ಬಿ.ಎಸ್‌. ಕೇಶವರಾವ್‌ –

ನನಗೆ ಕೇಶವ ಅಷ್ಟೆ. ಒಂದು ದಿನ ಅದೆಲ್ಲೋ ಸಿಕ್ಕಾಗ “ಲೋ, ಸೋಮು…. ನಿಮ್ಮೇಲೆಲ್ಲಾ ‘ಕನ್ನಡಪ್ರಭ’ಕ್ಕೆ articles ಬರೀತಿದೀನಿ ಕಣೋ…” ಅಂದು.. “title ಏನ್‌ ಇಟ್ಟಿದ್ದೀನಿ ಗೊತ್ತಾ..? ನಾ ಕಂಡ ಪುಂಡ ಪಾಂಡವರು… ಹೇಗಿದೆ?” ಅಂತ ಕೇಳಿದ; “ಚೆನ್ನಾಗಿದೆ. ಯಾರ್ಯಾರ ಮೇಲೆ ಬರೀತೀಯೋ?” ಕೇಳಿದೆ.

“ಮೈಸೂರ್ನ ಕೃಷ್ಣಮೂರ್ತಿಪುರದಲ್ಲಿ ನಡೆಸಿದ್ರಲ್ಲಾ ಪುಂಡಾಟಗಳು, ಅದರ ಬಗ್ಗೆ… ಅದ್ರಲ್ಲಿ ಹೋಟ್ಲು ಬಲ್ಲಾಳಿ, ಮೈಸೂರು ಅನಂತಸ್ವಾಮಿ, ಸಂಗೀತ ನಿರ್ದೇಶಕ ಗುಣಸಿಂಗ್‌ – ಮತ್ತೆ ನೀನು ಇರ್ತೀರ…”

“ಅದ್ಸರಿ… ವಿಷ್ಯ ಏನು? ಏನೇನೋ ಬರದ್ರೆ ಓದೋನು ಯಾವನಲೆ:?’

“ಹೇಳ್ತೀನಿ ತಾಳಲೇ… ಅವಸರ ನನ್ಮಗನಿಗೆ… ನೋಡೋ ನೀವೆಲ್ಲಾ -ಮಕ್ಳಾ, ಓತ್ಲಹೊಡು ಪುಂಡಾಟ ಮಾಡ್ತಿದ್ರಲ್ಲಾ ಅದೆಲ್ಲಾ ಬರೀತೀನಿ… ಆಗ್ಲೆ ಎರಡೋ ಮೂರೋ ರೆಡಿಯಾಗಿದೆ ಕಣೋ.. ಏನ್‌ ಮಜ ಇದೆ ಅಂತೀಯಾ?’

“ಲೋ ಕೇಶವ… ಬರವಣಿಗೇಲಿ ಎಂಥದೋ ಮಜಾ ಬರೋದು? ಅದ್ಸರಿ ಕಣೋ, ಏನ್‌ ಕಿತಾಪತಿ ನಡಸ್ತಿದೀಯಾ ಅಂತ ಗೊತ್ತಾಗ್ತಿಲ್ಲ.. ಪ್ರಿಂಟ್ಗೆ ಹೋಗೋಕ್ಕೆ ಮುಂಚೆ ಒಂದಿಷ್ಟು ಕಣ್ಣಾಡಿಸಿಬಿಡ್ತೀನಪ್ಪ… ಮಜಾ ಬರ್ಲೀ ಅಂತ ಸುಡುಗಾಡೆಲ್ಲಾ ತುರುಕ್ಬಿಟ್ರೆ ಏನ್‌ಮಾಡೋದು?’

“ಲೇ ಸೋಮು, ಹಂಗೆಲ್ಲಾ ಮಾಡಲ್ಲಮ್ಮ… ಆದ್ರೆ ಅಲ್ಲಿ-ಇಲ್ಲಿ ವಸಿ ಒಗ್ಗರಣೆ ಹಾಕ್ಬೇಕಾಗುತ್ತೆ ಕಣೋ..”

ನನಗೆ ಸ್ವಲ್ಪ ಆತಂಕ ಆಯಿತು..

