶಗಳಲ್ಲೆಲ್ಲಾ ಖ್ಯಾತನಾಮರಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಹೆಸರಾಂತ ಛಾಯಾಗ್ರಾಹಕ ಟಿ.ಎಸ್‌.ಸತ್ಯನ್‌ ರವರ ಸಹೋದರ ಈ ರಂಗೂ ಯಾನೇ ರಂಗನಾಥ್‌. ಪಾಪ, ಈಗಿವನಿಲ್ಲ. ಹೋಗಿ ಹಲವು ವರುಷಗಳೇ ಆಯಿತು.

೧೯೫೮ರ ಸುಮಾರು, ಅನಂತು ಸೋಮಣ್ಣ ಗುಣಸಿಂಗ್‌ ಹಾಗೂ ಈ ರಂಗೂ ಇವರೆಲ್ಲಾ ಸೇರಿ “ಎಮ್‌.ಎಮ್‌.ಎಮ್‌” ಎಂಬ ರಸಿಕರನ್ನು ರಂಜಿಸುವ ಒಂದು ತಂಡವನ್ನೇ ಕಟ್ಟಿದರು. “ಎಮ್‌ .ಎಮ್‌.ಎಮ್‌.” ಅಂದರೆ ಅದು “ಮೈಸೂರು ಮೆಲೋಡಿ ಮೇಕರ್ಸ್” ಎಂದರ್ಥ. ಸಂಗೀತವಷ್ಟೇ ಅಲ್ಲದೆ ನೃತ್ಯ, ನಾಟಕವನ್ನೂ ಅಳವಡಿಸಿ ಮೂರು ಗಂಟೆಯ ಕಾರ್ಯಕ್ರಮವನ್ನು ಯಾರಾದರೊಬ್ಬರ ಸಹಾಯಾರ್ಥವಾಗಿ ರೂಪಿಸುವುದು ಈ ತಂಡದ ಉದ್ದೇಶ. ಅನಂತೂ ಹಾಗೂ ಸೋಮಣ್ಣನ ನೇತೃತ್ವದಲ ಲಿ ಆಗೀಗ ಎಂಬಂತೆ ಒಟ್ಟಾರೆ ಎಂಟೋ ಹತ್ತೋ ಇಂತಹ ಕಾರ್ಯಕ್ರಮಗಳನ್ನಿತ್ತು ಆರ್ಥಿಕ ಮುಗ್ಗಟ್ಟಿನಲ್ಲಿದ್ದವರಿಗೆ ಈ ತಂಡ ಸಹಾಯ ಮಾಡಿದ್ದುಂಟು. ಮೂರುಗಂಟೆಯ ಇಂತಹ ಕಾರ್ಯಕ್ರಮದಲ್ಲಿ ಒಂದು ಗಂಟೆಯ ಸಂಗೀತ ನೀಡುವ ಜವಾಬ್ದಾರಿ ಅನಂತಸ್ವಾಮಿಯದು. ಇನ್ನೊಂದು ಗಂಟೆ ನೃತ್ಯ ನೀಡುವ ಜವಾಬ್ದಾರಿ ಹೊರುತ್ತಿದ್ದವರು ಖ್ಯಾತ ಸಿತಾರ್ ವಾದಕ ಹಾಗೂ ನೃತ್ಯಪಟು ವೈ.ಎನ್‌.ಸಿಂಹ. ಮತ್ತೆ ಇನ್ನೊಂದು ಗಂಟೆ ನಾಟಕವನ್ನಾಡಿಸುವ ಹೊರೆ ಹೊರುತ್ತಿದ್ದವನು ಸೋಮಣ್ಣ.

ಆ ಸಮಯದಲ್ಲೊಮ್ಮೆ ಮಹಮ್ಮದ್‌ ಗಫೂರ್ ಮೂಲಕ ಸಹಾಯ ಯಾಚಿಸಿ ಬಂದ ನಾರಾಯಣರಾವ್‌ ಎಂಬ ಉತ್ತರ ಕರ್ನಾಟಕದ ಗವಾಯಿಯೊಬ್ಬರಿಗೆ ಈ ತಂಡ ಸಹಾಯಾರ್ಥ ಕಾರ್ಯಕ್ರಮವನ್ನು ರೂಪಿಸಿದ್ದು ನನಗೆ ನೆನಪಿದೆ. ಮೈಸೂರಿನ ಹಾರ್ಡ್ವಿಕ್‌ ಹೈಸ್ಕೂಲಿನ ಹಜಾರದಲ್ಲಿತ್ತ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸುಮಾರು ಒಂದೂವರೆ ತಾಸು ನಾರಾಯಣರಾಯರೆ ಅದ್ಭುತವಾಗಿ ಹಾಡಿದರು. ನಂತರ ಈ ತಂಡವಾಡಿದ ನಾಟಕ ‘ರಾಹುಕಾಲ’. ಇದರಲ್ಲಿ ಮುಖ್ಯಪಾತ್ರ ವಹಿಸಿದ್ದವನು ಸೋಮಣ್ಣ. ಮತ್ತೆ  ಈ ನಾಟಕವನ್ನು ನಿರ್ದೇಶಿಸಿ ಪುಟ್ಟದೊಂದು ಪಾತ್ರವನ್ನೂ ಮಾಡಿದವನು ನಾನು.

ನಂತರ ಪೂನಾದ ಖಡಕ್‌ ವಾಸ್ಲಾ ಕೆನಾಲ್‌ ಪ್ರಾಜೆಕ್ಟಿನಲ್ಲಿ ನನಗೆ ಸೆಕ್ಷನ್‌ ಆಫೀಸರ್ ಕೆಲಸ ಸಿಕ್ಕಿತು. ಹೊರಟುಹೋದೆ. ಆದರೆ ಇತ್ತ ಮೈಸೂರಿನಲ್ಲಿ ಅನಂತಸ್ವಾಮಿಯ ಎಮ್‌.ಎಮ್‌.ಎಮ್‌.ತಂಡ ತನ್ನ ಶಕ್ತಿಗನುಗುಣವಾಗಿ ಸಹಾಯಾರ್ಥ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ಸಮಾಜಸೇವೆ ಮಾಡುವ ಕಾರ್ಯ ಮುಂದುವರೆಸುತ್ತಲೇ ಇತ್ತು.  ಈ ದಿಸೆಯಲ್ಲಿ ನಡೆದ ಒಂದು ಪ್ರಸಂಗ ದಾಖಲಾರ್ಹ. ಅದೂ ….

ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ಒಂದು ಬಡ ಕುಟುಂಬ. ಆ ಕುಟುಂಬದಲ್ಲಿದ್ದ ಅಕ್ಕತಂಗಿಯರಿಬ್ಬರಿಗೆ ಒಟ್ಟಿಗೆ ಮದುವೆಯಾಗುವ ಸುಯೋಗ ಒದಗಿತು. ನಿಶ್ಚಿತಾರ್ಥವೂ ಆಗಿಹೋಯಿತು. ಆದರೆ ಮುಂದೆ ಇವರ ಮದುವೆ ಮಾಡಲು ಈ ಅಕ್ಕತಂಗಿಯರ ಅಪ್ಪನ ಬಳಿ ಚಿಕ್ಕಾಸು ಇರಲಿಲ್ಲ. ಯಾರ ಬಳಿ ಬಿಕ್ಕತ್ತು ಬೇಡಿದರೂ ಹಣ ದೊರೆಯಲಿಲ್ಲ. ಮಕ್ಕಳಿಬ್ಬರಿಗೂ ಒತ್ತರಿಸಿಕೊಂಡು ಒದಿಗದ್ದ ಕಂಕಣಬಲವೇ ಕಿತ್ತುಹೋಗುವ ಪರಿಸ್ಥಿತಿ. ಅಂತಹ ದುಸ್ಥಿತಿಯಲ್ಲಿ ಆ ಅಕ್ಕತಂಗಿಯರ ಅಪ್ಪನಿಗೆ ಏನನ್ನಿಸಿತೋ ಏನೋ, ಅನಂತುವಿನ ಅಡ್ರೆಸ್‌ ಹಿಡಿದು ಅವನ ಬಳಿ ಬಂದರು. ತಮ್ಮ ಅಸಹಾಯಕ ಸ್ಥಿತಿಯನ್ನು ಅರುಹಿ ಅತ್ತರು. ಅವರ ಕಣ್ಣೀರನ್ನು ಕಾಣುತ್ತಲೇ ಅನಂತುವಿನ ಕರುಳು ಕತ್ತರಿಸಿತು. ಕ್ಷಣವೂ ಯೋಚಿಸದೆ ಮೇಲೆದ್ದ ಅನಂತು ಆ ವೃದ್ಧರ ಮೈದಡವುತ್ತ “ಈ ಬಗ್ಗೆ ನೀವು ನಿಶ್ಚಿಂತರಾಗಿರಿ. ನಿಮ್ಮ ಮಕ್ಕಳ ಮದುವೆಯನ್ನು ನೆರವೇರಿಸುವ ಜವಾಬ್ದಾರಿ ನನಗಿರಲಿ” ಅಂದುಬಿಟ್ಟ. ಕೇಳಿದ ಆ ಅಕ್ಕತಂಗಿಯರ ಅಪ್ಪನಿಗೆ ಅನಂತು ಆಡಿದ್ದೆಲ್ಲಾ ಅಯೋಮಯ. ತಬ್ಬಿಬ್ಬಾದ ಆ ವೈದ್ಯರು ಅನಂತುವನ್ನು ತಬ್ಬಿಹಿಡಿದು, “ಏನು ನೀವನ್ನುತ್ತಿರುವುದು, ಸಾಧ್ಯವೇ? ! ಇಬ್ಬರ ಮದುವೆ ಎಂದರೆ ಈ ಕಾಲದಲ್ಲಿ ಮೂರು ಮೂರೂವರೆ ಸಾವಿರವನ್ನು ಮೀರಬಹುದು ! ನಿಮ್ಮಿಂದ ಈ ಹೊರೆಯನ್ನು ಹೊರುವುದು ಸಾಧ್ಯವೇ? ನನಗೆ ನಂಬಿಕೆಯೇ ಬರುತ್ತಿಲ್ಲ” ಎಂದು ನಿಟ್ಟುಸಿರುಬಿಟ್ಟ ಆ ವೃದ್ಧರನ್ನು ಅನಂತು ಸಂತೈಸುತ್ತಾ “ಇನ್ನು ಹದಿನೈದು ದಿನಗಳಲ್ಲಿ ಅಷ್ಟು ಹಣವನ್ನು ಕೂಡಿಸಿಕೊಡುವುದು ನನ್ನ ಕೆಲಸ. ನೀವು ಮದುವೆಗೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಳ್ಳಿ” ಎಂದು ನಮಸ್ಕರಿಸಿ ಬಂದಿದ್ದ ಆ ಬಡವ್ಯಕ್ತಿಯನ್ನು ಬೀಳ್ಕೊಟ್ಟ. ಮುದುಡಿದ್ದ ಮುಖ ಹೊತ್ತುಬಂದಿದ್ದ ಆ ಮುದುಕರು ಅನಂತುವಿತ್ತ ಆಶ್ವಾಸನೆಯಿಂದ ಪೊರೆಬಿಟ್ಟ ನಾಗರದಂತೆ ಚುರುಕಾಗಿ ಹೊರಟುಹೋದರು.

