ಕಾಳಿಂಗರಾಯರ ಜೀವನ ಹಾಗೂ ಗಾಯನ ಸಂಸ್ಕೃತಿಯನ್ನು ಅಕ್ಷರಕ್ಕಿಳಿಸಿ ಕನ್ನಡಿಗರ ಆದರ ಅಭಿಮಾನಗಳಿಗೆ ಪಾತ್ರರಾದ ಬಿ.ಎಸ್‌. ಕೇಶವರಾವ್‌ ಅವರು ತೀರ ಬೇರೆ ಬಗೆಯ ಲೇಖನಮಾಲಿಕೆಯನ್ನು ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಬರೆದಿದ್ದು ಕುತೂಹಲಕಾರಿ ಎನಿಸಿತು. ಪ್ರಾಸಬದ್ಧವಾದ ಕುಣಿಕುಣಿಯುವ ಕನ್ನಡ ಅವರ ಲೇಖನಿಯ ವೈಶಿಷ್ಟ್ಯ. ಲೇಖನಗಳ ಹೂರಣವಾದರೂ ಹಳೆಯ ಮೈಸೂರಿನ ಹಿಂದಿನ ಜೀವನದ ಬಗೆಯಲ್ಲಿ  ಬೆರೆತುಹೋಗಿದ್ದ ಪುಂಡರ ತಂಡದ ಕತೆ. ಆ ಪುಂಡರಾದರೂ ವಿನೋದವನ್ನು ಉಕ್ಕಿಸುವ ಹುಡುಗಾಟಿಕೆಯ ಸಭ್ಯರು.

ಲೇಖನ ಮಾಲಿಕೆಯ ಶೀರ್ಷಿಕೆ “ನಾ ಕಂಡ ಪುಂಡ ಪಾಂಡವರು”. ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ನಾಯಕನಟ ಹೆಚ್‌.ಜಿ. ಸೋಮಶೇಖರ ರಾವ್‌, ಗುಣಸಿಂಗ್‌, ಸಾಹಿತಿ ಕೇಶವರಾವ್‌, ಇವರಿಗೆ ತನ್ನ ಹೋಟೆಲಿನಲ್ಲಿ ಮೇವು ಉಡಿಸಿ ಕೃತಾರ್ಥರಾದ ಲಕ್ಷ್ಮಕೀನಾರಾಯಣ ಬಲ್ಲಾಳ, ಇವರೆಲ್ಲರ ಅತ್ಯಂತ ಆಕರ್ಷಕವಾದ ಲೀಲಾವಳಿಯ ಲೇಖನ ಮಾಲಿಕೆ ಇದು. ಘಟನೆಗಳ ಒತ್ತಡ ವಿವರಣೆಯ ತೀವ್ರತೆಯೊಂದಿಗೆ ಬೆರೆತು ಓದುಗನ ಮನಸ್ಸಿನಲ್ಲಿ ಮೂಡಿಸುವ ಚಿತ್ರಗಳು ಮರೆಯಲಾರದಂಥವು.

ಪಾರ್ಕಿನಲ್ಲಿ ಕುಳಿತಿದ್ದ ಆರ್.ಕೆ. ನಾರಾಯಣ್‌ ಅವರನ್ನು ತರುಬಿದ್ದು, ನಡುರಾತ್ರಿಯಲ್ಲಿ ಮಾಧ್ವ ಹಾಸ್ಟೆಲ್ಲಿನ ವೆಂಕಟಯ್ಯನನ್ನು ಎಚ್ಚರಿಸಿದ್ದು, ಶಿವಮೊಗ್ಗ ಸುಬ್ಬಣ್ಣನ ಬೆನ್ನ ಮೇಲೆ ಪಂಡಿತ ನೆಹರು ಛಾಪು ಹೊಡೆದು ಆತ ಹಾಡಿದ ‘ಜನಗಣಮನ’ವನ್ನು ಮೆಚ್ಚಿ ಶಹಬಾಸ್‌ಗಿರಿಕೊಟ್ಟದ್ದು, ಆ ಸಂದರ್ಭಕ್ಕಾಗಿ ಮಡಿಮಾಡಿದ್ದ ಬಟ್ಟೆಗಳನ್ನು ಎರವಲು ಕೊಟ್ಟಿದ್ದ ಅಗಸನಾಗಣ್ಣ ಸುಬ್ಬಣ್ಣನ ಗಾಯನಕ್ಕೆ ಮಾರು ಹೋಗಿ ಎರಡು ರೂಪಾಯಿ ಹಿಂತಿರುಗಿಸಿದ್ದು, ತಿಂಡಿಪೋತ ಸೋಮು, ಕೆನರಾಬ್ಯಾಂಕಿನ ಸೋಮಶೇಖರ ರಾವ್‌, M.A. ಆಗಿ ಕೊಡಮಾಡಿದ Shock treatment, ಅನಂತ ಸ್ವಾಮಿಯ ವಿವಾಹ ಪ್ರಹಸನ, ಆತನ ಅಂತ್ಯ ದುರಂತ, ಹೀಗೇ ಇವು ಲೇಖನ ಮಾಲೆಯ ಉದ್ದಕ್ಕೂ ಬೆಳಬೆಳಗುವ ಸಾಲುದೀಪ.

ಕೇಶವರಾಯರ ಛಾಯಾಗ್ರಾಹಕ ಮನಸ್ಸು, ವಿನೋದಕ್ಕೆ ತೋರುವ ಒಲವು, ಅವರ ಸಾಹಿತ್ಯಕ್ಕೆ ಹೊಸದೆನ್ನುವಂತಹ ರುಚಿಯನ್ನು ಪಾಕಗೊಳಿಸಿದೆ.

ಲೇಖನಮಾಲಿಕೆ ಇದೀಗ ಪುಸ್ತಕವಾಗಿ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಇಂತಹ ಸಾಹಿತ್ಯ ಕನ್ನಡವನ್ನು ಸಿಂಗರಗೊಳಿಸುತ್ತದೆ. ಅದರಿಂದಾಗಿ ಕೇಶವರಾಯರಿಗಿಂತ ಹಿರಿಯನಾದ ನಾನು ತುಂಬು ಹರುಷದಿಂದ ಅವರ ಈ ಹೊತ್ತಿಗೆಗೆ ಮೊದಲ ನುಡಿಯ ತಿಲಕವನ್ನಿಟ್ಟಿದ್ದೇನೆ.

ಹೆಚ್‌.ಕೆ. ರಂಗನಾಥ್
ದಿನಾಂಕ: ೨೩-೩-೧೯೯೯
ಬೆಂಗಳೂರು