“ಕೇಶವ.. ಒಗ್ಗರಣೆ ಅಂತ ಇದ್ದದ್ದಕ್ಕಿಂತ ಇಲ್ಲದ್ದೇ ಹೆಚ್ಚು ತುರಕ್ಬೇಡಪ್ಪಾ.. ಇಂಗು-ತೆಂಗೂ ಒಂದಳತೇಲಿ ಇರ್ಬೇಕಿಲ್ವಾ?’

ಎಷ್ಟೋ ದಿನ ಆದ ಮೇಲೆ ನಡೆದ ಸಂಭಾಷಣೆ ಮೇಲಿನದು.

ಕೇಶವರಾಯ ಮೈಸೂರಲ್ಲಿ ಇದ್ದಾಗ ಆಗೀಗ ಭೇಟಿ ಆಗ್ತಿದ್ದದ್ದು ನಿಜ.. ಹೆಚ್ಚಾಗಿ ಬಲ್ಲಾಳ್‌ ಹೋಟೆಲ್‌ ನಲ್ಲಿ … ಆ ಹೋಟೆಲ್ಲಿನ ಮಹಡಿಮೇಲೆ ಇದ್ದ ಒಂದು ರೂಮು – ಅದರ ಬಾಗಿಲಿಗೆ ಚಿಲಕ ಇರಲಿಲ್ಲ, ಕಿಟಕಿಗೆ ಸರಳು ಇರ್ಲಿಲ್ಲ. ಅದು ನನ್ನ ‘ಸಾಧನ’ಸ್ಥಾನ; ಇದ್ರೆ ರೂಮ್ನಲ್ಲಿ, ಇಲ್ದಿದ್ರೆ ಕೆಳಗಡೆ ಹೋಟ್ಲಲ್ಲಿ – ಮಧ್ಯೆ ‘ಪುರುಸೊತ್ತಾದಾಗ ಕಾಲೇಜಿಗೆ ಹೋಗ್ತಿದ್ದೆ. ಈ ರೂಮಿನ ವಾಸ ಮುಗಿದ ಮೇಲೆ ಅನಂತಸ್ವಾಮಿ ಮನೆ ನನ್ನ ಆವಾಸಸ್ಥಾನ ಆಯ್ತು. ಅಲ್ಲಿಗೂ ಕೇಶವ ಬರ್ತಿದ್ದ – ಹಾಡು ಕೇಳೋಕ್ಕೆ, ಇಲ್ಲವೇ ಹರಟೆಹೊಡೆಯೋಕೆ …. ಆವಾಗ್ಲೆ ಅವನ ಜೊತೆ ಒಂದು ನಾಟಕದಲ್ಲಿ ಪಾರ್ಟು ಮಾಡಿದ್ದೆ … ನನ್ಗೆ ಬಂದ ಸಂಶಯ ಅಂದ್ರೆ, ಇಷ್ಟೇ ಹಿನ್ನೆಲೇಲಿ ಏನು ಬರೀಬಹುದು ಅಂತ…

ಮಾಡು-ಮುಸಡಿ ಎಲ್ಲಾ ಮುಸುಕು ಮುಸುಕಾಗ್ತಾ ಇದ್ದಾಗ , ಒಂದು ದಿನ ಕೇಶವ ಹಾಜರ್ ಆದ.. ಕೈಯಲ್ಲಿಒಂದು ಫೈಲು, ‘ಬರೆದು ಮುಗಿಸಿದ್ದೀನಿ, ಓದ್ಲಾ’ ಅಂದ. ನೆಟ್ಟಗೆ ಜಯನಗರದ ಕಾಸ್ಮೋಪಾಲಿಟನ್‌ ಕ್ಲಬ್‌ಗೆ ಧಾವಿಸಿ, ಇದ್ದಬದ್ದ ಮೊಬ್ಬು ಬೆಳಕಲ್ಲಿ ಫೈಲು ತಿರುವು ಹಾಕ್ದೆ… ‘ಇಲ್ಲೊಂದಿಷ್ಟು ಬದಲಾಯಿಸಪ್ಪ… ಅಲ್ಲೊಂದಿಷ್ಟು ಸೇರಿಸು’ ಅಂತ ಹೇಳಿದೆ… ಅದ್ಯವ್ದನ್ನೂ ಅವನು ಮಾಡಿದ್ಹಾಗೆ ಕಾಣ್ಲಿಲ್ಲ – ಲೇಖನಗಳು ಪ್ರಿಂಟಾಗಿ ಬಂದ್ಮೇಲೆ ಓದಿದಾಗ.. ಇರಲಿ. ನನಗೂ, ಮೈಸೂರು ಅನಂತಸ್ವಾಮಿಗೂ ಕೇಶವ ಕೊಟ್ಟಿದ್ದ, Title ಬಗ್ಗೆ ಗುಮಾನಿ ಇತ್ತು – ಯಾಕೇಂದ್ರೆ ‘ಪುಂಡ’ ಅನ್ನೋ ಪದಪ್ರಯೋಗ ಹೇಗೂ ತಿರುಗಿಸಬಹುದಲ್ಲ! ಲೇಖನ ರುಚಿರುಚಿಯಾಗಿರಬೇಕು ಅಂತ, ಅದೂ-ಇದೂ ಸೇರ್ಸಿ ಉಪ್ಪು-ಖಾರ ಹಾಕಿ, ಇದ್ದದ್ದು ಇಷ್ಟಾದರೆ ಬೆಟ್ಟದಷ್ಟು ಬರೆದುಬಿಟ್ರೆ ಅಂತ..