ಅವರತ್ತ ಹೋಗುತ್ತಲೇ ಇತ್ತ ಅನಂತು ತನ್ನ ಎಮ್‌.ಎಮ್‌.ಎಮ್‌. ತಂಡದ ಹಿಂಡಿನವರನ್ನು ಒಂದೆಡೆಯಲ್ಲಿ ಒಗ್ಗೂಡಿಸಿದ. ಸರಸರನೆ ಸದಸ್ಯರೆಲ್ಲ ಸೇರಿದ ಆ ಸಮಾಜ ಸೇವಾ ಸಭೆಗೆ ಸೋಮಣ್ಣನದೇ ಅಧ್ಯಕ್ಷತೆ.  ಇವರಿಬ್ಬರು ನಡೆದದ್ದನ್ನೆಲ್ಲ ನಿರೂಪಿಸಿ, ಕೂಡಲೆ ಒಂದು ಸಹಾಯಾರ್ಥ ಸಮಾರಂಭವನ್ನು ಸಲ್ಲಿಸಿ ಸಾರ್ವಜನಿಕರಿಂದ ಹಣ ಹೆಕ್ಕುವ ಪ್ರಯತ್ನವನ್ನು ಪ್ರಕಟಿಸಿದಾಗ, ಅಲರ್ಟಾಗಿ ಆಲಿಸಿದ ಸದಸ್ಯರು ಒಮ್ಮತದಿಂದೆದ್ದವರೆ ಒಕ್ಕೊರಲಿನಿಂದ ‘ಓ.ಕೇ.’ ಎಂದರು.

ಸೋಮಣ್ಣ, ಅನಂತುವಿನ ನೇತೃತ್ವದಲ್ಲಿ ಸಂಗೀತ, ನೃತ್ಯ ಹಾಗೂ ಅಂಗುಲಿಮಾಲ ನಾಟಕವಿದ್ದ ಈ ಸಹಾಯಾರ್ಥ ಸಮಾರಂಭ ಮೈಸೂರಿನ ಪುರಭವನದಲ್ಲಿ ನಡೆಯಿತು. ಸಂಗ್ರಹವಾದ ಸುಮರು ಐದುಸಾವಿರದಲ್ಲಿ ಕಾಸುಕಾಸಿಗೂ ಲೆಕ್ಕವಿರಿಸಿ, ಕಾರ್ಯಕ್ರಮವನ್ನು ರೂಪಿಸಲು ಖರ್ಚಾದಷ್ಟು ಕಾಸನ್ನು ಮಾತ್ರ ಪಕ್ಕಕ್ಕಿರಿಸಿ, ಉಳಿದ ನಾಲ್ಕು ಸಾವಿರದ ಒಂದು ರೂ. ವನ್ನು ಆ ಅಕ್ಕತಂಗಿಯರ ಅಪ್ಪನ ಕೈಗೆ ಒಂದೇ ಇಡುಗಂಟಿನಲ್ಲಿ ಇವರು ಇಕ್ಕಿದಾಗ, “ಈ ಪಾಂಡವರು ಪುಂಡರಷ್ಟೇ ಅಲ್ಲ, ಸಮಯದಲ್ಲಿ ಸಮಾಜಸೇವೆ ಮಾಡುವುದರಲ್ಲೂ ಮಹಾಪ್ರಚಂಡರು” ಎಂಬ ನಿರ್ಣಯಕ್ಕೆ ಬಂದ ಮೈಸೂರಿನ ಮಹನೀಯರು ಮುಂದೆ ಈ ಪುಂಡ ಪಾಂಡವರನ್ನು ಅದರ ಅಭಿಮಾನದಿಂದಲೂ ಕಾಣಲಾರಂಭಿಸಿದರು.

ಇಂತಹ ಇನ್ನೂ ಹಲವು ಮನ ಮಿಡಿಯುವ ಸುಂದರ ಪ್ರಸಂಗಗಳು ಆ ಕಾಲದಲ್ಲಿ ಈ ಪುಂಡ ಪಾಂಡವರ ಬದುಕಿಗೆ ಸಂಬಂಧಿಸಿದಂತೆ ನಡೆದದ್ದುಂಟು. ನಮ್ಮ ಪೈಕಿ ಸುಬ್ಬಣ್ಣ ಲಾ ಓದುತ್ತಿದ್ದುದರಿಂದ ಮುಂದೆ ಲಾಯ್ತಿ ಆಗುವುದು ನಿಶ್ಚಿತವಾಗಿತ್ತು. ಎಂ.ಎ. ಪದವೀಧರನಾಗಿದ್ದ ಸೋಮಣ್ಣನ ಭವಿಷ್ಯದ ಬಗ್ಗೆಯೂ ಚಿಂತೆಯಿರಲಿಲ್ಲ. ಇಂಜಿನಿಯರಿಂಗ್‌ ಮುಗಿಸಿದ್ದ ನನಗೆ ಆಗಲೇ ಕೆಲಸ ಸಿಕ್ಕಿತ್ತು. ಹೋಟೆಲ್‌ ನಡೆಸುತ್ತಿದ್ದ ಬಲ್ಲಾಳನ ಬುಡವೂ ಭದ್ರವಾಗಿತ್ತು. ನಿರ್ದಿಷ್ಟವಾದ ನಿಗದಿತವಾದ ಆದಾಯವಿಲ್ಲದೆ, ಬದುಕಿನ ಭವಿಷ್ಯದ ಬಗ್ಗೆ ಚಿಂತೆಯಿಲ್ಲದೆ, ಆರಾಮವಾಗಿ ಅಡ್ಡಾಡುತ್ತಿದ್ದ ಅನಂತು ಹಾಗೂ ಗುಣಸಿಂಗರ ಬದುಕಿನಲ್ಲಿ ಅನಿರೀಕ್ಷಿತವಾಗಿ ಮುಖ್ಯವೆನಿಸುವ ತಿರುವೊಂದು ಸಿಕ್ಕಿತು ಆ ಸಮಯದಲ್ಲಿ.

ಆ ದಶಕಗಳಲ್ಲಿ, ಮೈಸೂರಿನ ನವಜ್ಯೋತಿ ಸ್ಟುಡಿಯೋವಿನಲ್ಲಿ, ವರುಷಂಪ್ರತಿ ತಪ್ಪದೆ ಒಂದೆರಡು ಕನ್ನಡ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸುತ್ತಿದ್ದವರು ಖ್ಯಾತ ಚಿತ್ರನಿರ್ದೇಶಕ ಡಿ.ಶಂಕರಸಿಂಗ್‌ ರವರು. ಆಗವರೇ ಕನ್ನಡ ಚಿತ್ರಲೋಕದ ಬ್ರಹ್ಮ, ಭೀಷ್ಮ ಇತ್ಯಾದಿ ಇತ್ಯಾದಿ.

ಆಯಿತು, ಆ ದಿನಗಳಲ್ಲೊಂದು ದಿನ, ಪ್ರಾಯಶಃ ಇಸವಿ ೧೯೫೭ ಇರಬಹುದು, ಹಾಡುವುದರ ಜೊತೆಗೆ ಸೊಗಸಾಗಿ ಮ್ಯಾಂಡೊಲಿನ್‌ ನುಡಿಸುತ್ತಿದ್ದ ಅನಂತಸ್ವಾಮಿಯನ್ನೂ, ಅಷ್ಟೇ ಸೊಗಸಾಗಿ ಕೊಳಲು ನುಡಿಸುತ್ತಿದ್ದ ಗುಣಸಿಂಗನನ್ನು ಶಂಕರಸಿಂಗ್‌ ರವರು ಬರಮಾಡಿಕೊಂಡರು. ನಂತರ ಅವರು ಕೇಳಿದರು. ಇವರು ಹೇಳಿದರು.

‘ವಿದ್ಯೆ?

‘ನೈವೇದ್ಯ ಸಾರ್ …’

‘ಕಾಲೇಜು …?

‘ಕೈಮುಗ್ದಾಯ್ತು ಸಾರ್ …’

‘ಉದ್ಯೋಗ…’?

‘ನಿರುದ್ಯೋಗ ಸಾರ್ …’

ಈ ಮೊಂಡರ ಮಾತುಗಳನ್ನು ಕೇಳಿದ ಶಂಕರಸಿಂಗರು ಇವರಿಗೆ ಏನನ್ನಾದರೂ ಮಾಡಲೇಬೇಕೆಂದು ಮನದಲ್ಲೇ ಅಂದುಕೊಂಡರು. ಮಾರನೆಯ ದಿನ ಮುಂಜಾನೆಯಾಗುತ್ತಿದ್ದಂತೆ ಈ ಹಕ್ಕಬುಕ್ಕರಿಗೆ ಬುಲಾವು, ಶಂಕರಸಿಂಗರವರಿಂದ. ಒಟ್ಟಿಗೆ ಒಂದೇ ಉಸುರಿನಲ್ಲಿ ಅವರಿದ್ದಲ್ಲಿಗೆ ಹೋದ ಈ ಇಬ್ಬರು ಅವರೆದುರು ಕೈಜೋಡಿಸಿ ನಿಂತರು. ಮತ್ತೆ ಅದದೇ ಪ್ರಶ್ನೆ, ಅದದೇ ಉತ್ತರ, ಕೇಳಿದ ಶಂಕರಸಿಂಗ್‌ ನಕ್ಕು ನಂತರ ಹೀಗೆಂದರು,

“ಮ್ಯೂಸಿಕ್ಕು ಮ್ಯೂಸಿಕ್ಕೂಂತ ನೀವು ಮೊಂಡ್ಹರ್ಕೊಂಡು ಮೈಸೂರಿನಲ್ಲೇ ಕೂತಿದ್ರೆ ಮುಂಡಾಮೋಚ್ಕೊಂಡ್ಹಾಗೇನೆ. ಮೈಸೂರಿನಲ್ಲೇ ಇದ್ರೆ ಏನ್‌ ಸಿಗತ್ರಯ್ಯಾ ಮಣ್ಣಾಂಗಟ್ಟಿ? ನಾಳೆ ನಾನು ಮದ್ರಾಸಿಗೆ ಹೋಗ್ತಿದ್ದೀನಿ. ನೀವೂ ಬನ್ನಿ ಜೊತೇಲಿ. ಅಲ್ಲಿ ಒಬ್ಬಿಬ್ರು ಒಳ್ಳೆ ಮ್ಯೂಸಿಕ್‌ ಡೈರೆಕ್ಟರುಗಳಿಗೆ ನಿಮ್ಮನ್ನ ಪರಿಚಯ ಮಾಡ್ತೀನಿ. ಅವ್ರ ಜೊತ್ಗಿದ್ದು ಮೊದ್ಲು ಚೆನ್ನಾಗಿ ಕೆಲಸ ಕಲತ್ಕೊಳ್ಳಿ. ಕ್ರಿಯೆಟೆವಿಟಿ ಇರೋವ್ರು ಕೆಲ್ಸಾನ್ನ ಕಲತ್ಕೊಂಡ್ರೆ ಅವ್ರೇ ಮುಂದೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡ್ಬಹುದು. ಕೈ ತುಂಬಾ ಕಾಸೂ ಸಿಗುತ್ತೆ” ಅನ್ನುತ್ತಿದ್ದಂತೆ ಏನು ಎತ್ತ ಏಕೆ ಎಂದೇನನ್ನೂ ಅನ್ನದೆ ಈ ಇಬ್ಬರೂ ಒಕ್ಕೊರಲಿನಿಂದ ಓಕೆ ಸರ್ ಎಂದು ಕೈಮುಗಿದರು.

ಅಂತೆಯೇ ಅನಂತು ಹಾಗೂ ಗುಣಸಿಂಗರನ್ನು ಜೊತೆಯಲ್ಲೇ ಕರೆದೊಯ್ದ ಶಂಕರಸಿಂಗರು ಇವರನ್ನು ಮದರಾಸಿನಲ್ಲಿ ಪ್ರತಿಷ್ಠಾಪಿಸಿದರು. ಪರಿಚಿತರಿದ್ದ ಹಲವು ಸಂಗೀತ ನಿರ್ದೇಶಕರಿಗೆ ಇವರನ್ನು ಪರಿಚಯಿಸಿ ಪ್ರೋತ್ಸಾಹಿಸಬೇಕೆಂದು ತಿಳಿಸಿದ್ದೇ ಅಲ್ಲದೆ ಇವರಿಗೆ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿದ ಶಂಕರಸಿಂಗ್‌ರವರನ್ನು ಗುಣಸಿಂಗ್‌ ಇಂದಿಗೂ ತಂಪು ಹೊತ್ತಿನಲ್ಲಿ ನೆನೆಯುತ್ತಾನೆ.

ದಿನಂಪ್ರತಿ ಬೆಳಗಾಗುತ್ತಿದ್ದಂತೆ ಈ ನತದೃಷ್ಠದ್ವಯರ ಮುಖದರ್ಶನ ಲಾಭ ಪಡೆಯುತ್ತಿದ್ದ ನಮಗೆ ಮುನ್ಸೂಚನೆಯನ್ನು ಕೊಡದೆ ಮೈಸೂರಿನಿಂದ ಈ ಮಹಿಷಗಳು ಮಾಯವಾಗಿ ಮದ್ರಾಸು ಸೇರಿರುವ ವಿಷಯ ತಿಳಿದದ್ದು ಮೂರ್ನಾಲ್ಕು ವಾರಗಳ ನಂತರವೇ!

ಮೊದಲಿನಿಂದಲೂ ಅಷ್ಟೇ, ಗುಣಸಿಂಗ ಗುಣಾಢ್ಯ. ಒಮ್ಮೊಮ್ಮೆ ಚರ್ಯೆಯಲ್ಲಿಯೇ ತುಸು ಚೆಲ್ಲುಚೆಲ್ಲು ಎಂದೆನಿಸಿದರೂ ಆಂತಯ್ದಲ್ಲಿ ಬದುಕಿನ ಬೆಲೆಯನ್ನು ಬಲ್ಲವನಾಗಿದ್ದವನು ಇವನು. ಬುದ್ಧಿವಂತನಾಗಿದ್ದರೂ ಶತಪೆದ್ದನಂತೆಯೇ ಪ್ರತಿಕ್ರಿಯಿಸುತ್ತ ವರ್ತಿಸುತ್ತಿದ್ದ  ಈ ವ್ಯಕ್ತಿ ತನ್ನ ನಡತೆಯಿಂದ ಎಲ್ಲರನ್ನೂ ವಿಸ್ಮಯಗೊಳಿಸುತ್ತ ಇದ್ದ. ಇಂತಹ ವಿಶಿಷ್ಟ ವ್ಯಕ್ತಿತ್ವದ ಗುಣಸಿಂಗ್‌ ಅಲ್ಲಿಯ ಅರವರಿಗೆ ಅಂಟಿಕೊಂಡು ಅಲ್ಲಿಯೇ ಇದ್ದುಬಿಟ್ಟ, ಭದ್ರವಾಗಿ ಬೇರೂರಿ. ಆದರೆ ಬದುಕನ್ನು ಎಂದೂ ಗಂಭೀರವಾಗಿ ಪರಿಗಣಿಸದ ಅನಂತುವಿಗೆ ಆ ಅರವು ನಾಡಿನ ದ್ರಾವಿಡರೊಡನೆ ಬೀಡುಬಿಟ್ಟು ಬೆಸೆದುಕೊಂಡಿರಲು ಸಾಧ್ಯವಾಗಲೇ ಇಲ್ಲ. ಮದರಾಸಿನ ಮಣ್ಣು ಮಾತು ಅನಂತುವಿನ ಮೈಗೊಗ್ಗಲಿಲ್ಲ. ಅಲ್ಲದೆ ಮೈಸೂರಿನ ಮಣ್ಣಿನ ವಾಸನೆ ಮೇಲಿಂದ ಮೇಲೆ ಮೂಗಿಗೆ ಬಡಿಯಲಾರಂಬಿಸಿದಾಗ ಮದರಾಸಿನ ಬದುಕಿಗೆ ಮಂಗಳ ಹಾಡಿದ ಅನಂತು ಮತ್ತೆ ಮೈಸೂರಿಗೆ ಬಂದುಬಿಟ್ಟ.

ಮದರಾಸಿನಲ್ಲಿ ಇದ್ದ ಎರಡು ವರುಷದಲ್ಲಿ ಅನಂತು  ಮೈಸೂರಿಗೆ ಬಂದದ್ದು ಹನ್ನೆರಡು ಬಾರಿಗೂ ಹೆಚ್ಚು ಬಾರಿ. ಅಲ್ಲಿರುತ್ತಿದ್ದುದಕ್ಕಿಂತ ಇವ ಇಲ್ಲಿರುತ್ತಿದ್ದುದೇ ಹೆಚ್ಚು. ಮೈಸೂರೆಂದರೆ ಅನಂತಸ್ವಾಮಿಗೆ ಅಷ್ಟೊಂದು ಅಚ್ಚುಮೆಚ್ಚು.

ಮೈಸೂರಿನಲ್ಲಾಗ ಹಿಂದಿ ಚಲನಚಿತ್ರಗೀತೆಗಳನ್ನಷ್ಟೇ ಹೆಚ್ಚಾಗಿ ಹಾಡುತ್ತಿದ್ದ ಆರ್ಕೇಸ್ಟ್ಟಾಗಳ ಅಬ್ಬರದ ಕಾಲ. ಎಂತಹ ಸಮಾರಂಭದಲ್ಲೂ ಆರ್ಕೇಸ್ಟ್ರಾ ಹೊಡೆತವೇ. ಆ ಕಾಲದಲ್ಲಿ ಮೈಸೂರಿನಲ್ಲಿ ಬಹುಜನಪ್ರಿಯತೆ ಗಳಿಸಿ ಚಾಲನೆಯಲ್ಲಿದ್ದ ಆರ್ಕೆಸ್ಟ್ರಾ ತಂಡಗಳೆಂದರೆ ಅವು ಮೂರೇ ಮೂರು ಒಂದು, ಫಿಲಿಪ್‌ ಸ್ಟೀವನ್ಸ ಆರ್ಕೇಸ್ಟ್ರಾ, ಎರಡು, ಮಹಮದ್‌ ಗಫೂರ್ ಆರ್ಕೆಸ್ಟ್ರಾ, ಮೂರು, ಗುರುರಾಜ ಎಂಬುವನ ಆರ್ಕೇಸ್ಟ್ರಾ. ಮೈಸೂರಿನ ಫಿಲೋಮಿನ ಕಾಲೇಜಿನಲ್ಲಿ ಓದುತ್ತಿದ್ದ ಫಿಲಿಫ್‌ ಸ್ಟೀವನ್ಸ ‘ಜ್ಯೂನಿಯರ್ ಮಹಮ್ಮದ್‌ ರಫಿ’ ಎಂದೇ ಹೆಸರುಗಳಿಸಿದ್ದ. ‘ಬೈಜೂ ಬಾವ್ರಾ’ ಚಿತ್ರದ ಹಾಡುಗಳನ್ನು ಹಾಡುತ್ತಿದ್ದಾಗಲಂತೂ ರಫೀಗಿಂತ ನಮ್ಮ ಸ್ಟೀವನ್ಸೆ ಮೇಲು ಎನ್ನಿಸುತ್ತಿತ್ತು. ಅಂತೆಯೇ ಮಹಮ್ಮದ್‌ ಗಫೂರ್ ‘ಜ್ಯೂನಿಯರ್ ತಲತ್‌ ಮಹಮೂದ್‌’ ಎಂದೇ ಖ್ಯಾತಿಗಳಿಸಿದ್ದ ವ್ಯಕ್ತಿ. ಮತ್ತೆ ಗುರುರಾಜ ‘ಜೂನಿಯರ್ ಕಿಶೋರ್ ಕುಮಾರ್’ ಎಂದು ಹೆಸರುಗಳಿಸಿದ್ದವನು. ಈ ಮೂವರು ಜೂನಿಯರುಗಳ ಪೈಕಿ ಫಿಲಿಪ್‌ ಸ್ಟೀವನ್ಸ ಹಾಗೂ ಗುರುರಾಜ ಫಿಲೋಮಿನಾ ಕಾಲೇಜಿನಲ್ಲಿ ನನ್ನ ಸಹಪಾಠಗಳಾಗಿದ್ದವರು, ೧೯೫೨-೫೪ ರಲ್ಲಿ ಇಂಟರ್ ಮೀಡಿಯಟ್‌ ಓದುತ್ತಿದ್ದಾಗ.