ಆಗ-ಲೇಖನಗಳಲ್ಲಿ ಪ್ರಸ್ತಾಪಿಸಿರೋ ಕಾಲದಲ್ಲಿ-ನಮ್ಮಗಳ ವಯಸ್ಸು ಕಲ್ಲು ತಿಂದು ಕರಗಿಸೋ ಅಂಥದ್ದು. ಹಾಗಂತ ನಾವೇನು ಮಾಡಬಾರ್ದು,

-ಹೇಳಬಾರ್ದು, ಕೇಳಬಾರ್ದು ಅನ್ನೋ ಅಂಥದ್ದೇನೂ ಮಾಡಿರಲಿಲ್ಲ… ಆದರೂ ಬರೆಯೋನೂ ಜಾಣನಾದ್ರೂ ಓದೋನು ಅಷ್ಟೇ ಜಾಣನಾಗಿರಬೇಕಲ್ಲ? ಮಾತು, ಬರವಣಿಗೇಲಿ ಬಂದಾಗ ಅರ್ಥ-ಅಪಾರ್ಥ ಎರಡೂ ಸಾಧ್ಯ.. ಬರವಣಿಗೇಲಿ ನಿಜವನ್ನು ಎಷ್ಟು ಚೆನ್ನಾಗಿ ಮುಚ್ಚಿಡಬಹುದೋ ಹಾಗೇನೇ ಸುಳ್ಳನ್ನೂ ನಿಜದ ತಲೆಮೇಲೆ ಹೊಡೆದಂತೆ ಬಿಚ್ಚಿಡಬಹುದು.

ಹೀಗೆ ಬರೀಲಿಕ್ಕೆ ನನಗೆ ಕೆಲವು ಕಾರಣಗಳೂ ಇವೆ. ಕೇಶವರಾಯ ಬರೀಬೇಕು ಅಂತ ಹೊರಟಿದ್ದು ಬೇರೆಯವರ ಬಗ್ಗೆ. ಅವನು ಆರಿಸಿಕೊಂಡ ವಿಷಯವೂ ಅಂಥಾದ್ದೆ. ದಾಖಲಾಗಿರದ ಸಂಗತಿಗಳು ಕೇವಲ ಮೌಖಿಕವಾಗೇ ಉಳಿದಿರುವಂಥದ್ದು … ಹೀಗಿರೋವಾಗ ಇಂಥ ವಿಷಯಗಳನ್ನು ಬರೆಯುವುದು ಹ್ಯಾಗೆ? ಲೇಖಕ ತನ್ನಿಂದ ಹೊರಹೋಗಿ objective ಆಗಿ ಬರೀಬೇಕಲ್ಲ …

ಪುಂಡಪಾಂಡವರಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿರೋದು ಅಂದ್ರೆ ನಾಲ್ಕೇ ಜನ. ಹೋಟೆಲ್‌ ಬಲ್ಲಾಳಿ, ಮೈಸೂರು ಅನಂತಸ್ವಾಮಿ (ದೊರೆ), ಸಂಗೀತ ನಿರ್ದೇಶಕ ಗುಣಸಿಂಗ್‌ ಮತ್ತು ನಾನು … ಇನ್ನೊಬ್ಬ ‘ಪುಂಡ’ ಯಾರು ಅಂತ ಸ್ಪಷ್ಟವಾಗಿಲ್ಲ … ಅದು ಯಾರೂ ಆಗಬಹುದು, ಲೇಖಕನೂ ಸೇರಿದಂತೆ!