ಈ ಮೂರು ಆರ್ಕೇಸ್ಟ್ರಾ ತಂಡಗಳನ್ನು ಬಿಟ್ಟರೆ ಇನ್ನೊಂದು ನಾಲ್ಕನೆಯ ಆರ್ಕೆಸ್ಟ್ರಾ ತಂಡವೂ ಇತ್ತು. ಅದು ಮೈಸೂರು ಆಕಾಶವಾಣಿಯ ಆರ್ಕೆಸ್ಟ್ರಾ. ವಿವಿಧ ವಾದ್ಯಗಳನ್ನು ಸೊಗಸಾಗಿ ನುಡಿಸುತ್ತಿದ್ದ ಆಕಾಶವಾಣಿಯ ಘನ ವಿದ್ವಾಂಸರೆಲ್ಲಾ ಒಟ್ಟಾಗಿ ಸರಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬಹು ಅಚ್ಚುಕಟ್ಟಾಗಿ ನುಡಿಸುತ್ತಿದ್ದ ಆಕಾಶವಾಣಿಯ ಆರ್ಕೇಸ್ಟ್ರಾವನ್ನು ಕೇವಲ ಪ್ರಮುಖ ಸಮಾರಂಭಗಳಲ್ಲಿ ಮಾತ್ರ ಕೇಳಬಹುದಿತ್ತು.

ಇಂತಹ ಪರಿಸ್ಥಿತಿಯಿದ್ದ ದಿನಗಳಲ್ಲಿ ಬಹು ಸಂಭ್ರಮದಿಂದ ತಮ್ಮದೇ ವಿಶಿಷ್ಟ ವಿನೂತನ ಶೈಲಿಯಲ್ಲಿ ಕೇವಲ ಕನ್ನಡಗೀತೆ, ಜನಪದ ಗೀತೆಗಳನ್ನಷ್ಟೇ ಹಾಡುವುದರ ಮೂಲಕ ಬಹು ಜನಪ್ರಿಯತೆ ಗಳಿಸಿ ಕೀರ್ತಿಯ ಉತ್ತುಂಗ ಶಿಖರವನ್ನೇರಿ ಮಿಂಚಿ ಮೆರಯುತ್ತಿದ್ದವರು ಪಿ.ಕಾಳಿಂಗರಾಯರು ಈಗ ರಾಯರ ಜಾಡನ್ನೇ ಹಿಡಿದು ಕನ್ನಡ ಗೀತೆಗಳನ್ನಷ್ಟೇ ಹಾಡುತ್ತ ಕಾಲ ಕಳೆಯುತ್ತಿದ್ದಂತೆ, ಆರಂಭದಲ್ಲಿ ‘ಆರ್ಡಿನರಿ’ ಅನ್ನಿಸುತ್ತಿದ್ದ ಅನಂತಸ್ವಾಮಿ ಕ್ರಮೇಣ ಎಕ್‌ಸ್ಟ್ರಾರ್ಡಿನರಿಯಾಗಿ ‘ಮೈಸೂರು ಅನಂತಸ್ವಾಮಿ’ ಎಂದೆನಿಸಿ ನಾಡಿನಾದ್ಯಂತ ಖ್ಯಾತನಾಮನಾಗಲಾರಂಭಿಸಿದಾಗ ನಮಗಾದ ಅಚ್ಚರಿ ಅಷ್ಟಿಷ್ಟಲ್ಲ.

ಮದುವೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಬೀಡುಬಿಟ್ಟು ಬೃಹತ್ತಾಗಿ ಸುಗಮ ಸಂಗೀತ ಕ್ಷೇತ್ರದಲ್ಲಿ ಬೆಳೆಯಲಾರಂಭಿಸಿದ ಈ ಮೈಸೂರು ಅನಂತಸ್ವಾಮಿ ಸಶ್ರಮ ಹಾಗೂ ಸ್ವಯಂ ಪ್ರತಿಭೆಯಿಂದ ಸಿಡಿಯುತ್ತ ಕೇವಲ ಕೆಲವೇ ವರುಷಗಳಲ್ಲಿ ಕಾಳಿಂಗರಾಯರ ನಂತರದವನೇ ಈ ಅನಂತು ಎಂಬಂತಾಗಿಬಿಟ್ಟ.

ಅತ್ತ ಮದರಾಸಿನ (ಚೆನ್ನೈ) ನೆಲಕ್ಕೆ ನೆಟ್ಟುಕೊಂಡ ಗುಣಸಿಂಗ್‌ ಕಾಲಕಳೆದಂತೆ ಕೀರ್ತಿಗಳಿಸುತ್ತ ಭದ್ರವಾಗಿ ಬೇರು ಬಿಟ್ಟು ಆಲದಮರದಂತಾಗಿ ಬಿಟ್ಟ. ೧೯೮೨ರ ಕಾಲಕ್ಕೆ ಸುಮಾರು ಎರಡು ಸಾವಿರದ ಇನ್ನೂರಕ್ಕೂ ಹೆಚ್ಚು ಸಂಖ್ಯೆಯ ವಿವಿಧ ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿ, “ಗಿನ್ನೆಸ್‌”ನ್ಲಲಿ ದಾಖಲಾತಿ ಪಡೆಯುವ ಮಟ್ಟವನ್ನು ಗುಣಸಿಂಗ್‌ ಮುಟ್ಟುತ್ತಾನೆಂದು ನಾವ್ಯಾರೂ ಗ್ರಹಿಸಿರಲಿಲ್ಲ.

ನನ್ನ ಪಾಲಿಗೆ ಅನೇಕ ವರುಷಗಳಳಿಂದ ಅಜ್ಞಾತನೆಂದೆನಿಸಿದ್ದ ಗುಣಸಿಂಗನನ್ನು ಇತ್ತೀಚಿಗೆ ಮೊನ್ನೆ ಮೊನ್ನೆಯಷ್ಟೇ ೭.೩೯೯ ರಂದು ಇಲ್ಲಿ ಬೆಂಗಳೂರಿನ ಪ್ರೆಸ್‌ ಕ್ಲಬ್ಬಿನಲ್ಲಿ ಭೇಟಿಯಾಗಿದ್ದೆ. ಅದೇ ಗುಣಸಿಂಗ, ಇಸವಿ ಐವತ್ತೊಂಬತ್ತರಲ್ಲಿ ಹೇಗಿದ್ದರನೋ ಪ್ರಸ್ತುತ ತೊಂಬತ್ತೊಂಬತ್ತರಲ್ಲೂ ಹಾಗೆಯೇ ಇದ್ದಾನೆ. ಅನಾಟಮಿಯಲ್ಲಿ ಆಟಮ್ಮಿನಷ್ಟೂ ವ್ಯತ್ಯಾಸವಾಗಿಲ್ಲ. ಅದೇ ಆಕೃತಿ, ಅದೇ ಚಹರೆ, ಮೊದಲೇ ಕಪ್ಪಗಿದ್ದ ಈ ಮನುಷ್ಯ ಮದ್ರಾಸಿನಲ್ಲಿದ್ದು  ಮತ್ತಷ್ಟು  ಕಪ್ಪಾಗಿದ್ದಾನೆಂಬುದನ್ನು ಬಿಟ್ಟರೆ ಬಾಹ್ಯ ರೂಪದಲ್ಲಿ ಬದಲಾವಣೆಯೇನಾಗಿಲ್ಲ. ಈ ವಿಚಾರಗಳಲ್ಲಿ ನಾನೂ ಅಷ್ಟೆ, ಗುಣನಂತೆಯೇ ಡಿಟೋ. ಆದರಂದು ನಮ್ಮಿಬ್ಬರ ಭೆಟ್ಟಿಗೆ ಕಾರಣನಾದ ಮಹಾಮಿತ್ರ ಸೋಮಣ್ಣ ಮಾತ್ರ ವಸಿ ಉಬ್ಬಿಕೊಂಡಿದ್ದಾನೆಂದೆನಿಸಿತು. ಹಿಂದಿನ ಆ ಒಂದಾನೊಂದು ಕಾಲದಲ್ಲಿ ಕೇವಲ ಗಾಳಿಯನ್ನು ಕುಡಿಯುತ್ತಲೇ ಗುಂಡಗಿದ್ದವನು ಸೋಮಣ್ಣ. ನಂತರ ಸಂತೋಷ ಸಂತೃಪ್ತಿ ಸಂಭ್ರಮದ ದಿನಗಳು ಪ್ರಾಪ್ತವಾದಾಗ ಆಗೀಗ ಎಂಬಂತೆ ಗುಂಡೇರಿಸುತ್ತಿದ್ದರೂ ಯಾವಾಗ ಎಲ್ಲಿ ಯಾರೊಡನೆ ಎಷ್ಟು ಕುಡಿಯಬೇಕೆಂಬುದರ ಲೆಕ್ಕಾಚಾರ ಸೋಮಣ್ಣನಿಗೆ ಕರಾರುವಕ್ಕಾಗಿ ಗೊತು. ಜೋಲ್ಟ್‌ ಆಗುವ ಮುನ್ನವೇ ಜಾಣಮರಿಯಂತೆ ಜಾರಿಕೊಳ್ಳುವುದು ಸೋಮಣ್ಣನ ಸ್ವಭಾವ. ಅಲ್ಲದೆ ಪ್ರೆಸ್‌ ಕ್ಲಬ್ಬು, ಸಿಟಿ ಇನ್‌ ಸ್ಟಿಟ್ಯೂಟು, ಕಾಸ್ಮಾಪಾಲಿಟನ್‌ ಕ್ಲಬ್ಬು, ಸೆಮಚುರಿಕ್ಲಬ್ಬು, ಇಂತಹ ಪ್ರತಿಷ್ಠಿತ ಕ್ಲಬ್ಬುಗಳಿಗಷ್ಟೇ ವಿಶೇಷವೆಂಬಂತೆ ವಿಸಿಟ್‌ ಕೊಡುವ ಸೋಮಣ್ಣ ಮೊದಲಿನಿಂದಲೂ ಅಷ್ಟೇ, ಬಾರ್ ಗಳಿಗೆ ಭೇಟಿ ಕೊಡುವುದನ್ನು ಬಿಲ್ಕುಲ್ಲಾಗಿ ಬಾರ್ಮಾಡಿದ್ದಾನೆ. ಹೀಗೆ ಈ ಸ್ವಭಾವದಲ್ಲೂ ಸೋಮಣ್ಣ ಒಬ್ಬ ಸೊಗಸುಗಾರ. ಮತ್ತೆ ಈ ವಿಚಾರದಲ್ಲಿ ಆಚಾರ ತಪ್ಪದಂತೆ ಎಚ್ಚರದಿಂದಿರುವ ಮಹಾ ಲೆಕ್ಕಾಚಾರದ ಮನುಷ್ಯ. ಅಲ್ಲದೆ ಈ ಸುರಾಪಾನ ಹಾಗೂ ಸೋಮಣ್ಣನ ಸಂಬಂಧದ ಬಗ್ಗೆ ಹೇಳುವುದಾದರೆ ಕೈಲಾಸಂ ಹೇಳಿರುವ ಸುಂದರವಾದ ಸಾಲು “Too much of drinking upsets others; But it sets me up” ಎಂಬುದು ಸೋಮಣ್ಣನಿಗೂ ಒಪ್ಪುತ್ತದೆ. ಬಹಿರಂಗದಲ್ಲಾಡುವಾಗ ‘ಬುರುಡೆ ದಾಸಯ್ಯನ ಬಂಧು’ ಎಂಬಂತೆ ಭಾಸವಾದರೂ ಇವನ ಅಂತರಂಗದಲ್ಲಿ ಅಡಗಿಕೊಂಡಿರುವುದು ಅಪೂರ್ವಶಕ್ತಿಯ ಅಗ್ನಿಪರ್ವತ. ಅದು ಸ್ಪೋಟಗೊಂಡಾಗಷ್ಟೇ ಸೋಮಣ್ಣನಲ್ಲಿರುವ ಸ್ಟಾಕು ಸಿಡಿಯುತ್ತದೆ.

ಈ ರೀತಿಯ ಅಪೂರ್ವ ಅಸಾಮಾನ್ಯ ಪ್ರತಿಭೆ ಇರುವುದರಿಂದಲೆ ಈತ ಎಂ.ಎ. ಪರೀಕ್ಷೆಯಲ್ಲಿ ಫಸ್ಟ ರ್ಯಾಂಕ್‌ ಗಳಿಸಿ ಚಿನ್ನದ ಪದಕವನ್ನು ಪಡೆದದ್ದು. ಮತ್ತೆ ಕೆನರಾಬ್ಯಾಂಕಿನಲ್ಲಿ ಹಂತಹಂತವಾಗೇರಿ ಅಸಿಸ್ಟೆಂಟ್‌ ಜನರಲ್‌ ಮ್ಯಾನೆಜರ್ ಪಟ್ಟವನ್ನು ಗಿಟ್ಟಿಸಿಕೊಂಡು ಮಿಂಚಿ ಮೆರೆದದ್ದು. ಜೊತೆಗೆ ಜನಪ್ರಿಯ ಚಿತ್ರಕಲಾವಿದನೂ ಆಗಿ ಕೀರ್ತಿಗಳಿಸಿದ್ದು. ಇದನ್ನೆಲ್ಲಾ ಪರಿಗಣಿಸಿದಾಗ ಯಾರಿಗಾದರೂ ಅನಿಸುವುದು ಇಷ್ಟೆ, “ಸೋಮಣ್ಣನ ಸಾಧನೆ ಸಾಮಾನ್ಯವಾದುದಲ್ಲ, ಅದು ಅಸಾಮಾನ್ಯವಾದುದು”

ಈ ಸೋಮಣ್ಣನ ಗುಣಗಾನ ಮಾಡುವ ಗುಂಗಿನಲ್ಲಿ ಗುಣಸಿಂಗನೇ ಗೌಣವಾಗುಳಿದನೆಂದು ಈಗ ನನ್ನ ಗಮನವನ್ನು ಅವನ ವಿಚಾರ ಸೆಳೆಯುತ್ತಿದೆ. ಹಿಂದಿನ  ಪುಟದಲ್ಲಿ ಪ್ರಸ್ತುತ ವಿಚಾರವನ್ನು ಪ್ರಸ್ತಾಪಿಸುತ್ತ ಪೇಳಿರುವಂತೆ ಪ್ರೆಸ್‌ ಕ್ಲಬ್ಬಿನ ಹೊರಾವರಣದ ಮೂಲೆಯೊಂದರ ಟೇಬಲ್ಲಿನ ಸುತ್ತ ಆ ಸಂಲಜೆ ಸೇರಿದ್ದೆವು. ನಾನು ಗುಣಸಿಂಗನ ಗಮನ ಸೆಳೆದು ಮಾತು ಮುಂದುವರೆಸಿದೆ.

“೧೯೮೨ರಲ್ಲೆ ಎರಡು ಸಾವಿರದ ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ಸಿಗದಿರುವ ನೀನು ಈ ತಹಲ್‌ವರೆವಿಗೆ ಅದೆಷ್ಟು ಚಿತ್ರಗಳಿಗೆ ಒಟ್ಟಾರೆಯಲ್ಲಿ ಸಂಗೀತ ನೀಡಿದ್ದೀ?” ಎಂದು ಕೇಳಿದೆ ಕುತೂಹಲದಿಂದ.

“ಲೆಕ್ಕ ನಾನಿಟ್ಟಿಲ್ಲ! ನಿರ್ದೇಶನವೂ ಸೇರಿದಂತೆ ಅದು ಮೂರೂವರೆ ಸಾವಿರವನ್ನೂ ಮೀರಿರಬಹುದ” ಎಂದವನಂದು ನಕ್ಕಾಗ ಮಿನುಗುತ್ತಿದ್ದ ಅವನ ಹಲ್ಲುಗಳಿಂದ ಮಿಂಚು ಸಿಡಿಯುತ್ತಿರುವಂತೆ ಕಂಡಿತು. ನಿಜಕ್ಕು ಯಮಕೆಯಂತಿರುವ ಈ ಸಿಂಗನದು ಎಂತಹ ಯಮಸಾಧನೆ!

“ಪ್ರಮಾಣವಾಗಿಯೂ ನೀನೊಬ್ಬ ಪವಾಡ ಪುರುಷನಯ್ಯ! ಆಯ್ತು, ನಾನೀಗ ನಿಮ್ಮ ಬಾಲಲೀಲೆಗಳನ್ನೆಲ್ಲಾ ಕುರಿತು ಬರೆದಿರೋ ‘ನಾ ಕಂಡ ಪುಂಡ ಪಾಂಡವರು’ ಪುಸ್ತಕ ರೂಪದಲ್ಲಿ ಪ್ರಕಟವಾಗ್ತಿದೆ. ನಿನ್ನದೊಂದು ಒಳ್ಳೆಯ ಚೆನ್ನಾಗಿರುವ ಫೋಟೋವನ್ನು ಕೂಡಲೇ ಕಳುಹಿಸು, ಲೇಖನಗಳ ಮಧ್ಯೆ ಸೇರಿಸುತ್ತೇನೆ” ಎಂದೆ.

“ನನ್ನ ‘ಚೆನ್ನಾಗಿರುವ’ ಚಿತ್ರ ಎಂದರೇನು?’ ಹುಬ್ಬೇರಿಸಿ ಕೇಳಿದ ಗುಣಸಿಂಗ.

“ನೆಗೆಟಿವ್ನೇ ಕಳ್ಸಯ್ಯಾ. ಅದನ್ನ ಹಾಗೇ ಪ್ರಿಂಟ್‌ ಮಾಡ್ಸದ್ರೆ ಈ ಗುಣಸಿಂಗ ಚೆನ್ನಾಗಿ ಬೆಳ್ಳಗೆ ಕಾಣಸ್ತಾನೋ ಕೇಶವ” ಎಂದು ಸೋಮಣ್ಣನೆಂದಾಗ ಪಕ್ಕೆ ಬಿರಿವಂತೆ ನಾವೆಲ್ಲ ನೆಕ್ಕೆವು. ಆಶ್ಚರ್ಯವೆಂದರೆ ಈ ಮಾತು ಕೇಳುತ್ತಲೇ ಎಲ್ಲರಿಗಿಂತ ಗಟ್ಟಿಯಾಗಿ ಗಹಗಹಿಸಿ ನಗುತ್ತಿದ್ದವನು ಗುಣಸಿಂಗನೆ! ಇದು ಈ ಗುಣಸಿಂಗನ ಗುಣ.

ಇಷ್ಟೆಲ್ಲಾ ನಡೆಯುವಷ್ಟರಲ್ಲಿ ಸೋಮಣ್ಣನಿತ್ತಿದ್ದ ಸೂಚನೆಯನ್ವಯ ಐಸ್‌ ಕೋಲ್ಡ ಬಿಯರ್ ತುಂಬಿದ್ದ ಬಾಟಲಿಗಳೊಡನೆ ಅರ್ಥಾತ್‌, ಪುಣ್ಯತೀರ್ಥ ತುಂಬಿದ್ದ ಶೀಶೆಗಳೊಡನೆ ಬೇರರ್ ಪ್ರತ್ಯಕ್ಷನಾದ.