ಬೇರೆ ‘ಪುಂಡ’ರು ಏನಂದುಕೊಂಡರೋ ನನಗೆ ಗೊತ್ತಿಲ್ಲ. ನನಗೆ ಮಾತ್ರ ಅನ್ನಿಸಿದ್ದು, ನನ್ನನ್ನು ‘ಪುಂಡ’ರ ಗುಂಪಿಗೆ ಸೇರಿಸಿದ್ದು ಸಂತೋಷವಾಯ್ತು… ಈ ಕಾಲಕ್ಕೆ ‘ಪುಂಡ’ ಪದಕ್ಕೆ ಏನೇನೋ ಅರ್ಥ (ಅಪಾರ್ಥ) ಹುಟ್ಟಿಕೊಂಡಿದೆ. ‘ಪೋಲಿ, ಪೋಕರಿ , ಪುಡಾರಿ’ ಇತ್ಯಾದಿ ಅರ್ಥಗಳೆಲ್ಲಾ ‘ಪುಂಡ’ ಪದದ ಜೊತೆಗೆ ಸೇರಿಬಿಟ್ಟಿದೆ. … ಆದರೆ ‘ಪುಂಡ’ ಪದ ಇಂಗ್ಲೀಷಿನ `Mischievous’ ಪದದ ಹಾಗೆ ಕೇಶವ ಬಳಸಿದ್ದಾನೆ. .. ಅದು ನನಗೆ ಸಮ್ಮತ ಸಂತೋಷ.

ಲೇಖನಗಳು ‘ಕನ್ನಡ ಪ್ರಭ’ ದಲ್ಲಿ ವಾರವಾರವೂ ಬಂತು. ನನ್ನ ಬಗ್ಗೆ ಹೇಳೋದಾದ್ರೆ ನನ್ನ ‘ಬಣ್ಣ’ದ ಬದುಕಿನ ಬಗ್ಗೆ ಹೆಚ್ಚು ಒತ್ತು ಇರಬಹುದೇನೋ ಅಂದುಕೊಂಡಿದ್ದೆ… ಅದೂ ಅಷ್ಟಿಷ್ಟು ಇತ್ತಾದರೂ, ಆ ಕಾಲದಲ್ಲಿ ನಮ್ಮ ಹುಡುಗುತನದ ಚೇಷ್ಟೆಗಳನ್ನು ಬಣ್ಣಬಣ್ಣವಾಗಿ ಬಣ್ಣಿಸಿದ್ದು ಕಂಡೆ …

ಲೇಖನಗಳನ್ನು ಓದಿ ಮುಗಿಸಿದ ಮೇಲೆ ನನಗನ್ನಿಸಿದ್ದು, ನಮ್ಮಗಳ ಒಂದು ಕಾಲದ ಒಂದು ಕಾಲದ ‘ಅಲ್ಪಾವಧಿ’ ಬದುಕಿನ ತುಣುಕುಗಳಿಗೆ ಹಾಸ್ಯದ ಲೇಪನ ಹಚ್ಚಿಕೊಟ್ಟಿರುವುದು-Glimpses. ಕಂಪ್ಯೂಟರ್ ಭಾಷೆಯಲ್ಲಿ ಹೇಳೋದಾದ್ರೆ, ನಮ್ಮ Hardware ಭಾಗದ ಒಂದು ಸಣ್ಣ ಚಿತ್ರ ಇದು… ಕೇಶವರಾಯ ನಮ್ಮ `Software’ ಕಡೆ ಕೈಯಿಟ್ಟಿಲ್ಲ … ಅದು ಅವನ ಉದ್ದಿಶ್ಯವೂ ಆಗಿರಲಾರದು. ಹೀಗೆ ಹೇಳಲೇಬೇಕಾಯ್ತು. ಯಾಕೆಂದರೆ, ‘ವ್ಯಕ್ತಿ’ಯ ಹೊರಗನ್ನು ಹೇಳುವಾಗ ಅವನ ಒಳಗು ಬಹುತೇಕ ಮುಚ್ಚಿಹೋಗುತ್ತದೆ ಅನ್ನುವ ಕಾರಣಕ್ಕೆ.