ಈ ತೀರ್ಥವನ್ನು ಅನುಗುಣವಾಗಿ ನಮ್ಮೆಲ್ಲರ ಮುಂದಿದ್ದ ಬಟ್ಟಲುಗಳಿಗೆ ಸುರುವಿದ ಬೇರರ್ ಗುಣಸಿಂಗನ ಮುಂದಿದ್ದ ಬಟ್ಟಲಿಗೂ ಬಸಿಯಲು ಬಾಗುತ್ತಲೇ ಆ ಬಟ್ಟಲಿನ ಮೇಲೆ ಕೈಯಿಟ್ಟು ಗುಣಸಿಂಗ್‌” ನೋ ನೋ … ಥ್ಯಾಂಕ್ಯೂ” ಅಂದ. ಅರ್ಥವಾಗದ ನಾನು ‘ಏಕಯ್ಯಾ? ಎಂದೆ.

“ಗುಂಡಿಗೆ ಗಟ್ಟಿಯಾಗಿರಲೆಂದು ಗುಂಡಿಗೆ ಗುಂಡು ಹೊಡೆದು ಗುಡ್‌ ಬೈ ಹೇಳಿ ಸಂವತ್ಸರದ ಮೇಲಾಯ್ತು ಕೇಶವ, ಈ ಸುಡುಗಾಡು ಸುರೆಯ ಸಹವಾಸಕ್ಕೆ ಸಲಾಮ್‌’ ಎನ್ನುತ್ತ ಬಾಗಿ ಕೈ ಜೋಡಿಸಿದ.

ಗುಣಸಿಂಗನಲ್ಲಿ ಇದೆಂತಹ ಬದಲಾವಣೆ! ನಾವು ಬೀರನ್ನ ಬಸಿದುಕೊಳ್ಳುತ್ತಿದ್ದರೆ ಅವನು ನೀರನ್ನು ಚಪ್ಪರಿಸುತ್ತಿದ್ದ.

“ಅಷ್ಟು ಚೆನ್ನಾಗಿ ಕುಡೀತಿದ್ದ ನೀನು ಈ ಚೆಂದಕ್ಕೆ ಇಲ್ಲೀಗಾಕ್ಬಂದೆ?’ ಎಂದ ಸೋಮಣ್ಣನನ್ನು ದಿಟ್ಟಿಸಿದ ಗುಣಸಿಂಗ ಗಕ್ಕನೆ ನನ್ನತ್ತ ತಿರುಗಿ, “ಈ ಬೇಕೂಫನ್ನ ಬಹಳ ವರುಷಗಳಿಂದ ಭೇಟಿಯಾಗಿರ್ಲಿಲ್ಲಾ ನೋಡು, ಈಗ ನೋಡ್ಬೇಕಂತ ಬಯಕೆಯಾಯ್ತು, ಬಂದೆ” ಎಂದು ನಕ್ಕ.

“ಅದಾಯ್ತು ಮಹರಾಯ, ಮೊದ್ಲೀಗ ನಿನ್ನ ಫೋಟೋನ್ನ ಕಳ್ಸು” ಎಂದೆ.

“ಆಯ್ತು, ಬಸ್ಸಿಗೆ ಲೇಟಾಗ್ತಿದೆ, ಬರ್ತೀನಿ” ಎಂದವನೆ ನಮ್ಮೆಲ್ಲರಿಗೂ ಬೈಬೈ ಮಾಡಿ ಹೊರಟುಹೋದ. ಅಷ್ಟೆ, ಈ ತಹಲ್‌ ವರೆವಿಗೆ ಅವನು ತನ್ನ ಚಿತ್ರಗಳನ್ನು ಕಳಿಸಿಲ್ಲ. ಸೋಮಣ್ಣನಿಗೆ ಫೋನಾಯಿಸಿದೆ. “ಬಿಟ್ಟಿಡು, ಅವನು ಹಾಗೆನೇ, ನಿರ್ಲಿಪ್ತ ಮನುಷ್ಯ” ಎಂದವನೆ ಫೋನನ್ನು ಕೆಳಗಿಟ್ಟ. ಹೀಗಾಗಿ ಈ ಪುಸ್ತಕದಲ್ಲಿ ಪಾಠಕ ಮಹಾಶಯರಾದ ನೀವು ಗುಣಸಿಂಗನ ಮುದ್ದುಮೋರೆಯನ್ನು ಚಿತ್ರರೂಪದಲ್ಲಿ ಕಾಣುವುದು ಸಾಧ್ಯವಿಲ್ಲ. ಇದು ನಿಜಕ್ಕೂ ನಿಮ್ಮ ದೌರ್ಭಾಗ್ಯ.

ಮತ್ತೆ ಪುಂಡ ಪಾಂಡವರ ಪೈಕಿ ಒಬ್ಬನೆಂದೆನಿಸಿರುವ ಬಲ್ಲಾಳನ ಬಗ್ಗೆ ಒಂದಿಷ್ಟು ಹೇಳದಿದ್ದರೆ ಈ ಪುಸ್ತಕಕ್ಕೆ ಹೊಳಹು ಸಿಗುವುದಿಲ್ಲ. ಈ ಕಾರಣದಿಂದಾಗಿ ಇವನ ಬಗ್ಗೆಯೂ ಇನ್ನೊಂದಿಷ್ಟು ಮಾತು.

ಇತ್ತೀಚೆಗಷ್ಟೆ, ಅಂದರೆ ಕಳೆದ ತಿಂಗಳು ಬ್ರೈನ್‌ ಹೆಮರೇಜಿನ ಜೊತೆಗೆ ಪಾರ್ಶ್ವವಾಯು ಪೀಡಿತನೂ ಆಗಿ ಪರಿತಪಿಸುತ್ತ ಪವಡಿಸಿರುವ ಲಕ್ಷ್ಮಿನಾರಾಯಣ ಬಲ್ಲಾಳನನ್ನು ಕಂಡು ಪ್ರಸ್ತುತ ಅವನ ಸ್ಥಿತಿಯನ್ನರಿಯಲು ಅವರ ಮನೆಗೆ ಹೋಗಿದ್ದೆ. ಇದ್ದ. ಇದ್ದ ಎಂದರೆ ಹಾಸಿಗೆ ಕಚ್ಚಿ ಮಲಗಿದ್ದ. ಪಕ್ಕವೆ ಕುಳಿತು ಅವನ ಪಾರ್ಶ್ವವನ್ನು ದಿಟ್ಟಿಸಿದೆ.

ಅರಡಿಯ ಅಜಾನುಬಾಹು ಬಲ್ಲಾಳಿ ನೀಳವಾಗಿ ಮಂಚದುದ್ದಕ್ಕೂ ಸೆಟೆದುಕೊಂಡಿದ್ದು, ಮಡಿಚಿದ್ದ ಬಲಮೊಣಕೈ ಮೇಲೆ ತಲೆಯನ್ನಿರಿಸಿಕೊಂಡು ಮಲಗಿದ್ದುದನ್ನು ಕಂಡಾಗ, ಏಕೋ ಏನೋ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ನೆನಪು ಒತ್ತರಿಸಿಕೊಂಡು ಬಂತು.

“ಬಲ್ಲಾಳ, ಲೋ ಬಲ್ಲಾಳಿ” ಎಂದು ಗಟ್ಟಿಯಾಗಿ ಕುದುರೆ ಕೆನೆಯುವಂತೆ ಕೂಗಿದೆ. ಕೇಳಿಸಲಿಲ್ಲ. ಪಾದದ ಬಳಿ ಪದ್ಮಾವತಿಯಂತೆ ಕುಳಿತಿದ್ದ ಇವನ ಮಡದಿ ಶ್ರೀಲಕ್ಷ್ಮಿಯವರು “ಸ್ವಲ್ಪ ತಾಳಿ” ಎಂದವರೆ ಕೇಳಿಸುವ ಯಂತ್ರದ ಮೆಶಿನ್ನನ್ನು ಅಮುಕಿ ಚಾಲು ಮಾಡಿ “ಈಗ ಕರೀರಿ” ಎಂದರು. ಮತ್ತೊಮ್ಮೆ ಕೂಗಿದೆ.

ಬಲ್ಲಾಳ ಕಣ್ಣುಬಿಟ್ಟ. ಕ್ಷಣ ಕಾಲ ನನ್ನನ್ನೇ ನೆಟ್ಟದೃಷ್ಟಿಯಿಂದ ನೋಡಿದ. ನಿಧಾನವಾಗಿ ತಲೆದೆಸೆಯಿಂದ ಬಲಗೈಯನ್ನು ಬಿಡಿಸಿಕೊಡು ನನ್ನತ್ತ ಚಾಚಿದ. ನಡುಗುತ್ತಿದ್ದ ಅವನ ಹಸ್ತದೊಳಗೆ ನನ್ನ ಹಸ್ತವನ್ನಿಟ್ಟೆ. ಬಿಗಿಯಾಗಿ ನನ್ನ ಹಸ್ತವನ್ನು ತನ್ನ ಮುಷ್ಠಿಯಲ್ಲಿ ಮಡಿಚಿರಿಸಿಕೊಂಡ ಬಲ್ಲಾಳ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಉಕ್ಕುಶರೀರಿಯಾಗಿದ್ದ ಬಲ್ಲಾಳ ಹೀಗೆ ಊನನಾಗಿ ಉಪಟಳಕ್ಕೀಡಾಗಿರುವುದನ್ನು ಕಂಡ ನನಗೆ ದುಃಖ ಉಮ್ಮಳಿಸಿಕೊಂಡು ಬಂತು. ತೇವಗೊಂಡ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಪಕ್ಕಕ್ಕೆ ತಿರುಗಿದೆ. ಬಲ್ಲಾಳನ ಪತ್ನಿ ಲಕ್ಷ್ಮಿಯವರು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದರು.

ಸಂದಿಗ್ಧ ಸ್ಥಿತಿಯಲ್ಲಿರುವ ಸ್ನೇಹಿತನೊಬ್ಬನಿಗೆ ಸಾಂತ್ವನದ ಮಾತುಗಳನ್ನಾಡಿ ಸಂತೈಸಲು ಹೋಗಿದ್ದ ನಾನೇ ಸಂಕಟವನ್ನು ವ್ಯಕ್ತಿಪಡಿಸುವುದು ಸರಿಯಲ್ಲವೆಂಬರಿವು ಮೂಡುತ್ತಲೇ ಸನ್ನಿವೇಶದ ದಿಕ್ಕು ಬದಲಿಸಲು ಯತ್ನಿಸಿದ ನಾನು ಬಲ್ಲಾಳನ ಮೈದಡುವುತ್ತ “ಹೇಗಿದ್ದೀಯೋ ರಾಜ?, ಬಲ್ಲಾಳ ಸೀರಿಯಸ್ಸು ಅಂತ ಯಾರೋ ಅಂದದ್ನ ಕೇಳಿ ಓಡೋಡಿ ಬಂದ್ನಲ್ಲಾ! ಬಟ್‌ ಯೂ ಆರ್ ಲುಕಿಂಗ್‌ ಬ್ರೈಟ್‌” ಎನ್ನುತ್ತ ಅವನ ಭುಜ ಸವರಿದೆ.

ನಾನಂದ ಈ ಮಾತುಗಳನ್ನು ಕೇಳುತ್ತಲೇ ಮುದುಡಿಕೊಂಡಿದ್ದ ಈ ಮಿತ್ರನ ಮುಖ ಮೊರದಗಲವಾಯ್ತು. ಅರೆ ಮಡಿಚಿಕೊಂಡಿದ್ದ ಕಿರುಗಣ್ಣುಗಳನ್ನು ಅರಳಿಸಿಕೊಂಡ ಬಲ್ಲಾಳ ಏದುತ್ತಲೇ ದೇಹವನ್ನು ಎಳೆದುಕೊಂಡು ದಿಂಬಿಗೊರಗಿ ‘ರಿಯಲಿ? ಬುಲ್‌ ಟಿನ್‌ ಬಿಡ್ಬೇಡ್ವೋ ಬಡ್ಡೀಕೆ’ ಎಂದ ತನ್ನ ಮಾಮೂಲಿ ಭಾಷೆಯಲ್ಲಿ.

‘ಖಂಡಿತ ಇಲ್ವೋ, ನಾನ್ಯಾಕೆ ಬುಲ್‌ ಟಿನ್‌ ಬಿಡ್ಲಿ? ಯೂ ಆರ್ ಲುಕಿಂಗ್‌ ಫೈನ್‌’ ಎಂದರೆ ದೃಢವಾದ ಧ್ವನಿಯಲ್ಲಿ.

‘ಆದ್ರೆ ಈ ಹಾಳಾದ್ದು ಎಡಭಾಗ ಪೂರ್ತಾ ಎಕ್ಕುಟ್ಟೋಗಿದೆಯೋ ಕೇಶವ, ಕೈ ಕಾಲ್ನ ಎತ್ತಾಡ್ಸೋಕ್ಕೆ ಆಗೋಲ್ಲಾ’ ಎಂದು ಹಲುಬಿದ ಬಲ್ಲಾಳ.

‘ಅವುಗಳನ್ನ ಎತ್ತಾಡ್ಸಿ ಏನ್ಮಾಡ್ಬೇಕಾಗಿದೆ ನೀನು?, ಕೊಪ್ಪಲ್ನೋರ್ಮೇಲೆ ಕುಸ್ತಿ ಮಾಡ್ಬೇಕೇನು? ಎಂದೆ.

ಕೇಳಿದ ಬಲ್ಲಾಳ ಹೊಟ್ಟೆ ಹಿಡಿದುಕೊಂಡು ಗಹಗಹಿಸಿ ನಕ್ಕ.

ಪಕ್ಕದಲ್ಲಿದ್ದ ಅವನ ಪತ್ನಿ ಉತ್ಸಾಹ ಸೂಸುತ್ತ, ‘ಸದ್ಯ, ಈಗ್ಲಾದ್ರೂ ನಕ್ರಲ್ಲಾ. ಹೀಗಿವರು ನಕ್ಕದ್ದನ್ನ ಕಂಡು ಅದೆಷ್ಟು ದಿನಗಳಾಗಿತ್ತೊ! ಹೀಗೆ ಮಾತಾಡ್ತಿರಿ. ಬಿಸಿಬಿಸಿಯಾಗಿ ಬಾದಾಮಿ ಹಾಲು ತಂದ್ಕೊಡ್ತೀನಿ’ ಎಂದವರೆ ನಾನು ಬೇಡವೆನ್ನುತ್ತಿದ್ದರೂ ಕೇಳದೆ ದಡದಡನೆ ಒಳನಡೆದರು.

ಲಕ್ವಾ ಹೊಡೆದು ಎಡಭಾಗ ಬೆಂಡಾಗಿದ್ದರೂ ನಾಲಿಗೆ ಮಾತ್ರ ನುಲಿಚಿಕೊಳ್ಳದೆ ನೆಟ್ಟಗೇ ಇರುವುದರಿಂದ ಬಲ್ಲಾಳನಾಡುತ್ತಿದ್ದ ಮಾತುಗಳು ಸ್ಷಷ್ಟವಾಗಿಯೇ ಇತ್ತು. ತುಸುಗೆಲುವಾದ ಬಲ್ಲಾಳ ‘ಮತ್ತೇನಯ್ಯಾ ಸಮಾಚಾರ? ಪಾಪ ಅನಂತು ಹೋಗ್ಬಿಟ್ಟ. ಆ ಸೋಮು, ಗುಣಸಿಂಗ ಹೇಗಿದ್ದಾರಯ್ಯಾ? ನೋಡ್ಬೇಕೂಂತ ಅನ್ನಸ್ತಿದೆಯೋ. ಈ ಬಡವ, ಐ ಮೀನ್‌ ಭಡವ ಬಲ್ಲಾಳನ್ನ ಭೇಟಿಯಾಗೋಕ್ಕೆ ಬಿಡುವು ಮಾಡ್ಕೊಂಡು ಬರೋಕ್ಹೇಳು. ಬರ್ತಿದ್ಹಾಗೆ ಬಲ್ಲಾಳಿ ಬ್ಲೂಬೈಂಡ್‌ ಬುಕ್ಕನ್ನ ಚಾಚಿ ಬೆದರಸ್ತಾನೇಂತ ಹೆದರ್ಕೊಂಡಾರು’ ಎಂದು ಮತ್ತೊಮ್ಮೆ ಗಹಗಹಿಸಿ ನಕ್ಕ.

ನಗುತ್ತಿದ್ದ ನಾನು ‘ಅದಾಯ್ತು, ಈಗ ಇನ್ನೊಂದು ಮುಖ್ಯ ವಿಚಾರ’ ಎಂದೆ. ಕಿವಿ ನಿಮಿರಿಸಿಕೊಂಡ ಬಲ್ಲಾಳ, ‘ಏನೂ’ ಅಂದ ಕುತೂಹಲದಿಂದ. ‘ನಾನು ಕನ್ನಡಪ್ರಭದಲ್ಲಿ ಬರೆದ “ನಾ ಕಂಡ ಪುಂಡ ಪಾಂಡವರು” ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗ್ತಿದೆ. ಅದರದಲ್ಲಿ ಹಾಕೋಕ್ಕೆ ನಿನ್ನ ಎರಡು ಚಿತ್ರಗಳು ಬೇಕು, ಅರ್ಜೆಂಟು” ಅಂದೆ.

‘ಅಷ್ಟೇ ತಾನೆ? ಖಂಡಿತ ಒಂದೆರಡು ದಿನಗಳಲ್ಲೇ ಕಳಸ್ತೀನಿ. ಹಾರ್ಟಿಲಿ ಹೇಳೋದಾದ್ರೆ ಆ ಆರ್ಟಿಕಲ್ಸು ನನಗೆ ತುಂಬ ಖುಷಿ ಕೊಡ್ತು ಕೇಶವ. ಎಕ್ಸಲೆಂಟ್‌. ಅವುಗಳ ಕಟಿಂಗ್ಸನ್ನ ಅಮೇರಿಕಾದಲ್ಲಿರೋ ನನ್ನ ಮಗಳಿಗೂ ಕಳಿಸಿಕೊಟ್ಟೆ. ಅಲ್ಲೂ ತುಂಬ ಜನ ಓದಿ ನಕ್ಕು ನಲಿದಾಡಿದ್ರಂತೆ’ ಎಂದ ಹೊಸ ಹುರುಪಿನಿಂದ.

ಆ ಹೊತ್ತಿಗೆ ಬಲ್ಲಾಳನ ಪತ್ನಿ ತಂದಿತ್ತ ಬಾದಾಮಿ ಹಾಲನ್ನ ಬಸಿದುಕೊಂಡು, ಬಲ್ಲಾಳನಿಗೆ ಬೈಬೈ ಹೇಳಿ ಬೆಂಗಳೂರಿಗೆ ಬಂದುಬಿಟ್ಟೆ.

ದಿನವೆರಡು ಕಳೆಯುತ್ತಲೇ ಬಲ್ಲಾಳ ವಚನಭ್ರಷ್ಟನಾಗದೆ ತನ್ನೆರಡು ಚಿತ್ರಗಳನ್ನು ಕಳುಹಿಸಿಕೊಟ್ಟ. ಅದೇ ಗುಣಸಿಂಗ ‘ನಿಮ್ಮ ಮೇಲಾಣೆ, ಈ ಪ್ರೆಸ್‌ ಕ್ಲಬ್ಬಿನ ಮೇಲಾಣೆ, ಇಲ್ಲಿ ಕಲುಡಿಯುತ್ತಿರುವವರೆಲ್ಲರ ಮೇಲಾಣೆ, ಊರಿಗೆ ತಲುಪುತ್ತಲೇ ನನ್ನೆರಡು ಚಿತ್ರಗಳನ್ನು ನಿನಗೆ ಕಳುಹಿಸಿಕೊಡುತ್ತೇನೆ’ ಎನ್ನುತ್ತ ಟೇಬಲ್ಲನ್ನು ತಟ್ಟಿ ಮದರಾಸಿಗೆ ರೈಲು ಹತ್ತಿದವನು ಇನ್ನೂ ತನ್ನ ಚಿತ್ರಗಳನ್ನು ಕಳುಹಿಸುವುದರಲ್ಲಿದ್ದಾನೆ.