ನಾವೆಲ್ಲರೂ ಒಂದು ಕಾಲಕ್ಕೆ ಏನೇನೋ ಆಗಿರ್ತೇವೆ… ಅದೇ ನಮ್ಮ ನಿಜದ ಬದುಕಾಗಿಲ್ಲದಿರಬಹುದು …. ಅಂಥ ಬಿಡಿಬಿಡಿಯಾದದ್ದನ್ನು ‘ಹಿಡಿ’ಯಲ್ಲಿಟ್ಟು ಹೇಳೋದು ಸುಲಭವಲ್ಲ … ಕೇಶವರಾಯ ಅಂಥ ಪ್ರಯತ್ನವನ್ನು ಚೆನ್ನಾಗೇ ಮಾಡಿದ್ದಾನೆ.

ಈ ಬರಹಗಳಲ್ಲಿ ಬರೋ ಪ್ರಸಂಗಗಳಲ್ಲಿ ಕೆಲವು ತಮಗೆ ತಾವೇ ಸ್ವರಸ್ಯವಾಗಿವೆ. ಮತ್ತೆ ಕೆಲವನ್ನು ಲೇಖಕ ನಾಟಕೀಯವಾಗಿಸಿ ಕುತೂಹಲ ಕೆರಳಿಸಿದ್ದಾನೆ … ಅಲ್ಲಿ-ಇಲ್ಲಿ ‘ಪಾಂಡ’ವರಿಗೂ ಗೊತ್ತಿರದ ವಿಷಯಗಳೂ ಬಂದಿವೆ … ಪ್ರಾಯಶಃ ಚೇಷ್ಠೆ ತುಂಟತನ ಇದೆಲ್ಲಾ ಹೇಳುವಾಗ ಹಾಗೆ ಆಗೋದು ಅನಿವಾರ್ಯವೋ ಏನೋ ! ಅಷ್ಟೇ ಅಲ್ಲ, ಬರಹ ಕೇವಲ ಮಾಹಿತಿಗಳ ಸಂಗ್ರಹವಾಗಿದ್ದರೆ ಮಾತ್ರ ಸಾಲ್ದು, ಅದು dull ಆಗುತ್ತೆ. ಅದು ಕುತೂಹಲವೂ, ಕಲಾತ್ಮಕವೂ ಆಗಬೇಕಲ್ಲ!

ಈ ಸಂದರ್ಭದಲ್ಲಿ ನಾನು ಚರ್ಚಿಲ್‌ ಹೇಳಿದ ಮಾತು ಜ್ಞಾಪಿಸಿಕೊಂಡೆ. ವ್ಯಕ್ತಿ ತನ್ನ ಬಗ್ಗೆ ಆಗಲಿ, ಬೇರೆಯವರ ಬಗ್ಗೆ ಆಗಲಿ ಬರೆಯುವಾಗ “Terminological Inexactitudes” ಸಿಗದಂತೆ ನೋಡಿಕೊಳ್ಳಬೇಕಂತೆ. ಕೇಶವರಾಯನ ಬರಹಗಳ ಆಧಾರ, ಕೆಲವನ್ನು ತಾನೇ ಕಂಡಿದ್ದಾನೆ. ಮತ್ತೆ ಕೆಲವನ್ನು  ಇತರರಿಂದ ಕೇಳಿದ್ದಾಣೆ. ಇನ್ನು ಕೆಲವನ್ನು ನಾವೇ ನಮ್ಮ ‘ಸಭೆ’ಗಳಲ್ಲಿ ಒದರಿಕೊಂಡದ್ದಿವೆ … ಎಲ್ಲಾ ಸೇರಿ ‘ಪುಂಡ’ರ ಕಥೆ ಒಟ್ಟಂದದಲ್ಲಿ ಚೆನ್ನಾಗಿದೆ … ಈಗಾಗಲೇ ಹೇಳಿದ ಹಾಗೆ ಯೌವ್ವನದ ಚೇಷ್ಟೆಗಳ ಎಲ್ಲಾ ಮಗ್ಗುಲುಗಳೂ ಅಂದ್ರೆ ‘The deepest passions and fears that drove and tortured during adult life’ ಸುಲಭವಾಗಿ ಕೈಗೆ ನಿಲುಕುವಂಥವುಗಳಲ್ಲ.