ತನ್ನ ವಿಚಾರಗಳುಳ್ಳ ಒಂದು ಪುಸ್ತಕದಲ್ಲಿ ತನ್ನ ಚಿತ್ರಗಳೂ ಅಚ್ಚಾದರೆ ತನ್ಮೂಲಕ ತನಗೆ ಇನ್ನಷ್ಟು ಪ್ರಚಾರವೂ ಸಿಗಬಹುದೆಂಬ ವಿವೇಚನೆಯೇ ಈ ಗುಣಸಿಂಗನಿಗಿಲ್ಲ. ಈ ಕಾಲಕ್ಕಾಗಲೇ ಸಾಕೆನಿಸುಗವಷ್ಟು ಜನಪ್ರಿಯತೆಯನ್ನು ದೇಶದಾದ್ಯಂತವೂ ಗಳಿಸಿರುವ ಗುಣಸಿಂಗನಿಗೆ ಯಾವ ಪ್ರಚಾರವೂ ಹೊಸದಾಗಿ ಬೇಕಿಲ್ಲವೆನ್ನಿ. ಈ ಕಾರಣದಿಂದಲೇ ಇರಬೇಕು, ಇಂತಹ ವಿಚಾರಗಳು ಬಂದಾಗಲೆಲ್ಲಾ ರೀಲು ಸುತ್ತುವ ಜನರೊಡನೆ ಸದಾಕಾಲವು ಇರುವ ಗುಣಸಿಂಗ್‌ ಘನವಾಗಿ ಒಮ್ಮೆಮ್ಮೆ ರೈಲು ಬಿಡುತ್ತಾನೆ.

ಒಟ್ಟಿನಲ್ಲಿ ನನಗೆ ಬಲು ಇಷ್ಟವೆನಿಸಿರುವ ಈ ವಿಶಿಷ್ಟರನ್ನು ಕುರಿತು ಎಷ್ಟು ಬರೆದರೂ ಇನ್ನಷ್ಟು ಬರೆಯಬೇಕು ಎಂದೇ ಅನ್ನಿಸುತ್ತದೆ. ಕಾರಣ, ನನ್ನ ಈ ಬರಹಗಳಲ್ಲಿ ಬರುವ ಒಬ್ಬೊಬ್ಬರ ಬದುಕೂ ಸ್ವಾರಸ್ಯಮಯವಾದದ್ದು. ಬರೆಯುತ್ತ ಹೋದರೆ ಬೃಹತ್‌ ಗ್ರಂಥವಾದೀತು.

ಮತ್ತೆ ಈ ‘ಪುಂಡ ಪಾಂಡವರೆಲ್ಲಾ ಮಹಾಪ್ರಚಂಡರು. ಇವರೆಲ್ಲ ತಂತಮ್ಮ ಕ್ಷೇತ್ರದಲ್ಲಿ ತೋರಿದ ಪ್ರತಿಭೆ , ಗಳಿಸಿದ ಗೌರವ, ಪಡೆದ ಜನಪ್ರಿಯತೆ, ಏರಿದ ಸ್ಥಾನ; ಇವನ್ನು ಪರಿಗಣಿಸಿದಾಗ ಅಚ್ಚರಿಯಾಗುವುದಲ್ಲದೆ ಈ ಒಬ್ಬೊಬ್ಬರ ಬಗ್ಗೆಯೂ ಅಭಿಮಾನ ಮೂಡುತ್ತದೆ. ನನಗಂತೂ ಇಂಥವರು ನನ್ನವರು ಎಂದು ಹೇಳಿಕೊಳ್ಳುವುದಕ್ಕೇ ಹೆಮ್ಮೆಯಾಗುತ್ತದೆ.

ಈ ಸರಳ ಸುಂದರ ಸ್ನೇಹಪರ ವ್ಯಕ್ತಿಗಳ ತಾರುಣ್ಯದ ಬದುಕಿನ ಚಿತ್ರಣವನ್ನು ಹೆಣೆದಾಗ ಸರಸ ಸಾಹಿತ್ಯ ಶೈಲಿಗೆ ಇನ್ನಷ್ಟು ಸೊಗಡು ಸಲ್ಲಲಿ ಎಂಬ ಸದುದ್ದೇಶದಿಂದ ಸನ್ನಿವೇಶಗಳ ರಚನೆಯಲ್ಲಿ ಸಲ್ಲದ ಸ್ವಾತಂತ್ಯ್ರವನ್ನು ವಹಿಸಿದ್ದೇನೆ. ಅಷ್ಟೇ ಹೊರತು ಇದರಲ್ಲಿರುವ ವ್ಯಕ್ತಿಗಳು ಗಳಿಸಿರುವ ಕೀರ್ತಿಕಳಶದ ಮೆರಗು ಮಾಸುವಂತೆ ಮಸಿ ಹಚ್ಚುವ ಯತ್ನವನ್ನು ನಾನಿಲ್ಲಿ ಖಂಡಿತವಾಗಿಯೂ ಮಾಡಿಲ್ಲ. ಅಬ್ಬಬ್ಬಾ ಅಂದರೆ ಪುಂಡ ಪಾಂಡವರ ಪೈಕಿ ಯಾರೊಬ್ಬರಿಗಾದರೂ ಸರಿಯೆ, ಇವರು ಗಳಿಸಿರುವ ಗರಿಮೆ, ಗೌರವ ಹಿರಿಮೆಗಳಿಗೆ ತಟ್ಟುವ ದೃಷ್ಟಿಯ ಬಡಿತವನ್ನು ತಡೆಯುವ ಬೊಟ್ಟಂತೆ ನನ್ನ ಈ ಲೇಖನಗಳು ಪರಿಣಾಮ ಬೀರಿದರೆ ಸಾಕು, ನನಗಷ್ಟೆ ಸಂತೃಪ್ತಿ ಸಂತೋಷ.

ಮೂಲತಃ ನಿಂದಾಸ್ತುತಿಯಲ್ಲಿರುವ ಈ ಲೇಖನಗಳನ್ನು ಅಮೂಲಾಗ್ರವಾಗಿ ಓದಿ ಆನಂದತುಂದಿಲರಾಗಿ ಮೆಚ್ಚಿ ಬೆನ್ನು ಚಪ್ಪರಿಸಿದ ಪುಂಡ ಪಾಂಡವರಿಗೆ ನನ್ನ ವಂದನೆಗಳು. ಅವರ ಔದಾರ್ಯ ಮನೋಭಾವವನ್ನು ನಾನೆಂದೂ ಮರೆಯಲಾರೆ.

ಮತ್ತೆ ನನ್ನ ಅಚ್ಚುಮೆಚ್ಚಿನ ದಿನಪತ್ರಿಕೆ ‘ಕನ್ನಡಪ್ರಭ’ದಲ್ಲಿ ಈ ಲೇಖನಗಳನ್ನು ಚಿತ್ರಗಳ ಸಹಿತ ಧಾರಾವಾಹಿಯಾಗಿ ಪ್ರಕಟಿಸಿ ಪ್ರೋತ್ಸಾಹಿಸಿದ ಪೂಜ್ಯ ವೈ.ಎನ್‌.ಕೆ. ಅವರನ್ನು ನಾನು ಸದಾ ಸ್ಮರಿಸುತ್ತೇನೆ.

ಅಲ್ಲದೆ ಈ ‘ನಾ ಕಂಡ ಪುಂಡ ಪಾಂಡವರು’ ಪುಸ್ತಕಕ್ಕೆ ರಕ್ಷಾಕವಚವೆಂಬಂತೆ “ಪುಂಡನೊಬ್ಬನ ಪ್ರಸ್ತಾಪ” ವೆಂಬ ವಿಮರ್ಶಾತ್ಮಕ ಲೇಖವನ್ನಿತ್ತಿರುವ ಹಾಗೂ ಪುಂಡ ಪಾಂಡವರ ಮುಖಂಡನೆಂದೇ ಹಿಂದೆ ಖ್ಯಾತನಾಮನಾಗಿದ್ದ ಸೋಮಣ್ಣ ಆಲಿಯಾಸ್‌ ಹೆಚ್‌.ಜಿ. ಸೋಮಶೇಖರರಾಯನಿಗೆ ನಾನು ಚಿರ ಋಣಿ.

ಮತ್ತೆ, ಈ ಲೇಖನಗಳನ್ನೋದಿ “ಎಕ್ಸಲೆಂಟ್‌, ದೇ ಮೇಕ್‌ ಎ ರೇಸೀ ರೀಡಿಂಗ್‌” ಎಂದು ಮೆಚ್ಚಿ ನುಡಿಯುವುದರ ಜೊತೆಗೆ ಮುದ್ದಾದ ಮುನ್ನುಡಿಯನ್ನು ಬರೆದು ತನ್ಮೂಲಕ ಆಶೀರ್ವಚನ ನೀಡಿರುವ ಹೆಸರಾಂತ ಲೇಖಕ ವಿಮರ್ಶಕ ಡಾ|| ಎಚ್‌.ಕೆ. ರಂಗನಾಥ್‌ ಅವರನ್ನು ಹೆಮ್ಮೆಯಿಂದ ಎಂದೆಂದೂ ನೆನೆಯುತ್ತೇನೆ.

ಕೊನೆಯದಾಗಿ, ಈ ಪುಸ್ತಕದ ಪ್ರಕಟಣೆಯ ಜವಾಬ್ದಾರಿಯನ್ನು ತುಂಬು ಉತ್ಸಾಹದಿಂದ ಹೊತ್ತಿರುವ ಸುದರ್ಶನ ಪ್ರಕಟಣಾಲಯದ ಶ್ರೀ ತಾ.ರಾ. ನಾಗರಾಜ, ಇವರಿಗೂ ನನ್ನ ವಂದನೆಗಳು.

ಇತಿ ತಮ್ಮವ
ಬಿ.ಎಸ್‌. ಕೇಶವರಾವ್
ದಿನಾಂಕ: ೨೨.೫.೧೯೯೯
ಬೆಂಗಳೂರು.