ಮತ್ತೊಂದು ಮಾತು … ಪುಂಡರಾಗಿ ಬರುವ ವ್ಯಕ್ತಿಗಳು ಹೆಚ್ಚು ಕಡಿಮೆ ಸಮಾನ ವಯಸ್ಕರು … ಹೋಟೆಲ್‌ ಬಲ್ಲಾಳಿ ಬಿಟ್ರೆ … ಕೇಶವರಾಯನ ಲೇಖನಗಳನ್ನೆಲ್ಲಾ ಓದಿದ ಮೇಲೆ ವೈ.ಎನ್‌.ಕೆ. ಅಂದರಂತೆ “ಇವೆಲ್ಲಾ ‘Posthumous’ ಆಗಿ ಬಂದಿದ್ರೆ ಚೆನ್ನಾಗಿರ್ತಾ ಇತ್ತು” ಅಂತ….Fine …. ಈ ಮಾತು ಲೇಖನದಲ್ಲಿ ಬರೋ characters ಬಗ್ಗೆಯೋ ಅಥವಾ ಲೇಖಕನ ಬಗ್ಗೆಯೋ ಗೊತ್ತಾಗಿಲ್ಲ . .. ಏನೇ ಆದ್ರೂ … ಯಾವ ಲೇಖಕನೂ Posthumous ಆಗಿ ಬರೆದಿಲ್ಲಾ ಅಲ್ವ! ಈಗಿರುವಂತೇನೇ ಮಜವಾಗಿದೆ … ಬದುಕಿದ್ದೂ ಅವರವರ Obituary. ಓದೋದು ಹ್ಯಾಗಿರುತ್ತೆ? Is it Oscar Wilde? ಬದುಕಿರುವಾಗ್ಲೇ ಸತ್ತ ಸುದ್ದಿ ಬಂದಾಗ ಅಂದದ್ದು. “My death is slightl y exaggerated” ಅಂತ.

ಕೇಶವನ ಭಾಷೆಯೂ ಲೇಖನಗಳಿಗೆ ಹೊಂದಿಕೆಯಾಗಿರುವಂತಿದೆ. ಮೈಸೂರಿನ ಕೊಪ್ಪಲಿನ ಮಾತುಗಳೂ ಕೆಲವೂ ತೂರಿಬಂದಿವೆ. ಅಲ್ಲಿ ಇಲ್ಲಿಲ ಕೆಲವು ಮಾತು ಹಸಿ ಹಸಿ ಆಗಿದೆ  … ಕೇಶವನಿಗೆ ಪ್ರಾಸದ ಬಗ್ಗೆ ಸ್ವಲ್ಪ ಒಲವು ಹೆಚ್ಚು. ಅದನ್ನು ಈ ಬರಹಗಳಲ್ಲಿ ಬ ಳಸಿ ಸುಖವಾಗಿ ಓದಿಸಿಕೊಳ್ಳೋ ಹಾಗೆ ಮಾಡಿದಾನೆ … Because ಇತ್ತೀಚಿಗೆ ಎಷ್ಟೋ ಜನ ಬರಿಯೋದು ಕಂಡು `They write for themselves” ಅನ್ನಿಸಿದೆ.

ಆಯ್ತು … ಈಗ ನಮ್ಮ ಪುಂಡತನಗಳೆಲ್ಲಾ Print ಆಗಿ ಬರ್ತಿದೆ … ನಲವತ್ತು ವರ್ಷಗಳ ಹಿಂದಿನದು … ಈಗಿನ ಪುಂಡಾಟಕ್ಕೂ ಆಗಿನ ಪುಂಡಾಟಕ್ಕೂ ವ್ಯತ್ಯಾಸವಿದೆ … ಒಂದು ರೀತಿಯಲ್ಲಿ ಸಾಂಸ್ಕೃತಿಕವಾಗಿಯೂ, ಹಳೆ ಹೊಸದರ ಸೇತುವೆಯೂ ಆಗಬಹುದಾದ “ನಾ ಕಂಡ ಪುಂಡ ಪಾಂಡವರು” ಓದುಗರು ಮೆಚ್ಚಬಹುದಾದಂಥದ್ದು.

ಹೀಗೆ

ಪಾಂಡವರೊಳಗೊಬ್ಬ ಪುಂಡ

– ಹೆಚ್‌.ಜಿ. ಸೋಮಶೇಖರರಾವ್‌
೦೮-೦೩-೯೯